SEARCH HERE

Tuesday, 1 January 2019

ಗೌಡ ಸಾರಸ್ವತ ಬ್ರಾಹ್ಮಣ gowda saraswat brahmins


ಗೌಡ ಸಾರಸ್ವತ ಬ್ರಾಹ್ಮಣರು - ಗೌಡ ಸಾರಸ್ವತ ಅಥವ ಕೊಂಕಣಿ ಬ್ರಾಹ್ಮಣರ ಇತಿಹಾಸವನ್ನು ಅಧ್ಯಯನ ಮಾಡಿದರೆ ಸುಮಾರು ೫೦೦೦ ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ.ಗೌಡ ಸಾರಸ್ವತರು ಮೂಲತಃ ಸರಸ್ವತಿ ನದಿ ತಟದಲ್ಲಿ ವಾಸಿಸಿದವರು. ಸರಸ್ವತಿ ನದಿಯು ಉತ್ತರ ದೇಶದಲ್ಲಿ ಹರಿಯುತ್ತದೆ. ಅದಕ್ಕೆ ಗೌಡ ದೇಶವೆಂತಲು ಕರೆಯುತ್ತಾರೆ. ಅದಕ್ಕಾಗಿ ಈ ಬ್ರಾಹ್ಮಣರಿಗೆ ಗೌಡ ಸಾರಸ್ವತರೆಂದು ಹೇಳುತ್ತಾರೆ. ಇವರು ಋಗ್ವೇದದ ಉಪಾಸಕರು. ಸರಸ್ವತಿ ನದಿ ತಟದಲ್ಲಿ ನಾಗರಿಕತೆಯನ್ನು ಕಟ್ಟಿದವರು.ಒಮ್ಮೆ ಸರಸ್ವತಿ ನದಿಯು ಬತ್ತಿಹೋಯಿತು. ಗಂಗ ಯಮುನ ನದಿಗಳೊಂದಿಗೆ ಗುಪ್ತಗಾಮಿನಿಯಾಗಿ ಹರಿಯಿತು.ಆಗ ಸಾರಸ್ವತ ಬ್ರಾಹ್ಮಣರು ಚದುರಿ ಹೋಗಿ ಭಾರತದ ವಿವಿಧೆಡೆಗಳಲ್ಲಿ ವಾಸಿಸ ತೊಡಗಿದರು. ಹಾಗೆ ಹೋದ ಸಾರಸ್ವತರು ಆಯಾ ಊರಿನ ಹೆಸರಿನಿಂದ ಗುರುತಿಸಲ್ಪಟ್ಟರು. ಕಾಶ್ಮೀರಿ ಸಾರಸ್ವತರು, ಕಚ್ಛೀ ಸಾರಸ್ವತರು ಇತ್ಯಾದಿ. ಹಾಗೆಯೆ ಬಹುಮಂದಿ ಗೋವಾದಲ್ಲಿ ನೆಲೆಸಿದರು. ಕ್ರಿ. ಶ ೧೬ನೇ ಶತಮಾನದಲ್ಲಿ ಗೋವಾದ ಮೇಲೆ ಪೋರ್ಚುಗೀಸರು ದಾಳಿ ಮಾಡಿದರು. ಪೋರ್ಚುಗೀಸರು ಗೋವಾದಲ್ಲಿ ಕ್ರೈಸ್ತಮತವನ್ನು ಪ್ರಚಾರ ಮಾಡಲಾರಂಭಿಸಿದರು. ಆಗ ಅನೇಕ ಸಾರಸ್ವತ ಬ್ರಾಹ್ಮಣರ ಕುಟುಂಬ ದಕ್ಷಿಣ ಕರಾವಳಿಯತ್ತ ವಲಸೆ ಬಂದರು.ಹೀಗೆ ತುಳುನಾಡಿನ ಮಂಗಳೂರು, ಉಡುಪಿ, ಕಾಸರಗೋಡು, ಬಾರ್ಕೂರು, ಬಸರೂರು, ಕಾರ್ಕಳ, ಕುಂದಾಪುರ, ಉತ್ತರ ಕನ್ನಡದ ಕಾರವಾರ, ಕುಮಟ ಇತ್ಯಾದಿ ಕಡೆಗಳಲ್ಲಿ ನೆಲೆಗೊಂಡರು.
ಧಾರ್ಮಿಕ
ಸಾರಸ್ವತರಲ್ಲಿ ವೈಷ್ಣವ, ಶೈವ, ಶಾಕ್ತ, ಗಾಣಪತ್ಯ ಹೀಗೆ ಅನೇಕ ಪಂಥಗಳ ಪ್ರಭಾವವನ್ನು ಕಾಣಬಹುದು. ಪೂರ್ವದಲ್ಲಿ ವಿವಿಧ ಪಂಥಗಳನ್ನು ಅನುಸರಿಸುತ್ತಿದ್ದ ಇವರು ಶಂಕರಾಚಾರ್ಯರು ಹಾಗು ಮಧ್ವಾಚಾರ್ಯರಿಂದ ಪ್ರಭಾವಿತರಾಗಿ ಸ್ಮಾರ್ತ ಹಾಗು ವೈಷ್ಣವ ಬ್ರಾಹ್ಮಣರಾದರು. ಇವರಲ್ಲಿ ನಾಲ್ಕು ಮಠಗಳಿವೆ. ಚಿತ್ರಾಪುರ ಹಾಗು ಕವಳೆ ಮಠಗಳು ಸ್ಮಾರ್ತ ಸಂಪ್ರದಾಯದ ಮಠಗಳು. ಕಾಶಿ ಮಠ ಹಾಗು ಗೋಕರ್ಣ ಪರ್ತಗಾಳಿ ಮಠವು ವೈಷ್ಣವ ಸಂಪ್ರದಾಯದ ಮಠಗಳಾಗಿವೆ. 


ಮಧ್ವಾಚಾರ್ಯರು ಗೋಮಾಂತ ಪ್ರದೇಶಕ್ಕೆ ಅಂದರೆ ಇಂದಿನ ಗೋವೆಗೆ ಬಂದಾಗ ಚದುರಿ ಹೋಗಿದ್ದ ಸಾರಸ್ವತ ಬ್ರಾಹ್ಮಣರನ್ನು ಒಗ್ಗೂಡಿಸಿ ವೈಷ್ಣವ ದೀಕ್ಷೆಯನ್ನು ಕೊಟ್ಟರು. ನಂತರ ಶ್ರೀ ರಾಘವೇಂದ್ರ ಮಠದ ಶ್ರೀ ವಿಜಯೀಂದ್ರ ತೀರ್ಥರು ಮುಲ್ಕಿ, ಕೊಚ್ಚಿ, ಆಲೆಪ್ಪಿಗಳಲ್ಲಿ ಸಂಚರಿಸಿ ಸಾರಸ್ವತ ಬ್ರಾಹ್ಮಣರನ್ನು ಒಗ್ಗೂಡಿಸಿದರು. ಇಂದಿಗು ಶ್ರೀ ವಿಜಯೀಂದ್ರ ತೀರ್ಥರು ದಯಪಾಲಿಸಿದ ನರಸಿಂಹ ವಿಗ್ರಹ ಹಾಗು ಮಹಾಲಕ್ಷ್ಮಿಯ ವಿಗ್ರಹ ಮುಲ್ಕಿ ಹಾಗು ಆಲೆಪ್ಪಿಗಳಲ್ಲಿದೆ. ವಿಜಯೀಂದ್ರ ತೀರ್ಥರು ಯಾದವೇಂದ್ರ ತೀರ್ಥರಿಗೆ ಆಶ್ರಮವನ್ನು ಕೊಟ್ಟರು. ಯಾದವೇಂದ್ರ ತೀರ್ಥರಿಂದ ಕಾಶಿ ಮಠವು ಪ್ರಾರಂಭವಾಯಿತು. ಇಲ್ಲಿನ ಮುಖ್ಯ ದೇವರು ಶ್ರೀ ವ್ಯಾಸ ರಘುಪತಿ ದೇವರು. ಹಾಗೆಯೆ ಫಲಿಮಾರು ಮಠದ ಶ್ರೀ ರಾಮಚಂದ್ರ ತೀರ್ಥರು ನಾರಾಯಣ ತೀರ್ಥರಿಗೆ ಬದರಿಯಲ್ಲಿ ಆಶ್ರಮವನ್ನು ಕೊಟ್ಟರು. ನಾರಾಯಣ ತೀರ್ಥರಿಂದ ಗೋಕರ್ಣ ಪರ್ತಗಾಳಿ ಮಠವು ಪ್ರಾರಂಭವಾಯಿತು. ಗೌಡ ಸಾರಸ್ವತ ಬ್ರಾಹ್ಮಣರಲ್ಲಿ ಅನೇಕ ಮಂದಿ ವೈಷ್ಣವರಾದರೂ ತಾವು ಪೂರ್ವದಲ್ಲಿ ಪೂಜಿಸಿಕೊಂಡು ಬರುತ್ತಿದ್ದ ಶೈವ, ಶಾಕ್ತ ಹಾಗು ಗಾಣಪತ್ಯದ ಆರಾಧನೆಯನ್ನು ತ್ಯಜಿಸಲಿಲ್ಲ. ಆದರೆ ಪೂಜಾಕ್ರಮದಲ್ಲಿ ಮಧ್ವಮತಕ್ಕನುಗುಣವಾಗಿ ಮಾರ್ಪಾಡು ಮಾಡಿಕೊಂಡರು. ಇಂದಿಗು ಇವರು ಮಹಾಲಸಾ ನಾರಾಯಣಿ ದೇವಿ, ಮಹಾಮಾಯಿ, ಶಾಂತೇರಿ ಕಾಮಾಕ್ಷಿ, ರಾಮನಾಥ ಇತ್ಯಾದಿ ಶಾಕ್ತ, ಶೈವ ಸಂಬಂಧಿ ದೇವತೆಗಳನ್ನು ಪೂಜಿಸುತ್ತಾರೆ. ವೆಂಕಟರಮಣ, ಪಾಂಡುರಂಗ, ಮುಖ್ಯಪ್ರಾಣ, ಗಣಪತಿ ಇತ್ಯಾದಿ ದೇವರ ಪೂಜೆಯು ಇವರಲ್ಲಿ ವ್ಯಾಪಕವಾಗಿದೆ. ಇಂದಿಗು ಬಹುಜನರ ಕುಲದೇವರ ದೇವಳಗಳು ಗೋವಾದಲ್ಲಿದೆ. ತುಳುನಾಡಿನಲ್ಲಿ ಗೌಡ ಸಾರಸ್ವತರು ಪೂಜಿಸುವ ಅನೇಕ ದೇವಳಗಳಿವೆ.

1. ಪಡುತಿರುಪತಿ ಖ್ಯಾತಿಯ ಕಾರ್ಕಳ ವೆಂಕಟರಮಣ ದೇವಳ


2. ಮಂಗಳೂರಿನ ವೀರವೆಂಕಟೇಶ ಹಾಗು ಮಹಾಮಾಯಿ ದೇವಳ

3. ಮಂಜೇಶ್ವರ ಶ್ರೀಮದನಂತೇಶ್ವರ ದೇವಳ

4. ಮೂಡಬಿದಿರೆ ವೆಂಕಟರಮಣ ಹಾಗು ಮುಖ್ಯಪ್ರಾಣ ದೇವಳ

5. ಬಸರೂರು ಮಹಾಲಸ ನಾರಾಯಣಿ ದೇವಳ

6. ಉಡುಪಿ ಲಕ್ಷ್ಮೀ ವೆಂಕಟರಮಣ ದೇವಳ
ಇದಲ್ಲದೆ ತುಳುನಾಡಿನಾದ್ಯಂತ ಅನೇಕ ವೆಂಕಟರಮಣ ದೇವಳಗಳಿವೆ. ಮಂಗಳೂರಿನ ರಥಬೀದಿಯಲ್ಲಿ ಅನೇಕ ಅಗ್ರಹಾರಗಳಲ್ಲಿ ಸಾರಸ್ವತ ಬ್ರಾಹ್ಮಣರು ವಾಸವಾಗಿದ್ದಾರೆ.
ಭಾಷೆ
ಸಾರಸ್ವತ ಬ್ರಾಹ್ಮಣರು ಆರ್ಯ ಮೂಲದವರು ಹಾಗು ಇವರು ಕೊಂಕಣಿ ಭಾಷೆಯನ್ನು ಮಾತನಾಡುತ್ತಾರೆ. ಸಮುದ್ರ ತೀರದಲ್ಲಿ ವಾಸಿಸುವರಾದ್ದರಿಂದ ಇವರನ್ನು ಕೊಂಕಣಿ ಬ್ರಾಹ್ಮಣರೆಂದು ಕರೆಯುತ್ತಾರೆ. ಕೊಂಕಣಿ ಭಾಷೆಯು ಆರ್ಯ ಮೂಲದಿಂದ ಬಂದ ಭಾಷೆಯಾಗಿದೆ. ಬಹುಪಾಲು ಜನರು ಕೊಂಕಣಿ ಭಾಷೆಗೆ ಲಿಪಿಯಿಲ್ಲವೆಂದು ತಿಳಿದಿದ್ದಾರೆ. ಆದರೆ ಕೊಂಕಣಿ ಭಾಷೆಗೆ ತನ್ನದೆಯಾದ ಲಿಪಿಯಿದೆ. ಆದರೆ ಕೊಂಕಣಿ ಆಡುಭಾಷೆಯಾಗಿ ಹೆಚ್ಚಾಗಿ ಉಪಯೋಗಿಸಲ್ಪಡುವುದರಿಂದ ಲಿಪಿ ಹೆಚ್ಚಾಗಿ ಬಳಕೆಯಲಿಲ್ಲ.
ಕುಲನಾಮಗಳು


ಸಾರಸ್ವತ ಬ್ರಾಹ್ಮಣರು ಅನೇಕ ಕುಲನಾಮಗಳನ್ನು ಹೊಂದಿದ್ದಾರೆ

1. ಮಲ್ಯ - ಮಲ್ಲ ಅಯ್ಯ ಊರಿಗೆ ದೊಡ್ಡವರು


2. ಕಿಣಿ - ಕರಣಿಕ ಲೆಕ್ಕ ಬರೆಯುವವರು

3. ಪೈ - ಪೈಯಂಚಿರ ಎಂಬ ಊರಿನವರು

4. ಶೆಣೈ - ಶೇಣವಿ 96 ಕುಟುಂಬಕ್ಕೆ ಸೇರಿದವರು

5. ಭಂಡಾರಿ - ರಾಜ್ಯದ ಭಂಡಾರದ ರಕ್ಷಣೆ ಮಾಡುವವರು

6. ಭಟ್ಟ - ದೇವಳಗಳಲ್ಲಿ ಭಟ್ಟ ವೃತ್ತಿ ಮಾಡುವವರು
ಇದಲ್ಲದೆ ಶೇಠ್, ಬಾಳಿಗಾ, ಕಾಮತ, ರಾವ್ ಇತ್ಯಾದಿ ಅನೇಕ ಕುಲನಾಮಗಳು ಇವರಲ್ಲಿವೆ.

ವೇಷಭೂಷಣ
ಕೊಂಕಣಿ ಬ್ರಾಹ್ಮಣರ ವೇಷಭೂಷಣ ಆರ್ಯರ ಅಥವ ಮರಾಠಿಗರ ವೇಷಭೂಷಣವನ್ನು ಹೋಲುತ್ತದೆ. ಇವರಲ್ಲಿ ಸ್ತ್ರೀಯರು ಕಚ್ಚೆಯುಡುವ ಸಂಪ್ರದಾಯವಿದೆ. ಇವರು ತಾವು ಧರಿಸುವ ಆಭರಣಗಳಲ್ಲಿ ಕರಿಮಣಿ ಹಾಗು ಹವಳಗಳನ್ನು ಹೆಚ್ಚಾಗಿ ಬಳಸುತ್ತಾರೆ.
ತಿಂಡಿ ತಿನಿಸು
ಕೊಂಕಣಿ ಬ್ರಾಹ್ಮಣರಲ್ಲಿ ಕೆಲವು ಕುಲಗಳಲ್ಲಿ ಮತ್ಸ್ಯಾಹಾರವನ್ನು ಸ್ವೀಕರಿಸುವ ವಾಡಿಕೆಯಿದೆ. ಇವರನ್ನು ಮತ್ಸ್ಯ ಬ್ರಾಹ್ಮಣರೆಂದು ಕರೆಯುತ್ತಾರೆ.
ಆಚರಣೆಗಳು
ಸಾರಸ್ವತ ಬ್ರಾಹ್ಮಣರು ಚಾಂದ್ರಮಾನ ಪಂಚಾಂಗವನ್ನು ಅನುಸರಿಸುತ್ತಾರೆ. ಚಾಂದ್ರಮಾನ ಯುಗಾದಿಯನ್ನು ವಿಶೇಷವಾಗಿ ಆಚರಿಸುತ್ತಾರೆ. ಇದಲ್ಲದೆ ಚಾಂದ್ರ ಕೃಷ್ಣಜನ್ಮಾಷ್ಟಮಿ, ವಿನಾಯಕ ಚೌತಿ, ಅನಂತ ಚತುರ್ದಶಿ, ಉಪಾಕರ್ಮ, ದೀಪಾವಳಿ ಇತರ ಎಲ್ಲ ಹಬ್ಬವನ್ನು ಆಚರಿಸುತ್ತಾರೆ. ಇದಲ್ಲದೆ ಧಾರ್ಮಿಕ ಹಿನ್ನೆಲೆಯುಳ್ಳ ಅನೇಕ ಆಚರಣೆಗಳಿವೆ.
1. ಬಾಳ್ ಸಾಂತೊ : ಇದು ಕೊಂಕಣಿ ಜನರ ವಿಶಿಷ್ಟ ಆಚರಣೆಯಾಗಿದೆ. ಒಮ್ಮೆ ಬಡವಳಾದ ಹೆಣ್ಣು ಮಗಳೊಬ್ಬಳು ಕಷ್ಟಪಟ್ಟು ಜೀವನ ಮಾಡುತ್ತಿದ್ದಳು. ಆಗ ಶೃಂಗೇರಿ ಶಾರದಾಂಬ ಅವಳ ಕನಸಿನಲ್ಲಿ ಬಂದು ನಿನಗೆ ನಾನು ಐಶ್ವರ್ಯ ದಯಪಾಲಿಸುತ್ತೇನೆ. ನೀನು ನನ್ನ ಸನ್ನಿಧಾನಕ್ಕೆ ಬಂದು ಸೇವೆ ಮಾಡಬೇಕೆಂದಳು.ಐಶ್ವರ್ಯ ಬಂದ ನಂತರ ಅವಳು ಶಾರದಾಂಬೆಯ ಸನ್ನಿಧಾನಕ್ಕೆ ಒಪ್ಪಿಸಬೇಕಾದ ಹರಕೆಯನ್ನು ಮರೆತಳು. ಆಗ ಶಾರದಾಂಬೆಯು ವಿವಿಧ ವೇಷ ತೊಟ್ಟ ಜನಗಳನ್ನು ಅವಳ ಹತ್ತಿರ ಕಳುಹಿಸಿದಳು. ಆದರು ಅವಳಿಗೆ ಹರಕೆಯ ನೆನಪಾಗಲಿಲ್ಲ. ಕಡೆಗೆ ಶೃಂಗೇರಿಯ ಸ್ವಾಮಿಗಳು ವೇಷ ತೊಟ್ಟು ಕುಣಿಯುತ್ತ ಬಂದು ಅವಳಿಗೆ ಹರಕೆಯನ್ನು ನೆನಪಿಸುತ್ತಾರೆ. ಆಗ ಅವಳು ಶಾರದಾಂಬೆಯ ಸನ್ನಿಧಿಗೆ ಬಂದು ಹರಕೆ ತೀರಿಸುತ್ತಾಳೆ. ಹೀಗೆ ಬಾಳ್ ಸಾಂತೊ ಆಚರಣೆಯಲ್ಲಿ ವಿವಿಧ ವೇಷಗಳನ್ನು ಧರಿಸಿ ಕುಣಿಯುತ್ತಾರೆ.
2. ಗುಮಟೆ ನೃತ್ಯ : ಕೊಂಕಣಿಗರಲ್ಲಿ ಕುಡುಬಿ ಜನಾಂಗದವರ ನೃತ್ಯ ಕಾರ್ಯಕ್ರಮ ಗುಮಟೆ ನೃತ್ಯ. ಗುಮಟೆ ಎನ್ನುವುದು ಒಂದು ವಿಶಿಷ್ಟ ಬಗೆಯ ವಾದನ. ಇದನ್ನು ಆವೆಯ ಮಣ್ಣಿನಿಂದ ತಯಾರಿಸುತ್ತಾರೆ. ಮೇಲೆ ಉಡದ ಚರ್ಮವನ್ನು ಅಂಟಿಸುತ್ತಾರೆ. ಇದನ್ನು ಬಾರಿಸಿದಾಗ ವಿಶಿಷ್ಟ ನಾದ ಹೊಮ್ಮುತ್ತದೆ. ಕುಡುಬಿ ಜನಾಂಗದವರು ತಲೆಗೆ ಬಿಳಿ ವಸ್ತ್ರವನ್ನು ಕಟ್ಟಿಕೊಂಡು ಕನಕಾಂಬರ ಹೂವನ್ನು ಸುತ್ತಿಕೊಂಡು ನೃತ್ಯ ಮಾಡುತ್ತ ಗುಮಟೆಯನ್ನು ಬಾರಿಸುತ್ತಾರೆ.
3. ಗಿಂಡಿ ನೃತ್ಯ : ಶಿರದ ಮೇಲೆ ಗಿಂಡಿಯನ್ನು ಇಟ್ಟು ನೃತ್ಯ ಮಾಡುತ್ತಾರೆ. ಇದರಲ್ಲಿ ಇಬ್ಬರು ನೃತ್ಯಗಾರರು ಇರುತ್ತಾರೆ. ಪ್ರಧಾನ ನೃತ್ಯಗಾರರು ಹಾಗು ಸಹ ನೃತ್ಯಗಾರರು. ಸಹ ನೃತ್ಯಗಾರರು ಪ್ರಧಾನ ನೃತ್ಯಗಾರರನ್ನು ಆಕರ್ಷಿಸುತ್ತಾರೆ. ಶಿರದ ಮೇಲಿನ ಗಿಂಡಿ ಬೀಳದ ಹಾಗೆ ನೃತ್ಯ ಮಾಡುವುದು ಒಂದು ಕಲೆ.
4. ಸಿಂಹ ಪುರುಷ ದರ್ಶನ : ಸಾಮಾನ್ಯವಾಗಿ ದೇವಿಯ ಸನ್ನಿಧಾನದಲ್ಲಿ ಈ ಆಚರಣೆ ನಡೆಯುತ್ತದೆ. ಕೆಂಪು ಬಟ್ಟೆಯುಟ್ಟ ಪಾತ್ರಿಗಳು ಅನೇಕ ತೆಂಗಿನಕಾಯಿಗಳನ್ನು ಒಡೆಯುವ ಸಂಪ್ರದಾಯವಿದೆ.
5. ವಡೆ ಸೇವೆ : ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲ್ಲೂಕಿನ ಕಾಮಾಕ್ಷಿ ದೇವಾಲಯದಲ್ಲಿ ವಿಶಿಷ್ಟವಾದ ವಡೆ ಸೇವೆ ನಡೆಯುತ್ತದೆ. ಸಾವಿರಾರು ಬಾಳೆಹಣ್ಣು ತೆಂಗಿನಕಾಯಿ ಬೆಲ್ಲ ಬೆರೆಸಿ ವಡೆಯನ್ನು ತಟ್ಟಿ ಸಿದ್ಧ ಪಡಿಸುತ್ತಾರೆ. ಹರಕೆ ಹೇಳಿಕೊಂಡವರು ಕುದಿಯುವ ಎಣ್ಣೆಯಲ್ಲಿ ವಡೆಯನ್ನು ಹಾಕಿ ಬರಿಯ ಕೈಯಿಂದ ಮೇಲೆತ್ತುತ್ತಾರೆ. ಕುದಿಯುವ ಎಣ್ಣೆಗೆ ಕೈ ಹಾಕಿ ವಡೆಯನ್ನು ಎತ್ತಿದರೂ ಕೈ ಸುಡದೆಯಿರುವುದು ಸೋಜಿಗವಾಗಿದೆ.
6. ಚೂಡಿ ಹಬ್ಬ : ಆಷಾಢ ಹುಣ್ಣಿಮೆಯ ದಿನ ಸುಮಂಗಲಿಯರು ವಿಶೇಷವಾಗಿ ಹೊಸ್ತಿಲ ಪೂಜೆಯನ್ನು ನೆರವೇರಿಸುತ್ತಾರೆ. 


ವಿವಿಧ ಬಗೆಯ ಹೂಗಳನ್ನು ಗೊಂಚಲು ಕಟ್ಟಿ ಚೂಡಿಯನ್ನು ತಯಾರಿಸುತ್ತಾರೆ. ಅದನ್ನು ಹೊಸ್ತಿಲ ಮಧ್ಯದಲ್ಲಿಟ್ಟು ದೀಪವಿಟ್ಟು ಪೂಜಿಸುತ್ತಾರೆ.

ಗೌಡ ಸಾರಸ್ವತ ಬ್ರಾಹ್ಮಣರನ್ನು ಸಂಕ್ಷಿಪ್ತವಾಗಿ GSB ಗಳೆಂದು ಕರೆಯುತ್ತಾರೆ. ಇವರು ವಿವಿಧ ಉದ್ದಿಮೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪೇಪರ್ ದೋಸೆ ಖ್ಯಾತಿಯ ಕಾಮತ್ ರೆಸ್ಟೋರೆಂಟ್ ಹಾಗು ಗಡ್ ಬಡ್ ಐಸ್ ಕ್ರೀಂ ಅನ್ನು ಪರಿಚಯಿಸಿ ಕೊಟ್ಟ ಡಯಾನ ರೆಸ್ಟೋರೆಂಟ್ ಕೊಂಕಣಿ ಬ್ರಾಹ್ಮಣರ ಕೊಡುಗೆಯಾಗಿದೆ.
ಖ್ಯಾತನಾಮರು
1. ಕೆನರಾ ಬ್ಯಾಂಕ್ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ
2. ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ
3. ಮಣಿಪಾಲ ಅಭಿವೃದ್ಧಿಯ ಹರಿಕಾರರಾದ ಟಿಎಮ್ಎ ಪೈ ಹಾಗು ಟಿಎ ಪೈ
4. ಯುಬಿ ಹಾಗು ಕಿಂಗ್ ಫಿಷರ್ ಸಮೂಹದ ವಿಜಯ್ ಮಲ್ಯ.
5. ಕನ್ನಡ ಚಿತ್ರರಂಗದ ಮೇರು ನಟರಾದ ಅನಂತ್ ನಾಗ್ ಹಾಗು ಶಂಕರ್ ನಾಗ್
ಕೊಂಕಣ ಸಂಸ್ಕೃತಿಯು ಅಧ್ಯಯನ ಯೋಗ್ಯ ವಿಷಯವಾಗಿದೆ. ಕೊಂಕಣ ಬ್ರಾಹ್ಮಣರು ತುಳುನಾಡಿನಲ್ಲಿ ಇತರರೊಂದಿಗೆ ಸಮನ್ವಯದಿಂದ ಬಾಳುತ್ತಿದ್ದಾರೆ.
ಸಂಗ್ರಹ ವಿವಿಧ ಮೂಲಗಳಿಂದ
***

ತುಳುನಾಡಲ್ಲಿ ಮಗುವನ್ನು ತೊಟ್ಟಿಲಿಗೆ ಹಾಕುವ ಹಾಗೂ ಮಗುವಿನ ಪಾಲನೆಯ ಕ್ರಮ ಹೀಗಿದೆ.

ಮಗು ಹುಟ್ಟಿದ ಕೂಡಲೆ ಕುಟುಂಬದಲ್ಲಿ ಅಮೆ ಆಚರಿಸುವ ಕ್ರಮವಿದೆ. ವ್ಯಕ್ತಿ  ತೀರಿಕೊಂಡಾಗ ಸೂತಕ ಹಾಗೂ ಹುಟ್ಟಿದಾಗ ಅಮೆ ಅನ್ನುತ್ತೇವೆ. ಹುಟ್ಟಿದ ಮೂರು ದಿನಕ್ಕೆ ಮೂಜಿನೆ ಅಮೆ , ಏಳನೇ ದಿನಕ್ಕೆ ಏಲನೇ ಅಮೆ  ಹಾಗೂ ಹದಿನಾರನೇ ದಿನಕ್ಕೆ ಪೆರಿಯ ಅಮೆ ಎಂಬ ಕ್ರಮಗಳಿವೆ. ಇದರಲ್ಲಿ ಸಧ್ಯ ಹದಿನಾರು ದಿನ , ಕೆಲವರು ಅದನ್ನೂ ಹನ್ನೊಂದು ದಿನಗಳಲ್ಲಿ ಮುಗಿಸುತ್ತಾರೆ.

ಈ ಅಮೆ ಇರುವಾಗ  ಕುಟುಂಬಿಕರು ದೇವಸ್ಥಾನಕ್ಕೆ ಹೋಗುವಂತಿಲ್ಲ , ಶುಭಕಾರ್ಯ ಮಾಡುವಂತಿಲ್ಲ ಹಾಗೂ ಅದರಲ್ಲಿ ಭಾಗವಹಿಸುವಂತಿಲ್ಲ. ಕುಟುಂಬ ಅಂದರೆ ಅದರಲ್ಲಿ 20ರಿಂದ 400ಕ್ಕೂ ಅಧಿಕ ಮನೆಗಳ ಸದಸ್ಯರೂ ಇರಬಹುದು. ಅಮೆ ಅಥವಾ ಸೂತಕ ಆಚರಿಸುವಾಗಲೂ ಎರಡು ಕ್ರಮಗಳಿವೆ ೧) ಮಕ್ಕಳ ಕಟ್ಟು ೨) ಅಳಿಯ ಕಟ್ಟು.

ಮಕ್ಕಳ‌ ಕಟ್ಟು ಅಂದರೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ, ಅಂದರೆ ಗಂಡ ಹಾಗೂ ಗಂಡನ ಅಣ್ಣ ತಮ್ಮಂದಿರಲ್ಲಿ ಹುಟ್ಟು-ಸಾವು ಆದಾಗ ಸೂತಕ ಅಮೆ ಆಚರಿಸುವ ಕ್ರಮ. ಇಲ್ಲಿ ಒಬ್ಬಾಕೆಯ ಅಕ್ಕ ಅಥವಾ ತಂಗಿ  ತೀರಿಕೊಂಡರೆ ಮದುವೆಯಾದ ಮೇಲೆ ಆಕೆಗೆ ಸೂತಕ ಅಥವಾ ಅಮೆ ಇರೋಲ್ಲ. ಆದರೆ ಮೂರುದಿನಗಳ ಸೂತಕ ಅಲಿಖಿತ ನಿಯಮ ಎಂಬಂತೆ ಆಚರಿಸುತ್ತಾರೆ.ಅಳಿಯಕಟ್ಟು ಅಂದರೆ ತಾಯಿ ಪ್ರಧಾನ ಕುಟುಂಬ ಇಲ್ಲಿ ತಾಯಿಯ ತಂಗಿ ,ಅಣ್ಣ ಮುಂತಾದವರ ಮನೆಯಲ್ಲಿ ಹುಟ್ಟು ಸಾವುಗಳಾದಾಗ ಸೂತಕ ,ಅಮೆ ಆಚರಿಸುವ ಕ್ರಮ.ಇಲ್ಲಿ ಒಬ್ಬಾಕೆಯ ಗಂಡ ತೀರಿಕೊಂಡರೂ ಆಕೆಗೆ ಹಾಗೂ ಅವರ ಮಕ್ಕಳಿಗೆ ಸೂತಕವಿರೋಲ್ಲ ಕೇವಲ ಮೂರುದಿನಗಳ ಸೂತಕಾಚರಣೆ ಅಥವಾ ಮೂಜಿ ದಿನತ ಅಮೆ ಮಾತ್ರ ಪಾಲನೆ ಮಾಡುತ್ತಾರೆ.

ಈಗ ತೊಟ್ಟಿಲು ಹಾಕುವ ಕ್ರಮ ಗಮನಿಸಿದರೆ ಎಲ್ಲೆಲ್ಲಿ ಮನೆ ದೈವಗಳನ್ನು ತೊಟ್ಟಿಲು ರೀತಿಯ ಉಜ್ಜಾಲಲ್ಲಿ ಇರಿಸಿರುತ್ತಾರೋ ಆ ಮನೆಯಲ್ಲಿ ಉಯ್ಯಾಲೆ ರೀತಿಯ ತೊಟ್ಟಿಲು ಹಾಕುವ ಕ್ರಮ ಇರುವುದಿಲ್ಲ ಅಂದರೆ ತಾರಸಿ ಕೊಂಡಿ ಅಥವಾ ಪಕ್ಕಾಸಿಗೆ ಚೈನ್ ಹಾಕಿ ಹಾಕಬಾರದೆಂಬ ನಿಯಮ ಇದೆ. ದೈವದ ಪರಿಕರಗಳನ್ನು ಮನೆಮಂಚವು, ಮುಂಡ್ಯ/ ಮುಂಡಿಗೆ ಅಥವಾ ಮದನಕೈ ಮೇಲೆ ಇರಿಸಿದ ಜಾಗದಲ್ಲಿ ಮಾತ್ರ ಉಯ್ಯಾಲೆ ರೀತಿಯ ತೊಟ್ಟಿಲು ಹಾಕಬಹುದು.

 ತೊಟ್ಟಿಲನ್ನು ಹೂವಿನಿಂದ ಸಿಂಗರಿಸಿ ಮಗುವಿಗೆ ಸ್ನಾನ ಮಾಡಿಸಿ ಹೊಸಬಟ್ಟೆ ತೊಡಿಸಿ ಗೋಧೂಳಿ ಲಗ್ನ ಅರ್ಥಾತ್ ಗೋವುಗಳು ಹಟ್ಟಿ ಸೇರುವ ಸಮಯ ಅಥವಾ ಸೂರ್ಯಾಸ್ತದ ಸಮಯ ಮಗುವಿನ ಅಜ್ಜಿ ಅಥವಾ ಸೋದರತ್ತೆ  ಮೂರು ಬಾರಿ ತೊಟ್ಟಿಲು ಧಾಟಿಸಿ ನಂತರ ಮಲಗಿಸುತ್ತಾರೆ ಹಾಗೂ ಮಗುವಿನ ಕಿವಿಯಲ್ಲಿ ಮೂರು ಬಾರಿ ಹೆಸರು ಕೂಗಿ ಹೇಳಲಾಗುತ್ತದೆ .

ತೊಟ್ಟಿಲಿಗೆ ಆಡುಸೋಗೆ ಸೊಪ್ಪಲ್ಲಿ ಸ್ವಲ್ಪ ಸೆಗಣಿಯನ್ನ ಇಟ್ಟು ಕಟ್ಟುತ್ತಾರೆ , ಎರಡು ಹಿಡಿಸೂಡಿಕಡ್ಡಿಯನ್ನು ತೊಟ್ಟಿಲ ತಳಭಾಗದಲ್ಲಿ ಕಟ್ಟಿರುತ್ತಾರೆ. ರಾಗಿ ಕಾಳನ್ನು ಬಟ್ಟೆಯೊಳಗೆ ಹೊಲಿದು ದಿಂಬು ಮಾಡಿ ದಕ್ಷಿಣಕ್ಕೆ ತಲೆ ಅಥವಾ ಪೂರ್ವಕ್ಕೆ ತಲೆ  ಹಾಕುವಂತೆ ಮಲಗಿಸಲಾಗುತ್ತದೆ.

ನಂತರ ಆ ಮನೆಯ ಹಿರಿಯರು ಹೀಗೆ ಪ್ರಾರ್ಥಿಸುತ್ತಾರೆ.. ಪ್ರಾರ್ಥನೆ ತುಳುವಲ್ಲಿರುತ್ತದೆ ಎಲ್ಲರಿಗೂ ಅರ್ಥವಾಗಲೆಂದು ಕನ್ನಡದಲ್ಲಿ ಹೇಳುತ್ತೇನೆ..

"ಮಗುವನ್ನು ತೊಟ್ಟಿಲಿಗೆ ಹಾಕುವ ಕಾಲ ಇದು ವಿಷಘಳಿಗೆಯೋ ಅಮೃತಘಳಿಗೆಯೋ ನಮಗೆ ತಿಳಿಯದು ಹಾಗಾಗಿ ನಮ್ಮ ಕುಲಸ್ವಾಮಿ ,ಗ್ರಾಮ ದೇವರು, ತುಳಸಿಕಟ್ಟೆಯಲ್ಲಿ ನೆಲೆಯಾಗಿರುವ ಶ್ರೀನಿವಾಸ ದೇವರು ಹಾಗೂ ನಮ್ಮನ್ನು ಕಾಯುವ ಕುಟುಂಬ ದೈವಗಳು ಹಾಗೂ ಗ್ರಾಮ ದೈವಗಳು ಈ ಘಳಿಗೆಯನ್ನೇ ಉತ್ತಮವಾಗಿ ಪರಿವರ್ತಿಸಿ ನಮ್ಮ ಹಿಂದೆ ಶಕ್ತಿಯಾಗಿ ನಿಂತು ಮಗುವಿಗೆ ಯಾವುದೇ ರೀತಿಯ ಕಾಯಿಲೆಗಳು ಬರದಂತೆ ಕಾಪಾಡಿ ಒಳ್ಳೆಯ ವಿದ್ಯೆ ಬುದ್ಧಿ ಪಡೆದು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕುವಂತೆ ಹರಸಬೇಕು.ಹೆತ್ತಂತಾ ತಂದೆ ತಾಯಿಗಳಿಗೆ ಆಧಾರವಾಗಿ ಅವರು ವೃದ್ಧರಾಗಿ ಭಗವಂತನಿಗೆ ಪ್ರಿಯವಾಗುವವರೆಗೂ ಮಗು ಅವರನ್ನ ಗೌರವದಿಂದ ನಡೆಸಿಕೊಳ್ಳಬೇಕು.ಊರು ಬೆಳಗುವಂತವನಾಗಲಿ ಊರಿನ ಕೀರ್ತಿ ಮತ್ತೊಂದೂರಿಗೆ ಹಬ್ಬಿಸಲಿ ಎಂದು ಕೂಡಿದಂತಾ ಎಲ್ಲ ಜನರ ಪರವಾಗಿ ಪ್ರಾರ್ಥನೆಗಳು"

ನಂತರ ಗಂಡುಮಗುವಾಗಿದ್ದರೆ ಲಡ್ಡು ಹಾಗೂ ಅವಲಕ್ಕಿ ಹಾಗೂ ಹೆಣ್ಣುಮಗುವಾಗಿದ್ದರೆ ಜಿಲೇಬಿ ಹಾಗೂ ಅವಲಕ್ಕಿ ಹಂಚಲಾಗುತ್ತದೆ ಜೊತೆಗೆ ಹಾಲನ್ನೂ ನೀಡಲಾಗುತ್ತದೆ.ನಂತರದಲ್ಲಿ ಮಗುವಿನ ತೊಟ್ಟಿಲು ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬರು ಬಂದು ಮಗುವನ್ನು ವೀಕ್ಷಿಸಿ ಕೈಯಲ್ಲಿ ಕಾಣಿಕೆಯನ್ನೋ ಅಥವಾ ಈಗೀಗ ವಸ್ತ್ರ ಇತ್ಯಾದಿಗಳನ್ನು ನೀಡಿ ಹರಸುತ್ತಾರೆ.ನಂತರದಲ್ಲಿ ಸಸ್ಯಾಹಾರಿಗಳು ಸಸ್ಯಾಹಾರವನ್ನು ಹಾಗೂ ಮಾಂಸಹಾರಿಗಳು ಮಾಂಸಾಹಾರವನ್ನು ಬಡಿಸಿ ಬಂದಂತಹ ಅತಿಥಿಗಳನ್ನು ಭೋಜನದ ಮೂಲಕ ಸಂತೃಪ್ತಿಪಡಿಸಿ ಕಳುಹಿಸುತ್ತಾರೆ.

ಹೆಚ್ಚಾಗಿ ಮೊದಲನೇ ಹೆರಿಗೆಗೆ ತಾಯಿಮನೆಗೆ ಹೋಗುವುದರಿಂದ ಮೊದಲ ಪುಣ್ಯಾರ್ಚನೆ ಹಾಗೂ ತೊಟ್ಟಿಲು ಹಾಕುವ ಕ್ರಮ ಹೆಣ್ಣಿನ ತಾಯಿಮನೆಯಲ್ಲಿ ನಡೆದರೆ ನಂತರದ ಕ್ರಮ ಗಂಡನಮನೆಯಲ್ಲಿ ತೊಟ್ಟಿಲು ಹಾಕುವ ಮೂಲಕ ನಡೆಯುತ್ತದೆ.

 ಪುಟ್ಟ ಮಗುವಿರುವ ಮನೆಯಲ್ಲಿ , ಮನೆಯ ಮಂದಿ ಸ್ನಾನ ಮಾಡಿ ಬಂದಕೂಡಲೇ ನೀರು ಕುಡಿಯದೆ ಮಗುವನ್ನ ಎತ್ತಿಕೊಳ್ಳುವಂತಿಲ್ಲ ಇದು ಒಂದು ನಿಯಮವಾದರೆ ಮುಖಕ್ಕೆ ಕಾಡಿಗೆ ಬೊಟ್ಟು ,ಕೊರಳಿಗೆ ಕೇಸರಿಮಣಿಯ ಅಥವಾ ಕಪ್ಪುಮಣಿಯ ಹಾರ ಹಾಗೂ ಕಾಲಿಗೆ ಗೆಜ್ಜೆ ಹಾಕುವ ಕ್ರಮವಿದೆ. ದೃಷ್ಟಿ ನೀವಾಳಿಸಲು ಹಳೆಯ ಹಾರೆ ಅಥವಾ ಪಿಕಾಸಿಯನ್ನ ಒಲೆಗೆ ಹಾಕಿ ಅದು ಕಾದ ಮೇಲೆ ಅದನ್ನ ಪಾತ್ರೆಯಲ್ಲಿಟ್ಟು ಅದಕ್ಕೆ ನೀರು ಸುರಿದು ಅದರಿಂದ ಬರುವ ಹೊಗೆಗೆ ಮಗುವನ್ನು ಹಿಡಿಯಲಾಗುತ್ತದೆ.

ಸಾಮಾನ್ಯವಾಗಿ ನಾಲ್ಕೈದು ತಿಂಗಳು ತುಂಬಿದ ನಂತರ ಪ್ರತೀ ಶನಿವಾರ ಹಲವು ಬಗೆಯ ಸಸ್ಯಗಳ ಚಿಗುರು ಕಿತ್ತು ಅದನ್ನು ರುಬ್ಬಿ ಕೊಡಿಮದ್ದು ಅಂತಾ ಮಾಡಿ ಮಗುವಿಗೆ ಕುಡಿಸಲಾಗುತ್ತದೆ ಆ ಮೂಲಕ ಎದೆಹಾಲು ಕುಡಿಯುವ ಮಗುವಿನಲ್ಲಿರುವ ಕಫವನ್ನ ಹೊರತೆಗೆಯಲಾಗುತ್ತದೆ.ಜೊತೆಗೆ ಹಿರಿಯರು ತಮ್ಮ ಅನುಭವದಂತೆ ಚಿಹ್ನೆಯ ಮಾತ್ರೆಯನ್ನೂ ಕೊಟ್ಟು ಮಗುವಿನ ಆರೋಗ್ಯ ಮನೆಯಲ್ಲಿಯೇ ಕಾಪಾಡುತ್ತಾರೆ.

ಇದು ತುಳುನಾಡ ಪದ್ಧತಿ ನಮ್ಮ ಹಿರಿಯರು ಹೇಳಿಕೊಟ್ಟಂತೆ ಹಾಗೂ 
ನಾವು ಅವರಿಂದ ಕಂಡು ಕೊಂಡಂತೆ. ನಿಮ್ಮಲ್ಲಿ ಯಾವ ರೀತಿ ಆಚರಿಸುತ್ತಾರೆ ಎಂದು ಕಮೆಂಟ್ ಮೂಲಕ ತಿಳಿಸಬಹುದು.

#Know_Tulunadu
***

No comments:

Post a Comment