SEARCH HERE

Tuesday 30 November 2021

ಭಾಗವತೋತ್ತಮರು ಯಾರು

 ಭಾಗವತೋತ್ತಮರು ಯಾರು? 

ಮುಂಡಕಭಾಷ್ಯದಲ್ಲಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು  ಭಾಗವತರ ಲಕ್ಷಣವನ್ನು ತಿಳಿಸುತ್ತಾರೆ. 


न विष्णुसदृशं किञ्चित् परमं वाऽपि मन्वते   

सर्वोत्तमं तं जानन्तस्ते हि भागवतोत्तमाः


ವಿಷ್ಣುವಿಗಿಂತ ಅಧಿಕ ಹಾಗೂ ಸದೃಶ ಯಾರೂ ಇಲ್ಲ , ಅವನನ್ನೇ ಸರ್ವೋತ್ತಮ ಎಂದು ಯಾರು ತಿಳಿದಿದ್ದಾರೋ ಅವರು ಭಾಗವತೋತ್ತಮರು ಎಂದು. 


--------------------------------------


ಇಲ್ಲಿ ಕೆಲವರು ಆಕ್ಷೇಪ ಮಾಡುತ್ತಾರೆ.  ಈ ಪ್ರಮಾಣವಚನ ಈಗ ಉಪಲಭ್ಯವಿಲ್ಲ ಎಂದು. ಆದರೆ ಇದೇ ತತ್ತ್ವವನ್ನು ಶ್ರೀಮದ್ಭಾಗವತಪುರಾಣವು ತಿಳಿಸುತ್ತದೆ. ಯಾರ ಮನಸ್ಸಿನಲ್ಲಿ ಕಾಮಕ್ರೋಧಾದಿಗಳು ಇರುವದಿಲ್ಲವೋ , ವಾಸುದೇವನ್ನು ಮಾತ್ರ ಮುಖ್ಯವಾಗಿ ಆಶ್ರಯವುಳ್ಳವರು ಯಾರೋ ಅವರು ಭಾಗವತೋತ್ತಮರು. 


न कामकर्मबीजानां यस्य चेतसि संभवः ।

वासुदेवैकनिलयः स वै भागवतोत्तमः ॥


ಈ ಶ್ಲೋಕದಲ್ಲಿ ಬಂದ "ವಾಸುದೇವೈಕನಿಲಯಃ" ಎನ್ನುವ ಪದಕ್ಕೆ ಶ್ರೀಧರಸ್ವಾಮಿಗಳನ್ನು ಮೊದಲುಗೊಂಡು ಅನೇಕ ವ್ಯಾಖ್ಯಾನಕಾರರು ವಾಸುದೇವನನ್ನು ಮಾತ್ರ ಆಶ್ರಯವಾಗಿ ಉಳ್ಳವರು  "वासुदेव एवैकनिलय आश्रयो यस्य सः" ಎಂದೇ ಅರ್ಥ ಮಾಡಿದ್ದಾರೆ.  


ಈ ಅಧ್ಯಾಯದಲ್ಲಿ ವಾಸುದೇವನನ್ನು ಮಧುರಿಪು ಎಂದು ಕರೆದಿರುವದರಿಂದ ಹಾಗೂ ವೈಕುಂಠದ ಉಲ್ಲೇಖ ಬಂದಿರುವದರಿಂದ ಈ ವಾಸುದೇವನು ಚತುರ್ಭುಜನಾದ ನಾರಾಯಣನೇ. 


ಅಗ್ನಿಪುರಾಣದಲ್ಲಿ, ವಿಷ್ಣುಧರ್ಮೋತ್ತರ ಉಪಪುರಾಣದಲ್ಲಿ ಹಾಗೂ ಭೃಗುಸಂಹಿತೆಯಲ್ಲಿ ಯಮನು ಹೇಳುವ ಮಾತು ಹೀಗಿದೆ :  


ये तु भागवता लोके तच्चित्तास्तत्परायणाः 

पूजयन्ति सदा विष्णुं ते च त्याज्याः सुदूरतः 


ಯಾರು ವಿಷ್ಣುವನ್ನು ಸದಾ ಪೂಜಿಸುವ ಭಾಗವತರಿದ್ದಾರೋ, ಅವರ ಬಳಿಗೆ ನಾವು ಹೋಗುವದಿಲ್ಲ.  


ಹೀಗೆ ಭಾಗವತೋತ್ತಮರ ಲಕ್ಷಣವನ್ನು ತಿಳಿಸಲಾಗಿದೆ. ಅಷ್ಟೇ ಅಲ್ಲ,  ಲಕ್ಷ್ಯಭೂತರಾದ ಭಾಗವತೋತ್ತಮವ್ಯಕ್ತಿಗಳನ್ನೂ ಶಾಸ್ತ್ರಗಳು ತಿಳಿಸುತ್ತವೆ.  ಭಾಗವತಪುರಾಣ ದಲ್ಲಿಯೇ ಪ್ರಹ್ಲಾದ, ನಾರದ ಮೊದಲಾದ ವೈಷ್ಣವರನ್ನೇ ಭಾಗವತರು ಎಂದು ಕರೆಯಲಾಗಿದೆ.


प्रह्रादनारदवसुप्रमुखैर्भागवतोत्तमैः ।

स्तूयमानं पृथग्भावैः वचोभिरमलात्मभिः ॥ ५४ ॥


ಅದೇ ರೀತಿಯಾಗಿ ಕಿಂಪುರುಷಖಂಡದಲ್ಲಿ ರಾಮನನ್ನು ನಿರಂತರ ಭಜಿಸುತ್ತಿರುವ ಹನೂಮಂತನನ್ನೂ ಪರಮಭಾಗವತ ಎಂದು ತಿಳಿಸಲಾಗಿದೆ.  


किम्पुरुषेषु भगवन्तमादिपुरुषं लक्ष्मणाग्रजं सीताभिरामं रामं तच्चरणसन्निकर्षाभिरत: परमभागवतो हनूमान् सह किम्पुरुषैरविरतभक्तिरुपास्ते 


ಪಾಂಡವರು ಪರಮಾತ್ಮನನ್ನು ಸ್ತೋತ್ರ ಮಾಡಿದ ಪಾಂಡವಗೀತೆ ಎಂಬುದು ಉತ್ತರಭಾರತದಲ್ಲಿ ಪ್ರಸಿದ್ಧವಾಗಿದೆ. ಅದರಲ್ಲಿ ಪ್ರಥಮಶ್ಲೋಕದಲ್ಲಿಯೇ ಭಾಗವತರನ್ನು ಹೆಸರಿಸಿ ನಮಸ್ಕರಿಸುತ್ತಾರೆ ಪಾಂಡವರು. 


प्रह्लादनारदपराशरपुण्डरीक

व्यासाऽम्बरीषशुकशौनकभीष्मदाल्भ्यान् 

रुक्माङ्गदार्जुनवसिष्ठविभीषणाद्या 

एतानहं परमभागवतान् नमामि ॥१॥ 


ಪ್ರಹ್ಲಾದ, ನಾರದ, ಪರಾಶರ, ಪುಂಡರೀಕ, ವ್ಯಾಸ, ಅಂಬರೀಷ, ಶುಕ, ಶೌನಕ, ಭೀಷ್ಮ, ದಾಲ್ಭ್ಯ, ರುಕ್ಮಾಂಗದ, ಅರ್ಜುನ ( ಕಾರ್ತವೀರ್ಯಾರ್ಜುನ ), ವಸಿಷ್ಠ, ವಿಭೀಷಣ ಮೊದಲಾದ ಪರಮಭಾಗವತರನ್ನು ನಮಿಸುತ್ತೇನೆ ಎಂದು ಹೇಳಲಾಗಿದೆ. ವ್ಯಾಸರನ್ನು ಹೊರತುಪಡಿಸಿ ಇಲ್ಲಿ ಉಲ್ಲೇಖಿಸಿದ ಎಲ್ಲರೂ ಕೂಡ ವಿಷ್ಣುಭಕ್ತಿಯಿಂದಲೇ ಭಾಗವತೋತ್ತಮ ಎಂಬ ಉಪಾಧಿಯನ್ನು ಪಡೆದವರು ಎಂಬುದನ್ನು ಗಮನಿಸಬೇಕು. 


ಶಂಕರರೂ ಕೂಡ ಲಕ್ಷ್ಮೀನರಸಿಂಹ ಕರಾವಲಂಬನ ಸ್ತೋತ್ರದಲ್ಲಿ ಪಾಂಡವಗೀತೆಯ ಶ್ಲೋಕವನ್ನೇ ಬಳಸಿಕೊಂಡು ಭಾಗವತರು ಯಾರು ಎಂಬುದನ್ನು ತಿಳಿಸಿದ್ದಾರೆ.


प्रह्लादनारदपराशरपुण्डरीक

व्यासादिभागवतपुङ्गवहृन्निवास

भक्तानुरक्तपरिपालनपारिजात 

लक्ष्मीनृसिंह मम देहि करावलम्बम्


--------------------------------------


ಹೀಗೆ ವಿಷ್ಣುವನ್ನು ಸರ್ವೋತ್ತಮ ಎಂದು ತಿಳಿದವರು ಭಾಗವತರು ಎಂದು ಸಿದ್ಧವಾಗುವದು.  ನಾರದಪುರಾಣದ ಪೂರ್ವಾರ್ಧದ ಐದನೇಯ ಅಧ್ಯಾಯದಲ್ಲಿ ಶಿವಾರ್ಚಕರನ್ನು ಭಾಗವತರು ಎಂದು ಹೇಳಿದ್ದಾರಲ್ಲ ? ಎಂದರೆ , ಅಲ್ಲಿ ಶಿವನನ್ನು ವಿಷ್ಣುಪರಿವಾರತಯಾ ಅರ್ಚನೆ ಮಾಡುವವರು ಭಾಗವತರು ಎಂದು ತಾತ್ಪರ್ಯ. ಹಾಗೆಯೇ "ಹರಿಹರರಲ್ಲಿ ಸಮಬುದ್ಧಿಯನ್ನು ಹೊಂದಿದವರು"  ಎಂದರೆ "ಹರಿಹರರಲ್ಲಿ ಭಿನ್ನಾಭಿಪ್ರಾಯ ಇಲ್ಲ ಎಂದು ತಿಳಿಯುವವರು" ಭಾಗವತರು ಎಂದರ್ಥ.  ಹೀಗೆ ವಿರೋಧವಿರುವದಿಲ್ಲ.   


ನಾರದಪುರಾಣದ  ಪೂರ್ವಾರ್ಧದ ಐದನೇಯ ಅಧ್ಯಾಯದಲ್ಲಿ ಹೇಳಿದ ಭಾಗವತರ ಲಕ್ಷಣವನ್ನು ಸ್ಕಂದಪುರಾಣದ ವೈಷ್ಣವ ಖಂಡದ ವೆಂಕಟಾಚಲಮಾಹಾತ್ಯ್ಮದ ೨೧ ನೇಯ ಅಧ್ಯಾಯದಲ್ಲಿಯೂ ತಿಳಿಸಲಾಗಿದೆ.  ಅಲ್ಲಿ ಹೇಳಿದ ಎಲ್ಲ ಶ್ಲೋಕಗಳು ಇಲ್ಲಿಯೂ ಇವೆ. ಆದರೆ ಅಲ್ಲಿ  ಶಿವಾರ್ಚಕರು ಭಾಗವತರು ಎನ್ನುವ ಐದು ಶ್ಲೋಕಗಳು ಮಾತ್ರ ಇಲ್ಲಿ ಕಾಣುವದಿಲ್ಲ ಎಂಬುದು ಸಂಶೋಧನಾರ್ಹ ಸಂಗತಿ.

***


No comments:

Post a Comment