SEARCH HERE

Sunday, 13 December 2020

ಭಗವಂತ ಧರಿಸಿದ ಪಾದರೇಖೆಗಳ ವೈಶಿಷ್ಟ್ಯ

   ಭಗವಂತ ಧರಿಸಿದ ಪಾದರೇಖೆಗಳ ವೈಶಿಷ್ಟ್ಯ


ಶ್ರೀಮದ್ ಭಾಗವತ ತೃತೀಯ ಸ್ಕಂಧದಲ್ಲಿ ಸಂಚಿಂತಯೇತ್ ಭಗವತಶ್ಚರಣಾರವಿಂದಂ ವಜ್ರಂಕುಶಧ್ವಜಸರರುಹ ಲಾಂಛನಾಡ್ಯಮ್ ಎಂದಂತೆ ಅಂಕುಶ,ಧ್ವಜ ,ಪದ್ಮರೇಖೆಗಳೇ ಮೊದಲಾದ ಚಿಹ್ನೆಗಳಿಂದ ಕೊಡಿದ ಆ ಭಗವಂತನ ಪಾದಕಮಲವನ್ನು ಧ್ಯಾನಿಸಬೇಕು ಎಂದು ತಿಳಿಸಿದ್ದಾರೆ.

ಭಗವಂತನು ಪಾದದಲ್ಲಿ ಈ ವಜ್ರಾಂಕುಶಗಳೇ ಮೊದಲಾದ ರೇಖೆಗಳನ್ನು ಏಕೆ ಧರಿಸಿದ್ದಾನೆ ? ಅವುಗಳ ವೈಶಿಷ್ಟ್ಯವೇನೆಂಬುದನ್ನು ಶ್ರೀಆದಿತ್ಯ ಪುರಾಣಾಂತರ್ಗತ  ವೆಂಕಟೇಶ ಮಹಾತ್ಮೆಯಲ್ಲಿ ತಿಳಿಸಿದ್ದಾರೆ ಅವುಗಳ ಮಹಾತ್ಮೆಯನ್ನು ಒಂದೋಂದಾಗಿ ತಿಳಿಯೋಣ.


         🌷ವಜ್ರರೇಖೆ🌷


ಪಾದಪಂಕಜಮಾಹಾತ್ಮ್ಯಂ ಲಿಖಿತ್ಯೈವ ಸ್ವಹಸ್ತತಃ |

ಧಾತೃಣಾಂ ವೈಷ್ಣಾವಾಗ್ರೇಭ್ಯೋ ಮಹಾsಘೌಘಾದ್ರಿಭೇಧನಮ್ |

ಕರೋಮೀತಿ ಜ್ಞಾಪನಾಯ ವಜ್ರರೇಖಾಂ ಪದೇsಧರಃ ||


ಭಗವಂತನ ಪಾದಕಮಲಗಳ ಮಹಾತ್ಮೆಯನ್ನು ತಮ್ಮ ಕೈಗಳಿಂದ ಬರೆದು ಅದನ್ನು ಶ್ರೇಷ್ಠರಾದ ವಿಷ್ಣುಭಕ್ತರಿಗೆ ದಾನ ಕೊಡುವರೋ ಅವರಮಹತ್ತರವಾದ ಬ್ರಹ್ಮಹತ್ಯಾದಿ ಪಾಪಗಳ ಸಮೂಹವೆಂಬ ಪರ್ವತಗಳನ್ನೇ ಸೀಳುತ್ತೇನೆ ಎಂದು ತಿಳಿಸುವುದಕ್ಕಾಗಿ ಪಾದದಲ್ಲಿ ವಜ್ರರೇಖೆಯನ್ನು ಧರಿಸಿದ್ದಾನೆ .


       

       🌷ಅಂಕುಶರೇಖೆ🌷


ಮಾಹತ್ಮ್ಯಮರ್ಚಕಾನಾಂ ತು ಗಜಾನ್ ಕಾಮಾದಿಸಂಜ್ಞಿತಾನ್ |

ಅದಮ್ಯಾನ್ ದಮಯಾಮೀತಿ ಹ್ಯಂಕುಂಶಾಭ್ಯಾಂ ಪದೇsಧರಃ ||


ಭಗವಂತನ ಪಾದದ ಮಹಾತ್ಮೆಯ ಹಿರಿಮೆಯನ್ನು ಬರೆದು ಪೂಜಿಸುವವರ ಕಾಮ, ಕ್ರೋಧ ,ಮದ ,ಮತ್ಸರ ,ಮೋಹ , ಲೋಭಗಳೆಂಬ  ಹೆಸರುಳ್ಳ ನಿಗ್ರಹಿಸಲು ಆಶಕ್ಯಗಳಾದ ಮದ್ದಾನೆಗಳನ್ನು ದಮನಮಾಡುತ್ತೇನೆ ಎಂದು ತಿಳಿಸಿಕೊಡುವುದಕ್ಕಾಗಿ ಭಗವಂತನು  ಪಾದಪದ್ಮಗಳಲ್ಲಿ ಅಂಕುಶರೇಖೆಯನ್ನು ಧರಿಸಿದ್ದಾನೆ .


 ಆದಿತ್ಯಪುರಾಣೋಕ್ತ ವೆಂಕಟೇಶ ಮಹಾತ್ಮೆ 2-44

           

          🌷ಧ್ವಜ ರೇಖೆ🌷


ಶ್ರುತ್ವಾssದರೇಣ  ಸಂತುಷ್ಟಾನ್ ಭಕ್ತಾನ್ ಧ್ವಜವದುಚ್ಛ್ರಿತಾನ್ |

ಕರೋಮೀತಿ ಜ್ಞಾಪನಾಯ

ಧ್ವಜ-ರೇಖಾಂ ಪದೇsಧರಃ ||


ಭಗವಂತನ ಪಾದಮಾಹಾತ್ಮೆಯನ್ನು ಆದರದಿಂದ ಶ್ರವಣಮಾಡಿ ಸಂತುಷ್ಟರಾದ ಭಗವದ್ ಭಕ್ತರನ್ನು ಧ್ವಜಸ್ಥಂಭದಂತೆ ಎತ್ತರಕ್ಕೆ ಏರಿಸುತ್ತೇನೆಂದು ತಿಳಿಸಲು ಭಗವಂತನು ಪಾದದಲ್ಲಿ ಧ್ವಜರೇಖೆಯನ್ನು ಧರಿಸಿದ್ದಾನೆ .


             🌷ಪದ್ಮ ರೇಖೆ🌷


ಪಾದಮಾಹಾತ್ಮ್ಯವಕ್ತೃಣಾಂ ಉತ್ತಮೇ ಮಂದಿರೇ ಸದಾ |

ಪದ್ಮಯಾ ಭಾರ್ಯಯಾ ಸಾಕಂ ಪದ್ಮಜೇನ ಸುತೇನ ಚ ||


ಕುಟುಂಬೀ ಪದ್ಮನಾಭೋsಹಂ

ವಸಮಿತ್ಯೇವ ಸೂಚಯನ್ |

ಪದ್ಮರೇಖಾಂ ಪಾದಪಾದ್ಮೇ

ಪದ್ಮೇಶ ತ್ವಂ ಧರನ್ನಸಿ ||


ಲಕ್ಷ್ಮೀಪತಿಯಾದ ಭಗವಂತನು ತನ್ನ ಪಾದದ ಮಹಿಮೆಯನ್ನು ಹೇಳುವವರಿಗೆ  ಉತ್ತಮವಾದ ಮಂದಿರದಲ್ಲಿ ಪ್ರಿಯಳಾದ ಲಕ್ಷ್ಮೀದೇವಿಯರಿಂದಲೂ  ಪದ್ಮದಿಂದ ಹುಟ್ಟಿದ ಮಗನಾದ ಬ್ರಹ್ಮನಿಂದಲೂ ಕೂಡಿಕೊಂಡು ಕುಟುಂಬಿಯಾಗಿ ಪದ್ಮನಾಭನಾದ ನಾನು ಸದಾ ವಾಸಮಾಡುತ್ತೆನೆಂದು ಸೂಚಿಸಲು ಪಾದಪದ್ಮದಲ್ಲಿ ಪದ್ಮರೇಖೆಯನ್ನು ಧರಿಸಿದ್ದಾನೆ


            🌷ಗದಾರೇಖೆ🌷


ಪಾದಮಾಹತ್ಮ್ಯ ಧ್ಯಾತೃಣಾಮುದ್ರವಕರಾನ್ ಖಲಾನ್ ||

ದೈತ್ಯ -ರಕ್ಷಃ-ಪಿಶಾಚಾದೀನ್

ಕೂಷ್ಮಾಂಡ-ಬ್ರಹ್ಮ-ರಾಕ್ಷಸಾನ್ |

ಸಂಚೂರ್ಣಯಾಮಿತಿ ಹರೇ

ಗದಾ-ರೇಖಾಂಪದೇsಧರಃ ||


ಭಗವಂತನ ಪಾದದ ಮಹಾತ್ಮೆಯನ್ನು ಧ್ಯಾನಮಾಡುವವರಿಗೆ ಉಪದ್ರವ ಮಾಡತಕ್ಕ ದುಷ್ಟರಾದ ದೈತ್ಯರು ,ರಾಕ್ಷಸರು ,ಪಿಶಾಚರು ,ಕೂಷ್ಮಾಂಡರು ,ಬ್ರಹ್ಮರಾಕ್ಷಸರು ಇವರನ್ನು ಚೆನ್ನಾಗಿ ಪುಡಿ ಪುಡಿ ಮಾಡುತ್ತೇನೆಂದು ತಿಳಿಸುವುದಕ್ಕಾಗಿ ಪಾದದಲ್ಲಿ ಗದಾರೇಖೆಯನ್ನು ಧರಿಸಿದ್ದಾನೆ.


ಆದಿತ್ಯಪುರಾಣೋಕ್ತ ವೆಂಕಟೇಶಮಹಾತ್ಮೆ 2-34,35


           🌷ಶಂಖರೇಖೆ🌷


ಪಾದಮಾಹಾತ್ಮ್ಯ ಮಂತೃಣಾಂ ಸಾಂಗವೇದಚತುಷ್ಟಯಮ್ |

ಇತಿಹಾಸ ಪುರಾಣಾನಿ ಮಂತ್ರೋಪನಿಷದಾತ್ಮಕಾಃ

ಸರ್ವವಿದ್ಯಾಂ ದದಾಮೀತಿ ದರಾರೇಖಾಂ ಪದೇದರಃ ||


ಭಗವಂತನ ಪಾದಮಹಾತ್ಮೆಯನ್ನು ತಿಳಿದವರಿಗೆ ಷಡಂಗಸಹಿತಗಳಾದ( ಶೀಕ್ಷಾ ಕಲ್ಪೋ ನಿರುಕ್ತಂ ಚ ಛಂದೋ ವ್ಯಾಕರಣಂ ತಥಾ |

ಜ್ಯೋತಿಷಂ ಇತಿ ಷಡಂಗಾನಿ ||

ಶೀಕ್ಷಾ ,ಕಲ್ಪ ,ನಿರುಕ್ತ ,ಛಂದಸ್ ,ವ್ಯಾಕರಣ ,ಜ್ಯೋತಿಷ ಎಂದು ಆರು ವೇದಾಂಗಗಳು .)

ನಾಲ್ಕು. ವೇದ ,ಇತಿಹಾಸಪುರಾಣಗಳು ,ಮಂತ್ರ ,ಉಪನಿಷತ್ತುರೂಪವಾದ ಎಲ್ಲ ವಿದ್ಯೆಗಳನ್ನೂ ಕೊಡುವೆನೆಂದು ಶಂಖರೇಖೆಯನ್ನು ಪಾದದಲ್ಲಿ ಧರಿಸಿದ್ದಾನೆ .


ಆದಿತ್ಯಪುರಾಣೋಕ್ತ ವೆಂಕಟೇಶಮಹಾತ್ಮೆ 2-33


 ಭಗವಂತನನ್ನು ಕಂಡು ನಿಬ್ಬೆರಗಾದ ಧ್ರುವಕುಮಾರನು ಶ್ರೀಹರಿಯು ಅವನ ಕಪೋಲಗಳಿಗೆ ತನ್ನ ಶಂಖ ಸ್ಪರ್ಷವನ್ನು ಮಾಡಿದನು ಕೂಡಲೆ ಧ್ರುವನು ಭಗವಂತನನ್ನು ಸ್ತೋತ್ರ ಮಾಡಿದನೆಂಬುದು ಭಾಗವತ ಚತುರ್ಥಸ್ಕಂಧದಲ್ಲಿ ಪ್ರಸಿದ್ಧವಾಗಿದೆ .ಶಂಖವು ವಿದ್ಯೆಯನ್ನು ನಿಡುವುದು ಇಲ್ಲಿ ಸಿದ್ಧವಾಗಿದೆ .


           🌷ಚಕ್ರರೇಖೆ🌷


ಪಾದಮಾಹತ್ಮ್ಯ ಶ್ರೋತೃಣಾಂ ಭಕ್ತಾನಾಂ ಭಕ್ತವತ್ಸಲ |

ಮಹಾsಜ್ಞಾನ ತಮೋ ಭಿತ್ವಾ  ಕೃತ್ವಾ ಜ್ಞಾನಪ್ರಕಾಶನಮ್ |

ತನ್ಮಾರ್ಗದರ್ಶನಾರ್ಥಾಯಾ ಚಕ್ರರೇಖಾಂ ಪದೇsದರಃ ||


ಭಕ್ಚವತ್ಸಲನಾದ ಭಗವಂತನು ಪಾದದ ಮಹಿಮೆಯನ್ನು ಕೇಳತಕ್ಕ ಭಕ್ತರಿಗೆ ಮಹತ್ತಾದ ಅಜ್ಞಾನವೆಂಬ ಕತ್ತಲೆಯನ್ನು ನಿವಾರಿಸಿ ಜ್ಞಾನ ರೂಪ ಪ್ರಕಾಶವನ್ನು ಕೊಟ್ಟು ವೈಕುಂಠ ಮಾರ್ಗವನ್ನು ತೋರಿಸಲು ಅಥವಾ ತನ್ನ ವಿಷಯಕವಾದ ಸಮ್ಯಕ್ ಜ್ಞಾನವನ್ನು ಕರುಣಿಸಲು ಪಾದದಲ್ಲಿ ಚಕ್ರರೇಖೆ ಯನ್ನು. ಧರಿಸಿದ್ದಾನೆ .

ಆದಿತ್ಯಪುರಾಣೋಕ್ತ ವೆಂಕಟೇಶಮಹಾತ್ಮೆ 2-31,32


ಇಂಥ ಔಚಿತ್ಯಪೂರ್ಣವಾದ ರೇಖೆಗಳನ್ನು ಧರಿಸಿದ ಆ ಭಗವಂತನ ಪಾದಕಮಲಗಳನ್ನು ನಿತ್ಯದಲ್ಲಿ ಸರ್ವರೂ ಸ್ಮರಿಸುವವರಾಗಿ ಕೃತಾರ್ಥರಾಗಬೇಕು .

  

  || ಶ್ರೀಕೃಷ್ಣಾರ್ಪಣಾಮಸ್ತು ||

***


No comments:

Post a Comment