SEARCH HERE

Tuesday 1 January 2019

ಆಶ್ರಮ ashrama

ಆಶ್ರಮ ಎಂಬ ಮಾತಿಗೆ ವಿಶ್ರಾಂತಿಯನ್ನು ಪಡೆಯುವ ಸ್ಥಳವೆಂದು ಅರ್ಥ (ಆಶ್ರಮ್ಯಂತೇ ವಿಶ್ರಾಂತಿಂ ಪ್ರಾಪ್ಯಂತೇ ಅನೇನ). ವರ್ಣಾಶ್ರಮ ವ್ಯವಸ್ಥೆಗೆ ಅನುಗುಣವಾಗಿ ಕರ್ತವ್ಯಗಳನ್ನೆಲ್ಲ ನಿರ್ವಹಿಸಿ ಮುಪ್ಪು ಅಡರಿದಾಗ, ಗೃಹಸ್ಥ ಸಪತ್ನೀಕನಾಗಿ ಜಾನಪದದಿಂದ ಹೊರ ಹೊರಟು ನಗರದ ಉಪವನದಲ್ಲಿ ಪರ್ಣಶಾಲೆಯನ್ನು ಕಟ್ಟಿಕೊಂಡು ಋಷಿಯಂತೆ ವಾಸ ಮಾಡುವುದು ಆಶ್ರಮವಾಸ ಎನಿಸಿಕೊಳ್ಳುತ್ತದೆ. ಆಶ್ರಮಪದ, ಆಶ್ರಮಸ್ಥಾನ, ಆಶ್ರಮಮಂಡಲ ಎನ್ನುವುದೂ ಇದನ್ನೇ ಸೂಚಿಸುತ್ತದೆ. ಶಾಂತವಾದ ಆಶ್ರಮ ಪದದಲ್ಲಿ ಧರ್ಮಕಥೆಯನ್ನು ನಡೆಸುವ ವಿಧಾನ ಮಹಾಭಾರತದ ಆಶ್ರಮವಾಸಿಕಪರ್ವದಿಂದ ಸ್ಪಷ್ಟವಾಗುತ್ತದೆ.
ಆಶ್ರಮದಲ್ಲಿ ಇರುತ್ತಿದ್ದ ವೃದ್ಧರು ಮೋಕ್ಷೋಪಾಯವೇ ಆಶ್ರಮಧರ್ಮವಾಗಿ ಉಳ್ಳವರಾದರೂ ಗೃಹಸ್ಥರಾಗಿಯೇ ಇರುತ್ತಿದ್ದುದು ವಿಶೇಷ. ಆಶ್ರಮಗಳು ವಿದ್ಯಾಸಂಸ್ಥೆಗಳಾಗಿ ಕೆಲಸ ಮಾಡುತ್ತಿದ್ದುವು. ಆಶ್ರಮವಾಸಿಯಾದ ಆಚಾರ್ಯ ಕುಲಪತಿಯಾಗಿ ಸಹಸ್ರಾರು ಶಿಷ್ಯರಿಗೆ ಪಾಠ ಹೇಳುತ್ತಿದ್ದನಾಗಿ ಆಶ್ರಮ ಗುರುಕುಲವೆನಿಸಿತ್ತು. ಊರಿನ ದ್ವಿಜರೆಲ್ಲರೂ ಎಳೆಯ ವಯಸ್ಸಿನಲ್ಲಿ ಗುರುಗಳ ಬಳಿಯೇ ಇದ್ದುಕೊಂಡು ವಿವಿಧ ಶಾಸ್ತ್ರಗಳಲ್ಲಿ ಜ್ಞಾನಾರ್ಜನೆ ಮಾಡುತ್ತಿದ್ದರು. ಆಶ್ರಮವಾಸಿಯಾದ ಕುಲಪತಿ ಆಮಾಯಂತು ಬ್ರಹ್ಮಚಾರಿಣಃ, ಪ್ರಮಾಯಂತು ಬ್ರಹ್ಮಚಾರಿಣಃ ಎಂದು ತವಕಪಡುತ್ತಿದ್ದುದು ಉಪನಿಷದ್ವಾಕ್ಯಗಳಿಂದ ಸ್ಪಷ್ಟವಾಗುತ್ತದೆ.
ಪ್ರತಿಯೊಂದು ಆಶ್ರಮವೂ ಸಾವಿರಾರು ವಿದ್ಯಾರ್ಥಿಗಳ ವಿದ್ಯಾಕೇಂದ್ರವಾಗಿದ್ದುದು ಹಲವಾರು ಪ್ರಸ್ತಾಪಗಳಲ್ಲಿ ಬರುತ್ತದೆ. ಕಣ್ವಋಷಿ ಕುಲಪತಿಯಾಗಿದ್ದುದೂ ದ್ರೋಣಾಚಾರ್ಯ ಕೌರವ ಪಾಂಡವರಿಗೆ ವಿದ್ಯಾಭ್ಯಾಸ ಮಾಡಿಸಿದುದೂ ಕೃಷ್ಣ ಬಲರಾಮರು ಅವಂತಿಯ ಸಾಂದೀಪಿನೀ ಆಚಾರ್ಯರಲ್ಲಿ ಶಿಕ್ಷಣ ಪಡೆದುದೂ ರಾಮಲಕ್ಷಣರು ವಿಶ್ವಾಮಿತ್ರರಲ್ಲಿ ಅಧ್ಯಯನ ಮಾಡಿದುದೂ ಪ್ರಖ್ಯಾತ ನಿದರ್ಶನಗಳು. ಆಚಾರ್ಯರ ಬಳಿ ವಿದ್ಯಾಭ್ಯಾಸವನ್ನು ಪಡೆದು ಹಿಂದಿರುಗಿದ ಉದ್ದಾಲಕ ಮೊದಲಾದ ಋಷಿಗಳ ಉಲ್ಲೇಖವೂ ಗಮನಾರ್ಹವಾದುದು. ಇಂಥ ಆಶ್ರಮಗಳಲ್ಲಿ ವೈದಿಕವಿದ್ಯೆ, ವೇದಾಂತಶಿಕ್ಷಣಗಳಷ್ಟೇ ದೊರೆಯುತ್ತಿದ್ದುದು ಎಂದು ಬಗೆಯಲಾಗದು. ವ್ಯಾಕರಣ, ನಿರುಕ್ತ ಮೊದಲಾದ ಸಾಹಿತ್ಯಸಂಬಂಧವಾದ ವಿದ್ಯೆಗಳೂ ಧನುರ್ವಿದ್ಯೆ, ಸಮರಕೌಶಲ ಮೊದಲಾದ ಲೌಕಿಕ ವಿದ್ಯೆಗಳೂ ಇಲ್ಲಿ ಕಲಿಸಲ್ಪಡುತ್ತಿದ್ದುವು. ದ್ರೋಣಾಚಾರ್ಯರು ಕೌರವರಿಗೂ ಪಾಂಡವರಿಗೂ ಕಲಿಸಿದ್ದು ಧನುರ್ವಿದ್ಯೆಯನ್ನೇ. ಆಶ್ರಮಗಳು ಒಂದು ತೆರನಾದ ವಿಶ್ವವಿದ್ಯಾನಿಲಯಗಳೇ ಆಗಿದ್ದುವು.
ಆಶ್ರಮದಲ್ಲಿ ಎಲ್ಲ ಜೀವಿಗಳಿಗೂ ಅಭಯವಿದ್ದುದು ವಿಶೇಷವಾದ ಸಂಗತಿ. ಆಶ್ರಮ ಪರಿಸರದಲ್ಲಿ ಹಿಂಸ್ರಜಂತುಗಳೂ ಮೈತ್ರಿಯಿಂದ ಇರುತ್ತಿದ್ದುವು. ದ್ವೇಷವಿಲ್ಲದ ಶಾಂತವಾತಾವರಣ ಆಶ್ರಮದ ವೈಶಿಷ್ಟ್ಯವಾಗಿತ್ತು. ರಾಜರು ಆಶ್ರಮದಲ್ಲಿ ಬೇಟೆಯಾಡುವ ಹಾಗಿರಲಿಲ್ಲ. ಶಾಕುಂತಲ ನಾಟಕದಲ್ಲಿ ಕಣ್ವಮುನಿಯ ಶಿಷ್ಯರು ಹೇಳುವ ‘ಆಶ್ರಮ ಮೃಗೋಯಂ ನ ಹಂತವ್ಯಃ’ ಎನ್ನುವ ಮಾತು ಗಮನಾರ್ಹವಾದುದು. ಹೀಗೆ ಆಶ್ರಮಕ್ಕೂ ಅಹಿಂಸೆಗೂ ತಾತ್ತಿ್ವಕವಾದ ನಂಟಿತ್ತು. ರಾಜರು ಮಂತ್ರಾಲೋಚನೆಗಾಗಿ ಆಶ್ರಮಕ್ಕೆ ಬಂದುಹೋಗುವ ಪರಿಪಾಠವಿತ್ತು. ಜ್ಞಾನವೃದ್ಧರು ಆದ ಕುಲಪತಿಗಳು ವ್ಯವಹಾರಕುಶಲರೂ ಆಗಿದ್ದರು; ಅವರ ಮಾರ್ಗದರ್ಶನ ರಾಜರಿಗೆ ಅಗತ್ಯವಾಗಿತ್ತು. ಯಾವ ಸ್ವಾರ್ಥವೂ ಇಲ್ಲದೆ ಯುಕ್ತವಾದ ಸಲಹೆಗಳನ್ನು ಕೊಡುವುದು ಕುಲಪತಿಗಳಿಗೆ ಸಾಧ್ಯವಿತ್ತು. ಹೀಗೆ ಆಶ್ರಮವ್ಯವಸ್ಥೆಯಿಂದ ಎರಡು ಬಗೆಯಾದ ಲಾಭವಿತ್ತು; ಸಾಂಸಾರಿಕ ವ್ಯವಹಾರದಲ್ಲಿ ಬಳಲಿದವರಿಗೆ ಮನಶ್ಶಾಂತಿ, ವಿದ್ಯಾರ್ಥಿಗಳಿಗೆ ವಿದ್ಯೆ, ರಾಜಾಧಿರಾಜರಿಗೆ ಮಾರ್ಗದರ್ಶನ. ಚತುರ್ವಿಧ ವರ್ಣಾಶ್ರಮಧರ್ಮಗಳಾದ ಬ್ರಹ್ಮಚರ್ಯ, ಗಾರ್ಹಸ್ಥ್ಯ ವಾನಪ್ರಸ್ಥ ಮತ್ತು ಸಂನ್ಯಾಸಗಳನ್ನು ಆಶ್ರಮಧರ್ಮಗಳೆನ್ನುತ್ತಾರೆ.
(ಮಾಹಿತಿ ಸೌಜನ್ಯ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ)
*****





No comments:

Post a Comment