SEARCH HERE

Tuesday, 1 January 2019

sridhara swamigalu 1973 varadahalli sagara ಶ್ರೀಧರ ಸ್ವಾಮಿಗಳು






ಸದ್ಗುರು ಭಗವಾನ್ ಶ್ರೀಧರಸ್ವಾಮಿಗಳು  
ಮಹಾರಾಷ್ಟ್ರ ರಾಜ್ಯದ ನಾಂದೇಡ್ ಜಿಲ್ಲೆಗೆ ಒಳಪಡುವ ದೇಗಲೂರುನಲ್ಲಿ ’ಪತಕೀ’ ಎಂಬ ಅಡ್ಡ ಹೆಸರಿನ ಮನೆತನವಿತ್ತು. ರುಗ್ವೇದಿ ಆಶ್ವಲಾಯನ ಶಾಖೆಯ ದೇಶಸ್ಥ ಬ್ರಾಹ್ಮಣರ ಆಚಾರ ನಿಷ್ಠ, ಭಕ್ತಿಪರಾಯಣವಾದ ಈ ತೇಜಸ್ವೀ ಕುಲದಲ್ಲಿ ಶ್ರೀನಾರಾಯಣ ರಾಯರು ಮತ್ತು ಕಮಲಾಭಾಯಿ ಯವರೆಂಬ ಆದರ್ಶ ದಂಪತಿಗಳಿದ್ದರು. ಇವರೇ ಶ್ರೀ ಶ್ರೀಧರ ಸ್ವಾಮಿಗಳವರನ್ನು ಪುತ್ರ ರೂಪದಿಂದ ಪಡೆದ ಭಾಗ್ಯಶಾಲಿಗಳು. ಇವರಿಗೆ ೨ ಗಂಡು, ೧ ಹೆಣ್ಣು ಮಕ್ಕಳಿದ್ದರೂ ಇವರೆಲ್ಲಾ ಅಲ್ಪಾಯುಷಿಗಳೆಂದು, ಶ್ರೀ ಗಾಣಾಪುರಕ್ಕೆ ಹೋಗಿ ಶ್ರೀ ದತ್ತ ಗುರುವಿನ ಸೇವಾ, ಅನುಸ್ಠಾನ, ತಪವನ್ನಾಚರಿಸಿದರೆನಿಮಗೊಬ್ಬ ಕುಲೋದ್ಧಾರಕ ಪುತ್ರನಾಗುವ ಯೋಗವಿದೆ ಎಂದು ಕುಲಪುರೋಹಿತರು ಇವರ ಜನ್ಮಕುಂಡಲಿಯನ್ನುನೋಡಿ ಹೇಳಿದರು. ಅಂತೆಯೇ ಈ ದಂಪತಿಗಳು ಗಾಣಾಪುರಕ್ಕೆ ತೆರಳಿ ಉಗ್ರ ತಪಸ್ಸನ್ನಾಚರಿಸಲಾಗಿ, ಶ್ರೀ ದತ್ತನ ಸಾಕ್ಷಾತ್ಕಾರವಾಯಿತು. ನಿಮಗೆ ಒಬ್ಬ ನಿವ್ರುತ್ತಿ ಮಾರ್ಗದ ಕುಲೋದ್ಧಾರಕ ಮಾತ್ರವಲ್ಲದೆ ವಿಶ್ವೋದ್ಧಾರಕ ತೇಜಸ್ವೀ ಪುತ್ರನಾಗುವನು ಎಂಬುವನಾಗಿ ವರವನಿತ್ತು ಶ್ರೀ ದತ್ತನು ಅಂತರ್ಧಾನನಾದನು. ಇದರಂತೆಯೇ ಗರ್ಭವತಿಯಾದ ಕಮಲಾಭಾಯಿಯವರನ್ನು ಇವರ ತಾಯಿಯು ತನ್ನ ಇನ್ನೊಂದು ಮಗಳ ಮನೆಯಾದ ಲಾಡ್ ಚಿಂಚೋಳಿಗೆ ಕರೆದೋಯ್ದರು. ಇದು ಕರ್ನಾಟಕ ಪ್ರಾಂತ್ಯದ ಗುಲ್ಭರ್ಗ ಜಿಲ್ಲೆಯಲ್ಲಿ ಗಾಣಾಪುರದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿದೆ. ಇಲ್ಲಿಯೇ ಶಕೆ ೧೮೩೦ ರಲ್ಲಿ ಮಾರ್ಘಶೀರ್ಷ ಪೌರ್ಣಿಮೆಯಂದು ದತ್ತ ಜನ್ಮದ ವೇಳೆಯಲ್ಲಿಯೆ ಸಾಕ್ಷಾತ್ ಪರಬ್ರಹ್ಮ ಸ್ವರೂಪಿ ಶ್ರೀ ಶ್ರೀಧರರು ಜನ್ಮತಾಳಿದರು. ಶ್ರೀ ಶ್ರೀಧರರಿಗೆ ಬಾಲ್ಯದಲ್ಲಿಯೇ ಹರಿಕಥಾ, ಕೀರ್ತನೆ, ಸತ್ಸಂಗ ಪುರಣ ಪ್ರವಚನಗಳಲ್ಲಿ ತುಂಬ ಅಭಿರುಚಿಯೂ ಮತ್ತು ಸನಾತನ ಧರ್ಮದಲ್ಲಿ ಅಚಲವಾದ ಶ್ರದ್ಧಾ, ಭಕ್ತಿ, ನಿಷ್ಟೆಗಳಿದ್ದವು. ಮುಖ ಕಮಲದಲ್ಲಿ ಅಖಂಡರಾಮನಾಮವಿತ್ತು. ಶ್ರೀಧರರ ೧೨ ನೇ ವಯಸ್ಸಿನೊಳಗಾಗಿಯೇ ತಂದೆ,ಅಕ್ಕ, ತಾಯಿಯೂ ಕಾಲಕ್ಕೆ ತುತ್ತಾಗಿ ಶ್ರೀಧರರನ್ನು ಅಗುಲಿದ್ದರು. ಶ್ರೀಧರರ ಬಾಲ್ಯ ಮತ್ತು ವಿದ್ಯಾಭ್ಯಾಸವು ಗುಲ್ಬರ್ಗಾದ "ನೂತನ ವಿದ್ಯಾಲಯದಲ್ಲೂ ಅನಂತರ ಪುಣೆಯ "ಅನಾಥ ವಿದ್ಯಾರ್ಥಿ ಗ್ರುಹ" ಹಾಗು "ಭಾವೆ ವಿದ್ಯಾಲಯ" ದಲ್ಲಿಯೂ ನಡೆಯಿತು. ಶ್ರೀಧರರಿಗೆ ದಿನದಿಂದ ದಿನಕ್ಕೆ ಆಧ್ಯಾತ್ಮ ವಿದ್ಯೆಯಲ್ಲಿ ಅಭಿರುಚಿಯು ಹೆಚ್ಚುತ್ತಲ್ಲಿತ್ತು. ಈ ನಶ್ವರ ವಿದ್ಯೆಯ ವೇಳೆಯನ್ನು ಶಾಶ್ವತವಾದ ಆಧ್ಯಾತ್ಮ ವಿದ್ಯೆಗಾಗಿ ವಿನಿಯೋಗಿಸಿದರೆ ಆದಷ್ಟು ಜಾಗ್ರತೆ ಆತ್ಮಸಾಕ್ಷಾತ್ಕಾರವಾಗಿ ಲೋಕದ ಉದ್ಧಾರಕ್ಕೂ ಪೂರ್ಣ ಸಾಮರ್ಥ್ಯ ಬರುವುದೆಂದು ನಿರ್ಧರಿಸಿ, ಕೇವಲ ಒಂದು ಕೊವ್ಪೀನ ಮಾತ್ರದ ಉಡುಪಿನಿಂದ ಗುರುಸೇವಾರೂಪಿ ತಪಸ್ಸಿಗಾಗಿ ಶ್ರೀ ಕ್ಷೇತ್ರ ಸಜ್ಜನಗಡಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಕಡು ತಪಸ್ಸನ್ನಾಚರಿಸುತ್ತಿರಲು ಶ್ರೀ ಸಮರ್ಥರ ಪ್ರತ್ಯಕ್ಷ ದರ್ಶನವಾಗಿ ಶ್ರೀಧರರಿಗೆ ’ಭಗವಾನ್’ ಎಂಬ ನಾಮವನ್ನು ಧರ್ಮ ಜಾಗ್ರುತಿಗಾಗಿ ದಕ್ಷಿಣಕ್ಕೆ ತೆರಳುವಂತೆ ಅಪ್ಪಣೆಯನ್ನು ಇತ್ತರು. ಅದರಂತೆ ಅಲ್ಲಿಂದ ಹೊರಟ ಭಗವಾನ್ ಶ್ರೀಧರರು ಗೋಕರ್ಣ, ಸಿರ್ಸಿ, ಶೀಗೆಹಳ್ಳಿಗೆ ಬಂದರು. ಅಲ್ಲಿ ಶ್ರೀ ಶಿವಾನಂದ ಸರಸ್ವತಿ ಸ್ವಾಮಿಗಳ ಸಹವಾಸದಲ್ಲಿ ಕೆಲಕಾಲವಿದ್ದು ನಂತರ ಸಾಗರ ಕೊಡಚಾದ್ರಿ ಇತ್ಯಾದಿ ಕರ್ನಾಟಕದ ಹಲವು ಭಾಗಗಳನ್ನು ಸಂಚರಿಸಿದರು. ಅನಂತರ ಶಕೆ ೧೮೬೪(೧೯೪೨ ನೇ ಇಸವಿ) ಚಿತ್ರಭ್ಹಾನು ಸಂವತ್ಸರದ ವಿಜಯದಶಮಿಯಂದು ಶ್ರೀ ಶೀಗೆಹಳ್ಳಿಯಲ್ಲಿ ತುರ್ಯಾಶ್ರಮವನ್ನು ಹೊಂದಿದರು. ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಸದ್ಗುರು ಭಗವಾನ್ ಶ್ರೀಧರಸ್ವಾಮಿ ಮಹರಾಜರು ಚಿಕ್ಕಮಂಗಳೂರು, ಕಳಲೆ, ಮಂಗಳೂರು, ಕಾಶಿ, ಉತ್ತರಕಾಶಿ, ಕನ್ಯಾಕುಮಾರಿ, ಅಯೋಧ್ಯಾ,ಬದರಿಕಾಶ್ರಮ, ದ್ವಾರಕ, ಗಿರಿನಾರ್, ಕುರಗಡ್ಡೆ, ಸಜ್ಜನಗಡ, ವರದಪುರ, ಇತ್ಯಾದಿ ಅನೇಕ ಕಡೆ ಚಾತುರ್ಮಾಸ ಹಾಗೂ ವಾಸ್ತವ್ಯವನ್ನು ಮಾಡಿದರು. ಭಾರತಾದ್ಯಂತ ಸಂಚರಿಸಿ ಅಲ್ಲಲಿಯ ದೇವಸ್ಥಾನ ಗುಡಿಗಳ ಜೇಣೋದ್ಧಾರ ಮಾಡಿದರು. ಪೇಟೆ-ಪಟ್ಟಣ, ಊರು-ಹಳ್ಳಿಗಳನ್ನು ಸಂಚರಿಸಿ ಭಕ್ತರಿಗೆ ದರ್ಶನವಿತ್ತು ಧರ್ಮ,ಭಕ್ತಿ, ಗ್ಯಾನ, ವ್ಯೆರಾಗ್ಯವನ್ನು ಭೋಧಿಸಿ ಧರ್ಮಜಾಗ್ರುತಿಯನ್ನುಂಟು ಮಾಡಿದರು. ಇವರ ಸನ್ನಿದಿಗೆ ಸಕ್ಕರೆಗೆ ಇರುವೆ ಮುತ್ತಿದಂತೆ ಆರ್ತ ಅರ್ಥಾರ್ಥಿ ಜಿಗ್ನ್ಯಾಸು ಗ್ನ್ಯಾನಿಗಳು ಬರುತ್ತಿದ್ದು ಇವರೆಲ್ಲರ ಇಷ್ಟಾರ್ಥಗಳನ್ನು ಒದಗಿಸುವುದು ಶ್ರೀಗಳವರ ಸ್ವಭಾವವೇ ಆಗಿತ್ತು. ಹೀಗೆ ಸಂಚರಿಸುತ್ತಿರುವಾಗ ಒಮ್ಮೆ ಸಾಗರ್ದ ಸಮೇಪದ ವರದಪುರ(ವರದಹಳ್ಳಿ) ಕ್ಷೇತ್ರಕ್ಕೆ ಶ್ರೀಗಳವರ ಆಗಮನವಾಯಿತು. ಪರಮಪವಿತ್ರ ಏಕಾಂತ,ನಿವಾಂತ, ರಮಣೀಯವಾಗಿರುವ ಈ ಸ್ಥಳದಲ್ಲಿ ಓಂದು ಕುಟೀರ ನಿರ್ಮಾಣವಾಗಿ ಶ್ರೀಗಳವರ ಚತುರ್ಮಾಸವು ಪ್ರಾರಂಭವಾಯಿತು. ಅನೇಕ ದಿವಸಗಳಿಂದ ತಮ್ಮ ಧ್ಯೇಯ ಮತ್ತು ಕಾರ್ಯಕ್ಕೆ ಅನುಕೂಲವಾದ ಸ್ವತಂತ್ರ ಸ್ಥಳದ ನಿರೀಕ್ಷಣೆಯಲ್ಲಿದ್ದ ಶ್ರೀಗಳವರಿಗೆ ಏನು ಕಂಡು ಬಂತೋ ಅವರೇ ಬಲ್ಲರು. ಇದೇ ಚಾತುರ್ಮಾಸದಲ್ಲಿ ವಿಜಯದಶಮಿಯ ಶುಭ ಮುಹೂರ್ತದಲ್ಲಿ ಧರ್ಮದ್ವಜದ ಸ್ಥಾಪನೆ ಮಾಡಿ ಈ ಆಶ್ರಮಕ್ಕೆ ’ಶ್ರೀಧರಾಶ್ರಮ’ ಎಂದು ನಾಮಕರಣ ಮಾಡಿದರು. ಇಲ್ಲಿ ಅನೇಕ ಧರ್ಮ ಕಾರ್ಯಗಳನ್ನು ನೆರವೇರಿಸಿದರು. ಈ ರೀತಿಯಿಂದ ಧರ್ಮ ಜಾಗ್ರುತಿಯನ್ನು ಮಾಡುತ್ತಾ ಮಾಡುತ್ತಾ ಶ್ರೀಗಳವರ ಮನಸ್ಸಿನಲ್ಲಿ ಕೆಲವು ಕಾಲ ಏಕಾಂತ ಮಾಡಬೇಕೆಂಬ ಇಚ್ಛೆಯುಂಟಾಗಿ ಈ ವರದ ಪುರದಲ್ಲಿ ಮತ್ತು ಇನ್ನಿತರ ಭಾಗದಲ್ಲಿಯು ಏಕಾಂತ ಮಾಡಿದರು. ನಂತರ ೫ ವರ್ಷಗಳ ಏಕಾಂತ ಮಾಡಬೇಕೆಂಬ ವಿಚಾರವುಂಟಾಗಿ ವರದಪುರ ಶ್ರೀಧರತೀರ್ಥದ ಮೆಲ್ಭಾಗದಲ್ಲಿ ಏಕಾಂತಕ್ಕ್ಕಗಿಯೇ ಹೊಸತಾಗಿ ನಿರ್ಮಿಸಲಾದ ಕುಟೀರದಲ್ಲಿ ಏಕಾಂತ ಪ್ರಾರಂಭವಾಯಿತು. ೪ ವರ್ಷಗಳು ಕಳೆದು ೫ ನೇ ವರ್ಷ ಶ್ರೀಗಳವರು ತಮ್ಮ ದೇಹವನ್ನು ಬಿಡುವ ಸಂಕಲ್ಪ ಮಾಡಿ ಈ ವಿಚಾರವನ್ನು ಅಪ್ರತ್ಯಕ್ಷವಾಗಿ ಕೆಲವರಿಗೆ ಸೂಚಿಸಿದರೂ ಇದು ಆಗ ಎಷ್ಟೋ ಜನರಿಗೆ ತಿಳಿಯದೆಯೂ ಇರಬಹುದು. ಅಂತಿಮವಾಗಿ ಶ್ರೀಗಳವರು ಶಾ.ಶ.೧೮೯೫ ಪ್ರಮಾದಿ ನಾಮ ಸಂವತ್ಸರದ ಚ್ಯಿತ್ರ ವದ್ಯ ೨ ನೇ ಗುರುವಾರ(ತಾ. ೧೯-೪-೭೩) ಬೆಳಗ್ಗೆ ಶ್ರೀಗಳವರು ಧ್ಯಾನಸ್ಥರಾಗಿ ಈ ಭೌತಿಕ ಶರೀರವನ್ನು ಬಿಟ್ಟು ತಮ್ಮ ಸಚ್ಚಿದಾನಂದ ಸ್ವರೂಪದಲ್ಲಿ ಲೀನವಾದರು
********

ಶ್ರೀ ಶ್ರೀಧರಸ್ವಾಮಿಗಳು ಮಹಾತಪಸ್ವಿಗಳು
||ನಮಃ ಶಾಂತಾಯ ದಿವ್ಯಾಯ ಸತ್ಯಧರ್ಮ ಸ್ವರೂಪಿಣೇ ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ ||

ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಆರಾಧನೆ (during april)

ಕರ್ನಾಟಕದ ಪ್ರಸಿದ್ಧ ಪುಣ್ಯಸ್ಥಳಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ವರದಹಳ್ಳಿ ಕೂಡಾ ಒಂದು. ಪವಾಡ ಪುರುಷರಾದ ಶ್ರೀಧರ ಸ್ವಾಮಿಗಳು ನೆಲೆಸಿರುವ ಪುಣ್ಯ ಸ್ಥಳವಿದು.


ಸ್ವಾಮಿ ಶ್ರೀಧರರು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ದೇಗಲೂರು ಗ್ರಾಮದವರು. ಇವರನ್ನು ದತ್ತಾತ್ರೇಯರ ಅವತಾರವೆಂದು ಹೇಳುತ್ತಾರೆ. ತಾಯಿ ದುರ್ಗಾಂಬೆಯ ಅಣತಿಯಂತೆ ವರದಹಳ್ಳಿಗೆ ಬಂದು ನೆಲೆನಿಂತರು. ಅಲ್ಲಿನ ದುರ್ಗಾ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಅಲ್ಲಿಯೇ ನೆಲೆ ನಿಂತರು.


ರದಹಳ್ಳಿ ತುಂಬಾ ಪ್ರಶಾಂತವಾದ ಸ್ಥಳ. ಇಲ್ಲಿಗೆ ಹೋದರೆ ಮನಸ್ಸಿಗೆ ಹಿತ ಎನಿಸುತ್ತದೆ. ಇಲ್ಲಿ ಇತಿಹಾಸ ಪ್ರಸಿದ್ಧ ದುರ್ಗಾಂಬಾ ದೇವಾಲಯವಿದೆ.
ಅಪಾರ ಶಕ್ತಿ ಹೊಂದಿರುವ ಶ್ರೀಧರರು ವರದಹಳ್ಳಿಯ ಗುಡ್ಡದ ಮೇಲೆ ನಿಂತು ತಮ್ಮ ತಪಶ್ಯಕ್ತಿಯಿಂದ ನೀರನ್ನು ಉದ್ಭವಿಸಿದರು. ವರದಹಳ್ಳಿ ಪ್ರವೇಶದಲ್ಲಿ ಈಗಲೂ ಗೋವಿನ ಬಾಯಿಂದ ನೀರು ಬೀಳುತ್ತದೆ. ಇದು ಅತ್ಯಂತ ಪವಿತ್ರವಾಗಿದ್ದು ಆಶ್ರಮಕ್ಕೆ ಹೋಗುವವರು ಈ ನೀರಿನಲ್ಲಿ ಸ್ನಾನ ಮಾಡಿ ಹೋಗುತ್ತಾರೆ.ಇದು ಔಷಧೀಯ ಗುಣಗಳನ್ನು ಹೊಂದಿದ್ದು ಅನೇಕ ರೋಗಗಳನ್ನು ಗುಣ ಮಾಡುತ್ತದೆ. ಇಲ್ಲಿಂದ ಮೆಟ್ಟಿಲುಗಳನ್ನು ಹತ್ತಿ ಮೇಲಕ್ಕೆ ಹೋದರೆ ಶ್ರೀಧರ ಆಶ್ರಮ ಸಿಗುತ್ತದೆ. ಅಲ್ಲಿ ಶ್ರೀಧರರು ಕುಳಿತು ತಪಸ್ಸು ಮಾಡಿದ್ದರು ಎಂಬ ನಂಬಿಕೆಯಿದೆ. ಪ್ರತಿದಿನ ಪೂಜೆ, ಪುನಸ್ಕಾರಗಳು ನಡೆಯುತ್ತದೆ. ಇಲ್ಲಿದೆ ಏಕಾಂತ ಗುಹೆ ಕೂಡಾ ಇದೆ. ಇಲ್ಲಿಂದ ಬೆಟ್ಟವನ್ನು ದಾಟಿ ಮೇಲೆ ಸ್ವಲ್ಪ ದೂರ ಹೋದರೆ ಅಲ್ಲಿ ಶ್ರೀಧರ ಸ್ವಾಮಿಗಳು ಐಕ್ಯರಾದ ಗುಹೆ ಇದೆ.
ಸ್ವಾಮಿ ಶ್ರೀಧರರ ಬಗ್ಗೆ ಅಲ್ಲಿನ ಸ್ಥಳೀಯ ಭಾಗಗಳಲ್ಲಿ ಅನೇಕ ಪವಾಡ ಕಥೆಗಳು ಕೇಳಿ ಬರುತ್ತದೆ. ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ ಎನ್ನುತ್ತಾರೆ. ಶ್ರೀಧರರ ಪಾದುಕೆಗಳು ಅಲ್ಲಿದ್ದು ಪಾದಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ದಿನಕ್ಕೊಂದು ಬಾರಿಯಾದರೂ ‘ನಮಃ ಶಾಂತಾಯ, ದಿವ್ಯಾಯ ಸತ್ಯಧರ್ಮ ಸ್ವರೂಪಿಣಿ, ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ’ ಎಂಬ ಶ್ಲೋಕವನ್ನು ದಿನಕ್ಕೊಂದು ಬಾರಿಯಾದರೂ ಜಪಿಸಿದರೆ ಕಷ್ಟಗಳೆಲ್ಲಾ ಪರಿಹಾರ ಆಗುತ್ತದೆ ಎನ್ನಲಾಗುತ್ತದೆ.
**********

ಶ್ರೀ ಕ್ಷೇತ್ರ ವರದಪುರ - ಶಿವಮೊಗ್ಗ ಜಿಲ್ಲೆಯ ಸಾಗರದಿಂದ 8 ಕಿಮೀ ದೂರದಲ್ಲಿರುವ ವರದಪುರ (ವರದಳ್ಳಿ) ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳಿಂದ ನಾಡಿನಾದ್ಯಂತ ಪ್ರಸಿದ್ಧ.


ಹೈದರಾಬಾದಿನ ನಾರಾಯಣ ರಾಯರು ಮತ್ತು ಕಮಲಾಬಾಯಿಯವರು ಜನ್ಮವಿತ್ತ ಮಹಾ ಪುರುಷರೇ ಶ್ರೀಧರ ಸ್ವಾಮಿಗಳು. 7-12-1908, ದತ್ತಜಯಂತಿಯಂದು ಲಾಡಚಿಂಚೋಳಿ (ಗುಲ್ಬರ್ಗ ಜಿಲ್ಲೆ) ಗ್ರಾಮದಲ್ಲಿ ಇವರ ಜನನವಾಯಿತು. ಧಾರ್ಮಿಕತೆಗೆ ಉದಾಹರಣೆಯಾಗಿದ್ದ ಕುಟುಂಬದವರ ಇವರಿಗೆ ತಮ್ಮ 12 ನೇ ವಯಸ್ಸಿನಲ್ಲೇ ಅನಾಥರಾಗುವ ದುರ್ವಿಧಿ ಒದಗಿತು. ಪರಿಸ್ಥಿತಿಯನ್ನು ಋಣಾತ್ಮಕವಾಗಿ ಸ್ವೀಕರಿಸದೆ ಶ್ರೀಗಳು ತಮ್ಮ ವಿಧ್ಯಾಭಾಸದೊಡನೆ ಧಾರ್ಮಿಕತೆ, ಸನಾತನ ಧರ್ಮ, ಭಗವದ್ಗೀತೆ, ಹರಿಕಥೆಗಳ ಪ್ರವಚನಗಳಿಂದ ಜನರ ಮನಗಳಲ್ಲಿ ನೆಲೆಸ ತೊಡಗಿದ್ದರು. ಲೋಕಕಲ್ಯಾಣಕ್ಕಾಗಿ ತಪಸ್ಸು ಮಾಡಬೇಕೆಂದು ಭಾವಿಸಿದ್ದ ಶ್ರೀಗಳು ತಮ್ಮ ವಿಧ್ಯಾಭಾಸದೊಡನೆ ತಪಸ್ಸಿನೊಡನೆ ಗಮನ ನೀಡಲೆಂದು ಪುಣೆಯಲ್ಲಿದ್ದ ಉಚಿತ ವಿದ್ಯಾರ್ಥಿ ಗೃಹಕ್ಕೆ ಧಾವಿಸಿದರು. ಅಲ್ಲಿ ತಮ್ಮ ಆಚಾರ ಮತ್ತೆಸ್ನೇಹ ಸ್ವಭಾವದಿಂದ "ಶ್ರೀಧರಸ್ವಾಮಿ" ಎಂದೆನಿಸಿಕೊಂಡರು. ಏಕಾಂತತೆಯ ಕೊರತೆಯಿಂದಾಗಿ ವಿದ್ಯಾರ್ಥಿ ಗೃಹ ತ್ಯಜಿಸಿ ಬಾಡಿಗೆಯ ಕೋಣೆ ಮಾಡಿಕೊಂಡು ಜೀವಿಸತೊಡಗಿದರು. ಆಹಾರಕ್ಕಾಗಿ ಮಧುಕರೀವೃತ್ತಿ (ಭಿಕ್ಷಾಟನೆ) ಅವಲಂಬಿಸಿದರು. ಎಲ್ಲವನ್ನೂ ತ್ಯಜಿಸಿ ತಪಸ್ಸಿಗೆ ಹೋಗಬೇಕೆಂಬ ಇಚ್ಛೆ ಪ್ರಬಲವಾಯಿತು. ಪ್ರೌಢಶಾಲೆಯ ವಿದ್ಯಾಭ್ಯಾಸ ಇನ್ನು ಸಾಕೆನಿಸಿತ್ತು. ತಪಸ್ವಿಯಾಗಲೂ ಹೊರಟರು. ಆಶ್ವಯುಜ ಮಾಸದ ವಿಜಯದಶಮಿಯಂದು ತಮ್ಮ ಜೀವನದ ಉದ್ದೇಶಗಳನ್ನು ಒಂದು ಪ್ರತಿಜ್ಞಾ ಪತ್ರವಾಗಿ ಬರೆದು ಅಗ್ನಿದೇವನಿಗೆ ಅರ್ಪಿಸಿದರು.

ನೆರೆಯವರಾದ ಪಳಣಿಕರಿಂದ ಸಲಹೆ ಪಡೆದು ಸಜ್ಜನಗಡದ ಶ್ರೀ ಸಮರ್ಥ ರಾಮದಾಸ ಸ್ವಾಮಿಗಳನ್ನು ಗುರುವಾಗಿ ಸ್ವೀಕರಿಸಿದ ಶ್ರೀಗಳು ತಮ್ಮ ಪಯಣವನ್ನು ಸಜ್ಡನಗಡದತ್ತ ಬೆಳೆಸಿದರು. ಶ್ರೀ ರಾಮ ಸ್ಮರಣೆ ಮಾಡುತ್ತಾ ಹೊರಟವರಿಗೆ ದಾರಿಯಲ್ಲಿ ಅಡ್ಡಿಯಾದ ಕಲ್ಲು-ಮುಳ್ಳು, ಮಳೆ-ಗಾಳಿ ಯಾವ ಲೆಕ್ಕಕ್ಕೂ ಸಿಗಲಿಲ್ಲ.
ಶ್ರೀಸಮರ್ಥ ರಾಮದಾಸ ಸ್ವಾಮಿಗಳು ಛತ್ರಪತಿ ಶಿವಾಜಿಯ ಗುರುಗಳು. ಇವರು ಹನುಮಂತನ ಅವತಾರವೆಂದೇ ಪ್ರಸಿದ್ಧಿ ಇದೆ. ಮಾನಸಿಕವಾಗಿ ಇವರನ್ನು ಗುರುಗಳಾಗಿ ಪಡೆದ ಶ್ರೀಗಳು ಹನುಮ ರಾಮನಲ್ಲಿ ತೋರಿಸಿದ ಭಕ್ತಿಯನ್ನು ತಮ್ಮ ಭಕ್ತಿಯ ರೀತಿಯಿಂದ ಮತ್ತೊಮ್ಮೆ ನೆನಪಿಸಿದರು. ಕೆಲ ವಸಂತಗಳು ಸೇವೆಯ ನಂತರ ಗುರುಗಳ ಪ್ರೇರಣೆಯಂತೆ ದಕ್ಷಿಣ ಭಾರತದಲ್ಲಿ ಧರ್ಮ ಸಂಸ್ಥಾಪನೆಗಾಗಿ ತೆರಳಿದರು.
ಕನ್ನಡ, ಮರಾಠಿ, ಉರ್ದು, ಹಿಂದಿ, ಇಂಗ್ಲಿಷ್ನಲ್ಲಿ ಸರಾಗವಾಗಿ ಮಾತಾಡುತಿದ್ದ ಶ್ರೀಗಳು ಮಂಜುಗುಣಿ, ಶಿರಸಿ, ಸೊರಬ, ಸಾಗರದಲ್ಲಿ ಜನರಿಗೆ ಉಪನ್ಯಾಸಗಳು, ಪ್ರವಚನಗಳನ್ನು ಮಾಡತೊಡಗಿದರು. ಶೀಗೇಹಳ್ಳಿಯ ಪರಮಾನಂದ ಮಠದಲ್ಲಿ ಶ್ರೀ ಶಿವಾನಂದ ಸ್ವಾಮಿಗಳಿಗೆ ದಾಸನಾಗಿ ಸೇವೆ ಸಲ್ಲಿಸಿದರು. ಅಲ್ಲಿಂದ ಹೊರಟು ಸಂಪೆಕಟ್ಟೆಯ ಮಠದಲ್ಲಿ 2 ತಿಂಗಳುಗಳ ಕಾಲ ಸೇವೆ ಮಾಡಿದರು. ನಂತರ ಕೊಡಚಾದ್ರಿಯ ಏಕಾಂತ ಸ್ಥಳದಲ್ಲಿ ಬಹುಕಾಲ ತಪಸ್ಸು ನಿರ್ವಿಘ್ನವಾಗಿ ನಡೆಯಿತು. ಅಲ್ಲಿಂದ ಬನವಾಸಿ ಹೀಗೆ ಅವರ ಧಾರ್ಮಿಕತೆ ಎಲ್ಲೆಡೆ ಪಸರಿಸತೊಡಗಿತು. ಶ್ರೀಸಮರ್ಥ ಆಜ್ಞೆಯಂತೆ 1943ರ ವಿಜಯದಶಮಿಯಂದು ಶೀಗೇಹಳ್ಳಿಯ ಲಲಿತಾ ಶಾಸ್ತ್ರೋಕ್ತವಿಧಿಯಿಂದ ಸನ್ಯಾಸವನ್ನು ಸ್ವೀಕರಿಸಿದರು. ಅ

ಅಂದಿನಿಂದ ಭಕ್ತ ಜನರು ಶ್ರೀಗಳನ್ನು
ಶ್ರೀಮತ್ ಪರಮಹಂಸ ಪರಿವ್ರಾಜಕಾಯ ಭಗವಾನ್ ಶ್ರೀ ಶ್ರೀಧರ_ಸದ್ಗುರು_ಮಹಾರಾಜರು ಎಂದೇ ಸಂಭೋಧಿಸತೊಡಗಿದರು.
ಸಾಗರದ ಸಮೀಪದ ವರದಹಳ್ಳಿ ಎಂಬುದು ಒಂದು ಚಿಕ್ಕ ಗ್ರಾಮ. ಯಾರ ಗಮನವನ್ನೂ ಇದು ಸೆಳೆದಿರಲಿಲ್ಲ. ಸುತ್ತಲೂ ಬೆಟ್ಟಗಳು, ದೊಡ್ಡ ಕಾಡು, ಎತ್ತರವಾಗಿ ಬೆಳೆದ ಹೆಮ್ಮರಗಳು, ಬೆಟ್ಟಗಳ ನಡುವೆ ಹಳ್ಳಿಗರ ಬೆಳೆಸಿದ ಅಡಿಕೆ ತೋಟ, ಭತ್ತದ ಚಿಕ್ಕ ಗದ್ದೆಗಳು. ಇಲ್ಲಿರುವ ಜಗದಾಂಬ ಮಂದಿರ ಪ್ರಾಚೀನವಾದದ್ದು. ಬೆಟ್ಪದಲ್ಲಿರುವ ಒಂದು ಉದ್ದವಾದ ದೊಡ್ಡ ಗುಹೆಯನ್ನು ವ್ಯಾಸಗುಹೆ ಎನ್ನುತ್ತಾರೆ. ವ್ಯಾಸರ, ಅಗಸ್ತ್ಯರೂ ಅಲ್ಲಿ ತಪಸ್ಸು ಮಾಡಿದರೆಂದು ಜನರ ಹೇಳಿಕೆ. ಹಿಂದೆ ಇಲ್ಲೊಂದು ಸನ್ಯಾಸಿ ಮಠವಿದ್ದು ಉತ್ತರಾಧಿಕಾರಿಯಿಲ್ಲದೆ ಹಾಳು ಬಿದ್ದಿತ್ತು. ದೇವೀತೀರ್ಥ, ಅಗಸ್ತ್ಯತೀರ್ಥ ಎಂಬ ಎರಡು ಕೊಳಗಳಿದ್ದವು. ಶ್ರೀಗಳು ಧರ್ಮ ಜಾಗೃತಿಗಾಗಿ ಸಂಚಾರ ಮಾಡುತ್ತ 1953 ರಲ್ಲಿ ಇಲ್ಲಿಗೆ ಆಗಮಿಸಿದರು. ಇಲ್ಲಿ ಆಶ್ರಮ ನಿರ್ಮಸಬೇಕೆಂದು ಬಯಸಿ ಕೆಲ ದಿನಗಳಲ್ಲೇ ಜಗದಾಂಬ ದೇವಾಲಯದ ಹಿಂಬದಿಯಲ್ಲಿರುವ ಬೆಟ್ಟದ ಮೇಲೆ ಒಂದು ಕುಟೀರದ ನಿರ್ಮಾಣವಾಯಿತು. ಶ್ರೀಧರಾಶ್ರಮ ಎಂದು ಹೆಸರಿಡಲಾಯಿತು. ಅಂದಿನಿಂದ ಅಲ್ಲಿಯ ಚಹರಿಯೇ ಬದಲಾಯಿತು. ಶ್ರೀಗಳ ಭೇಟಿಗೆ ಜನಸಾಗರವೇ ಹರಿದು ಬರತೊಡಗಿತು.
ಸನ್ಯಸತ್ಲ ಸ್ವೀಕಾರದ 26 ವರ್ಷಗಳ ನಂತರ ಘೋರ ತಪಸ್ಸಿಗೆ ಕೂರುವ ನಿರ್ಧಾರ ಮಾಡಿದ ಶ್ರೀಗಳು ಕುಟೀರದ ಬಳಿ ತಮಗಾಗಿಯೇ ನಿರ್ಮಿಸಿದ ಪ್ರತ್ಯೇಕ ಕುಟೀರದಲ್ಲಿ ತಪಸ್ಸಿಗೆ ಕೂತರು. ಚೈತ್ರ ಬಹುಳ ಬಿದಿಗೆ ಗುರುವಾರ (ತಾ 19-4-1973)ದಂದು ಭಗವಾನ್ ಶ್ರೀಧರ ಸ್ವಾಮಿಗಳು ಪಾರ್ಥಿವ ದೇಹವನ್ನು ತ್ಯಜಿಸಿದರು.
ಇಂದು ಸಾವಿರಾರು ಭಕ್ತರು ಪ್ರತಿದಿನ ಶ್ರೀಗಳ ಸ್ಥಳದ ದರ್ಶನಕ್ಕೆ ದೌಡಾಯಿಸುತ್ತಾರೆ. ಶ್ರೀಗಳು ಸ್ಥಾಪಿಸಿದ ಗೋಶಾಲೆಯಲ್ಲಿ ಗೋಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನೂರಾರು ಭಕ್ತರು ಭಕ್ತಿಯಿಂದ ಪ್ರಸಾದದ ರೂಪವಾಗಿ ನೀಡಿಲಾಗುತ್ತಿರುವ ಭೋಜನ ಸ್ವೀಕರಿಸುತ್ತಾರೆ.
ಬರಹ : ಮಂದಾರ ಸಾಗರ
********

ಆನಂದೋದ್ವಯ ಏಕ ಏವ ಸತತಂ ಜ್ಞಾನೈಕಮಾತ್ರೋಸ್ಮಹಮ್ |ಕಾರ್ಯ ನಾಪಿ ಚ ಕಾರಣಂ ಕಿಮಪಿ ವಾ ಬ್ರಹ್ಮಾಂಡಪಿಂಡಾವಪಿ |ತದ್ಬ್ರಹ್ಮೈವ ಸನಾತನಂ ವಿಭುರಹಂ ಜ್ಞಾತಂ ಚ ಯಸ್ಮಾದತಃ |
ಸರ್ವೇಭ್ಯೋಪ್ಯಭಯಂ ತನೋಮಿ ಕುಶಲಂ ಬ್ರಹ್ಮಾಭಯಂ ವೈ ಯತಃ

ಕೇವಲ ಜ್ಞಾನ ಸ್ವರೂಪಮಾತ್ರನಾಗಿರುವ ಮತ್ತು ಈ ಜ್ಞಾನದಿಂದಲೇ ಆನಂದರೂಪಿಯಾಗಿರುವ ನಾನು ಎಂದೆದಿಗೂ ಹೀಗೇ ಅದ್ವಿತೀಯನಾಗಿರುವೆನು. ಯಾವುದರಲ್ಲಿ ಕಾರ್ಯಕಾರಣ ಮತ್ತು ಬ್ರಹ್ಮಾಂಡ ಪಿಂಡಾಂಡಗಳಿಲ್ಲವೋ ಆ ಸನಾತನ ವಿಭುರೂಪವಾಗಿರುವ ಬ್ರಹ್ಮವೇ ನಾನೆಂದು ತಿಳಿದಿರುವೆನಾದುದರಿಂದ ಮತ್ತು ಆ ಬ್ರಹ್ಮವು ಅಭಯವೂ ಮತ್ತು ಆನಂದರೂಪವೂ ಆಗಿರುವುದರ ಕಾರಣ, ಎಲ್ಲಕ್ಕೂ ನಿರಾಂತಕವಾದ ಅಭಯವನ್ನೂ ಮತ್ತು ನಿರತಿಶಯವಾದ ಕುಶಲವನ್ನೂ ಸಹ ನಾನು ಬಿತ್ತರಿಸುವೆನು.


Only video
ಭಗವಾನ್ ಶ್ರೀ ಶ್ರೀಧರಸ್ವಾಮೀಗಳ ವಿಡಿಯೋ ದೃಶ್ಯಗಳು
Only One Video of Bhagavan Sadguru Sri Sridhara Swamyji




ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿಗಳಿಗೆ ಪ್ರಿಯವಾಗಿದ್ದ ವೇದವನ್ನೇ ಕಲಿಯುತ್ತ, ಕಲಿಸುತ್ತ ಜೀವಿಸುತ್ತಿರುವ  ಶ್ರೀಧರ ಭಕ್ತರೊಬ್ಬರ ಸ್ಮರಣೆಯಿದು. 
ಗುಲಬರ್ಗಾ ಜಿಲ್ಲೆಯ, ಆಳಂದಾ ತಾಲೂಕಿನ ಗಾಣಗಾಪುರದ ಸಂಗಮ ರಸ್ತೆಯಲ್ಲಿ ಗೋಪಾಳಭಟ್ ಶರ್ಮಾ ಎಂಬ ಒಬ್ಬ ಸಾತ್ವಿಕ ಬ್ರಾಹ್ಮಣರಿದ್ದಾರೆ. ಇವರು ನಾರಾಯಣ ಹೆಗಡೆ- ಶ್ರೀಮತಿ ಕಾವೇರಿಬಾಯಿಯವರ ಎರಡನೆಯ ಮಗ. ದಿನಾಂಕ 04- 11- 44 ರಲ್ಲಿ ಜನಿಸಿದ  ಇವರಿಗೆ ವೇದ ಕಲಿಯುವುದು- ಕಲಿಸುವುದೇ ಜೀವನದ ಕಾಯಕ. ಇವರು ಉತ್ತರ ಕನ್ನಡ ಜಿಲ್ಲೆ- ಕುಮಟಾ ತಾಲೂಕಿನ ಬರಗದ್ದೆ ಹತ್ತಿರ ದುಂಡಕುಳಿಯವರು. ಮೊದಲು ಶೀಗೇಹಳ್ಳಿಯಲ್ಲಿ ವೇದ ಕಲಿತ ಇವರು ಅನಂತರ ವೇದ ಬ್ರಹ್ಮ ಸೂರಿ ರಾಮಚಂದ್ರ ಶಾಸ್ತ್ರಿ ಹಾಗೂ ತುಂಬಲೆ ಸೀತಾರಾಮ ಭಟ್ ಇವರಲ್ಲಿ ವೇದಾಧ್ಯಯನ ಹಾಗೂ ಪ್ರಯೋಗ ಕಲಿತರು. ಅನಂತರ ಸುಮಾರು ನಲವತ್ತು ವರ್ಷಗಳ ಹಿಂದೆಯೇ ಗಾಣಗಾಪುರಕ್ಕೆ ಬಂದು ಇಲ್ಲಿಯೇ ನೆಲಸಿದ್ದಾರೆ. ಗುರುಭಟ್ ಪೂಜಾರಿಯವರ ಪ್ರೇರಣೆ ಮಾರ್ಗದರ್ಶನದಲ್ಲಿ ಪ್ರಾರಂಭವಾದ ವೇದ- ಸಂಸ್ಕೃತ ಪಾಠಶಾಲೆ ಇಂದಿಗೂ ಕೂಡ ನಿರಂತರವಾಗಿ ನಡೆಯುತ್ತಿದೆ. ಇವರಿಂದ ಸುಮಾರು ಐದುನೂರು ವಿದ್ಯಾರ್ಥಿಗಳು ವೇದ -ಪೌರೋಹಿತ್ಯ ಕಲಿತಿದ್ದಾರೆ. ವೇದಾಭ್ಯಾಸದೊಂದಿಗೆ ಶಾಲೆಗೂ ಹೋಗಿ ವಿದ್ಯಾಭ್ಯಾಸ ಮಾಡಬೇಕೆಂದು ಒತ್ತಾಯ ಮಾಡುವ ಇವರು ತಪ್ಪಿಲ್ಲದೆ ಮಂತ್ರ ಪಠಿಸುವಂತೆ  ಸದಾ ಎಚ್ಚರಿಸುವುದನ್ನೂ ಮರೆಯುವುದಿಲ್ಲ. ಗಾಣಗಾಪುರದ ತುಂಬ ತಿರುಗಾಡಿ ಅಥವಾ ಶ್ರೀ ದತ್ತಮಂದಿರದ ಸುತ್ತ ರುದ್ರಪಠಿಸುವವರನ್ನು ಮಾತನಾಡಿಸಿ ಅವರಲ್ಲಿ ಒಬ್ಬರಲ್ಲ ಒಬ್ಬರು ಈ ಗೋಪಾಲ ಭಟ್ಟರ ಶಿಷ್ಯರೇ ಆಗಿರುತ್ತಾರೆ. ಇವರು ಹದಿನಾಲ್ಕನೇ ವಯಸ್ಸಿನಲ್ಲಿಯೇ ಕುಮಟಾ ಹತ್ತಿರ ಮುರೂರು- ಕಲ್ಲಬ್ಬೆಯಲ್ಲಿ ಶ್ರೀಧರಸ್ವಾಮಿಗಳನ್ನು ನೋಡಿದ್ದರಂತೆ. ಶ್ರೀಧರರು ಇರುವಲ್ಲಿ ಸದಾ ಜನಜಂಗುಳಿಯೇ ಇರುತ್ತಿತ್ತು ಎಂದು ಹೇಳುವ ಇವರು ಶ್ರೀ ಶ್ರೀಧರರ ಸುತ್ತಮುತ್ತ ಕೆಲವು ಬಾವಾಜಿಗಳು ಇರುವುದನ್ನೂ ನೆನಪುಮಾಡಿಕೊಳ್ಳುತ್ತಾರೆ. ಅನಂತರ ವರದಪುರದಲ್ಲಿ ಎರೆಡು- ಮಾರುಬಾರಿ ಶ್ರೀಧರಸ್ವಾಮಿಗಳ ದರ್ಶನವನ್ನು ಪಡೆದಿದ್ದಾರಂತೆ. ಗಾಣಗಾಪುರದಲ್ಲಿ ಸುಮಾರು 1966-67 ರಲ್ಲಿ ನಡೆದ ಪಂಚ ಶತಾಬ್ದಿ ಕಾರ್ಯಕ್ರಮದಲ್ಲಿ ಶ್ರೀಧರರು ತಂಗಿದ್ದು- ಅಂದು ಇವರೂ ವೇದಪಾರಾಯಣ ಮಾಡಿದ್ದು ತಮ್ಮ ಜೀವನದ ಅವಿಸ್ಮರಣೀಯ ದಿನಗಳು ಎಂದು ಮೃದುವಾಗಿ ನುಡಿಯುತ್ತಾರೆ. ಶ್ರೀ ಶ್ರೀಧರಸ್ವಾಮಿಗಳು ಮಹಾತಪಸ್ವಿಗಳು ಎಂದು ಮತ್ತೆ ಮತ್ತೆ ಹೇಳುತ್ತಲೇ ಇರುತ್ತಾರೆ. ಅಂತೆಯೇ ಅವರಿಗೆ ಪ್ರಿಯವಾದ ವೇದಗಳನ್ನು ಆಸಕ್ತರಿಗೆ ಕಲಿಸಿರುವುದು ತಮ್ಮ ಸೌಭಾಗ್ಯ ಎಂದೂ ಸೇರಿಸುತ್ತಾರೆ.ವೇದ- ವೇದ ಎಂದು ಬರಿದೆ ಹೇಳುವುದು ತುಂಬ ಸುಲಭ. ಆದರೆ ಈ ವೇದವನ್ನು ಆಸಕ್ತರಿಗೆ ಕಲಿಸಿ ಅಂಥವರ ಜೀವನೋಪಾಯಕ್ಕೆ ಅಡಿಪಾಯ ಹಾಕಿಕೊಡುವವರು ತುಂಬ ಅಪರೂಪ. ಇದರೊಂದಿಗೆ ತಾವು ಬಾಲ್ಯದಲ್ಲಿ ನೋಡಿದ್ದ ಶ್ರೀಧರಸ್ವಾಮಿಗಳನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ. ಕೊನೆಯಲ್ಲಿ ನಾನು ಬರುವಾಗ ಶ್ರೀಧರಸ್ವಾಮಿಗಳನ್ನು ನೋಡಿದವರನ್ನು ಹೀಗೆ ಪರಿಚಿಯಿಸುವುದು ತುಂಬಾ ಮುಖ್ಯ ಮತ್ತು ಅಗತ್ಯವಾದುದರಿಂದ ಮುಂದುವರೆಸಬೇಕೆಂದೂ ನಯವಾಗಿ ನುಡಿಯುತ್ತ ಬೀಳ್ಕೊಡುತ್ತಾರೆ. ನಿಜ, ಇಂಥವರನ್ನು ಪರಿಚಯಿಸುವುದು ಎಂದರೆ ಶ್ರೀಧರಸ್ವಾಮಿಗ ಸ್ಮರಣೆ ಮಾಡುವುದೆಂದರ್ಥ.
****


ಗುಲ್ಬರ್ಗ ಜಿಲ್ಲೆಯ ಲಾಡ ಚಿಂಚೋಳಿ ಗ್ರಾಮದಲ್ಲಿ  ೦೭-೧೨-೧೯೦೮ರ ದತ್ತ ಜಯಂತಿ ದಿನದಂದು ಜನಿಸಿದ ಆ ಬಾಲಕನ ಹೆಸರು ಶ್ರೀಧರ. ಕಮಲಾಬಾಯಿ, ನಾರಾಯಣರಾವ್ ದಂಪತಿಗಳ ಪುತ್ರನಾಗಿ ಜನಿಸಿದ ಶ್ರೀಧರನ ಪ್ರಾಥಮಿಕ ವಿದ್ಯಾಭ್ಯಾಸ ಹೈದರಾಬಾದಿನಿಂದ ಆರಂಭವಾಯಿತು. ಕರ್ಮಠ ಸಂಪ್ರದಾಯಸ್ಥರ ಮನೆಯ ಹುಡುಗನಿಗೆ ಬಾಲ್ಯದಲ್ಲೇ ಸಮರ್ಥ ರಾಮದಾಸರ ಅನುಯಾಯಿ ಸಾಧುಗಳ  ಪರಿಚಯವಾಯಿತು. ಚಿಕ್ಕ ವಯಸ್ಸಿನಲ್ಲೇ ತಾಯಿ ಕಳೆದುಕೊಂಡ ಬಾಲಕ, ಗುಲ್ಬರ್ಗದಲ್ಲಿನ ಚಿಕ್ಕಮ್ಮನ ಮನೆಗೆ ಬಂದ. ಅಲ್ಲಿ  ಒಂದಿಷ್ಟು ಕಾಲ ವಿದ್ಯಾಭ್ಯಾಸ ಮುಂದುವರಿಸಿದ.  ಹೆಚ್ಚಿನ ಕಲಿಕೆಯ ಹಂಬಲದಿಂದ ಪುಣೆಯ ಹಾದಿ ಹಿಡಿದ.

ಪುಣೆಯಲ್ಲಿ  ಓದುತ್ತಿದ್ದಾಗ ಈ ಬಾಲಕನ ಚಿತ್ತ ತಪಸ್ಸಿನತ್ತ  ಹೊರಳಾಡತೊಡಗಿತು. ಸನ್ಯಾಸಿಯಾಗುವ ಹಂಬಲ ಬಲವಾಯಿತು. ಅತಿಯಾಗಿ ಫೇಡಾ ತಿನ್ನುತ್ತಿದ್ದ ಶ್ರೀಧರ, ಫೇಡಾದಲ್ಲಿ  ಹಸುವಿನ ಸಗಣಿ ಬೆರೆಸಿ ತನಗಿಷ್ಟವಾದ ಫೇಡಾ  ಬಿಟ್ಟ  ಹಠಮಾರಿ ಬಾಲಕ. ಅಂತಹ ಬಾಲಕ, ೧೯೨೭ರ ವಿಜಯದಶಮಿಯಂದು ತನ್ನ ಕನಸಿನ  ಸನ್ಯಾಸಲೋಕದತ್ತ ಹೆಜ್ಜೆ ಹಾಕಿಯೇ ಬಿಟ್ಟ. ಗುರು ಯಾರು? ಗುರಿ ಏನು? ನಾನು ಎಲ್ಲಿಗೆ ಹೋಗಲಿ? ಎಂಬಿತ್ಯಾದಿ ಸಂಗತಿಗಳ ಕುರಿತು ಆಲೋಚಿಸದೇ ಪುಣೆಯನ್ನು ತ್ಯಜಿಸಿದ. ಹಾಗೆ ಪುಣೆ ಬಿಟ್ಟವನಿಗೆ, ಯಾರೋ ಹಿರಿಯರು ಸಮರ್ಥ ರಾಮದಾಸರ ಕ್ಷೇತ್ರವಾದ ಸಜ್ಜನಗಢದ ಹಾದಿ ತೋರಿಸಿದರು ಎಂಬುದು  ಅವರ ಜೀವನ ಚರಿತ್ರೆಯಲ್ಲಿ  ದಾಖಲಾಗಿದೆ.

ಛತ್ರಪತಿ ಶಿವಾಜಿಯಂಥ ನಾಯಕರನ್ನು ದೇಶಕ್ಕೆ ದೇಣಿಗೆಯಾಗಿ ನೀಡಿದ ಸಮರ್ಥ ರಾಮದಾಸರ ನಾಡು ಸಜ್ಜನಗಢ. ಅಂತಹ ನಾಡಿಗೆ  ಶ್ರೀಧರ ಕಾಲಿಟ್ಟ. ಅಲ್ಲಿನ ದೇವಾಲಯದ ಕೆಲಸ ಮಾಡುವುದು, ರಾತ್ರಿ ವೇಳೆ ಮಂದಿರದೊಳಗೆ ಕುಳಿತು ಧ್ಯಾನ ಮಾಡುವುದು ಆತನ ದಿನಚರಿಯಾಗಿತ್ತು. ‘ಕೌಪೀನವಂತಃ ಖಲು ಭಾಗ್ಯವಂತಃ’ ಎನ್ನುತ್ತ ಐರಣಿ ಮಹಾರಾಜರು ಕೊಟ್ಟ  ಬಟ್ಟೆಗಳನ್ನು  ತಿರಸ್ಕರಿಸಿದ ಶ್ರಿಧರ ಅಲ್ಲಿ   ಅಕ್ಷರಶಃ ವೈರಾಗಿಯಂತೆ ಬದುಕುತ್ತಿದ್ದ  ಎಂಬುದು ಚರಿತ್ರೆಯ ಪುಟಗಳಿಂದ ತಿಳಿದುಬರುತ್ತದೆ.

ದಿನಕಳೆದಂತೆ ಶ್ರೀಧರನ ಧ್ಯಾನದ ಗಾಢತೆ ಹೆಚ್ಚಾಗತೊಡಗಿತು. ಬಾಲಕ  ಜನರ ಬಾಯಲ್ಲಿ  ಶ್ರೀಧರ ಭಗವಾನ್ ಎಂದು ಪರಿವರ್ತನೆಗೊಂಡರು. ಅಕೃತವಾಗಿ ಗುರು ಮುಖೇನ ಸನ್ಯಾಸತ್ವ ಪಡೆಯದಿದ್ದರೂ ಸನ್ಯಾಸಿಯ ತೇಜಸ್ಸು  ಶ್ರೀಧರರ ದೇಹದಲ್ಲಿ  ರಾರಾಜಿಸತೊಡಗಿತು. ಧಾನ್ಯ, ಪೂಜೆ, ಕೆಲಸ…ಹೀಗೆ ದಿನ ಕಳೆಯುತ್ತಿದ್ದ  ಶ್ರೀಧರರು ಅದೊಮ್ಮೆ ದಿಢೀರನೆ ಮಾಯವಾಗಿ ಬಿಟ್ಟಿದ್ದರು ಅಂತಲೂ ಅವರ ಚರಿತ್ರೆಯಲ್ಲಿ  ಬರುತ್ತದೆ. ನಿಜವಾಗಿಯೂ ಮಾಯವಾಗಿದ್ದರೋ ಅಥವಾ ಭಕ್ತಿಯ ಪರಾಕಾಷ್ಠೆ ತಲುಪಿದ್ದ  ಒಂದಿಷ್ಟು  ಜನ  ಅಂತಹದ್ದೊಂದು ಸುದ್ದಿ  ಹುಟ್ಟಿಸಿದ್ದರೋ ಗೊತ್ತಿಲ್ಲ!  ಅದಾದ ನಂತರ ಶ್ರೀಧರರು ಪವಾಡ ಪುರುಷರು ಎಂಬ ಮಾತುಗಳು ಕೇಳಿ ಬರಲಾರಂಭಿಸಿತು. ಅವರನ್ನು ಹುಡುಕಿಕೊಂಡು ಬರುವ ಮಂದಿಯ ಸಂಖ್ಯೆ ಹೆಚ್ಚಾಯಿತು. ಆ ವೇಳೆಗೆ ಶ್ರೀಧರರು ಸಜ್ಜನಗಢ ತೊರೆದು ದಕ್ಷಿಣದತ್ತ ಮುಖ ಮಾಡಿದರು.

ಸಜ್ಜನಗಢದಿಂದ ಕೊಲ್ಲಾಪುರ ಮಾರ್ಗವಾಗಿ ಉತ್ತರ ಕರ್ನಾಟಕದ ಹಾದಿ ಹಿಡಿದರು. ಮೂಲತಃ ಮಹಾರಾಷ್ಟ್ರದವರಾಗಿದ್ದ  ಶ್ರೀಧರರು ಸಜ್ಜನಗಢ ತೊರೆದ ನಂತರ ಶಾಶ್ವತವಾಗಿ ನಮ್ಮವರಾಗಿಬಿಟ್ಟರು. ‘ಅವರ ಮಾತೃಭಾಷೆ ಮರಾಠಿಯಾಗಿತ್ತು ಎಂಬುದು ಬಹುಶಃ ಅವರಿಗೂ ಮರೆತಿರಬೇಕು’ ಎನ್ನುವಷ್ಟರ ಮಟ್ಟಿಗೆ ಶ್ರೀಧರರು ಕನ್ನಡಿಗರಾದರು. ಸಿರಸಿ ತಾಲೂಕಿನ ಶೀಗೆಹಳ್ಳಿ  ಶ್ರೀಧರರನ್ನು ಕೈಬೀಸಿ ಕರೆಯಿತು. ಅಲ್ಲಿನ ಶ್ರೀಗಳಾದ ಶಿವಾನಂದ ಸ್ವಾಮಿಗಳು ಗುರುಗಳಾಗಿ ಶ್ರೀಧರರ ಬೆನ್ನಿಗೆ ನಿಂತರು.

ಕೆಲ ಕಾಲ ಅಲ್ಲಿ  ನೆಲೆಯೂರಿದ್ದ  ಶ್ರೀಧರರು, ನಂತರ ಸಿರಸಿ, ಸೊರಬ, ಸಾಗರ, ಹೊಸನಗರ ತಾಲೂಕಗಳತ್ತ ಪ್ರವಾಸ ಕೈಗೊಂಡರು. ಅನೇಕ ಕಡೆಗಳಲ್ಲಿ  ಧರ್ಮದ ಕುರಿತು, ಸಾಮಾಜಿಕ ಮೌಢ್ಯತೆಗಳ ಕುರಿತು ಉಪನ್ಯಾಸ ನೀಡಿದರು. ಸ್ವಲ್ಪ  ಕಾಲ ಕೊಡಚಾದ್ರಿಯ ತಪ್ಪಲಲ್ಲಿ  ಧ್ಯಾನಕ್ಕೆ ಕುಳಿತರು. ಕೊನೆಗೆ ಬನವಾಸಿಯ ಮೂಲಕ ಮತ್ತೆ ಶೀಗೆಹಳ್ಳಿಗೆ ಬಂದರು. ಶೀಗೆಹಳ್ಳಿಯ ಶ್ರೀ ಶಿವಾನಂದ ಸ್ವಾಮಿಗಳು, ಕಮಂಡಲ ಕಾವಿ ಬಟ್ಟೆಗಳನ್ನು ಶ್ರೀಧರರಿಗೆ ನೀಡಿ ಸನ್ಯಾಸ ದೀಕ್ಷೆ  ಕೊಟ್ಟರು. ಧರ್ಮಧ್ವಜ ಸ್ಥಾಪಿಸಬೇಕೆಂದು ಆದೇಶವನ್ನಿತ್ತರು. ಈ ಘಟನೆಯ ನಂತರ ಶ್ರೀಧರರು ಮತ್ತೆ ಸಜ್ಜನಗಢದತ್ತ ಸಾಗಿದರು.

ಸಜ್ಜನಗಢದಲ್ಲಿ  ಒಂದಿಷ್ಟು  ಕಾಲ ಕಳೆಯುತ್ತಿದ್ದಂತೆ ಶ್ರೀ ಶಿವಾನಂದರ ದೇಹತ್ಯಾಗದ ಸುದ್ಧಿ  ಶ್ರೀಧರರ ಕಿವಿಗೆ ಬಿತ್ತು. ಅಲ್ಲಿಂದ ಮತ್ತೆ ಶೀಗೆಹಳ್ಳಿಯತ್ತ ಪ್ರಯಾಣ ಬೆಳೆಸಿದರು. ಶ್ರೀಧರರು ಶೀಗೆಹಳ್ಳಿಗೆ ಕಾಲಿಡುವಾಗ ಶಿವಾನಂದರು ಮಕ್ತರಾಗಿ ಎರಡು ವರ್ಷಗಳೇ ಕಳೆದುಹೋಗಿತ್ತು. ಮಠ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ಮಠದ ಅಭಿವೃದ್ಧಿಗೆ ಪಣತೊಟ್ಟ  ಶ್ರೀಧರರು ಗುರುಗಳ  ಸಮಾದಿ ನಿರ್ಮಿಸಿದರು. ಆರಾಧನಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುವಷ್ಟರ  ಮಟ್ಟಿಗೆ ಮಠವನ್ನು ಕಟ್ಟಿ  ಬೆಳೆಸಿದರು. ಮಠದ ಆವರಣದಲ್ಲಿ  ವೇದ, ಸಂಸ್ಕೃತ ಪಾಠಶಾಲೆ ಆರಂಭಿಸಿದರು. ಇಷ್ಟಾಗಿಯೂ ಶ್ರೀಧರರಿಗೆ ಪೂರ್ಣ ಪ್ರಮಾಣದ ಸನ್ಯಾಸತ್ವ ಸ್ವೀಕರಿಸುವ ಕಾಲ ಕೂಡಿ ಬಂದಿರಲಿಲ್ಲ!

ಆವತ್ತು ಶೀಗೆಹಳ್ಳಿಯತ್ತ ಜನರ ಹಿಂಡು-ಹಿಂಡೇ ಧಾವಿಸಿ ಬಂದಿತ್ತು.  ಅಂದಹಾಗೆ ಶೀಗೆಹಳ್ಳಿಯಂಥ ಪುಟ್ಟ  ಊರಿನಲ್ಲಿ ಆ ಪರಿ ಜನ ಸೇರಲು ಒಂದು ಕಾರಣವಿತ್ತು. ಊರೂರು ಸುತ್ತುತ್ತಾ ಧರ್ಮ ಪ್ರಚಾರ ಮಾಡುತ್ತಿದ್ದ  ಯೋಗಿಯೊಬ್ಬರು ಸನ್ಯಾಸ ಸ್ವೀಕರಿಸುತ್ತಾರಂತೆ ಎಂಬ ಸುದ್ಧಿ  ಜನರನ್ನು ಅಲ್ಲಿಗೆ ಎಳೆತಂದಿತ್ತು. ಚಿತ್ರಭಾನು ಸಂವತ್ಸರದ ವಿಜಯ ದಶಮಿಯ(೧೯೪೨) ಶ್ರೀಧರರು , ಹತ್ತಾರು ಗುರುಗಳ ಸಮ್ಮುಖದಲ್ಲಿ  ಶಾಸ್ತ್ರೋಕ್ತವಾದ ಸನ್ಯಾಸ ದೀಕ್ಷೆ ಪಡೆದರು. ‘ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಬ್ರಹ್ಮಚೈತನ್ಯ ಭಗವಾನ್ ಸದ್ಗುರು ಶ್ರೀ  ಶ್ರೀಧರ ಸ್ವಾಮಿ ಮಹಾರಾಜಕೀ ಜೈ’ ಎಂಬ ಜೈಕಾರದ ಸದ್ದು ಎಲ್ಲೆಡೆ ಮೊಳಗಿತು.

‘ಕುಸಿದುಬಿದ್ದಿದ್ದ  ಶೀಗೆಹಳ್ಳಿಯ ಮಠವನ್ನು ಮತ್ತೆ ಕಟ್ಟಿದರು. ಒಂದಿಷ್ಟು  ಕಾಸು ಕೂಡಿಟ್ಟರು. ಈಗ ಶಾಶ್ವತವಾಗಿ ಇಲ್ಲಿಯೇ ಸ್ವಾಮಿಗಳಾಗಿ ಕೂತರು…!’ ಹಾಗಂತ ಆಡಿಕೊಳ್ಳುತ್ತಿದ್ದ ಜನರ ಲೆಕ್ಕಾಚಾರವನ್ನು ತಲೆಕೆಳಗಾಗಿಸಲು ಶ್ರೀಧರರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ. ಪೀಠ, ಸನ್ಯಾಸಿ ಪಟ್ಟ, ಮಠದ ಸಂಪತ್ತು…ಊಹುಂ ಇವ್ಯಾವುದು ಆ ವೈರಾಗಿಯನ್ನು ಆಕರ್ಷಿಸಲೇ ಇಲ್ಲ. ಊರೂರು ಅಲೆಯುವುದು, ಧರ್ಮ ಪ್ರಚಾರ, ದೀನ ದಲಿತರ ಉದ್ದಾರ… ಇತ್ಯಾದಿಗಳನ್ನೇ ದಿನಚರಿಯನ್ನಾಗಿಸಿಕೊಂಡಿದ್ದ  ಶ್ರೀಧರರು, ಭಗವಾನ್ ಅನ್ನಿಸಿಕೊಂಡ ನಂತರವೂ ಶೀಗೆಹಳ್ಳಿಯಲ್ಲಿ  ಉಳಿಯಲಿಲ್ಲ.  ತಮ್ಮ ನಿತ್ಯದ ಸಮಾಜಮುಖಿ  ಬದುಕಿನ ಲೋಕಕ್ಕೆ  ಕಾಲಿಟ್ಟರು.

ಶೀಗೆಹಳ್ಳಿ ಬಿಟ್ಟ  ನಂತರ ಶ್ರೀಗಳು ಮಾಡಿದ್ದು  ಅಕ್ಷರಶಃ  ಸಾಮಾಜಿಕ ಕೆಲಸಗಳನ್ನು. ಮೂಢನಂಬಿಕೆಗಳನ್ನು ಹೋಗಲಾಡಿಸುವುದು, ಅನಾಥರು, ಭಿಕ್ಷುಕರು, ರೋಗಿಗಳ ಜತೆ ಬೆರೆಯುವುದು, ಕೈಲಾಗದ ಅಶಕ್ತರಿಗೆ ಆಶ್ರಯ ಒದಗಿಸಿ ಕೊಡುವುದು, ಶ್ರೀಮಂತರಿಂದ ಬಡವರಿಗೆ ಸಹಾಯ ಒದಗಿಸಿಕೊಡುವುದು…ಇಂತಹದ್ದೇ ಕಾರ್ಯಗಳನ್ನು ಕೈಗೆತ್ತಿಕೊಂಡು ತಮ್ಮ ಸಂಚಾರವನ್ನು ಮುಂದುವರಿಸಿದರು. ಲೋಕ ಸಂಚಾರದಲ್ಲಿ  ನಿರತವಾಗಿದ್ದ  ಶ್ರೀಧರರು  ೧೯೫೩ರ ಸುಮಾರಿಗೆ ಶಿವಮೊಗ್ಗ ಜಿಲ್ಲೆಯ ದಟ್ಟ  ಅರಣ್ಯಗಳ ಸಾಲಿನಲ್ಲಿ  ಒಂದಾಗಿರುವ ಬೆಂಕಟವಳ್ಳಿ  ಕಾನಿಗೆ ಬಂದರು. ಅಲ್ಲಿ  ಪುಟ್ಟದೊಂದು ದುರ್ಗಾದೇವಿಯ ದೇವಸ್ಥಾನವಿತ್ತು. ಅಲ್ಲಿ  ಶ್ರೀಗಳಿಗೆ ಪಾದಪೂಜೆ, ಭಿಕ್ಷಾ ಸೇವೆ ಏರ್ಪಡಿಸಲಾಗಿತ್ತು. ಅದನ್ನು ಸ್ವೀಕರಿಸಿದ ನಂತರ ಮತ್ತೆ ಲೋಕ ಸಂಚಾರ ಮುಂದುವರಿಯಿತು.

೧೯೫೪ ರಲ್ಲಿ  ಮತ್ತೆ ಶ್ರೀಗಳು ವದ್ದಳ್ಳಿಯತ್ತ ಮುಖ ಮಾಡಿದರು. ವದ್ದಳ್ಳಿಯನ್ನೇ ತಮ್ಮ ಧರ್ಮಕಾರ್ಯದ ಕೇಂದ್ರವನ್ನಾಗಿಸಿಕೊಳ್ಳಲು ನಿರ್ಧರಿಸಿದರು. ಅಲ್ಲಿಂದ ನಂತರ ವರದಹಳ್ಳಿಯ ಬೆಳವಣಿಗೆ ಆರಂಭವಾಯಿತು. ಕಲ್ಲು , ಮುಳ್ಳುಗಳ ಕಾಡಿನಲ್ಲೊಂದು ಧರ್ಮಧ್ವಜ ಸ್ಥಾಪನೆಯಾಯಿತು. ಜತೆಗೆ ‘ಶ್ರೀ ಶ್ರೀಧರಾಶ್ರಮ’ ಎಂಬ ಪುಟ್ಟದೊಂದು ಆಶ್ರಮವೂ ನಿರ್ಮಾಣವಾಯಿತು. ದೇವರ ಧಾರ್ಮಿಕ ಕಾರ್ಯಕ್ರಮಗಳು, ದತ್ತಾತ್ರೇಯ ದೇವರ ಆರಾಧನೆಗಳು ಆರಂಭವಾದವು. ಕಾಡಿನ ನಡುಮಧ್ಯದ ಕುಟೀರದತ್ತ ಜನ ಹರಿದು ಬರಲಾರಂಭಿಸಿದರು. ನೀರಿಲ್ಲದ ನಾಡಿನಲ್ಲಿ  ನೀರಿನ ಧಾರೆಯ ಹರಿಯಿತು. ಇವತ್ತಿಗೂ ‘ಶ್ರೀ ಶ್ರೀಧರ ತೀರ್ಥ’ ಎಂಬ ಹೆಸರಿನಡಿಯಲ್ಲಿ  ೨೪ ಗಂಟೆಗಳ ಕಾಲವೂ ಬೆಟ್ಟದ ತುದಿಯಿಂದ ನೀರು ಹರಿದು ಬರುವುದು ಈ ಕ್ಷೇತ್ರದ ವೈಶಿಷ್ಟ್ಯಗಳಲ್ಲಿ  ಒಂದು.

ವಸತಿಗೊಂದು ಖಾಯಂ ಜಾಗವಾದ ಮೇಲೆ ಸ್ವಾಮಿಗಳ ಭಕ್ತ ವ್ಯಾಪ್ತಿಯೂ ಹೆಚ್ಚಾಯಿತು. ಸಮಾಜಮುಖಿ ಯೋಜನೆಗಳು ವಿಸ್ತಾರವಾಗತೊಡಗಿತು. ಆಶ್ರಮ, ಅನಾಥರಿಗೆ, ಅಶಕ್ತರಿಗೆ, ಬಡವರಿಗೆ ಆಶ್ರಯ ತಾಣವಾಯಿತು.  ದುರ್ಬಲರಿಗೆ, ಬೇಡಿ ತಿನ್ನುವವರಿಗೆ ಶ್ರೀಗಳ ನೇತೃತ್ವದಲ್ಲೇ   ಊಟೋಪಚಾರದ ವ್ಯವಸ್ಥೆ  ಆರಂಭವಾಯಿತು. ಹಾಗಂತ ಶ್ರೀಗಳೇನೂ ಶಾಶ್ವತವಾಗಿ ಆಶ್ರಮದಲ್ಲಿ   ಕೂರಲಿಲ್ಲ. ಮತ್ತೆ ಸಂಚಾರ ಕಾರ್ಯ ಮುಂದುವರಿಸಿದರು. ರಾಜ್ಯದ ವಿವಿಧೆಡೆ ಚಾತುರ್ಮಾಸ ವ್ರತ ಆಚರಿಸಿದರು. ಉತ್ತರ ಭಾರತದತ್ತಲೂ ಮುಖ ಮಾಡಿದರು. ಕಾಶಿ, ಉಜ್ಜಯಿನಿ, ಹಿಮಾಲಯದ ತಪ್ಪಲುಗಳನ್ನು ತಿರುಗಿ ಬಂದರು.
ಇಡೀ ಭಾರತದ ಉದ್ದಗಲವನ್ನು ಸಂಚರಿಸಿದ ಶ್ರೀಗಳು ೧೯೬೭ರಲ್ಲಿ  ಮತ್ತೆ ವದ್ದಳ್ಳಿಗೆ ವಾಪಸಾದರು. ನಂತರ ಸತತ ಆರು ವರ್ಷಗಳ ಕಾಲ ಏಕಾಂತ ವ್ರತ ಆಚರಿಸಿ ಧಾನ್ಯ ಮಗ್ನರಾದ ಶ್ರೀಗಳು ೧೯-೪-೧೯೭೩ರಂದು ಇಹಲೋಕವನ್ನು ತ್ಯಜಿಸಿದರು. ಅಲ್ಲಿಂದ ನಂತರ ಶ್ರೀ ಕ್ಷೇತ್ರ ವರದಪುರದಲ್ಲಿ ಶ್ರೀಗಳ ಸಮಾದಿಯೇ ಪೂಜಾ ಕೇಂದ್ರವಾಯಿತು. ಈ ಆಶ್ರಮಕ್ಕೆ ಉತ್ತರಾದಿಕಾರಿಗಳಿಲ್ಲ. ಉತ್ತರಾಕಾದಿರಿ ಪರಂಪರೆಯ ಮಠವೂ ಇದಲ್ಲ! ಅವರಿಲ್ಲದಿದ್ದರ ವದ್ದಳ್ಳಿಯಲ್ಲಿ ಇವತ್ತಿಗೂ ಧಾರ್ಮಿಕ, ಸಾಮಾಜಿಕ ಕಾರ್ಯಗಳು ನಡೆದುಕೊಂಡು ಬರುತ್ತಿದೆ.

(ಈ ಲೇಖನದ ಆಧಾರ ಗ್ರ೦ಥ ಸದ್ಗುರು ಭಗವಾನ್ ಶ್ರೀ ಶ್ರೀಧರ ಚರಿತ್ರೆ )

******


ಭರತಖಂಡದಲ್ಲಿ ಅನೇಕ ಮಹಾತ್ಮರು ಆಗಿಹೋಗಿದ್ದಾರೆ. ‘ಸಂಭವಾಮಿ ಯುಗೇಯುಗೇ’ ಎಂದು ಗೀತೆಯಲ್ಲಿ ಸಾಕ್ಷಾತ್ ಭಗವಂತನೇ ಅಭಯ ನೀಡಿದಂತೆ, ಧರ್ಮಕ್ಕೆ ಚ್ಯುತಿ ಬರುವ ಸಂದರ್ಭದಲ್ಲೆಲ್ಲ ಶ್ರೇಷ್ಠ ಸಾಧು-ಸಂತರು ಅವತರಿಸಿ ಸಮಾಜದ ಉನ್ನತಿಗಾಗಿ ಶ್ರಮಿಸಿದ್ದಾರೆ. ಸದ್ಗುರು ಶ್ರೀಧರ ಸ್ವಾಮಿಗಳು ಕೂಡ ಅಂತಹ ಮಹಾಮಹಿಮರ ಸಾಲಿನಲ್ಲಿ ನಿಲ್ಲುತ್ತಾರೆ. ಅವರ ಆರಾಧನೆ ನಿಮಿತ್ತ ಈ ಲೇಖನ.

| ಗೌತಮಾಯನ

1951-52ರ ಸಮಯ. ಶ್ರೀಧರ ಸ್ವಾಮೀಜಿಗಳು ಕಾಶಿಯ ಗಂಗಾ ಮಹಲಿನಲ್ಲಿದ್ದರು. ಶ್ರೀಗಳವರ ಆಜ್ಞೆಯಂತೆ ಕಾಶಿಗೆ ತೆರಳಿ, ಪತಿಯೊಂದಿಗೆ ಅಧ್ಯಾತ್ಮಸಾಧನೆಯಲ್ಲಿ ತೊಡಗಿದ್ದ ಸಾಧಿ್ವ ಸಾವಿತ್ರಕ್ಕ ಅವರಿಗೆ ಕಫ ಕ್ಷಯ ರೋಗ ಪ್ರಾರಂಭವಾಗಿ ಅವಸಾನ ಹತ್ತಿರ ಬಂದಿದೆಯೆಂದೇ ಅನ್ನಿಸತೊಡಗಿತ್ತು. ಜಾತಕ ನೋಡಿದ್ದವರೂ ಅವರ ಆಯಸ್ಸು ಸ್ವಲ್ಪವೇ ದಿನ ಎಂದಿದ್ದರು. ಒಮ್ಮೆ ಸಾವಿತ್ರಕ್ಕ ಎಚ್ಚರ ತಪ್ಪಿ ಬಿದ್ದುಬಿಟ್ಟರು. ಆ ಶಬ್ದ ಕೇಳಿ ಪಕ್ಕದ ಕೋಣೆಯೊಂದರಲ್ಲಿದ್ದ ಶ್ರೀಗಳು ಲಗುಬಗೆಯಿಂದ ಬಂದು ನೋಡಿದರು. ಸಾವಿತ್ರಕ್ಕನ ಮಾತು ನಿಂತುಬಿಟ್ಟಿತ್ತು. ಅಲ್ಲೇ ಇದ್ದ ಸಾವಿತ್ರಕ್ಕನ ಪತಿ ಭಾಗವತರನ್ನು ಕರೆದು, ಒಂದು ಕೊಡ ಗಂಗಾಜಲ ಹಾಗೂ ತುಳಸಿಯನ್ನು ತೆಗೆದುಕೊಂಡು ಬಾ ಎಂದರು. ಜಲ ಬಾಯಿಗೆ ಹಾಕಿದ ಸ್ವಲ್ಪ ಹೊತ್ತಿಗೆ ಸಾವಿತ್ರಕ್ಕನ ದೇಹದಲ್ಲಿ ಶಕ್ತಿ ಸಂಚಾರವಾದಂತಾಯಿತು. ಸಾವಿತ್ರಕ್ಕ ಎಚ್ಚರಗೊಂಡು ಧನ್ಯತಾಭಾವದಿಂದ ಶ್ರೀಗಳಿಗೆ ನಮಿಸಿದಳು…

ಹೀಗೆ ಭಕ್ತರ ರಕ್ಷಣೆಗೆ ಸದಾ ಬೆನ್ನೆಲುಬಾಗಿ ನಿಂತು, ಭಕ್ತರಿಗಾಗಿಯೇ ಹಲವಾರು ಪವಾಡಗಳನ್ನು ಮಾಡಿರುವವರು ಶ್ರೀಧರ ಸ್ವಾಮೀಜಿ. 1907ರ ಡಿ.19ರಂದು ಕಲಬುರಗಿ ಜಿಲ್ಲೆಯ ಲಾಡ್​ಚಿಂಚೋಳಿ ಎಂಬಲ್ಲಿ, ದತ್ತ ಜಯಂತಿಯಂದು ಶ್ರೀಧರ ಸ್ವಾಮಿಗಳು ಜನಿಸಿದರು. ತಂದೆ ನಾರಾಯಣರಾವ್ ದೇಗಲೂರ್ಕರ್, ತಾಯಿ ಕಮಲಾಬಾಯಿ. 3ನೇ ವಯಸ್ಸಿನಲ್ಲಿ ತಂದೆಯನ್ನೂ, 8ನೇ ವಯಸ್ಸಿನಲ್ಲಿ ಅಣ್ಣ ಹಾಗೂ ಅಕ್ಕನನ್ನೂ, 14ನೇ ವಯಸ್ಸಿನಲ್ಲಿ ತಾಯಿಯನ್ನೂ ಕಳೆದುಕೊಂಡ ಶ್ರೀಧರರು ಲೌಕಿಕ ಬದುಕಿನ ನಿರರ್ಥಕತೆಯನ್ನು ಅರಿತು, ಬದುಕಿನ ನಿಜವಾದ ಗುರಿಯ ಕುರಿತು ಚಿಂತಿಸತೊಡಗಿದರು.

ಕಲಬುರಗಿ ಹಾಗೂ ಪುಣೆಯಲ್ಲಿ ಶಿಕ್ಷಣ ಪೂರೈಸಿದರು. ಪುಣೆಯಲ್ಲಿ ಓದುತ್ತಿದ್ದಾಗ ಶ್ರೀಧರರ ಚಿತ್ತ ತಪಸ್ಸಿನತ್ತ ಹೊರಳಿತು. ಸನ್ಯಾಸಿಯಾಗುವ ಹಂಬಲ ಬಲವಾಯಿತು. ‘ಆತ್ಮೋದ್ಧಾರದೊಂದಿಗೆ ಮೋಕ್ಷ ಪಡೆಯುವುದೇ ಮಾನವ ಜೀವನದ ಮುಖ್ಯ ಧ್ಯೇಯ. ಆಂಗ್ಲ ಪ್ರಣೀತ ವಿದ್ಯಾಭ್ಯಾಸದಿಂದ ಜೀವನದ ನಿಜವಾದ ಗುರಿಯನ್ನು ತಲುಪಲು ಸಾಧ್ಯವಿಲ್ಲ’ ಎಂಬ ತೀರ್ವನಕ್ಕೆ ಬಂದರು. ಯೋಗ್ಯ ಗುರುವಿಗಾಗಿ ಶೋಧ ನಡೆಸುತ್ತ, ದಕ್ಷಿಣಕ್ಕೆ ಬಂದ ಅವರು ಗೋಕರ್ಣ ಮಹಾಬಲೇಶ್ವರ ದೇವರ ಅಷ್ಟಬಂಧ ಮಹೋತ್ಸವದಲ್ಲಿ ಸೇವೆ ಸಲ್ಲಿಸಿದರು. ನಂತರ ಶೀಗೆಹಳ್ಳಿ ಪರಮಾನಂದಮಠಕ್ಕೆ ಬಂದು ಶ್ರೀ ಶಿವಾನಂದ ಮಹಾಸ್ವಾಮಿಗಳ ಶಿಷ್ಯರಾದರು.

ಅಲ್ಲಿಂದ ಶಿರಸಿ, ಬನವಾಸಿ, ಕೊಡಚಾದ್ರಿ ಮುಂತಾದ ಕಡೆ ಹೋಗಿ ಧರ್ಮಪ್ರಸಾರ ಮಾಡಿದರು. ಶ್ರೀ ಶಿವಾನಂದ ಸ್ವಾಮಿಗಳ ಕಾಲಾನಂತರ ಶೀಗೇಹಳ್ಳಿ ಮಠಕ್ಕೆ ವಾಪಸಾದ ಶ್ರೀಧರರು ಅಲ್ಲಿಯೇ 1942ರ ವಿಜಯದಶಮಿಯಂದು ಹತ್ತಾರು ಗುರುಗಳ ಸಮ್ಮುಖದಲ್ಲಿ ವಿಧಿವತ್ತಾಗಿ ಸನ್ಯಾಸತ್ವ ಸ್ವೀಕರಿಸಿದರು. ಪರಮಹಂಸ ಪರಿವ್ರಾಜಕಾಚಾರ್ಯ ಬ್ರಹ್ಮಚೈತನ್ಯ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಗಳಾದರು. ಶೀಗೆಹಳ್ಳಿ ಮಠವನ್ನು ಮರುನಿರ್ವಿುಸಿದರು. ಮಠಕ್ಕಾಗಿ ಒಂದಿಷ್ಟು ಹಣವನ್ನೂ ಉಳಿಸಿದರು. ಇನ್ನು ಇವರು ಇಲ್ಲೇ ಶಾಶ್ವತವಾಗಿ ಇರುತ್ತಾರೆಂದು ಜನ ಮಾತನಾಡಿಕೊಳ್ಳುವ ಮೊದಲೇ ಮತ್ತೆ ಲೋಕಸಂಚಾರ, ಸಮಾಜಮುಖಿ ಕೆಲಸ ಆರಂಭಿಸಿದರು. ಭಗವಾನ್ ಪಟ್ಟ, ಮಠದ ಸಂಪತ್ತು ಯಾವುದೂ ಅವರನ್ನು ತಡೆಯಲಾಗಲಿಲ್ಲ. ಮೂಢನಂಬಿಕೆ ಹೋಗಲಾಡಿಸುವುದು, ಬಡವರ ಜತೆ ಬೆರೆಯುವುದು, ಅಶಕ್ತರಿಗೆ ಆಶ್ರಯ ನೀಡುವುದು, ಮುಂತಾದ ಕಾರ್ಯಗಳಲ್ಲಿ ತೊಡಗಿದರು.

1954ರಲ್ಲಿ ಶ್ರೀಗಳು ಕಲ್ಲು, ಮುಳ್ಳುಗಳ ಕಾಡಿನಂತಿದ್ದ ವದ್ದಳ್ಳಿ(ವರದಹಳ್ಳಿ)ಯನ್ನೇ ತಮ್ಮ ಕಾರ್ಯಕ್ಷೇತ್ರವಾಗಿಸಿಕೊಳ್ಳಲು ನಿರ್ಧರಿಸಿದರು. ಶ್ರೀಧರಾಶ್ರಮವನ್ನು ಸ್ಥಾಪಿಸಿದರು. ಧಾರ್ವಿುಕ ಕಾರ್ಯಕ್ರಮಗಳು ಆರಂಭವಾದವು. ಭಕ್ತರು ಹರಿದು ಬರತೊಡಗಿದರು. ಶ್ರೀಗಳು ಮಹತ್ವ ನೀಡುತ್ತಿದ್ದುದು ಗೋಸೇವೆ ಮತ್ತು ಅನ್ನದಾನಕ್ಕೆ. 20ನೇ ವಯಸ್ಸಿನ ನಂತರ ಯಾವತ್ತೂ ಹಣವನ್ನು ರ್ಸ³ಸದ ಶ್ರೀಧರ ಸ್ವಾಮಿಗಳು, ಆಶ್ರಮಕ್ಕೆ ಬಂದವರಿಗೆಲ್ಲ ಅನ್ನದಾನಕ್ಕೆ ವ್ಯವಸ್ಥೆ ಮಾಡಿದ್ದರು. ‘ಕಲ್ಪವೃಕ್ಷ, ಕಾಮಧೇನುಗಳನ್ನು ಶ್ರೀಧರಾಶ್ರಮದಲ್ಲಿ ಸ್ಥಾಪನೆ ಮಾಡಿದ್ದೇನೆ’ ಎನ್ನುತ್ತಿದ್ದರು. ಅನಾಥರಿಗೆ, ಅಶಕ್ತರಿಗೆ, ಬಡವರಿಗೆ ಇದು ಆಶ್ರಯ ತಾಣವಾಯಿತು. ದುರ್ಬಲರಿಗೆ, ಬೇಡಿ ತಿನ್ನುವವರಿಗೆ ಸ್ವಾಮೀಜಿಯ ನೇತೃತ್ವದಲ್ಲೇ ಊಟೋಪಚಾರದ ವ್ಯವಸ್ಥೆ ಆಯಿತು.

ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲಿಷ್, ಮರಾಠಿ ಮುಂತಾದ ಭಾಷೆಗಳನ್ನು ಬಲ್ಲವರಾದ ಶ್ರೀಗಳು ಅನೇಕ ದೇವಾನು ದೇವತೆಗಳ ಬಗ್ಗೆ, ತಮ್ಮ ಗುರುಗಳಾದ ಸಮರ್ಥ ರಾಮದಾಸರು ಹಾಗೂ ಶಿವಾನಂದ ಸ್ವಾಮೀಜಿಗಳ ಕುರಿತು, ಈ ಭಾಷೆಗಳಲ್ಲಿ ಛಂದೋಬದ್ಧವಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಉಪನಿಷತ್ತುಗಳ ಬಗ್ಗೆಯೂ ಬರೆದಿದ್ದಾರೆ. ಇಂಗ್ಲಿಷ್​ನಲ್ಲೂ ಕವಿತೆ ರಚಿಸಿದ್ದಾರೆ.

ಶ್ರೀಧರ ತೀರ್ಥದ ವೈಶಿಷ್ಟ್ಯ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವದ್ದಳ್ಳಿ (ಈಗಿನ ವರದಹಳ್ಳಿ) 1954ರಲ್ಲಿ ಕಲ್ಲು, ಮುಳ್ಳುಗಳಿಂದ ಕೂಡಿದ್ದ ಕಾಡು. ಅಲ್ಲಿ ಶ್ರೀಧರ ಸ್ವಾಮಿಗಳು ಧರ್ಮಧ್ವಜ ಸ್ಥಾಪಿಸಿದ ಬಳಿಕ, ನೀರಿಲ್ಲದ ಆ ಸ್ಥಳದಲ್ಲಿ ಜಲಧಾರೆ ಹರಿಯಿತು. ಇಂದಿಗೂ 24 ಗಂಟೆ ಬೆಟ್ಟದ ತುದಿಯಿಂದ ನೀರು ಹರಿದು ಬರುವುದು ಈ ಕ್ಷೇತ್ರದ ವಿಶೇಷ. ಅದಕ್ಕೆ ಶ್ರೀಧರ ತೀರ್ಥ ಎಂದು ಹೆಸರು. ಇಲ್ಲಿಯೂ ಶ್ರೀಧರ ಸ್ವಾಮಿಗಳು ಸ್ಥಾವರವಾಗದೆ ಕಾಶಿ, ಉಜ್ಜಯಿನಿ, ಹಿಮಾಲಯದ ತಪ್ಪಲು ಸೇರಿದಂತೆ ಭಾರತದ ಉದ್ದಗಲವನ್ನು ಸಂಚರಿಸಿದರು. 1967ರಲ್ಲಿ ಮತ್ತೆ ವದ್ದಳ್ಳಿಗೆ ವಾಪಸಾದರು. ಅಲ್ಲಿ ಆರು ವರ್ಷ ಏಕಾಂತ ವ್ರತ ಆಚರಿಸಿ 1973ರ ಏಪ್ರಿಲ್ 19ರಂದು ಇಹಲೋಕ ತ್ಯಜಿಸಿದರು. ಈ ಆಶ್ರಮಕ್ಕೆ ಉತ್ತರಾಧಿಕಾರಿಗಳಿಲ್ಲ. ಉತ್ತರಾಧಿಕಾರಿ ಪರಂಪರೆಯ ಮಠವೂ ಇದಲ್ಲ!

ಅಸಾಧ್ಯ ಕೆಲಸ ಸಹಜ ಮಾಡಿದರು

ಹೊನ್ನಾವರದ ಅರೆಯಂಗಡಿ ಸಮೀಪದ ಶ್ರೀ ಕರಿಕಾನು ಪರಮೇಶ್ವರಿ ಅಮ್ಮನವರ ದೇವಾಲಯದ ಜೀಣೋದ್ಧಾರ ಸಾಧ್ಯವೇ ಇಲ್ಲ ಎಂಬಂತಿತ್ತು. ಸ್ವಾಮಿಗಳ ಸಾಮರ್ಥ್ಯದಿಂದಾಗಿ 1954ರಲ್ಲಿ ಈ ಕಾರ್ಯ ನೆರವೇರಿತು. ಅಂತೆಯೇ ಇನ್ನೂ ಅನೇಕಾನೇಕ ದೇವಾಲಯಗಳ ಜೀಣೋದ್ಧಾರ, ಕಲಾವೃದ್ಧಿ, ಉದ್ಧಾರಗಳೂ ಸ್ವಾಮಿಗಳಿಂದ ನಡೆದಿದ್ದವು. ಈ ಸಮಯದಲ್ಲಿ ಲೆಕ್ಕವಿಲ್ಲದಷ್ಟು ಜನರು ಸ್ವಾಮಿಗಳ ಕರುಣಾಕಟಾಕ್ಷದಿಂದ ಭೂತ-ಪಿಶಾಚ-ಬ್ರಹ್ಮರಾಕ್ಷಸ ಬಾಧೆಗಳನ್ನು, ತಮ್ಮ ಲೌಕಿಕ ಸಮಸ್ಯೆಗಳನ್ನು, ದೂರ ಮಾಡಿಕೊಂಡಿದ್ದಾರೆ. ಇಂದಿಗೂ ಮಾಡಿಕೊಳ್ಳುತ್ತಿದ್ದಾರೆ.
ಮೂರು ಸಲ ದೇಶ ಸುತ್ತಿದ ಪರಿವ್ರಾಜಕ
ಶ್ರೀಧರ ಸ್ವಾಮೀಜಿ ಲೋಕಕಲ್ಯಾಣ, ಧರ್ಮದ ಉನ್ನತಿ, ಅಧ್ಯಾತ್ಮಿಕ ತತ್ವಗಳ ಪ್ರಸಾರ ಮಾಡುತ್ತಾ, ಭಾರತವನ್ನು ಮೂರು ಬಾರಿ ಸುತ್ತಿದರು. ಕರ್ನಾಟಕ, ಮಹಾರಾಷ್ಟ್ರ ಭಾಗದಲ್ಲಿ ಅಸಂಖ್ಯಾತ ಊರುಗಳಲ್ಲಿ ಸಂಚರಿಸಿ, ಅಗಣಿತ ಭಕ್ತರಿಗೆ ಒಳಿತನ್ನು ಮಾಡಿದರು. ಪವಾಡ ಮಾಡುವುದರಲ್ಲಿ ಅನಾಸಕ್ತರಾದರೂ, ಸ್ವಾಮಿಗಳ ನಡೆನುಡಿಗಳೇ ಪವಾಡವಾಗಿ ಭಕ್ತರ ಭಕ್ತಿ ನಂಬಿಕೆಗಳನ್ನು ಧೃಢಪಡಿಸಿದವು.

(ವಿಜಯವಾಣಿ ಸಂಗ್ರಹ)
******

ಹೆದರಬೇಡಿ, ಇಕ್ಕೇರಿ ಅಘೋರೇಶ್ವರನಿಗೆ ರುದ್ರಾಭಿಷೇಕ,ಪರ್ಜನ್ಯ ಮಾಡಿ,ಅವನ ಕೃಪೆಯಿ೦ದ ಮಳೆಯಾಗುತ್ತದೆಃ-
ಭಗವಾನ್ ಸದ್ಗುರು ಶ್ರೀ ಶ್ರೀಧರ ಮಹಾಸ್ವಾಮೀಗಳವರು ಎರಡನೆಯ ಬಾರಿ ಶ್ರೀ ದುರ್ಮುಖಿ ನಾಮ ಸ೦ವತ್ಸರದಲ್ಲಿ  ವದ್ದಳ್ಳಿಯಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊ೦ಡಿದ್ದರು. ದುರ್ಮುಖಿ ಸ೦ವತ್ಸರದ ಹೆಸರಿಗೆ ತಕ್ಕ೦ತೆ ಆ ವರ್ಷದಲ್ಲಿ ಮಳೆ ವಾಡಿಕೆಗಿ೦ತ ತು೦ಬಾ ಕಡಿಮೆಯಾಗಿ ಸಾಗರ ಪ್ರಾ೦ತ್ಯದವರು ಕ೦ಗಾಲಾಗಿದ್ದರು. ಮಲೆನಾಡು ಬರಪೀಡಿತವಾಗುತ್ತಿರುವುದು ಸ್ವಷ್ಟವಾಗಿತ್ತು. ಆಗ ಅನೇಕ ಹಿರಿಯರು ಗುರುಗಳ ಹತ್ತಿರ ಏನಾದರೂ ಮಾಡಿ ಸಾಗರ ಪ್ರಾ೦ತ್ಯ ಬರಗಾಲಕ್ಕೆ ಒಳಗಾಗದ೦ತೆ ಮತ್ತು ಚನ್ನಾಗಿ ಮಳೆಯಾಗುವ೦ತೆ ಅನುಗ್ರಹ ಮಾಡಬೇಕೆ೦ದು ಪ್ರಾರ್ಥಿಸಿಕೊ೦ಡರು. ಅದನ್ನು ಕೇಳಿ ಗುರುಗಳು ಸ್ವಲ್ಪ ಹೊತ್ತು ಧ್ಯಾನಮಗ್ನರಾಗಿ ನ೦ತರ "ಇಕ್ಕೇರಿ ಅಘೋರೇಶ್ವರನೇಕೋ ಸ್ವಲ್ಪ ಅಸಮಾಧಾನಗೊ೦ಡತಿದೆ. ಇಕ್ಕೇರಿ ಸೀಮೆಯ ವೈದಿಕರೆಲ್ಲರೂ ಸೇರಿ ಸಾಧ್ಯವಾದಷ್ಟು ಬೇಗ ರುದ್ರಾಭಿಷೇಕ,ಪರ್ಜನ್ಯ ಮಾಡಿ, ಅವನ ಕೃಪೆಯಿ೦ದ ಖ೦ಡಿತ ಮಳೆಯಾಗುತ್ತದೆ;ಹೆದರಬೇಡಿ' ಎ೦ದು ಸ೦ತೈಸಿ ಕಳುಹಿಸಿದರು.
"ಶ್ರೀ ಗುರುಗಳ ನಿರ್ದೇಶನದ೦ತೆ ಆಶ್ವೀಜ ಪೂರ್ಣಿಮೆಯ೦ದು ಅಘೋರೇಶ್ವರ ದೇವಾಲಯದ ಮುಖ್ಯ ಅರ್ಚಕರಾಗಿದ್ದ ವೇ|| ಇಕ್ಕೇರಿ ಸುಬ್ಬಾಭಟ್ಟರ ನೇತ್ವತ್ವದಲ್ಲಿ ಪೂಜೆಯನ್ನು ಪ್ರಾರ೦ಭಿಸಲಾಯಿತು. ಸುಮಾರು ೬೦-೭೦ ಜನ ಋತ್ವಿಜರು ಮತ್ತು ಬೇರೆ ಸೀಮೆಯ ಹಿರಿಯ ಪುರೋಹಿತರೂ ಬ೦ದಿದ್ದರು.
ವೇ|| ಇಕ್ಕೇರಿ ರಾಮಭಟ್ಟರು ಪರ್ಜನ್ಯ ಮಾಡುವ ವಿಧಿ-ವಿಧಾನಗಳನ್ನು ತಿಳಿಸಿ ಮುಖ್ಯವಾಗಿ ದೇವರ ಬಲಭಾಗದ ಕೆರೆಯಿ೦ದ ತ೦ದ ನೀರಿನಿ೦ದ ಅಘೋರೇಶ್ವರನಿಗೆ ಅಭಿಷೇಕ ಮಾಡಿದ ಪವಿತ್ರ ತಿರ್ಥವು ತಾನಾಗಿ ಹರಿದು(ನೀರು ಬೇಗ ಹರಿದುಹೋಗುವ೦ತೆ ಚರ೦ಡಿ ಮಾಡುವ೦ತಿಲ್ಲ, ಯಾರೂ ಅದನ್ನು ಮೆಟ್ಟುವ೦ತಿಲ್ಲ)ಕೆರೆಯನ್ನು ಸೇರಬೇಕು, ಅದಕ್ಕಿ೦ತ ಮೊದಲು ನಾವು ರುದ್ರಹೋಮ,ಜಪ,ತರ್ಪಣಾದಿಗಳು ಮುಗಿಸಿರಬೇಕು. ಅದಕ್ಕಾಗಿ ತಾವೆಲ್ಲರೂ ಶ್ರದ್ದಾಭಕ್ತಿಗಳಿ೦ದ ಈ ಪೂಜಾ ಕೈ೦ಕರ್ಯವನ್ನು ನಡೆಸಿಕೊಡಬೇಕು ಎ೦ದು ಪ್ರಾರ್ಥಿಸಿಕೊ೦ಡರು.
ಅದರ೦ತೆ ಜಪಕ್ಕಾಗಿ ೧೧ ಜನ ಹಿರಿಯ ಋತ್ವಿಜರನ್ನು ದೇವಾಲಯದ ಎದುರಿನ,ದೇವರ ಬಲಭಾಗದಲ್ಲಿರುವ ಕೆರೆಯಲ್ಲಿ ನಾಭಿಯ ತನಕ ಮುಳುಗಿ ಜಪ ಪ್ರಾರ೦ಭಿಸಿದರು ಇನ್ನು ೧೧ ಜನ ಋತ್ವಿಜರು ರುದ್ರಹೋಮವನ್ನು ಪ್ರಾರ೦ಭಿಸಿದರು. ಉಳಿದ ಜನ ಮಡಿಯುಟ್ಟು ಒ೦ದೊ೦ದು ತಾಮ್ರದ ಕೊಡ ತೆಗೆದುಕೊ೦ಡು ಸಾಲಾಗಿ ದೇವರ ಬಲಭಾಗದ ಕೆರೆಯಿ೦ದ ನೀರುತರಲು ಪ್ರಾರ೦ಭಿಸಿದರು. ಮಹಾನ್ಯಾಸ ಪೂರ್ವಕ ರುದ್ರ ಹೇಳಲು ಪ್ರಾರ೦ಭಿಸುತ್ತಿದ್ದ೦ತೆಯೇ ಅಭಿಷೇಕವನ್ನು ಮಾಡಲು ಪ್ರಾರ೦ಭಿಸಲಾಯಿತು. ನೀರು ತರುವವರು ಬಲಭಾಗದ ಬಾಗಿಲಿನಿ೦ದ ಪ್ರವೇಶಿಸಿ ನೀರನ್ನು ತರುತ್ತಿದ್ದರೆ ಎಡಭಾಗದ ಬಾಗಿಲಿನಿ೦ದ ಖಾಲಿ ಕೊಡವನ್ನು ತೆಗೆದುಕೊ೦ಡು ಹೋಗಲಾಗುತ್ತಿತ್ತು. ನೂರಾರು ಸ೦ಖ್ಯೆಯಲ್ಲಿ ಸೇರಿದ್ದ ಎಲ್ಲರ ಒ೦ದೇ ಮಾತೆ೦ದರೆ "ಶ್ರೀಧರ ಸ್ವಾಮೀಗಳು ಪರ್ಜನ್ಯ ಮಾಡಿದರೆ ಮಳೆ ಬರುತ್ತೆ ಎ೦ದಿದ್ದಾರೆ, ಖ೦ಡಿತ ಮಳೆ ಬರುತ್ತದೆ" ಎ೦ದು.
ಆದರೆ ಅ೦ದು ಮಳೆ ಬರುತ್ತದೆ ಎ೦ದು ಯಾರು ನಿರೀಕ್ಷಿಸಲು ಸಾಧ್ಯವಾಗದ೦ತಹ ಪರಿಸ್ಥಿತಿಯಿತ್ತು. ಬಿಸಿಲು ನೀರು ತರುವವರಿಗೆ ಬೆವರಿಳಿಸುವ೦ತೆ ಮಾಡಿತ್ತು.
ಎರಡನೆ ಅವಧಿಯ ರುದ್ರ ಮುಗಿಯುವ ಹೊತ್ತಿಗೆ ಅಭಿಷೇಕದ ತೀರ್ಥವು ದೇವಾಲಯದ ಮು೦ಭಾಗಕ್ಕೆ ಬ೦ದು ಎಲ್ಲರ ಉತ್ಸಾಹವನ್ನು ಹೆಚ್ಹಿಸಿತ್ತು. ಸುಮಾರು ಎರಡು ಗ೦ಟೆಯ ಹೊತ್ತಿಗೆ ರುದ್ರಹೋಮದ ಪೂರ್ಣಾಹುತಿಯಾಗುತ್ತಿದ್ದ೦ತೆಯೇ ಆಕಾಶದಷ್ಟೆತ್ತರಕ್ಕೆ ಮೆಟ್ಟಿಲು ಮೆಟ್ಟಿಲಾಗಿ ಹೋಗುತ್ತಿದ್ದ ಹೋಮಧೂಮವು ಶ್ರೀಧರ ಸ್ವಾಮೀಗಳ ಮತ್ತು ಅಘೋರೇಶ್ವರನ ಸ೦ದೇಶವನ್ನು ವರುಣನಿಗೆ ತಲುಪಿಸಲು ಹೋಗುತ್ತಿವೆಯೋ ಎ೦ಬ೦ತೆ ತೋರುತ್ತಿತ್ತು. ಕೆಲವೇ ಕ್ಷಣಗಳಲ್ಲಿ ಸ೦ದೇಶವನ್ನು ಸ್ವಿಕರಿಸಿದ ವರುಣನು ಅದಕ್ಕೆ ಒಪ್ಪಿಗೆಯನ್ನು ಸೂಚಿಸಿದ೦ತೆ ಆಕಾಶದಲ್ಲಿ ಮೋಡಕಟ್ಟಲು ಪ್ರಾರ೦ಭವಾಯಿತು. ಪೂರ್ಣಾಹುತಿ ಮುಗಿದಾಗ ದೇವಾಲಯದ ಮೆಟ್ಟಿಲುಗಳ ಮೇಲೆ ಪ್ರವಾಹದೋಪಾದಿಯಲ್ಲಿ ಅಭಿಷೇಕದ ನೀರು ಹರಿಯುತ್ತಿತ್ತು. ಕೆರೆಯಿ೦ದ ನೀರುತರುತ್ತಿದ್ದವರು ತಮ್ಮ ದಾರಿಯನ್ನು ಬದಲಾಯಿಸಿ ಕೊಳ್ಳಬೇಕಾಯಿತು.
ಈಗ ಎಲ್ಲರ ದೃಷ್ಟಿ ಕೆರೆಯ ಕಡೆಗೆ ನೆಟ್ಟಿತ್ತು. ಕೆರೆಯ ಕಡೆಗೆ ಹರಿಯುತ್ತಿದ್ದ ನೀರು ನಡುನಡುವೆ ನಿಲ್ಲುತ್ತಾ ಮ೦ದಗಮನೆಯಾಗಿ ಐದು ಗ೦ಟೆಯ ಹೊತ್ತಿಗೆ ಕೆರೆಯನ್ನು ಸಮೀಪಿಸಿದಾಗ ಅಬ್ಬರಿಸಿದ ಸಿಡಿಲಿನ ಘರ್ಜನೆಯಿ೦ದ ಇಡೀ ಇಕ್ಕೇರಿ ಸೀಮೆ ಕ೦ಪಿಸಿತು.
ಅಷ್ಟು ಹೊತ್ತಿಗೆ ಪೂಜೆಯನ್ನು ಮುಗಿಸಿದ ವೇ|| ಸುಬ್ಬಾಭಟ್ಟರು ಅಘೋರೇಶ್ವರನಿಗೆ ಮಹಾಮ೦ಗಳಾರತಿಯನ್ನು ಮಾಡಿ ಎಲ್ಲರಿಗೂ ಪ್ರಸಾದವನ್ನು ವಿತರಿಸಿದರು. ಎಲ್ಲರಿಗೂ ನ೦ಬಲಾಗದ೦ತ ಪವಾಡ ಸ೦ಭವಿಸಿ, ಕಾರ್ಮುಗಿಲು ದಟ್ಟೈಸಿತ್ತು, ಗುಡುಗು, ಸಿಡಿಲುಗಳ ಘರ್ಜನೆ ನಭೋಮ೦ಡಲವನ್ನೆಲ್ಲಾ ವ್ಯಾಪಿಸಿದ ಮಿ೦ಚು ಎಲ್ಲರಲ್ಲೂ ವಿದ್ಯುತ್ ಸ೦ಚಾರವನ್ನುಟುಮಾಡಿತ್ತು. 
ಆಗ ಅಲ್ಲಿ ಸೇರಿದ್ದವರೆಲ್ಲರೂ ಒಟ್ಟಾಗಿ "ಭಗವಾನ್ ಸದ್ಗುರು ಶ್ರೀಧರ ಸ್ವಾಮೀಜೀ ಕೀ ಜೈ, ಇಕ್ಕೇರಿ ಪುರವರಾಧಿಶ್ವರ ಅಘೋರೇಶ್ವರ ಸ್ವಾಮೀಜೀ ಕೀ ಜೈ" ಎ೦ದು ಕೂಗಿದ ದ್ವನಿ ಮುಗಿಲು ಮುಟ್ಟಿತ್ತು.

ಸ೦ಗ್ರಹಃ-ಆರ್ ಎನ್ ಶಾಸ್ತ್ರಿಯವರ 'ಸ್ಮೃತಿ ಮಧುರ ಶ್ರೀಧರ" ಕೃತಿಯಿ೦ದ

*****

ಕ್ರಿ.ಶ. ೧೫೯೮ ರಲ್ಲಿ ಜನಿಸಿದ ಸ್ವಾಮಿ ಸಮರ್ಥ ರಾಮದಾಸರು ಗುರುಗಳಲ್ಲಿ ಮೇರುಪರ್ವತದೋಪಾಧಿಯಲ್ಲಿ ನಿಲ್ಲುತ್ತಾರೆ. ಮಹಾಮಹಿಮ ಆಂಜನೇಯನ ಅವತಾರವೇ ಶ್ರೀ ಸಮರ್ಥ ರಾಮದಾಸರಾಗಿದ್ದಾರೆ. ಹದಿನಾರನೆಯ ಶತಮಾನದಲ್ಲಿ , ಸಜ್ಜನರು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಇವರ ಅವತಾರವಾಯಿತು. ಶ್ರೀ ಸಮರ್ಥ ರಾಮದಾಸರೆಂದರೆ, ಯವನರು ಸಂಪೂರ್ಣ ಭಾರತವನ್ನು ವಶಮಾಡಿಕೊಳ್ಳಲೋಸುಗ ದಬ್ಬಾಳಿಕೆಯನ್ನು ನಡೆಸುತ್ತಿದ್ದ ಕಾಲದಲ್ಲಿ, ಅವರನ್ನೆದುರಿಸಿ ಸ್ವರಾಜ್ಯ ಸ್ಥಾಪನೆ ಮಾಡಿದ ಶ್ರೀ ಛತ್ರಪತಿ ಶಿವಾಜಿ ಮಹಾರಾಜನ ಗುರುಗಳಾಗಿದ್ದಾರೆ. ಧರ್ಮ ರಕ್ಷಣೆಗಾಗಿ ಅವತರಿಸಿದ ಇವರು , ಪಟ್ಟಶಿಷ್ಯ ಶಿವಾಜಿ ಮಹಾರಾಜನಿಗೆ ಸೂಕ್ತ ಮಾರ್ಗದರ್ಶನ ಮಾಡಿ , ಆ ಮೂಲಕ ಧರ್ಮವುಳಿಯಲು ಕಾರಣರಾದವರು.

ಸಮರ್ಥರು ಆರ್ಥರಾಗಿ ತಮ್ಮ ಬಳಿ ಬಂದು, ಭಕ್ತಿಯಿಂದ ಪ್ರಾರ್ಥನೆ ಮಾಡಿದಂತಹ ಜನರೆಲ್ಲರಿಗೂ ಅವರ ಮನೋಕಾಮನೆ ಪೂರ್ತಿಯಾಗುವಂತೆ ವರ ನೀಡಬಲ್ಲಂತ ಮಹಾಮಹಿಮರು ಎಂಬುದು ಲೋಕವಿದಿತ. ಅವರ ಬಾಲ್ಯದಿಂದಲೂ ಅವರ ಈ ಗುಣವನ್ನು ನೋಡಿದ ಭಕ್ತರು ಅವರನ್ನು ಕೊಂಡಾಡುತ್ತಾರೆ. "ರಾಮದಾಸಃ ಕಲೌಯುಗೇ" ಎಂಬ ಭವಿಷ್ಯತ್ ಪುರಾಣ ಮುಂತಾದ ಪ್ರಮಾಣಗಳಿಂದ , ಶ್ರೀಸಮರ್ಥರು ಆಂಜನೇಯನ ಅವತಾರವೇ ಆಗಿದ್ದಾರೆ ಎಂದು ಪ್ರಸಿದ್ದವಿದೆ. ಮೂರ್ತಿಭಂಜಕರೂ , ಕ್ರೂರಿಗಳೂ, ಪರಧರ್ಮಪೀಡಕರೂ ಆದ ಯವನರ ದಬ್ಬಾಳಿಕೆ ಮೇರೆ ಮೀರಿದಂತಹ ಸಮಯದಲ್ಲಿ, ಹಿಂದೂ ಸಾಮ್ರಾಜ್ಯ ಸ್ಥಾಪನೆಗೆ ಶಿವಾಜಿ ಮಹಾರಾಜರಿಗೆ ಶಕ್ತಿ ನೀಡಿದವರೇ ಈ ಸಮರ್ಥ ರಾಮದಾಸರು. ಯೋಜನಗಳ ದೂರದವರೆಗಿನ ಸಾಮ್ರಾಜ್ಯ ಕಟ್ಟಿ ಅದನ್ನು ಸಮರ್ಥವಾಗಿ ನಡೆಸಿಕೊಂಡು ಹೋಗಲು, ಶಿವಾಜಿ ಮಹಾರಾಜನಿಗೆ ರಾಮದಾಸರ ಕೃಪೆಯಿಂದಾಗಿ ಸಾಧ್ಯವಾಯಿತು.

ಭಾಗ್ಯವಂತರಾದ ಸಮರ್ಥರ  ತಂದೆತಾಯಿಗಳ ನಾಮವು ಶ್ರೀ ಸೂರ್ಯಾಜಿಪಂತ ಹಾಗೂ ಸೌ.ರಾಣುಬಾಯಿ ಎಂದಾಗಿತ್ತು. ಆಶ್ವಲಾಯನ ಸೂತ್ರದ ಋಗ್ವೇದೀ ಬ್ರಾಹ್ಮಣರ " ಠೋಸರ " ಎಂಬ ಕುಲದಲ್ಲಿ ಶಕೆ. ೧೫೩೦ ರಲ್ಲಿ , ರಾಮನವಮಿಯ ಶುಭದಿನವೇ , ಶ್ರೀಕ್ಷೇತ್ರ ಜಾಂಬದಲ್ಲಿ ಇವರ ಅವತಾರವಾಯಿತು.  ಧರ್ಮಸ್ಥಾಪನೆಗೆ ವೀರಮಾರುತಿಯ ಅಂಶದಿಂದಲೇ ಇವರ ಜನನವಾಯಿತು ಎಂಬುದು ಲೋಕಪ್ರಸಿದ್ದವಾಗಿದೆ. ಬಾಲ್ಯದಿಂದಲೂ ಮಹಾವಿರಕ್ತರಾದ ಇವರು ಮದುವೆಯ ಪ್ರಸ್ತಾಪ ಬಂದಾಗೆಲ್ಲ ತಪ್ಪಿಸಿಕೊಂಡು ಓಡುತ್ತಿದ್ದರು. ಇವರಿಗೆ ಲಗ್ನಮಾಡಬೇಕು ಎಂಬ ಆಸೆಯಿಂದ ತಾಯಿಯು " ಲಗ್ನಮಂಟಪದಲ್ಲಿ ತೆರೆ ಹಿಡಿಯುವವರೆಗೆ ನೀನು ನನ್ನ ಮಾತು ಕೇಳಬೇಕು " ಎಂಬುದಾಗಿ ಮಾತು ತೆಗೆದುಕೊಂಡಿದ್ದಳು. ಅದರಂತೆ ಇವರ ದ್ವಾದಶ ವಯದಲ್ಲಿ ಲಗ್ನನಿಶ್ಚಯವಾಯಿತು.

ಲಗ್ನಮಂಟಪದಲ್ಲಿ ಎದುರಿಗೆ ಸುಂದರ ಕನ್ಯೆ ನಿಂತರೆ ಇವನ ವಿರಕ್ತಿ ಹಾರಿಹೋಗುವುದೆಂದು ತಾಯಿಯ ಉಪಾಯವಾಗಿತ್ತು. ಆದರೆ ತಾಯಿಗೆ ಕೊಟ್ಟ ಮಾತಿನಂತೆ ಲಗ್ನ ಮಂಟಪದ ತೆರೆಹಿಡಿಯುವವರೆಗೆ ನಿಂತ ಸಮರ್ಥರು, ತೆರೆ ಕೆಳಗಿಳಿಸುವುದರ ಒಳಗೆ ಅಲ್ಲಿಂದ ಓಡಿನಡೆದರು. ನಂತರ ಹನ್ನೆರಡು ವರ್ಷ ಉಗ್ರತಪಸ್ಸು ಮಾಡಿ , ಶಕೆ . ೧೫೫೪ರಲ್ಲಿ ತಪವನ್ನು ಮುಗಿಸಿದರು. ನಂತರ ಹನ್ನೆರಡು ವರ್ಷಗಳ ಕಾಲ ಎಲ್ಲಾ ತೀರ್ಥಕ್ಷೇತ್ರಗಳನ್ನೂ ಕಾಲುನಡಿಗೆಯಿಂದಲೇ ದರ್ಶನಮಾಡಿ ಅಪಾರ ಶಿಷ್ಯಶಾಖೆಯನ್ನು ಬೆಳೆಸಿದರು. ಲೋಕಜಾಗೃತಿ, ಗ್ರಂಥರಚನೆಯನ್ನು ಮಾಡುತ್ತಾ , ಧರ್ಮಕಾರ್ಯಕ್ಕಾಗಿ ಎಲ್ಲಾ ಸಂಪ್ರದಾಯದ ಪಂಗಡಗಳನ್ನೂ ಪ್ರೋತ್ಸಾಹಿಸಿದರು. ಚಾಫಳದಲ್ಲಿ ಮಠವನ್ನು ಕಟ್ಟಿ ಅಲ್ಲಿ ನೆಲೆಸಿದರು. ಶಿವಾಜಿಯ ಕಾರ್ಯಗಳಿಗೆ ನಿರ್ವಿಘ್ನತೆಯನ್ನು ಮಾಡಿದರು.
ತಮ್ಮ ತಪೋಬಲದಿಂದ ಶ್ರೀಶಿವಾಜಿ ಮಹಾರಾಜನ ಎಲ್ಲ ಗೆಲುವುಗಳಿಗೆ ಕೃಪೆಮಾಡಿ ಸ್ವರಾಜ್ಯವನ್ನು ದೊರಕಿಸಿಕೊಟ್ಟರು. ನಂತರ ಸಜ್ಜನಗಡದಲ್ಲಿ ವಾಸ ಮಾಡುತ್ತಾ , ಅನೇಕ ಶಿಷ್ಯರ ಸಾಮರ್ಥ್ಯವೃದ್ಧಿಗೆ ಕಾರಣರಾದರು. ಆ ಕಾಲಘಟ್ಟದಲ್ಲಿ ಸಮರ್ಥರ ಅವತಾರವಾಗದಿದ್ದಲ್ಲಿ ಧರ್ಮವೆಂಬುದೇ ಉಳಿಯುತ್ತಿರಲಿಲ್ಲ ಎಂಬುದು ಇತಿಹಾಸದಅ ಅವಲೋಕನದಿಂದ ಸ್ಪಷ್ಟವಾಗುತ್ತದೆ. ಇಂದಿಗೂ ಸಹ ಸಮರ್ಥ ವಾಸಸ್ಥಾನವಾದ ಸಜ್ಜನಗಡದಲ್ಲಿ ಭಕ್ತಿಯಿಂದ ಪ್ರಾರ್ಥಿಸಿದರೆ ಸಕಲ ಮನೋಕಾಮನೆಗಳೂ ಪೂರ್ತಿಯಾಗುವುದು ಎಂಬ ನಂಬಿಗೆ ಇದೆ.

ಇವರ ಶಿಷ್ಯಂದಿರು ಕೂಡಾ ತಮ್ಮತಮ್ಮ ವಿಭಾಗಗಳಲ್ಲಿ ಅದ್ವಿತೀಯರಾಗಿದ್ದಾರೆ. ಅದು ಶಿವಾಜಿ ಮಹಾರಾಜನೇ ಇರಲಿ, ಕಲ್ಯಾಣಸ್ವಾಮಿಯೇ ಇರಲಿ ಅಥವಾ ಪರಮಗುರು ಶ್ರೀಧರಸ್ವಾಮಿಗಳೇ ಇರಲಿ , ಇವರು ತಮ್ಮ ಸಾಧನೆಯಿಂದ ಗುರುಗಳ ನಾಮವನ್ನು ಸಹ ಉಜ್ವಲಗೊಳಿಸಿದ್ದಾರೆ.

ಯೌವನಾವಸ್ಥೆಯಲ್ಲಿ ಲೌಕಿಕ ವಿದ್ಯೆಯ ನಿರರ್ಥಕತೆಯನ್ನು ಮನಗಂಡು ತಪಸ್ಸಿಗೆ ಹೋಗುವ ಯೋಚನೆ ದಿನದಿನಕ್ಕೂ ಬಲಿಯುತ್ತಿರಲು, ಸರಿಯಾಗಿ ಶ್ರೀ ದಾಮೋದರ ಪಳನಿಟ್ಕರ್ ಎಂಬ ನೈಷ್ಠಿಕ ಬ್ರಹ್ಮಚಾರಿಗಳ ಪ್ರೋತ್ಸಾಹ ಶ್ರೀಧರರಿಗೆ ಒದಗಿಬಂತು. ಶ್ರೀ ಪಳನಿಟ್ಕರರು ಧರ್ಮದ ಮೇಲೆ ಉಜ್ವಲ ಅಭಿಮಾನವುಳ್ಳ ಆಚಾರನಿಷ್ಠರಾಗಿದ್ದು, ಪಾರಮಾರ್ಥದಲ್ಲಿಯೂ ಅಭಿರುಚಿಯುಳ್ಳವರಾಗಿದ್ದರು. ಇವರು ಶ್ರೀಧರರಿಗೆ "ತಪಸ್ಸಿಗೆ ಹೋಗಲು ಬೇಕಾದಷ್ಟು ಸ್ಥಳಗಳಿವೆ, ಅವುಗಳಲ್ಲಿ ಶ್ರೀಸಮರ್ಥರ ಸನ್ನಿಧಿಯಾದ ಸಜ್ಜನಗಡ ಉತ್ಕೃಷ್ಟವಾಗಿದೆ. ನೀವು ತಪಸ್ಸಿಗೆ ಹೊರಡುವುದೇ ಆದರೆ ಈಗಲೇ ಹೊರಡಿ, ಈ ಲೌಕಿಕ ವಿಧ್ಯಾಭ್ಯಾಸದ ಪರೀಕ್ಷೆಯನ್ನು ಕಟ್ಟಿಕೊಂಡು ನಿಮಗೇನಾಗಬೇಕಿದೆ. ನಿಮ್ಮ ಭೂಮಿಕೆಗೆ ತಕ್ಕ ಗುರುಗಳೆಂದರೆ ಶ್ರೀ ಸಮರ್ಥ ರಾಮದಾಸರು ಮಾತ್ರ " ಎಂದು ಆಗ್ರಹಿಸಿದರು. ಒಳ್ಳೆಯ ಗುರುವು ದೊರೆಯುವುದು ಬಹಳ ದುರ್ಲಭ, ಎಲ್ಲಾ ಕಾರ್ಯಕ್ಕೂ ಗುರುವಿನ ಅನುಗ್ರಹ ಬೇಕೇಬೇಕು ಎಂಬುದಾಗಿ ಉಳಿದ ಕೆಲವು ಮಿತ್ರರೂ ತಿಳಿಸುತ್ತ , ಶ್ರೀಧರರ ಸಜ್ಜನಗಡ ಯಾತ್ರೆಯನ್ನು ಅನುಮೋದಿಸಿದರು.

ಶ್ರೀಧರರ ತಂದೆತಾಯಿಗಳೂ ಕೂಡಾ ಶ್ರೀಸಮರ್ಥ ಸಂಪ್ರದಾಯದವರೇ ಆಗಿದ್ದು, ಆ ಸಂಪ್ರದಾಯವು ಶ್ರೀಧರರಿಗೆ ಜನ್ಮಜಾತವಾಗಿತ್ತೆಂದರೂ ತಪ್ಪಾಗಲಾರದು. ಶ್ರೀ ಸಜ್ಜನಗಡವು ಬಹಳ ಜಾಗ್ರತ ಸ್ಥಳವಾಗಿದೆ. ಇದರ ಪೂರ್ವದ ಹೆಸರು 'ಅಸ್ವಲಗಡ ' ಎಂದಿತ್ತು. ಸಮರ್ಥರ ವಾಸ್ತವ್ಯದ ನಂತರ ಇಲ್ಲಿ ಸಜ್ಜನರ ಕೂಟವು ಸೇರತೊಡಗಿದುದರಿಂದ ಶ್ರೀ ಶಿವಾಜಿ ಮಹಾರಾಜನು ಇದನ್ನು ಸಜ್ಜನಗಡ ಎಂಬುದಾಗಿ ಕರೆಯತೊಡಗಿದನು. ಇಂತಹ ದೈವೀತಾಣಕ್ಕೆ, ತಪಶ್ಚರ್ಯಕ್ಕಾಗಿ, ಸಮರ್ಥ ರಾಮದಾಸ ಸ್ವಾಮಿಗಳ ಸೇವೆಗಾಗಿ, ರಾಮದಾಸರಿಗೆ ದಾಸಾನುದಾಸರಾಗಲು ಶ್ರೀಧರರು ಹೊರಟು ನಿಂತರು.


ಯೋಗ್ಯ ಗುರುವನ್ನು ಹುಡುಕುತ್ತ ಇದ್ದ ಶ್ರೀ ಶ್ರೀಧರ ಸ್ವಾಮಿಗಳು ಬಂದು ತಲುಪಿದ್ದು ಸಜ್ಜನಗಡದಲ್ಲಿ ನೆಲೆನಿಂತ ಶ್ರೀ ಸಮರ್ಥರ ಪದತಲಕ್ಕೆ. ಇಂತಹ ಮಹಾನ್ ಶಿಷ್ಯನನ್ನು ಅನುಗ್ರಹಿಸಿ, ಲೋಕಕಲ್ಯಾಣಕ್ಕೆ ಕಾರಣರಾದವರು ಅವರೇ ಆಗಿದ್ದಾರೆ. ಗುರುಪೂರ್ಣಿಮೆಯ ಶುಭದಿನದಂದು ಆ ಮಹಾನ್ ಸದ್ಗುರುಗಳಿಗೆ ನುಡಿನಮನ. 
***

🌷 ಸದ್ಗುರು ಶ್ರೀ ಶ್ರೀಧರ ಸ್ಮರಣಾಮೃತ 🌷

"ಯಾರು ನನ್ನನ್ನು ಭಕ್ತಿಯಿಂದ ಸ್ಮರಣೆ ಮಾಡುತ್ತಾರೋ ಅವರ ರೂಪವು ಕೂಡಲೆ ನನ್ನೆದುರಿಗೆ ಬಂದು ಸ್ಮರಣೆಯು ನನಗೆ ಆಗುವುದು. ಅವರಿಗೆ ನನ್ನ ಅನುಗ್ರಹವಾಗುತ್ತದೆ"

               ಶ್ರೀಗಳವರು ಶ್ರೀಧರ-ದತ್ತಜಯಂತಿಯ ಉತ್ಸವವನ್ನು ವದ್ದಳ್ಳಿ ಕ್ಷೇತ್ರದಲ್ಲಿ ಸಾಂಗವಾಗಿ ನೆರವೇರಿಸಿ ಅನ್ಯತ ಹೊರಡಲನುವಾದಾಗ ಉತ್ಸವಕ್ಕಾಗಿ ದೂರದ ಊರಿನಿಂದ ಬಂದ ಮುಗ್ಧಳಾದ ಭಕ್ತಳೊಬ್ಬಳು ಮುಂದೆ ಬಂದು ಶ್ರೀಗಳವರಿಗೆ ಸಮಸ್ಕರಿಸಿ, 

ಗುರುಗಳೇ! ನಿಮ್ಮನ್ನು ಸಾವಿರಾರು ಮಂದಿ ಭಕ್ತರು, ಶಿಷ್ಯರು ಸರ್ವಕಾಲದಲ್ಲಿಯೂ ನಾನಾ ಸಂಕಟಗಳನ್ನು ದೂರ ಮಾಡುವುದಕ್ಕೆ ಆರ್ತಸ್ವರದಿಂದ ಕರೆಯುವರು. ಎಲ್ಲರ ಕರ್ತವ್ಯದಲ್ಲಿಯೂ ನೀವು ಮಗ್ನರಾಗಿರುವವರು. ನಾನು ಇಲ್ಲಿಂದ ನೂರಾರು ಮೈಲು ದೂರವಿರುವವಳು. ಮೇಲಾಗಿ ತೀರಾ ಬಡವಳು. ಮತ್ತೊಮ್ಮೆ ಬರಬೇಕೆಂದು ವಿಚಾರ ಮಾಡಿದರೆ ಕೈಸಾಗದವಳು. ಇನ್ನು ನಾನು ಊರಿಗೆ ಹೋದಮೇಲೆ ನಿಮಗೆ ಈ ಬಡವೆಯ ಸ್ಮರಣೆ ಹೇಗಾಗಬೇಕು? ಎಂದು ನಿಷ್ಕಳಂಕ ಪ್ರೇಮ ಹಾಗೂ ತನ್ನ ಬಾಲಬುದ್ಧಿಯಿಂದ ದುಃಖಿಸತೊಡಗಿದಳು.

         ಇದನ್ನು ನೋಡಿ ದಯಾಮಯರಾದ ಶ್ರೀಗಳವರು ಕನಿಕರದಿಂದ ಅವಳ ಮುಗ್ಧ ಸ್ವಭಾವಕ್ಕನುಗುಣವಾಗಿಯೇ, "ತಂಗೀ! ನೀನು ಚಿಂತೆ ಮಾಡಬೇಡ, ನನಗೆ ನನ್ನ ಸದ್ಗುರುವು ಒಂದು ಮಂತ್ರವನ್ನು ಉಪದೇಶ ಮಾಡಿದ್ದಾರೆ. ಅದರಿಂದಾಗಿ ಯಾರು ನನ್ನನ್ನು ಭಕ್ತಿಯಿಂದ ಸ್ಮರಣೆ ಮಾಡುತ್ತಾರೋ ಅವರ ರೂಪವು ಕೂಡಲೆ ನನ್ನೆದುರಿಗೆ ಬಂದು ನಿಲ್ಲುವುದು. ಆದುದರಿಂದ ನೀನು ನನ್ನನ್ನು ಧ್ಯಾನ ಮಾಡಿದ ವೇಳೆಗೆ ನಿನ್ನ ಸ್ಮರಣೆಯು ನನಗೆ ಆಗಿರುವುದೆಂದು ತಿಳಯುವವಳಾಗು ಮತ್ತು ಆನಂದದಿಂದ ಶ್ರೀ ಗುರು ಭಗವನ್ನಾಮ ಸ್ಮರಣೆಯನ್ನು ನಿರಂತರವಾಗಿಯೂ ಮಾಡುತ್ತಿರು ನನ್ನ ಅನುಗ್ರಹ ಆಗುತ್ತದೆ ಎಂದು ಹೇಳಿ ಸಮಾಧಾನ ಮಾಡಿ ಊರಿಗೆ ಕಳುಹಿಸಿಕೊಟ್ಟರು.

ಶೀಗೇಹಳ್ಳಿ (ಸನ್ ೧೯೫೭)

           ಶ್ರೀ ದಾಸನವಮಿ ಉತ್ಸವವು, ಪಾರಾಯಣ-ಪುರಾಣಪ್ರವಚನ- ಭಜನೆ-ಕೀರ್ತನೆ, ಮುಂತಾದ ಕಾರ್ಯಕ್ರಮಗಳಿಂದ ಪ್ರಾರಂಭವಾಗಿ ಬಹು ವಿಜೃಂಭಣೆಯಿಂದ ಸಾಂಗವಾಗಿ ನೆರವೇರಿತು. ಈ ಉತ್ಸವದ ಮಧ್ಯದಲ್ಲಿ ಒಂದು ವಿಶೇಷ ಕಾರ್ಯಕ್ರಮವನ್ನಿಟ್ಟುಕೊಂಡಿದ್ದರು. ಅದೆಂದರೆ ತಟ್ಟಗುಣಿ ಗಂಗಮ್ಮನವರು ಕಾಶಿಯಿಂದ ತಂದ ಅಮೃತಶಿಲಾ ದತ್ತಮೂರ್ತಿಯ ಪ್ರತಿಷ್ಠೆ. ಮಾಘ ಬಹುಳ ತದಿಗೆ ಭಾನುವಾರದಂದು ಪ್ರತಿಷ್ಠೆಯೇನೊ ನಿಜ. ಆದರೆ ಮೂರ್ತಿಯನ್ನು ಕೂಡಿಸುವ ಪೀಠ ಮಾತ್ರ ಇನ್ನೂ ತಯಾರಾಗಿರಲಿಲ್ಲ. ಇಲ್ಲಿಯವರು ಎಲ್ಲಿಂದಲೋ ಒಂದು ಹಳೆಯ ಪೀಠವನ್ನು ತಂದಿಟ್ಟಿದ್ದರು. ಅದು ಮಳೆ ಬಿಸಿಲುಗಳಿಗೆ ಮೈಯೊಡ್ಡಿ ಬಹಳ ಗಟ್ಟಿಯಾಗಿತ್ತು. ಕಲ್ಲು ಕೆತ್ತನೆಯ ಕೆಲಸದವರು ಮೂರು-ನಾಲ್ಕು ದಿನಗಳಿಂದ ಶ್ರಮಪಟ್ಟರೂ ದತ್ತಮೂರ್ತಿಯನ್ನು ಕೂಡಿಸಲು ಬೇಕಾದ ಕುಣಿಯನ್ನು ತೋಡಲಾಗಲಿಲ್ಲ. ಆ ಕೆಲಸಗಾರರು ಶಿರಸಿಯಿಂದ ಹೊಸ ಚಾಣ ತಂದು ಅಲ್ಲೇ ತಿದಿಯಿಟ್ಟುಕೊಂಡು ಯಶಸ್ಸಿಗೆ ಕುಂದು ಬರಬಾರದೆಂದು ಎಷ್ಟೇ ಪ್ರಯತ್ನಿಸಿದರೂ ಬಿದಿಗೆಯ ದಿನ ಮಧ್ಯಾಹ್ನದವರೆಗೂ ನಾಲ್ಕು ಇಂಚಿನ ಚೌಕದ ತೆಗ್ಗಿನ ಪೈಕಿ ಕಾಲುಭಾಗವೂ ಆಗಲಿಲ್ಲ. ಆಗ ಮುಖ್ಯ ಕೆಲಸಗಾರನು ಶ್ರೀಗಳವರೆದುರಿಗೆ ಬಂದು, ಸ್ವಾಮಿ, ಪೀಠದ ಕೆಲಸ ಇನ್ನೂ ಕಾಲುಭಾಗವೂ ಆಗಿಲ್ಲ. ಹೊಸ ಚಾಣ ತಂದು ಇಲ್ಲಿಯೆ ತಿಥಿಯಿಟ್ಟು ಪ್ರಯತ್ನಿಸಿದರೂ ಆ ಕಲ್ಲಿನಲ್ಲಿ ಹೊಂಡ (ಕುಣಿ) ತೋಡಲು ನನ್ನಿಂದಾಗಲಿಲ್ಲ. ಆದುದರಿಂದ ನಾನು ಹೋಗುತ್ತೇನೆ. ತಮಗೆ ಆ ವಿಷಯವನ್ನು ನಿವೇದಿಸಿ ಹೋಗೋಣವೆಂದು ಬಂದಿದ್ದೇನೆ ಎಂದನು.

         ಬೆಳಗಾದರೆ ಪ್ರತಿಷ್ಠಾ ಕಾರ್ಯವಿದ್ದು, ಕೆಲಸಗಾರನು ಇಲ್ಲಿ ಸೇರಿದ್ದ ಸಹಸ್ರಾರು ಜನರೆದುರಿಗೆ ತನಗೆ ಅಪಯಶಸ್ಸು ಬಂದಿತೆಂದೂ, ಈ ಒಂದು ಸಣ್ಣ ಸೇವೆಯೂ ನನ್ನಿಂದಾಗಲಿಲ್ಲವಲ್ಲ ಎಂದು ನೊಂದು ದೀನ ಸ್ವರದಿಂದ ಅಪ್ಪಣೆಯನ್ನು ಕೇಳಿದ್ದುದನ್ನೂ ನೋಡಿ ಶ್ರೀಗಳವರು ಸ್ವಲ್ಪ ಯೋಚಿಸಿ ಮುಗುಳುನಗುತ್ತಾ, "ನೀನೀಗ ಹೋಗಬೇಡ, ನೀನೇ ಈ ಕೆಲಸ ಮಾಡಿಕೊಡಬಹುದು; ಕಲ್ಲು ಎಷ್ಟು ಗಟ್ಟಿಯಿದೆ ನೋಡೋಣ ನಡೆ ಎಂದು ಅವನನ್ನು ಕರೆದುಕೊಂಡು ಕಲ್ಲಿನ ಹತ್ತಿರ ಹೋದರು. ಶ್ರೀಗಳವರು ಆ ಕಲ್ಲಿಗೆ ಕಮಂಡಲು ತೀರ್ಥವನ್ನು ಬಿಟ್ಟು ಕೆಲಸಗಾರನಿಗೆ, ಇನ್ನು ನೀನು ಅಂಜಬೇಡ; ಮನದಲ್ಲಿ ನನ್ನನ್ನು ಸ್ಮರಿಸುತ್ತಾ ಕೆಲಸ ಮಾಡು; ಬುದ್ಧಿವಂತನೆಂದು ನೀನು ಹೆಮ್ಮೆಪಡಬೇಡ. ಈ ಕಲ್ಲಿನಲ್ಲಿದ್ದ ದುಷ್ಟಶಕ್ತಿಯನ್ನು ತೆಗೆದು ಹಾಕಿದ್ದೇನೆ" ಎಂದು ಹೇಳಿ ಮಧ್ಯಾಹ್ನಾಚರಣೆಗೆ ತೆರಳಿದರು.

          ಶ್ರೀಗಳವರ ಅಪ್ಪಣೆಯನ್ನು ಶಿರಸಾ ವಹಿಸಿ ಶ್ರದ್ಧಾಭಕ್ತಿಯಿಂದ ಕೆಲಸಗಾರನು ಕೆಲಸಕ್ಕೆ ಉಪಕ್ರಮಿಸಲು ಮೂರು-ನಾಲ್ಕು ದಿವಸಗಳಿಂದ ಆಗದ ಕೆಲಸವನ್ನು ಒಂದೆರಡು ತಾಸಿನಲ್ಲಿ ಸುಂದರವಾಗಿ ಮಾಡಿ ಶ್ರೀಗಳವರಿಗೊಪ್ಪಿಸಿದ್ದುದನ್ನು ನೋಡಿ ಅಲ್ಲಿಯ ಜನರೆಲ್ಲರೂ ಶ್ರೀ ಶ್ರೀಗಳವರ ಅಘಟಿತ ಘಟನಾ ಸಾಮರ್ಥ್ಯದಿಂದ ಅಚ್ಚರಿಪಟ್ಟರು.

        ಶಾ.ಶ|| ೧೮೭೮; ಶ್ರೀ ದುರ್ಮುಖಿ ನಾಮ ಸಂ॥ ಮಾಘ ಬಹುಳ ತದಿಗೆಯಂದು (೧೭-೦೨-೧೯೫೭, ಭಾನುವಾರ) ನಿರ್ವಿಘ್ನವಾಗಿ ಶ್ರೀಗಳವರು ತಮ್ಮ ವರದ ಹಸ್ತದಿಂದ ಪರಮಾನಂದ ಮಠದಲ್ಲಿ ದತ್ತನ ಪ್ರತಿಷ್ಠೆಯನ್ನು ಮಾಡಿದರು.

       ಸಾಲ್ಕಣಿ ಊರಿನ ಮಂಜುನಾಥ ಕೃಷ್ಣಪ್ಪ ಹೆಗಡೆಯ ಒಂದು- ಒಂದೂವರೆ ವರ್ಷ ಪ್ರಾಯದ ಮಹಾಲಕ್ಷ್ಮಿ ಎಂಬ ಹೆಸರಿನ ಒಂದು ಕೂಸನ್ನು ಅವಳ ಅಜ್ಜಿಯು ಕರೆದುಕೊಂಡು ಮಠಕ್ಕೆ ಬಂದಿದ್ದಳು. ಅವಳು ಅನೇಕ ದಿವಸಗಳಿಂದ ರೋಗಗ್ರಸ್ತಳಾಗಿ ಏನೇನು ಮಾಡಿದರೂ ಶಮನವಾಗದೆ ಶ್ರೀಗಳವರು ಮಠಕ್ಕೆ ಬಂದ ಸಮಾಚಾರ ತಿಳಿದು ಶ್ರೀಗಳವರಿಂದ ಇದರ ಉಪಶಮನವಾಗಬಹುದೆಂದು ಇಲ್ಲಿಗೆ ಬಂದಿದ್ದಳು. ಆದರೆ ಶ್ರೀಗಳವರು ಉತ್ಸವದ ಕಾರ್ಯಕ್ರಮದಲ್ಲಿದ್ದುದರಿಂದ ನಿವೇದಿಸಿಕೊಳ್ಳಲು ಅವಕಾಶವು ದೊರಕಲಿಲ್ಲ. ಶ್ರೀಗಳವರು ಹವನದ ಪೂರ್ಣಾಹುತಿಯ ಸಮಯವಾದ್ದುದರಿಂದ ಯಜ್ಞಶಾಲೆಯಲ್ಲಿದ್ದರು. ಅಷ್ಟರಲ್ಲಿ ಈ ಶಿಶುವಿಗೆ ಪ್ರಾಣೋತ್ಮಮಣವಾಗತೊಡಗಿದ್ದುದನ್ನು ಕಂಡು ಶಿಶುವಿನ ಅಜ್ಜಿಯು ಇಂತಹ ಮಂಗಲೋತ್ಸವದಲ್ಲಿ ಅಪವಿತ್ರವಾಗಬಾರದೆಂದು ಹೊರಗೆ ಕೊಂಡೊಯ್ಯುತ್ತಿರುವುದೂ, ಜನರ ಗಲಾಟೆಯೂ ಶ್ರೀಗಳವರಿಗೆ ಕಾಣಿಸಿತು. ಏನೆಂದು ಶ್ರೀಗಳವರು ಕೇಳಲು ಶಿಶುವು ತೀರಿಕೊಂಡಿದೆ ಎಂದರು. ಕೂಡಲೇ ಶ್ರೀ ಶ್ರೀಗಳವರು ಯಜ್ಞಶಾಲೆಯಿಂದ ಹೊರಗೆ ಬಂದು, "ಶಿಶುವನ್ನು ಒಯ್ಯಬೇಡ, ಇಲ್ಲಿ ತಾ ಎಂದು ಹೇಳಿ ಬಾವಿಕಟ್ಟೆಯ ಹತ್ತಿರ ತಾವು ಬಂದು, ತೀರ್ಥ ತರಿಸಿ ತೀರ್ಥ ಪ್ರೋಕ್ಷಿಸಲು ಸ್ವಲ್ಪ ಉಸಿರಾಡುವ ಲಕ್ಷಣ ಕಾಣಿಸತೊಡಗಿತು."

            ಅವರಿಗೆ ಅಲ್ಲೇ ಇರಲು ಹೇಳಿ ಶ್ರೀಗಳವರು ಪೂರ್ಣಾಹುತಿ ಕಾರ್ಯವನ್ನು ಮುಗಿಸಿ ಬಂದು ಪುನಃ ತೀರ್ಥ ಹಾಕಿ ಶಿಶುವಿನ ಮೈಮೇಲೆ ತಮ್ಮ ವರದ ಹಸ್ತವನ್ನೆಳೆಯಲು ಶಿಶುವು ಮೆಲ್ಲಗೆ ಕಣ್ಣು ತೆರೆಯಿತು. ಈ ಘಟನೆಯನ್ನು ನೋಡಿದ ಅಲ್ಲಿಯ ಜನರ ಬಾಯಿಂದ ಶ್ರೀಗಳವರ ಜಯಘೋಷದ ಉದ್ಗಾರ ಹೊರಟಿತು. 

          ಕೊನೆಗೆ ಒಂದೆರಡು ದಿನಗಳಲ್ಲಿ ಆ ಶಿಶುವು ಆರೋಗ್ಯ ಹೊಂದಿತು. ಆನಂತರ ಮುಂದೆ ಆ ಹೆಣ್ಣು ಮಗು ದೊಡ್ಡವಳಾಗಿ ವಿವಾಹವಾಗಿ ಮಕ್ಕಳ ತಾಯಿಯಾಗಿ ಸುಖ ಸಂಸಾರ ನಡೆಸಿದಳು.

             ದಾಸನವಮಿ ಉತ್ಸವವನ್ನು ಪೂರೈಸಿ ಇಟ್ಟಗಿ ದೇವಸ್ಥಾನದಲ್ಲಿ ಧ್ವಜಸ್ತಂಭ ಸ್ಥಾಪನೆಯ ಬಗ್ಗೆ ಅಲ್ಲಿಯವರು ಪ್ರಾರ್ಥಿಸಿಕೊಂಡ ಮೇರೆಗೆ ಶ್ರೀಗಳವರು ಅಲ್ಲಿಗೆ ಹೋಗಿ ಆ ಕಾರ್ಯಕ್ರಮವನ್ನು ಪೂರೈಸಿದರು (ತಾ॥ ೪-೩-೫೭). ಇಷ್ಟರಲ್ಲಿ ಅಡ್ಡಿ ಹೆಗಡೆಯವರು ಬಂದು ಶ್ರೀಗಳವರನ್ನು ಶ್ರೀ ಘೋರೆ (ಗೋರೆ) ದೇವಸ್ಥಾನದ ಕಳಶ ಸ್ಥಾಪನೆಗೆ ಶ್ರೀ ಘೋರೆ ಕ್ಷೇತ್ರಕ್ಕೆ ಕರೆದುಕೊಂಡು ಹೋದರು. ಘೋರೆಗೆ ಹೋಗುವಾಗ ಸಿದ್ದಾಪುರದ ಸೀಬಳಿ ಯಲ್ಲಿ ಭಿಕ್ಷೆ ಸ್ವೀಕರಿಸಿದರು. ಈ ಘೋರೆ ದೇವಸ್ಥಾನವು ಅಡ್ಡಿ ನಾರಾಯಣ ಹೆಗಡೆಯವರ ಕುಲದೇವರಾಗಿದ್ದು, ಅವರೇ ಇಲ್ಲಿಯ ಜೀರ್ಣೋದ್ದಾರದ ವ್ಯವಸ್ಥೆಯನ್ನು ಮುಂದಾಳುತನ ವಹಿಸಿ ಮಾಡಿದ್ದರು. ಫಾಲ್ಗುಣ ಶುದ್ಧ ಬುಧವಾರ (ತಾ|| ೬-೩-೫೭)ದಂದು ಅಷ್ಟಬಂಧ ಪ್ರತಿಷ್ಠೆ ಹಾಗೂ ಕಲಶ ಸ್ಥಾಪನೆಯು ಶ್ರೀಗಳವರ ಅಮೃತಹಸ್ತದಿಂದ ವಿಧ್ಯುಕ್ತವಾಗಿ ನೆರವೇರಿತು.

ಸದ್ಗುರು ಭಗವಾನ ಶ್ರೀ ಶ್ರೀಧರಾರ್ಪಣಮಸ್ತು

 ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿ ಮಹಾರಾಜರಿಗೆ ಜೈ.

🙏🙏🙏🙏🙏🙏🙏🙏

🌹 ಶ್ರೀ ಶ್ರೀಧರ ಸ್ಮರಣಾಮೃತ .🌹

 ಅಭಯದಾನ 
        
          " ಬ್ರಹ್ಮನೇ  ಮೊದಲಾಗಿ ಇರುವೆಯವರೆಗಿನ ಸರ್ವಪ್ರಾಣಿ ಮಾತ್ರದಲ್ಲಿಯೂ ಮತ್ತು ಅಧ್ಯಸ್ತವಾಗಿರುವ ಪಶು, ಪಕ್ಷಿ, ಮಾನವ,ಪಿಶಾಚ, ದೇವತೆಗಳು ಇಷ್ಟೇ ಅಲ್ಲ, ಸ್ತ್ರೀ-ಪುರುಷರಲ್ಲಿಯೂ ಯಾವುದರ ಮೂಲಕ ಭೇದವಿರದೋ, ಆ ಸನಾತನ ವಿಭುರೂಪವಾಗಿರುವ ಬ್ರಹ್ಮವೇ ನಾನೆಂದು ತಿಳಿದಿರುವನಾದುದರಿಂದ, ಆ ಬ್ರಹ್ಮವು ಅಭಯವೂ ಅನಂದರೂಪವೂ ಆಗಿರುವ ಕಾರಣ, ಎಲ್ಲಕ್ಕೂ ನಿರಾತಂಕವಾದ ಅಭಯವನ್ನೂ ನಿರತಿಶಯವಾದ ಕುಶಲವನ್ನೂ ಸಹ ನಾನು ಬಿತ್ತರಿಸುವೆನು.

ಸರ್ವೇ ಜನಾಃ ಸುಖಿನೋ ಭವಂತು."

 ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು.🙏🏻
******





our visit on February 10, 2015



******



No comments:

Post a Comment