SEARCH HERE

Tuesday 24 March 2020

ಆರೋಗ್ಯಕ್ಕೆ ಆಯುರ್ವೇದ ಪಂಚಕರ್ಮ ಚಿಕಿತ್ಸೆ ayurveda medicines for good health panchakarma treatment



note: administering medication based on following articles is purely at your risk.  consult right doctors whom you believe and counter check on internet.

following articles/write up are by ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ 
ಶಿವಮೊಗ್ಗ  ದಾವಣಗೆರೆ  ಬೆಂಗಳೂರು  ಕಾಂಗ್ರಾ M-93438 55135
*******************************


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-89 
29.03.2020


ಪಂಚಕರ್ಮ ಚಿಕಿತ್ಸೆ



.....ಬಹಿರ್ದೋಷಾನ್ ಪಞ್ಚಧಾ...

ನಿರೂಹಂ, ವಮನಂ ಕಾಯಶಿರೋವಿರೇಕೋ, ಅಸ್ರವಿಸ್ರುತಿಃ||
-ಅಷ್ಟಾಂಗ ಹೃದಯ, ಸೂತ್ರ ಸ್ಥಾನ, ಅಧ್ಯಾಯ- 14


ರೋಗೋತ್ಪತ್ತಿ ಮಾಡುವಂತಹ ದೋಷಗಳನ್ನು ಕರಗಿಸಿ ಶರೀರದಿಂದ ಹೊರಹಾಕುವ ಮೂಲಕ ರೋಗೋತ್ಪತ್ತಿಗೆ ಮೊದಲೇ ಮತ್ತು ರೋಗೋತ್ಪತ್ತಿಯ ಮೂಲವನ್ನೇ ತಡೆದುಬಿಡುವ ಮನುಕುಲಕ್ಕೇ ಅತ್ಯಂತ ಶ್ರೇಷ್ಠ ಚಿಕಿತ್ಸೆಯೇ ಪಂಚ ವಿಧ ಶೋಧನ ಚಿಕಿತ್ಸೆ ಅಥವಾ ಪಂಚಕರ್ಮ ಚಿಕಿತ್ಸೆ .



ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ 



ಆರೋಗ್ಯವಂತರ ಆರೋಗ್ಯ ರಕ್ಷಣೆಯೇ ಆಯುರ್ವೇದದ ಆದ್ಯ ಸೂತ್ರ.



ಇದರ ಪ್ರಧಾನ ಘಟಕವಾಗಿ ಋತು ಅನುಸಾರ ಪ್ರತಿಯೊಬ್ಬರೂ ಸ್ವಾಸ್ಥ್ಯ ಪಂಚಕರ್ಮ ಚಿಕಿತ್ಸೆ ಯಿಂದ ಆರೋಗ್ಯ ಸಂರಕ್ಷಣೆ, ರೋಗನಿರೋಧಕ ಶಕ್ತಿ ಸಂವರ್ಧನೆ ಮತ್ತು ದೀರ್ಘಾಯುಗಳನ್ನು ಆಸ್ಪತ್ರೆ ರಹಿತವಾಗಿ ಪಡೆಯಲೆಂಬುದು ಆಚಾರ್ಯರ ನಿಃಸ್ವಾರ್ಥ ಉದ್ದೇಶವಾಗಿ ಹೇಳಲ್ಪಟ್ಟಿದೆ.



ಪಂಚಕರ್ಮಗಳು :

ವಮನ (ಔಷಧಿ ಸಿದ್ಧ ವಾಂತಿ)
ವಿರೇಚನ ( ಔಷಧಿ ಸಿದ್ಧ ಬೇಧಿ)
ಬಸ್ತಿ (ಔಷಧಿ ಸಿದ್ಧ ಎನಿಮಾ)
ನಸ್ಯ ( ನಾಸಾ ದ್ವಾರಾ ಔಷಧಿ ಪ್ರಯೋಗ)
ರಕ್ತಮೋಕ್ಷಣ (ಅಶುದ್ಧ ರಕ್ತ ಶೋಧನ)


ಪಂಚಕರ್ಮದ ಸಂಕ್ಷಿಪ್ತ ಮಹತ್ವ 

ದೋಷಗಳೆಂದು ಕರೆಯಿಸಿಕೊಳ್ಳುವ ಶರೀರ ಪೋಷಕ ಅಂಶಗಳು ಸದಾ ವೃದ್ಧಿ ಕ್ಷಯವಾಗುತ್ತಲೇ ಇರುತ್ತವೆ. ದಿನ, ರಾತ್ರಿ, ಋತು, ಬಾಲ್ಯ, ವಯಸ್ಕ, ವೃದ್ಧ, ಆಹಾರದ ಮೊದಲು-ಜೀರ್ಣಕಾಲ-ಜೀರ್ಣಾನಂತರ, ಭಯ, ಧೈರ್ಯ, ಪ್ರೀತಿ, ದ್ವೇಷ, ಸ್ವಾರ್ಥ ವೃತ್ತಿ, ನಿಃಸ್ವಾರ್ಥ ವೃತ್ತಿ.. ಹೀಗೆ ವಿವಿಧ ಅವಸ್ಥೆಗಳಲ್ಲಿ ಅನವರತವೂ ದೋಷಗಳೆಂಬ ಶರೀರ ಪೋಷಕ ಅಂಶಗಳು ವೃದ್ಧಿ ಕ್ಷಯ ಮತ್ತು ವಿಕಾರಗಳನ್ನು ಹೊಂದುತ್ತಿರುತ್ತವೆ.


ಉದಾ: ಆಹಾರ ಸೇವನೆಯ ಮೊದಲು ಅಗ್ನಿ- ವಾತ ವೃದ್ಧಿಯಾಗಿಯೂ, ಸೇವಿಸಿದ ನಂತರ ಕಫವೃದ್ಧಿಯು, ಅದು ಜೀರ್ಣವಾಗುವಾಗ ಕಫಯುಕ್ತ ಪಿತ್ತವೃದ್ಧಿಯು, ಜೀರ್ಣಾನಂತರ ವಾತ ವೃದ್ಧಿಯು ಆಗುವುದು- ಅಂದರೆ, ಪೋಷಕಾಂಶಗಳ ಬೇಡಿಕೆ ಬಂದಾಗ "ಅಗ್ನಿ- ವಾತ(ಹಸಿವು)" ವೃದ್ಧಿಯು ಪೂರೈಕೆಯ ನಂತರ ಪೋಷಕಾಂಶಗಳ (ಉದರ ಯಕೃತ್ ನಲ್ಲಿ)ವೃದ್ಧಿಯು, ನಂತರ ಅವುಗಳಲ್ಲಿನ ರಾಸಾಯನಿಕಗಳು ತುಂಡು, ತುಂಡಾಗಿ ರಕ್ತಗತ ವಾಗುತ್ತಿರುವಾಗ "ಕಫಯುಕ್ತ ಪಿತ್ತ ವೃದ್ಧಿ"ಯೂ, ರಾಸಾಯನಿಕಗಳನ್ನು ಜೀವಕೋಶ ಗಳು ಹೀರಿದ ನಂತರ ಖಾಲಿಯಾದ ಅವಸ್ಥೆಯನ್ನೇ "ವಾತವೃದ್ಧಿ" ಎಂತಲೂ ಅರ್ಥ.



ಈ ರಾಸಾಯನಿಕಗಳು ಶಾರೀರಿಕ ಅಗತ್ಯಕ್ಕಿಂತ ಹೆಚ್ಚಾದಾಗಲೂ, ತಕ್ಕಷ್ಟು ಶರೀರಿಕ ಶ್ರಮ ಮಾಡದಿದ್ದಾಗಲೂ ಅಥವಾ ಅತಿಯಗಿ ಶ್ರಮ ಮಾಡಿದಾಗಲೂ ಹಾಗೆಯೇ ಬಲ್ಯಾದಿಗಳ, ಕಾಲಾದಿಗಳ ಪ್ರಭಾವದಿಂದಲೂ ಹಾಗೂ ಶೋಕ ಭಯಾದಿ ಮಾನಸಿಕ ವೃತ್ತಿಗಳಿಂದಲೂ ಈ ರಾಸಾಯನಿಕಗಳು ತಮ್ಮ ಸರಪಳಿ( ಕೆಮಿಕಲ್ ಚೈನ್)ಗಳನ್ನು ವ್ಯತ್ಯಾಸ ಮಾಡಿಕೊಂಡು ಶರೀರಕ್ಕೆ ಅನಾರೋಗ್ಯ ರೂಪದಲ್ಲೂ ಅಥವಾ ಅಂತರ್ವಿಷ ರೂಪದಲ್ಲೂ ಮೆಟಾಬಾಲಿಕ್, ಆಟೋ ಇಮ್ಯೂನ್ ಕಾಯಿಲೆಗಳನ್ನು ತರುತ್ತವೆ. ಈ ರಾಸಾಯನಿಕಗಳು ಹೊರಗಿನಿಂದ ಬಂದ  ಸೂಕ್ಷ್ಮ ಜೀವಿಗಳಿಗೆ ಆಹಾರವನ್ನೊದಗಿಸಿ, ಸೋಂಕುಗಳನ್ನೂ ಸಹ ಉಂಟುಮಾಡುತ್ತಿರುತ್ತದೆ.



ಆರೋಗ್ಯ ರಕ್ಷಣಾರ್ಥ ಇರುವ ಪಂಚಕರ್ಮ ಸೂತ್ರಗಳಲ್ಲಿ ಈ ಅನಗತ್ಯ ದೋಷಗಳನ್ನು ( ಅನಪೇಕ್ಷಿತ ರಾಸಾಯನಿಕಗಳು) ಹೊರಹಾಕುತ್ತಲೂ  ಸ್ವಲ್ಪ ಪ್ರಮಾಣದಲ್ಲಿದ್ದಾಗ ನಿಯಂತ್ರಿಸುತ್ತಲೂ,‌ ಅಗತ್ಯ ದೋಷಗಳು( ಅಪೇಕ್ಷಿತ ರಾಸಾಯನಿಕಗಳು) ಕಡಿಮೆ ಇದ್ದಾಗ ತುಂಬುತ್ತಲೂ ಮನುಷ್ಯರನ್ನು ಬಾಲ್ಯ ವೃದ್ಧಾದಿ ವಯದಲ್ಲೂ, ಶೀತ ಉಷ್ಣಾದಿ ಕಾಲ ಮುಂತಾದ ಎಲ್ಲ  ಕಾಲಗಳಲ್ಲೂ ಸದೃಢವಾಗಿಯೂ (ಶಾರೀರಕವಾಗಿ ಮಾನಸಿಕವಾಗಿ), ಆರೋಗ್ಯವಾಗಿಯೂ ಇಡುವುದರೊಂದಿಗೆ ಇಡೀ ಮನುಕುಲವನ್ನು ಶ್ರೀಮಂತವಾಗಿಸುತ್ತವೆ.



ಪಂಚಕರ್ಮದ ವಿಧಗಳನ್ನು ವಿಷದವಾಗಿ ನೋಡೋಣ.

**********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-90
30.03.2020

ಪಂಚಕರ್ಮ ಚಿಕಿತ್ಸೆ   (ಸರಣಿ ಲೆಖನಗಳು)

ರೋಗೋತ್ಪತ್ತಿ ಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಮೂಲಕ, ರೋಗೋತ್ಪತ್ತಿಗೆ ಮೊದಲೇ ಅದರ ಮೂಲವನ್ನೇ ತಡೆಯುವ, ಮನುಕುಲ ಹಿತಕಾರೀ ಚಿಕಿತ್ಸೆಯೇ ಪಂಚಕರ್ಮ

ಪಂಚಕರ್ಮದಲ್ಲಿ ಏನೆಲ್ಲಾ ಮಾಡುತ್ತಾರೆ ಮತ್ತು ಅವುಗಳ ವೈಜ್ಞಾನಿಕ ಕಾರಣ.

-ಪಾಚನೈರ್ದೀಪನೈಃ........... ಕಾಲೇ ಯಥಾsಸನ್ನಂ ಯಥಾ ಮಲಂ|_
-ಅಷ್ಟಾಂಗ ಹೃದಯ, ಸೂತ್ರ ಸ್ಥಾನ

ವಮನ, ವಿರೇಚನ, ಬಸ್ತಿ, ನಸ್ಯ ಮತ್ತು ರಕ್ತಮೋಕ್ಷಣ ಇವು ಐದೂ ಪಂಚಕರ್ಮಗಳು, ಎಲ್ಲವುಗಳಲ್ಲೂ-
ಪೂರ್ವಕರ್ಮ
ಪ್ರಧಾನಕರ್ಮ
ಪಶ್ಚಾತ್ ಕರ್ಮ
ಎಂಬ ಮೂರು ಭಾಗಗಳಲ್ಲಿ ಚಿಕಿತ್ಸೆ ನಡೆಯುತ್ತದೆ.

ಪೂರ್ವಕರ್ಮ
ಅಂದರೆ ರೋಗಕಾರಕ ಅಂಶಗಳನ್ನು ಹೊರಹಾಕುವ ಪ್ರಧಾನ ಪಂಚಕರ್ಮಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳುವ ಅತ್ಯಗತ್ಯ ನಾಲ್ಕು ವಿಧಿಗಳು ಮತ್ತು ಅವುಗಳ ವೈಜ್ಞಾನಿಕ ವಿವರಣೆ (ಸಂಕ್ಷೇಪ)-

1. ಪಾಚನ ಚಿಕಿತ್ಸೆಯಲ್ಲಿ ಒಂದಕ್ಕೊಂದು ಪ್ರತ್ಯೇಕವಾಗಿರದ  ರೋಗಕಾರಕ ಅನಗತ್ಯ  ರಾಸಾಯನಿಕಗಳ ಗುಂಪನ್ನು ಪ್ರತ್ಯೇಕಿಸಲು(disintegration of complex form of unwanted chemicals) ಔಷಧಿ ಕೊಡುತ್ತಾರೆ.
ಈ ಅನಗತ್ಯ ಅಪ್ರತ್ಯೇಕಿತ ರಾಸಾಯನಿಕಗಳು ಎಲ್ಲಾ ಧಾತುಗಳನ್ನು ದುರ್ಬಲಗೊಳಿಸುತ್ತಾ ರೋಗಗಳಿಗೆ ಬಲವನ್ನು ಕೊಡುತ್ತಾ ಶರೀರದ ಅನೇಕ ಸ್ಥಾನಗಳಲ್ಲಿ ಲೀನವಾಗಿರುತ್ತವೆ. ಪಾಚನ ಚಿಕಿತ್ಸೆಯು ಇವುಗಳನ್ನು ವಿಭಜಿಸಿ, ಅವುಗಳು ನೆಲೆಯಾಗಿರುವ ಸ್ಥಾನದಿಂದ ಪ್ರತ್ಯೇಕಿಸುತ್ತದೆ. ತನ್ಮೂಲಕ ಅವುಗಳನ್ನು ಹೊರತೆಗೆಯುವ ಆರಂಭಿಕ ಹೆಜ್ಜೆಯೇ ಪಾಚನ ಚಿಕಿತ್ಸೆ.

2. ದೀಪನ 
ಉದರದಿಂದ ಹಿಡಿದು ಜೀವಕೋಶದವರೆಗಿನ ಹಸಿವನ್ನು, ಕಿಣ್ವ ಪ್ರಕ್ರಿಯೆ(enzymatic action) ಯನ್ನು ವರ್ಧಿಸುವ ದೀಪನ ಚಿಕಿತ್ಸೆಯು "ಪಾಚನ ಚಿಕಿತ್ಸೆಯಲ್ಲಿ ಪ್ರತ್ಯೇಕಗೊಂಡ ರಾಸಾಯನಿಕಗಳು ಮತ್ತೆ ಲೀನವಾಗದಂತೆಯೂ ಹಾಗೂ ಮುಂದಿನ ಸ್ನೇಹಪಾನಾದಿ ಚಿಕಿತ್ಸೆಗಳಲ್ಲಿ ಅಜೀರ್ಣವಾಗದಂತೆಯೂ ನೋಡಿಕೊಳ್ಳುವ ಅತ್ಯಂತ ಮಹತ್ವದ  ಸೇತುವೆಯಾಗಿದೆ.

3. ಸ್ನೇಹನ ಅಥವಾ ಸ್ನೇಹಪಾನ 

ಇಲ್ಲಿ ನಿರ್ದಿಷ್ಟ ಔಷಧಿ ಸಿದ್ಧ ಘೃತ- ತೈಲಗಳನ್ನು ಕುಡಿಸಲಾಗುತ್ತದೆ. ಈ ಸ್ನೇಹ + ಔಷಧಿಗಳ ಸಂಯೋಗವು ಈಗಾಗಲೇ ಪ್ರತ್ಯೇಕಿತ ಅನಗತ್ಯ ರಾಸಾಯನಿಕಗಳನ್ನು ಎಳೆದುಕೊಂಡು ತನ್ನೊಳಗೇ ವಿಲೀನಗೊಳಿಸಿಕೊಳ್ಳುತ್ತದೆ. 

4. ಸ್ವೇದನ
ಸ್ನೇಹ+ಔಷಧಿಗಳಲ್ಲಿ ವಿಲೀನಗೊಂಡ ರೋಗಕಾರಕ ಅನಗತ್ಯ ರಾಸಾಯನಿಕಗಳು ಶರೀರದ ನಾನಾ ಭಾಗಗಳಿಂದ ಸ್ಥಾನಚ್ಯುತಗೊಂಡು, ಕರಗಿ, ನೀರಿನಂತಾಗಿ, ರಕ್ತದೊಳಗೆ ಸೇರಿ  ಉದರ - ಕರುಳುಗಳಿಗೆ ಮರಳಲು ಸರ್ವರೀತಿಯಿಂದಲೂ ಸನ್ನದ್ಧವಾಗಿಡುವ ಚಿಕಿತ್ಸೆಯೇ ಸ್ವೇದನ ಚಿಕಿತ್ಸೆ. ಇದನ್ನು "ವಿಶ್ರಾಮ ಕಾಲ" ಎಂತಲೂ ಕರೆಯುತ್ತಾರೆ ಏಕೆಂದರೆ ಈ ಹಂತದ ಚಿಕಿತ್ಸೆಯಲ್ಲಿ ಪಂಚಕರ್ಮ ತಜ್ಞರು ನಿರ್ದೇಶಸಿದಂತೆ ಶಾರೀರಿಕ ಶ್ರಮವಲ್ಲದ ಆದರೆ ಅತಿಯಾದ ಜಡತ್ವದಿಂದಲೂ ಕೂಡಿರದ 'ಅನಾಯಾಸದ ಚಟುವಟಿಕಿಗಳಲ್ಲಿ ತೊಡಗಿರಬೇಕಾಗುತ್ತದೆ.' ಇಲ್ಲವಾದರೆ ಇದೂವರೆಗಿನ ಎಲ್ಲಾ ಪ್ರಯತ್ನಗಳಿಂದ ಹೊರಬಂದ ರಾಸಾಯನಿಕಗಳು ಪುನಃ ಧಾತು ಲೀನವಾಗಿಯೋ ಅಥವಾ ಮಾರ್ಗಾವರೋಧವನ್ನು ಉಂಟುಮಾಡಿ ಚಿಕಿತ್ಸೆಯ ಮೂಲ ಉದ್ದೇಶಕ್ಕೇ ಧಕ್ಕೆ ತರುತ್ತವೆ.
************


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-91
31.03.2020

ಪಂಚಕರ್ಮ ಚಿಕಿತ್ಸೆ   (ಸರಣಿ ಲೆಖನಗಳು)


ರೋಗೋತ್ಪತ್ತಿ ಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಮೂಲಕ, ರೋಗೋತ್ಪತ್ತಿಗೆ ಮೊದಲೇ ಅದರ ಮೂಲವನ್ನೇ ತಡೆಯುವ, ಮನುಕುಲ ಹಿತಕಾರೀ ಚಿಕಿತ್ಸೆಯೇ ಪಂಚಕರ್ಮ



ಪಾಚನೈರ್ದೀಪನೈಃ........... ಕಾಲೇ ಯಥಾsಸನ್ನಂ ಯಥಾ ಮಲಂ|_

-ಅಷ್ಟಾಂಗ ಹೃದಯ, ಸೂತ್ರ ಸ್ಥಾನ

ಪ್ರಧಾನಕರ್ಮ
ಪಾಚನ ದೀಪನಾದಿಗಳಿಂದ ರೋಗಕಾರಕ ರಾಸಾಯನಿಕಗಳು ಸೂಕ್ಷ್ಮವಾಗಿ ವಿಭಜನೆಗೊಂಡು‌ ರಕ್ತದೊಡನೆ ಸರ್ವಶರೀರದಲ್ಲಿ ಸಂಚಾರ ಮಾಡುತ್ತಿರುತ್ತವೆ. 
ಅವು ಯಾವ ಗುಣಧರ್ಮದ(ಉಷ್ಣಕಾರಕ,‌ಶೀತಕಾರಕ,‌ಚಲನೆಉಳ್ಳವು) ರಾಸಾಯನಿಕಗಳು ಮತ್ತು ಯಾವ ಕಾಲದಲ್ಲಿ ಔಷಧಿಯು ಪ್ರಯೋಗಿಸಲ್ಪಡುತ್ತಿದೆ(ಯಥಾ ಕಾಲ, ಯಥಾ ಮಲಂ) ಎಂಬ ಆಧಾರದಲ್ಲಿ ಆಯುರ್ವೇದ ತಜ್ಞ ವೈದ್ಯರು ಅವುಗಳನ್ನು ಜಠರ ಅಥವಾ ಕರುಳಿನೆಡೆಗೆ ತಂದು ಹೊರಹಾಕುವ  ಔಷಧಿಗಳನ್ನು ಪ್ರಯೋಗಿಸುತ್ತಾರೆ. ಇದನ್ನೇ ಪ್ರಧಾನಕರ್ಮ ಎಂದು ಕರೆಯುತ್ತಾರೆ.
ಆಯುರ್ವೇದ ಔಷಧಿಯ ವೈಶಿಷ್ಠ್ಯವೇ ಇದು- ಪ್ರಧಾನಕರ್ಮದಲ್ಲಿ ಪ್ರಯೋಗಿಸುವ ಔಷಧಿಗಳು "ಮಲವನ್ನು (unwanted chemicals) ಮಾತ್ರ" ಜೀವಕೋಶಗಳಿಂದ ಹೊರತೆಗೆದು ವಾಂತಿಯ ಮೂಲಕೋ ಅಥವಾ ಬೇಧಿಯ ಮೂಲಕವೋ, ಅಥವಾ ಗಂಟಲಿನ ಕಫದ ಮೂಲಕವೋ ಶರೀರದಿಂದ ಹೊರಹಾಕುತ್ತವೆ. ಎಷ್ಟೇ ವಾಂತಿ , ಬೇಧಿಯಾದರೂ ವ್ಯಕ್ತಿಯ ಶರೀರ ಹಗುರ ಎಮ್ನಿಸುತ್ತದೆಯೇ ಹೊರತು ಆಯಾಸ ಎನ್ನಿಸುವುದಿಲ್ಲ. ಏಕೆಂದರೆ, ಜೀವಕೋಶಗಳಿಗೆ ಪೂರಕವಾದ ದ್ರವವನ್ನಾಗಲಿ, ಬಲವನ್ನಾಗಲಿ ಎಳ್ಳಷ್ಟೂ  ಹೊರಹಾಕದೇ ಶರೀರ ಮನಸ್ಸುಗಳು ಯಥಾವತ್ ಬಲವನ್ನು ಕಾಯ್ದುಕೊಂಡಿರುತ್ತವೆ.


ಪಶ್ಚಾತ್ ಕರ್ಮ

ಪಂಚಕರ್ಮದ ಒಟ್ಟಾರೆ ಪ್ರಕ್ರಿಯೆಯಲ್ಲಿ ಸಂಸರ್ಜನ ಕ್ರಮ  ಎಂಬ ಹೆಸರಿನ ಪಶ್ಚಾತ್ಕರ್ಮವು ಅತ್ಯಂತ ಪ್ರಧಾನ್ಯತೆಯನ್ನು ಹೊಂದಿದೆ. ಇದರ ಸರಿಯಾದ ಪಾಲನೆಯಿಂದ ಪಂಚಕರ್ಮದ ಪೂರ್ಣಲಾಭವನ್ನು ಪಡೆಯಬಹುದು ಮತ್ತು ಚಿರಕಾಲ ಯಾವುದೇ  ರೋಗಗಳು ಬಾರದಂತೆ ತಡೆಯಲೂಬಹುದು.
ಪ್ರಧಾನಕರ್ಮದ ವರೆಗಿನ ನಿಯಮಗಳನ್ನು ಎಷ್ಟೆ ಕಟ್ಟುನಿಟ್ಟಾಗಿ ಪಾಲಿಸಿದರೂ ಪಶ್ಚಾತ್ ಕರ್ಮವನ್ನು ಉಪೇಕ್ಷಿಸಿದರೆ ಗಂಭಿರ ಪರಿಣಾಮಗಳನ್ನು ಮುಂದೊಮ್ಮೆ ಎದುರಿಸಬೇಕಾಗುತ್ತದೆ. ಹಾಗಾಗಿ ಬಾಯಿ ಚಪಲವನ್ನು ಮೂರು ಅಥವಾ ಐದು ದಿನಗಳು ನಿಯಂತ್ರಿಸಿಕೊಂಡಿದ್ದೇ ಆದರೆ, ಅಪಘಾತಗಳನ್ನು ಹೊರತುಪಡಿಸಿ ಉಳಿದ ನೂರಾರು ರೋಗಗಳಿಂದ ನಿರಾಂತಕವಾಗಿ ದೂರ ಇರಬಹುದು.


ಶೋಧನ ಚಿಕಿತ್ಸೆಯಿಂದ ಪರಿಶುದ್ಧವಾದ ಪ್ರತಿ ಜೀವಕೋಶಗಳ ನೈಸರ್ಗಿಕ ಶುದ್ಧತೆಯನ್ನೂ ಮತ್ತು ಆ ಜೀವಕೋಶದ ರೋಗ ನಿಯಂತ್ರಕ ಸಾಮರ್ಥ್ಯವನ್ನೂ ಈ ಸಂಸರ್ಜನವು ಮಾಡುತ್ತದೆ. ಹೇಗೆಂದರೆ ಸರ್ವ ಶರೀರದ ಜೀವಕೋಶದೊಳಗೆ ಅಗ್ನಿಯನ್ನು(enzyme & hormonal strength) ಅತ್ಯುತ್ಕೃಷ್ಟಮಟ್ಟದಲ್ಲಿ ಇಡುವುದರ ಮೂಲಕ ಯಾವುದೇ ರೋಗವು ಶರೀರದ ಯಾವುದೇ ಜೀವಕೋಶಕ್ಕೆ ಸುಲಭದಲ್ಲಿ ತಾಗದಂತೆ ನೋಡಿಕೊಳ್ಳುತ್ತದೆ. ಹಾಗಾಗಿ

ಆತ್ಮೀಯರೇ,
ಪಂಚಕರ್ಮ ಚಿಕಿತ್ಸೆಯನ್ನು ಬಯಸಿ ಆರಂಭಿಸಿದರೆ, ಪಶ್ಚಾತ್ ಕರ್ಮವನ್ನು ಹಗುರವಾಗಿ ಪರಿಗಣಿಸಬೇಡಿ. ನಮ್ಮಲ್ಲಿ ಈ ಶೋಧನ ಚಿಕಿತ್ಸೆ ಮಾಡಿಸಿಕೊಳ್ಳುವ ಅನೇಕರು ಪ್ರಧಾನ ಕರ್ಮದ ವರೆಗೆ ಎಷ್ಟೂ ತಪ್ಪದಂತೆ ನಿಯಮ‌ ಪರಿಪಾಲನೆ ಮಾಡುತ್ತಾರೆ ಆದರೆ ಅದೇಕೋ ಕೊನೆಕೊನೆಗೆ ಯಾವುದು ಅತೀ ಮುಖ್ಯವೋ ಅದನ್ನು ಉಪೇಕ್ಷಿಸಿ, ಮನಸ್ಸಿಗೆ ಬಂದಂತೆ ಆಹಾರ ಸೇವಿಸುತ್ತಾರೆ. ಇಂತವರಿಗೆ ಚಿಕಿತ್ಸೆ ಮಾಡುವುದು ವೈದ್ಯರ ಜೀವಮಾನದಲ್ಲೇ ಅತ್ಯಂತ ದುಃಖದಾಯಕ ಅಂಶ. ಅನ್ಯಾಯವಾಗಿ ಜೀವಿಯೊಂದು ಮುಂದಿನ ದಿನಗಳಲ್ಲಿ ಬಹಳ ಕಾಲಗಳವರೆಗೆ ಆರೋಗ್ಯದ ವಿಷಯದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುತ್ತದೆ. ಹೇ ದೇವ ಧನ್ವಂತರಿ, ಇಂತಹ ಅಗ್ನಿನಾಶಕ ಭಾವ ಉಳ್ಳ ಜನರಿಗೆ ಪಂಚಕರ್ಮ ಚಿಕಿತ್ಸೆಗೆ ಅಗತ್ಯವೇ ಬರದಂತೆ ನೋಡಿಕೋ ಅಥವಾ ಅವರ ಮನದಲ್ಲಿ ಪಂಚಕರ್ಮ ಚಿಕಿತ್ಸೆಯ ಇಚ್ಛೆಯನ್ನೇ ಹುಟ್ಟಿಸಬೇಡ.
********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-92
01.04.2020


ಪಂಚಕರ್ಮ ಚಿಕಿತ್ಸೆ    (ಸರಣಿ ಲೆಖನಗಳು)



ರೋಗೋತ್ಪತ್ತಿ ಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಮೂಲಕ, ರೋಗೋತ್ಪತ್ತಿಗೆ ಮೊದಲೇ ಅದರ ಮೂಲವನ್ನೇ ತಡೆಯುವ, ಮನುಕುಲ ಹಿತಕಾರೀ ಚಿಕಿತ್ಸೆಯೇ ಪಂಚಕರ್ಮ


ಇಂದಿನ ವಿಷಯ:
ವಮನ ಚಿಕಿತ್ಸೆ
ವೈಜ್ಞಾನಿಕ ವಾಂತಿಮಾಡಿಸುವಿಕೆ


ಕಫೇ ವಿದಧ್ಯಾತ್ ವಮನಂ, ಸಂಯೋಗೇ ವಾ ಕಫೋಲ್ಬಣೇ||



ವಿಶೇಷೇಣ ತು ವಾಮಯೇತ್....... ಸ ವಿಸರ್ಪ, ಸ್ತನ್ಯದೋಷ ಊರ್ದ್ವರೋಗಿಣಃ||



ಅವಮ್ಯಾ ಗರ್ಭಿಣಿ.............ವಾತರೋಗಿಣಃ ||

-ಅಷ್ಟಾಂಗ ಹೃದಯ, ಸೂತ್ರ ಸ್ಥಾನ, ಅಧ್ಯಾಯ- 18
***


ರೋಗಿ ಮತ್ತು ರೋಗದ ಆಯ್ಕೆ

ಯಾವುದೇ ಚಿಕಿತ್ಸೆಯಲ್ಲಿ ನಡೆಯುವಂತೆ ವಮನ ಚಿಕಿತ್ಸೆಯಲ್ಲಿ ಇನ್ನೂ ಹೆಚ್ಚು ಕಾಳಜಿಯಿಂದ ರೋಗಿಯ ಆಯ್ಕೆ ನಡೆಯುತ್ತದೆ. 


ನಮ್ಮ ಶರೀರ ವರ್ಧನೆಗೆ ಸಹಾಯಕವಾಗುವ ಪೃಥ್ವಿ ಮತ್ತು ಆಪ್ ಅಂಶಗಳಿಂದ ಕೂಡಿದ ಶರೀರವರ್ಧಕ  ರಾಸಾಯನಿಕಗಳ(ಕಫ) ಅನಗತ್ಯ ವೃದ್ಧಿಯನ್ನು ಅಥವಾ ವಿಕೃತರೂಪದಲ್ಲಿ  ಸಂಚಯ ಮತ್ತು ವೃದ್ಧಿಯನ್ನು ಕರಗಿಸಿ ಹೊರಹಾಕುವ ಪ್ರಕ್ರಿಯೆಯೇ ವಮನ ಚಿಕಿತ್ಸೆ.

ಇಡೀ ವಿಶ್ವದಲ್ಲಿ ಕಣ್ಣಿಗೆ ಕಾಣತಕ್ಕ ಸೃಷ್ಠಿಯ ಎಲ್ಲಾ ವಸ್ತುಗಳು ಪ್ರಧಾನವಾಗಿ ಪೃಥ್ವಿ ಮತ್ತು ಆಪ್ ಗಳಿಂದಾದ ಅಣುಗಳ ಸಂರಚನೆಯನ್ನು ಹೊಂದಿವೆ. ಹಾಗೆಯೇ ಈ ಶರೀರದ ನೋಡತಕ್ಕ, ಮುಟ್ಟತಕ್ಕ ಸಂರಚನೆಯು ಅದೇ ಪೃಥ್ವಿ ಆಪ್ ಗಳ  ಪರಮಾಣುಗಳಿಂದ ಮತ್ತು ಅತ್ಯಂತ ಸೂಕ್ಷ್ಮ ಜೀವ ಚೈತನ್ಯದ ವಿಶಿಷ್ಟ ಸಂಯೋಜನೆಯಾಗಿದೆ. ಪೃಥ್ವಿ ಮತ್ತು ಆಪ್ ಪರಮಾಣುಗಳ ಸಂಯೋಜನೆಯನ್ನೇ ಕಫ ಎಂದು ಕರೆಯುತ್ತೇವೆ. ಈ ಕಫ ಮತ್ತು ಜೀವ ಸಂಯೋಜನೆಯ ನಡುವಿನ ಅಸಮತೋಲನ ಮತ್ತು ವಿಕೃತಿಗಳ ಚಿಕಿತ್ಸೆಯನ್ನೇ ಕಫ ಚಿಕಿತ್ಸೆ ಅಥವಾ ವಮನ ಚಿಕಿತ್ಸೆ ಎಂದು ಕರೆಯುತ್ತೇವೆ.


ಜೀವಕ್ಕೆ ಬೇಕಾದಷ್ಟೇ ಪೋಷಕ ಪರಮಾಣುಗಳಿದ್ದರೆ(ಪೃಥ್ವಿ+ಆಪ್) ಕಫ ಸಮತೋಲನದಲ್ಲಿದೆ ಎಂದೂ ಅದನ್ನು ಜೀವಚೈತನ್ಯ ಕಫದ ಆರೋಗ್ಯ ಎಂತಲೂ ಮತ್ತು ವೃದ್ಧಿ ಅಥವಾ ವಿಕೃತಿಯಾದರೆ ಕಫಜನ್ಯ ರೋಗಗಳೆಂತಲೂ ಕರೆಯುತ್ತೇವೆ.

ಉದಾ:  ನವಜ್ವರ, ರಾಜಯಕ್ಷ್ಮ, ಚರ್ಮರೋಗ, ಸ್ಥೌಲ್ಯ, ಮಧುಮೇಹ, ಗ್ರಂಥಿ - ಅರ್ಬುದಗಳು, ಕೆಮ್ಮು- ದಮ್ಮು, ರಕ್ತಹೀನತೆ, ಕ್ರಿಮಿ, ಕುರ(absess), tonsillitis, sinusitis, ಶ್ಲೇಷ್ಮಪಿತ್ತ, ಅನೇಕರೀತಿ ಮೂತ್ರವಿಕಾರ ಮುಂತಾದವುಗಳು ಹಾಗೂ ಮಾನಸಿಕ ರೋಗಗಳಲ್ಲಿ ಅನೇಕ ರೀತಿಯ ಉನ್ಮಾದ ಮುಂತಾದವುಗಳು ಕಫಜ ರೋಗಗಳಾಗಿವೆ.
ಈ ಎಲ್ಲಾ ರೋಗಗಳಲ್ಲೂ ಕಫದೋಷದ ಅವಸ್ಥೆ, ರೋಗಸ್ಥಾನ, ಚಿಕಿತ್ಸೆಯ ಮಾಡುವಾಗಿನ ಋತುಗಳನ್ನು ಮತ್ತು ಚಿಕಿತ್ಸೆಗೆ ಒಳಗಾಗುವ ವ್ಯಕ್ತಿಯ ವಯಸ್ಸು, ಬಲ, ಸತ್ವ(ಮನೋ ಸಾಮರ್ಥ್ಯ), ರೋಗಿ ಬೆಳೆದುಬಂದ ಆಹಾರ ಪದ್ಧತಿ, ಪ್ರಾಂತ್ಯ, ಅವನ ಜೀರ್ಣಶಕ್ತಿ( ಜೀವಕೋಶಗಳ ಚಯಾಪಚಯ ಸಾಮರ್ಥ್ಯ) ಇವುಗಳನ್ನು ಆಧರಿಸಿ ಸೂಕ್ಷ್ಮಾವಲೋಕಿತ ವೈದ್ಯನು ವಮನ ಚಿಕಿತ್ಸೆಗೆ ರೋಗಿಯನ್ನು ಆಯ್ದುಕೊಳ್ಳುತ್ತಾನೆ.
ಇದು ಸಂಪೂರ್ಣ ವಮನ ಚಿಕಿತ್ಸೆಯಲ್ಲಿ ಅತ್ಯಂತ ಪ್ರಮುಖ ಘಟ್ಟ ಹಾಗಾಗಿ ವ್ಯಕ್ತಿಯು ತನ್ನ ಎಲ್ಲಾ ಗುಣದೋಷಗಳನ್ನು ಸಾಮರ್ಥ್ಯ ದೌರ್ಬಲ್ಯಗಳನ್ನು ವೈದ್ಯನ ಮುಂದೆ ತೆರೆದಿಡಬೇಕಾಗುತ್ತದೆ. ವೈದ್ಯನ ಕೇಳುವ ಅನೇಕ ಪ್ರಶ್ನೆಗಳು ರೋಗಿಗೆ ಅನಗತ್ಯ ಎನ್ನಿಸಿದರೂ ವೈದ್ಯನ ದೃಷ್ಟಿಯಲ್ಲಿ ಪ್ರತಿಯೊಂದಕ್ಕೂ ಮಹತ್ವ ಇರುತ್ತದೆ.
ವಮನ ಅಯೋಗ್ಯರು  ಅಂದರೆ, ಕಫ ವಿಕೃತಿ ಇದ್ದರೂ ರೋಗಿಯ ಶರೀರ ಮತ್ತು ಮನೋ ಸಾಮರ್ಥ್ಯದ ವ್ಯತ್ಯಾಸ ಇದ್ದಾಗಲೂ ಮತ್ತು ಎರಡೂ ಸಮರ್ಪಕವಾಗಿದ್ದೂ ಕಾಲ ವ್ಯತ್ಯಾಸವಿದ್ದಾಗಲೂ ವಮನ ಚಿಕಿತ್ಸೆಗೆ ಆಯ್ದುಕೊಳ್ಳುವುದಿಲ್ಲ, ಮುಂದೂಡುತ್ತಾರೆ ಅಥವಾ ಆಯ್ದುಕೊಂಡಾಗಲೂ  ರದ್ದುಪಡಿಸುತ್ತಾರೆ. 
ಈ ಆಯ್ಕೆ ಪ್ರಕ್ರಿಯೆಯಲ್ಲಿ ಕೇವಲ ಆಯುರ್ವೇದ ರೀತ್ಯ ಪರೀಕ್ಷೆಯಲ್ಲದೇ ಆಧುನಿಕ ರಕ್ತ ಮೂತ್ರಾದಿ ತಪಾಸಣೆಗಳನ್ನು, ultra sound, C.T., M.R.I. scanning ಮುಂತಾದವುಗಳನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತಾರೆ. ಆದ್ದರಿಂದ ಆಯುರ್ವೇದ ವೈದ್ಯನ ಬಳಿ ಬರುವಾಗ ನಿಮ್ಮಲ್ಲಿರುವ ಯಾವುದೇ ವೈದ್ಯಕೀಯ ದಾಖಲಾತಿಗಳನ್ನು ಮರೆಯದೇ ವೈದ್ಯರಿಗೆ ತೋರಿಸಿರಿ.
************

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-93
02.04.2020

ಪಂಚಕರ್ಮ ಚಿಕಿತ್ಸೆ   (ಸರಣಿ ಲೆಖನಗಳು)


ರೋಗೋತ್ಪತ್ತಿ ಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ ಪಂಚಕರ್ಮ


ಇಂದಿನ ವಿಷಯ:
ವಮನ ಕರ್ಮ ದಲ್ಲಿ ಬರುವ 
ನಿದಾನ ಪರಿಮಾರ್ಜನ ಮತ್ತು
ಪಾಚನ-ದೀಪನ ಚಿಕಿತ್ಸೆಗಳು.


ದಶವಿಧ ಪರೀಕ್ಷಾ ನಂತರ ವಮನ ಚಿಕಿತ್ಸೆಗೆ ರೋಗಿಯನ್ನು ಆಯ್ಕೆ ಮಾಡಿಕೊಂಡ ವೈದ್ಯನು ಪ್ರಾರಂಭಿಸುವ ಮೊದಲ ಚಿಕಿತ್ಸೆಯೇ "ನಿದಾನ ಪರಿಮಾರ್ಜನ"


ನಿದಾನ ಪರಿಮಾರ್ಜನ
(ನಿದಾನ=ರೋಗದ ಕಾರಣ)
ಆ ಮೊದಲು ಆರೋಗ್ಯದಿಂದ ಇದ್ದ ವ್ಯಕ್ತಿ ಯಾವ ಕಾರಣದಿಂದ ರೋಗಿಯಾಗಿ ಬದಲಾಗಿದ್ದಾನೋ ಆ ಕಾರಣವನ್ನು ಸಂಪೂರ್ಣವಾಗಿ ತಡೆಯುವುದೇ ನಿದಾನ ಪರಿಮಾರ್ಜನ.  ಇದು ಪ್ರತಿ ರೋಗಿಗೂ ಭಿನ್ನಬಾಗಿ ಇರುತ್ತದೆ. ಉದಾ: ಒಬ್ಬನಿಗೆ ಹೆಚ್ಚು ಸಿಹಿ ತಿನ್ನುವುದರಿಂದ ಬರುವ ಮಧುಮೇಹವು ಇನ್ನೊಬ್ಬನಿಗೆ ಹೆಚ್ಚು ಯೋಚನೆ ಮಾಡುವುದರಿಂದ ಬಂದಿರಬಹುದು. ಇಬ್ಬರಿಗೂ ಒಂದೇ ರೀತಿಯ ಚಿಕಿತ್ಸಾ ಪ್ರಕ್ರಿಯೆ ಆಯುರ್ವೇದದಲ್ಲಿ ಎಂದಿಗೂ ನಡೆಯುವುದಿಲ್ಲ. ಆದಕಾರಣ ವೈದ್ಯನು ತನ್ನ ಕೌಶಲ್ಯದಿಂದ, ಅನುಭವದಿಂದ, ಉದಾಹರಣೆಗಳೊಂದಿಗೆ ಆಪ್ತೋಪದೇಶದ ರೂಪದಲ್ಲಿ ರೋಗಿಗೆ ನಿದಾನ ಪರಿಮಾರ್ಜನದ ಮಾಹಿತಿ ಮತ್ತು ಮಹತ್ವಗಳನ್ನು ಉಣಬಡಿಸುತ್ತಾನೆ. ಇದಕ್ಕೆ ರೋಗಿಯ ಗ್ರಹಣ ಸಾಮರ್ಥ್ಯದ ಆಧಾರದಲ್ಲಿ 30 ರಿಂದ 90 ನಿಮಿಷಗಳು ಬೇಕಾಗುತ್ತದೆ.‌ ಇಲ್ಲಿ ವೈದ್ಯನು ಪ್ರತಿರೋಗಿಗೂ ಪ್ರತ್ಯೇಕವಾಗಿ ಆಹಾರ-ವಿಹಾರಾದಿ ವಿಧಿ-ನಿಷೇಧಗಳನ್ನೂ ಮತ್ತು ಪೂರ್ಣ ಚಿಕಿತ್ಸಾ ಪ್ರನಾಳಿಯನ್ನು ಕೊಡುತ್ತಾನೆ. ಇದಿಲ್ಲದೇ ಪಂಚಕರ್ಮ ಚಿಕಿತ್ಸಾ ಪ್ರಕ್ರಿಯೆ ಆರಂಭವಾಗುವುದೇ ಇಲ್ಲ.


ಪಾಚನ ಚಿಕಿತ್ಸೆಯ ಕಾಲಾವಧಿ:

ಹಿಂದೆ ತಿಳಿಸಿದಂತೆ ರೋಗವೃದ್ಧಿಕರ ರಾಸಾಯನಿಕಗಳ ಸೂಕ್ಷ್ಮ ಬಂಧಗಳನ್ನು ಒಡೆಯುವುದೇ ಪಾಚನ ಚಿಕಿತ್ಸೆ.
ಇದರ ಕಾಲಾವಧಿ ಜಗತ್ತಿನ ಯಾವುದೇ ವೈದ್ಯಪದ್ಧತಿಯಲ್ಲಿರುವಂತೆ ನಿರ್ದಿಷ್ಟ ಸಮಯ ಅಥವಾ ಸಮಯದ ಪರಿಮಾಣ ಇರುವುದಿಲ್ಲ. ಈ ಕಾಲಾವಧಿಯು ರೋಗಿಯ ಪ್ರಕೃತಿ, ರೋಗಿಯಾದಾಗಿನ‌ ಕಾಲಾವಧಿ, ರೋಗದ ಸ್ಥಾನ ಮತ್ತು ಗಂಭೀರತೆ ಮುಂತಾದವುಗಳನ್ನು ಆಧರಿಸಿ ದೋಷ ಪಾಚನ ಲಕ್ಷಣ ಬರುವವರೆಗೆ ಕೊಡಬೇಕಾಗುತ್ತದೆ. ಇದು ಪ್ರತಿ ರೋಗಿಯ ಶರೀರವು ಔಷಧಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ.‌ ಹಾಗಾಗಿ ರೋಗಿಗೆ ಇರಬೇಕಾದ 4 ಲಕ್ಷಣಗಳಲ್ಲಿ "ಸ್ಮೃತಿ" "ಸತ್ವವಾನ್" ಎಂಬ 2 ಗುಣಗಳು ಮುಖ್ಯವಾಗುತ್ತವೆ. ಏಕೆಂದರೆ ಪಾಚನ ಚಿಕಿತ್ಸೆಯ ಮೊದಲು ನಂತರ ಆದ ಬದಲಾವಣೆಗಳನ್ನು ಸ್ಪಷ್ಟವಾಗಿ ಗಮನಿಸಿ ವೈದ್ಯ ಪ್ರಶ್ನಿಸುವಾಗ ಆತನಿಗೆ ತಿಳಿಸಬೇಕಾಗುತ್ತದೆ. 
ದರ್ಶನ ಪರೀಕ್ಷೆ(ರೋಗಿಯನ್ನು ನೋಡುವಿಕೆ), ಸ್ಪರ್ಶನ ಪರೀಕ್ಷೆ(ರೋಗಿಯನ್ನು ಅಥವಾ ರೋಗದ ಭಾಗವನ್ನು ಮುಟ್ಟುವಿಕೆ) ಗಳಿಂದ ವೈದ್ಯನು ಎಲ್ಲವನ್ನೂ ಗಮನಿಸುತ್ತಾನಾದರೂ, ಪ್ರಶ್ನೆ ಪರೀಕ್ಷೆ(ರೋಗಿಯೊಂದಿಗಿನ ಪ್ರಶ್ನೋತ್ತರ) ಬಹಳ ಮುಖ್ಯ ಮಾಹಿತಿಗಳನ್ನು ಕೊಡುತ್ತದೆ. 


ಯಾವಾಗ ಸಮ್ಯಕ್ ಪಾಚಿತ ಲಕ್ಷಣಗಳು ಕಂಡುಬರುತ್ತವೋ ಆಗ ಮುಂದಿನ‌ಹಂತದ ಚಿಕಿತ್ಸೆಗೆ ಕಾಲಿಡಬೇಕಾಗುತ್ತದೆ.



ಮುಂದಿನ ಹಂತ- 

ದೀಪನ ಚಿಕಿತ್ಸೆ 
ವಮನ ಚಿಕಿತ್ಸೆಯ ಇಡೀ  ಪ್ರಕ್ರಿಯೆ ಮುಗಿವವರೆಗೆ ಯಾವ ಹಂತದಲ್ಲೂ ಜೀರ್ಣ ಶಕ್ತಿ ಕುಂದದಂತೆ ನೋಡಿಕೊಳ್ಳುವುದು ವೈದ್ಯನ ಆದ್ಯ ಕರ್ತವ್ಯ, ದೀಪನ ಅಂದರೆ ಅಗ್ನಿ ಉರಿಯುವಿಕೆ ಎಂದರ್ಥ, ಹಸಿವನ್ನೂ ಮತ್ತು ಆಹಾರ ಜೀರ್ಣಿಸಿಕೊಳ್ಳುವ ಪ್ರಮಾಣವನ್ನೂ ಗಮನಿಸಿ ದೀಪನಕ್ಕಾಗಿ ವಿಶಿಷ್ಟ ದ್ರವ್ಯಗಳನ್ನು ಕೊಡಬೇಕಾಗುತ್ತದೆ.
ಅನೇಕ ಬಾರಿ ಯಾವ ದ್ರವ್ಯಗಳು ಪಾಚನ ಕೆಲಸ ಮಾಡುವವೋ ಅವೇ ದ್ರವ್ಯಗಳು ಅಗ್ನಿದೀಪನವನ್ನೂ ಮಾಡುತ್ತವೆ. ಹಾಗಾಗಿ ಪಾಚನ-ದೀಪನಗಳು ಒಟ್ಟಿಗೇ ನಡೆಯುವ ಸಂದರ್ಭವೇ ಹೆಚ್ಚು.
************

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-94
03.04.2020


ಪಂಚಕರ್ಮ ಚಿಕಿತ್ಸೆ   (ಸರಣಿ ಲೆಖನಗಳು)



ರೋಗೋತ್ಪತ್ತಿ ಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ ಪಂಚಕರ್ಮ


ಇಂದಿನ ವಿಷಯ:    ವಮನ ಚಿಕಿತ್ಸೆ
ವೈಜ್ಞಾನಿಕ ವಾಂತಿಮಾಡಿಸುವಿಕೆ
ಮುಂದುವರಿದ ಭಾಗ ವಮನ ಪೂರ್ವ ಸ್ನೇಹಪಾನ


ಕಫೇ ವಿದಧ್ಯಾತ್ ವಮನಂ, ಸಂಯೋಗೇ ವಾ ಕಫೋಲ್ಬಣೇ||

-ಅಷ್ಟಾಂಗ ಹೃದಯ, ಸೂತ್ರ ಸ್ಥಾನ, ಅಧ್ಯಾಯ- 18
***
ಸ್ನೇಹಪಾನ-
ಸ್ನೇಹ= ಔಷಧಿ ಸಿದ್ಧ ಘೃತ, ತೈಲ, ವಸಾ, ಮಜ್ಜಾ
ಪಾನ= ಕುಡಿಸುವುದು.


ಸ್ನೇಹಪಾನದ ಉದ್ದೇಶ: 

ರೋಗಕಾರಕ ಅಂಶಗಳನ್ನು ಮೃದುಗೊಳಿಸಿ(ಕ್ಲಿನ್ನವಾಗಿಸಿ), ತನ್ನೊಳಗೆ ಲೀನಗೊಳಿಸಿಕೊಳ್ಳುವುದು.


ಕಾಲಾವಧಿ:

1 ರಿಂದ 7 ದಿನಗಳು.


ಪಾಚನ ದೀಪನದ ನಂತರ ಪ್ರತಿದಿನ ಬೆಳಿಗ್ಗೆ ಆರರಿಂದ ಏಳೂವರೆ ಗಂಟೆಯ ಮಧ್ಯದಲ್ಲಿ, ಸ್ನಾನಕ್ಕೆ ಪೂರ್ವದಲ್ಲಿ, ಹೊಟ್ಟೆ ಹಸಿವಾಗುವ  ಮೊದಲೇ ಸ್ನೇಹಪಾನ ಮಾಡಬೇಕು.



ಉದ್ದೇಶ: ಶರೀರದಲ್ಲಿ ಜೀರ್ಣವಾಗದೇ ಇರುವ ಸ್ನೇಹಪಾನಕ್ಕೆ ಶೋಧನಾಂಗ ಸ್ನೇಹ ಯೋಜನೆ ಎಂದು ಕರೆಯುತ್ತಾರೆ. ಸ್ನೇಹವು ತನ್ನ ಸಾಮರ್ಥ್ಯವಾದ ಸೂಕ್ಷ್ಮ ಗುಣ ಮತ್ತು ವಿವರಣಾಶಕ್ತಿಯಿಂದ ಜಾರಿ-ತೂರಿ ಪ್ರತೀ ಜೀವಕೋಶಗಳ ಒಳಗೆ ಹೋಗುವುದು.

_ ದ್ರವ್ಯಸ್ಯ ವಿವರಣೇಶಕ್ತಿಃ ಸಸೂಕ್ಷ್ಮಃ_
ಜೀವಕೋಶಗಳ ರಕ್ಷಾಕವಚವು (cell membrane) ತನಗೆ ಬೇಕಾದುದನ್ನು ಮಾತ್ರ ಆಯ್ಕೆ ಮಾಡಿಕೊಂಡು ಒಳಗೆ ಬಿಟ್ಟಕೊಳ್ಳುವ ಸ್ವಭಾವವನ್ನು ಹೊಂದಿದೆ(selective permeability). ಜೀರ್ಣವಾಗದ ಸ್ನೇಹವು ರಕ್ಷಾ ಕವಚದ ಈ ಗುಣವನ್ನು ಅತಿಕ್ರಮಿಸಿ ಕೋಶದೊಳಗೆ ಜಾರಿ ಹರಿಯುತ್ತದೆ. ಅದೇ ಸ್ನೇಹವು ಜೀರ್ಣವಾದರೆ, ಅದನ್ನು ಜೀವಕೋಶವು ಆಯ್ಕೆಯಿಂದ ಒಳಗೆಳೆದುಕೊಂಡು ಬಲವನ್ನು ಪಡೆಯುತ್ತದೆ(ಸಾತ್ಮ್ಯ ಸ್ನೇಹ ಅಥವಾ ಬೃಂಹಣ ಸ್ನೇಹ). 
ಅಸಾತ್ಮ್ಯ ಸ್ನೇಹಪಾನದಿಂದ ಒಳಹೋದ ಔಷಧಿ ಸಿದ್ಧ ಸ್ನೇಹವು ಅಲ್ಲಿರುವ ರೋಗಕಾರಕ ರಾಸಾಯನಿಕಗಳನ್ನು ತನ್ನೊಳಗೇ ಸಂಪೂರ್ಣವಾಗಿ ಕರಗಿಸಿಕೊಳ್ಳುತ್ತದೆ.
ಒಟ್ಟಾರೆ ಶರೀರದಲ್ಲಿ  ಪೃಥ್ವಿ, ಆಪ್ ಗಳ ವಿಕೃತಿಯಿಂದಾದ ರಾಸಾಯನಿಕಗಳೆಲ್ಲವೂ, ಈ ಸ್ನೇಹದಲ್ಲಿ ಕರಗಿ ಒಂದಾಗಿಬಿಡುತ್ತವೆ. ಇದಕ್ಕೆ ಬೇಕಾಗುವ ಕಾಲಾವಧಿ ವ್ಯಕ್ತಿಯ ಪ್ರಕೃತಿ ಮತ್ತು ರೋಗಕಾರಕ ರಾಸಾಯನಿಕಗಳ ಪ್ರಮಾಣವನ್ನು ಅವಲಂಬಿಸಿರುತ್ತದೆ, ಇವು ಎಷ್ಟು ಹೆಚ್ಚೋ ಅಷ್ಟು ಹೆಚ್ಚು ದಿನ ಸ್ನೇಹಪಾನ ಬೇಕಾಗುತ್ತದೆ.
ಪ್ರತಿ ದಿನ ಪ್ರಮಾಣದಲ್ಲಿ ಹೆಚ್ಚುತ್ತಾ ಹೋಗುವ ಸ್ನೇಹಪಾನದ ಒಂದಂಶ ಜೀವಕೋಶದ ರಕ್ಷಣಾ ಪೊರೆಯ ಹಿಗ್ಗುವುಕೆ(elasticity of the cell membrane)ಯನ್ನು ವರ್ಧಿಸುತ್ತದೆ. ಇನ್ನೊಂದು ಅಂಶವು ಅನಗತ್ಯ ರಾಸಾಯನಿಕಗಳನ್ನು ಸೆಳೆಯುತ್ತದೆ. ಇದೇ ಕಾರಣದಿಂದ 20-30ಬಾರಿ ವಾಂತಿ/ಬೇಧಿಯಾದರೂ ಲವಣಾಂಶಗಳು ವ್ಯತ್ಯಯವಾಗಿ dehydration ಆಗುವುದಿಲ್ಲ ಹಾಗೂ ಯಾವ ಚಿಕಿತ್ಸೆಯೂ ಇಲ್ಲದೇ, ಅನಗತ್ಯ ರಾಸಾಯನಿಕಗಳು ಖಾಲಿ ಆದ ತಜ್ಷಣ ತಂತಾನೇ ವಾಂತಿ/ಬೇಧಿ ನಿಲ್ಲುತ್ತದೆ.


ಸ್ನೇಹಪಾನವನ್ನು ಯಾವಾಗ ನಿಲ್ಲಿಸಬೇಕು

ಎಲ್ಲರಿಗೂ 7ದಿನ ಬೇಕಾಗಿಲ್ಲ. ವ್ಯಕ್ತಿಯ
ಬೇಧಿಯಲ್ಲಿ ಸ್ವಲ್ಪ ಸ್ಮೇಹಾಂಶ ಕಾಣುವುದೇ ಸ್ನೇಹಪಾನದ ಕಾರ್ಯಸಿದ್ಧಿಯ ಸಂಕೇತ. ವೈದ್ಯನು ಈ ಸಂಕೇತಗಳನ್ನು ಗುರುತಿಸಿ ತಕ್ಷಣವೇ ಮುಂದಿನ ಹಂತವಾದ ಸ್ವೇದನ ಚಿಕಿತ್ಸೆ ಅಥವಾ ವಿಶ್ರಾಮ ಕಾಲಕ್ಕೆ ಅಡಿ ಇಡುತ್ತಾನೆ.
ವಿ. ಸೂ:-  ಹಸಿವೆಯಾದ, ಸ್ನಾನದ ನಂತರ ಸ್ನೇಹಪಾನ ಮಾಡಿದರೆ ನಮ್ಮ ಅಗ್ನಿಯು ಸ್ನೇಹವನ್ನು ಜೀರ್ಣಿಸಿ ಅದನ್ನು ತನ್ನದನ್ನಾಗಿಸಿಕೊಂಡು ರೋಗಕಾರಕ ರಾಸಾಯನಿಕಗಳನ್ನು ಹಾಗೆಯೇ ಉಳಿಸುವುದರಿಂದ ಇಡೀ ಚಿಕಿತ್ಸೆಯ ಉದ್ದೇಶವು ನಿಷ್ಫಲವಾಗುವುದು.
***********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-95
04.04.2020

ಪಂಚಕರ್ಮ ಚಿಕಿತ್ಸೆ  (ಸರಣಿ ಲೆಖನಗಳು)


ರೋಗೋತ್ಪತ್ತಿ ಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ ಪಂಚಕರ್ಮ



ಇಂದಿನ ವಿಷಯ:

ವಮನ ಕರ್ಮ ದಲ್ಲಿ ಬರುವ   ಸ್ವೇದನ ಚಿಕಿತ್ಸೆ

*ಸ್ನೇಹ ಕ್ಲಿನ್ನಾಃ........ದೋಷಾಃ...ಕೋಷ್ಠಂ ನೀತ್ವಾಃ ಸಮ್ಯಕ್ ಶುದ್ಧಿಭಿಃ ನಿರ್ಹರಂತೆ||*


ಅಷ್ಟಾಂಗ ಹೃದಯ, ಸೂತ್ರಸ್ಥಾನ-17


ಸ್ನೇಹಪಾನದಿಂದ ರೋಗಕಾರಕ ರಾಸಾಯನಿಕಗಳು ಸ್ನೇಹದಲ್ಲಿ ಕರಗಿಕೊಳ್ಳುತ್ತವೆ. ಇದೀಗ ಸ್ವೇದನ ಚಿಕಿತ್ಸೆ ನೋಡೋಣ-


ಸ್ವೇದನ ಚಿಕಿತ್ಸೆ ಎಂದರೆ, ಇಡೀ ಶರೀರಕ್ಕೆ ತೈಲದಿಂದ ಅಭ್ಯಂಗ ಮಾಡಿಸಿಕೊಂಡು, ಬೆವರು ಬರುವಂತೆ ಸ್ಟೀಮ್ ತೆಗೆದುಕೊಳ್ಳುವುದು. ಈ ಸ್ಟೀಮ್ ನಲ್ಲಿ 13 ವಿಧಗಳಿವೆ, ಅದರಲ್ಲಿ ಸರ್ವ ಶರೀರಕ್ಕೂ ಬೆವರು ಬರಿಸುವಂತಹ ವಿಧಾನಗಳಲ್ಲಿ ಒಂದನ್ನು ತಜ್ಞರು ಅಗತ್ಯಕ್ಕನುಸಾರ ಅನುಸರಿಸುತ್ತಾರೆ.  



ಇಂದು ಸಾಮಾನ್ಯವಾಗಿ ಬಾಡಿ ಮಸಾಜ್ ಹೆಸರಿನಲ್ಲಿ‌ನಡೆಯುವ ಕೇಂದ್ರಗಳಿಗೂ ಪಂಚಕರ್ಮ ಎಂಬ ಹೆಸರನ್ನಿಟ್ಟಿರುತ್ತಾರೆ. ಬಹಳ ಜನ ಅದನ್ನೇ ಪಂಚಕರ್ಮ ಎಂದು ಭಾವಿಸಿ, ಈಗಾಗಲೇ ಪಂಚಕರ್ಮ ತೆಗೆದುಕೊಂಡಿದ್ದೇವೆ ಎನ್ನುವ ರೋಗಿಗಳನ್ನು ನೋಡಿದ್ದೇವೆ. ಅಂತವರು ಇತ್ತ ಸ್ವಲ್ಪ ಗಮನಿಸಿ.


ಇಲ್ಲಿ ಸ್ನೇಹಪಾನ ಮಾಡಿದ ನಂತರ ಅಭ್ಯಂಗ ಮಾಡಿಸಿಕೊಳ್ಳುವುದರಿಂದ ಏನಾಗುತ್ತದೆ ವೈಜ್ಞಾನಿಕ ವಿವರಣೆ ನೋಡೋಣ. 


ಸ್ನೇಹದಲ್ಲಿ ಕರಗಿದ ಅಂಶಗಳು ಮಸಾಜ್ ಮತ್ತು ಸ್ಟೀಮ್ ನಿಂದ ದ್ರವೀಕರಣ ಗೊಳ್ಳುತ್ತವೆ. ಹೀಗೆ ನೀರಾಗಿ ಹರಿಯುವ ದೋಷಗಳು, ರಕ್ತದೊಂದಿಗೆ ಸರ್ವ ಶರೀರದಲ್ಲಿ ಸಂಚಾರ ಮಾಡುತ್ತವೆ. 



ಪೃಥ್ವಿ ಮತ್ತು ಜಲ ಅಂಶಗಳಿಂದ(ಕಫದಿಂದ) ಆದ ರಾಸಾಯನಿಕಗಳು ಬಹು ಬೇಗ ತುಂಡುತುಂಡಾಗಿ ವಿಭಜನೆಗೊಳ್ಳುವ ಕಾರಣ ಕೇವಲ ಒಂದು ದಿನ ಮಾತ್ರ ಸ್ವೇದನ‌ ಚಿಕಿತ್ಸೆ ನಡೆಯುತ್ತದೆ. ಅದೇ ಅಗ್ನಿ ತತ್ವದಿಂದ(ಪಿತ್ತದೋಷ) ಆದ ರಾಸಾಯನಿಕಗಳಿಗೆ 3 ದಿನದ ಕಾಲ ಸ್ವೇದನ ಚಿಕಿತ್ಸೆ ಬೇಕಾಗುತ್ತದೆ.



ಒಟ್ಟಾರೆ ಬದಲಾವಣೆ-

ಸ್ನೇಹದಿಂದ ಮೃದುವಾದ ದೋಷಗಳು, ಅವು ಕರುಳಿನಲ್ಲಿರಲಿ, ಅಥವಾ ಆಳವಾದ ಧಾತುಗಳಲ್ಲಿರಲಿ ಸ್ವೇದನ ಚಿಕಿತ್ಸೆಯಿಂದ ಕರಗಿ ನೀರಾಗಿ ಸರ್ವ ಶರೀರದಲ್ಲಿ ಹರಿಯುತ್ತಾ ಇರುತ್ತವೆ. ಸೂಕ್ತ ಕಾಲದಲ್ಲಿ ಅಂದರೆ 1-3ದಿನಗಳು ಕಳೆದ ಮೇಲೆ, ಸೂಕ್ತ ಔಷಧ ಬಳಸಿ ಇಡೀ‌ಶರೀರವನ್ನು ಶೋಧಿಸಿಬಿಟ್ಟರೆ, ವಿಕೃತ ದೋಷಗಳು ಮಾತ್ರ ನಿರ್ಹರಣವಾಗುತ್ತವೆ ಅಥವಾ ಹೊರಬಂದುಬಿಡುತ್ತವೆ.
*************

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-96
05.04.2020


ಪಂಚಕರ್ಮ ಚಿಕಿತ್ಸೆ   (ಸರಣಿ ಲೆಖನಗಳು)



ರೋಗೋತ್ಪತ್ತಿ ಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ ಪಂಚಕರ್ಮ


ಇಂದಿನ ವಿಷಯ:   ವಮನ ಪ್ರಧಾನ ಕರ್ಮ 

ಈ ಶರೀರಕ್ಕೆ ಎಳ್ಳಷ್ಟೂ ಧಕ್ಕೆಮಾಡದೇ ರೋಗಕಾರಕ ರಾಸಾಯನಿಕಗಳನ್ನು ಜೀವಕೋಶಗಳಿಂದ ಬಿಡುಗಡೆಗೊಳಿಸಿದ ಪೂರ್ವ ಕರ್ಮಗಳ ನಂತರ.


ಅವುಗಳನ್ನು ಅತ್ಯಂತ ಸಮರ್ಥವಾಗಿ ಶರೀರದ ಬಲ ಹಾಳಾಗದಂತೆ ಸೂಕ್ತ ಮಾರ್ಗದಿಂದ ಹೊರಕ್ಕೆ ಹಾಕುವ ಅತ್ಯಂತ ಪ್ರಧಾನ ಘಟ್ಟವೇ ಪ್ರಧಾನ ಕರ್ಮ.‌ 



ಇಲ್ಲಿ ಪೃಥ್ವಿ-ಅಪ್ ಗಳಿಂದಾದ(ಕಫ ದೋಷದಿಂದ ಆದ) ರಾಸಾಯನಿಕಗಳು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಶರೀರದ ಊರ್ಧ್ವ(ಮೇಲ್ಭಾಗ) ಭಾಗದಲ್ಲಿ ಸೇರಿಕೊಂಡಿರುತ್ತವೆ. ಇವುಗಳನ್ನು ಹೊರತೆಗೆಯಲು ಅತ್ಯಂತ ಸಮರ್ಥ ಮಾರ್ಗ ಎಂದರೆ "ಬಾಯಿ". ಈ ಎಲ್ಲಾ ದೋಷಗಳನ್ನೂ ಹೊರತೆಗೆಯಲು 

ಸುಮಾರು 245 ವಿಧದ ಔಷಧಿ ಕಲ್ಪಗಳನ್ನು(formulation) ಹೇಳುತ್ತಾರೆ.‌ ಅವುಗಳಲ್ಲಿ ಸೂಕ್ತವಾದ ಕಲ್ಪಗಳನ್ನು ಬಳಸಿ ವೈದ್ಯನು ವಾಂತಿ ಮಾಡಿಸುವ ಮೂಲಕ ರೋಗದ ಸಮೂಲವನ್ನೇ ಹೊರಹಾಕುತ್ತಾನೆ. ಅವುಗಳ ಸ್ಥಾನದಲ್ಲಿ ಆರೋಗ್ಯಯುತ ಅಂಶಗಳು ಸ್ಥಾಪಿತವಾಗುವಂತೆ ಮಾಡಿ, ತನ್ಮೂಲಕ ಚಿರಕಾಲದಲ್ಲೂ ರೋಗಗಳು ಬರದಂತೆ ತಡೆಯುತ್ತಾನೆ. ಇಂತಹ ಸುಭಾಗ್ಯ ಚಿಕಿತ್ಸಾ ವಿಧಾನಗಳು ಆಯುರ್ವೇದದಲ್ಲಿ ಇವೆ.


ವಮನ ಚಿಕಿತ್ಸೆಯ ಲಾಭ:

1) ಶರೀರವು ಜಡತ್ವದಿಂದ ಬಿಡುಗಡೆಯಾಗುತ್ತದೆ.
2) ಮಾನವ ಸಶಕ್ತ ಶರೀರ ಹೊಂದುತ್ತಾನೆ
3) ಅತ್ಯುತ್ತಮ ಜೀರ್ಣ ಶಕ್ತಿ ನಮ್ಮದಾಗುತ್ತದೆ
4) ಕಫದ(ಪೃಥ್ವಿ-ಆಪ್) ಆಶ್ರಯದಲ್ಲಿರುವ ತಮಸ್ಸು ಕರಗಿ ಹೊರ ಬರುವ ಕಾರಣ, ಮನಸ್ಸು ಆಲಸ್ಯ ಹೊಂದದೇ ಸದಾ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತದೆ.
5) ಬುದ್ಧಿ ಚುರುಕಾಗುತ್ತದೆ.
6) ಸ್ಮರಣಾ ಸಾಮರ್ಥ್ಯ ಹೆಚ್ಚುತ್ತದೆ.
7) ದೋಷಗಳಿಗೆ ಪೂರಕ ಆಹಾರವೇ ಇಲ್ಲದಂತೆ ಆಗಿ ಅವುಗಳ ಫೋಷಣೆ ನಿಲ್ಲುವುದರಿಂದ, ರೋಗ ಸಮೂಲ ಕರಗಿಹೋಗುತ್ತದೆ.
8) ಮುಂಬರುವ ಅನೇಕ ರೋಗಗಳನ್ನು ಇಂದೇ ತಡೆಯಲು ಇದು ಅತ್ಯಂತ ಮುಖ್ಯ.


ನಾಳೆಯ ವಿಷಯ ಅತ್ಯಂತ ಪ್ರಮುಖ ಮತ್ತು ನಿರ್ಲಕ್ಷ್ಯ ವಹಿಸದೇ ಪಾಲಿಸಲೇ ಬೇಕಾದ ವಿಷಯವಾಗಿದೆ. ಅದೇ

ಸಂಸರ್ಜನ ಕ್ರಮ
*************




ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-97

06.04.2020


ಪಂಚಕರ್ಮ ಚಿಕಿತ್ಸಾ ನಂತರದ   ಸಂಸರ್ಜನ ಚಿಕಿತ್ಸೆ



ಪೇಯಾಂ ವಿಲೇಪೀಮ್.......ಕ್ರಮೇಣ ಸೆವೇತ ನರೋ ಅನ್ನಕಾಲಾನ್......||29||

ಅಷ್ಟಾಂಗ ಹೃದಯ, ಸೂತ್ರಸ್ಥಾನ-18


ರೋಗೋತ್ಪತ್ತಿ ಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ "ಪಂಚಕರ್ಮ" ಮತ್ತು ಇದರ ಸಂಪೂರ್ಣ ಲಾಭ ಇರುವುದೇ ಸಂಸರ್ಜನ ಕ್ರಮ ಪಾಲನೆಯಲ್ಲಿ.



ಸಂಸರ್ಜನ ಕ್ರಮ ಎಂದರೆ, ದೋಷಕಾರಕ ರಾಸಾಯನಿಕಗಳನ್ನು ಹೊರ ಹಾಕಿದಮೇಲೆ, ನಮ್ಮ ಜೀರ್ಣಶಕ್ತಿಯು ತಾತ್ಕಾಲಿಕವಾಗಿ ಅತ್ಯಂತ ಕ್ಷೀಣವಾಗಿರುತ್ತದೆ. ಇದನ್ನು ನಿಧಾನವಾಗಿ ಹೆಚ್ಚಿಸಬೇಕು. ಇಲ್ಲಿ ರೋಗಿಯ ತಾಳ್ಮೆ ಬಹು ಮುಖ್ಯವಾಗುತ್ತದೆ. ಬಹಳದಿನ ಪಥ್ಯ ಪಾಲಿಸಿದ್ದೇನೆ ಎಂದು ಆತುರಪಟ್ಟು ವೈದ್ಯನ ಸಲಹೆ ಮೀರಿ ಆಹಾರ ಸೇವಿಸಿದರೆ, ದೀರ್ಘಕಾಲೀನ ರೋಗಗಳು ಆಕ್ರಮಿಸುತ್ತವೆ. ಏಕೆಂದರೆ ಪಂಚಕರ್ಮ ಚಿಕಿತ್ಸೆ ನಂತರ ಜೀವಕೋಶಗಳನ್ನು ಮೊದಲು ಮಾಡಿ ಎಲ್ಲಾ ಹಂತದಲ್ಲೂ ಚಯಾಪಚಯ ಕ್ರಿಯೆ ಕ್ಷಿಣಿಸಿರುತ್ತದೆ. ಇಲ್ಲಿ ಪೇಯ, ವಿಲೇಪಿ, ಯೂಷ.... ( ನಿಧಾನವಾಗಿ ಅನ್ನದ ಗಂಜಿಸೇವನೆ, ಹೆಸರುಬೇಳೆ ಕಟ್ಟು....) ನಂತರ ಮೆದುವಾದ ಅನ್ನಾದಿಗಳನ್ನು ಕೊಡುವುದೇ ಹಿತಕಾರಿ,  ಹೀಗೆ ಮಾಡುವುದರಿಂದ ಜೀವಕೋಶಗಳ ಆಹಾರದ ಆಯ್ಕೆ ಮತ್ತು ಒಳಗಣ ಜೀರ್ಣ ಕ್ರಿಯೆ ಸಮರ್ಪಕವಾಗುವುದರಿಂದ ನಿರ್ದಿಷ್ಟ ಎಂಜೈಮ್, ಹಾರ್ಮೋನ್, ಪ್ರೋಟೀನ್ ‌ಉತ್ಪತ್ತಿಯಾಗಿ ನಮ್ಮನ್ನು ದೀರ್ಘಕಾಲ ರೋಗಗಳಿಂದ ರಕ್ಷಿಸುತ್ತದೆ.

ಇದಕ್ಕೆ ವಿರುದ್ಧವಾಗಿ ವಮನ ವಿರೇಚನದ ಮರುದಿನವೇ ಗಂಜಿಯ ಬದಲು ಇಡ್ಲಿ ರೊಟ್ಟಿ ಅನ್ನ ಮೊದಲಾದವನ್ನು ಸೇವಿಸಿದರೆ, ಜೀವಕೋಶಗಳ ಪೊರೆ ಆಯ್ಕೆಯಲ್ಲಿ ಸೋಲುತ್ತದೆ, ಅನಗತ್ಯ ರಾಸಾಯನಿಕಗಳನ್ನೇ ಒಳಗೆ ಬಿಟ್ಟುಕೊಳ್ಳುತ್ತದೆ, ನಂತರ ಅವುಗಳನ್ನು ಜೀರ್ಣಮಾಡಿಕೊಳ್ಳಲಾಗದೇ ಈ ‌ಶರೀರಕ್ಕೆ ಅನಗತ್ಯ ಹಾರ್ಮೋನ್‌ಗಳ, ಹೊಂದಿಕೆಯಾಗದ ಎಂಜೈಮ್ ಗಳ, ಮೃದು ವಿಷಕಾರಕ ಪ್ರೋಟೀನ್ ಗಳ ಉತ್ಪತ್ತಿಯನ್ನು ಮಾಡಿ ಶರೀರವನ್ನು ದೀರ್ಘಕಾಲದ ರೋಗಗಳಿಗೆ ತುತ್ತಾಗಿಸುತ್ತದೆ. 


ಆದ್ದರಿಂದ, ಯಾರೇ ಪಂಚಕರ್ಮ ಚಿಕಿತ್ಸೆ ಪಡೆಯಲು ಇಚ್ಛಿಸಿದರೆ ಮೊದಲೇ, ನಿಮ್ಮ ಮನಸ್ಸನ್ನು ವೈದ್ಯರ ನಿರ್ದೇಶನಗಳ ಪಾಲನೆಗೆ ಸಿದ್ದವಾಗಿಸಿರಿ. ಇದನ್ನು ಭಿಷಗ್ವಶ ಎಂದು ಕರೆಯುತ್ತಾರೆ, ಇದು ರೋಗಿಯಲ್ಲಿ ನಿಶ್ಚಯವಾಗಿ ಇರಬೇಕಾದ ಗುಣವಾಗಿದೆ.



ಆಚಾರ್ಯರು ಇದಕ್ಕೊಂದು ದೃಷ್ಟಾಂತ ಕೊಡುತ್ತಾರೆ- 



ಯಥಾ ಅಣುಃ ಅಗ್ನಿಃ ತೃಣ.....ಕ್ರಮೇಣ ಮಹಾನ್ ಸ್ಥಿರಃ.......ಪೇಯಾದಿಭಿಃ ಅಂತರಗ್ನಿಃ ||30 ||



ನಿಧಾನವಾಗಿ ಉರಿಯುತ್ತಿರುವ ಬೆಂಕಿಗೆ, ತೃಣ, ಬೆರಣಿಗಳನ್ನು  ಹಾಕಿ ಕ್ರಮೇಣ ಹೆಚ್ಚಿಸಿದರೆ ದೊಡ್ಡ ದೊಡ್ಡ ಕಟ್ಟಿಗೆಗಳನ್ನು ದಹಿಸುತ್ತದೆ, ಮತ್ತು ಮಹಾನ್ ಸ್ಥಿರ ಅಂದರೆ ದೀರ್ಘಕಾಲೀನ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುತ್ತದೆ. ಆದರೆ ಒಮ್ಮೆಗೇ ದೊಡ್ಡ ಕಟ್ಟಿಗೆ ಹಾಕಿದರೆ ಆ ಬೆಂಕಿ ಅಳಿಸಿಹೋಗುವಂತೆ, ವಮನ ವಿರೇಚನಗಳ ನಂತರ ಕ್ಷೀಣಿಸಿದ ಜೀರ್ಣಶಕ್ತಿಗೆ ಪೇಯಾದಿಗಳ ಬದಲು ನೇರ ದೊಡ್ಡ ಮಾಲಿಕ್ಯೂಲ್ ಗಳನ್ನು ಹೊಂದಿದ ಸಾಮಾನ್ಯ  ಆಹಾರವನ್ನು ಎಂದಿನ‌ ಪ್ರಮಾಣದಲ್ಲೇ ಕೊಟ್ಟರೆ, ನಮ್ಮ ಜೀವಕೋಶದೊಳಗಣ ಜೀರ್ಣಶಕ್ತಿಯು ಕುಂದಿಹೋಗುತ್ತದೆ. ಇದು ಎಲ್ಲ ರೀತಿಯ ಅನರ್ಥಗಳಿಗೆ ಕಾರಣವಾಗುತ್ತದೆ.



"ಸಂಸರ್ಜನ ಪಾಲಿಸಿ ಮುಂದಿನ ಅನೇಕ ವರ್ಷಗಳವರೆಗೆ ರೋಗಗಳಿಂದ ದೂರ ಇರಿ"

*************

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-98
07.04.2020


ಪಂಚಕರ್ಮ ಚಿಕಿತ್ಸೆ   (ಸರಣಿ ಲೆಖನಗಳು)



ರೋಗೋತ್ಪತ್ತಿ ಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ ಪಂಚಕರ್ಮ


ವಿರೇಚನ ಚಿಕಿತ್ಸಾ ಮತ್ತು ಬಸ್ತಿ ಚಿಕಿತ್ಸಾ


ತೇಜ ಮಾಹಾಭೂತವನ್ನು ವಿಕೃತಿ ಗೊಳಿಸಿದ ಆಪ್ ಪೃಥ್ವಿ ಮತ್ತು ವಾಯು ಮಹಾಭೂತಗಳನ್ನು ಹೊರಹಾಕುವ(ಪಿತ್ತವನ್ನು ಹೊರಹಾಕುವ) ಚಿಕಿತ್ಸೆಯೇ ವಿರೇಚನ


ತೇಜಸ್ಸು ನಮ್ಮ ಆಹಾರಾದಿಗಳನ್ನು ಪಚನವಾಗಿಸಿ, ಆಹಾರ ರಸವನ್ನಾಗಿಸಿ ನಂತರ ಈ ಶರೀರವನ್ನಾಗಿ ಬದಲಾಯಿಸುವ ಕಾರ್ಯದಲ್ಲಿ ನಿರತವಾಗಿರುತ್ತದೆ. ಇದು ಸ್ವತಂತ್ರವಾಗಿರದೇ ಪೃಥ್ವಿ ಆಪ್ ನಲ್ಲಿ ಆಶ್ರಯ ಪಡೆದಿರುತ್ತದೆ ಮತ್ತು ವಾಯುವಿನ ಪ್ರೇರಣೆಯಿಂದ (ಸಧ್ಯಕ್ಕೆ ಇದನ್ನು ಆಕ್ಸಿಜನ್ ಎಂದು ಕರೆಯೋಣ) ದಹಿಸಿ ಕಾರ್ಯ ನಿರ್ವಹಿಸುತ್ತಿರುತ್ತದೆ.
ಈ ಆಶ್ರಯಗಳು ದೂಷಿತವಾದರೆ ಅಗ್ನಿಯು ತನ್ನ ಕಾರ್ಯದಿಂದ ವಿಕೃತಿಹೊಂದುತ್ತದೆ(ಉದಾ: ಕಟ್ಟಿಗೆಯಲ್ಲಿ ನೀರಿನ ಅಂಶ ಇದ್ದರೆ ಅದು ಶಕ್ತಿಗಿಂತ ಹೆಚ್ಚು ಹೊಗೆಯನ್ನೇ ಕೊಡುತ್ತದೆ. ಹಾಗೆಯೇ ಹೆಚ್ಚು ಹೆಚ್ಚು ವಾಯು ಬೀಸಿದರೆ ಅತ್ಯಂತ ಪ್ರಖರವಾಗಿ ದಹಿಸಿ ಆಹಾರವನ್ನು ಸುಟ್ಟು ಪೋಷಣೆ ಮಾಡದೇ, ಸಂಕಟ ಕೊಡುತ್ತದೆ.) 


ಇಂತಹ ಪಿತ್ತವನ್ನು ಶರೀರದಿಂದ ಹೊರಹಾಕುವ ಪಂಚಕರ್ಮ ಚಿಕಿತ್ಸೆಯೇ ವಿರೇಚನ


ಇದರಲ್ಲೂ ವಮನದಂತೆಯೇ ಪಾಚನ, ದೀಪನ, ಸ್ನೇಹಪಾನ, ಸ್ವೇದನ ಇರುತ್ತದೆ. ಇಲ್ಲಿ ವೈದ್ಯನು ನಿರ್ದಿಷ್ಟ ಗುಣಯುಕ್ತ ಔಷಧ, ಯೋಜನಾ ವಿಧಿ, ಕಾಲಗಳನ್ನು ಬದಲಾಯಿಸಿ ಪಿತ್ತವನ್ನು ಹೊರಹಾಕುವ ಕ್ರಿಯೆಗೆ ಚಾಲನೆ ಕೊಡುತ್ತಾರೆ.


ವಿರೇಚನ ಎಂದರೆ ಬೇಧಿಯಿಂದ ಹೊರಹಾಕುವಿಕೆ. ಇದಕ್ಕೆ ನಿಯಮಿಸಲ್ಪಟ್ಟ 355 ಯೋಗಗಳಲ್ಲಿ ಸೂಕ್ತವಾದುದೊಂದನ್ನು ಆರಿಸಿ ಯೋಜಿಸುತ್ತಾರೆ. ಔಷಧಿ ಯೋಜನಾ ಕಾಲವೂ ವಮನಕ್ಕಿಂತ ವ್ಯತ್ಯಾಸವಾಗಿರುತ್ತದೆ.



ಇದು ಔಷಧ ಸಿದ್ಧ ಬೇಧಿಯಾದುದರಿಂದ ಮೂವತ್ತು ಬಾರಿ ಬೇಧಿಯಾದರೂ, ಶರೀರ ಯಾವುದೇ ಶಕ್ತಿಯನ್ನು ಕಳೆದುಕೊಳ್ಳುವುದಿಲ್ಲ. 



ಇಲ್ಲಿಯೂ ಸಂಸರ್ಜನ ಕ್ರಿಯೆ ಅತ್ಯಂತ ಪ್ರಮುಖಸ್ಥಾನ ಪಡೆಯುತ್ತದೆ.

ನೆನಪಿಡಿ: ಸಂಸರ್ಜನದ ಹೊರತಾಗಿ ಯಾವ ಪಂಚಕರ್ಮವೂ ಪೂರ್ಣ ಸಿದ್ಧಿಯನ್ನು ಕೊಡುವುದಿಲ್ಲ. 


ಬಸ್ತಿ ಚಿಕಿತ್ಸಾ



ಪಂಚಕರ್ಮಗಳಲ್ಲೇ ಬಸ್ತಿ ಚಿಕಿತ್ಸೆ ಅತ್ಯಂತ ಶ್ರೇಷ್ಠ, ಅದಕ್ಕಾಗಿಯೇ ಆಚಾರ್ಯರು ಇದನ್ನು ಪೂರ್ಚಿಕಿತ್ಸೆ ಎಂತಲೂ ಕೆಲವರು ಅರ್ಧಚಿಕಿತ್ಸೆ ಎಂತಲೂ ಮತ್ತೆ ಕೆಲವರು ಶ್ರೇಷ್ಠ ಚಿಕಿತ್ಸೆ ಎಂತಲೂ ಕರೆಯುತ್ತಾರೆ.



ಏಕೆಂದರೆ ಇಲ್ಲಿ ಪ್ರಧಾನವಾಗಿ-

*ರಕ್ತನಾಳಗಳು ಮತ್ತು ರಕ್ತಪರಿಚಲನೆ ವಿಕಾರಗಳು
*ನರಗಳ ವಿಕೃತಿ
*ಹಾರ್ಮೋನ್ ಗಳ ದುಷ್ಟಿ
*ಅಸ್ಥಿ ಸಂಧಿ, ಮರ್ಮಸ್ಥಾನಗಳು
*ಇಂದ್ರಿಯಾದಿಗಳನ್ನು 
ಬಹಳ ಸಮರ್ಥವಾಗಿ ಚಿಕಿತ್ಸಿಸುವ ಶ್ರೇಷ್ಠ ಚಿಕಿತ್ಸೆ ಎಂಬುದು ನಮ್ಮ ಮತ.


ವಮನ-ವಿರೇಚನಗಳಿಗಿಂತ ಭಿನ್ನವಾದ ಚಿಕಿತ್ಸೆ ಬಸ್ತಿ, ಇಲ್ಲಿ ಗುದದ್ವಾರದಿಂದ ಔಷಧಿ ಯೋಜಿಸಿ ದೋಷಗಳನ್ನು ಅಲ್ಲಿಂದಲೇ ಹೊರತೆಗೆಯುತ್ತಾರೆ.



ಬಸ್ತಿ ವಿಧಾನಗಳು:

(ದೋಷ, ರೋಗ, ಆಶ್ರಯ ಸ್ಥಾನ ಮುಂತಾದವುಗಳ ಆಧಾರದಲ್ಲಿ)
ಯೋಗಬಸ್ತಿ = 8 ದಿನಗಳಲ್ಲಿ ಯೋಜಿಸುವ
ಕಾಲಬಸ್ತಿ =15 ದಿನಗಳಲ್ಲಿ ಯೋಜಿಸುವ‌ ಬಸ್ತಿಕ್ರಿಯೆ
ಕಾಲಬಸ್ತಿ = 30 ದಿನಗಳಲ್ಲಿ ಯೋಜಿಸುವ ಬಸ್ತಿಕ್ರಿಯೆ


ವಿಶೇಷತೆ:

ವಮನ ವಿರೇಚನಗಳು ಕೇವಲ ದುಷ್ಟ ರಾಸಾಯನಿಕಗಳನ್ನು ಹೊರಹಾಕುತ್ತವೆ ಅದನ್ನೇ ಶೋಧನ ಎನ್ನುತ್ತೇವೆ. ಆದರೆ ಬಸ್ತಿಯು ಶೋಧನವಾಗಿಯೂ, ಶಮನವಾಗಿಯೂ, ಪೋಷಕವಾಗಿಯೂ ಕೆಲಸ ಮಾಡಬಲ್ಲದು. 


ಬಸ್ತಿಯು ಅತ್ಯಂತ ಆಳದಲ್ಲಿ ಕೆಲಸ ಮಾಡುವುದರಿಂದ ಹಾರ್ಮೋನ್ ಮಟ್ಟದಲ್ಲಿ, ಮನೋಹಂತದಲ್ಲಿ ವಿಕೃತಿಯನ್ನು ಹೋಗಾಲಾಡಿಸಿ ಯಾವುದೇ ತೊಂದರೆಗಳಿಗೆ ಶೀಘ್ರ ಮತ್ತು ದೀರ್ಘಕಾಲೀನ ಪರಿಹಾರ ಒದಗಿಸಬಲ್ಲದು.



ಉಪಯುಕ್ತತೆ:

• ರಕ್ತದೊತ್ತಡ
• ಹೃದಯದ ತೊಂದರೆ
• ಪಾರ್ಶ್ವವಾಯು
• ಸೈಯಾಟಿಕಾ
• ಲಂಬಾರ್, ಸರ್ವೈಕರ್ ಡಿಸ್ಕ್ ತೊಂದರೆಗಳು
• ಮೂಳೆ ತೊಂದರೆ
• ಸಂಧಿವಾತ
• ಆಮ್ಲಪಿತ್ತ
• ಆಮವಾತ
• ವಾತರಕ್ತ(ರಕ್ತನಾಳಗಳ ವಿಕಾರ)
• ಮಜ್ಜೆ ವಿಕಾರ
• ಮಾಂಸ ವಿಕಾರ
• ಸ್ಥೌಲ್ಯ
• ಲೈಂಗಿಕ ವಿಕಾರ
• ಬಂಜೆತನ
• ವೆರಿಕೋಸ್ ವೇನ್
• ಗ್ಯಾಂಗ್ರೀನ್
• ಗರ್ಭಕೋಶ ವಿಕಾರ
• ಮುಟ್ಟಿನ ದೋಷ
• ಪಿ.ಸಿ.ಒ.ಡಿ
• ಓವರಿಯನ್ ಸಿಸ್ಟ್
• ಮೆದುಳ ಗಡ್ಡೆಗಳು
• ಕಿಡ್ನಿ ತೊಂದರೆಗಳು
• ಕಣ್ಣು ಕಿವಿ ತೊಂದರೆಗಳು
• ವಿವಿಧ ಅರ್ಬುದಗಳು.....
ಇನ್ನೂ ಮುಂತಾದ ಅತ್ಯಂತ ದಾರುಣ, ಚಿಕಿತ್ಸಿಸಲಾಗದ ಮತ್ತು ಮಾರಣಾಂತಿಕ ರೋಗಗಳನ್ನೇ ಪರಿಹರಿಸುವ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಯಾಗಿದೆ.
************





ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-99
08.04.2020


ಪಂಚಕರ್ಮ ಚಿಕಿತ್ಸೆ   (ಸರಣಿ ಲೆಖನಗಳು)

ರೋಗೋತ್ಪತ್ತಿ ಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ ಪಂಚಕರ್ಮ

ನಸ್ಯ ಕರ್ಮ
ಮತ್ತು
ರಕ್ತ ಮೋಕ್ಷಣ ಚಿಕಿತ್ಸೆ

ಮೂಗಿನ‌ ದ್ವಾರಾ ಔಷಧ ಪ್ರಯೋಗಿಸಿ, ವಿಕೃತ ರಾಸಾಯನಿಕಗಳನ್ನು ಹೊರಹಾಕುವುದು, ಕತ್ತು ಮತ್ತು ಅದರ ಊರ್ಧ್ವಭಾಗದ ರೋಗಗಳನ್ನು ಗುಣಪಡಿಸುವ ವಿಧಾನಕ್ಕೆ ನಸ್ಯ ಚಿಕಿತ್ಸೆ ಎನ್ನುತ್ತಾರೆ.

ಊರ್ಧ್ವ ಜತ್ರು ವಿಕಾರೇಷು ವಿಶೇಷಾತ್ ನಸ್ಯಂ ಇಷ್ಯತೇ ನಾಸಾ ಹಿ‌ ಶಿರಸೋ ದ್ವಾರಮ್....|
-ಅಷ್ಟಾಂಗ ಹೃದಯ, ಸೂತ್ರ ಸ್ಥಾನ-20

ನಮ್ಮ ನಾಸಾ ದ್ವಾರವು ಶಿರಸ್ಸನ್ನು ತಲುಪಲು ಇರುವ ನೇರ ಮಾರ್ಗ ಹಾಗಾಗಿ, ಕತ್ತು ಮತ್ತು ಅದರ ಮೇಲಿನ ಭಾಗದ ಕಫ, ಪಿತ್ತ, ವಾತ ಮತ್ತು ರಕ್ತ ವಿಕಾರಗಳಿಗೆ ನಸ್ಯ ಚಿಕಿತ್ಸೆಯು ಅತ್ಯಂತ ಸೂಕ್ತ.

• ನಸ್ಯ ವಿಧಾನಗಳು*
ಮರ್ಶ ನಸ್ಯ
ಪ್ರತಿಮರ್ಶ ನಸ್ಯ
ಮರ್ಶ ನಸ್ಯ ಎಂದರೆ, ವೈದ್ಯರು ನಸ್ಯ ಚಿಕಿತ್ಸೆಯ ಎಲ್ಲಾ ವಿಧಿ ವಿಧಾನಗಳನ್ನು ಗಮನಿಸಿ ಸೂಕ್ತ ಸಮಯದಲ್ಲಿ ವಿಧಿಪೂರ್ವಕವಾಗಿ ಮತ್ತು ಪ್ರಭಲವಾಗಿ ಔಷಧಿಗಳನ್ನು ಮೂಗಿನ ಮೂಲಕ ಪ್ರಯೋಗಿಸಿ ಚಿಕಿತ್ಸಾ ಯಶಸ್ಸನ್ನು ಸಾಧಿಸುವುದರ ಮೂಲಕ ಕತ್ತಿನ ಊರ್ಧ್ವ ಭಾಗದ ಅನೇಕ ರೋಗಗಳನ್ನು ನಿವಾರಿಸುತ್ತಾರೆ.

ಪ್ರತಿಮರ್ಶ ನಸ್ಯ ಎಂದರೆ ಒಂದು ದಿನದಲ್ಲಿ ಅನೇಕ ಬಾರಿ ಅತ್ಯಂತ ಮೃದುವಾದ ಔಷಧಿಗಳಿಂದ ತಯಾರಿಸಿದ ತೈಲಾದಿಗಳನ್ನು ಆರೋಗ್ಯವಂತನು ಕೇವಲ ಒಂದೆರಡು ಹನಿಗಳನ್ನು ಮಾತ್ರ ಸ್ವತಃ ಮೂಗಿನಲ್ಲಿ ಹಾಕಿಕೊಳ್ಳುವುದರ ಮೂಲಕ ಕತ್ತಿನ ಮೇಲ್ಭಾಗದ ಅನೇಕ ರೋಗಗಳು ಬಾರದಂತೆ ತಡೆಯುವುದೇ ಪ್ರತಿಮರ್ಶ ನಸ್ಯ ಚಿಕಿತ್ಸೆ. 

ನಸ್ಯ ಚಿಕಿತ್ಸೆಯಿಂದ ಗುಣಪಡಿಸುವ ಅಥವಾ ಬಾರದಂತೆ ತಡೆಯುವ ರೋಗಗಳು
ಶಿರೋಶೂಲ
ಮೈಗ್ರೇನ್
ಸೂರ್ಯಾವರ್ತ
ಸ್ವರಕ್ಷಯ
ಒಣಗಿದ ಮೂಗು ಬಾಯಿ
ಉಗ್ಗು ರೋಗ(ವಾಕ್ ಸಂಗ)
ಮಂಪರು ಅಥವಾ ಅರೆಪ್ರಜ್ಞಾವಸ್ಥೆ
ಸರ್ವೈಕಲ್ ಡಿಸ್ಕ್ ಪ್ರಾಬ್ಲಂಗಳು
ಕರ್ಣಶೂಲ
ಪೀನಸ(sinusitis)
ದುಷ್ಟಪೀನಸ(infected sinusitis)
ನಾಸಾರ್ಶಸ್(nasal polyp)
ಟ್ರೈಜಮೈನಲ್ ನ್ಯೂರಾಲ್ಜಿಯಾ
ಅರ್ದಿತ(ಮುಖ ವಕ್ರತಾ)
ಬಾದಿರ್ಯ( ಕಿವುಡುತನ)
ಕಿವಿ ತಮಟೆ ಒಡೆಯುವುದು
ಕಿವಿ ಸೋರುವುದು
ಮೂಗಿನಿಂದ ರಕ್ತ ಸುರಿಯುವುದು
ಕೂದಲುದುರುವುದು
ಬಾಲ ನೆರೆ
ಮೊಡವೆ
ಬಂಗು
ಕಣ್ರೆಪ್ಪೆಯ ರೋಗಗಳು
ಹುಬ್ಬಿನ ರೋಗಗಳು
ಗೊರಕೆ
ಟಾನ್ಸಿಲೈಟಿಸ್
ಕೂದಲು ಸೀಳುವಿಕೆ
ಅಲೋಪೇಷಿಯಾ
ಶಿರೋಗತ ಕೃಮಿರೋಗಗಳು
ಕುತ್ತಿಗೆ ನೋವು
ಫ್ರೋಜನ್ ಶೋಲ್ಡರ್
ಟೆನ್ನಿಸ್ ಎಲ್ಬೋ
ಲಿಗಮೆಂಟ್ ವಿಕಾರಗಳು
ಕೆರೊಟಿಡ್ ಆರ್ಟರಿ ಬ್ಲಾಕೇಜ್,... ಮುಂತಾದವುಗಳು.
ನಸ್ಯ ಚಿಕಿತ್ಸೆಯನ್ನು ಅನೇಕ ಸಂದರ್ಭಗಳಲ್ಲಿ ಎಮರ್ಜೆನ್ಸಿ(ಆತ್ಯಾಯಿಕ) ಚಿಕಿತ್ಸೆಯಾಗಿ ಬಳಸಲಾಗುತ್ತದೆ.
...
ಭುಜವನ್ನು ಹೆಚ್ಚೂ ಬಳಸುವ ಆಟಗಾರರು ನಿತ್ಯ ಪ್ರತಿಮರ್ಶ ನಸ್ಯವನ್ನು ಬಳಸುವುದರಿಂದ ಭುಜದ ವಿಕಾರಗಳು ಬಾರದಂತೆ ಶಾಶ್ವತವಾಗಿ ತಡೆಯಬಹುದು.
ರಕ್ತಮೋಕ್ಷಣ ಚಿಕಿತ್ಸೆ  ವಾತ ಪಿತ್ತ ಕಫ ದೋಷಗಳಿಂದ ಉಂಟಾದ ರೋಗಗಳನ್ನು ವಮನ ವಿರೇಚನ ಬಸ್ತಿಗಳಿಂದ ನಿವಾರಿಸಬಹುದು. ಆದಾಗ್ಯೂ ತ್ರಿದೋಷಗಳು ರಕ್ತದಲ್ಲಿ ಅತ್ಯಂತ ಉಲ್ಬಣವಾದಾಗ ತತ್ ಕ್ಷಣದಲ್ಲಿ ತೊಂದರೆಯನ್ನುಂಟು ಮಾಡುತ್ತವೆ. ಇಂತಹ ಉಪದ್ರವಗಳನ್ನು ಅತ್ಯಂತ ಶೀಘ್ರವಾಗಿ ಕೆಲವೇ ನಿಮಿಷಗಳಲ್ಲಿ ನಿಯಂತ್ರಿಸಲು ಬಳಸುವ ವಿಧಾನವೇ ರಕ್ತಮೋಕ್ಷಣ.
 ಇಲ್ಲಿ ದೂಷಿತ ರಕ್ತವನ್ನು ಅದರ ಸ್ಥಾನ, ವ್ಯಾಪ್ತಿ, ದೂಷಿತ ಪ್ರಮಾಣಗಳನ್ನು ಆಧರಿಸಿ ವಿವಿಧ ವಿಧಾನಗಳಿಂದ ದೂಷಿತ ರಕ್ತವನ್ನು ಹೊರ ತೆಗೆಯುತ್ತಾರೆ.
ಜಲೌಕ ವಿಧಿ
ಶೃಂಗ ವಿಧಿ
ಅಲಾಬು ವಿಧಿ
ಸಿರಾವ್ಯಧ... ಇತರೆ
ಲಾಭಗಳು
ಅನೇಕ ಚರ್ಮವಿಕಾರಗಳು
ಕುರು(ಆಬ್ಸೆಸ್)
ಮಾಂಸಗ್ರಂಥಿಗಳು
ಗ್ಯಾಂಗ್ರೀನ್
ವೆರಿಕೋಸ್ ವೇನ್ಸ್
ಕೈ- ಕಾಲು- ಸರ್ವಾಂಗ ದಾಹ(ಉರಿ)
ಅಲರ್ಜಿಕ್ ಸ್ಕಿನ್ ಡಿಸಾರ್ಡರ್ಸ್
ನಿದ್ರಾಹೀನತೆ
ಶಿರೋಶೂಲ
ಸ್ತನ ಗ್ರಂಥಿ.. ಮುಂತಾದವುಗಳು.
********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-100

09.04.2020

(ಆರೋಗ್ಯ ರಕ್ಷಣೆಯಲ್ಲಿ ಅತ್ಯಂತ ಮಹತ್ವಪೂರ್ಣ ಘಟ್ಟ ಈ ಸಂಚಿಕೆ. ಸ್ವಲ್ಪ ದೀರ್ಘವಾಗಿದೆ. ದಯಮಾಡಿ ಸಮಯ ಮಾಡಿಕೊಂಡು ನಿಧಾನವಾಗಿ ಓದಿರಿ)
**********

ಸ್ವಾಸ್ಥ್ಯ ಪಂಚಕರ್ಮ  ಅಥವಾ  ಋತು ಪಂಚಕರ್ಮ
*ಅಥವಾ
ಪಂಚಕರ್ಮ ಚಿಕಿತ್ಸೆಯ ಅತ್ಯದ್ಭುತ ಲಾಭಗಳು
(ಪಂಚಕರ್ಮ ಚಿಕಿತ್ಸಾ ಸರಣಿ ಲೆಖನಗಳ ಕೊನೆಯ ಮಾಲಿಕೆ)

ರೋಗೋತ್ಪತ್ತಿ ಕಾರಕ ರಾಸಾಯನಿಕಗಳನ್ನು ಶರೀರದಿಂದ ಹೊರಹಾಕುವ ಚಿಕಿತ್ಸೆಯೇ ಪಂಚಕರ್ಮ

ಏನಿದು ಸ್ವಾಸ್ಥ್ಯ ಪಂಚಕರ್ಮ?

ಸ್ವಾಸ್ಥ್ಯ = ಆರೋಗ್ಯವಂತ ವ್ಯಕ್ತಿ(ಯ)
ಪಂಚಕರ್ಮ = ಶರೀರವನ್ನು ಆಂತರಿಕವಾಗಿ ಶುದ್ಧಗೊಳಿಸುವಿಕೆ.

ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂ............... ಪ್ರಶಮನಮ್ ||

ಸ್ವಾಸ್ಥ್ಯ ರಕ್ಷಣಂ ಎಂದರೆ ಆರೋಗ್ಯವಂತನ ಆರೋಗ್ಯ ಕೆಡದಂತೆ ಸರ್ವದಾ ಕಾಪಾಡುವುದು, ಇದೇ  ಆಯುರ್ವೇದದ ಮುಖ್ಯ ಉದ್ದೇಶ.

ಈ ಸ್ವಾಸ್ಥ್ಯ ರಕ್ಷಣೆಯಲ್ಲಿ ಬರುವ ಒಂದು ಅತ್ಯಂತ ಮಹತ್ವದ ಭಾಗವೇ ಸ್ವಾಸ್ಥ್ಯ ಪಂಚಕರ್ಮ ಅಥವಾ ಋತು ಪಂಚಕರ್ಮ

ಶರೀರ ಶುದ್ಧೀಕರಣ ಏಕೆ ಮಾಡಿಕೊಳ್ಳಬೇಕು? ಮತ್ತು ಯಾವ ಕಾಲ ಸೂಕ್ತ?

ನಿತ್ಯವೂ, ನಿರಂತರವೂ ನಮ್ಮ ಆಂತರಿಕ ಶರೀರ ಚಲನೆಯಲ್ಲಿರುತ್ತದೆ.‌ 
ಆಹಾರ ಪಡೆಯುವುದು, ದಹಿಸುವುದು, ಜೀರ್ಣವಾಗುವುದು, ಶಕ್ತಿ ಕೊಡುವುದು, ನಿಃಶೇಷವಾಗುವುದು. 
ಈ ಚಲನೆಯಲ್ಲಿ ನಾವು ಅನೇಕ ಪ್ರಭಾವಗಳನ್ನು ಅನುಭವಿಸಬೇಕಾಗುತ್ತದೆ..‌
• ವಯದ ಪ್ರಭಾವ ಅಂದರೆ ಬಾಲ್ಯದ ಶರೀರ ಮನಸ್ಸೇ ಬೇರೆ, ಯೌವನ ವಾರ್ಧಖ್ಯದ ಅವಸ್ಥೆಯೇ ಬೇರೆ. 
• ಒಂದು ವರ್ಷದಲ್ಲಿನ ಪ್ರತೀ ಋತುಗಳು ವಿಭಿನ್ನ ವಾತಾವರಣ ಇರುವುದರಿಂದ ಇದು ನಮ್ಮ ಮೇಲೆ ಪ್ರಭಾವ ಬೀರುತ್ತವೆ. 
ಹಾಗೆಯೇ,
• ಆಹಾರ‌‌ ಸೇವನೆಯೂ ಪ್ರಭಾವ ಬೀರುತ್ತದೆ.
ಅಂದರೆ- 
ಪೋಷಕ ಭಾವದ ಪ್ರಭಾವ(ಇದನ್ನು ಕಫ ಎನ್ನುತ್ತಾರೆ), 
ಶಕ್ತಿ ಬಿಡುಗಡೆಯ ಪ್ರಭಾವ(ಇದನ್ನು ಪಿತ್ತ ಎನ್ನುತ್ತೇವೆ) 
ಮತ್ತು 
ನಶಿಸುವ ಪ್ರಭಾವ(ಇದನ್ನು ವಾತ ಎನ್ನುತ್ತೇವೆ)ಗಳು ನಿರಂತರ ಇರುತ್ತವೆ.

ಈ ಪ್ರಭಾವಗಳಿಂದ ದೇಹವನ್ನು ಶುದ್ಧಿ ಮಾಡಿಕೊಳ್ಳಲೇಬೇಕು. ಏಕೆ/ಹೇಗೆ ?

ಕಫ ಪಿತ್ತ ವಾತ ಧಾರಯಂತಿ ದೇಹಂ; ಸೋಮ ಸೂರ್ಯ ಅನಿಲ ಧಾರಯಂತಿ ‌ ಜಗತ್

ಈ ಸೃಷ್ಟಿಯನ್ನು ಚಂದ್ರ, ಸೂರ್ಯ ಮತ್ತು ಗಾಳಿಯು ಧಾರಣೆ ಮಾಡಿ ನಿರಂತರ ಪೋಷಣೆ ಮಾಡುತ್ತವೆ.
ಹಾಗೆಯೇ
ವಾತ, ಪಿತ್ತ ಮತ್ತು ಕಫಗಳು ಶರೀರವನ್ನು ಧಾರಣೆ ಮಾಡಿ ನಿರಂತರ ಪೋಷಣೆ ಮಾಡುತ್ತವೆ.

ಸೃಷ್ಟಿಯಲ್ಲಿ ಬೇಸಿಗೆ, ಮಳೆ ಮತ್ತು ಚಳಿಗಾಲ ಬರುತ್ತವೆ. ಬೇಸಿಗೆಯಲ್ಲಿ ರಕ್ಷಣೆ ಪಡೆಯದೇ ಮನೆಯಿಂದ ಹೊರಗೇ ಇದ್ದರೆ ಉಷ್ಣತಾ ಜನ್ಯ ರೋಗಗಳೂ ಕೆಲವೊಮ್ಮೆ ಹೆಚ್ಚಾದರೆ ಸಾವೂ ಸಂಭವಿಸುತ್ತವೆ, ಹಾಗೆಯೇ ಚಳಿ ಮಳೆಗಾಲದಲ್ಲೂ ರಕ್ಷಣೆ ಅನಿವಾರ್ಯ.

ಅದೇ ರೀತಿ

ಶರೀರದಲ್ಲೂ ಕಾಲಕ್ಕನುಗುಣವಾಗಿ ವಾತ ಪಿತ್ತ ಮತ್ತು ಕಫಗಳು ಅತಿಮಾತ್ರ ವೃದ್ಧಿಯಾಗುತ್ತವೆ. ಅವುಗಳಿಂದ ರಕ್ಷಣೆ ಪಡೆಯದೇ ಹಾಗೇ ಬಿಟ್ಟರೆ ಅವುಗಳಿಂದ ರೋಗಗಳೂ ಕೆಲವೊಮ್ಮೆ ಸಾವೂ ಸಂಭವಿಸುತ್ತವೆ.  ಆದರೆ ಇವು ನಮ್ಮ ಗಮನಕ್ಕೆ ಏಕೆ ಬರುವುದಿಲ್ಲ ಎಂದರೆ ಇವುಗಳನ್ನೇ ನಾವು ಬೇರೆ ಬೇರೆ ರೋಗಗಳ ಹೆಸರಿನಲ್ಲಿ ಕರೆಯುತ್ತೇವೆ, ಉದಾಹರಣೆಗೆ ವಾತವು ಪಾರ್ಶ್ವವಾಯು, ಹೃದ್ರೋಗ, ಕಿಡ್ನಿರೋಗ ಮುಂತಾದ ರೂಪದಲ್ಲೂ, ಪಿತ್ತವು ಲಿವರ್ ಫೇಲ್ಯೂರ್, ಪ್ಯಾಂಕ್ರಿಯಾಸ್ ಕಾಯಿಲೆ, ಕೊಲೈಟೀಸ್ ಮುಂತಾದ ರೂಪಗಳಲ್ಲಿಯೂ ಮತ್ತು ಕಫವು ಮಧುಮೇಹ, ಸ್ಥೌಲ್ಯ, ವೆರಿಕೋಸ್ ವೇನ್ಸ್ ಮುಂತಾದ ರೂಪಗಳಲ್ಲಿಯೂ ಕಾಣುತ್ತವೆ ಮತ್ತು ಕೆಲವೊಮ್ಮೆ ಕೊಂದೇಹಾಕುತ್ತವೆ.

ಉದಾಹರಣೆ: 
ಮೋಟಾರ್ ವಾಹನವು ಸೂಕ್ತರೀತಿಯಿಂದ ಕೆಲಸಮಾಡಲು ಅದು ಆರೋಗ್ಯದಿಂದ ಇರಬೇಕು, ಅದಕ್ಕಾಗಿ ನಿಯಮಿತವಾಗಿ ಸರ್ವೀಸ್ ಮಾಡಿಸುತ್ತೇವೆ.‌ ಅದು ಕೆಟ್ಟು ನಿಂತಮೇಲೆ ಅಲ್ಲ. 
ಆದರೆ ಮಾನವ ಶರೀರವು ಯಂತ್ರವಲ್ಲ ಆದ್ದರಿಂದ ಒಳಗಿನ ಏರುಪೇರನ್ನು ಕೆಲಕಾಲ ತಡೆಯುತ್ತದೆ. ಇದನ್ನೇ ಮುಂದುಮಾಡಿ ಶರೀರವನ್ನು ಕೆಡುವವರೆಗೆ(ರೋಗ ಬರುವವರೆಗೆ) ನಿರ್ಲಕ್ಷ್ಯ ಮಾಡುತ್ತೇವೆ. ಇದನ್ನು ತಡೆಯಲು ಆಯುರ್ವೇದ ಶಾಸ್ತ್ರ ಆಹಾರ, ದಿನಚರ್ಯ, ಋತುಚರ್ಯ, ಸತ್ ವೃತ್ತ ಪಾಲನೆಗೆ ಒತ್ತುಕೊಟ್ಟು ಆರೋಗ್ಯವಂತನ ಆರೋಗ್ಯ ರಕ್ಷಣೆಗೆ ಸ್ವಾಸ್ಥ್ಯ ಪಂಚಕರ್ಮವನ್ನು ಹೇಳುತ್ತಾರೆ

ಹಾಗಾಗಿ 

ಅನೇಕ ರೋಗಗಳು ಬಾರದಂತೆ ತಡೆಯಲು ಋತು ಅಥವಾ ಸ್ವಾಸ್ಥ್ಯ ಪಂಚಕರ್ಮ ಸೇವನೆ ಅನಿವಾರ್ಯ

ಸ್ವಾಸ್ಥ್ಯ ಪಂಚಕರ್ಮ ಯೋಗ್ಯ ಕಾಲ

ಶ್ರಾವಣೇ ಕಾರ್ತೀಕೇ ಚೈತ್ರೇ .......ದೋಷಾನ್ ವಿಶೋಧಯೇತ್ ||33|| |34, 35|
ಸ್ವಸ್ಥ ವೃತ್ತಂ ಅಭಿಪ್ರೇತ್ಯ.....||35||
-ಅಷ್ಟಾಂಗ ಹೃದಯ, ಸೂತ್ರ ಸ್ಥಾನ-13

ಶ್ರಾವಣ ಮಾಸದಲ್ಲಿ(ಜುಲೈ) ಬಸ್ತಿ ಚಿಕಿತ್ಸೆ ಮಾಡಿ ಕಾಲಪ್ರಭಾವದಿಂದ ವೃದ್ಧಿಯಾದ ಅಥವಾ ವಿಕೃತ ವಾತ ದೋಷವನ್ನೂ

ಕಾರ್ತೀಕ ಮಾಸದಲ್ಲಿ(ನವೆಂಬರ್) ವಿರೇಚನ ಚಿಕಿತ್ಸೆ ಮಾಡಿ ಕಾಲಪ್ರಭಾವದಿಂದ ವೃದ್ಧಿಯಾದ ಅಥವಾ ವಿಕೃತ ಪಿತ್ತ ದೋಷವನ್ನೂ

ಮತ್ತು

ಚೈತ್ರ ಮಾಸದಲ್ಲಿ(ಮಾರ್ಚ್/ಏಪ್ರಿಲ್) ವಮನ ಚಿಕಿತ್ಸೆ ಮಾಡಿ ಕಾಲಪ್ರಭಾವದಿಂದ ವೃದ್ಧಿಯಾದ ಅಥವಾ ವಿಕೃತ ಕಫ ದೋಷವನ್ನೂ

ಶರೀರದಿಂದ ಹೊರಹಾಕಬೇಕು. ಇದರಿಂದ ಮುಂದೆ ಬರಬಹುದಾದ ನೂರಾರು ರೋಗಗಳನ್ನು ತಡೆಯಬಹುದು.

ಹೆಲ್ತ್ ಇನ್ಸೂರೆನ್ಸ್ ಹೆಸರಿನಲ್ಲಿ ರೋಗ ಬಂದಾಗ ಬರುವ ಹಣದಿಂದ ಆರೋಗ್ಯ ಕೊಂಡುಕೊಳ್ಳಲು ಅಸಾಧ್ಯ. ಆದರೆ ನಮ್ಮ ದುರ್ದೈವ ಹೇಗಿದೆ ಎಂದರೆ ರೋಗಗಳನ್ನೂ ಮತ್ತು ಅಕಾಲಿಕ ಸಾವನ್ನು ಒಪ್ಪಿಕೊಂಡುಬಿಟ್ಟಿದ್ದೇವೆ.

ಎಲ್ಲ ಮೂರೂ ಸ್ವಾಸ್ಥ್ಯ ಪಂಚಕರ್ಮಗಳನ್ನು ವಾರ್ಷಿಕವಾಗಿ ಮಾಡಿಕೊಳ್ಳುವುದು ಸರ್ವಶ್ರೇಷ್ಠ. ‌ಆದಾಗ್ಯೂ ಕೇವಲ ವಿರೇಚನ ಎಂಬ ಚಿಕಿತ್ಸೆಯನ್ನು ಒಂದು ವರ್ಷಕ್ಕೊಮ್ಮೆ 7 ದಿನ ಬಿಡುವು ಮಾಡಿಕೊಂಡು ಸೇವಿಸುವುದು ಉತ್ತಮವಾಗಿದೆ.

ಆರೋಗ್ಯ ರಕ್ಷಣೆಗೆ ವಿರೇಚನ ಏಕೆ ಶ್ರೇಷ್ಠ?:
ವಿರೇಚನ ಚಿಕಿತ್ಸೆಯು ಪ್ರಧಾನವಾಗಿ ಅಗ್ನಿಯನ್ನು(ಪಿತ್ತವನ್ನು) ಚಿಕಿತ್ಸಿಸುತ್ತದೆ ಮತ್ತು ಅಲ್ಪ ಕಫವನ್ನೂ ಹೊರಹಾಕುತ್ತದೆ ಮತ್ತು ವಾತವನ್ನೂ ಅನುಲೋಮಗೊಳಿಸಿ ಸ್ವಸ್ಥಾನದಲ್ಲಿ ಕ್ರಿಯಾತ್ಮಕವಾಗಿ ಇಡುತ್ತದೆ.

ಆದ್ದರಿಂದ ದಯಮಾಡಿ ಎಲ್ಲರೂ ಸ್ವಾಸ್ಥ್ಯ ವಿರೇಚನ ಚಿಕಿತ್ಸೆಯನ್ನು ಪ್ರತಿ ವರ್ಷವೂ ಮಾಡಿಸಿಕೊಳ್ಳಿ. ನೂರಾರು ರೋಗಗಳಿಂದ ದೂರ ಇದ್ದುಬಿಡಿ.

ಹತ್ತಿರದ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ
********








No comments:

Post a Comment