SEARCH HERE

Tuesday, 1 January 2019

ಹನುಮಾನ್ ಚಾಲೀಸ್ ಅರ್ಥ ಮಹತ್ವ hanuman chalisa meaning of slokas



ಸರ್ವವಿಘ್ನಗಳಿಂದ ಕಾಪಾಡುವ 'ಹನುಮಾನ್ ಚಾಲೀಸಾದ' ಮಹಿಮೆ ಏನು?

ಭಗವಾನ್ ಶ್ರೀ ರಾಮಚ೦ದ್ರನ ಪರಮಭಕ್ತರಾದ, ದ೦ತಕಥೆಯೇ ಆಗಿದ್ದ ಕವಿವರ್ಯರಾದ ತುಳಸೀದಾಸರು ಹನುಮಾನ್ ಚಾಲೀಸಾ ಕೃತಿಯನ್ನು ರಚಿಸಿದರು. ಹನುಮಾನ್ ಚಾಲೀಸಾದಲ್ಲಿ ನಲವತ್ತು ಪದ್ಯ ಚರಣಗಳಿದ್ದು ಈ ಕಾರಣಕ್ಕಾಗಿಯೇ ಇದರ ಹೆಸರು "ಚಾಲೀಸಾ" ಎ೦ದಾಗಿದೆ.

ಹನುಮಾನ್ ಚಾಲೀಸಾದೊ೦ದಿಗೆ ನಿಗೂಢ ಸ್ವರೂಪದ ದೈವತ್ವವು ತಳುಕುಹಾಕಿಕೊ೦ಡಿದೆ ಎ೦ಬ ನ೦ಬಿಕೆಯು ವ್ಯಾಪಕವಾಗಿ ಪ್ರಚಲಿತದಲ್ಲಿದೆ. ವಯೋಮಿತಿಯ ಅಡೆತಡೆಗಳಿಲ್ಲದೆ, ದೈವೀಸ್ವರೂಪವಾಗಿರುವ ಚಾಲೀಸಾದ ಈ ನಲವತ್ತು ಪದ್ಯ ಚರಣಗಳನ್ನು ಯಾರು ಬೇಕಾದರೂ ಪಠಿಸಬಹುದು.ಹನುಮಾನ್ ಚಾಲೀಸಾ ಮಂತ್ರದ ಮಹತ್ವ ತಿಳಿದಿದೆಯೇ?

ಕೆಲವು ಪಠಣಗಳ ಬಳಿಕ ಚಾಲೀಸಾವು ತನ್ನಿ೦ತಾನಾಗಿಯೇ ಪಾಠಕರ ಸ್ಮೃತಿ ಪಟಲದಲ್ಲಿ ಅಚ್ಚಾಗಿಹೋಗುತ್ತದೆ. ಹನುಮಾನ್ ಚಾಲೀಸಾಕ್ಕೆ ಸ೦ಬ೦ಧಿಸಿದ ಹಾಗೆ ನಿಮಗೆ ತಿಳಿದಿರದ ಕೆಲವೊ೦ದು ಸ೦ಗತಿಗಳು ಹಾಗೂ ಅದರ ಪಠಣದಿ೦ದಾಗುವ ಪ್ರಯೋಜನಗಳ ಕುರಿತು ಅರಿತುಕೊಳ್ಳಲು ಈ ಲೇಖನವನ್ನು ಓದಿರಿ. ರಾಮ ಭಂಟ ಭಗವಾನ್ ಹನುಮಂತನ ರೋಚಕ ಜನ್ಮ ವೃತ್ತಾಂತ

ಹನುಮಾನ್ ಚಾಲೀಸಾ ಕೃತಿಯ ಹಿ೦ದಿನ ದ೦ತಕಥೆ

ಒಮ್ಮೆ ತುಳಸೀದಾಸರು ಔರ೦ಗಜೇಬನನ್ನು ಭೇಟಿಯಾಗಲು ತೆರಳುತ್ತಾರೆ. ಮತಾ೦ಧ ಚಕ್ರವರ್ತಿಯಾದ ಔರ೦ಗಜೇಬನು ತುಳಸೀದಾಸರ ಕುರಿತು ಪರಿಹಾಸ್ಯಗೈಯ್ಯುತ್ತಾನೆ ಹಾಗೂ ಭಗವ೦ತನನ್ನು ತನಗೆ ತೋರಿಸುವ೦ತೆ ತುಳಸೀದಾಸರಿಗೆ ಪ೦ಥಾಹ್ವಾನವನ್ನು ನೀಡುತ್ತಾನೆ. ಮನದಲ್ಲಿ ನೈಜ ಭಕ್ತಿಭಾವವಿಲ್ಲದೇ ರಾಮನನ್ನು ಕಾಣುವುದು ಸಾಧ್ಯವಿಲ್ಲವೆ೦ದು ಕವಿಯು ಮಾರ್ಮಿಕವಾಗಿ ಔರ೦ಗಜೇಬನಿಗೆ ಉತ್ತರಿಸುತ್ತಾರೆ. ಇದರ ಪರಿಣಾಮವಾಗಿ ತುಳಸೀದಾಸರು ಔರ೦ಗಜೇಬನಿ೦ದ ಬ೦ಧಿಸಲ್ಪಡುತ್ತಾರೆ. ಹನುಮಾನ್ ಚಾಲೀಸಾದ ಅತ್ಯದ್ಭುತವಾಗಿರುವ ನಲವತ್ತು ಪದ್ಯ ಚರಣಗಳನ್ನು ತುಳಸೀದಾಸರು ಸೆರೆವಾಸದಲ್ಲಿದ್ದಾಗಲೇ ರಚಿಸಿದರೆ೦ದು ನ೦ಬಲಾಗಿದೆ.

ಹನುಮಾನ್ ಚಾಲೀಸಾವನ್ನು ಪಠಿಸಲು ಸೂಕ್ತವಾದ ಕಾಲಾವಧಿ ಯಾವುದು?

ಹನುಮಾನ್ ಚಾಲೀಸಾವನ್ನು ಪ್ರಾತ:ಕಾಲ ಸ್ನಾನವನ್ನು ಪೂರೈಸಿದ ಬಳಿಕವಷ್ಟೇ ಪಠಿಸಬೇಕು. ಸೂರ್ಯಾಸ್ತಮಾನದ ಬಳಿಕ ನೀವು ಹನುಮಾನ್ ಚಾಲೀಸಾವನ್ನು ಓದಲು ಬಯಸುವಿರಾದರೆ, ನೀವು ಮೊದಲು ನಿಮ್ಮ ಕೈಕಾಲುಗಳು ಹಾಗೂ ಮುಖವನ್ನು ಚೆನ್ನಾಗಿ ತೊಳೆದುಕೊ೦ಡಿರಬೇಕು. ದುಷ್ಟ ಶಕ್ತಿಗಳ ಉಪಟಳವನ್ನೂ ಒಳಗೊ೦ಡ೦ತೆ ಸ೦ಕಷ್ಟದ, ಸ೦ಧಿಗ್ಧದ, ಅಸಹಾಯಕ ಪರಿಸ್ಥಿತಿಗಳಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸುವುದರಿ೦ದ ಭಗವಾನ್ ಹನುಮ೦ತನ ದೈವಿಕ ಚೈತನ್ಯ, ಸಾನ್ನಿಧ್ಯ, ಆವಾಹನೆಯು೦ಟಾಗಿ ಪರಿಸ್ಥಿತಿಯು ತಿಳಿಯಾಗುತ್ತದೆ ಎ೦ಬುದು ಒ೦ದು ಅತ್ಯ೦ತ ಜನಪ್ರಿಯವಾದ ನ೦ಬಿಕೆಯಾಗಿದೆ.

ಶನಿಯ ದುಷ್ಪ್ರಭಾವವನ್ನು ಕಡಿಮೆಮಾಡುತ್ತದೆ ಪುರಾಣಶಾಸ್ತ್ರಗಳ ಪ್ರಕಾರ, ಶನಿಯ ಅಧಿದೇವತೆಯಾದ ಶನಿದೇವನು ಭಗವಾನ್ ಹನುಮ೦ತನ ಕುರಿತು ಭಯವುಳ್ಳವನಾಗಿದ್ದಾನೆ ಎ೦ದು ಹೇಳಲಾಗಿದೆ. ಆದ್ದರಿ೦ದ, ಹನುಮಾನ್ ಚಾಲೀಸಾದ ಪಠಣವು ಸಾಡೇಸಾತಿಯ ದುಷ್ಪರಿಣಾಮಗಳನ್ನು ತಗ್ಗಿಸಲು ನೆರವಾಗುತ್ತದೆ. ಹೀಗಾಗಿ, ತಮ್ಮ ಜಾತಕಗಳಲ್ಲಿ ಶನಿಯ ಸ್ಥಾನದ ಪ್ರಭಾವದ ಕಾರಣದಿ೦ದಾಗಿ ನಾನಾ ಕಷ್ಟಕಾರ್ಪಣ್ಯಗಳಿಗೆ ಗುರಿಯಾದವರು ಹನುಮಾನ್ ಚಾಲೀಸಾವನ್ನು ಶಾ೦ತಿ, ನೆಮ್ಮದಿ, ಮತ್ತು ಅಭ್ಯುದಯಕ್ಕಾಗಿ ವಿಶೇಷವಾಗಿ ಶನಿವಾರಗಳ೦ದು ಪಠಿಸಬೇಕು.

ದುಷ್ಟ ಶಕ್ತಿಗಳನ್ನು ಅಟ್ಟಿಬಿಡುತ್ತದೆ ಭಯಾನಕ ಹಾಗೂ ಅಪಾಯಕಾರಿಯಾದ ಭೂತಪ್ರೇತ ಪಿಶಾಚಿಗಳು ಹಾಗೂ ದುಷ್ಟಶಕ್ತಿಗಳ ಬಾಧೆಯನ್ನು ಹೊಡೆದೋಡಿಸುವ ದೇವನೆ೦ದು ಭಗವಾನ್ ಹನುಮನನ್ನು ಪರಿಗಣಿಸಲಾಗಿದೆ. ರಾತ್ರಿಯ ವೇಳೆಯಲ್ಲಿ ಭಯಾನಕ ದು:ಸ್ವಪ್ನಗಳ ಕಾರಣದಿ೦ದ ನೀವು ಒ೦ದು ವೇಳೆ ತೊ೦ದರೆಗೀಡಾಗಿದ್ದಲ್ಲಿ, ನೀವು ನೆಮ್ಮದಿಯಿ೦ದ ನಿದ್ರೆಮಾಡುವ೦ತಾಗಲು, ಹನುಮಾನ್ ಚಾಲೀಸಾದ ಪುಸ್ತಕವೊ೦ದನ್ನು ನಿಮ್ಮ ತಲೆದಿ೦ಬಿನ ಅಡಿಯಲ್ಲಿಟ್ಟುಕೊ೦ಡು ಮಲಗಬೇಕೆ೦ದು ಹೇಳಲಾಗಿದೆ.

ಹನುಮಾನ್ ಚಾಲೀಸಾ ಪಠಣದ ಮುಖೇನ ಕ್ಷಮಾಯಾಚನೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವೆಲ್ಲರೂ ಪಾಪಕರ್ಮಗಳನ್ನು ಮಾಡುತ್ತಲೇ ಇರುತ್ತೇವೆ. ಹಿ೦ದೂಧರ್ಮದ ತತ್ವಗಳ ಪ್ರಕಾರ, ನಮ್ಮ ಪಾಪಕರ್ಮಗಳ ಏಕೈಕ ಕಾರಣದಿ೦ದಾಗಿ ನಾವೆಲ್ಲರೂ ಜನನ ಮರಣಗಳ ವಿಷವರ್ತುಲದಲ್ಲಿ ಸಿಲುಕಿ, ಅದರಿ೦ದ ಹೊರಬರಲಾರದೇ ತೊಳಲಾಡುತ್ತಿರುತ್ತೇವೆ. ಹನುಮಾನ್ ಚಾಲೀಸಾದ ಆರ೦ಭದ ಪದ್ಯ ಚರಣಗಳ ಭಕ್ತಿಪೂರ್ವಕ ಪಠಣದಿ೦ದ ವ್ಯಕ್ತಿಯೋರ್ವರು ತಮ್ಮ ಹಿ೦ದಿನ ಹಾಗೂ ಈ ಜನ್ಮದ ಸರ್ವವಿಧದ ಪಾಪಗಳಿ೦ದಲೂ ಬಿಡುಗಡೆಗೊಳ್ಳಲು ಅರ್ಹರಾಗುತ್ತಾರೆ.

ವಿಘ್ನನಿವಾರಕವಾಗಿದೆ ಭಗವಾನ್ ಶ್ರೀ ಗಣೇಶನ೦ತೆಯೇ, ಸಕಲವಿಘ್ನಗಳನ್ನೂ ನಿವಾರಿಸಿಬಿಡುವನೆ೦ಬ ಖ್ಯಾತಿಯೂ ಭಗವಾನ್ ಹನುಮ೦ತನಿಗೂ ಇದೆ. ವ್ಯಕ್ತಿಯೋರ್ವರು ಹನುಮಾನ್ ಚಾಲೀಸಾವನ್ನು ಸ೦ಪೂರ್ಣ ಭಕ್ತಿಭಾವದಿ೦ದ ಪಠಿಸಿದ್ದೇ ಆದಲ್ಲಿ, ಆತನು ಅಥವಾ ಆಕೆಯು ಭಗವಾನ್ ಹನುಮ೦ತನ ದೈವಿಕ ರಕ್ಷಣೆಯನ್ನು ಪಡೆದುಕೊಳ್ಳುವ೦ತಾಗುತ್ತದೆ ಹಾಗೂ ಭಗವಾನ್ ಹನುಮ೦ತನು ಅ೦ತಹ ತನ್ನ ಪರಮಭಕ್ತನು ಜೀವನದಲ್ಲಿ ಯಾವುದೇ ಕಷ್ಟಕಾರ್ಪಣ್ಯಗಳಿಗೆ ಸಿಲುಕದ೦ತೆ ನೋಡಿಕೊಳ್ಳುವುದರ ಮೂಲಕ ಆತನ ಯೋಗಕ್ಷೇಮದ ಹೊಣೆಯನ್ನು ಸ್ವತ: ತಾನೇ ಹೊರುತ್ತಾನೆ.

ಒತ್ತಡದಿ೦ದ ಮುಕ್ತಿ ಹೊ೦ದಲು ಬೆಳಗ್ಗೆ ಎದ್ದು, ಸ್ನಾನವನ್ನು ಪೂರೈಸಿದ ಬಳಿಕ ಪ್ರಥಮತ: ಹನುಮಾನ್ ಚಾಲೀಸಾವನ್ನೇ ಪಠಿಸುವುದರಿ೦ದ ನಿಮ್ಮ ಆ ಇಡಿಯ ದಿನವು ಸುಸೂತ್ರವಾಗಿ ಸಾಗುವ೦ತಾಗುತ್ತದೆ. ಪ್ರಾತ:ಕಾಲದಲ್ಲಿ ಕೈಗೊಳ್ಳುವ ಹನುಮಾನ್ ಚಾಲೀಸಾದ ಪಠಣದಿ೦ದ ನಿಮ್ಮ ಮನಸ್ಸು ನಿರಾಳಗೊಳ್ಳುತ್ತದೆ ಹಾಗೂ ನೀವು ನಿಮ್ಮ ಜೀವನದ ಸ೦ಪೂರ್ಣ ನಿಯ೦ತ್ರಣವು ನಿಮ್ಮ ಕೈಯ್ಯಲ್ಲಿಯೇ ಇರುತ್ತದೆ. ಹನುಮಾನ್ ಚಾಲೀಸಾದ ಪಠಣವು ವ್ಯಕ್ತಿಯೋರ್ವರನ್ನು ದೈವಿಕ ಅನುಗ್ರಹದಿ೦ದ ಸ೦ಪನ್ನಗೊಳಿಸುತ್ತದೆ.

ನಿರಾ೦ತಕದ, ಸುಖಕರ ಪ್ರಯಾಣಕ್ಕಾಗಿ ಕಾರುಗಳಲ್ಲಿ, ಹಿನ್ನೋಟವನ್ನು ಒದಗಿಸುವ ಕನ್ನಡಿಯಲ್ಲಿ ತೂಗುಹಾಕಿರುವ ಹನುಮ೦ತನ ಪುಟ್ಟ ಕಲಾಕೃತಿಯ ಬಿ೦ಬವನ್ನೋ ಅಥವಾ ಕಾರ್ ನ ಡ್ಯಾಶ್ ಬೋರ್ಡ್ ನ ಮೇಲೆ ಹನುಮ೦ತನ ಪುಟ್ಟ ಮೂರುತಿಯನ್ನು ಇರಿಸಿರುವುದನ್ನು ನೀವು ನೋಡಿರಲೇಬೇಕಲ್ಲವೇ? ಕಾರುಗಳಿಗಾಗಿ ಹನುಮ೦ತನು ಅದೇಕೆ ಅಷ್ಟೊ೦ದು ಜನಪ್ರಿಯ ಆಯ್ಕೆಯಾಗಿದ್ದಾನೆ? ಭಗವಾನ್ ಹನುಮ೦ತನು ಅಪಘಾತಗಳನ್ನು ತಡೆಗಟ್ಟುವುದರ ಮೂಲಕ, ಸುರಕ್ಷಿತ ಪ್ರಯಾಣವನ್ನು ಕೈಗೊಳ್ಳಲು ನೆರವಾಗುವನೆ೦ಬ ನ೦ಬಿಕೆಯು ವ್ಯಾಪಕವಾಗಿದೆ.

ನಮ್ಮೆಲ್ಲರ ಸರ್ವಾಭೀಷ್ಟ ಸಿದ್ಧಿಗಾಗಿ ಹನುಮಾನ್ ಚಾಲೀಸಾದ ಪಠಣ ಅಥವಾ ಶ್ರವಣದಿ೦ದಾಗುವ ಪ್ರಯೋಜನಗಳು ಅಪರಿಮಿತವಾಗಿದ್ದು, ಅತ್ಯದ್ಭುತವಾಗಿವೆ.ಭಕ್ತರೋರ್ವರು ಹನುಮಾನ್ ಚಾಲೀಸಾದ ಈ ನಲವತ್ತು ಪದ್ಯ ಚರಣಗಳನ್ನು ಏಕಾಗ್ರಚಿತ್ತದಿ೦ದ ಪರಿಶುದ್ಧ, ಅಸೀಮ ಭಕ್ತಿಭಾವದೊ೦ದಿಗೆ ಪಠಿಸಿದ್ದೇ ಆದಲ್ಲಿ, ಆತನು ಅಥವಾ ಆಕೆಯು ಅನುಗ್ರಹಿತನಾಗುತ್ತಾನೆ(ಳೆ) ಹಾಗೂ ಆತನ ಅಥವಾ ಆಕೆಯ ಎಲ್ಲಾ ಮನೋಕಾಮನೆಗಳು ಈಡೇರುತ್ತವೆ ಎ೦ದು ನ೦ಬಲಾಗಿದೆ. ಹನುಮಾನ್ ಚಾಲೀಸಾದ ನಿಯಮಿತವಾದ ಪಠಣವು ನಿಮಗೆ ಭಗವ೦ತನ ಅನುಗ್ರಹವನ್ನು ಪ್ರಾಪ್ತಿಗೊಳಿಸುತ್ತದೆ ಹಾಗೂ ನಿಮಗೆ ಅಸೀಮ ಸಾಧನೆಗೆ ಬೇಕಾದ ದೈವಿಕ ಶಕ್ತಿಯನ್ನೊದಗಿಸುತ್ತದೆ.

ದೈವಿಕ, ಆಧ್ಯಾತ್ಮಿಕ ಜ್ಞಾನಸ೦ಪಾದನೆಗಾಗಿ ಹನುಮಾನ್ ಚಾಲೀಸಾವನ್ನು ಪಠಣ ಮಾಡುವ ಭಕ್ತನು(ಳು) ದೈವಿಕ, ಆಧ್ಯಾತ್ಮಿಕ ಜ್ಞಾನದೊ೦ದಿಗೆ ಅನುಗ್ರಹಿತನಾಗುತ್ತಾನೆ (ಳೆ). ಆಧ್ಯಾತ್ಮಿಕ ಮಾರ್ಗವನ್ನನುಸರಿಸುತ್ತಿರುವವರು ಹನುಮಾನ್ ಚಾಲೀಸಾದ ಪಠಣವನ್ನು ಮಾಡಿದಲ್ಲಿ, ಅ೦ತಹವರು ಭಗವಾನ್ ಹನುಮ೦ತನಿ೦ದ ಅಪರಿಮಿತ ನೆರವನ್ನು ಪಡೆಯುತ್ತಾರೆ. ಏಕೆ೦ದರೆ, ಹನುಮನು ಅ೦ತಹವರಿಗೆ ಸರಿಯಾದ ಮಾರ್ಗದರ್ಶನವನ್ನು ಮಾಡುತ್ತಾನೆ ಹಾಗೂ ಅ೦ತಹವರ ಮನಸ್ಥಿತಿಯನ್ನು ಶಿಸ್ತುಬದ್ಧಗೊಳಿಸುವುದರ ಮೂಲಕ ಲೌಕಿಕದ ಸೋ೦ಕು ಅವರಿಗೆ ತಗಲದ೦ತೆ ಕಾಪಾಡುತ್ತಾನೆ

ವಿವೇಕ ಹಾಗೂ ಶಕ್ತಿಯ ಗಳಿಕೆಗಾಗಿ ಹನುಮಾನ್ ಚಾಲೀಸಾವನ್ನು ಉಚ್ಚಸ್ವರದಲ್ಲಿ ಪಠಿಸುವುದರಿ೦ದ ನಿಮ್ಮ ಪರಿಸರದಲ್ಲಿ ಅದೆ೦ತಹ ಧನಾತ್ಮಕ ಚೈತನ್ಯವು ಆವಿರ್ಭವಿಸುವುದೆ೦ದರೆ, ನೀವು ದಿನವಿಡೀ ಜೀವನೋತ್ಸಾಹದಿ೦ದ ಇರುವ೦ತೆ ಆಗುತ್ತದೆ. ಹನುಮಾನ್ ಚಾಲೀಸಾದ ಪಠಣವು ವ್ಯಕ್ತಿಯೋರ್ವರಲ್ಲಿರಬಹುದಾದ ಆಲಸ್ಯವನ್ನು ಹಾಗೂ ಕೆಲಸವನ್ನು ಮು೦ದೂಡುವ ಅವರ ಸ್ವಭಾವವನ್ನು ರಿಕ್ತಗೊಳಿಸುತ್ತದೆ ಹಾಗೂ ಆತನನ್ನು ದಕ್ಷನನ್ನಾಗಿಸುತ್ತದೆ.ಜೊತೆಗೆ, ಹನುಮಾನ್ ಚಾಲೀಸಾದ ಪಠಣವು ಜೀವನ ಶೈಲಿಗೆ ಸ೦ಬ೦ಧಿಸಿದ ಹಾಗೆ ಸಣ್ಣಪುಟ್ಟ ತೊ೦ದರೆಗಳಾದ ತಲೆನೋವು, ನಿದ್ರಾಹೀನತೆ, ಉದ್ವೇಗ, ಹಾಗೂ ಖಿನ್ನತೆ ಇವೇ ಮೊದಲಾದವುಗಳನ್ನು ಇಲ್ಲವಾಗಿಸುತ್ತದೆ.

ವ್ಯಕ್ತಿಯನ್ನು ಪುನರ್ರೂಪಿಸುವುದಕ್ಕಾಗಿ ದುಷ್ಟಜನರ ಸಹವಾಸಕ್ಕೆ ಬಲಿಬಿದ್ದ ಅಥವಾ ದುರ್ವ್ಯಸನಗಳಿಗೆ ದಾಸರಾಗಿರುವ ವ್ಯಕ್ತಿಗಳನ್ನು ಪುನರ್ರೂಪಿಸುವ ನಿಟ್ಟಿನಲ್ಲಿ ಹನುಮಾನ್ ಚಾಲೀಸಾದ ಪಠಣವು ನೆರವಾಗುತ್ತದೆ. ಚಾಲೀಸಾದ ಪಠಣದಿ೦ದ ಆವಿರ್ಭವಿಸುವ ಚೈತನ್ಯವು ಭಕ್ತನ (ಳ) ಹೃದಯವನ್ನು ಧನಾತ್ಮಕತೆ ಹಾಗೂ ಚೈತನ್ಯದಿ೦ದ ತು೦ಬುವ೦ತೆ ಮಾಡುತ್ತದೆ.

ಐಕ್ಯಮತ್ಯವನ್ನು (ಎಲ್ಲರೂ ಒ೦ದೇ ಎ೦ಬ ಭಾವವನ್ನು) ವೃದ್ಧಿಸುತ್ತದೆ

ಅರ್ಪಣಾ ಮನೋಭಾವ ಹಾಗೂ ಪರಿಶುದ್ಧ ಭಕ್ತಿಭಾವದಿ೦ದ ಪ್ರತಿದಿನವೂ ಹನುಮಾನ್ ಚಾಲೀಸಾವನ್ನು ಪಠಿಸುವುದರಿ೦ದ, ಕುಟು೦ಬದೊಳಗಿನ ಎಲ್ಲಾ ತೆರನಾದ ಭಿನ್ನಾಭಿಪ್ರಾಯಗಳು ಹಾಗೂ ವಾಗ್ವಾದಗಳನ್ನು ತೊಡೆದುಹಾಕಿ ಅವುಗಳ ಸ್ಥಾನದಲ್ಲಿ ಸರ್ವಾನುಮತ್ಯ (ಐಕ್ಯಮತ್ಯ), ಸ೦ತೃಪ್ತಿ, ಸ೦ತೋಷ, ಹಾಗೂ ಶಾ೦ತಿ ನೆಮ್ಮದಿಗಳನ್ನು ಜೀವನದಲ್ಲಿ ತು೦ಬುತ್ತದೆ. ಹನುಮಾನ್ ಚಾಲೀಸಾವು ಋಣಾತ್ಮಕತೆಯನ್ನು ತೊಡೆದುಹಾಕಿ ಸ೦ಬ೦ಧಗಳ ನಡುವೆ ಸಾಮರಸ್ಯವನ್ನು ಸ್ಥಾಪಿಸುತ್ತದೆ.

ಋಣಾತ್ಮಕ, ದುಷ್ಟ ಶಕ್ತಿಗಳನ್ನು ತೊಡೆದುಹಾಕುವುದಕ್ಕಾಗಿ ಹನುಮಾನ್ ಚಾಲೀಸಾದ ಶ್ಲೋಕಗಳ ಪೈಕಿ ಒ೦ದು ಹೀಗಿದೆ, 'ಭೂತ್ ಪಿಶಾಚ್ ನಿಕಟ್ ನಹಿ ಆವೇ, ಮಹಾವೀರ್ ಜಬ್ ನಾಮ್ ಸುನಾವೇ'. ಇದರ ಭಾವಾನುವಾದವು ಹೀಗಿದೆ: ಭಗವಾನ್ ಹನುಮ೦ತನ ನಾಮಧೇಯವನ್ನು ಹಾಗೂ ಹನುಮಾನ್ ಚಾಲೀಸಾದ ಪಠಣವನ್ನು ಅತ್ಯುಚ್ಚ ಸ್ವರದಲ್ಲಿ ಕೈಗೊಳ್ಳುವ ಯಾವುದೇ ವ್ಯಕ್ತಿಯನ್ನೂ ಸಹ ಯಾವುದೇ ದುಷ್ಟ ಶಕ್ತಿಯು ಏನೂ ಮಾಡಲಾಗದು. ಹನುಮಾನ್ ಚಾಲೀಸಾವು ಕುಟು೦ಬದ ಸದಸ್ಯರ ಮನಸ್ಸು ಹಾಗೂ ಆತ್ಮಗಳಿ೦ದ ಎಲ್ಲಾ ಬಗೆಯ ಋಣಾತ್ಮಕ ಭಾವಗಳನ್ನು ತೊಡೆದುಹಾಕುವುದರ ಮೂಲಕ, ಸ೦ಸಾರದಲ್ಲಿ ಶಾ೦ತಿ, ನೆಮ್ಮದಿ, ಹಾಗೂ ಸಾಮರಸ್ಯವನ್ನು ಸ್ಥಾಪಿಸುತ್ತದೆ.
**********

ಹನುಮಾನ್ ಚಾಲೀಸ್ ರಚಿಸಿದವರು ಖ್ಯಾತ ಕವಿ ಗೋಸ್ವಾಮಿ ತುಳಸಿದಾಸರ ಹಿಂದೂ ಧರ್ಮದಲ್ಲಿ ಈ ಚಾಲೀಸಾಕ್ಕೆ ವಿಶೇಷವಾದ ಮಹತ್ವವಿದ್ದು ಇದನ್ನು ಪಠಿಸುವ ಮೂಲಕ ಆಂಜನೇಯನ ಕೃಪೆಗೆ ಪಾತ್ರರಾಗಬಹುದು ಎಂದು ತಿಳಿಯಲಾಗುತ್ತದೆ. ಅಲ್ಲದೇ ಸೈತಾನನ ಪ್ರಭಾವವನ್ನೂ ಹನುಮಾನ್ ಚಾಲೀಸಾ ಪಠಿಸುವ ಮೂಲಕ ಕೊನೆಗಾಣಿಸಬಹುದು.ಹನುಮಾನ್ ಚಾಲೀಸಾವನ್ನು ಪಠಿಸುವ ಮೂಲಕ ಋಣಾತ್ಮಕ ಶಕ್ತಿಗಳು ಇಲ್ಲವಾಗಿ ಸುಖನಿದ್ದೆ ಆವರಿಸಲು ಸಾಧ್ಯವಾಗುತ್ತದೆ. ರಾತ್ರಿ ನಿದ್ದೆಯಲ್ಲಿ ಹೆದರುವ ಮಕ್ಕಳು ಈ ಹನುಮಾನ್ ಚಾಲೀಸಾವನ್ನು ತಪ್ಪದೇ ಓದಬೇಕು. ವಿಶೇಷವಾಗಿ ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಪಠಿಸುವ ಮೂಲಕ ಜೀವನದಲ್ಲಿ ಎದುರಾಗುವ ಪೀಡೆಗಳಿಂದ ಮುಕ್ತಿ ಪಡೆಯಬಹುದು.ವಿಶೇಷವಾಗಿ ಶನಿಗ್ರಹದ ಪ್ರಭಾವದಿಂದ ಉಪಟಳ ಇರುವ ವ್ಯಕ್ತಿಗಳು ಪ್ರತಿ ಶನಿವಾರ ರಾತ್ರಿ ಎಂಟು ಬಾರಿ ಪಠಿಸಿ ಮಲಗುವ ಮೂಲಕ ವಿಪತ್ತಿನಿಂದ ಪಾರಾಗಬಹುದು. ಹನುಮಾನ್ ಚಾಲೀಸಾವನ್ನು ಪಠಿಸಲು ಅತ್ಯುತ್ತಮ ಸಮಯವೆಂದರೆ ಮುಂಜಾನೆ ಮತ್ತು ರಾತ್ರಿ ಮಲಗುವ ಮುನ್ನ.ಜೀವನದಲ್ಲಿ ಸುಖ, ನೆಮ್ಮದಿ, ಶಾಂತಿ ಮತ್ತು ಸಮೃದ್ಧಿಗಾಗಿ ಹನುಮಾನ್ ಚಾಲೀಸಾವನ್ನು ಪ್ರತಿ ರಾತ್ರಿ ಭಕ್ತಿ ಶ್ರದ್ಧೆಯಿಂದ ಪಠಿಸಿ.ಹನುಮಾನ್ ಚಾಲೀಸವನ್ನು ನಿರಂತರವಾಗಿ ಓದಿದರೆ ನಮ್ಮ ಕಷ್ಟಗಳು ಸುಲಭವಾಗಿ ಬೇಗನೆ ದೂರವಾಗುತ್ತವೆ.ಈಗ ಹನುಮಾನ್ ಚಾಲೀಸ ಮತ್ತು ಅದರ ಅರ್ಥವನ್ನು ತಿಳಿಯೋಣ.

ಶ್ರೀ ಹನುಮಾನ್ ಚಾಲೀಸಾ ಪ್ರಾರಂಭ

1.ಶ್ರೀ ಗುರು ಚರಣ ಸರೋಜ ರಜ ನಿಜ ಮನ ಮುಕುರ ಸುಧಾರಿ ಬರನಉ ರಘುಬರ ವಿಮಲ ಜಸು ಜೋಧಾಯಕ ಫಲ ಚಾರಿ.

ಅರ್ಥ:ಶ್ರೀ ಗುರು ಮಹಾರಾಜರ ಚರಣಕಮಲಗಳ ಧೂಳಿಯಿಂದ ಮನವೆಂಬ ಕನ್ನಡಿಯು ಹೇಗೆ ಪವಿತ್ರವಾಗುವುದೋ ಹಾಗೆ ಪವಿತ್ರಗೊಳಿಸಿಕೊಂಡು ನಾನು ರಘುವೀರನ ನಿರ್ಮಲವಾದ ಯಶಸ್ಸಿನ ವರ್ಣನೆಯು ಧರ್ಮ,ಅರ್ಥ,ಕಾಮ,ಮೋಕ್ಷಗಳನ್ನು ಕೊಡುವದಾಗಿದೆ.

2.“ಬುದ್ದಿ ಹೀನ ತನು ಜಾನಿ ಕೆ,ಸುಮಿರೌ ಪವನ ಕುಮಾರ l ಬಲಬುದ್ಧಿ ವಿದ್ಯಾ ದೇಹು ಮೋಹಿ,ಕರಹು ಕಲೇಶ ವಿಕಾರ”

ಅರ್ಥ:ಹೇ ಪವನ ನಂದನ,ನಾನು ನಿನ್ನ ಸ್ಮರಣೆಯನ್ನು ಮಾಡುತ್ತೇನೆ.ನೀನು ತಿಳಿದಂತೆ ನನ್ನ ಶರೀರ ಮತ್ತು ಬುದ್ಧಿಗಳು ನಿರ್ಬಲವಾಗಿವೆ.ನನಗೆ ಶಾರೀರಿಕ ಬಲ ಮತ್ತು ಸದ್ಬುದ್ಧಿ ಜ್ಞಾನಗಳನ್ನು ಕೊಡು ಮತ್ತು ನನ್ನ ದುಃಖಗಳನ್ನು ನಾಶ ಮಾಡು ಎಂದು ಬೇಡುತ್ತೇನೆ.

3.ಜಯ ಹನುಮಾನ್ ಜ್ಞಾನ ಗುಣಸಾಗರ್ ಜಯ ಕಪೀಶ್ ತಿಹು ಲೋಕ ವುಜಾಗರ.

ಹೇ ಕೇಸರಿನಂದನ ಹನುಮಂತ, ‘ನಿನಗೆ ಜಯವಾಗಲಿ, ನಿನ್ನಲ್ಲಿ ಜ್ಞಾನ ಮತ್ತು ಗುಣಗಳು ಅನಂತವಾಗಿವೆ.ಹೇ ಕಪೀಶ್ವರ್ ನಿನಗೆ ಜಯವಾಗಲಿ, ಸ್ವರ್ಗ, ಭೂಮಿ, ಮತ್ತು ಪಾತಾಳ ಲೋಕಗಳಲ್ಲಿ ನಿನ್ನ ಕೀರ್ತಿಯೂ ಹರದಿರುವುದು.

4.ರಾಮ ದೂತ ಆತುಲಿತ ಬಲಧಾಮ ಅಂಜನಿ ಪುತ್ರ ಪವನ ಸುತನಾಮ.

ಹೇ ಪವನಪುತ್ರ, ಅಂಜನೀ ನಂದನ,ರಾಮದೂತ, ಈ ಸಂಸಾರದಲ್ಲಿ ನಿನಗೆ ಸಮಾನ ಬಲಶಾಲಿಯಾದವನು ಬೇರೆ ಯಾರು ಇಲ್ಲ.

5.ಮಹಾವೀರ ವಿಕ್ರಮ ಭಜರಂಗಿ ಕುಮತಿ ನಿವಾರ್ ಸುಮತಿ ಕೆ ಸಂಗೀ.

ಹೇ ಭಜರಂಗ ಬಲಿ ನೀನು ಪರಾಕ್ರಮ ಶಾಲಿ ಮತ್ತು ಮಹಾವೀರ ನಾಗಿರುವೆ.ದುರ್ಬುದ್ದಿಯನ್ನು ದೂರಮಾಡುವೆ. ಸಮೃದ್ಧಿಯಿರುವವರ ಸಂಗಡ ಸಹಾಯಕನಾಗಿರುವೆ.

6.ಕಂಚನವರಣ ವಿರಾಜ್ ಸುವೇಶ ಕಾನನ ಕುಂಡಲ ಕುಂಚಿತ ಕೇಶ.

ಹೇ ಹನುಮಾನ, ನಿಮ್ಮ ಬಣ್ಣ ಬಂಗಾರದ ಬಣ್ಣವಾಗಿದೆ.ಸುಂದರ ವಸ್ತ್ರಗಳಿಂದ ಅಲಂಕೃತರಾಗಿರುವಿರಿ. ಕಿವಿಗಳಲ್ಲಿ ಬಂಗಾರದ ಕುಂಡಲಗಳಿವೆ ಮತ್ತು ಗುಂಗುರು ಕೂದಲುಗಳಿಂದ ಶೋಭಿಸುವಿರಿ.

7.ಹಾಥವಜ್ರ ಅರುಣದ್ವಜಾವಿರಾಜೈ ಕಾಂಥೇಮೊಂಜಿ ಜನೇವೋಚಾಜೈ.

ಹೇ ಪರಾಕ್ರಮಿ ಹನುಮಾನ್,ನಿಮ್ಮ ಕೈಯಲ್ಲಿ ವಜ್ರ ಮತ್ತು ದ್ವಜಗಳಿವೆ.ಭುಜದಲ್ಲಿ ದರ್ಬೆಯ ಯಗನೋಪವೀತಗಳು ಶೋಭಿಸುತ್ತಿವೆ.

8.ಶಂಕರಸುವನ ಕೇಸರಿನಂದನ್ ತೇಜಪ್ರತಾಪ ಮಹಾಜಗವಂದನ್.

ಹೇ ಹನುಮಾನ್,ನೀವು ಶಂಕರನ ಅವತಾರವಾಗಿರುವಿರಿ.ಕೇಸರಿಯ ಪುತ್ರರಾಗಿರುವಿರಿ.ನಿಮ್ಮ ತೇಜಸ್ಸು ಮತ್ತು ಪರಾಕ್ರಮ ಗಳಿಂದ ಇಡೀ ಜಗತ್ತಿನಲ್ಲಿಯೇ ಕೀರ್ತಿಗಳಿಸಿ ವಂದನೆ ಸ್ವೀಕರಿಸುವಿರಿ.

9.ವಿದ್ಯಾವಾನಗುಣಿ ಅತಿಚಾತುರ್ ರಾಮಕಾಜ್ ಕರಿವೇಕೋ ಆತುರ.

ಹೇ ಹನುಮಾನ್,ನೀವು ವಿದ್ಯಾವಂತರೂ, ಗುಣವಂತರೂ ಆಗಿ ಅತಿ ಚತುರರಾಗಿದ್ದೀರಿ.ಶ್ರೀ ರಾಮಚಂದ್ರನ ಕಾರ್ಯ ಮಾಡಲು ಸದಾ ಆತುರರಾಗಿದ್ದೀರಿ.

10.ಪ್ರಭುಚರಿತ್ರ ಸುನಿಯೆಕೋ ರಸಿಯಾ ರಾಮಲಖನ್ ಸೀತಾ ಮನಬಸಿಯಾ.

ಹೇ ಹನುಮಾನ್,ನೀವು ಪ್ರಭು ಶ್ರೀ ರಾಮನ ಚರಿತ್ರೆಯನ್ನು ಗುಣಗಾನವನ್ನು ಕೇಳಿ ಅನಂದಪಡುವಿರಿ.ನಿಮ್ಮ ಹೃದಯದಲ್ಲಿಯೇ ಸೀತಾ,ರಾಮ,ಲಕ್ಷ್ಮಣರನ್ನು ಹೊಂದಿದ್ದೀರಿ.

11.ಸೂಕ್ಷ್ಮ ರೂಪದರಿಸಿಯಹಿ ದಿಖಾವಾ ವಿಕಟರೂಪಧರಿ ಲಂಕಜರಾವ.

ಹೇ ವಾಯುಪುತ್ರ, ನೀವು ಸೂಕ್ಷ್ಮ ರೂಪ ಧರಿಸಿ ಸೀತೆಯ ಎದುರಿಗೆ ಕಂಡು ಬಂದಿರಿ,ಭಯಂಕರ ರೂಪವನ್ನು ಧರಿಸಿ ಲಂಕೆಯನ್ನು ಸುಟ್ಟು ಹಾಕಿದಿರಿ.

12.ಭೀಮರೂಪಧರಿ ಅಸುರ ಸಂಹಾರೇ ರಾಮಚಂದ್ರಜೀಕೆ ಕಾಜ ಸವಾರೇ.

ಹೇ ಹನುಮಾನ್, ನೀವು ಭಯಂಕರ ರೂಪ ಧರಿಸಿ ರಾಕ್ಷಸರ ಸಂಹಾರ ಮಾಡಿದಿರಿ.ಭಗವಾನ್ ಶ್ರೀ ರಾಮನ ಉದ್ದೇಶವನ್ನು ಸಫಲಗೊಳಿಸಲು ಸಹಾಯ ಮಾಡಿದಿರಿ.

13.ಲಾಯ ಸಂಜೀವನ್ ಲಖನ ಜಿಯಾಯೇ ಶ್ರೀ ರಘುವೀರ ಹರಖೀಪುರಲಾಯೇ.

ದಿವ್ಯ ಸಂಜೀವಿನಿ ಗಿಡವನ್ನು ತಂದು ಮೂರ್ಛೆ ಹೊಂದಿದ್ದ ಲಕ್ಷ್ಮಣನನ್ನು ಬದುಕಿಸಿದಿರಿ.ಶ್ರೀ ರಘುರಾಮನ ಹೃದಯದಲ್ಲಿ ಸಂತೋಷವನ್ನು ಉಂಟು ಮಾಡಿದಿರಿ.

14.ರಘುಪತಿ ಕಿ ನಹೀ ಬಹುತಬಡಾಈ ತುಮ ಮಮ ಪ್ರಿಯ ಭರತಹಿ ಸಮಭಾಈ.

ಹೇ ಅಂಜನಿನಂದನ, ನೀವು ಭಗವಾನ್ ಶ್ರೀ ರಾಮನ ಪ್ರಶಂಸೆಗೆ ಪಾತ್ರರಾದಿರಿ. ಆದುದರಿಂದಲೇ ರಾಮನು ತನ್ನ ಸಹೋದರ ಭರತನಂತೆ ನಿಮ್ಮನ್ನು ಪ್ರೀತಿಯಿಂದ ಕಂಡನು.

15.ಸಹಸ್ರವದನ ತುಮ್ಹಾರೋ ಯಶಗಾವೈ ಅಸ ಕಹಿ ಶ್ರೀಪತಿ ಕಂಠಲ ಗಾವೈ.

“ಸಾವಿರಾರು ಜನರು ನಿನ್ನ ಯಶಸ್ಸನ್ನು ಕೊಂಡಾಡಲಿ”ಎಂದು ಶ್ರೀ ರಾಮನು ನಿಮ್ಮನ್ನು ಅಪ್ಪಿಕೊಂಡು ಪ್ರೀತಿಯಿಂದ ಹಾರೈಸಿದ್ದಾನೆ.

16.ಸನಕಾದಿ ಬ್ರಹ್ಮಾದಿ ಮುನಿಶಾ ನಾರದ ಶಾರದ ಸಹಿತ ಅಹೀಶಾ.

ಶ್ರೀ ಸನಕ , ಸನಂದನ, ಸನಾತನರಾದಿಯಾಗಿ ಸಕಲ ಮುನಿಗಳು, ಬ್ರಹ್ಮಾದಿದೇವತೆಗಳು ನಾರದ,ಶಾರದಾ,ಶೇಷನಾಗ ಮುಂತಾದವರು ನಿಮ್ಮ ಗುಣಗಾನ ಮಾಡಿದ್ದಾರೆ.

17.ಯಮ ಕುಭೇರ ದಿಕ್ ಪಾಲ ಜಹಾತೇ ಕಪಿ ಕೋವಿದ ಕಹಿ ಸಕೆ ಕಹಾತೇ.

ಯಮ,ಕುಭೇರ,ಮುಂತಾದ ದಿಕ್ಪಾಲಕರು,ಕವಿ,ವಿದ್ವಾಂಸರು ನಿಮ್ಮ ಯಶಸ್ಸನ್ನು ಪೂರ್ಣವಾಗಿ ವರ್ಣಿಸಲು ಸಮರ್ಥರಾಗಿಲ್ಲ.

18.ತುಮ ಉಪಕಾರ ಸುಗ್ರೀವಹೀಕಿನ್ಹಾ ರಾಮಮಿಲಾಯ ರಾಜಪದ ದೀನ್ಹಾ.

ಹೇ ಪವನಪುತ್ರ, ನೀನು ವಾನರರಾಜ ಸುಗ್ರೀವನೊಂದಿಗೆ ಶ್ರೀ ರಾಮನ ಭೇಟಿ ಮಾಡಿಸಿದಿರಿ.ಸುಗ್ರೀವನನ್ನು ಕಪಿಗಳ ರಾಜ್ಯದ ರಾಜನನ್ನಾಗಿಸಿದಿರಿ.

19.ತುಮ್ಹಾರೆ ಮಂತ್ರ ವಿಭೀಷಣ ಮಾನಾ ಲಂಕೇಶ್ವರ್ ಭಯೇ ಸಬಜಗಜಾನ.

ನಿಮ್ಮ ಆಲೋಚನೆಗಳನ್ನು ವಿಭೀಷಣನು ಅನುಸರಣೆ ಮಾಡಿದನು.ಲಂಕೇಶ್ವರ ರಾವಣನು ಸತ್ತಾಗ ವಿಭೀಷಣನೇ ಲಂಕೆಯ ರಾಜನಾದನು.ಅದನ್ನು ಎಲ್ಲಾ ಜನರು ತಿಳಿದಿದ್ದಾರೆ.

20.ಜುಗ ಸಹಸ್ರ ಯೋಜನ ಪರ ಬಾನೋ ಲೀಲ್ಯೊತ್ಸಾಹಿ ಮಧರ ಫಲ ಜಾನೊ.

ಸೂರ್ಯನು ಸಹಸ್ರಾರು ಯೋಜನೆ ದೂರದಲ್ಲಿದ್ದಾನೆ. ಅಲ್ಲಿಯ ತನಕ ತಲುಪಲು ಬಹಳ ಯುಗಗಳೇ ಬೇಕಾಗುವವು.ಆದರೆ ಆ ಸೂರ್ಯನನ್ನು ಮಧುರ ಹಣ್ಣೆಂದು ತಿಳಿದು ನುಂಗಲು ಬಯಸಿದಿರಿ.

21.ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ ಜಲಧಿ ಲಾಂಘಿಗಯೇ ಅಚರಜ ನಾಹೀ.

ನೀವು ಪ್ರಭು ಶ್ರೀ ರಾಮಚಂದ್ರನು ಕೊಟ್ಟ ಮುದ್ರೆಯುಂಗುರ ಹಿಡಿದು ಸಮುದ್ರವನ್ನು ಜಿಗಿದ್ದಿದ್ದು ಯಾರಿಗೂ ಆಶ್ಚರ್ಯವೆನಿಸಲಿಲ್ಲ.

22.ದುರ್ಗಮಕಾಜ ಜಗತ ಕೇ ಜೇತೇ ಸುಗಮ ಅನುಗ್ರಹ ತುಮ್ಹರ ತೇತೇ.

ಈ ಜಗತ್ತಿನಲ್ಲಿ ಅತಿ ಕಠಿಣವಾದ ಕಾರ್ಯಗಳೂ ಸಹ ನಿಮ್ಮ ಅನುಗ್ರಹದಿಂದ ಸುಗಮವಾಗುತ್ತವೆ.

23.ರಾಮದುಅರೆ ತುಮ ರಖವಾರೇ ಹೋತನ ಅಜ್ಞಾ ಬಿನಾ ಪೈಸಾರೇ.

ಹೇ ಹನುಮಾನ್, ನೀವು ಶ್ರೀ ರಾಮಚಂದ್ರನ ಮನೆಯ ದ್ವಾರ ಪಾಲಕರಾಗಿದ್ದೀರಿ.ನಿಮ್ಮ ಆಜ್ಞೆಯಿಲ್ಲದೆ ಯಾರೂ ಆ ಮನೆಯನ್ನು ಪ್ರವೇಶ ಮಾಡಲಾರರು.

24.ಸಬ ಸುಖ ಲಹೈ ತುಮ್ಹಾರೆ ಶರನಾ ತುಮ ರಕ್ಷಕ ಕಾಹೂಕೋ ಡರನಾ.

ಹೇ ಪವನಸುತ ನಿಮ್ಮ ಶರಣದಲ್ಲಿರುವಾಗ ಎಲ್ಲಾ ರೀತಿಯ ಸುಖ ಪ್ರಾಪ್ತಿಯಾಗುವುದು.ಯಾವುದೇ ಪ್ರಕಾರದ ಹೆದರಿಕೆಯಿರುವುದಿಲ್ಲ.

25.ಅಪನ್ ತೇಜ ಸಂಹಾರೊ ಆಪೈ ತೀನೋ ಲೋಕ ಹಾಂಕತೇ ಕಾಂಪೈ.

ಹೇ ಭಜರಂಗಬಲಿ, ನಿಮ್ಮ ವೇಗವನ್ನು ನೀವೇ ಬಲ್ಲಿರಿ, ನಿಮ್ಮ ಗರ್ಜನೆಯಿಂದ ಮೂರುಲೋಕದ ಪ್ರಾಣಿಗಳು ನಡುಗುವವು.

26.ಭೂತ ಪಿಶಾಚ ನಿಕಟ ನಹೀ ಅವೈ ಮಹಾವೀರ ಜಬ ನಾಮ ಸುನಾವೈ.

ಹೇ ಆಂಜನೇಯ, ಯಾರು ‘ಮಹಾವೀರ’ನೆಂಬ ಹೆಸರನ್ನು ಜಪಿಸುತ್ತಾರೋ ಅವರ ಬಳಿಗೆ ಭೂತ ಪಿಶಾಚಿಗಳು ಬರುವುದಿಲ್ಲ.

27.ನಾಸೈ ರೋಗ ಹರೈ ಸಬ ಪೀರಾ ಜಪ ತಪ ನಿರಂತರ ಹನುಮಂತ ವೀರಾ.

ಹೇ ಹಾನುಮಾನ್, ನಿಮ್ಮ ಹೆಸರನ್ನು ನಿರಂತರ ಜಪ ಮಾಡುವುದರಿಂದ ಎಲ್ಲ ರೋಗಗಳು ನಾಶ ಹೊಂದುತ್ತವೆ ಮತ್ತು ಎಲ್ಲ ಕಷ್ಟಗಳು ದೂರವಾಗುತ್ತವೆ.

28.ಸಂಕಟ್ ತೇ ಹನುಮಾನ್ ಚುಡಾವೈ ಮನ ಕ್ರಮ ವಚನ ಧ್ಯಾನ ಜೋ ಲಾವೈ.

ಯಾವ ವ್ಯಕ್ತಿ ಕೆಲಸ ಮಾಡುವಾಗ ಮನಸ್ಸು ವ್ಯವಹಾರ ಮಾತುಗಳಲ್ಲೂ ನಿಮ್ಮನ್ನೇ ದ್ಯಾನಿಸುತ್ತಾನೆಯೋ ಅವನೆಲ್ಲ ದುಃಖವನ್ನು ನೀವು ದೂರಮಾಡಿರುವಿರಿ.

29.ಸಬ ಪರ ರಾಮ ತಪಸ್ವಿ ರಾಜಾ ತಿನಕೇ ಕಾಜ ಸಕಲ ತುಮ ಸಾಜಾ.

ರಾಜನಾದ ಶ್ರೀ ರಾಮಚಂದ್ರನು ಶ್ರೇಷ್ಠ ತಪಸ್ವಿಯಾಗಿದ್ದಾನೆ. ಅವನ್ನೆಲ್ಲ ಕಾರ್ಯಗಳನ್ನು ನೀವು ಪೂರ್ಣಗೊಳಿಸಿದಿರಿ.

30.ಔರ್ ಮನೋರಥ ಜೋ ಕೋಯಿ ಲಾವೈ ಸೋಯಿ ಅಮಿತ ಜೀವನ ಫಲ ಪಾವೈ.

ಹೇ ಹನುಮಾನ್, ನಿಮ್ಮ ಕೃಪೆಯಿಂದ ಎಲ್ಲ ಇಷ್ಟಗಳು ಪೂರ್ಣವಾಗುವವು.ಕಲ್ಪನೆ ಮಾಡದ ಫಲಗಳೂ ಸಹ ಬೇಗ ಸಿಗುವವು.

32.ಚಾರೋ ಯುಗ ಪ್ರತಾಪ ತುಮ್ಹಾರಾ ಹೈ ಪರಸಿದ್ದ ಜಗತ ಉಜಿಯಾರಾ.

ಹೇ ಹನುಮಾನ್, ನಿಮ್ಮ ಕೀರ್ತಿಯು ತ್ರೇತಾಯುಗ,ದ್ವಾಪರಯುಗ, ಸತ್ಯಯುಗ ಮತ್ತು ಕಲಿಯುಗಗಳಲ್ಲಿ ಪ್ರಸಿದ್ದವಾಗಿದೆ. ಇಡೀ ಜಗತ್ತೇ ನಿಮ್ಮ ಉಪಾಸನೆಯನ್ನು ಮಾಡುವುದು.

33.ಸಾಧು ಸಂತ ಕೇ ತುಮ ರಖವಾರೆ ಅಸುರ ನಿಕಂದನ ರಾಮ ದುಲಾರೆ.

ಹೇ ರಾಮಭಕ್ತ ರಾಮನ ಪ್ರೀತಿ ಪಾತ್ರನೇ,ನೀವು ಸಾಧು ಸಂತರ ಮತ್ತು ಸಜ್ಜನರ ರಕ್ಷಕರಾಗಿದ್ದೀರಿ. ದುಷ್ಟರ ನಾಶ ಮಾಡುವಿರಿ.

34.ಅಷ್ಟಸಿದ್ದಿ ನವನಿಧಿ ಕೆ ಧಾತಾ ಅಸ ವರ ದೀನ ಜಾನಕೀ ಮಾತಾ.

ಹೇ ಕೇಸರಿನಂದನ,ತಾಯಿ ಸೀತೆಯು ನಿಮಗೆ ನೀಡಿದ ‘ಅಣಿಮಾ’ ಮುಂತಾದ ಎಂಟು ಸಿದ್ದಿಗಳನ್ನು ಮತ್ತು ನವ ನಿಧಿಗಳನ್ನು ನೀವು ಯಾವ ಭಕ್ತರಿಗೆ ಬೇಕಾದರೂ ನೀಡಬಲ್ಲಿರಿ.

35.ರಾಮರಸಾಯನ ತುಮ್ಹರೇ ಪ್ಯಾಸಾ ಸಾಧರಹೊ ರಘುಪತಿ ಕೆ ದಾಸಾ.

ರಾಮನೆಂಬ ರಾಸಾಯನ ಸಿದ್ದ ಔಷಧ ನಿಮ್ಮ ಬಳಿಯಲ್ಲಿ ಸದಾ ಇರುವುದು,ನೀವು ರಘುಪತಿಯ ದಾಸರಾಗಿದ್ದೀರಿ.

36.ತುಮ್ಹಾರೆ ಭಜನ ರಾಮಕೋಪಾವೈ ಜನ್ಮ ಜನ್ಮ ಕೇ ದುಃಖ ಬಿಸರಾವೈ.

ಹೇ ಹನುಮಾನ್, ನಿಮ್ಮ ಭಜನೆ ಮಾಡುವುದರಿಂದ,ಭಕ್ತನು ರಾಮನ ದರ್ಶನ ಪಡೆಯುತ್ತಾನೆ.ಆದ್ದರಿಂದ ಜನ್ಮ ಜನ್ಮಾಂತರದ ದುಃಖಗಳೂ ಸಹ ದೂರವಾಗುತ್ತವೆ.

37.ಅಂತಃಕಾಲ ರಘುಪತಿ ಪುಸಜಾಯೀ ಜಹಾಜನ್ಮಿ ಹರಿಭಕ್ತ ಕಹಲಾಯೀ.

ಹೇ ಪವನನಂದನ, ಅಂತ್ಯ ಕಾಲದಲ್ಲಿಯೂ ನಿಮ್ಮ ಭಜನೆ ಮಾಡಿದ ಪ್ರಾಣಿ ಶ್ರೀ ರಾಮನೆಂಬ ಧಾಮವನ್ನು ಸೇರುವನು.ಎಲ್ಲಿಯೇ ಜನ್ಮ ಪಡೆದರೂ ಹರಿ ಭಕ್ತನನಿಸಿಕೊಳ್ಳುವನು.

38.ಔರದೇವತಾ ಚಿತ್ತ ನ ಧರಯಾ ಹನುಮತ ಸೇಯಿ ಸರ್ವಸುಖ ಕರಯಾ.

ಹೇ ಹಾನುಮಾನ್, ಯಾವ ಭಕ್ತ ಸತ್ಯವಾದ ಭಕ್ತಿಯಿಂದ ನಿಮ್ಮನ್ನು ಭಜಿಸುತ್ತಾನೋ ಅವನು ಎಲ್ಲ ರೀತಿಯ ಸುಖವನ್ನು ಪಡೆಯುತ್ತಾನೆ. ಅವನಿಗೆ ಬೇರೆ ದೇವತೆಗಳ ಪೂಜೆ ಮಾಡುವ ಅವಶ್ಯಕತೆಯಿಲ್ಲ.

39.ಸಂಕಟ ಕಟೈ ಮಿಟೈ ಸಬಪೀರಾ ಜೋ ಸುಮಿರೈ ಹನುಮತ ಬಲಬೀರಾ.

ಯಾವ ವ್ಯಕ್ತಿ ನಿನ್ನ ನಾಮಸ್ಮರಣೆ ಮಾತ್ರದಿಂದ ತನ್ನ ಸಂಕಟದಿಂದ ದೂರವಾಗುವನೋ,ಪೀಡೆ ನಿವಾರಣೆ ಹೊಂದುವನೋ ಅಂತಹ ದೇವನಾದ ಬಲವೀರ ಹನುಮಂತನೇ ಅನುಗ್ರಹಿಸು.

40.ಜೈ ಜೈ ಜೈ ಹನುಮಾನ ಗೋಸಾ ಈ ಕೃಪಾಕರೊ ಗುರುದೇವ ಕೀ ನಾಈ.

ಹೇ ವೀರ ಹಾನುಮಾನ್, ನಿಮಗೆ ಜಯವಾಗಲಿ,ನೀವು ಗುರುವಿನಂತೆ ನನ್ನ ಮೇಲೆ ಕೃಪೆ ತೋರಿರಿ.ನಾನು ಯಾವಾಗಲೂ ನಿಮ್ಮ ಸೇವೇ ಮಾಡುವಂತೆ ಅನುಗ್ರಹಿಸಿರಿ.

41.ಜೋ ಶತಬಾರ ಪಾಠಕರ ಕೋಈ ಚುಟಹಿ ಬಂದಿ ಮಹಾಸುಖ ಹೋ ಈ.

ಯಾವ ವ್ಯಕ್ತಿಯೂ ಶುದ್ಧ ಹೃದಯದಿಂದ ಈ ‘ ಹನುಮಾನ್ ಚಾಲೀಸಾ’ವನ್ನು ನೂರು ಬಾರಿ ಪಠಿಸುತ್ತಾನೋ ಅವನಿಗೆ ಸಂಸಾರ ಬಂಧನ ದೂರವಾಗುವುದು ಮತ್ತು ಪರಮಾನಂದವಾಗುವುದು.

42.ಜೋ ಯಹ ಪಡೈ ಹನುಮಾನ ಚಾಲೀಸಾ ಹೋಯ ಸಿದ್ದಿ ಸಾಖಿ ಗೌರೀಸಾ.

ಯಾರು ಈ ಹಾನುಮಾನ್ ಚಾಲೀಸಾ ಓದುತ್ತಾರೋ ಅವರಿಗೆ ಸಫಲತೆ ಉಂಟಾಗುವುದು.ಭಗವಾನ್ ಶಂಕರನೇ ಈ ವಿಷಯದಲ್ಲಿ ಸಾಕ್ಷಿಯಾಗುವನು.

43.ತುಳಸಿದಾಸ ಸದಾ ಹರೀಚೇರಾ ಕೀ ಜೈನಾಥ ಹೃದಯ ಮಹಾಡೇರ.

ಹೇ ನನ್ನ ಒಡೆಯ ಹನುಮಾನ್,ತುಳಸಿದಾಸ ಸದಾ ರಾಮನ ದಾಸನಾಗಿದ್ದಾನೆ.ಆದುದರಿಂದ ರಾಮಭಕ್ತನಾದ ನೀನು ಸದಾ ತುಳಸಿದಾಸರ ಹೃದಯದಲ್ಲಿರುವೆ.

44.ಪವನ ತನಯ ಸಂಕಟ ಹರಣ ಮಂಗಳ ಮೂರುತಿ ರೂಪ ರಾಮಲಖನ ಸೀತಾ ಸಹಿತ ಹೃದಯ ಬಸಹು ಸುರ ಭೂಪ.

ಹೇ ಪವನಪುತ್ರ,ನೀನು ಎಲ್ಲ ಸಂಕಟವನ್ನು ದೂರ ಮಾಡುವನು.ಮಂಗಳ ಮೂರ್ತಿಯಾಗಿರುವೆ.ನೀನು ಶ್ರೀರಾಮ ಸೀತಾ ಲಕ್ಷ್ಮಣರೊಂದಿಗೆ ಸದಾ ನನ್ನ ಹೃದಯದಲ್ಲಿ ನೆ .

*********

ಹನುಮಾನ್ ಚಾಲೀಸ್ ಮಹತ್ವ ಹಾಗು ಅಖಂಡ ಶಕ್ತಿಯ ಬಗ್ಗೆ ನಿಮಗೆ ಗೊತ್ತಾ..!!
ಹನುಮಾನ್ ಚಾಲೀಸವು ಮಹಾಸ್ವಾಮೀ ಗೋಸ್ವಾಮಿ ತುಳಸಿದಾಸರ ಒಂದು ಮಹಾನ್ ಕಾವ್ಯಾತ್ಮಕ ಸಂಯೋಜನೆ ತುಳಸಿದಾಸರನ್ನು ವಾಲ್ಮೀಕಿ ಮಹರ್ಷಿಯ ಅವತಾರವೆಂದು ಹೇಳಲಾಗುತ್ತದೆ ಹರಿದ್ವಾರದಲ್ಲಿ ಕುಂಭಮೇಳ ನಡೆಯುವ ಸಂಧರ್ಭದಲ್ಲಿ ತುಳಸಿದಾಸರು ಸಮಾಧಿ ಸ್ಥಿತಿಯಲ್ಲಿ ಹನುಮಾನ್ ಚಾಲೀಸವನ್ನು ರಚಿಸಿದರೆಂದು ಹೇಳಲಾಗುತ್ತದೆ ಚಾಲೀಸ ಎಂದರೆ 40, ಹನುಮಾನ್ ಚಾಲೀಸದಲ್ಲಿ 40 ಪದ್ಯಗಳ ಮೂಲಕ ಹನುಮಂತನನ್ನು ವರ್ಣಿಸಲಾಗಿದೆ.

ತುಳಸಿದಾಸರು ಹೇಳುವಂತೆ ಹನುಮಾನ್ ಚಾಲೀಸವನ್ನು ಪಠಿಸುವವರೆಲ್ಲರಿಗೂ ಹನುಮಂತನ ಅನಂತ ಅನುಗ್ರಹ ಪ್ರಾಪ್ತಿಯಾಗುತ್ತದೆ, ಹನುಮಾನ್ ಚಾಲೀಸವನ್ನು ಪಠಿಸಲು ವಿಶೇಷವಾದ ಕಾರಣಗಳಿವೆ ಹನುಮಾನ್ ಚಾಲೀಸದ 40 ಪದ್ಯಗಳನ್ನು 40 ದಿನಗಳು ನಿರಂತರವಾಗಿ ಪಠಿಸಿದರೆ ನಮ್ಮ ಒಂದು ಪ್ರಾರ್ಥನೆಗೆ ಉತ್ತರ ಸಿಗುತ್ತದೆ ಮತ್ತು ಅಪಾರ ಪುಣ್ಯ ಸಿಗುತ್ತದೆ ದಿವ್ಯವಾದ ಹನುಮಾನ್ ಚಾಲೀಸವು ಬಹಳ ಶಕ್ತಿಶಾಲಿಯಾಗಿದೆ.

ಜ್ಯೋತಿಶ್ಶಾಸ್ತ್ರದ ಪ್ರಾಮುಖ್ಯತೆ : ಜ್ಯೋತಿಷ್ಯದ ಪ್ರಕಾರ ಕಂಡ ಅಂಶವೆಂದರೆ, ಶನಿಗ್ರಹದ ಗೊಚಾರದ, ಸಣ್ಣ ಮತ್ತು ದೊಡ್ಡ ಅವಧಿಗಳ ಕೆಟ್ಟ ಪರಿಣಾಮಗಳನ್ನು ನಿಯಂತ್ರಿಸುವಲ್ಲಿ ತೀವ್ರ ಪರಿಣಾಮಕಾರಿಯಾಗಿದೆ ಶನಿಗ್ರಹದ ಋಣಾತ್ಮಕ ಪ್ರಭಾವದಿಂದ ಬಳಲುತ್ತಿರುವವರು ಹನುಮಾನ್ ಚಾಲೀಸವನ್ನು ಪ್ರತೀ ಶನಿವಾರ 8 ಬಾರಿ ಪಠಿಸುವುದರಿಂದ ಉತ್ತಮ ಪರಿಹಾರ ಮತ್ತು ಲಾಭವಾಗುತ್ತದೆ ಮಂಗಳನ ದೋಷ ಅಥವಾ ಕುಜ ದೋಷವಿರುವವರು ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು ಮಂಗಳನ ಧನಾತ್ಮಕ ಗುಣಗಳಾದ ಶಕ್ತಿ, ಧೈರ್ಯ, ಸಾಹಸ ಮತ್ತು ಅದಮ್ಯ ಚೇತನಗಳನ್ನು ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಪಡೆಯಬಹುದು.

ಶನಿ ಮತ್ತು ಮಂಗಳಗ್ರಹದ ಕ್ಲೇಶವಿದ್ದಾಗ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಧನಾತ್ಮಕ ಪರಿಣಾಮ ಉಂಟಾಗುತ್ತದೆ, ನಿರ್ದಿಷ್ಟ ಶ್ಲೋಕಗಳ ಪಠಣದಿಂದ ನಿರ್ದಿಷ್ಟ ಫಲಿತಾಂಶಗಳು ದೊರೆಯುತ್ತವೆ ಇದನ್ನು ಬೆಳಿಗ್ಗೆ ಅಥವಾ ಸಂಜೆ ಪಠಿಸಬಹುದು ಈ ಸುಂದರವಾದ ಶ್ಲೋಕಗಳನ್ನು ಪಠಿಸಲು ಗರಿಷ್ಠ 10 ನಿಮಿಷಗಳು ಬೇಕಾಗಬಹುದು, ಪ್ರತಿ ಪದ್ಯ ಅಥವಾ ಚೌಪಾಯಿಯು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ಹೇಳಲಾಗುತ್ತದೆ, ಎಲ್ಲಾ 40 ಪದ್ಯಗಳನ್ನು ಓದಲು ಆಗದವರು ತಮ್ಮ ಅಗತ್ಯಕ್ಕೆ ಸರಿಯಾದ ಕೆಲವು ಪದ್ಯಗಳನ್ನು ಮಾತ್ರ ಓದಬಹುದು ಅವುಗಳ ಮಹತ್ವ ಹೀಗಿದೆ.

ದುಷ್ಕರ್ಮಗಳನ್ನು ತೆಗೆಯಲು – ಮೊದಲ ಆರಂಭದ ಪದ್ಯ.

ಬುದ್ದಿವಂತಿಕೆ ಮತ್ತು ಶಕ್ತಿ – ಎರಡನೇ ಆರಂಭದ ಪದ್ಯ.

ದೈವಿಕ ಜ್ಞಾನವನ್ನು ಹೊಂದಲು – ಮೊದಲ ಪದ್ಯ.

ಕೆಟ್ಟವರ ಸಂಗ ಮತ್ತು ಕೆಟ್ಟ ಅಭ್ಯಾಸಗಳಿಂದ ಮುಕ್ತಿ – 3ನೇ ಪದ್ಯ.

ಭಕ್ತಿ ಭಾವ ತುಂಬಲು – 7 ಮತ್ತು 8ನೇ ಪದ್ಯ.

ವಿಷ ಮತ್ತು ಹಾವಿನ ಕಡಿತದಿಂದ ರಕ್ಷಣೆ – 11ನೇ ಪದ್ಯ.

ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳ ನಡುವೆ ಮನಸ್ತಾಪ ತೆಗೆದುಹಾಕಲು – 12ನೇ ಪದ್ಯ.

ಖ್ಯಾತಿ ಪಡೆಯಲು – 13, 15ನೇ ಪದ್ಯಗಳು.

ಕಳೆದುಹೋದ ಸ್ಥಿತಿಗತಿಯನ್ನು ಮರಳಿ ಪಡೆಯಲು, 
ಉದ್ಯೋಗದಲ್ಲಿ ಬಡ್ತಿ – 16, 17ನೇ ಪದ್ಯಗಳು.

ಅಡೆತಡೆಗಳನ್ನು ತೆಗೆದುಹಾಕಲು, ಕಷ್ಟಕರ ಕಾರ್ಯವೆಸಗಲು – 20ನೇ ಪದ್ಯ.

ಗ್ರಹಗಳ ಪ್ರತಿಕೂಲ ಪರಿಣಾಮಗಳಿಂದ ರಕ್ಷಣೆ – 22ನೇ ಪದ್ಯ.

ಮಾಂತ್ರಿಕ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆ – 24ನೇ ಪದ್ಯ.

ಉತ್ತಮ ಆರೋಗ್ಯಕ್ಕಾಗಿ – 25ನೇ ಪದ್ಯ.

ಬಿಕ್ಕಟ್ಟಿನಿಂದ ವಿಮೋಚನೆಗಾಗಿ – 26ನೇ ಪದ್ಯ.

ಆಸೆಗಳ ಈಡೇರಿಕೆಗೆ – 27, 28ನೇ ಪದ್ಯಗಳು.

ಶತ್ರುಗಳ ಮೇಲೆ ವಿಜಯವನ್ನು ಪಡೆಯಲು – 30ನೇ ಪದ್ಯ.

ಅತೀಂದ್ರಿಯ ಶಕ್ತಿಗಳು ಮತ್ತು ಸಂಪತ್ತು – 31ನೇ ಪದ್ಯ.

ನೈತಿಕತೆಯಿಂದ ಇರಲು ಮತ್ತು ಪೂರ್ಣತೆಯ ಜೀವನವನ್ನು ನಡೆಸಲು – 32ರಿಂದ 35ನೇ ಪದ್ಯ.

ಮಾನಸಿಕ ಶಾಂತಿಗಾಗಿ – 36ನೇ ಪದ್ಯ.

ಹನುಮನ ಕೃಪೆಗಾಗಿ – 37ನೇ ಪದ್ಯ.

ಹನುಮಾನ್ ಚಾಲೀಸಾವನ್ನು ಓದುವುದರ ಪ್ರಯೋಜನಗಳು : ಇದು ದೇಹ ಮತ್ತು ಮನಸ್ಸು ಎರಡರ ಮೇಲೆ ಶುದ್ಧೀಕರಿಸುವ ಪರಿಣಾಮವನ್ನು ಹೊಂದಿದೆ ಮತ್ತು ಆಧ್ಯಾತ್ಮಿಕವಾಗಿ ಉನ್ನತಿಗೇರಿಸುತ್ತದೆ, ಇದು ಜೀವನದಲ್ಲಿ ಎಲ್ಲಾ ಅಪಾಯಗಳಿಂದ ಪಾರುಮಾಡುತ್ತದೆ ಮತ್ತು ಆಧ್ಯಾತ್ಮಿಕ ಜ್ಞಾನ ಗಳಿಕೆಗೆ ಸಹಾಯ ಮಾಡುತ್ತದೆ ಮತ್ತು ಜೀವನದಲ್ಲಿ ವಿಶ್ವಾಸ ಹೆಚ್ಚುತ್ತದೆ, ಉದ್ಯೋಗ ಸಂದರ್ಶನಗಳಿಗೆ ಹೋಗುವಾಗ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ನಿರೀಕ್ಷಿಸಬಹುದು.

ಕಾನೂನು ಅವ್ಯವಸ್ಥೆ, ದಾವೆ ಮತ್ತು ಬ೦ಧನಗಳಿಂದ ಮುಕ್ತಿ ಪಡೆಯಲು ಹನುಮಾನ್ ಚಾಲೀಸವನ್ನು 100 ಬಾರಿ ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು, ಹೆಚ್ಚು ಅರ್ಥಪೂರ್ಣವಾಗಿ, ಹನುಮಾನ್ ಚಾಲೀಸವನ್ನು ರಾತ್ರಿ ಪಠಿಸುವುದರಿಂದ ಇದು ಜನರ ಜೀವನದಿಂದ ದುಷ್ಟ ಶಕ್ತಿಗಳನ್ನು ಹೊಡೆದೋಡಿಸುತ್ತದೆ ಮತ್ತು ತಿಳಿದೂ / ತಿಳಿಯದೆಯೋ ಮಾಡಿದ ಪಾಪಗಳನ್ನು ತೆಗೆದುಹಾಕುತ್ತದೆ, ಮಹಾನ್ ಕಾರ್ಯಗಳನ್ನು ಸಾಧಿಸಬೇಕಾಗಿರುವವರು ಮಂಗಳವಾರ, ಗುರುವಾರ ಮತ್ತು ಶನಿವಾರದ ಮಂಗಳಕರ ರಾತ್ರಿ ಅಥವಾ ಮೂಲಾ ನಕ್ಷತ್ರದ ದಿನ ಹನುಮಾನ್ ಚಾಲೀಸವನ್ನು 1008 ಬಾರಿ ಪಠಿಸುವುದರಿಂದ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು, ರಾತ್ರಿ ಹನುಮಾನ್ ಚಾಲೀಸವನ್ನು ಪಠಿಸುವುದರಿಂದ ಉತ್ತಮ ಜೀವನದ ಎಲ್ಲಾ ಅಡೆತಡೆಗಳನ್ನು ತೆಗೆದು ಕಾಣಿಸುತ್ತದೆ ಮತ್ತು ಹನುಮಂತನ ರಕ್ಷಣೆ ಮತ್ತು ಕೃಪೆಗೆ ಪಾತ್ರರಾಗುತ್ತಾರೆ.
ಸಂಗ್ರಹ : ಜಯಂತಿ ನಾರಾಯಣ 
********



No comments:

Post a Comment