SEARCH HERE

Showing posts with label ವಿಶ್ವಾಸ- ಗಜೇಂದ್ರ ಮೋಕ್ಷದ ಪೌರಾಣಿಕ ಕಥೆ. Show all posts
Showing posts with label ವಿಶ್ವಾಸ- ಗಜೇಂದ್ರ ಮೋಕ್ಷದ ಪೌರಾಣಿಕ ಕಥೆ. Show all posts

Friday, 1 October 2021

ಗಜೇಂದ್ರ ಮೋಕ್ಷದ ಪೌರಾಣಿಕ ಕಥೆ

 ಗಜೇಂದ್ರ ಮೋಕ್ಷದ ಪೌರಾಣಿಕ ಕಥೆ


ಹಿಂದಿನ ಜನ್ಮದಲ್ಲಿ ಗಜೇಂದ್ರನು ಪಾಂಡ್ಯವಂಶದಲ್ಲಿ ದ್ರಾವಿಡ ದೇಶದ ರಾಜನಾಗಿದ್ದನು. ಅವನಿಗೆ "ಇಂದ್ರದ್ಯುಮ್ನ" ಎಂಬ ಹೆಸರಿದ್ದು ಭಗವಂತನ ಶ್ರೇಷ್ಠ ಉಪಾಸಕನಾಗಿದ್ದನು. ಮಹಾರಾಜನು ತನ್ನ ರಾಜ್ಯ ವೈಭವಗಳನ್ನು ತ್ಯಜಿಸಿ ತಪಸ್ವಿಯಾದನು. ಅವನ ಆಶ್ರಮವು ಮಲಯ ಪರ್ವತದಲ್ಲಿತ್ತು. ಒಂದು ದಿನ ಅವನು ಸ್ನಾನ ಮತ್ತು ಬೆಳಗಿನ ನಿತ್ಯ ಆಚರಣೆಗಳನ್ನು ಮುಗಿಸಿ ಪ್ರಾರ್ಥನೆಗಾಗಿ ಕುಳಿತನು. ಭಗವಂತನ ಮೇಲೆ ತನ್ನ ಮನಸ್ಸನ್ನು ಕೇಂದ್ರೀಕರಿಸಿ, ಏಕಾಗ್ರಚಿತ್ತದಿಂದ ಭಗವಂತನ ಆರಾಧನೆಯಲ್ಲಿ ತೊಡಗಿದನು.

ಅದೇ ವೇಳೆಯಲ್ಲಿ ದೈವಸಂಕಲ್ಪದಿಂದ ಪರಮ ತಪಸ್ವಿ ಅಗಸ್ತ್ಯ ಮುನಿ ತನ್ನ ಶಿಷ್ಯರೊಂದಿಗೆ ಅದೇ ಸ್ಥಳಕ್ಕೆ ಬರುತ್ತಾರೆ. ಇಂದ್ರದ್ಯುಮ್ನನು ತಪಸ್ವಿ ಅಗಸ್ಥ್ಯ ಮಹರ್ಷಿ ಮತ್ತು ಆತನ ಶಿಷ್ಯರಿಗೆ ಅತಿಥಿಸೇವೆಗಳನ್ನು ಮಾಡದೇ ಏಕಾಂತದಲ್ಲಿ, ಮೌನವಾಗಿ ಹಲವು ಸಮಯ ಧ್ಯಾನನಿರತನಾಗಿರುವುದನ್ನು ಕಂಡು ಅಗಸ್ತ್ಯ ಮುನಿಗಳು ಕ್ರೋಧಗೊಳ್ಳುತ್ತಾರೆ.

ಈ ಕೋಪದಿಂದ ಅಗಸ್ತ್ಯ ಮಹರ್ಷಿಯು “ಈ ರಾಜನು ತನ್ನ ಹಿರಿಯರು ಮತ್ತು ಗುರುಗಳು ಕಲಿಸಿಕೊಟ್ಟ ವಿದ್ಯೆಗನುಗುಣವಾಗಿ ವರ್ತಿಸದೆ ತನ್ನ ದುರಹಂಕಾರದಿಂದ ಪ್ರಭಾವಿತನಾಗಿ ಸ್ವೇಚ್ಛೆಯಿಂದ ವರ್ತಿಸುತ್ತಿದ್ದಾನೆ. ಬ್ರಾಹ್ಮಣರನ್ನು ಅವಮಾನಿಸಿದ ಕಾರಣ ಅವನಿಗೆ ಘೋರ ಅಜ್ಞಾನಮಯ ಆನೆಯ ಜನ್ಮವು ದೊರೆಯಲಿ” ಎಂದು ಶಾಪವನ್ನು ಕೊಟ್ಟು ಹೋಗುತ್ತಾರೆ.

ಇದು ತನ್ನ ಪ್ರಾರಬ್ಧವೆಂದೇ ಭಾವಿಸಿ ರಾಜರ್ಷಿಯು ಅಗಸ್ತ್ಯರು ನೀಡಿದ ಶಾಪವನ್ನು ಸ್ವೀಕರಿಸಿದನು. ಪ್ರಸ್ತುತ ಸನ್ನಿವೇಶದಲ್ಲಿ ರಾಜನು ಜ್ಞಾನಿಯು ಮತ್ತು ಧಾರ್ಮಿಕನಾಗಿದ್ದನು. ಶಾಪಗ್ರಸ್ತನಾಗಿ ಮುಂದೆ ಆನೆಯ ಜನ್ಮತಾಳಿದಾಗ, ಅವನ ಜೀವನದಲ್ಲಿ ಈ ಜ್ಞಾನದ ಪಾತ್ರ ಪ್ರಮುಖವೆನಿಸುತ್ತದೆ.

ಹೂಹೂ ಮತ್ತು ಮೊಸಳೆಯ ಅವತಾರ

ಋಷಿ ದೇವಲನ ಶಾಪದಿಂದಾಗಿ ಮೊಸಳೆಯ ರೂಪತಾಳಿ ಭಗವಂತನ ಸ್ಪರ್ಶಮಾತ್ರದಿಂದ ತನ್ನ ತೇಜೋಮಯ ನಿಜಸ್ವರೂಪ ಪಡೆದ ಗಂಧರ್ವರಲ್ಲಿ ಉತ್ತಮನೆನಿಸಿರುವನು ಹುಹೂ ಎಂಬುವವನು.

ಕಥೆ

ಒಮ್ಮೆ ಹುಹೂ ತನ್ನ ಪತ್ನಿಯರೊಂದಿಗೆ ಸರೋವರದಲ್ಲಿ ಜಲಕ್ರೀಡೆಯಲ್ಲಿ ಮಗ್ನನಾಗಿದ್ದನು. ಅದೇ ಸಮಯಕ್ಕೆ ಅಲ್ಲಿಗೆ ಸ್ನಾನಕ್ಕಾಗಿ ಬಂದ ಋಷಿ ದೇವಲರನ್ನು ಕಂಡು ಹುಹೂ ಹುಡುಗಾಟಿಕೆಯ ಮನೊಭಾವನೆಯಿಂದ ನೀರಿನೊಳಗಿನಿಂದ ಋಷಿಯ ಕಾಲನ್ನು ಎಳೆದುಬಿಡುವನು. ಇದರಿಂದ ಕ್ರೋಧಗೊಂಡ ಋಷಿ ದೇವಲನು ತಪೋಭಂಗಕ್ಕೆ ಕಾರಣನಾದ ಹುಹೂವಿಗೆ ”ನನ್ನ ಕಾಲನ್ನು ಎಳೆದೆಯಲ್ಲವೆ...? ಇದೋ, ನೀನು ಮೊಸಳೆಯ ಜನ್ಮವೆತ್ತಿ ಜೀವನವಿಡೀ ಕಾಲನ್ನು ಎಳೆಯುತ್ತಲಿರು” ಎಂದು ಶಾಪ ನೀಡುವರು. ಹುಹೂವಿಗೆ ತಾನು ಮಾಡಿದ ತಪ್ಪಿನ ಅರಿವಾಗಿ ಪ್ರಾಯಶ್ಚಿತ್ತ ಮಾರ್ಗವನ್ನು ಬೇಡಿದನು. ದೇವಲ ಋಷಿಯು ಕ್ಷಮೆ ತೋರಿ ಅವನ ಶಾಪ ವಿಮೋಚನೆಯ ವಿಧಾನವನ್ನು ತೋರಿಸುವರು. “ನೀನು ಈ ಸರೋವರದಲ್ಲಿ ಬಹಳ ವರ್ಷ ವಾಸವಾಗಿರುವೆ. ಒಮ್ಮೆ ಆನೆಗಳ ಹಿಂಡಿನ ಒಡೆಯನು ತನ್ನ ಸಹಚರರೊಂದಿಗೆ ಇಲ್ಲಿಗೆ ಬರುವನು. ಆ ಕ್ಷಣದಿ ನೀನು ಅವನ ಕಾಲನ್ನು ಹಿಡಿಯಬೇಕು ಮತ್ತು ಯಾವುದೇ ಕಾರಣಕ್ಕೂ ಕಾಲನ್ನು ಬಿಡಬಾರದು. ಆಗ ಸಾಕ್ಷಾತ್ ಶ್ರೀಮನ್ನಾರಾಯಣನೇ ಬಂದು ನಿನ್ನನ್ನು ಶಾಪಮುಕ್ತನಾಗಿ ಮಾಡುವನು”

ಗಂಧರ್ವನಾದ ಹೂಹೂ ಋಷಿಗೆ ಪ್ರದಕ್ಷಿಣಾ ರೂಪದಿ ನಮಸ್ಕಾರಗಳನ್ನು ಅರ್ಪಿಸುತ್ತಾ ಮೊಸಳೆಯ ರೂಪ ತಾಳಿದನು.

ಮೋಕ್ಷ

ಕ್ಷೀರಸಾಗರದ ಮಧ್ಯದಲ್ಲಿ ಪ್ರಕೃತಿ ಸೌಂದರ್ಯದ ಗಣಿಯಂತೆ ತ್ರಿಕೂಟ ಪರ್ವತವಿತ್ತು. ಆ ಪರ್ವತದಲ್ಲಿ ಮಂದಾರ, ಪಾರಿಜಾತ, ಪಾಟಲ, ಅಶೋಕ, ಚಂಪಕ ಮುಂತಾದ ಫಲಪುಷ್ಪ ಸಮೃದ್ಧವಾದ ವೃಕ್ಷಗಳಿಂದ ತುಂಬಿದ್ದ "ಋತುಮಾನ" ಎಂಬ ದ್ಯಾನವೊಂದಿತ್ತು. ವರುಣದೇವನ ಆಸ್ತಿಯಾಗಿದ್ದ ಈ ಉದ್ಯಾನದೊಳಗೆ ಬೃಹತ್ ಸ್ಫಟಿಕ ಜಲ ಸರೋವರವೊಂದರಲ್ಲಿ ಬಗೆಬಗೆಯ ನೀಲ, ಶ್ವೇತ, ರಕ್ತವರ್ಣದ ಕಮಲಪುಷ್ಪಗಳು ರಾರಾಜಿಸುತ್ತಿದ್ದವು.

ಆ ಪರ್ವತದಲ್ಲಿ ಬೃಹದಾಕಾರದ ಆನೆಯೊಂದು ತನ್ನ ಪರಿವಾರದೊಂದಿಗೆ ವಾಸವಾಗಿತ್ತು. "ಇಂದ್ರದ್ಯುಮ್ನನೇ" ಆ ಆನೆಯ ರೂಪವಾಗಿದ್ದನು. ಸಿಂಹ, ಹುಲಿ, ಕಾಡುಹಂದಿ ಸೇರಿದಂತೆ ಇತರೆ ಎಲ್ಲಾ ಪ್ರಾಣಿಗಳು ಹೆದರಿ ಪಲಾಯನ ಮಾಡುವಷ್ಟು ಪ್ರಚಂಡವಾದ ಬಲಶಾಲಿಯಾದ ಪ್ರಾಣಿಯಾಗಿತ್ತು.

ಗ್ರೀಷ್ಮ ಕಾಲದಲ್ಲಿ ಒಮ್ಮೆ ಬಹುದೂರ ಕ್ರಮಿಸಿ ಬಂದ ಆನೆ ಹಿಂಡು ದಾಹದಿಂದ ಬಳಲುತ್ತಿದ್ದಾಗ ಗಜರಾಜ ಪುಷ್ಪಗಂಧವನ್ನು ಆಘ್ರಾಣಿಸಿ ಅನತಿದೂರದಲ್ಲಿ ಸರೋವರವಿದೆಯೆಂದು ತಿಳಿದನು. ಸಪರಿವಾರನಾಗಿ ಗಂಧದ ಬೆನ್ನತ್ತಿ ಕಮಲದ ಹೂಗಳು ತುಂಬಿದ್ದ ಬಹುದೊಡ್ಡ  ಸರೋವರವನ್ನು ತಲುಪಿದನು.

ಸುದೀರ್ಘ ಪ್ರಯಾಣದಿಂದಾಗಿ ದಣಿದು ಹಸಿವಿನಿಂದ ಬಳಲಿದ್ದ ಆನೆಗಳು ಉತ್ಸಾಹದಿಂದ ಸರೋವರವನ್ನು ಪ್ರವೇಶಿಸಿ ನೀರು ಕುಡಿದವು. ದಾಹ ನೀಗಿದ ನಂತರವೂ ಹೊರಬರಲು ಇಚ್ಛಿಸದೆ ಸಾವಕಾಶವಾಗಿ ಈಜತೊಡಗಿದವು. ಕಾಲದ ಗಮನವಿಲ್ಲದೆ ಮುಂಬರುವ ವಿಪತ್ತಿನ ಕಲ್ಪನೆಯಿಲ್ಲದೆ ಗಜರಾಜನು ತನ್ನ ಒಡನಾಡಿಗಳ ಸಂಗದಲ್ಲಿ ಆನಂದಿಸುತ್ತಿದ್ದನು.

ವಿಧಿಲಿಖಿತದಂತೆ ಅದೇ ಸರೋವರದಲ್ಲಿದ್ದ ಮೊಸಳೆಯೊಂದು ಆ ಮಹಾಗಜದ ಕಾಲನ್ನು ತನ್ನ ಬಲಿಷ್ಠ ದವಡೆಯಿಂದ ಸೆಳೆಯಿತು. ಎಷ್ಟು ಪ್ರಯತ್ನಿಸಿದರೂ ಬಂಧನದಿಂದ ಪಾರಾಗುವುದು ಅಸಾಧ್ಯವಾಯಿತು. ಬಹಳ ಕಾಲ ಹೋರಾಡಿದ ನಂತರ ತನ್ನ ಶ್ರಮವೆಲ್ಲವೂ ವ್ಯರ್ಥ ಎಂಬ ಅರಿವು ಮೂಡಿತು ಮಾತ್ರವಲ್ಲ, ಅದರ ಅಹಂಕಾರ ನುಚ್ಚುನೂರಾಗಿ ಹೋಯಿತು.

ಗಜೇಂದ್ರ ಮೋಕ್ಷ

"ನನ್ನನ್ನೇ ನಾನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲದ ಈ ಪರಿಸ್ಥಿತಿಯಲ್ಲಿ ನನ್ನ ಪರಿವಾರದವರು ನನ್ನನ್ನು ಹೇಗೆ ರಕ್ಷಿಸಿಯಾರು..? ಈ ವಿಪತ್ತಿನಿಂದ ನನ್ನನ್ನು ಪಾರುಮಾಡಲು ಯಾರಿಗೂ ಸಾಧ್ಯವಿಲ್ಲ. ನನ್ನ ಮುಂದಿರುವುದು ಈಗ ಒಂದೇ ದಾರಿ. ಯಾವ ಪರಮಾತ್ಮನಿಗೆ ನಾವುಗಳು ಸಂಪೂರ್ಣವಾಗಿ ಶರಣಾಗುತ್ತೇವೆಯೋ ಯಮನೂ ಕೂಡಾ ಆತನಿಂದ ದೂರವಿರುತ್ತಾನೆ. ಅದರಂತೆ ಆ ಶ್ರೀಮನ್ನಾರಾಯಣನನ್ನು ಭಕ್ತಿಪೂರ್ವಕವಾಗಿ ತದೇಕಚಿತ್ತದಿಂದ ನಾನು ಪ್ರಾರ್ಥಿಸುತ್ತೇನೆ"

ಹೀಗೆ ದೃಢಚಿತ್ತನಾಗಿ ಆ ಮಹಾಗಜೇಂದ್ರನು ಭಗವಂತನನ್ನು ಸ್ತುತಿಸಿದ ಸ್ತೋತ್ರವೇ “ಗಜೇಂದ್ರಮೋಕ್ಷ ಸ್ತೋತ್ರ”

* ನೀನೇ ಸನಾತನನು. 
* ನೀನೇ ಪುರುಷನು. 
* ನೀನೇ ಪುರುಷನಿಂದಾದ ಪ್ರಕೃತಿಯು.
* ಜ್ಯೋತಿಯ ಆಕರಗಳಿಗೆ ಅತೀತನಾಗಿರುವ ಜ್ಯೋತಿಯು.
* ಪ್ರಳಯದ ಅಂತ್ಯದಲ್ಲುಳಿಯುವ ತಾಮಸದ ಕಾರ್ಗಡಲ  ಅಂಚಿನಲ್ಲಿಹನು‌. 
* ಪುರಾತನದಿಂದ ಉದಯಿಸುವ ನವಸೃಷ್ಟಿಗೆ ಜೀವದಾತನು.
* ಜನ್ಮ ಕರ್ಮಾದಿಗಳಿಂದ ಮುಕ್ತನು ನೀನು. 
* ಗುಣ – ನಾಮ ಪ್ರತ್ಯೇಕತೆಯಿರದವನು.
* ಮನೋಬುದ್ಧ್ಯಹಂಕಾರ ಚಿತ್ತಾತೀತನು.
* ಜ್ಞಾನಿಗಳು ಅರಿವಿಗೆ ನಿಲುಕದ ನಿನ್ನಲ್ಲಿ ಒಂದಾಗಿ ನಿನ್ನನ್ನು ಭಾವಿಸಿಹರು.
* ಇಂದ್ರಿಯಗಳ ಮತ್ತವುಗಳ ಸ್ವಭಾವ ದ್ರಷ್ಟನು.
* ನೀನೇ ಪುರಾತನ-ಸನಾತನ-ನಿತ್ಯ, ಆದ್ಯಂತವಿರದ, ಭೂತ- ಭವಿಷ್ಯವಿರದ ಅನಂತ.
* ನೀನೇ ಗುಣಾತೀತ, ನಿರ್ಗುಣ.
* ನಿನಗೆ ಶರಣಾದ ಜೀವಿಗಳ ಅವಿದ್ಯೆಯು ಹರಿದು ನಿಸ್ಸಂಶಯವಾಗಿ ನೀನೆಂಬ ಪರಮಸತ್ಯವನ್ನು ಹೊಂದುವರು.
 ಹೀಗೆ ಗಜರಾಜನು ಶ್ರೀ ನಾರಾಯಣನ ಅನುಗ್ರಹವನ್ನು ಬೇಡುತ್ತಾನೆ –

ಕರುಣಾಮಯನಾದ ಶ್ರೀಮನ್ನಾರಾಯಣನು ಆ ಪ್ರಾಣಿಯ ಸ್ಥಿತಿಯ‌ನ್ನು ಕಂಡು ಕರುಣೆಗೊಳಗಾಗಿ ಆ ಸರೋವರದ ದಡದಲ್ಲಿ ತನ್ನ ಗರುಡ ವಾಹನದೊಂದಿಗೆ ಪ್ರತ್ಯಕ್ಷನಾದನು. ಗಜರಾಯನು ಶಿರಬಾಗಿ ತನ್ನ ಸೊಂಡಿಲಿನಿಂದ ವಂದನೆಯನ್ನು ಮತ್ತು ಕಮಲವನ್ನು ಅರ್ಪಿಸುತ್ತಾ ನಾರಾಯಣ ದೇವನಿಗೆ ನಮಿಸಿತು.

ದಯಾಮಯನಾದ ಶ್ರೀಹರಿಯು ಮೊಸಳೆಯನ್ನು ತನ್ನ ಸುದರ್ಶನ ಚಕ್ರದಿಂದ ಸಂಹರಿಸಿ ಗಜನು ಅರ್ಪಿಸಿದ ಕಮಲಪುಷ್ಪವನ್ನು ಆನಂದದಿಂದ ಸ್ವೀಕರಿಸಿದನು.

ಮೊಸಳೆಯ ಕಳೇಬರದಿಂದ ದಿವ್ಯ ಗಂಧರ್ವರೂಪವೊಂದು ಹೊರ ಹೊಮ್ಮಿತು. ಶಾಪಮುಕ್ತನಾದ ಗಂಧರ್ವನಾದ ಹುಹೂ ದೇವೋತ್ತಮನನ್ನು ನಮಿಸಿದನು. ಗಜರೂಪನಾದರೂ ಇಂದ್ರದ್ಯುಮ್ನನ ಅಂತಃಸತ್ವವು ಭಗವದ್ಭಕ್ತಿಯಲ್ಲಿ ಮಿಂದಿದ್ದುದರಿಂದ ಪೂರ್ವಜನ್ಮದ ಸ್ಮರಣೆಯಿತ್ತು. ಹೀಗಾಗಿ ಕ್ಷುದ್ರಜೀವಿಯಾಗಿಯೂ ಸಂಕಷ್ಟ ಒದಗಿದಾಗ ಭಗವನ್ನಾಮಸ್ಮರಣೆ ಮಾಡಲು ಸಾಧ್ಯವಾಯಿತು. ಇಂದ್ರದ್ಯುಮ್ನನಿಗೆ ಶಾಪದಿಂದಲೂ ಭವಾಸಾಗರದಿಂದಲೂ ಮುಕ್ತಿ ದೊರೆಯಿತು. ಶ್ರೀಮನ್ನಾರಾಯಣನ ಸೇವಕನಾಗಿ ಅವನೊಂದಿಗೆ ಗರುಡವನ್ನೇರಿ ವೈಕುಂಠಕ್ಕೆ ತೆರಳಿದನು.

ಕಥಾ ನೀತಿ

ಈ ಕಥೆಯು  ಅನೇಕ ರೀತಿಯಲ್ಲಿ ನಮಗೆ  ಜೀವನಪಾಠವನ್ನು ಬೋಧಿಸುತ್ತದೆ.

* ಹಲವು ಬಾರಿ ಎದುರಾಗುವ ಸನ್ನಿವೇಶಗಳು ನಮ್ಮ ನಿಯಂತ್ರಣವನ್ನು ಮೀರಿರುತ್ತವೆ. ಆ ಕ್ಷಣದಿ ಅಗಸ್ತ್ಯ ಮುನಿಯ ಶಾಪವನ್ನು ಇಂದ್ರದ್ಯುಮ್ನನು ಸ್ವೀಕರಿಸಿದಂತೆ ನಾವುಗಳು ಕೂಡಾ  “ಇದು ಭಗವದಿಚ್ಛೆ” ಎಂಬ ಅಭಿಪ್ರಾಯದಿಂದ ಸ್ವೀಕರಿಸಬೇಕು.

ಹಾಗೇ ಗುರು ಸ್ಥಾನದಲ್ಲಿರುವ ಜ್ಞಾನಿಗಳನ್ನು ಅನುಸರಿಸದೆ ಅವರಿಗೆ ತೊಂದರೆಯುಂಟು ಮಾಡುವುದು ಹುಹೂವಿಗಾದ ಅನುಭವದಂತೆ ಜೀವನದ ದಿಕ್ಕು ತಪ್ಪಿಸಬಹುದು.
ಅತಿಶಯ ಭಗವದ್ಭಕ್ತಿಯ ಫಲವಾಗಿ ಜೀವಿಗೆ ಜನ್ಮಾಂತರದ ಜ್ಞಾನಪ್ರಾಪ್ತಿ ಸಾಧ್ಯ. ಈ ಕಥೆಯಲ್ಲಿ ಎದ್ದು ಕಾಣುವಂತೆ ಶ್ರೀಮನ್ನಾರಾಯಣನು ತನ್ನ ಭಕ್ತರ ಪಾಲಿಗೆ ಅಪ್ರತಿಮ ದಯಾಮಯಿ.

ಫಲಶ್ರುತಿ

ಮಹರ್ಷಿಗಳು ಹೇಳಿರುವಂತೆ ಯಾರು ಈ ಕಥೆಯನ್ನು ಕೇಳುತ್ತಾರೋ ಅಥವಾ ಓದುತ್ತಾರೋ ಅವರ ದುಃಸ್ವಪ್ನ, ಮನೋವಿಕಾರಗಳು ನಾಶವಾಗಿ ಇಹದಲ್ಲಿ ಭೋಗಭಾಗ್ಯವೂ ಸ್ವರ್ಗಪ್ರಾಪ್ತಿಯೂ ಉಂಟಾಗುತ್ತದೆ.

ಬೆಳಗಿನ ವೇಳೆಯಲ್ಲಿ ಯಾರು ಈ ಕಥೆಯಲ್ಲಿನ ಪರ್ವತ- ಸರೋವರ – ವನಾದಿಗಳಲ್ಲಿ ವಿಷ್ಣುವಿನ ಸ್ವರೂಪವನ್ನೇ ಕಾಣುತ್ತಾರೋ ಅವರ ಪಾಪಕ್ಷಯವಾಗುವುದು. ಯಾರು ಗಜೇಂದ್ರಮೋಕ್ಷಸ್ತೋತ್ರದ ಪಾರಾಯಣವನ್ನು ಕೇಳುತ್ತಾರೋ ಅಥವಾ ಓದುವರೋ ಅದರ ಫಲವಾಗಿ ಅಂತ್ಯಕಾಲದಲ್ಲಿ ಅವರಿಗೆ ವಿಷ್ಣುವಿನ ಸ್ಮರಣೆಯ ಪುಣ್ಯಪ್ರಾಪ್ತಿಯಾಗುವುದು.
****