SEARCH HERE

Tuesday, 1 January 2019

ಕರ್ಮಣ್ಯೇವಾ ಗೀತೆಯ ಶ್ಲೋಕ karmanye waa gita sloka gita makaranda


ಸತ್ಕರ್ಮ ಮಾಡಿದಾಗ ಆಗುವ ಫಲದ ಅರಿವು

ಸಂಧ್ಯಾವಂದನೆ, ಜಪ,ತಪಾದಿಗಳನ್ನು ದೇವಪೂಜೆಯನ್ನು ತುಳಸೀ ಪೂಜೆಯನ್ನು, ಅತಿಥಿ ಸತ್ಕಾರವನ್ನು, ತಂದೆ ತಾಯಿಯ ಸೇವೆಯನ್ನು, ಉತ್ತಮವಾಗಿ ಮಾತನಾಡುವದು, ಮೋಸರಹಿತ ಜೀವನ , ಚಾಡಿ ಹೇಳದಿರುವದು, ಇನ್ನೊಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡದಿರುವದು ಹೀಗೆ ಉತ್ತಮವಾಗಿ ಸತ್ಕರ್ಮ ಮಾಡುತ್ತ ಹೋದಾಗ ಉತ್ತಮವಾದ ಫಲವನ್ನು ದೇವರು ಕೊಡ್ತಾನೆ.

ಸತ್ಕರ್ಮ ಮಾಡಿದ ತಕ್ಷಣ ಫಲ ಬೇಕು ಎನ್ನುವದು ಅಹಂ ಭಾವನೆಯ ಪ್ರತೀಕ. ಫಲ ಬಯಸದೇ ಕರ್ಮ ಮಾಡಿದಾಗ ದೇವರು ಕೊಡುವ ಫಲದ ಸುಖ ಅಪಾರ. ಫಲ ಬಯಸದೇ ಕರ್ಮ ಮಾಡಿ , ಫಲದ ಅರಿವು ಆಗುವದು.

ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯ ಎರಡನೇ ಅಧ್ಯಾಯದ ೪೭ನೇ ಶ್ಲೋಕ ಹೀಗೆ ಹೇಳಿದ್ದಾನೆ ,

"ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಷು ಕದಾಚನ |
ಮಾ ಕರ್ಮಫಲ ಹೇತುರ್ಭುರ್ಮಾತೇ ಸಂಗೋಸ್ತ್ವ ಕರ್ಮಣಿ||"

ಕರ್ಮಾ ಮಾಡುವ ಅಧಿಕಾರ ನಿನಗಿದೆ, ಫಲ ಬಯಸಬೇಡ. ನಿನ್ನ ಕರ್ಮಕ್ಕನುಗುಣವಾಗಿ ಫಲ ನಾನು ಕೊಡುವೆ.

ಮೇಲಿನ ವಾಕ್ಯ ಎಷ್ಟು ಅರ್ಥಪೂರ್ಣವಾಗಿದೆ. ಒಳ್ಳೆಯ ಕರ್ಮ ಮಾಡಪ್ಪ ಒಳ್ಳೆಯ ಕರ್ಮ ಅನುಭವಿಸ್ತೀಯ ಅಂತ ಕೃಷ್ಣ ಪರಮಾತ್ಮ ಭಗವದ್ಗೀತೆಯ ಪ್ರಾರಂಭದಲ್ಲಿ ಹೇಳಿದ್ದಾನೆ. ಆದರೆ ನಾವು ಬಹುತೇಕರು ಹಾಗಲ್ಲ, ದುಷ್ಕರ್ಮ ಮಾಡ್ತೇವೆ ಸತ್ಫಲ ಬೇಡ್ತೇವೆ. ಮಠಕ್ಕೆ ಗುಡಿಮಂದಿರಗಳಿಗೆ ಹೋಗ್ತೇವೆ ದೇವರನ್ನು ಕಣ್ತುಂಬ ನೋಡುವದನ್ನ ಬಿಟ್ಟು ಉಳಿದೆಲ್ಲವನ್ನು ಮಾಡ್ತೇವೆ. ಏನಾದರು ಕೆಟ್ಟದಾಯ್ತು ಎಂದರೆ ದೇವರಿಗೆ ಬೈಯ್ಯೋದು, ಗುಡಿಗೆ ಬಂದು ನಿನ್ನ ದರ್ಶನ ಪಡೆದು ಹೋಗ್ತಿದ್ದೆ ಅಂತ ಬೇರೆ ಹೇಳೋದು. ನಿಜಕ್ಕು ಅದು ತಪ್ಪು.

ನಿಮ್ಮ ಪಾಲಿಗೆ ಬಂದ ಕರ್ತವ್ಯ ನೀವು ಅಚ್ಚುಕಟ್ಟಾಗಿ ನಿಭಾಯಿಸಿ. ಊಟ ಹೇಗೆ ನಿಮಗೆ ಹೊಟ್ಟೆಗೆ ಹಿಡಿದಷ್ಟು ಮಾಡ್ತೀರೋ ಹಾಗೆ ನಿಮ್ಮ ಕರ್ಮ ನೀವು ಮಾಡಿ. ಉಳಿದವರ ಕರ್ಮ ನೋಡಬೇಡಿ(ಉತ್ತಮರ ಕರ್ಮ ನೋಡಿ.ಅದರಿಂದ ಜ್ಞಾನ ಪಡೆಯಿರಿ. ಡಾಂಭಿಕರ, ಅಧರ್ಮೀಯರ ಕರ್ಮ ನೋಡಬೇಡಿ). ಆಗ ಫಲದ ಅನುಭವ ನೋಡಿ.

ಗೋಮಾತೆ ಹುಲ್ಲು ತಿನ್ನುವುದು, ದೇವರಿಗೆ ಹುಲ್ಲು ಕೊಡು ಅಂತ ಕೇಳುವದಿಲ್ಲ. ಆದ್ದರಿಂದ ದೇವರು ಕೊಡುವಂತಹ ಫಲ ಅಮೃತ ಕ್ಷೀರ. ಆದ್ದರಿಂದ ಜಗತ್ತಿನಾದ್ಯಂತ ಗೋಮಾತೆಯ ಹಾಲಿನ ಬೇಡಿಕೆ ಬಹಳ ಇದೆ. 
ಅದೇ ವ್ಯಾಘ್ರವನ್ನು ನೋಡಿ, ಹೊಂಚು ಹಾಕಿ ಅಡುಗಿ ಕುಳಿತು ಇನ್ನೊಂದು ಪ್ರಾಣವನ್ನು ತೆಗೆದುಕೊಳ್ಳುವದು. ಅದಕ್ಕೆ ಅದಕ್ಕೆ‌ ಮಾಡಿಕೊಳ್ಳಲು ಸಮಯವನ್ನು ದೇವರು ನೀಡಿಲ್ಲ.


ಉತ್ತಮ ಕರ್ಮ ಮಾಡಿ, ಉತ್ತಮ ಫಲ ಪಡೆಯಿರಿ.

*****


ಗೀತಾ ಮಕರಂದ 
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||೪೭||
ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ |
ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ ||೪೮||

ಶ್ರೀಮದ್ಭಗವದ್ಗೀತೆಯ ಎರಡನೇ ಅಧ್ಯಾಯ ಸಾಂಖ್ಯಯೋಗದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳುವ ಮಾತಿದು. ಈ ಮಾತಿನ ಮೊದಲ ಭಾಗವನ್ನು ಹೆಚ್ಚಿನವರು ತಿಳಿದಿರುತ್ತಾರೆ ಮತ್ತು ನಾವು ಆಗಾಗ ಕೇಳುತ್ತಲೇ ಇರುತ್ತೇವೆ.

“ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಪೇಕ್ಷಿಯಾಗಿ ಫಲಕ್ಕೆ ಕಾರಣನೂ ತಾನೆಂದುಕೊಳ್ಳಬೇಡ ಮತ್ತು ಕರ್ಮಮಾಡದೇ ಇರಬೇಕೆಂಬ ಹಂಬಲ ನಿನ್ನಲ್ಲಿ ಉಂಟಾಗದಿರಲಿ (೪೭). ಹಾಗೂ ಗೆಲವು-ಸೋಲುಗಳಿಗೆ ಕುಂದದೆ ಎರಡನ್ನೂ ಸಮಾನಚಿತ್ತದಿಂದ ಸ್ವೀಕರಿಸುತ್ತ ನಿನ್ನ ಕರ್ತವ್ಯಗಳನ್ನು ಮಾಡು. ಈ ಸಮತ್ತ್ವಭಾವವೇ ಯೋಗ ಎಂದು ಕರೆಯಲ್ಪಡುತ್ತದೆ (೪೮)” ಎಂಬುದು ಈ ಶ್ಲೋಕಗಳ ಅರ್ಥ.

ಇಲ್ಲಿ ಕೃಷ್ಣನೆಂಬುವವನು ಅರ್ಜುನನಿಗೆ ಯುದ್ಧಕ್ಕೆ ಅಥವಾ ಸರಿಯಾದ ಕರ್ಮಗಳಿಗೆ ಪ್ರಚೋದಿಸುವ ಶಕ್ತಿಯಷ್ಟೇ ಅಲ್ಲ. ಆತ ನಮ್ಮನ್ನೂ ಸೇರಿಸಿ ಸಕಲ ಜೀವಿಗಳಿಗೆ ಬದುಕನ್ನು ಆಸ್ವಾದಿಸುವ ರೀತಿಯನ್ನು ಹೇಳುವ ಲೋಕೋದ್ಧಾರಕ. ಇಲ್ಲಿ ಅರ್ಜುನನೆಂಬವನು ಸಾಮಾನ್ಯ ನರನ ರೂಪ ಅಂದರೆ ಮನುಷ್ಯನ ರೂಪ. ಯುದ್ಧವೆಂಬುದೇ ಜೀವನ. ಈ ಶ್ಲೋಕಾರ್ಥವನ್ನು ಪ್ರತಿಯೊಬ್ಬರೂ ತಮ್ಮ ಜೀವನಕ್ಕೆ ಅಳವಡಿಸಿಕೊಂಡು ಅದರಂತೆ ನಡೆದರೆ ಸರಳ ಮತ್ತು ಸುಂದರವಾದ ವಿಶ್ವ ನಿರ್ಮಾಣವಾಗುವುದರಲ್ಲಿ ಸಂದೇಹವಿರದು.

ಕಲಿಯುಗದಲ್ಲಿ ಕರ್ಮಫಲಾಪೇಕ್ಷೆಯಿಲ್ಲದೇ ಜೀವಿಸುವವರು ಸಿಗುವುದು ತುಂಬಾ ಕಷ್ಟ. ಆದರೆ ಈ ಫಲಾಪೇಕ್ಷೆಗೂ ಒಂದು ಇತಿ-ಮಿತಿಯನ್ನು ಇಟ್ಟುಕೊಂಡು ಜೀವಿಸಿದರೆ ಮುಕ್ತಿಯ ದಾರಿಯತ್ತ ಸಾಗಬಹುದು. ನಾವು ಒಂದು ಕೆಲಸ ಮಾಡುತ್ತೇವೆಂದಾದರೆ ಅದರಿಂದಾಗುವ ಲಾಭದ ಬಗ್ಗೆ ನಿರೀಕ್ಷೆಯನ್ನಿಟ್ಟುಕೊಂಡೇ ಮಾಡುತ್ತೇವೆ. ಆದರೆ ಪರಿಣಾಮ ಲಾಭವೂ ಆಗಬಹುದು, ಕಡಿಮೆ ಲಾಭವಾಗಬಹುದು ಅಥವಾ ನಷ್ಟವೂ ಆಗಬಹುದು. ಈ ಮೂರನ್ನೂ ಸಮನಾದ ಭಾವದಿಂದ ಸ್ವೀಕರಿಸುವ ಗುಣವನ್ನು ನಾವು ಅಳವಡಿಸಿಕೊಂಡಾಗ ನೆಮ್ಮದಿಯ ಜೀವನ ಸಾಧ್ಯ. ಪ್ರತಿಫಲಾಪೇಕ್ಷೆಯಿಂದಾಗಿಯೇ ನಾವು ಮಾಡಬೇಕಾದ ಕೆಲಸಗಳಿಂದ ಹಿಂದೆ ಸರಿಯಬಾರದು.  ಅಂದರೆ ನನ್ನ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ ಎಂಬ ಕಾರಣಕ್ಕೆ ಸುಮ್ಮನೆ ಕುಳಿತುಕೊಳ್ಳಲೇಬಾರದು. ಅಂತಹ ಮನಸ್ಥಿತಿಯು ಎಂದಿಗೂ ಬಾರದಿರಲಿ ಎಂದು ಕೃಷ್ಣ ಹೇಳುತ್ತಾನೆ. ಆದರೆ ‘ನಾನು ಏನನ್ನೂ ಮಾಡುವುದಿಲ್ಲ’ ಎಂದುಕೊಂಡಲ್ಲಿಗೆ ನಮ್ಮ ಬದುಕು ಅಲ್ಲಿಯೇ ನಿಂತುಬಿಡುತ್ತದೆ. ಅರ್ಥಾತ್ ನಾವು ಬದುಕಿದ್ದೂ ಸತ್ತಂತೆ.

ಬುವಿಯಲ್ಲಿ ಪ್ರತಿಯೊಬ್ಬರಿಗೂ ಜಯ-ಅಪಜಯ, ಕೀರ್ತಿ-ಅಪಕೀರ್ತಿ, ನೋವು-ನಲಿವು ಇದ್ದದ್ದೇ. ಇವೆಲ್ಲವನ್ನೂ ಅನುಭವಿಸುವ ನಮ್ಮ ಮನಸ್ಸು ಇಲ್ಲಿ ಸ್ಥಿರವಾಗಿರಬೇಕು. ಅಂದರೆ ಗೆಲುವು-ಸೋಲುಗಳಿಗೆ ಸಮನಾದ ಭಾವವನ್ನು ಹೊಂದುವ ಮನಸ್ಥಿತಿ ನಮ್ಮದಾಗಬೇಕು. ಯಾಕೆಂದರೆ ಮನುಷ್ಯನ ಜೀವನದಲ್ಲಿ ಎಲ್ಲವೂ ಕ್ಷಣಿಕ. ಏಳುಬೀಳುಗಳನ್ನು ಲೆಕ್ಕಾಚಾರ ಹಾಕುತ್ತ ಅಲ್ಲಿಯೇ ಸ್ಥಿರವಾಗಿಬಿಟ್ಟರೆ ಬದುಕು ಸಾಗುವುದಾದರೂ ಎಂತು? ಹಾಗಾಗಿ ಪ್ರತಿಫಲವನ್ನು ಸಮಚಿತ್ತದಿಂದ ಸ್ವೀಕರಿಸುವುದನ್ನು ಬೆಳೆಸಿಕೊಳ್ಳಬೇಕು. ಪ್ರತಿಫಲವಿಲ್ಲದೇ ಯಾವುದನ್ನೂ ಮಾಡಲಾಗದು ಎಂಬ ಪರಿಸ್ಥಿತಿಯಿದ್ದರೂ ಕೂಡ ಅದರ ಪ್ರತಿಫಲವನ್ನು ಸಮಚಿತ್ತದಿಂದ ಸ್ವೀಕರಿಸುತ್ತೇನೆಂಬ ನಿರ್ಧಾರಕ್ಕೆ ಬಂದು ಜೀವಿಸಿದರೆ ಎಲ್ಲವೂ ಆನಂದಮಯವೇ. ಈ ಸಮನಾದ ಭಾವದಿಂದ ಸ್ವೀಕರಿಸುವುದನ್ನೇ ಕೃಷ್ಣನು ಯೋಗ ಎನ್ನುತ್ತಾನೆ.  ಈ ಯೋಗದ ಸ್ಥಿತಿಯಲ್ಲಿ ಬದುಕುವಾಗ ನೋವುಗಳೂ ಒಂದೇ; ನಲಿವುಗಳೂ ಒಂದೇ.


ಗೀತಾಸಾರ: ಸರಳವಾದ ಬದುಕಿನ ದಾರಿಗಳು ಗೀತೆಯಲ್ಲಿವೆ. ಪ್ರತಿಫಲಾಪೇಕ್ಷೆಯಿಲ್ಲದೆ ಅವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮನಸ್ಸನ್ನು ಬೆಳೆಸುವ ಕಾರ್ಯ ಆಗಬೇಕು.
*****

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|
ಮಾ ಕರ್ಮಫಲಹೇತುರ್ಭೂರ್ಮಾತೇ ಸಂಗೋsಸ್ತ್ವಕರ್ಮಣಿ||(ಅಧ್ಯಾಯ-೨:ಶ್ಲೋಕ-೪೭)

ಇದು ಭಗವದ್ಗೀತೆಯ ಶ್ಲೋಕ,ಮಹಾಭಾರತದಲ್ಲಿ ಗೀತೆ ಇರುವದೆಂದು ತಿಳಿದದ್ದು ಮತ್ತಿಪ್ಪತ್ತು ಕಳೆದ ಮೇಲೆ.ವಿಸ್ತೃತವಾಗಿ ಅರ್ಥ ಆಗಲು ಇನ್ನಿಪ್ಪತ್ತು ಕಳೆಯಬೇಕೋ ಏನೋ.!

ಕರ್ಮ ಸಿದ್ಧಾಂತದ ಭದ್ರತಳವಾದ ಈ ಶ್ಲೋಕವನ್ನು ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳುವುದು ಒಳ್ಳೆಯದು, ಕರ್ಮಠನಾದ ಮನುಷ್ಯ ಸೋತಾಗಲೂ-ಗೆದ್ದಾಗಲೂ ಈ ಮಾತುಗಳನ್ನು ನೆನಪಿಸಿಕೊಳ್ಳುವುದರಲ್ಲಿ ಜೀವನದ ಸಾರ್ಥಕತೆ ಇದೆ.ಕರ್ಮಯೋಗಿಯಾಗುವುದಕ್ಕೆ ಅವಕಾಶವಿದೆ.

ಈ ಮೇಲಿನ ಮಾತಿನ ಭಾವ ಇಷ್ಟು-
ಕರ್ಮದಲ್ಲಿ ಮಾತ್ರ ನಿನಗೆ ಹಕ್ಕು,ಫಲದಲ್ಲಿ ಎಂದೂ ಇಲ್ಲ.ಫಲವನ್ನೇ ನಂಬಿ ಕರ್ಮ ಮಾಡಬೇಡ. ಅಂತೆಯೇ ನಿಷ್ಕ್ರಿಯತೆ ನಿನಗಂಟದಿರಲಿ.(ಅನುವಾದ-ವಿದ್ಯಾವಾಚಸ್ಪತಿ ಡಾ| ಬನ್ನಂಜೆ ಗೋವಿಂದಾಚಾರ್ಯರು-ಭಗವಂತನ ನಲ್ನುಡಿ)

ಶ್ರೀ ಕೃಷ್ಣನು ಸ್ಪಷ್ಟವಾಗಿ ಕರ್ಮದಲ್ಲಿ ಮಾತ್ರ ನಿನಗೆ ಅಧಿಕಾರ ಎಂದಿದ್ದಾನೆ.ಈ ಮಾತುಗಳನ್ನು ಸಮರಾಂಗಣದಲ್ಲಿ ಯುದ್ಧ ಸನ್ನದ್ಧರಾದ ಸೈನ್ಯ ನಡುವೆ ಶೋಕಾವಿಷ್ಟನಾಗಿ ರಥದಲ್ಲಿ ಕುಳಿತ ಅರ್ಜುನನಿಗೆ ಕೃಷ್ಣನು ಹೇಳುತ್ತಿದ್ದಾನೆ.

ಅರ್ಜುನನು ಕ್ಷತ್ತಿಯ,ಯುದ್ಧಕ್ಕಾಗಿ ರಣಾಂಗಣಕ್ಕೆ ಬಂದಿದ್ದಾನೆ. ಯುದ್ಧ ಕ್ಷತ್ರಿಯ ಧರ್ಮ.ಯುದ್ಧ ಅರ್ಜುನನ ಕರ್ಮ.ಯುದ್ಧ ಘೋಷಣೆಯಾಗಿದೆ.ಯುದ್ಧ ಮಾಡುವ ಅಧಿಕಾರ ಇದೆ. ಯುದ್ಧದಲ್ಲಿ ಗೆಲ್ಲಬೇಕೆಂಬ ಬಯಕೆ ಬೇಕು.ಜಯ ಸಾಧಿಸುವೆವು ಎಂಬ ನಂಬಿಕೆ ಬೇಕು. ಗೆಲ್ಲುವುದು ನಮ್ಮ ಹಕ್ಕು ಎಂದು ಭಾವಿಸುವಂತಿಲ್ಲ,ನೀವು ಗೆಲ್ಲಲೂ ಬಹುದು ಅಥವಾ ಸೋಲಲೂಬಹುದು ಎಂಬುದು ಕೃಷ್ಣನ ಅಭಿಪ್ರಾಯ.

ಹಾಗಾದರೆ-ಸೋಲೋ‌ ಗೆಲುವೋ ಖಚಿತವಾಗಿ ಗೊತ್ತಿಲ್ಲದ ಕಾರಣ ಈಗ ಏನು ಮಾಡಬೇಕು? ಗೆಲ್ಲಬೇಕೆಂಬ ಹಂಬಲದಿಂದ ಯುದ್ಧ ಮಾಡಬೇಕು.

ಓಹೋ.. ಗೆಲ್ಲುವುದು ಖಚಿತ ಇಲ್ಲವೆಂದ ಮೇಲೆ ಯುದ್ಧ ಯಾಕೆ ಮಾಡುವುದು,ಗೆಲ್ಲುವುದಾದರೆ ಮಾತ್ರ ಯುದ್ಧ ಮಾಡುವೆನು ಎಂದು ಭಾವಿಸಬೇಡ. ಯುದ್ಧ ಮಾಡದೇ ನಿಷ್ಕ್ರಿಯನಾಗಬೇಡ ಎಂದು ಶ್ಲೋಕದ ಮುಂದಿನ ಪಾದದಲ್ಲಿ ಕೃಷ್ಣ ಹೇಳಿದ್ದಾನೆ.

ಮಾತೇ ಸಂಗೋsಸ್ತ್ವಕರ್ಮಣಿ|

ಕುರುಕ್ಷೇತ್ರದಲ್ಲಿ ನಡೆಯಲಿರುವ ಈ ಯುದ್ಧದಲ್ಲಿ ಯಾರು ಗೆಲ್ಲುವರು ಎಂದು ಖಚಿತವಾಗಿ ತಿಳಿದಿಲ್ಲ.ಸೈನ್ಯದ ಸಂಖ್ಯಾಬಲದಿಂದ ಅವಲೋಕಿಸಿದರೆ ದುರ್ಯೋಧನನೇ ಪರ್ಯಾಪ್ತ.ಶೌರ್ಯಸಾಹಸಗಳನ್ನು ಪರಿಗಣಿಸಿದರೆ ಪಾಂಡವರೂ ಸಮರ್ಥರೇ.

ನಾವೇ ಗೆಲ್ಲುವೆವೋ ಅಥವ ಸೋಲುವೆವೋ ಎಂದು ತಿಳಿಯೆವು ಎಂಬ ಮಾತನ್ನು ಅರ್ಜುನನೇ ಈ ಹಿಂದೆ ಹೇಳಿದ್ದ.

ಯದ್ವಾ ಜಯೇಮ ಯದಿ ವಾ ನೋ ಜಯೇಯುಃ|(ಅಧ್ಯಾಯ-೨,ಶ್ಲೋಕ-೫).

ಈ ಮಾತನ್ನು ಅರ್ಜುನನೇ ಹಿಂದೆ ಹೇಳಿದ್ದನೆಂದ ಮೇಲೆ,ಈ ಯುದ್ಧವೆಂಬ ಕರ್ಮದ,ಫಲದ- ಅದರ ಅಧಿಕಾರದ ಬಗ್ಗೆ ಅವನಿಗೆ ಮೊದಲೇ ತಿಳಿದಿತ್ತು ಎಂದಾಯಿತಲ್ಲವೇ? ಮತ್ತೆ ಕೃಷ್ಣ ಅದನ್ನೇ ಪುನಃ ಅರ್ಜುನನಿಗೆ ಏಕೆ ಹೇಳುತ್ತಿದ್ದಾನೆ?
*****
ಗೀತಾ ಮಕರಂದ🐝
      
        (ಜೇನು-೮)

ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಅನೇಕ ದೇಶಭಕ್ತರು ಭಗವದ್ಗೀತೆಯಿಂದ ಪ್ರಭಾವಿತರು.ಗಣೇಶೋತ್ಸವವವನ್ನು ಸಾರ್ವಜನಿಕವಾಗಿ ಆಚರಿಸುವ ಮೂಲಕ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಬಾಲಗಂಗಾಧರ ತಿಲಕರು ಗೀತಾರಹಸ್ಯ ಎಂಬ ಕೃತಿಯನ್ನು ರಚಿಸಿದ್ದಾರೆ.(ಈಗ ಇದರ ಕನ್ನಡ ಆವೃತ್ತಿ ಲಭ್ಯವಿದೆ) ಅರವಿಂದರೂ ಕೂಡ ಗೀತೆಯ ಬಗ್ಗೆ ಬರೆದಿದ್ದಾರೆ. ವಿನೋಬಾ ಬಾವೆಯವರು ಜೈಲಿನಲ್ಲಿದ್ದಾಗ ಅವರ ಸಹಚರರಿಗೆ ನಿತ್ಯ ಗೀತಾ ಪ್ರವಚನ ಮಾಡುತ್ತಿದ್ದರು. ಅದರ ಸಂಗ್ರಹರೂಪವೇ ಗೀತಾಪ್ರವಚನ ಎಂಬ ಕೃತಿಯಾಗಿ ಹೊರಬಂದಿದೆ.

ಜೈಲಿನಲ್ಲಿದ್ದರಲ್ಲವಾ..? ಏನು ಕೆಲಸ ಇರಲಿಲ್ಲ,ಹಾಗಾಗಿ ಗೀತಾಪ್ರವಚನ ಮಾಡಿದರು ಎಂದು ಕಿಡಿಗೇಡಿಗಳು ಭಾವಿಸಬಹುದು.ಗೀತೆಯ ವಿಷಯವನ್ನು ಹೇಳುವುದು ಎಷ್ಟು ಕಷ್ಟವೋ,ಕೇಳುವುದು ಕೂಡ ಅಷ್ಟೇ ಕಷ್ಟಕರವಾದ ವಿಷಯ.ನಾವು ಎಷ್ಟೋ ಸಂದರ್ಭ-ಅವಕಾಶ ಸಿಕ್ಕಾಗಲೆಲ್ಲ ಸುಮ್ಮನೆ ಕಾಲಹರಣ ಮಾಡುತ್ತೇವಲ್ಲದೇ ಯಾವಾಗಲಾದರೂ ಗೀತೆಯಂಥಹ ಉತ್ಕೃಷ್ಟ ಗ್ರಂಥದ,ದೇಶ ಪ್ರೇಮದಂಥಹ ವಿಷಯದ ಬಗ್ಗೆ ಎಷ್ಟು ಬಾರಿ,ಎಷ್ಟು ಹೊತ್ತು ಚಿಂತಿಸುತ್ತೇವೆ.?

ದೇಶಪ್ರೇಮದ ಚಲನಚಿತ್ರ ನೋಡಿ ಥಿಯೇಟರಿನಿಂದ ಹೊರಬರುವಾಗ 'ದೇಶಕ್ಕಾಗಿ ಏನಾದರೂ ಮಾಡಬೇಕು' ಎಂದಿರುವ ಉತ್ಕಟವಾದ ಭಾವ ಗೇಟಿನಿಂದ ಆಚೆ ಬರುತ್ತಿದ್ದಂತೆಯೇ- ಹೊರಜನರನ್ನು ಕಂಡ ಕೂಡಲೇ ಮರೆತುಹೋಗುತ್ತದೆ ನಮಗೆ!

ಸಮಯ ಸಿಕ್ಕಾಗಲೆಲ್ಲ ಇತರರ ಬಗ್ಗೆ,ಪ್ರಾಪಂಚಿಕ ವಿಷಯದ ಬಗ್ಗೆಯೇ ಹರಟುವ ನಮ್ಮಂಥವರಿಗೇ ಹೇಳಿದ್ದು ಶ್ರೀಮದಾಚಾರ್ಯರು-

ತದಲಂ ಬಹುಲೋಕವಿಚಿಂತನಯಾ ಪ್ರವಣಂ ಕುರು ಮಾನಸಮೀಶಪದೇ|(ದ್ವಾದಶ ಸ್ತೋತ್ರ).



ಕರ್ಮದ ಲೋಕದಲ್ಲಿ ಬಂದಿರುವ ಕರ್ಮಠರು ನಾವು,ಕರ್ಮಯೋಗಿಗಳಾಗಬೇಕು ಎಂಬ ಚಿಂತನೆಯಿಂದ ಮೊದಲಿಗೆ ಗೀತೆಯ 'ಕರ್ಮಣ್ಯೇವಾಧಿಕಾರಸ್ತೇ...' ಎಂಬ ಮಾತಿನಿಂದ ಚಿಂತನೆ ಆರಂಭಿಸಿದೆ.

ಯುದ್ಧದಲ್ಲಿ ನಾವು ಗೆಲ್ಲತ್ತೇವೋ,ಸೋಲುತ್ತೇವೋ ಎಂದು ತಿಳಿದಿಲ್ಲ ಎಂದು ಮೋಹಾವೃತನಾಗಿ ಹೇಳಿದ ಅರ್ಜುನ, ಯುದ್ಧರಂಗಕ್ಕೆ ಬರುವ ಮೊದಲು ತಾವೇ ಗೆಲ್ಲುವೆವು ಎಂದು ಹೇಳುತ್ತಿದ್ದ. ಮಾತ್ರವಲ್ಲ ತಮ್ಮ ಸೋಲು- ಗೆಲುವುಗಳ ಬಗ್ಗೆ ಗೊತ್ತಿಲ್ಲ ಎಂದು ಹೇಳುವ ಅರ್ಜುನನ ಮಾತುಗಳು ಕೇವಲ ಮೋಹದಿಂದಲೇ ಮೂಡಿದವು ಹೊರತು ವಿವೇಕದಿಂದಲ್ಲ.ಹಾಗಾಗಿ ವ್ಯಾಮೋಹಕ್ಕೊಳಗಾಗಿ ಅರ್ಜುನ ಆಡಿದ ಮಾತನ್ನೇ ಕೃಷ್ಣ ಬುದ್ಧಿಯುಕ್ತನಾಗಿ ತಿಳಿಸುತ್ತಿದ್ದಾನೆ.

ಕರ್ಮ ಸಿದ್ಧಾಂತದ ಪ್ರಕಾರ ಪ್ರತಿಯೊಂದು ಕೆಲಸಕ್ಕೂ ಫಲ ಎಂಬುದು ಇದ್ದೇ ಇದೆ.ಅತ್ಯುತ್ಕಟವಾದ ಇಚ್ಛೆಯಿಂದ ಮಾಡಿದ ಕರ್ಮಕ್ಕೆ ಫಲವು ಕೂಡಲೇ ಸಿಗುತ್ತದೆ ಎಂದು ಮಹಾಭಾರತವು ಹೇಳುತ್ತದೆ.ಹೀಗಿರುವಾಗ ನಾವು ಬಯಸಿ ಮಾಡಿದ ಕರ್ಮದ ಫಲದ ಹಕ್ಕು ನಮ್ಮದೇ ಅಲ್ಲವೇ? ಅದನ್ನು ಅಧಿಕಾರವಾಣಿಯಿಂದ ಆಶಿಸುವುದು ಹೇಗೆ ತಪ್ಪಾಗುತ್ತದೆ?

ಕೃಷ್ಣನ ಮಾತನ್ನು ಗಮನಿಸಬೇಕು ನಾವು.
ಕರ್ಮಣ್ಯೇವಾಧಿಕಾರಸ್ತೇ ಎಂಬಲ್ಲಿ ಮಾ ಫಲೇಷು ಎಂದು ಹೇಳಿದೆಯೇ ಹೊರತು ನ ಫಲೇಷು ಎಂದು ಹೇಳಿಲ್ಲ.

ಮಾಡಿದ ಕರ್ಮಕ್ಕೆ ಫಲ ನೀಡುವವನು-ಭಗವಂತ.ಅವನು ಅದರ ಸ್ವಾಮಿ.ಕರ್ಮಕ್ಕನುಗುಣವಾಗಿಯೇ ಫಲ ನೀಡುತ್ತಾನೆ,ನೀಡಬೇಕೆಂದೆನಿಸಿದರೆ ಅವಶ್ಯ ನೀಡುತ್ತಾನೆ.ಆದರೆ ಅದು ಈಗಲೇ ಬೇಕು,ಹೀಗೆಯೇ ಇರಬೇಕು ಎಂಬುದಾಗಿ ಅಧಿಕಾರಯುತವಾಗಿ ಹೇಳುವ ಹಕ್ಕು ನಮಗಿಲ್ಲ.ಏಕೆಂದರೆ ನಾವು ಕರ್ಮದ ಅಧಿಕಾರಿಗಳೇ ಹೊರತು ಅದರ ಫಲದ ಒಡೆಯರಲ್ಲ,ನಾವು ಮಾಡಿದ ಕರ್ಮಕ್ಕೆ ನಮಗೆ ಫಲ ಸಿಗುವುದೇ ಹೊರತು -ನಾವೇ ಫಲವನ್ನು ನಿರ್ಧರಿಸಿ ಅದನ್ನು  ಕಸಿದುಕೊಳ್ಳುವುದಲ್ಲ,ಯಾವ ಕರ್ಮಕ್ಕೆ ಏನು ಫಲ ನೀಡಬೇಕೆಂಬ,ಪಡೆಯಬೇಕೆಂಬ ಜ್ಞಾನವೂ ನಮಗಿಲ್ಲ.

ಆದ್ದರಿಂದ ಕರ್ಮದಲ್ಲಿ ಮಾತ್ರ ನಮಗೆ ಅಧಿಕಾರ,ಅದರ ಫಲದಲ್ಲಿ ಅಧಿಕಾರ ಇಲ್ಲ-ಇನ್ನೂ ಸ್ಪಷ್ಟವಾಗಿ ಕರ್ಮದ ಫಲದಲ್ಲಿ ಅಧಿಕಾರ ಚಲಾಯಿಸಬೇಡ ಎಂಬುದು 'ಮಾ' ಎಂಬುದರ ಮೂಲಕ ಕೃಷ್ಣನ ಸಂದೇಶ.

|ಗುರ್ವಂತರ್ಯಾಮಿ ಪ್ರೀಯತಾಮ್|🙏🏽🙏🏽


✍🏼 ಹಯಸುತಾನುದಾಸ
*****
ಗೀತಾ ಮಕರಂದ🐝
     
        (ಜೇನು-೯)


ಬೆಳಕು ಮೂಡಿದಲ್ಲಿಂದ ಆರಂಭಿಸಿ ನಿತ್ಯ ಕಾಯಕದೊಡನೆ ಮುಂದುವರೆದು ಮಲಗುವವರೆಗೂ ಮನುಷ್ಯ ಮಾಡುವುದು ಒಂದನ್ನೇ-ಕರ್ಮ. ಕೋಪಗೊಂಡಾಗ,ಬೇಸರದಿಂದ ಗೊಣಗುವುದೂ ಅದನ್ನೇ-ಇದು ನನ್ನ ಕರ್ಮ! ಈಗ ಹೊಸ ಶಬ್ದಗಳ ಆವಿಷ್ಕಾರವಾಗಿದೆ-ಕರ್ಮಕಾಂಡ. ಇದೇನು ವೇದಗಳಲ್ಲಿ ಹೇಳಲ್ಪಟ್ಟ ಜ್ಞಾನ-ಕರ್ಮ ಕಾಂಡಗಳಲ್ಲ. ಗೊಣಗುವಿಕೆಯ ಹೊಸ ಪದ-ಅನುಭವಿಸ ಬೇಕಾದ ಕರ್ಮಗಳ ಸರಮಾಲೆಯನ್ನೇ ಕರ್ಮಕಾಂಡ ಎಂದು ಕರೆಯುತ್ತಾರೇನೋ.!

ಕರ್ಮ ಸಂದೇಶ-ಗೀತೆಯಲ್ಲಿ ಬಂದಿರುವ ಶ್ರೇಷ್ಟವಾದ ಸಂದೇಶ. ಆದ್ದರಿಂದ ಮೊದಲು ಕರ್ಮವನ್ನು ಅರ್ಥಮಾಡಿಕೊಳ್ಳಬೇಕು.

ಕರ್ಮ ಎಂದರೇನು ಎಂದು ನಮಗೆ ತಿಳಿದಿದೆ ಎಂದು ನಾವು ಭಾವಿಸಿದರೂ, ವಿವರಣೆ ಕೇಳಿದರೆ ನಿಖರವಾದ ಉತ್ತರ ಕಷ್ಟಸಾಧ್ಯ.

ಗೀತೆಯಲ್ಲಿ ಈ ಕರ್ಮ ಎಂಬ ಶಬ್ದ ಹಲವು ಬಾರಿ ಬಳಕೆಯಾಗಿದೆ.

ಮೊದಲಿಗೆ ಸಂಜಯನ ಮಾತಿನಲ್ಲಿ ಭೀಮಸೇನನಿಗೆ ವಿಶೇಷಣವಾಗಿ.ಮುಂದೆ ಶ್ರೀಕೃಷ್ಣನ ಮಾತಿನಲ್ಲಿ-ಎರಡನೆಯ ಅಧ್ಯಾಯದಲ್ಲಿ.

ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮಬಂಧಂ ಪ್ರಹಾಸ್ಯಸಿ||(ಶ್ಲೋಕ-೩೯).

ಇಲ್ಲಿ ಕರ್ಮಬಂಧವನ್ನು ಕಳಚುವ ಬಗೆಯನ್ನು ಹೇಳಿದೆ.

ಕರ್ಮ ಎಂದರೇನು? ಕರ್ಮ ಎಂದರೆ ಯಾವುದು? ಎಷ್ಟು ಬಗೆಯ ಕರ್ಮಗಳಿವೆ? ಕರ್ಮದ ಫಲವೇನು? ಕರ್ಮ ಏಕೆ ಮಾಡಬೇಕು? ಹೇಗೆ ಮಾಡಬೇಕು? ಕೊನೆಯದಾಗಿ ಕರ್ಮ ಮಾಡಲೇ ಬೇಕಾ.?! ಮುಂತಾದ ಪ್ರಶ್ನೆಗಳು ಬರುತ್ತವೆ.

ಗೀತೆಯಲ್ಲಿನ ಒಂದು ಅಧ್ಯಾಯಕ್ಕೆ ಕರ್ಮಯೋಗ ಎಂದೇ ಹೆಸರು ಇಟ್ಟಿದ್ದಾರೆ. ಮಹಾಭಾರತದ ಭೀಷ್ಮಪರ್ವದಲ್ಲಿ ಬರುವ ಭಗವದ್ಗೀತೆಯನ್ನು ವ್ಯಾಸರು ಅಧ್ಯಾಯಗಳನ್ನಾಗಿ ವಿಂಗಡಿಸಿದ್ದಾರೆಯಾದರೂ ಅವುಗಳಿಗೆ ವಿಶೇಷವಾದ ಹೆಸರನ್ನು ನೀಡಿಲ್ಲ. ಆ ಅಧ್ಯಾಯದಲ್ಲಿ ಕರ್ಮದ ಬಗ್ಗೆ ಹೇಳಿದೆಯಾದುದರಿಂದ ಅದನ್ನು ಕರ್ಮಯೋಗ ಎಂದು ಮತ್ತೆ ಕರೆದಿರಬಹುದು.

ಅಂತೂ ಕರ್ಮವನ್ಮು ಆಳವಾಗಿ ತಿಳಿಯಬೇಕಾದದು ನಮ್ಮ ಧರ್ಮ.ಈಗ ಇದೇ ನಮಗೆ ಕರ್ಮ.

|ಗುರ್ವಂತರ್ಯಾಮಿ ಪ್ರೀಯತಾಮ್|



✍ ಹಯಸುತಾನುದಾಸ

*****
ಗೀತಾ ಮಕರಂದ🐝

       (ಜೇನು-೧೦)


ಗೀತೆಯ ಜ್ಞಾನ ರಹಸ್ಯವಾದದು,ಅತ್ಯಮೂಲ್ಯವಾದದು,ಅರ್ಹರಿಗೆ ಮಾತ್ರ ನೀಡಬೇಕಾದದು ಎಂಬ ಕಾರಣಕ್ಕೆ ಇದರ ಉಪದೇಶಕ್ಕೆ- ಕೃಷ್ಣನೇ ಗೀತೆಯಲ್ಲಿ ಕೆಲವೊಂದು ನಿಷೇಧ ಹಾಕಿದ್ದಾನೆ.ಗೀತೆಯನ್ನು ಓದಲಾರಂಭಿಸಿದ ಕಾರಣ ಆ ನಿಷೇಧಗಳನ್ನು ನಾವು ಗಮನಿಸಬೇಕು,ನಿಷೇಧದ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು.ಉದ್ದೇಶ ಏನೇ ಇರಲಿ ಎಲ್ಲವೂ ಎಲ್ಲರಿಗಾಗಿ ತೆರೆದಿರಬೇಕು ಎಂದು ಬೊಬ್ಬಿಡುವ ಮಂದಿ ಕೃಷ್ಣನ ಮಾತನ್ನು ಯಥಾವತ್ತಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಇಷ್ಟಕ್ಕೂ ಬ್ರಿಟಿಷರಿಂದ ಬೋಧಿಸಲ್ಪಟ್ಟ ಇತಿಹಾಸವನ್ನು,ನೈಜ ಇತಿಹಾಸದೊಡನೆ ಸಮೀಕರಿಸಿ ಕಸ ರಸಗಳನ್ನು ಬೇರ್ಪಡಿಸಲು ಪ್ರಯತ್ನಿಸಬೇಕು.

ಹದಿನೆಂಟನೆಯ ಅಧ್ಯಾಯದಲ್ಲಿ ಕೃಷ್ಣನು ಹೇಳುವ ಮಾತುಗಳಿವು.

ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ|
ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋsಭ್ಯಸೂಯತಿ||
(ಶ್ಲೋಕ-೬೮)

ಈ ಶಾಸ್ತ್ರೀಯವಾದ ವಿಚಾರಗಳನ್ನು ತಪಸ್ಸು ಮಾಡವನಿಗೆ,ಭಕ್ತನಲ್ಲದವನಿಗೆ, ಶುಶ್ರೂಷೆ ಮಾಡದವನಿಗೆ ಮತ್ತು ನನ್ನನ್ನು ದ್ವೇಷಿಸುವವನಿಗೆ ಎಂದಿಗೂ ಹೇಳಬೇಡ ಎಂದಿದ್ದಾನೆ.

ಈ ಮೇಲಿನ ಗುಣಗಳಲ್ಲಿ ನಮ್ಮಲ್ಲಿ ಏನಿದೆ? ಏನಿಲ್ಲ, ಇಲ್ಲದ್ದನ್ನು ಗಳಿಸಬಹುದೇ? ಯಾಕೆ ಗಳಿಸಬೇಕು? ಹೌದಾದರೆ ಹೇಗೆ? ಎಂಬ ಪ್ರಶ್ನೆಗಳ ಮೂಲಕ ಆತ್ವಾವಲೋಕನ ಮಾಡಬೇಕು.

ತಪಸ್ಸು ಮಾಡದವನಿಗೆ ಹೇಳಕೂಡದು ಎಂಬುದು ಕೃಷ್ಣನ ಮೊದಲ ಮಾತು.ತಪಸ್ವೀಯಾದರೂ ಭಕ್ತನಲ್ಲದವನಿಗೆ ಹೇಳಬಾರದು. ತಪಸ್ವೀ ಭಕ್ತನಾದರೂ ಶುಶ್ರೂಷೆ ಮಾಡದವನಿಗೆ,ಎಲ್ಲವನ್ನೂ ಮಾಡಿದರೂ ಭಗವತ್ ದ್ವೇಷಿಗೆ ಹೇಳಬಾರದು ಎಂಬುದು ಕೃಷ್ಣನ ಅಂಬೋಣ.

ತಪಸ್ಸಿನ ಬಗ್ಗೆ ಮುಂದೆ ತಿಳಿಯೋಣ.


|ಗುರ್ವಂತರ್ಯಾಮಿ ಪ್ರೀಯತಾಮ್|


✍ ಹಯಸುತಾನುದಾಸ


ಮಕರಂದ

*****

ಗೀತಾ ಮಕರಂದ 🐝

      (ಜೇನು-೧೧)

ತಪಸ್ಸು ಎಂಬ ಶಬ್ದವನ್ನೂ,ಅದರ ಅರ್ಥವನ್ನೂ ನಾವು ಸ್ವಲ್ಪ ವಿಸ್ತಾರವಾಗಿ ತಿಳಿಯಬೇಕು.ಏಕೆಂದರೆ ಭಗವದ್ಗೀತೆಯಲ್ಲಿ ತಪಸ್ಸು ಎಂಬ ಶಬ್ದ ಅನೇಕ ಬಾರಿ ಬಂದಿದೆ.

ಪ್ರತಿಯೊಬ್ಬನೂ ಮಾಡಲೇಬೇಕಾದ ಮೂರು 'ಕರ್ಮ'ಗಳೆಂದರೆ-ಯಜ್ಞ,ದಾನ,ತಪಸ್ಸು ಎಂದು ಗೀತಾಚಾರ್ಯನೇ ಗೀತೆಯಲ್ಲಿ ಹೇಳಿದ್ದಾನೆ.

ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್||
(ಅಧ್ಯಾಯ-೧೮,ಶ್ಲೋಕ- ೫)

ವಿದ್ವಾಂಸರಾದ ಪಾವಗಡ ಪ್ರಕಾಶರಾಯರು ತಮ್ಮ ರಾಮಾಯಣ ಪ್ರವಚನದಲ್ಲಿ ಮೊದಲಿಗೆ ಹೇಳುತ್ತಿದ್ದ ವಿಷಯವೇ ತಪಸ್ಸು.ವಾಲ್ಮೀಕಿ ವಿರಚಿತ ಶ್ರೀಮದ್ರಾಮಾಯಣವು ಆರಂಭ ಆಗುವುದೇ ತಪಸ್ಸಿನಿಂದ.

ತಪಸ್ವಾಧ್ಯಾಯ ನಿರತಂ ತಪಸ್ವೀ ವಾಗ್ವಿದಾಂ ವರಮ್|
(ಬಾಲಕಾಂಡ,ಸರ್ಗ-೧,ಶ್ಲೋಕ-೧)

ರಾಮಾಯಣ ತಿಳಿಯಬೇಕಾದರೆ ನಾವು ತಪಸ್ಸು ಮಾಡಬೇಕು ಎನ್ನುತ್ತಿದ್ದರು ಅವರು. ರಾಮಾಯಣ ಕೇಳಬೇಕು,ಅದಕ್ಕಾಗಿ ಸಮಯ ಹೊಂದಿಸಬೇಕು. ಪ್ರವಚನ ಆಗುವಷ್ಟು ಹೊತ್ತು ಕುಳಿತುಕೊಳ್ಳಬೇಕು,ಮನಸ್ಸು ಕೊಡಬೇಕು,ತಲೆಯಲ್ಲಿ ತುಂಬಿಕೊಳ್ಳಬೇಕು, ಹಿಂದಿನ ದಿನದ ವಿಚಾರಗಳನ್ನು ನೆನಪಿಟ್ಟುಕೊಳ್ಳಬೇಕು-ಇವೆಲ್ಲವೂ ತಪಸ್ಸಿನ ಮುಖಗಳೇ.



✍ ಹಯಸುತಾನುದಾಸ

ಗೀತಾ ಮಕರಂದ 🐝

        (ಜೇನು-೧೨)

ತಪ-ಸಂತಾಪೇ ಎಂಬ ಧಾತುವಿನಿಂದ ತಪ ಎಂಬ ಶಬ್ದ ನಿಷ್ಪನ್ನವಾಗುತ್ತದೆ ಎಂಬುದು ಕೋಶಕಾರರ ಅಭಿಮತ.

ತಪನ,ತಾಪ,ತಪಸ್- ಎಂಬ ಕನ್ನಡದಲ್ಲಿ ಬಳಕೆಯಲ್ಲಿರುವ ಅರ್ಥಗಳನ್ನೇ ಇದು ಸೂಚಿಸುತ್ತದೆ.ಬಿಸಿ,ಬೇಗೆ ಮುಂತಾದ ಅರ್ಥವನ್ನು ಕೊಡುತ್ತದೆ.

ದೇಹವನ್ನು ದಂಡಿಸುವಂಥದ್ದು ಕೂಡ ಒಂದು ಬಗೆಯ ತಪಸ್ಸೇ-ರೂಢಿಯಲ್ಲಿ ತಪಸ್ಸೆಂದು ಪ್ರಸಿದ್ಧವಾಗಿದೆ.

ತಪ-ಐಶ್ವರ್ಯೇ ಎಂಬ ಒಂದು ಧಾತುವಿದೆ ಎಂದು ಧಾತುರೂಪಾವಳಿಯು ಉಲ್ಲೇಖಿಸುತ್ತದೆ.

ತಪ-ಆಲೋಚನೆ ಎಂಬ ಧಾತುವನ್ನು ವಿದ್ಯಾವಾಚಸ್ಪತಿ ಬನ್ನಜೆ ಗೋವಿಂದಾಚಾರ್ಯರು ಉಲ್ಲೇಖಿಸುತ್ತಾರೆ. ಆಳವಾದ ಆಲೋಚನೆಯೇ-ತಪಸ್ಸು.

ಯಾವುದೇ ವಿಷಯದ ಬಗ್ಗೆ ಆಳವಾಗಿ ಚಿಂತನೆ ಮಾಡಿದಾಗ ಸತ್ಯ ಹೊಳೆಯುತ್ತದೆ. ಪ್ರಾಚೀನ ಋಷಿಮುನಿಗಳು,ದೇಹವನ್ನು ದಂಡಿಸಿ,ಅಧ್ಯಾತ್ಮ ತತ್ತ್ವದ ಕುರಿತು ಆಳವಾಗಿ ಆಲೋಚನೆ ಮಾಡುತ್ತಿದ್ದ,ಅದನ್ನೇ ಧ್ಯಾನ ಮಾಡುತ್ತಿದ್ದದನ್ನೇ ತಪಸ್ಸು ಎಂದು ತಿಳಿಯಬಹುದು.

ತಪಸ್ಸನ್ನು ಮೂರು ಬಗೆಯಾಗಿ ಮತ್ತು ಆ ಮೂರನ್ನು ಇನ್ನೂ ಮೂರು ಬಗೆಯಾಗಿ ವಿಂಗಡಿಸಬಹುದು.ಗೀತಾಚಾರ್ಯನೇ ಈ ವಿಚಾರಗಳನ್ನು ಗೀತೆಯಲ್ಲಿ ಹೇಳಿದ್ದಾನೆ.

ಪ್ರಧಾನವಾಗಿ ತಪಸ್ಸು-ಶಾರೀರಿಕ,ವಾಚಿಕ,ಮತ್ತು ಮಾನಸಿಕವೆಂದು ಮೂರು ಬಗೆ.


|ಗುರ್ವಂತರ್ಯಾಮಿ ಪ್ರೀಯತಾಮ್|



✍ ಹಯಸುತಾನುದಾಸ

*****

ಗೀತಾ ಮಕರಂದ 🐝
      
       (ಜೇನು-೧೩)

ತಪಸ್ಸು ಕೂಡ ಒಂದು ಕರ್ಮವೇ ಎಂದು ಗೀತಾಚಾರ್ಯನ ಮಾತಿನಲ್ಲಿಯೇ ತಿಳಿದು,ತಪಸ್ಸು ಪದದ ಅರ್ಥವನ್ನೂ ಸರಳವಾಗಿ ತಿಳಿದೆವು.

ಎರಡನೆಯ ಅಧ್ಯಾಯದ 'ಕರ್ಮಣ್ಯೇವಾಧಿಕಾರಸ್ತೇ..' ಎಂಬ ಶ್ಲೋಕದಲ್ಲಿನ 'ಕರ್ಮ' ಪದದ ಅರ್ಥವ್ಯಾಪ್ತಿಯನ್ನು ಸರಳವಾಗಿ ಹೇಳುವುದಾದರೆ ನಾವು ಮಾಡುವ ಎಲ್ಲ ಕೆಲಸ. ಎಚ್ಚರವಿದ್ದು ಮಾಡುವ ಎಲ್ಲವೂ ಕರ್ಮವೇ. ಎಚ್ಚರವಿಲ್ಲದೆ ಅಥವ ನಿಯಂತ್ರಣವಿಲ್ಲದೇ ನಡೆಯುವ ಎಲ್ಲವೂ ಕೂಡ ಕರ್ಮದ ವ್ಯಾಪ್ತಿಯಲ್ಲಿಯೇ ಬರುತ್ತದೆ.ಕನಸಿನಲ್ಲಿ ಪಡೆಯುವ ಸುಖದುಃಖದಿಂದಾರಂಭಿಸಿ ಎಚ್ಚರದಲ್ಲಿ ತಿಳಿದು,ತಿಳಿಯದೇ ಮಾಡುವ ಎಲ್ಲವೂ.

ಹಾಗಾದರೆ ಕರ್ಮ ಮಾಡದೇ ಇರುವುದು ಯಾರಿಂದಲೂ ಸಾಧ್ಯವಿಲ್ಲ. ಎಚ್ಚರ ಇದ್ದೋ ಇಲ್ಲದೆಯೋ ಮಾಡುವ ಉಸಿರಾಟವೂ ಕರ್ಮವೇ ಎಂದಾದ ಮೇಲೆ ಇದನ್ನು ಬಿಟ್ಟಿರುವುದು ಹೇಗೆ..?

ಇದನ್ನೇ ಕೃಷ್ಣ ಗೀತೆಯಲ್ಲಿ ಒಂದೆಡೆ ಹೇಳುತ್ತಾನೆ.

ನಹಿ ಕಶ್ಚಿತ್ ಕ್ಷಣಮಪಿ ಜಾತುತಿಷ್ಟತ್ಯಕರ್ಮಕೃತ್|
(ಅಧ್ಯಾಯ-೩,ಶ್ಲೋಕ-೫)

ಯಾವುದೇ ಕೆಲಸವನ್ನು ಎಚ್ಚರವಿದ್ದು-
ತಿಳಿದು ಮಾಡಿದಾಗ ನಾನು ಮಾಡಿದೆ ಎನ್ನುತ್ತೇವೆ.

ತಿಳಿಯದೇ ಮಾಡಿದಾಗ..? ಅದು ಮಾಡಿದ್ದಲ್ಲ, ಆದದ್ದು!

ನಿದ್ರೆಯಲ್ಲಿನ ಉಸಿರಾಟ,ಮನೋಪರದೆಯಲ್ಲಿನ ಕನಸು ಎಲ್ಲವೂ ಆದದ್ದು,-ಬೇಕು ಅಂತ ಮಾಡಿದ್ದಲ್ಲ. ಫಲ ಉಣ್ಣುವವರು ಮಾತ್ರ ನಾವು.

ಇಲ್ಲ -ತಿಳಿಯದೇ ಮಾಡಿದ್ದು ಅದು ನಮ್ಮ ಕರ್ಮದ ವ್ಯಾಪ್ತಿಯಲ್ಲಿ ಬರುವುದಿಲ್ಲ,ಅದರ ಫಲ ನಮಗೆ ದೊರೆಯುವುದಿಲ್ಲ ಎಂದು ಭಾವಿಸೋಣವೇ?

ಕರ್ಮದ ಫಲದಲ್ಲಿ ಅಧಿಕಾರ ಪಡಬೇಡ ಎಂದ ಕೃಷ್ಣ.

ನಮಗೆ ನಮ್ಮ ಕರ್ಮದ ಮೇಲಿರುವ ಅಧಿಕಾರ ಎಷ್ಟು ಎಂಬುದನ್ನೂ ಈಗ ಆಲೋಚಿಸಬೇಕಾಗಿದೆ.!

|ಗುರ್ವಂತರ್ಯಾಮಿ ಪ್ರೀಯತಾಮ್|



✍ ಹಯಸುತಾನುದಾಸ

*****

ಗೀತಾ ಮಕರಂದ 🐝
       (ಜೇನು-೧೪)

ಈ ಪ್ರ-ಪಂಚ, ತ್ರಿಗುಣಗಳಿಂದ ಕೂಡಿದೆ.ಐದರಿಂದಾದ ನಮ್ಮ ದೇಹವೂ ಮೂರರಿಂದ ಕೂಡಿದೆ.ಈ ತ್ರಿಗುಣಗಳ ಪ್ರಭಾವವು ಆಗಾಗ ವ್ಯತ್ಯಾಸವಾಗುತ್ತದೆಯೇ ಹೊರತು ನಾವು ಅದನ್ನು ಮೀರಿಲ್ಲ.

ಸಾತ್ವಿಕ,ರಾಜಸ ಮತ್ತು ತಾಮಸ ಎಂಬವು ತ್ರಿಗುಣಗಳು.

ಕರ್ಮವನ್ನು ಮಾಡದೇ ಇರುವುದು ಸಾಧ್ಯವಿಲ್ಲವೆಂಬುದು ಕೃಷ್ಣನ ಮಾತಿನಲ್ಲಿಯೇ ತಿಳಿದ ಮೇಲೆ,ಬಿಡಬಾರದ-ಮಾಡಲೇಬೇಕಾದ ಮೂರು ಕರ್ಮಗಳು-ಯಜ್ಞ,ದಾನ,ತಪಸ್ಸುಗಳು ಎಂದೂ ಅರ್ಥೈಸಿದೆವು.

ಬಿಡಬಾರದ-ಮಾಡಲೇಬೇಕಾದ ಎಂದರೆ ಏನು? ಎರಡೂ ವಾಕ್ಯಗಳೂ ಒಂದೇ ಅರ್ಥವನ್ನು ಕೊಡುತ್ತದೆಯಲ್ಲವೇ?

'ಯಜ್ಞದಾನತಪಃ ಕರ್ಮ ನ ತ್ಯಾಜ್ಯಂ' ಎಂದು ಹೇಳಿದ ಕೃಷ್ಣ ಈ ಮಾತಿಗೆ ಒತ್ತು ಕೊಡುವುದಕ್ಕಾಗಿಯೇ 'ಕಾರ್ಯಮೇವ ತತ್' ಎಂದೂ ಅಲ್ಲಿಯೇ ಹೇಳುತ್ತಾನೆ.

ಬಿಡಬಾರದು ಸರಿ ಸ್ವಾಮಿ,ನನಗೆ ಮಾಡಲಾಗುವುದಿಲ್ಲವಲ್ಲ ಎಂದು ಕಾರಣ ಕೊಡುವುದು ಸಲ್ಲ, ಮಾಡಲೇಬೇಕು ಎಂದು, ಕಡ್ಡಾಯವೆಂದು ಅಲ್ಲಿಯೇ ಹೇಳಿದ್ದಾನೆ.

ಒಂದು ಮಾತನ್ನು ಎರಡು ಬಾರಿ ಹೇಳುವುದು ವಿಶೇಷ ಒತ್ತು ಕೊಡುವುದಕ್ಕಾಗಿ ಎಂಬುದನ್ನು ರೂಢಿಯಲ್ಲೂ ಕಾಣಬಹುದು‌.

ಕಾರ್ಯಕ್ರಮಕ್ಕೆ ತಪ್ಪಿಸಬಾರದು-ಬರಲೇಬೇಕು ಎಂದು ಎರಡೆರಡು ಬಾರಿ ಕರೆಯುವ ಆತ್ಮೀಯರ ಮಾತಿನ ಭಾವ ಇದೇ ಅಲ್ಲವೇ?


|ಗುರ್ವಂತರ್ಯಾಮಿ ಪ್ರೀಯತಾಮ್|



✍ ಹಯಸುತಾನುದಾಸ


ಗೀತಾ ಮಕರಂದ 🐝

       (ಜೇನು-೧೫)

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಶೇತ್ ಶತಂ ಸಮಾಃ|
(ಈಶಾವಾಸ್ಯ ಉಪನಿಷತ್ತು;ಮಂತ್ರ-೨)

ಕರ್ಮವನ್ನು ಮಾಡುತ್ತಲೇ ಇಲ್ಲಿ ನೂರುಕಾಲ ಬಾಳಬೇಕು ಎಂದು ಯಾಜ್ಣೀಯ ಮಂತ್ರೋಪನಿಷತ್ತು ಕರೆ ನೀಡಿದೆ.

ಕರ್ಮ ಮಾಡಬೇಕು, ಮೂರು ಕರ್ಮಗಳನ್ನು-ಬಿಡಬಾರದು,ಮಾಡಲೇಬೇಕು ಎಂದು ಗೀತಾಚಾರ್ಯನಿಂದ ತಿಳಿದೆವು.

ಯಜ್ಞ,ದಾನ ಮತ್ತು ತಪಸ್ಸು-ಮೂರು ಕರ್ಮಗಳು.

ಶಾಸ್ತ್ರದಲ್ಲಿ ಷಟ್ಕರ್ಮಗಳು ಅಂತ ಪ್ರಸಿದ್ಧವಿದೆಯಲ್ಲ..? ಅಲ್ಲಿ ಆರು-ಇಲ್ಲಿ ಮೂರು.!! 

ನಮ್ಮದು ಯಾವುದು..? ನಾವು ಮಾಡಬೇಕಾದದ್ದು ಯಾವುದು?
ಯಜನ-ಯಾಜನಗಳು ಎರಡು ಯಜ್ಞದ ವ್ಯಾಪ್ತಿಯಲ್ಲಿ ಬರುವುದು.
ಯಜ್ಞ ಮಾಡುವುದು ಅಥವ ಮಾಡಿಸುವುದು.

ಅಧ್ಯಯನ-ಅಧ್ಯಾಪನಗಳು ತಪಸ್ಸಿನಲ್ಲಿ ಸೇರುವುದು.ಅಧ್ಯಯನ ಮಾಡುವುದು ಅಥವ ಪಾಠ ಹೇಳುವುದು.

ದಾನ-ಪ್ರತಿಗ್ರಹಗಳು ದಾನಕ್ಕೆ ಸಂಬಂಧಿಸಿದವು.ಏನನ್ನಾದರೂ ಕೊಡುವುದು ಅಥವ ಸ್ವೀಕರಿಸುವುದು.

ಶಾಸ್ತ್ರ ಹೇಳುವ ಆರು ಕರ್ಮಗಳನ್ನು ಕೃಷ್ಣ ಮೂರು ಕರ್ಮಗಳಲ್ಲಿ ಹೇಳಿದ್ದಾನೆ.

ತಪಸ್ಸು ಶಬ್ದಾರ್ಥವನ್ನು ಸ್ವಲ್ಪ ಅರಿತೆವು. ಎಲ್ಲರೂ ತಪಸ್ಸು ಮಾಡಬೇಕು- ತನಗೆ 'ವಿಹಿತವಾದ' ತಪಸ್ಸನ್ನು ಆಚರಿಸಬೇಕು. ಹಾಗಾಗಿ ಎಲ್ಲರೂ ತಪಸ್ಸಿಗೆ ತಯಾರಾಗಬೇಕು.

ಕೃಷ್ಣನೇ ಗೀತೆಯಲ್ಲಿ ಹೇಳಿದ ತಪಸ್ಸು ಮೂರು ಬಗೆ-ಶಾರೀರಿಕ,ವಾಚಿಕ ಮತ್ತು ಮಾನಸಿಕ. ಈ ಮೂರರಲ್ಲಿ ಮತ್ತೆ ಮೂರು ವಿಧ.

ಮೂರೂ ತಪಸ್ಸಿನ ಲಕ್ಷಣಗಳನ್ನು ಕೃಷ್ಣನೇ ಹೇಳಿದ್ದಾನೆ-


|ಗುರ್ವಂತರ್ಯಾಮಿ ಪ್ರೀಯತಾಮ್|



✍ ಹಯಸುತಾನುದಾಸ


ಗೀತಾ ಮಕರಂದ🐝

       (ಜೇನು-೧೭)

ದೇವದ್ವಿಜ ಪೂಜನಂ-

ಇಲ್ಲಿ ಪೂಜನಂ ಎಂಬುದು ದೇವ,ದ್ವಿಜ,ಗುರು,ಪ್ರಾಜ್ಞ-ಎಲ್ಲರಿಗೂ ಅನ್ವಯ.

ದೇವರ ಪೂಜೆಯೆಂದರೆ ಯಾರ ಪೂಜೆ? ಯಾರು ದೇವರು? ಕುಲದೇವರಾ?ಇಷ್ಟದೇವರಾ?ಗ್ರಾಮ ದೇವರಾ? ಮನೆ ದೇವರಾ?

ಇಷ್ಟೊಂದು ಗೊಂದಲ ಮನಸ್ಸಿನಲ್ಲಿ ಮೂಡಿದರೆ- 

ಏಕೋ ದೇವಃ ಸರ್ವಭೂತೇಷು ಗೂಢಃ
ಸರ್ವವ್ಯಾಪೀ  ಸರ್ವಭೂತಾಂತರಾತ್ಮ|
ಕರ್ಮಾಧ್ಯಕ್ಷಃ ಸರ್ವಭೂತಾಧಿವಾಸಃ
ಸಾಕ್ಷೀ ಚೇತಾ ಕೇವಲೋ ನಿರ್ಗುಣಶ್ಚ||
(ಶ್ವೇತಾಶ್ವತರ ಉಪನಿಷತ್ತು-೬-೧೧)

ಎಂಬ ಮಾತನ್ನು ನೆನಪು ಮಾಡಿಕೊಳ್ಳಿ. ನಮ್ಮ ಇಷ್ಟ,ಗ್ರಾಮ,ಕುಲ,ಮನೆಯ ಎಲ್ಲ ದೇವರೊಳಗೂ ಇರುವವನು ಒಬ್ಬ‌ನೇ ಭಗವಂತ ಎಂಬ ಅನುಸಂಧಾನದಿಂದ ಯಾರನ್ನು ಬೇಕಾದರೂ ಪೂಜಿಸಿ,ಆರಾಧಿಸಿ-ಮಾಡಿದ ಕರ್ಮವನ್ನು ಅವನಿಗೆ ಅರ್ಪಿಸಿ ಸುಖವಾಗಿರಬಹುದು.

ದ್ವಿಜ ಪೂಜನಂ- ಎರಡು ಬಾರಿ ಹುಟ್ಟನ್ನು ಪಡೆದವರು ಎಂಬುದು ದ್ವಿಜ ಶಬ್ದದ ಸಾಮಾನ್ಯ ಅರ್ಥ.
ತಾಯಿಯ ಗರ್ಭದಿಂದ ಒಮ್ಮೆ ಹುಟ್ಟಿದವನು, ಜ್ಞಾನದ ಬೆಳಕನ್ನು ಪಡೆಯಲು ಉಪ‌ನಯನವನ್ನು ಹೊಂದುತ್ತಾನೆ.ಆ ಮೂಲಕ ಮರುಜನ್ಮವನ್ನು ಪಡೆಯುತ್ತಾನೆ.ಹೀಗೆ ಎರಡು ಬಾರಿ ಹುಟ್ಟಿದವನು ಎಂಬ ಕಾರಣಕ್ಕಾಗಿ ಅವನನ್ನು ದ್ವಿಜ ಎಂದು ಕರೆಯುತ್ತಾರೆ. ಹುಟ್ಟುತ್ತಾ ಎಲ್ಲರೂ ಜಂತುಗಳೇ, ಮತ್ತೆ ಕರ್ಮದಿಂದ ಅವನು ದ್ವಿಜನಾಗುತ್ತಾನೆ ಎಂದು ಹೇಳುತ್ತಾರೆ.

ವರ್ಣಾಶ್ರಮಧರ್ಮಕ್ಕನುಗುಣವಾಗಿ ಪ್ರಾಚೀನರು ಬ್ರಾಹ್ಮಣ,ಕ್ಷತ್ರಿಯ,ವೈಶ್ಯರಿಗೆ ಉಪನಯನ ಸಂಸ್ಕಾರವನ್ನು ವಿಧಿಸಿದ್ದಾರೆ. (ಕೃಷ್ಣನು ಹೇಳುವ ವರ್ಣಾಶ್ರಮ ಧರ್ಮವನ್ನು ಮತ್ತೆ ಆ ಮಾತಿನ ಅರ್ಥಾನುಸಂಧಾನದ ಸಂದರ್ಭ ಬಂದಾಗ ವಿವರವಾಗಿ ವಿಶ್ಲೇಷಿಸುತ್ತೇನೆ.ಸದ್ಯಕ್ಕೆ ಇಷ್ಟು ವಿಷಯವನ್ನು ಸ್ವೀಕರಿಸಿ ಮುಂದುವರೆಯೋಣ)

ಕೇವಲ ಉಪನಯನ ಮಾಡಿದರೆ ಸಾಲದು,ಜನ್ನದಾರ ಹಾಕಿದರೂ ಅವನು ತಿಳಿವಿನ ಮೂಲಕ ಎರಡನೇ ಹುಟ್ಟನ್ನು ಪಡೆದಿರಬೇಕು, ಅಂಥವನನ್ನು‌ ಕಂಡರೆ ಅವನನ್ನು ಗೌರವಿಸಬೇಕು,ಆದರಿಸಬೇಕು ಎಂಬುದಾಗಿ ದ್ವಿಜಪೂಜನಂ ಎಂಬಲ್ಲಿ ಗ್ರಹಿಸಬಹುದು.

ಅಥವ ಸರಳವಾಗಿ ವೇದಾಧ್ಯಯನ ಮಾಡುವವನು. ವೇದಗಳು ನಮಗೆ ಪೂಜನೀಯ.ಅದರ ಅಧ್ಯಯನ,ಚಿಂತನ ಮಾಡುವವನು ಆದರಣೀಯನು. 

ಹಾಗಾದರೆ ಜನಿವಾರ ಹಾಕಿದವರು ದ್ವಿಜರಲ್ಲವೇ? ಅವರನ್ನು ಆದರಿಸಬಾರದೇ? ಗೌರವಿಸಬಾರದೇ,ಪೂಜಿಸಬಾರದೇ? ಜನಿವಾರ ಹಾಕದ ಜ್ಞಾನಿಗಳೇ ಇಲ್ಲವೇ? ಜ್ಞಾನಿಯಾದರೆ ಏನು ಆರತಿ ಎತ್ತಿ ಪೂಜೆ ಮಾಡಬೇಕೇ? ಅರ್ಚನೆ ಮಾಡಬೇಕೇ?

ಗೌರವಾದರಗಳನ್ನು ಎಲ್ಲರಿಗೂ ನೀಡಬೇಕು,
ನಮ್ಮ ಮನಸ್ಸಿಗೆ ಒಪ್ಪದಿದ್ದರೂ ಅವರನ್ನು ಪೂಜಿಸಬೇಕು ಎಂದು ಯಾರನ್ನೂ ಒತ್ತಾಯಮಾಡಲಾಗದು. ಇಷ್ಟ ಇದ್ದವರನ್ನು ಗೌರವಿಸಿ,ಆದರಿಸಿ,ಮಾತನಾಡಿಸಿದರೆ ಅದೇ ಶರೀರದ ಮೂಲಕ ಮಾಡುವ ತಪಸ್ಸು.

ಇಷ್ಟವಾಗದಿದ್ದರೆ ಸುಮ್ಮನಿರಿ-ನಿಮ್ಮನ್ನು ಯಾಕೆ ಗೌರವಿಸಬೇಕು/ಪೂಜಿಸಬೇಕು-ನಿಮ್ಮ ಯೋಗ್ಯತೆ ಏನು ಇತ್ಯಾದಿಯಾಗಿ ಅವರ ಲೇವಡಿಯೋ ವಿಮರ್ಶೆಯೋ ಮಾಡುವುದು ಬೇಡ. ಅವರ ಅನಾದರ,ನಿಂದೆ ನಮಗೇನು ಉತ್ತಮ ಫಲವನ್ನು ನೀಡದು.ಅವರನ್ನು ನಿಂದಿಸಿ 'ಮಾಡಿದವರ ಪಾಪ ಆಡಿದವರ ಬಾಯಿಯಲ್ಲಿ ಆಗುವುದು ಬೇಡ' ಎಂಬುದು ನನ್ನ ಅಭಿಪ್ರಾಯ.

ಅವರಾಗಿ ಬಂದು ;ನನ್ನನ್ನು ಸತ್ಕರಿಸಲೇಬೇಕು,ಆದರಿಸಲೇಬೇಕು ಎಂದು ಆಗ್ರಹಿಸಿದರೆ ಅಂಥವರನ್ನು ಪೂಜಿಸುವುದು ಜೇಡ-ಏಕೆಂದರೆ ಅವರು ತಿಳುವಳಿಕೆ ಇದ್ದವರಲ್ಲ, ತಿಳಿದವರು ಹಾಗೆ ಮಾಡುವುದಿಲ್ಲ ಎಂದು ತಿಳಿದಿದ್ದರೆ ಉತ್ತಮ.


ಗುರ್ವಂತರ್ಯಾಮಿ ಪ್ರೀಯತಾಮ್|🙏


✍ ಹಯಸುತಾನುದಾಸ

ಗೀತಾ ಮಕರಂದ🐝

      (ಜೇನು-೧೮)

ದೇವದ್ವಿಜ ಪೂಜನಂ ಎಂಬುದನ್ನು ಇನ್ನೂ ಸರಳೀಕರಿಸಿದರೆ ಎಲ್ಲಾದರೂ ದೇವರ ಸ್ಥಾನವನ್ನು ಕಂಡರೆ ಬಾಗುವುದು,ಅಧ್ಯಯನಶೀಲರನ್ನು ಕಂಡರೆ ಬಾಗುವುದು ಎಂದರ್ಥ ಮಾಡಬಹುದು. ಬಾಗುವುದು ಎಂಬುದು ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದ್ದು,ಮನಸಿನ ಭಾವವನ್ನು ದೇಹದಲ್ಲೂ ತೋರ್ಪಡಿಸುವುದು ಎಂದು ತಿಳಿಯಬಹುದು.


ದ್ಬಿಜ ಎಂದರೆ ಜ್ಞಾನಿ ಎಂದರ್ಥವಿದೆ. ಆದರೆ ಮುಂದೆ ಪ್ರಾಜ್ಞ ಪೂಜನಂ ಎಂದು ಹೇಳಿರುವ ಕಾರಣ ವೇದಾಧ್ಯಾಯಿ ಎಂದು ದ್ಬಿಜ ಶಬ್ದದಿಂದ ಅರ್ಥ ಮಾಡಬಹುದು.

ಪ್ರಾಜ್ಞ ಪೂಜನಂ-ತಿಳಿದವರನ್ನು ಆದರಿಸುವುದು. ಲೋಕದಲ್ಲಿ ಅನುಭವ,ಅನುಗ್ರಹದಿಂದ ಜ್ಞಾನಿಯಾದ ಅನೇಕ ಜನರನ್ನು ನಾವು ಕಾಣುತ್ತೇವೆ.ಅವರು ವೇದಗಳನ್ನು ಓದಿರುವುದಿಲ್ಲ-ಆದರೆ ಅವರಾಡುವ ಮಾತುಗಳ ಅರ್ಥ ಉಪನಿಷತ್ತುಗಳಲ್ಲಿ ಇರುತ್ತದೆ.ಅನುಭವದಿಂದ ಸತ್ಯವನ್ನು ಕಂಡುಕೊಂಡವರು.ಅಕ್ಷರಾಭ್ಯಾಸವೇ ಇಲ್ಲದ ವ್ಯಕ್ತಿಗಳೂ ಅದ್ಭುತ ಜ್ಞಾನವುಳ್ಳವರಾಗಿರುತ್ತಾರೆ.ಇಂಥವರನ್ನು ಕಂಡಾಗ ಬಾಗುವುದು ಪ್ರಾಜ್ಞ ಪೂಜನಮ್. 

ಅವರು ನಮಗೆ‌ ಗುರುಗಳಲ್ಲ,ವಿದ್ಯಾದಾನ ಮಾಡಿಲ್ಲವಾದರೂ ಅವರು ತಿಳಿದವರು ಎಂದು ತಿಳಿದರೆ ಆದರಿಸುವುದು,ಪೂಜಿಸುವುದು-ಪ್ರಾಜ್ಞ ಪೂಜನಮ್.


ಗುರ್ವಂತರ್ಯಾಮಿ ಪ್ರೀಯತಾಮ್|🙏🙏



✍ ಹಯಸುತಾನುದಾಸ


ಗೀತಾ ಮಕರಂದ 🐝

       (ಜೇನು-೧೯)

ಗುರುಪೂಜನಂ-ಸನಾತನ ಧರ್ಮದಲ್ಲಿ ಗುರುವಿಗೆ ಅತ್ಯುನ್ನತವಾದ ಸ್ಥಾನವಿದೆ.ನಮಗೆ ವಿದ್ಯಾದಾನ ಮಾಡಿದ ಗುರುಗಳೂ ಪೂಜ್ಯರೇ. ನಮ್ಮ ಗುರುಗಳ ಗುರುಗಳು ಕೂಡ, ಇವರೆಲ್ಲರ ಪರಮಗುರುಗಳು ಕೂಡ ಗುರುಗಳೇ. ಗುರುಸೇವೆ ಎಂಬ ಶ್ರದ್ಧಾಭಕ್ತಿಯುಕ್ತವಾದ ಕಾರ್ಯದಿಂದ ಲಭಿಸುವ ಫಲವು ಅನಂತವಾದದು.

ದಾರಿ ತೋರಿಸುವವರು-ಗುರುಗಳು.ಅಜ್ಞಾನದ ಅಂಧಕಾರವನ್ನು ನೀಗಿಸುವವರು.ಅಧ್ಯಾತ್ಮದ ಹಾದಿಯಲ್ಲಿ ನಡೆಸುವವರು,ಅನುಗ್ರಹ ಮಾಡುವವರು.

ನಮ್ಮ ತಂದೆ-ತಾಯಿಯರೂ ನಮಗೆ ಗುರುಗಳು.

ದೊಡ್ಡವರು ಎಂಬರ್ಥದಲ್ಲಿಯೂ ಗುರುಶಬ್ದ ಪ್ರಯೋಗವಿದೆ.

ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂಬುದು ದಾಸವಾಣಿ.

ಮಹಾಮಹಿಮಾನ್ವಿತರನ್ನು ಕಂಡಾಗ ಬಾಗುವುದು,ನಮಸ್ಕಾರ ಮಾಡುವುದು,ಸೇವಿಸುವುದು-ಗುರುಪೂಜನಮ್.

ಗುರುಗಳ ಕಾರುಣ್ಯದ ಬಗ್ಗೆ,ಅವರಲ್ಲಿ ಮಾಡಬೇಕಾದ ಭಕ್ತಿಯ ಬಗ್ಗೆ ಪುರಾಣಗಳಲ್ಲಿ ಅನೇಕ ದೃಷ್ಟಾಂತದ ಕಥೆಗಳಿವೆ.ದೇವತೆ ರಾಕ್ಷಸರಿಗೂ ಗುರುಗಳು ಇದ್ದು ಅವರ ಎಲ್ಲ ಕಾರ್ಯಕ್ಕೆ ನಿರ್ದೇಶಿಸುತ್ತಾರೆ.

ಮಹಾಭಾರತದ ಸನತ್ಸುಜಾತ ಧೃತರಾಷ್ಟ್ರ ಸಂವಾದದಲ್ಲಿ ಸನತ್ಸುಜಾತರು ಗುರುಗಳ ಬಗ್ಗೆ ಅಪೂರ್ವವಾದ ವಿಷಯಗಳನ್ನು ಹೇಳುತ್ತಾರೆ.

ಗುರುಂ ಶಿಷ್ಯೋ‌ನಿತ್ಯಮಭಿವಾದಯೀತ ಸ್ವಾಧ್ಯಾಯಮಿಚ್ಛೇಚ್ಛುಚಿರಪ್ರಮತ್ತಃ|
ಮಾನಂ‌ ನ ಕುರ್ಯಾನ್ನಾದಧೀತ ರೋಷಮೇಷ ಪ್ರಥಮೋ ಬ್ರಹ್ಮಚರ್ಯಸ್ಯ ಪಾದಃ||
(ಉದ್ಯೋಗ ಪರ್ವ-ಅಧ್ಯಾಯ-೪೪,ಶ್ಲೋಕ-೧೦)

ಶಿಷ್ಯನಾದವನು ನಿತ್ಯವೂ ಗುರುವಿಗೆ ಅಭಿವಾದನ ಪೂರ್ವಕ ನಮಸ್ಕರಿಸಬೇಕು, ಶುದ್ಧನಾಗಿ ಅಪ್ರಮತ್ತನಾಗಿ ಸ್ವಾಧ್ಯಾಯ ಮಾಡಬೇಕು.ದೇಹಾಭಿಮಾನವಿಡದೇ ಕೋಪಕ್ಕೆ ಅವಕಾಶಕೊಡಬಾರದು-ಇದು ಬ್ರಹ್ಮಚರ್ಯದ ಪ್ರಥಮ ಪಾದ.

ದೇವದ್ವಿಜಗುರುಪ್ರಾಜ್ಞಪೂಜನಂ ಶ್ಲೋಕದ ಉತ್ತರಾರ್ಧದಲ್ಲಿ ಬ್ರಹ್ಮಚರ್ಯವೂ ಇದೆ. ಮೇಲಿನ ಮಹಾಭಾರತದ ಶ್ಲೋಕವು ಎರಡು ವಿಚಾರಕ್ಕೂ ಪ್ರಮಾಣವಾಗಬಲ್ಲದು.

ಹಿರಿಯನಾದ,ಗುರುತರನಾದ,ಜ್ಞಾನಬೋಧಕ ಜಗತ್ತಿನ ಗುರು-ಗೀತೆ ಬೋಧಿಸಿದ ಶ್ರೀಕೃಷ್ಣ.

||ಕೃಷ್ಣಂ ವಂದೇ ಜಗದ್ಗುರುಮ್||


ಗುರ್ವಂತರ್ಯಾಮಿ ಪ್ರೀಯತಾಮ್ |🙏🙏



✍ ಹಯಸುತಾನುದಾಸ


ಗೀತಾ ಮಕರಂದ 🐝

        (ಜೇನು-೨೦)


ದೇವದ್ವಿಜಗುರುಪ್ರಾಜ್ಞಪೂಜನಂ ಶೌಚಮಾರ್ಜವಮ್|
ಬ್ರಹ್ಮಚರ್ಯಮಹಿಂಸಾ ಚ ಶಾರೀರಂ ತಪ ಉಚ್ಯತೇ||

ಶೌಚಮ್-ಶುಚಿತ್ವ. ಆಡು ಭಾಷೆಯ ಮಡಿ. ಅಂತಃ ಶುದ್ಧಿ,ಬಾಹ್ಯ ಶುದ್ಧಿ ಎಂಬ ಎರಡು ಬಗೆಯಿದ್ದು, ಇಲ್ಲಿ ಹೇಳಿರುವುದು ಶರೀರದ ಮಡಿ,ಬಾಹ್ಯ ಶುದ್ಧಿ-ಶಾರೀರಿಕ ತಪಸ್ಸು.ಮಣ್ಣು-ನೀರುಗಳಿಂದ ಶರೀರದ ಶುದ್ಧಿ.

ಆರ್ಜವಮ್-ನೇರ ನುಡಿ, ಪಾರದರ್ಶಕತೆ,ಋಜುತ್ವ. ಒಳಗೊಂದು ಹೊರಗೊಂದು ಇರದ, ಪ್ರಾಮಾಣಿಕವಾದ  ಬದುಕು.

ಬ್ರಹ್ಮಚರ್ಯ-ಕೃತಿ,ಮಾತು ಮನಸ್ಸಿನಲ್ಲಿ ಮೈಥುನತ್ಯಾಗವು ಬ್ರಹ್ಮಚರ್ಯವೆಂದು ಕರೆಯಲ್ಪಡುತ್ತದೆ.
ಮದುವೆಯಾಗದ ಬ್ರಹ್ಮಚಾರಿಗೆ ಅನ್ವಯಿಸುವುದು ಇದು,ಮದುವೆಯಾದವರಿಗೇನು?

ಬ್ರಹ್ಮಚರ್ಯದಲ್ಲಿ ನಾಲ್ಕು ವಿಧ.
ಸಾವಿತ್ರ್ಯ ಬ್ರಹ್ಮಚರ್ಯ-ಉಪನಯನದಿಂದ ಮೂರು ದಿನಗಳ ಕಾಲ ಬ್ರಹ್ಮಚರ್ಯ.

ಪ್ರಾಜಾಪತ್ಯ-ಏಕಪತ್ನೀವೃತಸ್ಥ, ಋತುಕಾಲದಲ್ಲಿ ಮಾತ್ರ ತನ್ನ ಪತ್ನಿಯ ಜೊತೆಗೂಡುವಿಕೆಯೂ ಬ್ರಹ್ಮಚರ್ಯವೆಂದು ಪರಿಗಣಿಸಲ್ಪಡುತ್ತದೆ.ಇದನ್ನು ಪ್ರಾಜಾಪತ್ಯ ಎಂದು ಕರೆಯುತ್ತಾರೆ.

ಬ್ರಾಹ್ಮ-ವೇದಾಧ್ಯಾಯಿಯಾಗಿ ಗುರುಕುಲವಾಸದಲ್ಲಿನ ಬ್ರಹ್ಮಚರ್ಯ ಪಾಲನೆ.

ಬೃಹತ್-ಜೀವನದುದ್ದಕ್ಕೂ ಬ್ರಹ್ಮಚರ್ಯದ ಪಾಲನೆ.

ಅಹಿಂಸಾ-ಯಾವುದೇ ಜೀವಮಾತ್ರಕ್ಕೂ, ಯಾವುದೇ ರೀತಿಯಿಂದಲೂ ಹಿಂಸೆ ಮಾಡದಿರುವುದು.

ಇದಿಷ್ಟು ನಾವು ಮಾಡಬೇಕಾದ ಶಾರೀರಿಕ ತಪಸ್ಸು.ಜಾತಿ,ಲಿಂಗ ಭೇದವಿಲ್ಲದೇ ಮಾಡಬಹುದಾದ ತಪಸ್ಸು.

ಸ್ವಲ್ಪ ತಗ್ಗಿ ಬಗ್ಗಿ ನಡೆಯುವುದು,ಶರೀರವನ್ನು ಸ್ವಚ್ಛವಾಗಿಡುವುದು,ನೇರನಡೆ,ಬ್ರಹ್ಮಚರ್ಯೆ ಮತ್ತು ಹಿಂಸಿಸದಿರುವುದು-ಶರೀರಿದ ತಪಸ್ಸು.


ಗುರ್ವಂತರ್ಯಾಮಿ ಪ್ರೀಯತಾಮ್ |🙏🙏



✍ ಹಯಸುತಾನುದಾಸ


ಗೀತಾ ಮಕರಂದ 🐝

        (ಜೇನು-೨೧)

ಶರೀರದಿಂದ ಮಾಡಬೇಕಾದ ತಪಸ್ಸನ್ನು ತಿಳಿಸಿದ ಬಳಿಕ ವಾಚಿಕ ತಪಸ್ಸಿನ ಲಕ್ಷಣಗಳನ್ನು ಹೇಳುತ್ತಾನೆ ಶ್ರೀಕೃಷ್ಣ.

ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್|
ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯ ತಪ ಉಚ್ಯತೇ||
(ಅಧ್ಯಾಯ-೧೭,ಶ್ಲೋಕ-೧೫)

ಉದ್ವೇಗಗೊಳಿಸದ,ಸತ್ಯವೂ,ಪ್ರಿಯಕರವೂ ಆದ ಮಾತು:ಸ್ವಾದ್ಯಾಯ ಅಭ್ಯಾಸಗಳು ವಾಚಿಕ ತಪಸ್ಸು ಎನಿಸುತ್ತವೆ.


ಮಾತು ಎಂಬುದೊಂದು ಕಲೆ,ಮಾತಿನಿಂದ ಲೋಕವನ್ನು ಗೆಲ್ಲಬಹುದಂತೆ. ಶ್ರೀಕೃಷ್ಣನು ಹೇಳುವ ಪ್ರಕಾರ-ಮಾತು ಉದ್ವೇಗವನ್ನುಂಟು ಮಾಡಬಾರದು,ಆಗ ಮಾತು ತಪಸ್ಸಾಗುತ್ತದೆ. 

ಸತ್ಯಂ- ಸತ್ಯವನ್ನು ಹೇಳಬೇಕು. ಈ ಸತ್ಯ ಮತ್ಗು ಪ್ರಿಯವಾದ ಮಾತಿನ ಬಗ್ಗೆ ನಮ್ಮ ಪ್ರಾಚೀನರ ಚಿಂತನೆಯ ಈ ಮಾತು ಪ್ರಸಿದ್ಧವಾಗಿದೆ.

ಸತ್ಯಂ‌ ಬ್ರೂಯಾತ್ ಪ್ರಿಯಂ ಬ್ಯೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ|
ಪ್ರಿಯಂ ಚ ನಾನೃತಂ ಬ್ರೂಯಾದೇಷಃ ಧರ್ಮಃ ಸನಾತನಃ||
(ಮನು ಸ್ಮೃತಿ-೪,೧೩೮)

ಸತ್ಯವನ್ನು ಹೇಳಬೇಕು-ಅದು ಪ್ರಿಯವಾಗಿರಬೇಕು. ಅಪ್ರಿಯವಾದ ಸತ್ಯವನ್ನು ಆಡಬಾರದು. ಪ್ರಿಯವಾಗುತ್ತದೆ ಎಂದು ಸುಳ್ಳನ್ನೂ ಹೇಳಬಾರದು-ಇದು ಸನಾತನ ಧರ್ಮವಾಗಿದೆ.

ಸತ್ಯಂ‌ ವದ ಧರ್ಮಂ ಚರ
(ತೈತ್ತಿರಿಯ ಉಪನಿಷತ್-೧೧-೧) 

ಎಂಬ ಉಪನಿಷತ್ವಾಣಿಯು ನಿರಂತರ ಮನನ ಮಾಡಬೇಕಾದ ಮಾತಾಗಿದೆ.


ಗುರ್ವಂತರ್ಯಾಮಿ ಪ್ರೀಯತಾಮ್|🙏🏽🙏🏽




✍ ಹಯಸುತಾನುದಾಸ





ಗೀತಾ ಮಕರಂದ🐝

          ಜೇನು-೨೨

ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್|
ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯ ತಪ ಉಚ್ಯತೇ||
(ಅಧ್ಯಾಯ-೧೭,ಶ್ಲೋಕ-೧೫)

ಆಡುವ ಮಾತು ಸತ್ಯವಾಗಿರಬೇಕು, ಕೇಳುಗನಿಗೆ ಪ್ರಿಯವಾಗಿಯೂ ಹಿತವಾಗಿಯೂ ಇರಬೇಕು.

ನಿತ್ಯದಲ್ಲಿ ನಾವಾಡುವ ಮಾತುಗಳು ಹೆಚ್ಚಾಗಿ ಸತ್ಯವಾಗಿದ್ದರೂ ಕೇಳುಗನಿಗೆ ಪ್ರಿಯವಾಗಿರುವುದಿಲ್ಲ,ಅಂತೆಯೇ ಪ್ರಿಯವಾದ ಮಾತುಗಳು ಸತ್ಯವಾಗಿದ್ದರೂ ಹಿತವಾಗಿರುವುದಿಲ್ಲ, ಹಿತವಾದ ನುಡಿ ಸತ್ಯವಾಗಿರುವುದಿಲ್ಲ, ಹೀಗೆ ವೈರುಧ್ಯಗಳು ಇರುವುದು ಈ ಮೂರರೊಳಗೆ-ಸತ್ಯ,ಪ್ರಿಯ ಮತ್ತು ಹಿತ.

ಶ್ರೀಕೃಷ್ಣನು ಹೇಳುವಂತೆ ಈ ವಾಚಿಕ ತಪಸ್ಸಿನಲ್ಲಿ ಈ ಮೂರರ ಸಮನ್ವಯವಿರಬೇಕು,ಸಂತುಲಿತ ಮಾತಾಗಬೇಕು.ಮಾತೂ ತಪಸ್ಸಾಗಬೇಕು.

ಸತ್ಯ ಎಂಬ ಪ್ರಯೋಗವು ಗೀತೆಯಲ್ಲಿ ಕೆಲವು ಕಡೆ ಬಂದಿದೆ. ಹದಿನಾರನೆಯ ಅಧ್ಯಾಯದಲ್ಲೂ ಅಹಿಂಸಾ ಸತ್ಯಮಕ್ರೋಧಃ ಎಂಬುದಾಗಿ ದೈವೀಸಂಪತ್ತು ಹೊಂದಿದವರ ಗುಣಗಳ ವರ್ಣನೆ ಮಾಡುತ್ತಾನೆ ಪರಮಾತ್ಮ.


ಮಹಾಭಾರತದಲ್ಲಿ ಮಾರ್ಕಂಡೇಯರು ಧರ್ಮರಾಜನಿಗೆ ಸತ್ಯದ ಬಗ್ಗೆ ಹೇಳುವ ಈ ಮಾತನ್ನು ಗಮನಿಸಬೇಕು.

ಯದ್ಭೂತಹಿತಮತ್ಯಂತಂ ತತ್ಸತ್ಯಮಿತಿಧಾರಣಾ|
(ವನಪರ್ವ,ಅಧ್ಯಾಯ-೨೦೯,ಶ್ಲೋಕ-೪)

ಇದೇ ಅರ್ಥ ಕೊಡುವ ಮಾತುಗಳು ಮುಂದೆ ಧರ್ಮವ್ಯಾಧನಿಂದಲೂ ಹೇಳಲ್ಪಟ್ಟಿದೆ.

ಸತ್ಯಸ್ಯ ವಚನಂ ಶ್ರೇಯಃ ಸತ್ಯ ಜ್ಞಾನಂ ಹಿತಂ ಭವೇತ್|
(ವನಪರ್ವ,ಅಧ್ಯಾಯ-೨೧೩,ಶ್ಲೋಕ-೩೧)

ಮಹಾಭಾರತದ ಶಾಂತಿಪರ್ವದಲ್ಲಿ ಬರುವ ಭೀಷ್ಮಾಚಾರ್ಯರ ಈ ಮಾತು ಸತ್ಯದ ಬಗ್ಗೆ ಹೇಳುತ್ತದೆ.

ಯದ್ಭೂತಹಿತಮತ್ಯಂತಮೇತತ್ಸತ್ಯಂ ಬ್ರವೀಮ್ಯಹಮ್||
(ಅಧ್ಯಾಯ-೨೮೭,ಶ್ಲೋಕ-೨೦)

ಸತ್ಯವನ್ನು ಹೇಳುವುದು ಶ್ರೇಯಸ್ಕರವಾದದ್ದಾದರೂ ಸತ್ಯದ ತಿಳುವಳಿಕೆ ಕಷ್ಟಕರವಾದದ್ದು. ಯಾವುದು ಪ್ರಾಣಗಳಿಗೆ ಅತ್ಯಂತ ಹಿತವೋ ಅದೇ ಸತ್ಯವೆಂದು ಭೀಷ್ಮಾಚಾರ್ಯರ ಅಭಿಪ್ರಾಯ.
  
ಮನುವಿನ ಅಭಿಪ್ರಾಯವನ್ನೇ ಸಾರುವ ಇನ್ನೊಂದು ಮಾತು ಭೀಷ್ಮಾಚಾರ್ಯರಿಂದಲೇ ಮುಂದೆ ಹೇಳಲ್ಪಟ್ಟಿದೆ.

ಸತ್ಯಸ್ಯ ವಚನಂ ಶ್ರೇಯಃ ಸತ್ಯಾದಪಿ ಹಿತಂ ವದೇತ್|
ಯದ್ಭೂತಹಿತಮತ್ಯಂತಮೇತತ್ಸತ್ಯಂ ಮತಂ ಮಮ||
(ಶಾಂತಿ ಪರ್ವ,ಅಧ್ಯಾಯ-೩೨೯,ಶ್ಲೋಕ-೧೩)

ಸತ್ಯಾದಪಿ ಹಿತಂ ವದೇತ್|
 ಸತ್ಯಕ್ಕಿಂತಲೂ ಹಿತವಾದದ ಸತ್ಯವನ್ನು ಹೇಳಬೇಕು ಎಂಬುದು ಭೀಷ್ಮಾಚಾರ್ಯರ ಅಭಿಪ್ರಾಯ.

ಮಹಾಭಾರತದ ಈ ಎಲ್ಲಾ ಮಾತುಗಳಲ್ಲಿಯೂ ಕೆಲವು ಪದವ್ಯತ್ಯಾಸ ಮಾತ್ರ‌ ಇದ್ದು, ಒಂದೇ ಅರ್ಥವನ್ನು ಕೊಡುತ್ತದೆ.


ಹೀಗೆ ಸಮಷ್ಟಿಯಾಗಿ ಪ್ರಾಣಿಮಾತ್ರಕ್ಕೆ ಹಿತವನ್ನುಂಟು ಮಾಡುವ ಮಾತು 'ಸತ್ಯ' ವೆಂದು ಸಂಬೋಧಿಸಲ್ಪಟ್ಟಿದೆ.


ಗುರ್ವಂತರ್ಯಾಮಿ ಪ್ರೀಯತಾಮ್|🙏🙏



✍ ಹಯಸುತಾನುದಾಸ

ಗೀತಾ ಮಕರಂದ 🐝

         ಜೇನು-೨೩

ಅನುದ್ವೇಗಕರಂ ವಾಕ್ಯಂ ಸತ್ಯಂ ಪ್ರಿಯಹಿತಂ ಚ ಯತ್|
ಸ್ವಾಧ್ಯಾಯಾಭ್ಯಸನಂ ಚೈವ ವಾಙ್ಮಯ ತಪ ಉಚ್ಯತೇ||
(ಅಧ್ಯಾಯ-೧೭,ಶ್ಲೋಕ-೧೫)

ವಾಙ್ಮಯ ತಪಸ್ಸಿನ ಕೊನೆಯ ಲಕ್ಷಣ ಸ್ವಾಧ್ಯಾಯ-ಅಭ್ಯಸನ.

ತಾನೇ ಓದುವುದು ಎಂಬುದು ಸ್ವಾಧ್ಯಾಯದ ಮೇಲ್ನೋಟದ ಅರ್ಥವಾದರೂ ಗುರುಗಳ ನಿರ್ದೇಶದಲ್ಲಿ ತಾನೇ ಓದುವುದು ಸ್ವಾಧ್ಯಾಯ.ಅಥವ ವಿಧಿವತ್ತಾಗಿ ಅಧ್ಯಯನವನ್ನು ಮಾಡುವುದು, ಓದಿದ್ದನ್ನು ಅಭ್ಯಸಿಸುವುದು ಕೂಡ ಓದಿನಷ್ಟೇ ಮುಖ್ಯ.

ಅಧಿಕಾರಿಗಳಿಗೆ ವೇದಾಧ್ಯಯನವನ್ನೇ ಸ್ವಾಧ್ಯಾಯ ಎಂದು ಹೇಳಿದರೆ, ಇತರರು ಗೀತಾದಿಗಳ ಪಠಣ,ಮನನಗಳನ್ನು ಸ್ವಾಧ್ಯಾಯವೆಂದು ಪರಿಗಣಿಸಬಹುದು.

ಶಾರೀರಿಕ,ವಾಚಿಕ ತಪಸ್ಸಿನ ಮೂಲ ಮನಸ್ಸು,ಮುಂದೆ ಮಾನಸಿಕ ತಪಸ್ಸಿನ ಲಕ್ಷಣಗಳನ್ನು ಹೇಳುತ್ತಾನೆ ಶ್ರೀಕೃಷ್ಣ.


ಗುರ್ವಂತರ್ಯಾಮಿ ಪ್ರೀಯತಾಮ್|



✍ ಹಯಸುತಾನುದಾಸ
******

ಗೀತಾ ಮಕರಂದ 🐝

         ಜೇನು-೨೫


ಯಜ್ಞದಾನತಪಃ ಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್|

ಎಂಬ ಭಗವಂತನ ಮಾತಿನಂತೆ ಯಜ್ಞ,ದಾನ,ತಪಸ್ಸುಗಳನ್ನು ಬಿಡಬಾರದು,ಅವು ಮಾಡಲೇಬೇಕಾದವು ಎಂದು ತಿಳಿದೆವು. 

ತಪಸ್ಸಿನಲ್ಲಿ ಶರೀರದಿಂದ ಮಾಡುವ ತಪಸ್ಸು,ಮಾತಿನ ತಪಸ್ಸು ಮತ್ತು ಮಾನಸಿಕ ತಪಸ್ಸು ಎಂಬ ಮೂರು ಬಗೆಗಳಿದ್ದು ಅವುಗಳ ಲಕ್ಷಣಗಳನ್ನು ತಿಳಿದೆವು.

ಎಲ್ಲವನ್ನು ಓದಿದ ಮೇಲೆ ಪ್ರತಿಯೊಬ್ಬನಿಗೂ ಬರಬಹುದಾದ ಪ್ರಶ್ನೆ ಎಂದರೆ-ಇದೆಲ್ಲ ಓದಲಿಕ್ಕೆ ಸರಿ,ಅನುಸರಿಸಲಿಕ್ಕೆ ಬರುತ್ತದೆಯೇ? ಯಥಾವತ್ತಾಗಿ ಅನುಸರಿಸಿದರೆ ಇಲ್ಲಿ ಬದುಕಲಿಕ್ಕೆ ಸಾಧ್ಯವೇ? ಈ ಪ್ರಪಂಚದಲ್ಲಿ ನಮ್ಮ ಕಾರ್ಯವ್ಯವಹಾರವ್ಯಾಪಾರದಲ್ಲಿ ಈ ಎಲ್ಲ ರೀತಿಯ ತಪಸ್ಸಿನ ಅನುಸಂಧಾನ ಸಾಧ್ಯವೇ.?

ಹೌದು-ಮೊದಲಿಗೆ ಇದು ಸಾಧ್ಯ ಎಂಬುದನ್ನು ಮನಗಾಣಬೇಕು,ಒಳಗಿನಿಂದ ಒಪ್ಪಿಕೊಳ್ಳಬೇಕು.ಒಪ್ಪಿಕೊಂಡು ಪ್ರಯತ್ನಿಸಬೇಕು.ಆರಂಭದಲ್ಲಿ ಸ್ವಲ್ಪ ಕಷ್ಟವೆನಿಸಿದರೂ ಮತ್ತು ಸುಲಭವಾಗುತ್ತದೆ.

ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟನ್ನು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು, ದೈವದ ಅನುಗ್ರಹ ಇದ್ದೇ ಇರುತ್ತದೆ.

ಕನ್ನಡ ಚಿತ್ರ ನಿರ್ದೇಶಕ ಉಪೇಂದ್ರ ಅಭಿನಯದ ಉಪೇಂದ್ರ ಚಿತ್ರದ ಕೊನೆಯ ದೃಶ್ಯದಲ್ಲೊಂದು ತತ್ತ್ವವಿದೆ.
"ನಾನು" ಎಂಬುದನ್ಮು ಬಿಡಬೇಕು ಎಂಬುದೇ ಆಶಯ.ಆದರೆ ಅದನ್ನು ಬಿಟ್ಟು ಬದುಕುವುದಕ್ಕಾಗುವುದಿಲ್ಲ ಎಂಬುದು ವಾಸ್ತವ.

ಆದರೆ ೧೦% ನಾನು ಎಂಬುದನ್ನು ಬಿಟ್ಟು ಬದುಕಿದರೆ ೨೦% ಖುಷಿಯಾಗಿರುತ್ತಿ ಎಂಬುದು ಸಂದೇಶ.

ಕೃಷ್ಣ ಹೇಳಿದ ಎಲ್ಲವನ್ನೂ ನೂರಕ್ಕೆ ನೂರರಷ್ಟು ಪಾಲಿಸುವುದು ಕಷ್ಟವೇ,-ಆಗುವುದಿಲ್ಲವಲ್ಲ ಎಂದು ಬಿಟ್ಟುಬಿಡುವುದಲ್ಲ, ಬದಲಾಗಿ ೧೦% ಪ್ರಯತ್ನಿಸಿದರೆ ಅದಕ್ಕಿಂತಲೂ ಹೆಚ್ಚು ಆನಂದದಿಂದ ಬದುಕಬಹುದು. 

ಮಾಡಬೇಕೆಂಬ ಮನಸ್ಸು ಬೇಕು,ಪ್ರಯತ್ನ ಬೇಕು.
ಮನಸ್ಸಿಟ್ಟು ಆರಂಭಿಸಿದರೆ ಭಗವಂತ ಮುನ್ನಡೆಸುತ್ತಾನೆ.

'ಪ್ರಾರಂಭಮಾತ್ರಮಿಚ್ಛಾವಾ ವಿಷ್ಣುಧರ್ಮೇಣ ನಿಷ್ಫಲಾ'



ಗುರ್ವಂತರ್ಯಾಮಿ ಪ್ರೀಯತಾಮ್|

ಗೀತಾ ಮಕರಂದ 🐝

          ಜೇನು-೨೬

ನಮ್ಮ ಮೇಲೆ ತ್ರಿಗುಣಗಳ ಪ್ರಭಾವವಿದೆ,ಪಂಚಭೂತಾತ್ಮಕವಾದ ಪ್ರಕೃತಿಯೂ ತ್ರಿಗುಣಗಳಿಂದ ಕೂಡಿದೆ.

ಶ್ರದ್ಧಯಾಪರಯಾತಪ್ತಂ ತಪಸ್ತ್ರಿವಿಧಂ ನರೈಃ|
ಅಫಲಾಕಾಂಕ್ಷಿಭಿರ್ಯುಕ್ತೈಃ ಸಾತ್ವಿಕಂ ಪರಿಚಕ್ಷತೇ||

ಈ ಮೂರು ಬಗೆಯ ತಪಸ್ಸನ್ನು ತುಂಬು ನಂಬಿಕೆಯಿಂದ,ಫಲದ ಬಯಕೆಯಿಲ್ಲದೆ,ಭಗವದರ್ಪಣ ಬುದ್ಧಿಯಿಂದ ಆಚರಿಸಿದಾಗ ಅದನ್ನು ಸಾತ್ವಿಕ ತಪಸ್ಸು ಎನ್ನುತ್ತಾರೆ.

ತಪಸ್ಸಿನ್ನು ಕೂಡ ಮೂರು ರೀತಿಯಲ್ಲಿ ವಿಭಾಗಿಸಿದೆ.ಸಾತ್ವಿಕ ತಪಸ್ಸಿನ ಪ್ರಧಾನ ಲಕ್ಷಣವೆಂದರೆ-ಅಫಲಾಕಾಂಕ್ಷಿಭಿಃ

ಹಿಂದೆ ಕರ್ಮಣ್ಯೇವಾಧಿಕಾರಸ್ತೇ ಎಂದು ಹೇಳಿದಾಗ ಫಲದ ಮೇಲೆ ಅಧಿಕಾರ ಪಡಬೇಡ ಎಂದಿದ್ದ.ಯಾವುದೇ ಕರ್ಮವನ್ನು ಫಲಾಪೇಕ್ಷೆ ಇಲ್ಲದೇ ಮಾಡುವುದು ಕಷ್ಟವೇ. ಓದುವ ವಿದ್ಯಾರ್ಥಿ ಅಂಕ ಬರಬೇಕೆಂದು ಓದಿದರೆ,ಉಳುವ ರೈತ ಫಲ ಬರಬೇಕೆಂದು ಬಿತ್ತುತ್ತಾನೆ,ಅಭಿವೃದ್ಧಿಯಾಗಬೇಕೆಂದು ವ್ಯಾಪಾರಿಯಾದರೆ ಲೋಕಕಲ್ಯಾಣಕ್ಕಾಗಿ ಯಾಗಗಳು-ಎಲ್ಲವೂ ಫಲದ ಅಪೇಕ್ಷೆಯಿಂದ ಮಾಡುವ ಕಾರ್ಯಗಳು.ಅದರ ಫಲದ ಮೇಲೆ ಅಧಿಕಾರ ಪಡದೇ ಇರಬಹುದು,ಬಿತ್ತಿದ್ದೇನೆ-ಇಷ್ಟು ಬೆಳೆ ಬರಲೇಬೇಕು, ವ್ಯಾಪಾರಕ್ಕೆ ಹಣ ಹಾಕಿದ್ದೇನೆ-ನಿಗದಿತ ಲಾಭ ಬರಲೇಬೇಕು ಎಂದು ಭಾವಿಸದೆ ಕೂಡ ಕಾರ್ಯ ಮಾಡಬಹುದು. 

ಹೀಗಲ್ಲದೇ ಫಲವನ್ನು ಅಪೇಕ್ಷಿಸದೇ ಪರೀಕ್ಷೆ ಬರೆದಿದ್ದೇನೆ-ಉತ್ತೀರ್ಣನಾದರೆ ಉತ್ತಮ,ಆಗದಿದ್ದರೆ ಅತ್ಯುತ್ತಮ ಎಂದು ಭಾವಿಸುವ ವಿದ್ಯಾರ್ಥಿಯನ್ನು ಮೂಢನೆಂದೇ ಜನ ತಿಳಿಯುತ್ತಾರೆ.

ಆದರೆ ಶ್ರೀಕೃಷ್ಣ ಹೇಳುವ ಸಾತ್ವಿಕ ತಪಸ್ಸಿನ ಲಕ್ಷಣದಲ್ಲಿ ಫಲದ ಅಪೇಕ್ಷೆಯೇ ಇರಬಾರದು ಎಂದಿದೆ. ಇದನ್ನು ಸ್ವಲ್ಪ ಗಮನಿಸಿದರೆ ದೇವದ್ವಿಜಗುರುಪ್ರಾಜ್ಞರನ್ನು ಪೂಜಿಸಬೇಕು ಎಂಬಲ್ಲಿ-ಅವರಿಂದ ಪ್ರಯೋಜನ,ಗೌರವ,ಹೆಸರು ಪಡೆಯಬೇಕು ಎಂಬ ಯಾವುದೇ ಭಾವವಿಲ್ಲದೇ-ಇದು ನಾನು ಮಾಡಬೇಕಾದ ಶಾರೀರಿಕ ತಪಸ್ಸು ಎಂದು ಭಾವಿಸಿ ಮಾಡಬಹುದು.

ನಾವು ಪೂಜ್ಯರನ್ನು ಕಂಡು ಅಡ್ಡಬಿದ್ದರೆ, ಮಾತನಾಡಿಸಿದರೆ-ಅವರು ನಮ್ಮನ್ನು ಗಮನಿಸಿಯೇ ಇಲ್ಲ,ಕಣ್ಣೆತ್ತಿಯೂ ನೋಡದಾಗ ನಮ್ಮ ಒಳಗಿನ ಅಹಂ ಜಾಗೃತವಾಗುತ್ತದೆ. ಇಂಥಹ ಸನ್ನಿವೇಶದಲ್ಲಿ ಇದು ನಮ್ಮ ಕರ್ತವ್ಯ-ನಾನು ಮಾಡಿದೆ, ಅವರು ಆಶೀರ್ವದಿಸಲಿಲ್ಲವೆಂದಾದರೆ ಅದು ಅವರ ಕರ್ತವ್ಯದ ವಿಷಯ ಎಂದು ಭಾವಿಸಿ ಬಿಟ್ಟುಬಿಡಬೇಕು. 

ತಿಳಿದವರು ಕೆಲವೊಮ್ಮೆ ತಿಳಿದೂ ತಿಳಿದೂ ನೋಡದವರಂತೆ ಮಾಡುವುದುಂಟು.ಅದರ ಹಿಂದೆ ಒಳ್ಳೆಯ ಉದ್ದೇಶವೂ ಇರುತ್ತವೆ. ದೊಡ್ಡವರ ನಡತೆಯನ್ನು ಅಳೆಯುವುದು ಸುಲಭದ ವಿಚಾರವಲ್ಲ ಎಂಬುದು ಗಮನದಲ್ಲಿಡಬೇಕಾದ ವಿಷಯ.

ಗುರ್ವಂತರ್ಯಾಮಿ ಪ್ರೀಯತಾಮ್|🙏🏽🙏🏽


✍ ಹಯಸುತಾನುದಾಸ
***


ಗೀತಾ ಮಕರಂದ🐝

         ಜೇನು-೨೭

ಸತ್ಕಾರಮಾನಪೂಜಾರ್ಥಂ ತಪೋ ಡಂಭೇನಚೈವ ಯತ್|
ಕ್ರೀಯತೇ ತದಿಹ ಪ್ರೋಕ್ತಂ ರಾಜಸಮಚಲಂ ಧ್ರುವಮ್||
(ಅಧ್ಯಾಯ-೧೭,ಶ್ಲೋಕ-೧೮)

ಮನ್ನಣೆ,ಹೊಗಳಿಕೆ ಮತ್ತು ಗೌರವಗಳಿಗಾಗಿ ಬೂಟಾಟಿಕೆಯಿಂದ ಆಚರಿಸುವ,ನೆಲೆಯಿಲ್ಲದ ಬಾಳಿಕೆಯಿಲ್ಲದ ತಪಸ್ಸು ರಾಜಸ ಎನಿಸುತ್ತದೆ.

ನೆರೆದ ಜನರು ತನ್ನನ್ನೊಬ್ಬ ದೊಡ್ಡ ಭಕ್ತ,ತಪಸ್ವೀ,ಸಾಧಕ ನೆಂದು ಭಾವಿಸಬೇಕೆಂದು ವೇಷ ಹಾಕುವುದು, ಬೂಟಾಟಿಕೆಯಿಂದ ಮಾಡುವ ತಪಸ್ಸು ಅಶಾಶ್ವತವಾಗಿದ್ದು ರಾಜಸ ಎಂದು ಕರೆಯಲ್ಪಡುತ್ತದೆ.

ಜಗತ್ತಿನಲ್ಲಿರುವ ಅಧಿಕರಲ್ಲಿ ರಾಜಸವಾದ ಗುಣವೇ ಪ್ರತಿಫಲಿಸುತ್ತಿರುತ್ತದೆ. ಮನುಷ್ಯನು ಸಹಜವಾಗಿ ರಾಜಸ.ನಟನೆಗಾಗಿ,ಪ್ರದರ್ಶನಕ್ಕಾಗಿ ಮಾಡುವ ಕಾರ್ಯಗಳೆಲ್ಲ ಈ ವ್ಯಾಪ್ತಿಯಲ್ಲಿ ಬರುತ್ತದೆ.

ಮೂಢಗ್ರಾಹೇಣಾsತ್ಮನೋ ಯತ್ಪೀಡಯಾ ಕ್ರೀಯತೇ ತಪಃ|
ಪರಸ್ಯೋತ್ಪಾದನಾರ್ಥಂ ವಾ ತತ್ತಾಮಸಮುದಾಹೃತಮ್||(ಅಧ್ಯಾಯ-೧೮,ಶ್ಲೋಕ-೧೯)

ದುರಾಗ್ರಹದಿಂದ,ತನ್ನ ದೇಹವನ್ನೇ ದಂಡಿಸುವ ಮೂಲಕ,ಅಥವ ಆಗದವರನ್ನು ಮುಗಿಸುವುದಕ್ಕಾಗಿ ಮಾಡುವ ತಪಸ್ಸು ತಾಮಸ ಎನಿಸುತ್ತದೆ.

ಇತರರ ಏಳಿಗೆಯನ್ನು ಸಹಿಸದೇ, ಕೆಟ್ಟ ಉದ್ದೇಶದಿಂದ,ತನ್ನನ್ನು ತಾನು ದಂಡಿಸಿ-ಅದನ್ನು ಸಹಿಸಿ,ತಾನು ಕಷ್ಟ ಪಟ್ಟಾದರೂ ಇತರರಿಗೆ ಕೇಡನ್ನು ಬಗೆಯುವ ತಪಸ್ಸು ತಾಮಸವೆಂದು ಕರೆಯಲ್ಪಡುತ್ತದೆ. ದ್ವೇಷದಿಂದ ಮಾಡುವ ಮಾಟಮಂತ್ರಾದಿಗಳು ಈ ವ್ಯಾಪ್ತಿಗೆ ಬರುತ್ತದೆ.

ಪ್ರಾಯಃ ಈ ರಾಜಸ ಮತ್ತು ತಾಪಸ ತಪಸ್ಸಿನ ಬಗ್ಗೆ ಹೆಚ್ಚಿನ ವಿವರಣೆಯ ಅಗತ್ಯ ಇರುವುದಿಲ್ಲ,ಪ್ರತ್ಯಕ್ಷದಲ್ಲಿ ಕಾಣಸಿಗುವ ವಿಚಾರಗಳನ್ನು ದೃಷ್ಟಾಂತದ ಮೂಲಕ ವಿವರಿಸಬೇಕಾದ ಅನಿವಾರ್ಯತೆ ಇಲ್ಲ.ಅದಾಗಿಯೂ ಎಷ್ಟು ಹೇಳಿದರೂ ಅದು ಕಂಡಷ್ಟು,ಅನುಭವಿಸಿದಷ್ಟು ಪ್ರಭಾವಶಾಲಿಯಾಗಿರುವುದಿಲ್ಲ!


ಗುರ್ವಂತರ್ಯಾಮಿ ಪ್ರೀಯತಾಮ್|🙏🙏


✍ ಹಯಸುತಾನುದಾಸ*


****
ಗೀತಾ ಮಕರಂದ🐝

          ಜೇನು-೨೮


ಶ್ರೀಕೃಷ್ಣನು ಯಜ್ಞ,ದಾನ ತಪಸ್ಸು ಮೂರನ್ನು ಬಿಡಬಾರದು ಎಂದು ಹೇಳಿದ್ದು,ಅದರಲ್ಲಿ ತಪಸ್ಸನ್ನು ಆಯ್ದು,ಅದರ ಬಗ್ಗೆ ಶ್ರೀಕೃಷ್ಣ ಹೇಳುವ ವಿಚಾರಗಳನ್ನು ಪ್ರಸ್ತುತಿಪಡಿಸುವಲ್ಲಿ ಒಂದು ವಿಶೇಷವಾದ ಕಾರಣವಿತ್ತು. ಹದಿನೆಂಟನೆಯ ಅಧ್ಯಾಯದ ಕೊನೆಗೆ-ಗೀತೆಯನ್ನು ಯಾರಿಗೆ ಹೇಳಬಾರದು ಎಂಬ ವಾಕ್ಯದಲ್ಲಿ ಮೊದಲಿಗೆ ಬಂದ 'ನಾತಪಸ್ಕಾಯ' ಎಂಬುದನ್ನು ವಿವರಿಸಲು ತೊಡಗಿದೆ.
ಶ್ರಿಕೃಷ್ಣ ಹೇಳುತ್ತಾನೆ-'ತಪಸ್ಸು ಮಾಡದವರಿಗೆ ಗೀತಾಜ್ಞಾನವನ್ನು ನೀಡಬೇಡ'.
ತಪಸ್ಸಿನಲ್ಲಿ ಶಾರೀರಿಕ,ವಾಚಿಕ,ಮಾನಸಿಕ ಎಂಬ ಮೂರು ಬಗೆಯನ್ನು ತಿಳಿದು,ಅದರಲ್ಲೂ ಸಾತ್ವಿಕ ರಾಜಸ ತಾಮಸ ಸ್ವಭಾವದ ಲಕ್ಷಣಗಳನ್ನು ನೋಡಿದೆವು.

ಮುಂದಿನ ಮಾತು-ಭಕ್ತನಲ್ಲದವನಿಗೆ ಹೇಳಬೇಡ.

ಭಕ್ತಿ ಎಂದರೇನು?- 

ಭಜ ಸೇವಾಯಾಮ್ ಎಂಬ ಧಾತುವಿನನ್ವಯ ಅನನ್ಯವಾಗಿ ಭಜಿಸುವುದು,ಸೇವೆ ಮಾಡುವುದು ಭಕ್ತಿ ಎಂದು ಕರೆಯಲ್ಪಡುತ್ತದೆ.

ಆಳವಾದ ಆಲೋಚನಾ ಸಾಮರ್ಥ್ಯವುಳ್ಳ ವ್ಯಕ್ತಿಯೊಬ್ಬನು ತಪಸ್ವಿ ಎಂದು ಕರೆಯಲ್ಪಟ್ಟರೂ,ಅವನು ಭಕ್ತನಲ್ಲದಿದ್ದರೆ ಅವನಿಗೆ ಗೀತಾ ಜ್ಞಾನವನ್ನು ನೀಡಬೇಡ ಎಂಬುದು ಕೃಷ್ಣನ ಅಭಿಪ್ರಾಯ.

ಆಧ್ಯಾತ್ಮಿಕ ವಿಚಾರಗಳೆಲ್ಲ ಕೇವಲ ತಿಳಿಯುವಂಥವುಗಳಲ್ಲ,ಅನುಭವಿಸಬೇಕಾದವುಗಳು,ಉಪಾಸಿಸಬೇಕಾದವುಗಳು.ಭಕ್ತಿ ಇಲ್ಲದವನು ಉಪಾಸನೆಗೆ ಯೋಗ್ಯನಲ್ಲನಾದ ಕಾರಣ,ಉಪಾಸನೆಯಲ್ಲಿ ಇತರ ಪರಿಕರಗಳಿಗಿಂತ ಭಕ್ತಿಯೇ ಪ್ರಧಾನವಾದ ಕಾರಣ ಭಕ್ತನಲ್ಲದ ತಪಸ್ವಿಗೆ ಹೇಳಬೇಡ ಎಂದು ಶ್ರೀಕೃಷ್ಣನ ಸಂದೇಶ.

ಭಕ್ತಿ ಎಂಬುದು ಕೇವಲ ಭಗವಂತನಲ್ಲಿ ಮಾತ್ರವಲ್ಲ,ಗುರುವಿನಲ್ಲಿಯೂ ಮಾಡಬೇಕು, ಉಪದೇಶಕನ ಬಗ್ಗೆಯೂ ಭಕ್ತಿ ಇರದಿದ್ದರೆ,ಉಪದೇಶಕನು ತಿಳಿಹೇಳುವ ಭಗವಂತನಲ್ಲಿಯೂ ಭಕ್ತಿ ಇರದಿದ್ದರೆ ಅಂಥವರಿಗೆ ಈ ಜ್ಞಾನವನ್ನು ನೀಡಬೇಡ ಎಂದು ಹೇಳುವ ಮೂಲಕ ಭಕ್ತಿ ಎಂಬುದು ಗೀತಾಭ್ಯಾಸಿಗೆ ಇರಬೇಕಾದ ಪ್ರಧಾನ ಲಕ್ಷಣ ಎಂದು ಒತ್ತಿ ಹೇಳಿದೆ.

ಗುರ್ವಂತರ್ಯಾಮಿ ಪ್ರೀಯತಾಮ್|🙏🙏




✍ ಹಯಸುತಾನುದಾಸ


****
ಗೀತಾ ಮಕರಂದ🐝

        ಜೇನು-೨೯


ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ|
ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋsಭ್ಯಸೂಯತಿ||
(ಅಧ್ಯಾಯ-೧೮,ಶ್ಲೋಕ-೬೮)

ಮುಂದಿನ ಮಾತು-ಶುಶ್ರೂಷೆ ಮಾಡದವನಿಗೆ ಜ್ಞಾನ ನೀಡಬಾರದು.

ಗುರುಸೇವೆ- ಎಂಬುದು ನಮ್ಮ ಪ್ರಾಚೀನರ ಜೀವನದ ಒಂದು ಭಾಗವಾಗಿತ್ತು.ಇದನ್ನು ಪ್ರತಿಬಿಂಬಿಸುವ ಅನೇಕ ದೃಷ್ಟಾಂತಗಳು ಪುರಾಣೇತಿಹಾಸಗಳಲ್ಲಿ ದೊರೆಯುತ್ತವೆ.

ಮಹಾಭಾರತದಲ್ಲಿನ ದ್ರುಪದ ದ್ರೋಣರ ಮೈತ್ರಿಯ ಕಥೆಯು ಪ್ರಸಿದ್ಧವಾದದು,ದ್ರುಪದನಿಂದ ಅವಮಾನಿತನಾದ ದ್ರೋಣರು ಪಾಂಡವರ ಸಹಾಯದಿಂದ ತನ್ನ ಕಾರ್ಯವನ್ನು ಈಡೇರಿಸುತ್ತಾರೆ.ಆದರೆ ದ್ರೋಣರಿಂದ ಅವಮಾನಿತನಾದೆನು ಎಂದು ಕೆರಳಿ, ದ್ರೋಣರನ್ನು ಕೊಲ್ಲುವ ಮಗನಿಗಾಗಿ ಯಜ್ಞ ಮಾಡುವ ಸಂಕಲ್ಪವನ್ನು ದ್ರುಪದ ಮಾಡುತ್ತಾನೆ.ಪುರೋಹಿತರ ಹುಡುಕಾಟದಲ್ಲಿ ತೊಡಗಿ ತಪೋಧನನಾದ ಉಪಯಾಜನನ್ನು ಭೇಟಿಯಾಗುತ್ತಾನೆ.ಉಪಯಾಜನಿಗೆ ವಂದಿಸಿ ತನ್ನ ಉದ್ದೇಶವನ್ನು ಸ್ಪಷ್ಟವಾಗಿ ಬಿನ್ನವಿಸುತ್ತಾನೆ. ಆದರೆ ಉಪಯಾಜನು ದ್ರುಪದನ ಬಿನ್ನಹವನ್ನು ನಯವಾಗಿ ನಿರಾಕರಿಸುತ್ತಾನೆ.

ಇತ್ಯುಕ್ತೋ ನಾಹಮಿತ್ಯೇವಂ ತಮೃಷಿಃ ಪ್ರತ್ಯಭಾಷತ|
(ಆದಿಪರ್ವ-ಅಧ್ಯಾಯ-೧೬೬,ಶ್ಲೋಕ-೧೩)

ಆದರೆ ಉಪಯಾಜನು ನಿರಾಕರಿಸಿದರೂ ಅವರನ್ನು ಪ್ರಸನ್ನಗೊಳಿಸಲೋಸುಗ ದ್ರುಪದನು ಅವರ ಸೇವೆಗೆ ನಿಂತನು. ಪಾಂಚಾಲದ ರಾಜನಾದ ದ್ರುಪದ ತನ್ನ ಸಂಕಲ್ಪವನ್ನು ನೆರವೇರಿಸುವ ದೃಢ ಮನಸ್ಸಿನಿಂದ ಉಪಯಾಜರ ಸೇವೆಗೆ ತೊಡಗಿದ.

ಮಹಾಭಾರತ ಹೇಳುವಂತೆ ದ್ರುಪದನು ಒಂದು ವರ್ಷ ದಿವ್ಯವಾದ ಆಶ್ರಮದಲ್ಲಿದ್ದುಕೊಂಡು ಉಪಯಾಜನ ಸೇವೆ ಮಾಡಿದ!

ತತಃ ಸಂವತ್ಸರಾಂತೇ ದ್ರುಪದಂ ಸ ದ್ವಿಜೋತ್ತಮಃ|
(ಆದಿ,ಅ-೧೬೬,ಶ್ಲೋ-೧೪)

ಒಂದು ಸಂವತ್ಸರ ಕಳೆದ ಮೇಲೆ ಉಪಯಾಜನು ದ್ರುಪದನನ್ನು ಮಾತನಾಡಿಸಿ ಯಾಜನಲ್ಲಿ ಕೇಳಿಕೊಳ್ಳುವಂತೆ ಸೂಚಿಸುತ್ತಾನೆ.!


ಗುರ್ವಂತರ್ಯಾಮಿ ಪ್ರೀಯತಾಮ್|🙏🏽🙏🏽




✍ ಹಯಸುತಾನುದಾಸ
**
ಗೀತಾ ಮಕರಂದ🐝

         ಜೇನು-೩೦

ಉಪಯಾಜನ ಸೂಚನೆಯಂತೆ ದ್ರುಪದನು ಯಾಜನನ್ನು ಕೇಳಿಕೊಂಡು ಬಳಿಕ ಯಾಜೋಪಯಾಜರ ಪೌರೋಹಿತ್ಯದಲ್ಲಿ ಯಜ್ಞ ನಡೆಯುತ್ತದೆ. ಇಲ್ಲಿ ಯಾಜೋಪಯಾಜರ ನಿಲುವು ಸರಿಯೇ,ದ್ರುಪದನ ಯಜ್ಞ ಸಾತ್ವಿಕವೇ ಮುಂತಾದ ಅನೇಕ ವಿಷಯಗಳು ವಿಮರ್ಶೆಗೆ ಯೋಗ್ಯವೇ ಆಗಿದೆಯಾದರೂ, ತನ್ನ ಸಂಕಲ್ಪವನ್ನು ಈಡೇರಿಸಬೇಕಂಬ ಹೆಬ್ಬಯಕೆಯಿಂದ ಒಂದು ವರ್ಷ ಉಪಯಾಜನ ಸೇವೆ ಮಾಡಿದ ದ್ರುಪದನ ಚರ್ಯೆ-ಶುಶ್ರೂಷೆ.

ಜ್ಞಾನ ಬೇಕೆಂದು ಬಂದವರಿಗೆ-ಅದಕ್ಕಾಗಿ ಗುರುಸೇವೆ ಮಾಡಲು ತಾನು ಸಿದ್ಧ ಎಂಬ ಸಂಕಲ್ಪ ಇರಬೇಕು, ಇಂಥವನಿಗೆ ಮಾತ್ರ ಜ್ಞಾನ ನೀಡು ಎನ್ನುವುದು ಕೃಷ್ಣನ ಸಂದೇಶ. ಕೇಳಿದ ಪ್ರಶ್ನೆಗಳಿಗೆ ಒಂದು ವರ್ಷದ ಬಳಿಕವೇ ಉತ್ತರ ಕೊಡುವರೆಂದಲ್ಲ,ಮೊದಲೂ ಕೊಡಬಹುದು,ಕೊಡದೆಯೂ ಇರಬಹುದು. ಆದರೆ ಉತ್ತರಕ್ಕಾಗಿ ತಾನು ಸೇವೆಗೆ ಸಿದ್ದ ಎಂದು ಭಾವಿಸಿ ಬಂದವನಿಗೆ ಹೇಳಬೇಕು. ಬಂದ ಜಿಜ್ಞಾಸುವು ತಪಸ್ಬಿಯೂ,ಭಗವದ್ಭಕ್ತನೂ ಆಗಿದ್ದರೂ ಸೇವಕನೂ ಆಗಿರಬೇಕು ಎಂದು ಅನ್ವಯಿಸಬಹುದು.

ಮುಂದಿನದು- ಯೋ ಮಾಂ ಅಭ್ಯಸೂಯತಿ.

ಭಗವಂತನನ್ನು ದ್ವೇಷಿಸುವವನಿಗೆ ಉಪದೇಶಿಸಬಾರದು- ಏಕೆಂದರೆ ಯಾವುದೇ ಪ್ರಮಾಣ, ತರ್ಕ ನೀಡಿದರೂ ಅದರಲ್ಲಿ ಅವರಿಗೆ ಕೊರತೆಯೇ ಕಾಣುತ್ತದೆಯಲ್ಲದೇ,ಧನಾತ್ಮಕ ಅಂಶಗಳನ್ನು ಗಮನಿಸುವುದೇ ಇಲ್ಲ.ಅವರಿಗದು ಬೇಕಾಗಿಲ್ಲ. ಗೀತೆಯಲ್ಲಿ ಏನೇನು ದೋಷಗಳಿವೆ ಎಂದು ಪಟ್ಟಿ ಮಾಡಿ ಪ್ರಕಟಿಸುವ ಜನರ ಉದ್ದೇಶ-ದೋಷ ಹುಡುಕುವುದೇ ಆಗಿರುವುದರಿಂದ ಅದನ್ನೇ ಮಾಡುತ್ತಾರೆ, ತೋರಿಸಿಕೊಟ್ಟವರು ತಾವೇ ಎಂದು ಬೀಗುತ್ತಾರೆ.!

ಇಂಥವರ ಜೊತೆ ಚರ್ಚೆ ಮಾಡಬಾರದು-ನಮಗೂ ಪ್ರಯೋಜನವಿಲ್ಲ,ಅವರಿಗೆ ಪ್ರಯೋಜನ ಬೇಕಾಗಿಲ್ಲ. ಇದೊಂದು ನಿರರ್ಥಕ ಜಲ್ಪ. ಇದಕ್ಕೆ ಲೋಕದ ದೃಷ್ಟಾಂತದ ಅಗತ್ಯವಿಲ್ಲ ಅಂತ ಭಾವಿಸುವೆ.


ಗುರ್ವಂತರ್ಯಾಮಿ ಪ್ರೀಯತಾಮ್|🙏🏽🙏🏽



✍ ಹಯಸುತಾನುದಾಸ
******
ಗೀತಾ ಮಕರಂದ🐝

        ಜೇನು-೨೯


ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ|
ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋsಭ್ಯಸೂಯತಿ||
(ಅಧ್ಯಾಯ-೧೮,ಶ್ಲೋಕ-೬೮)

ಮುಂದಿನ ಮಾತು-ಶುಶ್ರೂಷೆ ಮಾಡದವನಿಗೆ ಜ್ಞಾನ ನೀಡಬಾರದು.

ಗುರುಸೇವೆ- ಎಂಬುದು ನಮ್ಮ ಪ್ರಾಚೀನರ ಜೀವನದ ಒಂದು ಭಾಗವಾಗಿತ್ತು.ಇದನ್ನು ಪ್ರತಿಬಿಂಬಿಸುವ ಅನೇಕ ದೃಷ್ಟಾಂತಗಳು ಪುರಾಣೇತಿಹಾಸಗಳಲ್ಲಿ ದೊರೆಯುತ್ತವೆ.

ಮಹಾಭಾರತದಲ್ಲಿನ ದ್ರುಪದ ದ್ರೋಣರ ಮೈತ್ರಿಯ ಕಥೆಯು ಪ್ರಸಿದ್ಧವಾದದು,ದ್ರುಪದನಿಂದ ಅವಮಾನಿತನಾದ ದ್ರೋಣರು ಪಾಂಡವರ ಸಹಾಯದಿಂದ ತನ್ನ ಕಾರ್ಯವನ್ನು ಈಡೇರಿಸುತ್ತಾರೆ.ಆದರೆ ದ್ರೋಣರಿಂದ ಅವಮಾನಿತನಾದೆನು ಎಂದು ಕೆರಳಿ, ದ್ರೋಣರನ್ನು ಕೊಲ್ಲುವ ಮಗನಿಗಾಗಿ ಯಜ್ಞ ಮಾಡುವ ಸಂಕಲ್ಪವನ್ನು ದ್ರುಪದ ಮಾಡುತ್ತಾನೆ.ಪುರೋಹಿತರ ಹುಡುಕಾಟದಲ್ಲಿ ತೊಡಗಿ ತಪೋಧನನಾದ ಉಪಯಾಜನನ್ನು ಭೇಟಿಯಾಗುತ್ತಾನೆ.ಉಪಯಾಜನಿಗೆ ವಂದಿಸಿ ತನ್ನ ಉದ್ದೇಶವನ್ನು ಸ್ಪಷ್ಟವಾಗಿ ಬಿನ್ನವಿಸುತ್ತಾನೆ. ಆದರೆ ಉಪಯಾಜನು ದ್ರುಪದನ ಬಿನ್ನಹವನ್ನು ನಯವಾಗಿ ನಿರಾಕರಿಸುತ್ತಾನೆ.

ಇತ್ಯುಕ್ತೋ ನಾಹಮಿತ್ಯೇವಂ ತಮೃಷಿಃ ಪ್ರತ್ಯಭಾಷತ|
(ಆದಿಪರ್ವ-ಅಧ್ಯಾಯ-೧೬೬,ಶ್ಲೋಕ-೧೩)

ಆದರೆ ಉಪಯಾಜನು ನಿರಾಕರಿಸಿದರೂ ಅವರನ್ನು ಪ್ರಸನ್ನಗೊಳಿಸಲೋಸುಗ ದ್ರುಪದನು ಅವರ ಸೇವೆಗೆ ನಿಂತನು. ಪಾಂಚಾಲದ ರಾಜನಾದ ದ್ರುಪದ ತನ್ನ ಸಂಕಲ್ಪವನ್ನು ನೆರವೇರಿಸುವ ದೃಢ ಮನಸ್ಸಿನಿಂದ ಉಪಯಾಜರ ಸೇವೆಗೆ ತೊಡಗಿದ.

ಮಹಾಭಾರತ ಹೇಳುವಂತೆ ದ್ರುಪದನು ಒಂದು ವರ್ಷ ದಿವ್ಯವಾದ ಆಶ್ರಮದಲ್ಲಿದ್ದುಕೊಂಡು ಉಪಯಾಜನ ಸೇವೆ ಮಾಡಿದ!

ತತಃ ಸಂವತ್ಸರಾಂತೇ ದ್ರುಪದಂ ಸ ದ್ವಿಜೋತ್ತಮಃ|
(ಆದಿ,ಅ-೧೬೬,ಶ್ಲೋ-೧೪)

ಒಂದು ಸಂವತ್ಸರ ಕಳೆದ ಮೇಲೆ ಉಪಯಾಜನು ದ್ರುಪದನನ್ನು ಮಾತನಾಡಿಸಿ ಯಾಜನಲ್ಲಿ ಕೇಳಿಕೊಳ್ಳುವಂತೆ ಸೂಚಿಸುತ್ತಾನೆ.!


ಗುರ್ವಂತರ್ಯಾಮಿ ಪ್ರೀಯತಾಮ್|🙏🏽🙏🏽




✍ ಹಯಸುತಾನುದಾಸ
******
ಗೀತಾ ಮಕರಂದ🐝

        ಜೇನು-೩೧

ಸುಮಾರು ಒಂದು ತಿಂಗಳಿನಿಂದ ಗೀತೆಯ ಚಿಂತನೆಗಳನ್ನು ಹಂಚುತ್ತಿದ್ದೇನೆ. ಅನೇಕರು ಓದುತ್ತಿದ್ದಾರೆ. ಇವರಲ್ಲಿ ತಪಸ್ಸು ಮಾಡದವರೂ,ಭಕ್ತರಲ್ಲದವರೂ,ಶುಶ್ರೂಷೆ ಮಾಡದವರೂ,ಭಗವಂತನನ್ನು ದ್ವೇಷಿಸುವವರೂ ಇರಬಹುದಲ್ಲ.! ಇಂಥವರಿಗೆ ಹೇಳಬಾರದು ಎಂದು ಕೃಷ್ಣನೇ ಆದೇಶಿಸಿದ ಮೇಲೆ ಯಾಕೆ ಗೀತಾ ಮಕರಂದ?

ಭಗವದ್ಗೀತೆಯ ಬಗ್ಗೆ ಅನೇಕ ಪುಸ್ತಕಗಳು ಲಭ್ಯವಿದೆ,ಭಾಷ್ಯ,ವಿಸ್ತಾರ ವಿವರಣೆಯ ಹೊತ್ತಗೆಗಳೂ ಇವೆ.ಆಸಕ್ತರೋ,ಅನಾಸಕ್ತರೋ ಯಾವುದೋ ಕಾರಣಕ್ಕೋ ಓದುತ್ತಾರೆ,ಅಭ್ಯಸಿಸುತ್ತಾರೆ,ಅಧ್ಯಯನ ಮಾಡುತ್ತಾರೆ. ಒಂದರ್ಥದಲ್ಲಿ ಸಾರ್ವತ್ರಿಕವಾಗಿ ಗೀತಾ ರಹಸ್ಯ ತೆಗೆದುಕೊಂಡಿದೆ.ಅವರವರ ಯೋಗ್ಯತೆಗನುಸಾರವಾಗಿ ಗೀತೆಯ ವಾಕ್ಯಗಳು ಕಾಲಕ್ರಮದಲ್ಲಿ ಅವರವರಿಗೆ ತೆರೆದುಕೊಳ್ಳುತ್ತದೆಯೇ ಹೊರತು ನಾವು ಭಗವಂತನ ಮಾತುಗಳನ್ನು ಅನಾವರಣ ಮಾಡುವುದಲ್ಲ ಎಂಬುದು ನನ್ನ ಅಭಿಪ್ರಾಯ.ಅದು ತೆರದುಕೊಂಡರೆ ನಾವು ಕಾಣಬಹುದು,ನಮಗೆ ತಿಳಿಯುಬಹುದು, ಅದು ತೆರೆದುಕೊಳ್ಳದಿದ್ದರೆ ನಮಗೆ ಕಾಣುವುದು ಇಲ್ಲ,ತಿಳಿಯುವುದೂ ಇಲ್ಲ. ಹಿಂದೆ ಎಷ್ಟೋ ಬಾರಿ ಓದಿದ ವಾಕ್ಯವೂ ನಮಗೆ ಇವತ್ತು ಅರ್ಥ ಆಗಿರಬಹುದು,ಕೆಲವೊಂದು ಮಾತುಗಳು ಓದಿದ ಕೂಡಲೇ ಅರ್ಥವಾಗಿರಬಹುದು.

ಗೀತೆಯಲ್ಲೇ ಕೃಷ್ಣ ಹೇಳಿದ ಮಾತೊಂದಿದೆ.

ನೇಹಾಭಿಕ್ರಮನಾಶೋsಸ್ತಿ ಪ್ರತ್ಯವಾಯೋ ನ ವಿದ್ಯತೇ|
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್||
(ಅಧ್ಯಾಯ-೨,ಶ್ಲೋಕ-೪೦)
ಇಲ್ಲಿನ ತೊದಲು ಹೆಜ್ಜೆ ಕೂಡ ಹಾಳಾಗದು,ಇಲ್ಲಿ ತೊಡರುಗಳಿಲ್ಲ,ಈ ಧರ್ಮದ ತುಣುಕು ಕೂಡ ದೊಡ್ಡ ಬೆದರಿನಿಂದ ಪಾರು ಮಾಡಬಲ್ಲದು.

ಪೂರ್ವಜನ್ಮದ ಓದು ನಮ್ಮ ಈ ಜನ್ಮದ ಓದಿನ ವೇಗವನ್ನು ಹೆಚ್ಚಿಸುತ್ತದೆ.ಹಿಂದೆಯೇ ನಾವು ಆರಂಭಿಸಿದ್ದರೆ ಈಗ ಅದು ಮುಂದುವರೆಯುತ್ತದೆ.ಅದಲ್ಲದೇ ಈಗ ಆರಂಭವಾದರೆ ಮುಂದಿನದರಲ್ಲಿ ಮುಂದುವರೆಯುತ್ತದೆ.

ಆದ್ದರಿಂದ ಓದುವವರಿಗೆಲ್ಲ ವಿಷಯ ಕಾಣುವುದಿಲ್ಲ,ಕಂಡದ್ದೆಲ್ಲಾ ಅರ್ಥವಾಗುವುದಿಲ್ಲ.ದೇವರ ಅನುಗ್ರಹವೇ ಮನುಷ್ಯನನ್ನು ಎತ್ತರಕ್ಕೇರಿಸುತ್ತದೆ.ಅವನಿಗೆ ಗೀತೆಯು ತೆರದುಕೊಳ್ಳುತ್ತದೆ.

ಯಮೇವೈಷ ವೃಣುತೇ ತೇನ ಲಭ್ಯಸ್ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್|
(ಕಠೋಪನಿಷತ್,೨-೨೩)

ಗುರ್ವಂತರ್ಯಾಮಿ ಪ್ರೀಯತಾಮ್|🙏🏽🙏🏽




✍ ಹಯಸುತಾನುದಾಸ
******
ಗೀತಾ ಮಕರಂದ🐝

         ಜೇನು-೩೨

ಭಗವಂತನ ಅನುಗ್ರಹದಿಂದಲೇ ಗೀತಾವಾಕ್ಯಗಳು ತೆರೆದುಕೊಳ್ಳುವುದು ಎನ್ನುವುದು ಹೌದಾದರೆ,ಭಕ್ತನಲ್ಲದವನಿಗೆ,ತಪಸ್ವಿಯಲ್ಲದವನಿಗೆ ಹೇಳಬೇಡ ಎಂಬ ಮಾತು ಯಾಕೆ ? ಯಾರಿಗೇ ಹೇಳಲಿ,ಯಾರೇ ಓದಲಿ ಅವರಿಗೆ ಅರ್ಥವಾಗುವಂತೆ ಮಾಡುವುದು-ಬಿಡುವುದು ಸ್ವಯಂ ಭಗವಂತನ ನಿಯಂತ್ರಣದಲ್ಲೇ ಇರುವಾಗ-ಈ ನಿಷೇಧ ವಾಕ್ಯಗಳು ಯಾಕೆ?

ಹೇಳುವಾತನಿಗೆ ಇರಬೇಕಾದ ಜವಾಬ್ದಾರಿಯನ್ನು ಈ ಮಾತುಗಳು ತಿಳಿಸಿ ಹೇಳುತ್ತವೆ. ಮಾತ್ರವಲ್ಲ ಕೇಳುವಾತನಿಗೆ ಇರಬೇಕಾದ ಗುಣಗಳನ್ನು ಇಲ್ಲಿ‌ಬಿಡಿಸಿ ಹೇಳಿದೆ.ಇನ್ನೊಂದರ್ಥದಲ್ಲಿ-ಗೀತಾಭ್ಯಾಸಿಯು ತಪಸ್ವಿಯಾಗಿ,ಭಕ್ತನಾಗಿ,ಶುಶ್ರೂಷಾಪರನಾಗಿ,ಭಗವದ್ಭಕ್ತನಾಗಿರಬೇಕು. ಈ ಉಲ್ಲೇಖಿತ ಗುಣಗಳು ನಮ್ಮಲ್ಲಿ ಇಲ್ಲವೆಂದಾದರೆ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು.ಗೀತಾವಾಕ್ಯಗಳನ್ನು ಅಧ್ಯಯನ ಮಾಡಬೇಕು,ಪಾರಾಯಣ ಮಾಡಬೇಕು.

ತಿಳಿಯಬೇಕೆಂದರೆ ಅಧ್ಯಯನ ಮಾಡಬೇಕು-ಪಾರಾಯಣ ಯಾಕೆ ಮಾಡಬೇಕು?

ನಿರಂತರ ಪಾರಾಯಣದಿಂದ ಗೀತಾವಾಕ್ಯಗಳಲ್ಲಿ ಶ್ರದ್ಧೆ ಉಂಟಾಗುತ್ತದೆ. ಆಧುನಿಕ ಅನೇಕ ಚಿಂತಕರು ಗೀತೆಯನ್ನು ಓದಬೇಕು ಎನ್ನುತ್ತಾರೆ,ಪಾರಾಯಣದ ಕಡೆ ಗಮನ ಕೊಡುವುದಿಲ್ಲ-ಅರ್ಥವಾಗದೇ ಓದುವುದಕ್ಕಿಂತ ಅರ್ಥ ಮಾಡಿಕೊಳ್ಳಿ,ಕೇವಲ ಪಾರಾಯಣದಿಂದ ಪ್ರಯೋಜನವಿಲ್ಲ ಎಂಬುದು ಅವರ ಅಭಿಪ್ರಾಯ.ಇದು ಸರಿಯೇ, ಆದರೂ ಅಧ್ಯಯನ ಮಾಡಿದ ಬಳಿಕ,ಅರ್ಥ ಮಾಡಿಕೊಂಡು ಓದಿದ ಮೇಲೆ ಅದನ್ನು ಪಾರಾಯಣ ಮಾಡಿದರೆ ಇನ್ನೂ ಉತ್ತಮ.ಗೀತಾ ಚಿಂತನೆಗಳು ನಿತ್ಯ ತಲೆಯಲ್ಲಿ ತಿರುಗುತ್ತಿರುತ್ತವೆ.ಹೊಸವಿಚಾರಗಳು ಹೊಳೆಯುತ್ತವೆ.ಪಾರಾಯಣಗಳಿಂದ ಮಾತು ಮಧುರವಾಗುತ್ತದೆ.

ಶ್ರೀ ಶ್ರೀ ಶಂಕರಾಚಾರ್ಯಕೃತ ಮೋಹಮುದ್ಗರ(ಭಜಗೋವಿಂದಮ್)ದಲ್ಲಿ ಎರಡು ಬಾರಿ‌ ಗೀತೆಯ ಉಲ್ಲೇಖವಿದೆ.

ಭಗವದ್ಗೀತಾ ಕಿಂಚಿದಧೀತಾ (ಶ್ಲೋಕ-೨೦)
ಎಂಬುದಾಗಿ ಭಗವದ್ಗೀತೆಯನ್ನು ಸ್ಬಲ್ಪವಾದರೂ ತಿಳಿ ಎಂದು ಅಧ್ಯಯನಕ್ಕೆ ಒತ್ತು ನೀಡಿದ್ದಾರೆ.

ಗೇಯಂ ಗೀತಾ ನಾಮಸಹ್ರಂ (ಶ್ಲೋಕ-೨೭)
ಎಂಬುದಾಗಿ ಗೀತಾಪಾರಾಯಣ,ವಿಷ್ಟುಸಹಸ್ರನಾಮ ಪಾರಾಯಣವನ್ನೂ ಹೇಳಿದ್ದಾರೆ.

ಶ್ರೀಮದಾಚಾರ್ಯರು ತಮ್ಮ‌ ಗೀತಾಭಾಷ್ಯದ ಉಪೋದ್ಘಾತದಲ್ಲಿ
ಭಾರತಂ ‌ಸರ್ವಶಾಸ್ತ್ರೇಷು ಭಾರತೇ ಗೀತಿಕಾ ವರಾ|
ವಿಷ್ಣೋಃ ಸಹಸ್ರನಾಮಾಪಿ ಜ್ಣೇಯಂ ಪಾಠ್ಯಂ ಚ ತದ್ವಯಂ ||

ಎಂದು ಗೀತೆ-ವಿಷ್ಣುಸಹಸ್ರನಾಮಗಳನ್ನು ತಿಳಿಯಬೇಕು-ಪಠಿಸಬೇಕು ಎಂದು ಹೇಳಿದ್ದಾರೆ.

ಅನುಕೂಲವಾದಾಗಲೆಲ್ಲ ಗೀತಾ ಪಾರಾಯಣ ಮಾಡೋಣ.

ಗುರ್ವಂತರ್ಯಾಮಿ ಪ್ರೀಯತಾಮ್|🙏🙏


🙏 ||ಶ್ರೀ ಕೃಷ್ಣಾರ್ಪಣಮಸ್ತು||🙏




✍ ಹಯಸುತಾನುದಾಸ

*
ಕರ್ಮಫಲ.‌‌....

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನಸಂಸ್ಥೆ ಬೆಂಗಳೂರು ತನ್ನ ಪರಿಶೀಲನಾ ವರದಿಯಲ್ಲಿ  ಹೇಳಿದೆ 
 * ಪ್ರತಿ 20 ಭಾರತೀಯ ರಲ್ಲಿ ಒಬ್ಬರು ಖಿನ್ನತೆಗೆ ಒಳಗಾಗಿದ್ದಾರೆ. * ಎನ್ನುವ ಬೆಚ್ಚಿ ಬಳಿಸುವ ಸುದ್ಧಿ  ಅಲ್ಲವೆ...
 ಯಾಕೆ  ಹೀಗೆ ನಾವು ಹತಾಶರಾಗುತ್ತಿದ್ದೇವೆ ? ಕಾರಣ ಸುಸ್ಪಷ್ಟ .  ಬದುಕನ್ನು ನಾವು ಬಂದಂತೆ ಸ್ವೀಕರಿಸುವಲ್ಲಿ ಎಡವಿದ್ದೇವೆ.  ಭೋಗದ  ಜಗತ್ತಿನಲ್ಲಿ ಪೃಕೃರ್ತಿ ಮತ್ತು ಷಮನುಷ್ಯ ಸೃಷ್ಟಿಸಿದ  ಎಲ್ಲ ಮೂರ್ತ ಮತ್ತು ಅಮೂರ್ತ ಸಂಪತ್ತುಶ ನಮ್ಮದಾಗಬೇಕು ಅನ್ನುವ ಹಟಕ್ಕೆ ಬಿದ್ಧಿದ್ದೇವೆ.  ನಾವು ಮಕ್ಕಳನ್ನು  ನಮ್ಮಂತೆಯೇ ಮಾಡುತ್ತದ್ದೇವೆ .  ಅವಾಸ್ತವಿಕ ಕನಸನ್ನು ಅವರಲ್ಲಿ  ಬಿತ್ತುತ್ತಿದ್ದೇವೆ. ಇಂದು ಜೀವನ  , ಮೌಲ್ಯಕ್ಕಿಂತ  ಜೀವನ ಮಟ್ಟಕ್ಕೆ  ಹೆಚ್ಚಿನ ಆದ್ಯತೆ. ಅಧಿಕಾರ ಲಾಲಸೆ , ಲಂಚ , ಮೋಸ ,  ವಂಚನೆ ಸ್ವಾರ್ಥಕ್ಕೆ  ಕಟ್ಟು ಬಿದ್ದು  ಸ್ಪರ್ದೆಗೆ ಇಳಿದವರಂತೆ  ವಿಲಾಸಿ ಜೀವನಕ್ಕೆ ಮಾರು ಹೋಗಿದ್ದೇವೆ ಅಲ್ಲವೆ ಇದೆಲ್ಲವುದರಿಂದ ವೈಭವ ಐಶ್ವರ್ಯ ಅಂತಸ್ತು ಸಿಗಬಹುದು. ಆದರೆ  ಇವೆಲ್ಲ ನಮ್ಮೊಟ್ಟಿಗಿದ್ದರೆ ನೆಮ್ಮದಿಯ ಬದುಕು ಕನಸೆ..  ಇದರಿಂದ ಹೊರ ಬರಲು  
                ಮೊದಲು ನಾವು  ದುರಾಸೆಗಳಿಂದ  ಹೊರ ಬರಬೇಕು . ‍ ಋಣಾತ್ಮಕ  ಪ್ರತಿಕ್ರಿಯೆ ಯನ್ನು ಪ್ರತಿಬಂಧಿಸಿ  .ಇರುವ ಸಣ್ಣ ಸುಖವನ್ನು ಪೂರ್ತಿಯಾಗಿ ಅನುಭವಿಸಿ , ಸತ್ಕರ್ಮ ,  ಸನ್ಮಾರ್ಗ , ಭಗವಂತನ ನಾಮಸ್ಮರಣೆ , ನಿತ್ಯ ಜಪವಾಗಲಿ .  ಯಾವುದನ್ನೂ ಯಾರಿಂದಲೂ ನಿರೀಕ್ಷಿಸಬೇಡಿ.  ಎಲ್ಲವನ್ನೂ ಕೃಷ್ಣ ನಿಗೆ ಸಮರ್ಪಿಸಿ ... ಆಗ ಪಾಪಪ್ರಜ್ಞೆ  ಕಳೆದುಕೊಂ  ಕೃಷ್ಣಪ್ರಜ್ಞೆ ಯಿಂದ ನೀರಾಳರಾಗುತ್ತೀರಿ..‌‌..

ಒಟ್ಟಿನಲ್ಲಿ ಹೇಳಬೇಕೆಂದರೆ: ನಾವು ನಮ್ಮ ಮನಸ್ಸು ಬೇರೆಕಡೆ ಹೋಗದಂತೆ ತಡೆದು ಅದನ್ನು ಭಗವಂತನಲ್ಲಿ ನೆಲೆಗೊಳಿಸಬೇಕು; ನಾವು ಮಾಡುವ ಎಲ್ಲ ಕರ್ಮಗಳೂ ಭಗವಂತನ ಪೂಜಾರೂಪವಾಗಿದ್ದು, ಅದನ್ನು ಭಗವಂತ ನಮ್ಮ ಕೈಯಿಂದ ಮಾಡಿಸುತ್ತಿದ್ದಾನೆ ಎನ್ನುವ ಎಚ್ಚರ ನಮ್ಮ ಮನಸ್ಸಿನಲ್ಲಿ ನೆಲೆಗೊಳ್ಳಬೇಕು. 
* ಕರ್ಮಣ್ಯೇ ವಾದಿಕಾರಸ್ಥೆ  ಮಾ ಫಲೇಶು ಕದಾಚನ  *

ನಿಮ್ಮ ಕೃಷ್ಣಾರ್ಪಣ ಬುದ್ಧಿಯಿಂದ  ಕರ್ಮ ಮಾಡಿ  ಅದರ ಫಲದ ವಿಷಯವನ್ನು. ಭಗವಂತ ನಿಗೆ ಬಿಡಿ....  .
********

ಗೀತಾಮಕರಂದ

         (ಜೇನು-೨೪)

ಶರೀರದಿಂದ ಮಾಡುವ ತಪಸ್ಸಿಗೆ ಮನಸ್ಸಿನ ಸಹಕಾರ ಬೇಕು,ದೇಹ ಬಗ್ಗಬೇಕಾದರೆ ಮನಸ್ಸು ಒಪ್ಪಬೇಕು.ಮನಸ್ಸಿಲ್ಲದೇ ಮಾಡಿದ ಕರ್ಮ ಕೇವಲ ಯಾಂತ್ರಿಕ ಕರ್ಮ. ಈ ಮನಸ್ಸಿನ ತಪಸ್ಸಿನ ಲಕ್ಷಣಗಳನ್ನು ಶ್ರೀಕೃಷ್ಣ ಹೇಳುತ್ತಾನೆ.


ಮನಃ ಪ್ರಸಾದಃ ಸೌಮ್ಯತ್ವಂ ಮೌನಮಾತ್ಮವಿನಿಗ್ರಹಃ|

ಭಾವಸಂಶುದ್ಧಿರಿತ್ಯೇತತ್ತಪೋ ಮಾನಸಮುಚ್ಯತೇ||
(ಅ-೧೭,ಶ್ಲೋಕ-೧೮)

ಬಗೆಯ ತಿಳಿ,ಮಿದುತನ,ಮನನ,ತನ್ನ ಮೇಲೆ ಹಿಡಿತ ಮತ್ತು ಒಳ್ಳೆಯದನ್ನು ಬಗೆಯುವುದು ಇದು ಮನದ ತಪಸ್ಸು ಎನಿಸುತ್ತದೆ.


ಮನಃ ಪ್ರಸಾದಃ-ಎಂದರೆ ಮಾನಸಿಕ ಸ್ವಚ್ಛತೆ, ಶಾಂತಿಯುತವಾದ ಮನಸ್ಸು.


ಸೌಮ್ಯತ್ವಮ್-ಮೃದುತನ,ಸೌಮ್ಯವಾದ ಮನಸ್ಸು. ಮಾನಸಿಕ ಕ್ರೂರತನ ಇಲ್ಲದಿರುವುದು


ಮೌನಮ್-ಮಾತಿನ ವಿಷಯದಲ್ಲು ಮನಸ್ಸಿನ ಸಂಯಮ,ನಿರಂತರ ಮನನ.ಅಲ್ಲದೇ ಮೌನವೆಂಬುದು ಮುಖ್ಯವಾಗಿ ಮನಸ್ಸಿಗೆ ಸಂಬಂಧಿಸಿದ್ದು,ಹಾಗಾಗಿಯೇ ವಾಚಿಕ ತಪಸ್ಸಿನ ಲಕ್ಷಣದಲ್ಲಿ ಹೇಳದೇ ಮಾನಸಿಕ ತಪಸ್ಸಿನ ಲಕ್ಷಣವಾಗಿ ಹೇಳಿದೆ. ಮಾತಿನಲ್ಲಿ ಹೇಳದೇ ಮನಸ್ಸಿನಲ್ಲಿ ನಿಂದಿಸುವುದು ತಪಸ್ಸು ಆಗಲಾರದು.


ಆತ್ಮವಿನಿಗ್ರಹಃ-ಎಲ್ಲ ಕಡೆ ಹರಿಯುವ ಮನಸ್ಸನ್ನು ನಿಯಂತ್ರಿಸುವುದು. ಹತೋಟಿಯಲ್ಲಿಡುವುದು.


ಭಾವಸಂಶುದ್ಧಿಃ-ಕಪಟವಿಲ್ಲದ ಭಾವನೆ,ಮಾತು-ಕೃತಿಗಳಲ್ಲಿ ಪಾರದರ್ಶಕತೆ. ಶುದ್ಧ ಭಾವನೆ.

ಭಾವವೆಂದರೆ ಸ್ವಭಾವವೂ ಹೌದು-ಪರಿಶುದ್ಧವಾದ ಸ್ವಭಾವ.

ಇವೆಲ್ಲವೂ ಮಾನಸಿಕವಾದ ತಪಸ್ಸು ಎಂಬುದು ಕೃಷ್ಣನ ಅಭಿಪ್ರಾಯ.

ಗುರ್ವಂತರ್ಯಾಮಿ ಪ್ರೀಯತಾಮ್
************



No comments:

Post a Comment