SEARCH HERE

Showing posts with label ವಿಶ್ವಾಸ- ಪ್ರಳಯ. Show all posts
Showing posts with label ವಿಶ್ವಾಸ- ಪ್ರಳಯ. Show all posts

Friday, 1 October 2021

ಪ್ರಳಯ

 ಪ್ರಳಯ - ಸೃಷ್ಟಿಗೆ ಪ್ರತಿಯಾದ ಕಾರ್ಯ, ಇದನ್ನು ನಾಶ ಲಯ, ಪ್ರತಿಸರ್ಗ ಎಂದೆಲ್ಲ ಕರೆಯುವುದಿದೆ. ಇದರ ವಿವರ ಪ್ರಾಯಶಃ ಎಲ್ಲ ಪುರಾಣಗಳಲ್ಲೂ ಉಂಟು. ಇದು ನಾಲ್ಕು ಬಗೆ.


(1) ನಿತ್ಯಪ್ರಳಯ: ಪ್ರತಿದಿನ ಸಾವಿರಾರು ಪ್ರಾಣಿಗಳು ರೋಗಾದಿಗಳಿಗೆ ತುತ್ತಾಗಿ ಸಾಯುತ್ತಿರುವುದಕ್ಕೆ ನಿತ್ಯಪ್ರಳಯವೆಂದು ಹೆಸರು.


(2) ನೈಮಿತ್ತಿಕ ಪ್ರಲಯ: ಚತುರ್ಮುಖ ಬ್ರಹ್ಮನ ಒಂದು ಹಗಲಾದ ಕಲ್ಪ ಮುಗಿದಾಗ ನಡೆಯುವ ವಿನಾಶಕ್ಕೆ ನೈಮಿತ್ತಿಕ ಅಥವಾ ಅವಾಂತರ ಪ್ರಳಯವೆಂದು ಹೆಸರು. ಈ ಸಮಯದಲ್ಲಿ ಭೂಮ್ಯಾದಿ ಮೂರು ಲೋಕಗಳು ನಾಶ ಹೊಂದುತ್ತವೆ. ಕಡೆಯ ಮೂರು ಲೋಕಗಳು ಹಾಗೆಯೇ ಇರುತ್ತವೆ. ನಡುವಿನ ಮಹರ್ಲೊಕಜನ ಶೂನ್ಯವಾಗಿರುತ್ತದೆ.


(3) ಮಹಾಪ್ರಳಯ: ಬ್ರಹ್ಮನ ದ್ವಿತೀಯ ಪರಾರ್ಧವೆಂಬ ಆಯುಸ್ಸು ಮುಗಿಯುವಾಗ ಸಮಸ್ತಲೋಕಗಳೂ ಸಮಸ್ತ ಪದಾರ್ಥಗಳೂ ಹೊಂದುವ ನಾಶಕ್ಕೆ ಪ್ರಾಕೃತ ಪ್ರಳಯ ಅಥವಾ ಮಹಾಪ್ರಳಯವೆಂದು ಹೆಸರು. ಉಪನಿಷತ್ತುಗಳಲ್ಲೂ ಇದರ ವಿವರಣೆಯಿದೆ. ಈ ಸಮಯದಲ್ಲಿ ಸ್ಥೂಲ ಮತ್ತು ಸೂಕ್ಷ್ಮವಾದ ಎಲ್ಲ ಕಾರ್ಯಪದಾರ್ಥಗಳೂ ನಾಶಹೊಂದಿ ಮೂಲಪ್ರಕೃತಿಯೆಂಬ ಪರಮ ಸೂಕ್ಷ್ಮಾವಸ್ಥೆಯನ್ನು ಹೊಂದುತ್ತವೆ. ಪ್ರಕೃತಿಯೂ ಜೀವರಾಶಿಗಳೂ ಪರಮಾತ್ಮನಲ್ಲಿ ಸೇರಿಹೋಗಿ ಅವನಿಂದ ಬೇರೆಯಾಗಿ ಕಾಣದಾಗುತ್ತವೆ.


(4) ಆತ್ಯಂತಿಕ ಪ್ರಳಯ: ಒಬ್ಬೊಬ್ಬ ಜೀವನೂ ವೇದಾಂತಶಾಸ್ತ್ರದಲ್ಲಿ ಉಪದೇಶಿಸಲ್ಪಟ್ಟ ಕರ್ಮ, ಜ್ಞಾನ, ಭಕ್ತಿ ಮುಂತಾದ ಉಪಾಯಗಳನ್ನು ಅನುಷ್ಠಾನಿಸಿ, ಅದರಿಂದ ಪ್ರಕೃತಿ ಸಂಬಂಧವನ್ನು ಕಿತ್ತೊಗೆದು ಪುನಃ ಸೃಷ್ಟಿ ಪ್ರಳಯಗಳಿಗೆ ಆಳಾಗದೆ, ಮೋಕ್ಷ ಸಾಮ್ರಾಜ್ಯವನ್ನು ಹೊಂದುವುದಕ್ಕೆ ಆತ್ಯಂತಿಕ (ಎಂದರೆ ಕಡೆಯ) ಪ್ರಳಯವೆಂದು ಹೆಸರು.


ಭಾರತೀಯ ಪುರಾಣಗಳಲ್ಲಿನ ಹಿರಣ್ಯಾಕ್ಷನೆಂಬ ಅಸುರನ ಕಥೆ ಮಹಾಪ್ರಳಯಕ್ಕೆ ಇನ್ನೊಂದು ನಿದರ್ಶನ, ಪ್ರಬಲನಾದ ಆ ರಾಕ್ಷಸ ದೇವಮಾನವರನ್ನು ಲೆಕ್ಕಿಸದೆ ಪ್ರಬಲನಾಗಿ ಭೂಮಿಯನ್ನು ಮೂಲಜಲಧಿಯಲ್ಲಿ ಒಮ್ಮೆ ಮುಳುಗಿಸಿದನಲ್ಲದೆ ಸ್ವರ್ಗವನ್ನು ಬಿರುಗಾಳಿಯಿಂದ ನಿರ್ನಾಮ ಮಾಡುವುದಾಗಿ ಹೆದರಿಸಿದ. ಆಗ ವಿಷ್ಣು ವರಾಹಾವತಾರವೆತ್ತಿ ಸಾಗರದಲ್ಲಿ ಮುಳುಗಿ ರಾಕ್ಷಸನೊಂದಿಗೆ ಸಾವಿರ ವರ್ಷ ಯುದ್ಧ ಮಾಡಿ ಅವನನ್ನು ಸಂಹರಿಸಿ ಭೂಮಿಯನ್ನು ನೀರಿನ ಆಳದಿಂದ ಹೊರತಂದ ಇಂಥದೇ ಒಂದು ಕಥೆ ಬ್ರಾಹ್ಮಣಗಳಲ್ಲಿದೆ. ಸಹಸ್ರಬಾಹುವಾದ ಘೋರ ವರಾಹರೂಪವನ್ನು ತಾಳಿದ ಪ್ರಜಾಪತಿ ಬ್ರಹ್ಮ ಜಲಸಮಾಧಿಯಾದ ಭೂಮಿಯನ್ನು ಮೇಲಕ್ಕೆತ್ತಿದನಂತೆ🙏🙏

***