SEARCH HERE

Tuesday, 1 January 2019

ಲಲಿತಾ ಸಹಸ್ರನಾಮ ಮಹಿಮೆ lalita sahasranama mahime



ಲಲಿತ ಸಹಸ್ರ ನಾಮ ಪಠಿಸುವ ಉದ್ದೇಶ ಮತ್ತು ಲಲಿತ ದೇವಿಯ ಕಥೆ..!!

ಬ್ರಹ್ಮಾಂಡಪುರಾಣದಲ್ಲಿ ಹಯಗ್ರೀವ ಮುನಿಯು ಅಗಸ್ತ್ಯರಿಗೆ ಶ್ರೀಲಲಿತೋಪಾಖ್ಯಾನವನ್ನು ಹೇಳಿ ಲಲಿತಾ ಸಹಸ್ರ ನಾಮದಿಂದ ಜಗನ್ಮಾತೆಯನ್ನು ಪ್ರಾರ್ಥಿಸುತ್ತಾರೆ.
ಲಲಿತಾಸಹಸ್ರನಾಮಕ್ಕೂ ಮುನ್ನ ಬರುವ ಲಲಿತಾಂಬೆಯ ಕಥೆ ಈ ರೀತಿ ಇದೆ : ಶಿವನು ಮನ್ಮಥನನ್ನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದನು, ಚಿತ್ರಕರ್ಮನು ಮನ್ಮಥನ ಬೂದಿಯನ್ನ ಒಟ್ಟುಗೂಡಿಸಿ ಪುರುಷಾಕೃತಿಯನ್ನ ನಿರ್ಮಾಣ ಮಾಡಿದನು, ಶಿವನ ದೃಷ್ಟಿ ಬಿದ್ದಕೂಡಲೆ ಆಕೃತಿಗೆ ಜೀವ ಪ್ರವೇಶ ವಾಯಿತು, ಚಿತ್ರಕರ್ಮನಿಂದ ಶತರುದ್ರ ಮಂತ್ರಾನುಷ್ಠಾನದ ಉಪದೇಶಪಡೆದು ರುದ್ರನನ್ನು ಪೂಜಿಸಿ ಅರವತ್ತು ಸಾವಿರ ವರ್ಷಗಳವರೆಗೆ ಚಕ್ರವರ್ತಿಯಾಗುವಂತೆ ವರಪಡೆದು ಭಂಡ ಎಂದು ಪ್ರಸಿದ್ದನಾದನು.
ರುದ್ರನ ಕೆಂಗಣ್ಣಿನಿಂದ ಸುಡಲ್ಪಟ್ಟ ಬೂದಿಯಿಂದ ಹುಟ್ಟಿದ ಭಂಡನು ರೌದ್ರ ಸ್ವಭಾವವನ್ನ ಹೊಂದಿದ್ದನು, ಶೋಣಿತಪುರದಲ್ಲಿ ರಾಜ್ಯವಾಳುತ್ತ ದೇವತೆಗಳಿಗೆ ನಾನಾವಿಧವಾದ ತೊಂದರೆಗಳನ್ನು ನೀಡುತ್ತಿದ್ದನು, ನಾರದರ ಉಪದೇಶದಂತೆ ಇಂದ್ರನು ಸಮಸ್ತ ದೇವತೆಗಳೊಂದಿಗೆ ಹಿಮಗಿರಿಯ ತಪ್ಪಲಿಗೆ ಬಂದು ಭಾಗೀರಥೀ ತೀರದಲ್ಲಿ ಪರಾಶಕ್ತಿಯ ಪೂಜೆಯನ್ನು ಯಾಗ ವಿಧಾನದಿಂದ ಮಾಡಿದನು.
ಆ ಯಜ್ಞ ಕುಂಡದಿಂದ ಅನುಪಮ ತೇಜದಿಂದ ಕೂಡಿದ ಒಂದು ಚಕ್ರಾಕಾರವು ಉದ್ಭವಿಸಿತು, ಆ ಚಕ್ರದ ಮಧ್ಯದಲ್ಲಿ ಸೂರ್ಯ ಪ್ರಭೆಯುಳ್ಳವಳು, ಬ್ರಹ್ಮ ವಿಷ್ಣು ಶಿವ ಸ್ವರೂಪಳೂ, ಸೌಂದರ್ಯಸಾರ ಸೀಮಾಂತಳೂ, ಆನಂದ ರಸ ಸಾಗರಳೂ, ಜಪಾ ಕುಸುಮದ ಕಾಂತಿಯುಳ್ಳವಳೂ, ದಾಳಿಂಬೆ ಹೂ ಬಣ್ಣದ ಸೀರೆಯನ್ನು ಉಟ್ಟಿರುವವಳೂ, ಸರ್ವಾಭರಣ ಭೂಷಿತಳೂ, ಶೃಂಗಾರರಸಕ್ಕೆ ಆಲಯದಂತಿರು ವವಳೂ, ಪಾಶ-ಕುಶ-ಇಕ್ಷು-ಕೋದಂಡ-ಪಂಚ ಬಾಣಗಳಿಂದ ಶೋಭಿಸುತ್ತಿರುವ ಕರಗಳುಳ್ಳವಳೂ ಆದ ಶ್ರೀ ಲಲಿತಾಂಬೆಯು ಅವತರಿಸಿದಳು.

ಲಲಿತಾ ಸಹಸ್ರನಾಮದ ಹಿನ್ನೆಲೆ.
ಶ್ರೀ ಗುರುಭ್ಯೋ ನಮಃ.

ಶ್ರೀ ಲಕ್ಷ್ಮೀನೃಸಿಂಹಾಯ ನಮಃ.

ಶ್ರೀ ರಾಜರಾಜೇಶ್ವರ್ಯೈ ನಮಃ.

ಯ ಏಕೋsವರ್ಣೋ ಬಹುಧಾಶಕ್ತಿಯೋಗಾದ್ ವರ್ಣಾನನೇಕಾನ್ಹ ನಿಹಿತಾರ್ಥೋ ದಧಾತಿ (ಶ್ವೇತಾಶ್ವತರೋಪನಿಷತ್), ಪರತತ್ತ್ವಕ್ಕೆ ನಾಮರೂಪಗಳಾಗಲಿ ಇಲ್ಲ ಹೀಗಿದ್ದರೂ ವರ್ಣರಹಿತವಾದ ಒಂದೇ ತತ್ತ್ವವು ಶಕ್ತಿ ಯೋಗದಿಂದ ವಿವಿಧ ವರ್ಣಗಳನ್ನುಂಟು ಮಾಡುತ್ತದೆ.
ಇರುವ ಒಂದೇ ಶಕ್ತಿ ನಾನಾ ರೂಪ ನಾಮ ಗಳಿಂದ ಭಕ್ತರಿಂದ ಉಪಾಸ್ಯವಾಗಿರುವುದೇಕೆ? : ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ (ಭಗವದ್ಗೀತಾ), ಯಾರು ನನ್ನನ್ನು ಹೇಗೆ ಆಶ್ರಯಿಸುವರೋ ಹಾಗೆಯೇ ಅವರನ್ನು ಅನುಗ್ರಹಿಸುತ್ತೇನೆ, ಅದಕ್ಕಾಗಿ ಭಕ್ತರ ಭಾವದಂತೆ ನಾನಾ ನಾಮಗಳಿಂದ, ರೂಪಗಳಿಂದ ಉಪಾಸ್ಯನಾಗಿರುವುದು.
ಶಬ್ದಾರ್ಥಗಳು ಪರಮಾತ್ಮ ಶಕ್ತಿಯ ಅಭಿವ್ಯಕ್ತಿಯ ರೂಪ, ಪರಮಾತ್ಮ ಶರೀರಿಯಾದರೆ(ಆತ್ಮ), ಶಬ್ದಾರ್ಥಗಳು ಶರೀರವಾಗಿವೆ, ವರ್ಣಗಳಿಂದ ಶಬ್ದಗಳಾಗಿರುವುದರಿಂದ ಪ್ರತಿಯೊಂದು ವರ್ಣದಲ್ಲಿಯೂ ಶಕ್ತಿಯು ಅಂತರ್ಗತವಾಗಿರುವುದು. ಪ್ರತಿಯೊಂದು ವರ್ಣವೂ ಪರಮಾತ್ಮ ಶಕ್ತಿಯ ಪ್ರತೀಕವಾಗಿದೆ, ವರ್ಣಸಮೂಹವಾದ ನಾಮಗಳೆಲ್ಲ ದೇವತಾ ಸ್ವರೂಪವೇ ಆಗಿದೆ ಆದ್ದರಿಂದಲೇ ವೇದಗಳಲ್ಲಿ ದೈವತ್ವವನ್ನು ಕಾಣುವುದು, ನಾಮಪೂಜೆಗೆ ವೈಶಿಷ್ಟ್ಯವಿರುವುದು ಇದರಲ್ಲೆ.

ಉಪಾಸನೆಯಲ್ಲಿ 1.ದ್ವಾದಶ, 2.ಅಷ್ಟೋತ್ತರ, 3.ತ್ರಿಶತಿ ಹಾಗೂ 4. ಸಹಸ್ರನಾಮ ಪೂಜೆಗಳು ಮಹತ್ವವನ್ನು ಪಡೆದಿವೆ.
ಮಾನವನು ಪರತತ್ತ್ವವನ್ನು ರೂಪ ಗುಣಗಳಿಂದ ಕೂಡಿದುದಾಗಿ ಉಪಾಸಿಸ ಬೇಕಾದರೆ ಮಾತೃಭಾವ ಕ್ಕಿಂತ ಉದಾತ್ತವೂ ಉದಾರವೂ ಹೃದಯಂಗಮವೂ ಆದ ಬೇರೆ ಇನ್ನಾವ ಕಲ್ಪನೆಯಿರುವುದು? ಆದ ಕಾರಣ ಯೋಗಿಗಳೂ ಉಪಾಸಕರೂ ಮಾತೃ ಭಾವದಿಂದಲೆ ಪರಮಾತ್ಮನನ್ನು ಕಾಣುತ್ತಾರೆ, ಆ ಮಾತೃಭಾವವೇ ಶ್ರೀಮಾತಾ ಶ್ರೀಮಹಾರಾಜ್ಞಿಯೆಂದು, ಲಲಿತಾಂಬೆಯೆಂದು ಉಪಾಸಿಸಿರು, ಅದಕ್ಕಾಗಿ ಲಲಿತಾ ಸಹಸ್ರನಾಮವನ್ನು ಅರ್ಥಸಹಿತವಾಗಿ ನೀಡುವ ಪ್ರಯತ್ನ ನಮ್ಮದು, ಅರ್ಥಾನುಸಂಧಾನ ಸಹಿತವಾಗಿ ಮಂತ್ರಗಳ ಅನುಷ್ಠಾನ ನಡೆಯುವಂತಾಗಬೇಕು, ನಮ್ಮೀ ಪ್ರಯತ್ನಕ್ಕೆ ಲಲಿತಾಂಬೆಯ ಆಶಿರ್ವಾದವೂ ಲಭಿಸಲೆಂದು ಪ್ರಾರ್ಥಿಸೋಣ.

ಲಲಿತಾ ಸಹಸ್ರನಾಮದ ಹಿನ್ನೆಲೆ – 2 : ಯಜ್ಞಕುಂಡ*ದಲ್ಲಿ ಉತ್ಪನ್ನವಾದ ಚಕ್ರಾಕಾರದ ಮಧ್ಯೆ ಅವತರಿಸಿದ ದೇವಿಯು ದೇವತೆಗಳ ಪ್ರಾರ್ಥನೆಯಂತೆ ಭಂಡಾಸುರನ ನಾಶಕ್ಕೆ ಸಮ್ಮತಿಸಿದಳು, ಶಿವನನ್ನು ವರಿಸಿ ಮಹಾರಾಜ್ಞಿಯಾದಳು. ಅನಂತರ ಪರಬ್ರಹ್ಮ ಸ್ವರೂಪಿಣಿಯು ಭಂಡಾಸುರನನ್ನು ಇತರ ದೈತ್ಯರನ್ನು ಕೊಂದು ಶೋಣಿತಪುರವನ್ನು ನಾಶ ಮಾಡಿದಳು.

ದೇವತೆಗಳು ದೇವಿಯನ್ನು ಸ್ತುತಿಸಿ ಪತಿ ಮೃತ್ಯುವಿನಿಂದ ನೊಂದಿರುವ ರತಿಯನ್ನು ಅನುಗ್ರಹಿಸ ಬೇಕೆಂದು ಬೇಡಿಕೊಂಡರು, ಕರುಣಾಮಯಿಯಾದ ದೇವಿಯು ರತಿಯ ದುಃಖವನ್ನ ಸಹಿಸಲಾರದೆ ತನ್ನ ಕೃಪಾಕಟಾಕ್ಷದಿಂದ ಮನ್ಮಥನನ್ನು ಪುನಃ ಬದುಕಿಸಿದಳು, ಅನಂತರ ವಿಶ್ವಕರ್ಮನು ಮತ್ತು ಮಯನು ಮೇರುಪರ್ವತದ ಮಧ್ಯಶಿಖರದಲ್ಲಿ ದೇವಿಗಾಗಿ ಶ್ರೀಪುರವೆಂಬ ಪಟ್ಟಣವನ್ನು ನಿರ್ಮಿಸಿದರು, ಶ್ರೀಪುರದಲ್ಲಿ ಚಿಂತಾಮಣಿಗೃಹ ವೆಂಬ ಅರಮನೆಯಿರುವುದು, ಇದರ ಮಧ್ಯದಲ್ಲಿ ಬಿಂದು ಪೀಠವೆಂದು ಪ್ರಸಿದ್ಧವಾದ ದೇವಿಯ ಪೀಠವಿದೆ.
ಆ ಮಹಾಪೀಠದಲ್ಲಿ ಶ್ರೀದೇವಿಯ ಮಂಚರತ್ನವು ವಿರಾಜಿಸುತ್ತಿರುವುದು, ಬ್ರಹ್ಮ-ವಿಷ್ಣು-ಈಶ್ವರ-ಮಹೇಶ್ವರರೇ ಇದರ ನಾಲ್ಕು ಕಾಲುಗಳು, ಸದಾಶಿವನೇ ಈ ಮಂಚದ ಹಲಗೆ, ಇದರ ಮೇಲೆ ಪೂರ್ವ ದಿಙ್ಮುಖನಾಗಿ ಭಗವಂತನಾದ ಕಾಮೇಶ್ವರ ನು ಕುಳಿತಿರುವನು, ಆ ಕಾಮೇಶ್ವರನ ಅಂಕದ ಮೇಲೆ ಸದಾ ಷೋಡಶ ವರ್ಷದವಳಾದ ಶ್ರೀಲಲಿತಾಂಬಿಕೆಯು ಕುಳಿತಿರುವಳು.
ಶ್ರೀಚಕ್ರವು ರೇಖಾಕೃತಿಯಿಂದ ಶ್ರೀಪುರವನ್ನು ರೂಪಿಸಿದೆ, (ಸೌಂದರ್ಯಲಹರಿಯಲ್ಲಿ ಇದೆ ರೀತಿ ಶಂಕರಾಚಾರ್ಯರು ವರ್ಣಿಸಿದ್ದಾರೆ), ಶ್ರೀ ಶಂಕರಾಚಾರ್ಯರು, ಭಗವತಿಯ ಕರುಣಾ ಮೃತವನ್ನು ವರ್ಣಿಸುತ್ತಾ, ಭಕ್ತಿಯಿಂದ ಅಮ್ಮಾ ಎಂದರೆ ಸಾಕು, ಕರುಣೆಯ ವರ್ಷಧಾರೆಯನ್ನು ಸುರಿಸಲು ಭಗವತಿ ಲಲಿತಾ ಮಹಾತ್ರಿಪುರ ಸಂದರಿ ಕಾಯುತ್ತಾ ಇರುತ್ತಾಳಂತೆ, ಶ್ರೀದೇವಿಯ ಅನುಗ್ರಹ ಎಂತಹದ್ದೆಂದರೇ, ಏಕ ಕಾಲದಲ್ಲಿಯೇ ಭೋಗವನ್ನೂ – ಮೋಕ್ಷವನ್ನೂ ಎರಡನ್ನೂ ಕರುಣಿಸುವವಳು.
ಇಂತಹ ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಲು ಇರುವ ಮಾರ್ಗಗಳಲ್ಲಿ, ಶ್ರೀವಿದ್ಯಾ ಉಪದೇಶದ ಮೂಲಕ, ಶ್ರೀಚಕ್ರ ವನ್ನು ಅರ್ಚಿಸುವುದು ಒಂದಾದರೆ, ಸೌಂದರ್ಯ ಲಹರೀ ಮತ್ತು ಲಲಿತಾ ಸಹಸ್ರ ನಾಮ ಪಠಿಸುವುದು ಅತ್ಯಂತ ಸುಲಭವೂ ಉತ್ಕೃಷ್ಟವೂ ಆದದ್ದು, ಇಂತಹ ಘನವಾದ ಲಲಿತಾ ಸಹಸ್ರ ನಾಮವನ್ನು ಅರ್ಥಸಹಿತ ತಿಳಿದು ಭಗವತಿಯ ಅನುಗ್ರಹಕ್ಕೆ ಪಾತ್ರರಾಗೋಣ.
*****


ಲಲಿತಾಸಹಸ್ರನಾಮದ   ಸಹಸ್ರನಾಮ ಮಹಿಮೆ

ಶ್ರೀ ಲಲಿತಾಸಹಸ್ರನಾಮಸ್ತೋತ್ರವು ಬ್ರಹ್ಮಾಂಡಪುರಾಣದ ಉತ್ತರಖಂಡದ ಹಯಗ್ರೀವ-ಅಗಸ್ತ್ಯಸಂವಾದದಲ್ಲಿದೆ.

ಇದರಲ್ಲಿ ಪೀಠಿಕೆ, ಸಹಸ್ರನಾಮ ಮತ್ತು ಫಲಶ್ರುತಿ ಎಂಬ ಮೂರು ಭಾಗಗಳಿವೆ. ಆ ಪರಬ್ರಹ್ಮಸ್ವರೂಪಿಣಿಯೇ ಉದ್ಯದ್ಭಾನುವಿಗೆ ಸಮನಾದ ಕಾಂತಿಯಿಂದೊಡಗೂಡಿ, ದಾಳಿಂಬೆ ಬಣ್ಣದ ಸೀರೆಯನ್ನುಟ್ಟು, ಸರ್ವಾಭರಣ ಭೂಷಿತೆಯಾಗಿ, ಪಾಶಾಂಕುಶ-ಇಕ್ಷುಕೋದಂಡ ಬಾಣಗಳಿಂದೊಡಗೂಡಿ ಆನಂದ ಸಾಗರಳಾದ ಶ್ರೀ ಲಲಿತಾ ತ್ರಿಪುರಸುಂದರಿಯಾಗಿ ಹದಿನಾರು ವರುಷದ ಯುವತಿಯಾಗಿ ಇಂದ್ರಾದಿದೇವತೆಗಳು ಮಾಡಿದ ಮಹಾಯಜ್ಞದ ಚಿದಗ್ನಿಕುಂಡದಿಂದ ಭಂಡಾಸುರನೆಂಬ ದುಷ್ಟದೈತ್ಯನನ್ನು ಸಂಹರಿಸಲು ಲೋಕಾನುಗ್ರಹಕ್ಕಾಗಿ ದೇವತೆಗಳ ಪ್ರಾರ್ಥನೆಯಂತೆ ಆವಿರ್ಭವಿಸಿದಳು.


ಲಲಿತಾಸಹಸ್ರನಾಮ ಸ್ತೋತ್ರವನ್ನು ಜಲಕುಂಭವನ್ನು ಮುಟ್ಟಿ ಜಪಿಸಿ ಅದರ ನೀರನ್ನು ಬಾಲಗ್ರಹಪೀಡಿತರ ಮೇಲೆ ಪ್ರೋಕ್ಷಿಸಿದರೆ ಪಿಶಾಚಿಗಳು ಬಿಟ್ಟೋಡುತ್ತವೆ.

ಪ್ರತಿದಿನ ಸಹಸ್ರನಾಮದಿಂದ ಮಂತ್ರಿತವಾದ ಬೆಣ್ಣೆಯನ್ನು ಬಂಜೆಯು ಭಕ್ಷಿಸಿದರೆ ಪುತ್ರವತಿಯಾಗುವಳು. 


ಅನೇನ ಸದೃಶಂ ಸ್ತೋತ್ರಂ ನ ಭೂತಂ ನ ಭವಿಷ್ಯತಿ |
ಸರ್ವರೋಗ ಪ್ರಶಮನಂ ಸರ್ವಸಂಪತ್ ಪ್ರವರ್ಧನಮ್ ||

ಈ ಲಲಿತಾಸಹಸ್ರನಾಮಕ್ಕೆ ಸಮಾನವಾದ ಸ್ತೋತ್ರವು ಹಿಂದೆ ಇರಲಿಲ್ಲ. ಇನ್ನು ಮುಂದೆಯೂ ಇರುವದಿಲ್ಲ. 

ಇದು ಸರ್ವರೋಗಗಳನ್ನೂ ಭವರೋಗವೂ ಸೇರಿದಂತೆ ನಿವಾರಿಸಿ ಸರ್ವಸಂಪತ್ತನ್ನೂ ವರ್ಧಿಸುತ್ತದೆ. ಅಪಮೃತ್ಯು, ಕಾಲಮೃತ್ಯು, ಸರ್ವಜ್ವರಗಳನ್ನು ನಿವಾರಿಸುತ್ತದೆ; ದೀರ್ಘಾಯುಷ್ಯವನ್ನೂ ನೀಡುತ್ತದೆ. 

ಮುಹ್ಯನ್ತಿ ಕಾಮವಶಗಾ ಮೃಗಾಕ್ಷ್ಯಸ್ತಸ್ಯ ವೀಕ್ಷಣಾತ್ ।
ಯಃ ಪಠೇನ್ನಾಮಸಾಹಸ್ರಂ ಜನ್ಮಮಧ್ಯೇ ಸಕೃನ್ನರಃ

ಯಾರು ಒಂದು ಪಕ್ಷ ಪಠಿಸುವರೋ ಅಂತಹವರ ವೀಕ್ಷಣಮಾತ್ರದಿಂದ ಮೃಗಾಕ್ಷಿಯರು ವಶರಾಗುತ್ತಾರೆ ಅಂದರೆ ದಾಂಪತ್ಯದಲ್ಲಿ ಅನ್ಯೋನ್ಯತೆಯಿರುತ್ತದೆ.

ವಿಷ್ಣುನಾಮಸಹಸ್ರಾಚ್ಛ ಶಿವನಾಮೈಕಮುತ್ತಮಮ್ |
ಶಿವನಾಮಸಹಸ್ರಾಚ್ಚ ದೇವ್ಯಾ ನಾಮೈಕಮುತ್ತಮಮ್ ||

ವಿಷ್ಣುವಿನ ಸಾವಿರನಾಮಗಳಿಗೆ ಶಿವನ ಒಂದು ನಾಮವು ಸಮ. ಅಂತಹ ಶಿವನ ಸಾವಿರನಾಮಗಳಿಗೆ ಶ್ರೀ ದೇವಿಯ ಒಂದು ನಾಮವು ಸಮ.


ಶ್ರೀ ಲಲಿತಾ ಸಹಸ್ರನಾಮ ಮಹಿಮೇ .. 23 

ಅಯಮಾಯುಷ್ಕರೋ ನಾಮ ಪ್ರಯೋಗಃ ಕಲ್ಪಚೋದಿತಃ ।
ಜ್ವರಾರ್ತಂ ಶಿರಸಿ ಸ್ಪೃಷ್ಟ್ವಾ ಪಠೇನ್ನಾಮಸಹಸ್ರಕಮ್ ॥ 23॥

ಆಯುಷ್ಕರವೆಂಬ ಹೆಸರುಳ್ಳ ಈ ಪ್ರಯೋಗವು ಕಲ್ಪಗಳಲ್ಲಿ (ಪರಶುರಾಮಕಲ್ಪ) ಹೇಳಲ್ಪಟ್ಟಿದ್ದೇ. ಜ್ವರದಿಂದ ಪೀಡಿತನಾದವನ ತಲೆಯನ್ನು ಮುಟ್ಟಿ ಸಹಸ್ರನಾಮವನ್ನು ಪಠಿಸಬೇಕು. 

ತತ್ಕ್ಷಣಾತ್ಪ್ರಶಮಂ ಯಾತಿ ಶಿರಸ್ತೋದೋ ಜ್ವರೋಽಪಿ ಚ ।
ಸರ್ವವ್ಯಾಧಿನಿವೃತ್ತ್ಯರ್ಥಂ ಸ್ಪೃಷ್ಟ್ವಾ ಭಸ್ಮ ಜಪೇದಿದಮ್ ॥ 24॥



ತಕ್ಷಣವೇ ತಲೆನೋವು ಮತ್ತು ಜ್ವರವು ಹೋಗುವುದು. ಸರ್ವವ್ಯಾದಿನಾಶಕ್ಕಾಗಿ ಭಸ್ಮವನ್ನು ಮುತ್ತಿಹೇಳಿ ಹಚ್ಚ ಬೇಕು ಹಣೆಗೆ.

ತಸ್ಯ ಯೇ ಶತ್ರವಸ್ತೇಷಾಂ ನಿಹನ್ತಾ ಶರಭೇಶ್ವರಃ ।
ಯೋ ವಾಽಭಿಚಾರ ಕುರುತೇ ನಾಮಸಾಹಸ್ರಪಾಠಕಮ್ ॥ 34॥

ಸಹಸ್ರನಾಮಪಾಠಕನನ್ನು ಯಾರು ಕ್ರೂಟದೃಷ್ಟಿಯಿಂದ ನೋಡುವರೋ, ಅಂಥವರನ್ನು ಮಾರ್ತಾಂಡಭೈರವನು ಕುರುಡರನ್ನಾಗಿ ಮಾಡುತ್ತಾನೆ. 

ಲಲಿತಾಸಹಸ್ರನಾಮ   ಪಠಿಸುವವರ ಮೇಲೆ ವಾಮಾಚಾರದ ಆಟ ನಡೆಯುವದಿಲ.
******


ಶ್ರೇಷ್ಠತೆಯ ಬಗ್ಗೆ 

ಬ್ರಹ್ಮಾದಿಗಳ ಇಚ್ಛೆಯಂತೆ ಲಾವಣ್ಯವತಿಯಾದ ದೇವಿಯು ಕಾಮೇಶ್ವರನ ರೂಪದಲ್ಲಿದ್ದು ಶಿವನನ್ನು ವರಿಸಿ ಶಿವ ಕಾಮೇಶ್ವರಾಂಕ ಸ್ಥಾಯಿಯಾದಳು. 


ಬ್ರಹ್ಮನೇ ಮಾತೆಗೆ ಕಾಮಾಕ್ಷಿಯೆಂದೂ, ಕಾಮೇಶ್ವರಿಯೆಂದೂ ಬಿರುದುಗಳನ್ನು ಸಮರ್ಪಿಸಿದನು.


ಪುರಾಣಾಂ ಶ್ರೀಪುರಮಿವ ಶಕ್ತೀನಾಂ ಲಲಿತಾ ಯಥಾ |

ಶ್ರೀವಿದ್ಯೋಪಾಸಕಾನಾಂ ಚ ಯಥಾ ದೇವೋ ವರಃ ಶಿವಃ ||
ತಥಾ ನಾಮಸಹಸ್ರೇಷು ವರಮೇತತ್ ಪ್ರಕೀರ್ತಿತಮ್ |

ಪುರಗಳಲ್ಲಿ ಶ್ರೀಪುರವು ಹೇಗೆ ಶ್ರೇಷ್ಠವೋ, ಶಕ್ತಿಗಳಲ್ಲಿ ಶ್ರೀ ಲಲಿತಾಂಬಿಕೆಯು ಹೇಗೋ, ಶ್ರೀವಿದ್ಯೋಪಾಸಕರಲ್ಲಿ ಪರಶಿವನು ಹೇಗೋ, ಹಾಗೆಯೇ ಸಹಸ್ರನಾಮಗಳಲ್ಲಿ ಲಲಿತಾಸಹಸ್ರನಾಮವು ಶ್ರೇಷ್ಠ, ಅಷ್ಟೇ ಅಲ್ಲ ಹರಗ್ರೀವರು ಇನ್ನೂ ಮುಂದುವರೆದು ಹೇಳುತ್ತಾರೆ.


ವಿಷ್ಣುನಾಮಸಹಸ್ರಾಚ್ಛ ಶಿವನಾಮೈಕಮುತ್ತಮಮ್ |

ಶಿವನಾಮಸಹಸ್ರಾಚ್ಚ ದೇವ್ಯಾ ನಾಮೈಕಮುತ್ತಮಮ್ ||

ವಿಷ್ಣುವಿನ ಸಾವಿರನಾಮಗಳಿಗೆ ಶಿವನ ಒಂದು ನಾಮವು ಸಮ. ಅಂತಹ ಶಿವನ ಸಾವಿರನಾಮಗಳಿಗೆ ಶ್ರೀ ದೇವಿಯ ಒಂದು ನಾಮವು ಸಮ. 


ಹೀಗಿರುವಾಗ ಶ್ರೀ ಲಲಿತಾಸಹಸ್ರನಾಮದ ಹಿರಿಮೆ ಮತ್ತು ಗರಿಮೆಯ ಬಗ್ಗೆ ಹೇಳುವದೇನಿದೆ? 


ಅಂತಹ ಮಾತೆಯು 'ಸಮಾನಾಧಿಕ ವರ್ಜಿತ'ಳಾಗಿರವದು ಯುಕ್ತವಾಗಿಯೇ ಇದೆ. 

ಪ್ರಪಂಚಕ್ಕೂ, ಶ್ರೀದೇವಿಗೂ ಇರುವ ಸಂಬಂಧ, ಸಮಯಾಚಾರ, ಭಕ್ತಿ, ಆತ್ಮವಿದ್ಯೆ, ಮಹಾವಿದ್ಯೆ, ಚಂದ್ರವಿದ್ಯೆ, ಶ್ರೀವಿದ್ಯೆ, ಷೋಡಶಾಕ್ಷರೀವಿದ್ಯೆ, ಮಂತ್ರವಿದ್ಯೆ, ನಂದಿವಿದ್ಯೆ, ಯಂತ್ರವಿದ್ಯೆ, ತಂತ್ರವಿದ್ಯೆ, ಕುಂಡಲಿನೀಯೋಗ ಷಟ್ಟಿಕ್ರಗಳಲ್ಲಿ ಶ್ರೀ ದೇವಿಯ ಆವಾಸ, ನಾದ ಬ್ರಹ್ಮನ ವಿಚಾರ, ನಾಲ್ಕು ವಿಧ ವಾಕ್ಕು, ಅಂತರ್ಯಾಗ, ಮುದ್ರೆಗಳು, ಜೀವನ್ಮುಕ್ತಿ ವಿಚಾರ, ಪ್ರಳಲ, ಶ್ರೀ ಗಾಯಿತ್ರೀ, ಸಂಧ್ಯಾ, ದುರ್ಗಾ, ಲಕ್ಷ್ಮೀ, ಸಾವಿತ್ರೀ, ಸರಸ್ವತೀ, ಭೂದೇವಿ, ದಕ್ಷಿಣಾಮೂರ್ತಿ, ನಟೇಶ್ವರಿ, ಮಹಾಕಾಳಿ ಮತ್ತು ಶ್ರೀ ಬಾಲಾಂಬಿಕೆಯರ ಮಹಿಮೆಗಳು ವರ್ಣಿತವಾಗಿವೆ. 


ಶ್ರೀಮಾತಾ ಎಂದು ಆರಂಭವಾಗುವ ಶ್ರೀ ಲಲಿತಾಸಹಸ್ರನಾಮವು ಲಲಿತಾಂಬಿಕಾ - ಎಂದು ಮುಕ್ತಾಯವಾಗುತ್ತದೆ.


ಎರಡನ್ನೂ ಸೇರಿಸಿದರೆ ಶ್ರೀ ಮಾತಾ ಲಲಿತಾಂಬಿಕಾ ಎಂದಾಗುತ್ತದೆ. ಜಗಜ್ಜನನಿ ಎಂದರೆ ಶ್ರೀ ಲಲಿತಾಮಾತೆಯೇ.


ಲಿಲಿತಾ ಎಂಬ ಶಬ್ದಕ್ಕೆ ಲೋಕಾನತೀತ್ಯ ಲಲಿತೆ ಲಲಿತಾ ಅಂದರೆ ಸಕಲಲೋಕಗಳನ್ನೂ ಅತಿಕ್ರಮಿಸಿ ಲೀಲಾಮಾತ್ರಳಾಗಿರುವವಳು ಎಂದು ಪದ್ಮಪುರಾಣದಲ್ಲಿ ಹೇಳಿದೆ.

**********

ಇನ್ನು ಕಡೆಯದಾಗಿ ಫಲಶ್ರುತಿಯ ಕಡೆಗೆ ಸಾಗೋಣ. ಇದು 87 ಶ್ಲೋಕಗಳಿಂದ ಕೂಡಿದ 'ಶ್ರೀ ಲಲಿತಾ ಸಹಸ್ರನಾಮ ಫಲನಿರೂಪಣಮ್' ಎಂಬ ಅಧ್ಯಾಯ

ಫಲ ಶ್ರುತಿ .. 01


ಅನೇನ ಸದೃಶಂ ಸ್ತೋತ್ರಂ ನ ಭೂತಂ ನ ಭವಿಷ್ಯತಿ |

ಸರ್ವರೋಗ ಪ್ರಶಮನಂ ಸರ್ವಸಂಪತ್ ಪ್ರವರ್ಧನಮ್ ||

ಈ ಲಲಿತಾಸಹಸ್ರನಾಮಕ್ಕೆ ಸಮಾನವಾದ ಸ್ತೋತ್ರವು ಹಿಂದೆ ಇರಲಿಲ್ಲ. ಇನ್ನು ಮುಂದೆಯೂ ಇರುವದಿಲ್ಲ. 


ಇದು ಸರ್ವರೋಗಗಳನ್ನೂ ಭವರೋಗವೂ ಸೇರಿದಂತೆ ನಿವಾರಿಸಿ ಸರ್ವಸಂಪತ್ತನ್ನೂ ವರ್ಧಿಸುತ್ತದೆ. ಅಪಮೃತ್ಯು, ಕಾಲಮೃತ್ಯು, ಸರ್ವಜ್ವರಗಳನ್ನು ನಿವಾರಿಸುತ್ತದೆ; ದೀರ್ಘಾಯುಷ್ಯವನ್ನೂ ನೀಡುತ್ತದೆ. 




*ಸರ್ವಾಪಮೃತ್ಯುಶಮನಂ ಕಾಲಮೃತ್ಯುನಿವಾರಣಮ್ ।
ಸರ್ವಜ್ವರಾರ್ತಿಶಮನಂ ದೀರ್ಘಾಯುಷ್ಯಪ್ರದಾಯಕಮ್ ॥ 3॥*

ಇದು ಅಪಮೃತ್ಯುವನ್ನು ತಪ್ಪಿಸುವುದು, ಕಾಲ ಮೃತ್ಯುವನ್ನು ನಿವಾರಿಸುವುದು, ಸರ್ವ ಜ್ವರ ವೇದನೆಯನ್ನು ಉಪಶಮನ ಮಾಡುವುದು ಮತ್ತು ದೀರ್ಘಯುಷ್ಯವನ್ನು ಕೊಡುವುದು.

*ಪುತ್ರಪ್ರದಮಪುತ್ರಾಣಾಂ ಪುರುಷಾರ್ಥಪ್ರದಾಯಕಮ್ ।
ಇದಂ ವಿಶೇಷಾಚ್ಛ್ರೀದೇವ್ಯಾಃ ಸ್ತೋತ್ರಂ ಪ್ರೀತಿವಿಧಾಯಕಮ್ ॥ 4॥*

ಇದು ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕೊಡುವುದು ಮತ್ತು ಪುರುಷಾರ್ಥವನ್ನು ಕೊಡುವುದು. ಈ ಸ್ತೋತ್ರವು ಶ್ರೀ ದೇವಿಗೆ ವಿಶೇಷವಾಗಿ ಪ್ರೀತಿದಾಯಕ ವಾಗಿರುವುದು.

ಜಪೇನ್ನಿತ್ಯಂ ಪ್ರಯತ್ನೇನ ಲಲಿತೋಪಾಸ್ತಿತತ್ಪರಃ ।
ಪ್ರಾತಃ ಸ್ನಾತ್ವಾ ವಿಧಾನೇನ ಕ್ತ್ವಯಾಕರ್ಮ ಸಮಾಪ್ಯ ಚ ॥ 5॥

ಲಲಿತೋಪಾಸಕರು ಇದನ್ನು ನಿತ್ಯವೂ ಯತ್ನದಿಂದ ಜಪಿಸಬೇಕು. ಪ್ರಾತಃ ಕಾಲದಲ್ಲಿ ಸ್ನಾನವನ್ನು ಮಾಡಿ ಸಂದ್ಯಾಕರ್ಮವನ್ನು ವಿಧಿ ಪ್ರಕಾರ ಮುಗಿಸಬೇಕು.

ಪೂಜಾಗೃಹಂ ತತೋ ಗತ್ವಾ ಚಕ್ರರಾಜಂ ಸಮರ್ಚಯೇತ್ ।
ವಿದ್ಯಾಂ ಜಪೇತ್ ಸಹಸ್ರಂ ವಾ ತ್ರಿಶತಂ ಶತಮೇವ ವಾ ॥ 6

ಪೂಜಾಗೃಹವನ್ನು ಅನಂತರ ಪವೇಶಿಸಿ ಶ್ರೀ ಚಕ್ರವನ್ನು ಪೂಜಿಸಬೇಕು. ಅನಂತರ ಅವನು ಪಂಚದಶೀ ಅಥವಾ ಷೋಡಶಿ ವಿದ್ಯೆಯನ್ನು ಸಾವಿರ ಸಲವಾಗಲಿ, ಮುನ್ನೂರು ಸಲವಾಗಲಿ, ಅಥವಾ ನೂರು ಸಲವಾಗಲಿ ಜಪಿಸಬೇಕು.

ರಹಸ್ಯನಾಮಸಾಹಸ್ರಮಿದಂ ಪಶ್ಚಾತ್ಪಠೇನ್ನರಃ ।
ಜನ್ಮಮಧ್ಯೇ ಸಕೃಚ್ಚಾಪಿ ಯ ಏತತ್ಪಠತೇ ಸುಧೀಃ ॥ 7॥

ರಹಸ್ಯವಾದ ಈ ಸಹಸ್ರ ನಾಮವನ್ನು ಯಾವ ಜ್ಞಾನಿಯು ತನ್ನ ಜೀವನಕಾಲ ದಲ್ಲಿ ಒಂದು ಸಲವಾದರೂ ಪಠಿಸುವರೊ.

ತಸ್ಯ ಪುಣ್ಯಫಲಂ ವಕ್ಷ್ಯೇ ಶೃಣು ತ್ವಂ ಕುಮ್ಭಸಮ್ಭವ ।
ಗಂಗಾದಿ ಸರ್ವತೀರ್ಥೇಷು ಯಃ ಸ್ನಾಯಾತ್ಕೋಟಿಜನ್ಮಸು ॥ 8॥

ಉಪಸಕರಿಗೆ ಉಂಟಾಗುವ ಫಲವು ಅಗಸ್ತ್ಯನೆ ಕೇಳು, ಗಂಗಾದಿ ಸರ್ವತೀರ್ಥಗಳಲ್ಲಿ ಕೋಟಿ ಜನ್ಮಗಳಲ್ಲಿ  ಸ್ನಾನ ಮಾಡಿದ ಫಲ.

ಕೋಟಿಲಿಂಗಪ್ರತಿಷ್ಠಾಂ ಚ ಯಃ ಕುರ್ಯಾದವಿಮುಕ್ತಕೇ ।

ಕುರುಕ್ಷೇತ್ರೇ ತು ಯೋ ದದ್ಯಾತ್ಕೋಟಿವಾರಂ ರವಿಗ್ರಹೇ ॥ 9

ಕೋಟಿಂ ಸೌವರ್ಣಭಾರಾಣಾಂ ಶ್ರೋತ್ರಿಯೇಷು ದ್ವಿಜನ್ಮಸು

ಯಃ ಕೋಟಿಂ ಹಯಮೇಧಾನಾಮಾಹರೇದ್ ಗಾತ್ರರೋಧಸಿ ॥ 10॥

ಅವಿಮುಕ್ತಕ್ಷೇತ್ರದಲ್ಲಿ ಕೋಟಿಲಿಂಗ ಪ್ರತಿಷ್ಠೆಯನ್ನು ಮಾಡಿದರೆ, ಕುರು ಕ್ಷೇತ್ರದಲ್ಲಿ ಶ್ರೋತ್ರಿಯರಾದ ಬ್ರಾಹ್ಮಣರಿಗೆ ಕೋಟಿಸಲ ಸುವರ್ಣ ಭಾರಗಳನ್ನು ದಾನಮಾಡಿದರೆ, ಗಂಗಾತಿರದಲ್ಲಿ ಕೋಟಿ ಸಲ ಅಶ್ವಮೇಧಗಳನ್ನು ಮಾಡಿದ ಪುಣ್ಯ ದೊರೋಯುವುದು.


ಆಚರೇತ್ಕೂಪಕೋಟೀರ್ಯೋ ನಿರ್ಜಲೇ ಮರುಭೂತಲೇ ।

ದುರ್ಭಿಕ್ಷೇ ಯಃ ಪ್ರತಿದಿನಂ ಕೋಟಿಬ್ರಾಹ್ಮಣಭೋಜನಮ್ ॥ 11॥

ನೀರಿಲ್ಲದ ಮರುಭೂಮಿಯಲ್ಲಿ ಅನೇಕ ಕೊಳಗಳನ್ನು ತೊಡಿಸಿದರೆ, ದುರ್ಭಿಕ್ಷದಲ್ಲಿ ಕೋಟಿ ಬ್ರಾಹ್ಮಣರಿಗೆ ಪ್ರತಿದಿನವೊ ಭೋಜನ ಹಾಕಿದ ಫಲ.. 


ಶ್ರದ್ಧಯಾ ಪರಯಾ ಕುರ್ಯಾತ್ಸಹಸ್ರಪರಿವತ್ಸರಾನ್ ।

ತತ್ಪುಣ್ಯಂ ಕೋಟಿಗುಣಿತಂ ಲಭೇತ್ಪುಣ್ಯಮನುತ್ತಮಮ್ ॥ 12॥

ರಹಸ್ಯನಾಮಸಾಹಸ್ರೇ ನಾಮ್ರೋಽಪ್ಯೇಕಸ್ಯ ಕೀರ್ತನಾತ್ ।
ರಹಸ್ಯನಾಮಸಾಹಸ್ರೇ ನಾಮೈಕಮಪಿ ಯಃ ಪಠೇತ್ ॥ 13
ತಸ್ಯ ಪಾಪಾನಿ ನಶ್ಯನ್ತಿ ಮಹಾನ್ತ್ಯಪಿ ನ ಸಂಶಯಃ ।
ನಿತ್ಯಕರ್ಮಾನನುಷ್ಠಾನಾನ್ನಿಷಿದ್ಧಕರಣಾದಪಿ ॥ 14॥

ಈ ಹಿಂದೆ ಹೇಳಿದ ಪುಣ್ಯ ಕಾರ್ಯಗಳನ್ನು ಒಂದು ಸಾವಿರ ವರ್ಷ ಮಾಡಿದರೆ ಉಂಟಾಗುವ ಪುಣ್ಯವನ್ನು ಉಂಟಾಗುವ ಅಣುತ್ತಮವಾದ ಪುಣ್ಯಕ್ಕೆ ಸಮವಾಗಿರುವುದು. ಯಾರು ತಮ್ಮ ಜೀವನದಲ್ಲಿ ರಹಸ್ಯ ಸಹಸ್ರ ನಾಮದ ಒಂದು ನಾಮವನ್ನಾದ್ರೂ ಪಠಿಸುತ್ತಾನೋ ಅವರ ಮಹಾ ಪಾಪಗಳು ಕೂಡಾ ನಾಶವಾಗುವುವು.


********************
*****

ಫಲಶ್ರುತಿ ಅಥವಾ ಉತ್ತರಭಾಗ

ಹೀಗೆ ಅಗಸ್ತ್ಯನಿಗೆ ಹೇಳುತ್ತಿದ್ದ  ಒಂದು ಸಾವಿರ ನಾಮಗಳ ಉಚ್ಛಾರಣೆಯನ್ನು ಮುಗಿಸಿದ ಹಯಗ್ರೀವನು ಅಗಸ್ತ್ಯನನ್ನು ಸಂಬೋಧಿಸುಸುವುದನ್ನು ಮುಂದುವರೆಸುತ್ತಾನೆ. ಈ ಸಹಸ್ರನಾಮದಲ್ಲಿ ಸರಿಯಾಗಿ ಒಂದು ಸಾವಿರ ನಾಮಗಳಿವೆ ಮತ್ತು ಇದರಲ್ಲಿ ಯಾವುದೇ ನಾಮವು ಪುನರಾವೃತವಾಗಿಲ್ಲ. (ಶಿವ ಸಹಸ್ರನಾಮದಲ್ಲಿ ೧೦೦೮ ನಾಮಗಳಿವೆ ಮತ್ತು ವಿಷ್ಣು ಸಹಸ್ರನಾಮದಲ್ಲಿ ೧೦೦೦ ನಾಮಗಳಿದ್ದು ಅದರಲ್ಲಿ ಅನೇಕ ನಾಮಗಳು ಪುನರಾವೃತವಾಗಿವೆ). ಲಲಿತಾ ಸಹಸ್ರನಾಮವು ಅತ್ಯಂತ ನಿಗೂಢವಾಗಿದ್ದು ಲಲಿತಾಂಬಿಕೆಯು ಈ ಸಹಸ್ರನಾಮದ ಕುರಿತು ಬಹಳ ಅಕ್ಕರೆಯುಳ್ಳವಳಾಗಿದ್ದಾಳೆ. ಯಾವುದೇ ಮಂತ್ರವನ್ನು ರಹಸ್ಯಾತ್ಮಕವಾದದ್ದು ಎಂದು ಪರಿಗಣಿಸಲಾಗುತ್ತದೆ; ಅದರೊಳಗೆ ಅಡಕವಾಗಿರುವ ಬೀಜಾಕ್ಷರಗಳಿಂದಾಗಿ. ಲಲಿತಾ ಸಹಸ್ರನಾಮದ ಪ್ರತಿಯೊಂದು ನಾಮದಲ್ಲೂ ರಹಸ್ಯವಾದ ಬೀಜಾಕ್ಷರಗಳು ಹುದುಗಿವೆ ಎಂದು ಹೇಳಲಾಗುವುದರಿಂದ ಸಂಪೂರ್ಣ ಸಹಸ್ರನಾಮವು ಮಂತ್ರದ ಸ್ಥಾನವನ್ನು ಪಡೆಯುತ್ತದೆ 

ಲಲಿತಾ ಸಹಸ್ರನಾಮವನ್ನು ಉಚ್ಛರಿಸುವುದರಿಂದ ಕೆಳಗಿನ ಫಲಗಳು ದೊರೆಯುತ್ತವೆ: 
೧) ಇದು ಸರ್ವರೋಗಗಳನ್ನು ನಾಶ ಮಾಡವುದು ಮತ್ತು ಸರ್ವವಿಧ ಸಂಪತ್ತನ್ನು ಹೆಚ್ಚಿಸುವುದು, 
೨) ಇದು ಅಪಮೃತ್ಯುಗಳನ್ನು ತಪ್ಪಿಸುವುದು, ಅಪಘಾತಗಳನ್ನು ನಿವಾರಿಸುವುದು, ಸರ್ವ ಜ್ವರವೇದನೆಯನ್ನು ಉಪಶಮನ ಮಾಡವುದು. 
೩) ಇದು ಮಕ್ಕಳಿಲ್ಲದವರಿಗೆ ಉತ್ತಮ ಸಂತಾನವನ್ನು ಕರುಣಿಸುತ್ತದೆ ಮತ್ತು ಪುರುಷಾರ್ಥವನ್ನು ಕೊಡುವುದು. 

ವಾಚನದ ವಿಧಾನ:
ಲಲಿತೋಪಾಸಕನು ಇದನ್ನು ನಿತ್ಯವೂ ಪ್ರಯತ್ನಪೂರ್ವಕವಾಗಿ ಮಾಡಬೇಕು. ಪ್ರಾತಃಕಾಲದಲ್ಲಿ ಸ್ನಾನವನ್ನು ಮಾಡಿ ಸಂಧ್ಯಾದಿಕರ್ಮಗಳನ್ನು ವಿಧಿಪ್ರಕಾರ ಮುಗಿಸಿ, ಶ್ರೀ ಚಕ್ರದ ಅರ್ಚನೆಯನ್ನು ಮಾಡಬೇಕು. ಶ್ರೀ ಚಕ್ರವನ್ನು ಪೂಜಿಸಿದ ನಂತರ ಒಬ್ಬನು ಪಂಚದಶೀ (ಷೋಡಶೀ) ಮಂತ್ರಗಳನ್ನು ಸಾವಿರ ಸಲವಾಗಲಿ, ಮುನ್ನೂರು ಸಲವಾಗಲಿ ಅಥವಾ ನೂರು ಸಲವಾಗಲಿ ಜಪಿಸಬೇಕು. ನಿಗದಿತ ಸಂಖ್ಯೆಯ ಮಂತ್ರ ಜಪದ ಬಳಿಕ ಒಬ್ಬನು ಈ ಸಹಸ್ರನಾಮವನ್ನು ಪಠಿಸಬೇಕು. ಸಹಸ್ರನಾಮವು ಸಂಪೂರ್ಣಗೊಂಡ ಮೇಲೆ ಒ‌ಬ್ಬನು ಲಲಿತಾಂಬಿಕೆಗೆ ಪುಷ್ಪಗಳನ್ನು ಸಮರ್ಪಿಸಬೇಕು. ಒಂದು ವೇಳೆ ಒಬ್ಬನು ಮಂತ್ರ ಜಪ ಅಥವಾ ಶ್ರೀ ಚಕ್ರೋಪಾಸನೆಯ ದೀಕ್ಷೆಯನ್ನು ಪಡೆಯದಿದ್ದಲ್ಲಿ ಅವನು ಕೇವಲ ಈ ಸಹಸ್ರನಾಮವೊಂದನ್ನೇ ಪಠಿಸಬಹುದು. 

ಒಬ್ಬನು ಜೀವಿತಕಾಲದಲ್ಲಿ ಒಂದೇ ಒಂದು ಬಾರಿ ಈ ಸಹಸ್ರನಾಮವನ್ನು ಪಠಿಸಿದರೆ ಉಂಟಾಗುವ ಫಲಗಳು ಹೀಗಿವೆ:
೧) ಗಂಗಾದಿ ಸರ್ವತೀರ್ಥಗಳಲ್ಲಿ ಕೋಟಿ ಜನ್ಮಗಳಲ್ಲಿ ಸ್ನಾನ ಮಾಡುವುದರಿಂದ ದೊರೆಯುವ ಫಲಕ್ಕಿಂತ ಅಧಿಕ ಫಲವನ್ನು ಪಡೆಯುತ್ತಾನೆ.
೨) ಕಾಶಿಯಲ್ಲಿ ಕೋಟಿ ಲಿಂಗಗಳನ್ನು ಪ್ರತಿಷ್ಠಾಪಿಸುವುದಕ್ಕಿಂತ ಹೆಚ್ಚಿನ ಪುಣ್ಯವನ್ನು ಪಡೆಯುತ್ತಾನೆ.
೩) ಕುರುಕ್ಷೇತ್ರದಲ್ಲಿ ಸೂರ್ಯ ಗ್ರಹಣದ ಸಮಯದಲ್ಲಿ ಶ್ರೋತ್ರೀಯರಾದ ಬ್ರಾಹ್ಮಣರಿಗೆ ಕೋಟಿ ಸಲ ಕೋಟಿ ಸುವರ್ಣ ಭಾರಗಳನ್ನು ದಾನ ಮಾಡಿ ಲಭಿಸುವ ಪುಣ್ಯಕ್ಕಿಂತ ಅಧಿಕವಾದ ಪುಣ್ಯವು ದೊರೆಯು‌ತ್ತದೆ.
೪) ಗಂಗೆಯ ತಟದಲ್ಲಿ ಮಾಡುವ ಕೋಟಿ ಅಶ್ವಮೇಧಯಾಗಕ್ಕಿಂತ ಅಧಿಕವಾದ ಪುಣ್ಯವು ಲಭಿಸುತ್ತದೆ.
೫) ಸಹಸ್ರನಾಮದಲ್ಲಿನ ಯಾವುದಾದರೂ ಒಂದು ನಾಮವನ್ನು ಉಚ್ಛರಿಸಿದರೂ ಸಹ ಅವನ ಮಹಾಪಾಪಗಳು ನಾಶವಾಗುವುವು.
೬) ಸಹಸ್ರನಾಮದ ಒಂದು ನಾಮಕ್ಕೆ ಪಾತಕ ನಾಶಮಾಡಲು ಇರುವ ಶಕ್ತಿಯನ್ನು ಹದಿನಾಲ್ಕು ಲೋಕಗಳ ಸಮಸ್ತ ಜೀವರಾಶಿಗಳೂ ತಮ್ಮ ಪಾಪಾಚರಣೆಯಿಂದ ನಿವಾರಿಸಲಾರವು. 
೭) ಯಾವನು ಪಾಪನಾಶವನ್ನು ಮಾಡಿಕೊಳ್ಳಲು ಸಹಸ್ರನಾಮವನ್ನು ಬಿಟ್ಟು ಇತರೇ ಪ್ರಾಯಶ್ಚಿತ್ತ ಕರ್ಮಗಳನ್ನು ಆಶ್ರಯಿಸುವನೋ ಅವನು ಶೀತವನ್ನು ಹೋಗಲಾಡಿಸಿಕೊಳ್ಳಲು ಹಿಮಾಲಯವನ್ನು ಆಶ್ರಯಿಸಿದ ಮನುಷ್ಯನಂತೆ. 
೮) ಒಬ್ಬನು ಈ ಸಹಸ್ರನಾಮವನ್ನು ನಿತ್ಯವೂ ಪಠಿಸುತ್ತಿದ್ದರೆ ಲಲಿತಾಂಬಿಕೆಯು ಅವನ ಬಗೆಗೆ ಅತೀವ ಸಂತೋಷವನ್ನು ಹೊಂದಿ ಅವನ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ. ಈ ಸಹಸ್ರನಾಮವನ್ನು ಒಬ್ಬನು ನಿತ್ಯವೂ ಪಠಿಸದೇ ಇದ್ದರೆ ಅವನನ್ನು ಭಕ್ತನೆಂದು ಪರಿಗಣಿಸಲಾಗದು ಎಂದು ಹೇಳಲಾಗುತ್ತದೆ. ಒಬ್ಬನು ಭಕ್ತನೆನಿಸಿಕೊಳ್ಳಬೇಕಾದರೆ ತಾನು ಪೂಜಿಸುವ ದೈವದ ಬಗೆಗೆ ಅವನಿಗೆ ಎಣೆಯಿಲ್ಲದಷ್ಟು ಪ್ರೀತಿ ಇರಬೇಕು. ಈ ಸಹಸ್ರನಾಮವನ್ನು ನಿತ್ಯವೂ ಸಂಪೂರ್ಣವಾಗಿ ಪಠಿಸಿದರೆ ಮಾತ್ರ ಲಲಿತಾಂಬಿಕೆಯು ಅಂತಹ ಭಕ್ತಿಯನ್ನು ಹುಟ್ಟುಹಾಕುತ್ತಾಳೆ.  
೯) ಒಬ್ಬನಿಗೆ ಇದನ್ನು ನಿತ್ಯವೂ ಪಠಿಸಲು ಆಗದಿದ್ದರೆ ಅವನು ಇದನ್ನು ಕಡೇಪಕ್ಷ ಹಬ್ಬ ಹರಿದಿನಗಳಲ್ಲಾದರೂ ಪಠಿಸಬೇಕು. ಮುಖ್ಯವಾದ ದಿವಸಗಳೆಂದರೆ, ಸಂಕ್ರಾಂತಿ ಅಥವಾ ವಿಷುವತ್ಸಂಕ್ರಾಂತಿಯಲ್ಲಿ, ಉತ್ತಾರಾಯಣ ಹಾಗು ದಕ್ಷಿಣಾಯನ ಪುಣ್ಯಕಾಲ, ಮೊದಲಾದವುಗಳು. ಸಹಸ್ರನಾಮವನ್ನು ಪಠಿಸಲು ಇತರೇ ಶುಭದಿನಗಳೆಂದರೆ ಅಷ್ಟಮೀ, ನವಮೀ ಮತ್ತು ಚತುರ್ದಶೀ ತಿಥಿಗಳು ಮತ್ತು ಶುಕ್ರವಾರಗಳು. 
೧೦) ಎಲ್ಲದಕ್ಕಿಂತ ಹೆಚ್ಚು ಪ್ರಶಸ್ತವಾದ ಸಮಯವು ಹುಣ್ಣಿಮೆಯಾಗಿದೆ. ಪೂರ್ಣ ಚಂದ್ರನ ದರ್ಶನವನ್ನು ಪಡೆದ ನಂತರ ಒಬ್ಬರು ಲಲಿತಾಂಬಿಕೆಯನ್ನು ಚಂದ್ರಬಿಂಬದಲ್ಲಿ ಧ್ಯಾನಿಸಿ ಪಂಚೋಪಚಾರಗಳಿಂದ (ಗಂಧ, ಪುಷ್ಪ, ದೀಪ, ಧೂಪ, ನೈವೇದ್ಯ)  ಶ್ರೀ ಚಕ್ರವನ್ನು ಪೂಜಿಸಿ ಈ ಸಹಸ್ರನಾಮವನ್ನು ಪಠಿಸಿದಲ್ಲಿ ಅವರ ಸರ್ವರೋಗಗಳು ಪರಿಹಾರವಾಗಿ ಅವರು ದೀರ್ಘಾಯು‌ಷ್ಯವನ್ನು ಪಡೆಯುತ್ತಾರೆ.
೧೧) ತನ್ನ ಹಾಗು ತನ್ನ ಸಂಗಾತಿಯ ಮತ್ತು ಮಕ್ಕಳ ಜನ್ಮ ನಕ್ಷತ್ರಗಳಿರುವ ದಿನಗಳೂ ಸಹ ಲಲಿತಾ ಸಹಸ್ರನಾಮ ಪಠಣಕ್ಕೆ ಅತ್ಯಂತ ಪ್ರಶಸ್ತ ದಿನಗಳೆಂದು ಪರಿಗಣಿತವಾಗಿವೆ. 

ಇತರೇ ಒಳಿತುಗಳು:
೧) ಪರಶುರಾಮಕಲ್ಪದಲ್ಲಿ ಹೇಳಿರುವಂತೆ ಸರ್ವರೋಗನಾಶಕ್ಕಾಗಿ ಮತ್ತು ದೀರ್ಘಾಯುಸ್ಸಿಗಾಗಿ ಆಯಷ್ಕರವೆಂಬ ಪೂಜಾ  ಪದ್ಧತಿಯಂತೆ, ಜ್ವರದ ತಾಪದಿಂದ ಬಳಲುತ್ತಿರುವವರ ತಲೆಯ ಮೇಲೆ ಕೈಯಿರಿಸಿ ಲಲಿತಾ ಸಹಸ್ರನಾಮದ ಪಠಣವನ್ನು ಕೈಗೊಂಡಲ್ಲಿ ಅವರ ದೇಹದ ಉಷ್ಣತೆಯು ಶಮನಗೊಂಡು ಇತರೇ ವಿಧವಾದ ಬಾಧೆಗಳು ನಾಶವಾಗುತ್ತವೆ. 
೨) ಭಸ್ಮದ ಮೇಲೆ ಕೈಯಿರಿಸಿ ಈ ಸಹಸ್ರನಾಮವನ್ನು ಪಠಿಸಿದ ನಂತರ ಆ ಪವಿತ್ರ ಭಸ್ಮವನ್ನು ಯಾತನೆಯಿಂದ ನರಳುತ್ತಿರುವವರ ದೇಹಕ್ಕೆ ಲೇಪಿಸಿದಲ್ಲಿ ಅವರ ಯಾತನೆಗಳು ಕಡಿಮೆಯಾಗುತ್ತವೆ.
೩) ಒಂದು ವೇಳೆ ಒಬ್ಬನು ಗ್ರಹದೋಷಗಳಿಂದ ಪೀಡಿತನಾಗಿದ್ದರೆ, ಕುಂಭದಲ್ಲಿ ನೀರನ್ನು ಸಹಸ್ರನಾಮದಿಂದ ಸಂಮಂತ್ರಿಸಿ ಪ್ರೋಕ್ಷಿಸಿದಲ್ಲಿ ಬಾಲಗ್ರಹ, ದುಷ್ಟಸ್ಥಾನದಲ್ಲಿರುವ ನವಗ್ರಹಗಳ ದೋಷಗಳು, ಪಿಶಾಚಪೀಡೆಗಳು ದೂರವಾಗುತ್ತವೆ. 
೪) ಮಕ್ಕಳಿಲ್ಲದವರಿಗೆ, ಈ ಸಹಸ್ರನಾಮದಿಂದ ಪವಿತ್ರಗೊಂಡ ನವನೀತವನ್ನು (ಬೆಣ್ಣೆ) ತಿನ್ನಲು ಕೊಟ್ಟರೆ ಅವರಿಗೆ ಪುತ್ರಲಾಭವಾಗುವುದು. 
೫) ಭಗವಾನ್ ಶರಭೇಶ್ವರನು, ಯಾರು ಈ ಸಹಸ್ರನಾಮವನ್ನು ನಿತ್ಯವೂ ಪಠಿಸುತ್ತಾರೆಯೋ ಅವರ ಶತ್ರುಗಳನ್ನು ಸರ್ವನಾಶ ಮಾಡುತ್ತಾನೆ.
೬) ಈ ಸಹಸ್ರನಾಮವನ್ನು ನಿತ್ಯವೂ ಜಪಿಸುವವರ ಮೇಲೆ ಉಂಟಾಗುವ ದುಷ್ಟ ಶಕ್ತಿಗಳ ಪೀಡನೆಯನ್ನು ‘ಪ್ರತ್ಯಂಗಿರಾ ದೇವಿ’ಯು ನಾಶಮಾಡುತ್ತಾಳೆ. ಪ್ರತ್ಯಂಗಿರಾ ದೇವಿಯು ಶರಭೇಶ್ವರನ ಸಂಗಾತಿಯಾಗಿದ್ದಾಳೆ. 
೭) ಈ ಸಹಸ್ರನಾಮವನ್ನು ಪಠಿಸುವವರನ್ನು ಕ್ರೂರದೃಷ್ಟಿಯಿಂದ ನೋಡಿದವರನ್ನು ಮಾರ್ತಾಂಡ ಭೈರವನು (ನಾಮ ೭೮೫) ಕುರಡನನ್ನಾಗಿಸುತ್ತಾನೆ.
೮) ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವವರ ಸಂಪತ್ತನ್ನು ಯಾರಾದರೂ ಅಪಹರಿಸುವುದಾಗಲಿ ಅಥವಾ ಇತರೇ ವಿಧಾನಗಳ ಮೂಲಕ ಹಾನಿಯುಂಟು ಮಾಡಿದರೆ ಅವರನ್ನು ಕ್ಷೇತ್ರಪಾಲನು (ನಾಮ ೩೪೪) ಸಂಹರಿಸುತ್ತಾನೆ. 
೯) ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವವರೊಂದಿಗೆ ಯಾರಾದರೂ ಅನಗತ್ಯವಾದ ವಾದವಿವಾದಕ್ಕಿಳಿದರೆ ನಕುಲೀಶ್ವರೀ ದೇವಿಯು ಅಂತಹ ವ್ಯಕ್ತಿಯ ವಾಕ್ಕನ್ನು (ಮಾತನ್ನು) ನಿಷ್ಪ್ರಯೋಜನಗೊಳಿಸುತ್ತಾಳೆ. ನಕುಲೀಶ್ವರೀ ದೇವಿಯನ್ನು ನವಾವರಣದಲ್ಲೂ ಪೂಜಿಸಲಾಗುತ್ತದೆ ಮತ್ತು ಈಕೆಯು ಮಂತ್ರಿಣೀ ದೇವಿ ಎಂದು ಕರೆಯಲ್ಪಡುವ ಶ್ಯಾಮಲಾ ದೇವಿಯ (ನಾಮ ೬೯, ೭೫) ಸಹಾಯಕಿಯಾಗಿದ್ದಾಳೆ. 
೧೦) ಈ ಲಲಿತಾ ಸಹಸ್ರನಾಮವನ್ನು ನಿತ್ಯವೂ ಜಪಿಸುವವರ ಮೇಲೆ ಶತ್ರುತ್ವವನ್ನು ಒಬ್ಬ ರಾಜನೇ ತೆಳೆದಿದ್ದರೂ ಸಹ ಅವನ ಸೈನ್ಯವನ್ನು ಲಲಿತಾಂಬಿಕೆಯ ಸೇನಾ ಪ್ರಮುಖಳಾಗಿರುವ ದಂಡಿನೀ ದೇವಿಯೇ (ವಾರಾಹೀ - ನಾಮ ೭೦, ೭೬) ಸ್ವಯಂ ನಾಶಪಡಿಸುತ್ತಾಳೆ; ಈ ವಿಷಯವಾಗಿ ಅವಳಲ್ಲಿ ಭಕ್ತನು ಬೇಡದಿದ್ದರೂ ಸಹ ಮತ್ತು ಅದಕ್ಕೆ ಲಲಿತಾಂಬಿಕೆಯ ಆಜ್ಞೆಯಿಲ್ಲದಿದ್ದರೂ ಸಹ. 
೧೧) ಯಾರು ಈ ಸಹಸ್ರನಾಮವನ್ನು ಕನಿಷ್ಠ ಆರು ತಿಂಗಳ ಕಾಲ ನಿತ್ಯವೂ ಪಠಿಸುತ್ತಾರೆಯೋ ಅವರ ಮನೆಯಲ್ಲಿ ಲಕ್ಷ್ಮೀದೇವಿಯು ಚಾಂಚಲ್ಯರಹಿತಳಾಗಿ ಸ್ಥಿರವಾಗಿ ನಿಲ್ಲುತ್ತಾಳೆ.  
೧೨) ಯಾರು ಈ ಲಲಿತಾ ಸಹಸ್ರನಾಮವನ್ನು ಒಂದು ತಿಂಗಳ ಕಾಲ ತ್ರಿಕಾಲವೂ ಪಠಿಸುತ್ತಾರೋ ಅಂತಹವರ ನಾಲಿಗೆಯ ಮೇಲೆ ವಾಗ್ದೇವಿಯಾದ ಸರಸ್ವತಿಯು ನಲಿಯುತ್ತಾಳೆ. 
೧೩) ಯಾರು ಈ ಸಹಸ್ರನಾಮವನ್ನು ಹದಿನೈದು ರಾತ್ರಿಗಳು ಜಾಗರೂಕರಾಗಿ ಪಠಿಸುತ್ತಾರೋ ಅವರು ಇತರೇ ಲಿಂಗದ ವ್ಯಕ್ತಿಗಳನ್ನು ಮೋಹಪರವಶಗೊಳಿಸುವ ವ್ಯಕ್ತಿತ್ವವನ್ನು ಪಡೆಯುತ್ತಾರೆ. 
೧೪) ಈ ಸಹಸ್ರನಾಮವನ್ನು ಒಂದೇ ಒಂದು ಬಾರಿ ಪಠಿಸಿದವರ ದರ್ಶನವನ್ನು ಯಾರು ಮಾಡುತ್ತಾರೋ ಅವರು ಪಾಪಗಳಿಂದ ಮುಕ್ತರಾಗುತ್ತಾರೆ. 
೧೫) ಯಾರು ಈ ಸಹಸ್ರನಾಮವನ್ನು ಅರ್ಥಮಾಡಿಕೊಂಡಿರುತ್ತಾರೋ ಅವರಿಗೆ ಕಾಣಿಕೆ ಮತ್ತು ದಾನಗಳನ್ನು ಕೊಡುವುದರಿಂದ ಲಲಿತಾಂಬಿಕೆಯು ಸಂತುಷ್ಟಗೊಳ್ಳುತ್ತಾಳೆ. ಯೋಗ್ಯ ವ್ಯಕ್ತಿಗಳಿಗೆ ದಾನವನ್ನು ಕೊಡುವುದೂ ಸಹ ಒಬ್ಬನ ಪ್ರಮುಖ ಕರ್ತವ್ಯವಾಗಿದೆ. ಅಪಾತ್ರರಿಗೆ ಮಾಡಿದ ದಾನವು ಅಧಿಕವಾದ ಪಾಪಕರ್ಮವನ್ನುಂಟು ಮಾಡುತ್ತದೆ. ದಾನಕ್ಕಿಂತ ದಾನವನ್ನು ಕೊಡಲು ಯೋಗ್ಯ ವ್ಯಕ್ತಿಯನ್ನು ಆರಿಸುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. 
೧೬) ಯಾರು ಶ್ರೀ ವಿದ್ಯಾ ದೀಕ್ಷೆಯನ್ನು ಪಡೆದು ಶ್ರೀ ಚಕ್ರದ ಪೂಜೆಯನ್ನು ಕೈಗೊಂಡು ಲಲಿತಾ ಸಹಸ್ರನಾಮದ ಪಠಣವನ್ನು ಮಾಡುತ್ತಾರೋ ಅಂತಹವರು ಅತ್ಯಂತ ಪೂಜನೀಯರು ಎಂದು ಪರಿಗಣಿಸಲ್ಪಡುತ್ತಾರೆ. ಮೂಲ ಶ್ಲೋಕದಲ್ಲಿ ಶ್ರೀ ವಿದ್ಯೆಯನ್ನು ಸೂಚಿಸಲು ’ಮಂತ್ರರಾಜಂ’ ಶಬ್ದವನ್ನು ಬಳಸಲಾಗಿದೆ. (ಲಕ್ಷ್ಮೀನರಸಿಂಹ ಮಂತ್ರವನ್ನೂ ಸಹ ‘ಮಂತ್ರರಾಜಂ’ ಹೆಸರಿನಿಂದ ಕರೆಯುತ್ತಾರೆ). 
೧೭) ಈ ಸಹಸ್ರನಾಮದ ಅರ್ಥವನ್ನು ತಿಳಿಯದೇ ಪಠಿಸಿದಲ್ಲಿ ಅದು ಆರಿದ ಬೆಂಕಿಯಲ್ಲಿ ಕಟ್ಟಿಗೆಯ ಕೊರಡನ್ನಿಡುವುದಕ್ಕೆ ಸಮನಾದುದು. ಆದರೆ ನಾಮಗಳ ಅರ್ಥಗಳನ್ನು ತಿಳಿಯದವರೂ ಸಹ ಲಲಿತಾಸಹಸ್ರನಾಮವನ್ನು ಪಠಿಸಬಹುದೆಂದು ಹೇಳಲಾಗಿದೆ. ಇದರ ಒಟ್ಟಾರೆ ಉದ್ದೇಶವೇನೆಂದರೆ ಯಾರು ಸಹಸ್ರನಾಮದ ಅರ್ಥಗಳನ್ನು ತಿಳಿಯಲು ಶಕ್ಯರಾಗಿದ್ದಾರೋ ಅವರು ಅದರ ಅರ್ಥಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಯಾರಿಗೆ ಇದರ ಅರ್ಥಗಳನ್ನು ತಿಳಿದುಕೊಳ್ಳುವ ಸಾಮರ್ಥ್ಯವಿಲ್ಲವೋ ಅವರಿಗೆ ಮಾತ್ರ ಇದರಿಂದ ವಿನಾಯತಿಯನ್ನು ಕೊಡಲಾಗಿದೆ. ಅವರಿಗೆ ಇದನ್ನು ಅರಿಯಲು ಬೇಕಾಗಿರುವ ಅವಶ್ಯವಾದ ಜ್ಞಾನವು ಮುಂದಿನ ಜನ್ಮದಲ್ಲಿ ದೊರೆಯುತ್ತದೆ.  
೧೮) ಯಾರು ಜೀವಿತಕಾಲದಲ್ಲಿ ಒಮ್ಮೆ ಶ್ರೀ ಚಕ್ರದ ಪೂಜೆಯನ್ನು ಸಹಸ್ರನಾಮಪೂರ್ವಕವಾಗಿ ಸುವಾಸನೆಯುಳ್ಳ ಪುಷ್ಟಗಳಿಂದ ಪೂಜಿಸುವರೋ ಅವರಿಗೆ ಉಂಟಾಗುವ ಪುಣ್ಯಫಲವನ್ನು ಶಿವನಿಂದಲೂ ಸಹ ವಿವರಿಸಲು ಸಾಧ್ಯವಿಲ್ಲ. ಇದನ್ನೇ ಅರ್ಚನೆ ಎಂದು ಕರೆಯುತ್ತಾರೆ. ಪ್ರತಿಯೊಂದು ನಾಮದ ಕೊನೆಯಲ್ಲಿ ನಮಃ ಶಬ್ದವನ್ನು ಹೇಳಬೇಕು. ಪದ್ಮ, ತುಲಸೀಪುಷ್ಪ, ಕಲ್ಹಾರ, ಕದಂಬ, ಚಂಪಕ, ಜಾಜಿ, ಮಲ್ಲಿಕಾ, ಕರವೀರ, ಉತ್ಪಲ, ಬಿಲ್ವಪತ್ರ, ಕುಂದ, ಕೇಸರ, ಪಾಟಲ, ಕೇತಕೀ ಮತ್ತು ಮಾಧವೀ ಎಂದು ಹದಿನೈದು ವಿಧವಾದ ಪುಷ್ಟಗಳನ್ನು ಹೆಸರಿಸಲಾಗಿದೆ, ಆದರೆ ಯಾವುದೇ ವಿಧವಾದ ಪರಿಮಳಭರಿತ ಹೂವುಗಳನ್ನು ಅರ್ಚನೆಗೆ ಬಳಸಬಹುದು. ಆದರೆ, ಎಲ್ಲಕ್ಕಿಂತ ಶ್ರೇಷ್ಠವಾದ ಪುಷ್ಪವೆಂದರೆ ಕೇಸರೀ ಹೂವು. (ತುಳಸೀ ಗಿಡದ ಹೂಗುಚ್ಛವನ್ನು ಬಳಸಬೇಕು ದಳಗಳನ್ನಲ್ಲ).* 
೧೯) ಅರ್ಚನೆ ಎಂದರೆ ಪ್ರತಿ ನಾಮಕ್ಕೂ ‘ಓಂ-ಐಂ-ಹ್ರೀಂ-ಶ್ರೀಂ’ ಮಂತ್ರವನ್ನು ಪೂರ್ವಪ್ರತ್ಯಯವಾಗಿ ಮತ್ತು ’ನಮಃ’ ಎನ್ನುವುದನ್ನು ಉತ್ತರ ಪ್ರತ್ಯಯವಾಗಿ ಜೋಡಿಸಬೇಕು. ಉದಾಹರಣೆಗೆ ಮೊದಲನೇ ನಾಮವನ್ನು ‘ಓಂ-ಐಂ-ಹ್ರೀಂ-ಶ್ರೀಂ-ಶ್ರೀ ಮಾತ್ರೇ ನಮಃ’ ಎಂದು ಉಚ್ಛರಿಸಬೇಕು. 
ಅರ್ಚನೆಯನ್ನು ಕೈಗೊಳ್ಳುವ ಮುನ್ನ ಒಬ್ಬರು ಸಂಕಲ್ಪವನ್ನು ಮಾಡಬೇಕು, ಅದನ್ನನುಸರಿಸಿ ನ್ಯಾಸ, ಅರ್ಚನೆ ಮತ್ತು ಪುನಃ ‘ಓಂ’ ಎಂದು ಕಡೆಯ ನಾಮದ ಅರ್ಚನೆಯಲ್ಲಿ ಹೇಳಬೇಕು (‘ಓಂ-ಐಂ-ಹ್ರೀಂ-ಶ್ರೀಂ-ಲಲಿತಾಂಬಿಕಾಯೈ ನಮಃ ಓಂ’). ನಾವು ಹೂವುಗಳನ್ನು ಇರಿಸುವ ಕ್ರಮಕ್ಕೂ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಹೂವುಗಳು ಅರಳುವ ವಿಧಾನದಲ್ಲಿಯೇ ಅವುಗಳನ್ನು ಶ್ರೀ ಚಕ್ರದ ಮೇಲೆ ಇರಿಸಬೇಕು, ಅವುಗಳ ದಳಗಳು ಮೇಲ್ಮುಖವಾಗಿರಬೇಕು. 
ಯಾರು ಮೇಲೆ ತಿಳಿಸಿದ ಪ್ರಕಾರ ಪೂಜೆಯನ್ನು ಹುಣ್ಣಿಮೆಯಂದು ಮಾಡುತ್ತಾರೋ ಅವರು ಲಲಿತಾಂಬಿಕೆಯ ಸ್ವರೂಪವನ್ನು ಪಡೆಯುತ್ತಾರೆ ಒಂದು ವೇಳೆ ಅಂತಹ ವ್ಯಕ್ತಿಗಳನ್ನು ಯಾರು ಲಲಿತಾಂಬಿಕೆಯ ಸ್ವರೂಪವೆಂದು ಭಾವಿಸುವುದಿಲ್ಲವೋ ಅವರು ಪಾಪ ಪೀಡಿತರಾಗುತ್ತಾರೆ. 
೨೦) ಯಾರು ಮೇಲೆ ತಿಳಿಸಿದ ಪೂಜೆಯನ್ನು ದಸರೆಯ ಒಂಬತ್ತನೇ ದಿನವಾದ ಮಹಾನವಮಿಯಂದು ಕೈಗೊಳ್ಳುತ್ತಾರೋ ಅವರು ಮುಕ್ತಿಯನ್ನು ಹೊಂದುತ್ತಾರೆ. ಮಹಾನವಮಿಯು ಶಿವ ಮತ್ತು ಶಕ್ತಿಯರ ಸಾಮರಸ್ಯರೂಪವಾಗಿದೆ. ಅಷ್ಟಮಿಯು ರುದ್ರನಿಗೆ ಮತ್ತು ನವಮಿಯು ಶಕ್ತಿಗೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಇವೆರಡೂ ದಿನಗಳ ಸಂಧಿಕಾಲವಾದ ಮಹಾನವಮಿಯು ಲಲಿತಾಂಬಿಕೆಯನ್ನು ಪೂಜಿಸಲು ಅತ್ಯಂತ ಪ್ರಶಸ್ತ ಸಮಯವೆಂದು ಪರಿಗಣಿಸಲ್ಪಟ್ಟಿದ್ದು ಅಂದು ಪೂಜಿಸಿದವರ ಬೇಡಿಕೆಗಳು ಇಡೇರುತ್ತವೆ. ಅವರು ಸಕಲ ಸೌಭಾಗ್ಯಗಳನ್ನು ಪಡೆದು ಪುತ್ರ-ಪೌತ್ರಾದಿಗಳೊಂದಿಗೆ ಬಹುಕಾಲ ಜೀವಿಸಿ, ಅಂತಿಮವಾಗಿ ಲಲಿತಾಂಬಿಕೆಯ ಪದತಲದಲ್ಲಿ ಸ್ಥಾನ ಪಡೆಯುತ್ತಾರೆ (ನಾಮ ೯೧೨). 
೨೧) ಯಾರು ಇಂತಹ ಆಚರಣೆಗಳನ್ನು ಪ್ರತಿ ಶುಕ್ರವಾರಗಳಂದು ಕೈಗೊಳ್ಳುತ್ತಾರೆಯೋ ಅಂತಹವರು ಶ್ರೀ ವಿದ್ಯಾ ಉಪಾಸನೆಯಲ್ಲಿ ಪರಿಣಿತರಾದವರಿಗೆ ಪಾಯಸ-ಅಪೂಷ-ಷಡ್ರಸೋಪೇತವಾದ ಭೋಜನವನ್ನು ಉಣಬಡಿಸಬೇಕು. ಹೀಗೆ ಮಾಡಿದಲ್ಲಿ ಲಲಿತಾಂಬಿಕೆಯು ಅತ್ಯಂತ ಸಂತುಷ್ಟಳಾಗಿ ಅವರು ಬೇಡಿದ ವರಗಳನ್ನೆಲ್ಲಾ ದಯಪಾಲಿಸುತ್ತಾಳೆ. ಅವರು ಸ್ವಯಂ ಲಲಿತಾಂಬಿಕೆಯ ಶಕ್ತಿಗಳನ್ನೇ ಪಡೆಯುವರೆಂದು ಹೇಳಲಾಗುತ್ತದೆ. (ಇದಕ್ಕೆ ಸಂಬಂಧಿಸಿದ ಅನುಷ್ಠಾನ ವಿಧಿಗಳು ಬಹಳ ದೀರ್ಘವಾಗಿವೆ). 
೨೨) ಯಾರು ಈ ಲಲಿತಾ ಸಹಸ್ರನಾಮವನ್ನು ಯಾವುದೇ ವಿಧವಾದ ಬಯಕೆಗಳಿಲ್ಲದೆ ಪಠಿಸುತ್ತಾರೋ ಅವರು ಸಂಸಾರ ಬಂಧನದಿಂದ ಮುಕ್ತರಾಗಿ ಅಂತಿಮವಾಗಿ ಆಕೆಯಲ್ಲಿ ಐಕ್ಯರಾಗುತ್ತಾರೆ. 
೨೩) ಈ ಸಹಸ್ರನಾಮವು ಭುಕ್ತಿ-ಮುಕ್ತಿ ಪ್ರದಾಯಕವಾಗಿದೆ.
೨೪) ಒಬ್ಬನಿಗೆ ಶ್ರೀ ವಿದ್ಯಾ ದೀಕ್ಷೆಯು ಅವನ ಅಂತಿಮ ಜನ್ಮದಲ್ಲಿ ಕೊಡಮಾಡಲ್ಪಡುತ್ತದೆ ಎಂದು ಹೇಳಲಾಗುತ್ತದೆ. ಇಂತಹ ಅವಕಾಶವು ದೊರೆಯಲು ಅವನು ಪೂರ್ವ ಜನ್ಮಗಳಲ್ಲಿ ಅನೇಕ ದೇವ-ದೇವಿಯರನ್ನು ಪೂಜಿಸಿ ಪುಣ್ಯವನ್ನು ಸಂಪಾದಿಸಿರಬೇಕು. 
೨೫) ಒಬ್ಬನಿಗೆ ಸಹಸ್ರನಾಮದ ಉಪದೇಶವನ್ನು ಶ್ರೀ ವಿದ್ಯಾ ದೀಕ್ಷೆಯ ಮೊದಲೇ ಕೊಟ್ಟರೆ, ಅವನಿಗೆ ದೀಕ್ಷೆಯನ್ನು ಕೊಟ್ಟವರು ಮತ್ತು ದೀಕ್ಷೆಯನ್ನು ಪಡೆದುಕೊಂಡವರು ಇಬ್ಬರೂ ದೋಷಗ್ರಸ್ತರಾಗುತ್ತಾರೆ. ಅದೇ ವಿಧವಾಗಿ ಯಾರ ಮನಸ್ಸು ಪರಿಶುದ್ಧವಾಗಿಲ್ಲವೋ ಅಂತಹವರಿಗೆ ಶ್ರೀ ವಿದ್ಯಾ ದೀಕ್ಷೆಯನ್ನು ಕೊಟ್ಟರೆ ಆಗಲೂ ಸಹ ಇಬ್ಬರಿಗೂ ದೋಷವುಂಟಾಗುವುದು.
ಅಂತಿಮವಾಗಿ ಹಯಗ್ರೀವನು ಈ ರಹಸ್ಯವನ್ನು ಅಗಸ್ತ್ಯನೊಂದಿಗೆ ಹಂಚಿಕೊಂಡದ್ದು ಲಲಿತಾಂಬಿಕೆಯ ಆಜ್ಞೆಯ ಮೇರೆಗೆ ಎಂದು ಹೇಳುತ್ತಾನೆ. ಹಯಗ್ರೀವನು ಅಗಸ್ತ್ಯನಿಗೆ ಈ ಸಹಸ್ರನಾಮವನ್ನು ನಿತ್ಯವೂ ಪಠಿಸುವಂತೆ ಹೇಳಿ, ಅದರ ಮೂಲಕ ಅವನು ಬೇಡಿದ್ದನ್ನು ದೇವಿಯು ಕರುಣಿಸುತ್ತಾಳೆ ಎಂದು ತಿಳಿಸುತ್ತಾನೆ. 
ಮುಗಿಯಿತು.
ಲಲಿತಾ ಸಹಸ್ರಾನಾಮ ದೇವಿ ಲಲಿತಾಂಬಿಕೆಯು ಸರ್ವರಿಗೂ ಮಂಗಳವನ್ನುಂಟು ಮಾಡಲಿ. 
*****



No comments:

Post a Comment