SEARCH HERE

Sunday, 14 March 2021

ಹೋಳಿ ಹುಣ್ಣಿಮೆ holi hunnime phalguna pournima

 ಹೋಲಿಹುಣ್ಣಿಮೆ    ಹೋಳಿಹುಣ್ಣಿಮೆ

ಹೋಳಿ ಹಬ್ಬದ ಆಚರಣೆ ಮಹತ್ವ ಏನು ಗೊತ್ತಾ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಬೇಸಿಗೆಯ ಸಮಯ ರೈತರೆಲ್ಲ ತನ್ನ ಹೊಲಗದ್ದೆಗಳ ಕಾರ್ಯಗಳನ್ನು ಮುಗಿಸಿ ಮನೆಯಲ್ಲಿ ನಿರಾಳವಾಗಿ ಕಾಲ ಕಳೆಯುವ ಸಮಯ.

 ಗಿಡ-ಮರಗಳಲ್ಲಿ ಹಸಿರು ಸಿರಿ ಚಿಮ್ಮುವ ಸಂಭ್ರಮ.ಇಂಥ ಸಂಭ್ರಮದಲ್ಲಿ ಗಂಡಸರಿಗೆ ಬರುವ ಹಬ್ಬ ಹೋಳಿ.ಕಾಮವು ಕ್ಷಣಿಕ ಪ್ರೇಮವು ಶಾಶ್ವತ,ಕಾಮವು ದೈಹಿಕ,ಪ್ರೇಮವು ಮಾನಸಿಕ.ನಮ್ಮ ಅಂತರಂಗ ಬಹಿರಂಗ ಶುದ್ಧಿಯಿಂದ ಕಾಮವನ್ನು ನಿಗ್ರಹಿಸಿ ಪ್ರೇಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲಕ ಬದುಕನ್ನು ಕಂಡುಕೊಳ್ಳುವ ಪರಿಯೇ ಕಾಮ ದಹನದ ಹೋಳಿಹಬ್ಬ.

ಇದನ್ನು ವಸಂತೋತ್ಸವ,ರಂಗಪಂಚಮಿ,ಫಗ್ವಾ,ಡೋಲ್ ಯಾತ್ರಾ ಎಂಬ ಹೆಸರುಗಳಿಂದ ದೇಶದೆಲ್ಲೆಡೆ ಆಚರಿಸುತ್ತಾರೆ.ಇತಿಹಾಸ ಕಾಲದಲ್ಲಿಯೂ ಹೋಳಿ ಹಬ್ಬ ಆಚರಣೆಯ ಬಗ್ಗೆ ಐತಿಹ್ಯಗಳು ದೊರೆತಿವೆ.

ವಿಜಯನಗರದ ಅರಸರ ಕಾಲದಲ್ಲಿ ಹಾಗೂ ಅಹಮದ್‍ನಗರ,ಮೇವಾರ ಮತ್ತು ಬುಂಡಿಯಲ್ಲಿರುವ ಚಿತ್ರಕಲೆಯಲ್ಲಿ ಈ ಹಬ್ಬ ಆಚರಣೆ ಕುರಿತ ಕುರುಹುಗಳು ದೊರೆತಿವೆ.

ಭಾಗವತ ಪುರಾಣ ಮತ್ತು ವಿಷ್ಣು ಪುರಾಣದಲ್ಲಿಯೂ ಈ ಕುರಿತ ಮಾಹಿತಿ ಉಲ್ಲೇಖವಿದೆ.

ಪಾಲ್ಗುಣ ಹುಣ್ಣಿಮೆಯ ವೇಳೆಗೆ ಗಿಡಮರಗಳು ಚಿಗುರಿ ಹೂಗೊಂಚಲು ಮೂಡಿ ಹಸಿರಿನಿಂದ ಕಂಗೊಳಿಸುತ್ತಿರುತ್ತವೆ.ಇದು ವಸಂತನನ್ನು ಸ್ವಾಗತಿಸುವ ಮುನ್ಸೂಚನೆ ಕೂಡ.ಈ ಸಮಯ ರಾಜ ಮಹರಾಜರು ಕೌಮುದಿ ಮಹೋತ್ಸವ ಆಚರಿಸುತ್ತಿದ್ದರು.ಇದು ಶೃಂಗಾರ ರಸಕ್ಕೆ ಪೂರಕ ಕೂಡ.ಆಗ ಸಂಗೀತ ಮತ್ತು ನೃತ್ಯ ನಾಟಕಾಭಿನಯ ರಾಜ ಅರಮನೆಯಲ್ಲಿ ಏರ್ಪಾಟಾಗುತ್ತಿದ್ದವು.ಇದು ಸಾಮೂಹಿಕ ಉತ್ಸವ ರೂಪವನ್ನು ಪಡೆದಿದ್ದಿತು ಎಂಬುದನ್ನು ಇತಿಹಾಸದಿಂದ ತಿಳಿಯಬಹುದು.

ಹೋಳಿ ಹಬ್ಬ ಕುರಿತಂತೆ ಎರಡು ದೃಷ್ಟಾಂತಗಳು ಬಳಕೆಯಲ್ಲಿವೆ. ಶಿವರಾತ್ರಿ ಅಮವಾಸೆಯಿಂದ ಹೋಳಿ ಹುಣ್ಣಿಮೆಗೆ ಹದಿನೈದರಿಂದ ಇಪ್ಪತ್ತು ದಿನಗಳ ಅಂತರ. 

ಪರಮಾತ್ಮನು ತುಂಗಭದ್ರಾ ನದಿಯ ದಡದಲ್ಲಿ ಇರುವ ಹೇಮಗಿರಿ ಪರ್ವತದ ಶಿಖರದಲ್ಲಿ ತಪಸ್ಸು ಮಾಡುವಾಗ ಅವನ ತಪಸ್ಸನ್ನು ಭಂಗ ಮಾಡಿ ಮದುವೆಯಾಗಲು ಪಾರ್ವತಿಯು ಕಾಮದೇವನಲ್ಲಿ ಮೊರೆ ಹೋಗುತ್ತಾಳೆ.

ಆಗ ವಿಷ್ಣುವಿನ ಅಪ್ಪಣೆಯಂತೆ ಕಾಮದೇವನು ತನ್ನ ಸೈನ್ಯ ಸಮೇತ ಶಿವನಿದ್ದ ಸ್ಥಳಕ್ಕೆ ಬಂದು ತನ್ನ ಬಾಣಗಳಿಂದ ತಫೋಭಂಗಗೊಳಿಸುತ್ತಾನೆ ಇದರಿಂದ ಕೋಪೆಗೊಂಡ ಶಿವನು ತನ್ನ ಉರಿಗಣ್ಣಿನಿಂದ ಕಾಮನನ್ನು ಸುಟ್ಟು ಭಸ್ಮ ಮಾಡುತ್ತಾನೆ. 

ಗಂಡನನ್ನು ಕಳೆದುಕೊಂಡ ರತಿಯನ್ನು ಸಮಾಧಾನಪಡಿಸುವುದು ಪಾರ್ವತಿಗೆ ಕಷ್ಟವಾಗುತ್ತದೆ. ಆಗ ಪಾರ್ವತಿಯು ಕೂಡ ಘೋರ ತಪಸ್ಸನ್ನಾಚರಿಸಿ ಪರಶಿವನನ್ನು ಒಲಿಸಿಕೊಂಡಳಲ್ಲದೇ ಕಾಮನಿಗೆ ಮರುಜನ್ಮ ಕೊಡಿಸುವಳು.ತನ್ನಿಮಿತ್ತ ಹೋಳಿ ಆಚರಣೆ ಬಂದಿದೆ ಎಂಬುದು ಪ್ರತೀತಿ.

ಹಿರಣ್ಯಕಶ್ಯಪನ ತಂಗಿ ಹೋಲಿಕಾ ತನಗೆ ಬೆಂಕಿಯಿಂದ ಮರಣ ಬರಬಾರದೆಂದು ವರ ಪಡೆದಿದ್ದಳು.ಇದನ್ನು ಹಿರಣ್ಯಕಶಿಪು ತನ್ನ ಮಗ ಪ್ರಹ್ಲಾದನನ್ನು ಪರಿವರ್ತಿಸಲು ಎಲ್ಲ ಪ್ರಯತ್ನಗಳನ್ನು ಮಾಡಿ ಸೋತಾಗ ತನ್ನ ತಂಗಿಯ ತೊಡೆಯ ಮೇಲೆ ಕುಳ್ಳಿರಿಸಿ ಸುತ್ತಲೂ ಅಗ್ನಿಯನ್ನು ಉರಿಸಲು ಆ ಅಗ್ನಿಯಲ್ಲಿ ಹೋಲಿಕಾ ತನ್ನ ರಾಕ್ಷಸೀ ಪ್ರವೃತ್ತಿಯಿಂದ ಆಹುತಿಯಾಗುತ್ತಾಳೆ., ತನ್ನ ಭಕ್ತಿಯಿಂದ ಪ್ರಹ್ಲಾದ ಭಗವಂತನಿಂದ ರಕ್ಷಿಸಲ್ಪಡುವನು. ಅವಳ ನೆನಪಿಗೆ ಹೋಲಿ ಹಬ್ಬ ಆಚರಣೆ ಬಂತೆಂದು ಹೇಳುವರು.

ಇಂದು ಕಾಮನ ಪ್ರತಿಷ್ಟಾಪನೆ ಗ್ರಾಮೀಣ ಪ್ರದೇಶದಲ್ಲಿ ಬಹಳ ವಿಜೃಂಭಣೆಯಿಂದ ಜರುಗುತ್ತದೆ. ಊರಿನ ಪ್ರತಿ ಓಣಿ(ಗಲ್ಲಿಗಳಲ್ಲಿ)ಗಳಲ್ಲಿ ಒಂದೊಂದು ನಿಗದಿತ ಸ್ಥಳದಲ್ಲಿ ಕಾಮನ ಕಟ್ಟೆಯೆಂಬ ಸ್ಥಳದಲ್ಲಿ ರತಿಮನ್ಮಥರ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡುವರು.ಈ ಸಂದರ್ಭ ವಯಸ್ಸಿನ ಬೇಧವಿಲ್ಲದೇ ಹಲಗೆ ಬಾರಿಸುತ್ತ

"ಕಾಮಣ್ಣನ ಕಟ್ಟುವ ಕರಿಬಿದರ ಸವರುತ್ತ,

ಕಾಮಣ್ಣಗ ಬಾಸಿಂಗ ಕಟ್ಟುವ ನಮ್ಮ ಕಾಮ

ಇನ್ನೆರಡ ದಿವಸ ಇರಲಿಲ್ಲೋ." ಎಂದು ಲಬೋ ಲಬೋ ಲಬೋ ಎಂದು ಹೊಯ್ಯುಕೊಳ್ಳುವ ಈ ಆಚರಣೆ ನಿಜಕ್ಕೂ ವಿಶಿಷ್ಟವಾದುದು.

ಇಲ್ಲಿ ಅಶ್ಲೀಲತೆಯಂಥಹ ಪದಗಳು ಬಳಕೆಯಾದರೂ ಕೂಡ ಕಾಮ ಮತ್ತು ರತಿಯರ ಸ್ವಭಾವ ಗುಣಗಳನ್ನು ಹೊಗಳುತ್ತ ಗಂಡು-ಹೆಣ್ಣು ವೇಷ ಧರಿಸಿ ಸವಾಲ್-ಜವಾಬ್ ರೀತಿ ಪದಗಳನ್ನು ಹೇಳುತ್ತ ಖುಷಿಯಿಂದ ಗಂಡಸರು ಆಚರಿಸುವ ಈ ಹೋಳಿ ಕಾಮನನ್ನು ಕೂಡ್ರಿಸಿ ಮನೆಯಲ್ಲಿ ಸಿಹಿ ಅಡುಗೆ ಮಾಡಿ ನೈವೇದ್ಯೆ ಮಾಡಿ ಮರುದಿನ ಕಟ್ಟಿಗೆಯ ಮೇಲೆ ಕಾಮನನ್ನು ಕುಳ್ಳಿರಿಸಿ ದಹನ ಮಾಡುವ ಮೂಲಕ ಹಬ್ಬ ಆಚರಣೆ ವಿಶಿಷ್ಟವಾದುದು.

ಇಂಥ ಸಂದರ್ಭ ಕಾಮನನ್ನು ಸುಟ್ಟ ಬೆಂಕಿಯ ಕೆಂಡವನ್ನು ಕೆಲವು ಜನ ತಮ್ಮ ಮನೆಗೆ ತರುತ್ತಾರೆ. ಕಾರಣವಿಷ್ಟೇ ಆ ಕೆಂಡದಿಂದ ಮನೆಯ ಒಲೆಯನ್ನು ಹೊತ್ತಿಸಿದರೆ ವರ್ಷದುದ್ದಕ್ಕೂ ಅವರ ಮನೆ ಅಡುಗೆ ಹುಲುಸಾಗುತ್ತದೆ ಎಂಬ ನಂಬಿಕೆ.ಅಷ್ಟೇ ಅಲ್ಲ ಆ ದಿನ ಹೋಳಿಗೆ ಮಾಡುತ್ತಾರೆ ಅದನ್ನು ಹೆಂಗಸರು ಹೇಳುವ ರೀತಿ ಹೀಗಿದೆ " ಹೊಯ್ಕೊಂಡ ಬಾಯಿಗೆ ಹೋಳಿಗೆ-ತುಪ್ಪ" ಎಂದು ಚೇಷ್ಟೆ ಮಾಡಿ ಉಣಬಡಿಸುವರು.

ಇನ್ನೂ ಕೆಲವರು ಈ ಕಾಮನ ಬೆಂಕಿಯಲ್ಲಿ ಕಡಲೆ ಹುರಿದುಕೊಳ್ಳುವರು. ಈ ಕಡಲೆ ತಿಂದರೆ ಬಾಯಿಯಲ್ಲಿನ ಹಲ್ಲುಗಳು ಗಟ್ಟಿಯಾಗುತ್ತವೆ ಎಂಬ ನಂಬಿಕೆ. ಕಾಮನ ಬೂದಿಯನ್ನು ಮನೆಗೆ ಒಯ್ದು ಆ ವರ್ಷದ ಮೊದಲ ಮಳೆಯ ನಂತರ ಬಿತ್ತುವ ಬೀಜದಲ್ಲಿ ಆ ಬೂದಿಯನ್ನು ಬೆರೆಸಿ ಬಿತ್ತನೆ ಮಾಡಿದರೆ ಬೆಳೆ ಚನ್ನಾಗಿ ಬರುತ್ತದೆ ಎಂಬ ಪ್ರತೀತಿ ಇದೆ.

ಕಾಮದಹನ ಸಂದರ್ಭ ತೆಂಗಿನ ಕಾಯಿಯನ್ನು ಕಾಮನ ತಲೆಯನ್ನು ಗುರಿಯಾಗಿಸಿಕೊಂಡು ಎಸೆಯುವರು. ಆಗ ಅವನ ರುಂಡವು ಯಾವ ದಿಕ್ಕಿನತ್ತ ಬೀಳುತ್ತದೆಯೋ ಆ ದಿಕ್ಕಿನಲ್ಲಿ ಮಳೆ-ಬೆಳೆ ಬಹಳ ಆಗುತ್ತದೆ ಎನ್ನುವುದು ವಾಡಿಕೆ.ಕಾಮ ಸತ್ತ ಐದು ದಿನಕ್ಕೆ ಮಳೆಯಾಗುತ್ತದೆ. ಅದು ಕಾಮಣ್ಣನ ಬೂದಿ ತೋಯಿಸುತ್ತದೆ.ಅದು ಕಾಮನ ಕಣ್ಣೀರು ಎಂಬುದು ಗ್ರಾಮೀಣ ಜನರ ನಂಬಿಕೆ.

ಕಾಮನನ್ನು ಸುಟ್ಟು ಅವನ ಬೂದಿಯನ್ನು ವಿಭೂತಿಯಂತೆ ಹಣೆಗೆ ಧರಿಸುವುದು ಕೂಡ ಮನದ ಕೆಟ್ಟ ಕಾಮವನ್ನು ಜ್ಞಾನ ಚಕ್ಷುವಿನಿಂದ ಸುಟ್ಟು ಬೊಟ್ಟಿಡುವುದು ಶಿವನ ಸಾಕ್ಷಾತ್ಕಾರದ ಸಾಧನ.

ನಮ್ಮ ಆಸೆ ಆಕಾಂಕ್ಷೆಗಳಲ್ಲಿ ಧರ್ಮಸೂಕ್ಷ್ಮ ದರ್ಶನಕಾಣ್ಕೆಯಿದ್ದು ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ಶರೀರ ಪವಿತ್ರತೆಯನ್ನು ಪಡೆಯಬೇಕು.ಇದು ವಿಭೂತಿ ಧಾರಣೆಯ ಮೂಲಕ ಆಗಬೇಕು.

ಅದು ಕಾಮ ದಹನದ ಮೂಲಕ.ಶಿವನ ಹಣೆ ಎಂದರೆ ಜ್ಞಾನ ಚಕ್ಷು.ಕಾಮ ಎಂದರೆ ಕೆಟ್ಟ ಆಸೆ.ಕೆಟ್ಟ ಆಸೆಯನ್ನು ಜ್ಞಾನ ಚಕ್ಷುವಿನ ಸೂರ್ಯನಿಂದ ಸುಟ್ಟು ಉತ್ತಮ ಸಂಸ್ಕಾರ ಹೊಂದುವುದಾಗಿದೆ.

ಕೇವಲ ಯೌವನ ಭರಿತ ದೇಹ ಕಾಮಾತುರಣದಿಂದ ತನ್ನ ಸ್ಥಿತಿಯನ್ನು ಪಡೆದರೆ ಅದು ಪ್ರೇಮವಾಗದು.ಭಾವನಾಪರವಶತೆಯಿಂದ ಆತ್ಮಶ್ರೀಯಿಂದ ಎರಡೂ ಕಡೆ ಸಮತೋಲಿತ ಪ್ರೇಮ ಒಡಮೂಡಿದಾಗ ಮಾತ್ರ ಅದು ತಪಸ್ಸಿನಂತೆ ಕಂಗೊಳಿಸುವುದು.

ಇಲ್ಲಿ ಕೇವಲ ಕಾಮವಿರದೆ ಪ್ರೇಮತ್ವ ಮೂಡಿರುವುದು.ಇದು ಪಾರ್ವತಿ ಕಾಮನ ಸಹಾಯ ಪಡೆದು ಶಿವನ ಮೋಹಿಸುವ ಪರಿಯನ್ನು ಶಿವ ತನ್ನ ಇಚ್ದೆಯ ವಿರುದ್ಧ ಪ್ರಕ್ರಿಯೆಯೆಂದು ಪರಿಗಣಿಸಿ ಕಾಮನನ್ನು ಸುಡುವ ಮೂಲಕ ಪಾರ್ವತಿ ತನ್ನ ತಪಸ್ಸಿನ ಮೂಲಕ ಶಿವನೊಲುಮೆ ಪಡೆಯುವಂತೆ ಮಾಡುವುದಿದೆಯಲ್ಲ ಅಲ್ಲಿ ನಿಷ್ಕಾಮ ಪ್ರೇಮ ಮೂಡುವ ಭಾವನೆ ಆತ್ಮಶ್ರೀಯ ಮೂಲಕ ನಡೆಯುವುದು.

ಶಿವನನ್ನು ಸಾಕ್ಷಾತ್ಕರಿಸಿಕೊಳ್ಳಲು ನಮ್ಮ ಪ್ರಣಯದ ಆಸೆ ಆಕಾಂಕ್ಷೆಗಳನ್ನು ಮೊದಲು ಸುಡಬೇಕು.ಕಾಮವು ಪ್ರೇಮವಾಗಿ ಶಿವರತಿಯಾಗಬೇಕು.  ಬಹಿರಂಗ ಶುದ್ದೀಕರಣವಾಗಬೇಕು.

ಮಾರ ಎಂದೂ ಕರೆಯಲ್ಪಡುವ ಕಾಮದೇವನು ಮಾನವ ಪ್ರೇಮ ಹಾಗೂ ಬಯಕೆಯ ಹಿಂದೂ ದೇವತೆ. ಮನ್ಮಥ, ಅತನು,ಮದನ, ರತಿಕಾಂತ, ಕುಸುಮಶರ ಅಥವಾ ಕಾಮ ಅವನ ಇತರ ಹೆಸರುಗಳು. ಕಾಮದೇವನು ಹಿಂದೂ ದೇವತೆ ಶ್ರೀಯ ಮಗ ಮತ್ತು ಜೊತೆಗೆ ಕೃಷ್ಣನ ಮಗನಾದ ಪ್ರದ್ಯುಮ್ನನು ಕಾಮದೇವನ ಅವತಾರನೆಂದು ಪರಿಗಣಿಸಲಾಗುತ್ತದೆ.

ಬಣ್ಣಗಳ ಹಬ್ಬ ಹೋಳಿ ಹಬ್ಬ. ಉಲ್ಲಾಸ ತುರುವ ಬಣ್ಣಗಳ ಎರಚಾಟದ ಮನೋರಂಜನೆಯ ನಂತರ ಸ್ನಾನ ಮಾಡಿ ದೇವರ ಪೂಜೆ ನೆರವೇರಿಸುವುದು ಹೋಳಿ ಹಬ್ಬದ ವಿಶೇಷ. ವಿವಿಧ ಬಣ್ಣಗಳ ಓಕುಳಿ ಹರಿಸಿ ಇಡಿ ವರ್ಷ ಸಂತೋಷದ ಕೋಡಿಯೇ ಹರಿಯಲಿ ಎಂದು ಹಾರೈಸುವ ರಂಗಿನ ಹಬ್ಬ ಇದು. 

ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಮಾತ್ರ ಆಚರಣೆಯಲ್ಲಿದ್ದ ಹೋಳಿ ಹಬ್ಬವನ್ನು ಈಗ ಭಾರತದಾದ್ಯಂತ ಆಚರಿಸಲಾಗುತ್ತಿದೆ. ಯುವಕ ಯುವತಿಯರಿಗೆಲ್ಲ ಮೋಜು ತರುವ ಹರ್ಷದ ಹಬ್ಬ ಇದಾಗಿರುವುದರಿಂದ ಸುಲಭವಾಗಿ ಈ ಹಬ್ಬ ದೇಶದೆಲ್ಲಡೆ ಪಸರಿಸಿದೆ. ಬಣ್ಣಗಳೊಂದಿಗೆ ಓಕುಳಿ ಆಡಿ, ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಖುಷಿಪಟ್ಟು ಈ ಹಬ್ಬವನ್ನಾಚರಿಸಲಾಗುತ್ತದೆ. 

ಪಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯ ದಿವಸ ಹೋಳಿಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಕಾಮನ ಹಬ್ಬವೆಂದೂ ಕರೆಯಲಾಗುತ್ತದೆ.

ಹರ್ಷ ತರುವ ಬಣ್ಣಗಳ ಹಬ್ಬ..

ಕಾಮನ ಹಬ್ಬವೆಂದೂ ಕರೆಯಲ್ಪಡುವ ಹೋಳಿ ಆಚರಣೆಯ ಹಿಂದೆ ಒಂದು ಕಥೆಯಿದೆ. ತಾರಕಾಸುರನೆಂಬ ರಾಕ್ಷಸನು ತಪಸ್ಸುಮಾಡಿ ಬ್ರಹ್ಮನನ್ನು ಒಲಿಸಿಕೊಂಡು ತನಗೆ ಸಾವು ಬಾರದಂತೆ ಅನುಗೃಹಿಸು ಎಂದು ಬೇಡುತ್ತಾನೆ. ಅದಕ್ಕೆ ಬ್ರಹ್ಮ ಸಾವು ಎಲ್ಲರಿಗೂ ನಿಶ್ಚಿತ ಸಾವು ಬಾರದಂತೆ ತಡೆಯಲು ಸಾಧ್ಯವಿಲ್ಲ ಎನ್ನುತ್ತಾನೆ. ಆಗ ತಾರಕಾಸುರನು, ಶಿವನಿಗೆ ಏಳು ದಿನದಲ್ಲಿ ಜನಿಸಿದ ಮಗನಿಂದ ನನಗೆ ಸಾವು ಬರುವಂತೆ ಮಾಡು ಎಂದು ವರ ಬೇಡುತ್ತಾನೆ. ಅದಕ್ಕೆ ಬ್ರಹ್ಮ ಒಪ್ಪಿ ವರ ನೀಡುತ್ತಾನೆ. ಬ್ರಹ್ಮನಿಂದ ವರ ಪಡೆದಿರುವ ತಾರಕಾಸುರ ಅಹಂಕಾರದಿಂದ ಲೋಕದೆಲ್ಲಡೆ ಉಪಟಳ ನೀಡುತ್ತಿರುತ್ತಾನೆ. 

ಆಗ ದೇವತೆಗಳೆಲ್ಲ ಸಹಾಯ ಕೋರಿ ಶಿವನಲ್ಲಿಗೆ ಹೋದಾಗ ಶಿವ ಭೋಗಸಮಾಧಿಯಲ್ಲಿರುತ್ತಾನೆ. ಶಿವ ಭೋಗಸಮಾಧಿಯಿಂದ ಎದ್ದು ಪಾರ್ವತಿಯಲ್ಲಿ ಮೋಹಗೊಂಡು ಸೇರುವಂತೆ ಮಾಡುವುದಕ್ಕಾಗಿ ದೇವತೆಗಳೆಲ್ಲ ಸೇರಿ ರತಿ ಮನ್ಮಥರನ್ನು ಒಪ್ಪಿಸುತ್ತಾರೆ. ಪುಣ್ಯಕಾರ್ಯ ಮಾಡಲು ರತಿ ಮನ್ಮಥರು ಒಪ್ಪುತ್ತಾರೆ. ಅದರಂತೆ ಧ್ಯಾನಸ್ಥ ಸ್ಥಿತಿಯಲ್ಲಿದ್ದ ಮಹಾದೇವನ ಎದುರು ನೃತ್ಯ ಮಾಡಿ, ಹೂವಿನ ಬಾಣ ಬಿಟ್ಟು ಶಿವನ ಧ್ಯಾನಕ್ಕೆ ಭಂಗ ತರುತ್ತಾರೆ. ಇದರಿಂದ ಕುಪಿತಗೊಂಡ ಶಿವ ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ಸುಟ್ಟುಬಿಡುತ್ತಾನೆ. ನಂತರ ರತಿ ಪತಿಭಿಕ್ಷೆ ಬೇಡಿದಾಗ ಅವಳಿಗೆ ಮಾತ್ರ ಮನ್ಮಥ ಕಾಣುವಂತೆ ವರ ನೀಡುತ್ತಾನೆ.

ರಂಗಿನಾಟದ ಮೋಜು ಮಸ್ತಿ..

ಮನ್ಮಥನಿಗೆ ಕಾಮ ಎಂಬ ಹೆಸರಿದೆ. ಹೀಗಾಗಿ ಕಾಮ ಶಿವನ ಕೆಂಗಣ್ಣಿಗೆ ಗುರಿಯಾಗಿ ಸುಟ್ಟುಹೋದ ದಿನವನ್ನು ಕಾಮನ ಹಬ್ಬವಾಗಿ ಆಚರಿಸುತ್ತಾರೆ. ಹೀಗಾಗಿ ಕಾಮನನ್ನು ಸುಟ್ಟು ಹೋಳಿಹುಣ್ಣಿಮೆ ಆಚರಿಸುವ ಪದ್ಧತಿ ಆಚರಣೆಯಲ್ಲಿ ಬಂದಿದೆ. 

ಹೋಳಿ ಹಬ್ಬಕ್ಕಾಗಿ ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿ ಗುಲಾಲು ತಯಾರಿಸಿಕೊಂಡು ಓಕುಳಿಯಾಡುವ ಸಂಪ್ರದಾಯವಿದೆ. ಈಗೀಗ ಕೃತಕ ಬಣ್ಣಗಳನ್ನು ಎರಚಾಟಕ್ಕೆ ಹೆಚ್ಚಾಗಿ ಬಳಸಲಾಗುತ್ತದೆ. ಉತ್ತರ ಪ್ರದೇಶದಲ್ಲಿ ವಿಜ್ರಂಭಣೆಯಿಂದ ಆಚರಿಸಲ್ಪಡುವ ಹೋಳಿಯಲ್ಲಿ ವಿಶೇಷ ಖಾದ್ಯಗಳನ್ನೂ ಮಾಡಲಾಗುತ್ತದೆ. ಜೋಳದ ಹಿಟ್ಟಿನ ಗುಜಿಯಾ ಹಾಗೂ ಪಾಪ್ಡಿ ಹೋಳಿಹಬ್ಬದ ವಿಶೇಷ ತಿಂಡಿಗಳು. 

ನಮ್ಮ ರಾಜ್ಯದಲ್ಲಿಯೂ ದಕ್ಷಿಣ ಕರ್ನಾಟಕದಲ್ಲಿಯೂ ಹಲವೆಡೆ ಹೋಳಿಯ ವಿಶಿಷ್ಠ ಆಚರಣೆಯಿಂದೆ. ಊರ ದೇವಸ್ಥಾನದ ಮುಂದೆ ಹೋಳಿ ಹುಣ್ಣಿಮೆಯ ಸಾಯಂಕಾಲ ಹೋಳಿಯನ್ನು ಹೊತ್ತಿಸಲಾಗುತ್ತದೆ. ಹೋಳಿ ಎಂದರೆ ಕಾಮನ ಪ್ರತಿರೂಪ. ಇದನ್ನು ಔಡಲಗಿಡ, ತೆಂಗಿನಗಿಡ, ಅಡಿಕೆಗಿಡ ಅಥವಾ ಕಬ್ಬನ್ನು ಮಧ್ಯ ನಿಲ್ಲಿಸಿ, ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ಕಟ್ಟಿ. ಸುಲಭವಾಗಿ ದಹನವಾಗುವ ರೀತಿಯಲ್ಲಿ ರಚಿಸಲಾಗಿರುತ್ತದೆ.

ನಂತರ ಇದನ್ನು ಊರ ಮುಖಂಡ ಪೂಜೆ ಮಾಡಿ, ನೈವೇದ್ಯ ನೀಡಿ, ಹೋಳಿಯನ್ನು ಹೊತ್ತಿಸುತ್ತಾನೆ. ಹೋಳಿ ಹೊತ್ತಿಕೊಂಡಾಗ ಅದರ ಸುತ್ತ ಪ್ರದಕ್ಷಿಣೆ ಹಾಕಲಾಗುತ್ತದೆ. ನಂತರ ಪ್ರಸಾದದ ರೂಪದಲ್ಲಿ ತೆಂಗಿನ ಕಾಯಿ, ಹಲಸು ಮುಂತಾದ ಹಣ್ಣುಗಳನ್ನು ಹಂಚಲಾಗುತ್ತದೆ. 

ಹೋಳಿ ಹುಣ್ಣಿಮೆಯ ರಾತ್ರಿಯನ್ನು ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಿ ಆಚರಿಸಲಾಗುತ್ತದೆ. 

ಭಾರತದಾದ್ಯಂತ ಆಚರಿಸಲ್ಪಡುವ ಮನೋರಂಜನೆಯ ಹಬ್ಬ ಹೋಳಿ ಹಬ್ಬ ವರ್ಷಪೂರ್ತಿ ಹರ್ಷ ತರಲಿ, ಓಕುಳಿಯಾಡಿ ಖುಷಿಪಟ್ಟ ಎಲ್ಲರಲ್ಲಿಯೂ ಇಡೀ ವರ್ಷಪೂ ಹರ್ಷದ ರಂಗು ಮಾಸದಿರಲಿ ಎಂಬುದು ನಮ್ಮ ಹಾರೈಕೆ.

***

ಹೋಳಿ ಹಬ್ಬದ ಮಹತ್ವ


ದಕ್ಷನ ಮಗಳಾದ ದಾಕ್ಷಾಯಿಣಿಯು ಪರಶಿವನ ಹೆಂಡತಿ. ಹೀಗಾಗಿ ಪರಮೇಶ್ವರನು ದಕ್ಷನಿಗೆ ಸಂಬಂಧದಲ್ಲಿ ಅಳಿಯನಾಗಬೇಕು. ಒಂದು ದಿನ ತ್ರಿವೇಣೀಸಂಗಮದಲ್ಲಿ ದೇವತೆಗಳು ಏರ್ಪಡಿಸಿದ್ದ ಜ್ಞಾನ ಸತ್ರವೊಂದು ನಡೆಯುತ್ತಿತ್ತು. ಪರಶಿವನೇ ಆ ಸಭೆಯ ಅಧ್ಯಕ್ಷನಾಗಿದ್ದ. ಆಗ ದಕ್ಷನು ಅಲ್ಲಿಗೆ ಬಂದ. ಆಗ ಸಭೆಯಲ್ಲಿ ಇದ್ದ ದೇವತೆಗಳು ಮುನಿಗಳು ಎಲ್ಲರೂ ಎದ್ದು ನಿಂತು ನಮಸ್ಕರಿಸಿ ಆತನಿಗೆ ಗೌರವ ಸಲ್ಲಿಸಿದರು. ಆದರೆ, ಅಧ್ಯಕ್ಷ ಪೀಠದಲ್ಲಿದ್ದ ಕಾರಣ ಪರಮೇಶ್ವರನು ಎದ್ದು ಗೌರವ ಸೂಚಿಸಲಿಲ್ಲ. ಇದರಿಂದಾಗಿ ದಕ್ಷ ಕುಪಿತನಾದ. ಅಳಿಯನು ತನ್ನನ್ನು ಅವಮಾನಿಸಿದ ಎಂದೇ ಆತ ತಿಳಿದ. ಹೀಗಾಗಿ ಆ ಸಭೆಯಲ್ಲಿ ಕುಳಿತುಕೊಳ್ಳದೇ ಎಲ್ಲರೆದುರು ಅಳಿಯನಾದ ಶಿವನನ್ನು ನಿಂದಿಸಿ ಸಭೆಯನ್ನು ಧಿಕ್ಕರಿಸಿ ಹೊರನಡೆದ. 


ತನ್ನ ಊರಿಗೆ ಹೋದವನೇ ತಾನೂ ಕೂಡಾ ಬಹಳ ವಿಜೃಂಭಣೆಯ ಒಂದು ಯಾಗವನ್ನು ಕೈಗೊಂಡ. ಅದಕ್ಕೆ ಸ್ವತಹ ಇದು “ನಿರೀಶ್ವರ ಯಾಗ” ಎಂದು ಹೆಸರಿಸಿಕೊಂಡ. ಅದರಲ್ಲಿ ಈಶ್ವರನನ್ನು ಹೊರತುಪಡಿಸಿ ಉಳಿದ ದೇವತೆಗಳೆಲ್ಲರಿಗೂ ಹವಿಸ್ಸನ್ನು ನೀಡಲು ತೀರ್ಮಾನಿಸಿದ. ಹೀಗಾಗಿ ಪ್ರಮೇಶ್ವರನನ್ನು ಹೊರತುಪಡಿಸಿ ಉಳಿದವರಿಗೆಲ್ಲ ಆಮಂತ್ರಣ ನೀಡಿದ.


ಆದರೆ, ಆ ಯಾಗಕ್ಕೆ ಹೋಗುತ್ತಿರುವ ಬ್ರಾಹ್ಮಣರ ಮೂಲಕ ದಾಕ್ಷಾಯಿಣಿಗೆ ತನ್ನ ತಂದೆಯು ಯಾಗವೊಂದನ್ನು ಮಾಡುತ್ತಿರುವ ವಿಷಯ ತಿಳಿಯುತ್ತದೆ. ಆಕೆ ಗಂಡನಾದ ಈಶ್ವರನಲ್ಲಿ ನಾವೂ ಕೂಡಾ ಆ ಯಾಗಕ್ಕೆ ಹೋಗೋಣ ಎಂದು ವಿನಂತಿಸುತ್ತಾಳೆ. ಆಗ ಈಶ್ವರನು ಹಿಂದೆ ತ್ರಿವೇಣೀ ಸಂಗಮದಲ್ಲಿ ನಡೆದ ಸಭೆಯ ವಿಚಾರವನ್ನು ಆಕೆಗೆ ತಿಳಿಸಿ, ನಿನ್ನ ತಂದೆ ಹಗೆ ಸಾಧನೆಗಾಗಿಯೇ ಈ ರೀತಿ ಮಾಡುತ್ತಿದ್ದಾನೆ, ಆದ್ದರಿಂದ ಹೋಗುವುದು ಬೇಡ ಎನ್ನುತ್ತಾನೆ. ಆದರೆ ತವರಿನ ಮೋಹದಿಂದಾಗಿ ದಾಕ್ಷಾಯಿಣಿಯು ಗಂಡನನ್ನು ಕಾಡಿಸಿ ಪೀಡಿಸಿ ನೀವು ಬಾರದೇ ಇದ್ದರೂ ಪರವಾಗಿಲ್ಲ, ನನ್ನನ್ನಾದರೂ ಕಳುಹಿಸಿ ಎನ್ನುತ್ತಾಳೆ. ಈಶ್ವರನು ಅದಕ್ಕೂ ಕೂಡಾ ಒಪ್ಪದೇ ನೀನೂ ಕೂಡಾ ಹೋಗುವುದು ಬೇಡ, ಹೋದರೆ ಕೇಡಾಗುತ್ತದೆ ಎಂದು ಎಚ್ಚರಿಸುತ್ತಾನೆ. ಆದರೆ, ತಂದೆತಾಯಿಯರನ್ನು ಅಕ್ಕತಂಗಿಯರನ್ನು ಬಂಧುಬಾಂಧವರನ್ನೆಲ್ಲ ಕಾಣಬೇಕು ಎಂಬ ಮಾಯಾಪಾಶಕ್ಕೆ ಸಿಲುಕಿದ ದಾಕ್ಷಾಯಿಣಿಯು ಈಶ್ವರನ ಮಾತನ್ನು ತಿರಸ್ಕರಿಸಿ, ತಾನೊಬ್ಬಳೇ ತಂದೆಯ ಯಾಗಕ್ಕೆ ಹೋಗುತ್ತಾಳೆ. 


ಆದರೆ, ಯಾಗಶಾಲೆಗೆ ಹೋದ ದಾಕ್ಷಾಯಿಣಿಯನ್ನು ಯಾರೂ ಮಾತನಾಡಿಸುವುದೇ ಇಲ್ಲ. ತಾಯಿ ಅಕ್ಕ ತಂಗಿಯರೆಲ್ಲ ಮಾತನಾಡಿಸಲು ಮುಂದಾದರೂ ಕೂಡಾ ದಕ್ಷನು ಅವರನ್ನೆಲ್ಲ ಗದರಿಸಿ ಯಾರೂ ಆಕೆಯನ್ನು ಮಾತನಾಡಿಸದಂತೆ ಮಾಡುತ್ತಾನೆ. ಆಗ ಗಂಡನ ಮಾತನ್ನು ಮೀರಿ ಬಂದ ದಾಕ್ಷಾಯಿಣಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಆದರೂ ಸಹಿಸಿಕೊಂಡು ಯಾಗದ ಸಂಭ್ರಮವನ್ನು ನೋಡುತ್ತಾ ಇರುತ್ತಾಳೆ. ಅಲ್ಲಿ ಯಾಗ ನಡೆಸುತ್ತಿರುವ ಮುನಿಗಳು ಇಂದ್ರ , ಅಗ್ನಿ , ಯಮ , ನಿಋತಿ , ವರುಣ , ವಾಯು , ಕುಬೇರ ಎಲ್ಲರಿಗೂ ಹವಿಸ್ಸನ್ನು ಅರ್ಪಿಸಿ ಕೊನೆಯಲ್ಲಿ “ಈಶಾಯ ಸ್ವಾಹಾ” ಎಂದು ಈಶನಿಗೆ ಹವಿಸ್ಸನ್ನು ಅರ್ಪಿಸಲು ತೊಡಗಿದಾಗ, ದಕ್ಷನು ಸಿಟ್ಟಿನಿಂದ ಅವರನ್ನು ತಡೆದು ಈಶ್ವರನಿಗೆ ಹವಿಸ್ಸನ್ನು ಕೊಡಬಾರದು ಇದು ನಿರೀಶ್ವರ ಯಾಗ ಎಂದು ಕೂಗುತ್ತಾನೆ. ಆಗ ದಾಕ್ಷಾಯಿಣಿಗೆ ಕೋಪ ಬರುತ್ತದೆ. ಆಕೆ ದಕ್ಷನನ್ನು ಜರೆಯುತ್ತಾಳೆ. ದಕ್ಷನೂ ಆಕೆಯನ್ನು ಮತ್ತು ಈಶ್ವರನನ್ನು ನಿಂದಿಸುತ್ತಾನೆ. 


ಅವಮಾನ ತಾಳಲಾರದೇ ಹತಾಶಳಾದ ದಾಕ್ಷಾಯಿಯಿಣಿಯು, ತಾನೇ ಯೋಗಾಗ್ನಿಯನ್ನು ಸೃಷ್ಟಿಸಿಕೊಂಡು ಅದರಲ್ಲಿ ತನ್ನನ್ನು ತಾನೇ ಆಹುತಿ ಕೊಟ್ಟುಕೊಳ್ಳುತ್ತಾಳೆ. ದಾಕ್ಷಾಯಿಣಿಯು ಸುಟ್ಟುಹೋದಳೆಂಬ ವಾರ್ತೆ ತಿಳಿದ ಈಶ್ವರನು ಕುಪಿತನಾಗಿ ತನ್ನ ಜಡೆಯನ್ನು ನೆಲಕ್ಕೆ ಬಡಿದು ವೀರಭದ್ರನನ್ನು ಸೃಷ್ಟಿಸುತ್ತಾನೆ. ಅವನಿಗೆ ದಕ್ಷನನ್ನು ಕೊಲ್ಲುವಂತೆ ಅಪ್ಪಣೆ ಕೊಡುತ್ತಾನೆ. ವೀರಭದ್ರನು ದಕ್ಷನಲ್ಲಿಗೆ ಬಂದು ಯಾಗಶಾಲೆಯನ್ನೆಲ್ಲ ಧ್ವಂಸಗೊಳಿಸುತ್ತಾನೆ. ದಕ್ಷನನ್ನೂ ಅವನೊಂದಿಗೆ ಸಹಕರಿಸಿದವರೆಲ್ಲರನ್ನೂ ಕೊಲ್ಲುತ್ತಾನೆ. ಹೆಂಡತಿಯನ್ನು ಕಳೆದುಕೊಂಡ ಈಶ್ವರನು ಕೈಲಾಸದಲ್ಲಿ ಒಂಟಿಯಾಗಿಯೇ ಉಳಿಯುತ್ತಾನೆ. ಧ್ಯಾನಾಸಕ್ತನಾಗಿ ಉಗ್ರವಾದ ತಪಸ್ಸಿನಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. 


ಇತ್ತ ತಾರಕಾಸುರನೆಂಬ ದೈತ್ಯನು ತಪಸ್ಸಿನಲ್ಲಿ ಬ್ರಹ್ಮನನ್ನು ಮೆಚ್ಚಿಸಿ , ಈಶ್ವರನಿಂದ ಜನಿಸಿದ ಪುತ್ರನಿಂದಲ್ಲದೇ ಅನ್ಯರಿಂದ ಮರಣ ಇಲ್ಲದಂತಹ ವರ ಪಡೆದು , ವರಬಲದಿಂದ ಕೊಬ್ಬಿ ದೇವತೆಗಳನ್ನೆಲ್ಲ ಸೋಲಿಸಿ ಲೋಕಕಂಟಕನಾಗಿ ಮೆರೆಯುತ್ತಿರುತ್ತಾನೆ. ಅವನೊಡನೆ ಹೋರಾಡಿ ಸೋತ ದೇವತೆಗಳು ಚಿಂತಿತರಾಗುತ್ತಾರೆ. ಏಕೆಂದರೆ , ಈಶ್ವರನಿಗೆ ಹೆಂಡತಿ ಇಲ್ಲದಿರುವುದರಿಂದ ಆತನಿಗೆ ಮಗನು ಜನಿಸುವುದು ಸಾಧ್ಯವಿಲ್ಲ. ಹೀಗಾಗಿ ದೇವತೆಗಳೆಲ್ಲರೂ ಈಶ್ವರನಿಗೆ ಮದುವೆ ಮಾಡುವ ಉಪಾಯ ಮಾಡುತ್ತಾರೆ. ದಕ್ಷಯಜ್ಞದ ಸಂದರ್ಭದಲ್ಲಿ ಉರಿದು ಹೋದ ದಾಕ್ಷಾಯಿಣಿಯು ನಂತರ ಪರ್ವತ ರಾಜನಿಗೆ ಮಗಳಾಗಿ ಜನಿಸಿ , ಪಾರ್ವತಿ (ಗಿರಿಜೆ) ಎಂಬ ಹೆಸರಿನಿಂದ ಈಶ್ವರನನ್ನೇ ಧ್ಯಾನಿಸುತ್ತಾ ತಾನೂ ಕೂಡಾ ತಪಸ್ಸನ್ನು ಆಚರಿಸುತ್ತಾ ಅರಣ್ಯದಲ್ಲಿ ಇದ್ದಾಳೆ. ಅವಳನ್ನೇ ಕೊಟ್ಟು ಈಶ್ವರನಿಗೆ ಮದುವೆ ಮಾಡಿಸುವುದು ಎಂದು ತೀರ್ಮಾನಿಸುತ್ತಾರೆ. 


ಆದರೆ, ಮೊದಲು ಈಶ್ವರನನ್ನು ತಪಸ್ಸಿನಿಂದ ಎಬ್ಬಿಸಬೇಕಲ್ಲ , ಅದಕ್ಕಾಗಿ ಮನ್ಮಥನ ಮೊರೆಹೋಗುತ್ತಾರೆ. ಮನ್ಮಥನು ಈಶ್ವರನಿಗೆ ತನ್ನಲ್ಲಿರುವ ಐದು ಕುಸುಮ ಬಾಣಗಳನ್ನು ಬಿಡುತ್ತಾನೆ. ಮನ್ಮಥನಿಗೆ 'ಕಾಮ' ಎಂಬುದು ಇನ್ನೊಂದು ಹೆಸರು. ಕಾಮನ ಬಾಣ ತಾಗಿದ್ದರಿಂದ ಈಶ್ವರನು ವಿಚಲಿತನಾಗುತ್ತಾನೆ. ಇದರಿಂದ ಆತನ ತಪಸ್ಸು ಭಗ್ನವಾಗುತ್ತದೆ. ಆಗ ಸಿಟ್ಟಾದ ಶಿವನು ತನ್ನ ಮೂರನೇ ಕಣ್ಣನ್ನು ತೆರೆದು ಮನ್ಮಥನನ್ನು ಸುಟ್ಟುಬಿಡುತ್ತಾನೆ. ಇದೇ "ಕಾಮದಹನ". ಇಲ್ಲಿ ಮನ್ಮಥನು ಸುಟ್ಟುಹೋದರೂ ಶಿವನನ್ನು ತಪಸ್ಸಿನಿಂದ ಎಬ್ಬಿಸಿರುವುದೇ ದೊಡ್ಡ ಸಾಧನೆ. ಹೀಗಾಗಿ ಈ ಘಟನೆಯನ್ನು ದೇವತೆಗಳು ಸಂಭ್ರಮಿಸುತ್ತಾರೆ. ಈ ಆಚರಣೆಯೇ "ಕಾಮ ದಹನ". ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು “ಕಾಮನ ಹುಣ್ಣಿಮೆ”ಯಾಗಿ ಆಚರಿಸುತ್ತಾರೆ.


ಬಳಿಕ ಮನ್ಮಥನ ಹೆಂಡತಿ ರತಿ ಮತ್ತು ದೇವತೆಗಳೆಲ್ಲರೂ ಸೇರಿ ಶಿವನನ್ನು ಧ್ಯಾನಿಸಿ ಆತನನ್ನು ಪ್ರಸನ್ನಗೊಳಿಸುತ್ತಾರೆ. ಆಗ ಸಂತುಷ್ಟನಾದ ಪರಶಿವನು “ಮನ್ಮಥನು ಭಸ್ಮವಾದರೂ ಆತನಿಗೆ ಸಾವಿಲ್ಲ , ಆತನು ಹೆಂಡತಿಯೊಡನೆ ದೇಹ (ಅಂಗ) ಸಹಿತವಾಗಿಯೂ , ಉಳಿದ ಸಂದರ್ಭದಲ್ಲಿ ದೇಹ (ಅಂಗ) ರಹಿತನಾದ 'ಅನಂಗ'ನಾಗಿಯೂ ಜೀವಿತನಾಗಿರುತ್ತಾನೆ , ಭವಿಷ್ಯದಲ್ಲಿ ಈ ಮನ್ಮಥನೇ ಪ್ರದ್ಯುಮ್ನನೆಂಬ ಹೆಸರಿನಿಂದ ಕೃಷ್ಣನ ಮಗನಾಗಿ ಹುಟ್ಟಿ ಪುನಹ ರತಿಯನ್ನು ವಿವಾಹವಾಗುತ್ತಾನೆ” ಎಂದು ಹೇಳಿ ರತಿಯನ್ನು ಸಂತೈಸುತ್ತಾನೆ. ನಂತರ ಶಿವ ಪಾರ್ವತಿಯರ ಕಲ್ಯಾಣವನ್ನು ವಿಜೃಂಭಣೆಯಿಂದ ನೆರವೇರುತ್ತದೆ. ಮುಂದೆ ಅವರಿಬ್ಬರಿಗೆ ಜನಿಸಿದ ಷಣ್ಮುಖನೇ ತಾರಕಾಸುರನನ್ನು ಕೊಲ್ಲುತ್ತಾನೆ. ಇದು ಗಿರಿಜಾ ಕಲ್ಯಾಣದ ಕಥೆ.


ಈ ವರ್ಷ ಚತುರ್ದಶಿಯ ದಿನವೇ ರಾತ್ರಿ ಇಡೀ ಹುಣ್ಣಿಮೆಯ ತಿಥಿಯು ಸಿಗುವುದರಿಂದ ಮತ್ತು ಹುಣ್ಣಿಮೆಯ ದಿನ ರಾತ್ರಿಯಾಗುವುದರೊಳಗೆ ಹುಣ್ಣಿಮೆಯ ತಿಥಿಯು ಕೊನೆಗೊಳ್ಳುವುದರಿಂದ ಚತುರ್ದಶಿಯ ದಿನವೇ ಅಂದರೆ 24-03-2024 ನೇ ಭಾನುವಾರದಂದೇ ಕಾಮದಹನವನ್ನು ಆಚರಿಸಬೇಕಾಗುತ್ತದೆ. ಪ್ರದೇಶದಿಂದ ಪ್ರದೇಶಕ್ಕೆ ಮತ್ತು ಜನಾಂಗದಿಂದ ಜನಾಂಗಕ್ಕೆ ಹೋಳಿ ಹಬ್ಬದ ಆಚರಣೆಯಲ್ಲಿ ವ್ಯತ್ಯಾಸಗಳಿವೆ. ಆದರೆ, ಪರಸ್ಪರ ಬಣ್ಣವನ್ನು ಎರಚಿಕೊಂಡು ಸಂತೋಷಪಡುವುದು ಎಲ್ಲೆಡೆ ಸಾಮಾನ್ಯವಾಗಿದೆ. 

by

ಹರಿಕೃಷ್ಣ ಹೊಳ್ಳ , ಬ್ರಹ್ಮಾವರ.

***


“ಹೋಳಿ ಹುಣ್ಣಿಮೆ, ಕಾಮದಹನ”


ಅ. ಹೋಳಿಯನ್ನು ಎಂದು ಆಚರಿಸುತ್ತಾರೆ?


– ಫಾಲ್ಗುಣ ಹುಣ್ಣಿಮೆ ದಿನ


ಆ. ಈ ದಿನ ಯಾರನ್ನು ರುದ್ರದೇವರು ತಮ್ಮ ಮೂರನೇ ಕಣ್ಣಿಂದ ಸುಟ್ಟರು?


– ರುದ್ರದೇವರು ಮನ್ಮಥನನ್ನು ಸುಟ್ಟು ದಿನ


ಇ. ಹೋಲಿಕಾ ಯಾರ ಮಗಳು ?


– ಕಶ್ಯಪರ ಮಗಳು.


ಹೋಳಿ ಹುಣ್ಣಿಮೆ ಹಬ್ಬವು ವರ್ಷದ ಕಡೇ ಹಬ್ಬ.


ಮನ್ಮಥನ ಬಾಣ ಹೂವಿನಿಂದ ಮಾಡಿದ್ದರೆ ಅವನ ಬಿಲ್ಲು ಕಬ್ಬಿನ ಜಲ್ಲೆಯಿಂದ ತಯಾರಿಸಿದ್ದು.


Kaamadahana (ಕಾಮದಹನ) –   ನಮ್ಮ ಸಾಧನೆಯ ಪಥದಲ್ಲಿ ಹಲವಾರು ಅಡಚಣೆಗಳು ಎದುರಾಗುತ್ತವೆ.  ಅವುಗಳನ್ನು ನಿವಾರಿಸಲು ನಾವು ಕಾಮನ (ಮನ್ಮಥನ) ದಹಿಸಿದ ಮನೋ ನಿಯಾಮಕರ ಮೊರೆ ಹೋಗಬೇಕು.  ನಮ್ಮಲ್ಲಿ ಬರುವ ಕಾಮನೆಗಳು ದೈವ ಕಾರ್ಯಕ್ಕೆ ಸಾಧನೆಯಾಗಲಿ ಎಂದು ಕೋರಬೇಕು.  ಈ ದಿನ ಹೋಳಿಗೆ, ನೈವೇದ್ಯ ಮಾಡುವ ಸಂಪ್ರದಾಯ ಇದೆ.


For our saadhane, there are many obstacles.  We must pray Manoniyamaka Rudradevaru to destroy all our dushkaamane (bad desires), and pray that Mano niyamaka shall guide us in the right path.    It is in practice that on this day, Holige, Ambode and other dishes are prepared and done the naivedya


ಕಾಮನ ರುದ್ರ ದೇವರು ದಹಿಸಿದ್ದರಿಂದ “ಕಾಮದಹನ” ನನ್ನು ಈ ದಿನ ಮಾಡುತ್ತಾರೆ.


ಹೋಳಿ ಹಬ್ಬದ ಹಿನ್ನೆಲೆ ;  ಹಿಂದೆ  ತಾರಕಾಸುರ ಎಂಬ ದೈತ್ಯ ಬ್ರಹ್ಮದೇವರನ್ನು ಕುರಿತು ತಪಗೈದು, ಬ್ರಹ್ಮನ ಒಲಿಸಿ ನನಗೆ ಸಾವೇ ಬಾರದಿರಲಿ ಎಂದು ಕೋರಿದಾಗ, ಆ ವರವನ್ನು ನೀಡಲಾರೆನೆಂದಾಗ ಬೇರೊಂದು ವರವನ್ನು ಕೋರುತ್ತಾನೆ.    ಅದೇನೆಂದರೆ “ಶಿವನಿಂದ ಜನಿಸಿದ ಏಳು ದಿನದ ಮಗನಿಂದ ಮೃತ್ಯು ಬರಲಿ” ಎಂದು ಕೋರುತ್ತಾನೆ.   ಬ್ರಹ್ಮ ದೇವರು “ತಥಾಸ್ತು” ಎನ್ನುತ್ತಾರೆ.    “ಶಿವನ ಮಡದಿ ಸತೀದೇವಿ ದಕ್ಷ ಯಜ್ಞದಲ್ಲಿ ಅಗ್ನಿಪ್ರವೇಶ ಮಾಡಿದ್ದರಿಂದ, ಶಿವನಿಗೆ ಮಡದಿಯಿಲ್ಲ,  ಅವನು ಮತ್ತಾರನ್ನೂ ಮದುವೆ ಆಗುವುದಿಲ್ಲ, ಶಿವನು ತಪಸ್ಸು ಮಾಡುತ್ತಿದ್ದಾನೆ.   ಅವನಿಗೆ ಮಕ್ಕಳಾಗುವುದಿಲ್ಲ, ಆದರೂ ಏಳು ದಿನದ ಮಗುವಿನಿಂದ ತಾರಕಾಸುರನ ಕೊಲ್ಲಲಾಗುವುದಿಲ್ಲ” ಅಂತ ಅವನ ಲೆಕ್ಕಾಚಾರ.    ಆದರೆ ವಿಧಿಯನ್ನೇ ಬರೆವ ಬ್ರಹ್ಮನ ಮೇಲೇ ನಾನು ಗೆದ್ದೆನೆಂಬ ಹುಂಬತನ ತಾರಕಾಸುರನಿಗೆ.


ರುದ್ರ ದೇವರು ಘೋರ ತಪಸ್ಸನ್ನಾಚರಿಸುತ್ತಿರುತ್ತಾರೆ.    ತಾರಕಾಸುರನು ವರದಿಂದ ಉನ್ಮತ್ತನಾಗಿ ಸಕಲ ಸಜ್ಜನರಿಗೆ ಭಾರೀ  ಉಪಟಳ ಕೊಡುತ್ತಿರುತ್ತಾನೆ.  ದೇವತೆಗಳು ಯೋಚನೆ ಮಾಡಿ  ರುದ್ರ ದೇವರ ತಪಸ್ಸಿಗೆ ಭಂಗ ತಂದು, ಅವನಿಗೆ ಪಾರ್ವತೀದೇವಿಯರ ಕೊಟ್ಟು ವಿವಾಹ ಮಾಡಿಸಬೇಕೆಂದು ಉಪಾಯ ಮಾಡಿ ರತಿ-ಮನ್ಮಥನನ್ನು ಒಪ್ಪಿಸುತ್ತಾರೆ. ತಪೋನಿರತರಾದ ರುದ್ರ ದೇವರ ಮುಂದೆ ಹೂವಿನ ಬಾಣವನ್ನು ಬಿಟ್ಟು ಮನ್ಮಥನು ಶಿವನ ಧ್ಯಾನಕ್ಕೆ ಭಂಗತರುತ್ತಾನೆ.  ಇದರಿಂದ ಕೋಪಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಮನ್ಮಥನನ್ನು ದಹಿಸುತ್ತಾನೆ.    ನಂತರ ರತಿಯು ತನ್ನ ಪತಿಯನ್ನು ಬದುಕಿಸಿ ಕೊಡಬೇಕೆಂದು ಕೋರಿದಾಗ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಲಿ ಬೇರಾರಿಗೂ ಅವನು ಕಾಣದಿರಲಿ ಎನ್ನುತ್ತಾನೆ.   ಇದರಿಂದ ಮನ್ಮಥನಿಗೆ “ಅನಂಗ” ಎಂದು ಹೆಸರು ಬಂದಿದೆ.


“*ಕಾಮನೇ ಷಣ್ಮುಖ *”. -.    


ನಂತರ ಎಲ್ಲಾ ದೇವತೆಗಳ ಪ್ರಾರ್ಥನೆಯಂತೆ ತನ್ನನ್ನೇ ಮದುವೆಯಾಗಬೇಕೆಂದು ಪರ್ವತರಾಜನಲ್ಲಿ ಜನಿಸಿದ್ದ ಪಾರ್ವತೀದೇವಿಯನ್ನು ರುದ್ರ ದೇವರು ವಿವಾಹವಾಗಿ ನೂರಾರು ವರ್ಷ ಆದರೂ ಕೂಡ ಅವರು ಮಕ್ಕಳನ್ನು ಪಡೆಯದಿದ್ದಾಗ, ಅಗ್ನಿ ದೇವರು  ಕೈಲಾಸಕ್ಕೆ ಹೋಗಿ ಭಿಕ್ಷೆ ನೀಡಿರೆಂದು ಶಿವನ ಕೇಳಿದಾಗ ಅವರ ತೇಜಸ್ಸು ಪಾತವಾಗಿರಲು, ಅದನ್ನು ಪಾರ್ವತೀದೇವಿಯೂ ತನ್ನ ಕೈಯಲ್ಲಿ ಧರಿಸಿ ಅಗ್ನಿಗೆ ಭಿಕ್ಷಾರೂಪದಲ್ಲಿ ಹಾಕಿದರು,.  ಅಗ್ನಿಗೂ ಆ ತೇಜಸ್ಸು ನಿರ್ಮಿಸಲಾಗಿದೆ ಅದನ್ನು ಗಂಗೆಯಲ್ಲಿ ಹಾಕಿದನು.  ಗಂಗೆಯೂ ಅದನ್ನು ತಡೆಯಲಾರದೆ ಪ್ರವಾಹದ ಮೂಲಕ ಹೊರಚೆಲ್ಲುಲು ಭೂಮಿಯಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣವು ಉತ್ಪನ್ನ ವಾಯಿತು.    ಸ್ವಲ್ಪ ತೇಜಸ್ಸು ಅಲ್ಲೊಂದು ವನದಲ್ಲಿದ್ದ ದರ್ಬೆಯಲ್ಲಿ ಬೀಳಲು ಅಲ್ಲಿ ಜನಿಸಿದವನೇ ಕುಮಾರ ಅಥವಾ ಸ್ಕಂಧ.  ಅವನ ಅಪ್ರತಿಮ ಸೌಂದರ್ಯ ನೋಡಿ ಆರು ಮಂದಿ ಕೃತ್ತಿಕೇಯರು ಅವನಿಗೆ ಸ್ತನ್ಯಪಾನ ಮಾಡಿಸಿದರು.  ಅದರಿಂದ ಅವನು ಕಾರ್ತಿಕೇಯನೆನಿಸಿದನು.     ಆರು ಮಂದಿ ಕೃತ್ತಿಕೇಯರು ಸ್ತನ್ಯಪಾನ ಮಾಡಿಸಲು ಆರು ಮುಖ ಹೊಂದಿ ಷಣ್ಮುಖನಾದವು.


ಅವನೇ ತಾರಕಾಸುರನನ್ನು ತಾನು ಹುಟ್ಟಿದ ಏಳನೇ ದಿನದಂದು ಭಾರೀ ಯುದ್ಧಾನಂತರ ಶಕ್ತ್ಯಾಯುಧದಿಂದ ಸಂಹರಿಸಿದನು.


ಶ್ರೀ ಪ್ರಸನ್ನವೆಂಕಟದಾಸರು ಹೋಳಿಯ ಬಗ್ಗೆ :-

Sri Prasanna Venkatadasaru on Holi :

ಫಾಲ್ಘುಣ ಹುಣ್ಣಿಮೆ ಬಂದಿತಿಳೆಗೆ

ಬಾಲಕರೆಲ್ಲ ನೆರೆವುದೊಂದು ಘಳಿಗೆ

ಹೋಳಿಯನಾಡುವ ಸಂಭ್ರಮದೊಳಗೆ

ಕಾಳಗ ಬೇಡಿರೋ ನಿಮ್ಮ ನಮ್ಮೊಳಗೆ

***

No comments:

Post a Comment