ವಿಷುವಗಳು ಈಕ್ವಿನಾಕ್ಸ್
ಸೂರ್ಯನು ಪೂರ್ವದಲ್ಲಿ ಉದಯಿಸಿ ಪಶ್ಚಿಮದಲ್ಲಿ ಅಸ್ತಮಿಸುತ್ತಾನೆ ಎಂದು ಹೇಳುತ್ತಾರೆ. ಆದರೆ , ಬೆಳಿಗ್ಗೆ ನಿಖರವಾಗಿ ಪೂರ್ವದಲ್ಲೇ ಸೂರ್ಯೋದಯವಾಗಿ ಸಂಜೆ ನಿಖರವಾಗಿ ಪಶ್ಚಿಮದಲ್ಲೇ ಸೂರ್ಯಾಸ್ತವಾಗುವುದು ವರ್ಷದಲ್ಲಿ ಎರಡೇ ದಿನಗಳಂದು ಮಾತ್ರ. ಆ ದಿನಗಳನ್ನು ವಿಷುವ (ಈಕ್ವಿನಾಕ್ಸ್) ದಿನ ಎಂದು ಕರೆಯುತ್ತಾರೆ. ಅಂದು ಹಗಲು ಮತ್ತು ರಾತ್ರಿಗಳು ಸಮ ಪಾಲಾಗಿ ಎರಡೂ ಕೂಡಾ ಸರಿಯಾಗಿ ಹನ್ನೆರಡು ಗಂಟೆಗಳು ಇರುತ್ತವೆ.
ಮಕರ ಸಂಕ್ರಾಂತಿಯ ನಂತರ ಆರಂಭವಾಗುವ ಉತ್ತರಾಯನದಲ್ಲಿ ರಾತ್ರಿಯ ಸಮಯ ಕಡಿಮೆಯಾಗುತ್ತಾ ಬರುತ್ತದೆ ಮತ್ತು ಹಗಲಿನ ಸಮಯ ಹೆಚ್ಚುತ್ತಾ ಬರುತ್ತದೆ. ಉತ್ತರಾಯನದ ನಡುವಿನ ಒಂದು ದಿನವು (ಅಂದಾಜು ಮಾರ್ಚ್ 20 ರಂದು) ವಸಂತ ವಿಷುವ (Spring Equinox) ದಿನವಾಗಿರುತ್ತದೆ. ಅದು ಸೂರ್ಯನು ಸಮಭಾಜಕ ವೃತ್ತವನ್ನು ದಾಟಿ ಮತ್ತೂ ಉತ್ತರಕ್ಕೆ ಚಲಿಸುವ ದಿನ. ಅಂದಿನಿಂದ ಸೆಖೆಗಾಲ ಆರಂಭವಾಗುತ್ತದೆ. ಅಲ್ಲಿಂದ ಮುಂದೆ ಕರ್ಕಾಟಕ ಸಂಕ್ರಾಂತಿಯವರೆಗೆ ರಾತ್ರಿಯ ಸಮಯ ಮತ್ತೂ ಕಡಿಮೆಯಾಗುತ್ತಾ ಹಾಗೂ ಹಗಲಿನ ಸಮಯ ಮತ್ತೂ ಹೆಚ್ಚುತ್ತಾ ಹೋಗುತ್ತದೆ.
ಕರ್ಕಾಟಕ ಸಂಕ್ರಾಂತಿಯ ನಂತರ ಆರಂಭವಾಗುವ ದಕ್ಷಿಣಾಯನದಲ್ಲಿ ರಾತ್ರಿಯ ಸಮಯ ಹೆಚ್ಚುತ್ತಾ ಬರುತ್ತದೆ ಮತ್ತು ಹಗಲಿನ ಸಮಯ ಕಡಿಮೆಯಾಗುತ್ತಾ ಬರುತ್ತದೆ. ದಕ್ಷಿಣಾಯನದ ನಡುವಿನ ಒಂದು ದಿನವು (ಅಂದಾಜು ಸೆಪ್ಟೆಂಬರ್ 22 ರಂದು) ಶರದ್ ವಿಷುವ (Autumnal Equinox) ದಿನವಾಗಿರುತ್ತದೆ. ಅದು ಸೂರ್ಯನು ಸಮಭಾಜಕ ವೃತ್ತವನ್ನು ದಾಟಿ ಮತ್ತೂ ದಕ್ಷಿಣಕ್ಕೆ ಚಲಿಸುವ ದಿನ. ಅಂದಿನಿಂದ ಚಳಿಗಾಲ ಆರಂಭವಾಗುತ್ತದೆ. ಅಲ್ಲಿಂದ ಮುಂದೆ ಮಕರ ಸಂಕ್ರಾಂತಿಯವರೆಗೆ ರಾತ್ರಿಯ ಸಮಯ ಮತ್ತೂ ಹೆಚ್ಚುತ್ತಾ ಹಾಗೂ ಹಗಲಿನ ಸಮಯ ಮತ್ತೂ ಕಡಿಮೆಯಾಗುತ್ತಾ ಹೋಗುತ್ತದೆ.
by ಹರಿಕೃಷ್ಣ ಹೊಳ್ಳ , ಬ್ರಹ್ಮಾವರ.
***
No comments:
Post a Comment