👉ವಿಶ್ವವು ತ್ರಿಗುಣಾತ್ಮಕವಾದುದು. ತ್ರಿಗುಣಗಳೆಂದರೆ ಸತ್ತ್ವಗುಣ, ರಜೋಗುಣ ಮತ್ತು ತಮೋಗುಣ. ಈ ಮೂರು ಮುಖ್ಯ ಗುಣಗಳಿಂದ ಕೂಡಿದ ಜಗತ್ತಿನಲ್ಲಿ ಈ ಮೂರೂ ಗುಣಗಳು ಮಿಶ್ರವಾದ ಜೀವಿಗಳಿವೆ. ಇವುಗಳಿಂದ ಮಾನವರಾದ ನಾವೂ ಹೊರತಲ್ಲ.
ಪ್ರತಿಯೊಬ್ಬರ ಸ್ವಭಾವದ ಮೇಲೆ ಪ್ರಭಾವ ಬೀರುವ ಈ ಮೂರೂ ಗುಣಗಳು ನಮ್ಮ ಸ್ವಭಾವವು ಒಮ್ಮೊಮ್ಮೆ ಒಂದೊಂದು ರೀತಿ ತೋರಿಬರುವುದಕ್ಕೆ ಕಾರಣವಾಗಿವೆ. ಒಂದಕ್ಕಿಂದ ಒಂದು ಭಿನ್ನವಾದ ವೃತ್ತಿಗಳಿಂದ ಕೂಡಿದ ಇವು ಅದಕ್ಕನುಗುಣವಾಗಿ ನಮ್ಮ ನಡತೆಯಲ್ಲಿ ಬದಲಾವಣೆಯನ್ನುಂಟು ಮಾಡುತ್ತವೆ.
ಈ ಗುಣಗಳ ವೃತ್ತಿ ನಿರೂಪಣೆಯಾದರೂ ಏನು?
ಶಮ, ದಮ, ತಿತಿಕ್ಷಾ (ಮನಸ್ಸಿನ ಸಂಯಮ, ಇಂದ್ರಿಯನಿಗ್ರಹ, ಸಹಿಷ್ಣುತೆ) ವಿವೇಕ, ಸತ್ಯ, ದಯೆ, ಸ್ಮೃತಿ, ಸಂತೋಷ, ತ್ಯಾಗ, ವಿಷಯಗಳ ಕುರಿತು ಅನಿಚ್ಛೆ, ಲಜ್ಜೆ, ಆತ್ಮರತಿ, ದಾನ, ವಿನಯ, ಸರಳತೆ ಇವುಗಳು ಸತ್ತ್ವಗುಣದ ವೃತ್ತಿಗಳು.
ಇಚ್ಛೆ, ಪ್ರಯತ್ನ, ಮದ, ತೃಷ್ಣೆ, ಗರ್ವ, ಭೇದಬುದ್ಧಿ, ವಿಷಯಭೋಗ, ಯುದ್ಧಾದಿಗಳಲ್ಲಿ ಮದಜನಿತ ಉತ್ಸಾಹ, ಸ್ವಕೀರ್ತಿಯಲ್ಲಿ ಪ್ರೀತಿ, ಹಾಸ್ಯ, ಪರಾಕ್ರಮ, ಹಠ ಇವು ರಜೋಗುಣದ ವೃತ್ತಿಗಳಾಗಿವೆ.
ಇನ್ನು ಅಸಹಿಷ್ಣುತೆ, ಲೋಭ, ಸುಳ್ಳು, ಹಿಂಸೆ, ಯಾಚನೆ, ಡಂಭಾಚಾರ, ಕಲಹ, ಶೋಕ, ಮೋಹ, ವಿಷಾದ, ದೀನತೆ, ನಿದ್ದೆ, ಆಸೆ, ಭಯ, ಅಕರ್ಮಣ್ಯತೆ ಇವುಗಳೆಲ್ಲಾ ತಮೋಗುಣದ ವೃತ್ತಿಗಳಾಗಿವೆ.
ಈ ಮೂರೂ ಗುಣಗಳ ಸಮ್ಮಿಶ್ರದಿಂದಲೇ ಮಾನವನು ಧರ್ಮ, ಅರ್ಥ, ಕಾಮರೂಪೀ ಪುರುಷಾರ್ಥಗಳನ್ನು ಸಾಧಿಸುತ್ತಾನೆ. ಸತ್ತ್ವಗುಣದಿಂದ ಶ್ರದ್ಧೆಯೂ ರಜೋಗುಣದಿಂದ ಆಸಕ್ತಿಯೂ ತಮೋಗುಣದಿಂದ ಧನವೂ ಪ್ರಾಪ್ತಿಯಾಗುವುದರಿಂದ ಈ ಮೂರೂ ಗುಣಗಳ ಮಿಶ್ರಣದಿಂದಲೇ ಕ್ರಿಯೆಗಳು ನಡೆಯುತ್ತವೆ.
ನಮ್ಮಲ್ಲಿ ಯಾವ ಗುಣಜಾಗೃತ ಅಗಿದೆಯೆಂಬುದನ್ನು ತಿಳಿಯುವುದು ಹೇಗೆ?
ಸಾತ್ತ್ವಿಕ ಗುಣವೇ ಶ್ರೇಷ್ಠವೂ ಮೋಕ್ಷದಾಯಕವೂ ಆಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇಂದ್ರಿಯಗಳ ಕಾರಣದಿಂದ ನಮ್ಮ ವೃತ್ತಿಯು ಸಾತ್ತ್ವಿಕ, ರಾಜಸ ಮತ್ತು ತಾಮಸ ಗುಣಗಳಿಂದ ಪ್ರಭಾವಿತವಾಗುತ್ತದೆ. ಈ ಗುಣಗಳಲ್ಲಿ ಯಾವ ಗುಣ ನಮ್ಮಲ್ಲಿ ಹೆಚ್ಚಿದೆ ಎಂಬುದನ್ನು ತಿಳಿದುಕೊಳ್ಳಲು ಮಧ್ಬಾಗವತದಲ್ಲಿ ಸುಲಭ ಉಪಾಯಗಳನ್ನು ಹೇಳಲಾಗಿದೆ.
ಯಾವಾಗ ಮನಸ್ಸು ಪ್ರಸನ್ನವಾಗುವುದೋ ಇಂದ್ರಿಯಗಳು ಶಾಂತವಾಗುವುದೋ ದೇಹವು ನಿರ್ಭೀತವಾಗುವುದೋ ಮನಸ್ಸಿನಲ್ಲಿ ಆಸಕ್ತಿಗಳಿಲ್ಲವಾಗುವುದೋ ಆಗ ಸತ್ತ್ವಗುಣವು ವೃದ್ಧಿಯಾಗಿದೆ ಎಂದರ್ಥ.
ಬುದ್ಧಿಚಾಂಚಲ್ಯ, ಜ್ಞಾನೇಂದ್ರಿಯಗಳು ಅಸಂತುಷ್ಟವಾಗಿರುವುದು, ಕರ್ಮೇಂದ್ರಿಯಗಳು ವಿಕಾರದಿಂದ ಕೂಡಿರುವುದು, ಮನಸ್ಸು ಭ್ರಾಂತವಾಗಿ ಶರೀರವು ಅಸ್ವಸ್ಥವಾದಾಗ ರಜೋಗುಣ ಹೆಚ್ಚಿದೆ ಎಂದು ಅರಿಯಬೇಕು.
ಯಾವಾಗ ಚಿತ್ತವು ಜ್ಞಾನೇಂದ್ರಿಯಗಳ ಮೂಲಕ ಶಬ್ದಾದಿ ವಿಷಯಗಳನ್ನು ಅರಿಯಲು ಅಸಮರ್ಥವಾದಾಗ ಮತ್ತು ಖಿನ್ನವಾಗಿ ಲೀನವಾಗತೊಡಗಿದಾಗ, ಮನಸ್ಸು ಬರಿದಾಗಿ, ಅಜ್ಞಾನ ವಿಷಾದಗಳು ಹೆಚ್ಚಿದಾಗ ತಮೋಗುಣವು ವೃದ್ಧಿಯಾಗಿದೆ ಎಂದರ್ಥ.
ಹೀಗೆ ಕಾಲಕಾಲಕ್ಕೆ ನಮ್ಮ ಮನಸ್ಸಿನ ನಡೆಯನ್ನು ಪರೀಕ್ಷಿಸಿಕೊಳ್ಳುವ ಮೂಲಕ ಯಾವ ಗುಣದಿಂದ ನಾವು ಪ್ರಭಾವಿತರಾಗಿದ್ದೇವೆ ಎಂಬುದನ್ನು ಅರಿಯಬಹುದು.
ಮನಸ್ಸಿನ ನಿಯಂತ್ರಣದಿಂದ ಸಾತ್ತ್ವಿಕಗುಣವನ್ನೇ ಹೆಚ್ಚೆಚ್ಚು ಬೆಳೆಸಿಕೊಂಡಾಗ ನಾವು ನೆಮ್ಮದಿಯ ಜೀವನವನ್ನು ಅನುಭವಿಸುವುದಲ್ಲದೆ ಇತರರಿಗೂ ಇದರಿಂದ ಒಳ್ಳೆಯದೇ ಆಗುತ್ತದೆ. ಅಸೂಯೆ, ಕ್ರೋಧ, ಮದಾದಿ ಸಂಗತಿಗಳು ಪರಸ್ಪರರಲ್ಲಿ ಸಹಬಾಳ್ವೆಗೆ ತೊಂದರೆಯನ್ನುಂಟುಮಾಡುತ್ತವೆ.
ಶರೀರದಿಂದ ಬಿಡುಗಡೆ ಹೊಂದಲು ಸತ್ತ್ವಗುಣವೇ ಸುಲಭ ಮಾರ್ಗ. ಯಾಕೆಂದರೆ ಸತ್ತ್ವಗುಣದಿಂದ ಸ್ವರ್ಗವೂ ರಜೋಗುಣದಿಂದ ಮತ್ತೆ ಮನುಷ್ಯಲೋಕವೂ ಹಾಗೂ ತಮೋಗುಣದಿಂದ ನರಕವು ಪ್ರಾಪ್ತಿಯಾಗುತ್ತದೆ. ಸಾತ್ತ್ವಿಕತೆ ನಮ್ಮಲ್ಲಿ ಇಲ್ಲವಾದಾಗ ರಜ ತಮೋಗುಣಗಳಿಂದಾಗಿ ಭೂಲೋಕವೇ ನರಕವಾಗುತ್ತದೆ.
ಇವತ್ತು ಇದೇ ಕಾರಣದಿಂದಾಗಿಯೇ ನಾವು ಬದುಕುತ್ತಿರುವ ಈ ನೆಲ ನರಕರೂಪವನ್ನು ಪಡೆದುಕೊಳ್ಳುತ್ತಿದೆಯೇ? ಎಂಬುದನ್ನು ನಮ್ಮಲ್ಲಿ ನಾವು ಕೇಳಿಕೊಳ್ಳಬೇಕಾಗಿದೆ; ಬದಲಾವಣೆಯನ್ನು ತರಬೇಕಿದೆ.
ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ
***
No comments:
Post a Comment