SEARCH HERE

Tuesday 1 January 2019

ಮಾತೃ ವಂದನಮ್ ಅವಿಧವಾ ನವಮೀ ಶ್ರಾದ್ಧ matru vandana avidhava navami shraddha bhadrapada bahula navami


Avidhava Navami ಅವಿಧವಾ ನವಮಿ ಶ್ರಾದ್ಧ - by narahari sumadhwa

Vidhava means Widow. “Avidhava” means not a Widow -Sumangali. Avidhava Navami in the context of Pitru Paksham is the day on which cermonies/rituals are to be performed for those Women (Mothers) who died as Sumangali. It should be performed by the son/s on the Navami tithi day during Pithru Paksha. Avidha Navami is followed by those who have lost their mothers and their father is alive.  They have to do it on Bhadrapada Krishna Navami day.  They have to invite Mutthaide-Brahmana Dampatigalu. Give them marada baagina (ಮರದ ಬಾಗಿನ) containing all saumangala items like haridra, kumkuma, coconut, rice, dalls, blouse peace, villedele, adike, dakshine, if possible sarry, blousepiece, etc..  On this day, pinda pradhana to be done.  Atleast tila tarpana to be done.  Here during Avidhava navami, unlike paksha (wherein all the forefathers will be called), only his mother/mother’s in law and great grand mother will be called and panda pradhana will be done.


ಅವಿಧವಾ ನವಮಿ ಶ್ರಾದ್ಧ ದಿನ

ಅವಿಧವಾ ನವಮಿ – ಪತಿ ಜೀವಂತ ಇದ್ದು ಪತ್ನಿ ಮೃತಳಾಗಿದ್ದಾಗ ಪಿತೃ ಪಕ್ಷದಲ್ಲಿ ಭಾದ್ರಪದ ಮಾಸ ಕೃಷ್ಣ ಪಕ್ಷ ನವಮಿಯಂದು ಮಾಡತಕ್ಕ ಶ್ರಾದ್ಧ.


ಈ ದಿನ ಶ್ರಾದ್ಧದಲ್ಲಿ ಮೂರು ಪಿಂಡಗಳನ್ನು ಇಡತಕ್ಕದ್ದು. ಇವರುಗಳಿಗೆ ಪಿಂಡ ಇಡತಕ್ಕದ್ದು. – ತಾಯಿ , ತಾಯಿಯ ಅತ್ತೆ (ಅಜ್ಜಿ), ಅಜ್ಜಿಯ ಅತ್ತೆ (ಮುತ್ತಜ್ಜಿ) – ಮಾತರಂ, ಪಿತಾಮಹೀಂ, ಪ್ರಪಿತಾಮಹೀಂ.


ಪ್ರಶ್ನೆ – ತಾಯಿ ಸತ್ತ ನಂತರ ತಂದೆ ಸತ್ತರೆ ತಾಯಿಗೆ ಅವಿಧವಾ ನವಮಿ ಆಚರಿಸಬೇಕೆ ?

ಉತ್ತರ – ತಂದೆ ಸತ್ತ ನಂತರ ತಾಯಿಗೂ ಪಕ್ಷದಲ್ಲಿ ಪಿಂಡಪ್ರದಾನ ಇರುವುದರಿಂದ ಅವಿಧವಾ ನವಮಿ ಬೇಕಿಲ್ಲ ಎಂಬ ಸಂಪ್ರದಾಯ ಇದೆ.

ಮತ್ತು – ಕೆಲವರು ತಾಯಿ ಮುತ್ತೈದೆಯಾಗಿ ಸತ್ತಿರುವುದರಿಂದ ತಂದೆ ಸತ್ತ ಮೇಲೂ ಅವಳು ಮುತ್ತೈದೆಯೇ, ಆದ್ದರಿಂದ ಅವಿಧವಾ ನವಮಿ ಮಾಡಬೇಕು ಎಂಬ ಸಂಪ್ರದಾಯ ಕೆಲವರಲ್ಲಿದೆ.


ಪ್ರಶ್ನೆ – ತಾಯಿ ಮುತ್ತೈದೆಯಾಗಿ ಆಕಸ್ಮಿಕ ಸಾವು , ಆತ್ಮಹತ್ಯೆ ಸಾವಾಗಿದ್ದರೆ, ಅಥವಾ ಸಹಗಮನ ಮಾಡಿ ಸತ್ತರೆ ಅವರಿಗೆ ಅವಿಧಾನವಮಿ ಮಾಡಬೇಕೆ ?


ಉತ್ತರ : ಸಹಗಮನ ಮಾಡಿದ್ದರೆ, ಸ್ವಾಭಾವಿಕ ಸಾವಾಗಿದ್ದರೆ ಅವಿಧವಾನವಮಿ ಶ್ರಾದ್ಧ ಮಾಡಬೇಕು.

ಆಕಸ್ಮಿಕ ಅಥವಾ ಆತ್ಮಹತ್ಯೆ ಸಾವಾಗಿದ್ದರೆ ಘಾತ ಚತುರ್ದಶಿ ದಿನದಂದು ಶ್ರಾದ್ಧ ಮಾಡಬೇಕು. ಅವರಿಗೆ ಅವಿಧವಾನವಮಿ ಶ್ರಾದ್ಧ ಇಲ್ಲ.


ಪ್ರಶ್ನೆ : ತಂದೆ ನಿಧಾನವಾದ ನಂತರ ತಾಯಿಗೆ ಪಕ್ಷದಲ್ಲಿ ಪಿಂಡಪ್ರದಾನ ಮಾಡಬೇಕಾ ?

ಉತ್ತರ : ತಂದೆ ನಿಧನವಾದ ನಂತರ ತಾಯಿಗೆ ಕೂಡ ಪಕ್ಷದಲ್ಲಿ ಪಿಂಡಪ್ರದಾನ ಮಾಡಬೇಕು.


ಪ್ರಶ್ನೆ : ತಾಯಿಗಾಗಿ ಮಾಡುವ ಅವಿಧವಾ ನವಮಿ ಶ್ರಾದ್ಧದಲ್ಲಿ ಏನು ಮಾಡಬೇಕು ?

ಉತ್ತರ : ಶ್ರಾದ್ಧ ನಂತರ ಮುತ್ತೈದೆಯನ್ನು ಆಹ್ವಾನಿಸಿ ಅವರಿಗೆ ಮೊರದ ಬಾಗಿನ, ಸೀರೆ, ಕುಪ್ಪಸ, ಮಂಗಳ ದ್ರವ್ಯಗಳನ್ನು ಯಥಾಶಕ್ತಿ ದಕ್ಷಿಣೆ ಸಹಿತ ಕೊಡಬೇಕು.


ಪ್ರಶ್ನೆ: ಅವಿಧವಾ ನವಮಿಯಂದು ಅಡುಗೆ ಯಾವ ರೀತಿ ಮಾಡಬೇಕು?

ಉತ್ತರ: ಪಕ್ಷದಲ್ಲಿ ರವೆ ಉಂಡೆ, ಉದ್ದಿನ ವಡೆ ಮಾಡುವಂತೆ ಅವಿಧವಾ ನವಮಿಯಂದು ಮಾಡಬಾರದು.  ಅಂದು ಹೋಳಿಗೆ, ಆಂಬೊಡೆ/ಬೋಂಡಾ ಮಾಡಬೇಕು.  ಪಕ್ಷದಲ್ಲಿ ಉಪ್ಪು ಮೊದಲು ಬಡಿಸುವುದಿಲ್ಲ.  ಆದರೆ ಅವಿಧವಾ ನವಮಿಯಂದು ಮೊದಲು ಉಪ್ಪು ಬಿಡಿಸುತ್ತಾರೆ.    ಪಕ್ಷದಲ್ಲಿ ಕಡಲೇಬೇಳೆ ಉಪಯೋಗಿಸಲ್ಲ.  ಆದರೆ ಇಲ್ಲಿ ಬರುತ್ತದೆ.  ಪಕ್ಷದಲ್ಲಿ ರಂಗೋಲಿ ಹಾಕುವುದಿಲ್ಲ.  ಇಲ್ಲಿ ರಂಗೋಲಿ ಹಾಕುತ್ತಾರೆ.


ಅವಿಧವಾ ನವಮೀಯಲ್ಲಿ ಪಿತೃಶ್ರಾದ್ಧಕ್ಕೆ ಸಿದ್ಧಪಡಿಸುವ ರವೆ ಉಂಡೆ ಮತ್ತು ವಡೆಗಳನ್ನು ನಿಷೇಧಿಸಲಾಗಿದೆ

ಸಾಧ್ಯವಾದಲ್ಲಿ ಬೆಳ್ಳಿ, ಬಂಗಾರದ ಆಭರಣಗಳನ್ನು ವಿಷ್ಣುಭಕ್ತರಾದ ಶ್ರೇಷ್ಠಗುಣಗಳ ಮುತ್ತೈದೆಯರಿಗೆ ದಾನ ನೀಡಿ ಜನ್ಮವಿತ್ತ ತಾಯಿಗೆ ಜನ್ಮಜನ್ಮಗಳಲ್ಲಿಯೂ ಸಕಲ ಸೌಭಾಗ್ಯವಿರಲಿ ಎಂದು ಪ್ರಾರ್ಥಿಸಬೇಕು

ಅವಿಧವಾ ನವಮಿಯನ್ನು ಹಬ್ಬವೆಂದೇ ಪರಿಗಣಿಸಲಾಗುವುದರಿಂದ ಹಬ್ಬದ ಅಡುಗೆ ಎಂದರೆ, ಬೇಸನ್‌ ಲಡ್ಡು, ಜಿಲೇಬಿ, ಹೋಳಿಗೆ,

ಅವಿಧವಾ ನವಮಿ ಶ್ರಾದ್ಧದಲ್ಲಿ ತಾಯಿಯ ಪಿಂಡಕ್ಕೆ ಅರಿಶಿನ ಕುಂಕುಮಗಳನ್ನು ಅರ್ಪಿಸುವ ಪದ್ಧತಿಯೂ ಇದೆ.

ನರಹರಿ ಸುಮಧ್ವ

ಸುಮಧ್ವ ಸೇವಾ

***

ಮಾತೃ ವಂದನಮ್ " ಅವಿಧವಾ ನವಮೀ 
ಅವಿಧವಾ ನವಮೀ ಶ್ರಾದ್ಧ: ಇದರ ಮಹತ್ವ ಹಾಗೂ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ

ಭಾದ್ರಪದ ಮಾಸದ ಕೃಷ್ಣ ಪಕ್ಷವನ್ನು ಪಿತೃಪಕ್ಷ ಎಂದು ಕರೆಯುತ್ತಾರೆ ಹಾಗೂ ಈ ಪಕ್ಷದ ಅಮಾವಾಸ್ಯೆಯನ್ನು "ಮಹಾಲಯ ಅಮಾವಾಸ್ಯೆ" ಎಂದೂ ಕರೆಯುತ್ತಾರೆ. ಈ ಪಕ್ಷದಲ್ಲಿ ಆಚರಿಸುವಂತಹ ಪಿತೃ ಕಾರ್ಯಗಳು ಪಂಚ ಮಹಾ ಯಜ್ಞಗಳಲ್ಲಿ ಒಂದಾಗಿರುವುದರಿಂದ ಪಿತೃಪಕ್ಷಕ್ಕೆ ಬಹಳ ಮಹತ್ವವನ್ನು ನೀಡಲಾಗುತ್ತದೆ.

ಪಿತೃಪಕ್ಷದ ಒಂಭತ್ತನೇ ದಿನ ಅಂದರೆ ನವಮಿಯಂದು ಮಾಡುವ ಸಂಸ್ಕಾರವೇ ಅವಿಧವಾ ನವಮೀ ಶ್ರಾದ್ಧ. ಪತಿಗಿಂತ ಮೊದಲೇ ನಿಧನ ಹೊಂದಿದ ಸ್ತ್ರೀಯರ ಶ್ರಾದ್ಧವನ್ನು ಈ ದಿನ ಮಾಡಲಾಗುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರಗಳಲ್ಲಿ ಅವಿಧವಾ ನವಮೀ ಶ್ರಾದ್ಧವನ್ನು ಭಾದ್ರಪದ ಕೃಷ್ಣಪಕ್ಷದ ನವಮಿಯಂದು ಮಾಡಿದರೆ, ಉತ್ತರ ಭಾರತದ ಕಡೆ ಅಶ್ವೀಜ ಕೃಷ್ಣಪಕ್ಷದಂದು ಮಾಡುತ್ತಾರೆ.

ಅವಿಧವಾ ನವಮೀ ಶ್ರಾದ್ಧದ ಮಹತ್ವ

ಅವಿಧವಾ ಎಂದರೆ ' ವಿಧವೆಯಲ್ಲದವರು' ಅಂದರೆ 'ಸುಮಂಗಲಿ' ಎಂದರ್ಥ. ಅವಿಧವಾ ನವಮೀ ಶ್ರಾದ್ಧವನ್ನು ಸುಮಂಗಲಿಯಾಗಿ ಮರಣಿಸಿದ ಸ್ತ್ರೀಗೆ ಮಾಡಲಾಗುತ್ತದೆ. ಈ ಆಚರಣೆಯು ಮರಣಾನಂತರ ಸ್ತ್ರೀಯ ಆತ್ಮಕ್ಕೆ ಶಾಂತಿಯನ್ನು ನೀಡುತ್ತದೆ ಹಾಗೂ ಮಡಿದ ಸ್ತ್ರೀಯು ತನ್ನ ವಂಶಕ್ಕೆ ಆಶೀರ್ವಾದ ಮಾಡುತ್ತಾಳೆ ಎಂಬ ನಂಬಿಕೆ ಇದೆ. ಅವಿಧವಾ ನವಮೀ ಆರಾಧನೆ ಕಾಲದಲ್ಲಿ ಮಾತೃಃ, ಪಿತಾಮಹಿಃ, ಪ್ರಪಿತಾಮಹಿಃ ಅಂದರೆ ತಾಯಿ - ಅಜ್ಜಿ(ತಂದೆಯ ತಾಯಿ) ಮತ್ತು ಮುತ್ತಜ್ಜಿ(ತಂದೆಯ ಅಜ್ಜಿ) ಈ ಮೂರು ಜನ ಮಾತೆಯರಿಗೆ ನವಮಿಯಂದು ಆರಾಧನೆ ಮಾಡಲಾಗುತ್ತದೆ.

ನವಮಿಯ ದಿನ ಬ್ರಹ್ಮಾಂಡದಲ್ಲಿ ಪೃಥ್ವಿ ಮತ್ತು ಆಪ ತತ್ವಗಳಿಗೆ ಸಂಬಂಧಿಸಿದ ರಜೋಗುಣ ಶಿವಲಹರಿಗಳು ಅಧಿಕವಾಗಿರುತ್ತದೆ. ಈ ಲಹರಿಗಳಿಂದಾಗಿ ಶ್ರಾದ್ಧದಿಂದ ಪ್ರಕ್ಷೇಪಿತವಾಗುವ ಮಂತ್ರೋಚ್ಛಾರಯುಕ್ತ ಲಹರಿಗಳನ್ನು ಶಿವರೂಪದಲ್ಲಿ ಗ್ರಹಿಸುವ ಸೂಕ್ಷ್ಮಬಲವು ಆಯಾಯ ಮುತ್ತೈದೆಯರ ದೇಹಗಳಿಗೆ ಪ್ರಾಪ್ತವಾಗುತ್ತದೆ. ಈ ದಿನ ಮುತ್ತೈದೆಯರಲ್ಲಿರುವ ಶಕ್ತಿ ತತ್ವವು ಸೂಕ್ಷ್ಮ ಶಿವ ತತ್ವದೊಂದಿಗೆ ಬೇಗನೆ ಸಂಯೋಗವಾಗುವುದರಿಂದ ಮುತ್ತೈದೆಯರ ದೇಹವು ಕೂಡಲೇ ಮುಂದಿನ ಗತಿಗೆ ಹೋಗುತ್ತದೆ.

ಈ ಶ್ರಾದ್ಧದ ಕುರಿತು ಎರಡು ವಿವಾದಗಳಿವೆ, ಮೊದಲನೆಯದಾಗಿ ಅವಿಧವಾನವಮಿಯ ಶ್ರಾದ್ಧದಲ್ಲಿ ಫಾತಚತುರ್ದಶಿಯ ಶ್ರಾದ್ಧದಂತೆ ಏಕೋದ್ದಿಷ್ಟ ಶ್ರಾದ್ಧವನ್ನೇ ಮಾಡಬೇಕು, ಪಾರ್ವಣವನ್ನು ಮಾಡಬಾರದು ಎನ್ನುವುದು ಒಂದಾದರೆ, ಎರಡನೆಯದಾಗಿ ಗಂಡ ಬದುಕಿರುವವರೆಗೆ ಅವಿಧವಾ ನವಮೀ, ಗಂಡ ಸತ್ತ ಬಳಿಕ ಅವಿಧವಾನವಮಿ ಮಾಡಲು ಬರುವುದಿಲ್ಲ ಎನ್ನುವ ವಿವಾದವಿದೆ

ಏಕೋದ್ದಿಷ್ಟ: ಏಕೋದ್ದಿಷ್ಟ ಎಂದರೆ ಯಾರ ಕುರಿತು ಶ್ರಾದ್ಧವಿರುತ್ತದೆಯೋ ಅವರಿಗೆ ಮಾತ್ರ ಶ್ರಾದ್ಧ. ಕೇವಲ ಒಂದೇ ಪಿಂಡವನ್ನಿಟ್ಟು ಶ್ರಾದ್ಧ ಮಾಡುವುದು. ಅಂದರೆ ಮುತ್ತೈದೆಯಾಗಿ ಯಾರು ಸತ್ತಿದ್ದಾರೋ ಅವರಿಗೆ ಮಾತ್ರ ಶ್ರಾದ್ಧ. ಸರಳವಾಗಿ ಹೇಳುವುದಾದರೆ ಒಂದು ಪಿಂಡವನ್ನಿಟ್ಟು ಒಬ್ಬರಿಗೆ ಮಾತ್ರ ಶ್ರಾದ್ಧ ಮಾಡುವುದು.

ಪಾರ್ವಣ  ಎಂದರೆ ಸತ್ತಿರುವ ಮುತ್ತೈದೆ, ಅವರ ಅತ್ತೆ (ಅಂದರೆ ಮಗ ತಾಯಿಯ ಶ್ರಾದ್ಧ ಮಾಡುತ್ತಿದ್ದರೆ, ತಾಯಿ, ಅಜ್ಜಿ, ಮುತ್ತಜ್ಜಿ) ಈ ಮೂರೂ ಜನರಿಗೂ ಶ್ರಾದ್ಧವನ್ನು ಮಾಡಲಾಗುತ್ತದೆ. ಅಂದರೆ ಸತ್ತ ವ್ಯಕ್ತಿಯ ತಂದೆಯ ಅತ್ತೆ, ಅವರ ತಂದೆಯ ಅತ್ತೆ ಈ ಮೂರೂ ಜನರಿಗೆ ಮೂರು ಪಿಂಡಗಳನ್ನು ಸಮರ್ಪಿಸಿ ಶ್ರಾದ್ಧ ಮಾಡುವುದು ಪಾರ್ವಣ.

ಶ್ರೀ ವಾದಿರಾಜರು ಹೇಳುವ ಪ್ರಕಾರ, ಧರ್ಮಶಾಸ್ತ್ರದ ಆಚರಣೆಗಳನ್ನು ಯುಕ್ತಿಯಿಂದ ನಿರ್ಧರಿಸಬಾರದು ಎಂದು, ಆದರೆ ಅವಿಧವಾನವಮಿಯ ವಿಷಯದಲ್ಲಿ ಧರ್ಮಸಿಂಧುವಿನಲ್ಲಿಯೂ ಸಹ ಕೇವಲ ಯುಕ್ತಿಯಿಂದಲೇ ಆಚರಣೆಯನ್ನು ಸಾಧಿಸಲಾಗಿದೆ. ಈ ದಿನವೂ ಕೂಡ ಧರ್ಮಶಾಸ್ತ್ರವನ್ನು ಓದದೆಯೇ ಜನ ಕೇವಲ ಯುಕ್ತಿಯಿಂದ ಇದರ ಕುರಿತು ಮಾತನಾಡುತ್ತಾರೆ.

ಯುಕ್ತಿಯ ಪ್ರಕಾರ ಘಾತಚತುರ್ದಶಿಯಂದು ಒಂದೇ ಪಿಂಡವನ್ನಿಟ್ಟು ಶ್ರಾದ್ಧ ಮಾಡಬೇಕು ಎಂಬ ವಿಧಿ ಇದೆ. ಯಾರು ದುರ್ಮರಣ ಹೊಂದಿರುತ್ತಾರೆಯೋ ಅವರಿಗೆ ಮಾತ್ರ ಶ್ರಾದ್ಧ. ಹಾಗೆ ನಮ್ಮ ತಾಯಿ ಮಾತ್ರ ಮುತ್ತೈದೆಯಾಗಿ ಸಾವನ್ನು ಪಡೆದಿರಬಹುದು, ಆದರೆ ನಮ್ಮ ಅಜ್ಜಿಗೆ ಆ ರೀತಿಯಲ್ಲಿ ಸಾವು ಬಂದಿಲ್ಲದಿರಬಹುದು. ಪಾರ್ವಣವಾದರೆ ಮೂರೂ ಜನರಿಗೂ ಪಿಂಡವನ್ನಿಡಲೇಬೇಕು. ಆಗ ಅಜ್ಜಿ, ಮುತ್ತಜ್ಜಿಯರು ಮುತ್ತೈದೆಯಾಗಿ ಸಾವನ್ನು ಪಡೆಯದೇ ಇದ್ದರೆ ನಾವು ಮಾಡುವ ಶ್ರಾದ್ಧ 'ಅವಿಧವಾ'ನವಮಿ ಹೇಗಾಗುತ್ತದೆ ಎನ್ನುವುದು.

ಹಾಗಾದರೆ ತಾಯಿ, ಅಜ್ಜಿ, ಮುತ್ತಜ್ಜಿ ಮೂರು ಜನ ಮುತ್ತೈದೆ ಸಾವನ್ನು ಪಡೆದಿದ್ದರೆ ಆಗ ಅವಿಧವಾನವಮಿಯನ್ನು ಪಾರ್ವಣದ ರೀತಿಯಲ್ಲಿ ಮಾಡಬಹುದೇ ಎಂದರೆ ಅದನ್ನೂ ಅವರು ಒಪ್ಪುವುದಿಲ್ಲ, ಕಾರಣ ಅವಿಧವಾನವಮಿ ಗಂಡ ಬದುಕಿರುವರೆಗೆ ಮಾತ್ರ , ಗಂಡ ಸತ್ತ ಬಳಿಕ ಅವಿಧವಾನವಮಿ ಮಾಡುವ ಹಾಗಿಲ್ಲ ಎಂದು. ಅಂದರೆ ತಂದೆ ಬದುಕಿದ್ದಾರೆ, ತಾಯಿ ತೀರಿಕೊಂಡಿದ್ದಾರೆ, ತಾಯಿಯ ಅವಿಧವಾ ನವಮೀ ಶ್ರಾದ್ಧವನ್ನು ಮಗ ಮಾಡುತ್ತಾನೆ. ಮುಂದೊಂದು ದಿನ ತಂದೆ ತೀರಿಹೋಗುತ್ತಾರೆ. ಆ ಬಳಿಕ ಮಗ ತಾಯಿಯ ಅವಿಧವಾ ನವಮೀಯ ಶ್ರಾದ್ಧವನ್ನು ಮಾಡುವ ಹಾಗಿಲ್ಲವೆನ್ನುವುದು ವಿವಾದ.

ಹೀಗಾಗಿ ತಾಯಿ, ಅಜ್ಜಿ, ಮುತ್ತಜ್ಜಿ ಮೂರೂ ಜನ ಮುತ್ತೈದೆಯರಾಗಿ ಸಾವನ್ನು ಪಡೆದಿದ್ದರೂ, ಅಜ್ಜ ಮುತ್ತಜ್ಜರು ಸತ್ತು ಹೋಗಿರುತ್ತಾರೆಯಾದುದರಿಂದ ಅವರಿಗೆ ಅವಿಧವಾನವಮಿಯ ಶ್ರಾದ್ಧವನ್ನು ಮಾಡಲಾಗುವುದಿಲ್ಲ. ಅದಕ್ಕಾಗಿ ಏಕೋದ್ದಿಷ್ಟ ಅಂದರೆ ಒಂದು ಪಿಂಡವನ್ನು ಒಬ್ಬರಿಗೆ ಮಾತ್ರ ಇಟ್ಟು ಶ್ರಾದ್ಧ ಮಾಡಬೇಕು, ಪಾರ್ವಣವನ್ನಲ್ಲ ಎನ್ನುವುದು ವಿವಾದದ ಸಾರಾಂಶ.

ಅವಿಧವಾ ನವಮಿ ಎನ್ನುವುದು ಪೂರ್ಣವಾಗಿ ಮಹಾಲಯದ ಅಂಗವಲ್ಲ. ಇದನ್ನು ಮೂಲತಃ ಅನ್ವಷ್ಟಕಾ ಶ್ರಾದ್ಧ ಎನ್ನುತ್ತಾರೆ. ಅಷ್ಟಕಾ ಎಂದರೆ ಅಷ್ಟಮಿಯಂದು ಮಾಡುವ ಶ್ರಾದ್ಧ. ಅನ್ವಷ್ಟಕಾ ಶ್ರಾದ್ಧವೆಂದರೆ ನವಮಿಯಂದು ಮಾಡುವ ಶ್ರಾದ್ಧ. ಮಹಾಲಯದಲ್ಲಿ ಬರುವ ನವಮಿಯಂದು ಮಾಡುವ ಅನ್ವಷ್ಟಕಾಶ್ರಾದ್ಧಕ್ಕೆ ಅವಿಧವಾನವಮೀ ಎಂದು ಹೆಸರು.

ಅಷ್ಟಕಾಶ್ರಾದ್ಧಗಳಲ್ಲಿ ಪಾರ್ವಣದ ರೀತಿಯಲ್ಲೇ ಶ್ರಾದ್ಧ ಮಾಡುತ್ತಾರೆ. ಅನ್ವಷ್ಟಕಾಶ್ರಾದ್ಧದಲ್ಲಿ ಕೂಡ ಮೂರು ಪಿಂಡಗಳನ್ನಿಟ್ಟೇ ಶ್ರಾದ್ಧ ಮಾಡಬೇಕು. ಮಾರ್ಗಶೀರ್ಷ, ಪುಷ್ಯ, ಮಾಘ ಮತ್ತು ಫಾಲ್ಗುಣಗಳಲ್ಲಿ ತಾಯಿಗೆ ಮುತ್ತೈದೆ ಸಾವು ಬರದಿದ್ದರೂ ಶ್ರಾದ್ಧವನ್ನು ಮಾಡಬೇಕು. ಭಾದ್ರಪದದಲ್ಲಿ ಮಾತ್ರ ತಾಯಿ ಮುತ್ತೈದೆಯಾಗಿ ಸತ್ತಿದ್ದರೆ ಆ ದಿನ ಸುವಾಸಿನಿಯರನ್ನು ಕರೆಯಿಸಿ, ಭೋಜನವನ್ನು ಮಾಡಿಸಿ, ಸೌಭಾಗ್ಯ ಪದಾರ್ಥಗಳನ್ನು ದಾನ ಮಾಡಿ ಶ್ರಾದ್ಧ ಮಾಡಬೇಕು.

ಇನ್ನೊಂದು ವಿವಾದವೆಂದರೆ, ಮುತ್ತೈದೆ ಸಾವು ಪಡೆದವರಿಗೆ ಗಂಡ ಸತ್ತ ನಂತರ ಅವಿಧವಾನವಮಿ ಇಲ್ಲ ಎನ್ನುವ ವಿವಾದ. ಜೀವದ ಸಂಬಂಧವನ್ನು ತೆಗೆದುಕೊಂಡರೆ ಜೀವಗಳಿಗೆ ಸಾವೇ ಇಲ್ಲ. ಹೀಗಾಗಿ ದೇಹದ ಮುತ್ತೈದೆಸಾವು ಎನ್ನುವ ಗುಣ ಆ ದೇಹದ ಶಾಶ್ವತ ಗುಣವಾಯಿತು ಎನ್ನಲಾಗುತ್ತದೆ.

ಪ್ರಹ್ಲಾದ ಮುಂದೆ ಎಷ್ಟು ಜನ್ಮ ಎತ್ತಿದರೂ ಮುಂದೊಂದು ದಿನ ಅವನ ದೇಹ ವಿನಾಶವಾದರೂ ಅವನ ಆ ಜನ್ಮದ 'ಹಿರಣ್ಯಕಶಿಪುವಿನ ಮಗ' ಎಂಬ ಗುಣ ಹೇಗೆ ಹೋಗುವುದಿಲ್ಲವೋ ಹಾಗೆ '' ಗಂಡನಿಗಿಂತ ಮೊದಲೇ ಸತ್ತದ್ದು'' ಎಂಬ ಗುಣವೂ ಹೋಗುವುದಿಲ್ಲ. ವೈಧವ್ಯ ಎಂದರೆ ಗಂಡ ಸತ್ತ ಬಳಿಕವೂ ಬದುಕಿರುವುದು, ಅದು ಆಕೆಗೆ ಅನ್ವಯವಾಗುವುದಿಲ್ಲ. ಹೀಗಾಗಿ ಒಮ್ಮೆ ಮುತ್ತೈದೆಯಾಗಿ ಸತ್ತರೆ ಮಗ ತಾನು ಸಾಯುವವರೆಗೆ ಆಕೆ ಅವಿಧವಾನವಮೀ ಶ್ರಾದ್ಧವನ್ನು ಮಾಡಲೇಬೇಕು. ಒಂದು ಶ್ರಾದ್ಧ ನಿಲ್ಲುವುದು ಅದನ್ನು ಮಾಡುವ ಕರ್ತೃ ಸತ್ತಾಗ ಮಾತ್ರ . ಬೇರೆ ಯಾವ ಸಂದರ್ಭದಲ್ಲಿಯೂ ಸಹ ಶ್ರಾದ್ಧ ನಿಲ್ಲುವುದಿಲ್ಲ.

ಹೀಗಾಗಿ ಯಾವ ಕಾರಣದಿಂದಲೂ ಗಂಡ ಸತ್ತ ಬಳಿಕ ಅವಿಧವಾನವಮೀ ಶ್ರಾದ್ಧವನ್ನು ನಿಲ್ಲಿಸಬೇಕೆಂಬ ನಿಯಮ ಒಪ್ಪಲು ಸಾಧ್ಯವಿಲ್ಲ. ಅದನ್ನು ಮಾಡುವ ಕರ್ತೃ ಇರುವವರೆಗೆ ಆ ಶ್ರಾದ್ಧವನ್ನು ಮಾಡಬೇಕು. ಅವಿಧವಾನವಮೀ ಅನ್ವಷ್ಟಕಾಶ್ರಾದ್ಧವಾದ್ದರಿಂದ ಆ ಶ್ರಾದ್ಧದ ದಿನ ತಾಯಿ, ಅಜ್ಜಿ, ಮುತ್ತಜ್ಜಿ ಮೂರೂ ಜನರಿಗೂ ಪಿಂಡವನ್ನಿಟ್ಟು ಶ್ರಾದ್ಧವನ್ನು ಮಾಡಬೇಕು. ಏಕೋದ್ದಿಷ್ಟ ಶ್ರಾದ್ಧವನ್ನು ಮಾಡಬಾರದು.

ಅವಿಧವಾನವಮಿಯ ವಿಶೇಷತೆ
ಈ ಶ್ರಾದ್ಧದಲ್ಲಿ ಮುತ್ತೈದೆಯರನ್ನು ಭೋಜನಕ್ಕೆ ಆಹ್ವಾನಿಸಬೇಕು
ಆಮಂತ್ರಿತರಾದ ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಸೀರೆ, ಕುಪ್ಪುಸ ಮುಂತಾದ ಸೌಭಾಗ್ಯಪದಾರ್ಥಗಳನ್ನು ಬಾಗಿನ ನೀಡಬೇಕು
ಅವಿಧವಾ ನವಮೀಯಲ್ಲಿ ಪಿತೃಶ್ರಾದ್ಧಕ್ಕೆ ಸಿದ್ಧಪಡಿಸುವ ರವೆ ಉಂಡೆ ಮತ್ತು ವಡೆಗಳನ್ನು ನಿಷೇಧಿಸಲಾಗಿದೆ
ಸಾಧ್ಯವಾದಲ್ಲಿ ಬೆಳ್ಳಿ, ಬಂಗಾರದ ಆಭರಣಗಳನ್ನು ವಿಷ್ಣುಭಕ್ತರಾದ ಶ್ರೇಷ್ಠಗುಣಗಳ ಮುತ್ತೈದೆಯರಿಗೆ ದಾನ ನೀಡಿ ಜನ್ಮವಿತ್ತ ತಾಯಿಗೆ ಜನ್ಮಜನ್ಮಗಳಲ್ಲಿಯೂ ಸಕಲ ಸೌಭಾಗ್ಯವಿರಲಿ ಎಂದು ಪ್ರಾರ್ಥಿಸಬೇಕು.
ಅವಿಧವಾ ನವಮಿಯನ್ನು ಹಬ್ಬವೆಂದೇ ಪರಿಗಣಿಸಲಾಗುವುದರಿಂದ ಹಬ್ಬದ ಅಡುಗೆ ಎಂದರೆ, ಬೇಸನ್‌ ಲಡ್ಡು, ಜಿಲೇಬಿ, ಹೋಳಿಗೆ, ಶ್ಯಾವಿಗೆ ಪಾಯಸ, ಮಂಡಿಗೆ ಹಾಗೂ ಬೂಂದಿ ಲಾಡು ಮಾಡಲಾಗುತ್ತದೆ
ಅವಿಧವಾ ನವಮಿ ಶ್ರಾದ್ಧದಲ್ಲಿ ತಾಯಿಯ ಪಿಂಡಕ್ಕೆ ಅರಿಶಿನ ಕುಂಕುಮಗಳನ್ನು ಅರ್ಪಿಸುವ ಪದ್ಧತಿಯೂ ಇದೆ.
***

ಶ್ರೀ ವಾಯು ಪುರಾಣಾಂತರ್ಗತ ಶ್ರೀ ವೇದವ್ಯಾಸದೇವರು ಹೇಳಿದ " ಮಾತೃ ವೈಭವಮ್ ".

" ಅಮ್ಮ " ಎನ್ನುವ ಅಕ್ಷರದಲ್ಲಿ " ಅಮೃತ " ವಿದೆ.
" ಅಮ್ಮ " ಎಂಬ ಎರಡಕ್ಷರದಲ್ಲಿ ಅಪ್ಯಾಯತೆ - ಅಂತಃಕರಣ - ವಾತ್ಸಲ್ಯ ತುಂಬಿದೆ.
" ಅಮ್ಮ " ಅಂದರೆ.....
ಗಾಳಿಗೆ ಗೊತ್ತು.
ನಕ್ಷತ್ರಗಳಿಗೆ ಗೊತ್ತು.
ಆ " ಚಂದಮಾಮ " ಬಲ್ಲ.
ಧರೆ ಬಲ್ಲಳು.
ಪ್ರೀತಿ - ತ್ಯಾಗ - ಸಹನೆ - ಧೈರ್ಯ - ಕಳಕಳಿಯ ರೂಪ ಅವಳು.

ಸಂಪೂರ್ಣ ಸ್ತ್ರೀ ಆದಾಗ ತನ್ನನ್ನು ಮರೆಯುತ್ತಾಳೆ. ಬರುವ ಕಂದನನ್ನು ಮರೆತೂ ಮರೆಯಳು.

ಒಂದೊಂದು ಕ್ಷಣವನ್ನೂ ಅನುಭವಿಸುತ್ತಾಳೆ. ಕಲ್ಪನೆ - ಸ್ಪರ್ಶ - ನೋವುಗಳು ಒಟ್ಟೊಟ್ಟಿಗೆ ಒಂದು ಆ ಕೃತಿಯ ರಚನೆಯನ್ನು ಎಳೆ ಎಳೆಯಾಗಿ ಬಿಡಿಸಿಕೊಳ್ಳುತ್ತಾಳೆ. ಹೊಟ್ಟೆ ತುಂಬಿದ್ದರೂ ತುಸು ಹೆಚ್ಚಾಗಿಯೇ ಆಹಾರವನ್ನು ತೆಗೆದುಕೊಳ್ಳುತ್ತಾಳೆ. ಅಷ್ಟು ವರುಷ ತನಗಾಗಿ ತೋರದ ಕಾಳಜಿಯನ್ನು ಜೋಪಾನವಾಗಿ ಪ್ರಕಟಿಸುತ್ತಾಳೆ. ಬಾಳಿನಲ್ಲಿ ಬಂದು ಹೋದ ಕೆಲವೇ ಕೆಲವು ನೆನಪುಗಳನ್ನು ಆಹ್ವಾನಿಸಿಕೊಳ್ಳುತ್ತಾ ವಾಸ್ತವಿಕವಾಗಿ ಯಾವುದೇ ತೊಂದರೆ ಇದ್ದರೂ ಗಮನಿಸದೇ ಹಣನ್ಮುಖತೆಯೆಡೆಗೆ ಜಾರುತ್ತಾಳೆ.

ಎದ್ದಾಗ - ಬಿದ್ದಾಗ - ಒದ್ದಾಗ ಸದ್ದಾಗದಂತೆ ಅವಡುಗಚ್ಚುತ್ತಾಳೆ. ಮಗುವಿಗಾಗಿ ನಗುತ್ತಾಳೆ. ಸೃಷ್ಟಿಯಾದಾಗ ದೃಷ್ಟಿಸಿ ನೋಡುತ್ತಾ ಬಿಂಬ - ಪ್ರತಿಬಿಂಬ - ರೂಪ - ಅನುರೂಪಗಳ ಎಣಿಕೆಯ ಪ್ರಾಣಗಳನ್ನು ಕಣ್ಣಿನಲ್ಲಿ - ತುಟಿಯಲ್ಲಿ - ಕರಗಳಲ್ಲಿ - ಅಪ್ಪುಗೆಯಲ್ಲಿ - ಎದೆಯಲ್ಲಿ ತೋರುತ್ತಾಳೆ. ಹಗಲು - ರಾತ್ರಿ - ನಿದ್ದೆ - ಆಯಾಸಗಳು ಅಲ್ಲಿ ಇಲ್ಲ!

ಅಲ್ಲಿರುವುದು ಬರೀ ಪ್ರೀತಿ!!!
ತನಗಾಗಿ ಬಂದ ಮಗು ದೇವರು ಕೊಟ್ಟ ಹೂವು. ತಾಯ್ತನ ತುಂಬಿದ ಆ ಕಂದನನ್ನು ಎವೆಯಿಕ್ಕದೆ ಸಮಯದ ಪರಿವೆಯಿಲ್ಲದ ಕಣ್ತುಂಬಕೊಳ್ಳುತಾಳೆ..
ಆಕೆ ಅಮ್ಮ........ !!
ಅಮ್ಮ ಮೊದಲೇ? ದೇವರು ಮೊದಲೇ?
ವೇದ ಹೇಳುತ್ತದೆ ಅಮ್ಮನೇ ದೇವರು!
ಆಕೆಗೆ ಮಗುವಿನ ನಾಡಿ ಮಿಡಿತ ಗೊತ್ತು. ಉಸಿರಿನ ವೇಗ ಕೊಂಬೆ ಬಲ್ಲದು. ಬಳ್ಳಿಗೆ ನೀರುಣಿಸುವಂತೆ ದೃಷ್ಟಿಯಾಗದಿರಲೆಂದು ಸೆರಗು ಮುಚ್ಚಿ ಅಮೃತ ಕುಡಿಸುತ್ತಾಳೆ. ಮಗು ನಿದ್ರಿಸುತ್ತೆ. ತಾಯಿಯಾ ಮನ - ತನು ಎಚ್ಚರವಿರುತ್ತೆ. ಮತ್ತೆ ಮತ್ತೆ ಏಳುತ್ತದೆ. ತಾಯಿ ಇಂಪಾದ ದನಿ; ತೂಗುವಾಗ ಮಧ್ಯದಲ್ಲಿ ಬೇಕಂತಲೇ ಅಳುವುದು. ಅಮ್ಮನ ಮೊಗ ಮತ್ತೆ ದಿಟ್ಟಿಸಲು ಆ ತಾಯಿಗೂ ಗೊತ್ತು ಮಗು ಆಟವಾಡುತ್ತಿದೆಯೆಂದು. ಆದರ ಜೊತೆ ಆ ಮಾತೃ ಹೃದಯವೂ ಆಟವಾಡುತ್ತದೆ.

ಮಧುರ ಸ್ವರ, ಹುಸಿ ಮುನಿಸು, ತೋರೆಗೊಡದ ನಗು ಇಬ್ಬರಿಗೂ ಬೇಕು. ಪ್ರಕೃತಿಯ ನಿಯಮದಂತೆ ಬೆಳೆಯುತ್ತದೆ. ಆದರೆ ಆ ತಾಯಿ ಅಲ್ಲಿಯೇ ನಿಲ್ಲುತ್ತಾಳೆ. ಕ್ರಮೇಣ ಮಾಡು ಮರೆತು ಬಿಡುತ್ತದೆ. ಗೆಳತಿ - ಸಂಗಾತಿ ದೊರೆತಾಗ ಅಮ್ಮನಿಂದ ಅದು ಬಹು ದೂರ.

ಮಾತೃ ಹೃದಯ ಮಮತೆಯಿಂದ ಮನದಲ್ಲಿ ಮಗುವಿಗೆ ಜೋಕಾಲಿ ತೂಗುತ್ತಲೇ ಇರುತ್ತಾಳೆ. ಅದು ನಿರಂತರ. ಅಂಥಹಾ ಕರುಣಾಮಯಿಯಾದ ತಾಯಿ ಋಣವನ್ನು ತೀರಿಸಲು ಅಸಾಧ್ಯ! ಆದುದರಿಂದ ಮುತ್ತೈದೆಯಾಗಿ ಮರಣ ಹೊಂದಿದ ತಾಯಿಗೆ " ಅವಿಧವಾ ನವಮೀ " ಯಂದೇ ಶ್ರಾದ್ಧ ಮಾಡಬೇಕು.

ಎಲ್ಲಿ ತಾಯಿಯ ಋಣದ ಪರಿಹಾರ ನೆನಿಸಿ 16 ಪಿಂಡಗಳನ್ನು ಇಡಲಾಗುತ್ತದೆಯೋ ಅದನ್ನು ನೆನೆಸಿಕೊಂಡಾಗ ಕರುಳು ಕಿವಿಚಿದಂತಾಗುತ್ತದೆ. ಕಲ್ಲೆದೆಯ ಮನಸ್ಸು ಕೂಡಾ ಕರಗುತ್ತದೆ. ನಿಮ್ಮ ತಂದೆ - ತಾಯಿಗಳು ನಿಮ್ಮನ್ನು ನೋಡಿಕೊಂಡಂತೆ ನೀವು ನಿಮ್ಮ ಮಕ್ಕಳನ್ನು ನೋಡಿಕೊಳ್ಳಲಾರಿರಿ. ಅವರು ತಮ್ಮ ಸುಖವನ್ನು ತ್ಯಾಗ ಮಾಡಿ ನಿಮಗೆ ಸುಖ ಕೊಟ್ಟರು. ಹೀಗಾಗಿ ಅರ್ಥ ತಿಳಿದು ಪಿಂಡ ಪ್ರದಾನ ಮಾಡಿ!!

ಶ್ರೀ ವೇದವ್ಯಾಸದೇವರು " ವಾಯುಪುರಾಣ " ದಲ್ಲಿ ಮಾತೃ ವೈಭವವನ್ನು ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ. ವಾಯುಪುರಾಣದಲ್ಲಿ ತಾಯಿಯ ಶ್ರೀ ವೇದವ್ಯಾಸದೇವರು ತಾಯಿಯ ವೈಭವವನ್ನು ಸಜ್ಜನರ ಮಾಹಿತಿಗಾಗಿ...

ಗರ್ಭೇ ಚ ವಿಷಮೇ ದುಃಖಂ
ವಿಷಮೇ ಭೂಮಿವರ್ತ್ಮನಿ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೧ ।।

ನಾನು ಗರ್ಭದಲ್ಲಿರುವುದರಿಂದ ನಿನಗೆಷ್ಟು ಕಷ್ಟವಾಯಿತು? ಅತಿಥಿಗಳು ಮನೆಗೆ ಬಂದರೇನೇ ಮನೆಯವರ ಸ್ವಾತಂತ್ರ್ಯ ಹೋಗುವುದು. ಹೀಗಿರುವಾಗ ೯ ತಿಂಗಳು ನಿನ್ನೊಳಗೆ ಬಂದುದರಿಂದ ನಿನ್ನ ದೇಹಕ್ಕೆ ಎಷ್ಟೊಂದು ವಿಕಾರವಾಯಿತು ಮತ್ತು ದುಃಖವಾಯಿತು.

ಊಟವಾದಾಗ ತಿಂದಿದ್ದೆಲ್ಲಾ ವಾಂತಿ, ಹೊಟ್ಟೆ ಹೊತ್ತು ಸಮಾರಂಭದಲ್ಲಿ ಭಾಗವಹಿಸಲು ಆಗಲಿಲ್ಲ. ಮನೆ - ಸಮಾರಂಭ - ಸಮಾಜದಲ್ಲಿ ಮುಜುಗರವಾದರೂ ನನಗಾಗಿ ಅದನ್ನು ಸಹಿಸಿಕೊಂಡಿರುವ ನಿನಗೆ ನಮನ!

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಯಾವತ್ಪುತ್ರೋ ನ ಭವತಿ
ತಾವನ್ಮಾತುಶ್ಚ ಶೋಚನಮ್ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೨ ।।

ಗರ್ಭದಲ್ಲಿ ನಾನು ಹೊರಗೆ ಬರುವ ತನಕ ನಿನಗಾದ ಶೋಕಕ್ಕೆ ಕೊನೆಯಿಲ್ಲ. ಸಿಕ್ಕಾಪಟ್ಟಿ ತಿರುಗಾಡಲಾಗದು. ಮಗುವಿಗೆ ಏನಾದೀತೋ ಎಂಬ ಭಯ. ಅಡ್ಡಾದಿಡ್ಡಿಯಾಗಿ ಬಂದರಂತೂ ನನಗಾಗಿ ನಿನ್ನ ಪ್ರಾಣವೇ ಹೋದರೆ ಎಂಬ ಭಯ ಬೇರೇ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಶೈಥಿಲ್ಯೇ ಪ್ರಸವೈ: ಪ್ರಾಪ್ತೆ
ಮಾತಾ ವಿಂದಂತಿ ತತ್ಕೃತಂ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೩ ।।

ತಾಯಿಯಾದ್ದರಿಂದ ನಿನ್ನ ದೇಹ ಸೌಷ್ಠವ ಹಾಳಾಗುತ್ತದೆ. ಹಾಳಾದರಾಗಲಿ ಮಗು ಮುದ್ದಾಗಿರಬೇಕು ಎಂದು ನನಗಾಗಿ ನಿನ್ನ ತ್ಯಾಗ ಎಷ್ಟು ದೊಡ್ಡದು. ನಾನು ಇದ್ದುದ್ದು ೯ ತಿಂಗಳು. ನೀ ಒದ್ದಾಡಿದ್ದು ಅದಕ್ಕಾಗಿ ಜೀವನ ಪರ್ಯಂತ!

ಪ್ರೇಮಮಯಿಯೇ ಆದರೂ ನನ್ನನ್ನು ನೀನು ನಲಿವಿನಿಂದ ಕಾಪಾಡಿದೆ!

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಸಂಪೂರ್ಣೇ ದಶಮೇ ಮಾಸೀ
ಮಾತಾ ಕ್ರಂದಂತಿ ದುಷ್ಕೃತಂ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೪ ।।

ತಿಂಗಳು ತುಂಬಿದಂತೆ ನಾನಂತೂ ಗರ್ಭದಲ್ಲಿ ಬೆಳೆಯುತ್ತಿದ್ದೆ. ನಿನ್ನ ಚಿಂತೆ, ಯೋಚನೆ ದುಪ್ಪಟ್ಟು ಬೆಳೆಯುತ್ತಿತ್ತು. ನೀನು ಆಗ ಯಾರ ಬಳಿ ಹೇಳಿಕೊಳ್ಳದೆ ಒಳಗೊಳಗೆ ಅತ್ತೆ. ನಾನು ಸತ್ತರೂ ಸರಿ ಮಗು ಬದುಕಿದರೆ ಸಾಕು ಎಂದುಕೊಂಡಿ!

ಅಮ್ಮಾ! ಆ ನಿನ್ನ ತ್ಯಾಗಕ್ಕೆ ನಾನೇನು ನೀಡಲಿ!

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ದಿವಾ ರಾತ್ರೌ ಚ ಯಾ ಮಾತಾ
ಸ್ತನಂ ದತ್ವಾ ಚ ಪಾಲಿತಾ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೫ ।।

ಹಗಲೂ ರಾತ್ರಿ ಹಾಲಿಗಾಗಿ ಅತ್ತೆ. ನಿನ್ನ ಸವಿ ನಿದ್ದೆ ಧ್ವಂಸವಾಯಿತು. ಆದರೂ ನನಗೆ ಹಾಲು ನೀಡಿ ನನ್ನ ಓಲೈಸಿದೆ. ನಿನ್ನ ನಿದ್ದೆ ಹಾಳಾದರೂ ನಾನು ಮತ್ತೆ ಮಲಗಿದ್ದ ಕಂಡು ಒಳಗೊಳಗೇ ಖುಷಿ ಪಟ್ಟೆ! ಅಮ್ಮಾ ನಿನ್ನ ಋಣಕ್ಕೆ ಸರಿಸಾಟಿ ಏನಿದೆ?

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!

ಅಗ್ನಿನಾ ಶೋಚ್ಯತೇ ದೇಹೇ
ತ್ರಿರಾತ್ರೋ ಪೋಷಣೇನ ಚ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೬ ।।

ನಾನು ಹಾಲು ಕುಡಿದಾಗ ಶೀತ ಹೋಗಿ ನಿನ್ನ ದೇಹವೇ ಉಷ್ಣವಾಗುತ್ತಿತ್ತು. ಆದರೂ ನೀನು ಹಾಲು ಕುಡಿಸುವುದು ನಿಲ್ಲಿಸಲಿಲ್ಲ. ದೇಹ ಬಿಸಿ ಕಾಪಾಡಿ ಬಿಸಿ ಬಿಸಿ ಹಾಲು ಕೊಟ್ಟೆ. ಆದರೆ ಈಗ ನಾನು ಅದನ್ನು ನೆನಿಪಿಸಿ ಋಣ ಪರಿಹಾರಕ್ಕಾಗಿ ಪಿಂಡ ಪ್ರದಾನ ಮಾಡುತ್ತಿರುವೆ ಅಮ್ಮಾ!

ರಾತ್ರೌ ಮೂತ್ರ ಪರೀಷಾಭ್ಯಾ೦
ಭಿದ್ಯತೇ ಮಾತೃಕರ್ಪಟೈ: ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೭ ।।

ರಾತ್ರಿ ಮಲ ಮೂತ್ರ ವಿಸರ್ಜಿಸಿ ಅತ್ತೆ. ಆಗ ನಿನ್ನ ನಿದ್ದೆ ಹಾಳಾಯಿತು. ಹಾಸಿಗೆಯೆಲ್ಲಾ ಒದ್ದೆ. ದುರ್ಗಂಧ ಮುಜುಗರ ಎಲ್ಲಾ ನಿನಗೆ ತಂದೆ. ಕಸ ಮಾಡಿದ ನನ್ನನ್ನು ನೀನು ತಳ್ಳದೇ ಎತ್ತಿಕೊಂಡೆ. ಅಸಹ್ಯ ಮಾಡಿದ ನನ್ನನ್ನು ಎತ್ತಿಕೊಂಡೆ. ತೊಡೆ ಏರಿದ ನಾನು ನಿನ್ನ ಸೀರೆಯನ್ನೆಲ್ಲಾ ತೋಯಿಸಿದೆ. ಆದರೆ ನೀನು ಬೇಸರ ಮಾಡಿಕೊಳ್ಳದೆ ನನ್ನ ಬೆಚ್ಚಿಗಿಟ್ಟೆ. ಇದು ನಿನ್ನ ದಿನಗಟ್ಟಲೆಯಲ್ಲ! ವರ್ಷಗಟ್ಟಲೆ ನನಗೆ ಹರ್ಷ ತಂದು ಕೊಟ್ಟೆ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ.

ಮಾಸಿ ಮಾಸಿ ವಿದಾಘೇ ಚ
ಶರೀರ ತಾಪ ದುಃಖಿತಾ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೮ ।।

ಚಳಿ, ಬಿಸಿಲು, ಮಳೆ, ಗಾಳಿಯಿಂದ ಋತು ಬದಲಾದಂತೆ ನನ್ನ ಆರೋಗ್ಯ ಏರು ಪೇರಾಯಿತು ಆದರೂ ನನ್ನನ್ನು ಹೆಗಲೇರಿಸಿ ಕೊಳ್ಳುವುದನ್ನು ನೀನು ಬಿಡಲಿಲ್ಲ. ನಿನಗೆ ಜ್ವರ ಬಂದರೂ ನನ್ನನ್ನು ಜೋಪಾನ ಮಾಡಿದೆ. ಚಳಿ ಆದರೂ ನೀನು ನನ್ನ ಬಳಿಯೇ ಇದ್ದೆ.

ಅಮ್ಮಾ! ನನಗಾಗಿ ನೀನು ನರಳಿದೆ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಗಾತ್ರಭಂಗೋ ಭವೇನ್ಮಾತು:
ಘೋರ ಬಾಧೇ ಪ್ರಪೀಡಿತೇ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೯ ।।

ನಾನು ನಿನಗೆಷ್ಟು ಬಾರಿ ತುಂಟತನ ಮಾಡಿಲ್ಲ. ನಾನೇನೋ ನಿನ್ನ ದೇಹದ ಮೇಲೆ ಕಾಲಿನಿಂದ ನಲಿದೆ. ನನಗೆ ನಲಿವು. ನಿನಗೆ ನೋವು. ಆದರೂ ನೀನು ನನ್ನನ್ನು ಕೆಳಗಿಳಿಸಲಿಲ್ಲ. ಬದಿಗಿಡಲಿಲ್ಲ. ಬಾಧೆ ಬಂದರೂ ಸಹ ಪೀಡೆಯಾದರೂ ಸಹಾ ಪ್ರೀತಿಸಿದೆ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಪಾದಾಭ್ಯಾ೦ ಜನಯೇತ್ಪುತ್ರೋ
ಜನನೀ ಪರಿವೇದನಮ್ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೧೦ ।।

ಗರ್ಭದಲ್ಲಿದ್ದಾಗ ನಿನಗೆ ಒದ್ದೆ. ಮಗುವಾಗಿದ್ದಾಗ ಕಾಲಿಂದ ಜಾಡಿಸಿದೆ. ಬೆಳೆದ ನಂತರವೂ ನಿನಗೆ ಕಾಲು ತೋರಿಸಿದ್ದುಂಟು. ನೀ ಮಾಡಿದ್ದೆಲ್ಲಾ ಕಾಲು ಕಸ ಎಂದು ಕಡೆಗಾಣಿಸಿದೆ. ಕಾಲಿಂದ ನಿನಗೆ ಕೊನೆಗಾಣದ ಕಂಬನಿ ನೀಡಿದೆ. ಅಮ್ಮಾ ನನ್ನ ತುಂಟತನದಿಂದ ನಿನ್ನನ್ನು ಗೋಳಾಡಿಸಲಿಲ್ಲವೇ?

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಅಲ್ಪಾಹಾರಗತಾ ಮಾತಾ
ಯಾವತ್ಪುತ್ರೋsಸ್ತಿ ಬಾಲಕಃ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೧೧ ।।

ಅಂದು ನಾನು ಮಲಗಿದ್ದಾಗ ನನಗಾಗಿ ನಿನ್ನ ಊಟದ ಸಮಯ ಎಷ್ಟು ಬಾರಿ ಮುಂದೆ ಹೋಗಿಲ್ಲವೇ? ತೊಡೆಯ ಮೇಲೆ ಮಲಗಿಕೊಂಡಾಗ ನಿನ್ನ ಊಟಕ್ಕೆ ಅಡ್ಡಿಯಾಗಲಿಲ್ಲವೇ? ಊಟದ ವೇಳೆಯಲ್ಲಿ ಮಲ ವಿಸರ್ಜನೆ ಮಾಡಿ ನಿನಗೆ ಮುಜುಗರ ಮಾಡಲಿಲ್ಲವೇ?

ಬಡತನದಲ್ಲಿ ನನಗಾಗಿ ಊಟ ಮಾಡದೇ ನೀನು ಉಪವಾಸ ಮಲಗಿರಬಹುದು. ಮತ್ತಾರು ಅಡಿಗೆ ಮಾಡುವವರು ಎಂದು ಹಾಗೆಯೇ ಮಲಗಿರಬಹುದು. ಊಟದ ವೇಳೆ ರಂಪ ಮಾಡಿ ಎಷ್ಟು ಬಾರಿ ನಿನ್ನ ಊಟ ತಪ್ಪಿಸಲಿಲ್ಲ?

ಅಂತೂ ಅಲ್ಪನಾದ ನನ್ನಿಂದ ನಿನ್ನ ಆಹಾರ ಸ್ವಲ್ಪವಾಯಿತು. ನೆನಿಸಿಕೊಂಡಾಗ ಮನಸ್ಸು ಸಂಕೋಚದ ಮುದ್ದೆಯಾಗುವುದು.

ಅದರ ಮುಂದೆ ಪಿಂಡ ರೂಪವಾದ ಅನ್ನದ ಮುದ್ದೆ ಕೇವಲ ಸಾಂಕೇತಿಕ ಅಲ್ಲವೇ?

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಪಿಬಂತಿ ಕಟುಕ ದ್ರವ್ಯ೦
ಮಾತಾ ಯಸ್ಯ ಹಿತಾಯ ಚ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೧೨ ।।

ಬೇಗ ಪ್ರಸವವಾಗಲೀ ಎಂದು ಕಹಿಯ " ಜೀರಿಗೆ ಕಷಾಯ " ಕುಡಿದೆ. ಮಗುವಿಗೆ ನೆಗಡಿಯಾಗದಿರಲಿ ಎಂದು " ಮೆಣಸಿನ ಸಾರು " ನೀ ಕುಡಿದೆ. ಮಗುವಿಗೆ ಆರೋಗ್ಯವಿರಲಿ ಎಂದು ತಲೆಗೆಲ್ಲಾ ಸುತ್ತಿಕೊಂಡು ಒದ್ದಾಗಿದೆ.

ನಾನು ಬರುವ ತನಕ ನಿನಗೆ ಬಂಧನ. ಬಂದ ಮೇಲೆ ಆಹಾರ ನಿಬಂಧನ. ಆದರೂ ತಪ್ಪಲಿಲ್ಲ ನಿನ್ನ ಪ್ರೀತಿಯ ಬಾಹು ಬಂಧನ. ಎರಡೂ ಕೈಯಿಂದ ಎರಡು ಮಾತಾಡದೇ ಮಾಡಿರುವ ಸೇವೆಗೆ ಒಂದೇ ಕೈಯಿಂದ ಪಿಂಡ ಪ್ರದಾನ ಮಾಡುವುದು ನಿಜವಾಗಲೂ ಋಣ ತೀರಿಸಲು ಅಲ್ಲ! ಕರ್ತವ್ಯದ ಸಂಕೇತಕ್ಕಾಗಿ! ನನಗಾಗಿ ನೀನು ಔಷಧ ಕುಡಿದೆ. ನಿದ್ದೆ ಗೆಟ್ಟು ನೀನು ಒದ್ದಾಡಿದೆ.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಪುತ್ರೋ ವ್ಯಾಧಿ ಸಮಾಯುಕ್ತೋ
ಮಾತಾಕ್ರಂದನಕಾರಿಣೇ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೧೩ ।।

ನನಗೆ ರೋಗ ಬಂದಾಗ ಅತ್ತು ದೇವರಲ್ಲಿ ಬೇಡಿ ಔಷಧಿಗಾಗಿ ಅಲೆದಾಡಿ ರಾತ್ರಿ ನಿದ್ದೆ ಗೆಟ್ಟಿದ್ದು ನೀನು. ನಾನು ಅಳುವುದಕ್ಕೆ ಮೊದಲು ನೀನು ಅತ್ತೆ. ತಿಳುವಳಿಕೆಯಿಲ್ಲದ ನನಗಾಗಿ ನೀನು ಅಷ್ಟು ಮಾಡಿರುವಾಗ ಈಗ ನಾನು ನಿನಗೆ ಏನು ಕೊಡಲಿ?

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಮಾಸೇ ಮಾಸೇ ಕೃತಂ ಕಷ್ಟ೦
ವೇದನಾ ಪ್ರಸವೇಷು ಚ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೧೪ ।।

ತಿಂಗಳು ಉರುಳುತ್ತಿದ್ದಂತೆ ನಿನ್ನ ಮುಜುಗರ ಹೆಚ್ಚಾಯಿತು. ಮಗು ಬರುವ ತನಕ ಹೆಜ್ಜೆ ಹೆಜ್ಜೆಗೂ ಗಾಬರಿ. ಬರುವ ದಿನ ಬದುಕುವುದೇ ಕಷ್ಟ. ತಾಯಿಯಾದ ನೀನು ಸತ್ತರೂ ಪರವಾಗಿಲ್ಲ ಮಗು ಬದುಕಿದರೆ ಸಾಕು ಎಂದು ಒದ್ದಾಡಿದವಳು ನೀನು.

ನಾನು ಬಂದ ಮೇಲೆ ನಿನಗೆ ಎತ್ತಿಕೊಳ್ಳುವ ಭಾರ. ನನಗಾಗಿ ಮೆಲ್ಲಗೆ ನಡೆಯುವ ದಾಕ್ಷಿಣ್ಯ. ಬೆಳೆಯುವಾಗ ನನ್ನನ್ನು ಬೆಳೆಸಲು ನೀನು ಒಳವೊಳಗೆ ಒದ್ದಾಡಿದ್ದು.

ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!

ಯಮದ್ವಾರೇ ಪಥೇ ಘೋರೇ
ಮಾತುಶ್ಚ ಶೋಚನಮ್ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೧೫ ।।

ನನಗಾಗಿ ನೀನು ಎಷ್ಟು ಕಷ್ಟ ಅನುಭವಿಸಿಲ್ಲ? ಸಾಯುವಾಗ ನಿನಗೆ ಎಂಥಾ ವೇದನೆ ಆಗಿರಬಹುದು? ಆಗ ನಾನು ಬಲಿಯಲ್ಲಿರಲಿಲ್ಲ. ಇದ್ದರೂ ಏನು ಮಾಡಬೇಕೆಂದು ತೋಚಲಿಲ್ಲ.

ಬದುಕಿನಲ್ಲೂ, ಸಾವಿನಲ್ಲೂ ನೋವನ್ನುಂಡು, ನಲಿವು ತಂದ ನಲ್ಮೆಯ ತಾಯಿ ನೀನು. ನೀನು ದೂರವಾಗಿ ಯಮಲೋಕದ ದಾರಿಯಲ್ಲಿ ಮಕ್ಕಳೇನಾದರೂ ಮಾಡಿಯಾರೆಂದು ಮೂಟೆಯಷ್ಟು ಆಸೆ ಹೊತ್ತಿರಬಹುದು. ಮೂರ್ಖರಾದ ನಾವು ಈಗ ನೇಣಿಪಿಸಿಕೊಳ್ಳುತ್ತಿದ್ದೇವೆ.

ತಾಯಿ ಆಗ ಆದ ನಿರಾಶೆ ದುಃಖಗಳಿಗೆ ದುಡ್ಡು - ಮಾತು ಯಾವುದೂ ಪರಿಹಾರವಲ್ಲ. ನಾಚಿಕೆಯಿಂದ ಮನಸ್ಸು ಸಂಕೋಚದ ಮುದ್ದೆಯಾಗಿದೆ. ಕೈಹಿಸುಕಿ ಕೊಳ್ಳುವಷ್ಟು ಇಡೀ ಜೀವ ಹಿಡಿಯಾಗಿದೆ. ಹೀಗಾಗಿ ನಾನು ಕೈಯಿಂದ ಈ ಪಿಂಡವನ್ನು ಸಾಂಕೇತಿಕವಾಗಿ ನೀಡುತ್ತಿರುವೆ. ನನ್ನನ್ನು ಕ್ಷಮಿಸು!

ಮಾತೃ ಋಣದಿಂದ ಮೋಚನೆಗೊಳಿಸು. ಅಮ್ಮಾ! ದೇವರ ಸ್ಮರಣೆಯಿಂದ ನನ್ನ ಮಾನವ ಜನ್ಮ ಸಾರ್ಥಕವೆನಿಸು.

ಯಾವತ್ಪುತ್ರೋ ಗಯಾ೦ ಗತ್ವಾ
ಶ್ರಾದ್ಧ೦ ಕುರ್ಯಾತ್ ವಿಧಾನತಃ ।
ತಸ್ಯಾ ನಿಷ್ಕ್ರಮಣಾರ್ಥಾಯ
ಮಾತೃ ಪಿಂಡಂ ದದಾಮ್ಯಹಮ್ ।। ೧೬ ।।

ತಾಯಿಯಾದ ನಿನ್ನ ಮರಣದ ನಂತರ ಮಗನು " ಮಾತೃ ಗಯಾ " ಕ್ಕೆ ಹೋಗಿ ವಿಧಿ ವಿಧಾನ ಪೂರ್ವಕವಾಗಿ ಶ್ರಾದ್ಧ ಮಾಡುತ್ತಾನೆ ಎಂದು ಭಾರೀ ಆಸೆ ಹೊತ್ತುಕೊಂಡಿದ್ದಿ. ನಾನು ವಿಳಂಬವಾಗಿ ಈಗ ಅದನ್ನು ಪೂರಸುತ್ತಿರುವೆ.

ಅಮ್ಮಾ! ದೇವರ ಸ್ಮರಣೆಯಿಂದ ನನ್ನ ಮಾನವ ಜನ್ಮ ಸಾರ್ಥಕವೆನಿಸು. ಹತ್ತಾರು ಅಪರಾಧಗಳು ಅಳಿಸಲೆಂದು 16 ಪಿಂಡಗಳನ್ನು ನಾ ನೀಡಿರುವೆ!!

ಇಂಥಾ ಶ್ರೇಷ್ಠ ಸ್ಥಾನದಲ್ಲಿರುವ - ನಮಗಾಗಿ ಅನೇಕ ಕಷ್ಟಗಳನ್ನು ಎದುರಿಸಿ ನನ್ನನ್ನು ಉತ್ತಮ ಸ್ಥಾನದಲ್ಲಿ ನಿಲ್ಲುವಂತೆ ಮಾಡಿ ಸಮಾಜ ಮೆಚ್ಚುವಂಥಾ ವ್ಯಕ್ತಿಯನ್ನಾಗಿ ಮಾಡಿದ ತಾಯಿಗೆ ಭಕ್ತಿ ಶ್ರದ್ಧೆಗಳಿಂದ ಪಿಂಡ ಪ್ರದಾನ ಪೂರ್ವಕ ಶ್ರಾದ್ಧ ಕರ್ಮ ಮಾಡಿ ತಾಯಿಯ ಆಶೀರ್ವಾದಕ್ಕೆ ಪಾತ್ರರಾಗೋಣ...
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
*******




No comments:

Post a Comment