ಆಪತ್ತು ಪರಿಹಾರ ಸ್ತೋತ್ರ
ಶ್ರೀವಿಜಯದಾಸರ ಕೃತಿ.
ನಿತ್ಯದಲ್ಲಿ ಯಾವುದೇ ಸಂಕಷ್ಟಗಳು ಬಂದಾಗ, ದುಃಖ ಉಂಟಾದಾಗ, ದುಃಸ್ವಪ್ನಗಳು ಆಗುತ್ತಿರುವಾಗ ಪಠಿಸುತ್ತಾ ಇದ್ದರೆ, ಎಲ್ಲ ತಾಪಗಳು ಶೀಘ್ರದಲ್ಲಿ ಪರಿಹಾರವಾಗುತ್ತವೆ. ಬಹಳ ಭಯ ಪಡುವವರಿಗೆ, ಮೇಲಿಂದ ಮೇಲೆ ದುಃಸ್ವಪ್ನಗಳು ಆಗುತ್ತಿರುವವರಿಗೆ ಈ ಪ್ರಾರ್ಥನೆ ವಿಶೇಷ ಫಲಕಾರಿ. ಹಲವಾರು ಮಂದಿ ಮನೆಯ ಮುಂದೆ ಈ ಆಪತ್ತು ಸ್ತೋತ್ರವನ್ನು board ಹಾಕಿದ್ದನ್ನು ನಾನು ಸಹ ನೋಡಿದ್ದೇನೆ. ನಂಬಿಕೆ ಹಾಗೂ ವಿಶ್ವಾಸವೇ ದೇವರು. ದಿನ ನಿತ್ಯ ಓದುವ ಅಭ್ಯಾಸ ಮಾಡೋಣ. ತಾಪತ್ರಯಗಳ ಆಪತ್ತುಗಳ ದೂರ ಮಾಡೋಣ.
ಒಂದು ಕೈಯಲಿ ಖಡ್ಗ l
ಒಂದು ಕೈಯಲಿ ಹಲಿಗೆ l
ಅಂದವಾಗಿ ಪಿಡಿದು l
ದಿವಾ ರಾತ್ರಿಯಲಿ ಬಂದು ಬದಿಯಲಿ ನಿತ್ಯ ಬಾರಾಸನನಾಗಿ l
ಹಿಂದು ಮುಂದುಪದ್ರವಾಗದಂತೆ l
ಇಂದಿರೇರಮಣ ಕಾಯುತ್ತಲಿರೆ l
ಎನಗಾವ ಬಂಧಕಗಳಿಲ್ಲ l
ಧನ್ಯ ಧನ್ಯ ಕಂದರ್ಪನಯ್ಯ l
ಸಿರಿವಿಜಯ ವಿಠಲರೇಯ ಎಂದೆಂದಿಗಾಪತ್ತು ಬರಲೀಯನೋ ||
ಉಡುಪಿಗೆ ಹೋಗುವ ಹಾದಿಯಲ್ಲಿ ಮಂಡಗಡ್ಡಿ ಭೀಮನೆಂಬ ಕಳ್ಳನು ಜನರನ್ನು ಸುಲಿಗೆ ಮಾಡಿ ಉಪದ್ರವ ಕೊಡುತ್ತಿದ್ದನು. ಶ್ರೀ ಗೋಪಾಲ ದಾಸರು ಉಡುಪಿಗೆ ಹೊರಟಿದ್ದನ್ನು ತಿಳಿದ ಶ್ರೀ ವಿಜಯದಾಸರು ದೇವರನ್ನು ಪ್ರಾರ್ಥಿಸಿ ಈ ಕೃತಿಯನ್ನು ರಚಿಸಿದರು. ಗೋಪಾಲ
ದಾಸರಿಗೆ ಹಾದಿಯಲ್ಲಿ ಮಂಡಗಡ್ಡೆ ಗ್ರಾಮದ ಬಳಿ ಆ ಭೀಮನು ಬಂದು ದಾಸರನ್ನು ದೋಚಲು ಬಂದಾಗ ಅವರ ಸುತ್ತಲೂ ಖಡ್ಗ ಹಿಡಿದು ರಕ್ಷಕರು ಇದ್ದುದನ್ನು ನೋಡಿದನು. ಇನ್ನೂ ಮುಂದೆ ಹೋಗಿ ಆ ಭೀಮನು ದಾಸರನ್ನು ಸುಲಿಯಲು ಮುಂದೊಂದು ದೇವಸ್ಥಾನದ ಬಳಿ ಮತ್ತೆ ಬಂದನು.
ಆಗಲೂ ಗೋಪಾಲದಾಸರ ಬಳಿ ಖಡ್ಗ ಹಿಡಿದು ರಕ್ಷಕರು ಇದ್ದರು. ಆಗ ಮುಂದೆ ಹೋಗಿ ಮತ್ತೊಮ್ಮೆ ಬಂದಾಗಲೂ ಖಡ್ಗಧಾರಿಗಳು ಗೋಪಾಲ ದಾಸರ ಬಳಿ ಇದ್ದರು. ಕಡೆಗೆ ಮಂಡಗಡ್ಡೆ ಭೀಮನು ಶರಣಾಗಿ ಉದ್ಧರಿಸಿರೆಂದು ಕೋರಿದ. ಇದಕ್ಕೆ ಕಾರಣ ವಿಜಯದಾಸರು ಮುಂದಾಲೋಚನೆ ಮಾಡಿ ರಚಿಸಿದ್ದ ಕೃತಿ - ಒಂದು ಕೈಯಲ್ಲಿ ಖಡ್ಗ" ವನ್ನು ಗೋಪಾಲ ದಾಸರು ಹೇಳಿಕೊಳ್ಳುತ್ತಿದ್ದರು.
ಶ್ರೀಹರಿಯೇ ಗೋಪಾಲ ದಾಸರನ್ನು ರಕ್ಷಿಸುತ್ತಿದ್ದರು. ನಮಗೆ ದೋಚುವವರು, ಅನ್ಯಾಯ ಮಾಡುವವರು, ಸುಲಿಗೆ ಮಾಡುವವರು, ಮತ್ಸರಿಸುವವರು ಹೆಜ್ಜೆ ಹೆಜ್ಜೆಗೆ ಇದ್ದಾರೆ. ಇವರೆಲ್ಲರಿಂದ ರಕ್ಷಿಸುವಂತಹ ಸ್ತೋತ್ರ.ಪ್ರಯತ್ನ ಮಾಡೋಣ.
***
No comments:
Post a Comment