SEARCH HERE

Friday, 1 October 2021

ಥಿಂಕ್ ಪಾಸಿಟಿವ್

 ಥಿಂಕ್ ಪಾಸಿಟಿವ್


ಆತ ರಿಟೈರ್ ಆದ ಕೆಲವು ದಿನಗಳು ಯಾಕೋ ಹೆಚ್ಚು ಮಾತೇ ಇಲ್ಲದೆ ಕೂತಿರುತ್ತಿದ್ದರು. ಒಂದು ರಾತ್ರಿ ಬಹಳ ಹೊತ್ತಾದರೂ ಮಲಗಲು ಬಾರದಿದ್ದಾಗ ಅವರ ಪತ್ನಿ ಎದ್ದು ಮೆಲ್ಲಗೆ ಬಂದು ಪತಿ ಏನು ಮಾಡುತ್ತಿರಬಹುದು ಎಂದು ಇಣುಕಿದರು. ಲೈಟ್ ಉರಿಯುತ್ತಿದೆ, ಫ್ಯಾ಼ನ್ ಮೆಲ್ಲಗೆ ತಿರುಗುತ್ತಿದೆ, ಪತಿದೇವ ಟೇಬಲ್ ಮೇಲೆ ತಲೆಇಟ್ಟುಕೊಂಡು ನಿದ್ದೆ ಹೋಗಿಬಿಟ್ಟಿದ್ದಾರೆ. ತಲೆಯ ಹತ್ತಿರ ಒಂದು ಡೈರಿ ತೆರೆದುಕೊಂಡಿದೆ, ಕೈನಲ್ಲಿ ಪೆನ್ ಹಾಗೇ ಇದೆ. ಡೈರಿ ಬರೆಯುತ್ತಲೇ ನಿದ್ದೆಗೆ ಜಾರಿರುವುದು ಸ್ಪಷ್ಟವಾಗಿತ್ತು. ಸಹಜವಾದ ಕುತೂಹಲದಿಂದ ಮೆಲ್ಲನೆ ಡೈರಿ ಸರಿಸಿ ತನ್ನ ರೂಮಿಗೆ ತೆಗೆದುಕೊಂಡು ಹೋಗಿ ಓದಿದಳು.

ಡೈರಿಯಲ್ಲಿ ಬರೆದಿದ್ದು:

"ಕಳೆದ ಒಂದು ವರ್ಷದಲ್ಲಿ ಏನೇನೆಲ್ಲಾ ನಡೆದು ಹೋದವು ನನ್ನ ಬದುಕಿನಲ್ಲಿ!!

ಹೋದ ವರ್ಷ ನನಗೆ ಗಾಲ್ ಬ್ಲಾಡರ್ ಸ್ಟೋನ್ ಗೆ ಆಪರೇಷನ್ ಆಯಿತಲ್ಲ. ಎಷ್ಟು ಕಷ್ಟವಾಯಿತು ಅನುಭವಿಸಿದ್ದು. ಪೂರ್ತಿ ಮೂರು ತಿಂಗಳಕಾಲ ಬೆಡ್ ರೆಸ್ಟ್ ಆಯಿತು. ದೇವರೇ, ಆ ಕಷ್ಟ ಶತ್ರುವಿಗೂ ಬೇಡ. ಮೈಗೂ ಮನಸ್ಸಿಗೂ ಎಷ್ಟು ಘಾಸಿ ಆಯಿತು.

  ಅದಾಗಿ ಕೆಲವೇ ತಿಂಗಳಲ್ಲಿ ನನಗೆ 60 ತುಂಬಿತ್ತು. ನನಗೆ ಅಷ್ಟು ಪ್ರಿಯವಾದ ಕೆಲಸದಿಂದ ಹೊರಗೆ ಬರಲೇ ಬೇಕಾಯಿತಲ್ಲ. ಆ ಆಫೀ಼ಸು;  ನಾನು ಮೂವತ್ತು ವರ್ಷ ಅದರ ಅಭಿವೃದ್ಧಿಗೆ ಹಗಲೂ ರಾತ್ರಿ ದುಡಿದ ಆ ಆಫೀ಼ಸು, ಆ ಆನಂದದ ವಾತಾವರಣ, ಆ ಸಹೋದ್ಯೋಗಿಗಳು, ಎಲ್ಲಾ ಇನ್ನೆಲ್ಲಿ. ಏನೋ ಕಳೆದುಕೊಂಡ ಭಾವನೆ.

   ಜೊತೆಗೆ ಅಪ್ಪ ತೀರಿಕೊಂಡಿದ್ದೂ ಸೇರಿ ಮನಸ್ಸಿಗೆ ಬಹಳ ಕಷ್ಟವೇ ಆಗಿ ಬದುಕೇ ಭಾರ ಅನ್ನಿಸಿತು.

     ಅದಾದ ಕೆಲವೇ ತಿಂಗಳು-ಬೆಳೆದು ನಿಂತ ಮಗ ಕಾರ್ ಅಪಘಾತದಲ್ಲಿ ಸಿಕ್ಕಿ ಹಾಸಿಗೆ ಹಿಡಿದ. ಅವನ ಮೆಡಿಕಲ್ ಕೋರ್ಸ್ ಆ ವರ್ಷ ಮಣ್ಣು ತಿಂದಿತು. ಹುಂ. ಅಷ್ಟು ವರ್ಷ ಜೋಪಾನವಾಗಿ ಇಟ್ಟುಕೊಂಡಿದ್ದ ಕಾರು, ಅವನು ಹುಟ್ಟಿದಾಗ ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದ ಕಾರು, ಗುಜರೀಗೆ ಹಾಕೋಹಾಗೆ ಆಯಿತು. ಅದನ್ನ ನೆನೆಸಿಕೊಂಡರೇ ಸಾಕು ದುಃಖ ಉಮ್ಮಳಿಸಿ ಬರುತ್ತದೆ.

   ದೇವಾ, ಇಷ್ಟೆಲ್ಲಾ ಕಷ್ಟ ಅನುಭವಿಸಿದ ಮೇಲೆ ಇನ್ನೂ ಯಾಕೆ ಇಟ್ಟಿದ್ದೀಯಪ್ಪಾ ನನ್ನ. ನನ್ನ ಮನಸ್ಸು ಎಷ್ಟೂಂತ ತಡಕೊಂಡೀತು"

     ಸ್ವಲ್ಪ ಹೊತ್ತಾದ ನಂತರ ಪತ್ನಿ ಆ ಡೈರಿ ತಂದು ಮೊದಲು ಹೇಗಿತ್ತೋ ಹಾಗೆ ಇಟ್ಟು ಹೊರಟು ಹೋದಳು.

    ಎಷ್ಟೋ ಹೊತ್ತಾದ ಮೇಲೆ ಪತಿಗೆ ಎಚ್ಚರವಾಗಿ ಡೈರಿ ಮುಂದುವರೆಸಲು ನೋಡಿದ. ಅರೆ, ಇದೇನು, ಈ ಬರಹ ನಾನು ಬರೆದಿದ್ದಲ್ಲವಲ್ಲ!! 

    ಓದಲು ಪ್ರಾರಂಭಿಸಿದ. ಹೊಸ ಪುಟದಲ್ಲಿ ಹೀಗೆ ಬರೆದಿತ್ತು:

    " ಹೋದ ವರ್ಷ ನನಗೆ ಗಾಲ್ ಬ್ಲಾಡರ್ ಸರ್ಜರಿ ಆಗಿ ನನಗೆ ಎಷ್ಟೋ ಕಾಲದಿಂದ ಇದ್ದ  ಕಷ್ಟ ದೂರವಾಯಿತಪ್ಪ ಸಧ್ಯ. ಮುಂಚೇನೇ ಮಾಡಿಸಬೇಕಾಗಿತ್ತು. ಏನೋ ಅಂತೂ ಆ ಹೊಟ್ಟೆ ನೋವು ಆ ಕಷ್ಟ ಅನುಭವಿಸಿದ್ದೂ ಎಲ್ಲಾ ಪರ್ಮನೆಂಟ್ ಆಗಿ ಮಾಯವಾಯಿತಲ್ಲ, ನಿನಗೆ ದೊಡ್ಡ ನಮಸ್ಕಾರ ದೇವರೇ.

      ಮೊನ್ನೆಯಷ್ಟೇ ನನಗೆ ಅರವತ್ತು ತುಂಬಿ ಸಂಪೂರ್ಣ ಆರೋಗ್ಯ ಅನುಭವಿಸುತ್ತಾ ರಿಟೈರ್ ಆದೆನಲ್ಲಾ, ಅದೇ ದೊಡ್ಡ ವಿಷಯ. ಬೇಕಾದರೆ ಮತ್ತೆ ಪಾರ್ಟ್ ಟೈಮ್ ಜಾಬ್ ಮಾಡೋ ಅಷ್ಟು ಚೈತನ್ಯ ಇಟ್ಟುಕೊಂಡಿದ್ದೇನೆ. ಬೇಡದಿದ್ದರೆ ಮನೆ, ಮಕ್ಕಳು ಮೊಮ್ಮಕ್ಕಳು ಅಂತ ಸಂಸಾರದಲ್ಲಿ ಆನಂದವನ್ನು ಸಹ ಪಡೆಯಬಹುದು. ಇನ್ನೂ ಅರವತ್ತೇ ವರ್ಷ ವಯಸ್ಸು ತಾನೇ.  ಆಯಸ್ಸು ಬಹಳ ಉಳಿದಿದೆ.

   ಅಪ್ಪ ತೀರಿಕೊಂಡರು ನಿಜ. ಆದರೆ ಎಂಥಾ ಪುಣ್ಯ ಜೀವಿಗಳು ಅವರು. 95 ರ ವಯಸ್ಸಿನಲ್ಲೂ ಅವರು ಹಾಸಿಗೆ ಹಿಡಿಯದೇ, ಯಾರಿಂದಲೂ ಸೇವೆ ಮಾಡಿಸಿಕೊಳ್ಳದೇ, ಶಾಂತಚಿತ್ತದಿಂದ ಕಣ್ಣು ಮುಚ್ಚಿದರು. ದೇವರಿಗೆ ದೊಡ್ಡ ನಮಸ್ಕಾರ.

     ಕಳೆದ ವರ್ಷಾಂತ್ಯ, ಅಂಥಾ ದೊಡ್ಡ ಅಪಘಾತ ಆದರೂ ನನ್ನ ಏಕೈಕ ಪುತ್ರ ಬದುಕುಳಿದಿದ್ದಕ್ಕೆ ಆ ಪರಮಾತ್ಮನನ್ನು ಎಷ್ಟು ವಂದಿಸಿದರೂ ಸಾಲದು. ಕಾರು, ನನ್ನ ಪ್ರೀತಿಯ ಕಾರು ನಿಜ, ನಜ್ಜುಗುಜ್ಜಾಯ್ತು. ಆದರೆ ಆಯಿತು. ಅದರ ಇನ್ಶೂರೆನ್ಸ್ ಕ್ಲೈಮ್ ಹಣ ಕೈಗೆ ಬಂದಾಗ ಮೇಲಷ್ಟು ಹಾಕಿ ಒಂದು ಹೊಸ ಕಾರು ತಗೊಂಡರಾಯ್ತು. ಹೇಗೂ ಅದು ಹಳೆಯದಾಗಿ ಪೆಟ್ರೋಲ್ ಕುಡೀತಿತ್ತು, ರಿಪೇರಿ ಖರ್ಚೂ ಜಾಸ್ತಿ ಆಗ್ತಿತ್ತು. ಸಧ್ಯ, ಮಗನ ಪ್ರಾಣ ಉಳೀತಲ್ಲ, ಅದೇ ಸಂತೋಷದ ವಿಷಯ.

    ಕಳೆದ ವರ್ಷದಲ್ಲಿ ಇಷ್ಟೆಲ್ಲಾ ನಡೆದುಹೋಯಿತು. ಹೌದು. ಆದರೆ ನನಗೆ ಬಿಪಿ ಆಗಲೀ ಶುಗರ್ ಆಗಲೀ ಹೆಚ್ಚಾಗಲಿಲ್ಲವಲ್ಲ ಅದಕ್ಕೆ ನಾನು ನಿನಗೆ ಕೃತಜ್ಞ ನಾಗಿದ್ದೇನೆ ದೇವಾ. ನಿನಗೆ ಕೋಟಿ ಕೋಟಿ ನಮಸ್ಕಾರಗಳು".

     ಇದು ಯಾರು ಬರೆದಿದ್ದು ಎಂದು ತಿಳಿದು ಪತ್ನಿಯ ಮೇಲೆ ಅಭಿಮಾನ ಉಕ್ಕಿ ಬಂತು. ಅವಳಿರುವುದರಿಂದಲೇ ತಾನು ಎಲ್ಲ ಕಷ್ಟ ಗಳನ್ನು ಇದುವರೆಗೂ ಎದುರಿಸಿದ್ದು. ತಾನೇಕೆ ಎಲ್ಲವನ್ನೂ ನಿರಾಶೆ, ಬೇಸರಗಳಿಂದ ನೋಡಬೇಕು, ಧೃತಿಗೆಡಬೇಕು ?  ಆಗುವುದು ಆಗೇ ತೀರುತ್ತದೆ. ಅದಕ್ಕಾಗಿ ತಾನು ಕುಗ್ಗಿ, ಮನಸ್ಸು ಹಿಡಿ ಮಾಡಿಕೊಂಡು ತಲೆಯಮೇಲೆ ಕೈಹೊತ್ತು ಕೂಡಬೇಕೇ. ಛೆ ಛೆ, ಸಲ್ಲದು.

     ಪೆನ್ ಎತ್ತಿಕೊಂಡು ತಾನು ಬರೆದಿದ್ದ ಪುಟಗಳಮೇಲೆ ಕಾಟು ಹೊಡೆದ.

      ಬಾಗಿಲ ಹಿಂದಿನಿಂದ ನೋಡುತ್ತಿದ್ದ ಪತ್ನಿ "ಬನ್ನಿ, ಮಲಗುವಿರಂತೆ, ಅರ್ಧರಾತ್ರಿಯಾಯಿತು" ಎಂದಳು.

ಡೈರಿ ಮುಚ್ಚಿಟ್ಟು ಎದ್ದು ನಡೆದ ಪತಿದೇವ.


       ಲೋಟದಲ್ಲಿ ಅರ್ಧ ನೀರಿದ್ದರೆ ಅರ್ಧ ಖಾಲಿ ಅಂತಲೂ ಅನ್ನಬಹುದು, ಅರ್ಧ ತುಂಬಿದೆ ಅಂತಲೂ ಅನ್ನಬಹುದು. ಅದು ಅವರವರ ದೃಷ್ಟಿಕೋಣವನ್ನು ಅವಲಂಬಿಸಿದೆ. ಅಲ್ಲವೇ?

ನಮ್ಮ ಬದುಕು ಹಗುರವಾಗಿರಬೇಕು ಅಂದರೆ ಥಿಂಕ್ ಪಾಸಿಟಿವ್

***


No comments:

Post a Comment