SEARCH HERE

Wednesday, 24 March 2021

ರೇಡಿಯೊ radio


ನಮ್ಮ ಮನೆಗೆ ರೇಡಿಯೊ ಬಂದದ್ದು 1962ರಲ್ಲಿ.  ಆಗ ನಾನು ಆರನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯಾಗಿದ್ದರೂ ಕೆಲವೇ ದಿನಗಳಲ್ಲಿ ಅದರ ನಿಯಂತ್ರಣವನ್ನು ಕೈವಶ ಮಾಡಿಕೊಂಡು  ಒಂದೆರಡು ತಿಂಗಳೊಳಗೆ ಸಾಕಷ್ಟು R&D ಮಾಡಿ ಯಾವ ಭಾಷೆಯ ಯಾವ ಸ್ಟೇಶನ್ನಿನಿಂದ ಎಷ್ಟು ಹೊತ್ತಿಗೆ ಯಾವ ಉತ್ತಮ ಕಾರ್ಯಕ್ರಮ ಬರುತ್ತದೆಂಬ ಮಾಹಿತಿ ಕಲೆ ಹಾಕಿ ಮನೆ ಮಂದಿಯೆಲ್ಲ ಮೆಚ್ಚುವ ರೇಡಿಯೋ ಆಪರೇಟರ್ ಅನ್ನಿಸಿಕೊಂಡಿದ್ದೆ!  ಕೂಡು ಕುಟುಂಬದ ಮನೆಯಲ್ಲಿ ವಿವಿಧ ವಯೋಮಾನದ ವಿವಿಧ ಅಭಿರುಚಿಯ ಕೇಳುಗರಿರುವುದು ಸಹಜ.  ಸಾಮಾನ್ಯವಾಗಿ ಕನ್ನಡ ಚಿತ್ರಗೀತೆ ಹಾಗೂ ಇತರ ಕನ್ನಡ ಕಾರ್ಯಕ್ರಮಗಳನ್ನು ಎಲ್ಲರೂ ಇಷ್ಟ ಪಡುತ್ತಿದ್ದರು. ನಮ್ಮ ತಾಯಿಯವರಿಗೆ ಮರಾಠಿ ಕಾರ್ಯಕ್ರಮಗಳೆಂದರೆ  ಅಚ್ಚುಮೆಚ್ಚು. ಹಿರಿಯ ಅಣ್ಣಂದಿರಿಗೆ ಶಾಸ್ತ್ರೀಯ ಸಂಗೀತದತ್ತ ಹೆಚ್ಚು ಒಲವು.   ಕಿರಿಯ ಅಣ್ಣ ಮತ್ತು ನನ್ನ ಮೊದಲ ಆಯ್ಕೆ ಸಿಲೋನ್ ಮತ್ತು ವಿವಿಧಭಾರತಿ.

ವಿದ್ಯುತ್ ಸಂಪರ್ಕ ಇರದ ಹಳ್ಳಿಯ  ನಮ್ಮ ಮನೆಯಲ್ಲಿ ಇದ್ದುದು 6 ಟಾರ್ಚ್ ಸೆಲ್ಲುಗಳಿಂದ ನಡೆಯುವ ಅತ್ಯಂತ ಶಕ್ತಿಶಾಲಿಯಾದ 4  ಬ್ಯಾಂಡಿನ ನ್ಯಾಶನಲ್ ಎಕ್ಕೊ ಟೇಬಲ್ ಟ್ರಾನ್ಸಿಸ್ಟರ್. ಅದಕ್ಕೆ ನಮ್ಮಣ್ಣ ಅತ್ಯಂತ ಎತ್ತರದ ಏರಿಯಲ್ ಅಳವಡಿಸಿದ್ದರಿಂದ ಶಾರ್ಟ್ ವೇವ್ ಸ್ಟೇಶನ್ನುಗಳ ಜೊತೆಗೆ  ದೂರ ದೂರದ  ಮೀಡಿಯಂ ವೇವ್ ನಿಲಯಗಳನ್ನೂ ಸುಸ್ಪಷ್ಟವಾಗಿ  ಕೇಳಲು ಸಾಧ್ಯವಾಗುತ್ತಿತ್ತು.  ಆಗ ನಮ್ಮ ರಾಜ್ಯದಲ್ಲಿ ಇದ್ದ ಆಕಾಶವಾಣಿ ನಿಲಯಗಳು ಬೆಂಗಳೂರು ಮತ್ತು ಧಾರವಾಡ ಮಾತ್ರ. ಕೆಲ ಕಾಲದ ನಂತರ ಬೆಂಗಳೂರಿನ ಕಾರ್ಯಕ್ರಮಗಳನ್ನು ಮರುಪ್ರಸಾರ ಮಾಡಲು   ಭದ್ರಾವತಿ ಮತ್ತು ಧಾರವಾಡದ ಮರುಪ್ರಸಾರಕ್ಕೆ ಗುಲ್ಬರ್ಗ ಕೇಂದ್ರಗಳು ಆರಂಭಗೊಂಡವು. ಕೆಲ ವರ್ಷಗಳ ನಂತರವಷ್ಟೇ ಇವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸತೊಡಗಿದವು.  ಈ ಎಲ್ಲ  ಮೀಡಿಯಂ ವೇವ್ ನಿಲಯಗಳು  ಆಗಿನ ಕಾಲದಲ್ಲಿ ಹಗಲು ಹೊತ್ತಿನಲ್ಲೂ ಈಗಿನ FM ಪ್ರಸಾರಕ್ಕಿಂತಲೂ ಚೆನ್ನಾಗಿ ಕೇಳಿಸುತ್ತಿದ್ದವು. ಒಂದಿನಿತೂ ಹಿಸ್ಸಿಂಗ್ ಸದ್ದಿರುತ್ತಿರಲಿಲ್ಲ.  ಮನೆಗೆ ಬಂದ ಬಂದು ಬಾಂಧವರು ಈ ಸ್ಪಷ್ಟತೆ ಕಂಡು ಬೆರಗಾಗುತ್ತಿದ್ದರು.   ರಾತ್ರಿವೇಳೆಯಂತೂ  ಮೀಡಿಯಂ ವೇವ್ ಬ್ಯಾಂಡ್ ಲೆಕ್ಕವಿಲ್ಲದಷ್ಟು ವಿವಿಧ ಭಾಷೆಗಳ ನಿಲಯಗಳಿಂದ ತುಂಬಿಹೋಗುತ್ತಿತ್ತು.

ದಿನದ ಆರಂಭವಾಗುತ್ತಿದ್ದುದು ಮುಂಬಯಿ ಅಥವಾ ಪುಣೆ ಕೇಂದ್ರದಿಂದ ಪ್ರಸಾರವಾಗುತ್ತಿದ್ದ ಮರಾಠಿ ಅಭಂಗ ಹಾಗೂ ಭಕ್ತಿ ಗೀತೆಗಳೊಂದಿಗೆ. ಈ ನಿಲಯಗಳು ಸುಮಾರು 6-30ರ ವರೆಗೆ ಸ್ಪಷ್ಟವಾಗಿ ಕೇಳುತ್ತಿದ್ದವು. ಮುಂದೆ ಬೆಂಗಳೂರು ಕೇಂದ್ರದಿಂದ ಗೀತಾರಾಧನ. 7 ಗಂಟೆಗೆ ರೇಡಿಯೊ ಸಿಲೋನಿನಿಂದ ವಾದ್ಯ ಸಂಗೀತ್.  7-15ಕ್ಕೆ ಏಕ್ ಹೀ ಫಿಲ್ಮ್ ಕೇ ಗೀತ್.  7-30 ಕ್ಕೆ ಬೆಂಗಳೂರಿನತ್ತ ಮರಳಿ ವಾರ್ತಾ ಪ್ರಸಾರ ಮತ್ತು 7-45ರ ಕನ್ನಡ ಚಿತ್ರಗೀತೆಗಳು. ಧಾರವಾಡ, ಭದ್ರಾವತಿ, ಗುಲ್ಬರ್ಗ ಕೇಂದ್ರಗಳಿಂದಲೂ ಅದೇ ಹೊತ್ತಿಗೆ ಚಿತ್ರಗೀತೆಗಳ ಪ್ರಸಾರವಿರುತ್ತಿದ್ದುದರಿಂದ ಉತ್ತಮ ಹಾಡಿನ ನಿರೀಕ್ಷೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಮೂಲಕ  ಈ ಎಲ್ಲ ನಿಲಯಗಳ ಮಧ್ಯೆ ಆಗಾಗ ಮುಳ್ಳು ತಿರುಗಿಸುತ್ತಿರಬೇಕಾಗುತ್ತಿತ್ತು. 8 ಗಂಟೆಗೆ ಆಪ್ ಹೀ ಕೆ ಗೀತ್ ಕಾರ್ಯಕ್ರಮಕ್ಕಾಗಿ ಮತ್ತೆ ರೇಡಿಯೋ ಸಿಲೋನ್.  ಈ ಕಾರ್ಯಕ್ರಮದ ಪ್ರಥಮ ಅರ್ಧ ಗಂಟೆಯೊಳಗೆ ಉತ್ತಮ ಹಾಡುಗಳು ಮುಗಿಯುತ್ತಿದ್ದುದರಿಂದ ಸಾಮಾನ್ಯವಾಗಿ ಅಲ್ಲಿಗೆ ಬೆಳಗ್ಗಿನ ಆಲಿಸುವಿಕೆ ಮುಕ್ತಾಯವಾಗುತ್ತಿತ್ತು. ವಾರದ ಕಾರ್ಯಕ್ರಮಗಳ ಮೇಲೆ ಮುನ್ನೋಟ ಬೀರುವ ಭಾನುವಾರ ಬೆಳಗ್ಗಿನ ಪಕ್ಷಿನೋಟದ ಬಗ್ಗೆ ಬಂಧುವೊಬ್ಬರು ಮಾಹಿತಿ ನೀಡಿದ ಮೇಲೆ  ಅದನ್ನೆಂದೂ ತಪ್ಪಿಸಲಿಲ್ಲ.  ಆದರೆ ಅದನ್ನು ಪ್ರಸ್ತುತಪಡಿಸುವಾಗ ಸುಮಾರು ಬುಧವಾರದ ವರೆಗೆ ವಿವರವಾಗಿ ಹೇಳಿ ಕೊನೆ ಕೊನೆಗೆ ಸಮಯ ಸಾಲದೆ ನಂತರದ ಮುಖ್ಯ ಕಾರ್ಯಕ್ರಮಗಳನ್ನು ಬಿಟ್ಟು ಬಿಡುವುದು ಪ್ರತಿ ವಾರ ಸಂಭವಿಸುತ್ತಿದ್ದ ವಿದ್ಯಮಾನವಾಗಿತ್ತು!

ಬೆಳಗ್ಗೆ ಹನ್ನೊಂದು ಗಂಟೆಯಿಂದ ಶಾರ್ಟ್ ವೇವ್ ವಿವಿಧಭಾರತಿಯ ಹಿಂದಿ ಹಾಡುಗಳು. ಮಧ್ಯಾಹ್ನ 12 ಗಂಟೆಗೆ   ಬೆಂಗಳೂರು ಕೇಂದ್ರದಿಂದ ಕಾರ್ಮಿಕರ  ಕಾರ್ಯಕ್ರಮ. ಇದರಲ್ಲಿ ಆಗಾಗ ಚಿತ್ರಗೀತೆಗಳನ್ನಾಧರಿಸಿದ ರೂಪಕಗಳು ಪ್ರಸಾರವಾಗುತ್ತಿದ್ದವು. 12-30 ಕ್ಕೆ ವನಿತಾ ವಿಹಾರ, ಹಕ್ಕಿಯ ಬಳಗ ಇತ್ಯಾದಿ.  ಮಧ್ಯಾಹ್ನದ ಕನ್ನಡ ವಾರ್ತೆಗಳ ನಂತರ ಧಾರವಾಡ ಕೇಂದ್ರದಿಂದ ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ ಅಭಿಲಾಷಾ.  70ರ ದಶಕದಲ್ಲಿ ರೇಡಿಯೊ ಸಿಲೋನ್ ಮಧ್ಯಾಹ್ನದ ಪ್ರಸಾರ ಆರಂಭಿಸಿದ ಮೇಲೆ ಇವೆಲ್ಲವುಗಳ ಸ್ಥಾನವನ್ನು ಅಲ್ಲಿಯ ಬಹನೋಂ ಕೀ ಪಸಂದ್ ಮತ್ತು ಜಾನೆ ಪಹಚಾನೆ ಗೀತ್ ಆಕ್ರಮಿಸಿಕೊಂಡವು. ಮಧ್ಯಾಹ್ನ ಊಟದ ನಂತರ ತುಂಬಿದ ಹೊಟ್ಟೆಗೆ ಒಗ್ಗರಣೆಯಂತೆ ರೇಡಿಯೊ ಸಿಲೋನಿನ ಕನ್ನಡ ಹಾಡುಗಳು. 60ರ ದಶಕದಲ್ಲಿ ವಾರಕ್ಕೊಂದು ದಿನ ಕಾಲು ಗಂಟೆ ಇದ್ದ ಕನ್ನಡ ಹಾಡುಗಳ ಪ್ರಸಾರ 70ರ ದಶಕದಲ್ಲಿ ದಿನಾ ಅರ್ಧ ಗಂಟೆಗೆ ಬಡ್ತಿ ಹೊಂದಿತ್ತು.  ಆರಂಭದ ಕೆಲ ವರುಷ announcements ತಮಿಳು ಭಾಷೆಯಲ್ಲೇ ಇರುತ್ತಿತ್ತು. ಹೀಗಾಗಿ `ಇದ್ ಇಲಂಗ ವಾನುಲಿ ವರ್ತಗ ಒಲಿಪರಪ್ಪು. ಇಪ್ಪುಡುದು ನೇರಂ ಎರಂಡ್ ಮಣಿ.  ಎರಂಡ್ ಮುಪ್ಪದ್ ವರೈ ಕನ್ನಡ ಪಾಡಲ್' ಎಂಬಿತ್ಯಾದಿ ಕೆಲ ತಮಿಳು ವಾಕ್ಯಗಳನ್ನು ಕಲಿಯಲು ಸಾಧ್ಯವಾಗಿತ್ತು.  ಕೆಲ ಕಾಲದ ನಂತರ ಗೌರಿ ಮುನಿರತ್ನಂ, ಮೀನಾಕ್ಷಿ ಪೊಣ್ಣುದೊರೈ, ತುಲಸಿ ಸಮೀರ್ ಮುಂತಾದವರು ಕನ್ನಡದಲ್ಲಿ ನಿರೂಪಣೆ ಮಾಡುತ್ತಿದ್ದರು. ಆ ಮೇಲೆ ವಿವಿಧಭಾರತಿಯಿಂದ ಹಿಂದಿ ಫರ್ಮಾಯಿಷೀ ಹಾಡುಗಳ ಮನೋರಂಜನ್. ಭಾನುವಾರ ಬೆಂಗಳೂರು ಕೇಂದ್ರದಿಂದ ಪ್ರಸಾರವಾಗುತ್ತಿದ್ದ ಚಲನಚಿತ್ರ ಧ್ವನಿವಾಹಿನಿಯನ್ನು ಯಾವತ್ತೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಭಾನುವಾರದ ಪೂರ್ವಾಹ್ನವಿಡೀ ರೇಡಿಯೋ ಸಿಲೋನಿಗೆ ಮೀಸಲಾಗಿರುತ್ತಿತ್ತು. ಈ ಬಗ್ಗೆ ರೇಡಿಯೋ ಸಿಲೋನ್ ವಾರಾಂತ್ಯ ಲೇಖನದಲ್ಲಿ ವಿವರಗಳಿವೆ.   ಅಂದು ಮಧ್ಯಾಹ್ನ ಹನ್ನೆರಡು ಗಂಟೆಗೆ ಮದರಾಸು ಕೇಂದ್ರದಿಂದ ಹೂಮಳೆ ಎಂಬ ಕನ್ನಡ ಸಾಪ್ತಾಹಿಕ ಕಾರ್ಯಕ್ರಮ ಇರುತ್ತಿತ್ತು.  ಅದರಲ್ಲಿ ಅನೇಕ ಸಲ ರಾಜಕುಮಾರ್ ಅವರು ಭಕ್ತ ಕನಕದಾಸ ಚಿತ್ರದ ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು ಹಾಡಿದ್ದನ್ನು ಕೇಳಿದ್ದೇನೆ.

3 ಗಂಟೆಯಿಂದ 4 ಗಂಟೆ ವರೆಗೆ ಒಂದೋ AIR ಉರ್ದು ಸರ್ವಿಸ್ ಇಲ್ಲವೇ ಮಾಲ್ದಿವ್ಸ್ ದ್ವೀಪರಾಷ್ಟ್ರದ ಮಾಲೈ ರೇಡಿಯೊ  ಪ್ರಸಾರ ಮಾಡುತ್ತಿದ್ದ ಹಿಂದಿ ಹಾಡುಗಳನ್ನು ಕೇಳುವ ಸಮಯವಾಗಿತ್ತು. 4 ಗಂಟೆಗೆ ವಿವಿಧಭಾರತಿಯಿಂದ ಹಿಂದಿ ಭಾಷೆಯ ನಿರೂಪಣೆಯೊಂದಿಗೆ ದಕ್ಷಿಣ ಭಾರತೀಯ ಭಾಷಾ ಹಾಡುಗಳ ಕರ್ನಾಟಕ್ ಸಂಗೀತ್ ಸಭಾ   ಆರಂಭ. ಇದರಲ್ಲಿ ಮೊದಲು ಕಾಲು ಗಂಟೆ ಭಕ್ತಿ ಗೀತೆಗಳು.  ನಂತರ ಅರ್ಧ ಗಂಟೆ ಸುಗಮ ಸಂಗೀತ.  ಆ ಮೇಲೆ ಒಂದು ಗಂಟೆ ಚಿತ್ರ ಸಂಗೀತದ ಮಧುರ್ ಗೀತಂ. ಇದರಲ್ಲಿ   ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳ ಭಾಷೆಗಳ ಸರದಿ ಪ್ರತಿ ತಿಂಗಳಿಗೊಮ್ಮೆ ಚಕ್ರಾಕಾರವಾಗಿ ಬದಲಾಗುತ್ತಿತ್ತು. ಆಗ ವಿವಿಧಭಾರತಿಯ ಶಾರ್ಟ್ ವೇವ್ ಪ್ರಸಾರ 31 ಮತ್ತು 41 ಮೀಟರ್ ಬ್ಯಾಂಡಿನಲ್ಲಿ ಇರುತ್ತಿತ್ತು.  ಒಂದು  ಮದರಾಸಿನಿಂದ ಇನ್ನೊಂದು ಮುಂಬಯಿಯಿಂದ.  ಆ ಕಾಲದಲ್ಲಿ ಈಗಿನಂತೆ ರೇಡಿಯೊ ನೆಟ್ ವರ್ಕ್ ಇತ್ಯಾದಿ ಇಲ್ಲದ್ದರಿಂದ ಕಾರ್ಯಕ್ರಮಗಳನ್ನು ಮುಂಚಿತವಾಗಿ ಧ್ವನಿಮುದ್ರಣ ಮಾಡಿ ಎಲ್ಲ ವಿವಿಧಭಾರತಿ ಕೇಂದ್ರಗಳಿಗೆ ಕಳಿಸಲಾಗುತ್ತಿತ್ತು.  ಹೀಗಾಗಿ ಕೆಲವು ಸಲ ಕನ್ನಡ ಹಾಡುಗಳ ಸಮಯ ಈ ಎರಡು ತರಂಗಾಂತರಗಳಲ್ಲಿ ಬೇರೆ ಬೇರೆಯಾಗಿರುವುದೂ ಇತ್ತು.  ಹಾಗಾದಾಗ ಒಂದು ಕಡೆ ಕನ್ನಡ ಹಾಡುಗಳನ್ನು ರಹಸ್ಯವಾಗಿ ಕೇಳಿಸಿಕೊಂಡು ಕೊಂಚ ಸಮಯದ ನಂತರ ಇನ್ನೊಂದೆಡೆಯಿಂದ ಪ್ರಸಾರವಾಗುವಾಗ ಹಾಡುಗಳ ವಿವರಗಳನ್ನು  ಮುಂಚಿತವಾಗಿ ಊಹಿಸಿದಂತೆ ನಾಟಕವಾಡಿ ಮನೆಮಂದಿಯನ್ನು ಚಕಿತಗೊಳಿಸಲು ಸಾಧ್ಯವಾಗುತ್ತಿತ್ತು! ಈಗ  ಈ ಕರ್ನಾಟಕ ಸಂಗೀತ ಸಭಾ ಕಾರ್ಯಕ್ರಮ ನಿಂತೇ ಹೋಗಿದೆ. ಮದರಾಸು ಕೇಂದ್ರವಾಗಿ ಕಾರ್ಯಾಚರಿಸುತ್ತಿದ್ದ ಈ ಕಾರ್ಯಕ್ರಮಕ್ಕಾಗಿ ಸಂಗ್ರಹಿಸಲ್ಪಟ್ಟ  ಹಳೆ ಚಿತ್ರಗೀತೆಗಳ ಅಮೂಲ್ಯ 78 rpm ರೆಕಾರ್ಡುಗಳೆಲ್ಲ ಏನಾದವೋ. ಅವನ್ನು ನಮ್ಮ ಕೇಂದ್ರಗಳು ಪಡೆದು ಡಿಜಿಟಲೀಕರಣಗೊಳಿಸಿದರೆ ದೊಡ್ಡ ಖಜಾನೆಯೇ ನಮ್ಮದಾಗಬಹುದು. ಸಂಜೆ 5 ಗಂಟೆ ನಂತರ ರೇಡಿಯೊ ಮೋಸ್ಕೊದಿಂದ  ಪ್ರಸಾರವಾಗುತ್ತಿದ್ದ ಕನ್ನಡ ಕಾರ್ಯಕ್ರಮವನ್ನೂ ಒಮ್ಮೊಮ್ಮೆ ಕೇಳುವುದಿತ್ತು. ಆದರೆ ಇದರಲ್ಲಿ ಮನರಂಜನೆ  ಅಂಶದ ಕೊರತೆ ಇದ್ದುದರಿಂದ ಅಷ್ಟೊಂದು ಆಸಕ್ತಿದಾಯಕ ಅನ್ನಿಸುತ್ತಿರಲಿಲ್ಲ.

ಸಂಜೆ ಪ್ರದೇಶ ಸಮಾಚಾರದಿಂದ ಮೊದಲ್ಗೊಂಡು ಗ್ರಾಮಸ್ಥರ ಕಾರ್ಯಕ್ರಮ, ವಾರ್ತೆಗಳು ಎಲ್ಲವನ್ನೂ ಕೇಳುತ್ತಿದ್ದೆವು.  ಗ್ರಾಮಸ್ಥರ ಕಾರ್ಯಕ್ರಮದಲ್ಲಿ ಕೆಲವೊಮ್ಮೆ ಪ್ರಸಾರವಾಗುತ್ತಿದ್ದ ಒಂದು ಚಿತ್ರಗೀತೆ ತುಂಬಾ ಇಷ್ಟವಾಗುತ್ತಿತ್ತು.  ನಾನು ಏಳನೇ ಕ್ಲಾಸಲ್ಲಿರುವಾಗ ಈ ಕಾರ್ಯಕ್ರಮದಲ್ಲಿ ಪ್ರಸಾರವಾದ ನೀರಲ್ಲಿ ಹುಟ್ಟಿ ನೀರಲ್ಲಿ ಬೆಳೆದು ನೀರು ಸೋಕಿದರೆ ಮಾಯ ಎಂಬ ಒಗಟಿಗೆ ಉಪ್ಪು ಎಂದು ಉತ್ತರ ಬರೆದು ಕಳಿಸಿದ್ದೆ.  ಕೆಲದಿನಗಳ ನಂತರ ನನ್ನ ಹೆಸರು ಮೊದಲ ಬಾರಿ ರೇಡಿಯೊದಲ್ಲಿ ಕೇಳಿಬಂದಾಗ ತುಂಬಾ ಸಂಭ್ರಮಗೊಂಡಿದ್ದೆ.  ಆಗ ಬೆಂಗಳೂರು ನಿಲಯದಿಂದ ವಾರಕ್ಕೆ ಒಂದು ದಿನ ಮಾತ್ರ ಸೋಮವಾರ ರಾತ್ರೆ ಎಂಟು ಗಂಟೆಗೆ  ಮೆಚ್ಚಿನ ಚಿತ್ರಗೀತೆಗಳ ಕಾರ್ಯಕ್ರಮ ಇರುತ್ತಿತ್ತು. ಅದರಲ್ಲಿ ಮೊತ್ತ ಮೊದಲನೆಯದಾಗಿ ಓಹಿಲೇಶ್ವರ ಚಿತ್ರದ ಈ ದೇಹದಿಂದ ದೂರನಾದೆ ಹಾಡು ಕೇಳಿದ್ದು ಈಗಲೂ ನೆನಪಿದೆ. ಖ್ಯಾತ ಸಾಹಿತಿ ಎನ್ಕೆ ಅವರು ನಡೆಸಿಕೊಡುತ್ತಿದ್ದ ‘ಸುವೀ ಅವರ ಸವಿನಯ ವಂದನೆಗಳು’ ಅನ್ನುತ್ತಾ ಆರಂಭವಾಗುತ್ತಿದ್ದ ಭಾನುವಾರ ರಾತ್ರೆಯ ಪತ್ರೋತ್ತರ ಕಾರ್ಯಕ್ರಮ ಆಕರ್ಷಕವಾಗಿರುತ್ತಿತ್ತು.  ಬುಧವಾರ ರಾತ್ರೆ ಬಿನಾಕಾ ಗೀತ್ ಮಾಲಾ ಕಾರ್ಯಕ್ರಮಕ್ಕೆ ಮೀಸಲು.  ಅಂದು  ಏಳುವರೆಯೊಳಗೆ ಊಟ ಮುಗಿಸಿ ರೇಡಿಯೋ ಪಕ್ಕದ ಕುರ್ಚಿಯನ್ನು ಆಕ್ರಮಿಸಿದರೆ ಏಳುತ್ತಿದ್ದುದು ಒಂಭತ್ತು ಗಂಟೆಯ ನಂತರವೇ. ವಾರದ ಇತರ ದಿನಗಳಲ್ಲಿ ರಾತ್ರೆ 7.30ರಿಂದ 8ರ ವರೆಗೆ ರೇಡಿಯೊ ಸಿಲೋನಿನ ದೃಶ್ ಔರ್ ಗೀತ್, ಪಸಂದ್ ಅಪ್ನೀ ಅಪ್ನೀ ಖಯಾಲ್ ಅಪ್ನಾ ಅಪ್ನಾ, ಜಬ್ ಆಪ್ ಗಾ ಉಠೆ ಮುಂತಾದ ಸಾಪ್ತಾಹಿಕ ಕಾರ್ಯಕ್ರಮಗಳು ಹಾಗೂ ಚಲನಚಿತ್ರಗಳ ಪ್ರಚಾರದ ರೇಡಿಯೋ ಪ್ರೋಗ್ರಾಂಗಳನ್ನು ಕೇಳುವ ಸಮಯವಾಗಿತ್ತು.   ಗುರುವಾರ ಮತ್ತು ಭಾನುವಾರಗಳ ಸಂಜೆಗಳು ತಾಯಿಯವರಿಗೆ ಮೀಸಲು.  ಅವು ಮುಂಬಯಿ ಕೇಂದ್ರದಿಂದ ಮರಾಠಿ ಹರಿಕಥೆ ಪ್ರಸಾರವಾಗುತ್ತಿದ್ದ ದಿನಗಳು.  ಬದುಕಿರುವಷ್ಟು ಕಾಲ ಅವರು ಈ ಎರಡು ದಿನಗಳಂದು ಹರಿಕಥೆ ಕೇಳುವ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದರು. ಕೆಲವೊಮ್ಮೆ ಬೆಂಗಳೂರು ಕೇಂದ್ರದಿಂದ ಪ್ರಸಾರವಾಗುತ್ತಿದ್ದ ಕನ್ನಡ ಕಥಾ ಕಾಲಕ್ಷೇಪವನ್ನೂ ಕೇಳುತ್ತಿದ್ದರು. ಶನಿವಾರ ಸಂಜೆ ಮುಂಬಯಿ A  ಕೇಂದ್ರದ ಕನ್ನಡ ಕಾರ್ಯಕ್ರಮ ಕೇಳುತ್ತಿದ್ದೆವು.  ಅಲ್ಲಿಂದ ಒಮ್ಮೆ ಗಣೇಶ ಪ್ರತಾಪ ಎಂಬ ತೆಂಕು ತಿಟ್ಟಿನ ಯಕ್ಷಗಾನವೊಂದು ಪ್ರಸಾರವಾದಾಗ ಮೊತ್ತಮೊದಲ ಬಾರಿ ರೇಡಿಯೊದಲ್ಲಿ ಚೆಂಡೆ ಪೆಟ್ಟು ಕೇಳಿದ ಥ್ರಿಲ್ ಅನುಭವಿಸಿದ್ದೆವು.  ಎಂದಾದರೊಮ್ಮೆ ಮಾತ್ರ ಈ ರೀತಿ ಯಕ್ಷಗಾನದ ಪ್ರಸಾರ ಇರುವುದಾಗಿದ್ದರೂ ಆ ಮೇಲೆ ಆ ಕೇಂದ್ರವನ್ನು   ಯಕ್ಷಗಾನದ ಮುಂಬೈ ಎಂದೇ ಕರೆಯಲಾಗುತ್ತಿತ್ತು!  ಗುರುವಾರ ರಾತ್ರಿ ಹೈದರಾಬಾದ್ ಕೇಂದ್ರದ ಸಾಪ್ತಾಹಿಕ ಕನ್ನಡ ಕಾರ್ಯಕ್ರಮವನ್ನೂ ಕೇಳುತ್ತಿದ್ದೆವು. ಧಾರವಾಡ ಕೇಂದ್ರಕ್ಕೆ ಹೊಸ transmitter ಬಂದು ಹಳೆಯದನ್ನು ವಿವಿಧಭಾರತಿಗಾಗಿ ಉಪಯೋಗಿಸತೊಡಗಿದ ಮೇಲೆ  ಅಲ್ಲಿಂದ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದ್ದ ವೃಂದಾವನ ಕಾರ್ಯಕ್ರಮವನ್ನು ಕೇಳುತ್ತಿದ್ದೆವು. ಆದರೆ ಬೆಂಗಳೂರು ವಿವಿಧಭಾರತಿ ನಮ್ಮೂರನ್ನು ತಲುಪುವಷ್ಟು ಶಕ್ತಿಶಾಲಿಯಾಗಿರಲಿಲ್ಲ. 8ರಿಂದ 9ರ ನಡುವೆ ಬಿ.ಬಿ.ಸಿ ಹಿಂದಿ ಪ್ರಸಾರವನ್ನೂ ಒಮ್ಮೊಮ್ಮೆ ಆಲಿಸುವುದಿತ್ತು.  ಭಾರತ ಪಾಕ್ ಯುದ್ಧದ ಸಮಯದಲ್ಲಂತೂ ನಿಷ್ಪಕ್ಷಪಾತವಾದ ಸುದ್ದಿಗಳಿಗಾಗಿ ದಿನವೂ ತಪ್ಪದೆ ಕೇಳುತ್ತಿದ್ದೆವು. ಭಾನುವಾರ ಝಂಕಾರ್ ಎಂಬ ಸಂಗೀತಕ್ಕೆ ಸಂಬಂಧಿಸಿದ ಚಿಕ್ಕ ಕಾರ್ಯಕ್ರಮವೊಂದು ಅಲ್ಲಿಂದ ಪ್ರಸಾರವಾಗುತ್ತಿತ್ತು.  ಸಾಮಾನ್ಯವಾಗಿ ಮಾಧ್ಯಮಗಳಿಂದ ದೂರವೇ ಉಳಿಯುತ್ತಿದ್ದ  ಮಹಮ್ಮದ್ ರಫಿಯವರ  ಇಂಟರ್ ವ್ಯೂ ಒಂದನ್ನು ಆ ಕಾರ್ಯಕ್ರಮದಲ್ಲಿ 16-Jul-1972ರಂದು ಮೊತ್ತ ಮೊದಲ ಬಾರಿಗೆ ಕೇಳುವ ಅವಕಾಶ ಸಿಕ್ಕಿತ್ತು.

ರಾತ್ರಿ ಒಂಭತ್ತು ಗಂಟೆಯ ನಂತರ ನಾವೆಲ್ಲ ಹಾಸಿಗೆ ಸೇರಿದ ಮೇಲೆ ನಮ್ಮ ಹಿರಿಯಣ್ಣ ತಮಗಿಷ್ಟವಾದ ಶಾಸ್ತ್ರೀಯ ಸಂಗೀತ ಇತ್ಯಾದಿ ಕೇಳುತ್ತಾ ತಡರಾತ್ರಿವರೆಗೂ ಕೂತಿರುತ್ತಿದ್ದರು.  ಅವರಿಗೆ ಹಿಂದಿ ಹಾಡುಗಳೆಂದರೆ ಅಷ್ಟಕ್ಕಷ್ಟೇ ಆದರೂ ಅವುಗಳನ್ನು ಕೇಳದಂತೆ ನಮ್ಮನ್ನೆಂದೂ ತಡೆಯುತ್ತಿರಲಿಲ್ಲ.   ಎಲ್ಲ ಹಿಂದಿ ಹಾಡುಗಳು ಒಂದೇ ರೀತಿ ಕೇಳುತ್ತವೆ ಅನ್ನುತ್ತಿದ್ದರು - ನನಗೆ ಈಗಿನ ಹಿಂದಿ ಹಾಡುಗಳು ಕೇಳಿಸಿದ ಹಾಗೆ! ನಾನು 8ನೇ ತರಗತಿಗೆ ಹಾಸ್ಟೆಲ್ ಸೇರಿದ ಮೇಲೂ ಮನೆಯಲ್ಲಿ ಹಿಂದಿ ಹಾಡುಗಳನ್ನು ಹೊರತು ಪಡಿಸಿ ಬಹುತೇಕ ಇದೇ ಟೈಮ್ ಟೇಬಲ್ ಪಾಲಿಸಲಾಗುತ್ತಿತ್ತು. ವಾರಾಂತ್ಯಗಳಲ್ಲಿ ಮತ್ತು ರಜಾದಿನಗಳಲ್ಲಿ ನಾನು ಮನೆಗೆ ಹೋದಾಗ ಮತ್ತೆ ರೇಡಿಯೋ ನಿಯಂತ್ರಣ ನನ್ನ ಕೈಗೆ ಬರುತ್ತಿತ್ತು!

ಈಗ ಇಷ್ಟು ವರ್ಷಗಳ ನಂತರ ಸೆಟಿಲೈಟ್ ಟಿ.ವಿ, ಮೊಬೈಲ್, ಅಂತರ್ಜಾಲ  ಏನೆಲ್ಲ ಇದ್ದರೂ ಈಗಲೂ ಮನರಂಜನೆಗೆ ನನ್ನ ಮೊದಲ ಆಯ್ಕೆ ರೇಡಿಯೋವೇ ಆಗಿದೆ.  ಆದರೆ ಸುತ್ತಲೂ ಇರುವ ಅಸಂಖ್ಯ ಇಲೆಕ್ಟ್ರಾನಿಕ್ ಉಪಕರಣಗಳು ಸೂಸುವ ವಿಕಿರಣ ಮೀಡಿಯಂ ವೇವ್ ಮತ್ತು ಶಾರ್ಟ್ ವೇವ್ ಪ್ರಸಾರವನ್ನು ಬಾಧಿಸುವುದರಿಂದ ಹಾಗೂ ಬಹುತೇಕ ಎಫ್.ಎಂ. ನಿಲಯಗಳು ಏಕತಾನತೆಯಿಂದ ಬಳಲುವುದರಿಂದ ರೇಡಿಯೋ ಆಲಿಸುವ ಅವಧಿ ತುಂಬಾ ಸೀಮಿತವಾಗಿದೆ. ಕನ್ನಡ ವಿವಿಧಭಾರತಿ, ರೇನ್ ಬೋ ಹಾಗೂ ಬೆಂಗಳೂರು ಮುಖ್ಯ ವಾಹಿನಿ ಇತ್ಯಾದಿ ಆಕಾಶವಾಣಿ ಬೆಂಗಳೂರಿನ  ಎಲ್ಲ ವಾಹಿನಿಗಳು ಮತ್ತು ಮುಂಬೈ ಹಿಂದಿ ವಿವಿಧಭಾರತಿ, ಉರ್ದು ಸರ್ವಿಸ್ ಇತ್ಯಾದಿ  ವೆಬ್ ಸ್ಟ್ರೀಮಿಂಗ್ ಮೂಲಕ ಅಂತರ್ಜಾಲದಲ್ಲಿ ಲಭ್ಯವಿದ್ದರೂ ನೇರವಾಗಿ ರೇಡಿಯೋದಲ್ಲಿ ಕೇಳುವಾಗ ಸಿಗುತ್ತಿದ್ದ ಆನಂದ ಈಗ ಅವುಗಳಲ್ಲಿಲ್ಲ. ಇತ್ತೀಚೆಗೆ ಇವೆಲ್ಲವುಗಳಲ್ಲಿ ತಮ್ಮದೇ ಕಾರ್ಯಕ್ರಮಗಳ ಬಗ್ಗೆ ಪದೇ ಪದೇ ತುತ್ತೂರಿ ಊದುತ್ತಾ ಹೂರಣಕ್ಕಿಂತ ಹೆಚ್ಚು ಕಾಲಹರಣ ಮಾಡುತ್ತಾ ವಟಗುಟ್ಟುವ ಪ್ರವೃತ್ತಿ ಹೆಚ್ಚಾಗಿರುವುದು ಇದಕ್ಕೆ ಮುಖ್ಯ ಕಾರಣ. ಆದರೂ ನನ್ನಿಷ್ಟದ ಕಾರ್ಯಕ್ರಮಗಳು ಅಂತರ್ಜಾಲ, ಡಿ.ಟಿ.ಹೆಚ್ ಇತ್ಯಾದಿ  ಯಾವ ಮೂಲದಿಂದ ಬಂದರೂ ಅವುಗಳನ್ನು ರೇಡಿಯೊದಲ್ಲೇ ಆಲಿಸಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಿಕೊಂಡು ರೇಡಿಯೋದೊಂದಿಗಿನ ನನ್ನ ನಂಟನ್ನು ಉಳಿಸಿಕೊಂಡಿದ್ದೇನೆ. -ವಿಶ್ವ ರೇಡಿಯೋ ದಿನದ ಸಂದರ್ಭದಲ್ಲಿ... - ಚಿದಂಬರ ಕಾಕತ್ಕರ್
*****

No comments:

Post a Comment