ಮಾರ್ಜಾಲ ಸನ್ಯಾಸಿ ನ್ಯಾಯ
ಮುದಿತನದಲ್ಲಿದ್ದ ಬೆಕ್ಕೊಂದಕ್ಕೆ, ಬೇಟೆಯಾಡಿ ಇಲಿಗಳನ್ನು ಹಿಡಿಯಲು ಶಕ್ತಿ ಸಾಲದಾಗುತ್ತಾ ಬಂತು. ಹಾಗೆಂದು, ಇಲಿಯ ಮಾಂಸದ ರುಚಿಯನ್ನೇ ಮರೆಯಲಾದೀತೇ? ಒಂದು ಉಪಾಯ ಹೂಡಿತು. ಸನ್ಯಾಸಿಯಂತೆ ನಟಿಸತೊಡಗಿತು. ತಾನು ಈ ವೃದ್ಧಾಪ್ಯದಲ್ಲಿ ಸಂಪೂರ್ಣ ಸಸ್ಯಾಹಾರಿಯೆಂದೂ, ಅಹಿಂಸೆಯ ದೀಕ್ಷೆಯಲ್ಲಿರುವೆನೆಂದೂ ಪ್ರಚಾರ ಮಾಡಿತು. ದಿನದಿನವೂ ಇದರ ಅಭಿನಯಕ್ಕೆ ಮರುಳಾದ ಇಲಿಗಳೆಲ್ಲವೂ ಈ ಮಾತನ್ನು ನಂಬಿಬಿಟ್ಟವು.
ಒಮ್ಮೆ, ಕಾಶಿಗೆ ಹೋಗುವೆನೆಂದು ಹೊರಟುನಿಂತು 'ಬೇಕಾದರೆ ನಿಮ್ಮೆಲ್ಲರನ್ನೂ
ಕರೆದೊಯ್ಯುವೆ'ನೆಂದು ಆಮಿಷ ಒಡ್ಡಿತು. ಅಮಾಯಕ ಇಲಿಗಳು ಸಾಲುಸಾಲಾಗಿ
ಮುಂದೆ ಸಾಗಿದ್ದಂತೇ, ಹಿಂದಿನಿಂದ ಭಗವನ್ನಾಮಸ್ಮರಣೆಯ ಸೋಗು ಹಾಕುತ್ತಲೇ,
ಮೌನವಾಗಿ ಒಂದೊಂದೇ ಇಲಿಯನ್ನು ಹಿಡಿದು ಗುಳುಂಕರಿಸತೊಡಗಿತು. ಕೊಟ್ಟಕೊನೆಗೆ ಉಳಿದ ಒಂದೇ ಇಲಿ ಯಾಕೋ ಹಿಂತಿರುಗಿ ನೋಡಿದಾಗ, ಸಾಲಿಗೆ ಸಾಲೆ
ಮಾಯವಾಗಿತ್ತು. ಮಾತ್ರವಲ್ಲ ಅದೂ ಆ ವೇಳೆಗೆ ಬೆಕ್ಕಿನ ಬಾಯನ್ನು ಹೊಗಬೇಕಾದ
ಅನಿವಾರ್ಯ ಸ್ಥಿತಿಯಲ್ಲಿತ್ತು!
ಬಾಯಿಯಲ್ಲಿ ಅಧ್ಯಾತ್ಮದ ಬಣ್ಣದ ಮಾತನ್ನಾಡುತ್ತ, ಮನದೊಳಗೆ ಪರರಿಗೆ
ಕೆಟ್ಟದ್ದನ್ನು ಬಗೆಯುವವರ ಬಗ್ಗೆ 'ಮಾರ್ಜಾಲ ಸನ್ಯಾಸಿ' ಎಂದು ಟೀಕಿಸುವುದುಂಟು.
ಹೊರಗಿನಿಂದ ಸಜ್ಜನನಾಗಿ ತೋರಿಸಿಕೊಳ್ಳುತ್ತಲೇ, ನಂಬಿದವರಿಗೆ ವಿಶ್ವಾಸ ದ್ರೋಹ
ಎಸಗುವವರು ಮೇಲಿನ ಕತೆಯಲ್ಲಿಯ ಬೆಕ್ಕನ್ನು ಹೋಲುತ್ತಾರೆ. ಶೋಷಣೆಗೆ
ಒಳಗಾಗುವವರು ಇಲಿಗಳಂತೆ. ಕಣ್ಣುಮುಚ್ಚಿ ಅವರನ್ನು ನಂಬದೆ ಮುನ್ನೆಚ್ಚರಿಕೆಯಿಂದಿರಬೇಕೆಂಬ ಪರೋಕ್ಷ ಉಪದೇಶವೂ ಇಲ್ಲಿದೆ. ಕಪಟಿ ಸ್ವಾಮಿಗಳನ್ನು, ಅಪರಿಚಿತರನ್ನು (ಈಚೆಗಷ್ಟೆ ಪರಿಚಿತರಾದವರನ್ನು) ಸಂಪೂರ್ಣ ಅರಿಯದೇ ನಂಬಿ, ಅನಂತರ ಬನ್ನಪಡಬಾರದೆಂಬ
ದೂರಾಲೋಚನೆಯ ಬೋಧನೆಯನ್ನು ಇಲ್ಲಿ ಕಾಣಬಹುದಾಗಿದೆ.
***