SEARCH HERE

Monday 1 April 2019

ಶಂಕರಾಚಾರ್ಯರ ಪೀಠಗಳ ವಿವರ ದಶನಾಮೀ ಪದ್ಧತಿ peetha and dashanami custom of shankaracharya


ಆಮ್ನಾಯ ಪೀಠಗಳ ವಿವರ—–

1)ಗೋವರ್ಧನ ಪೀಠ–ಹಸ್ತಾಮಲಕಾಚಾರ್ಯರು–ಮಹಾವಾಕ್ಯ–ಪ್ರಜ್ಞಾನಂ ಬ್ರಹ್ಮ–ಋಗ್ವೇದ–ಐತ್ತರೇಯ ಉಪನಿಷತ್–ಭೋಗವಾಲ ಸಂಪ್ರದಾಯ

2)ಶಾರದಾ ಪೀಠ–ಸುರೇಶ್ವರಾಚಾರ್ಯರು–ಮಹಾವಾಕ್ಯ–ಅಹಂ ಬ್ರಹ್ಮಾಸ್ಮಿ–ಯಜುರ್ವೇದ–ಬ್ರಹದಾರಣ್ಯಕ ಉಪ.–ಭೂರಿವಾಲ ಸಂಪ್ರದಾಯ

3)ದ್ವಾರಕಾ ಪೀಠ–ಪದ್ಮಪಾದಾಚಾರ್ಯರು–ಮಹಾವಾಕ್ಯ–ತತ್ವಮಸೀ–ಸಾಮವೇದ–ಛಾಂದೋಗ್ಯ ಉಪನಿಷತ್–ಕೀಟವಾಲ ಸಂಪ್ರದಾಯ

4)ಜ್ಯೋತಿರ್ಮಠ–ತೋಟಕಾಚಾರ್ಯರು–ಮಹಾವಾಕ್ಯ–ಅಯಮಾತ್ಮಾ ಬ್ರಹ್ಮ–ಅಥರ್ವ ವೇದ– ಮಾಂಡೂಕ್ಯ ಉಪ.–ನಂದವಾಲ ಸಂಪ್ರದಾಯ

ದಶನಾಮೀ ಪದ್ಧತಿ–ಶಂಕರಾಚಾರ್ಯರು ಏಕದಂಡಿ ಸಂಪ್ರದಾಯವನ್ನು ಪ್ರಾರಂಭಿಸಿದರು. ಈ ಸಂಪ್ರದಾಯದ ಸಂನ್ಯಾಸಿಗಳು ತಮ್ಮ ಹೆಸರಿನ ಮುಂದೆ ದಶನಾಮಗಳಲ್ಲಿ ಒಂದನ್ನು ಇಟ್ಟುಕೊಳ್ಳುತ್ತಾರೆ. ಅವು ಯಾವುವೆಂದರೆ ಸರಸ್ವತಿ, ತೀರ್ಥ, ಅರಣ್ಯ, ಭಾರತೀ, ಆಶ್ರಮ, ಗಿರಿ, ಪರ್ವತ, ಸಾಗರ, ವನ ಮತ್ತು ಪುರಿ. ಸರಸ್ವತಿ, ಭಾರತಿ ಮತ್ತು ಪುರಿ ಉಪನಾಮಗಳು ಶೃಂಗೇರಿ ಮಠಕ್ಕೆ ಸೇರಿವೆ. ತೀರ್ಥ, ಆಶ್ರಮ ನಾಮಗಳು ದ್ವಾರಕಾ ಪೀಠಕ್ಕೆ ಸೇರಿವೆ. ಗಿರಿ, ಪರ್ವತ, ಸಾಗರ ಜ್ಯೋತಿರ್ಮಠಕ್ಕೆ ಸೇರಿವೆ. ಉಳಿದವು ಸ್ವತಂತ್ರ ಸಂಪ್ರದಾಯ ಹೊಂದಿವೆ. ಆದರೂ ಇದು ಅಷ್ಟೇನೂ ಬಿಗಿಯಾದ ನಿಯಮವಿದ್ದಂತೆ ಕಾಣುವುದಿಲ್ಲ. ಕಾರಣ ಅರಣ್ಯನಾಮದ ವಿದ್ಯಾರಣ್ಯರು ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದರು.

ಷಣ್ಮತ ಸ್ಥಾಪನೆ—-ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು ಮತ್ತು ಸ್ಕಂದ ಈ ದೇವರುಗಳ ಆರಾಧಕರು ಪರಸ್ಪರ ತಾವು ಮೇಲು, ತಾವು ಮೇಲೆಂದು ಜಗಳವಾಡುತ್ತಿದ್ದುದನ್ನು ನಿಲ್ಲಿಸಿ, ಅವೆಲ್ಲವೂ ಒಬ್ಬನೇ ಈಶ್ವರನ ಬೇರೆ ಬೇರೆ ರೂಪಗಳೆಂದು ಆರಾಧಕರನ್ನು ಒಪ್ಪಿಸಿ, ಈ ಆರೂ ದೇವತೆಗಳನ್ನು ಪರಸ್ಪರ ವಿರೋಧವಿಲ್ಲದೆ ಪೂಜಿಸಬೇಕೆಂದು ನಿಯಮವನ್ನು ಮಾಡಿದರು. ತಾವು ಉಪಾಸನೆ ಮಾಡುವ ದೇವತೆಯನ್ನು ಮಧ್ಯೆ ಇಟ್ಟು ಉಳಿದ ದೇವತೆಗಳನ್ನು ಅದರ ಸುತ್ತಾ ಇಟ್ಟು, ಅದನ್ನು ಮುಖ್ಯ ದೇವತೆಯ ಪರಿವಾರವೆಂದು ಪೂಜಿಸಲು ಹೇಳಿದರು. ಈ ಪದ್ಧತಿ ಅಂದಿನಿಂದ ಶುರುವಾಯಿತು. ಈ ಕಾರಣದಿಂದ ಶಂಕರರಿಗೆ ಷಣ್ಮತಸ್ಥಾಪಕರೆಂದು ಹೆಸರಾಯಿತು.

ನಿರಾಕಾರ ಪರಬ್ರಹ್ಮ ಸಾಕ್ಷಾತ್ಕಾರಕ್ಕೆ ಇರುವ ಮಾರ್ಗಗಳಲ್ಲಿ ಶ್ರೀಚಕ್ರ ಉಪಾಸನೆಯೂ ಒಂದು. ಶಂಕರರ ಕಾಲದಲ್ಲಿ ಶ್ರೀ ಚಕ್ರ ಪೂಜೆಯು ಉಗ್ರಶಕ್ತಿಯ ಉಪಾಸನೆಯಾಗಿತ್ತು. ಶಂಕರರು ತಮ್ಮ ಅದ್ವೈತ ಸಿದ್ಧಾಂತದ ಸ್ಥಾಪನೆಯನ್ನು ಮಾಡಬೇಕಿತ್ತು. ಅದ್ವೈತ ಸಿದ್ಧಾಂತದ ಸ್ಥಾಪನೆಯ ಹಿನ್ನೆಲೆಯಲ್ಲಿ ನಿರಾಕಾರ ಪರತತ್ವದ ಸ್ಥಾಪನೆ, ಪ್ರತಿಮಾ ಪೂಜೆಗಳಿಂದ ಹೊರತಾದ ಪರಬ್ರಹ್ಮದ ಅರ್ಚನೆಯಾಗಬೇಕಿತ್ತು. ಆದರೆ ಸಾಮಾನ್ಯ ಜನರಿಗೆ ಆಕಾರಸಹಿತವಾಗಿರುವ ದೇವ-ದೇವಿಯರನ್ನು ಪೂಜಿಸಿಯೇ ರೂಢಿ. ಈ ಹಿನ್ನೆಲೆಯಲ್ಲಿ ಆಕಾರಸಹಿತವಾದ ಪ್ರತಿಮೆ, ನಿರಾಕಾರವಾಗಿರುವ ಪರಬ್ರಹ್ಮ ಎರಡರ ಮಧ್ಯದಲ್ಲಿ ಒಂದು ಸಾಧನ ಬೇಕಿತ್ತು. ಅದಕ್ಕಾಗಿ ಶಂಕರರು ಶ್ರೀ ಚಕ್ರವನ್ನು ಆಯ್ಕೆ ಮಾಡಿಕೊಂಡರು. ಆದರೆ ಭಂಡಾಸುರನ ವಧೆಯ ಕಾರಣವಾಗಿ ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀ ಚಕ್ರವನ್ನು ಯಥಾಸ್ಥಿತಿಯಲ್ಲಿ ಉಪಾಸನೆ ಜನಸಾಮಾನ್ಯರಿಗೆ ಸಾಧ್ಯವಿರಲಿಲ್ಲ. ಶ್ರೀಚಕ್ರವಿದ್ದಲ್ಲಿಗೆ ಹೋಗಿ ಶ್ರೀಚಕ್ರವನ್ನು ಪರಿಷ್ಕರಿಸಿ ಸಾತ್ವಿಕರೂಪವು ಉಗಮಿಸುವಂತೆ ಸಾತ್ವಿಕ ಶ್ರೀಚಕ್ರ ಸ್ಥಾಪನೆ ಮಾಡಬೇಕು. ಅದು ಸಾಧ್ಯವಾದರೆ, ಆ ಶ್ರೀಚಕ್ರಾರ್ಚನೆ ಮೂಲಕ ಪ್ರತಿಮಾ ಪೂಜೆಯನ್ನು ಮೀರಿ ನಿರಾಕಾರ ಪರಬ್ರಹ್ಮದ ಕಡೆಗೆ ಹೋಗುವ ಪಥದಲ್ಲಿ ಒಂದು ಸಾಧನವನ್ನು ಸ್ಥಾಪನೆ ಮಾಡಿದಂತಾಗುತ್ತದೆ. ಉಗ್ರಶಕ್ತಿಯ ಶ್ರೀಚಕ್ರಗಳಿದ್ದ ದೇವಾಲಯಗಳ ಪೈಕಿ ಅತೀ ಉಗ್ರ ಶ್ರೀಚಕ್ರ ಇದ್ದದ್ದು ಮಧುರೆಯ ಮೀನಾಕ್ಷೀ ದೇವಾಲಯದಲ್ಲಿ. ಶ್ರೀಚಕ್ರವನ್ನು ಸಾತ್ವಿಕವಾಗಿ ಪರಿಷ್ಕರಿಸಲು ಶಂಕರಾಚಾರ್ಯರು ಮಧುರೆಯ ಮೀನಾಕ್ಷೀ ದೇವಾಲಯವನ್ನೇ ಆಯ್ಕೆಮಾಡಿಕೊಂಡರು. ಸಂಖ್ಯಾಶಾಸ್ತ್ರ, ಅಕ್ಷರಶಾಸ್ತ್ರದ ಅನುಗುಣವಾಗಿ ಘೋರಮಂತ್ರಗಳನ್ನು (ಘೋರಾಕ್ಷರ) ತೆಗೆದು, ತ್ರಿಕೋನಗಳ ಸಹಿತ ಸಾತ್ವಿಕ ಅಕ್ಷರಗಳನ್ನು ರಚಿಸಿ, ಸಾತ್ವಿಕ ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನು ನಿಗ್ರಹಿಸಿದರು. ಸಾತ್ವಿಕ ಶ್ರೀಚಕ್ರಸೃಷ್ಟಿ ಆದುದು ಹೀಗೆ.

ಶಂಕರಾಚಾರ್ಯರು ಎಲ್ಲಾ ದೇವ-ದೇವಿಯರ ಮೇಲೂ ಛಂದೋಬದ್ಧವಾದ, ಆರ್ಥಗರ್ಭಿತವಾದ, ಮನೋಹರವಾದ, ಭಕ್ತಿಯಿಂದ ಸ್ತುತಿಸಿದರೆ ಇಷ್ಟಾರ್ಥವನ್ನು ಕೈಗೂಡಿಸುವಂತಹ ಅಸಂಖ್ಯ ಸ್ತೋತ್ರಗಳನ್ನು ರಚಿಸಿದ್ದಾರೆ. ಏಕಶ್ಲೋಕಿಯಿಂದ ಹಿಡಿದು ದಶ ಶ್ಲೋಕಿ, ಶತಶ್ಲೋಕಿ, 580 ಶ್ಲೋಕಗಳಿರುವ ವಿವೇಕ ಚೂಡಾಮಣಿ, ಉಪದೇಶ ಸಾಹಸ್ರೀವರೆಗೂ ಇವರ ರಚನೆಗಳಿವೆ. ಚಿಕ್ಕವಯಸ್ಸಿನವರಿಗೆ ಸುಲಭವಾದ ರಚನೆಗಳಿದ್ದರೆ, ಪಂಡಿತರಿಗೆ ಅಷ್ಟೇ ಕ್ಲಿಷ್ಟವಾದ ರಚನೆಗಳೂ ಇವೆ.

ಶಂಕರ ಅದ್ವೈತ ಸಿದ್ಧಾಂತ ತತ್ವಗಳು—-ಮೂಲತತ್ವ–ಬ್ರಹ್ಮ ಒಂದೇ ಸತ್ಯ. ಜಗತ್ತು. ಬ್ರಹ್ಮವು ಜ್ಞಾನಸ್ವರೂಪವಾಗಿದೆ.. ಅದು ಸಚ್ಚಿದಾನಂದ ಸ್ವರೂಪ, ನಿರಾಕಾರ, ನಿರ್ಗುಣ. ಭೂತ, ಭವಿಷ್ಯತ್, ವರ್ತಮಾನಗಳಲ್ಲಿ ಬಾಧಿತವಾಗದೇ ಇರುವುದು ಬ್ರಹ್ಮವೊಂದೇ.

ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತದಿಂದ ಆವರಿಸಲ್ಪಟ್ಟ ಮೂಲ ಚೈತನ್ಯವೇ ಜೀವ. ಅವಿದ್ಯೆಯಿಂದ (ಅಜ್ಞಾನದಿಂದ) ಬಿಡುಗಡೆಯಾದರೆ ಜೀವವು ಬ್ರಹ್ಮದಲ್ಲಿ ಲೀನವಾಗುವುದು. ಈ ಜ್ಞಾನವನ್ನು ಪಡೆಯಲು ನಾಲ್ಕು ಸಾಧನೆಗಳು ಅವಶ್ಯ. ಅವು ಯಾವುವೆಂದರೆ——

1) ನಿತ್ಯಾನಿತ್ಯ ವಿವೇಕ-ಬ್ರಹ್ಮವೊಂದೇ ಸತ್ಯ, ಉಳಿದವು ಅನಿತ್ಯ ಎಂಬ ವಿವೇಕ.

2) ಇಹಾಮುತ್ರ ಫಲಭೋಗ ವಿರಾಗ. ಈ ಲೋಕದ ಮತ್ತು ಪರಲೋಕದ ಭೋಗದ ಬಗಗೆ ವಿರಕ್ತಿ.

3) ಶಮ ದಮಾದಿ ಷಟ್ಕ ಸಂಪತ್ತಿ—ಅ) ಶಮ–ಅಂತರಂಗದ ಇಂದ್ರಿಯಗಳ ಹತೋಟಿ. ಆ) ದಮ–ಬಹಿರಿಂದ್ರಿಯ ನಿಗ್ರಹ, (ಇ) ಉಪರತಿ–ಕರ್ಮಫಲ ತ್ಯಾಗ., (ಈ) ತಿತಿಕ್ಷ–ಸಹನೆ, (ಉ) ಚಿತ್ತದ ಏಕಾಗ್ರತೆ, (ಊ) ಶ್ರದ್ಧೆ–ಗುರು ಹಾಗೂ ವೇದಾಂತದಲ್ಲಿ ನಿಷ್ಠೆ.

4) ಮುಮುಕ್ಷತ್ತ್ವ– ಮೋಕ್ಷ ಬೇಕೆಂಬ ತೀವ್ರ ಅಪೇಕ್ಷೆ

ಈ ಮೇಲೆ ನಮೂದಿಸಿದ ನಾಲ್ಕು ಸಾಧನೆಗಳ ಜೊತೆಗೆ, ಶ್ರವಣ, ಮನನ ಮತ್ತು ನಿಧಿಧ್ಯಾಸನ ಎಂಬ ಮೂರೂ ವಿಧದ ಸಾಧನೆಯೂ ಜ್ಞಾನದ ಪ್ರಾಪ್ತಿಗೆ ಅವಶ್ಯ.

ಶ್ರೀ ಶಂಕರರು ಬದುಕಿದ್ದು ಕೇವಲ 32 ವರ್ಷ. ಆದರೆ ಅವರು ತಮ್ಮ ಜೀವಿತದ ಪ್ರತಿಯೊಂದು ಕ್ಷಣವನ್ನೂ ಸಾರ್ಥಕವಾಗುವಂತೆ ಕೆಲಸಮಾಡಿದರು. ಅವರ ಬಗಗೆ ಜನಶ್ರುತಿ ಹೀಗಿದೆ–

ಅಷ್ಟವರ್ಷೇ ಚತುರ್ವೇದೀ, ದ್ವಾದಶೇ ಸರ್ವಶಾಸ್ತ್ರವಿತ್,
ಷೋಡಶೇ ಕೃತವಾನ್ ಭಾಷ್ಯಂ, ದ್ವಾತ್ರಿಂಶೇ ಮುನಿರಭ್ಯಗಾತ್॥
ಅರ್ಥ—8ನೇ ವರ್ಷಕ್ಕೆ 4 ವೇದಗಳನ್ನು ಕಲಿತವರು, 12ನೇ ವರ್ಷಕ್ಕೆ ಸರ್ವ ಶಾಸ್ತ್ರಗಳನ್ನೂ ತಿಳಿದವರು, 16ನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು, 32ನೇ ವರ್ಷದಲ್ಲಿ ಹೊರಟುಹೋದರು.

ಇಂಥಾ ಮಹಾಮಹಿಮರಾದ, ಅದ್ಭುತ ಕಾರ್ಯಗಳನ್ನು ಎಸಗಿದ, ಯತಿಚಕ್ರವರ್ತಿಯಾದ, ಆಚಾರ್ಯವರ್ಯರಾದ ಶ್ರೀ ಶಂಕರಾಚಾರ್ಯರಿಗೆ ಅನಂತಾನಂತ ಕೋಟಿಕೋಟಿ ನಮನಗಳು.

॥ಜಯತು ಜಯತು ನಿತ್ಯಂ ಶಂಕರಾಚಾರ್ಯವರ್ಯಾ
ಜಯತು ಜಯತು ತಸ್ಯ ಅದ್ವೈತವಿದ್ಯಾ ಅನವದ್ಯಾ।
॥ಜಯತು ಜಯತು ಲೋಕೇ ತಚ್ಚರಿತ್ರಂ ಪವಿತ್ರಂ
॥ಜಯತು ಜಯತು ಭಕ್ತಿಸ್ತತ್ಪದಾಬ್ಜೇ ಜನಾನಾಂ॥

******

No comments:

Post a Comment