SEARCH HERE

Friday 1 October 2021

ಉಡುಪಿ ಹೊಟೆಲ್

ಉಡುಪಿ ಎಂದೊಂಡನೆಯೇ ಆಸ್ಥಿಕರಿಗೆ ಉಡುಪಿಯ ಶ್ರೀ ಕೃಷ್ಣ, ಅಷ್ಟ ಮಠಗಳು, ಸಂಸ್ಕೃತ-ವೇದ ಪಾಠ ಶಾಲೆಗಳು,  ರಥದ ಬೀದಿ, ಇತ್ತೀಚೆಗೆ ಅಗಲಿದ ಪೇಜಾವರ ಶ್ರೀಗಳು ನೆನಪಿಗೆ ಬಂದರೆ, ವಾಣಿಜ್ಯೋದ್ಯಮಿಗಳಿಗೆ  ಅವಿಭಜಿತ ದಕ್ಷಿಣ ಕರ್ನಾಟಕದ ಭಾಗವಾಗಿ ಉಡುಪಿಯಿಂದಲೇ ಆರಂಭವಾಗಿ ಇಂದು ಹಲವಾರು ರಾಷ್ಟ್ರೀಕೃತ ಬ್ಯಾಂಕಿನೊಂದಿಗೆ ವಿಲೀನವಾಗಿ ಹೋದ, ಕೆನರ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕುಗಳು ನೆನಪಾಗುತ್ತದೆ.  ಇನ್ನು  ತಿಂಡಿ ಪೋತರಿಗೆ ಉಡುಪಿ ಎಂದೊಡನೆ ನೆನಪಿಗೆ ಬರುವುದೇ, ಉಡುಪಿ ಶ್ರೀಕೃಷ್ಣ ಮಠದ ಭೋಜನಶಾಲೆ ಮತ್ತು  ರಾಜ್ಯಾದ್ಯಂತ, ದೇಶಾದ್ಯಂತ ಏನು ಪ್ರಪಂಚಾದ್ಯಂತ ಹರಡಿಕೊಂಡಿರುವ ಶುಚಿ ರುಚಿಯಾದ, ಶುಧ್ಧ ಸಸ್ಯಾಹಾರಿ  ಅಪ್ಪಟ ದಕ್ಷಿಣ ಭಾರತದ ಅಡುಗೆಯ  ಉಡುಪಿ ಹೋಟೆಲ್ಗಳು ಎಂದರೆ ಅತಿಶಯೋಕ್ತಿಯೇನಲ್ಲ.

ಇದಕ್ಕೆ ಪೂರಕವಾಗುವಂತಹ  ಬಹಳ ಹಳೆಯದಾದ ಜೋಕ್ ಒಂದಿದೆ. ಪ್ರಪಂಚಾದ್ಯಂತ  ಎಲ್ಲಿಂದ ಎಲ್ಲಿಗೆ ಹೋದರೂ, ಅಲ್ಲೊಂದು ಮಲೆಯಾಳೀ ಟೀ ಅಂಗಡಿ ಸಿಗುತ್ತದಂತೆ.  ಚಂದ್ರನ ಮೇಲೆ  ಪ್ರಪ್ರಥಮವಾಗಿ ಕಾಲಿಟ್ಟವರು ನಾವೇ ಎಂದು ಬೀಗುತ್ತಿದ್ದ  ನೀಲ್ ಆರ್ಮ್ ಸ್ಟ್ರಾಂಗ್ ಮತ್ತು ಬುಝ್ ಆಲ್ಡ್ರಿನ್  ಅವರಿಗೆ ಚಾಯ್ ಚಾಯ್ ಎಂದು ಒಬ್ಬ ಮಲೆಯಾಳಿ ಎದುರಾದರೆ ಅವನ ಹಿಂದೆ ಬಿಸಿ ಬಿಸಿ ಇಡ್ಲಿ ವಡೆ, ಉಪ್ಪಿಟ್ಟು ಇದೆ ಏನ್ ಕೊಡ್ಲಿ ಮಾರಾಯಾ ಅಂತಾ ಕೇಳಿದ್ರಂತೇ ಉಡುಪಿಯ ಭಟ್ಟರು.  ಸಿರಿಗನ್ನಡಂ ಗೆಲ್ಗೆ ಎನ್ನುವುದನ್ನು ಸಿರಿಗನ್ನಡಂ ಗಲ್ಲಿ ಗಲ್ಲಿಗೆ  ಎಂದು ಬದಲಾವಣೆ ಮಾಡಿಕೊಂಡಂತೆ ಈಗ  ಗಲ್ಲಿ ಗಲ್ಲಿಗೊಂದು ಉಡುಪಿ ಹೋಟೆಲ್ಗಳಿದ್ದು ಎಲ್ಲಡೆಯಲ್ಲೂ  ಕನ್ನಡದ ಆಹಾರ ಪದ್ದತಿಯ ಜೊತೆ ಕನ್ನಡತನವನ್ನು ಪಸರಿಸಿದ ಕೀರ್ತಿ ಉಡುಪಿ ಹೋಟೆಲ್ ಅವರದ್ದು ಎಂದರೂ ತಪ್ಪಾಗಲಾರದು.

ಈಗಂತೂ ಒಂದು ಊರಿನಲ್ಲಿ ಒಂದು ಹೊಸಾ ಬಡಾವಣೆ  ತಲೆ  ಎದ್ದಿತೆಂದರೆ  ಖಂಡಿತವಾಗಿಯೂ ಅಲ್ಲೊಂದು  ಉಡುಪಿ ಹೋಟೆಲ್ ಇದ್ದೇ ಇರುತ್ತದೆ.  ಆಡು ಮುಟ್ಟದ ಸೊಪ್ಪಿಲ್ಲ, ಅನ್ನೋ ಹಾಗೆ ಉಡುಪಿ ಹೋಟೆಲ್ ಗಳಿಲ್ಲದ ಊರೇ ಇಲ್ಲ. ಮೊದ ಮೊದಲು ಹೋಟೆಲ್ ನಡೆಸುವ ಆಸೆ, ಅಥವಾ ಯೋಚನೆ ಉಡುಪಿಯವರಿಗೇ ಏಕೆ ಬಂತು? ಅನ್ನುವ ಬಗ್ಗೆ ಸರಿಯಾದ ಮಾಹಿತಿ ಎಲ್ಲಿಯೂ ಸಿಗುವುದಿಲ್ಲವಾದರೂ, ಶಿವರಾಮ ಕಾರಾಂತರ ಮರಳಿ ಮಣ್ಣಿಗೆ ಪುಸ್ತಕದಲ್ಲಿ ಬರುವ ಎಳೆಯಂತೆ ಕುಂದಾಪುರದ ಕಡೆಯ ಶಿವಳ್ಳಿ ಬ್ರಾಹ್ಮಣರು ತಮ್ಮ ಮಕ್ಕಳು ತಮ್ಮಂತೆಯೇ ಊರಿನಲ್ಲಿಯೇ ಇರುವ ಬದಲು ದೂರದ ಪಟ್ಟಣಗಳಿಗೆ ಹೋಗಿ ಓದಿ ದೊಡ್ಡ ಕಛೇರಿಗಳಲ್ಲಿ ಕೆಲಸ ಮಾಡಲಿ ಎಂದು ಬಯಸಿದ್ದರಿಂದ ಮಕ್ಕಳನ್ನು ಹೊರ ಊರಿಗೆ ಕಳುಹಿಸಿದರು. ಅಲ್ಲಿ ತಮ್ಮ ಮಕ್ಕಳಿಗೆ ಊಟ ಸರಿಯಾಗಿ ಸಿಗದ ಕಾರಣ ಅವರ ಜೊತೆ ಇಡೀ ಸಂಸಾರಗಳೂ ಆ ಪಟ್ಟಣಗಳಲ್ಲಿ  ವಲಸೆ ಹೋಗಿ ಜೀವನಾವಶ್ಯಕಕ್ಕಾಗಿ ಬೇಸಾಯ ಮತ್ತು  ಅಡುಗೆ ಬಿಟ್ಟು  ಬೇರೇನೂ ಬಾರದ ಕಾರಣ ಅಲ್ಲಿಯೇ ಸಣ್ಣದಾಗಿ ಹೋಟೆಲ್ ಆರಂಭಿಸಿದರು.  ಇಂಗು ತೆಂಗು ಕೊಟ್ಟರೆ ಮಂಗವೂ ಅಡುಗೆ ಚೆನ್ನಾಗಿಯೇ ಮಾಡುತ್ತದೆ ಎನ್ನುವ ಗಾದೆಯಂತೆ,  ಯಥೇಚ್ಚಚಾಗಿ ಇಂಗು ತೆಂಗು ಬಳಸಿ ಶುಚಿ ರುಚಿಯಾಗಿ ಮಾಡಿದ ಅಡುಗೆಗಳು ಎಲ್ಲರ ನಾಲಿಗೆ ಬರವನ್ನು ಕಳೆದದ್ದರಿಂದ ಆ ಹೋಟೇಲ್ಗಳು  ಬಹುಬೇಗನೆ ಹೆಸರುವಾಸಿಯಾಗ ತೊಡಗಿದವು. ಇದರ ಹೊರತಾಗಿ ಬೇರೇ ಯಾವುದಾದರೂ ಕಾರಣಕ್ಕಾಗಿ ಉಡುಪಿಯ ಹೊಟೇಲ್ಗಳು ಪ್ರಸಿದ್ಧವಾಗಿದೆ ಎಂದರೆ ಬಲ್ಲವರಾಗಲೀ ಅಥವಾ ಉಡುಪಿ  ಕಡೆಯವರೇ ಹೇಳಬೇಕು. ತಿಂಡಿಪೋತ ಅನ್ನೋ ಹೆಸರು ಗಳಿಸಿರೋ ಕೃಷ್ಣ ಇರೋ ಊರಿನವರಾದ್ದರಿಂದ,  ಆಷ್ಟ ಮಠಗಳ ಪಾಕ ಶಾಲೆ ಮತ್ತು ದೇವಾಲಯಗಳಲ್ಲಿ ಇದ್ದವರೇ   ಕರ್ನಾಟಕಾದ್ಯಂತ,  ಭಾರತಾದ್ಯಂತ  ಹಲವಾರು ರಾಜ್ಯಗಳಲ್ಲಿ,ಅದರಲ್ಲೂ, ಮಹಾರಾಷ್ಟ್ರ, ತಮಿಳುನಾಡು,  ದೆಹಲಿಯಯ ಕಡೆಗಳಲ್ಲಿ   ಅಲ್ಲದೇ ವಿದೇಶಗಳಲ್ಲಿಯೂ ವಿಶೇಷವಾಗಿ ಉಡುಪಿ ಹೋಟೆಲ್ಗಳನ್ನು   ಆರಂಭಿಸಿ ಉಡುಪಿಯ ಹೆಸರನ್ನು ವಿಶ್ವವಿಖ್ಯಾತ ಮಾಡಿರುವುದಂತೂ ಸತ್ಯವೇ ಸರಿ.

18ನೇ ಶತಮಾನದ ಅಂತ್ಯ ಮತ್ತು  19ನೇ ಶತಮಾನದ ಆರಂಭದಲ್ಲಿ ತಮಿಳುನಾಡಿಗೆ ಲಗ್ಗೆ ಇಟ್ಟ  ಈ ಉಡುಪಿ ಹೋಟೆಲ್ಗಳು  ತಮಿಳ್ನಾಡಿನಲ್ಲಿನಲ್ಲಂತೂ ಹೇಗೆ ಹಾಸುಹೊಕ್ಕಾಗಿದೆ ಎಂದರೆ  ಉಡುಪಿ ಎಂದರೆ   ಸಸ್ಯಾಹಾರಿ ಎನ್ನುವಂತಹ ಅನ್ವರ್ಥನಾಮ ಬಂದುಬಿಟ್ಟಿದೆ. ವನಸ್ಪತಿ ಎಣ್ಣೆ ಎಂದರೆ ಜನರಿಗೆ ಹೇಗೆ   Dalda ಎನ್ನುವುದು ಮನಸ್ಸಿಗೆ ಮೂಡುತ್ತದೆಯೋ ಅದೇ ರೀತಿ   ವೆಜಿಟೇರಿಯನ್ (ಸಸ್ಯಹಾರಿ)  ಅಂತ ಹೇಳುವ  ಬದಲು ಎಲ್ಲರೂ ಉಡುಪಿ ಅಂತಷ್ಟೇ ಹೇಳುತ್ತಾರೆ. ಸರವಣ ಭವನ್ (ಉಡುಪಿ) ಅನ್ನೋ ಬೋರ್ಡ್ ಇಂದೂ ಸಹಾ ಎಲ್ಲಾ ಕಡೆಯಲ್ಲಿಯೂ ಕಾಣಬಹುದಾಗಿದೆ.  ಹೀಗೆ  ಆ ಹೋಟೆಲ್ ಗಳ ಮಾಲಿಕರು   ಆಂಧ್ರದವರಾಗಿರಬಹುದು, ಅಥವಾ ಉತ್ತರ ಭಾರತೀಯರೇ ಆಗಿರಬಹುದು ಅದು ವೆಜಿಟೇರಿಯನ್  ಹೋಟೆಲ್ ಆಗಿದ್ದಲ್ಲಿ ಅಲ್ಲಿಯ ಜನ ಗುರುತಿಸೋದೇ  ಉಡುಪಿ ಹೋಟೆಲ್ ಅಂತಲೇ.

ಉಡುಪಿಯ ಅಷ್ಟ ಮಠದ  ಭೋಜನ ಶಾಲೆಯಲ್ಲಿ ಪಾಕ ತಜ್ಞರಾಗಿದ್ದವರು ಅಥವಾ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದ ಶಿವಳ್ಳಿ ಬ್ರಾಹ್ಮಣರು ಮತ್ತು ಮಾಧ್ವ ಸಂಪ್ರದಾಯದ ಬ್ರಾಹ್ಮಣರು ಕಾಲ ಕ್ರಮೇಣವಾಗಿ ದೇಶ ವಿದೇಶಗಳಲ್ಲಿ ನಾನಾ ಹೆಸರಿನಲ್ಲಿ  ಉಡುಪಿ ಹೋಟೆಲ್ ಗಳನ್ನು ಆರಂಭಿಸಿ ದೇವಾಲಯದ ಪಾಕಶಾಲೆಯ ಸಾತ್ವಿಕ ರುಚಿ  ಮತ್ತು ಅಭ್ಯಾಸಗಳ ಜೊತೆ ಉಡುಪಿಯ ತಿಂಡಿಗಳನ್ನು ಮತ್ತು ಆಹಾರ ಪದ್ದತಿಯನ್ನು  ಎಲ್ಲರಿಗೂ ಪರಿಚಯಿಸಿ ಹೋಟೆಲ್ ಎಂದರೆ ಉಡುಪಿ ಹೋಟೆಲ್ ಎಂಬ ಅನ್ವರ್ಥನಾಮ ಬರುವಂತೆ ಮಾಡಿದ್ದಲ್ಲದೇ ಲಕ್ಷಾಂತರ ಜನರಿಗೆ  ಉದ್ಯೋಗದಾತರಾಗಿದ್ದಾರೆ. ಇಂದಿಗೂ ಸಹಾ ಜನ ಉಡುಪಿ ಎಂಬ ಹೆಸರಿದ್ದರೆ ಸಾಕು ಸಕ್ಕರೆಗೆ ಇರುವೆಗಳು ಮುತ್ತುವಂತೆ  ಹೋಟೆಲ್ಲಿಗೆ ಪ್ರವೇಶಿಸುವಂತೆ  ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.   ಉಡುಪಿಯಲ್ಲದವರು, ಉಡುಪಿ ಹೋಟೆಲ್ ಎಂಬ ತಮ್ಮ ಬ್ರಾಂಡ್ ಬಳೆಸಿಕೊಂಡರೂ ಯಾವುದೇ ದಾವೆ ಹೂಡದೇ, ಅದಕ್ಕೆ ಕೊಂಚವೂ ಬೇಸರಿಸಿಕೊಳ್ಳದೇ ಸರ್ವೇ ಜನಾಃ ಸುಖಿನೋ ಭವಂತು. ಸಮಸ್ತ ಲೋಕಾನಿ ಸನ್ಮಂಗಳಾನಿ ಭವಂತು ಎಂದು  ಎಲ್ಲರೂ ಉದ್ದಾರವಾಗಲಿ ಎಂಬ ವಿಶಾಲ ಹೃದಯವಂತರಾಗಿದ್ದಾರೆ.

***



 

No comments:

Post a Comment