ಶಿವಮಹಾಪುರಾಣೇ ವಿದ್ಯೇಶ್ವರಸಂಹಿತಾಯಾಂ ದಶಮೋऽಧ್ಯಾಯಃ
ಸೃಷ್ಟಿಃ ಸ್ಥಿತಿಶ್ಚ ಸಂಹಾರಸ್ತಿರೋಭಾವೋऽಪ್ಯನುಗ್ರಹಃ |
ಪಞ್ಚೈವ ಮೇ ಜಗತ್ಕೃತ್ಯಂ ನಿತ್ಯಸಿದ್ಧಮಜಾಚ್ಯುತೌ || ೨ ||
ಸೃಷ್ಟಿ / ಸರ್ಗ, ಸ್ಥಿತಿ / ಪಾಲನೆ, ಸಂಹಾರ / ಲಯ, ತಿರೋಭಾವ / ನಿಗ್ರಹ ಹಾಗೂ ಅನುಗ್ರಹ― ಎಂಬವುಗಳೇ ನನ್ನಲ್ಲಿ ನಿತ್ಯಸಿದ್ಧವಾಗಿರುವ ಐದು ಜಗತ್-ಕೃತ್ಯಗಳು.
ಸರ್ಗಃ ಸಂಸಾರಸಂರಮ್ಭಸ್ತತ್ಪ್ರತಿಷ್ಠಾ ಸ್ಥಿತಿರ್ಮತಾ |
ಸಂಹಾರೋ ಮರ್ದನಂ ತಸ್ಯ ತಿರೋಭಾವಸ್ತದುತ್ಕ್ರಮಃ || ೩ ||
ಜಗತ್ಸಂಸಾರವನ್ನು ಆರಂಭಿಸುವುದೇ ಸೃಷ್ಟಿಕೃತ್ಯವು. ಹೀಗೆ ಸೃಷ್ಟವಾದದ್ದನ್ನು ನಿಗದಿತ ಅವಧಿಯವರೆಗೆ ಕಾಪಿಡುವುದೇ / ಪಾಲಿಸುವುದೇ ಸ್ಥಿತಿಯು. ಈ ಅವಧಿಯ ಕೊನೆಗೆ ಎಲ್ಲವನ್ನೂ ಇಲ್ಲವಾಗಿಸುವುದೇ / ನಾಶಮಾಡುವುದೇ ಸಂಹಾರ (ಪ್ರಳಯ)ವು. ದುರ್ಮಾರ್ಗಿಗಳ ನಿಗ್ರಹವೇ ತಿರೋಭಾವವು. ಇನ್ನು, ಜೀವರಿಗೆ ಪರಮಾತ್ಮನಿಂದ ದೊರಕುವ ಮುಕ್ತಿಯ ಸ್ಥಿತಿಯೇ ೫ನೆಯದಾದ ಅನುಗ್ರಹವು.
ತದಿದಂ ಪಞ್ಚಭೂತೇಷು ದೃಶ್ಯತೇ ಮಾಮಕೈರ್ಜನೈಃ |
ಸೃಷ್ಟಿರ್ಭೂಮೌ ಸ್ಥಿತಿಸ್ತೋಯೇ ಸಂಹಾರಃ ಪಾವಕೇ ತಥಾ || ೬ ||
ತಿರೋಭಾವೋऽನಿಲೇ ತದ್ವದನುಗ್ರಹ ಇಹಾಮ್ಬರೇ |
ಸೃಜ್ಯತೇ ಧರಯಾ ಸರ್ವಮದ್ಭಿಃ ಸರ್ವಂ ಪ್ರವರ್ಧತೇ || ೭ ||
ಅರ್ದ್ಯತೇ ತೇಜಸಾ ಸರ್ವಂ ವಾಯುನಾ ಚಾಪನೀಯತೇ |
ವ್ಯೋಮ್ನಾನುಗೃಹ್ಯತೇ ಸರ್ವಂ ಜ್ಞೇಯಮೇವಂ ಹಿ ಸೂರಿಭಿಃ || ೮ ||
ನನ್ನ ನಿಜಭಕ್ತರಿಗೆ ಈ ೫ ಕೃತ್ಯಗಳೂ ೫ ಭೂತಗಳಲ್ಲಿ ಗೋಚರವಾಗುವುದು. ಭೂಮಿಯಲ್ಲಿ ಸೃಷ್ಟಿಯೂ, ನೀರಿನಲ್ಲಿ ಸ್ಥಿತಿಯೂ, ಅಗ್ನಿಯಲ್ಲಿ ಸಂಹಾರವೂ, ವಾಯುವಿನಲ್ಲಿ ತಿರೋಭಾವ / ನಿಗ್ರಹವೂ, ಆಕಾಶದಲ್ಲಿ ಅನುಗ್ರಹಶಕ್ತಿಯೂ ಕಂಡುಬರುವುದು. ಭೂಮಿಯಿಂದ ಎಲ್ಲವೂ ಸೃಜಿಸಲ್ಪಡುವುದು. ನೀರಿನಿಂದ ಸಮಸ್ತವೂ ಪ್ರವರ್ಧಿಸುವುದು / ಬೆಳೆಯುವುದು. ಅಗ್ನಿಯಿಂದ ಎಲ್ಲವೂ ಭಸ್ಮೀಕೃತವಾಗಿ / ಒಣಗಿಸಲ್ಪಟ್ಟು / ಶೋಷಿಸಲ್ಪಟ್ಟು ಸಂಹರಿಸಲ್ಪಡುವುದು. ವಾಯುವಿನಿಂದ ಇಂತಹ ಭಸ್ಮವೂ ದೂರಕ್ಕೊಯ್ಯಲ್ಪಡುವುದು / ಚದುರಿಸಲ್ಪಡುವುದು / ನಿಗ್ರಹಿಸಲ್ಪಡುವುದು, ಮರಗಿಡ ಮುಂತಾದ ಎಲ್ಲವೂ ಕಿತ್ತುಹಾಕಲ್ಪಡುವುದು. ಆಕಾಶವು ಎಲ್ಲರಿಗೂ ಅವಕಾಶವಿತ್ತು ಅನುಗ್ರಹಿಸುವುದು.
ಈ ಪಂಚಕೃತ್ಯಗಳ ನಿರ್ವಹಣೆಗೆ ೪ ದಿಕ್ಕುಗಳಿಗೆ ೪ ಹಾಗೂ ಮಧ್ಯದಲ್ಲಿ ಐದನೆಯ ಮುಖ― ಹೀಗೆ ನನಗೆ (ಶಿವನಿಗೆ) ಪಂಚಮುಖಗಳಿರುವುವು. ಸೃಷ್ಟಿಕೃತ್ಯವು ಬ್ರಹ್ಮನಿಗೂ, ಸ್ಥಿತಿಯು ವಿಷ್ಣುವಿಗೂ, ಸಂಹಾರವು ರುದ್ರನಿಗೂ, ತಿರೋಭಾವವು ಮಹೇಶ್ವರನಿಗೂ ಕೊಡಲ್ಪಟ್ಟರೆ, ಅನುಗ್ರಹಶಕ್ತಿಯು ಮಾತ್ರ ಆ ಪರಮಾತ್ಮನಲ್ಲೇ ಇರುವುದು.
ಓಂಕಾರೋ ಮನ್ಮುಖಾಜ್ಜಜ್ಞೇ ಪ್ರಥಮಂ ಮತ್ಪ್ರಬೋಧಕಃ || ೧೬ ಉತ್ತರಾರ್ಧ ||
ವಾಚಕೋऽಯಮಹಂ ವಾಚ್ಯೋ ಮನ್ತ್ರೋऽಯಂ ಹಿ ಮದಾತ್ಮಕಃ |
ತದನುಸ್ಮರಣಂ ನಿತ್ಯಂ ಮಾಮನುಸ್ಮರಣಂ ಭವೇತ್ || ೧೭ ||
ಮೊದಲು ನನ್ನ (ಶಿವನ) ಮುಖದಿಂದಲೇ ಹುಟ್ಟಿದ ಬಹುಮಂಗಲಕರವಾದ ಓಂಕಾರವು ನನ್ನ ಸ್ವರೂಪಜ್ಞಾನಪ್ರದ, ಅಹಂನಾಶಪ್ರದ, ವಿವೇಕಪ್ರದ. ಓಂಕಾರವು ನನ್ನನ್ನೇ ಹೇಳುವುದು / ನನ್ನ ವಾಚಕವು. ಅದರಿಂದ ಬೋಧಿಸಲ್ಪಡುವ ವಸ್ತುವೂ / ವಾಚ್ಯನೂ ನಾನೇ. ಇದು ನನ್ನ ಸ್ವರೂಪವೇ ಆಗಿರುವುದು. ಹಾಗಾಗಿ, ನಿತ್ಯವೂ ಮಾಡುವ ಓಂಕಾರಸ್ಮರಣೆಯು ನನ್ನ ಸ್ಮರಣೆಯೇ ಆಗುವುದು.
ಅಕಾರ ಉತ್ತರಾತ್ ಪೂರ್ವಮ್
ಉಕಾರಃ ಪಶ್ಚಿಮಾನನಾತ್ |
ಮಕಾರೋ ದಕ್ಷಿಣಮುಖಾದ್-
-ಬಿನ್ದುಃ ಪ್ರಾಙ್ಮುಖತಸ್ತಥಾ || ೧೮ ||
ನಾದೋ ಮಧ್ಯಮುಖಾದೇವಂ
ಪಞ್ಚಧಾಸೌ ವಿಜೃಮ್ಭಿತಃ |
ಏಕೀಭೂತಃ ಪುನಸ್ತದ್ವದ್-
-ಓಮಿತ್ಯೇಕಾಕ್ಷರೋ ಭವೇತ್ || ೧೯ ||
ನನ್ನ ಉತ್ತರಮುಖದಿಂದ ಅಕಾರವೂ, ಪಶ್ಚಿಮವದನದಿಂದ ಉಕಾರವೂ, ದಕ್ಷಿಣಾನನದಿಂದ ಮಕಾರವೂ, ಪೂರ್ವವಕ್ತ್ರದಿಂದ ಬಿಂದುವೂ, ಮಧ್ಯಮುಖದಿಂದ ನಾದವೂ ಜನಿಸಿ, ಇವೆಲ್ಲವೂ ಏಕೀಕರಣಗೊಂಡು “ಓಂ” ಎಂಬ ಏಕಾಕ್ಷರವಾಯಿತು. ವಿವಿಧ ನಾಮ-ರೂಪಗಳಿಂದ / ಹೆಸರು-ಆಕಾರಗಳಿಂದ ಕೂಡಿದ ಈ ಸಮಸ್ತ ಪ್ರಪಂಚವೂ, ವೇದಗಳು- ಪಂಚಭೂತಸಮೂಹ― ಎಂಬ ಇವೆರಡೂ ಈ ಶಿವ-ಶಕ್ತಿಬೋಧಕವಾದ ಪ್ರಣವಮಂತ್ರದಿಂದ ವ್ಯಾಪಿಸಲ್ಪಟ್ಟಿರುವುದು.
ನಿಷ್ಕಲಸ್ವರೂಪಬೋಧಕವಾದ ಈ ಓಂಕಾರದಿಂದಲೇ ಸಕಲಸ್ವರೂಪಬೋಧಕವಾದ ಪಂಚಾಕ್ಷರೀಮಂತ್ರವು ಉಂಟಾಯಿತು. ಪ್ರಣವದ ಅಕಾರದಿಂದ ಪಂಚಾಕ್ಷರಿಯ ನಕಾರವೂ, ಉಕಾರದಿಂದ ಮಕಾರವೂ, ಮಕಾರದಿಂದ ಶಿಕಾರವೂ, ಬಿಂದು / ಸೊನ್ನೆ ಯಿಂದ ವಕಾರವೂ, ಕೊನೆಯದಾದ ನಾದದಿಂದ ಯಕಾರವೂ ಜನಿಸಿ, “ನಮಃ ಶಿವಾಯ” ಎಂದಾಯಿತು. ಈ ಪಂಚಾಕ್ಷರಿಯಿಂದ ಪಂಚಮಾತೃಕೆಗಳೂ (ಹ್ರಸ್ವ-ದೀರ್ಘ-ಪ್ಲುತವೆಂಬ ೩ ವಿಧದ ಮಾತ್ರಾಕಾಲಗಳ ಸ್ವರಗಳು, ವರ್ಗೀಯ-ಅವರ್ಗೀಯವೆಂಬ ೨ ವಿಧದ ವ್ಯಂಜನಗಳು ― ಹೀಗೆ ವರ್ಣಮಾತೃಕೆಗಳು ಒಟ್ಟು ೫ ವಿಧ), ಶಿರಸ್ಸು-೪ ಮುಖಗಳು-೩ ಪಾದಗಳುಳ್ಳ ಸವಿತೃಗಾಯತ್ರಿಮಂತ್ರವೂ ಜನಿಸಿದವು. ಬಳಿಕ, ವೇದಮಾತೆಯಾದ ಗಾಯತ್ರಿಯು ವಿಸ್ತೃತವಾಗಿ ಸರ್ವವೇದಗಳೂ, ಮಂತ್ರಕೋಟಿಗಳೂ ಜನಿಸಿದವು. ಆಯಾಯ ಮಂತ್ರಗಳಿಂದ ಆಯಾಯ ಭೋಗ ಸಿದ್ಧಿಪ್ರಾಪ್ತಿಯಾದರೆ, ಪಂಚಾಕ್ಷರಿಯಿಂದ ಭೋಗ-ಮೋಕ್ಷಾದಿ ಸರ್ವಸಿದ್ಧಿಯಾಗುವುದು.
ಬ್ರಹ್ಮಾಚ್ಯುತೌ ಊಚತುಃ
ನಮೋ ನಿಷ್ಕಲರೂಪಾಯ ನಮೋ ನಿಷ್ಕಲತೇಜಸೇ |
ನಮಃ ಸಕಲನಾಥಾಯ ನಮಸ್ತೇ ಕಮಲಾತ್ಮನೇ || ೨೮ ||
ನಮಃ ಪ್ರಣವವಾಚ್ಯಾಯ ನಮಃ ಪ್ರಣವಲಿಙ್ಗಿನೇ |
ನಮಃ ಸೃಷ್ಟ್ಯಾದಿಕರ್ತ್ರೇ ಚ ನಮಃ ಪಞ್ಚಮುಖಾಯ ತೇ || ೨೯ ||
ಪಞ್ಚಬ್ರಹ್ಮಸ್ವರೂಪಾಯ ಪಞ್ಚಕೃತ್ಯಾಯ ತೇ ನಮಃ |
ಆತ್ಮನೇ ಬ್ರಹ್ಮಣೇ ತುಭ್ಯಮನನ್ತಗುಣಶಕ್ತಯೇ || ೩೦ ||
ಸಕಲಾಕಲರೂಪಾಯ ಶಮ್ಭವೇ ಗುರವೇ ನಮಃ |
ಇತಿ ಸ್ತುತ್ವಾ ಗುರುಂ ಪದ್ಯೈರ್ಬ್ರಹ್ಮಾ ವಿಷ್ಣುಶ್ಚ ನೇಮತುಃ || ೩೧ ||
ಬ್ರಹ್ಮಾ-ಅಚ್ಯುತರು ಹೇಳಿದರು
ಕಲೆ / ಅಂಶ / ಖಂಡರಹಿತವಾದ ಅಖಂಡ ನಿಷ್ಕಲರೂಪನಿಗೆ ನಮಸ್ಕಾರ. ಅಖಂಡ ತೇಜಸ್ಸ್ವರೂಪಿಗೆ ನಮನವು. ಸರ್ವ ಅಂಶಾಂಶಗಳ ಸಹಿತನೂ ನಾಥನೂ ಆದವನಿಗೆ ನಮಸ್ಕಾರ. ತಾವರೆಯಂಥ ಆತ್ಮಸ್ವರೂಪಿಗೆ ನಮಸ್ಕಾರ. ||೨೮||
ಪ್ರಣವ / ಓಂಕಾರ ಎಂದು ವಾಚ್ಯನಾದವನಿಗೆ / ಕರೆಯಲ್ಪಡುವವನಿಗೆ ನಮಸ್ಕಾರ. ಪ್ರಣವೇಶ್ವರಲಿಂಗನಿಗೆ / ಪ್ರಣವಲಿಂಗೇಶ್ವರನಿಗೆ / ಪ್ರಣವವನ್ನೇ ತನ್ನ ಸಂಕೇತವಾಗುಳ್ಳವನಿಗೆ ವಂದನೆ. ಸೃಷ್ಟಿಯ ಮೂಲಕರ್ತೃವಿಗೆ ನಮನ ಹಾಗೂ ಸದ್ಯೋಜಾತ-ವಾಮದೇವ-ಅಘೋರ-ತತ್ಪುರುಷ-ಈಶಾನ―ಎಂಬೀ ೫ ಮುಖಗಳುಳ್ಳವನಾಗಿ ಪಂಚಮುಖನೆನಿಸಿದ ನಿನಗೆ ನಮಸ್ಕಾರ. ||೨೯||
ಸೂರ್ಯಗಣಪತ್ಯಂಬಿಕಾಶಿವವಿಷ್ಣ್ವಾತ್ಮಿಕನಾಗಿಯೂ, ಅನ್ನಬ್ರಹ್ಮ-ಪ್ರಾಣಬ್ರಹ್ಮ-ಮನೋಬ್ರಹ್ಮ-ವಿಜ್ಞಾನಬ್ರಹ್ಮ-ಆನಂದಬ್ರಹ್ಮ― ಎಂಬೀ ತೈತ್ತಿರೀಯೋಪನಿಷದುಕ್ತ ಪಂಚಬ್ರಹ್ಮಾತ್ಮಕನಾದ, ಸೃಷ್ಟಿ-ಸ್ಥಿತಿ-ಸಂಹಾರ-ತಿರೋಭಾವ/ನಿಗ್ರಹ-ಅನುಗ್ರಹಗಳೆಂಬ ಪಂಚಕೃತ್ಯನಾದ ನಿನಗೆ ನಮನ. ಆತ್ಮನಾದ, ಪರಬ್ರಹ್ಮನಾದ, ಅನಂತವಾದ ಗುಣ-ಶಕ್ತಿಗಳುಳ್ಳವನಾದ ನಿನಗೆ ನಮನ. ||೩೦||
ಸಕಲ-ಅಕಲ/ನಿಷ್ಕಲರೂಪನಾದ ಲೋಕಗುರುವೂ, ಲೋಕಮಂಗಲಸ್ವರೂಪಿಯೂ ಆದ ಶಂಭುವಿಗೆ ನಮಸ್ಕಾರ. ಈ ರೀತಿಯಾಗಿ ಬ್ರಹ್ಮನೂ, ವಿಷ್ಣುವೂ ತಮ್ಮ ಜನಕನೂ, ಗುರುವೂ ಆದ ಮೂಲಪರಮಾತ್ಮನನ್ನು ಪದ್ಯರೂಪದಿಂದ ಸ್ತುತಿಸಿ (ಪಾದಗಳಿಂದ ಕೂಡಿರುವುದೇ ಪದ್ಯ) ನಮಿಸಿದರು.
ಲಿಙ್ಗಂ ಬೇರಂ ಚ ಮೇ ತುಲ್ಯಂ ಯಜತಾಂ ಲಿಙ್ಗಮುತ್ತಮಮ್ |
ತಸ್ಮಾಲ್ಲಿಙ್ಗಂ ಪರಂ ಪೂಜ್ಯಂ ಬೇರಾದಪಿ ಮುಮುಕ್ಷುಭಿಃ || ೩೭ ||
ನನಗೆ ಲಿಂಗವೂ, ಮೂರ್ತಿಯೂ ಒಂದೇ ಸರಿಸಮಾನ. ಆದರೂ, ಸಾಧಕರಿಗೆ ನಿರಾಕಾರಸೂಚಕವಾದ ಲಿಂಗವೇ ಆರಾಧನೆಗೆ, ಧ್ಯಾನಾದಿಗಳಿಗೆ ಉತ್ತಮ. ಹೀಗಾಗಿ, ಮೋಕ್ಷಾಕಾಂಕ್ಷಿಗಳಿಗೆ ಮೂರ್ತಿಗಿಂತಲೂ ಲಿಂಗವೇ ಪರಮಪೂಜನೀಯವಾದುದು.
ಲಿಙ್ಗಮೋಙ್ಕಾರಮನ್ತ್ರೇಣ ಬೇರಂ ಪಞ್ಚಾಕ್ಷರೇಣ ತು |
ಸ್ವಯಮೇವ ಹಿ ಸದ್ದ್ರವ್ಯೈಃ ಪ್ರತಿಷ್ಠಾಪ್ಯಂ ಪರೈರಪಿ || ೩೮ ||
ಲಿಂಗವನ್ನು ಏಕಾಕ್ಷರವಾದ ಓಂಕಾರಮಂತ್ರದಿಂದಲೂ, ಮೂರ್ತಿಯನ್ನು “ನಮಃ ಶಿವಾಯ” ಎಂಬ ಪಂಚಾಕ್ಷರೀಮಂತ್ರದಿಂದಲೂ ಸಾಧಕನು ಸ್ವಯಂ / ತಾನೇ ಅಥವಾ ಇತರರ ಮೂಲಕವಾದರೂ ಶ್ರೇಷ್ಠವಾದ ಪ್ರತಿಷ್ಠಾದ್ರವ್ಯಗಳಿಂದ ಪ್ರತಿಷ್ಠಾಪಿಸಬೇಕು.
*****
No comments:
Post a Comment