SEARCH HERE

Tuesday 1 January 2019

ಆಚಮನ ವಿಧಿ achamana vidhi and benefits


ಆಚಮನ ವಿಧಿ
ಪರಿಶುದ್ಧನಾಗಿ ಪವಿತ್ರ ಸ್ಥಾನದಲ್ಲಿ ಕುಳಿತು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖವಾಗಿ ಕುಳಿತು ಬಲಕೈಯನ್ನು ಮೊಣಕಾಲಿನ ಮಧ್ಯದಲ್ಲಿಟ್ಟು ಉಷ್ಣವಲ್ಲದ ನೊರೆಯಿಲ್ಲದ ಶೀತಲ ನಿರ್ಮಲ ಜಲದಲ್ಲಿ ಆಚಮನವನ್ನು ಮಾಡತಕ್ಕದ್ದು. ಅತ್ತಿತ್ತ ತಿರುಗಿ ನೋಡುತ್ತಾ, ಮಾತನಾಡುತ್ತಾ ಆಚಮನ ಮಾಡಲಾಗದು. 

ಬ್ರಾಹ್ಮಣನ ಬಲಗೈಯಲ್ಲಿ ಐದು ತೀರ್ಥಗಳಿವೆ. 

1. ದೇವತೀರ್ಥ,
2. ಪಿತೃರ್ರ್ತೀ,
3. ಬ್ರಹ್ಮತೀರ್ಥ,
4. ಪ್ರಾಜಾಪತ್ಯ ತೀರ್ಥ,
5. ಸೌಮ್ಯ ತೀರ್ಥ.

ಈ ರೀತಿಯಲ್ಲಿ ಒಟ್ಟು 5 ತೀರ್ಥಗಳಿವೆ. ಅಂಗುಷ್ಟ ಮೂಲದಲ್ಲಿ ಬ್ರಾಹ್ಮತೀರ್ಥವೂ, ಕನಿಷ್ಠಿಕೆಯ ಮೂಲದಲ್ಲಿ ಪ್ರಾಜಾಪತ್ಯ ತೀರ್ಥವೂ, ಜೊತೆಯಾಗಿ ಕೂಡಿಸಿದ ನಾಲ್ಕು ಅಂಗುಲಿಗಳ ಮಧ್ಯಭಾಗದಲ್ಲಿ ದೇವತೀರ್ಥವೂ, ತರ್ಜನೀ ಮತ್ತು ಅಂಗುಷ್ಠಗಳ ಮಧ್ಯಭಾಗದಲ್ಲಿ ಪಿತೃತೀರ್ಥವೂ, ಅಂಗೈಯಲ್ಲಿ ಸೌಮ್ಯತೀರ್ಥವೂ ಇದೆ.

“ಅಂಗುಷ್ಠಮೂಲೋತ್ತರತೋ ಯೇಯಂ ರೇಖಾ ಮಹೀಪತೇ |
ಬ್ರಾಹ್ಮಂ ತೀರ್ಥಂ ವದಂತ್ಯೇತತ್ ವಸಿಷ್ಠಾದ್ಯಾ ದ್ವಿಜೋತ್ತಮ ||
ಕಾಯಂ ಕನಿಷ್ಠಿಕಾಮೂಲೇ ಅಂಗುಲ್ಯಗ್ರೇತು ದೈವತಂ
ಕರಮಧ್ಯೇ ಸ್ಥಿತಂ ಸೌಮ್ಯಂ ಪ್ರಶಸ್ತಂ ದೇವತಕರ್ಮಣಿ”||

• ದೇವತಾರ್ಚನೆ ದಕ್ಷಿಣೆ ಆದಿಗಳು ದೇವತಾತೀರ್ಥದಲ್ಲಿಯೂ, 
• ತಪರ್ಣ ಪಿಂಡದಾನಾದಿ ಕರ್ಮಗಳು ಪೈತೃಕ ತೀರ್ಥದಲ್ಲಿಯೂ, 
• ಆಚಮನ ಬ್ರಾಹ್ಮತೀರ್ಥದಲ್ಲಿಯೂ, 
• ವಿವಾಹದ ಸಮಯದಲ್ಲಿ ಲಾಜಹೋಮದಲ್ಲಿ ಪ್ರಾಜಾಪತ್ಯ ತೀರ್ಥದಿಂದಲೂ, 
• ಕಮಂಡಲು ಗ್ರಹಣ ದಧಿಪ್ರಾಶನಾದಿ ಕರ್ಮಗಳು ಸೌಮ್ಯತೀರ್ಥದಲ್ಲಿಯೂ ವಿಹಿತಗಳಾಗಿವೆ. 

ಅಂಗುಲಿಗಳನ್ನು ಜೊತೆಗೂಡಿಸಿ ಏಕಾಗ್ರಚಿತ್ತದಿಂದ ಶಬ್ದ ಮಾಡದೆ ಮೂರು ಬಾರಿ ಪವಿತ್ರ ಜಲದಿಂದ ಮಾಡಿದ ಆಚಮನದಿಂದ ದೇವತೆಗಳು ತೃಪ್ತರಾಗುತ್ತಾರೆ. 

• ಒಂದನೆಯ ಆಚಮನದಿಂದ ಋಗ್ವೇದವೂ, 
• ಎರಡನೆಯದರಿಂದ ಯಜುರ್ವೇದವೂ, 
• ಮೂರನೆಯ ಆಚಮನದಿಂದ ಸಾಮವೇದವೂ ತೃಪ್ತಿಗೊಳ್ಳುವುದು ಎನ್ನಲಾಗಿದೆ.

ಓಷ್ಠಗಳ ಮಾರ್ಜನದಿಂದ ಇತಿಹಾಸ ಪುರಾಣಗಳೂ, ಕಣ್ಣುಗಳ ಸ್ಪರ್ಶದಿಂದ ದಿಗ್ ದೇವತೆಗಳೂ, ಭುಜಸ್ಪರ್ಶದಿಂದ ಯಮ ಕುಬೇರ ಇಂದ್ರ ವರುಣ ದೇವತೆಗಳೂ, ತೃಪ್ತರಾಗುತ್ತಾರೆ. ಅಂಗುಷ್ಠ ತರ್ಜನಿಗಳಿಂದ ನೇತ್ರ, ಅಂಗುಷ್ಠ ಅನಾಮಿಕಗಳಿಂದ ನಾಸಿಕ, ಅಂಗುಷ್ಠ ಕನಿಷ್ಠಿಕೆಗಳಿಂದ ಕಿವಿ, ಅಂಗುಲಿಗಳಿಂದ ಭುಜವನ್ನೂ ಅಂಗುಷ್ಠದಿಂದ ನಾಭಿ ಮಂಡಲವನ್ನೂ ಎಲ್ಲಾ ಅಂಗುಲಿಗಳಿಂದ ತಲೆಯನ್ನೂ ಸ್ಪರ್ಶಿಸತಕ್ಕದ್ದು.ಆಚಮನ ಜಲವು ಹೃದಯಕ್ಕೆ ತಲಪುವ ಮಿತಿಗೆ ಮಾತ್ರ ಬ್ರಾಹ್ಮಣನು ಪ್ರಾಶನ ಮಾಡ ತಕ್ಕದು. ಕಂಠದವರೆಗೆ ಕ್ಷತ್ರಿಯನೂ, ವೈಶ್ಯನು ಕೇವಲ ಜಲಪ್ರಾಶನದಿಂದ ಮಾತ್ರ ಪುನೀತನಾಗುವನು. 

ಕುತ್ತಿಗೆಯಿಂದ ಬಲಕೈಯ ಕೆಳಗಡೆ ಯಜ್ಞೋಪವೀತವಿರುವಾಗ (ಸವ್ಯ) ಉಪವೀತೀ ಎನಿಸುವನು. ಇದಕ್ಕೆ ವಿಪರೀತವಾಗಿ ಎಡದ ಕೈಯ ಕೆಳಗಡೆ ಯಜ್ಞೋಪವೀತವಿದ್ದರೆ ‘ಪ್ರಾಚೀನಾ ವೀತಿ’ ಯುಳ್ಳವನು. ಮಾಲಾಂಕಾರದಲ್ಲಿ ಕಂಠದಲ್ಲಿ ಯಜ್ಞೋಪವೀತವಿದ್ದಾಗ ‘ನೀವೀತಿ’ ಎನ್ನಲಾಗಿದೆ. 

ಮೇಖಲಾದಂಡ ಯಜ್ಞೋಪವೀತಗಳು ಭಗ್ನಗಳಾದಾಗ ನೀರಿನಲ್ಲಿ ಬಿಡತಕ್ಕದ್ದು. ಬ್ರಾಹ್ಮಣನ ಹಸ್ತರೇಖಗಳು ನದಿಗಳಂತೆ ಪವಿತ್ರಗಳಾಗಿವೆ. ಅಂಗುಲಿಗಳ ಪರ್ವಗಳು ದೇವಪರ್ವಗಳೆಂದೂ ಗ್ರಹಿಸಬೇಕು. ಆದ್ದರಿಂದ ಬಲಗೈಯು ಸರ್ವದೇವಮಯವಾಗಿದೆ. 

ಮೇಲೆ ವಿವರಿಸಿದಂತೆ ಆಯಾಯ ಸಂದರ್ಭಗಳಲ್ಲಿ ಆಚಮನ ಮಾಡುವುದರಿಂದ ಸ್ವರ್ಗಪ್ರಾಪ್ತಿ ಎನ್ನಲಾಗಿದೆ.

“ಯಾಸ್ತ್ವೇತಾ ಕರಮಧ್ಯೇ ತು ರೇಖಾವಿಪ್ರಸ್ಯ ಭಾರತ |
ಗಂಗಾದ್ಯಾಃ ಸರಿತಃ ಸರ್ವಾಃ ಜ್ಞೇಯಾ ಭಾರತಸತ್ತಮ |
ಯಾನ್ಯಂಗುಲೀಷುಪರ್ವಾಣಿ ಗಿರಯಸ್ತಾನಿ ವಿದ್ಧಿ ಮೇ |

ಸರ್ವದೇವಮಯೋ ರಾಜನ್ ಕರೋ ವಿಪ್ರಸ್ಯ ದಕ್ಷಿಣಃ ||

****

ಆಚಮನ ಮಂತ್ರದಿಂದಾಗುವ ವೈಜ್ಞಾನಿಕ ಲಾಭ

ಕೇಶವಾಯ ಸ್ವಾಹಾ

ನಾರಾಯಣಾಯ ಸ್ವಾಹಾ
ಮಾಧವಾಯ ಸ್ವಾಹಾ

ಈ ಮೇಲಿನ ಮಂತ್ರವನ್ನು ಜಪಿಸುವಾಗ ಉದ್ದರಣೆಯಿಂದ 3 ಸಲ ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯಲು ಕಾರಣ. ಶಬ್ದವು ಗಂಟಲಿನಿಂದ ಬರುವ ಕಾರಣ ಅಲ್ಲಿರುವ ವಾಯುವು ಹೊರಕ್ಕೆ ಬಂದಾಗ ತೊಂದರೆಯಾಗದಿರಲಿ, ಶಬ್ದವು ಸುಗಮವಾಗಿ ಗಂಟಲಿನಿಂದ ಬರಲಿ ಎಂಬ ಉದ್ದೇಶದಿಂದ ನಮ್ಮ ಋಷಿ ಮುನಿಗಳು ನಮಗೆ ತೋರಿಸಿದ ಸರಳ ಮಾರ್ಗ. 


ಕೇಶವಾಯ ಸ್ವಾಹಾ - ಈ ಮಂತ್ರವು ಗಂಟಲಿನಿಂದ ಹೊರಡುತ್ತದೆ. ಹೀಗೆ ಉಚ್ಚರಿಸುವಾಗ ಗಂಟಲಿಗೆ ಸಂಬಂಧಪಟ್ಟ ಸ್ನಾಯು ಮತ್ತು ನರಗಳಿಗೆ ವ್ಯಾಯಾಮ ಕೊಡುವುದೇ ಈ ಮಂತ್ರದ ಉದ್ದೇಶ.


ನಾರಾಯಣಾಯ ಸ್ವಾಹಾ - ಈ ಮಂತ್ರವು ನಾಲಗೆಯ ಸಹಾಯದಿಂದ ಹೊರಡುತ್ತದೆ.ಈ ಮಂತ್ರ ನಾಲಿಗೆಗೆ ಸಂಬಂಧಪಟ್ಟ ನರಗಳಿಗೆ ವ್ಯಾಯಾಮ ಕೊಡುತ್ತದೆ.


ಮಾಧವಾಯ ಸ್ವಾಹಾ -

ಈ ಮಂತ್ರವು ತುಟಿಗಳ ಸಹಾಯದಿಂದ ಹೊರಡುತ್ತದೆ. ಈ ಮೇಲಿನ ಮಂತ್ರಗಳನ್ನು ಅನೇಕ ಸಾರಿ ಉಚ್ಚಾರ ಮಾಡುವುದರಿಂದ, ಗಂಟಲು, ನಾಲಿಗೆ, ತುಟಿಗಳಿಗೆ ಸಂಬಂದಪಟ್ಟ ಸ್ನಾಯುಗಳಿಗೆ ಏಕಕಾಲದಲ್ಲಿ ವ್ಯಾಯಾಮ ಕೊಟ್ಟಂತಾಗುತ್ತದೆ. ಹೀಗೆ ಅನೇಕ ಸಾರಿ ಜಪಿಸುವುದರಿಂದ ಮುಂದೆ ಹೇಳಬೇಕಾದ ಮಂತ್ರಗಳು ಶುದ್ದವಾಗಿ ಸ್ಪುಟವಾಗಿ ಹೊರಡುತ್ತದೆ. ಶರೀರಶಾಸ್ತ್ರವು ಏನು ಹೇಳುತ್ತದೋ ಅದನ್ನು ಒಂದು ಆಚರಣೆಯಂತೆ ಆಚರಿಸಲು ಧಾರ್ಮಿಕ ಕಾರಣ ಕೊಟ್ಟು ನಮ್ಮ ಹಿಂದಿನ ಋಷಿ ಮುನಿಗಳು ಕಡ್ಡಾಯವಾಗಿ ಮಾಡಲು ತಿಳಿಸಿದ್ದಾರೆ.

ಪೂಜೆಗೆ ಕುಳಿತ ಬ್ರಾಹ್ಮಣರು ಮಂತ್ರ ಮಾಡುವಾಗ ಪದೇ ಪದೇ ಅಂಗೈಯಲ್ಲಿ ನೀರನ್ನು ಹಾಕಿ ಇದೇ ಮಂತ್ರವನ್ನು ಹೇಳುತ್ತಾರೆ. ಕಾರಣ ಮಂತ್ರವೆಲ್ಲಾ ಸಂಸ್ಕೃತ. ಅದನ್ನು ಉಚ್ಚಾರ ಮಾಡಬೇಕಾದರೆ ನಾಲಗೆ ತುಟಿ ಗಂಟಲಿಗೆ ವ್ಯಾಯಾಮ ಬೇಕು, ಮಂತ್ರ ಗಂಟಲಿನಿಂದ ಸರಿಯಾಗಿ ಹೊರಡಬೇಕಾದರೆ ನೀರು ಗಂಟಲನ್ನು ತಂಪು ಮಾಡುತ್ತಲೇ ಇರಬೇಕು.


ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯುವ ಕಾರಣ ಅಂಗೈಯಲ್ಲಿ ಇರುವ ವಿದುಚ್ಛಕ್ತಿಯ ಸ್ವಲ್ಪ ಭಾಗ ನೀರಿನಲ್ಲಿ ಬೆರೆಯುತ್ತದೆ, ಆ ನೀರನ್ನು ಕುಡಿದರೆ ಅದು ಹೊಟ್ಟೆಗೆ ಹೋಗಿ ಅಲ್ಲಿರುವ ವಿದ್ಯುತ್ತಿನ ಜೊತೆ ಬೆರೆತು ಶರೀರದಾದ್ಯಂತವೂ ಒಂದೇ ಸಮನೆ ಇರುವಂತೆ ಮಾಡುತ್ತದೆ. ಈ ಕಾರಣದಿಂದ ನೀರನ್ನು ಅಂಗೈಯಲ್ಲಿಯೇ ಹಾಕಿ ಕುಡಿಯಬೇಕು.


(ಟಿಪ್ಪಣಿ - ವೈಜ್ಞಾನಿಕ ಕಾರಣಗಳಿಗಿಂತ ಆಧ್ಯಾತ್ಮಿಕ ಲಾಭಕ್ಕಾಗಿ, ಈಶ್ವರಪ್ರಾಪ್ತಿಗಾಗಿ, ಭಾವದಿಂದ ಇಂತಹ ಕೃತಿಗಳನ್ನು ಮಾಡುವುದು ಅತ್ಯಂತ ಶ್ರೇಷ್ಠವಾಗಿದೆ. ಏಕೆಂದರೆ ವ್ಯಾಯಮ ಆಗಲು ಮಂತ್ರಗಳನ್ನೇ ಹೇಳಬೇಕೆಂದಿಲ್ಲ. ಯೋಗಾಸನಗಳನ್ನು ಮಾಡಿದರೂ ಶರೀರದ ವ್ಯಾಯಾಮವಾಗುತ್ತದೆ. ಇಂದಿನ ಆಧುನಿಕ ಜನರು, ಬುದ್ಧಿಜೀವಿ (?) ಗಳು ಎಲ್ಲ ವಿಷಯವನ್ನು ಕೇವಲ ವಿಜ್ಞಾನವನ್ನು ಹೋಲಿಸಿಯೇ ನೋಡುತ್ತಾರೆ. ಯಾವುದು ತಮ್ಮ ಬುದ್ಧಿಶಕ್ತಿಗೆ ನಿಲುಕುವುದಿಲ್ಲವೋ, ಅದನ್ನು ನಂಬುವುದಿಲ್ಲ. ಇಂತಹ ವೈಜ್ಞಾನಿಕ ವಿವರಣೆಗಳಿಂದ ಮನುಷ್ಯನಿಗೆ ಕೇವಲ ಶಾರೀರಿಕ ಲಾಭವಾಗುತ್ತದೆ. ಇದು ಕನಿಷ್ಠ ಸ್ತರದ್ದಾಗಿದೆ. ಈ ಬ್ಲಾಗ್ನಲ್ಲಿ ಹೆಚ್ಚಾಗಿ ಎಲ್ಲ ವಿಷಯವನ್ನೂ ಆಧ್ಯಾತ್ಮಿಕ ಕಾರಣಗಳ ಸಹಿತ ವಿವರಿಸಿದೆ. ಆದರೂ ಜನರಿಗೆ ಕನಿಷ್ಠ ನಂಬಿಕೆಯಾದರೂ ಹುಟ್ಟಲಿ ಎಂಬ ಉದ್ದೇಶದಿಂದ ಈ ವಿಷಯವನ್ನು ಹಾಕಿದ್ದೇವೆ. ಹಾಗಾಗಿ ಆಸ್ತಿಕ ಬಂಧುಗಳು ಆಚಮನ ಮಾಡುವಾಗ ಶರೀರಕ್ಕಾಗುವ ವ್ಯಾಯಾಮದ ಕಡೆ ಗಮನ ಕೊಡದೇ, ಕೇಶವ, ನಾರಾಯಣ, ಮಾಧವ ಎಂಬ ನಾಮದಲ್ಲಿರುವ ಭಗವಂತನನ್ನು ಸ್ಮರಿಸಬೇಕು. ಇದರಿಂದಲೇ ನಮ್ಮ ನಿಜವಾದ ಆಧ್ಯಾತ್ಮಿಕ ಉನ್ನತಿಯಾಗಲು ಸಾಧ್ಯ...

ಧರ್ಮ ಗ್ರಂಥಕ್ಕೆ ಜಯವಾಗಲಿ
***** *

ಆಚಮನ ವಿಧಿ 
ಶ್ರೀ ಗುರುಭ್ಯೋ ನಮಃ
   ಮೊದಲಿಗೆ ಬ್ರಾಹ್ಮಣ ಜನ್ಮ ಪಡೆದಂತಹ ನಾವು ಎಷ್ಟೋ ಪುಣ್ಯವನ್ನು ಮಾಡಿರತಕ್ಕವರೇ , ಈ ಜನ್ಮದ ಸಾರ್ಥಕತೆ ಮಾಡಿಕೊಳ್ಳಲು ನಾವು ನಮ್ಮ ಜೀವನದ ಮುಖ್ಯ ಸಂಸ್ಕಾರವಾದ ಸಂಧ್ಯಾವಂದನೆ ಮಾಡತಕ್ಕದ್ದು , ಈ ಸಂಧ್ಯೆ ಕ್ರಿಯೆಯಲ್ಲಿ ಆಚಮನ ವಿಧಿಯ ಕುರಿತು ನಾನು ಇಂದು ಇಲ್ಲಿ ತಿಳಿಸಿಕೊಡುತ್ತಿದ್ದೇನೆ .
ಆಚಮನ ಎಂದರೆ ಒಂದು ಶುದ್ಧೀಕರಣ ಪ್ರಕ್ರಿಯೆ, ನಾವು  ಸಂಧ್ಯಾವಂದನೆ ಕ್ರಿಯೆಗೂ ಮೊದಲು ನಮ್ಮ ಅಂತರಂಗ ಹಾಗು ಬಹಿರಂಗ ಶುದ್ದಿ ಮಾಡಿಕೊಳ್ಳುವ ಪ್ರಕ್ರಿಯೆ .ಈ  ಮಂತ್ರಚಾಮನೆ ಕ್ರಿಯೆಯಿಂದ ದೈಹಿಕ ಹಾಗು ಮಾನಸಿಕ ತೊಂದರೆಗಳಿಂದ ಮುಕ್ತಿ ಇರುವುದು. ಹಾಗು ಇದನ್ನು (ನಾಮ ತ್ರೆಯಿ ವಿದ್ಯೆ ) ಎಂದರೆ ಮೂರು ಹೆಸರಿನ ಆರಾಧನೆ ಎಂದು ಕರೆಯಲ್ಪಡುತ್ತದೆ .
ವಿಧಿ : 
          ಕೈಕಾಲು ಚೆನ್ನಾಗಿ ತೊಳೆದುಕೊಂಡು , ಪೂರ್ವಾಭಿಮುಖವಾಗಿ ಕುಳಿತು ಶುದ್ಧ ಜಾಗದಲ್ಲಿ ಕುಳಿತು ಬಲ ತೋಳನ್ನು ಮಂಡಿಯ ಮಧ್ಯದಲ್ಲಿಟ್ಟುಕೊಂಡು ಯಜ್ನೋಪಯುಕ್ತನಾಗಿ ಕಾಲುಗಳನ್ನು ಹೆಚ್ಚು ಕಡಿಮೆ ಇಲ್ಲದೆ ಸಮ ಮಾಡಿಕೊಂಡು , ಕುಕ್ಕುರು ಕಾಲಿನಲ್ಲಿ ಕುಳಿತು , ಜುಟ್ಟು ಗಂಟು ಹಾಕಿ ಆಚಮನ ಮಾಡಬೇಕು .
ಆಚಮನ ಮಾಡಬೇಕಾದರೆ ಪಾಲಿಸಬೇಕಾದ ನಿಯಮಗಳು::
$-ನಿಂತು ಆಚಮನ ಮಾಡಬಾರದು 
$-ಬೇರೆಯವರ ನೋಡಬಾರದು , ಮಾತನಾಡಬಾರದು 
$-ಕ್ರಿಯೆಯಲ್ಲಿ ಅವಸರ ಪಡಬಾರದು 
$-ಕೋಪಯುಕ್ತನಾಗಿರಬಾರದು 
$-ಆಚಮನದ ನೀರು ಶುದ್ಧವಾಗಿ   ಮಡಿಯುಕ್ತವಾಗಿರಬೇಕು 
$-ನೀರು , ಬಿಸಿಯಾಗಿ, ನೊರೆಯಿಂದ,ರುಚಿಯುಕ್ತ, ವಾಸನೆಯುಕ್ತವಾಗಿ ಇರಬಾರದು 
$-ನೊರೆಯುಕ್ತ ನೀರಿನಿಂದ ಆಚಮನ ಮಾಡಿದರೆ ಅದು ಮದ್ಯಕ್ಕೆ ಸಮಾನ .

ಬ್ರಾಹ್ಮಣನ ಜೀವನದಲ್ಲಿ ತೀರ್ಥಗಳ ಮಹತ್ವ ಹಾಗು ಅವುಗಳ ವಿಧಿ ::
ಬ್ರಾಹ್ಮಣನ ಬಲಗೈನಲ್ಲಿ  ದೇವತೀರ್ಥ , ಪಿತೃತೀರ್ಥ , ಬ್ರಹ್ಮ ತೀರ್ಥ , ಪ್ರಜಾಪತಿ ತೀರ್ಥ, ಹಾಗು ಸೌಮ್ಯ ತೀರ್ಥ ಎಂಬ 5  ವಿಧವಾದ ತೀರ್ಥಗಳು ಅಡಕವಾಗಿ ಇರುತ್ತವೆ .
ಎಲ್ಲಿ ಈ ತೀರ್ಥಗಳು ಅಡಕವಾಗಿರುತ್ತವೆ.
 
(1 ) ಬ್ರಹ್ಮ ತೀರ್ಥ -- ಅಂಗುಷ್ಠದ ಮೇಲಿಂದ ಬರತ್ತಕ್ಕ ನೀರು (ಆಚಮನ ವಿಧಿಯಲ್ಲಿ )
(2 ) ಪ್ರಜಾಪತಿ ತೀರ್ಥ --ಕಿರುಬೆರಳಿನ ತುಧಿಯಿಂದ ಬರುವಂಥದ್ದು (ಸೋಮದೇವತೆಗೆ , ಅಣ್ಣ ನಿರ್ವಪಣ, ಅಗ್ನಿಗೆ ಗಾಳಿ ಹಾಕುವುದು ಇತ್ಯಾದಿ  )
(3 )ದೈವ ತೀರ್ಥ --ಅಂಗುಲಿಯ ತುಧಿಯಿಂದ ಬರುವಂಥದ್ದು(ದೈವ ಕಾರ್ಯಕ್ಕೆ ಉತ್ತಮ , ವೈಶ್ವದೇವ , ಭೂತ ಯಜ್ಞಾದಿ ಇತ್ಯಾದಿಗಳಲ್ಲಿ ಮಾಡತಕ್ಕದ್ದು ) 
(4 )ಪಿತೃ ತೀರ್ಥ --ತರ್ಜನಿ ಹಾಗು ಅಂಗುಷ್ಟ ಮಧ್ಯೆಯ ರೇಖೆ ಕೊನೆಗೆ ಬರುವುದು (ಪಿತೃ ದೇವತೆಗಳಿಗೆ ತರ್ಪಣ ನೀಡುವುದು )
(5 ) ಸೌಮ್ಯ ತೀರ್ಥ --ಅಂಗೈ ಮಧ್ಯೆ ಇರತಕ್ಕಂಥದ್ದು(ಕಮಂಡಲದಿಂದ ಮಾಡುವ ಆಚಮನ)
ಆಚಮನ  ವಿಧಿ :
         ಹೇಗೆ ಮಾಡಬೇಕು : ( ಕೈ ಬೆರಳು ಒಟ್ಟಾಗಿ ಸೇರಿಸಿ , ಮಂತ್ರಸಮೇತ ಜಲ ಸೇವಿಸುವಾಗ  ಬಾಯಲ್ಲಿ ಸದ್ದಾಗದಂತೆ , ಮೂರು ಬಾರಿಯೂ ಏಕಾಗ್ರಚಿತ್ತನಾಗಿ  ಮಾಡಬೇಕು)
ಮೊದಲಬಾರಿ ಭುಜಿಸಿದಾಗ ಋಗ್ವೇದವು 
ಎರಡನೇ ಬಾರಿ ಭುಜಿಸಿದಾಗ  ಯಜುರ್ವೇದವು 
ಮೂರನೇ ಬಾರಿ ಭುಜಿಸಿದಾಗ  ಸಾಮವೇದವು 
ದಕ್ಷಿಣ  ಅಂಗುಷ್ಟ ಮೂಲದಿಂದ ಮೊದಲ ಬಾರಿ ಮುಖ ಮಾರ್ಜನ ಮಾಡಿದರೆ ಅಥರ್ವಣ ವೇದವು ತೃಪ್ತಿ ಆಗುತ್ತವೆ.
ಎರಡನೇ ಬಾರಿ ಮುಖಮಾರ್ಜನೆ ಮಾಡಿದರೆ ಇತಿಹಾಸ , ಪುರಾಣಗಳು ಲಭ್ಯವಾಗುವವು .
ಆಚಮನ ವಿಧಿಯ ಜಲ ಪ್ರೋಕ್ಷಣೆ  ಹಾಗು ಅವುಗಳ ಮಹತ್ವ 
ತಲೆಗೆ ಪ್ರೋಕ್ಷಣೆ ಮಾಡುವುದರಿಂದ ---ರುದ್ರ 
ಶಿಖಾ ಪ್ರೋಕ್ಷಣೆ ಮಾಡುವುದರಿಂದ-- ಋಷಿಗಳು ತೃಪ್ತಿ ಪಡುತ್ತಾರೆ 
ಕಣ್ಣು ಸ್ಪರ್ಶದಿಂದ--ಸೂರ್ಯ ಸಂಪ್ರೀತನಾಗುತ್ತಾನೆ 
ನಾಸಿಕ  ಸ್ಪರ್ಶದಿಂದ --ವಾಯು ಸಂಪ್ರೀತನಾಗುತ್ತಾನೆ 
ಶ್ರೋತೃಗಳ ಸ್ಪರ್ಶದಿಂದ-- ದಿಕ್ಕುಗಳ ತೃಪ್ತಿ.
ತೋಳುಗಳಿಗೆ ಪ್ರೋಕ್ಷಿಣೆಯಿಂದ --ಯಮ, ಕುಬೇರ,ವರುಣ,ಇಂದ್ರ,ಅಗ್ನಿ ತೃಪ್ತಿ ಪಡುತ್ತಾರೆ.
ನಾಭಿ ಸ್ಪರ್ಶದಿಂದ ---ಪ್ರಾಣ ಗ್ರಂಥಿಗಳು ತೃಪ್ತಿಯಾಗುತ್ತವೆ 
ಪಾದಗಳ ಪ್ರೋಕ್ಷಣೆಯಿಂದ --ಮಹಾವಿಷ್ಣು ಸಂಪ್ರೀತನಾಗುತ್ತಾನೆ .
ಭೂಸ್ಪರ್ಶ ಮಾಡಿದ ನೀರಿಂದ ದೇಹ ಪ್ರೋಕ್ಷಣೆ ಮಾಡಿದರೆ --- ವಾಸುಕಿ ಹಾಗು ನಾಗರಗಳು ತೃಪ್ತಿ ಪಡುತ್ತಾರೆ .
ಇಂದ್ರಿಯಗಳ ತೃಪ್ತಿ ಪಡಿಸುವ ವಿಧಾನ 
(1 ) ಹೆಬ್ಬೆಟ್ಟು ಹಾಗು ತರ್ಜನಿ ಸೇರಿಸಿ ಮಾಡೋ ಪ್ರೋಕ್ಷಣೆ --- 2  ಕಣ್ಣು ಶುದ್ಧವಾಗುತ್ತದೆ 
(2 )ಹೆಬ್ಬೆಟ್ಟು ಹಾಗು ಅನಾಮಿಕ ಸೇರಿಸಿ ಮಾಡೋ ಪ್ರೋಕ್ಷಣೆ --ಮೂಗು ಶುದ್ಧವಾಗುತ್ತದೆ 
(3 )ಮಧ್ಯಮ ಹಾಗು ಅಂಗುಷ್ಠದಿಂದ ಮಾಡಿದ ಪ್ರೋಕ್ಷಣೆ -- ಬಾಯಿ ಶುದ್ಧವಾಗುತ್ತದೆ 
(4 )ಕನಿಷ್ಠ ಹಾಗು ಅಂಗುಷ್ಟ ಸೇರಿ ಮಾಡಿ ಪ್ರೋಕ್ಷಣೆ --ಕಿವಿಗಳು ಶುದ್ಧವಾಗುತ್ತವೆ 
ನಂತರದಲ್ಲಿ ಎಲ್ಲ ಬೆರಳುಗಳಲಿಂದ ಭುಜವನ್ನು , ಅಂಗುಷ್ಠದಿಂದ ನಾಭಿ ಮಂಡಲ ಸ್ಪರ್ಶಿಸಬೇಕು , ಕೊನೆಗೆ ಬೆರಳುಗಳಿಂದ ಶಿರವನ್ನು ಸ್ಪರ್ಶಿಸಬೇಕು .
ಬ್ರಾಹ್ಮಣನ ಕೈ ಬೆರಳುಗಳ ತತ್ವಗಳು 
ಅಂಗುಷ್ಟ -- ಅಗ್ನಿ 
ತರ್ಜನಿ-- ವಾಯು 
ಅನಾಮಿಕ --ಸೂರ್ಯ 
ಮಧ್ಯಮ --ಬ್ರಹ್ಮ ದೇವತೆ 
ಕನಿಷ್ಠಕ --ಇಂದ್ರ 
ಎಂದು ತಿಳಿಯಬೇಕು 
ಇದೆ ಕಾರಣದಿಂದ ಬ್ರಾಹ್ಮಣ ಪೂಜಾಯೋಗ್ಯನೂ  ಹಾಗು ಸರ್ವದಯಾಮಯನು ಆಗಿರುವನು .
ಆಚಮನ ಮಾಡಿದಾಗ ನೀರು ಹೃದಯ ಬಾಗ ಸೇರಿದರೆ ಬ್ರಾಹ್ಮಣ ಪರಿಪೂರ್ಣನಾಗಿ ಶುದ್ಧನಾಗುತ್ತಾನೆ .
ಬ್ರಾಹ್ಮಣನ   ಕೈಗಳ ಮಧ್ಯೆ ರೇಖೆಗಳನ್ನು ಗಂಗಾಧಿ ಸಮಸ್ತ ನಧಿಗಳೆಂದು ತಿಳಿಯತಕ್ಕದ್ದು , ಬೆರಳುಗಳ ಗಿಣ್ಣಿನ ಗೆರೆಗಳು ಪರ್ವತ ಎಂದು ತಿಳಿಯಬೇಕು 
ಇದೆ ಕಾರಣಕ್ಕೆ ಬ್ರಾಹ್ಮಣನ ಬಲಗೈ ಸರ್ವ ದೇವಮಯವಾದುದು  
ಇದು ಆಚಮನ ವಿಧಿ
***********


No comments:

Post a Comment