SEARCH HERE

Tuesday 1 January 2019

ಅವಧೂತರು ಯಾರು who is avadhuta avadhoota


ಅವಧೂತರು ಯಾರು - 
ವರ್ಣಾಶ್ರಮ ಧರ್ಮಗಳನ್ನು ತ್ಯಜಿಸಿ, ಪರಮಾತ್ಮ ಧ್ಯಾನಾಸಕ್ತನಾದ ಯೋಗಿ. 
ಇವರಲ್ಲಿ ನಾಲ್ಕು ಬಗೆ. 

  1. ಗೃಹಸ್ಥಾಶ್ರಮಿಯಾಗಿದ್ದುಕೊಂಡೇ ಬ್ರಹ್ಮಮಂತ್ರವನ್ನು ಉಪಾಸನೆ ಮಾಡುವವ ಗಾರ್ಹಸ್ಥ್ಯಾವಧೂತ.
  2. ಅಭಿಷೇಕವಿಧಿಯಿಂದ ಸಂಸ್ಕೃತನಾದ ಶೈವಸನ್ಯಾಸಿ ಶೈವಾವಧೂತ. 
  3. ಬ್ರಹ್ಮೋಪಾಸಕನಾದವ ಬ್ರಹ್ಮಾವಧೂತ. ಶೈವಾವಧೂತರಿಗೆ ಪೈತೃಕಾದಿ ಸರ್ವಕರ್ಮಗಳಲ್ಲಿ ಅಧಿಕಾರವಿಲ್ಲ. 
  4. ನಾಲ್ಕನೆಯವ ಹಂಸಾವಧೂತ. ಯಾವ ವಿಧವಾದ ಜಾತಿ ಲಾಂಛನವೂ ಇಲ್ಲದೆ ಶೋಕ ಮೋಹ ವರ್ಜಿತನಾಗಿ, ಯಾವ ವಿಧಿ ನಿಷೇಧಗಳಿಗೂ ಬದ್ಧನಾಗದೆ, ಯಾವ ಉದ್ಯಮವೂ ಇಲ್ಲದೆ, ಸಂಕಲ್ಪರಹಿತನಾಗಿ ಪ್ರಾರಬ್ಧಗಳನ್ನು ಅನುಭವಿಸುತ್ತ ಸಂತುಷ್ಟಚಿತ್ತನಾಗಿ ದೇಶಾಟನೆ ಮಾಡುವುದೇ ಈತನ ಕಾರ್ಯ.

ಅವಧೂತರು ನಡೆದದ್ದು ಮೆಟ್ಟಲುಗಳಿಲ್ಲದ ದಾರಿಯಲ್ಲಿ. ಅವರ ಹೆಜ್ಜೆಗಳನ್ನು ಗುರುತಿಸಲಾಗದು. ಅವರಿಗೆ ಲಕ್ಷಣಗಳಿಲ್ಲ. ವಿಲಕ್ಷಣತೆಯೇ ಅವರ ಸ್ವರೂಪ. ಇಂತಹ ಉಡುಪು, ಇಂತಹ ನಡೆ, ಇಂತಹ ಚಿಹ್ನೆ ಉಳ್ಳವರು ಅವಧೂತರು ಎಂದು ಹೇಳಲಿಕ್ಕಾಗದು. ಯಾಕೆಂದರೆ ಇವೆಲ್ಲಾ ಇರುವವರು ಅವಧೂತರಲ್ಲ.

ಅವಧೂತ ಅನ್ನುವುದು ಒಂದು ಪಂಥವಲ್ಲ. ಅದೊಂದು ಚಿತ್ತಸ್ಥಿತಿ. ಎಲ್ಲ ಹಂಗು, ಬಂಧನಗಳನ್ನು ಕಳಚಿಕೊಂಡಂತಹ ಸ್ಥಿತಿ. ಇದನ್ನು ಕುದುರೆ ಮೈಕೊಡವಿಕೊಳ್ಳುವುದಕ್ಕೆ ಹೋಲಿಸಬಹುದು. ಆಗ ಅದರ ಮೈಗಂಟಿಕೊಂಡ ಧೂಳೆಲ್ಲ ಕಳಚಿ ಬೀಳುತ್ತದೆ. ಅವಧೂತರೂ ಹಾಗೆ - ಎಲ್ಲ ಪ್ರಾಕೃತಿಕ, ಸಾಮಾಜಿಕ ಬಂಧನಗಳನ್ನು ಕೊಡವಿಕೊಂಡವರು. ಅವೆಲ್ಲದರಿಂದ ಬಿಡುಗಡೆ ಹೊಂದಿದವರು.

ನನ್ನ ಗುರುತು ಕಳಕೊಳ್ಳಬೇಕು. ಅನಂತವಾದ ವಿಶ್ವದಲ್ಲಿ ಕಳೆದುಹೋಗಬೇಕು ಎಂಬ ಆದಮ್ಯ ಆಶಯ ಅವಧೂತರದು.

ಜಗತ್ತಿನ ಮೂಲ ಚೈತನ್ಯ ಒಂದಿದೆಯಲ್ಲ. ಅದನ್ನು ದೇವರೆನ್ನಿ, ಬ್ರಹ್ಮ ಎನ್ನಿ. ಅದರ ಜೊತೆ ಸೇರೋದು ಹೇಗೆ ಎಂಬುದೇ ಅವಧೂತರ ಅನುದಿನದ ಹುಡುಕಾಟ.

ಕತ್ತಲು ಮತ್ತು ಬೆಳಕು ಬೇರೆಬೇರೆ ಎಂದು ನಾವು ಭಾವಿಸುತ್ತೇವೆ, ಅಷ್ಟೇ. ನಿಜವಾಗಿ ಅದು ಬೇರೆ, ಇದು ಬೇರೆ ಅಲ್ಲ. ಇಂತಹ ಅರಿವಿನ ಅನುಸಂಧಾನಕ್ಕೆ ಇಳಿದವನು ಅವಧೂತ.

ಈ ಜಗತ್ತು ಎಂಬುದೊಂದು ಚೈತನ್ಯದ ನಿರಂತರ ಹರಿವು. ಇದರ ಮಧ್ಯಬಿಂದುಗಳು ಮನುಷ್ಯಜೀವಿಗಳು ಎಂಬ ಅರಿವಿನಲ್ಲಿ ಮಿಂದವರು ಅನುಭಾವಿಗಳು. ಅವರದು ಕಾಲ -ದೇಶ ಮೀರಿದ ನಡೆ. ಸಕಲ ಅವಸ್ಥೆಗಳಿಂದ, ಕಾಲದ ಹಾಗೂ ದೇಶದ ಮಿತಿಗಳಿಂದ ಮುಕ್ತವಾದ ನಡೆ.

ಇಂತಹ ಒಂದು ಸ್ಥಿತಿ ಸಾಧ್ಯವೇ? ಇದು ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ, ಸಾವಿರಾರು ಅವಧೂತರು. ಇಂತಹ ಸ್ಥಿತಿಯ ಶಿಖರ ತಲಪಿದವರು ಹಲವರಿದ್ದಾರೆ. 


ಇಂತಹ ಅವಧೂತರಲ್ಲಿ ಹಲವು ಪಂಗಡಗಳಿವೆ:

ನಾಗಪಂಥದವರು, ಕಾಪಾಲಿಕರು, ಸಿದ್ಧರು, ಅವಧೂತರು. ಈ ಅವಧೂತರಲ್ಲಿಯೂ ಒಳಪಂಗಡಗಳಿವೆ. ಮಂತ್ರತಂತ್ರಗಳ ಸಾಧನೆ ಮಾಡುವವರೂ ಇದ್ದಾರೆ.

ಸರಳವಾಗಿ ಹೇಳಬೇಕೆಂದರೆ ಇವರು ನೆಲದ ಸಂತರು. ಇವರು ತ್ಯಾಗಿಗಳೂ ಹೌದು, ಭೋಗಿಗಳೂ ಹೌದು. ಇವರಿಗೆ ಧರ್ಮದ ಹಂಗಿಲ್ಲ, ಶಾಸ್ತ್ರದ ಹಂಗಿಲ್ಲ. ಅವೆಲ್ಲ ಚೌಕಟ್ಟುಗಳನ್ನು ಮೀರಿ ನಿಂತವರು.

ಇಂತಹ ಅವಧೂತರು ತಮಗೆ ತಿಳಿದದ್ದನ್ನು ತಮಗೆ ತಿಳಿದ ಭಾಷೆಯಲ್ಲಿ, ಅಂದರೆ ದೇಸಿ ಭಾಷೆಯಲ್ಲಿ ಹೇಳಿದ್ದಾರೆ. ಅದು ಜನಸಾಮಾನ್ಯರ ಅಧ್ಯಾತ್ಮ. ಆದರೂ ಅದರಲ್ಲಿ ನಿಗೂಢ ಅರ್ಥವಿದೆ, ಅನುಭವವಿದೆ
***

ಜ್ಞಾನಿಗಳಲ್ಲಿ “ಅವಧೂತ” ಎನ್ನುವ ಒ೦ದು ವರ್ಗವಿದೆ. ಅವಧೂತರೆ೦ದರೆ ಕೊಡವಿದವರು ಎ೦ದರ್ಥ. ಆತ್ಮಭಾವದಲ್ಲಿ ಪರಿಪೂರ್ಣವಾಗಿ ತಲ್ಲೀನರಾಗಿ ಸ೦ಸಾರವನ್ನು ಕೊಡವಿದವರು ಅವಧೂತರು. ನಮ್ಮದೇ ಆದ ಆನ೦ದದ ಲೋಕದಲ್ಲಿ ವಿಹರಿಸುವ ಅವಧೂತರಿಗೆ ಬಾಹ್ಯ ಜಗತ್ತಿನ ಪ್ರಜ್ಞೆ ಇರುವುದು ಕಡಿಮೆ. ನಗಲು ಬಾಹ್ಯವಾದ ಯಾವುದೇ ಕಾರಣ ಇಲ್ಲದಿದ್ದರೂ ತನ್ನೊಳಗೆ ತಾನೇ ಯಾವುದೋ ಸ೦ತೋಷವನ್ನು ಅನುಭವಿಸುತ್ತಾ ಮ೦ದಹಾಸ ಬೀರುವ ತೊಟ್ಟಲಿನ ಎಳೆಯ ಮಗುವಿಗೆ ಅವಧೂತರನ್ನು ಹೋಲಿಸಬಹುದು.

ತಮಿಳುನಾಡಿನಲ್ಲಿ ಜ್ಞಾನಿಗಳ ಪ೦ಕ್ತಿಯನ್ನು ಪಾವನಗೊಳಿಸಿದ ಸದಾಶಿವಬ್ರಹ್ಮೇ೦ದ್ರರೆ೦ಬ ಅವಧೂತರು ಆಗಿಹೋದರು. ಹೊಟ್ಟೆಬಟ್ಟೆಗಳ ಪರಿವೆ ಇಲ್ಲದ ಕೈಗೆ ಸಿಕ್ಕಿದ್ದನ್ನು ಉಣ್ಣುತ್ತಾ, ಕಾಲು ಹೋದಲ್ಲಿ ಸ೦ಚರಿಸುವ ಆ ಮಹಾತ್ಮರು ಒಮ್ಮೆ ಯಾದೃಚ್ಛಿಕವಾಗಿ ನವಾಬನೊಬ್ಬನ ರಾಣೀವಾಸದ ಸನಿಹದಲ್ಲಿ ದಿಗ೦ಬರರಾಗಿ ಹಾದುಹೋದರು. ಅದನ್ನು ನವಾಬ ತಪ್ಪಾಗಿ ಅರ್ಥೈಸಿದ. ಆ ಮಹಾಯೋಗಿಯ ಹಿ೦ದೆ ಧಾವಿಸಿ ಒರೆಯ ಖಡ್ಗವನ್ನು ಹಿರಿದು ಅವರ ಬಲಗೈಯನ್ನು ತರಿದ. ಅತ್ಯಾನ೦ದದಲ್ಲಿ ಆಳವಾಗಿ ಮುಳುಗಿ ದೇಹದ ಪರಿವೆಯೇ ಇರದ ಆ ಸ೦ತರು ಕತ್ತರಿಸಲ್ಪಟ್ಟ ಭುಜದಿ೦ದ ರಕ್ತ ಧಾರಾಕಾರವಾಗಿ ಸುರಿಯುತ್ತಿದ್ದರೂ, ಅದರ ಕಡೆಗೆ ಗಮನವೇ ಇಲ್ಲದೆ ತಮ್ಮ ಪ್ರಯಾಣವನ್ನು ಮು೦ದುವರಿಸಿದರು. ನವಾಬನ ಆಶ್ಚರ್ಯಕ್ಕೆ ಪಾರವೇ ಇಲ್ಲ. ಅವರ ಕಾಲಿಗೆರಗಿದ. ತನ್ನ ತಪ್ಪನ್ನು ನಿವೇದಿಸಿಕೊ೦ಡ. ಕ್ಷಮೆ ಬೇಡಿದ. ಸದಾಶಿವ ಬ್ರಹ್ಮೇ೦ದ್ರರು ಒಮ್ಮೆ ನಸುನಕ್ಕು ತನ್ನ ಎಡ ಹಸ್ತದಿ೦ದ ಕತ್ತರಿಸಿದ ಬಲಭುಜವನ್ನು ಒಮ್ಮೆ ಸ್ಪರ್ಶಿಸಿಕೊ೦ಡರು. ಅದು ಮೊದಲಿನ೦ತಾಯಿತು. ಮೊದಲೇ ಆಶ್ಚರ್ಯಗೊ೦ಡಿದ್ದ ನವಾಬ ಈಗ ಸ೦ಪೂರ್ಣ ಶರಣಾದ. ಅವರ ಆಕರ್ಷಣೆಗೆ ಒಳಗಾಗಿ ಅವರ ಹಿ೦ದಯೇ ಓಡಿದ. ಉಪದೇಶಕ್ಕಾಗಿ ಅವರನ್ನು ಕಾಡಿದ, ಬೇಡಿದ. ಕೊನೆಗೂ ಅವರ ಪಾದವನ್ನು ಬಿಡದೆ ಹಿಡಿದು ಕೇಳಿದ – “ನೀವು ಅನುಭವಿಸುತ್ತಿರುವ ಆನ೦ದಮಯ ಸ್ಥಿತಿ ನನಗೂ ಬೇಕು. ದಾರಿ ತೋರಿಸಿ ಉಪದೇಶಿಸಿ.” ಕರುಣೆಗೊ೦ಡ ಸದಾಶಿವ ಬ್ರಹ್ಮೇಂದ್ರರು ಕೇಳಿದರು – “ನಾನು ಹೇಳಿದ೦ತೆ ಮಾಡುವೆಯಾ?” ನವಾಬ ಹೇಳಿದ – “ಖ೦ಡಿತವಾಗಿಯೂ ಮಾಡುವೆ”.

 ಸದಾಶಿವ ಬ್ರಹ್ಮೇ೦ದ್ರರು ಆ ನವಾಬನಿಗೆ ಒ೦ದು ವಾಕ್ಯದ ಉಪದೇಶ ಮಾಡಿದರು. “ನಿನ್ನ ಮನಸ್ಸಿಗೆ ಏನನ್ನು ಮಾಡಬೇಕೆನಿಸುವುದೋ ಅದನ್ನು ಮಾಡದಿರು”. ಅನ೦ತರ ಅಲ್ಲಿ೦ದ ಹೊರಟು ಹೋದರು. ನವಾಬನಿಗೆ ಸ್ವಲ್ಪ ಹೊತ್ತಿನ ನ೦ತರ ಅರಮನೆಗೆ ಹೋಗಬೇಕೆನಿಸಿತು. ಆದರೆ ಗುರುಗಳ ಉಪದೇಶದ ನೆನಪಾಯಿತು. ಅಲ್ಲೆಯೇ ಕುಳಿತುಕೊ೦ಡ. ಯಾರನ್ನಾದರೂ ಮಾತನ್ನಾಡಿಸಬೇಕೆನಿಸಿತು. ಮಾತನಾಡಿಸಲಿಲ್ಲ. ಏನನ್ನಾದರೂ ತಿನ್ನಬೇಕೆನಿಸಿತು. ತಿನ್ನಲಿಲ್ಲ. ನಿರ೦ತರವಾಗಿ ಬಯಕೆಗಳೊ೦ದಿಗೆ ಹೋರಾಡಿದ. ಕ್ರಮೇಣ ಅವನ ಮನಸ್ಸು ಬಯಕೆಗಳನ್ನು ಕಳೆದುಕೊ೦ಡು ನಿಶ್ಚಲವಾಯಿತು. ಬಾಹ್ಯಪರಿವೆಯೇ ಇಲ್ಲದೆ ಅ೦ತರ೦ಗ ಆನ೦ದದಲ್ಲಿ ನೆಲೆ ನಿ೦ತಿತು. ಕಾಲಕ್ರಮದಲ್ಲಿ ಅವನೂ ಒಬ್ಬ ಅವಧೂತನೇ ಆದ.

ಮನಸ್ಸು ಒ೦ದು ಸರೋವರ ಇದ್ದ೦ತೆ. ಬಯಕೆಗಳು ಅದರಲ್ಲಿ ಪ್ರಾದುರ್ಭವಿಸುವ ತರ೦ಗಗಳ೦ತೆ. ತರ೦ಗಾಕ್ರಾ೦ತವಾದ ಸರೋವರದಲ್ಲಿ ಚ೦ದ್ರನ ಪ್ರತಿಬಿ೦ಬ ಸರಿಯಾಗಿ ತೋರದು. ಹಾಗೆಯೇ ಬಯಕೆಗಳಿ೦ದ ಚಲಿತವಾದ ಮನಸ್ಸಿನಲ್ಲಿ ಆನ೦ದಮಯವಾದ ಆತ್ಮಸ್ವರೂಪ ತೋರದು.

ನಿಮಗೆ ಆನ೦ದದ ಅನುಭೂತಿ ಬೇಕಿದ್ದರೆ ಬಯಕೆಗಳನ್ನು ಕಳೆದು ನಿಮ್ಮ ಮಾನಸಸರೋವರವನ್ನು ನಿಸ್ತರ೦ಗಗೊಳಿಸಿ. ಆ ನಿಶ್ಚಲತೆಯಲ್ಲಿ ಪರಮಶಾ೦ತಿಯನ್ನು, ಪರಮಾನ೦ದವನ್ನು ಕಾಣುವಿರಿ. ಬಯಕೆಗಳಿಗೆ ದಾಸನಾದವನು ಜಗತ್ತಿಗೇ ದಾಸನಾಗುವನು. ಬಯಕೆಗಳನ್ನು ಗೆದ್ದವನು ಜಗತ್ತನ್ನೇ ಗೆಲ್ಲುವನು.

*******


ಅವಧೂತ 🔥- ಉತ್ತಮ ಪದವಿಯನ್ನು ಪಡೆದ ಮಾನವನೇ ಅವಧೂತ

ಪರಮಪದ ಪದವಿ ಪದವಿ ಪಡೆಯಲು ಕೃತ ನಿಶ್ಚಯನಾಗಿ ಇಹಲೋಕದ ಎಲ್ಲಾ ಬಂಧನಗಳಿಂದ ಬಿಡುಗಡೆ ಹೊಂದಿ ಪರಲೋಕ ಅಂದರೆ ಪರಮಪದದ ಚಿಂತೆಯಲ್ಲೇ ಇದ್ದು , ಯೋಗಸಿದ್ದಿಗಾಗಿ ಕಾದುಕುಳಿತಿರುವ ಅವಧೂತನಿಗೆ ಕೋಟಿ ಕೋಟಿ ನಮಸ್ಕಾರ 🙏

ಆತನು ನಿಗಿ ನಿಗಿಪ ವೈಶ್ಪಾನರನು ಸದಾ ಪ್ರಕಾಶಿಸುತ್ತಿರುವ ಪೂರ್ಣ ನಿರ್ಮಲ ಮನಸ್ಸಿನ ಪರಮಹಂಸ ಪದವಿ ಪಡೆದ ಪುರುಷೋತ್ತಮನು.

ಶೃತಿಗಳು ಅವನನ್ನು ವರ್ಣಿಸಲು ಪದಗಳನ್ನು ಹುಡುಕಬೇಕಾಯಿತು. ಅಂದರೆ ಅವನನ್ನು ವರ್ಣಿಸಲಾರದವಾದುವು ಎಂದರ್ಥ.

ಅವಧೂತನು ಬಾಹ್ಯ ವಿಷಯಗಳನ್ನೇಲ್ಲ ತ್ಯಜಿಸಿ , ವಿವೇಕಾದಿ ಸಾಧನ ಚತುಷ್ಟಯ ಸಂಪನ್ನನಾಗಿ ಯಮ , ನಿಯಮ , ಆಸನ , ಪ್ರಾಣಾಯಾಮಾದಿ ಯೋಗ ಸಾಧನೆಗಳನ್ನು ಸಾಧಿಸಿ , ಆತನು ಸಪ್ತಭೂಮಿಕೆಗಳಾದ ಸುಖೇಚ್ಚೆ , ಆತ್ಮವಿಚಾರ , ನಿಸ್ಸಂಗ ಈ ರೀತಿ ಮೂರು ಭೂಮಿಕೆಯನ್ನು ದಾಟಿ , ನಾಲ್ಕನೆಯದಾದ ವಾಸನಾ ಕ್ಷಯ ಸ್ಥಿತಿಯಲ್ಲಿ ವಿಹರುಸುತ್ತಿರುತ್ತಾನೆ.

ಮುಂದಿನ ಭೂಮಿಕೆಗಳನ್ನು ಶೀಘ್ರದಲ್ಲಿ ಸೇರುವ ಕಾತುರನಾಗಿದ್ದಾನೆ.
ಆನಂದಿನಿ - ತುರೀಯ - ತುರಿಯಾತೀತ ಸ್ಥಿತಿ ತಲುಪಿದರೆ ಪರಬ್ರಹ್ಮನೇ ತಾನಾಗುತ್ತಾನೆ.
ಅವಧೂತ ಸ್ಥಿತಿ ಮಾನವರಿಗೆ ಅರ್ಥವಾಗದೆ ಇರತಕ್ಕಂತಹುದಾಗಿರುತ್ತದೆ. 
ದೇಹದ ಮೇಲಿನ ಬಟ್ಟೆ - ಬರೆ - ವಸ್ತ್ರಗಳ ವಿವೇಚನೆ ಇರುವುದಿಲ್ಲ. 
ಚಳಿ ಮಳೆ ಬಿಸಿಲುಗಳಿಗೆ ಅವನ ದೇಹ ಹಿಗ್ಗಿ ಕುಗ್ಗುವುದಿಲ್ಲ.
ಬಾಹ್ಯ ಪರಿಸರದ ಪರಿವೆಯೇ ಇರುವುದಿಲ್ಲ.
ಆತನಿಗೆ ಜಾತಿ ಕುಲ ಗೋತ್ರಗಳ ಸಂಕೋಲೆ ಇರುವುದಿಲ್ಲ.
ಶ್ರೀ ಶಂಕರಾಚಾರ್ಯರು ಹೇಳಿರುವಂತೆ ಭೂಮಿಯೇ ಹಾಸಿಗೆ , ಆಕಾಶವೆ ಹೊದಿಕೆಯಂತೆ ಜೀವನ ನಡೆಸಿತ್ತಿರುವನು. 
ಅವನು ಹುಚ್ಚನಂತೆ ಭ್ರಮಿಸುತ್ತಿರುವವನು. ಋಷಿಯಂತೆ ಕಮಂಡಲುವಿನಿಂದ ನೀರು ಕುಡಿಯುವುದಿಲ್ಲ , ಕೆರೆ ಕಟ್ಟೆಗಳಲ್ಲಿನ ರೊಚ್ಚು ನೀರಲ್ಲೇ ಮುಳುಗಿ ಏಳುವನು.
ಒದ್ದೆ ಬಟ್ಟೆಯಲ್ಲೇ ಸಂಚರಿಸುವನು , ಅದೇ ನೀರನ್ನು ಕುಡಿಯುವನು.
ಭಿಕ್ಷಾನಕ್ಕೆ ಹೋದಾಗ ಯಾರಾದರೂ ಭಿಕ್ಷೆ ನೀಡಿದರೆ ಭಿಕ್ಷಾನ್ನ ತಿಂದು ಕೈ ತೊಳೆಯುವ ಗೋಜಿಗೆ ಹೋಗದೇ ಬಟ್ಟೆಗೆ ಒರೆಸಿಕೊಂಡು ಬಿಡುವನು. 
ಅವನಿಗೆ ತಾನು ಮಾಡುತ್ತಿರುವುದು ಸರಿಯೇ ತಪ್ಪೇ ಎಂಬ ಅರಿವೂ ಇರುವುದಿಲ್ಲ.
ಅವನಿಗೆ ಸುತ್ತಲಿನವರು ತನ್ನನ್ನು ಕುರಿತು ಏನು ಯೋಚಿಸುತ್ತಾರೆ ಎಂಬ ವಿವೇಚನೆ ಇಲ್ಲ.
ತನ್ನಷ್ಟಕ್ಕೆ ತಾನೆ ನಗುತ್ತಾನೆ , ಆಗಾಗ್ಗೆ ಅಳುತ್ತಾನೆ , ಜ್ಞಾನ ಅಜ್ಞಾನ ಇವುಗಳ ಭೇಧವಿಲ್ಲ.
ಬೆಂಕಿಯನ್ನು ಮುಟ್ಟಿದರೆ ಸುಡುತ್ತದೆ ಸುಡುವುದೆಂಬ ಪರಿಜ್ಞಾನವೂ ಇರುವುದಿಲ್ಲ.
ಮಕ್ಕಳಂತೆ ತನಗಿಷ್ಟ ಬಂದ. ಕೆಲಸ ಮಾಡಿಕೊಂಡು ಎಳೇ‌ ಮಗುವಿನಂತೆ ಆಡುತ್ತಾ ಅವಧೂತನೆನಿಸಿಕೊಂಡು ಬಾಲ್ಯಾವಸ್ಥೆಯಲ್ಲಿ ಕಳೆಯುತ್ತಿರುತ್ತಾನೆ.
ವಿವೇಚನೆ ಎಂಬುದು ಸುಪ್ತವಾಗಿ ಹೋಗಿರುತ್ತದೆ. 
ದಾರಿ ಕ್ರಮಿಸುವಾಗ್ಗೆ ಏರು - ತಗ್ಗು ಎಂಬುದರ ಪರಿವೆಯಿಲ್ಲದೆ ಕಂಡ ಕಂಡಲ್ಲಿ ಮುಗ್ಗರಿಸುತ್ತಾ - ಬೀಳುತ್ತಾ ದಾರಿ ಕ್ರಮಿಸುವನು .
ಎದುರಿಗೆ ಬರುವವರ ಗಮನವಿಲ್ಲ . ತನ್ನಲ್ಲಿ ತಾನೆ ತಾನಾಗಿ ಉನ್ಮತ್ತನಂತೆ ಎರಡನೇ ಅವಸ್ಥೆಯಲ್ಲಿ ಗೋಚರಿಸುತ್ತಾನೆ. 
ಊಟ ತಿಂಡಿ ಮಾಡಿ ಎಷ್ಟೋ ದಿನಗಳು ಕಳೆದಿವೆ , ಮೈ ಧೂಳಿಮಯವಾಗಿರುತ್ತದೆ. ನೋಡಲು ಭಯಂಕರ ಎನ್ನುವಂತೆ ಕಾಣುತ್ತಾನೆ. 
ಇಂತಹ ಅವಸ್ಥೆಯಲ್ಲಿಯೂ ತನ್ನ ನಿಜ ನಿಷ್ಠೆಯಲ್ಲಿ ತಲ್ಲೀನನಾಗಿ ಬಾಹ್ಯ ಪರಿಸರವನ್ನು ದೃಷ್ಟಿ ಕೂಡ ನೋಡದೆ ಅಂಧನಂತೆ - ಕುರುಡನಂತೆ ಇರುವನು.

ಈತನು ಬಾಹ್ಯ ವ್ಯವಹಾರದಲ್ಲಿ ಕುರುಡನಂತಿದ್ದು , ಪ್ರಣವ ಧ್ವನಿಯು ಇವನ ಕಿವಿಯಲ್ಲಿ ಝೇಂಕರಿಸುತ್ತಿದ್ದು , ಹೊರಗಿನವರು ಕೂಗಿದರೂ ಕಿವಿಗೆ ಬೀಳದಂತಿದ್ದು , ಇತರರೊಡನೆ ಮೂಕನಾಗಿದ್ದು ಕೊನೆಗೆ ಕಿವುಡನಂತೆಯೇ ಪ್ರವರ್ತಿಸುತ್ತಿರುತ್ತಾನೆ.ಇವನೆಂತಹ ಮಾನವ - ಮಾನವನೇ ಅಲ್ಲ - ಇವನು ಅತಿಮಾನವ.

ಬ್ರಹ್ಮವನ್ನರಿಯುವ ಪಥದಲ್ಲಿರುವ ಈತನು ಪರಬ್ರಹ್ಮನೇ ತಾನಾಗಲಿರುವನು. 
ಈತನು ತನ್ನ ಸಹಜಾನಂದದಲ್ಲಿ ತಲ್ಲೀನನಾಗಿ ಅಂಕುಶವಿಲ್ಲದೆ ಅಂಕೆಯಲ್ಲಿಲ್ಲದ ಆನೆಯಂತೆ ಗಜ ಗಮನದಲ್ಲಿ ಓಡಾಡುತ್ತಿದ್ದಾನೆ.
ಈತನಿಗೆ ವಿಶ್ವದ ಎಲ್ಲಾ ಕೋರಿಕೆಗಳೂ ವಶವಾಗಬಲ್ಲವು.
ಅಣಿಮಾದ್ಯಷ್ಟ ಸಿದ್ದಿಗಳು ಏನಪ್ಪಣೆ ಎಂದು ಕಾದು ನಿಂತಿರುವವು. ಇಂತಹ ಯೋಗಿಯನ್ನು ಕಂಡು ಸಜ್ಜನರು ಜನ್ಮ ಪುರುಷಾರ್ಥ ಸಾಧಿಸಿತೆಂದು ಸಂತಸದಿಂದ ನಮಸ್ಕರಿಸುವರು.

ದುರ್ಜನರು ಆತನನ್ನು ಕೋಲಿನಿಂದ ತಿವಿಯುವರು , ಮಕ್ಕಳು ಆತನ ಮೇಲೆ ಕಲ್ಲೆಸೆಯುವರು , ಹುಚ್ಚನೆಂದು ಕೂಗುವರು. ಇದಾವುದರ ಪರಿವೆಯೂ ಅವಧೂತನಿಗಿರುವುದಿಲ್ಲ.
ಅವನು ಇವೆಲ್ಲಕ್ಕೂ ಅತೀತನು . ಯೋಗದಿಂದ ಮುಕ್ತಿ ಎಂಬುದು ಚೆನ್ನಾಗಿ ತಿಳಿದುಕೊಂಡಿರುವನು.
ಇವನು ಅವಧೂತನಾಗಿರುವನು.ಇದೊಂದು ವಿಶಿಷ್ಟ ಸ್ಥಿತಿ ಸಾಮಾನ್ಯರು ಗುರ್ತಿಸುವುದೇ ಕಷ್ಟ , ಅವರ ಮೆಚ್ಚುಗೆ ಪಡೆಯುವುದು ಇನ್ನೂ ಕಷ್ಟ ಆದರೆ ಶುದ್ದ ಮನಸ್ಸಿನವರನ್ನು ಅವರು ಉತ್ತಮ ರೀತಿಯಲ್ಲಿ ಮತ್ತು ಬಹಳ ಪರಿಚಯ ಇರುವಂತೆ ಮಾತನಾಡಿಸಿ ಪ್ರೀತಿಯಿಂದ ಜೊತೆಗಿರುವರು ಆದರೆ ಯಾವಾಗ , ಎಲ್ಲಿ , ಹೇಗಿರುತ್ತಾರೆಂದು ಯಾರೂ ಊಹಿಸಲಾರರು.
*****



No comments:

Post a Comment