ಹಬ್ಬ/ವ್ರತ
ಬ್ರಹಸ್ಪತಿ ವ್ರತ bruhaspati vruta
#ಶ್ರಾವಣ ಮಾಸದಲ್ಲಿ #ಬುಧ-#ಬೃಹಸ್ಪತಿ ಪೂಜೆ
ಹಬ್ಬಗಳ ಮಾಸವೆಂದೇ ಪ್ರಸಿದ್ಧವಾದದ್ದು ಶ್ರಾವಣಮಾಸ. ಶುಕ್ರವಾರ ಮಹಾಲಕ್ಷ್ಮೀ ಪೂಜೆ. ಮಂಗಳವಾರ ಮಂಗಳಗೌರಿ ಪೂಜೆ. ಹಾಗೆಯೇ ಪ್ರತಿ ಬುಧವಾರ ಹಾಗೂ ಗುರುವಾರ ಬುಧ- ಬೃಹಸ್ಪತಿಯನ್ನು ಪೂಜಿಸುವ ಸಂಪ್ರದಾಯ ಮೊದಲಿ ನಿಂದಲೂ ಬೆಳೆದು ಬಂದಿದೆ. ಬುಧ – ಬೃಹಸ್ಪತಿ ಯಾರು, ಅವರನ್ನೇಕೆ ಪೂಜಿಸಬೇಕು, ಹೇಗೆ ಪೂಜಿಸಬೇಕು ಎಂಬೆಲ್ಲ ವಿವರ ಇಲ್ಲಿದೆ.
ಒಬ್ಬ ಬಡ ಸಂಪ್ರದಾಯಸ್ಥ ದಂಪತಿ. ಅವರಿಗೆ ನಾಲ್ಕು ಜನ ಗಂಡು ಮಕ್ಕಳು ಮತ್ತು ನಾಲ್ಕು ಜನ ಸೊಸೆಯಂದಿರು. ಎಲ್ಲ ಮಕ್ಕಳಿಗೂ ಇಬ್ಬಿಬ್ಬರು ಮಕ್ಕಳು. ಹೀಗೆ ತುಂಬ ದೊಡ್ಡ ಪರಿವಾರ. ತುಂಬಾ ಬಡತನ ಮತ್ತು ಕಷ್ಟ. ಮನೆಮನೆಗೆ ಹೋಗಿ ಎಲ್ಲ ಮಕ್ಕಳು ಗೋಪಾಳಕ್ಕೆ ಹೋಗಿ ಭಿಕ್ಷೆ ಬೇಡಿ ಅಕ್ಕಿ ಜೋಳ ಏನು ಬರುತ್ತದೆಯೋ ಅದನ್ನೇ ಮಧ್ಯಾಹ್ನಕ್ಕೆ ಬೇಯಿಸಿ ಪರಿವಾರದವರೆಲ್ಲ ಒಂದು ಹೊತ್ತು ಊಟ ಮಾಡುತ್ತಿದ್ದರು. ಇವರ ಧರ್ಮನಿಷ್ಠೆಯನ್ನು ಪರೀಕ್ಷಿಸಲೆಂದು ನವಗ್ರಹಗಳಲ್ಲಿ ಇಬ್ಬರಾದ ಬುಧ ಮತ್ತು ಬೃಹಸ್ಪತಿ, ವಟುಗಳ ವೇಷದಲ್ಲಿ ಆ ಪರಿವಾರದ ಮನೆ ಬಾಗಿಲಿಗೆ ಬರುತ್ತಾರೆ.
‘‘ಮೂರು ದಿನಗಳಿಂದ ನಿರಾಹಾರರಾಗಿದ್ದೇವೆ ತುಂಬಾ ಹಸಿವೆ ಆಗಿದೆ. ನಮಗೆ ಊಟಕ್ಕೆ ಹಾಕಿ’’ ಎಂದು ಬೇಡುತ್ತಾರೆ. ಆಗ ಆ ತಾಯಿ, ‘‘ನನ್ನ ಮಕ್ಕಳು ಭಿಕ್ಷೆಗೆ ಹೋಗಿದ್ದಾರೆ. ಅವರು ಬಂದ ನಂತರ ನಿಮಗೆ ಅವಶ್ಯವಾಗಿ ಜೋಳದ ಭಕ್ಷ್ಯವನ್ನು ಮಾಡಿ ಹಾಕುತ್ತೇನೆ’’ ಎನ್ನುತ್ತಾಳೆ. ಆಗ ಆ ವಟುಗಳ ಹಸಿವೆಯು ಸಹನೆ ಮೀರಿ ‘‘ಇದ್ದದ್ದನ್ನು ಹಾಕಿ’’ ಎಂದಾಗ ಜೋಳದ ಹಿಟ್ಟಿನ ರೊಟ್ಟಿಯನ್ನು ಮಾಡಿ ಅದರಲ್ಲಿ ಮೊಸರು ಬೆಲ್ಲ ಹಾಕಿ ಅದನ್ನೇ ಆದರದಿಂದ ಬಡಿಸುತ್ತಾಳೆ. ಕೊನೆಗೆ ಕುಡಿಯಲು ಮಜ್ಜಿಗೆಯನ್ನು ಕೊಡುತ್ತಾಳೆ. ಆ ವಟುಗಳು ಅದನ್ನೇ ಪ್ರೀತಿಯಿಂದ ಸ್ವೀಕರಿಸಿ ಸಂತೋಷಗೊಳ್ಳುತ್ತಾರೆ. ನಂತರ ಆ ದಂಪತಿ ‘‘ನೀವಿಬ್ಬರೂ ಯಾರು’’ ಎಂದು ಕೇಳಿದಾಗ ‘‘ನಾವು ಬುಧ-ಬೃಹಸ್ಪತಿಗಳು. ಧಾನ್ಯ ಸಮೃದ್ಧಿ ಬೇಕೆಂದರೆ ಅಡುಗೆ ಮನೆಯಲ್ಲಿ, ಧನ ಸಮೃದ್ಧಿ ಬೇಕೆಂದರೆ ಧನದ ಪೆಟ್ಟಿಗೆಯಲ್ಲಿ ನಮ್ಮ ಚಿತ್ರವನ್ನು ಬರೆದು ಭಕ್ತಿಯಿಂದ ಪೂಜಿಸಬೇಕು. ಪೂಜೆಯಿಂದ ಧನ-ಧಾನ್ಯದ ಅಭಿವೃದ್ಧಿಯಾಗುವುದು’’ ಎಂದು ಹೇಳಿ ಅಂತರ್ಧಾನರಾಗುತ್ತಾರೆ. ಅಂತೆಯೇ ಆ ದಂಪತಿಗಳು ಅಂದಿನಿಂದ ಬುಧ-ಬೃಹಸ್ಪತಿಯನ್ನು ಪೂಜಿಸಿ ಸಕಲ ಅಭಿವೃದ್ಧಿಗಳನ್ನು ಹೊಂದಿ ಸಪರಿವಾರರಾಗಿ ಸಂತೋಷದಿಂದ ಜೀವನ ನಡೆಸುತ್ತಾರೆ.
ಯಾವುದೇ ಜಾತಿ ಧರ್ಮವಿಲ್ಲದೇ ಸರ್ವರೂ ಈ ಪೂಜೆಯನ್ನು ಮಾಡಲು ಅರ್ಹರು. ಮನುಷ್ಯಜನ್ಮವನ್ನು ಪಡೆದ ಪ್ರತಿಯೊಬ್ಬರೂ ಜ್ಞಾನಕ್ಕೆ ಅರ್ಹರು. ಆದ್ದರಿಂದ ಜ್ಞಾನವನ್ನು ಪಡೆಯುವುದು ಎಲ್ಲರ ಆದ್ಯಕರ್ತವ್ಯ. ಜ್ಞಾನದಿಂದಲೇ ಮೋಕ್ಷ. ಬ್ರಹ್ಮವಿದ್ಯೆ ಹಾಗೂ ವಿಜ್ಞಾನಾದಿ ಸಕಲಶಾಸ್ತ್ರಗಳ ವಿಶೇಷಜ್ಞಾನ ಪಡೆಯಲು ಬುಧ-ಬೃಹಸ್ಪತಿಗಳ ಅನುಗ್ರಹ ಇರಲಿ ಎಂದು ಪೂಜಿಸಿ ಪ್ರಾರ್ಥಿಸೋಣ. ಹೇಗೆ ಹೂವಿನೊಡನೆ ದಾರವೂ ದೇವರ ಪಾದ ಸೇರಿ ಧನ್ಯವಾದಂತೆ ಮೋಕ್ಷಪ್ರದವಾದ ಜ್ಞಾನವನ್ನು ಪ್ರಾರ್ಥಿಸಿದರೆ ಜತೆಯಲ್ಲಿ ಧನ-ಧಾನ್ಯ, ಸಂಪತ್ತಿನ ಅಭಿವೃದ್ಧಿ ಪ್ರಾಪ್ತವಾಗುತ್ತದೆ ಎನ್ನುವದರಲ್ಲಿ ಸಂದೇಹವಿಲ್ಲ.
ಪೂಜಾ ವಿಧಾನ: ಬುಧ-ಬೃಹಸ್ಪತಿಯ ಚಿತ್ರವನ್ನು ಬರೆದು ಅಥವಾ ಚಿತ್ರ ಲಭ್ಯವಿದ್ದರೆ ಅದನ್ನು ಮಣೆಯ ಮೇಲೆ ಇಟ್ಟು ರಂಗವಲ್ಲಿಯನ್ನು ಹಾಕಿ ಎಡ ಬಲದಲ್ಲಿ ದೀಪವನ್ನು ಹಚ್ಚಿಟ್ಟು ಅನೇಕ ತರಹದ ಹೂ-ಪತ್ರೆಗಳನ್ನು, ಉತ್ತರಾಣಿ ಮೊದಲಾದವುಗಳನ್ನು ಸಮರ್ಪಿಸಬೇಕು. ಅರಿಷಿನ ಕುಂಕುಮ ಅಕ್ಷತೆ ಗಜ್ಜೆ ವಸ್ತ್ರಗಳಿಂದ ಪೂಜೆ-ಪ್ರಾರ್ಥನೆಗಳನ್ನು ಮಾಡಬೇಕು. ಜೋಳದ ರೊಟ್ಟಿ, ಮೊಸರು, ಬೆಲ್ಲ, ಮೊಸರನ್ನ ಇವುಗಳನ್ನು ನಿವೇದಿಸಿ ವಟುಗಳಿಗೆ ಭೋಜನ ಮಾಡಿಸಬೇಕು. ಹೀಗೆ ಶ್ರಾವಣಮಾಸದ ಬುಧವಾರ- ಗುರುವಾರಗಳಲ್ಲಿ ಈ ಪೂಜೆಯನ್ನು ಮಾಡಬೇಕು. ಬುಧನಿಗೆ ಕ್ಷೀರಾನ್ನ ಹಾಗು ಬೃಹಸ್ಪತಿಗೆ ಮೊಸರನ್ನ ನೈವೇದ್ಯ ವಿಶೇಷವಾಗಿದೆ.
ಯಾರು ಈ ಬುಧ-ಬೃಹಸ್ಪತಿ?
ಶಬ್ದವನ್ನು ಗ್ರಹಿಸುವ ಇಂದ್ರಿಯ ಕರ್ಣ. ಕಿವಿಯ ದ್ವಾರಗಳಿಗೆ ಬುಧ ಮತ್ತು ಗುರು ಅಧಿಪತಿಗಳು. ಆದ್ದರಿಂದ ಅಜ್ಞಾನದ ಮತ್ತು ಅಧರ್ಮದ ಮಾತುಗಳಿಗೆ ಕಿವಿಗೊಡದಂತೆ ಕೇವಲ ಭಗವಂತನ ವಿಷಯದ ಶಬ್ದಗಳನ್ನೇ ಆಲಿಸುವಂತೆ ಇವರಿಬ್ಬರ ಉಪಾಸನೆಯನ್ನು ವಿಶೇಷವಾಗಿ ಮಾಡಬೇಕು. ಜ್ಞಾನವನ್ನು ನೀಡುವವ ಗುರುವಾದರೆ, ಬುದ್ಧಿಚತುರತೆಗೆ ಕಾರಣನು ಬುಧ. ಚಂದ್ರನ ಮಗನಾದ್ದರಿಂದ ಬುಧ ಸೌಮ್ಯನೆಂದು ಪ್ರಸಿದ್ಧ. ಚತುರ್ಭಜನು, ಖಡ್ಗ, ಗುರಾಣಿ, ಗದೆಗಳನ್ನು ವರಮುದ್ರೆಯನ್ನು ಧರಿಸಿ ಸಿಂಹವಾಹನನಾಗಿರುತ್ತಾನೆ. ಸದಾ ಒಳ್ಳೆಯ ಮಾತುಗಳು, ರಾಜ ಸ್ವಭಾವ, ನಿಪುಣ, ಸದಾ ಸಂತೋಷದಿಂದ ಕೂಡಿದವನು. ಇದು ಬುಧನ ಸ್ವರೂಪ.
ಪ್ರಿಯಂಗುಕಲಿಕಾಶ್ಯಾಮಂ ರೂಪೇಣಾಪ್ರತಿಮಂ ಬುಧಮ್ |
ಸೌಮ್ಯಂ ಸೌಮ್ಯಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಮ್ ||
ದೇವತೆಗಳಿಗೆ ಗುರುವಾದ್ದರಿಂದ ಬೃಹಸ್ಪತಿಯು ದೇವಗುರು ಎಂದು ಪ್ರಸಿದ್ಧ. ಉಳಿದ ಗ್ರಹಗಳಿಗಿಂತ ಗಾತ್ರದಲ್ಲಿಯೂ ದೊಡ್ಡವನಾದ್ದರಿಂದ ಇವನು ಗುರು. ಸಕಲ ವೇದವಿದ್ಯಾ ಪ್ರವೀಣ, ಅತಿ ಧಾರ್ವಿುಕ, ವಿನಯಶೀಲ, ನಿಪುಣ, ಸಾಹಸಿ, ಇವು ಗುರುವಿನ ಸ್ವರೂಪ. ಅಸುರರನ್ನು ಸೋಲಿಸಿ ಸದಾ ದೇವತೆಗಳನ್ನು ರಕ್ಷಿಸುವಲ್ಲಿ ಇವರದ್ದೇ ಪ್ರಧಾನ ಪಾತ್ರ. ಮೇಧಾಶಕ್ತಿ ವಿಶೇಷವಾಗಿ ಬೆಳೆಯಲು ಗುರುವಿನ ಅನುಗ್ರಹ ಬೇಕು.
ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್ | ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ ||
(whatsapp)
***
#ಶ್ರಾವಣದಲ್ಲಿ_ಬರುವಬುಧ_ಬ್ರಹಸ್ಪತಿ_ವ್ರತ
.
ಶ್ರಾವಣದಲ್ಲಿ ನಾವು ಬುಧಬ್ರಹಸ್ಪತಿ ವ್ರತ ಅಂತ ಮಾಡುತ್ತೇವೆ .
ಬುಧ_ಬ್ರಹಸ್ಪತ_ವ್ರತ
ಬ್ರಹ್ಮ ಚಂದ್ರನನ್ನು ನಕ್ಷತ್ರ ಲೋಕದ ಅಧಿಪತಿ ಯನ್ನಾಗಿ ಮಾಡುತ್ತಾನೆ . ಆ ಚಂದ್ರನು ಒಮ್ಮೆ ಬ್ರಹಸ್ಫತಿಯ ಪತ್ನಿ * ತಾರಾ * ದೇವಿಯನ್ನು ನೋಡಿ ಅವಳ ರೂಪಕ್ಕೆ ಮೋಹಿತನಾಗಿ ಅವಳನ್ನು ಅಪಹರಿಸುತ್ತಾನೆ. ಬಹುದಿನಗಳ ನಂತರ ಅವಳಿಗೆ ಪುತ್ರೋತ್ಸವ ಆಗುತ್ತದೆ . ಸರ್ವ ಲಕ್ಷಣ ಸಂಪನ್ನ ರೂಪಶಾಲಿಯಾದ ಮತ್ತು ಜ್ಞಾನಿಯಾದ ಬುಧನು ಜನಿಸುತ್ತಾನೆ . ಇತ್ತ ಹೆಂಡತಿ ಶೋಧದಲ್ಲಿದ್ದ ಬ್ರಹಸ್ಫತ್ಯಾಚಾರ್ಯರರು ಚಂದ್ರ ನ ಮನೆಯಲ್ಲಿ ಇರುವದು ತಿಳಿದು ... ಚಂದ್ರನಲ್ಲಿಗೆ ಬಂದು ತನ್ನ ಭಾರ್ಯೆಯನ್ನು ಕೊಡುವಂತೆ ಕೇಳುತ್ತಾರೆ. ಅವರ ಮಾತಿಗೆ ಬೆಲೆ ಕೊಡದ ಚಂದ್ರ ಅವಳನ್ನು ಹಿಂತಿಗಿಸಲು ನಿರಾಕರಿಸುತ್ತಾನೆ. ಆಗ ಕುಪಿತನಾದ ಬ್ರಹಸ್ಫತ್ಯಾಚಾರ್ಯರು ದೇವ ಸಭೆಗೆ ಹೋಗಿ ಎಲ್ಲವನ್ನೂ ನಿವೇದಿಸಿ , ಇಂದ್ರನಿಗೆ " ಚಂದ್ರನು ನನ್ನ ಪತ್ನಿ ಯನ್ನು ಅಪಹರಿಸಿದ್ದಾನೆ , ಅವಳನ್ನು ಬಿಟ್ಟು ಕೊಡುತ್ತಿಲ್ಲ , ಹೇ ಇಂದ್ರನೇ ನೀನು ದೇವ ರಾಜನಾಗಿರುವಿ , ನೀನು ಆಜ್ಞೆ ಮಾಡಿ ಚಂದ್ರನಿಂದ ನನ್ನ ಪತ್ನಿ ಯನ್ನು ಹಿಂತಿರುಗಿಸುಕೊಡಿಸುವನಾಗು , ಹಾಗೆ ಮಾಡದಿದ್ದರೆ ಚಂದ್ರ ನು ಮಾಡಿದ ಪಾಪವು ನಿನಗೂ ಅಂಟಿಕೊಳ್ಳುವದು ನೋಡು. ಪ್ರಜೆಗಳು ಮಾಡಿದ ಪಾಪದ ಫಲವನ್ನು ರಾಜನು ಅನುಭೋಗಿಸುವನೆಂದು ಶಾಸ್ತ್ರ ನಿರ್ಣಯ ಇದೆ. ಆಗ ಹೆದರಿದ ಇಂದ್ರ ಚಂದ್ರನನ್ನು ಕರೆದು ಗುರುಪತ್ನಿ ಹಿಂದಿರುಗಿಸುವಂತೆ ಆಜ್ಞಾಪಿಸುತ್ತಾನೆ. ಇದಕ್ಕೊಪ್ಪಿದ ಚಂದ್ರ ಮಗನನ್ನು ಮಾತ್ರ ಕೊಡಲಾರೆ ಅಂದಾಗ , ಗುರು ಬುಧ ನನ್ನ ಮಗ ನನಗೆ ಬೇಕು ಅನ್ನಲು , ಇಂದ್ರನ ಸಭೆಯಲ್ಲಿ ಸುರರೆಲ್ಲರೂ ಸಂಶಯಗ್ರಸ್ತರಾದರು. ತಾರೆಯನ್ನು ಕರೆದು * ಹೇ ಕಲ್ಯಾಣಿ ಸತ್ಯವನ್ನು ಹೇಳು ಅಂತ ಎಲ್ಲರ ಮಾತಿಗೊಪ್ಪಿದ ತಾರೆ ""ಬುಧ ಚಂದ್ರನ ಔರಸ ಪುತ್ರನಾಗಿದ್ದಾನೆ. ಬ್ರಹಸ್ಪತಿಯ ಕ್ಷೇತ್ರಜ ಪುತ್ರ ನಾಗಿದ್ದಾನೆ " ನಿಮಗೆ ಯಾರಿಗೆ ಒಪ್ಪಿಸಬೇಕು ಅವರಿಗೆ ಒಪ್ಪಿಸಿ ಅಂದಳು . ಆಗ ಚಂದ್ರನಿಗೆ ಬುಧ ಮಗ ಎಲ್ಲರೂ ಸಮ್ಮತಿಸಿದರು ಇದರಿಂದ ಖಿನ್ನನಾದ ಗುರುವನ್ನು ಕಂಡು ಬುಧ ನಿಮ್ಮ ಮಗನೂ ಆಗಿದ್ದಾನೆ ದೇವತೆಗಳೆಲ್ಲ ಸೇರಿ ಅವರಿಗೆ ಈ ರೀತಿ ವರ ಕೊಟ್ಟರು. ಶ್ರಾವಣ ಮಾಸದಲ್ಲಿ ಬರುವ ಬುಧ ಬ್ರಹಸ್ಪತಿ ವ್ರತವನ್ನು ಮಾಡುವವರಿಗೆ ಸಕಲ ಸಿದ್ಧಿಗಳಾಗುವವು... ..
ಗೊಡೆಯ ಮೇಲೆ ಬುಧ ಬ್ರಹಸ್ಪತಿ ಚಿತ್ರ ಬರೆದು ಪೂಜಿಸಿ ಅಡುಗೆ ನೈವೇದ್ಯ ಆರತಿ ಮಾಡಿ ಕಥೆ ಕೇಳಬೇಕು..ಯಾರು ಈವ್ರತವನ್ನು ಆಚರಿಸುವರೋ ಧನಧಾನ್ಯ ವೃದ್ಧಿಯಾಗುವದು. ಸೋದರ ಮಾವಂದಿರನ್ನು ಕರೆದು ಬೋಜನ ಮಾಡಿಸಬೇಕು.. ಈ ವ್ರತದ ಪ್ರಭಾವದಿಂದ ಎಲ್ಲ ಬಯಕೆಗಳು ಸಿದ್ಧಿಸುವವವು..ಮುಂದಿನ ಪೋಸ್ಟ್ ಶುಕ್ರವಾರದ ಗೌರಿ ಆಹ್ವಾನ ಪದ್ಧತಿ ಪೂಜಾ ವಿಧಾನ
✍️✍️ವೀಣಾ ಜೋಶಿ
***