ದೇಹ ಎಂದರೆ ನಾನು. ಗೇಹ ಎಂದರೆ ಮನೆ- ನನ್ನದು.
ದೇಹ ಗೇಹಗಳೇ ಸಂಸಾರದ ಸುಖ ದುಃಖಕ್ಕೆ ಕಾರಣ. ಮತ್ತೆ ಅವೇ ಸಾಧನೆಗೆ ಪುರಷಾರ್ಥಕ್ಕೂ ಕಾರಣ ಸರಿಯಾದ ಹೆಜ್ಜೆ ಹಾಕಿದಾಗ.
ದೇಹ ಎಂದರೆ ನಾನು. ಗೇಹ ಎಂದರೆ ಮನೆ- ನನ್ನದು.
ನಾನು- ನನ್ನದು ಎನ್ನುವುದು ಸಂಸಾರ ಬಂಧಕ್ಕೆ ಕಾರಣ. ಮಮೇತಿ ಬಧ್ಯತೇ ಜಂತುಃ ನಿರ್ಮಮೇತಿ ವಿಮುಚ್ಯತೇ ಭಗವಾನ್ ವೇದವ್ಯಾಸರ ಮಾತು.
ಕಾಲ್ಬೆರಳಿನಿಂದ ಶಿರದವರೆಗಿನ ಈ ದೇಹವೇ ನಾನು ಎಂಬ ಭ್ರಮೆ ಸದಾಕಾಲ. ಯಾರಿಗೂ ತಪ್ಪಿದ್ದಲ್ಲ. ಅದು ತಪ್ಪಿದ್ದರೆ ಮೋಕ್ಷವೇ ಪ್ರಾಪ್ತಿ. ಗುರುಗಳು ಕೇಳಿದಾಗ ಕನಕದಾಸರು ಹೇಳಲಿಲ್ಲವೇ. ನಾನು ಹೋದರೆ ಮೋಕ್ಷಕ್ಕೆ ಹೋದೇನು ಎಂದು. ನಾನು ಎಂಬುದು ಅಹಂ. ಈ ಅಹಂ ಎಂಬುದು ಅನಾದಿ. ಸ್ವರೂಪದ ಜೊತೆಗೆ ಬಂದಿದ್ದು.ಅಹಂ ಅಸ್ತಿತ್ವದ ಪ್ರತೀಕ. ಅಹಂ ಇಲ್ಲದಿರೆ ಅಸ್ತಿತ್ವವಿಲ್ಲ. ನಾನು ನೀನು ಅವನು ಇವೆಲ್ಲ ಇಲ್ಲದಿರೆ ಸಂಸಾರ ಚಕ್ರ ನಡೆಯುವದೆಂತು?
ಈ ದೇಹವೇ ನಾನು. ಈ ಎಲ್ಲ ಇಂದ್ರಿಯಗಳು ನನ್ನವು. ನಾನು ಅವುಗಳ ಸ್ವಾಮಿ. ಅವು ಎಂದಿಗೂ ನನ್ನ ಅಧೀನ. ಅವುಗಳಿಂದ ನಾನು ಬೇಕಾದ ಕೆಲಸ ಮಾಡಿಸ ಬಲ್ಲೆ. ಅವುಗಳನ್ನು ನಿಯಂತ್ರಿಸ ಬಲ್ಲೆ. ಅವು ಮಾಡಿದ ಕ್ರಿಯೆಗಳಿಂದ ನನಗೆ ಬೇಕಾದ ಫಲ ಪಡೆಯ ಬಲ್ಲೆ. ಇದು ಅಭಿಮಾನ ದುರಭಿಮಾನವಾಗುವ ಕ್ರಮ. ಪಕ್ವವಾದಂತೆ ಅನುಭವ ತಿಳಿಸುತ್ತದೆ.ಇದೆಲ್ಲ ಲೊಳಲೊಟ್ಟೆ. ಬರಿ ಭ್ರಮೆ.
ಬೇಕಾದಷ್ಟು ನಡೆದಾಡಿದವ ಎರಡು ಹೆಜ್ಜೆ ಎತ್ತಿಡುವದು ಕಷ್ಟ ವಾಯಿತಲ್ಲ! ಕನ್ನಡಕವಿಲ್ಲದೇ ಕಾಣಿಸಲೊಲ್ಲದು. ಮತ್ತೊಬ್ಬರು ಮಾತನಾಡಿದ್ದು ಯಾಕೋ ಸರಿಯಾಗಿ ಕೇಳಿಸಲೊಲ್ಲದು. ಅವರು ಹೇಳಿದ್ದೊಂದು. ನನಗೆ ಕೇಳಿದ್ದು ಮತ್ತೊಂದು ಆಗುತ್ತಿದೆ . ಎಲೆಯಲ್ಲಿಯ
ತುತ್ತು ಎತ್ತಿ ಬಾಯಿಗೆ ಮುಟ್ಟಿಸಲಾರೆ. ಪಾರ್ಶ್ವವಾಯು.
ಹೀಗೆಲ್ಲ ನಮ್ಮ ಅಧೀನವಿದ್ದ, ನಮ್ಮ ಇಂದ್ರಿಯಗಳೇ, ನಮಗೇ, ಇತ್ತೀಚೆಗಾಗಲಿ, ಒಮ್ಮಿಂದೊಮ್ಮೆಗಾಗಲೀ ಕೈಕೊಡುತ್ತವೆ.
ಅನುಭವ ಹೇಳುತ್ತದೆ-
ನಾನಲ್ಲ. ನನ್ನದಲ್ಲ. ಇಂದ್ರಿಯ ನಮ್ಮ ಅಧೀನವಲ್ಲ. ಅದರಿಂದ ಮಾಡುವ ಕ್ರಿಯೆಯೂ ನಮ್ಮದಲ್ಲ. ಕರ್ಮಫಲವೂ ನಮ್ಮ ಕೈಯಲ್ಲಿಲ್ಲ.
ಮತ್ತೆ ನೋಡುತ್ತೇವ ದೇಹ ಇಲ್ಲೇ ಇದೆ, ಪ್ರಾಣ ಹಾರಿ ಹೋಗಿದೆ. ಜೀವ ದೇಹದಲ್ಲಿತ್ತು. ಹೊರತಾಗಿ ಜೀವವೇ ದೇಹವಲ್ಲ.
ಹೀಗಾಗಿ ಹಾಗಾಗಿ ಗೊತ್ತಾಗುತ್ತದೆ- ಈ ದೇಹದಲ್ಲಿ ನಾನಿದ್ದೇನೆ. ಈ ದೇಹವೇ ನಾನಲ್ಲ. ಇದೆಲ್ಲ- ನಾನು.
ಇನ್ನು ನನ್ನದು- ಗೇಹ. ಮನೆ ಮಠ ಮಡದಿ ಮಕ್ಕಳು ಭೂಮಿ ಸಂಪತ್ತು ಧನ ಕನಕ- ಇವೆಲ್ಲ ನನ್ನದು. ಯಾವಾಗಲೂ ನನ್ನ ಜೊತೆ ಇರುವದು. ಇದೂ ಲೊಳಲೊಟ್ಟಯೇ. ಭ್ರಮೆಯೇ. ಬರುವಾಗ ಬರಿಗೈಲಿ ಬಂದಿ ಬಂದ ಮೇಲೆ ಎಲ್ಲಾ ನಂದೇ ಎಂದಿ.
ಯಾತರ ಖಟಿಪಿಟಿ----
ಎನ್ನುತ್ತಾರೆ ದಾಸವರೇಣ್ಯರು.
ತಂದದ್ದೇನು? ಒಯ್ದದ್ದೇನು? ಶೂನ್ಯ. ಏನೂ ಇಲ್ಲ. ಕರ್ಮ, ಪಾಪ, ಪುಣ್ಯ, ಸಾಧನೆಗಳೇ ಸಂಗಾತಿ- ಜನುಮ ಜನುಮಕ್ಕೂ.
ಅನುಭವ ಇದನ್ನು ಕಲಿಸುತ್ತದೆ. ಕೋಟ್ಯಾಧಿಪತಿ ಬರಿಗೈಲಿ ಹೋದದ್ದು, ಯಾರೂ ಮನೆ ಮಠ ಸಂಪತ್ತು ಒಯ್ಯದೇ ಇದ್ದದ್ದು ಎದ್ದು ಕಾಣುತ್ತದೆ.
ಮಡದಿ ಮನೆ ಬಾಗಿಲತನಕ, ಮಕ್ಕಳು ಮಸಣದವರೆಗೆ- ಕೊನೆಗೆ ಯಾರೂ ಬಾಹರೋ ಸಂಗಡ. ಪುರುಂದರ ವಿಠಲನೇ ಗತಿ.
ಹೀಗೆ ನಾನು ನನ್ನದು ಯಾವದೂ ಬರುವದಲ್ಲ ನನ್ನ ಜೊತೆಗೆ, ಇದು ಕಂಡರೂ ತಿಳಿದರೂ ಮತ್ತೆ ಮರು ಘಳಿಗೆಯಲ್ಲಿ ಎಲ್ಲ ಮರೆತು ಬಿಡುತ್ತೇವೆ,ಮಮ ಮಾಯಾ ದುರತ್ಯಯಾ ಕೃಷ್ಣನ ಮಾತು. ಅವನ ಮಾಯೆ ದಾಟಲಸಾಧ್ಯ ಯಾರಿಗೂ.
ಮತ್ತೆ ನಾನು ಚಿರಂಜೀವಿ ಎಂದೇ ವ್ಯವಹಾರ, ಬ್ರಹ್ಮಾಂಡವೆಲ್ಲ ನಂದೇ ಎಂಬ ತಿಳುವಳಿಕೆ ಮುಂದುವರಿಯುತ್ತದೆ.
ಹೀಗೆ ಈ ನಾನು ನನ್ನದು,ದೇಹಗೇಹಗಳ ಅತಿ ಅಭಿಮಾನ ಜ್ಞಾನವೇ ಅಜ್ಞಾನ. ಅದುವೇ ಮಾಯೆ- ಅವಿದ್ಯೆ ಎನಿಸುತ್ತದೆ. ಲಿಂಗ ದೇಹದ ಸಂಗಾತಿ. ಅನೇಕ ಆಚ್ಛಾದಿಕೆಗಳು. ಜೀವನಿಗೆ ತನ್ನ ಬಗ್ಗೆ ತನಗೇ ಸರಿಯಾಗಿ ತಿಳಿಯದಂತೆ ಅಜ್ಞಾನ ಜೀವಾಚ್ಛಾದಿಕಾ., ಪರಮಾತ್ಮನ ಬಗ್ಗೆ ತಿಳಿಯದಂತೆ ಪರಮಾಚ್ಛಾದಿಕಾ. ಇವೆಲ್ಲ ಅಜ್ಞಾನದ ಆವರಣಗಳು.
ಅಜ್ಞಾನ ಹೋಗದ ಹೊರತು ನಾನು ನನ್ನದು ಹೋಗುವದಿಲ್ಲ. ಇವು ಹೋಗದ ಹೊರತು ಲಿಂಗ ಭಂಗವಿಲ್ಲ. ಹಾಗಾದರೆ ಮುಗಿಯದ ಈ
ಸಮಸ್ಯೆಗೆ ಏನು ಪರಿಹಾರ?
ದೇಹ ಬಂಧಾದಿ ಕೇನಚಿತ್ ಕಾರಣೇನ ತು ಕಲ್ಪಿತೋಪಿ ನಿವರ್ತೇತ್ ಗುರುವಾಕ್ಯಾದಸಂಶಯಃ| ಮಾಂಡೂಕ ಭಾಷ್ಯ- ಶ್ರೀ ಮಧ್ಬರು.
ಗುರು ಪ್ರಸಾದೋ ಬಲವಾನ್ ಗುರು ಅನುಗ್ರಹವೇ ಮದ್ದು. ಸದ್ಗುರು ಸಿಗಬೇಕು. ಉಪದೇಶಿಸ ಬೇಕು. ಪರಮಾತ್ಮನ ಬಗ್ಗೆ ಸಮೀಚೀನ ಸುಜ್ಞಾನ ಕೊಡಬೇಕು.
ಜೀವೋತ್ತಮ, ಸರ್ವೋತ್ತಮರು ಅನುಗ್ರಹಿಸ ಬೇಕು. ಸುಜ್ಞಾನದ ಬೆಳಕಿನ ಪ್ರವೇಶ, ಅಜ್ಞಾನದ ಕತ್ತಲೆಯ ನಾಶ. ಅಜ್ಞಾನ
ದ ಪರದೆ ಸರಿಯ ಬೇಕು. ಪರಮಾತ್ಮ ಸರಿಸಬೇಕು. ದೇಹ ನಾನಲ್ಲ. ಗೇಹ ನನ್ನದಲ್ಲ. ಎಲ್ಲವೂ ಭಗವಂತನದೇ. ನನ್ನ ಸ್ವಾಮಿ, ಸರ್ವರ ಸ್ವಾಮಿ. ನನ್ನ ರಕ್ಷಕ, ಜಗದ್ ರಕ್ಷಕ.
ಅನ್ಯಥಾ ಶರಣಂ ನಾಸ್ತಿ ಎನ್ನ ಕಾಯುವ ಮತ್ತೊಬ್ಬನಿಲ್ಲ.
ಆತನಲ್ಲಿ ಸರ್ವ ಶರಣಾಗತಿ.
ಗುರು ಉಪದೇಶ ಮತ್ತು ಹರಿ ವಾಯು ಗುರುಗಳ ಅನುಗ್ರಹ-
ದೇಹ ಗೇಹಗಳ ಅತಿ ಅಭಿಮಾನದ ಅಜ್ಞಾನ ಮಾಯ.
ಈ ದೇಹ ಪರಮಾತ್ಮ ಕೊಟ್ಟದ್ದು. ಅದರಲ್ಲಿ ಬಾಡಿಗೆ ಇರುವ ಜೀವ ನಾನು. ಸಾಧನೆ ನಾನು ಕೊಡಬೇಕಾದ ಬಾಡಿಗೆ. ದೇಹ ನಾನಲ್ಲ. ನನ್ಙದಲ್ಲ.
ಸಾಧನದ ಶರೀರವಿದು. ನೀ ದಯದಿ ಕೊಟ್ಟದ್ದು. ದೇಹದ ಪ್ರಯೋಜನ- ಸಾಧನೆ- ಸಂಸಾರದಿಂದ ಪಾರಾಗಲು. ಹೊರತಾಗಿ ಅತಿ ಅಭಿಮಾನದಿಂದ ಮತ್ತೆ ಮತ್ತೆ ಸಂಸಾರ ಚಕ್ರದಲ್ಲಿ ಸಿಗಬೀಳಲು ಅಲ್ಲ.
ಅಪ್ರಾಕೃತ ಗುಣಪೂರ್ಣ ದೇಹಿ, ಅಪ್ರಾಕೃತ ವೈಕುಂಠ ಗೇಹಿ-ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ- ಈ ದೇಹ ಗೇಹ ಗಳನ್ನು ಸಮರ್ಪಿಸಿ ಉಪಾಸಿಸಿದರೆ- ತನ್ನರಮನೆಯಲ್ಲಿ ಸಮಭಾಗ ಕೊಟ್ಟು ಆನಂದಪಡಿಸುವನಂತೆ.
ಶ್ರೀ ಕೃಷ್ಣಾರ್ಪಣಮಸ್ತು.
OM SRI GURU RAGHVENDRAYA NAMAHA
No comments:
Post a Comment