ಬ್ರಹ್ಮನಿಗೆ ಪೂಜೆನೇ ಇಲ್ಲ ಅಂದಮೇಲೆ, ಇನ್ನು ದೇವಾಲಯ ಎಲ್ಲಿ ಬಂತು?
ಬ್ರಹ್ಮ , ವಿಷ್ಣು , ಮಹೇಶ್ವರ, ಈ ಮೂವರು ಕ್ರಮವಾಗಿ ಸೃಷ್ಟಿ , ಸ್ಥಿತಿ , ಲಯಗಳಿಗೆ ಅಧಿಪತಿಗಳಾದ ತ್ರಿಮೂರ್ತಿಗಳು.
ವಿಷ್ಣು ಮತ್ತು ಮಹೇಶ್ವರರು ಪೂಜನೀಯರು. ಇವರುಗಳಿಗೆ ದೇಶ ವ್ಯಾಪ್ತಿಯಾಗಿ ದೇವಾಲಯಗಳುಂಟು. ಆರಾಧಿಸುವ ಭಕ್ತರಿಗೆ ಎಣೆಯಿಲ್ಲ. ಆದರೆ ಬ್ರಹ್ಮನಿಗೆ ಅಲ್ಲೋ ಇಲ್ಲೋ ಬೆರಳೆಣಿಕೆಯಷ್ಟು ದೇವಾಲಯಗಳು ಮಾತ್ರ. ಬ್ರಹ್ಮನಿಗೆ ಪೂಜೆಗಳು ಸಹಾ ಅಷ್ಟಕ್ಕಷ್ಟೇ.
ತ್ರಿಮೂರ್ತಿಗಳಲ್ಲಿ ವಿಷ್ಣು, ಮಹೇಶ್ವರರಂತೆ, ಬ್ರಹ್ಮನಿಗೆ ಮಾತ್ರವೇ ಏಕೆ ಪೂಜೆಗಳಿಲ್ಲ.?
|ಚತುರ್ಮುಖ ಬ್ರಹ್ಮ|
ಬ್ರಹ್ಮನು ವಿಷ್ಣುವಿನ ನಾಭಿಯಿಂದ ಹೊರಹೊಮ್ಮಿದ ತಾವರೆಯ
ಹೂವಿನ ಮೇಲೆ ಕುಳಿತಿರುತ್ತಾನೆ.
ಸರಸ್ವತಿಯು ಬ್ರಹ್ಮನ ಪತ್ನಿ. ನಾರದರು ಬ್ರಹ್ಮನ ಮಾನಸ ಪುತ್ರ.
|ಪುರಾಣಗಳ ಉಲ್ಲೇಖ|
ಅದೊಂದು ಮಾಘ ಮಾಸ, ಕೃಷ್ಣ ಪಕ್ಷದ, ಚತುರ್ದಶಿಯಂದು ಜ್ವಲಲಸ್ಥಂಭ ರೂಪದಲ್ಲಿ ಪರಮೇಶ್ವರ ಮುಗಿಲೆತ್ತರಕ್ಕೆ ತನ್ನ ರೂಪವನ್ನು ಪ್ರಕಟಿಸಿದ ಸಮಯ.
ಲಿಂಗಾಕೃತಿಯ ಶಿರದ ಭಾಗವು ಎಲ್ಲೆ ಮೀರಿದ ಎತ್ತರದಲ್ಲಿ ಕಣ್ಣಿಗೆ ಕಾಣದಷ್ಟು ಅನಂತವಾದ ಎತ್ತರದಲ್ಲಿತ್ತು.
ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮಹಾ ವಿಷ್ಣು ಮತ್ತು ಬ್ರಹ್ಮದೇವರು ಪರಶಿವನ ರೂಪವನ್ನು ಕಂಡು ಧಿಗ್ಭ್ರಾಂತರಾಗಿ ಶಿವನಿಗೆ ನಮಿಸಿದರು.
|ಮಹಾವಿಷ್ಣು , ಬ್ರಹ್ಮದೇವರಿಗೆ ಉಂಟಾದ ಕುತೂಹಲ|
ಮಹೇಶ್ವರನ ಅಗಾಧ ಜ್ವಲಲ ರೂಪವನ್ನು ನೋಡಿದ ವಿಷ್ಣು, ಬ್ರಹ್ಮರಿಗೆ, ಲಿಂಗರೂಪಿಯಾದ ಪರಶಿವನ ಎತ್ತರ ಎಷ್ಟಿರಬಹುದು? ಎಂಬ ಕುತೂಹಲ ಉಂಟಾಯಿತು.
ಅವರಿಬ್ಬರಲ್ಲಿ ತರ್ಕ ಪ್ರಾರಂಭವಾಯಿತು. ನಮ್ಮಿಬ್ಬರಲ್ಲಿ ಯಾರು ಲಿಂಗರೂಪಿಯಾರ ಪರಶಿವನ ಎತ್ತರ ಹಾಗೂ ಆಳವನ್ನು ಕರಾರುವಕ್ಕಾಗಿ ತಿಳಿಸುತ್ತಾರೋ? ಅವರೇ ನಮ್ಮಲ್ಲಿ ಶ್ರೇಷ್ಠರು, ಎಂಬ ತೀರ್ಮಾನಕ್ಕೆ ಬಂದರು.
|ಅಳತೆಯ ಅನ್ವೇಷಣೆ ಪ್ರಾರಂಭ|
ಬ್ರಹ್ಮನು ಭೂಮಿಯ ಮೇಲಿಂದ ಶಿವಲಿಂಗದ ಎತ್ತರವನ್ನು ಅಳೆಯಲು ಹಂಸ ಪಕ್ಷಿಯ ರೂಪವನ್ನು ತಾಳಿದ. ವಿಷ್ಣುವು ಭೂಮಿಯ ಒಳಗಡೆಯಲ್ಲಿ ಇರುವ ಶಿವಲಿಂಗದ ಆಳವನ್ನು ಅಳೆಯಲು ವರಾಹ ರೂಪವನ್ನು ತಾಳಿದ.
ಬ್ರಹ್ಮನು ಭೂಮಿಯಿಂದ ಆಗಸದ ಕಡೆಗೆ ಶಿವಲಿಂಗದ ತುದಿಯನ್ನು ಮುಟ್ಟಲು ಹಂಸರೂಪದಲ್ಲಿ ಮೇಲಕ್ಕೆ ಹಾರಲು ಪ್ರಾರಂಭಿಸಿದ.
ವಿಷ್ಣುವು ಭೂಮಿಯ ಒಳಗಿರುವ ಶಿವಲಿಂಗದ ಅಂತ್ಯಭಾವನ್ನು ತಲುಪಲು ವರಾಹ ರೂಪದಲ್ಲಿ ಭೂಮಿಯನ್ನು ಕೊರೆಯಲು ಪ್ರಾರಂಭಿಸಿದ.
ಒಂದು ಹಂತದಲ್ಲಿ ವಿಷ್ಣುವು ತನ್ನ ಪ್ರಯತ್ನದಲ್ಲಿ ವಿಫಲವಾಗಿ, ಶಿವಲಿಂಗದ ಅಂತ್ಯಭಾಗವನ್ನು ತಲುಪಲು ಸಾಧ್ಯವಿಲ್ಲ ಎಂದೆಣಿಸಿ, ಭೂಮಿಯ ಮೇಲ್ಭಾಗಕ್ಕೆ ಹಿಂತಿರುಗಿ ಬಂದ. ತನ್ನ ಪ್ರಯತ್ನದ ಸೋಲನ್ನು ಒಪ್ಪಿಕೊಂಡ.
ಹಂಸರೂಪದ ಬ್ರಹ್ಮ ಹಾರುವ ಪ್ರಯತ್ನ ಮುಂದುವರೆಸಿದ, ಆದರೆ ಲಿಂಗದ ತುದಿ ಕಾಣಲಿಲ್ಲ. ಮತ್ತೆ ಹಾರಲು ಮುಂದುವರೆದ.
ಅಷ್ಟರಲ್ಲಿ ಮೇಲಿಂದ ಒಂದು ಕೇದಿಗೆ ಹೂ (ತಾಳೇಹೂ) ಭೂಮಿಯತ್ತ ಕೆಳಗೆ ಬರುತ್ತಿರುವುದನ್ನು ಕಂಡ.
ಕೇದಿಗೆ ಹೂ ಬ್ರಹ್ಮನ ಸಮೀಪ ಬಂದೊಡನೆ, ನೀನು ಎಲ್ಲಿಂದ ಬರುತ್ತಿದ್ದೀಯಾ? ಎಂದು ಬ್ರಹ್ಮ ಪ್ರಶ್ನಿಸಿದ.
ಅದಕ್ಕೆ ಆ ಕೇದಿಗೆಯ ಪುಷ್ಪವು, ನಾನು ಶಿವನ ತಲೆಯ ಮೇಲಿದ್ದೆ, ಆಕಸ್ಮಿಕವಾಗಿ ಶಿವನ ತಲೆಯಿಂದ ಜಾರಿಬಿದ್ದು ಭೂಮಿಯತ್ತ ಹೋಗುತ್ತಿದ್ದೇನೆ. ಶಿವನ ತಲೆಯಿಂದ ಜಾರಿಬಿದ್ದ ನಾನು ಭೂಮಿಯನ್ನು ತಲುಪಲು ಎಷ್ಟೋ ವರ್ಷಗಳಿಂದ ಪ್ರಯಾಣ ಮಾಡುತ್ತಿದ್ದೇನೆ ಎಂದಿತು.
ಇದನ್ನು ಕೇಳಿದ ಬ್ರಹ್ಮನಿಗೆ,ಓಹೋ.! ಲಿಂಗದ ತುದಿಯನ್ನು ತಲುಪಲು ಅಸಾಧ್ಯ ಎನಿಸಿತು.
| ಬ್ರಹ್ಮನ ಸುಳ್ಳಿನ ಸೃಷ್ಟಿ |
ಬ್ರಹ್ಮನು ತನ್ನ ಜೊತೆ ಇದ್ದ ಕೇದಿಗೆಯ ಪುಷ್ಪವನ್ನು ಕುರಿತು, ನಿನ್ನಿಂದ ಒಂದು ಸಹಾಯವನ್ನು ಬಯಸುತ್ತೇನೆ, ದಯಮಾಡಿ ನಿರಾಕರಿಸಬೇಡ ಎಂದ.
ಸರಿ, ಸೃಷ್ಟಿಕರ್ತನಾದ ಬ್ರಹ್ಮನೇ ನನ್ನಲ್ಲಿ ಸಹಾಯ ಬೇಡುತ್ತಿರುವಾಗ, ನಾನೇಕೆ ನಿರಾಕರಿಸಲಿ? ಎಂದಿತು.
ಬ್ರಹ್ಮ:- ನಾನು ಮತ್ತು ವಿಷ್ಣುವು ಒಂದು ಷರತ್ತು ಬದ್ಧ ಕಾರ್ಯದಲ್ಲಿ ಯಾರು ಹೆಚ್ಚು ಎಂಬುದು ನಿರ್ಣಯವಾಗಬೇಕಿದೆ.
ಲಿಂಗರೂಪದ ಪರಶಿವನ ಅಂತ್ಯಭಾಗವನ್ನು ತಲುಪಿ ಅಳೆಯಲು ವಿಷ್ಣುವು ಭೂಮಿಯ ಒಳಹೊಕ್ಕಿದ್ದಾನೆ, ನಾನು ಶಿವಲಿಂಗದ ಎತ್ತರವನ್ನು ಅಳೆಯಲು ಆಗಸದತ್ತ ಹಾರುತ್ತಿದ್ದೇನೆ. ಈಗ ನನ್ನ ಪ್ರಯತ್ನ ಇಲ್ಲಿಗೇ ಕೈಬಿಟ್ಟು, ಭೂಮಿಯತ್ತ ಹಿಂತಿರುಗುತ್ತೇನೆ.
ಆದರೆ, ನಾನು ಲಿಂಗದ ತುದಿ ತಲುಪಿದ್ದೇನೆ ಎಂದು ವಿಷ್ಣುವಿಗೆ ತಿಳಿಸುತ್ತೇನೆ. ಅದಕ್ಕೆ ನೀನು ಸುಳ್ಳಿನ ಸಾಕ್ಷಿಯಾಗಬೇಕು ಎಂದ.
ಕೇದಿಗೆ:- ಸೃಷ್ಟಿಕರ್ತನಾದ ನಿನಗೆ ಸಹಾಯ ಮಾಡಲು ಒಂದು ಸುಳ್ಳು ಹೇಳಲು ಹಿಂಜರಿಯಲಾರೆ, ಆಯಿತು ಎಂದಿತು.
ಬ್ರಹ್ಮ ಹಾಗೂ ಕೇದಿಗೆ ಭೂಮಿಯತ್ತ ಪ್ರಯಾಣಿಸಿದರು.
|ಭೂಮಿಗೆ ಹಿಂತಿರುಗಿದ ಬ್ರಹ್ಮ|
ಬ್ರಹ್ಮ :- ಭೂಮಿಗೆ ಹಿಂತಿರುಗಿದಾಗ ಅಲ್ಲಿದ್ದ ವಿಷ್ಣುವನ್ನು ನೋಡಿ ನಿನ್ನ ಪ್ರಯತ್ನ ಏನಾಯಿತು? ಎಂದ.
ವಿಷ್ಣು:- ವಿಫಲವಾದ ಪ್ರಯತ್ನವನ್ನು ವಿವರಿಸಿ ತಾನು ಸೋತೆ ಎಂಬುದಾಗಿ ತಿಳಿಸಿದ.
ಬ್ರಹ್ಮ :- ನಾನು ಲಿಂಗರೂಪಿಯಾದ ಪರಶಿವನ ಲಿಂಗದ ತುದಿ ಮುಟ್ಟಿ ಹಿಂತಿರುಗಿದ್ದೇನೆ, ಇದಕ್ಕೆ ಸಾಕ್ಷಿ ಪರಶಿವನ ತಲೆಯಮೇಲಿದ್ದ ಈ ಕೇದಿಗೆ ಹೂವು ಎಂದ.
ಕೇದಿಗೆ ಹೌದೆಂದು ತಲೆಯಾಡಿಸಿ ಸುಳ್ಳು ಸಾಕ್ಷಿಯಾಯಿತು.
|ಉಗ್ರರೂಪಿಯಾದ ಪರಶಿವ|
ಬ್ರಹ್ಮನು ಹೇಳಿದ ಸುಳ್ಳಿನಿಂದ ಕೋಪಗೊಂಡ ಶಿವನು, ಭೂಲೋಕದಲ್ಲಿ ನಿನನ್ನು ಪೂಜಿಸುವವರು ಇಲ್ಲದಂತಾಗಲಿ, ನಿನಗೆ ದೇವಾಲಯಗಳು ಇಲ್ಲದಂತಾಗಲಿ ಎಂಬ ಶಾಪವನ್ನು ನೀಡುತ್ತಾನೆ.
ಬ್ರಹ್ಮನ ಸುಳ್ಳಿಗೆ ಸಾಕ್ಷಿಯಾದ ಕೇದಿಗೆಗೆ...., ನನ್ನ ಭಕ್ತರು ಪ್ರೀತಿಯಿಂದ ಪೂಜಿಸುತ್ತಿದ್ದ ನಿನ್ನನ್ನು, ಇಂದಿನಿಂದ ಪೂಜೆಗೆ ಬಳಸದಂತೆ ನಿಷೇಧಿಸಲಾಗುವುದು, ನಿನ್ನನ್ನು ನನಗೆ ಅರ್ಪಿಸಿದರೂ, ನಾನು ಸ್ವೀಕರಿಸಲಾರೆ. ಎಂಬ ಶಾಪವನ್ನು ನೀಡಿದ. ಇದರ ಸಲುವಾಗಿಯೇ "ಕೇದಿಗೆ ಹೂ" ಶಿವನ ಪೂಜೆಗೆ ಅರ್ಪಿಸಲಾಗುವುದಿಲ್ಲ.
----------------------------------------------
ಕೇವಲ ಸ್ವಪ್ರತಿಷ್ಟೆಗಾಗಿ ಹೇಳಿದ ಒಂದು ಸುಳ್ಳಿನಿಂದ ಬ್ರಹ್ಮನಿಗೆ ದೇವಾಲ, ಪೂಜೆ ಎರಡೂ ಇಲ್ಲದಂತಾಯಿತು.
ಸುಳ್ಳಿನ ಸಾಕ್ಷಿಹೇಳಿಕೆಗಾಗಿ ಕೇದಿಗೆಯು ಪರಶಿವನಿಗೆ ಪ್ರಿಯವಾಗಿದ್ದ ಪೂಜನೀಯ ಸ್ಥಾನವನ್ನು ಕಳೆದುಕೊಂಡಿತು.
|ತ್ರಿಮೂರ್ತಿಗಳ ಪ್ರಸಿದ್ಧ ದೇವಾಲಯ|
ಮಹಾರಾಷ್ಟ್ರದ ನಾಸಿಕ್ ಬಳಿ ಇರುವ "ತ್ರ್ಯಂಬಕೇಶ್ವರ" ಜ್ಯೋತಿರ್ಲಿಂಗದ ದೇವಾಲಯದಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು,ಮಹೇಶ್ವರರನ್ನು ಒಂದೇ ಲಿಂಗದ ಮೂರು ಮುಖಗಳಲ್ಲಿ ಕಾಣವುದು ಅಲ್ಲಿನ ವಿಶೇಷ.
ವಿ.ಎಸ್.ಮಣಿ.
**********
read more at
http://www.bbc.co.uk/religion/religions/hinduism/deities/brahma.shtml
https://en.wikipedia.org/wiki/Brahma