SEARCH HERE

Tuesday, 1 January 2019

ಸ್ವಾತಿ ಮಳೆ swati male rain


October/November ನಲ್ಲಿ ಸ್ವಾತಿ ಮಳೆ ಬರುತ್ತೆ. ಸ್ವಾತಿ ಮಳೆಯ ವಿಶೇಷತೆ ಗೊತ್ತಾ ? 😊

ನಮ್ಮ ಪೂರ್ವಜರು ಹಾಲನ್ನು ಹೆಪ್ಪು ಹಾಕಿ ಮೊಸರು ಮಾಡಲು ಸ್ವಾತಿ ಮಳೆಯ ನೀರನ್ನು ಉಪಯೋಗಿಸುತ್ತಿದ್ದರು. ಈ ರೀತಿ ಸ್ವಾತಿ ಮಳೆಯ ನೀರಿನಿಂದ ಹೆಪ್ಪು ಹಾಕಿದ ಮೊಸರನ್ನು ನಮ್ಮ ಜನರು ಬಳಸುತ್ತಿದ್ದರು. ಮತ್ತು ಮುಂದಿನ ವರ್ಷ ಬರೋ ಸ್ವಾತಿ ಮಳೆವರೆಗೂ ಈ ಮಳೆಯಿಂದ ಮಾಡಿದ ಮೊಸರನ್ನು ಸಂರಕ್ಷಿಸಿ ಹೆಪ್ಪು ಹಾಕಲು ಉಪಯೋಗಿಸುತ್ತಿದ್ದರು. ಸ್ವಾತಿ ಮಳೆಯ ನೀರಿನಲ್ಲಿ ಔಷದೀಯ ಗುಣ ಇದೆ. ಸ್ವಾತಿ ಮಳೆಯ ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂರಕ್ಷಿಸಿ ನಮ್ಮ ಪೂರ್ವಜರು ತಾವು ಬೆಳೆದ ಬೆಳೆಗಳಿಗೆ ರೋಗಬಂದರೆ ಬೆಳೆಗಳಿಗೆ ಬಂದ ರೋಗವನ್ನು ನಿಯಂತ್ರಣ ಮಾಡಲು ಔಷದಿಗೆ ಸ್ವಾತಿ ಮಳೆಯ ನೀರನ್ನು ಬಳಸುತ್ತಿದ್ದರು. ಸ್ವಾತಿ ಮಳೆಯ ನೀರನ್ನು ತಾಮ್ರದ ಪಾತ್ರೆಯಲ್ಲಿ ಸಂರಕ್ಷಿಸಿ ಇಟ್ಟರೆ ಈ ನೀರು ಎಷ್ಟು ವರ್ಷ ಆದರೂ ಈ ನೀರಿನಲ್ಲಿ ಹುಳಗಳು ಆಗುವುದಿಲ್ಲ ಮತ್ತು ನೀರು ಕೆಡುವುದಿಲ್ಲ. ಆದ್ದರಿಂದ ನಮ್ಮ ಪೂರ್ವಜರು ಸ್ವಾತಿ ಮಳೆ ಯ ನೀರನ್ನು ಸಂರಕ್ಷಿಸಿ ಇಡುತ್ತಿದ್ದರು. ಸ್ವಾತಿ ಮಳೆಯು ಬರುವ ದಿನಗಳಲ್ಲಿ ನಮ್ಮ ಪೂರ್ವಜರು ತಮ್ಮ ಮನೆಯಲ್ಲಿ ಇದ್ದ ರೇಷ್ಮೆ ವಸ್ತ್ರ ಮತ್ತು ರೇಷ್ಮೆ ಸೀರೆಗಳನ್ನು ಬಿಸಿಲಿಗೆ ಹಾಕುತ್ತಿದ್ದರು ಯಾಕೆ ಅಂದರೆ ಈ ಸ್ವಾತಿ ಮಳೆಯು ಬರುವ ದಿನಗಳಲ್ಲಿ ರೇಷ್ಮೆ ಸೀರೆಗಳನ್ನು ಬಿಸಿಲಿಗೆ ಹಾಕಿದರೆ ರೇಷ್ಮೆ ಸೀರೆಗಳಿಗೆ ಹುಳಗಳು ಬರುತ್ತ ಇರಲಿಲ್ಲ ಮತ್ತು ರೇಷ್ಮೆ ಸೀರೆಗಳು ಬೇಗ ಹಾಳಾಗುತ್ತಿರಲಿಲ್ಲ.

😊 ಹಾಲನ್ನು ಹೆಪ್ಪು ಹಾಕಿ ಮೊಸರು ಮಾಡಲು ಅಥವಾ ಹೆಪ್ಪು ಹಾಕಲು ಮಜ್ಜಿಗೆ ಬಳಸುವುದು ಪ್ರಶಸ್ತವಾಗಿದ್ದು ( ಉತ್ತಮವಾದ , ಶ್ರೇಷ್ಠವಾದ ). ಸ್ವಾತಿ ಮಳೆಯ ನೀರು , ನಿಂಬೆಹಣ್ಣಿನ ರಸ ಮುಂತಾದ ಹುಳಿ ಪದಾರ್ಥಗಳನ್ನು ಬಳಸಿ ಮೊಸರು ಮಾಡುವ ಪದ್ಧತಿಯೂ ರೂಢಿಯಲ್ಲಿದೆ . ಹಳ್ಳಿಗಳಲ್ಲಿ ಜನರು ಮಾತಾಡಿಕೊಳ್ಳುತ್ತಾ ಇರುತ್ತಾರೆ ಸ್ವಾತಿ ಮತ್ತು ವಿಶಾಖ ಮಳೆ ಬಂದರೆ ಬೆಳೆಗಳಿಗೆ ರೋಗ ಬರುವುದಿಲ್ಲ ಮತ್ತು ಬೆಳೆಗಳಿಗೆ ಬಂದ ರೋಗ ಹೋಗುತ್ತದೆ ಅಂತ. ಸ್ವಾತಿ ಮಳೆಯ ನೀರನ್ನು ತಾಮ್ರದ ಪಾತ್ರೆ , ತಾಮ್ರದ ಬಿಂದಿಗೆಯಲ್ಲಿ ಸಂಗ್ರಹಿಸಿ ಮತ್ತು ನಮ್ಮ ದೇಸಿ ಹಸುವಿನ ಹಾಲಿನಿಂದ ಮಜ್ಜಿಗೆ ಮಾಡಿ ಮಜ್ಜಿಗೆಯನ್ನು ತಾಮ್ರದ ಪಾತ್ರೆಯಲ್ಲಿ ಸ್ವಲ್ಪ ದಿನ ಇಟ್ಟು ಸ್ವಾತಿ ನೀರು ಮತ್ತು ತಾಮ್ರದ ಬಿಂದಿಗೆಯಲ್ಲಿ ಇಟ್ಟ ಹುಳಿ ಮಜ್ಜಿಗೆಯನ್ನು ಸೇರಿಸಿ ಬೆಳೆಗಳಿಗೆ ಸಿಂಪಡಿಸಿದರೆ ಬೆಳೆಗಳಿಗೆ ಬಂದ ರೋಗವನ್ನು ನಿಯಂತ್ರಣ ಮಾಡುತ್ತದೆ. ಹಿಂದಿನ ಕಾಲದ ಅಜ್ಜಿಯಂದಿರು , ತಿಳಿದ ಜನರು ಹೇಳುತ್ತಿದ್ದರು ಮನೆಯಲ್ಲಿ ಹುಳಿ ಮಜ್ಜಿಗೆ ಇದ್ದರೆ ಹುಳಿ ಮಜ್ಜಿಗೆಯನ್ನು ಕರಿಬೇವು ಮರಕ್ಕೆ ಹಾಕಿ ಅಥವಾ ಸಿಂಪಡಿಸಿ ಅಂತ ಯಾಕೆಂದರೆ ಮಜ್ಜಿಗೆಯಲ್ಲಿ ಗಿಡಗಳಿಗೆ ಬರುವ ರೋಗಗಳನ್ನು ನಿಯಂತ್ರಣ ಮಾಡುವ ಶಕ್ತಿ ಇದೆ
***

ಸ್ವಾತಿ ಮಹಾನಕ್ಷತ್ರ ಮಳೆನೀರು ಮಹತ್ವ

 ನಮ್ಮ ಹಿರಿಯರು ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವನ್ನು ಅರಿತಿದ್ದರು. ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ಸ್ವಾತಿ ಮಳೆನೀರನ್ನು ಸಂಗ್ರಹಿಸಿ ಇರಿಸುತ್ತಿದ್ದುದು ನೆನಪಿದೆ. ಅದಕ್ಕಿರುವ ಬಹಳಷ್ಟು ಔಷಧೀಯ ಗುಣಗಳನ್ನು ಈಗಿನವರು ತಿಳಿದಿರುವುದೇ ಅಪರೂಪ. ಇದ್ದರೂ, ನೀರನ್ನು ಸಂಗ್ರಹಿಸಿ ಇಡಲು ಸಮಯವಾದರೂ ಎಲ್ಲಿದೆ..??
ಈ ದಿನಗಳಲ್ಲಿ ಬೀಳುವ ಮಳೆ ನೀರು ಸಾದಾ ನೀರಾಗಿರದೆ, ಬಹಳ ಮಹತ್ವ ಉಳ್ಳದ್ದಾಗಿದೆ. ಈ ನೀರನ್ನು ಶುದ್ಧವಾಗಿ ಸಂಗ್ರಹಿಸುವುದೂ  ಒಂದು ನಾಜೂಕಿನ ಕೆಲಸ. ಮಳೆಯ ನೀರು ನೆಲಕ್ಕೆ ಬೀಳುವ ಮೊದಲೇ ಸ್ವಚ್ಛವಾದ, ಅಗಲವಾದ ತಾಮ್ರ, ಮಣ್ಣು, ಅಥವಾ ಸ್ಟೀಲ್ ಪಾತ್ರೆಯನ್ನು ನೆಲದಿಂದ ಸ್ವಲ್ಪ ಎತ್ತರದಲ್ಲಿಟ್ಟು, ಆಕಾಶದಿಂದ ನೇರವಾಗಿ ಬೀಳುವ ನೀರನ್ನು ಸಂಗ್ರಹಿಸಬೇಕು. ನಂತರ ಶುದ್ಧ ಹತ್ತಿ ಬಟ್ಟೆಯಲ್ಲಿ ಸೋಸಿ ಗಾಜಿನ ಬಾಟಲಿಯಲ್ಲಿ ಗಾಳಿಯಾಡದಂತೆ ಇಟ್ಟರೆ ವರ್ಷಗಟ್ಟಲೆ ಹಾಳಾಗುವುದಿಲ್ಲ..!! 6 ವರ್ಷಗಳಷ್ಟು ಹಳೆಯ ನೀರು, ಒಂದಿನಿತೂ ಕೆಡದೆ ಅತ್ಯಂತ ಪರಿಶುದ್ಧವಾಗಿದೆ ಎಂದರೆ ನಂಬುವಿರಾ?!
 ಚಿಪ್ಪಿನೊಳಗೆ ಬಿದ್ದ  ಸ್ವಾತಿ ಮಹಾನಕ್ಷತ್ರದ ಮಳೆ ನೀರಿನ ಒಂದು ಹನಿಯಿಂದ ಅನರ್ಘ್ಯ ಮುತ್ತು ರೂಪುಗೊಳ್ಳುವುದೆಂದು ಕೇಳಿದ್ದೇವೆ. ಅದೇ ನೀರು ಕೆಲವು ರೋಗಗಳಿಗೂ ದಿವ್ಯ ಔಷಧಿಯಾಗಿರುವುದು ವಿಶೇಷವಲ್ಲವೇ..? ಸ್ವಾತಿ ಮಳೆನೀರಿನ ಮಹತ್ವವು ಸ್ವತ:  ನನ್ನ ಅನುಭವಕ್ಕೆ ಬರುವಂತಹ ಸುಯೋಗ ಒದಗಿ ಬಂದುದು ನಿಜವಾಗಿಯೂ ಆಶ್ಚರ್ಯ! ಹಲವು ವರ್ಷಗಳ ಹಿಂದೆ ನನ್ನ ಎಡ ಕೈಯ ಕಿರುಬೆರಳಿನ ಉಗುರಿನಲ್ಲಿಯ ನೋವು ಯಾವ ರೀತಿಯ ಔಷಧೋಪಚಾರಗಳಿಗೂ ಜಪ್ಪಯ್ಯ ಎಂದರೂ ಜಗ್ಗಲಿಲ್ಲ.. ಹೀಗೇ 6ತಿಂಗಳುಗಳು ಕಳೆದವು. ಒಮ್ಮೆ, ಸಂಗ್ರಹಿಸಿಟ್ಟ ಸ್ವಾತಿ ನೀರನ್ನು ಯಾಕೆ ಉಪಯೋಗಿಸಿ ನೋಡಬಾರದು ಎಂದುಕೊಂಡು, ಸಮಯ ಸಿಕ್ಕಾಗಲೆಲ್ಲಾ ನೋವಿರುವ ಉಗುರಿಗೆ  ಹಾಕುತ್ತಾ ಬಂದಾಗ ನಿಧಾನವಾಗಿ ನೋವು ಕಡಿಮೆಯಾಗಿ, ಆರೋಗ್ಯವಾದ ಉಗುರು ಮೂಡಿ ಬರಲು ಪ್ರಾರಂಭವಾಯಿತು. ಸುಮಾರು ಎರಡು ತಿಂಗಳುಗಳಲ್ಲಿ ಸರಿಯಾದ ಹೊಸ ಉಗುರು ಪೂರ್ತಿ ಬಂದಿತ್ತು..ಹಾಗೆಯೇ ಸಣ್ಣ ಪುಟ್ಟ ಕಿವಿ ನೋವು ಹಾಗೂ ಕಣ್ಣು ನೋವುಗಳನ್ನು ಗುಣಪಡಿಸುವಲ್ಲಿ ಕೂಡಾ ಇದು ಬಹಳ ಸಹಕಾರಿಯಾಗಿದೆ. ಇದು ಮಾತ್ರವಲ್ಲದೆ, ಹಾಲಿಗೆ ಹೆಪ್ಪು ಹಾಕಲು ಉಪಯೋಗಿಸಿ, ವರ್ಷಕ್ಕೊಮ್ಮೆ ಹೊಸದಾಗಿ ಮೊಸರು ಮಾಡಬಹುದು. ಇದನ್ನು ಬೇರೆ ಬೇರೆ ವಿಧಾನಗಳಲ್ಲಿ ಪ್ರಯೋಗಿಸಿ, ಇದರ ಮೇಲ್ಮೆಯನ್ನು ಸಾಧಿಸಿ ತೋರಿರುವರು. ಇದನ್ನು ಹೆಪ್ಪು ಹಾಕಿ ತಯಾರಿಸಿದ ಮೊಸರು ವಿಶೇಷ ರುಚಿ ಹಾಗೂ ಸುವಾಸನೆಯನ್ನು ಕೂಡಾ ಹೊಂದಿರುತ್ತದೆ ಎಂಬುದು ನನ್ನ ಅನುಭವವೂ ಹೌದು.  ವರ್ಷಕ್ಕೊಮ್ಮೆ ರೇಶ್ಮೆ ಸೀರೆಗಳನ್ನು ಈ ಸಮಯದಲ್ಲಿ ಎಳೆ ಬಿಸಿಲಿಗೆ ಒಂದು ತಾಸು ಅಥವಾ ಮನೆಯೊಳಗೆ ನೆರಳಿನಲ್ಲಿ ನಾಲ್ಕೈದು ತಾಸು ಹರಡಿ ಗಾಳಿಯಾಡಲು ಹಾಕಿದರೆ ವರ್ಷವಿಡೀ ಸೀರೆಗೆ ಕೀಟ ಬಾಧೆ ಇರುವುದಿಲ್ಲ. ನಾನು ಇದನ್ನು ಪ್ರತಿ ವರ್ಷ ತಪ್ಪದೆ ಮಾಡುತ್ತಾ ಬಂದಿರುವೆ. ಅಲ್ಲದೆ ಈ ಸಮಯದಲ್ಲಿ ನೆಟ್ಟ ಗಿಡಗಳು ಚೆನ್ನಾಗಿ ಬದುಕಿದ ನಿದರ್ಶನ ನನ್ನಲ್ಲಿದೆ. ಸ್ವಾತಿ ನೀರನ್ನು ಎಡೆಬಿಡದೆ ಉಪಯೋಗಿಸಿ, ಸಾಯುವಂತಿದ್ದ ಎಳೆ ಟೊಮೆಟೊ ಗಿಡವೊಂದನ್ನು ಆರೋಗ್ಯವಂತ ಗಿಡವನ್ನಾಗಿಸಿ, ಅದರಲ್ಲಿ ಸಾಕಷ್ಟು ಟೊಮೆಟೊ ಹಣ್ಣನ್ನು ಪಡೆದ ಹೆಮ್ಮೆ ನನ್ನದು. ನನ್ನ ಈ ಸ್ವಾನುಭವಗಳನ್ನು ಇತರರಿಗೂ ತಿಳಿಸಿ, ಅವರು ಕೂಡಾ ಇದರ ಉಪಯೋಗ ಪಡೆಯುವಂತೆ ಆಗಬೇಕೆಂಬುದು. ವೈದ್ಯರ ಬಳಿ ಹೋಗಿ ಗುಣ ಕಾಣದ ಹಳೆ ಗಾಯಗಳು ಕೂಡಾ ಗುಣವಾದ ಬಗ್ಗೆ ಕೇಳಿ ಗೊತ್ತು. ಇನ್ನೂ ಒಂದು ವಿಶೇಷವೇನೆಂದರೆ, ಬೆಳೆಗಳಿಗೂ ಕೀಟ ನಿರೋಧಕವಾಗಿ ಈ ನೀರನ್ನು ಬಳಸಲ್ಪಡುತ್ತದೆ. ನನ್ನ ಗೆಳತಿಯೊಬ್ಬಳು, ಈ ಸಮಯದಲ್ಲಿ ಸಂಗ್ರಹಿಸಿದ ಮಳೆ ನೀರನ್ನು ದೊಡ್ಡ ಹಂಡೆಯಲ್ಲಿ ಸಂಗ್ರಹಿಸಿಟ್ಟು ಕೂದಲು ತೊಳೆಯಲು ಉಪಯೋಗಿಸಿ, ತನ್ನ ಉದ್ದವಾದ ದಟ್ಟ ಕೂದಲನ್ನು ಕಾಪಾಡಿಕೊಂಡಿದ್ದಳು. ಪುಟ್ಟ ಮಗುವಿಗೆ ಈ ನೀರು ತಾಯಿಯ ಎದೆ ಹಾಲಿನಷ್ಟೇ ಆರೋಗ್ಯಕರವೆಂದು ನನ್ನ ಹಿರಿಯರು ಹೇಳುತ್ತಿದ್ದ ನೆನಪು. 
ಹಲವಾರು ಮಂದಿ ಅವರ ಬಾಲ್ಯದ ನೆನಪುಗಳನ್ನು ಹಂಚಿಕೊಳ್ಳುತ್ತಾ, ಅವರಿಗೆ ಸ್ವತ: ಚರ್ಮ ಸುಟ್ಟಿರುವ ಸಂದರ್ಭದಲ್ಲಿ ಬೇರೆ ಔಷಧಿಗಳ ಜೊತೆಗೆ ಈ ಸ್ವಾತಿ ನೀರನ್ನೂ ಬಳಸಿದುದರ ಮಾಹಿತಿಯು ಅವರ ಹೆತ್ತವರಿಂದ ಲಭಿಸಿದುದನ್ನು ತಿಳಿಸಿದರು. ಇದರಿಂದಾಗಿ ಗಾಯದ ಕಲೆಗಳು ಅತ್ಯಲ್ಪ ಪ್ರಮಾಣದಲ್ಲಿ ಉಳಿದಿವೆ ಎಂಬುದನ್ನೂ ತಿಳಿಸಿದರು. ಕೆಲವರು ಈ ನೀರನ್ನು ಹೆಪ್ಪು ಹಾಕಿ ತಯಾರಿಸಿದ ರುಚಿಕರವಾದ ಮೊಸರಿನ ಕುರಿತು ಪ್ರಸ್ತಾವಿಸಿದರು. ಇನ್ನು ಕೆಲವರು ತಮ್ಮ ಸಂಶಯಗಳಿಗೆ ಪರಿಹಾರವನ್ನು ಸೂಚಿಸಲು ಬಿನ್ನವಿಸಿಕೊಂಡರು. ಅಂತೂ ನನ್ನ ಈ ಬರೆಹದ ಉಪಯೋಗವನ್ನು ಕೆಲವು ಮಂದಿಯಾದರೂ ಪಡೆದಿರುವುದು, ಈ ಬರೆಹದ ಉದ್ದೇಶವು ಸ್ವಲ್ಪ ಮಟ್ಟಿಗಾದರೂ ಈಡೇರಿತೆಂಬ ಸಾರ್ಥಕ ಭಾವವನ್ನು ಹೊಂದುವಂತೆ ಮಾಡಿದೆ.
 ಆದರೆ, ಹಿತ್ತಲ ಗಿಡ ಮದ್ದಲ್ಲವೆಂಬಂತೆ, ನಮಗೆ ತಿಳಿದ ಹಾಗೂ ತಿಳಿಯದ ಅತ್ಯದ್ಭುತ ಔಷಧೀಯ ಗುಣ ಹೊಂದಿದ, ಸುಲಭವಾಗಿ, ಉಚಿತವಾಗಿ ಸಿಗುವಂತಹ ಈ ಸ್ವಾತಿ ಮಹಾನಕ್ಷತ್ರದಲ್ಲಿ ಬರುವ ಮಳೆ ನೀರಿನ ಮಹತ್ವವು  ಬಹಳ ಪ್ರಚಾರ ಪಡೆದಿಲ್ಲ, ಹಾಗೆಯೇ ಯಾರಿಗೂ ತಿಳಿದಿಲ್ಲ. ನಮ್ಮ ಸರಕಾರವು ಇದರ ಬಗ್ಗೆ  ಸ್ವಲ್ಪ ಗಮನ ಹರಿಸಿ, ಇದರ ಗುಣಗಳ ಬಗ್ಗೆ ಸಂಶೋಧನೆ ನಡೆಸಿದರೆ, ಇದರಲ್ಲಿರುವ ರೋಗ ನಿರೋಧಕ ಔಷಧೀಯ ಗುಣಗಳನ್ನು ಪತ್ತೆ ಹಚ್ಚಬಹುದು. ಇದರಿಂದಾಗಿ ಕಡಿಮೆ ವೆಚ್ಚದಲ್ಲಿ ಹಲವು ರೋಗಗಳಿಗೆ ಔಷಧಿ ಸಿಗುವ ಸಂಭವವಿದೆ. ಇನ್ನು ಮುಂದಾದರೂ ಸ್ವಾತಿ ಮಹಾನಕ್ಷತ್ರದ  ಮಳೆ ನೀರಿನ  ಉಪಯುಕ್ತತೆಯ ಕುರಿತು ಎಲ್ಲರಿಗೂ ಅರಿವುಂಟಾಗಿ ಅದರ ಸದುಪಯೋಗವಾಗಲಿ ಎಂದು ಹಾರೈಸೋಣ..ಅಲ್ಲವೇ? 
****

No comments:

Post a Comment