SEARCH HERE

Wednesday, 24 March 2021

ಸಾಮವೇದವೃಕ್ಷದ ಶಾಖೆ ವಿಷ್ಣುಪುರಾಣ samaveda branches - vishnu purana

ಶ್ರೀವಿಷ್ಣುಪುರಾಣ - ಸಂಚಿಕೆ - 477  -  ತೃತೀಯಾಂಶ:  ಷಷ್ಠೋಧ್ಯಾಯ:

ಶ್ರೀಪರಾಶರ ಉವಾಚ:

ಸಾಮವೇದತರೋಶ್ಯಾಖಾ ವ್ಯಾಸಶಿಷ್ಯಸ್ಯ ಜೈಮಿನಿ:|
ಕ್ರಮೇಣ ಯೇನ ಮೈತ್ರೇಯ ಬಿಭೇದ ಶೃಣು ತನ್ಮಮ||1||

ಸುಮಂತುಸ್ತಸ್ಯ ಪುತ್ರೋಭೂತ್ಸುಕರ್ಮಾಸ್ಯಾಪ್ಯಭೂತ್ಸುತ:|
ಅಧೀತವಂತೌ ಚೈಕೈಕಾಂ ಸಂಹಿತಾಂ ತೌ ಮಹಾಮತೀ||2||

ಸಹಸ್ರಸಂಹಿತಾಭೇದಂ ಸುಕರ್ಮಾ ತತ್ಸುತಸ್ತತ:|
ಚಕಾರ ತಂ ಚ ತಚ್ಛಿಷ್ಯೌ ಜಗೃಹಾತೇ ಮಹಾವ್ರತೌ||3||

ಹಿರಣ್ಯನಾಭ: ಕೌಸಲ್ಯ: ಷೌಷ್ಟಿಂಜಿಶ್ವ ದ್ವಿಜೋತ್ತಮ|
ಉದೀಚ್ಯಾಸ್ಸಾಮಗಾಶ್ಯಿಷ್ಯಾಸ್ತಸ್ಯ ಪಂಚಶತಂ ಸ್ಮೃತೀ:||4||

ಹಿರಣ್ಯನಾಭಾತ್ತಾವತ್ಯಸ್ಸಂಹಿತಾ ಯೈರ್ದ್ವಿಜೋತ್ತಮೈ:|
ಗೃಹೀತಾಸ್ತೇಪಿ ಚೋಚ್ಯಂತೇ ಪಂಡಿತೈ: ಪ್ರಾಚ್ಯಸಾಮಗಾ:||5||

ಲೋಕಾಕ್ಷಿರ್ನೌಧಮಿಶ್ಚೈವ ಕಕ್ಷೀವಾನ್ ಲಾಂಗಲಿಸ್ತಥಾ|
ಪೌಷ್ಪಿಂಜಿಶಿಷ್ಯಾಸ್ತದ್ಭೇದೈಸ್ಸಂಹಿತಾ ಬಹುಲೀಕೃತಾ:||6||

ಪರಾಶರರು ಹೇಳಿದರು:-

ಮೈತ್ರೇಯ, ವ್ಯಾಸಶಿಷ್ಯನಾದ ಜೈಮಿನಿಯು ಸಾಮವೇದವೃಕ್ಷದ ಶಾಖೆಗಳನ್ನು ಕ್ರಮವಾಗಿ ಹೇಗೆ ವಿಭಾಗಿಸಿದನು ಎಂಬುದನ್ನು ಹೇಳುತ್ತೇನೆ, ಕೇಳು. 

ಜೈಮಿನಿಯ ಮಗ ಸುಮಂತು. 
ಸುಮಂತುವಿನ ಮಗ ಸುಕರ್ಮ. 
ಮಹಾಪ್ರಾಜ್ಞರಾದ ಅವರಿಬ್ಬರೂ ಸಾಮವೇದದ ಒಂದೊಂದು ಸಂಹಿತೆಯನ್ನು ಅಭ್ಯಾಸ ಮಾಡಿದರು. 

ಅನಂತರ ಸುಮಂತುವಿನ ಮಗನಾದ ಸುಕರ್ಮನು ಆ ಸಂಹಿತೆಯನ್ನು ಸಾವಿರ ಭೇದಗಳುಳ್ಳದ್ದನ್ನಾಗಿ ವಿಂಗಡಿಸಿದನು. 
ಆತನ ವ್ರತನಿಷ್ಠರಾದ ಇಬ್ಬರು ಶಿಷ್ಯರು ಅವನ್ನು ಕಲಿತರು. 

ಅವರಲ್ಲೊಬ್ಬನು ಕೋಸಲ ದೇಶದ ಹಿರಣ್ಯನಾಭ. 
ಇನ್ನೊಬ್ಬನ ಹೆಸರು ಪೌಷ್ಪಿಂಜಿ. 
ಅಲ್ಲದೆ ಸುಕರ್ಮನಿಗೆ ಐದು ನೂರು ಶಿಷ್ಯರಿದ್ದರು. 
ಸಾಮವೇದವನ್ನು ಕಲಿತ ಅವರು ಉದೀಚ್ಯಸಾಮಗರೆಂದು ಪ್ರಸಿದ್ಧರಾದರು. 

ಹಿರಣ್ಯನಾಭನಿಂದ ಆ ಐದುನೂರು ಸಂಹಿತೆಗಳನ್ನು ಕಲಿತ ಶಿಷ್ಯರನ್ನು ಪ್ರಾಚ್ಯಸಾಮಗರೆಂದು ಕರೆಯುತ್ತಾರೆ. 

ಪೌಷ್ಪಿಂಜಿಗೆ ಲೋಕಾಕ್ಷಿ, ನೌಧಮಿ, ಕಕ್ಷೀವಾನ್ ಮತ್ತು ಲಾಂಗಲಿ ಎಂಬ ಶಿಷ್ಯರಿದ್ದರು. 
ಅವರು ತಮ್ಮ ಸಂಹಿತೆಯನ್ನು ಇನ್ನೂ ವಿಭಾಗಿಸಿ ಅವುಗಳ ಸಂಖ್ಯೆಯನ್ನು ಬೆಳೆಸಿದರು. 
******

ಹಿರಣ್ಯನಾಭಶಿಷ್ಯಸ್ತು ಚತುರ್ವಿಂಶತಿಸಂಹಿತಾ:|
ಪ್ರೋವಾಚ ಕೃತಿನಾಮಾಸೌ ಶಿಷ್ಯೇಭ್ಯಶ್ಚ ಮಹಾಮುನಿ:||7||

ತೈಶ್ಚಾಪಿ ಸಾಮವೇದೋಸೌ ಶಾಖಾಭಿರ್ಬಹುಲೀಕೃತ:|
ಅಥರ್ವಣಾಮಥೋ ವಕ್ಷ್ಯೇ ಸಂಹಿತಾನಾಂ ಸಮುಚ್ಚಯಮ್||8||

ಅಥರ್ವವೇದಂ ಸ ಮುನಿಸ್ಸುಮಂತುರಮಿತದ್ಯುತಿ:|
ಶಿಷ್ಯಮಧ್ಯಾಪಯಾಮಾಸ ಕಬಂಧಂ ಸೋಪಿ ತಂ ದ್ವಿಧಾ|
ಕೃತ್ವಾ ತು ದೇವದರ್ಶಾಯ ತಥಾ ಪಥ್ಯಾಯ ದತ್ತವಾನ್||9||

ದೇವದರ್ಶಸ್ಯ ಶಿಷ್ಯಾಸ್ತು ಮೇಧೋ ಬ್ರಹ್ಮಬಲಿಸ್ತಥಾ|
ಶೌಲ್ಕಾಯನಿ: ಪಿಪ್ಪಲಾದಸ್ತಥಾನ್ಯೋ ದ್ವಿಜಸತ್ತಮ||10||

ಪಥ್ಯಸ್ಯಾಪಿ ತ್ರಯಶ್ಯಿಷ್ಯಾ: ಕೃತಾ ಯೈರ್ದ್ವಿಜ ಸಂಹಿತಾ:|
ಜಾಬಾಲಿ: ಕುಮುದಾದಿಶ್ಚ ತೃತೀಯಶ್ಯೌನಕೋ ದ್ವಿಜ||11||

ಶೌನಕಸ್ತು ದ್ವಿಧಾ ಕೃತ್ವಾ ದದಾವೇಕಾಂ ತು ಬಭ್ರವೇ|
ದ್ವಿತೀಯಾಂ ಸಂಹಿತಾಂ ಪ್ರಾದಾತ್ ಸೈಂಧವಾಯ ಚ ಸಂಜ್ಞಿನೇ||12||

ಸೈಂಧವಾನ್ ಮುಂಚಿಕೇಶಶ್ಚ ದ್ವೇಧಾ ಭಿನ್ನಾಸ್ತ್ರಿದಾ ಪುನ:|
ನಕ್ಷತ್ರಕಲ್ಪೋ ವೇದಾನಾಂ ಸಂಹಿತಾನಾಂ ತಥೈವ ಚ||13||

ಚತುರ್ಥಸ್ಸ್ಯಾಂದಾಂಗಿರಸಶ್ಯಾಂತಿಕಲ್ಪಶ್ಚ ಪಂಚಮ:|
ಶ್ರೇಷ್ಠಾಸ್ತ್ವಥರ್ವಣಾಮೇತೇ ಸಂಹಿತಾನಾಂ ವಿಕಲ್ಪಕಾ:||14||

ಹಿರಣ್ಯನಾಭನ ಶಿಷ್ಯನಾದ ಕೃತಿ ಎಂಬ ಮಹರ್ಷಿಯು ತನ್ನ ಶಿಷ್ಯರಿಗೆ ಸಾಮವೇದದ ಇಪ್ಪತ್ನಾಲ್ಕು ಸಂಹಿತೆಗಳನ್ನು ಅಧ್ಯಾಪನ ಮಾಡಿದನು. 
ಆ ಶಿಷ್ಯರಿಂದಲೂ ಸಹ ಸಾಮವೇದವು ನಾನಾ ಶಾಖೆಗಳಿಂದ ವಿಸ್ತೃತವಾಯಿತು. 

ಇನ್ನು ಅಥರ್ವವೇದಗಳ ಸಮುಚ್ಚಯವನ್ನು ಹೇಳುವೆನು.

ಮಹಾತೇಜಸ್ವಿಯಾದ ಆ ಸುಮಂತುಮುನಿಯು ತನ್ನ ಶಿಷ್ಯನಾದ ಕಬಂಧ ಎಂಬವನಿಗೆ ಅಥರ್ವವೇದವನ್ನು ಅಧ್ಯಯನ ಮಾಡಿಸಿದನು. 
ಕಬಂಧನು ಅದನ್ನು ಎರಡು ವಿಭಾಗಮಾಡಿ ದೇವದರ್ಶ ಮತ್ತು ಪಥ್ಯ ಎಂಬವರಿಗೆ ಕಲಿಸಿದನು. 

ದೇವದರ್ಶನಿಗೆ ಮೇಧ, ಬ್ರಹ್ಮಬಲಿ, ಶೌಲ್ಕಾಯನಿ ಮತ್ತು ಪಿಪ್ಪಲಾದ ಎಂಬ ನಾಲ್ವರು ಶಿಷ್ಯರಿದ್ದರು. 

ಪಥನಿಗೂ ಸಹ ಜಾಬಾಲಿ, ಕುಮುದಾದಿ, ಮತ್ತು ಶೌನಕ  ಎಂಬ ಮೂವರು ಶಿಷ್ಯರಿದ್ದರು. ಅವರು ಈ ಅಥರ್ವಸಂಹಿತೆಯನ್ನು ವಿಭಾಗ ಮಾಡಿದರು. 

ಶೌನಕನು ತನ್ನ ಸಂಹಿತೆಯನ್ನು ಎರಡಾಗಿ ವಿಂಗಡಿಸಿ ಒಂದನ್ನು ಬಭ್ರುವಿಗೂ ಇನ್ನೊಂದನ್ನು ಸೈಂಧವ ಎಂಬವನಿಗೂ ಉಪದೇಶಿಸಿದನು. 

ಅನಂತರ ಸೈಂಧವನಿಂದ ಅದನ್ನು ಅಧ್ಯಯನ ಮಾಡಿದ ಮುಂಜಿಕೇಶನು ಮೊದಲು ಎರಡಾಗಿ ವಿಂಗಡಿಸಿ ಆ ಮೇಲೆ ಮೂರಾಗಿ ಒಟ್ಟು ಐದು ವಿಭಾಗ ಮಾಡಿದನು. 

ನಕ್ಷತ್ರಕಲ್ಪ, ವೇದಕಲ್ಪ, ಸಂಹಿತಾಕಲ್ಪ, ಅಂಗಿರಸಕಲ್ಪ, ಶಾಂತಿಕಲ್ಪ - ಎಂಬೀ ಐದು ಸಂಹಿತೆಗಳು ಅಥರ್ವಣ ವೇದದಲ್ಲಿ ಶ್ರೇಷ್ಠವಾದವುಗಳು. 

********

ಆಖ್ಯಾನೈಶ್ಚಾಪ್ಯುಪಾಖ್ಯಾನೈರ್ಗಾಥಾಭಿ: ಕಲ್ಪಶುದ್ಧಿಭಿ:|
ಪುರಾಣಸಂಹಿತಾಂ ಚಕ್ರೇ ಪುರಾಣಾರ್ಥವಿಶಾರದ:||15||

ಪ್ರಖ್ಯಾತೋ ವ್ಯಾಸಶಿಷ್ಯೋಭೂತ್ಸೂತೋ ವೈ ರೋಮಹರ್ಷಣ:|
ಪುರಾಣಸಂಹಿತಾಂ ತಸ್ಮೈ ದದೌ ವ್ಯಾಸೋ ಮಹಾಮತಿ:||16||

ಸುಮತಿಶ್ಚಾಗ್ನಿವರ್ಚಾಶ್ಚ ಮಿತ್ರಾಯುಶ್ಯಾಂಸಪಾಯನ:|
ಅಕೃತವ್ರಣಸಾವರ್ಣೀ ಷಟ್ ಶಿಷ್ಯಾಸ್ತಸ್ಯ ಚಾಭವನ್||17||

ಕಾಶ್ಯಪ: ಸಂಹಿತಾಕರ್ತಾ ಸಾವರ್ಣಿಶ್ಯಾಂಸಪಾಯನ:|
ರೋಮಹರ್ಷಣಿಕಾ ಚಾನ್ಯಾ ತಿಸೃಣಾಂ ಮೂಲಸಂಹಿತಾ||18||

ಚತುಷ್ಟಯೇನ ಭೇದೇನ ಸಂಹಿತಾನಾಮಿದಂ ಮುನೇ||19||

ಆದ್ಯಂ ಸರ್ವಪುರಾಣಾನಾಂ ಪುರಾಣಂ ಬ್ರಾಹ್ಮಮುಚ್ಯತೇ|
ಅಷ್ಟದಶಪುರಾಣಾನಿ ಪುರಾಣಜ್ಞಾ: ಪ್ರಚಕ್ಷತೇ||20||

ಅನಂತರ ಪುರಾಣಾರ್ಥ ವಿಶಾರದನಾದ ವ್ಯಾಸನು ಆಖ್ಯಾನ, ಉಪಾಖ್ಯಾನ, ಗಾಥಾ (ಶಿವಗೀತೆ, ಕಪಿಲಗೀತೆ, ಮೊದಲಾದದ್ದು), ಕಲ್ಪಸಿದ್ಧಿ (ಬ್ರಾಹ್ಮಕಲ್ಪ, ವಾರಾಹಕಲ್ಪ ಮೊದಲಾದವುಗಳ ವಿಚಾರ) ಇವುಗಳಿಂದ ಕೂಡಿದ ಪುರಾಣಸಂಹಿತೆಯನ್ನು ವಿರಚಿಸಿದನು. 

ವ್ಯಾಸನಿಗೆ ರೋಮಹರ್ಷಣನೆಂಬ ಸೂತಜಾತಿಯ ಪ್ರಖ್ಯಾತ ಶಿಷ್ಯನೊಬ್ಬನಿದ್ದನು. ಬುದ್ಧಿಶಾಲಿಯಾದ ವ್ಯಾಸನು ಆ ಶಿಷ್ಯನಿಗೆ ಪುರಾಣಗಳನ್ನು ಕಲಿಸಿದನು. 

ಆ ರೋಮಹರ್ಷಣನಿಗೆ ಸುಮತಿ, ಅಗ್ನಿವರ್ಚಸ್, ಮಿತ್ರಾಯು, ಶಾಂಸಪಾಯನ, ಅಕೃತವ್ರಣ, ಸಾವರ್ಣಿ - ಎಂಬ ಆರು ಮಂದಿ ಶಿಷ್ಯರಿದ್ದರು. 

ಇವರಲ್ಲಿ ಕಶ್ಯಪಗೋತ್ರದವನಾದ ಅಕೃತವ್ರಣ ಮತ್ತು ಸಾವರ್ಣಿ, ಶಾಂಸಪಾಯನ - ಎಂಬ ಮೂವರು ಮೂರು ಪುರಾಣಸಂಹಿತೆಗಳನ್ನು ರಚಿಸಿದರು. ಈ ಸಂಹಿತೆಗಳಿಗೆ ರೋಮಹರ್ಷಣನ ಪುರಾಣ ಸಂಹಿತೆಯೇ ಆಧಾರವಾಯಿತು. 

ಹೀಗೆ ಪುರಾಣಸಂಹಿತೆಗಳ ನಾಲ್ಕು ಭೇದಗಳಿಂದ ರಚಿತವಾದ ಸಕಲ ಪುರಾಣಗಳಿಗೂ ಮೊದಲನೆಯದೆಂದು ಬ್ರಹ್ಮಪುರಾಣವು ಹೇಳಲ್ಪಟ್ಟಿದೆ. 
ಒಟ್ಟು ಹದಿನೆಂಟು ಪುರಾಣಗಳಿವೆ ಎಂದು ಪುರಾಣಜ್ಞರು ಹೇಳುತ್ತಾರೆ. 
********

ಬ್ರಾಹ್ಮಂ ಪಾದ್ಮಂ ವೈಷ್ಣವಂ ಚ ಶೈವಂ ಭಾಗವತಂ ತಥಾ|
ತಥಾನ್ಯನ್ನಾರದೀಯಂ ಚ ಮಾರ್ಕಂಡೇಯಂ ಚ ಸಪ್ತಮಮ್||21||

ಅಗ್ನೇಯಮಷ್ಟಮಂ ಚೈವ ಭವಿಷ್ಯನ್ನವಮಂ ಸ್ಮೃತಮ್|
ದಶಮಂ ಬ್ರಹ್ಮವೈವರ್ತಂ ಲೈಂಗಮೈಕಾದಶಂ ಸ್ಮೃತಮ್||22||

ವಾರಾಹಂ ದ್ವಾದಶಂ ಚೈವ ಸ್ಕಾಂದಂ ಚಾತ್ರ ತ್ರಯೋದಶಮ್|
ಚತುರ್ದಶಂ ವಾಮನಂ ಚ ಕೌರ್ಮಂ ಪಂಚದಶಂ ತಥಾ||23||

ಮಾತ್ಸ್ಯಂ ಚ ಗಾರುಡಂ ಚೈವ ಬ್ರಹ್ಮಾಂಡಂ ಚ ತತ: ಪರಮ್|
ಮಹಾಪುರಾಣಾನ್ಯೇತಾನಿ ಹ್ಯಷ್ಟಾದಶ ಮಹಾಮುನೇ||24||

ತಥಾ ಚೋಪಪುರಾಣಾನಿ ಮುನಿಭಿ: ಕಥಿತಾನಿ ಚ|
ಸರ್ಗಶ್ಚ ಪ್ರತಿಸರ್ಗಶ್ಚ ವಂಶಮನ್ವಂತರಾಣಿಚ||25||

ಯದೇತತ್ತವ ಮೈತ್ರೇಯ ಪುರಾಣಂ ಕಥ್ಯತೇ ಮಯಾ|
ಏತದ್ವೈಷ್ಣವಸಂಜ್ಞಂ ವೈ ಪಾದ್ಮಸ್ಯ ಸಮನಂತರಮ್||26||

ಸರ್ಗೇ ಚ ಪ್ರತಿಸರ್ಗೇಚ ವಂಶಮನ್ವಂತರಾದಿಷು|
ಕಥ್ಯತೇ ಭಗವಾನ್ ವಿಷ್ಣುರಶೇಷೇಷ್ವೇವ ಸತ್ತಮ||27||

ಹದಿನೆಂಟು ಪುರಾಣಗಳು ಯಾವುವೆಂದರೆ:-
(1) ಬ್ರಾಹ್ಮ,   
(2) ಪಾದ್ಮ,   
(3) ವೈಷ್ಣವ (ವಿಷ್ಣು),   
(4) ಶೈವ,   
(5) ಭಾಗವತ,   
(6) ನಾರದಿಯ,   
(7) ಮಾರ್ಕಾಂಡೇಯ,   
(8) ಆಗ್ನೇಯ,   
(9) ಭವಿಷ್ಯತ್, 
(10) ಬ್ರಹ್ಮವೈವರ್ತ, 
(11) ಲೈಂಗ, 
(12) ವಾರಾಹ, 
(13) ಸ್ಕಾಂದ, 
(14) ವಾಮನ, 
(15) ಕೌರ್ಮ, 
(16) ಮಾತ್ಸ್ಯ, 
(17) ಗಾರುಡ, 
(18) ಬ್ರಹ್ಮಾಂಡ. 
ಇವು ಅಷ್ಟದಶ ಪುರಾಣಗಳು. 

ಹೀಗೆಯೇ ಮುನಿಗಳು ಅನೇಕ ಉಪಪುರಾಣಗಳನ್ನು ಹೇಳಿದ್ದಾರೆ. ಈ ಎಲ್ಲ ಪುರಾಣಗಳಲ್ಲಿಯೂ ಸರ್ಗ, ಪ್ರತಿಸರ್ಗ (ಪ್ರಳಯ), ವಂಶ, ಮನ್ವಂತರ ಮತ್ತು ವಂಶಾನುಚರಿತಗಳು ಹೇಳಲ್ಪಡುತ್ತವೆ. 

ಮೈತ್ರೇಯ, ಈಗ ನಾನು ನಿನಗೆ ಹೇಳುತ್ತಿರುವುದು ವಿಷ್ಣುಪುರಾಣ. ಇದು ಪದ್ಮಪುರಾಣವಾದ ಮೇಲೆ ಕಥಿತವಾದದ್ದು. 

ಈ ವಿಷ್ಣುಪುರಾಣದ ಸರ್ಗ, ಪ್ರತಿಸರ್ಗ, ವಂಶ, ಮನ್ವಂತರಾದಿಗಳು - ಎಲ್ಲ ಸ್ಥಳಗಳಲ್ಲಿಯೂ ಭಗವಾನ್ ವಿಷ್ಣು ಸಂಕೀರ್ತನಾಗಿದ್ದಾನೆ. 
********


ಅಂಗಾನಿ ವೇದಾಶ್ಚತ್ವಾರೋ ಮೀಮಾಂಸಾ ನ್ಯಾಯವಿಸ್ತರ:|
ಪುರಾಣಂ ಧರ್ಮಶಾಸ್ತ್ರಂ ಚ ವಿದ್ಯಾ ಹ್ಯೇತಾಶ್ಚತುರ್ದಶ||28||

ಆಯುರ್ವೇದೋ ಧನುರ್ವೇದೋ ಗಾಂಧರ್ವಶ್ಚೈವ ತೇ ತ್ರಯ:|
ಅರ್ಥಶಾಸ್ತ್ರಂ ಚತುರ್ಥಂ ತು ವಿದ್ಯಾ ಹ್ಯಷ್ಟಾದಶೈವ ತಾ:||29||

ಜ್ಞೇಯಾ ಬ್ರಹ್ಮರ್ಷಯ: ಪೂರ್ವಂ ತೇಭ್ಯೋ ದೇವರ್ಷಯ: ಪುನ:|
ರಾಜರ್ಷಯ: ಪುನಸ್ತೇಭ್ಯ ಋಷಿಪ್ರಕೃತಯಸ್ತ್ರಯ:||30||

ಇತಿ ಶಾಖಾಸ್ಸಮಾಖ್ಯಾತಾಶ್ಯಾಖಾಭೇದಾಸ್ತಥೈವ ಚ|
ಕರ್ತಾರಶ್ಚೈವ ಶಾಖಾನಾಂ ಭೇದಹೇತುಸ್ತಥೋದಿತ:||31||

ಸರ್ವಮನ್ವಂತರೇಷ್ವೇವಂ ಶಾಖಾಭೇದಾಸ್ಸಮಾ: ಸ್ಮೃತಾ:|
ಪ್ರಾಜಾಪತ್ಯಾ ಶ್ರುತಿರ್ನಿತ್ಯಾ ತದ್ವಿಕಲ್ಪಾಸ್ತ್ವಿಮೇ ದ್ವಿಜ||32||

ಏತತ್ತೇ ಕಥಿತಂ ಸರ್ವಂ ಯತ್ಪೃಷ್ಟೋಹಮಿಹ ತ್ವಯಾ|
ಮೈತ್ರೇಯ ವೇದಸಂಬಂಧ: ಕಿಮನ್ಯತ್ಕಥಯಾಮಿ ತೇ||33||

ಇತಿ ಶ್ರೀವಿಷ್ಣುಪುರಾಣೇ ತೃತೀಯೇಂಶೇ ಷಷ್ಠೋಧ್ಯಾಯ:||

ಆರು ವೇದಾಂಗಗಳು, ನಾಲ್ಕು ವೇದಗಳು, ಮೀಮಾಂಸಾ, ನ್ಯಾಯಶಾಸ್ತ್ರ, ಪುರಾಣ ಮತ್ತು ಧರ್ಮಶಾಸ್ತ್ರ - ಹೀಗೆ ವಿದ್ಯೆಗಳು ಹದಿನಾಲ್ಕು ಇವೆ. 

ಇವುಗಳೊಡನೆ ಆಯುರ್ವೇದ, ಧನುರ್ವೇದ, ಗಾಂಧರ್ವವೇದ, ಮತ್ತು ನಾಲ್ಕನೆಯದಾದ ಅರ್ಥಶಾಸ್ತ್ರ  -  ಇವು ಸೇರಿದರೆ ಹದಿನೆಂಟು ವಿದ್ಯೆಗಳಾಗುತ್ತವೆ. 

ಋಷಿಗಳಲ್ಲಿ ಬ್ರಹ್ಮರ್ಷಿ, ದೇವರ್ಷಿ, ರಾಜರ್ಷಿ - ಎಂದು ಮೂರು ಭೇದಗಳುಂಟು. 

ಮೈತ್ರೇಯ, ಈ ಪ್ರಕಾರವಾಗಿ ನಿನಗೆ ವೇದಶಾಖೆಗಳನ್ನೂ,  ಶಾಖಾಭೇದಗಳನ್ನೂ,  ಶಾಖೆಗಳ ಕರ್ತೃಗಳನ್ನೂ,  ಶಾಖಾಭೇದಗಳಿಗೆ ಕಾರಣವನ್ನೂ  ಹೇಳಿದ್ದೇನೆ. 

ಸಕಲ ಮನ್ವಂತರಗಳಲ್ಲಿಯೂ ಈ ಶಾಖಾಭೇದಗಳು ಒಂದೇ ರೀತಿ ಇರುತ್ತವೆ. ಏಕೆಂದರೆ, ಬ್ರಹ್ಮನಿಂದ ಉಪದಿಷ್ಟವಾದ ಶ್ರುತಿಯು ನಿತ್ಯವಾದದ್ದು. ಈ ಶಾಖೆಗಳೆಲ್ಲವೂ ಶ್ರುತಿಯ ವಿವಿಧ ವಿಭಾಗಗಳು. 

ಮೈತ್ರೇಯ, ನೀನು ಕೇಳಿದಂತೆ ವೇದಸಂಬಂಧಿಯಾದ ವಿಷಯಗಳೆಲ್ಲವನ್ನೂ ನಿನಗೆ ಹೇಳಿದ್ದೇನೆ. ಇನ್ನೇನು ಹೇಳಲಿ? 

ಇಲ್ಲಿಗೆ ಶ್ರೀವಿಷ್ಣುಪುರಾಣದ ತೃತೀಯಾಂಶದಲ್ಲಿ ಆರನೆಯ ಅಧ್ಯಾಯ ಮುಗಿಯಿತು. 
********


**


No comments:

Post a Comment