SEARCH HERE

Tuesday, 1 January 2019

ವೇದಗಳ ಕಾಲ veda time kaala


96. ಋಗ್ವೇದ ಕಾಲ ವಿಚಾರದಲ್ಲಿ ಏನೇನು ವಿವಾದಗಳಿವೆ?
 #ವೇದಪರಿಚಯ
96. ಋಗ್ವೇದದಿಂದ ನಾವು ಏನನ್ನು ಗ್ರಹಿಸಬಹುದು? 


ಗಣಿತ, ಜ್ಯೋತಿಷಗಳಲ್ಲಿ ಭಾರತೀಯರ ತಿಳುವಳಿಕೆ ಉನ್ನತ ಮಟ್ಟದ್ದಾಗಿತ್ತು ಎಂಬ ಕಾರಣದಿಂದಲೇ, ವೇದಗಳ ಪ್ರಾಚೀನತೆಯನ್ನು ಅರಿಯಲು ಅದನ್ನೇ ಸಾಧನವಾಗಿ ಬಳಸಲಾಯಿತು. ಕಾಲದ ವಿಷಯದಲ್ಲಿ ಸೂರ್ಯ, ಚಂದ್ರರನ್ನು ಆಧರಿಸಿ, ಗ್ರಹಣಗಳು, ನಕ್ಷತ್ರಗಳೊಂದಿಗೆ ಚಂದ್ರನ ಸಂಬಂಧ ಮುಂತಾದ ವಿವರಗಳೊಂದಿಗೆ, ಪಾಡ್ಯ, ಹುಣ್ಣಿಮೆ, ಅಮಾವಾಸ್ಯೆಗಳ ಲೆಕ್ಕ ಇಂದು ಸರಳ ಎನ್ನಿಸಬಹುದು. ಆದರೆ ಉಪಕರಣಗಳ ನೆರವಿಲ್ಲದೆ, ಕೇವಲ ನೆರಳು-ಬೆಳಕುಗಳನ್ನು ಆಧರಿಸಿ ಮಾಡಿದ ಲೆಕ್ಕಾಚಾರಗಳು ಇಂದಿಗೂ ಮಾನ್ಯಗೊಳ್ಳುತ್ತವೆ ಎಂದರೆ, ಅದು ವೈಜ್ಞಾನಿಕ ವಿವೇಚನೆಯಲ್ಲದೆ ಬೇರೆಯಲ್ಲ. ಅಂದಿನ ದಿನಗಳಲ್ಲಿ ಪ್ರಯೋಗಗಳ ಮೂಲಕ ಸಾಬೀತುಗೊಳಿಸುವುದಾಗಲೀ, ವೈಜ್ಞಾನಿಕ ಸಿದ್ಧಾಂತಗಳನ್ನು ಮಂಡಿಸಿ, ಪ್ರಕಟಿಸುವ ವ್ಯವಸ್ಥೆಗಳು ಇರಲಿಲ್ಲ. ಹೀಗಾಗಿ ಭಾರತೀಯ ವಿಜ್ಞಾನ ಎನ್ನುವುದು ಹಿಂದೆ ಉಳಿಯಬೇಕಾಯಿತು. 18ನೇ ಶತಮಾನದಲ್ಲಿ ಪಾಶ್ಯಾತ್ಯದೇಶಗಳಲ್ಲಿ ನಡೆದ ಕೈಗಾರಿಕಾ ಕ್ರಾಂತಿಯಿಂದ ಉತ್ಪನ್ನವಾದ ಉಪಕರಣಗಳು, ಸಂವಹನ ವ್ಯವಸ್ಥೆಗಳಿಂದಾಗಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ, ಚರ್ಚಿಸುವ ಏರ್ಪಾಡು ಬಂದಿತು. ಇದನ್ನು ಭಾರತೀಯ ವೈದಿಕ ಇತಿಹಾಸದ ಕಾಲಕ್ಕೆ ಹೋಲಿಸಿಕೊಂಡರೆ, ವೇದಗಳ ಕಾಲದ ಬಗೆಗಿನ ಜಟಿಲತೆ ಏಕೆಂದು ಅರ್ಥವಾದೀತು.

ಈ ಮಾಲಿಕೆಯ ಆರಂಭದಲ್ಲಿ ಋಗ್ವೇದದ ಕಾಲ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ವೇದಗಳು ಅಪೌರುಷೇಯ, ಎಂದರೆ ಯಾವ ಮಾನವರಿಂದಲೂ ನಿರ್ಮಿಸಲ್ಪಡಲಿಲ್ಲ ಎಂಬ ಶ್ರದ್ಧೆ ಎಂದಿನಿಂದಲೂ ಇದೆ. ಅದು ವೇದಗಳಿಗೆ ತೋರುವ ಗೌರವವೂ ಹೌದು. ಪರಮಾತ್ಮನಿಂದ ಉಪದೇಶಿಸಲ್ಪಟ್ಟ ವೇದಗಳಿಗೆ ಕಾಲದ ಪರಿವೆ ಎನ್ನುವುದು ಇರುವುದಿಲ್ಲ ಎಂಬುದು ಪ್ರಾಚೀನರ ಮತ. ಸಂಹಿತಾ, ಬ್ರಾಹ್ಮಣಗಳು, ಆರಣ್ಯಕಗಳು ಹಾಗೂ ಉಪನಿಷತ್ತುಗಳನ್ನು ಶ್ರುತಿ ಎನ್ನಲಾಗಿದೆ. ಅವುಗಳನ್ನು ಪ್ರಶ್ನಿಸುವುದು ಅಗೌರವ ಎಂಬ ಭಾವ ಹಿಂದಿನಿಂದಲೂ ರೂಢಿಯಲ್ಲಿದೆ.

ಆದರೆ ಐತಿಹಾಸಿಕವಾಗಿ ನೋಡುವಾಗ ಶ್ರದ್ಧೆ, ನಂಬಿಕೆಗಳಿಗಿಂತ, ಕಾಲಘಟ್ಟವನ್ನು ತಿಳಿಯುವುದು ಅಗತ್ಯವಾಗುತ್ತದೆ. ಬೇರೆಲ್ಲ ಸಂಗತಿಗಳಿಗೆ ಇತಿಹಾಸದ ಹಿನ್ನೆಲೆ ಇದೆಯಾದರೆ ವೇದಗಳಿಗೆ ಯಾಕೆ ಇರಬಾರದು, ಮಾನವ ಕೃತವೆಂದು ಒಪ್ಪಿಕೊಂಡರೆ, ಅದು ವೇದಗಳಿಗೆ ಅಪಮಾನ ಮಾಡಿದಂತಲ್ಲ ಎಂಬ ನಿಲುವುಗಳು ಜೈನ, ಬೌದ್ಧಮತಗಳ ಕಾಲಕ್ಕೆ ಬಂದಂತೆ, ವೇದಕಾಲದಲ್ಲೂ ಅದು ಪ್ರಸ್ತಾಪಿತವಾಗಿರುವುದುಂಟು.

ನಮಗೆ ವೇದವೇ ಪ್ರಮಾಣವೆಂದು ನಂಬಿದ ದಿನಗಳು ಇದ್ದಂತೆ, ಈಗ ಪಾಶ್ಚಾತ್ಯರ ವಾಕ್ಯಗಳೇ ಪ್ರಮಾಣವೆಂಬ ಹಂತವನ್ನು ತಲುಪಿದ್ದೇವೆ. ಪ್ರಯೋಗಶೀಲತೆಗೆ ಅವಕಾಶವಿರುವ ಪಾಶ್ಚಾತ್ಯರ ಪದ್ಧತಿಯಲ್ಲಿ, ಏಕೆ, ಹೇಗೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಅರಸಿ, ಅವುಗಳಿಗೆ ದೊರೆತ ಉತ್ತರವು ಸರ್ವತ್ರ ಅನ್ವಯವಾಗುವಂಥ ವ್ಯವಸ್ಥೆಯಿದೆ. ಇಲ್ಲಿ ತರ್ಕ, ಚಿಂತನೆಗಳಿಗೆ ಮಾನ್ಯತೆಯಿದೆ. ವೇದಗಳ ಕಾಲಕ್ಕೆ ಸಂಬಂಧಿಸಿದಂತೆ ಪಾಶ್ಯಾತ್ಯರ ಅಭಿಪ್ರಾಯಗಳು, ಇಡೀ ವೇದವಾಜ್ಮಯವನ್ನು ಅಧ್ಯಯನ ಮಾಡಿ ತಿಳಿದು, ಊಹೆಗಳಿಂದ ತಮ್ಮ ತರ್ಕವನ್ನು ಕಟ್ಟಿದ್ದಾರೆ.

ಇಷ್ಟಾಗಿಯೂ ಇದೇ ಸರಿಯೆಂದೋ, ವಿವಾದರಹಿತವೆಂದೋ ಒಪ್ಪಲಾಗದು. ಏಕೆಂದರೆ ಯಾವ ಭೌತವಸ್ತುಗಳ ಆಧಾರ ಇದಕ್ಕೆ ಇಲ್ಲದಿರುವುದರಿಂದ, ಸಾಕ್ಷ್ಯಾಧಾರಗಳು ಇಲ್ಲದಿರುವುದರಿಂದ, ವೇದಗಳಲ್ಲಿ ಪ್ರಸ್ತಾಪಿತವಾಗಿರುವ ಸಂಗತಿಗಳನ್ನು ಆಧರಿಸಿ ಊಹೆ ಮಾಡಿರುವುದೇ ಇದಕ್ಕೆ ಕಾರಣ.

ಈ ಊಹೆಗಳಲ್ಲಿಯೂ ಏಕರೂಪತೆ ಕಾಣದು. ವೇದಗಳ ಕಾಲದ ವ್ಯಾಪ್ತಿಯು ಆಧುನಿಕ ಚಿಂತಕರಲ್ಲಿ ಕ್ರಿ.ಪೂ. 18ರಿಂದ 25ಸಾವಿರ ವರ್ಷಗಳ ಹಿಂದಕ್ಕೆ ಹೋಗುತ್ತದೆಯಾದರೆ, ಮತ್ತೆ ಕೆಲವರು ಕ್ರಿ.ಪೂ. 200ರಷ್ಟು ಹಿಂದಿನದು ಎಂದು ಹೇಳುವವರೂ ಇದ್ದಾರೆ. ಇಷ್ಟೆಲ್ಲ ಊಹೆಗಳ ನಂತರವೂ ಮ್ಯಾಕ್ಸ್ ಮುಲ್ಲರ್ ಹೇಳುವಂತೆ ವೇದಗಳ ರಚನೆ ಕ್ರಿ.ಪೂ. 1000ದಿಂದ 3000ವರ್ಷಗಳಲ್ಲಿ ಆಗಿರಲಿ, ಬಿಡಲಿ ಅದನ್ನು ನಿರ್ಧರಿಸುವುದು ಈ ಭೂಮಿಯ ಮೇಲಿನ ಯಾರಿಗೂ ಸಾಧ್ಯವಾಗದು ಎಂದು ಹೇಳಿದ್ದಾರೆ. ಊಹಾಪ್ರಧಾನವಾದ ಈ ಸಂಗತಿಗೆ ಮಹತ್ವವೇಕೆಂದರೆ, ಕಾಲ ಕಾಲಕ್ಕೆ ಅಧ್ಯಯನಗಳು ನಡೆದಾಗಲೆಲ್ಲ, ಒಂದಲ್ಲ ಒಂದು ಕಾಲಘಟ್ಟವನ್ನು ಸೂಚಿಸುವ ಕಾರ್ಯ ನಿರಂತರವಾಗಿ ನಡೆದುಬಂದಿದೆ.

ಮ್ಯಾಕ್ಸ್ ಮುಲ್ಲರ್ ನ ಬಗ್ಗೆ ಇತ್ತೀಚೆಗೆ ವರದಿಯಾಗುತ್ತಿರುವ ಅನೇಕ ಸಂಗತಿಗಳನ್ನು ಗಮನಿಸಿದರೆ, ವೇದಗಳನ್ನು ಕುರಿತಾದ ಅವನ ಅಧ್ಯಯನಕ್ಕೆ ಪಾಂಡಿತ್ಯದ, ಜ್ಞಾನ ಉದ್ದೇಶಗಳಿಗಿಂತ ಆತನ ಬೇರೇನೋ ಇದ್ದಿತು ಎನ್ನುವಂತೆ ತೋರುತ್ತದೆ. ಆದರೆ ಋಗ್ವೇದದ ಬಗೆಗೆ ತಳೆದ ಮುಲ್ಲರ್ ನ ಕಾಳಜಿ ಮತ್ತು ಅಧ್ಯಯನ ಕಾಲಘಟ್ಟವನ್ನು ನೋಡುವಾಗ, ಆಗಿನ ಭಾರತೀಯ ವಿದ್ವಾಂಸರಿಗೆ ಈತನು ಕಾಲವನ್ನು ಆಧಾರವಾಗಿಟ್ಟುಕೊಂಡು ಹೇಳುತ್ತಿರುವ ವಿಧಾನವು ನೂತನವೆನ್ನಿಸಿರಬಹುದು.

ಆತನು ವಿದೇಶೀಯನಾಗಿದ್ದ ಕಾರಣಕ್ಕೆ ಅವನನ್ನು ಮೆಚ್ಚಿಕೊಂಡು, ಒಪ್ಪಿಕೊಂಡವರ ಸಂಖ್ಯೆ ಹೆಚ್ಚೆಂದು ಹೇಳಬಹುದು. ಆಗಿನ ಕಾಲ, ದೇಶದ ಪರಿಸ್ಥಿತಿ ಮುಂತಾದುವನ್ನು ಗಮನದಲ್ಲಿರಿಸಿಕೊಂಡರೆ ಅದು ಅಂದಿನ ಅಗತ್ಯವಾಗಿದ್ದಿರಬಹುದು. ಇದೊಂದು ಕಾರಣವಾಗಿರುವಂತೆ, ಮಾಕ್ಸ್ ಮುಲ್ಲರನ ಕಾಲಕ್ಕೆ ಇದ್ದ ಭಾರತೀಯರಿಗೆ, ವೈಜ್ಞಾನಿಕವಾಗಿ ಪ್ರತಿಪಾದಿಸುವ ತಿಳುವಳಿಕೆ, ವೇದಿಕೆಗಳು ಕಡಿಮೆ ಇದ್ದುದೂ ಒಂದು ಕಾರಣವಾಗಿರಬಹುದು. ಭಾರತೀಯರಿಗೆ ಇದ್ದ ಜ್ಞಾನವನ್ನು ಆಧುನಿಕ ವಿಜ್ಞಾನವು ಒಪ್ಪಿಕೊಳ್ಳದಿರುವುದು ಮತ್ತೊಂದು ಕಾರಣ.

ಕೆಳಗೆ ನೀಡಿರುವ ಚಿತ್ರವು ವೇದಕಾಲಮಾನದ ಬಗ್ಗೆ ಸ್ಥೂಲಮಾಹಿತಿಯೇ ವಿನಾ ಇದೇ ಸ್ಪಷ್ಟವೆಂದಲ್ಲ. ಲೇಖನದ ಸಾಂದರ್ಭಿಕತೆಗೆಂದು ಬಳಸಲಾಗಿದೆ. ಚಿತ್ರಕೃಪೆ-ಇಂಟರ್ನೆಟ್
**********

97. ಋಗ್ವೇದ ಕಾಲ ವಿಚಾರದಲ್ಲಿ ಏನೇನು ವಿವಾದಗಳಿವೆ?

ಇದಲ್ಲದೆ ಹಿಂದಿನ ಋಷಿಗಳು ಎಂಬ ಉಲ್ಲೇಖ ವೇದದಲ್ಲೇ ಇರುವಾಗ, ಅದರ ಪ್ರಾಚೀನತೆಯು ತಿಳಿಯುವಂತಿದೆ. ಬ್ರಾಹ್ಮಣ, ಅನುಕ್ರಮಣಿಕೆಗಳಲ್ಲಿ ಋಷಿಗಳನ್ನು ದ್ರಷ್ಟಾರರು ಎಂದರೆ, ದರ್ಶಿಸಿದವರು, ನೋಡಿದವರು ಎಂದು ಹೇಳಲಾಗಿದೆ. ಋಗ್ವೇದ ಸಂಹಿತೆಯ ಅನೇಕ ಮಂತ್ರಭಾಗಗಳು ಪುನರುಕ್ತವಾಗಿರುವುದೂ ಸ್ಪಷ್ಟವಾಗಿದೆ. ಇಲ್ಲಿ ಭಾಷಾ ದೃಷ್ಟಿಯ ವಿವೇಚನೆಯಿಂದ ಕೂಡ, ಇತಿಹಾಸವನ್ನು ಗುರುತಿಸುವುದು ಮುಖ್ಯವಾಗುತ್ತದೆಯಲ್ಲವೆ.

ನಂತರ ಬಂದ ಉಪನಿಷತ್ತುಗಳ ಪ್ರಸ್ತುತಿಯ ಕ್ರಮ, ಕಥಾನಕಗಳಿಂದ ವಿವರಿಸುವ ಬಗೆ ಇವೆಲ್ಲವೂ ಹೊಸ ಪ್ರಯೋಗಗಳಂತೆ ತೋರುವಾಗ, ಬ್ರಾಹ್ಮಣಗಳು, ಆರಣ್ಯಕಗಳು ಪ್ರಾಚೀನವಾಗಿರುತ್ತವೆ. ಡೈನೋಸಾರ್ ಗಳಂಥ ಜೀವಿಗಳ ಕಾಲಮಾನವನ್ನು ಅವುಗಳ ಪಳೆಯುಳಿಕೆಯ ಆಧಾರದಲ್ಲಿ ನಿರ್ಣಯಿಸಬಹುದು. ಅಲ್ಲಿ ಭೌತ ಸಾಕ್ಷ್ಯಗಳ ನೆರವು ಇರುತ್ತದೆ. ವೇದಗಳ ಕಾಲನಿರ್ಣಯಕ್ಕೆ ಭಾಷೆ, ಪದಗಳು, ಮಂತ್ರಗಳಲ್ಲಿನ ಸಾಮಾಜಿಕ, ಧಾರ್ಮಿಕ ವಿವರಗಳು ಕಟ್ಟಿಕೊಡುವುದನ್ನೂ ಪರಿಗಣಿಸಬೇಕಾಗುತ್ತದೆ.

ಮತ್ತೊಂದು ಅಂಶವೆಂದರೆ, ವೇದಗಳು ಮೌಖಿಕವಾಗಿ ಕಲಿಸಲ್ಪಡುತ್ತಿದ್ದವು. ಅಲ್ಲಿ ಸ್ವರಗಳ ವಿಕೃತಿಯಾಗದಂತೆ ಕಾಪಾಡಿಕೊಂಡು ಬಂದಿರುವ ಪರಂಪರೆಯ ಕೊಡುಗೆ ನಿಜಕ್ಕೂ ದೊಡ್ಡದು. ಅಕ್ಷರ ಸ್ಖಾಲಿತ್ಯಗಳಾಗಲೀ, ಪದಗಳ ತಪ್ಪು ಉಚ್ಚಾರಣೆಯಿರದಂತೆ, ಶುದ್ಧತೆಯನ್ನು ರಕ್ಷಿಸಿಕೊಂಡು ಬಂದಿರುವುದರಲ್ಲೇ ಅದರ ಹಿರಿಮೆಯಿದೆ. ಕಲಿಸುತ್ತಿದ್ದ ಗುರು-ಶಿಷ್ಯ ಪರಂಪರೆ ಒಂದೋ, ಎರಡೋ ಸರಣಿಗೆ ಸೀಮಿತವಾಗಿರದೇ, ಅನೇಕ ತಲೆಮಾರುಗಳು ಸಂದಿರುವುದು ಋಷಿಗಳ ಹೆಸರುಗಳನ್ನು ಕೇಳುವಾಗಲೇ ತಿಳಿಯುವಂತಿದೆ.

ಎಲ್ಲ ಸೂಕ್ತಗಳೂ, ಎಲ್ಲ ಮಂತ್ರಗಳೂ ಒಂದೇ ಕಾಲಘಟ್ಟದಲ್ಲಿ ರಚನೆಯಾಗಿರುವುದೂ ಅಸಾಧ್ಯವೇ ಸರಿ. ಹೀಗೆ ವೈದಿಕ ಕಾಲ ನಿರ್ಣಯವೆನ್ನುವುದು ಹಲವಾರು ಅಂಶಗಳನ್ನು ಆಧರಿಸಿ ನಡೆಸಿಯೂ, ಐಕಮತ್ಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇದೆಲ್ಲ ಸಾಲದೆಂಬಂತೆ ಝೆಂಡ್-ಅವೆಸ್ತಾದ ಕಾಲಘಟ್ಟವು ವೈದಿಕ ಕಾಲಘಟ್ಟಕ್ಕೆ ಸಮೀಪವಿದೆ ಎಂಬ ವಾದವೂ ಇದೆಯಷ್ಟೆ.

ಆಧುನಿಕ ನೆಲೆಯಲ್ಲಿ ನೋಡುವಾಗ ಕಂಡುಬರುವ ವೈದಿಕ ಕಾಲದ ಬಗೆಗಿನ ಊಹೆಗಳು, ಈ ಕೆಳಗಿನಂತಿವೆ.

1. ಮ್ಯಾಕ್ಡೊನೆಲ್ ಮತ್ತು ಮ್ಯಾಕ್ಸ್ ಮುಲ್ಲರ್ ಪ್ರಕಾರ – ಸಾ.ಕಾ. 1200 ವರ್ಷಗಳು
2. ಹ್ಯೂಗೋ ವಿಂಕ್ಲರ್ ನ ಪ್ರತಿಪಾದನೆಯಂತೆ – ಸಾ.ಕಾ. 1400 ವರ್ಷಗಳು
3. ಎಡ್. ಮೇಯರ್ ನ ವಾದದಂತೆ – ಸಾ.ಕಾ. 1500ಕ್ಕಿಂತ ಹಿಂದಿನದು
4. ಅವೆಸ್ತಾದ ಹೋಲಿಕೆಯ ಅನ್ವಯ ಅದು ಸಾ.ಕಾ. 1500ರ ನಂತರದ್ದು ಎಂದಿದೆ
5. ವಿಂಟರ್ ನೀಟ್ಸ್ ರ ಪ್ರಕಾರ – ಸಾ.ಕಾ. 2000
6. ಯಾಕೋಬಿ ಮತ್ತು ಬಾಲಗಂಗಾಧರ ತಿಲಕರ ಲೆಕ್ಕಾಚಾರದಲ್ಲಿ – ಸಾ.ಕಾ. 4500ಕ್ಕೂ ಹಿಂದಿನದು ಎಂದು ಹೇಳಲಾಗಿದೆ.

ಇಷ್ಟೆಲ್ಲ ವಾದ-ವಿವಾದಗಳ ನಂತರವೂ ವೈದಿಕ ಕಾಲನಿರ್ಣಯ ಅಸ್ಪಷ್ಟವಾಗಿ ಉಳಿಯುವುದೇ ಅದರ ವಿಶೇಷ ಮತ್ತು ಪ್ರಾಚೀನತೆಯ ರಹಸ್ಯ ಎಂದಷ್ಟೇ ಹೇಳಬಹುದು.

ಇಲ್ಲಿಗೆ ಋಗ್ವೇದ ಸಂಹಿತೆಯ ವಿವರಣೆ ಕೊನೆಗೊಂಡಿದೆ. ಇದುವರೆಗೆ ಋಗ್ವೇದ ಸಂಹಿತೆಯ ವಿಷಯದ ವಿಸ್ತಾರ, ಮಂತ್ರಗಳ ವಿವರಣೆಗಳು, ಸೂಕ್ತಗಳ ಸೌಂದರ್ಯಗಳನ್ನು ದೀರ್ಘವಾಗಿ ಚರ್ಚಿಸಲಾಯಿತು. ಇಂಥದೊಂದು ಪರಂಪರೆ ನಮಗೆ ಇದೆಯನ್ನುವುದೇ ಹೆಮ್ಮೆಯ ಸಂಗತಿಯಾಗಬೇಕು.

ದೇವ-ದೇವತೆಗಳು ಬೆಳೆದು ಬಂದ ಬಗೆ, ಸೂಕ್ತಗಳಲ್ಲಿ ಪ್ರಸ್ತಾಪಿಸಲಾದ ಸಾಮಾಜಿಕ ಸಂಗತಿಗಳು, ಮಂತ್ರಗಳಲ್ಲಿ ಕಂಡುಬರುವ ಅದ್ಭುತ ಸಾಹಿತ್ಯದ ಸೌಂದರ್ಯ, ಸಕಲ ಜೀವಿಗಳಿಗೂ ಸಲ್ಲುವ ಪ್ರೀತಿ-ಅನುಕಂಪಗಳ ಚಿತ್ರಣ, ಜೀವನ ಪ್ರೀತಿಗಳೇ ಮುಖ್ಯವಾಗಿ ಇಲ್ಲೆಲ್ಲ ಕಂಡುಬರುವಂತಿದೆ.

**********
ಭಾರತದ ಸ್ವಾತಂತ್ರ್ಯಪೂರ್ವದಲ್ಲಿ ಬಾಲಗಂಗಾಧರ ತಿಲಕರು ಹಾಗೂ ಜರ್ಮನಿಯ ಯಾಕೋಬಿಯವರ ವಿಶ್ಲೇಷಣಾತ್ಮಕ ಬರಹಗಳನ್ನೇ ನಮ್ಮ ವೈಜ್ಞಾನಿಕ ಪ್ರಬಂಧಗಳು ಎಂದುಕೊಳ್ಳಬಹುದು. ವೇದಗಳ ಭಾಗವಾದ ಬ್ರಾಹ್ಮಣಗಳ ಪ್ರಸ್ತಾಪಿತವಾಗಿರುವ ಕೃತ್ತಿಕಾ, ಮೃಗಶಿರಾ ನಕ್ಷತ್ರಗಳು ಇರುವಾಗ ವಿಷುಸಂಪಾತವಾಗುತ್ತಿತ್ತು ಎಂದು ಹೇಳಲಾಗಿದೆ. ಅಗ್ನಿರ್ವೈ ಕೃತ್ತಿಕಾ ಎಂದು ಆರಂಭವಾಗುವ ನಕ್ಷತ್ರ ಸೂಕ್ತದಲ್ಲಿ ಎಲ್ಲ ಇಪ್ಪತ್ತೇಳು ನಕ್ಷತ್ರಗಳ ಬಗೆಗಿನ ವಿವರಗಳಿವೆ. ವಿವಾಹಕಾಲದಲ್ಲಿ ಅರುಂಧತೀ ನಕ್ಷತ್ರವನ್ನು ತೋರುವ ಒಂದು ಸಂಪ್ರದಾಯವು ದಕ್ಷಿಣಭಾರತದಲ್ಲಿ ಪ್ರಚಲಿತವಿದೆ. ಅದು ಅರುಂಧತಿಯ ಪಾತಿವ್ರತ್ಯಕ್ಕೆ ಸಲ್ಲುವ ಗೌರವವಾಗಿ, ಪುರಾಣಗಳಲ್ಲಿ ಉಲ್ಲೇಖಿತವಾಗಿರುವ ಸಂಗತಿಯಿಂದ ರೂಢಿಗೆ ಬಂದಿತು. ನಿಜವೆಂದರೆ, ಉತ್ತರದಿಕ್ಕಿನಲ್ಲಿ ಪ್ರಾತಃಕಾಲ ಬೆಳಗುವ ಧೃವನಕ್ಷತ್ರವನ್ನು ವರನು ವಧುವಿಗೆ ದರ್ಶನಮಾಡಿಸಬೇಕೆಂಬ ಉಲ್ಲೇಖವಿದೆ. ಖಗೋಳಶಾಸ್ತ್ರವನ್ನು ಅನುಸರಿಸಿ ಸಾ.ಕಾ. 2780ರ ಸುಮಾರಿಗೆ ಅಂಥದೊಂದು ಪ್ರಖರ ನಕ್ಷತ್ರವೊಂದು ಇತ್ತೆಂದು ಯಾಕೋಬಿಯವರ ಮತ. ಅದೇ ರೀತಿ ಮೇಲೆ ಹೇಳಿದ ವಿಷುಸಂಪಾತದ ಕಾಲವನ್ನು ಪರಿಗಣಿಸಿದರೂ ಕ್ರಿ.ಪೂ. 2500-4500ರವರೆಗಿನ ಕಾಲವನ್ನು ವೇದಕಾಲ ಎಂಬ ಅಭಿಪ್ರಾಯವಿದೆ. ಇದಕ್ಕಾದರೂ ಸರ್ವಮಾನ್ಯತೆಯಿದೆಯೋ ಎಂದರೆ, ಅದೂ ಸಾಧಿತವಾಗಿಲ್ಲ.
ಪಾಶ್ಚಾತ್ಯ ವಿದ್ವಾಂಸರ ದೃಷ್ಟಿಕೋನವನ್ನು ಪುನರ್ ಪರಿಶೀಲಿಸುವ ಅಗತ್ಯ ಬಂದ ಕಾರಣದಿಂದಲೇ, ಅವರು ಪ್ರಸ್ತಾಪಿಸಿದ ಆರ್ಯರ ವಲಸೆಯ ಸಿದ್ಧಾಂತ ಕುಸಿಯುತ್ತಿದೆ. ಅದು ಇಲ್ಲಿ ಪ್ರಸ್ತುತವಲ್ಲವಾದರೂ, ಅವರು ವೇದಕಾಲವನ್ನು ನಿರ್ಧರಿಸಲು ಈ ವಾದವನ್ನು ಬಳಸಿದ್ದುಂಟು. ಅವರ ಸಿದ್ಧಾಂತದಂತೆ ಆರ್ಯರು ಭಾರತಕ್ಕೆ ಕ್ರಿ.ಪೂ. 1500ರಲ್ಲಿ ಬಂದರು ಎಂದು ಹೇಳುತ್ತಲೇ, ಜೈನಧರ್ಮವು ಕ್ರಿ.ಪೂ. 700ರಲ್ಲಿ ಉದಯಿಸಿತು ಎಂದೂ ಹೇಳುವರು. ಎಂದರೆ ಕೇವಲ 750 ವರ್ಷಗಳ ಹಿಂದೆ ಇಷ್ಟು ಬೃಹತ್ ಭವ್ಯ ವೇದ ವಾಜ್ಮಯವು ರಚಿತವಾಯಿತೆನ್ನುವುದನ್ನು ಒಪ್ಪಲಾದೀತೇ?
*****













No comments:

Post a Comment