ಸ್ಥಿತಪ್ರಜ್ಞತೆ
ಯಾವುದೇ ಸ್ಥಿತಿ ಬರಲಿ, ಇರಲಿ, ಹೋಗಲಿ, ಅರ್ಥಾತ್ ಯಾವುದೇ ಕಷ್ಟ ಬರಲಿ, ಸುಖ ಬರಲಿ, ನಮ್ಮನ್ನು ಒಬ್ಬರು ಹೊಗಳಲಿ ಅಥವಾ ಬಯ್ಯಲಿ ಒಂದೇ ರೀತಿಯಲ್ಲಿ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವುದನ್ನೇ ಸ್ಥಿತಪ್ರಜ್ಞತೆ ಅಂತ ಕರಿತೇವೆ.
ನಮ್ಮ ಮರುತಮತದಲ್ಲಿ ಬಂದು ಹೋದಂತಹಾ ಎಲ್ಲ ಶ್ರೇಷ್ಠ ಯತಿಶ್ರೇಷ್ಠರು, ಮಹಾನುಭಾವರು, ಹರಿದಾಸರುಗಳೆಲ್ಲ ಅನುಸಂಧಾನಕ್ಕೆ ತಂದಂತಹಾ ಅದ್ಭುತವಾದ ಸಾಧನೆ ಅದೇ ಈ ಸ್ಥಿತಪ್ರಜ್ಞತೆ
ಶಾಸ್ತ್ರ ಬಹಳ ಓದಿದ್ದೇವೆ, ವಿಷಯಗಳು ತಿಳಿದಿದ್ದೇವೆ, ಒಳ್ಳೆಯ ಮನೆತನದಲ್ಲಿ ಬಂದಿದ್ದೇವೆ, ವಯಸಿನಲ್ಲಿ ಹಿರಿಯರಾಗಿದ್ದೇವೆ ಅಂದಮಾತ್ರಕ್ಕೆ ಈ ಸ್ಥಿತಪ್ರಜ್ಞತೆ ಖಂಡಿತ ಇದೆ ಅಂತ ಅಲ್ಲ.
ಅದಕ್ಕೆ ಸಾಧನೆ ಬೇಕು. ಅದು ಒಂದು ಮಹಾ ಯಜ್ಞ. ನಿಜ.
ಬಹಳ ಆತ್ಮೀಯರೇ ಆಗಿರ್ತಾರೆ. ವರ್ಷಗಳಿಂದ ಬಾಂಧವ್ಯವಿದೆ ಆದರೂ ಸಹಾ ತಮಗೆ ಇಷ್ಟವಿಲ್ಲದ ವಿಷಯ ಆ ಕಡೆಯಿನ ವ್ಯಕ್ತಿ ಮಾಡಿದಾಗ ನಮಗೆ ವ್ಯತಿರೇಕವಾಗಿ ಅವರ ವರ್ತನೆ ಇದ್ದಾಗ ಎಷ್ಟೇ ಬಾಂಧವರಾಗಲಿ, ಎಷ್ಟೇ ಪ್ರೀತಿಯ ವ್ಯಕ್ತಿಗಳಾಗಲಿ ಅವರು ನಮ್ಮನ್ನು ಕಾಲು ಕೆಳಗೆ ಹಾಕಿ ತುಳಿತಾರೆ. ಅದೂ ಅಲ್ಲದೇ ಆಗಿನವರೆಗೂ ನಾವು - ಅವರು ಮಾತಾಡಿದ ವಿಷಯಗಳನ್ನು ಮೂರನೆಯ ವ್ಯಕ್ತಿಗೆ ನಮ್ಮ ವ್ಯತಿರೇಕವಾಗಿ ಚಾಡಿಯಂತೆ ಹೇಳ್ತಾರೆ.. ಇದು ಈಗಿನ ಕಲಿಯುಗದ ಜನರ ಲಕ್ಷಣ. ಇಂಥಹ ಮನಸ್ಥಿತಿ ಅವರವರ ಸ್ವರೂಪ ಅಂತಲೂ ಮಾತನಾಡುತ್ತಾರೆ. ಒಂದೇ ಒಂದು ಮಾತಿಗೆ, ಅಥವಾ ಒಂದೇ ಒಂದು ವಿಷಯಕ್ಕೆ ಇರುವ ಬಾಂಧವ್ಯ ಕೆಟ್ಟರೆ ಅಥವಾ ಕೆಟ್ಟ ಅಭಿಪ್ರಾಯ ಬಂದರೆ ಅದೆಂಥಾ ಬಾಂಧವ್ಯ? ಅಂತಹ ಬಾಂಧವ್ಯವನ್ನು ನಿಲಿಸಿಕೊಂಡರೂ/ ಉಳಿಸಿಕೊಂಡರೂ/ಮುಂದುವರೆಸಿದರೂ ಪ್ರಯೋಜನವಿಲ್ಲ ಅಲ್ವಾ?
ಇದಲ್ಲ ಸ್ಥಿತಪ್ರಜ್ಞತೆ ಅಂದರೆ.
ಮತ್ತೆ.. ಮನೆಯಲ್ಲಿ ಬಹಳ ಆತ್ಮೀಯರು ತೀರಿಕೊಂಡಿದ್ದಾರೆ. ಅವರಿಲ್ಲದೆ ನಮಗೆ ಜೀವನವಿಲ್ಲ ಅಂತ ಬಹಳ ಸಂದರ್ಭಗಳಲ್ಲಿ ನಮಗೆ ಅನುಭವಕ್ಕೆ ಸಹ ಬಂದಿರ್ತದೆ. ಈಗ ಮಾತನಾಡಿದ ಮನುಷ್ಯ ಮರುಕ್ಷಣಕ್ಕೆ ಇಲ್ಲ. ನಮ್ಮ ಜೊತೆ ಜೀವನ ಪರ್ಯಂತ ಇರ್ತೆವೆ ಅಂದವರು ಇನ್ನಿಲ್ಲ ಅಂತ ತಿಳಿದಾಗ ಅವರ ಜೊತೆ ಹೋಗೋಣ ಅನ್ನೋ ವೈರಾಗ್ಯ ಬಂದುಬಿಡ್ತದೆ. ಅವರಿಗಾಗಿ ಅಳತೇವೆ, ಊಟ, ನಿದ್ದೆ ಬಿಡ್ತೇವೆ. ಜೀವನ ಶೂನ್ಯ ಎಂದೇ ತಿಳಿದು ಬದುಕ್ತೇವೆ. ಕರ್ತವ್ಯ ಬಿಡ್ತೇವೆ. ನಮ್ಮನ್ನ ನಂಬಿ ಬದುಕ್ತಿರುವವರಿಗೂ ನೋವು ಕೊಡ್ತಾ ಬದುಕ್ತೇವೆ.
ಇದು ಸ್ಥಿತಪ್ರಜ್ಞತೆ ಅಲ್ಲ
ಹಾಗೇ ನಮಗಿಂತ ಒಬ್ಬರು ಹಿರಿಯರೋ ಅಥವಾ ಕಿರಿಯರೋ ಜ್ಞಾನದಲ್ಲಿ ಮುಂದಿದ್ದಾರೆ. ಅವರನ್ನು ನೋಡಿ ಅಸೂಯಾ ಭಾವದಿಂದ ಮನಸಿನಲ್ಲಿ ಕೋಪದ್ವೇಷಗಳನ್ನ ತುಂಬಿಸಿಕೊಂಡು ಅವರ ಜೊತೆ ಬಹಳ ಪ್ರೀತಿಯಿಂದ ಮಾತನಾಡ್ತಿವಲ್ವಾ ಅಂತಹಾ ಮನಸ್ಥಿತಿಯೂ ಸ್ಥಿತಪ್ರಜ್ಞತೆಯನ್ನು ಖಂಡಿತಾ ಸಾಧಿಸುವುದಿಲ್ಲ.
ಹಾಗಾದರೆ ಹೇಗೆ ಸಾಧಿಸುವುದು ?
ನಮ್ಮ ಧೃವಾಂಶ ಸಂಭೂತರಾದ ಶ್ರೀ ಶ್ರೀಪಾದರಾಜ ಗುರುಸಾರ್ವಭೌಮರು ಅದ್ಭುತವಾಗಿ ತಿಳಿಸಿದ್ದಾರೆ..
ಇಟ್ಟಾಂಗೆ ಇರುವೇನೋ ಹರಿಯೇ! ಅಂತ..
ಯಾವುದೇ ಕಷ್ಟ ಬರಲಿ, ನಷ್ಟ ಬರಲಿ, ನಾವು ಮೋಸ ಹೋಗಲಿ, ಯಾರಾದರೂ ನಮ್ಮನ್ನು ನಾಶ ಮಾಡಲು ಯತ್ನಿಸಿಲಿ, ನಮ್ಮವರೇ ನಮ್ಮನ್ನಗಲಲೀ, ಯಾರೂ ಇಲ್ಲದ ಒಂಟಿ ಪಯಣವಾದರೂ ನೀನು ಕೊಟ್ಟ ಜೀವನ ನಿನಗೋಸ್ಕರ ನಡೆಸುತ್ತೇನೆ ಸ್ವಾಮೀ. ನೀನಿರುವ ತನಕ ನೀ ಕೈ ಹಿಡಿದು ನಡೆಸುವ ತನಕ ನನಗೆ ಭಯವಿಲ್ಲ. ನೀನು ಕೊಟ್ಟ ಜೀವನ ನಿನ್ನ ಸ್ಮರಣೆ, ಪೂಜೆ , ಆರಾಧನೆಗಳಿಗೆ ಅಂತ ಪರಮಾತ್ಮನಲ್ಲಿ ಶರಣಾಗಬೇಕು. ಅದೇ ಸ್ಥಿತಪ್ರಜ್ಞತೆ
ಇಂದು ತಲೆಯ ನೋವು ಕೊಟ್ಟಿದ್ದಿಯಾ? ಅನುಭವಿಸೋಣ, ಜ್ವರ ಕೊಡ್ತಿಯಾ ಭರಿಸೋಣ, ಮತ್ತೇನಾದರೂ ಅನಾರೋಗ್ಯವಾ? ನಿನ್ನದೇ ಅನುಗ್ರಹ ಸ್ವಾಮೀ.! ಒಂದೊಂದೇ ಕಷ್ಟ, ಒಂದೊಂದೇ ರೋಗ ಕೊಟ್ಟು ಕಳೆದ ಜನ್ಮಗಳ ಪಾಪದ ರಾಶಿಯನ್ನು ಒಂದೊಂದಾಗಿ ದೂರ ಮಾಡ್ತಿದ್ದಿಯಾ ಅಂತ ಆ ಪರಮಾತ್ಮನ ಪಾದಕ್ಕೆ ಶಿರವಿಟ್ಟು ಎಲ್ಲ ನೋವುಗಳನ್ನು ಸ್ವೀಕರಿಸೋಣ.
ಇವತ್ತು ಆತ್ಮೀಯತೆ ಕೊಟ್ಟಿದ್ದಿಯಾ, ಅದನ್ನ ದೂರ ಮಾಡ್ತಿಯಾ ಅದೂ ನಿನ್ನ ಪ್ರಸಾದವೇ ಎಂದು ದೇವರಲ್ಲಿ ಮಾತ್ರ ಭಕ್ತಿ ಮಾಡೋಣ.
ಇಂಥಹ ಒಂದೇ ರೀತಿಯ ಮನಸ್ಥಿತಿಯನ್ನು ಅರ್ಥಾತ್ ಸ್ಥಿತಪ್ರಜ್ಞತೆಯನ್ನು ನಮ್ಮ ಹರಿದಾಸರೆಲ್ಲ ಅವರ ಜೀವನದಿಂದ ತೋರಿಸಿಕೊಟ್ಟಿದ್ದಾರೆ.
ನವಕೋಟಿನಾರಾಯಣರಾದ ಶ್ರೀಮತ್ಪುರಂದರದಾಸಾರ್ಯರ ಜೀವನದಿಂದಲೂ,
ಸಾವಿನ ಅಂಚಿನವರೆಗೂ ಹೋಗಿ ಬಂದಾಗ ಕನಕಪ್ಪನಿಂದಲೂ,
ಮನೆಯನ್ನು ತೊರೆದು ನಿಂತ ಶ್ರೀ ಪ್ರಸನ್ನವೇಂಕಟ ದಾಸರಿಂದಲೂ, ಶ್ರೀ ವಿಜಯಪ್ರಭುಗಳು ತಮ್ಮ ಪುತ್ರನನ್ನು ಕಳೆದುಕೊಂಡಾಗಲೂ, ಬಡತನದಲ್ಲಿದ್ದರೂ ಭಕ್ತಿಯನ್ನು ಬಿಡದಿರುವ ಶ್ರೀ ಭಾಗಣ್ಣದಾಸರಿಂದಲು. ಹೀಗೆ ಹೇಳುತ್ತಾ ಹೋದರೆ ಸಂಖ್ಯೆ ಮಾತ್ರ ಉಳಿತದೆ. ನಮ್ಮ ಹರಿದಾಸರೂ, ಮಹಾನುಭಾವರೂ, ನಮಗೆ ಕಲಿಸಿಕೊಟ್ಟಂತಹಾ ಈ ಅದ್ಭುತವಾದ ವಿಷಯವನ್ನು ಅರಿತು ಅನುಸಂಧಾನಕ್ಕೆ ತಂದುಕೊಂಡ ಆ ಕ್ಷಣ ಸಾಧನೆ ಗೆ ಮೊದಲ ಹೆಜ್ಜೆ ಹಾಕಿದ್ದೇವೆ ಅಂತಲೇ ಅರ್ಥ.
ನಾವು ಶ್ರೀ ವಿಜಯರಾಮಚಂದ್ರವಿಠಲರ ಜೀವನದಲ್ಲಿ ಸಹ ನೋಡಿದ್ದೇವೆ. ಮೈಸೂರಿನ ಅರಮನೆಯಲ್ಲಿನ ಓರ್ವ ಮಹಾನುಭಾವರಿಗೆ ಕಾಲಿನಲ್ಲಿ ಹುಳಗಳು ಸೇರಿರ್ತವೆ. ಅವುಗಳನ್ನ ರಾಜ ವೈದ್ಯನು ಬಂದು ತೆಗದರೂ ಸಹಾ ಆ ಮಹಾನುಭಾವರು ದೇವರು ನನ್ನ ಪಾಪ ತಗೋತಿದ್ದಾನೆ ಇದು ಈ ಜನ್ಮಕ್ಕೆ ಕಳೆಯಲಿ ಅಂತ ಮತ್ತೆ ಆ ಹುಳಗಳನ್ನು ಗಾಯದಮೇಲೆ ಹಾಕಿಕೊಳ್ತಾರೆ. ಅದು ಸ್ಥಿತಪ್ರಜ್ಞತೆ ಅಂದರೆ ಅಲ್ಲವೇ?
ಪರಮಾತ್ಮನು ನೀಡಿದ್ದನ್ನು ಸ್ವೀಕಾರ ಮಾಡಿ ನೀನಿತ್ತ ಸೌಭಾಗ್ಯ, ನೀನಿತ್ತ ನೋವು. ಎಲ್ಲವೂ ನಿನ್ನದೇ ಎಂದು ಯಾರಾದರೇ ಪರಮಾತ್ಮನಲ್ಲಿ ಮತ್ತಷ್ಟು ಭಕ್ತಿ ಮಾಡ್ತಾರೆಯೋ..
ಅವರು ಮಾತ್ರ ಸ್ಥಿತಪ್ರಜ್ಞರು
ಅವರೇ ಸ್ಥಿತಪ್ರಜ್ಞರು
ಇಂತಹ ಉದಾಹರಣೆಗಳು ಹುಡುಕಿದಷ್ಟು ನಮಗೆ..
ವ್ಯಕ್ತಿವಾದಗಳು, ತಾರತಮ್ಯಗಳೂ, ಮೋಹ, ಅಶಾಂತಿ, ಅತೃಪ್ತಿ, ಅಸೂಯಾ, ನೋವು, ಕಷ್ಟ ಮತ್ತೆ ಸುಖ, ಸೌಭಾಗ್ಯ, ಐಶ್ವರ್ಯ ಇವು ಯಾವುದೇ ಬಂದರೂ ಸಹ ಒಂದೇ ಮನಸ್ಥಿತಿಯಲ್ಲಿರಲು ಪ್ರಯತ್ನ ಮಾಡಿದರೆ ವಯಸಿನಲ್ಲಿ ಕಿರಿಯರಾದರೂ ಅವರು ಸ್ಥಿತಪ್ರಜ್ಞರೆ...
ಜೈ ವಿಜಯರಾಯ
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
****
No comments:
Post a Comment