ಭಾರತ ಹುಣ್ಣಿಮೆಯ ವಿಶಿಷ್ಟ ಜಾತ್ರೆಯ ಎಲ್ಲಮ್ಮನ ಗುಡ್ಡ.
ಪೆಬ್ರುವರಿ 27 2021 ರಂದು ಭಾರತ ಹುಣ್ಣಿಮೆ.ಇದು ರೈತ ಜನರು ಚಕ್ಕಡಿಗಳಲ್ಲಿ ಟ್ಯಾಕ್ಟರ್‍ಗಳಲ್ಲಿ.ಸ್ವಂತ ವಾಹನಗಳಲ್ಲಿ ಕಾಲ್ನಡಿಗೆಯ ಮೂಲಕ ಸವದತ್ತಿ ಎಲ್ಲಮ್ಮನಿಗೆ ಬರುವ ಮೂಲಕ ಬಹಳ ತಮ್ಮ ಭಕ್ತಿಯ ಪರಾಕಾಷ್ಟೆಯನ್ನು ಮೆರೆಯುವರು.ಈ ಜಾತ್ರೆ ಲಕ್ಷಾಂತರ ಭಕ್ತರು ಆಗಮಿಸುವ ಸಂಗಮವಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡವು ದೇಶದ ಸುಪ್ರಸಿದ್ದ ದೇವಸ್ಥಾನಗಳಲ್ಲಿ ಒಂದಾಗಿದ್ದು.ನಮ್ಮ ರಾಜ್ಯದಿಂದಷ್ಟೇ ಅಲ್ಲದೇ ನೆರೆಯ ಆಂಧ್ರಪದೇಶ.ತಮಿಳುನಾಡು.ಕೇರಳ.ಮಹಾರಾಷ್ಟ್ರ ರಾಜ್ಯಗಳಿಂದಲೂ ವರ್ಷವಿಡೀ ತಂಡೋಪತಂಡವಾಗಿ ಲಕ್ಷೋಪ-ಲಕ್ಷ ಜನ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ.
ತೆನೆ ಕಟ್ಟಿ ದೇವ್ರ ಕರಕೊಳ್ಳುವ ಹಬ್ಬ ಮನೆ ಬಾಗಿಲಿಗೆ “ತೆನೆ ಕಟ್ಟಿ ದೇವ್ರ ಕರಕೊಳ್ಳುವ ಹಬ್ಬ”ವಾಗಿ ಭಾರತ ಹುಣ್ಣಿಮೆಯನ್ನು ಮನೆಮನೆಗಳಲ್ಲಿ ಆಚರಿಸುವ ಬಗೆ ಬಹುಶಃ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ತಮ್ಮ ಆರಾಧ್ಯ ದೇವರನ್ನು ಪೂಜಿಸುವ ಜನರು ಅದರಲ್ಲೂ ಕೃಷಿಕರು ತಮ್ಮ ಹೊಲಗದ್ದೆಗಳಲ್ಲಿ ಬೆಳೆದ ಜೋಳ ಗೋಧಿ ಕಡಲೆ ಇತ್ಯಾದಿಗಳ ಫಸಲು ತಗೆದು ಮನೆಗೆ ರಾಶಿ ತರುವ ಸಂಭ್ರಮ ಗಿಡಮರಗಳಲ್ಲಿ ಎಲೆ ಉದುರಿ ಹೊಸ ಎಲೆ ಚಿಗುರುವ ಸಂಭ್ರಮ ಮುಂದೆ ಹೋಳಿ ಹಬ್ಬದ ಆಗಮನದ ಮೊದಲು ಬರುವ ಭಾರತ ಹುಣ್ಣಿಮೆ ಹಬ್ಬಗಳಲ್ಲಿ ವೈಶಿಷ್ಟ್ಯತೆಯನ್ನು ಹೊಂದಿದೆ. ಹೋಳಿ ಹುಣ್ಣಿಮೆ ಹೊಯ್ಕೊಂಡು ಹೋಯ್ತು ಎನ್ನುವಂತೆ ಅದಕ್ಕಿಂತ ಮೊದಲು ಬರುವ ಭಾರತ ಹುಣ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸುವ ಪದ್ದತಿ. ತಮ್ಮ ತಮ್ಮ ಇಷ್ಟದ ಆರಾಧ್ಯ ದೇವರಿಗೆ ಪೂಜಿಸುವ ಜೊತೆಗೆ ಈ ಹುಣ್ಣಿಮೆಯ ದಿನ ಮನೆಯ ಬಾಗಿಲುಗಳಿಗೆ ತೋರಣದ ರೂಪದಲ್ಲಿ ಜೋಳದ ತೆನೆ ಗೋಧಿ ತೆನೆ ಕಡಲೆ ಗೊಂಚಲು(ಒಣಗಿದ್ದು) ಹೀಗೆ ಇವುಗಳ ಜೊತೆಗೆ ಮಾವಿನ ಎಲೆಗಳು ಎಕ್ಕದ ಹೂವಿನ ಗೊಂಚಲು ಸೇರಿಸಿ ಪ್ರಕೃತಿ ಮಾತೆಯನ್ನು ಸ್ಮರಿಸುತ್ತ ವರ್ಷವಿಡೀ ದುಡಿದ ನಮಗೆ ಫಸಲನ್ನು ಒದಗಿಸಿದೆ ಮುಂಬರುವ ಬೇಸಿಗೆ ಕಳೆದು ಮತ್ತೆ ಮಳೆಗಾಲದ ಆರಂಭ ಉತ್ತಮವಾಗಿರಲಿ ನಿನಗಿದೋ ನಮನ ಎನ್ನುವಂತೆ ಭಾರತ ಹುಣ್ಣಿಮೆ ಆಚರಣೆ ನಡೆದಿರಬಹುದು ಎಂಬುದು “ತೆನೆ ಕಟ್ಟಿ ದೇವರನ್ನು ಕರೆದುಕೊಳ್ಳುವ(ಭಕ್ತಿಯಿಂದ ನಮಿಸುವ) ಹಬ್ಬ” ಎನ್ನುವ ಮಾತನ್ನು ಭಾರತ ಹುಣ್ಣಿಮೆಗೆ ಅನ್ವಯಿಸಬಹುದು. ಇಲ್ಲಿ ದೇವರಿಗೆ ವಿವಿಧ ದಾನ್ಯಗಳಿಂದ ಮಾಡಿದ ಅಡುಗೆಯನ್ನು ನೈವೇದ್ಯಕ್ಕಾಗಿ ಕೂಡ ಅವರವರ ಭೂಮಿಯ ಫಸಲನ್ನು ಆಧರಿಸಿ ಬಳಸುವುದು ಜರುಗುತ್ತಿದೆ.ನಾವು ದುಡಿಯಲು ಭೂ ತಾಯಿ ನಮಗೆ ಕರುಣಿಸಿದ ಫಸಲು ಅವಳ ಪಾಲು ಇರಲಿ ಎಂದು ಸಂದೇಶ ಕೂಡ. ಜೊತೆಗೆ ಮುತ್ತೈದೆಯರನ್ನು. ಜೋಗತಿಯರನ್ನು ಕರೆದು ಉಡಿ ತುಂಬಿ ಊಟ ಮಾಡಿಸುವ ಪರಂಪರೆ ಮೂಲಕ ಯಾವ ಕೆಟ್ಟ ಘಳಿಗೆಗಳು ಸಂಭವಿಸದಿರಲಿ ಯಾವತ್ತೂ ಬದುಕಲ್ಲಿ ಒಳ್ಳೆಯ ಸಂಪ್ರದಾಯ ಸಂಸ್ಕಾರಗಳು ರೂಢಿಸಲಿ, ಹಿರಿಯರು ಊಟ ಮಾಡುವ ಮೂಲಕ ದೇವರ ಹೆಸರಲ್ಲಿ ಸಂಪ್ರದಾಯವನ್ನು ಉಳಿಸಿಕೊಂಡು ಬರುವುದಿದೆಯಲ್ಲ ಇದು ಕೇವಲ ಆಚರಣೆಯಾಗದೇ ಜಾಗತೀಕರಣದ ಇಂದಿನ ದಿನಗಳಲ್ಲಿ ನಮ್ಮತನ ನಮ್ಮ ಸಂಸ್ಕøತಿ. ನಮ್ಮ ಭೂ ತಾಯಿಯಿಂದ ಪಡೆದದ್ದನ್ನು ದೇವರ ಪೂಜೆಯ ಮೂಲಕ ಸಮರ್ಪಿಸುವ ಮನೋಭಾವವನ್ನು ಹಬ್ಬಗಳ ಆಚರಣೆಯಲ್ಲಿ ಕಾಣುತ್ತೇವೆ.ಇದು ಕೃಷಿ ಸಮಾಜದಲ್ಲಿ ಇಂದಿಗೂ ಹಬ್ಬದ ಹಿಂದಿನ ಸತ್ಯವಾಗಿ ಉಳಿದುಕೊಂಡು ಬಂದಿದೆ.ಸವದತ್ತಿ ಎಲ್ಲಮ್ಮ ಕೊಪ್ಪಳದ ಹುಲಿಗೆಮ್ಮ ಮೈಲಾರದ ಮೈಲಾರಲಿಂಗ ಹೀಗೆ ಆಯಾ ಪ್ರದೇಶಗಳ ಜನ ಹಡ್ಡಲಿಗೆ ತುಂಬುವ ಮತ್ತು ಉಡಿ ತುಂಬುವ ಆಚರಣೆಯ ಜೊತೆಗೆ ಮನೆ ಮನೆಗಳ ಬಾಗಿಲಿಗೆ ತೋರಣಗಳಲ್ಲಿ ತೆನೆ ಸೇರಿಸಿ ಕಟ್ಟುವ ಹುಣ್ಣಿಮೆ ಭಾರತ ಹುಣ್ಣಿಮೆ.
ಅಗಸ್ತ್ಯ ಋಷಿಗಳ ಆಶೀರ್ವಾದದಂತೆ ಪುತ್ರಿಕಾಮೇಷ್ಠಿಯಾಗವನ್ನು ಮಾಡಿದ ಕಾಶ್ಮೀರದ ಅರಸು ರೇಣುಕರಾಜ.ಭೋಗವತಿ ದಂಪತಿಗಳ ಮಗಳಾಗಿ ಯಜ್ಞಕುಂಡದಲ್ಲಿ ಜನಿಸಿದ ಶ್ರೀ ರೇಣುಕಾದೇವಿ ಸಾಮಾನ್ಯಳಾಗಿರದೇ ಆದಿಶಕ್ತಿಯ ಸ್ವರೂಪವಾಗಿದ್ದು ಸಿದ್ದಾಚಲ ಪವತದಲ್ಲಿ ನೆಲೆಸಿ ಜಮದಗ್ನಿ ಪತ್ನಿಯಾಗಿ ತನ್ನ ಪಾತಿವೃತ್ಯದಿಂದ ಮಹಾಮಹಿಮಳಾಗಿ ಇಂದಿಗೂ ಕೂಡ ಜನಮಾನಸದ ಆರಾಧ್ಯ ದೈವಾಗಿರುವಳು.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯದಲ್ಲಿ ಭಕ್ತ ಜನರು ಆಚರಿಸಿಕೊಂಡು ಬಂದ ಆಚರಣೆಗಳು ಹಾಗೂ ದೇವಿಯ ಪೂಜೆಯ ಆಚರಣೆಗಳು ಅಂದರೆ ದಿನನಿತ್ಯದ ಪೂಜೆಯ ಜೊತೆಗೆ ನಡೆದುಕೊಂಡ ಬರುತ್ತಿರುವ ಆಚರಣೆಗಳು ಎಂದು ಇಲ್ಲಿನ ಆಚರಣೆಗಳನ್ನು ನಾವು ಕಾಣುತ್ತೇವೆ.
ದೇವಾಲಯದ ವಿಶಿಷ್ಟತೆಗಳು.
ದೇವಾಲಯದ ಆಚರಣೆಗಳೆಂದರೆ ಪ್ರತಿ ದಿವಸ ಮುಂಜಾನೆ ಅಭಿಷೇಕ ಪೂಜೆ ಇದು ಬೆಳಿಗ್ಗೆ 4 ರಿಂದ 6 ಗಂಟೆಯವರೆಗೆ ಮತ್ತು ಸಂಜೆ 4.30 ರಿಂದ 6.30 ರವರೆಗೆ ಜರುಗುತ್ತಿರುವುದು.ಇದರ ಜೊತೆಗೆ ಚೈತ್ರ ಮಾಸದ ಶುದ್ದ ಚತುರ್ಥಿಯಂದು ದೇವಿಗೆ ಕಂಕಣ ಮಂಗಳ ಸೂತ್ರ ಧಾರಣೋತ್ಸವ ಜರುಗುತ್ತದೆ. ವೈಶಾಖ ಮಾಸದ ಶುದ್ದ ತೃತಿಯ(ಅಕ್ಷಯ ತೃತಿಯಾ)ದಂದು ಶ್ರೀ ಕ್ಷತ್ರದಲ್ಲಿ ಪರಶುರಾಮ ಜಯಂತಿ ಜರುಗುತ್ತದೆ.
ಹಡ್ಡಲಿಗೆ ತುಂಬುವುದು.
ಭಾರತ ಹುಣ್ಣಿಮೆ ,ದವನದ ಹುಣ್ಣಿಮೆಗಳ ಸಂದರ್ಭದಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಭಕ್ತಾದಿಗಳು ಅಲಂಕೃತ ಎತ್ತಿನ ಗಾಡಿಗಳಲ್ಲಿ ದೇವಾಲಯಕ್ಕೆ ಆಗಮಿಸುವ ಮೂಲಕ ದಾರಿಯುದ್ದಕ್ಕೂ ಸಿಗುವ ಕೆರೆ,ಹಳ್ಳ,ನದಿಗಳನ್ನು ಪೂಜಿಸುತ್ತ ಎಲ್ಲಮ್ಮನ ಗುಡ್ಡ ತಲುಪುವರು.ದೇವಾಲಯದ ಆವರಣದಲ್ಲಿ ತಂಗುವ ಇವರು ಬೆಳಗಿನ ಹೊತ್ತು ಎಣ್ಣೆ ಹೊಂಡದಲ್ಲಿ ಸ್ನಾನ ಮಾಡಿ ಅಲ್ಲಿ ನೀರನ್ನು ಕೊಡದಲ್ಲಿ ತುಂಬಿಕೊಂಡು ಮಡಿಯಿಂದ ಮಹಿಳೆಯರು ಅಡುಗೆ ಮಾಡ ತೊಡಗುವರು.ಪುರುಷರು ಎತ್ತು(ರಾಸು)ಗಳ ಮೈ ತೊಳೆದು ಸಿಂಗರಿಸುವರು.ಐದು ಜನ ಜೋಗಮ್ಮ (ಜೋಗತಿಯರು) ಮತ್ತು ಐದು ಜನ ಮುತ್ತೈದೆಯರು ಸೇರಿ ಹಡಲಿಗೆ ತುಂಬುವ ಕಾರ್ಯಕ್ಕೆ ಅಣತಿಯಾಗುವರು. ಕಡಬು.ವಡೆ.ರೊಟ್ಟಿ.ಚಪಾತಿ.ಪಲ್ಯ.ಇತ್ಯಾದಿಗಳನ್ನು ತಯಾರಿಸಿಕೊಂಡು ತಾವು ತಂದಿದ್ದ ದವಸದಾನ್ಯಗಳನ್ನು ಹಡಲಿಗೆಯಲ್ಲಿಟ್ಟು ಚೌರಿಕೆಗಳನ್ನು ಹಡಲಿಗೆ ಪಕ್ಕದಲ್ಲಿಟ್ಟು ಪೂಜಿಸುವ ಮೂಲಕ ಆರತಿ ಕರ್ಪೂರವನ್ನು ಬೆಳಗುತ್ತ “ಎಲ್ಲಮ್ಮ ನಿನ್ನ ಪಾದಕೆ ಉಧೋ ಉಧೋ ಜಗದಂಭಾ ನಿನ್ನ ಪಾದಕೆ ಉಧೋ ಉಧೋ ಜೋಗುಳ ಭಾವಿ ಸತ್ಯವ್ವ ನಿನ್ನ ಪಾದಕೆ ಉಧೋ ಉಧೋ ಪರಶು ರಾಮ ನಿನ್ನ ಪಾದಕೆ ಉಧೋ ಉಧೋ ಎನ್ನುತ್ತ ಸುತ್ತಲಿನ ಎಲ್ಲ ದೇವರ ಹೆಸರನ್ನು ಸ್ಮರಿಸುವರು ತದ ನಂತರ ಮಂಗಳಾರತಿ ಮಾಡಿ ಜೋಗತಿಯರಿಗೆ ಮತ್ತು ಮುತೈದೆಯರಿಗೆ ಉಣಬಡಿಸಿ ನಂತರ ಕುಟುಂಬವರೂ ತಮ್ಮೊಡನೆ ಆಗಮಿಸಿದ ನೆರೆ ಹೊರೆಯ ಎಲ್ಲರೂ ಊಟ ಮಾಡುವ ಮೂಲಕ ಹಡ್ಡಲಿಗೆ ತುಂಬುವ ಆಚರಣೆ ಇಂದಿಗೂ ಇದೆ.ಇದು ದೇವಾಲಯ ಅವರಣಕ್ಕೆ ಮಾತ್ರ ಸೀಮಿತವಾದೇ ತಮ್ಮ ತಮ್ಮ ಊರುಗಳಲ್ಲಿ ಕೂಡ ತಮ್ಮ ತಮ್ಮ ಮನೆಗಳಲ್ಲಿ ಕೂಡ ಮಾಡುವ ಆಚರಣೆ. ಮನೆಯನ್ನು ಸಾರಣೆ ಮಾಡಿ ಸಿಂಗರಿಸಿ.ಎಕ್ಕದ ಹೂ,ಭತ್ತ/ಗೋಧಿ ತೆನೆ,ಜೋಳದ ತೆನೆ.ಕಡ್ಲಿ ತೆನೆ,ಮಾವಿನ ಎಲೆಗಳಿಂದ ಮನೆ ಬಾಗಿಲಿಗೆ ತೋರಣ ಕಟ್ಟಿ ಮನೆಗೆ ಐದು ಜನ ಜೋಗಮ್ಮಂದಿರು,ಐದು ಜನ ಮುತೈದೆಯರನ್ನು ಆಮಂತ್ರಿಸಿ ಪೂಜೆ ಕಾರ್ಯ ನಡೆಸುವ ಮೂಲಕ ಮನೆಮನಗಳಲ್ಲಿ ಇಂದಿಗೂ ಈ ಸಂಪ್ರದಾಯ ಜರುಗುತ್ತಿದೆ.
ದೀಪದ ಹರಕೆ.
ದೀಪ ಹಚ್ಚುವ ಪರಂಪರೆ ಪುರಾತನವಾದುದು.ಸಾಮಾನ್ಯವಾಗಿ ಎಲ್ಲ ಭಕ್ತರು ತಾವು ಬೇಡಿಕೊಂಡ ಸಂಗತಿ ಈಡೇರಿದರೆ ದೇವಿಗೆ ದೀಪ ಹಚ್ಚುವುದಾಗಿ ಹರಕೆ ಸಲ್ಲಿಸುತ್ತಾರೆ.ಅದರಂತೆ ಇಚ್ಚಿತ ಸಂಗತಿ ಫಲಶ್ರುತಿಯಾದಾಗ ದೇವಾಲಯಕ್ಕೆ ಬಂದು ದೀಪ ಹಚ್ಚಿ ಹೋಗುವರು.ಈ ದೀಪ ಹಚ್ಚುವುದರಲ್ಲಿ ಎರಡು ವಿಧ ಒಂದು ಎಣ್ಣೆಯ ದೀಪ ಇನ್ನೊಂದು ತುಪ್ಪದ ದೀಪ. ಇನ್ನು ತಮ್ಮ ತಮ್ಮ ಮನೆಗಳಲ್ಲಿ ಆಕಳು ಮತ್ತು ಎಮ್ಮೆ ಕರು ಹಾಕಿದರೆ ಕೆಲವು ಜನ ಮೊದಲ ಐದು ದಿನ ಇನ್ನು ಕೆಲವರು ಮೊದಲ ಹನ್ನೊಂದು ದಿನಗಳಲ್ಲಿ ಗಿಣ್ಣದ ಹಾಲನ್ನು ತಗೆದಿರಿಸಿ ಅದರಿಂದ ಬೆಣ್ಣೆ ತಗೆದು ತುಪ್ಪ ಮಾಡಿಕೊಂಡು ಮೀಸಲು ತುಪ್ಪ ಎಂದು ಅದನ್ನು ಕರೆಯುವರು.ಅಷ್ಟು ದಿನಗಳವರೆಗೆ ಆ ಹಸು ಅಥವ ಎಮ್ಮೆಯ ಹಾಲನ್ನು ಮನೆಯ ಹೊರಗೆ ಕೊಡುವುದಿಲ್ಲ. ಈ ರೀತಿ ತಯಾರಿಸಿದ ತುಪ್ಪವನ್ನು ತಂದು ದೇವಿಯ ಹೆಸರಿಗೆ ದೀಪ ಹಚ್ಚುವ ಮೂಲಕ ತಮ್ಮ ಮನೆಯ ಪರಂಪರಾನುಗತ ಬಂದ ಆಚರಣೆ ಪೂರ್ಣಗೊಳಿಸುವರು.
ವಾಹನ ಪೂಜೆ.
ಹೊಸದಾಗಿ ವಾಹನ ಖರೀದಿಸಿದವರು ಅದನ್ನು ನೇರವಾಗಿ ದೇವಾಲಯದ ಆವರಣಕ್ಕೆ ತರುವರು.ಅಲ್ಲಿ ಪೂಜಾರಿಗಳನ್ನು ಸಂಪರ್ಕಿಸಿ ಅವರಿಂದ ಪೂಜೆ ಮಾಡಿಸಿ ಲಿಂಬೆ ಹಣ್ಣನ್ನು ದೇವಿ ಆಶೀರ್ವಾದ ರೂಪದಲ್ಲಿ ಪಡೆದು ಅದನ್ನು ವಾಹನಕ್ಕೆ ಕಟ್ಟಿಕೊಂಡು ಹೊರಡುವರು.
ದೀಡ ನಮಸ್ಕಾರ.
ತಮಗೆ ಒದಗಿರುವ ಕಷ್ಟ ಪರಿಹರಿಸಿದರೆ ದೀಡ ನಮಸ್ಕಾರ ಅಥವ ಉರುಳುಸೇವೆ ಮಡುವುದಾಗಿ ಹರಕೆ ಹೊತ್ತ ಭಕ್ತರು ದೀಡ ನಮಸ್ಕಾರ ಹಾಕುವರು.ನೆಲದ ಮೇಲೆ ಮಲಗಿ ಕೈ ಚಾಚಿ ಕೈಯಲ್ಲಿ ಒಂದು ದಂಟನ್ನು ಹಿಡಿದು ಅದರಿಂದ ಒಂದು ಗೆರೆ ಎಳೆದು ಮೇಲೆ ನಿಂತು ಆ ಗೆರೆ ಎಳೆದ ಸ್ಥಳದಿಂದ ಮತ್ತೆ ಮಲಗಿ ಕೈ ಚಾಚಿ ಗೆರೆ ಎಳೆಯುತ್ತ ದೇವಾಲಯದವರೆಗೂ ಸಾಗಿ ಅಲ್ಲಿ ಎರಡು,ಐದು,ಃಹೀಗೆ ಸುತ್ತು ಪ್ರದಕ್ಷಿಣೆ ಹಾಕುವ ಮೂಲಕ ದೇವಾಲಯ ಪ್ರವೇಶಿಸಿ ದೇವಿ ದರ್ಶನ ಪಡೆದು ತಮ್ಮ ಹರಕೆ ತೀರಿಸುವ ಪದ್ದತಿ ಇಂದಿಗೂ ರೂಢಿಯಲ್ಲಿದೆ.ಇನ್ನು ಕೆಲವರು ಉರುಳು ಸೇವೆಯ ಮೂಲಕ ಈ ರೀತಿ ಹರಕೆ ತೀರಿಸುವರು.ಕೆಲವರು ದೇವಾಲಯದ ಆವರಣದಲ್ಲಿ ಈ ಹರಕೆ ತೀರಿಸಿದರೆ ಇನ್ನೂ ಕೆಲವರು ಜೋಗುಳಬಾವಿಯಿಂದ ಆರಂಭಿಸಿ ದೇವಾಲಯದವರೆಗೂ ದೀಡ ನಮಸ್ಕಾರ ಹಾಕುವುದನ್ನು ರಸ್ತೆಯುದ್ದಕ್ಕೂ ಕಾಣಬಹುದು.
ಒಟ್ಟಾರೆ ನಾಡಿನ ಎಲ್ಲೆಡೆ ಯಲ್ಲಮ್ಮ ತನ್ನದೇ ಅದ ವೈಶಿಷ್ಟತೆಯಿಂದ ಭಕ್ತ ಜನರಲ್ಲಿ ಮನೆಮಾತಾಗಿರುವಳು ಅವಳನ್ನು ಕರ್ನಾಟಕ,ಆಂದ್ರಪ್ರದೇಶ,ಮಹಾರಾಷ್ಟ್ರ,ಕೇರಳ ತಮಿಳುನಾಡಿನೆಲ್ಲೆಡೆ ಪೂಜಿಸುವ ಆರಾಧಿಸುವ ಭಕ್ತರಿದ್ದಾರೆ.ಹಿಮಾಚಲ ಪ್ರದೇಶದಲ್ಲಿ ರೇಣುಕ ಸಾಗರವಿದೆ.ಆಂಧ್ರಪದೇಶದಲ್ಲಿ ರೇಣುಗಂಬಳ ಅಮ್ಮನ ದೇವಾಲಯವಿದೆ ಉತ್ತರಾಂಚಲ ರಾಜ್ಯದ ಉತ್ತರಕಾಶಿಯ ಯಮುನಾ ನದಿ ದಡದಲ್ಲಿ ಜಮದಗ್ನಿ ಹೆಸರಿನ ದೇವಾಲಯವಿದೆ.
*******
ಲೇಖನ ಮಧುಸೂದನ ಕಲಿಭಟ್ ಬೆಂಗಳೂರು ( ಧಾರವಾಡ ) 22.2.2021ಭಾರತ ದೇಶವು ಅನಾದಿ ಕಾಲದಿಂದಲೂ ಕೃಷಿ ಪ್ರಧಾನ ಆಗಿದೆ. ಸಮಾಜದಲ್ಲಿ ಎಲ್ಲವರ್ಣದ ಜನರಲ್ಲಿ ಒಕ್ಕಟ್ಟು ಇತ್ತು. ಹೀಗಾಗಿ ಬ್ರಾಹ್ಮಣರಿಗೆ ಮತ್ತು ಅಸಹಾಯಕರಿಗೆ ಇತರೇ ಜನರು ತಮ್ಮ ಹೊಲದ ಕೆಲಸದ ಸಂಗಡ ಇವ್ರ ಹೊಲವನ್ನು ಊಳಿ ಹರಗಿ ಬೀಜ ಬಿತ್ತಿ ಸುಗ್ಗಿಯಲ್ಲೂ ಪಾಲ್ಗೊಂಡು ಇರುತ್ತಿದ್ದರು. ಬೇಸಿಗೆ, ಸಂಕ್ರಮಣ ಹಬ್ಬಕ್ಕೆ ಹೊಲದ ಕೆಲಸ ಮುಗಿದು ರೈತರು ಖಾಲಿ ಇರುತ್ತಿದ್ದರು. ಇದೆ ದಿನಗಳಲ್ಲಿ ಊರ ದೇವರಜಾತ್ರೆ ಉತ್ಸವಗಳಲ್ಲಿ ಭಾಗವಹಿಸಿ ದೊಡ್ಡಾಟ, ಕೀರ್ತನೆ ಗಳಲ್ಲಿ ಪಾಲ್ಗೊಂಡು ಸಂತೋಷದಿಂದ ಇರುತ್ತಿದ್ದರು. ಇನ್ನು ಕೆಲವು ಜನ ಈ ಮಾಘಮಾಸದಲ್ಲಿ ಭಾರತ ಹುಣ್ಣಿಮೆ ಯನ್ನು ಕುಲಧರ್ಮ ಎಂದು ತಮ್ಮ ತಮ್ಮ ಮನೆದೇವರನ್ನು ಆರಾಧಿಸಿ ಪೂಜಿಸುತ್ತ ಇದ್ದರು.
ಏನಿದು ಕುಲಧರ್ಮ. ಇದು ಅನಾಧಿಕಾಲದಿಂದಲೂ ಆಚರಣೆಯಲ್ಲಿ ಬಂದ ಧಾರ್ಮಿಕ ಕಾರ್ಯಕ್ರಮ. ಕುಲದೇವರನ್ನು ಆರಾಧಿಸುವದೇ ಈ ಕುಲಧರ್ಮದ ಮೂಲ ಉದ್ದೇಶ ಆಗಿದೆ. ಇದು ನಮ್ಮ ಕುಟುಂಬದ ವರೆಗೆ ಹೇಗೆ ಬಂತು ಕಾರಣಗಳೇನು. ಉತ್ತರವೂ ನಮಗೆ ಆಶ್ಚರ್ಯ ಮತ್ತು ದೇವರಲ್ಲಿ ಭಕ್ತಿ ಹುಟ್ಟಿಸುತ್ತದೆ.
ಪುರಾತನ ಕಾಲದಲ್ಲಿ ರೋಗ ರುಜಿನಗಳಿಂದ ಸಾವು ಬಹಳವಾಗಿತ್ತು. ಪ್ರಜೆಗಳು ಇದನ್ನು ದೇವರ ಆಟ ಎಂದು ನಂಬಿದ್ದರು. ಆದರೂ ಹಡೆದ ಕರುಳು, ಮನೆಯಲ್ಲಿ ಯಾರಿಗಾದರೂ ಆಗ್ಲಿ ದನಕಾರುಗಳಿಗೆ ಆಗಲಿ ಅನಾರೋಗ್ಯವಾದರೆ ದೇವರಲ್ಲಿ ಪ್ರಾರ್ಥಿಸಿ ಕೊಂಡು ಹರಕೆಹೊರುವದೇ ರೋಗಗಳಿಗೆ ಒಂದು ಔಷಧವಾಗಿತ್ತು. 4 ಅಥವಾ 5 ಊರುಗಳಿಗೆ ಒಬ್ಬ ವೈದ್ಯ ಇರುತ್ತಿದ್ದನು. ಅವನು ಬಂದು ರೋಗಿಗೆ ಔಷಧ ಕೊಡುವದರೊಳಗೆ ಎಷ್ಟೋ ಕಡೆಗೆ ಮರಣ ಆಗಿರುತ್ತಿತ್ತು. ಇಂಥ ಮರಣಗಳಿಗೆ ಉಪಾಯ ಏನು. ತಿಳಿಯುತ್ತಿರಲಿಲ್ಲ. ಒಂದು ದೃಷ್ಟಿಯಿಂದ ಸ್ವಚ್ಛತೆ ಕಡಿಮೆ ಇತ್ತು. ಜನರು ಪ್ಲೇಗು, ಮೈಲಿ, ವಿಷಮಜ್ವರ, ಮಲೇರಿಯಾ ಗಳಿಗೆ ಕಂಡ ಕಂಡ ದೇವರಿಗೆ ಮೊರೆ ಹೊಕ್ಕು ರೋಗ ಕಡಿಮೆ ಆದರೆ ವರ್ಷಕ್ಕೆ ಒಂದುಸಲ ಮನೆಯಲ್ಲಿ ಅಥವಾ ನಿನ್ನ ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸುತ್ತೇವೆ ಎಂದು ಹರಕೆ ಹೊರುತ್ತಿದ್ದರು. ವ್ಯಕ್ತಿಗೆ ಗುಣವಾದರೆ ಹರಕೆ ಹೊತ್ತ ದೇವರೇಕಾಪಾಡಿದನು ಎಂದು ದೇವ ದೇವತೆಯನ್ನು ಕುಲದೇವರಾಗಿ ಮಾಡಿಕೊಂಡರು. ತಿರುಪತಿ, ಮೈಲಾರಲಿಂಗ, ನರಸಿಂಹ ಕ್ಷೇತ್ರ, ತುಳಜಾಪುರ, ಕೋಲ್ಹಪುರ, ಮುಂತಾದ ಕ್ಷೇತ್ರ ದೇವತೆ ಗಳು ಕುಲದೇವರು ಆದರು. ಇದನ್ನೇ ಭಾರತ ಹುಣ್ಣಿಮೆ ನಂತರ ಅನುಕೂಲವಾದಾಗ ಕುಲದೇವರನ್ನು ಆರಾಧಿಸುವದೇ ಕುಲಧರ್ಮ ಎಂಬ ಹೆಸರಿನಲ್ಲಿ ಪ್ರಸಿದ್ಧ ಆಯಿತು. ಈ ಆಚರಣೆ ವೈಶಾಖ ಮಾಸದ ವರೆಗೆ ಇರುತ್ತದೆ. ಮಾಘದಿಂದ ವೈಶಾಖದ ವರೆಗೆ ಕೃಷಿಯನ್ನೇ ನಂಬಿದ ನಮ್ಮ ಪೂರ್ವಜರಿಗೆ ಬಿಡುವು ಸಿಕ್ಕು ದೇವರ ಸಮಾರಾಧನೆ ಮಾಡುತ್ತಿದ್ದರು.
ಇತ್ತೀಚಿಗೆ ಸಮಾಜವು ವೈಜ್ಞಾನಿಕವಾಗಿ ಅಭಿವೃದ್ಧಿ ಆಗುತ್ತಿರುವದರಿಂದ ಹಳೆಯ ಪಿಡುಗು ಕಡಿಮೆ ಆಗುತ್ತಿವೆ. ಆದರೂ ಪೂರ್ವಜರು ಹಾಕಿಕೊಟ್ಟ ದಾರಿ.. ನಮ್ಮ ಅಜ್ಜಮುತ್ತಜ್ಜ ಬದುಕಲೆಂದು ದೇವರ ಮೊರೆಹೊಕ್ಕು ಬಿಟ್ಟೂ ಬಿಡದೇ ದೇವರನ್ನು ಆರಾಧಿಸುವ ನಿಯಮ ಪಾಠಗಳನ್ನು ಹಾಕಿಕೊಟ್ಟರು.ನಮಗೆಲ್ಲರಿಗೂ ಭವಂತನ ಸ್ಮರಣೆ ಆಗಿ ನಮ್ಮ ಹಿರಿಯರು ನಡೆದು ಬಂದ ದಾರಿಯು ನಮಗೆಲ್ಲರಿಗೂ ಮೋಕ್ಷ ಸಾಧನೆಗೆ ದಾರಿಯಾಗುವದು. ಆ ಪರಮಾತ್ಮ ಸಕಲ ಜೀವರನ್ನು ಅರೋಗ್ಯ ಕೊಟ್ಟು ಕಾಪಿಡಲೆಂದು ಪ್ರಾರ್ಥನೆ ಮಾಡುವ ಮಧುಸೂದನ ಕಲಿಭಟ್
***
Bharata Hunnime Vyasa Pournami - by narahari sumadhwa
ಭಾರತ ಹುಣ್ಣಿಮೆ :-
ಭಾರತ ಹುಣ್ಣಿಮೆ / ವ್ಯಾಸಪೂರ್ಣಿಮೆ
ಮಾಘ ಶುದ್ಧ ಹುಣ್ಣಿಮೆ – ಈ ದಿನವನ್ನು ವ್ಯಾಸಪೂರ್ಣಿಮೆ, ಮಾಘ ಹುಣ್ಣಿಮೆ, ಭಾರತ ಹುಣ್ಣಿಮೆ ಎಂದೂ ಕರೆಯುತ್ತಾರೆ.
ವೇದವ್ಯಾಸರು ಹಲವು ಬಾರಿ ಅವತಾರ ಮಾಡಿದ್ದಾರೆ, ವೈಶಾಖ ಶುದ್ಧ ತ್ರಯೋದಶಿ, ವೈಶಾಖ ಪೌರ್ಣಮಿ, ಆಷಾಢ ಪೌರ್ಣಮಿ, ಕಾರ್ತೀಕ ಪೌರ್ಣಮಿ ಮತ್ತು ಮಾಘ ಹುಣ್ಣಿಮೆ. ಬೇರೆ ಬೇರೆ ಯುಗಗಳಲ್ಲಿ ಬೇರೆ ಬೇರೆ ದಿನಗಳಂದು ಅವತರಿಸಿದ್ದಾರೆ. ಅದರಲ್ಲಿ 28ನೇ ದ್ವಾಪರ ಯುಗದಲ್ಲಿ ಪರಾಶರ ಸತ್ಯವತಿಯ ಮಗನಾಗಿ ಮಾಘ ಪೂರ್ಣಿಮ ದಿನದಂದು ಕೂಡ ಅವತರಿಸಿದ್ದು, ಆ ದಿನವನ್ನೇ ವ್ಯಾಸ ಪೂರ್ಣಿಮಾ ಎಂದೂ, ಮಹಾಭಾರತ ಕರ್ತೃಗಳಾದ್ದರಿಂದ ಭಾರತ ಹುಣ್ಣಿಮೆ ಎಂದೂ ಕರೆಯುತ್ತಾರೆ.
ಮಾಘ ಮಾಸದ ಶುಕ್ಲ ಪಕ್ಷದ ತ್ರಯೋದಶಿ, ಚತುರ್ದಶಿ ಮತ್ತು ಹುಣ್ಣಿಮೆಯಂದು ಅಂತ್ಯಪುಷ್ಕರಣೀ ಇದ್ದು, ಮಾಘ ಸ್ನಾನದ ಕಡೆಯ ದಿನವಾಗಿದೆ. ಇಂದು ಅರುಣೋದಯ ಕಾಲದಲ್ಲಿ ಎದ್ಧು, ಸ್ನಾನ ಮಾಡಿ ನಿತ್ಯಕರ್ಮಾನುಷ್ಟಾನ ಮಾಡಿ, ದಾನ ಮಾಡುವುದರಿಂದ ವಿಶೇಷ ಫಲವಿದೆ. ಈ ದಿನ ಮುತ್ತೈದೆಯರು ಮರದ ಬಾಗಿನವನ್ನು ಕೊಡುತ್ತಾರೆ.
ಈ ದಿನ ತುಳಜಾಭವಾನಿಯ ಜನ್ಮದಿನವೂ ಆಗಿದ್ದು, ಆ ಒಕ್ಕಲಿನವರು ವಿಶೇಷ ಪೂಜೆ ಸಲ್ಲಿಸುವರು
ಈ ದಿನ ಪವಿತ್ರ ನದಿಗಳ ಸ್ನಾನಕ್ಕೆ ಪ್ರಾಮುಖ್ಯತೆ ಇದೆ, ಪವಿತ್ರ ನದಿಗಳಾದ ಗಂಗಾ, ಸಿಂಧು, ಸರಸ್ವತಿ, ಕಾವೇರಿ, ಗೋದಿವರಿ, ತುಂಗಾ ಮುಂತಾದ ಕಡೆ ಸ್ನಾನ ಮಾಡಿ, ದಾನ ಮಾಡುವುದರಿಂದ ವಿಷ್ಣು ಪ್ರೀತಿಯಾಗುತ್ತದೆ.
ನದಿಗೆ ಕಾಲಿಡುವ ಮೊದಲು ನಮ್ಮ ಕೈಕಾಲು ತೊಳೆದುಕೊಂಡು, ಶುಚಿಯಾಗಿ ನದಿಯಲ್ಲಿ ಕಾಲಿಡಬೇಕು. ಮೊದಲು ನೀರನ್ನು ನಮ್ಮ ಮೇಲೆ ಪ್ರೋಕ್ಷಿಸಿಕೊಳ್ಳಬೇಕು
ಅಪವಿತ್ರ ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ |
ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಂತರಶುಚಿ: |
ಭಾರತ ಹುಣ್ಣಿಮೆಯ ಅಂಗವಾಗಿ ಸಪ್ತ ಗುಡ್ಡಗಳ ವಿಶಾಲ ಪ್ರದೇಶದಲ್ಲಿರುವ ಬೆಳಗಾವಿಯ ಜಿಲ್ಲೆಯ ಶ್ರೀಕ್ಷೇತ್ರ ಸೌದತ್ತಿಯ ಎಲ್ಲಮ್ಮ ದೇವಿ ಜಾತ್ರೆಗೆ ಭಕ್ತರ ದಂಡೇ ಹರಿದುಬರುತ್ತದೆ. ಅತಿ ಸಂಭ್ರಮದಿಂದ ಜಾತ್ರೆ ನಡೆಯುತ್ತದೆ.
ಸ್ನಾನ ಕ್ರಮ ;
ನದಿಗೆ ಕಾಲಿಡುವ ಮೊದಲು ನಮ್ಮ ಕೈಕಾಲು ತೊಳೆದುಕೊಂಡು, ಶುಚಿಯಾಗಿ ನದಿಯಲ್ಲಿ ಕಾಲಿಡಬೇಕು.
(We have to wash our hands, legs before keeping our foot in the river)
ಗಂಗೆ/ಕಾವೇರಿ ಆದಿ ನದಿಗಳಲ್ಲಿ ಬಾಯಿ ಮುಕ್ಕಳಿಸಬಾರದು.
ನದಿಗಳಲ್ಲಿ ಮಲಮೂತ್ರ ವಿಸರ್ಜನ ಮಾಡಬಾರದು
ಬಟ್ಟೆ ಒಗೆಯಬಾರದು, ಸೋಪು ಹಾಕಿಕೊಳ್ಳಬಾರದು
(ಬೇರೆಯವರು ಮಾಡುತ್ತಾರಲ್ಲ ಎಂದೂ ನಾವೂ ಮಾಡಬಾರದು, ಅವರಿಗೆ ಸ್ನಾನದ ಮಹತ್ವ ತಿಳಿದಿರುವುದಿಲ್ಲ) ಸಾಧ್ಯವಾದರೆ ಅವರಿಗೂ ತಿಳಿಹೇಳಬೇಕು.
ಮೊದಲು ನೀರನ್ನು ನಮ್ಮ ಮೇಲೆ ಪ್ರೋಕ್ಷಿಸಿಕೊಳ್ಳಬೇಕು
ಅಪವಿತ್ರ ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ |
ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಂತರಶುಚಿ: |
ಆಚಮನ, ಕೇಶವಾಯ ಸ್ವಾಹ, ನಾರಾಯಣಾಯ ಸ್ವಾಹಾ; ಮಾಧವಾಯ ಸ್ವಾಹ
ಗೋವಿಂದಾಯ ನಮ:,………………………………..ಹರಯೇ ನಮ:| ಓಂ ಶ್ರೀಕೃಷ್ಣಾಯ ನಮ: |
ಪ್ರಣವಸ್ಯ ಪರಬ್ರಹ್ಮ ಋಷಿ, ಪರಮಾತ್ಮಾ ದೇವತಾ, ……………ಶ್ರೀ…………..ಸಂವತ್ಸರೇ, ದಕ್ಷಿಣಾಯಣೇ/ಉತ್ತರಾಯಣೇ, ಪುಷ್ಯ/ಮಾಘ ಮಾಸೆ, ಕೃಷ್ಣ/ಶುಕ್ಲಪಕ್ಷೇ, ………ತಿಥೌ, ….ವಾಸರೇ, ಶ್ರೀ ಭಾರತೀರಮಣ ಮುಖ್ಯಪ್ರಾಣಾಂತರ್ಗತ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ (ಮನೆದೇವರು), ಪ್ರೇರಣಯಾ, ಶ್ರೀ ಲಕ್ಷ್ಮೀ ನರಸಿಂಹ/ವೆಂಕಟೇಶ ಪ್ರೀತ್ಯರ್ಥ, ಸಕಲ ಗಂಗಾದಿ ತೀರ್ಥಾಭಿಮಾನಿ ಸನ್ನಿಧೌ, ___ಸನ್ನಿಧೌ, (ಕ್ಷೇತ್ರದೈವ), ಏವಂಗುಣ.. ಮಾಘ ಮಾಸಪ್ರಯುಕ್ತ ಮಾಸ ನಿಯಾಮಕ ಶ್ರೀ ಕಮಲಾ ಮಾಧವ ಪ್ರೀತ್ಯರ್ಥಂ ಮಾಘ ಸ್ನಾನಂ ಕರಿಷ್ಯೆ.
ಮಾಘ ಸ್ನಾನಮ್ ಕರಿಶ್ಯಾಮಿ ಮಕರಸ್ಥೆ ದಿವಾಕರೆ|
ಆಸಮಾಪ್ಥಿ ಮಹಾದೇವ ನಿರ‍್ವಿಘ್ನಂ ಕುರು ಮಾಧವ||
ಸ್ನಾನಾರ್ಘ್ಯ ಮಂತ್ರ –
ನಮ: ಕಮಲನಾಭಾಯ ನಮಸ್ತೇ ಜಲಶಾಯಿನೇ |ನಮಸ್ತೇಸ್ತು ಹೃಷೀಕೇಶ ಗೃಹಾಣಾರ್ಘ್ಯಂ ನಮೋಸ್ತುತೇ |
(ಅರ್ಘ್ಯ ಶ್ರೀಹರಿಗೆ)
ಏಹಿ ಸೂರ್ಯ ಸಹಸ್ರಾಂಶೋ ತೇಜೋರಾಶೇ ಜಗತ್ಪತೇ |
ಅನುಕಂಪಾಯ ಮಾಂಭಕ್ತಂ ಗೃಹಾಣಾರ್ಘ್ಯಂ ನಮೋಸ್ತುತೇ |
(ಅರ್ಘ್ಯ ಸೂರ್ಯನಿಗೆ)
ವಿಷ್ಣುಪಾದಾಬ್ಜಸಂಭೂತೇ ಗಂಗೇ ತ್ರಿಪಥಗಾಮಿನಿ | ಗೃಹಾಣಾರ್ಘ್ಯಂ ಮಯಾ ದತ್ತಂ ಜಲೇ ಸನ್ನಿಹಿತಾ ಭವ |
(ಅರ್ಘ್ಯ ಗಂಗೆಗೆ)
ಸ್ನಾನ ಮಾಡುವಾಗ ಶ್ರೀಮನ್ನಾರಾಯಣನನ್ನು ಸ್ಮರಿಸುತ್ತಾ ಶಂಖಮುದ್ರೆಯಿಂದ ಪ್ರೋಕ್ಷಣ ಮಾಡಿಕೊಳ್ಳಬೇಕು.
ಶಂಖಮುದ್ರೆ – ನಮ್ಮ ಎಡಗೈಯ ಎಲ್ಲಾ ಬೆರಳುಗಳ ಮಧ್ಯದಲ್ಲಿ ಬಲಗೈಯ ಅಂಗುಷ್ಠವನ್ನು ಮೇಲ್ಮುಖವಾಗಿಟ್ಟುಕೊಂಡು ಅದನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಬಲಗೈಯ ಉಳಿದ ಎಲ್ಲಾ ಬೆರಳುಗಳಿಂದ ಎಡಗೈಯನ್ನು ಒತ್ತಿ ಹಿಡಿಯಬೇಕು. ಇದೇ ಶಂಖಮುದ್ರೆ.
ಸ್ನಾನ ಕಾಲದಲ್ಲಿ ನೀರಿನಿಂದಲೇ ದ್ವಾದಶ ನಾಮಗಳನ್ನು ಹಚ್ಚಿಕೊಂಡು ಪಿತೃತರ್ಪಣವನ್ನು (ಅಧಿಕಾರಿಗಳು) ಕೊಡಬೇಕು, ದೇವತೆಗಳು, ಋಷಿಗಳು, ಪಿತೃಗಳು ಇವರಿಗೆ ತರ್ಪಣ ಕೊಡುವುದು.
ನಾವು ಅನುಸಂಧಾನ ಮಾಡಬೇಕಾದ ವಿಧಾನ – ಈ ನೀರೇ ಗಂಗೆಯಲ್ಲ, ಅದರಲ್ಲಿ ಸಕಲ ತೀರ್ಥಾಭಿಮಾನಿ ದೇವತೆಗಳೂ ಇರುತ್ತಾರೆ. ಅವರ ಜೊತೆಗೆ ಅವರ ಪತಿಗಳೂ, ಅವರ ಪತ್ನಿಯರೂ (ಗಂಡು ನದಿಗಳಾದರೆ), ಇದ್ದು, ಅವರೊಳಗೆ ಗಂಗಾ ನದಿಯ ಸಾನ್ನಿಧ್ಯವನ್ನು ಅನುಸಂಧಾನ ಮಾಡಿ, ಆ ಗಂಗಾದೇವಿಯ ಅಂತರ್ಗತನಾದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಕ್ಷೀರಾಬ್ಧಿಶಾಯಿ, ಶ್ರೀ ಲಕ್ಷ್ಮೀನಾರಾಯಣನಿಗೆ ನಮಸ್ಕರಿಸಿ, ಈ ಸ್ನಾನ ನಮಗಲ್ಲ, ನಮಗೊಳಗಿರುವ ಲಕ್ಷ್ಮೀರಮಣನಿಗೆ ಅಭಿಷೇಕ ಎಂದು ಅನುಸಂಧಾನ ಮಾಡಿ, ಶಂಖಮುದ್ರೆಯಿಂದ ನೀರನ್ನು ಪ್ರೋಕ್ಷಿಸಿಕೊಂಡು (ಶಂಖದಲ್ಲಿ ಲಕ್ಷ್ಮಿಯ ಸಾನ್ನಿಧ್ಯವಿರುವುದರಿಂದ – ಶಂಖಮುದ್ರೆಯಿಂದ ಪ್ರೋಕ್ಷಿಸಿಕೊಳ್ಳಬೇಕು.
ಅಷ್ಠೇ ಅಲ್ಲ ಪರಮಾತ್ಮನಿಗೆ ಸ್ನಾನ ಮಾಡಿಸಲು ನಮಗೆ ಯೋಗ್ಯತೆ ಇಲ್ಲ, ಆದ್ದರಿಂದ ಅಲ್ಲಿ ಲಕ್ಷ್ಮಿದೇವಿಯನ್ನು ಅನುಸಂಧಾನ ಮಾಡಬೇಕು), ನಂತರ ಸ್ನಾನ ಮಾಡಬೇಕು.
ವೃದ್ಧಗಂಗೇ ಮಹಾಪುಣ್ಯೇ ಗೌತಮಸ್ಯಾಘನಾಶಿನಿ |ಗೋದಾವರೀ ಗ್ರುಹಾಣಾರ್ಘ್ಯಂ ತ್ರ್ಯಂಬಕಸ್ಯ ಜಟೋದ್ಭವೇ |
(ಅರ್ಘ್ಯ ಗಂಗೆಯ ಇನ್ನೊಂದು ರೂಪವಾದ ಗೋದಾವರೀಗೆ)
By Narahari Sumadhwa
(Source : Late Sri S N Ramachandrachar, Rtd professor, Tantrasaragama)
***
ವ್ಯಾಸಪೂರ್ಣಿಮೆಯ ಜತೆ, ಪುಷ್ಯಾರ್ಕ ಯೋಗ ದ ಪರ್ವಕಾಲ
"ಮೊದಲಿಗೆ ಭಗವಾನ್ ಶ್ರೀವೇದವ್ಯಾಸರನ್ನು ಸ್ಮರಿಸೋಣ"
ವ್ಯಾಸಾಯ ಭವನಾಶಾಯ ಶ್ರೀಶಾಯ ಗುಣರಾಶಯೇ |
ಹೃದ್ಯಾಯ ಶುದ್ಧವಿದ್ಯಾಯ ಮಧ್ವಾಯ ಚ ನಮೋ ನಮ: |
ಅಗಣಿತ ಗುಣರಾಶಿಯಾಗಿದ್ದ ವೇದವನ್ನು ನಾಲ್ಕು ಭಾಗ ಮಾಡಿದ, ಪುರಾಣಗಳೆಂಬ ಪುಣ್ಯಕರವಾದ ಸಾಗರವನ್ನೇ ನಮಗಿತ್ತ ಶ್ರೀವೇದವ್ಯಾಸರಿಗೆ ನಮೋ ನಮಃ...🙏🙏🙏
ಇನ್ನೂ ಪುಷ್ಯಾರ್ಕ ಯೋಗ:
ಸೋಮಸೂರ್ಯಪರಾಗೇ ಚ ಪುಷ್ಯಾರ್ಕಾದಿಸಮಾಗಮೇ ||
ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ |
ಭೂತ-ಪ್ರೇತ-ಪಿಶಾಚಾದಿ-ಪೀಡಾ ತಸ್ಯ ನ ಜಾಯತೇ ||
ಈ ಮೇಲಿನ ಶ್ಲೋಕಗಳು ಶ್ರೀಅಪ್ಪಣಾಚಾರ್ಯರು ರಚಿಸಿದ ಶ್ರೀರಾಘವೇಂದ್ರ ಗುರುಸಾರ್ವಭೌಮರ ಸ್ತೋತ್ರದಲ್ಲಿ ಕಾಣಬಹುದು.
ಅಂದರೆ ಚಂದ್ರ ಹಾಗೂ ಸೂರ್ಯ ಗ್ರಹಣ ಕಾಲದಲ್ಲಿಯೂ, ಭಾನುವಾರ ಪುಷ್ಯಾ ನಕ್ಷತ್ರದಿಂದ ಕೂಡಿದ ಪುಷ್ಯಾರ್ಕಯೋಗ ದಿನದಂದು ಗುರುಗಳ ಸ್ತೋತ್ರವನ್ನು ನೂರೆಂಟು ಬಾರಿ ಪಠಿಸಿದರೆ ಯಾವುದೇ ದುಷ್ಟ ಶಕ್ತಿಗಳು ಬಾಧಿಸುವುದಿಲ್ಲ ಎಂಬುದು ತಾತ್ಪರ್ಯ.
ಪುಷ್ಯಾರ್ಕ ಯೋಗ - ಈ ಯೋಗ ಗುರುಗಳ ಸ್ಮರಣೆಗೆ ಅತ್ಯಂತ ಪ್ರಶಸ್ತವಾದ ಕಾಲ, ಹಾಗಾಗಿ ಗುರುಗಳನ್ನು ಸ್ಮರಿಸೋಣ.
ಯಾಕೆ ಗುರುಗಳು ಮುಖ್ಯ...?
ಚಕ್ಕಡಿ(ಬಂಡಿ)ಗೆ ಎತ್ತುಗಳು ಎಷ್ಟು ಮುಖ್ಯವೋ, ಹಾಗೆಯೇ ಚಕ್ಕಡಿ ಓಡಿಸುವ ವ್ಯಕ್ತಿಯು ಬಹುಮುಖ್ಯ. ದೈವಾನುಗ್ರಹ ಎಷ್ಟೇ ಇರಲಿ, ಜತೆಗೆ ಗುರುಗಳ ಕರುಣಾಪೂರಿತ ಕಾರುಣ್ಯ ಇರಲೇ ಬೇಕು. ಹರ ಮುನಿದರೆ ಗುರು ಕಾಯ್ವ, ಗುರು ಮುನಿದರೆ ಕಾಯುವರಾರೋ ಎಂಬ ಮಾತಿದೆ.
ಗುರುಬಲವಿದ್ದರೆ ದೈವಬಲ ತಾನಾಗಿಯೇ ಬರುತ್ತದೆ, ಇಲ್ಲವೇ ಗುರುಗಳು ಬರಿಸುತ್ತಾರೆ. ಅದಕ್ಕಾಗಿಯೇ ಯಾವುದೇ ಶುಭಕಾರ್ಯದ ಆರಂಭದಲ್ಲಿ, ವೇದ ಪಾರಾಯಣ ಮತ್ತಿತರ ಸಮಯದಲ್ಲಿ ಶ್ರೀಗುರುಭ್ಯೋ ನಮಃ ಎನ್ನುತ್ತೇವೆ. ನಂತರ ಹರಿಃ ಓಂ ಎನ್ನುತ್ತೇವೆ. ವೀರಶೈವರು ಹರಹ ಓಂ ಎನ್ನುತ್ತಾರೆ. ಯಾವುದೇ ಧರ್ಮವಿರಲಿ, ಮತವಿರಲಿ, ಪಂಥವಿರಲಿ ಗುರು ವಿಗೆ ಅಗ್ರಸ್ಥಾನ. ಇಂತಹ ಗುರುವನ್ನು ಸದಾ ಸ್ಮರಿಸಬೇಕು. ಅದರಲ್ಲಿಯೂ ವಿಶೇಷವಾದ ಪರ್ವಕಾಲದಲ್ಲಿ ವಿಶೇಷವಾಗಿ ಸ್ಮರಣೆ ಮಾಡಬೇಕು.
ತಾಯಿ ತನ್ನ ಮಗುವಿಗೆ ಪ್ರೇಮ ನೀಡಬಲ್ಲಳು, ತಂದೆಯಂತೆ ಶಿಕ್ಷಿಸಿ ಸರಿದಾರಿಗೆ ತರಲಾರಳು. ತಂದೆ ಶಿಸ್ತು ಕಲಿಸಿ ಬೆಳೆಸಬಹುದು, ಆದರೆ ಮಾತೃ ಪ್ರೇಮ ನೀಡಲಾರ. ಉತ್ತಮ ಗುಣ ಸಂಪನ್ನರಾದ ಗುರುಗಳು ಮಾತೆಯಂತೆ ಮಾತೃ ಹೃದಯಿಯಾಗಿ ಪ್ರೀತಿಸುವುದರ ಜತೆ, ಪಿತೃವಿನಂತೆ ದಂಡಿಸಿ ತಿದ್ದಿ ತೀಡಿ ವಿದ್ಯೆ ಕಲಿಸಬಲ್ಲರು. ಉನ್ನತವಾದ ಗುರಿ ಮುಟ್ಟಲು ಹೆಗಲಿಗೆ ಹೆಗಲಾಗುವರು. ಶಿಷ್ಯ ಸಾಧಕನಾದರೆ, ಗುರುಗಳ ಹರ್ಷಕ್ಕೆ ಮಿಗಿಲಿಲ್ಲ.
ಹಾಗಾಗಿಯೇ ಮೂರು ರೀತಿಯ ಅನುಗ್ರಹ ತೋರುವ ಗುರುಗಳಿಗಿಂತ ಅಧಿಕ ಆಪ್ತರು ಇನ್ನಾರು ಎಮಗೆ ಎನ್ನುತ್ತೇವೆ. ಅಂತಹ ಗುರುಗಳ ಹೃತ್ಕಮಲದಲ್ಲಿ ನಿಂತು ನಮ್ಮನ್ನು ಸರಿದಾರಿಯಲ್ಲಿ ನಡೆಸಿ ಸತ್ಕುಲ ಪ್ರಸೂತರನ್ನಾಗಿಸುವ ದೇವಗುರು ಬೃಹಸ್ಪತಿ ಯ ಜತೆ, ತ್ರೈಲೋಕ್ಯ ಜಗದ್ಗುರುಗಳಾದ ಶ್ರೀಮದಾನಂದತೀರ್ಥರನ್ನು, ಟೀಕಾಕಾರರಾದ ಗಜಗಹ್ವರವಾಸಿ ಶ್ರೀಮದ್ಜಯತೀರ್ಥರನ್ನು, ಪರಮಗುರುಗಳಾದ ಶ್ರೀವಾದಿರಾಜರು ಶ್ರೀವ್ಯಾಸರಾಜರು ಹಾಗೂ ಮಂತ್ರಾಲಯ ಪ್ರಭುಗಳಾದ ಶ್ರೀರಾಘವೇಂದ್ರತೀರ್ಥ ಗುರು ಸಾರ್ವಭೌಮರನ್ನು ಈ ದಿನ ಸ್ಮರಿಸೋಣ.
ಗುರುವಾರದ ದಿನ ಪುಷ್ಯ ನಕ್ಷತ್ರವಿದ್ದರೆ ಆ ದಿನ, ಗುರುಪುಷ್ಯಯೋಗ ಎನ್ನಲಾಗುತ್ತದೆ. ಅದೇ ರೀತಿ ಭಾನುವಾರ ಪುಷ್ಯ ನಕ್ಷತ್ರ ಬಂದರೆ ಪುಷ್ಯಾರ್ಕ ಯೋಗ ಎನ್ನುತ್ತೇವೆ. ಈ ಎರಡೂ ದಿನ ದೇವ ಗುರುವಾದ ಶ್ರೀಬೃಹಸ್ಪತಿ ಯ ಜತೆ ಗುರುಗಳ ಸ್ಮರಣೆ ಅತ್ಯಂತ ಪುಣ್ಯದಾಯಕ. ಗುರುಗಳ ಜಪ, ಸ್ಮರಣೆ ಫಲದಾಯಕ. ಈ ಪರ್ವ ಕಾಲದಲ್ಲಿ ಗುರುಸ್ಮರಣೆ ಮಾಡೋಣ.
ದೇವ ಗುರುವಾದ ಬೃಹಸ್ಪತಿಯನ್ನು ನೆನೆಯೋಣ.
ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಂ ।
ಬುದ್ಧಿಮಂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ ॥
ಜಗತ್ತಿಗೆ ಆನಂದ(ಭಕ್ತಿ) ಮಾರ್ಗ ತೋರಿದ ಶ್ರೀಮದಾನಂದತೀರ್ಥರನ್ನು ಸ್ಮರಿಸೋಣ.
ಅಭ್ರಮಂ ಭಂಗರಹಿತಮಜಡಂ ವಿಮಲಂ ಸದಾ| ಆನಂದತೀರ್ಥಮತುಲಂ ಭಜೇ ತಾಪತ್ರಯಾಪಹಂ||
ಟೀಕಾರಾಯರೆಂದೇ ಖ್ಯಾತಿವೆತ್ತ ಶ್ರೀಜಯತೀರ್ಥರನ್ನು ಸ್ಮರಿಸೋಣ.
ಚಿತ್ರೈಃ ಪದೈಶ್ಚ ಗಂಭೀರೈರ್ವಾಕ್ಯೈರ್ಮಾನೈರಖಂಡಿತೈಃ |
ಗುರುಭಾವಂ ವ್ಯಂಜಯಂತೀ ಭಾತಿ ಶ್ರೀ ಜಯತೀರ್ಥವಾಕ್ ||
ಯಸ್ಯ ವಾಕ್ಕಾಮಧೇನುರ್ನಃ ಕಾಮಿತಾರ್ಥಾನ್ಪ್ರಯಚ್ಛತಿ|
ಸೇವೇ ತಂ ಜಯಯೋಗೀಂದ್ರಂ ಕಾಮಬಾಣಚ್ಛಿದಂ ಸದಾ||
ವಿಜಯನಗರ ಸಿಂಹಾಸನಾಧೀಶ್ವರರಾದ ಶ್ರೀವ್ಯಾಸರಾಜರನ್ನು ಸ್ಮರಿಸೋಣ.
ಅರ್ಥಿಕಲ್ಪಿತ ಕಲ್ಪೋಯಂ ಪ್ರತ್ಯರ್ಥಿಗಜಕೇಸರಿ| ವ್ಯಾಸತೀರ್ಥ ಗುರುರ್ಭೂಯಾತ್ ಅಸ್ಮದಿಷ್ಟಾರ್ಥ ಸಿದ್ಧಯೇ॥
ಕಲಿಯುಗದ ಕಾಮಧೇನು, ಮಂತ್ರಾಲಯ ಪ್ರಭುಗಳಾದ ಶ್ರೀರಾಘವೇಂದ್ರತೀರ್ಥ ಗುರು ಸಾರ್ವಭೌಮರನ್ನ ಈ ಪರ್ವ ಕಾಲದಲ್ಲಿ ಸ್ಮರಿಸಿ ಧನ್ಯರಾಗೋಣ.
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ|
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ||
ದುರ್ವಾದಿಧ್ವಾಂತರವಯೇ ವೈಷ್ಣವೇಂದೀವರೇಂದವೇ|
ಶ್ರೀರಾಘವೇಂದ್ರಗುರುವೇ ನಮೋಅತ್ಯಂತ ದಯಾಲವೇ||
ಸರ್ವ ಗುರುಗಳನ್ನು ಸ್ಮರಿಸೋಣ.
ಆಪಾದಮೌಳಿ ಪರ್ಯಂತಂ ಗುರುಣಾಕೃತಿಂ ಸ್ಮರೇತ್|
ತೇನವಿಘ್ನಾಃಪ್ರಣಶ್ಯಂತಿ ಸಿದ್ಧಂತಿಚ ಮನೋರಥಾಃ||
ಶ್ರೀರಾಘವೇಂದ್ರಾಯ ನಮಃ ಎಂಬ ಅಷ್ಟಾಕ್ಷರ ಮಂತ್ರವನ್ನು ಜಪಿಸಿ ಪುನೀತರಾಗಿ...
ಶ್ರೀಮದ್ರಾಘವೇಂದ್ರತೀರ್ಥ ಗುರುವಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀವೇದವ್ಯಾಸ ದೇವರು ಎಲ್ಲರನು ಕಾಯಲಿ
ಶುಭಮಸ್ತು....🌷🌷
ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ, ಆನೇಕಲ್.
***
ಮಾಘಿ ಹುಣ್ಣಿಮೆಯಂದು ಗಂಗಾ ಸ್ನಾನದ ಮಹತ್ವ: ಮಾಘ ಮಾಸದಲ್ಲಿ ದೇವತೆಗಳು ಭೂಮಿಗೆ ಆಗಮಿಸಿ ಕೆಲವು ದಿನಗಳ ಕಾಲ ಇಲ್ಲೇ ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಯಾವುದೇ ವ್ಯಕ್ತಿಯು ಮಾಘ ಪೂರ್ಣಿಮೆಯಂದು ಗಂಗಾ ಸ್ನಾನವನ್ನು ಮಾಡಿದರೆ, ಆತ/ಆಕೆ ಪಾಪಗಳಿಂದ ಮುಕ್ತನಾಗುತ್ತಾನೆ ಮತ್ತು ಸ್ವರ್ಗವನ್ನು ಪಡೆಯುತ್ತಾನೆ ಎನ್ನಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಿಶೇಷ ದಿನದಂದು ಸೂರ್ಯೋದಯಕ್ಕೂ ಮುನ್ನ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಸ್ನಾನ ಮಾಡಿ ಭಗವಾನ್ ವಿಷ್ಣುವನ್ನು ಪೂಜಿಸಿ ದಾನ ಧರ್ಮ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ದಿನ ಎಳ್ಳಿನ ನೈವೇದ್ಯ, ಎಳ್ಳೆಣ್ಣೆ ದೀಪ ಹಚ್ಚುವುದು ಕೂಡಾ ಒಳ್ಳೆಯದು.
ಮಾಘ ಪೂರ್ಣಿಮೆಯಂದು ಭಗವಾನ್ ವಿಷ್ಣುವು ಸ್ವತಃ ಗಂಗಾನದಿಯ ನೀರಿನಲ್ಲಿ ಸ್ನಾನ ಮಾಡುತ್ತಾನೆ, ಆದ್ದರಿಂದ ಈ ದಿನದಂದು ಗಂಗಾಸ್ನಾನಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದು ಗಂಗಾಜಲವನ್ನು ಸ್ಪರ್ಶಿಸುವುದರಿಂದ ದೇಹದ ಎಲ್ಲಾ ಕಾಯಿಲೆಗಳು ಗುಣವಾಗುತ್ತವೆ ಎಂದು ನಂಬಲಾಗಿದೆ. ಪಾಪಗಳೆಲ್ಲಾ ನಾಶವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ.
ಪುರಾಣದ ಪ್ರಕಾರ, ಮಾಘ ಹುಣ್ಣಿಮೆಯಂದು ಗಂಗಾ-ಯಮುನೆಯಂತಹ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದ ನಂತರ ಭಗವಾನ್ ವಿಷ್ಣುವಿನ ಧ್ಯಾನ ಮಾಡಿ, ದಾನ ಮಾಡಿದರೆ ಸಾಕ್ಷಾತ್ ವಿಷ್ಣು ಸಂತೃಪ್ತನಾಗಿ ಹರಸುತ್ತಾನೆ. ಈ ದಿನ ಹಸು, ಎಳ್ಳು, ಬೆಲ್ಲ ಮತ್ತು ಕಂಬಳಿಯನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಬಟ್ಟೆ, ಬೆಲ್ಲ, ತುಪ್ಪ, ಹತ್ತಿ, ಲಡ್ಡು, ಹಣ್ಣುಗಳು, ಧಾನ್ಯಗಳು ಹಾಗೂ ಇನ್ನಿತರ ವಸ್ತುಗಳನ್ನು ದಾನ ಮಾಡಬಹುದು. ಸಂಗ್ರಹ
***
No comments:
Post a Comment