Whether to inform Ashoucha, if so when?
ವೃದ್ಧಿ (ಪುರುಡು) ಮತ್ತು ಸೂತಕ ಇವೆರಡರ ನಡುವಿನ ಆಚರಣೆಯ ವ್ಯತ್ಯಾಸವನ್ನು ಯಾರಾದರೂ ವಿವರಿಸಬಹುದೆ....?????
: ವೃದ್ಧಿ ಅಂದ್ರೆ ಮನೆಯಲ್ಲಿ ಶಿಶು ಜನಿಸಿದಾಗ ಹತ್ತು ದಿವಸಗಳವರೆಗೆ ಆಚರಿಸುವ ಆಚರಣೆ , ಈ ಆಚರಣೆಯಲ್ಲಿ ದೇವರ ಪೂಜೆ ಗ್ರಂಥಾದಿಗಳ ಅಧ್ಯಯನ , ದೇವರಿಗೆ ದೀಪ ಹಚ್ಚುವದು , ಮತ್ತೆ ಮಡಿಯಿಂದ ಮಾಡುವ ಇನ್ನಿತರ ಯಾವುದೇ ಕಾರ್ಯಗಳು ಬರುವದಿಲ್ಲಾ , ಆದರೆ ಇನ್ನಿತರರನ್ನು ಮುಟ್ಟಬಾರದು ಅನ್ನೋ ನಿಯಮವಿಲ್ಲ . ಮಡಿಯಿಂದ ಊಟಕ್ಕೆ ಕುಳಿತ ಆಚಾರ್ಯರ ಪಂಕ್ತಿಯಲ್ಲಿ ಊಟಕ್ಕೆ ಮಾತ್ರ ಕೂಡಬಾರದು .
ಸೂತಕ ಅಂದ್ರೆ ಮನೆಯಲ್ಲಿ ಯಾರಾದರೂ ತೀರಿಕೊಂಡಾಗ ಆಚರಿಸುವ ಆಚರಣೆ .
ಆಶೀರ್ವಾದಂ ದೇವಪೂಜಾಂ ಪ್ರತ್ಯುತ್ಥಾನಾಭಿವಂದನಮ್|ಪರ್ಯಂಕೇ ಶಯನಂ ಸ್ಪರ್ಶಂ ನ ಕುರ್ಯಾನ್ಮೃತಸೂತಕೇ ||
ಯಾರಾದರೂ ಮನೆಗೆ ಬಂದರೆ ಎದ್ದು ನಮಸ್ಕರಿಸಬಾರದು , ಮಂಚದ ಮೇಲೆ ಮಲಗಬಾರದು , ಸೂತಕ ಇರದೇಇರುವವರನ್ನೂ ಮುಟ್ಟಬಾರದು ಹಾಗೂ ಸೂತಕ ಇದ್ದವರೂ ಪರಸ್ಪರ ಮುಟ್ಟಬಾರದು .
ಸಂಧ್ಯಾ ದಾನಂ ಜಪಂ ಹೋಮಂ ಸ್ವಾಧ್ಯಾಯಂ ಪಿತೃತರ್ಪಣಮ್ |ಬ್ರಹ್ಮಭೋಜ್ಯಂ ವ್ರತಂ ನೈವ ಕರ್ತವ್ಯಂ ಮೃತಸೂತಕೇ ||
ಸಂಧ್ಯಾ , ದಾನ , ಜಪ , ಹೋಮ ಸ್ವಾಧ್ಯಾಯ , ನಿಷಿದ್ಧ ಪದಾರ್ಥಗಳನ್ನು ತಿನ್ನುವದು , ಬ್ರಾಹ್ಮಣ ಭೋಜನ , ಸಿಹಿಪದಾರ್ಥಗಳನ್ನು ತಿನ್ನುವದು , ಮುಂತಾದವುಗಳನ್ನು ಸೂತಕದಲ್ಲಿ ಮಾಡಬಾರದು .
ಯಾರಾದರೂ ಸೂತಕದಲ್ಲಿ ನಿತ್ಯ ಹಾಗೂ ನೈಮಿತ್ತಿಕ ಕರ್ಮಗಳನ್ನು ಆಚರಿಸಿದರೆ ಅವನು ಮೊದಲು ಮಾಡಿದ ಎಲ್ಲ ಕರ್ಮಗಳೂ ನಾಶವಾಗುತ್ತವೆ . ಕೇವಲ ಭಗವನ್ನಾಮಸ್ಮರಣೆ ಮಾತ್ರ ಮಾಡಬೇಕು .
ಈ ನಿಯಮ ನೈಷ್ಠಿಕ ಬ್ರಹ್ಮಚಾರಿಗಳಿಗೆ , ಚಾಂದ್ರಾಯಣಾದಿ ಮಹಾವ್ರತಗಳ ಆಚರಣೆಯಲ್ಲಿರುವವರಿಗೆ , ಮಹಾಮಂತ್ರಗಳನ್ನು ಸಿದ್ಧಿಮಾಡಿಕೊಂಡವರಿಗೆ , ಯತಿಗಳಿಗೆ , ಸನ್ಯಾಸಿಗಳಿಗೆ ಮತ್ತು ಅಭಿಷಿಕ್ತರಾಜನಿಗೆ ಅನ್ವಯಿಸುವದಿಲ್ಲ .
ವಿವಾಹೋತ್ಸವಯಜ್ಞೇಷು ಜಾತೇ ಚ ಮೃತಸೂತಕೇ |ತಸ್ಯ ಪೂರ್ವಕೃತಂ ಚಾನ್ನಂ ಭೋಜ್ಯಂ ತನ್ಮನುರಬ್ರವೀತ್||
ಯಾರಾದರೂ ವಿವಾಹ , ಉತ್ಸವ , ಯಜ್ಞಾದಿಗಳು ನಡೆದಾಗ ಮರಣ ಹೊಂದಿದರೆ ಸುದ್ದಿ ಗೊತ್ತಾಗುವದಕ್ಕಿಂತ ಮೊದಲು ಮಾಡಿಟ್ಟ ಅಡಿಗೆಯನ್ನು ಇನ್ನಿತರರಿಗೆ ಮಾತ್ರ ಬೇರೆಯವರಿಂದ ಹಾಕಿಸಬಹುದು , ಸುದ್ದಿ ತಿಳಿದನಂತರ ಅಡುಗೆ ಮಾಡಿದ್ದರೆ ಅದನ್ನು ಚಲ್ಲಲೇಬೇಕು . ಎಂದು ಮನುವು ತನ್ನ ಸ್ಮೃತಿಯಲ್ಲಿ ಹೇಳಿದ್ದಾನೆ .
ತನಗೆ ಸೂತಕವು ಗೊತ್ತಿದ್ದು ಬ್ರಾಹ್ಮಣರಿಗೆ ಗೊತ್ತಿಲ್ಲದಾಗ , ಅವರು ಅನ್ನಾದಿಗಳನ್ನು ಸ್ವೀಕರಿಸಲು ಬಂದಾಗ ಸೂತಕೀ ಪುರುಷನು ಬಂದವರಿಗೆ ಅನ್ನಾದಿಗಳನ್ನು ಕೊಟ್ಟರೆ , ಭಿಕ್ಷುಕರಿಗೆ ಭಿಕ್ಷೆ ಹಾಕಿದರೆ , ಸೂತಕ ಇದ್ದವನ ಪಿತೃಗಳು ನರಕಭಾಗಿಗಳಾಗುತ್ತಾರೆ .
ಇವು ವೃದ್ಧಿ ಹಾಗೂ ಸೂತಕದ ಸಾಮಾನ್ಯ ನಿಯಮಗಳು 🙏🏼ಹರೇ ಶ್ರೀನಿವಾಸಾ 🙏🏼
******
ಉತ್ಪತ್ತಿ, ಸ್ಥಿತಿ ಮತ್ತು ಲಯ ಇವುಗಳು ಪ್ರಕೃತಿಯ ನಿಯಮವಾಗಿದೆ. ಉತ್ಪತ್ತಿಯೆಂದರೆ ಜನನ. ಇದು ರಜೋಗುಣಕ್ಕೆ ಸಂಬಂಧಿಸಿದೆ ಮತ್ತು ಲಯವೆಂದರೆ ಮೃತ್ಯು ಇದು ತಮೋಗುಣಕ್ಕೆ ಸಂಬಂಧಿಸಿದೆ. ಮಗುವಿನ ಜನನದ ಸಮಯದಲ್ಲಿ ಮಗುವಿನೊಂದಿಗೆ ಸಂಬಂಧಿಸಿರುವ ಇತರೆ ವ್ಯಕ್ತಿಗಳಲ್ಲಿಯೂ ರಜೋಗುಣಗಳು ವೃದ್ಧಿಸುತ್ತವೆ. ರಜೋಗುಣ ವೃದ್ಧಿಸಿರುವಾಗ ಮಾಡುವ ಧಾರ್ಮಿಕ ಕಾರ್ಯಗಳಿಂದ ವ್ಯಕ್ತಿಗೆ ಪೂರ್ಣವಾಗಿ ಲಾಭವಾಗುವುದಿಲ್ಲ. ಹಾಗೆಯೇ ಆ ವ್ಯಕ್ತಿಯು ಆ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವುದು, ತೀರ್ಥಯಾತ್ರೆ ಮಾಡುವುದು ಮುಂತಾದ ವಿಷಯಗಳನ್ನು ಮಾಡಿದರೆ, ಆ ವ್ಯಕ್ತಿಯಲ್ಲಿರುವ ರಜೋಗುಣಗಳ ಪರಿಣಾಮ ಅಲ್ಲಿಯ ಸಾತ್ತ್ವಿಕತೆಯ ಮೇಲೆ ಪರಿಣಾಮವಾಗಿ ಸಾತ್ತ್ವಿಕತೆಯು ಕ್ಷೀಣಿಸುತ್ತದೆ. ಇದರಿಂದ ಸಮಷ್ಟಿಗೆ ಲಾಭವಾಗುವುದಿಲ್ಲ. ಹಾಗಾಗಬಾರದೆಂದು ಆ ಸಮಯದಲ್ಲಿ ದೇವರ ಪೂಜೆ ಇತ್ಯಾದಿ ಸತ್ತ್ವಗುಣಗಳನ್ನು ವೃದ್ಧಿಸುವ ಕಾರ್ಯಗಳನ್ನು ಮಾಡಲು ನಿರ್ಬಂಧಿಸಲಾಗಿದೆ. ಈ ಕಾರಣದಿಂದ ಪುರುಡು(ಜನನಶೌಚದ) ಸಮಯದಲ್ಲಿಯೂ ಸೂತಕವನ್ನು ಪಾಲಿಸಬೇಕಾಗುತ್ತದೆ.- ವೇದಮೂರ್ತಿ ಶ್ರೀ. ಕೇತನ ಶಹಾಣೆ, ಅಧ್ಯಾಪಕರು, ಸನಾತನ ಪುರೋಹಿತ ಪಾಠಶಾಲೆ, ರಾಮನಾಥಿ, ಗೋವಾ.
***********
ಅಶುಚಿ ಎಂದು ಸೂಚಿಸುವ ಒಂದು ಬಗೆಯ ಪಾಪ (ಮೈಲಿಗೆ). ಅದೇ ಅರ್ಥದಲ್ಲಿ ಈಗ ಸೂತಕ ಪದ ಬಳಕೆಯಲ್ಲಿದೆ. ಕಾರಣಾನುಗುಣವಾಗಿ ಗೊತ್ತಾದ ಕಾಲದವರೆಗೆ ಮಾತ್ರ ಇರುತ್ತದೆ. ಆಶೌಚ (ಶಾವ) ಇರುವ ಕಾಲದಲ್ಲಿ ಪಿಂಡದಾನ, ಉದಕದಾನ ಮಾಡುತ್ತಾರೆ. ಆದರೆ ವೇದಾಧ್ಯಯನ ಮತ್ತು ಶ್ರೌತಸ್ಮಾರ್ತಕರ್ಮಗಳನ್ನು ಮಾಡಲು ಅರ್ಹತೆ ಇರುವುದಿಲ್ಲ. ಆಶೌಚ ಇರುವವರಿಗೆ ಸಂಬಂಧಪಟ್ಟ ಪದಾರ್ಥಗಳಿಗೂ ಶುದ್ಧಿ ಇರುವುದಿಲ್ಲ. ಆಶೌಚ ಕಣ್ಣಿಗೆ ಕಾಣುವುದಿಲ್ಲ. ಆದರೂ ಕರ್ಮಾನರ್ಹತೆಯನ್ನುಂಟುಮಾಡುವ, ಜನಸಾಮಾನ್ಯರಲ್ಲೂ ಗೊತ್ತಾದ ಕಾಲದವರೆಗಿರುವ, ಶರೀರಗತವಾದ ಒಂದು ವಿಧದ ಮಾಲಿನ್ಯ. ಗೊತ್ತಾದ ಕಾಲ ಕಳೆದ ಮೇಲೆ ಸ್ನಾನಾದಿಗಳಿಂದ ಮಾಲಿನ್ಯ ಕಳೆದು ಕರ್ಮಾರ್ಹತೆ ಉಂಟಾಗುತ್ತದೆ. ಆಶೌಚದ ಕೊನೆಯಲ್ಲಿ ಶುದ್ಧಿಯಾಗಲು ಕೆಲವರಿಗೆ ಕ್ಷೌರವೂ ವಿಹಿತವಾಗಿದೆ. ಆಶೌಚದಲ್ಲಿ ಜನನ, ಮರಣ, ಆರ್ತವ, ಸಾಂಸರ್ಗಿಕ, ಸನ್ನಿಪಾತ-ಎಂದಿವೇ ಮೊದಲಾಗಿ ಅನೇಕ ಭೇದಗಳಿವೆ.
ಮಕ್ಕಳು ಹುಟ್ಟಿದರೆ ಬರುವುದು ಜನನಾಶೌಚ (ಸೂತಿಕಾಶೌಚ). ಇದಕ್ಕೆ ಪುರುಡು, ವೃದ್ಧಿ ಎಂಬ ಪದಗಳೂ ಬಳಕೆಯಲ್ಲಿವೆ. ಸಾವಿನಿಂದ ಬರುವುದು ಮರಣಾಶೌಚ (ಶಾವಾಶೌಚ). ಇದನ್ನೀಗ ಬಳಕೆಯಲ್ಲಿ ಕ್ಷಯ ಎನ್ನುತ್ತಾರೆ. ಈ ಎರಡು ವಿಧಗಳಲ್ಲೂ ಏಳು ತಲೆಮಾರಿನವರೆಗಿನ ದಾಯಾದಿಗಳಲ್ಲಿ ಬ್ರಾಹ್ಮಣರಿಗೆ ಹತ್ತು ದಿನಗಳು, ಕ್ಷತ್ರಿಯರಿಗೆ ಹನ್ನೆರಡು ದಿನಗಳು, ವೈಶ್ಯರಿಗೆ ಹದಿನೈದು ದಿನಗಳು, ಚತುರ್ಥವರ್ಣದವರಿಗೆ ಒಂದು ತಿಂಗಳು ಆಶೌಚಕಾಲವೆಂದು ಶಾಸ್ತ್ರದಲ್ಲಿ ಹೇಳಿದೆ. ಇದು ಆಶೌಚದ ಪರಮಾವಧಿ. ಜನನಾಶೌಚದಲ್ಲಿ ಗರ್ಭಸ್ರಾವನಿಮಿತ್ತ ಗರ್ಭಮಾಸಾನುಗುಣವಾಗಿ 4, 5, 6 ದಿನಗಳು ಆಶೌಚವೂ ಉಂಟು.
ಇದಕ್ಕಿಂತ ಕಡಿಮೆಯಾದುದು ಮೂರು ದಿನಗಳ ಆಶೌಚ. ಇದರಂತೆಯೇ ಪಕ್ಷಿಣೇ (ಒಂದೂವರೆ ದಿನಗಳು) ಮತ್ತು ಒಂದು ದಿನದ ಆಶೌಚವೂ ಇವೆ. ಅವೆರಡೂ ಶಾವಾಶೌಚ ದಲ್ಲಿ ಮಾತ್ರ. ಈ ನಿಯತಕಾಲಿಕವಲ್ಲದೆ ಕೇವಲ ಸ್ನಾನ ನಿಮಿತ್ತಕವಾದ ಆಶೌಚವೂ ಉಂಟು. ಇದರಲ್ಲಿ ಸ್ನಾನಮಾತ್ರದಿಂದ ಶುದ್ಧಿ. ಬಾಂಧವ್ಯ ದೂರವಾದಂತೆಲ್ಲ ಆಶೌಚಕಾಲ ಕಡಿಮೆಯಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸ್ತ್ರೀ ಪುರುಷ ಭೇದದಿಂದಲೂ ಆಶೌಚಕಾಲ ಭಿನ್ನವಾಗುತ್ತದೆ. ಹಲ್ಲು ಹುಟ್ಟುವುದಕ್ಕಿಂತ ಮೊದಲು ಮಗು ಸತ್ತರೆ ತಂದೆತಾಯಿಗಳಿಗೆ ಪುರ್ಣಕಾಲದ ಆಶೌಚ. ದಾಯಾದಿಗಳಿಗೆ ಸ್ನಾನದಿಂದ ಕೂಡಲೇ ಶುದ್ಧಿ. ಚೌಲಕಾಲದೊಳಗೆ ಮೃತನಾದರೆ ಒಂದು ದಿನದ ಆಶೌಚ. ಉಪನಯನದವರೆಗೆ ಮೂರು ದಿನಗಳ ಆಶೌಚ. ಅಲ್ಲಿಂದ ಮುಂದೆ ಹತ್ತುದಿನಗಳ ಆಶೌಚ. ಮರಣಾಶೌಚದಲ್ಲಿ ಇದರಂತೆಯೇ ಇನ್ನೂ ಹಲವು ಪ್ರಭೇದಗಳಿವೆ. ಗಂಡನಿಗೆ ಬಂದ ಆಶೌಚ ಹೆಂಡತಿಗೂ ಉಂಟು. ಆದರೆ ಹೆಂಡತಿಗೆ ಬಂದ ಆಶೌಚ ನಿಯತವಾಗಿ ಗಂಡನಿಗೆ ಬರುವುದಿಲ್ಲ. ಸ್ತ್ರೀಯರಿಗೆ ವಿವಾಹಾನಂತರ ತಂದೆ ಕಡೆಯ ಬಂಧುಗಳ ಆಶೌಚ ಕಡಿಮೆಯಾಗುತ್ತದೆ. ಗಂಡನ ಬಂಧುಗಳ ಆಶೌಚ ಪುರ್ಣವಾಗಿರುತ್ತದೆ.
ಜನನ ಅಥವಾ ಮರಣದ ಅರಿವು ಉಂಟಾಗುವವರೆಗೂ ಆಶೌಚ ಬರುವುದಿಲ್ಲ. ಜನನಾಶೌಚ ವಿಷಯ ಕಾಲ ಕಳೆದ ಮೇಲೆ ತಿಳಿದರೂ ಆಶೌಚ ಇರುವುದಿಲ್ಲ. ಮರಣಾಶೌಚದಲ್ಲಿ ಕಾಲ ಕಳೆದ ಮೇಲೂ ಆಶೌಚ ಉಂಟು, ಆದರೆ ಅವಧಿ ಕಡಿಮೆಯಾಗುತ್ತದೆ. ಹತ್ತು ದಿನಗಳ ಆಶೌಚದ ವಿಷಯವನ್ನು ಆ ಕಾಲ ಕಳೆದ ಮೇಲೆ ಮೂರು ತಿಂಗಳೊಳಗೆ ಕೇಳಿದರೆ ಮೂರು ದಿನಗಳೂ ಆರು ತಿಂಗಳೊಳಗೆ ಪಕ್ಷಿಣಿಯೂ, ವರ್ಷದೊಳಗೆ ಒಂದು ದಿನವೂ ಆಶೌಚ ಇರಬೇಕು. ವರ್ಷಾನಂತರ ಮರಣ ವಿಷಯ ತಿಳಿದರೆ ಸ್ನಾನಮಾತ್ರದಿಂದ ಶುದ್ಧಿ. ಮಗನನ್ನು ಬಿಟ್ಟು ಉಳಿದ ಸಪಿಂಡ ಬಂಧುಗಳಿಗೆ ಈ ಕ್ರಮ.
ಮೂರು ದಿನಗಳ ಆಶೌಚದಲ್ಲಿ ಆ ಕಾಲ ಕಳೆದ ಮೇಲೆ ಹತ್ತು ದಿವಸಗಳೊಳಗೆ ವಿಷಯ ತಿಳಿದರೆ ಒಂದು ದಿನವೂ ಪಕ್ಷಿಣಿಯಲ್ಲಿ ಒಂದು ಕಾಲವೂ ಆಶೌಚ. ಹತ್ತು ದಿವಸಗಳು ಕಳೆದ ಬಳಿಕ ಕೇವಲ ಸ್ನಾನ ಮಾತ್ರ. ದಿನಾಶೌಚದಲ್ಲಿಯೂ ನಿಯತ ಕಾಲಾನಂತರ ತಿಳಿದ ಆಶೌಚಕ್ಕೆ ಸ್ನಾನದಿಂದ ಶುದ್ಧಿ.
ಒಂದು ಜನನಾಶೌಚ ಮಧ್ಯದಲ್ಲಿ ಇನ್ನೊಂದು ಜನನಾಶೌಚ ಬಂದರೆ ಎರಡನೆಯ ಜನನನಿಮಿತ್ತ ಪ್ರತ್ಯೇಕವಾಗಿ ಆಶೌಚ ಇರಬೇಕಾಗಿಲ್ಲ. ಮೊದಲನೆಯ ಆಶೌಚದಿಂದ ಅದೂ ಹೋಗುತ್ತದೆ. ಜನನಾಶೌಚ ಮಧ್ಯದಲ್ಲಿ ಶಾವಾಶೌಚ ಬಂದರೂ ಶಾವಾಶೌಚ ಮಧ್ಯದಲ್ಲಿ ಜನನಾಶೌಚ ಬಂದರೂ ಶಾವಾಶೌಚ ಕಾಲದಿಂದಲೇ ಶುದ್ದಿ. ಶಾವಾಶೌಚ ಮಧ್ಯದಲ್ಲಿ ಸಮಾನ ಕಾಲದ ಮತ್ತೊಂದು ಶಾವಾಶೌಚ ಬಂದರೆ ಆಗ ಮೊದಲಿನ ಶಾವಾಶೌಚ ಕಾಲದಿಂದಲೇ ಶುದ್ಧಿ. ಅಧಿಕಕಾಲದ ಆಶೌಚದ ಮಧ್ಯದಲ್ಲಿ ಅಲ್ಪಕಾಲದ ಆಶೌಚ ಬಂದರೆ ಅಧಿಕ ಕಾಲದ ಆಶೌಚದೊಡನೆಯೇ ಮತ್ತೊಂದು ಆಶೌಚ ಕಳೆದು ಹೋಗುತ್ತದೆ. ತಂದೆ-ತಾಯಿ ನಿಮಿತ್ತಕವಾದ ಆಶೌಚದಲ್ಲಿ ಈ ನಿಯಮ ಕೂಡುವುದಿಲ್ಲ.
ಆಶೌಚಾಂತ್ಯಸ್ನಾನವನ್ನು ಸಂಗಮಕಾಲದಲ್ಲಿ ಎಂದರೆ, ಸೂರ್ಯೋದಯ ಕಾಲಕ್ಕೆ 2 ಗಂ 24 ನಿ. ಮೇಲೆ 4 ಗಂ 48 ನಿ. ಒಳಗೆ ಮಾಡಬೇಕು.
ಆಶೌಚಿ ದೇವಾಲಯಕ್ಕೆ ಹೋಗಕೂಡದು; ಆತ ನಮಸ್ಕಾರಕ್ಕೆ ಅನರ್ಹ. ಪುಜೋಪಯುಕ್ತ ಪುಷ್ಪ ಮೊದಲಾದುವನ್ನೂ ಮನೆಯಲ್ಲಿ ಉಪಯೋಗಿಸುತ್ತಿರುವ ಮಣ್ಣಿನ ಪಾತ್ರೆಗಳನ್ನೂ ಮುಟ್ಟಕೂಡದು. ಅಭ್ಯಂಗಸ್ನಾನ ಕೂಡದು. ತಾಂಬೂಲ, ಗಂಧ ಮೊದಲಾದುವನ್ನು ಉಪಯೋಗಿಸಬಾರದು.
ವೈಯಕ್ತಿಕ ಆಶೌಚಕಾಲದ ಬಗ್ಗೆ ಧರ್ಮಶಾಸ್ತ್ರದಲ್ಲಿ ವಿವರವಾಗಿ ಉಕ್ತವಾಗಿದೆ.
ರಾತ್ರಿಕಾಲದಲ್ಲಿ ಜನನ ಮರಣಗಳು ಸಂಭವಿಸಿದರೆ ಸಾಮಾನ್ಯವಾಗಿ 12 ಗಂ. ಒಳಪಟ್ಟು ಅದೇ ದಿವಸದಿಂದ, 2 ಗಂ. 30 ನಿ. ಮೇಲ್ಪಟ್ಟು ಮಾರನೆಯ ದಿನದಿಂದ ಆಶೌಚ ದಿನಸಂಖ್ಯೆಯನ್ನು ಗಣಿಸಲು ಪ್ರಾರಂಭಿಸಬೇಕು. ಈ ಎರಡು ಕಾಲಗಳ ಮಧ್ಯದಲ್ಲಿ ಸಂಭವಿಸುವುದರ ದಿನಗಣನೆಯನ್ನು ಲೆಕ್ಕದಿಂದ ಗೊತ್ತುಪಡಿಸಬೇಕು. ಆ ಗೊತ್ತಾದ ದಿನದ ಹಗಲಿನ ಕಾಲ ಪ್ರಮಾಣವನ್ನು 24 ಗಂಟೆಗಳಲ್ಲಿ ಕಳೆದುಳಿದುದು ರಾತ್ರಿ ಪ್ರಮಾಣ. ಈ ಕಾಲದಲ್ಲಿ ಮೂರು ಗಂಟೆ ಕಾಲವನ್ನು ಕಳೆದು ಉಳಿದುದರ ಮೂರನೆಯ ಎರಡು ಭಾಗಕ್ಕೆ 11/2 ಗಂಟೆ ಕಾಲವನ್ನೂ ಹಗಲಿನ ಕಾಲಪ್ರಮಾಣವನ್ನೂ ಕೂಡಿಸಿ ಬರುವ ಕಾಲದಿಂದ ಮುಂದಿನದು ಮಾರನೆಯ ದಿನದ ಗಣನೆಗೆ ಸೇರುತ್ತದೆ. ಈ ಕಾಲಗಣನೆಯಂತೆ ಅರ್ಧ ರಾತ್ರಿಯಲ್ಲಿ ಸಂಭವಿಸುವ ಜನನ ಮರಣಗಳ ದಿನವನ್ನು ನಿಷ್ಕರ್ಷಿಸಬೇಕು. ರಜಸ್ವಲಾಶೌಚ : ಹೆಂಗಸರು ಮುಟ್ಟಾದ ದಿನದಿಂದ ಮೂರು ದಿನಗಳ ಕಾಲ ಇರುವ ಮೈಲಿಗೆ. ಮುಟ್ಟಾದ ದಿನದಿಂದ 18ನೆಯ ದಿನ ಮತ್ತೆ ಮುಟ್ಟಾದರೆ 1 ದಿನವೂ 19ನೆಯ ದಿನ ಆದರೆ 2 ದಿನಗಳೂ ಅಲ್ಲಿಂದ ಮುಂದೆ 3 ದಿನಗಳೂ ಆಶೌಚ ಇರುತ್ತದೆ. ಆ ಕಾಲ ಕಳೆದ ಮೇಲೆ ಸ್ನಾನದಿಂದ ಶುದ್ಧಿ.
ಅನ್ಯ ಸಂಪರ್ಕದಿಂದ ಬರುವ ಆಶೌಚ ಸಾಂಸರ್ಗಿಕ. ಆಶೌಚ ಮಧ್ಯದಲ್ಲಿ ಮತ್ತೊಂದು ಆಶೌಚ ಬರುವುದು ಸನ್ನಿಪಾತ.
ಪುರುಷನಿಗೆ ಸಂಸರ್ಗಾಶೌಚ ಬಂದರೆ ಅದು ಅವನಿಗೆ ಮಾತ್ರ. ಅವನ ಹೆಂಡತಿಗಾಗಲೀ ಸಂಬಂಧಪಟ್ಟ ಪದಾರ್ಥಗಳಿಗಾಗಲೀ ಆಶೌಚ ಇಲ್ಲ. ಹೆಂಡತಿಗೆ ವಿಷಯ ತಿಳಿದು ಆಶೌಚ ಕಳೆದ ಮೇಲೆ ಕಾಲಾನಂತರದಲ್ಲಿ ಗಂಡನಿಗೆ ಅದೇ ವಿಷಯ ತಿಳಿದು ಆಶೌಚವಿರುವ ಸನ್ನಿವೇಶದಲ್ಲಿ ಮತ್ತೆ ಆಕೆಯೂ ಆಶೌಚ ಇರಬೇಕಾಗಿಲ್ಲ.
***
ಯಾರಾದ್ರೂ ತೀರಿಕೊಂಡಾಗ ಒಂದು ವರ್ಷದ ವರೆಗೆ ಯಾವುದೇ ತರಹದ ಹಬ್ಬ ಉತ್ಸವ ಮದುವೆ ಮುಂಜಿವೆ ಮಾಡ್ಬಾರ್ದು ಅಂತ ಹೇಳ್ತಾರಲ್ಲಾ ? ಇದು ನಿಜ ನಾ ? ನಿಜ ಅಂತಾದ್ರೆ ಯಾಕೆ ಮಾಡ್ಬಾರ್ದು ??
ಮನುಷ್ಯನು ಮರಣವಾದ ನಂತರ ಒಂದು ವರ್ಷದವರೆಗೆ ಒಟ್ಟು 48 ಶ್ರಾದ್ಧಗಳನ್ನು ಆಚರಸಿಬೇಕಾಗುತ್ತದೆ , ಅವು ೧) ಮಲಿನ ಷೋಡಶ ೨) ಮಧ್ಯಮ ಷೋಡಶ ೩) ಉತ್ತಮ ಷೋಡಶ ಎಂಬುದಾಗಿ ಮೂರು ವಿಭಾಗಗಳು .
ಸ್ಥಾನೇ ದ್ವಾರೇ ಅರ್ಧಮಾರ್ಗೇ ಚ ಚಿತಾಯಾಂ ಶವ ಹಸ್ತಕೇ|
ಅಸ್ಥಿ ಸಂಚಯನೇ ಷಷ್ಠೋ ದಶಪಿಂಡಾ ದಶಾನ್ಹಿಕಾ||
ಮನುಷ್ಯನು ಮರಣ ಹೊಂದಿದ ಸ್ಥಾನದಲ್ಲಿ ಒಂದು , ದ್ವಾರದಲ್ಲಿ ಒಂದು , ಅರ್ಧಮಾರ್ಗದಲ್ಲಿ ವಿಶ್ರಾಮಪಿಂಡ ಒಂದು , ಚಿತೆಯಲ್ಲಿ ಒಂದು , ಮೂರನೆಯ ದಿವಸ ಅಸ್ಥಿಸಂಚಯನ ಕಾಲಕ್ಕೆ ಒಂದು , ಹಾಗೂ ಮೊದಲನೆಯ ದಿವಸದಿಂದ ಹಿಡಿದು ಹತ್ತು ದಿವಸಗಳವರೆಗೆ ಹತ್ತು ಪಿಂಡದಾನಗಳು . ಹೀಗೆ ಒಟ್ಟು 16 ಪಿಂಡದಾನಗಳಾಗುತ್ತವೆ . ಇವುಗಳಿಗೆ ಮಲಿನ ಷೋಡಶ ಎಂದು ಹೆಸರು .
ಪ್ರಥಮಂ ವಿಷ್ಣವೇ ದದ್ಯಾದ್ವಿತೀಯಂ ಶ್ರೀಶಿವಾಯ ಚ|
ಯಾಮ್ಯಾಯ ಪರಿವಾರಾಯ ತೃತೀಯಂ ಪಿಂಡಮುತ್ಸೃಜೇತ್||
ಚತುರ್ಥಂ ಸೋಮರಾಜಾಯ ಹವ್ಯವಾಹಾಯ ಪಂಚಮಮ್|
ಕವ್ಯವಾಹಾಯ ಷಷ್ಠಂ ಚ ದದ್ಯಾತ್ಕಾಲಾಯ ಸಪ್ತಮಮ್ ||
ರುದ್ರಾಯ ಚಾಷ್ಟಮಂ ದದ್ಯಾನ್ನವಮಂ ಪುರುಷಾಯ ಚ|
ಪ್ರೇತಾಯ ದಶಮಂ ಚೆವೈಕಾದಶಂ ವಿಷ್ಣವೇ ನಮಃ||
ದ್ವಾದಶಂ ಬ್ರಹ್ಮಣೇ ದದ್ಯಾದ್ವಿಷ್ಣವೇ ಚ ತ್ರಯೋದಶಮ್|
ಚತುರ್ದಶಂ ಶಿವಾಯೈವ ಯಮಾಯ ದಶಪಂಚಕಮ್||
ದದ್ಯಾತ್ಪುರುಷಾಯೈವ ಪಿಂಡಂ ಷೋಡಶಕಂ ಖಗ|
ಮಧ್ಯಂ ಷೋಡಶಕಂ ಪ್ರಾಹುರೇತತ್ತತ್ತ್ವವಿದೋ ಜನಾಃ||
ಮೊದಲನೆಯ ಪಿಂಡವನ್ನು ವಿಷ್ಣುವಿಗೆ , ಎರಡನೆಯದನ್ನು ಶಿವನಿಗೆ , ಮೂರನೆಯದನ್ನು ಯಮನ ಕುಟುಂಬದವರಿಗೆ , ನಾಲ್ಕನೆಯದನ್ನು ಚಂದ್ರನಿಗೆ , ಐದನೆಯದನ್ನು ಅಗ್ನಿಗೆ , ಆರನೆಯದನ್ನು ಕವ್ಯವಾಹನಿಗೆ , ಏಳನೆಯದನ್ನು ಕಾಲನಿಗೆ , ಎಂಟನೆಯದನ್ನು ರುದ್ರನಿಗೆ , ಒಂಬತ್ತನೆಯದನ್ನು ಪರಮ ಪುರುಷನಿಗೆ , ಹತ್ತನೆಯದನ್ನು ಪ್ರೇತಕ್ಕೆ , ಹನ್ನೊಂದನೆಯದನ್ನು ವಿಷ್ಣುವಿಗೆ , ಹನ್ನೆರಡನೆಯದನ್ನು ಬ್ರಹ್ಮನಿಗೆ , ಹದಿಮೂರನೆಯದನ್ನು ವಿಷ್ಣುವಿಗೆ , ಹದಿನಾಲ್ಕನೆಯದನ್ನು ಶಿವನಿಗೆ , ಹದಿನೈದನೆಯದನ್ನು ಯಮನಿಗೆ , ಮತ್ತು ಹದಿನಾರನೆಯದನ್ನು ತತ್ಪುರುಷನಿಗೆ ಕೊಡಬೇಕು. ಹೀಗೆ ಹದಿನಾರು ಪಿಂಡದಾನಗಳು ಮಧ್ಯಮ ಷೋಡಶ ಎನಿಸಿಕೊಳ್ಳುವವು .
ದ್ವಾದಶ ಪ್ರತಿಮಾಸೇಷು ಪಾಕ್ಷಿಕಂ ಚ ತ್ರಿಪಾಕ್ಷಿಕಮ್ |
ನ್ಯೂನಷಾಣ್ಮಾಸಿಕಂ ಪಿಂಡಂ ದದ್ಯಾನ್ನ್ಯೋನಾದಿಕಂ ತಥಾ ||
ಉತ್ತಮಂ ಷೋಡಶಂ ಚೈತನ್ಮಯಾ ತೇ ಪರಿಕೀರ್ತಿತಮ್|
ಶ್ರಪಯಿತ್ವಾ ಚರುಂ ತಾರ್ಕ್ಷ್ಯ ಕುರ್ಯಾದೇಕಾದಶೇಹನಿ ||
ಹನ್ನೆರಡು ತಿಂಗಳುಗಳ ಹನ್ನೆರಡು ಪಿಂಡದಾನಗಳು , ಪಾಕ್ಷಿಕ ಪಿಂಡದಾನ 1 , ತ್ರಿಪಾಕ್ಷಿಕ (ಒಂದೂವರೆ ತಿಂಗಳಿಗೆ) 1 , ನ್ಯೂನ ಷಾಣ್ಮಾಸಿಕಕ್ಕೆ (ಐದೂವರೆ ತಿಂಗಳಿಗೆ ) 1 , ಮತ್ತು ನ್ಯೂನಾಬ್ದಿಕಕ್ಕೆ (ಹನ್ನೊಂದೂವರೆ ತಿಂಗಳಿಗೆ) 1 . ಈ ರೀತಿಯಾಗಿ ಒಂದು ವರ್ಷ ಪರ್ಯಂತರ ಹದಿನಾರು ಪಿಂಡದಾನಗಳು . ಇವುಗಳು ಉತ್ತಮ ಷೋಡಶ ಎಂದು ಕರೆಸಿಕೊಳ್ಳುವವು .
ಮನುಷ್ಯ ಮರಣವಾದ ನಂತರ ಹದಿನೈದನೆಯ ದಿವಸದಿಂದ ಇಲ್ಲಿಂದ ಆ ಜೀವದ ಪ್ರಯಾಣ ಪ್ರಾರಂಭ , ಅಲ್ಲೀವರೆಗೂ ಯಮದೂತರು ಆ ಜೀವವನ್ನು ತನ್ನ ಪುತ್ರಾದಿಗಳು ಮಾಡುವ ಎಲ್ಲ ಕರ್ಮಗಳ ವೀಕ್ಷಣೆಗಾಗಿ ಇಲ್ಲಿಯೇ ಮನೆಯಲ್ಲಿ ಇಟ್ಟ ದೀಪದಲ್ಲಿ ಹಾಗೂ ಶವಕ್ಕೆ ಕಟ್ಟಿದ ಕಾತಿಯನ್ನು ಕಟಿಯಲು ಉಪಯೋಗಿಸುವ ಶಿಲೆಗಳಲ್ಲಿ ಆ ಜೀವದ ಅಂಶವನ್ನು ಇಟ್ಟಿರುತ್ತಾರೆ . , ಹದಿನೈದನೆಯ ದಿವಸ ಮಗನು ಕೊಡುವ ಪಾಕ್ಷಿಕ ಪಿಂಡದಾನವನ್ನು ಭಕ್ಷಣೆ ಮಾಡಿ ಮೊದಲನೆಯ ಪಟ್ಟಣವಾದ ಸೌಮ್ಯ ಎಂಬ ಪುರಿಗೆ ಯಮದೂತರು ಅದನ್ನು ತರುತ್ತಾರೆ , ಹೀಗೆ ಒಂದೊಂದೇ ಪಿಂಡದಾನವನ್ನು ಭಕ್ಷಿಸುತ್ತಾ ಅಂದರೆ ಉತ್ತಮ ಷೋಡಶ ಒಂದು ವರ್ಷದಲ್ಲಿ ಒಟ್ಟು ಹದಿನಾರು ಪಿಂಡದಾನಗಳನ್ನು ಭಕ್ಷಿಸುತ್ತಾ ಆ ಹದಿನಾರು ಪಟ್ಟಣಗಳಲ್ಲಿ ಕೊಡುವ ಅತ್ಯಂತ ಘೋರವಾದ ಶಿಕ್ಷೆಗಳನ್ನು ಅನುಭವಿಸುತ್ತಾ ಹನ್ನೆರಡನೆಯ ತಿಂಗಳು ಪೂರ್ತಿಯಾದ ನಂತರ ಯಮಲೋಕದ ಮಹಾದ್ವಾರಕ್ಕೆ ಬಂದು ತಲುಪುತ್ತದೆ . ಅಲ್ಲಿಯವರೆಗೆ ಕರ್ತಾ ಹಾಗೂ ಸಪಿಂಡಿಗಳಿಗೆ ಅಂದರೆ ನಾಲ್ಕು ತಲೆಯ ಅಣ್ಣತಮ್ಮಂದಿರಿಗೆ ಒಂದು ತರಹದ ಸೂತಕವೇ ಇರುತ್ತದೆ . ಅಲ್ಲದೇ ಆ ಜೀವ ಅಲ್ಲಿ ಅಷ್ಟೊಂದು ದುಃಖಗಳನ್ನು ಅನುಭವಿಸುತ್ತಾ ಒಂದೊಂದೇ ಪಟ್ಟಣಗಳನ್ನು ದಾಟುತ್ತಿರುವಾಗ , ಕರ್ತಾ ಆಗಲಿ ಅಥವಾ ಸಪಿಂಡಿಗಳಾಗಲಿ ಆ ಒಂದು ವರ್ಷದವರೆಗೆ ಯಾವುದೇ ತರಹದ ಹಬ್ಬ , ಹುಣ್ಣಿಮೆ , ಮದುವೆ , ಮುಂಜಿವೆ , ಉತ್ಸವಾದಿಗಳನ್ನು ಮಾಡಬಾರದು .
ಇನ್ನು ಕನ್ಯಾದಾನದ ವಿಚಾರಕ್ಕೆ ಬರೋದಾದ್ರೆ , ಆ ಜೀವದ ಸದ್ಗತಿಗಾಗಿ ಸಪಿಂಡಿಕರಣವಾದ ನಂತರ ಪದದಾನಾದಿಗಳನ್ನು ಸಂಕಲ್ಪಪೂರ್ವಕವಾಗಿ ಕೊಡ್ತೀವೋ ಇಲ್ವೋ ? ಅದೇ ರೀತಿ ಕನ್ಯಾದಾನ ಅನ್ನೋದು ಪಿತೃಗಳ ಸದ್ಗತಿಗಾಗಿ ಕೊಡುವ ಶ್ರೇಷ್ಠದಾನವಾಗಿದೆ . ಇದನ್ನು ಕನ್ಯಾದಾನದ ಸಂಕಲ್ಪದಲ್ಲೇ ಹೇಳಲಾಗಿದೆ ಮಮ ಸಮಸ್ತ ಪಿತೃಣಾಂ ನಿರತಿಶಯ ಸಾನಂದ ಬ್ರಹ್ಮಲೋಕ ಅವಾಪ್ತ್ಯರ್ಥಂ ....... ಎಂಬಲ್ಲಿ ನನ್ನ ಸಮಸ್ತ ಪಿತೃಗಳ ಸದ್ಗತಿಗಾಗಿ ಈ ಕನ್ಯಾದಾನವನ್ನು ಸಮಸ್ತ ದೇವತೆಗಳ , ಅಗ್ನಿದೇವರ , ಬ್ರಾಹ್ಮಣರ , ಸಹೃಜ್ಜನರ ಸನ್ನಿಧಾನದಲ್ಲಿ ಮಾಡ್ತಾಯಿದ್ದೀನಿ ಎಂಬುದಾಗಿ ಸಂಕಲ್ಪ ಮಾಡಿ ಕನ್ಯಾದಾನ ಮಾಡುತ್ತೇವೆ . ಹೀಗಾಗಿ ಕನ್ಯಾದಾನ ಮಾತ್ರ ಬರ್ತದ . ಇನ್ನುಳಿದ ಯಾವುದೇ ತರಹದ ಉತ್ಸವಾದಿಗಳು , ಹಬ್ಬಗಳು ಸರ್ವಥಾ ಬರುವದಿಲ್ಲಾ , ಹಾಗೇನಾದರೂ ಅಕಸ್ಮಾತ್ ಅಜ್ಞಾನದಿಂದ ಗಂಡಸುಮಗನ ಮದುವೆಯಾಗಲಿ , ಮುಂಜಿವೆಯಾಗಲಿ , ಅಥವಾ ಹಬ್ಬ ಹುಣ್ಣಿಮೆಗಳನ್ನಾಗಲಿ ಮಾಡಿದರೆ ಆತನ 21 ತಲೆಯ ಪಿತೃಗಳು ನರಕಭಾಗಿಗಳಾಗುತ್ತಾರೆ ಎಂಬುದಾಗಿ ಶಾಸ್ತ್ರದಲ್ಲಿ ತಿಳಿಸಲಾಗಿದೆ .
ಹೀಗಾಗಿ ತೀರಕೊಂಡ ಒಂದು ವರ್ಷದವರೆಗೂ ಯಾವುದೇ ಹಬ್ಬ ಹುಣ್ಣಿಮೆ , ಮಗನ ಮದುವೆ ಮುಂಜಿವೆ , ಉತ್ಸವಾದಿಗಳು ಬರೋದಿಲ್ಲಾ , ಆದರೆ ಎಲ್ಲ ಮಹಾದಾನಗಳನ್ನು ಅವಶ್ಯವಾಗಿ ಮಾಡಲೇಬೇಕು ಎಂದು ಗರುಡಪುರಾಣದಲ್ಲಿ ತಿಳಿಸಲಾಗಿದೆ 🙏🏽
***
No comments:
Post a Comment