SEARCH HERE

Tuesday 1 June 2021

ಪ್ರಮಾಣ pramana

by pasadacharya


ಈ ಅನುಮಾನ ಪ್ರಮಾಣ ದಿಂದ ಹುಟ್ಟುವ ಜ್ಞಾನವನ್ನು ಅನುಮಿತಿ ಎನ್ನುವರು. 

  ನೋಡೀ ಹೊಗೆ ಇದ್ದಲ್ಲೆಲ್ಲಾ  ಬೆಂಕಿ ಇದ್ದೇ ಇರುತ್ತದೆ ಆದರೆ  ಬೆಂಕಿ ಇದ್ದಲ್ಲೆಲ್ಲಾ ಹೊಗೆ ಇರುತ್ತದೆಂಬ ನಿಯಮವಿಲ್ಲ.

ಕಾದು ಕೆಂಪಗಿರುವ ಕಬ್ಬಿಣದ ಗುಂಡು ಇದ್ದಲ್ಲಿ ಹೊಗೆ ಇಲ್ಲ-ನಿಗಿ ನಿಗಿ ಕೆಂಡ ದಲ್ಲಿಯೂ ಸಹ  ಹೊಗೆ ಯಿರುವುದಿಲ್ಲ. ಹೀಗೆಯೇ ಮನುಷ್ಯತ್ವ-ಮರ್ತ್ಯತ್ವ ಗಳಲ್ಲಿ (ಮರ್ತ್ಯತ್ವ ಮರಣ ಹೊಂದುವ ಸ್ವಭಾವ) ಮನುಷ್ಯತ್ವ ವಿದ್ದಲ್ಲಿ ಮರ್ತ್ಯತ್ವ ವಿದ್ದರೂ ಮರ್ತ್ಯತ್ವ ವಿದ್ದಲ್ಲಿ ಮನುಷ್ಯತ್ವ ವಿರುತ್ತದೆಂಬ ನಿಯಮವಿಲ್ಲ. ಮನುಷ್ಯತ್ವ ವಿಲ್ಲದ ಎಷ್ಟೋ ಅನೇಕ ಪ್ರಾಣಿಗಳು ಮರಣ ಹೊಂದುತ್ತವೆ.ಹೊಗೆ ಇದ್ದಲ್ಲೆಲ್ಲಾ ಬೆಂಕಿ ಇರುತ್ತದೆಂಬ ಜ್ಞಾನವು ಪ್ರತ್ಯಕ್ಷದಿಂದ ಸಿದ್ಧವಾದ ವ್ಯಾಪ್ತಿಜ್ಞಾನ. ಇದರಿಂದ ಪ್ರತ್ಯಕ್ಷ ಸಿದ್ಧವಲ್ಲದ ಬೆಂಕಿ ಯ ಜ್ಞಾನವುಂಟಾಗುತ್ತದೆ. ಇದುವೇ ಅನುಮಿತಿ ಯು. ಅನುಮಾನ ಕ್ಕೆ ವ್ಯಾಪ್ತಿ ಜ್ಞಾನ ವು ಮೂಲಾಧಾರ. ಈ ಹೊಗೆ ಯು ಸಾಧನ ಅಥವಾ ಲಿಂಗ ವೆಂದೂ (ವ್ಯಾಪಕ), ಬೆಂಕಿ ಯು ಸಾಧ್ಯ ಅಥವಾ ಲಿಂಗಿ (ವ್ಯಾಪ್ಯ) ಎಂದೂ ಕರೆಯಲ್ಪಡುತ್ತವೆ. ಲಿಂಗ-ಲಿಂಗಿ ಗಳ ವ್ಯಾಪ್ತಿಜ್ಞಾನವಿಲ್ಲದೇ ಅನುಮಿತಿ ಯು ಹುಟ್ಟುವುದಿಲ್ಲ. ವ್ಯಾಪ್ತಿ ಜ್ಞಾನ ವು  ಸಾಮಾನ್ಯವಾಗಿ ಪ್ರತ್ಯಕ್ಷದಿಂದಲೂ ಕೆಲವೊಂದು ಸಂದರ್ಭಗಳಲ್ಲಿ ಆಪ್ತವಾಕ್ಯಾದಿಗಳಿಂದಲೂ, ಆಗಮಗಳಿಂದಲೂ ಉಂಟಾಗುತ್ತದೆ. ಆದ್ದರಿಂದ ಅನುಮಾನವು ಪ್ರತ್ಯಕ್ಷ ಮತ್ತು ಆಗಮವನ್ನಾಶ್ರಯಿಸಿಕೊಂಡೇ ಪ್ರಮಾಣವಾಗಿ ಬಲ್ಲದು. ಅಂದರೆ ಅನುಮಾನ ವು ಪ್ರಮಾಣವಾಗಬೇಕಾದರೆ (ಯಥಾರ್ಥಜ್ಞಾನಜನಕವಾಗಬೇಕಾದರೆ) ದೋಷರಹಿತವಾಗಿರಬೇಕೆಂಬುದಾಗಿ ಇಂದಿನ ದಿನದ ಸದ್ವಿಚಾರ ದ ಸಂದೇಶವಾಗಿದೆ


  ನೋಡೀ ಈ ಅನುಮಾನ ದಿಂದ ದೊರೆಯುವ ಅನುಮಿತಿ (ಜ್ಞಾನ) ಯು ಯಥಾರ್ಥ ಅಂದರೆ ಪ್ರಮಾಣವಾಗಬೇಕಾದರೆ ಆ ಅನುಮಾನ ವು ದೋಷರಹಿತವಾಗಿರಲೇಬೇಕು. ಪ್ರತ್ಯಕ್ಷ-ಆಗಮಗಳಿಂದ ಅದು ಬಾಧಿತವಾಗಕೂಡದು. ಪ್ರತ್ಯಕ್ಷಕ್ಕೆ ವಿರುದ್ಧವಾದದ್ದನ್ನು ಸಾಧಿಸುವ ಅನುಮಾನ ವು ಎಂದೂ ಪ್ರಮಾಣವಾಗಲಾರದು. ಆಗಮ ತಾತ್ಪರ್ಯವನ್ನು ವಿರೋಧಿಸುವ ಅನುಮಾನ ವೂ ಪ್ರಮಾಣವಲ್ಲ.ಒಬ್ಬನು ಒಂದು ಅನುಮಾನ ದಿಂದ ಒಂದು ವಿಷಯವನ್ನು ಸಾಧಿಸಿದರೆ ಅವನಿಗಿಂತ ತೀಕ್ಷಬುದ್ಧಿಯುಳ್ಳವನು ಮತ್ತೊಂದು ಯುಕ್ತಿಯಿಂದ ತದ್ವಿರುದ್ಧವಾದದ್ದನ್ನು ಸಾಧಿಸಬಹುದು. ಈ ಕಾರಣ ಈ ಕೇವಲ ತರ್ಕ ವನ್ನು ಶುಷ್ಕತರ್ಕ ವೆನ್ನಬಹುದಷ್ಟೇ. ಕೇವಲ ತರ್ಕದಿಂದ ಇದು ಹೀಗೆಯೇ ಎಂದು ನಿರ್ಣಯಿಸಲು ಸಾಧ್ಯವೇ ಇಲ್ಲ. ಆದಾಗ್ಗ್ಯೂ ಈಶ್ವರಾದಿ ಅತೀಂದ್ರಿಯ ವಸ್ತು ಸ್ವರೂಪವನ್ನು ನಿರ್ಣಯಿಸ ಹೊರಟವರು ಈ ವೇದಾದಿ ಆಗಮ ಗಳನ್ನು ಅವಲಂಬಿಸಬೇಕಾದದ್ದು ಅನಿವಾರ್ಯವಾದದ್ದರಿಂದ ಆಗಮವಾಕ್ಯಗಳಲ್ಲಿ ತೋರಬಹುದಾದ ತೋರುವ ಪರಸ್ಪರ ವಿರೋಧಗಳನ್ನು ಪರಿಹರಿಸಿಕೊಂಡು ಅನುಭವಕ್ಕೆ ವಿರೋಧವಾಗದಂತೆ ವೇದಾರ್ಥ ನಿರ್ಣಯಗಳನ್ನು ಗ್ರಹಿಸಲು ಈ ತರ್ಕಶಾಸ್ತ್ರ ವನ್ನವಲಂಭಿಸದೇ ಗತ್ಯಂತರವೇ ಇಲ್ಲವೆಂಬುದು ಇಂದಿನ ದಿನದ  ಸದ್ವಿಚಾರದ ಸಂದೇಶವಾಗಿದೆ.

****

ನೋಡೀ ಒಂದೆಡೆ ಒಂದು ವಸ್ತುವನ್ನು ಕಾಣದಿದ್ದರೆ ಅದರ ಅಭಾವ ವನ್ನು ತಿಳಿಯುತ್ತೇವೆ. ವಸ್ತುಗಳ ಅಭಾವ ಜ್ಞಾನವು ಅಭಾವ ದಿಂದಲೇ ಆಗುವುದಾದ್ದರಿಂದ ಈ ಅಭಾವ ವೂ ಕೂಡಾ ಒಂದು ಪ್ರಮಾಣವೆಂದು ಹೇಳಲಾಗುತ್ತದೆ. ವಸ್ತುವಿನ ಅಭಾವ ಜ್ಞಾನವು ಪ್ರತ್ಯಕ್ಷ ಮತ್ತು  ಅನುಮಾನ ಗಳಲ್ಲಿ ಅಂತರ್ಭಾವವುಳ್ಳದ್ದು-ಅಭಾವವೆಂಬ ಪ್ರತ್ಯೇಕ ಪ್ರಮಾಣದಿಂದ ಉಂಟಾದುದಲ್ಲ. ವಸ್ತುವಿನ ಅಭಾವವನ್ನು ಪ್ರತ್ಯಕ್ಷದಿಂದಲೇ  ತಿಳಿಯುತ್ತೇವೆ. ಮತ್ತು ಅದು  ಅಲ್ಲಿದ್ದಿದ್ದರೆ ಕಾಣುತ್ತಿತ್ತು-ಕಾಣುತ್ತಾ ಇಲ್ಲ-ಆದುದರಿಂದ ಅಲ್ಲಿಲ್ಲ ಎಂಬ ಅನುಮಾನ ದಿಂದಲೂ ಸಿದ್ಧವಾಗುತ್ತದೆ. ಸುಖಾದಿಗಳನ್ನು ಸಾಕ್ಷಿ ಪ್ರತ್ಯಕ್ಷದಿಂದ ತಿಳಿಯುತ್ತೇವೆ. ದುಃಖಾದಿಗಳ ಅಭಾವದಿಂದಲ್ಲ.ಕಿವಿ ಗಳೇನೋ ಎಲ್ಲರಂತೆ ಇವೆ-ಕಾಣುತ್ತೇವೆ, ಆದರೆ ಕಿವುಡ ನಾಗಿದ್ದಾನೆ. ಶ್ರೋತ್ರೇಂದ್ರಿಯದ ಅಭಾವ ವನ್ನು ಅದರ ಕಾರ್ಯವಿಲ್ಲದ್ದರಿಂದ ತಿಳಿಯುತ್ತೇವೆ.ಘಟಾದಿಗಳ ಪ್ರತ್ಯಕ್ಷದೊಂದಿಗೆ ಕಾಣದಿರುವುದೆಂಬ ಒಂದು ಧರ್ಮವಿದ್ದ ಮಾತ್ರಕ್ಕೆ ಕಾಣದಿರುವುದನ್ನೇ ಅಂದರೆ ಅಭಾವವನ್ನೇ ಒಂದು ಪ್ರಮಾಣವೆಂದು ತಿಳಿಯಲು ಬಾರದು. ಹಾಗಾದರೆ ಭಾವವಸ್ತುವನ್ನು ಅಂದರೆ ಇರುವ ವಸ್ತುವನ್ನು ಗ್ರಹಿಸುವ ಪ್ರತ್ಯಕ್ಷವು ಅದರೊಂದಿಗೆ ಅದರ ಅಭಾವವನ್ನು ಗ್ರಹಿಸುವುದಿಲ್ಲವೆಂಬ ಧರ್ಮವನ್ನು ನಿಯಮೇನ ಅಂದರೆ ತಪ್ಪದೇ ಹೊಂದಿರುವುದರಿಂದ ಪ್ರತ್ಯಕ್ಷವನ್ನು ಪ್ರಮಾಣವೆಂದು ಒಪ್ಪುವಲ್ಲಿ ಸಹ ಅಭಾವವನ್ನೇ ಪ್ರಮಾಣವೆಂದು ಒಪ್ಪಬೇಕಾದೀತು.ಕತ್ತಲೆಯಲ್ಲಿ ನೆಲವನ್ನು ಕೈದಡವಿನೋಡಿ ಘಟವಿಲ್ಲೆಂದು ತಿಳಿಯುವುದರಿಂದ ಘಟಾಭಾವ ಜ್ಞಾನ ವು ಪ್ರತ್ಯಕ್ಷ ಮಾತ್ರದಿಂದ ಆದುದಲ್ಲವೆಂದು ತಿಳಿಯಬಾರದು. ಒಂದಕ್ಕಿಂತ ಹೆಚ್ಚು ಇಂದ್ರಿಯಗಳಿಗೆ ಗೋಚರಿಸುವ ವಿಷಯ-ವಸ್ತುಗಳೂ ಉಂಟು.ಘಟವು ತ್ವಗೀಂದ್ರೀಯಕ್ಕೆ ಗೋಚರಿಸುವ ಸ್ಪರ್ಶಗುಣವುಳ್ಳದ್ದೂ ಆಗಿದೆ. ಮೇಲಾಗಿ "ಇಲ್ಲಿ ಘಟವಿಲ್ಲ-ಇದ್ದಿದ್ದರೆ ಅದು ಕೈಗೆ ತಾಗುತ್ತಿತ್ತು-ತಾಗಲಿಲ್ಲ" -ಕಾರಣ ಅದು ಇಲ್ಲ ಎಂಬ ಅನುಮಾನದಿಂದಲೂ  ಘಟಾಭಾವವು ಸಿದ್ಧವಾಗುತ್ತದೆ ಎಂಬುದು ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ.

***

ಜ್ಞಾನಸಾಧನಗಳಲ್ಲಿ ಕೊನೆಯದಾದುದು ಪರಿಶೇಷ ವು. ಇದೂ ಅನುಮಾನ ಪ್ರಮಾಣವೇ ಆಗಿದೆ. ಈಗ ಉಧಾಹರಣೆಗೆ ನೋಡಿ ಈ ಮನುಷ್ಯನು ಚೈತ್ರನೋ, ಮೈತ್ರನೋ, ದೇವದತ್ತನೋ ಎಂಬುದನ್ನು ಎಂಬುದನ್ನು ಕಂಡುಹಿಡಿಯಲು ಅವನು ಈ ಮೂವರಲ್ಲೊಬ್ಬನಾಗಿದ್ದು ಅವನು ಚೈತ್ರನಲ್ಲ, ಮೈತ್ರನೂ ಅಲ್ಲವೆಂಬ ಜ್ಞಾನವಾಗಲು ಅವನು ದೇವದತ್ತನೆಂದೇ ನಿಶ್ಚಯಿಸುತ್ತೇವೆ. ಅಂದರೆ ಇದು  ಪರಿಶೇಷ ಪ್ರಮಾಣದಿಂದ ಸಿದ್ಧವೆನ್ನುತ್ತೇವೆ. ಅಂದರೆ ಈ ಪರಿಶೇಷವು ಅನುಮಾನದ ಪ್ರಭೇದವೆಂಬುದು ಸ್ಪಷ್ಟವಾಯಿತು. 

ಹೀಗೆಯೇ ವಿವಿಧ ಚೇಷ್ಟೆಗಳು,ಶಕುನಗಳು,ಲಿಪಿಗಳು ಇತ್ಯಾದಿಜ್ಞಾನಸಾಧನಗಳೂ ಅನುಭವದಿಂದ ಕಂಡುಬರುತ್ತವೆ.ಅವೆಲ್ಲವೂ ಪ್ರತ್ಯಕ್ಷಾದಿ ಮೂರರಲ್ಲಿ ಅಂತರ್ಭಾವವಾಗುತ್ತವೆ-ಪ್ರತ್ಯೇಕ ಪ್ರಮಾಣಗಳಲ್ಲ. ಅನೇಕ ಸನ್ನಿವೇಶಗಳಲ್ಲಿ ಈ ಪ್ರಮೇಯವು ಐತಿಹ್ಯದಿಂದ ಸಿದ್ಧವಾಗುತ್ತದೆ. ಇದು ಪರಿಶೇಷದಿಂದ ಸಿದ್ಧವಾಗುತ್ತದೆ, ಇತ್ಯಾದಿಯಾಗಿ ಹೇಳುವುದುಂಟು. ಅಲ್ಲಿ ಐತಿಹ್ಯಾದಿಗಳನ್ನು ಪ್ರತ್ಯೇಕ ಪ್ರಮಾಣಗಳನ್ನಾಗಿ ಅಂಗೀಕರಿಸಲಾಗಿದೆಯೆಂದು ತಿಳಿಯಕೂಡದು.ಸಂದರ್ಭಾನುಸಾರವಾಗಿ ಅನುಮಾನಾದಿಗಳ ಪ್ರಭೇದಸೂಚಕಗಳೆಂದು ಮಾತ್ರವೇ ತಿಳಿಯಬೇಕು. ಆದ್ದರಿಂದ ಹೀಗೆ ಜ್ಞಾನಸಾಧನಗಳು(ಅನುಪ್ರಮಾಣಗಳು) ಪ್ರತ್ಯಕ್ಷ-ಅನುಮಾನ ಮತ್ತು ಆಗಮಗಳೆಂಬ ಮೂರು ಮಾತ್ರವೆಂಬ ತತ್ವವಾದಿಗಳ ನಿರ್ಣಯವು ಸಾಧುವೆಂದು ಸಿದ್ಧವಾಗುತ್ತದೆಂಬುದು ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ.

*

ನೋಡೀ ಪ್ರಮಾಣಗಳಲ್ಲಿ ಪ್ರಾಬಲ್ಯವೆಂಬುದು ಬಾಹುಲ್ಯ ಮತ್ತು ಸ್ವಾಭಾವಿಕ ವೆಂಬುದಾಗಿ ಎರಡು ವಿಧಗಳಾಗಿದ್ದು ಇವೆರಡರಲ್ಲಿ ಸ್ವಭಾವ ಪ್ರಾಬಲ್ಯ ವೇ ಬಲಿಷ್ಠವಾದ ದ್ದು. ಉಪಜೀವ್ಯತ್ವ-ನಿರವಕಾಶತ್ವಾದಿಗಳು ಸ್ವಭಾವ ಪ್ರಾಬಲ್ಯ ಲಕ್ಷಣಗಳು. ಮತ್ತೊಂದಕ್ಕೆ ಆಶ್ರಯ ಅಥವಾ ಆಧಾರ ಭೂತವಾದುದು ಉಪಜೀವ್ಯ- ಆಶ್ರಯಿಸಿಕೊಂಡಿರುವುದು ಉಪಜೀವಕ. ಉಧಾ:- ಅನುಮಾನವು ಪ್ರತ್ಯಕ್ಷ ಮತ್ತು ಆಗಮಗಳನ್ನು ಅನುಸರಿಸಿಕೊಂಡೇ ಪ್ರಮಾಣವಾಗುವುದು. ಆದ್ದರಿಂದ ಅನುಮಾನವು ಉಪಜೀವಕ- ಪ್ರತ್ಯಕ್ಷ ಆಗಮಗಳು ಉಪಜೀವ್ಯಗಳು. ಅರ್ಥಾಂತರಕ್ಕೆ  ಎಡೆಗೊಡುವುದು ಸಾವಕಾಶತ್ವ- ಅದಕ್ಕೆ ಅವಕಾಶವಿಲ್ಲದಿರುವುದು ನಿರವಕಾಶತ್ವ. ಯಾಥಾರ್ಥ್ಯವು  ಅಂದರೆ ಪ್ರಾಮಾಣ್ಯವು ಜ್ಞಾನ ಮತ್ತು ಶಬ್ದಗಳಲ್ಲಿ ಪ್ರದಾನವು ( ಮುಖ್ಯವಾಗಿ ಇದ್ದೇ ಇರುತ್ತದೆ ) ಜ್ಞಾನವೆಂಬುದು, ಬಾಹ್ಯ ಮತ್ತು ಅನುಭವವೆಂದು ಎರಡು ವಿಧ.ಈ ಎರಡರಲ್ಲಿ ಅನುಭವವೇ ಬಲಿಷ್ಠವು.ಬಾಹ್ಯಜ್ಞಾನವು  ನಿರ್ದೋಷ ಪ್ರತ್ಯಕ್ಷಾದಿಗಳಿಂದ ಹುಟ್ಟಿದರೆ ಮಾತ್ರ ಪ್ರಮಾಣವು.ಅನುಪ್ರಮಾಣಗಳಲ್ಲಿ ಸ್ವಭಾವದಿಂದಲೇ ಆಗಮಕ್ಕೆ ಪ್ರಾಬಲ್ಯವು.ಉಪಜೀವ್ಯವಾದ ಅನುಭವಕ್ಕೆ ವಿರೋಧವಿಲ್ಲದಿದ್ದರೆ ಮಾತ್ರ ಅದರ ಪ್ರಾಬಲ್ಯವು. ಅನುಭವ ರೂಪದ ಜ್ಞಾನವೇ ಎಲ್ಲಾ ಪ್ರಮಾಣಗಳಿಗೂ ಉಪಜೀವ್ಯ. ಆದ್ದರಿಂದ ಸಾಕ್ಷಿ ಜ್ಞಾನವನ್ನು ವಿರೋಧಿಸುವ ಬಾಹ್ಯಜ್ಞಾನವು ಪ್ರಮಾಣವಾಗಲಾರದು.ಪ್ರತ್ಯಕ್ಷಾದಿಗಳಿಂದ ಹುಟ್ಟುವ ಸಂಶಯ-ವಿಪರೀತಜ್ಞಾನಗಳು,ಪ್ರಭಲ ಪ್ರಮಾಣಗಳಾದ ಆಗಮ ಮತ್ತು ಪರೀಕ್ಷಾ ನಿಶ್ಚಿತ ಸಾಕ್ಷಿಜ್ಞಾನಗಳಿಂದಲೇ ಪರಿಹಾರವಾಗುತ್ತವೆ. ಹಗ್ಗದಲ್ಲಿ ಹಾವೆಂದು ಭ್ರಮೆಯು ಪರೀಕ್ಷಾನಂತರ ಉಂಟಾಗುವ ಪ್ರಭಲ ಪ್ರತ್ಯಕ್ಷದಿಂದಲೇ ಪರಿಹಾರಗೊಳ್ಳುತ್ತದೆ.ದೋಷಯುಕ್ತವಾದ ನಾನಾ ಅನುಮಾನಗಳಿಗೆ ಪ್ರತ್ಯಕ್ಷದಿಂದಲೂ ಆಗಮದಿಂದಲೂ  ಬಾಧ ಉಂಟಾಗುತ್ತದೆ.ಆಗಮಗಳಲ್ಲಿ ಸಹ ಸಾವಕಾಶ ವಾಕ್ಯಗಳು ನಿರವಕಾಶ ವಾಕ್ಯಗಳಿಂದ ಬಾಧಿತವಾಗುತ್ತವೆ. ಈ ಹಿಂದೆ ಹೇಳಲಾದ ನಾನಾ ಶಬ್ಧವೃತ್ತಿಗಳನ್ನೂ, ವ್ಯಾಕರಣ ನಿರುಕ್ತ್ಯಾದಿ ವೇದಾಂಗಗಳನ್ನೂ ತಿಳಿಯದಿರುವುದೆಂಬ ಬುದ್ಧಿ ದೋಷದಿಂದ ಸಂಶಯ ಅಥವಾ ವಿಪರೀತ ಜ್ಞಾನವೂ, ಆಗಮಗಳಿಂದ ಉಂಟಾಗಬಹುದು. ಉಪಜೀವ್ಯವಾದ ಸಾಕ್ಷಿಜ್ಞಾನವನ್ನು ವಿರೋಧಿಸದಿದ್ದರೆ ಬಹು ಪ್ರಮಾಣಗಳುಳ್ಳದ್ದು ಕೆಲವು ಪ್ರಮಾಣಗಳು ವಿರೋಧವಿದ್ದರೂ, ಬಹು ಪ್ರಮಾಣಗಳ ಪ್ರಾಭಲ್ಯದಿಂದ ಪ್ರಾಮಾಣಿಕವೆನಿಸುತ್ತದೆಂಬುದಾಗಿ ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ.

*

[7:35 pm, 12/03/2022] Prasad Karpara Group: ನೋಡೀ ಈ ಅನುಮಾನ ವು ನಾನಾ ಅವಯವ ವಾಕ್ಯಗಳುಳ್ಳದೆಂದೂ ,ಎಷ್ಟು ಅವಯವಗಳಿಂದ ಅನುಮಿತಿ ಹುಟ್ಟುವುದೋ ಅಷ್ಟು ಮಾತ್ರದಿಂದ ಅನುಮಾನ ವು ಪೂರ್ಣಗೊಳ್ಳುವುದೆಂದೂ ಈ ಹಿಂದೆ ಹೇಳಲಾಗಿದ್ದು ಆ ಅನುಮಾನ ವು ಪ್ರಮಾಣವಾಗಲು ದೋಷರಹಿತವಾಗಿರಬೇಕು. ತಾರ್ಕಿಕರು ಈ ಅನುಮಾನದೋಷ ಗಳನ್ನು 23ವಿಧವೆಂದು ಹೇಳಿದ್ದು ಅವುಗಳೆಲ್ಲಾ ಮುಖ್ಯವಾಗಿ 1)ವಿರೋಧ 2)ಅಸಂಗತಿ 3)ನ್ಯೂನತೆ 4)ಆಧಿಕ್ಯ 5)ಸಂವಾದ 6)ಅನುಕ್ತಿ  ಈ 6 ದೋಷ ಗಳಲ್ಲಿಯೇ ಅಂತರ್ಭಾವಗೊಳ್ಳುತ್ತವೆಯೆಂದು ನಿರ್ಧರಿಸಿದ್ದಾರೆ.

    ಈ ಮೇಲಿನ ದೋಷಗಳಲ್ಲಿ ವಿರೋಧ ವೆಂಬುದು ಬಹುಪ್ರಭೇದಗಳುಳ್ಳದ್ದಾಗಿದ್ದು ಇದು ಜಾತಿ ಮತ್ತು ನಿಗ್ರಹಸ್ಥಾನಗಳೆಂದು ಕರೆಯಲ್ಪಟ್ಟರೂ ವಿರೋಧವೇ ಹೆಚ್ಚಾಗಿ ಜಾತಿ ಎಂದು ಹೇಳಲ್ಪಡುತ್ತದೆ. ಸ್ವಪಕ್ಷವನ್ನು ಸಾಧಿಸುವ ಅಥವಾ ಪರಪಕ್ಷವನ್ನು ದೂಷಿಸುವ ಅಂದರೆ ನಿರಾಕರಿಸುವ ಸಂಕಲ್ಪಕ್ಕೆ ಭಂಗವುಂಟಾಗುವುದೇ ಪರಾಜಯ ವೆನಿಸುತ್ತದೆ. ಪರವಾದ ವನ್ನು ಖಂಡಿಸುವುದು ನಿಗ್ರಹ ವಾಗಿದ್ದು ಖಂಡನೆಗೆ ನಿಮಿತ್ತವಾಗುವ ದೋಷಗಳು ನಿಗ್ರಹಸ್ಥಾನಗಳೆನಿಸುವುವು. ಇವು ಸಾಕ್ಷಾದ್ದೋಷ ಮತ್ತು ವಾಚನಿಕ ದೋಷ ಗಳೆಂಬ ಎರಡು ವಿಭಾಗಗಳಲ್ಲಿ ಸೇರುತ್ತವೆ. ಈ ವಿರೋಧ-ಅಸಂಗತಿಗಳು ಮೊದಲಿನ ವಿಭಾಗದಲ್ಲಿಯೂ, ನ್ಯೂನತೆ-ಆಧಿಕ್ಯಗಳು ಎರಡನೆಯ ವಿಭಾಗದಲ್ಲಿಯೂ ಅಡಕವಾಗುತ್ತವೆ. ಇವುಗಳಲ್ಲಿ ಯಾವುದೊಂದು ಅಥವಾ ಹೆಚ್ಚು ದೋಷಗಳಿಂದ ಕೂಡಿದ ವಾದ(ತರ್ಕ)ವು ಸಂವಾದ ಮತ್ತು ಅನುಕ್ತಿಗಳೆಂಬ ದೋಷಕ್ಕೆಡೆಯಿತ್ತರೆ ದುಷ್ಟಾನುಮಾನವೆನ್ನಿಸುತ್ತದೆ.

ವಿರೋಧವೆಂಬುದು ಬಹುಪ್ರಕಾರವಾಗಿದ್ದು ಬಂಜೆಯ ಮಗ ಎಂಬಲ್ಲಿ ಸ್ವವಚನ ವಿರೋಧವಿದೆ. ಬಂಜೆ ಯಾದವಳು ತಾಯಿ ಯಾಗಲು ಶಕ್ಯವಿಲ್ಲ. ಒಬ್ಬಾಕೆಯು ಬಂಜೆ ಮತ್ತು ತಾಯಿ ಯೂ ಆಗಿರುವಳೆಂಬುದು ವಿರುದ್ಧ ನುಡಿ. ಮತ್ತು ಮೂಕನು ಹೇಳುವ ಕಥೆ ಎಂಬಲ್ಲಿ ಸ್ವಕ್ರಿಯಾ ವಿರೋಧವಿದೆ. ಮಾತನಾಡುವುದು ಈ ಮೂಕತ್ವ ಕ್ಕೆ ವಿರುದ್ಧವಾದ ಕ್ರಿಯೆ ಇತ್ಯಾದಿ ಅಸಮಂಜಸ್ಯವೇ ವಿರೋಧ ವು-ಅನ್ವಯಗೊಳಿಸಲು ಶಕ್ಯವಲ್ಲದ ಮಾತುಗಳು.ಅಸಂಗತಿ ಎಂದರೆ ವಾದಿ ಯು ಹೇಳುವ ವಾಕ್ಯಕ್ಕೆ ಅವನಿಗೆ ಸಮ್ಮತವಲ್ಲದ ಅರ್ಥವನ್ನು ತೋರಿಸಿ ಅವನ ಉದ್ದೇಶಕ್ಕೆ ಭಂಗವನ್ನುಂಟುಮಾಡುವುದು. ಇದನ್ನು ಛಲ ವೆಂದೂ ಕರೆಯುವುರು. ಹಸು ವನ್ನು ಹಿಡಿದುಕೊಂಡು ಬಾ ಎಂಬ ಅಭಿಪ್ರಾಯದಿಂದ ಗಾಮಾನಯ ಎಂದರೆ ಗೋ ಶಬ್ದಕ್ಕೆ ಭೂಮಿ ಎಂಬರ್ಥವೂ ಇರುವುದರಿಂದ ಗೋ ತರುವುದು ಅಶಕ್ಯವೆಂದು ಹೇಳುವುದು ಅಸಂಗತಿ ದೋಷವನ್ನು ತೋರಿಸಿದಂತೆ ವಾಕ್ಛಲ ವೆಂದೂ ಇದನ್ನು ಕರೆಯಬಹುದಾಗಿದೆಯೆಂಬುದಾಗಿ ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ.

*

ನೋಡೀ ಈ ಅನುಮಾನ ದೋಷಗಳಲ್ಲಿ ಈ ನ್ಯೂನತೆ ಯೂ ಒಂದು. ಇದು ಹೇಳಲು ಅಪೇಕ್ಷಿತವಾದ ಅರ್ಥವನ್ನು  ಪೂರ್ಣಗೊಳಿಸದೇ ಇರುವ ದೋಷ.---

"ಪರ್ವತವು  ಹೊಗೆಯಿರುವುದರಿಂದ" ಎಂದು ಮಾತ್ರ ಹೇಳುವಂತೆ.


ಇನ್ನು ಆಧಿಕ್ಯ ಈ ದೋಷವೆಂದರೆ ಆಕಾಂಕ್ಷಾ ಪೂರ್ತಿ ಗೊಳಿಸುವುದುಕ್ಕಿಂತ ಹೆಚ್ಚು ಹೇಳುವುದು.---


"ಪರ್ವತದಲ್ಲಿ ಅಗ್ನಿಯಿದೆ-ಹೊಗೆ ಇರುವುದರಿಂದ-ಪ್ರಕಾಶ ವಿಶೇಷವಾಗಿರುವುದರಿಂದ ಸಹ‌ ಎಂಬಂತೆ"


  ಇನ್ನು ಸಂವಾದ ಇದು ವಿವಾದಕ್ಕೆ ವಿಷಯವಾದ ಪ್ರಮೇಯವನ್ನು  ಪರನು ಹೇಳಿದಂತೆ ಒಪ್ಪಿಕೊಳ್ಳುವುದು.

ಇನ್ನು ಅನುಕ್ತಿ ಎಂದರೆ ಪರೋಕ್ತಿಯನ್ನು ಎದುರಿಸಿ ಮುಂದೇನೂ ಮಾತನಾಡಲಾರದೇನೇ ಅಂದರೆ ಪ್ರತ್ಯುಕ್ತಿಯನ್ನು ಹೇಳಲು ಅಸಮರ್ಥವಾಗಿ ಸುಮ್ಮನೆ ಕೂಡೋದು ಎಂಬುದಾಗಿ ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ.

*

ನೋಡೀ ದೋಷರಹಿತವಾದ ಶಬ್ಧವೇ ಆಗಮ ವು. ಈ ಆಗಮವಾದರೂ ನಿತ್ಯ ಮತ್ತು ಅನಿತ್ಯ ವೆಂದು ಎರಡು ವಿಧವಾಗಿದೆ.

ಸರ್ವವೇದಗಳು ನಿತ್ಯ ವಾಗಿದ್ದು ಅಪೌರುಷೇಯ ಗಳೂ ಕೂಡಾ- ಆತ ಏವ ಸ್ವತಃ ಪ್ರಮಾಣಗಳು. ಇನ್ನು ಪುರಾಣಗಳು -ಧರ್ಮಶಾಸ್ತ್ರಾದಿ ಪುರುಷಕೃತವಾದ ಶಬ್ಧರಾಶಿಗಳೆಲ್ಲವೂ ಅನಿತ್ಯ ವಾಗಿದ್ದು ಪೌರುಷೇಯಾಗಮಗಳೆನ್ನಿಸುತ್ತವೆ. ಇವುಗಳಲ್ಲಿ ದೋಷಗಳಿರಬಹುದಾದ ಪ್ರಸಕ್ತಿಯಿದ್ದು ಇವುಗಳೂ ಕೂಡಾ ಪ್ರಮಾಣವಾಗಲು ಇವುಗಳನ್ನು  ರಚನೆಮಾಡುವವನು ಆಪ್ತ ನಾಗಿರಬೇಕೆಂಬುದು ಇಂದಿನ ಹರಿದಿನದ ಸದ್ವಿಚಾರದ ಸಂದೇಶವಾಗಿದೆ.

*

ನೋಡೀ ಈ ಅನುಮಾನ ದ ಮುಖ್ಯ ದೋಷಗಳಾದ ವಿರೋಧ, ಅಸಂಗತಿ, ನ್ಯೂನತೆ ,ಆಧಿಕ್ಯ, ಸಂವಾದ ಹಾಗೂ ಅನುಕ್ತಿ ಗಳಲ್ಲಿ ನ್ಯೂನತೆ-ಆಧಿಕ್ಯ ಗಳು ಕೇವಲ ವಾಚನಿಕ (ಶಬ್ಧಪ್ರಯೋಗ) ದೋಷ ಗಳೆಂದು ಮತ್ತು ಸಂವಾದ ಮತ್ತು ಅನುಕ್ತಿ ಗಳೇ ಪರಾಜಯವನ್ನು ನಿಶ್ಚಯಿಸುವ (ವಕ್ತೃಗತ) ದೋಷಗಳೆಂದೂ ಕಂಡುಬರುತ್ತದೆ. ಅನುಮಾನ ಗಳಿಗೆ ನೇರವಾಗಿ ಸಂಬಂಧಪಡುವ ದೋಷಗಳೆಂದರೆ ವಿರೋಧ ಮತ್ತು ಅಸಂಗತಿ ಗಳು ಮಾತ್ರವೇ. 

ಸಂವಾದ ಮತ್ತು ಅನುಕ್ತಿ ಗಳೇ ನಿಗ್ರಹಸ್ಥಾನಗಳೆಂದು ಕರೆಯುವುದು ಅನ್ವರ್ಥವು. ಇವುಗಳಿಂದ ಸಹಿತವಾದ ವಿರೋಧಾದಿ ದೋಷಗಳೇ ನಿಗ್ರಹಸ್ಥಾನಗಳೆಂಬುದಾಗಿ ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ.

*

ನೋಡೀ ಈ ಶಾಬ್ಧಜ್ಞಾನ(ಶಬ್ಧದಿಂದಾಗುವ ಜ್ಞಾನ) ವು  ಪ್ರಮಾಣವಾಗಿಬೇಕಾದರೆ ಆ ಶಬ್ಧವು ಅಪೌರುಷೇಯವಾಗಿರಬೇಕು ಅಥವಾ ಅದನ್ನು ಮೊದಲು ಉಚ್ಛರಿಸಿದವನು ಅಂದರೆ ಹೇಳಿದವನು ಆಪ್ತ ನಾಗಿರಬೇಕು. ಪೌರುಷೇಯಾಗಮಗಳ ಪ್ರಾಮಾಣ್ಯವು‌ ಈ ಆಪ್ತತ್ವವನ್ನೇ ಹೆಚ್ಚಾಗಿ ಅವಲಂಭಿಸಿದೆ.

 ಈ ಆಪ್ತತ್ವ ದ ಲಕ್ಷಣಗಳು ಹೀಗಿವೆ--

• ವಿವಿಕ್ಷಿತಾರ್ಥ ತತ್ವಜ್ಞಾನ ವಿರಬೇಕು. ಅಂದರೆ ಹೇಳಬೇಕೆಂದಿರುವ ವಿಷಯ-ವಸ್ತು ಅಥವಾ ಅರ್ಥದ ಯತಾರ್ಥವಾದ ಜ್ಞಾನವಿರೋದು.

• ಹೇಳಬೇಕೆಂಬ ಇಚ್ಛೆಯಿರೋದು

• ಇಂದ್ರಿಯಪಾಟವಿರೋದು

• ಕೇಳುವವನನ್ನು  ವಂಚಿಸುವ ಅಭಿಪ್ರಾಯವಿರದೇ ಇರೋದು.

ಇದುವೇ ಇಂದಿನ ಸದ್ವಿಚಾರದ ಸಂದೇಶವಾಗಿದೆ.

***

ವಕ್ತಾರನು ಪೂರ್ವೋಕ್ತ( ಹಿಂದಿನ ಸದ್ವಿಚಾರದಲ್ಲಿ ಹೇಳಿದ) ದೋಷಗಳಿಲ್ಲದ ಆಪ್ತ ನಾಗಿದ್ದರೂ ಅವನ ವಾಕ್ಯಗಳು ಪ್ರಮಾಣವಾಗಬೇಕಾದರೆ ಶ್ರೋತ್ರಾನುಕೂಲ್ಯ ಮತ್ತು ಸಂದರ್ಭಾನುಕೂಲ್ಯಗಳೂ ಇರಬೇಕು.‌ ಶ್ರೋತೃ ಅಂದರೆ ಕೇಳುಗನಲ್ಲಿಯೂ ಸಹ ಇಂದ್ರಿಯಪಾಟವ, ತಿಳಿದುಕೊಳ್ಳುವ ತವಕ ಹಾಗೂ ಆ ವಿಷಯದ ಆದರಗಳಿರಬೇಕು ಅಲ್ಲದೇ ಆತ ವಿಷಯವನ್ನು ಗ್ರಹಿಸುವ ಸಾಮರ್ಥ್ಯವೂ ಇರಬೇಕು.

ಈಗ ಶ್ರೀಮದ್ಭಗವದ್ಗೀತಾರಹಸ್ಯ ಪ್ರಮೇಯಗಳನ್ನು ಚಿಕ್ಕಬಾಲಕನು ಹೇಗೆ ತಾನೇ ಗ್ರಹಿಸಬಹುದು ತಾನೇ? ಅಲ್ಲದೇ ಅವನಿಗೆ ಪ್ರಾಮಾಣ್ಯಬುದ್ಧಿಯಾದರೂ ಹೇಗೇ ಹುಟ್ಟೀತಲ್ಲವೇ.? 

ಹೀಗೆಯೇ‌ ಉಪದೇಶ ಮಾಡಿದ ಸಂದರ್ಭವೂ ಯೋಗ್ಯವಾಗಿರಬೇಕು. ವಿವಿಧ ಜನರಿಂದ ತುಂಬಿದ ಒಂದು ರೈಲೋ ಅಥವಾ ಬಸ್ಸಿನಲ್ಲಿ ಅನೇಕರು ಅನೇಕಾನೇಕ ವಿಷಯಗಳನ್ನು ಪರಸ್ಪರ ಮಾತನಾಡುತ್ತಾ ಬಹುಗಲಾಟೆಯಲ್ಲಿರುವ‌ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಶಾಸ್ತ್ರವಿಷಯಕ್ಕೆ ಪ್ರಶ್ನಿಸಿದರೆ ಹೇಳುವವನು ಆಪ್ತನಾಗಿದ್ದ ರೂ ಕೂಡಾ ಆ ಸಂದರ್ಭದಲ್ಲಿ ಅವನ ಮಾತು ಪ್ರಮಾಣವಾಗಿ ಲಾರದು.‌ಸಂದರ್ಭವನ್ನು ಗಮನಿಸಿ ವಿಷಯಾಂತರ ನನ್ನು ಸಾಧಿಸಲು ಮೊಟುಕು ಉತ್ತರವನ್ನು ಕೊಡುತ್ತಾನೆ. ಅಂದರೆ ಸಂದರ್ಭವು ಯೋಗ್ಯವಾಗಿಲ್ಲರೆ ಆಪ್ತನ ವಾಕ್ಯಗಳು ಪ್ರಮಾಣವಾಗುತ್ತವೆ.ಇತಿಹಾಸ-ಪುರಾಣಾದಿ ಪೌರುಷೇಯಾಗಮಗಳಲ್ಲಿ ನಿರೂಪಿಸಲ್ಪಡುವ ನಾನಾ ಅರ್ಥಗಳ ಪ್ರಮಾಣವನ್ನು ತಿಳಿಯಲು ಅವು ಯಾರು ತಮ್ಮ ಯಾರಿಗೆ ಯೋನಿ ಸಂದರ್ಭದಿ ಹೇಳಲ್ಪಟ್ಟಿವೆಯೆಂಬುದನ್ನು ವಿಶೇಷವಾಗಿ ಅಲ್ಲಿ ಗಮನಿಸಲೇಬೇಕು. ವೇದವಾಕ್ಯಗಳ ತಾತ್ಪರ್ಯವನ್ನು ಅಂದರೆ ಯಥಾರ್ಥಜ್ಞಾನವನ್ನು ಗ್ರಹಿಸಲು ಅವಶ್ಯಕವಾದ ಉಪಕ್ರಮಾದಿ ತಾತ್ಪರ್ಯ ಲಿಂಗಗಳ ಜ್ಞಾನವೂ, ಪೌರುಷೇಯಾಗಮಗಳ ಯಥಾರ್ಥಜ್ಞಾನಕ್ಕೂ ಅವಶ್ಯಕವಾಗುತ್ತದೆ. ತಾತ್ಪರ್ಯ ಲಿಂಗಗಳ ಜ್ಞಾನಾಭಾವದಿಂದ ಆಗಮ ಪ್ರಾಮಾಣ್ಯವು ಸಂಶಯಗ್ರಸ್ಥವಾಗುತ್ತದೆ. ಆದ್ದರಿಂದ ಈ ಜ್ಞಾನಾಭಾವವೂ ಅಪ್ರಾಮಾಣ್ಯ-ಕಾರಣವಾದ ಒಂದು ದೋಷವೆಂದೇ ತಿಳಿಯಬಹುದಾಗಿದೆಯೆಂಬುದು ಇಂದಿನ ದಿನದ ಸದ್ವಿಚೋರದ ಸಂದೇಶವಾಗಿದೆ.

***

ಉಪಕ್ರಮ, ಉಪಸಂಹಾರ, ಅಭ್ಯಾಸ, ಅಪೂರ್ವತೆ, ಫಲ, ಅರ್ಥವಾದ, ಉಪಪತ್ತಿ ಗಳೆಂಬುವು ತಾತ್ಪರ್ಯ ಲಿಂಗಗಳು. ಅಂದರೆ ತಾತ್ಪರ್ಯ (ನಿಜವಾದ ಅಭಿಪ್ರಾಯ) ವನ್ನು ತಿಳಿಸುವ ಕಾರಣಗಳು.ಇವಗಳ ಬಲಾಬಲಗಳನ್ನೂ ಕೂಡಾ ತಿಳಿಯಬೇಕು.ಉಕ್ತಕ್ರಮದಲ್ಲಿ  ಉತ್ತರೋತ್ತರ ಲಿಂಗವು (ಮುಂದೆ ಮುಂದಿನದು) ಬಲಿಷ್ಠವು.ಯಾವುದೊಂದು ವಿಷಯ ನಿರೂಪಣೆಯ ಭಾಗವು ಹೇಗೆ ಆರಂಭವಾಗಿದೆ ಮತ್ತು ‌ಹೇಗೆ ಪರಿಸಮಾಪ್ತಿಗೊಂಡಿದೆಯೆಂಬುದನ್ನು ಗಮನಿಸಬೇಕು. ಇದರಿಂದ ಪ್ರಕರಣ ಪ್ರತಿಪಾದ್ಯ ವಿಷಯದ ನಿಜವಾದ ಭಾವವನ್ನು ತಿಳಿಯಲು ಸಹಾಯವಾಗುತ್ತದೆ. ಇದು ಉಪಕ್ರಮೋಪಸಂಹಾರ ರೂಪದ ಲಿಂಗವು. ಇನ್ನು ಅಭ್ಯಾಸ ವೆಂದರೆ ಒಂದೇ ಅರ್ಥವುಳ್ಳ ಪದವನ್ನು ಪುನಃ ಪುನಃ ಬಳಸಿರುವುದು. ಅಪೂರ್ವತಾ ಅಂದರೆ ಇತರ ಪ್ರಾಣಿಗಳಿಂದ ವಿಶೇಷವಾಗಿ ತಿಳಿಯದ ಅರ್ಥವನ್ನು ಹೇಳುವುದು. ಫಲ ಅಂದರೆ ಫಲ ಅಂದರೆ ಪ್ರಕರಣಾರ್ಥಕ್ಕೆ ಹೇಳಿರುವ ಫಲ; ಅರ್ಥವಾದ ವೆಂಬುದು ಸ್ತುತಿ-ನಿಂದಾ-ಪರಕೃತಿ-ಪುರಾಕಲ್ಪಗಳೆಂದು ನಾಲ್ಕು ವಿಧವಾದ ನಿರೂಪಣೆಗಳುಳ್ಳದ್ದು. ಈ ಸ್ತುತಿ ಅಂದರೆ ಗುಣಪ್ರಶಂಸೆ , ನಿಂದಾ ಅಂದರೆ ದೋಷಹೇಳುವದು , ಪರಕೃತಿ ಅಂದರೆ ಇಂಥವರು ಹಿಂದೆ ಹೀಗೀಗ ಮಾಡಿದರೆಂದು ಹೇಳುವುದು, ಪುರಾಕಲ್ಪ ಅಂದರೆ ಸಾಮಾನ್ಯವಾಗಿ (ಹೆಸರು ಮುಂತಾದ ವಿವರಣೆಗಳಿಲ್ಲದೇ) ಹಿಂದಿನವರ ಕಥೆಗಳನ್ನು ಹೇಳುವುದು.‌ತಾತ್ಪರ್ಯವನ್ನು ಸಾಧಿಸಲ್ಪಡುವ ಈ ಲಿಂಗಗಳು ಅನುಮಾನ(ಅನುಪ್ರಮಾಣ) ದಲ್ಲಿಯೇ ಅಡಕವಾಗುತ್ತವೆಂಬುದು ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ.

***

ಈ ಪೌರುಷೇಯಾಗಮ ಗಳ ಪ್ರಾಮಾಣ್ಯವನ್ನು , ಶಬ್ಧದೋಷಗಳ ಅಭಾವ- ಆಪ್ತಪ್ರಣೀತತ್ವ ಮೊದಲಾದವುಗಳಿಂದಲೂ ಮುಖ್ಯವಾಗಿ ವೇದಾನುಸಾರಿತ್ವ ಲಕ್ಷಣ ದಿಂದಲೂ ನಿರ್ಧರಿಸಿಕೊಳ್ಳಬೇಕು. ನಿರ್ದುಷ್ಟಪ್ರಮಾಣಗಳಾದ ವೇದಗಳು  ಈಶ್ವರಾದಿ ಅತೀಂದ್ರಿಯ ವಸ್ತು-ವಿಷಯದಲ್ಲಿ ಹೇಳುವ ಪ್ರಮೇಯಗಳನ್ನು , ಯಾವ ಪ್ರಕಾರದಿಂದಲೂ ವಿರೋಧಿಸದಿರುವುದೇ ವೇದಾನುಸಾರಿತ್ವ ವು. ಹೀಗೆ ನಿರ್ದುಷ್ಪವಾದ *ಪೌರುಷೇಯಾಗಮ ಗಳು ಅಪೌರುಷೇಯ ವೇದಾರ್ಥಗಳನ್ನು ತಿಳಿಯಲು ಬಹುಪ್ರಕಾರದಿಂದ ಸಹಾಯಮಾಡುತ್ತವೆ. ನಿತ್ಯಾನಿತ್ಯ ಆಗಮಗಳಿಂದ ಜ್ಞಾನಲಾಭವನ್ನು ಪಡೆಯಲೆತ್ನಿಸುವ ಜೀವ ರು ಬಹು ಭಿನ್ನ ಯೋಗ್ಯತೆಯುಳ್ಳವದಾದ್ದರಿಂದ ಪೌರುಷೇಯಾಗಮ (ಪುರಾಣ) ಗಳಲ್ಲಿ ಬಹುಪ್ರಕಾರದ ವಿಷಯ ನಿರೂಪಣೆಯ ಕಂಡುಬರುತ್ತದೆ. ಅವುಗಳಿಂದ ಯಥಾರ್ಥ-ಸಂಶಯ-ವಿಪರೀತ ಜ್ಞಾನಗಳುಂಟಾಗಲು ಅವಕಾಶವಿರುತ್ತದೆ. ಇವುಗಳಲ್ಲಿ ವಿಶೇಷವಾಗಿ ವೇದಾನುಸಾರಿತ್ವ, ವೇದಾನು-ಸಾರಿ-ವೇದವಿರುದ್ಧಗಳ ಮಿಶ್ರಣ ಮತ್ತು ಪ್ರಚುರ ವೇದವಿರೋಧಿತ್ವಗಳೆಂಬ ಲಕ್ಷಣಗಳಿಂದ ಮೂರು ದೊಡ್ಡ ಪಂಗಡಗಳು ಏರ್ಪಡುತ್ತವೆ. ಪುರಾಣಗಳನ್ನು ಸಾತ್ವಿಕ-ರಾಜಸ-ತಾಮಸ ಗಳೆಂದು ವಿಭಾಗಿಸಿರುವುದಾದರೂ  ಈ ಕಾರಣದಿಂದಲೇ ಎಂದು ತಿಳಿಯಬಹುದಾಗಿದೆ. "ಇತಿಹಾಸ ಪುರಾಣಾಭ್ಯಾಂ ವೇದ ಸಮುಪಬೃಂಹಯೇತ್" ಎಂಬ ವೇದವಾಕ್ಯದಲ್ಲಿ ಪುರಾಣಶಬ್ಧದಿಂದ ವೇದಾನುಸಾರಿತ್ವವುಳ್ಳ ಸಾತ್ವಿಕಪುರಾಣಗಳನ್ನೇ ಗ್ರಹಿಸಬೇಕೆಂಬುದೂ ಸ್ಪಷ್ಟವೇ‌. ಈ ಕಾರಣದಿಂದಲೇ ಇತಿಹಾಸಪುರಾಣಗಳನ್ನು ಪಂಚಮವೇದ ವೆಂದು ನಮ್ಮ ಪ್ರಾಚೀನರು ಗ್ರಹಿಸಿ ರೋಡು.ಋಗಾದಿ ವೇದಗಳಿಗೆ ಅಪೌರುಷೇಯತ್ವ-ಸ್ವತಃ ಪ್ರಾಮಾಣ್ಯಗಳನ್ನು ಅಂಗೀಕರಿಸಿದವರು , ಪೌರುಷೇಯಾಗಮಗಳಲ್ಲಿ ತಾವು ಒಪ್ಪುವ ಆಗಮಕ್ಕೆ ಅಥವಾ ಆಗಮಗಳಿಗೆ ಪ್ರಾಮಾಣ್ಯವನ್ನು ಸಾಧಿಸುವುದು ದುಃಸಾಧ್ಯವೇ ಸರಿ. ಆದ್ದರಿಂದ ವೇದಪ್ರಾಮಾಣ್ಯವನ್ನು  ವಿಮರ್ಶೆಯಿಂದ ನಿಶ್ಚಯಿಸಿಕೊಳ್ಳುವುದು ಅತ್ಯವಶ್ಯವಾಗಿದೆಯೆಂಬುದು ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ.

***

ಈ ವೇದ ಪ್ರಾಮಾಣ್ಯ ವನ್ನು ಅಂಗೀಕರಿಸುವುದು ಆಸ್ತಿಕ್ಯ ದ ಪ್ರಧಾನ ಲಕ್ಷಣವಾಗಿದ್ದು ಈಶ್ವರ , ಜೀವ, ಧರ್ಮಾಧರ್ಮ ಗಳು ಮೊದಲಾದ ಅತೀಂದ್ರಿಯ ವಸ್ತು-ವಿಷಯಕ ಯಥಾರ್ಥ ಜ್ಞಾನವು ವೇದ ಗಳಿಂದಲೇ ಹೊರತು ಅನ್ಯ ಜ್ಞಾನಸಾಧನಗಳಿಂದ ದೊರೆಯದು.ಯಾವ ಪ್ರಕಾರದ ದೋಷಗಳೂ ಇಲ್ಲದ ವೇದ ಗಳಿಂದ ಮಾತ್ರ ಲಭ್ಯವೆಂದು ಹೇಳಲಾದರೂ ಕೂಡಾ ವೇದ ಗಳ ನಿರ್ದೋಷತ್ವವು ಹೇಗೆ ಸಿದ್ಧವಾಗುತ್ತದೆಂಬುದನ್ನು ತಿಳಿಸಿಕೊಡುವುದು ಮಾತ್ರ ಸುಲಭವಲ್ಲ. ವೇದ ಪ್ರಾಮಾಣ್ಯ ವನ್ನು ವೇದವಾಕ್ಯ ಗಳಿಂದಲೇ ಸಾಧಿಸಲಾಗುತ್ತದೆಂಬುದು ಯುಕ್ತಿ-ಯುಕ್ತವಾಗುವುದಿಲ್ಲ. ಪ್ರತ್ಯಕ್ಷ-ಅನುಮಾನಗಳಿಂದಲೂ ಸಾಧಿಸಲು ಬರುವುದಿಲ್ಲವೆಂಬುದು ಇಂದಿನ ದಿನದ ಸದ್ವಿಚಾರ ದ ಸಂದೇಶವಾಗಿದೆ.

ವೇದಪ್ರಾಮಾಣ್ಯವನ್ನು ಸಾಧಿಸುವದೆಂತೆಂಬುದರ ವಿಮರ್ಶೆ ಮುಂದಿನ ಸದ್ವಿಚಾರದಲ್ಲಿ.

***


ಎಲ್ಲಾ ಜ್ಞಾನಗಳನ್ನು ಗ್ರಹಿಸುವದು ಸಾಕ್ಷಿ ಯು.ನೇರವಾಗಿ ಅಥವಾ ಪ್ರತ್ಯಕ್ಷಾದಿ ಜ್ಞಾನಸಾಧನಗಳ ದ್ವಾರಾ, ಉಂಟಾಗುವ ಎಲ್ಲ ಜ್ಞಾನವೂ ಸಾಕ್ಷಿ ಗೇ ಅಂದರೆ‌ ಆತ್ಮ ನಿಗೇ- ಇದರರ್ಥ ಜ್ಞಾನವನ್ನು ಗ್ರಹಿಸುವವನು ಆತ್ಮ ನೇ. ಜ್ಞಾನವನ್ನು ಗ್ರಹಿಸುವ ಸಾಕ್ಷಿ ಯು, ಆ ಜ್ಞಾನದ ಪ್ರಾಮಾಣ್ಯವನ್ನೂ ಗ್ರಹಿಸುತ್ತಾನೆ. ಜ್ಞಾನಕ್ಕೆ ಪ್ರಾಮಾಣ್ಯವು ಸ್ವತಃ- ಅಪ್ರಾಮಾಣ್ಯವು ಪರತಃ ಎಂದು ಈಗಾಗಲೇ ಹೇಳಲಾಗಿದ್ದು ಸಂಶಯ-ಭ್ರಮರೂಪ ಜ್ಞಾನಗಳನ್ನೂ ಸಾಕ್ಷಿಯೇ ಗ್ರಹಿಸುವನಾದರೂ ಪ್ರಾಮಾಣ್ಯವನ್ನು ಪರೀಕ್ಷಿಸಿಯೇ ನಂತರ ಗ್ರಹಿಸುತ್ತಾನೆ. ತತ್ಪೂರ್ವದಲ್ಲಿ ಆ ಜ್ಞಾನಗಳಲ್ಲಿನ ಯಥಾರ್ಥ ಭಾಗವನ್ನು ಮಾತ್ರ (ವಸ್ತುವಿನ ಅಸ್ತಿತ್ವಾದಿ ಯಥಾರ್ಥಾಂಶವನ್ನು) ಗ್ರಹಿಸಿರುತ್ತಾನೆ. ಏವಂ ಚ ಜ್ಞಾನಗ್ರಾಹಕನೇ ಅದರ ಪ್ರಾಮಾಣ್ಯವನ್ನೂ ಗ್ರಹಿಸುತ್ತಾನೆಂದು ಹೇಳದೇ ಜ್ಞಾನದ ಪ್ರಾಮಾಣ್ಯವನ್ನು ಸಾಕ್ಷಿ ಭಿನ್ನ ಅನ್ಯಪ್ರಮಾಣದಿಂದಲೇ ತಿಳಿಯಬೇಕೆಂದರೆ ಅಲ್ಲಿ ಅನವಸ್ಥೆಯುಂಟಾಗುತ್ತದೆ.  ಪ್ರತ್ಯಕ್ಷಜನ್ಯ ಜ್ಞಾನದ ಪ್ರಾಮಾಣ್ಯವನ್ನು ಅನುಮಾನದಿಂದಲೋ ಅಥವಾ ಮತ್ತೊಂದು ಪ್ರಮಾಣದಿಂದಲೋ ತಿಳಿಯಬೇಕೆಂದರೆ ಪ್ರತ್ಯಕ್ಷವನ್ನು ಪ್ರಮಾಣವೆಂದು  ಹೇಳುವುದು ಅರ್ಥವಿಲ್ಲದ ಮಾತೇ ಆಗುತ್ತದೆ. ಅನುಮಾನ ಜನ್ಯವಾದ ಅನುಮಿತಿಯ ಪ್ರಾಮಾಣ್ಯವನ್ನು ಮತ್ತೊಂದು ಪ್ರಮಾಣದಿಂದ ತಿಳಿಯಬೇಕಾಗುವುದು.ಆ ಮತ್ತೊಂದು ಪ್ರಮಾಣವೆಂಬುದರ ಪ್ರಾಮಾಣ್ಯವನ್ನು ಇನ್ನೊಂದು ಪ್ರಮಾಣದಿಂದ ತಿಳಿಯಬೇಕೆಂದು ಪ್ರಾಪ್ತವಾಗಿ ಅನವಸ್ಥೆ ಯೇ ಬರುತ್ತದೆ. ಪ್ರಾಮಾಣ್ಯವು ಅನುಮಾನದ ಆಧೀನವಲ್ಲ. ಜನ್ಯಜ್ಞಾನವನ್ನು ‌ಸಾಕ್ಷಿಗೆ ಮುಟ್ಟಿಸುವ  ಬುದ್ಧಿಯು (ಮನಸ್ಸು) ದೋಷರಹಿತವಾದರೆ ಸಾಕ್ಷಿಯು ಪ್ರಾಮಾಣ್ಯವನ್ನು ಸುಲಭವಾಗಿ ಗ್ರಹಿಸುತ್ತಾನೆ. ಅನುಮಾನವು ಬುದ್ಧಿದೋಷವನ್ನು ಪರಿಹರಿಸಲು ಮಾತ್ರವೇ ಕಾರಣವಾಗಬಲ್ಲದು. ಆದ್ದರಿಂದ ವೇದಪ್ರಾಮಣ್ಯವನ್ನಾದರೂ ಈ ಸಾಕ್ಷಿ ಯೇ‌ ಗ್ರಹಿಸಬೇಕೆಂಬುದು ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ

*

by pasadacharya

***

ನೋಡೀ ಈ ವೇದಗಳು ಅಬೋಧಕತ್ವ, ವಿಪರೀತ ಬೋಧಕತ್ವಾದಿ ಶಬ್ಧದೋಷಗಳಿಂದ ರಹಿತವಾದವುಗಳೆಂದೂ ಪೂರ್ವೋಕ್ತ ಶಬ್ಧ ವೃತ್ತಿಗಳನ್ನೂ ಶಬ್ಧನಿಷ್ಪತ್ತಿ ಮೊದಲಾದ ಶಬ್ಧಶಾಸ್ತ್ರ ನಿಯಮಗಳನ್ನೂ ಬಲ್ಲ ಪುರುಷರಲ್ಲಿ ಅವು ನಿರೂಪಿಸುವ ವಿಷಯಗಳ ಯಥಾರ್ಥ ಜ್ಞಾನವನ್ನುಂಟುಮಾಡಲು ಸ್ವಯಂ ಸಮರ್ಥಗಳೇ ಆಗಿದ್ದು ಅಲ್ಲಿ  ಅನ್ಯಪ್ರಮಾಣಗಳ ಅವಶ್ಯಕತೆಯೇ ಇಲ್ಲ. ಅದುಷ್ಟ ಬುದ್ದಿಗಳಿಗೆ ಪ್ರಾಮಾಣ್ಯವು ಸ್ವತಃ ಏವ ಗ್ರಾಹ್ಯವಾಗುತ್ತದೆ. (ತಿಳಿಯುತ್ತದೆ) ಸಂಶಯವುಂಟಾದಾಗ ಸಹ ವೇದಪ್ರಾಮಾಣ್ಯವನ್ನು ಗ್ರಹಿಸಲು ಸಮರ್ಥನಾದ ಸಾಕ್ಷಿಗೆ ಅನ್ಯಪ್ರಮಾಣದ ಅವಶ್ಯಕತೆಯಿಲ್ಲ. ಬುದ್ಧಿ ದೋಷ ವೇ ಸಂಶಯಕ್ಕೆ ಕಾರಣ ಅದರ ಪರಿಹಾರವಾಯಿತೆಂದರೆ ಸಾಕ್ಷಿಯು ಪ್ರಾಮಾಣ್ಯವನ್ನು  ಗ್ರಹಿಸುತ್ತಾನೆ. ದೋಷಯುಕ್ತ ಬುದ್ಧಿಯುಳ್ಳವರಿಗೆ ಮಾತ್ರ ವೇದಗಳಲ್ಲಿ ಅಪ್ರಾಮಾಣ್ಯ ಶಂಕೆಯು. ಅಪ್ರಾಮಾಣ್ಯವೆಂದೇ ತಿಳಿಯುವವರಿಗೆ  ಆ ಪ್ರಾಮಾಣ್ಯವನ್ನು ತಿಳಿಸುವುದು ಸಾಕ್ಷಿ ಯೇ ಆಗಿದೇ ತಾನೇ? ಅಂದಾಗ ಪ್ರಾಮಾಣ್ಯವನ್ನು ಗ್ರಹಿಸುವ ಅದರ ಸಹಜಶಕ್ತಿಯು ನಷ್ಟವಾಗಿ ತದ್ವಿಪರೀತ ಶಕ್ತಿಯು ಹೇಗೆ ಉಂಟಾಗುವುದೆಂಬ ಪ್ರಶ್ನೆಯು ಯುಕ್ತವಾದುದಲ್ಲ.ನೋಡಿ ಈ  ವಿರುದ್ಧವಾದ ಶ್ರವಣಾದಿ ಸಹಕಾರಿ ಕಾರಣಗಳಿಂದ ಸಾಕ್ಷಿ ಯ ಸಹಜಶಕ್ತಿ ನಿರೋಧಿಸಲ್ಪಟ್ಟು ಒಂದು ವಿಪರೀತವಾದ ಶಕ್ತಿಯು ಅಂಕುರಿಸುತ್ತದೆಂದು ತಿಳಿಯಬಹುದು.‌ ಅಲ್ಲದೇ ಹೀಗಾಗುವುದು ಅಸಂಭಾವಿತವೇನೂ ಅಲ್ಲವೆಂಬುದಾಗಿ ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ.

***

ನೋಡೀ ಈ ಭರತಖಂಡ ದಲ್ಲಿ ಪ್ರಚಾರವಿರುವ ಸಕಲ ಆಸ್ತಿಕಮತಗಳಿಗೆ ಒಂದಲ್ಲ ಒಂದು ವಿಧದಲ್ಲಿ ಈ ನಮ್ಮ ಪ್ರಾಚೀನವಾದ ವೇದಗಳೇ ಆಧಾರವಾಗಿವೆ. ಎಲ್ಲಾ  ತತ್ವಜ್ಞಾನದ ಮೂಲಾಧಾರ ಗಳೆಂದೇ ಇವು ಭಾವಿಸಲ್ಪಟ್ಟಿವೆ. ವೇದಗಳು ಪರಮನಿತ್ಯವನ್ನೇ ಹೇಳುವ ನಿರ್ದುಷ್ಟವಾದ  ವಾಕ್ಯ ಸಮೂಹವೆಂಬ ನಂಬಿಕೆಯು ನಮ್ಮ ಭರತಖಂಡದ ಪ್ರಜೆ ಗಳಲ್ಲಿ ಬಹು ಪ್ರಾಚೀನಕಾಲದಿಂದ ದೃಢವಾಗಿಯೇ ಬೇರೂರಿದೆ. ಯಾರೊಬ್ಬನ ಮಾತಗಳನ್ನು ಪ್ರಮಾಣವಲ್ಲವೆಂದು ಆಕ್ಷೇಪಿಸುವಾಗ---

" ಅವನ ಮಾತುಗಳೇನು ವೇದವಾಕ್ಯವೋ?"

 ಎಂದು ಹೇಳೋದು ಈ ಕಾರಣದಿಂದಲೇ ಆಗಿದೆ.ಹೀಗಿದ್ದರೂ ಜಿಜ್ಞಾಸು ಪುರುಷ ಮೂಢನಂಬಿಕೆಯಿಂದ ಬಹುದೂರನಾಗಿರಬೇಕಾದುದು ಅತ್ಯವಶ್ಯಕವಾದ್ದರಿಂದ  ವೇದಪ್ರಾಮಾಣ್ಯ ವನ್ನು ಸಪ್ರಮಾಣವಾಗಿ ಸಯುಕ್ತಿಕವಾಗಿ ಸಾಧಿಸಿಕೊಂಡು ನಿಶ್ಚಯ ಬುದ್ಧಿಯನ್ನು ಹೊಂದಲೇಬೇಕು.ವೈಜ್ಞಾನಿಕಯುಗದಲ್ಲಿ ಇದರ ಅವಶ್ಯಕತೆಯನ್ನು ಎಷ್ಟು ಹೇಳಿದರೂ ಸ್ವಲ್ಪವೇ. ಯುಕ್ತಿ ಮತ್ತು ಲೋಕಾನುಭವ ಗಳ ಸ್ಥಾನವು ಈಗ ಉನ್ನತಮಟ್ಟಕ್ಕೆ ಏರಿಸಲ್ಪಟ್ಟಿದೆ.ವೇದಪ್ರಾಮಾಣ್ಯಕ್ಕೂ ವೇದಗಳಿಂದಲೇ‌ ಸಿದ್ಧವಾಗುವ ಧರ್ಮಾಧರ್ಮ(ಪಾಪ-ಪುಣ್ಯ) ಗಳ ಭಾವನೆಗೂ ಹಿಂದೆಂದೂ ಕಾಣದ ದೊಡ್ಡ ಆಘಾತ ಸಂಭವಿಸಿದೆ. ಮಾನವ ಸಮಾಜದ ಉಳಿವಿಗೆ  ಅತ್ಯವಶ್ಯವಾದ ನೀತಿನಿಯಮ ಗಳನ್ನು ಎತ್ತಿಹಿಡಿದು ಅವುಗಳನ್ನು ಪ್ರಜೆಗಳು ಪಾಲಿಸುವಂತೆ ಮಾಡುವುದು ದುಃಸಾಧ್ಯವಾಗುತ್ತಿದೆ. ಪಾಪ-ಪುಣ್ಯ ಭಾವನೆಗಳು (ಧರ್ಮಾಧರ್ಮಜ್ಞಾನ) ಮಾತ್ರ ಪ್ರಜೆಗಳನ್ನು ನಿಯಂತ್ರಿಸಬಲ್ಲವು-ಅನ್ಯನಿರ್ಮಿತ ನೀತಿವಾಕ್ಯಗಳಲ್ಲವೆಂಬುದು ಇಂದಿನ ದಿನದ ಸದ್ವಿಚಾರದ ಸಂದೇಶವಾಗಿದೆ.

***


***


No comments:

Post a Comment