SEARCH HERE

Tuesday 24 March 2020

ಮಕ್ಕಳು ಪಡೆಯುವುದು ಆಯುರ್ವೇದ getting child ayurveda

note: administering medication based on following articles is purely at your risk.  consult right doctors whom you believe and counter check on internet.

following articles are by ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ  M-93438 55135
writings of 
-ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ
ಶಿವಮೊಗ್ಗ, ದಾವಣಗೆರೆ, ಬೆಂಗಳೂರು, ಕಾಂಗ್ರಾ(ಹಿಮಾಚಲ ಪ್ರದೇಶ)
***********

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-102
11.04.2020

ಆತ್ಮೀಯರೇ,
ವಿಶ್ವದೆಲ್ಲೆಡೆ ಸಶಕ್ತ ಮಾನವನ ಸೃಷ್ಟಿ ಆಯುರ್ವೇದದ ಉದ್ದೇಶ ಮತ್ತು ಆದರ್ಶ
ಇದಕ್ಕಾಗಿ ಅಥರ್ವ ಆಯುರ್ವೇದ ತಂಡದ ಸರ್ವ ಪ್ರಯತ್ನವೂ ನಡೆದಿದೆ. 
**********

ಮಕ್ಕಳು ಹೇಗೂ ಆಗುತ್ತವೆ,
ಆದರೆ,
ಬಲಶಾಲಿ, ವಿಶ್ವಶ್ರೇಷ್ಠ, ಬುದ್ಧಿಮಾನ್, ಸರ್ವರಿಂದ ಸಮ್ಮಾನಿತನಾಗಿಯೂ ತನ್ನ ವಂಶ, ಪೂರ್ವಜರಿಗೂ, ಕುಟುಂಬಕ್ಕೂ ಸಹಕಾರಿಯಾಗಿ ಜನ್ಮವನ್ನು ನಿಜಾರ್ಥದಲ್ಲಿ ಸಾರ್ಥಕ ಮಾಡಿಕೊಳ್ಳುವ ಸಂತಾನ ಬೇಕೆ?
ಈ ಸರ್ವ ಗುಣ ಸಂಪನ್ನರನ್ನೇ ನಿಮ್ಮ ಮಕ್ಕಳಾಗಿ ಪಡೆಯುವುದು ಹೇಗೆ?



ಅಚ್ಚರಿಯೇ, ಖಂಡಿತಾ ಸಾಧ್ಯ!!!



"ಮಕ್ಕಳನ್ನು‌ ಪಡೆವ ಇಚ್ಛೆ ಹೊಂದಿದ ದಂಪತಿಗಳು ವಿಶೇಷವಾಗಿ ಇನ್ನು ಮುಂದೆ ಬರುವ ಕೆಲ ಸಂಚಿಕೆಗಳನ್ನು ಮರೆಯದೇ ಗಮನಿಸಿ ಮತ್ತು ಪಾಲಿಸಿ"-


ಇಂದಿನ ವಿಷಯ-
ಗರ್ಭ ಉತ್ಪತ್ತಿ ಪೂರ್ವ ಸಿದ್ಧತಾ

ಗರ್ಭ ಎಂದೆರೇನು?
ಶುಕ್ರ ಶೋಣಿತ ಜೀವ ಸಂಯೋಗೇ ತು‌ ಖಲು ಕುಕ್ಷಿಗತೇ ಗರ್ಭ ಇತ್ಯುಚ್ಯತೆ ||
-ಸುಶೃತ ಸಂಹಿತಾ ಶಾರೀರ ಸ್ಥಾನ



ಶುಕ್ರ(ಪುರುಷ ಬೀಜ) + ಶೋಣಿತ(ಸ್ತ್ರೀ ಬೀಜ) + ಜೀವಾತ್ಮ ಈ ಮೂರೂ ಸ್ತ್ರೀಯ ಕುಕ್ಷಿ(fallopian  tube)ಯಲ್ಲಿ  ಸಂಯೋಗ ಹೊಂದಿದರೆ ಅದನ್ನು ಗರ್ಭ ಎನ್ನಲಾಗುತ್ತದೆ.



ಕೇವಲ ಶುಕ್ರ ಮತ್ತು ಶೋಣಿತ ಸೇರಿ ಗರ್ಭ ಉತ್ಪತ್ತಿಯಾದದ್ದಲ್ಲ.

ಜೀವ ಸೇರದೇ ಜೀವಿಯಾಗಲು ಸಾಧ್ಯವಿಲ್ಲ.



ಗರ್ಭ ಪೂರ್ವ ಏನು ಮಾಡಬೇಕು?



• ಶುಕ್ರ(ಪುರುಷ ಬೀಜ)ವನ್ನು ಶುದ್ದಿ ಮಾಡಬೇಕು

• ಶೋಣಿತ(ಸ್ತ್ರೀ ಬೀಜ)ವನ್ನು ಶುದ್ಧಿ ಮಾಡಬೇಕು
ಮತ್ತು
• ಶುದ್ಧ ಜೀವಿಯನ್ನು ಬರಮಾಡಿಕೊಳ್ಳಬೇಕು.

ಈ ಮೂರಕ್ಕೂ ತನ್ನದೇ ಆದ ವಿಧಿ-ನಿಯಮಗಳಿವೆ. ಅವುಗಳ ಪಾಲನೆ ಇಲ್ಲದೇ ಕೇವಲ ನೀವು ಬಯಸಿದ ಮಾತ್ರಕ್ಕೆ-
ಆರೋಗ್ಯಯುತ
ಶಕ್ತಿಯುತ
ಬುದ್ಧಿವಂತ
ಧೀರ
ಸರ್ವಹಿತಕಾರಕ ಜೀವಿ ನಿಮ್ಮ ಮನೆಯಲ್ಲಿ ಹುಟ್ಟಲು ಸಾಧ್ಯವಿಲ್ಲ.



ದಂಪತಿಗಳೀರ್ವರ ತಪ್ಪಸ್ಸಿಲ್ಲದೇ, ಶ್ರೇಷ್ಠ ಜೀವಿ ಮಗನಾ/ಳಾಗಿ ನಮ್ಮ ಮನೆಗೆ ಬರಲಿ, ನಮ್ಮ ಕೀರ್ತಿಯನ್ನು ನಾಲ್ಕೂ ದಿಶೆಗೆ ಹರಡಲೆಂದು ಬಯಸುವುದು ಸರ್ವದಾ ಸಾಧುವಲ್ಲ



ನಾಳೆಯಿಂದ ಪ್ರತಿ ವಿಷಯವನ್ನೂ ಸೂಕ್ಷ್ಮವಾಗಿ ನೋಡೋಣ.

************


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-103
12.04.2020

ಇಂದಿನ ವಿಷಯ:  ಗರ್ಭೋತ್ಪತ್ತಿ ಸಾಮಗ್ರಿಗಳು

ಧ್ರುವಂ ಚತುರ್ಣಾಂ............ಋತು, ಕ್ಷೇತ್ರ, ಅಂಬು,  ಬೀಜಾನಾಂ.......ಅಂಕುರೋ ಯಥಾ||
-ಸುಶೃತ, ಶಾರೀರ ಸ್ಥಾನ-2/33

• ಋತು
• ಕ್ಷೇತ್ರ
• ಅಂಬು
• ಬೀಜ

ಇವು ಗರ್ಭೋತ್ಪತ್ತಿ ಸಾಮಗ್ರಿಗಳು. 
ಈ ನಾಲ್ಕರ ಸಮ್ಯಕ್ ಸಂಯೋಜನೆಯಿಂದ ಮಾತ್ರ ಗರ್ಭಧಾರಣೆ ಆಗುತ್ತದೆ.

ಆದಾಗ್ಯೂ ಗರ್ಭಧಾರಣೆಯಲ್ಲಿ ಮತ್ತು ಉತ್ತಮ ಸಂತಾನ ಪಡೆಯುವಲ್ಲಿ ಸ್ತ್ರೀಯ ಪಾತ್ರ ಹೆಚ್ಚಿನದ್ದು ಮತ್ತು ಬಹು ದೊಡ್ಡದು. ಏಕೆಂದರೆ ಈ ಸಾಮಗ್ರಿಗಳಲ್ಲಿ ಸ್ತ್ರೀ ಪುರುಷರಿಬ್ಬರಿಗೂ ಸಂಬಂಧಿಸಿದ ಬೀಜ ಎಂಬ ಒಂದಂಶ ಇದ್ದರೆ. ಉಳಿದ ಮೂರರ ಅಧಿಕಾರಿ ಸ್ತ್ರೀ, ಹಾಗಾಗಿ ಅವಳ ಆರೋಗ್ಯ ಅತ್ಯಂತ ಮಹತ್ವದ್ದಾಗಿದೆ.

ಒಂದೊಂದಾಗಿ ನೋಡೋಣ

ಬೀಜ- 
ಸ್ತ್ರೀ-ಪುರುಷರಲ್ಲಿ ಇರುವ ಸಂತಾನ ಕಾರಕ ವೀರ್ಯ(sperm) ಮತ್ತು ಅಂಡಾಣು(Ovum)

ಆಧುನಿಕ ಪದ್ಧತಿಯಲ್ಲಿ ಹೇಳುವಂತೆ ತಲಾ 23 ವರ್ಣತಂತುಗಳ ಗುಚ್ಛವಾದ Sperm & Ovum ಎನ್ನುವ ಆಂಶಗಳು, ಆಚಾರ್ಯರು‌ ಹೇಳುವ ಸ್ತ್ರೀ ಬೀಜ ಶೋಣಿತ ಮತ್ತು ಪುರುಷ ಬೀಜ ಶುಕ್ರವನ್ನು ಹೋಲುತ್ತವೆ.

ಋತು-
ಯಾವ ಪ್ರಕಾರ ಸೂಕ್ತ ಪ್ರಮಾಣದ ಮಳೆ ಬಂದು, ಭೂಮಿ ಹದ ಆದ ಮೇಲೆಯೇ ಬೀಜ ಬಿತ್ತಲಾಗುತ್ತದೋ ಅದೇ ಪ್ರಕಾರ ಸ್ತ್ರೀಯ ತಿಂಗಳ ಋತುಕಾಲ ಸರಿಯಾದ ಕ್ರಮದಲ್ಲಿ ಬಂದು ನಂತರ ಗರ್ಭಕೋಶದ ಒಳ ಪದರ (endometrium) ಹದಗೊಂಡ ಮೇಲೆ ಮಾತ್ರವೇ ಗರ್ಭವನ್ನು ತನ್ನೊಳಗೆ ಧಾರಣೆ ಮಾಡುತ್ತದೆ.

ಕ್ಷೇತ್ರ-
ಭೂಮಿಯನ್ನೇ ವೃಕ್ಷ-ಲತಾದಿಗಳು ಬೆಳೆವ ಕ್ಷೇತ್ರ ಎನ್ನುತ್ತೇವೆ.
ಇಲ್ಲಿ ಮಗು ಬೆಳೆಯಲು "ಗರ್ಭಕೋಶವೇ ಕ್ಷೇತ್ರ". ಮಳೆ ಸರಿಯಾಗಿ ಬಂದರೂ ಭೂಮಿಯ ಫಲವತ್ತತೆಯ ಆಧಾರದಲ್ಲಿ ಫಸಲು ಬರದಿರುವ ಅಥವಾ ಅಲ್ಪಫಸಲು ಅಥವಾ ಅತ್ಯುತ್ತಮ ಫಸಲು ಹೇಗೋ ಹಾಗೆಯೇ ಮಕ್ಕಳೆಂಬ ಮಹಾ ಫಸಲನ್ನು ಪಡೆಯಲು ಗರ್ಭಕೋಶದ ಫಲವತ್ತತೆಯು ಅತ್ಯಂತ ಮಹತ್ವದ ಸ್ಥಾನ ವಹಿಸುತ್ತದೆ.

ಅಂಬು-
ಎಂದರೆ ಜಲ ಅಥವಾ ನೀರು ಎಂದರ್ಥ.
ಬೆಳೆಯು ಚಿಗುರುವಾಗ ಮಾತ್ರ ನೀರು ದೊರೆತರೆ ಸಾಲದು, ಅತ್ಯುತ್ತಮ ಫಸಲು ಬರಲು ಕಾಲಕಾಲಕ್ಕೆ ಭೂಮಿ ಸೂಕ್ತ ಜಲಾಂಶದಿಂದ ಕೂಡಿರಬೇಕಾಗುತ್ತದೆ.
ಇಲ್ಲಿ ಗರ್ಭಕೋಶದ ಒಳಪದರ 
endometrium ಯಾವಾಗಲೂ ಪೋಷಕಾಂಶಗಳ ಸಂವೃದ್ಧಿಯಿಂದ ಕೂಡಿರಬೇಕು ಮತ್ತು ಆ ಎಲ್ಲಾ ಪೋಷಕಾಂಶಗಳೂ ಸೂಕ್ತ ರೀತಿಯಲ್ಲಿ ಬೆಳೆವ ಗರ್ಭಕ್ಕೆ ತಲುಪಬೇಕಾದರೆ, ಅವು ದ್ರವರೂಪದಲ್ಲಿ ಇರಬೇಕು.

ನಾಳೆಯ ಸಂಚಿಕೆಯಲ್ಲಿ ಬೀಜಾದಿಗಳ ನೈಸರ್ಗಿಕ ಆರೋಗ್ಯದ ಬಗ್ಗೆ ತಿಳಿದುಕೊಳ್ಳೋಣ.
*****************

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-104
13.04.2020

ಇಂದಿನ ವಿಷಯ:
ಬೀಜ, ಋತು, ಕ್ಷೇತ್ರ, ಅಂಬುಗಳ ಆರೋಗ್ಯ ಮತ್ತು ಅದರ ಮಹತ್ವ

ವಿ.ಸೂಚನೆ:
ಶ್ರೇಷ್ಠ ಸಂತಾನ ಅಭಿಲಾಷಿಗಳು ಈ ಎಲ್ಲಾ ಸಂಗತಿಗಳನ್ನು ಗಮನವಿಟ್ಟು ಪಾಲಿಸಿ.

ಮಾನವ ಶರೀರದ ಬೀಜ ಅಥವಾ seed ನ ಆರೋಗ್ಯ ಎಂದರೆ, ಸ್ತ್ರೀ, ಪುರುಷರ 23 ವರ್ಣತಂತುಗಳ ಶೋಣಿತ, ಶುಕ್ರ ಧಾತುವಿನ ಆರೋಗ್ಯ ಎಂದು ಅರ್ಥೈಸಬೇಕು.

ನಮ್ಮಲ್ಲಿರುವ ಏಳೂ ಧಾತುಗಳಲ್ಲಿ ಕೊನೆಯ ಧಾತುವೇ ಶುಕ್ರ-ಶೋಣಿತ(ಬೀಜ). ಇದೂ ಸಹ ಎಲ್ಲದರಂತೆ ಆಹಾರದಿಂದಲೇ ಉತ್ಪತ್ತಿಯಾಗುವ ಅತಿ ಸೂಕ್ಷ್ಮ, ಸಮಗ್ರ, ಶಕ್ತಿಯುತ ಧಾತುವಾಗಿದೆ. ಶುಕ್ರವು ತನ್ನೊಳಗೆ ಇಡೀ ಒಂದು ಮಾನವ ಜೀವಿಯನ್ನೇ ಹೊಂದಿರುತ್ತದೆ.

ಹಾಗಾಗಿ,
ಸ್ತ್ರೀ-ಪುರುಷರು ಆರೋಗ್ಯಯುತ ಬೀಜಭಾಗ ಉತ್ಪತ್ತಿ ಕ್ರಮವನ್ನು ಗಮನಿಸಿ ಪಾಲಿಸಿದರೆ ಮಾತ್ರ ಶ್ರೇಷ್ಠ ಸಂತಾನ ಪಡೆಯಬಹುದು. 

....ಆಕಾಶಾದ್ ವಾಯುಃ....ಪೃಥಿಭ್ಯೋಃ ಓಷಧಿಃ, ಓಷಧಿಭ್ಯೋಃ ಅನ್ನಃ ಅನ್ನಾತ್ ಪುರುಷಃ

ಆಹಾರದಿಂದಲೇ ಪುರುಷ(ಮನುಷ್ಯ):

ಪಂಚಮಹಾಭೂತಗಳ ಸೂಕ್ಷ್ಮ ಪರಿವರ್ತನೆಯಿಂದ =>>> ಓಷಧಿ (ಗಿಡ ಮರಗಳು) =>>> ಓಷಧಿಗಳ ಸೂಕ್ಷ್ಮ ಪರಿವರ್ತನೆಯಿಂದ ಅನ್ನ =>>> ಅನ್ನದ ಸೂಕ್ಷ್ಮ ಮತ್ತು ವಿಶಿಷ್ಟ ಪರಿವರ್ತನೆಯಿಂದ ಸ್ತ್ರೀ ಪುರುಷ ಬೀಜ =>>> ಸೂಕ್ತ ಕಾಲದಲ್ಲಿ ಆಗುವ ಇವುಗಳ ಸಂಯೋಗದಿಂದ ಮಾನವ ಉಂಟಾಗುತ್ತಾನೆ.

ಗಿಡಮರಗಳಲ್ಲಿ ಅಂದರೆ ಧಾನ್ಯ ಫಲಗಳಲ್ಲಿ ಕೊಟ್ಯಂತರ ಜೀವಗಳು(seeds that can produce similar plants with their life inside) ನೆಲೆಯಾಗಿರುತ್ತವೆ, ಅವುಗಳಲ್ಲಿನ‌ ಜೀವ ಮುಂದೆ ತನ್ನಂತದೇ ಗಿಡಗಳನ್ನು ಉತ್ಪತ್ತಿ ಮಾಡುತ್ತವೆ. ನಾವು ಆಹಾರ ಸೇವಿಸುವಾಗ ಧಾನ್ಯಗಳೊಳಗಿರುವ ಜೀವಗಳು ಸೂಕ್ಷ್ಮ ರೂಪದಿಂದ ನಮ್ಮ ಶರೀರವನ್ನು ಸೇರುತ್ತಿರುತ್ತವೆ. ಸಾಮಾನ್ಯವಾಗಿ ಅವು ನಿತ್ಯವೂ ಶಕ್ತಿಯ ರೂಪದಲ್ಲಿ ಬದಲಾಗುತ್ತಿರುತ್ತವೆ. ಬಾಲಕ ತನ್ನ ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟ ಮೇಲೆ ಇವೇ ಜೀವಿಗಳು 23ವರ್ಣ ತಂತುಗಳ ಬೀಜ(Sperm)ದಲ್ಲಿ ನೆಲೆಯಾಗುತ್ತವೆ ಮತ್ತು ಆ ವ್ಯಕ್ತಿ ಬ್ರಹ್ಮಚರ್ಯ ಪಾಲನೆ ಮಾಡಿದಲ್ಲಿ ಅದೇ ಪ್ರೌಢನಿಗೆ ವಿಶೇಷ ಮೇಧಾ ಶಕ್ತಿಯನ್ನು ಕೊಡುತ್ತಾ ಬಲವಾನ್, ಬುದ್ಧಿವಾನ್ ಕಾರ್ಯರೂಪದಲ್ಲಿ ವ್ಯಕ್ತವಾಗುತ್ತವೆ. 

ವಿಶೇಷವಾಗಿ,
ಆಹಾರದಲ್ಲಿನ ಆ ಸೂಕ್ಷ್ಮ ಜೀವಿಗಳನ್ನು ಸೂಕ್ತ ಸಮಯದಲ್ಲಿ ಸ್ತ್ರೀ ಸಂಭೋಗದಿಂದ ಹೊರಹಾಕಿದ ಆ ಅನೇಕ ಸಾವಿರ ಜೀವಿ (ಬೀಜ)ಗಳಲ್ಲಿ ಒಂದು ಜೀವಿ ಸ್ತ್ರೀ ಅಂಡಾಣುವಿನೊಂದಿಗೆ ಸಂಯೋಗ ಹೊಂದಿ, ನಂತರ ಶರೀರವನ್ನು ಹೊಂದಿ‌ ಆ ಜೀವಿಯ ಪೂರ್ವ ಜನ್ಮ ಕರ್ಮಾನುಸಾರ  ಸೂಕ್ತ ಸಮಯದಲ್ಲಿ ಹೊರಬಂದು ಸ್ವತಂತ್ರ ಜೀವಿ ಯಾಗಿ ಬೆಳೆಯುತ್ತದೆ.. 

ಇಲ್ಲಿ ಎರೆಡು ಅತ್ಯಂತ ಪ್ರಮುಖ ಅಂಶಗಳಿವೆ

1. ಜೀವಾತ್ಮ
ಮತ್ತು
2. ಮಾನವ ಶರೀರ

ಗಮನಿಸಿ:
ಈ ಎರಡರ ಆರೋಗ್ಯವೂ ತಂದೆ-ತಾಯಿಯಾಗ ಬಯಸುವ ಸ್ತ್ರೀ ಪುರುಷರ ಜವಾಬ್ದಾರಿಯುತ ಕರ್ತವ್ಯವಾಗಿದೆ.

1. ಜೀವಾತ್ಮ:
ತಂದೆ ಮತ್ತು ಆತನ ಪೂರ್ವಜರು ಪಾಲಿಸಿಕೊಂಡು ಬಂದ ಸತ್ ಸಂಸ್ಕಾರ, ಸಾತ್ವಿಕ ಆಹಾರ (ಕೇವಲ ಸಸ್ಯಹಾರ ಎಂದು ಅರ್ಥವಲ್ಲ) ಅಂದರೆ ಸೇವಿಸುವ ಆಹಾರ ಧರ್ಮಪೂರ್ವಕವಾಗಿ ಅಥವಾ ಅಧರ್ಮಪೂರ್ವಕ ಬಂದಿದೆಯೋ ಎಂಬ ಆಧಾರದಲ್ಲಿ ಅದರ ಸಾತ್ವಿಕತೆಯನ್ನು ಅಳೆಯಬೇಕು, ಆದರೂ ಸಸ್ಯಹಾರ ಪಾಲನೆಯೇ ಒಂದು ತಪಸ್ಸು ಹಾಗಾಗಿ, ಅದು ಧಾರ್ಮಿಕ ಪದ್ಧತಿ‌ ಎನಿಸಿಕೊಂಡಿದೆ. ನಿತ್ಯ ಸಾತ್ವಿಕ ವ್ಯವಹಾರ ಮತ್ತು ಆಹಾರದ ಆಧಾರದ ಮೇಲೆ ತತ್ ಸಂಬಂಧಿ ಜೀವ(ಬೀಜ)ಗಳು ಪುರುಷನ ಉದರ(ವೃಷಣ/ testis )ದಲ್ಲಿ ನೆಲೆಯಾಗುತ್ತವೆ.
ಇದನ್ನು ಗರ್ಭದ ಆತ್ಮಜ ಭಾವ ಎಂದು ಕರೆಯುತ್ತೇವೆ.

2. ಶರೀರ:
ಸದೃಢ ಶರೀರ ಉಳ್ಳ ಮಗುವಿಗೆ ಜನ್ಮ ಕೊಡುವುದು ತಂದೆ ತಾಯಿ ಇಬ್ಬರ ಆದ್ಯ ಜವಾಬ್ದಾರಿ. 
ಈ ಇಬ್ಬರ ಸಶಕ್ತ ಧಾತುಗಳ ಸಂವೃದ್ಧತೆ, ಅದುವರೆಗೆ ಪಾಲಿಸಿದ ಆಹಾರ ನಿದ್ರಾದಿಗಳ ನಿಯಮ, ವಿಧಿಪೂರ್ವಕ ಬ್ರಹ್ಮಚರ್ಯ (ಅಥವಾ ಅತ್ಯಂತ ಕಡಿಮೆ ವೀರ್ಯ ಸ್ಕಲನ)ಗಳ ಆಧಾರದಲ್ಲಿ ಅತ್ಯಂತ ಶಕ್ತಿಯುತ ಅಂಡಾಣು ಮತ್ತು ವೀರ್ಯಾಣು ಉತ್ಪತ್ತಿಯಾಗುತ್ತವೆ, ಇದನ್ನು ಅವರ ಮಕ್ಕಳ ಅನುವಂಶೀಯ ಸದೃಢತೆ ಎಂದು ಕರೆಯುತ್ತೇವೆ. 
ಗರ್ಭ ಧಾರಣೆ ನಂತರ ಎದೆ ಹಾಲು ಬಿಡಿಸುವವರೆಗೆ ತಾಯಿಯ ಆಹಾರ-ನಿದ್ರಾ, ಚೇಷ್ಟಾ (ಚಟುವಟಿಕೆ), ಮಾನಸಿಕ ಸ್ಥಿತಿಗಳೇ ಮುಂಬರುವ ಬರುವ ಮಗುವಿನ ಶಾರೀರಿಕ ಸದೃಢತೆ, ಶೀಲ, ಧೈರ್ಯ, ಆತ್ಮಬಲ(ಸಂಯಮ)ಗಳ ಬುನಾದಿಯಾಗುತ್ತದೆ.

ನಾಳೆ ಶುದ್ಧ ಶುಕ್ರ(ವೀರ್ಯಾಣು) ಮತ್ತು ಆರ್ವವ/ಶೋಣಿತ(ಅಂಡಾಣು)ಗಳ ವಿವರಗಳನ್ನು ನೋಡೋಣ.

***************


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-105
14.04.2020

ಇಂದಿನ ವಿಷಯ:  ಶುದ್ಧ ಅಶುದ್ಧ ಶುಕ್ರ(ವೀರ್ಯ) ಲಕ್ಷಣ

ವಿ.ಸೂಚನೆ:
ಶ್ರೇಷ್ಠ ಸಂತಾನ ಅಭಿಲಾಷಿಗಳು ಈ ಎಲ್ಲಾ ಸಂಗತಿಗಳನ್ನು ಗಮನವಿಟ್ಟು ಪಾಲಿಸಿ. 

ಶುದ್ಧ ಶುಕ್ರ(ವೀರ್ಯ) ಲಕ್ಷಣ

ಸ್ಫಟಿಕಾಭಂ ದ್ರವಂ ಸ್ನಿಗ್ಧ ಮಧುರಂ ಮಧುಗಂಧೀ ಚ........ಕ್ಷೌದ್ರನಿಭಂ ತಥಾ|
-ಸುಶ್ರುತ ಶಾರೀರ ಸ್ಥಾನ-3/12

ಪುರುಷನಿಂದ ಸ್ಖಲನವಾಗುವ ಶುಕ್ರದ ಭೌತರಾಸಾಯನಿಕ ಲಕ್ಷಣಗಳು:

• ಸ್ಫಟಿಕದಂತೆ ಹೊಳಪುಳ್ಳದ್ದು
• ದ್ರವರೂಪವಾಗಿಯೂ (ಆದರೆ ಪೂರ್ಣ ನೀರಿನಂತೆ ಅಲ್ಲ)
• ಕ್ಷೌದ್ರ(ಜೇನು) ಅಥವಾ ತೈಲ(ಎಳ್ಳೆಣ್ಣೆ)ದಷ್ಟು ಸಾಂದ್ರವಾಗಿಯೂ
• ರುಚಿಯಲ್ಲಿ ಸಿಹಿಯಾಗಿಯೂ
• ಜೇನಿನಂತೆ ವಾಸನೆವುಳ್ಳದ್ದು(ಮಧುಗಂಧ) 
ಇವು ಶುದ್ಧ ಶುಕ್ರ ಲಕ್ಷಣಗಳು.

ಅಶುದ್ಧ ಶುಕ್ರ ಲಕ್ಷಣ
ವಾತ ಪಿತ್ತ ಶ್ಲೇಷ್ಮ ಶೋಣಿತ ಕುಣಪ ಗ್ರಂಥಿ ಪೂತಿಪೂಯ ಕ್ಷೀಣ ಮೂತ್ರ ಪುರೀಷ ರೇತಸಃ ಪ್ರಜೋತ್ಪಾದನೇ ನ ಸಮರ್ಥಾ ಭವಂತಿ||
ಸುಶೃತ ಶಾರೀರಸ್ಥಾನ- 2/03

ಈ ಶ್ಲೋಕದಲ್ಲಿ ಸೂಚಿತ 9 ವಿಧದ ಶುಕ್ರ ವಿಕಾರಗಳು ಪ್ರಜೋತ್ಪಾದನೆಯಲ್ಲಿ ಅಸಮರ್ಥವಾಗಿವೆ ಅಥವಾ ವಿಕೃತ ಶಿಶುಗಳ ಜನನಕ್ಕೆ ಕಾರಣ. 

ಇವುಗಳಲ್ಲಿ ಕೆಲವನ್ನು ಸುಲಭದಲ್ಲಿ ಚಿಕಿತ್ಸಿಸಬಹುದು.
ಮತ್ತೆ ಕೆಲವನ್ನು ಕಷ್ಟದಿಂದ ಚಿಕಿತ್ಸಿಸಬಹುದು.
ಕೆಲವು ಚಿಕಿತ್ಸೆಗೆ ಅಸಾಧ್ಯ. 

1. ವಾತದುಷ್ಟ ಶುಕ್ರ- 
ಬೂದು, ಹಳದಿ ಮಿಶ್ರಿತ ತಿಳಿಗೆಂಪು(pale pink) 

2. ಪಿತ್ತದುಷ್ಟ ಶುಕ್ರ- 
ಹಳದಿ, ನೀಲಾಭ(blueish)

3. ಕಫದುಷ್ಟ ಶುಕ್ರ-
ಬಿಳುಪಾಗಿ, ನವೆಯಿಂದ ಕೂಡಿರುತ್ತದೆ.

4. ಶೋಣಿತ(ರಕ್ತ) ದುಷ್ಟ ಶುಕ್ರವು-
ರಕ್ತದಿಂದ ಕೂಡಿ ಸ್ರಾವವಾಗುತ್ತದೆ.

ಈ 4 ವಿಕಾರಗಳನ್ನು ಸುಲಭದಲ್ಲಿ ಚಿಕಿತ್ಸಿಸಬಹುದು, ಆದ್ದರಿಂದ ಈ ರೀತಿಯ ವೀರ್ಯ ಸ್ಖಲನ ಇದ್ದರೆ ಗರ್ಭಧಾರಣೆಗೆ ಹೋಗಬಾರದು, ಇದರಿಂದ ಮುಂಬರುವ ಮಗು ಪದೇ ಪದೇ ಶೀತ, ಜ್ವರ, ಉಸಿರಾಟದ ತೊಂದರೆ, ಚರ್ಮದ ತೊಂದರೆ ಹೀಗೆ ಮತ್ತೆ ಮತ್ತೆ ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಇದಕ್ಕಾಗಿ ಆಯುರ್ವೇದದಲ್ಲಿ ಚಿಕಿತ್ಸೆ ಪಡೆಯಿರಿ, ಮುಂದಿನ ಸಂತಾನವನ್ನು ಇಂದೇ ಆರೋಗ್ಯದಿಂದ ಇರಿಸಿ.

5. ಕುಣಪ- ಹೆಣದ ವಾಸನೆಯುಳ್ಳ ಶುಕ್ರಸ್ರಾವ.
6.ಗ್ರಂಥಿ- ಗಂಟು ಗಂಟಾದ ಶುಕ್ರಸ್ರಾವ
7. ಪೂತಿ ಪೂಯ-ಕೀವು,ವಾಸನೆಯುಳ್ಳ ಶುಕ್ರಸ್ರಾವ.
8. ಕ್ಷೀಣ- ಅತ್ಯಲ್ಪ ಶುಕ್ರಸ್ರಾವ.

ಈ ನಾಲ್ಕು ರೀತಿಯ ವಿಕಾರ ಇದ್ದರೆ ಸ್ವಲ್ಪ ಕಷ್ಟವಾದರೂ, ಮತ್ತೆ ಮತ್ತೆ ಚಿಕಿತ್ಸೆ ಪಡೆದು ಸರಿಪಡಿಸಿಕೊಳ್ಳಿ, ನಂತರವೇ ಸಂತಾನದ ಬಗ್ಗೆ ಯೋಚಿಸಿ, ಇಲ್ಲದಿದ್ದರೆ ಮಕ್ಕಳಾಗುವ ಸಾಧ್ಯತೆ ಕಡಿಮೆ ಅಥವಾ ವಿಕಾರದಿಂದ ಕೂಡಿದ ಮಕ್ಕಳಾಗುವ ಸಾಧ್ಯತೆಯೇ ಹೆಚ್ಚು.

9. ಮೂತ್ರ,ಪುರೀಷ- ಮೂತ್ರ ಮತ್ತು ಮಲದ ವಾಸನೆಯುಳ್ಳ ಶುಕ್ರಸ್ರಾವ
ಇರುವವರ ಶುಕ್ರವನ್ನು ಚಿಕಿತ್ಸಿಸುವುದು ಅಸಾಧ್ಯ. ಇಂಥವರು ಮಕ್ಕಳನ್ನು ಪಡೆಯುವ ಪ್ರಯತ್ನದಲ್ಲಿ ನಿರಾಶರಾಗುವ ಬದಲು, ಬೇರೆ ಯೋಚನೆಗಳನ್ನು ಕೈಗೊಳ್ಳಿ.

ಸಮಾಧಾನದಿಂದ ವಿಚಾರಮಾಡಿ:

ಅಶುದ್ಧ ದೂಷಿತ ಶುಕ್ರ ಇದ್ದರೆ ಗರ್ಭಧಾರಣೆ ಅಸಾಧ್ಯ ಅಥವಾ ಗರ್ಭಧಾರಣೆಯಾದರೂ, ಗರ್ಭಸ್ರಾವ ಗರ್ಭಪಾತ, ಮೃತಶಿಶು ಜನನ ಅಥವಾ ಜನನಾನಂತರ ಯಾವುದೋ ಒಂದು ಕಾರಣದಿಂದ ಅಂದರೆ ಏನೋ ಒಂದು ರೋಗದ ಹೆಸರು ಇರಬಹುದು, ಒಟ್ಟಾರೆ ಶಿಶುವು ಮರಣ ಹೊಂದುವುದು.


ನಾಳೆ ಸ್ತ್ರೀ ಬೀಜದ ಆರೋಗ್ಯದ ಬಗ್ಗೆ ನೋಡೋಣ
**********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-106
15.04.2020

ಶುದ್ಧ ಅಶುದ್ಧ ಶೋಣಿತ(ಸ್ತ್ರೀ ಬೀಜ) ಲಕ್ಷಣ

ಶೋಣಿತ=ರಜಸ್ಸು=ಆರ್ತವ=ಸ್ತ್ರೀ ಬೀಜ

ಸ್ತ್ರೀ ರಜಸ್ಸಿನ ವಿಚಾರ:

ಮಾಸೀ ಮಾಸೀ ರಜಃ ಸ್ತ್ರೀಣಾಂ.....ದ್ವಾದಶಾತ್.....ಪಂಚಾಶತಂ....||

12 ವರ್ಷದ ನಂತರ 50 ವರ್ಷಗಳ ವರೆಗೆ ಸ್ತ್ರೀಯರಲ್ಲಿ ಪ್ರತಿ ತಿಂಗಳು 3 ದಿನಗಳ ಕಾಲ ಸ್ರವವಾಗುವ ರಕ್ತ ವರ್ಣಣ ದ್ರವಭಾಗವು ರಸಧಾತುವಿನ ಉಪಧಾತುವಾಗಿದೆ. ಇದರ ಆರೋಗ್ಯವೇ ಸಂತಾನದ ಮೂಲ.

ಶುದ್ಧ ರಜಸ್ಸಿನ‌ ಲಕ್ಷಣ:

ಶಶಾಸೃಕ್ ಪ್ರತಿಮಂ.........ಲಾಕ್ಷಾ ರಸೋಪಮಮ್| ತದಾರ್ತವಂ ಪ್ರಶಂಸನ್ತಿ ಯತ್ ವಾ ಸೋ ನ ವಿರಞ್ಜಯೇತ್||
-ಸುಶೃತ ಶಾರೀರ ಸ್ಥಾನ-2/17

• ಶುದ್ಧ ರಜಸ್ಸು ಬಣ್ಣದಲ್ಲಿ ಮೊಲದ ರಕ್ತದಂತೆ ಅಥವಾ ಲಾಕ್ಷ ಚಕ್ಕೆಯ ಕಷಾಯದಂತೆ ಇರುತ್ತದೆ(ಎಲ್ಲರೂ ಇದನ್ನು ಗುರುತಿಸುವುದು ಕಷ್ಟ) 
ಆದರೆ,
ಸ್ತ್ರೀಯರು ದಯಮಾಡಿ ನಿಸ್ಸಂಕೋಚವಾಗಿ ಗಮನಿಸಿಕೊಳ್ಳಿ-
• ಶುದ್ಧ ರಜಸ್ಸಿನ ಪ್ರಮುಖ ಲಕ್ಷಣ ನ ವಿರಂಜಯೇತ್ ಅಂದರೆ ಈ ರಕ್ತವು ಅಂಟಿದ ಬಟ್ಟೆಯನ್ನು ತೊಳೆದರೆ ಯಾವುದೇ ರೀತಿಯ ಕಲೆ ನಿಲ್ಲುವುದಿಲ್ಲ.

ಕಲೆ ನಿಂತರೆ- ಬಟ್ಟೆಯ ಆ ವರ್ಣವನ್ನು ಗಮನಿಸಿ, ಅದನ್ನು ವೈದ್ಯರಿಗೆ ತಿಳಿಸಿದರೆ ಸೂಕ್ತ ಚಿಕಿತ್ಸೆಗೆ ಅತ್ಯಂತ ಸಹಾಯವಾಗುತ್ತದೆ.

ರಜಸ್ಸಿನ‌ದೋಷಗಳು:

ಆರ್ತವಂ ಅಪಿ.....ತೇಷು ಕುಣಪ ಗ್ರನ್ಥಿ ಪೂತಿಪೂಯ, ಕ್ಷೀಣ, ಮೂತ್ರಪುರೀಷ ಪ್ರಕಾಶಂ ಅಸಾಧ್ಯಂ, ಸಾಧ್ಯಂ ಅನ್ಯಃ ಚ ಇತಿ||
-ಸುಶೃತ ಶಾರೀರ ಸ್ಥಾನ-2/05,06

ಪುರುಷನ ‌ಶುಕ್ರ ದುಷ್ಟಿಯಂತೆ ಸ್ತ್ರೀ ರಜಸ್ಸೂ ಸಹ 9 ವಿಧದದಿಂದ ದೂಷಿತಗೊಳ್ಳುತ್ತದೆ. ಇವು ಪ್ರಜೋತ್ಪಾದನೆಯಲ್ಲಿ ಅಸಮರ್ಥವಾಗಿವೆ ಅಥವಾ ವಿಕೃತ ಶಿಶುಗಳ ಜನನಕ್ಕೆ ಕಾರಣ. 

1. ವಾತದುಷ್ಟ ಆರ್ತವ- ಸ್ರಾವವಾಗುವ ರಜಸ್ಸನ್ನು ಶುದ್ಧ ಬಿಳಿ ಬಟ್ಟೆಯಲ್ಲಿ‌ ಹಿಡಿದು, ನಂತರ ತೊಳೆದರೆ ಉಳಿಯುವ ಬಣ್ಣ ಬೂದು, ಹಳದಿ ಮಿಶ್ರಿತ ತಿಳಿಗೆಂಪು(pale pink) ಇರುತ್ತದೆ.

2. ಪಿತ್ತದುಷ್ಟ ಆರ್ತವ- ಸ್ರಾವವಾಗುವ ರಜಸ್ಸನ್ನು ಶುದ್ಧ ಬಿಳಿ ಬಟ್ಟೆಯಲ್ಲಿ‌ ಹಿಡಿದು, ನಂತರ ತೊಳೆದರೆ ಉಳಿಯುವ ಬಣ್ಣ ಹಳದಿ, ನೀಲಾಭ(blueish) ಇರುತ್ತದೆ.

3. ಕಫದುಷ್ಟ ಆರ್ತವ- ಸ್ರಾವವಾಗುವ ರಜಸ್ಸನ್ನು ಶುದ್ಧ ಬಿಳಿ ಬಟ್ಟೆಯಲ್ಲಿ‌ ಹಿಡಿದು, ನಂತರ ತೊಳೆದರೆ ಉಳಿಯುವ ಬಣ್ಣ ಬಿಳುಪಾಗಿರುತ್ತದೆ ಮತ್ತು ಯೋನಿ ನವೆಯಿಂದ ಕೂಡಿರುತ್ತದೆ.

4. ಶೋಣಿತ(ರಕ್ತ) ದುಷ್ಟ ಆರ್ತವ- ಸ್ರಾವವಾಗುವ ರಜಸ್ಸನ್ನು ಶುದ್ಧ ಬಿಳಿ ಬಟ್ಟೆಯಲ್ಲಿ‌ ಹಿಡಿದು, ನಂತರ ತೊಳೆದರೆ ಉಳಿಯುವ ಬಣ್ಣ ರಕ್ತವರ್ಣದಿಂದ ಕೂಡಿರುತ್ತದೆ ಮತ್ತು ಕೇವಲ ರಕ್ತದಿಂದ ಕೂಡಿ ಸ್ರಾವವಾಗುತ್ತದೆ.

ಈ 4 ವಿಕಾರಗಳನ್ನು ಸುಲಭದಲ್ಲಿ ಚಿಕಿತ್ಸಿಸಬಹುದು, ಆದ್ದರಿಂದ ಈ ರೀತಿಯ ವೀರ್ಯ ಸ್ಖಲನ ಇದ್ದರೆ ಗರ್ಭಧಾರಣೆಗೆ ಹೋಗಬಾರದು, ಇದರಿಂದ ಮುಂಬರುವ ಮಗು ಪದೇ ಪದೇ ಶೀತ, ಜ್ವರ, ಉಸಿರಾಟದ ತೊಂದರೆ, ಚರ್ಮದ ತೊಂದರೆ ಹೀಗೆ ಮತ್ತೆ ಮತ್ತೆ ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಇದಕ್ಕಾಗಿ ಆಯುರ್ವೇದದಲ್ಲಿ ಚಿಕಿತ್ಸೆ ಪಡೆಯಿರಿ, ಮುಂದಿನ ಸಂತಾನವನ್ನು ಇಂದೇ ಆರೋಗ್ಯದಿಂದ ಇರಿಸಿ.

5. ಕುಣಪ- ಹೆಣದ ವಾಸನೆಯುಳ್ಳ ಆರ್ತವಸ್ರಾವ.
6.ಗ್ರಂಥಿ- ಗಂಟು ಗಂಟಾದ ಆರ್ತವಸ್ರಾವ
7. ಪೂತಿ ಪೂಯ-ಕೀವು,ವಾಸನೆಯುಳ್ಳ ಆರ್ತವಸ್ತಾವ.
8. ಕ್ಷೀಣ- ಅತ್ಯಲ್ಪ ಆರ್ತವಸ್ರಾವ.

ಈ ನಾಲ್ಕು ರೀತಿಯ ವಿಕಾರ ಇದ್ದರೆ ಸ್ವಲ್ಪ ಕಷ್ಟವಾದರೂ, ಮತ್ತೆ ಮತ್ತೆ ಚಿಕಿತ್ಸೆ ಪಡೆದು ಸರಿಪಡಿಸಿಕೊಳ್ಳಿ, ನಂತರವೇ ಸಂತಾನದ ಬಗ್ಗೆ ಯೋಚಿಸಿ, ಇಲ್ಲದಿದ್ದರೆ ಮಕ್ಕಳಾಗುವ ಸಾಧ್ಯತೆ ಕಡಿಮೆ ಅಥವಾ ವಿಕಾರದಿಂದ ಕೂಡಿದ ಮಕ್ಕಳಾಗುವ ಸಾಧ್ಯತೆಯೇ ಹೆಚ್ಚು.

9. ಮೂತ್ರ,ಪುರೀಷ- ಮೂತ್ರ ಮತ್ತು ಮಲದ ವಾಸನೆಯುಳ್ಳ ಆರ್ತವಸ್ರಾವವನ್ನು ಚಿಕಿತ್ಸಿಸುವುದು ಅಸಾಧ್ಯ. ಇಂಥವರು ಮಕ್ಕಳನ್ನು ಪಡೆಯುವ ಪ್ರಯತ್ನದಲ್ಲಿ ನಿರಾಶರಾಗುವ ಬದಲು, ಬೇರೆ ಯೋಚನೆಗಳನ್ನು ಕೈಗೊಳ್ಳಿ.

ಈ ರೀತಿ,
ಅಶುದ್ಧ ದೂಷಿತ ಶುಕ್ರ-ರೇತಸ್ಸುಗಳು ಇದ್ದರೆ ಗರ್ಭಧಾರಣೆ ಅಸಾಧ್ಯ ಅಥವಾ ಗರ್ಭಧಾರಣೆಯಾದರೂ, ಗರ್ಭಸ್ರಾವ ಗರ್ಭಪಾತ, ಮೃತಶಿಶು ಜನನ ಅಥವಾ ಜನನಾನಂತರ ಯಾವುದೋ ಒಂದು ಕಾರಣದಿಂದ ಶಿಶುವು ಮರಣ ಹೊಂದುವುದು.

ವಿಶೆಷ ಗಮನಕ್ಕೆ:
ಚಿಕಿತ್ಸೆಯನ್ನು ಪಡೆಯುವ ಮೊದಲು, ರಜಸ್ಸು-ಶುಕ್ರಗಳ ಈ 9 ರೀತಿಯ ದುಷ್ಟತೆಗೆ ಕಾರಣವನ್ನು ಹುಡುಕಿ, ಅದನ್ನು ನಿಲ್ಲಿಸಿದರೆ ಹೆಚ್ಚಿನ ಚಿಕಿತ್ಸೆ ಮುಗಿದಂತೆಯೇ ಸರಿ.

ನಾಳೆ ಇವುಗಳ ದುಷ್ಟಿಗೆ ಇರುವ ಕಾರಣಗಳನ್ನು ತಿಳಿಯುವಾ

**********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-107
16.04.2020

ಇಂದಿನ ವಿಷಯ:
ಶುಕ್ರ(semen) ಮತ್ತು *ಶೋಣಿತ(ovum) ಸ್ಥಾನ ಮತ್ತು ದುಷ್ಟಿ ಲಕ್ಷಗಳು

ಶುಕ್ರ (ಪುರುಷ ಬೀಜ) ಸ್ಥಾನ ಮತ್ತು  ದುಷ್ಠಿ ಲಕ್ಷಣಗಳು:
*
ಶುಕ್ರವಹೇ ದ್ವೇ ತಯೋರ್ಮೂಲಂ ಸ್ತನೌ ವೃಷಣೌ ಚ ತತ್ರ ವಿದ್ಧಸ್ಯ ಕ್ಲೀಬತಾ, ಚಿರಾತ್ ಪ್ರಸೇಕೋ, ರಕ್ತಶುಕ್ರತಾ ಚ|
-ಸುಶ್ರುತ ಶಾರೀರ ಸ್ಥಾನ-9

ಪುರುಷನು ತನ್ನ ಸಂತಾನ ಮುಂದುವರಿಕೆಗಾಗಿ ಉತ್ಪತ್ತಿ ಮಾಡುವ ಬೀಜಗಳನ್ನು ಶುಕ್ರ ಎಂದು ಕರೆಯುತ್ತಾರೆ. 

ಶುಕ್ರವು ಈ ಶರೀರದಲ್ಲಿ ಒಂದು ಸ್ಥಿರವಾದ ಪ್ರಮಾಣದಲ್ಲಿ ಇರಲು ಎರೆಡು ಸ್ರೋತಸ್ಸುಗಳು ಕಾರಣ, ಇವುಗಳಿಗೆ ಶುಕ್ರವಹ ಸ್ರೋತಸ್ಸುಗಳು ಎನ್ನುತ್ತಾರೆ. 
(ಸ್ರೋತಸ್ಸುಗಳು: ಶುಕ್ರವನ್ನು ತಮ್ಮ ಜೀವಕೋಶಗಳಿಂದ ಸ್ರವಿಸಿ ಉತ್ಪತ್ತಿ ಮಾಡುವ ಮತ್ತು ಖಾಲಿ ಮಾಡುವ ನಳಿಕೆಗಳು)
ಒಂದು ನಳಿಕೆ ಉತ್ಪತ್ತಿ ಕಾರ್ಯದಲ್ಲಿ ತೊಡಗಿದರೆ ಇನ್ನೊಂದು ನಲಿಕೆ ಅದನ್ನು ಖಾಲಿ ಮಾಡಿ ಸಮ ಸ್ಥಿತಿಯಲ್ಲಿ ಇಡುತ್ತದೆ.

• ವೃಷಣಗಳು- ಇವು ಶುಕ್ರವನ್ನು ತುಂಬಿಸುತ್ತವೆ(seminiferus tubules) ಮತ್ತು 
• ಸ್ತನಗಳು- ಅದನ್ನು ಸ್ರಾವಮಾಡಿ ಸಮಸ್ಥಿತಿಗೆ ತರುತ್ತವೆ!!(ಇದನ್ನು ತರ್ಕದಿಂದ ಒಪ್ಪಿಸುವುದು ಕಷ್ಟ, ಆಚಾರ್ಯರು ಹಾಗೆ ಹೇಳಿದ್ದರಿಂದ ಸದ್ಯಕ್ಕೆ ಹಾಗೇ ತಿಳಿಯಬಹುದು)

ವಿಕೃತ ಲಕ್ಷಣಗಳು:
• ಷಂಡತ್ವ- ಅಂದರೆ ಮನದಲ್ಲಿ ಇಚ್ಛೆ ಇದ್ದರೂ "ಮೈಥುನ ಅಸಾಮರ್ಥ್ಯ" ಇರುತ್ತದೆ.

• ಅತ್ಯಂತ ತಡವಾಗಿ ಅಲ್ಪಮಾತ್ರ ವೀರ್ಯಸ್ರಾವ

• ರಕ್ತದಿಂದ ಕೂಡಿದ ವೀರ್ಯ ಸ್ರಾವ

ಮಕ್ಕಳಾಗಲಿಲ್ಲ ಎಂದು ಒದ್ದಾಡುವ ಮೊದಲು, ಇವುಗಳಲ್ಲಿ ಯಾವುದಾರೂ ಲಕ್ಷಣಗಳಿದ್ದಲ್ಲಿ ವೈದ್ಯರನ್ನು ಭೇಟಿ ಮಾಡಿ.

ಆರ್ತವ ಸ್ಥಾನ, ವಿಕಾರ ಲಕ್ಷಣಗಳು:

ಆರ್ತವವಹೇ ದ್ವೇ ತಯೋರ್ಮೂಲಂ ಗರ್ಭಾಶಯ ಆರ್ತವವಾಹಿನ್ಯಃ ಚ ಧಮನ್ಯಸ್ತತ್ರ ವಿದ್ಧಾಯಾಂ ವಂಧ್ಯಾತ್ವಂ ಮೈಥುನ ಅಸಹಿಷ್ಣುತ್ವಂ ಆರ್ತವನಾಶಃ ಚ|
-ಸುಶ್ರುತ ಶಾರೀರ ಸ್ಥಾನ-9

ಆರ್ತವವು ಸ್ತ್ರೀಯರಲ್ಲಿ 27ದಿನಗಳ ಕಾಲ ತುಂಬುತ್ತದೆ, 28ನೇ ದಿನ ಸ್ರಾವವಾಗುತ್ತದೆ.

ಆರ್ತವವನ್ನು ತುಂಬುವ ಸ್ಥಾನ ಆರ್ತವ ವಾಹಿನಿ ಧವನಿಗಳು( ಅಂದರೆ ಮೆದುಳು-ಥೈರಾಯ್ಡ್-ಅಂಡಾಶಯಗಳ ಹಾರ್ಮೋನ್ ಗಳು ಮತ್ತು ಗರ್ಭಾಶಯಕ್ಕೆ ರಸ-ರಕ್ತವನ್ನು ತುಂಬುವ ರಕ್ತನಾಳಗಳು-uterine arteries)
ಮತ್ತು
ಖಾಲಿ ಮಾಡುವ ಸ್ಥಳವಾದ ಗರ್ಭಾಶಯ (ಅಂತಸ್ಥ ಭಾಗವಾದ endometrium ) 

ದುಷ್ಟಿ ವಿಕಾರಗಳು

ಬಂಜೆತನ
ಮೈಥುನ ಅಸಹತ್ವ
ಆರ್ತವ ಕ್ಷಯ ಅಥವಾ ನಾಶ(ತಡವಾಗಿ ಮುಟ್ಟಾಗುವಿಕೆ, ಅಲ್ಪಸ್ರಾವ ಆಗುವಿಕೆ ಅಥವಾ ಎರೆಡೂ)

ರಸಧಾತುವೇ ಸ್ತ್ರೀ ಪುರುಷರ ಬೀಜಗಳನ್ನು ಹಿಡಿದಿಟ್ಟುಕೊಂಡು, ಗರ್ಭಧಾರಣೆ ಆಗುವವರೆಗೆ ಕೊಂಡೊಯ್ಯವ ವಾಹಕವಾಗಿ, ಕೊನೆಗೆ ಗರ್ಭಧಾರಣೆ ನಂತರ ಅದನ್ನು ಪೋಷಣೆಯನ್ನೂ ಮಾಡುತ್ತದೆ. ಮತ್ತು ಎದೆಹಾಲಿನ ರೂಪದಲ್ಲಿ ಶಿಶುವನ್ನೂ ಪೋಷಣೆ ಮಾಡುತ್ತದೆ. 

ಸ್ತ್ರೀ ಪುರುಷರಲ್ಲಿರುವ ರಸಧಾತು ಎಂಬ ಪ್ರೀಣನ(ತಾಯಿ ಸಮಾನ ಪೋಷಣೆ) ಮಾಡುವ ಶಕ್ತಿಯ ಆರೋಗ್ಯವೇ ಸುಪುಷ್ಠ ಗರ್ಭ ಮತ್ತು ಆರೋಗ್ಯಯುತ ಶಿಶು ಜನನಕ್ಕೆ ಕಾರಣ.
ಹಾಗೆಯೇ,
ರಸಧಾತುವಿನ ವಿಕೃತಿಯೇ ಗರ್ಭಸ್ರಾವಾದಿ  ವಿಕಾರ ಮತ್ತು ಶಿಶುಗಳ ಅನಾರೋಗ್ಯ ಮತ್ತು ದುರ್ಬಲತೆಗೆ ಕಾರಣ

ಗಮನಿಸಿ:
ಶೇ 90 ರಷ್ಟು ಗರ್ಭ ವಿಕಾರಕ್ಕೆ ರಸ‌ವಿಕಾರವೇ ಕಾರಣ, ಇದನ್ನು ಗುಣಪಡಿಸಬಹುದು. ಕೇವಲ ಶೇ. 10 ರಷ್ಟು ಮಾತ್ರ ಬೀಜ ವಿಕಾರ ಕಾರಣ ಮತ್ತು ಇವರಿಗೆ ಏನೇ ಚಿಕಿತ್ಸೆ ಮಾಡಿದರೂ ಮಕ್ಕಳಾಗುವ ಸಾಧ್ಯತೆ ಅತೀ ವಿರಳ)
ಈ ವಿಷಯದಲ್ಲಿ ನಾವು ಮಾಡುವ ಸಣ್ಣ ಸಣ್ಣ ತಪ್ಪುಗಳು ಮುಂದಿನ ಪೀಳಿಗೆಗೆ ಎಂತಹ ದುಷ್ಪರಿಣಾಮ ಬೀರುತ್ತವೆ ಎಂದು ನಾಳಿನ ಸಂಚಿಕೆಯಲ್ಲಿ ನೋಡೋಣ.
**********



ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ-108
17.04.2020

*********
ಇಂದಿನ ವಿಷಯ:
ದೈಹಿಕ, ಮಾನಸಿಕ ಆಧ್ಯಾತ್ಮಿಕವಾಗಿ ಸದೃಢ ಮಕ್ಕಳನ್ನು ಪಡೆಯಲು ದಂಪತಿಗಳು ಅನುಸರಿಸಬೇಕಾದ ಕೆಲ ನಿಯಮಗಳು
**********

1. ಪತಿ ಅನುಸರಿಸಬೇಕಾದ ನಿಯಮಗಳು
2. ಪತ್ನಿ ಅನುಸರಿಸಬೇಕಾದ ನಿಯಮಗಳು
3. ದಂಪತಿಗಳಿಬ್ಬರೂ ಅನುಸರಿಸಬೇಕಾದ ನಿಯಮಗಳು

**********

ಪತಿ ಅನುಸರಿಸಬೇಕಾದ ನಿಯಮಗಳು

ತಂದೆಯ ಆಹಾರದಿಂದಲೇ ಗರ್ಭಕ್ಕೆ ಜೀವನು ಪ್ರವೇಶ ಮಾಡುವುದರಿಂದ, ಆತ್ಮಬಲ ಇರುವ ಮಗುವನ್ನು ಪಡೆಯಲು ಹೀಗೆ ಮಾಡಬಹುದು.

• ಶುದ್ಧ ಆಹಾರ ಸೇವನೆ
• ಆಹಾರಕ್ಕಾಗಿ ಮಾಡುವ ದುಡಿಮೆಯಲ್ಲಿ ಶುದ್ಧತೆ
(ನಮ್ಮ ವ್ಯವಹಾರ ಕಾನೂನು ಬದ್ಧವಾಗಿದ್ದರೂ, ಅನಾರೋಗ್ಯಕರ ರೀತಿಯಲ್ಲಿ ಹಣ ಸಂಪಾದನೆಯಾಗುತ್ತಿದ್ದರೆ, ಅವತು ಆಧ್ಯಾತ್ಮಿಕ ದೃಷ್ಟಿಯಿಂದ ಅಶುದ್ಧ ಆಹಾರ ಸೇವಿಸುತ್ತಾರೆ ಎಂದೇ ಅರ್ಥ ಉದಾ: ಬೇಕರಿ, ಪಿಜ್ಜಾ ಮಾಲ್, ಅಲ್ಕೋಹಾಲ್, ವ್ಯಾಪಾರೀಕರಣದ ಆಸ್ಪತ್ರೆ, ಶಿಕ್ಷಣ ಸಂಸ್ಥೆ...)
• ಆಹಾರವನ್ನು ಹಂಚಿ ಸೇವಿಸುವ ಮನಸ್ಸು ಬೇಕು
• ಉಪವಾಸ, ಅತಿಯಾದ ಆಹಾರ ಸೇವನೆ ಬೇಡ
• ಕೇವಲ ರುಚಿಯ ಆಧಾರದಲ್ಲಿ ಆಹಾರ ಸೇವನೆಯನ್ನು ತ್ಯಜಿಸಿ
• ಅತಿಯಾದ ಚಹಾ, ಕಾಫಿ ಸೇವನೆ ಬೇಡ
• ಅಜೀರ್ಣ, ಆಮ್ಲಪಿತ್ತ ಇರಬಾರದು
• ಮಾದಕ ದ್ರವ್ಯ ಸೇವನೆ ಬೇಡ
• ಶಾರೀರಿಕ ಅಲ್ಪಕಾರ್ಯ, ಆಲಸ್ಯ, ಹಗಲು ನಿದ್ದೆ
• ಕೇವಲ ಸ್ವಹಿತ ಚಿಂತನೆ ತ್ಯಾಗ
**********
ಇವುಗಳ ವೈಜ್ಞಾನಿಕ ವಿವರಗಳನ್ನು 111, 112 ನೇ ಸಂಚಿಕೆಗಳಲ್ಲಿ (ದಿ: 20, 21ರ ಏಪ್ರೀಲ್ 2020) ನೋಡೋಣ.
**********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
18.04.2020      ಸಂಚಿಕೆ-109

ಇಂದಿನ ವಿಷಯ:
ದೈಹಿಕ, ಮಾನಸಿಕ ಆಧ್ಯಾತ್ಮಿಕವಾಗಿ ಸದೃಢ ಮಕ್ಕಳನ್ನು ಪಡೆಯಲು ದಂಪತಿಗಳು ಅನುಸರಿಸಬೇಕಾದ ಕೆಲ ನಿಯಮಗಳು

1. ಪತಿ ಅನುಸರಿಸಬೇಕಾದ ನಿಯಮಗಳು
2. ಪತ್ನಿ ಅನುಸರಿಸಬೇಕಾದ ನಿಯಮಗಳು
3. ಇಬ್ಬರೂ ಅನುಸರಿಸಬೇಕಾದ ನಿಯಮಗಳು

ಪತ್ನಿ ಅನುಸರಿಸಬೇಕಾದ ನಿಯಮಗಳು

ತಾಯಿಯ ಆಹಾರದಿಂದಲೇ ಮಗುವಿನ ಶರೀರ ಮತ್ತು ಮನಸ್ಸು ನಿರ್ಮಾಣ ಆಗುವುದರಿಂದ-

• ಶುದ್ಧ ಆಹಾರ ಸೇವನೆ ಮಾಡಿ.
• ಅತಿಯಾದ ಚಹಾ, ಕಾಫಿ ಸೇವನೆ ಬೇಡ.
• ಅತಿಯಾದ ಉಪವಾಸ ಬೇಡ.
• ತಡವಾಗಿ, ಅಕಾಲ, ತಡರಾತ್ರಿ ಭೋಜನ
• ಸಮಯಾಭಾವದ ಹೆಸರಿನಲ್ಲಿ ಗಬಗಬನೇ ಆಹಾರ ನುಂಗುವುದು ಬೇಡ.
• ಹಿಂದಿನ ದಿನದ ಉಳಿದ ಆಹಾರ ಸೇವನೆ ಬೇಡ.
• ಕೇವಲ ರುಚಿಯ ಆಧಾರದಲ್ಲಿ ಆಹಾರ ಸೇವನೆಯನ್ನು ತ್ಯಜಿಸಿ.
• ಅಜೀರ್ಣ, ಆಮ್ಲಪಿತ್ತ ತಲೆ ನೋವುಗಳು ಇರಬಾರದು.
• ಅತಿಯಾದ ಹುಳಿ, ಖಾರ ಸೇವನೆ ಬೇಡ.
• ಜೋರಾಗಿ ನಡೆಯುವುದು, ಜಾಗಿಂಗ್, ಜಿಮ್, ಹಾರುವ ವ್ಯಾಯಾಮಗಳು ಮತ್ತು ಅತಿಯಾದ ಭಾರ ಎತ್ತುವುದು ಬೇಡ.
• ಕೋಪ, ಕಿರಿಕಿರಿ, ಸಂತಾಪಕ್ಕೆ ಅವಕಾಶ ಬೇಡ.
• ತೀಕ್ಷ್ಣ ಮತ್ತು ಮಾದಕ ದ್ರವ್ಯ ಸೇವನೆ(ಪಾನಿಪುರಿ, ಗೋಬಿ, ಬೇಕರಿ ತಿನಿಸು, ಪಿಜ್ಜಾ, ತಂಬಾಕು, ಅಲ್ಕೋಹಾಲ್)ಬೇಡ.
• ಮನೆಯ ಸದಸ್ಯರು ಮತ್ತು ನೆರೆಹೊರೆಯವರೊಂದಿಗಿನ ಅತ್ಯುತ್ತಮ ಸಹಕಾರ ಮತ್ತು ಸಂಬಂಧ ಅತೀ ಅವಶ್ಯಕ.
**********
111, 112 ನೇ ಸಂಚಿಕೆಯಲ್ಲಿ ಇವುಗಳ ವೈಜ್ಞಾನಿಕ ವಿವರಗಳನ್ನು ನೋಡೋಣ.

***********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
19.04.2020.       ಸಂಚಿಕೆ-110

ಇಂದಿನ ವಿಷಯ:
ದೈಹಿಕ, ಮಾನಸಿಕ ಆಧ್ಯಾತ್ಮಿಕವಾಗಿ ಸದೃಢ ಮಕ್ಕಳನ್ನು ಪಡೆಯಲು  ಪತಿ-ಪತ್ನಿಯರಿಬ್ಬರೂ ಅನುಸರಿಸಬೇಕಾದ ನಿಯಮಗಳು

ತಂದೆ-ತಾಯಿಯರ ಮತ್ತು ವಂಶದ ಗುಣಧರ್ಮಗಳಿಂದಲೇ ಸರ್ವಸಮರ್ಥ ಮಗು ಜನಿಸುವುದರಿಂದ-

• ಪ್ರಾರ್ಥನೆ ಒಂದು ಪವಾಡವನ್ನೇ ಮಾಡುತ್ತದೆ. ನಿಮ್ಮ ಇಷ್ಟ ದೇವರನ್ನು ನಿತ್ಯವೂ ಸರ್ವೋತ್ತಮ ಸಂತಾನಕ್ಕಾಗಿ ಪ್ರಾರ್ಥಿಸಿ.
• ಅವಕಾಶ ಇದ್ದರೆ, ಸಾಧ್ಯವಿದ್ದರೆ, ನಿಮ್ಮ ಹಿರಿಯರಿಂದಲೂ ಪ್ರಾರ್ಥನೆ ಮಾಡಿಸಿ.
• ಮಂತ್ರಕ್ಕೆ ಬೀಜದೋಷ( genetic problems) ನಿವಾರಿಸುವ ಸಾಮರ್ಥ್ಯ ಇದೆ, ನಿಮ್ಮ ನಿತ್ಯ ಕೆಲಸಗಳ ಜೊತೆ ಜೊತೆಗೇ ಇಷ್ಟ ದೇವರ ಹೆಸರನ್ನೇ ಮಂತ್ರದಂತೆ ಪಠಿಸುತ್ತಿರಿ.
• ಪೂಜೆ, ವ್ರತಗಳ ಹೆಸರಿನಲ್ಲಿ ಕೇವಲ ಬಾಹ್ಯ ಆಚರಣೆ ಅತ್ಯಲ್ಪ ಫಲದಾಯಕ, ಹಾಗಾಗಿ ಸಾಮಾನ್ಯ ಪೂಜೆ ಮಾಡಿದರೆ ಸಾಕು.
• ವ್ರತಾಚರಣೆ ಮಾನಸಿಕ ಹಿಂಸೆಯಾಗದಿರಲಿ.
• ಸಾರ್ವತ್ರಿಕ ಜೋತಿಷ್ಯ ನಿಮ್ಮ ಆಂತರಿಕ ವ್ಯಕ್ತಿತ್ವಕ್ಕೆ(ಜಾತಕ ಎಂದುಕೊಳ್ಳಬಹುದು) ಯಾವಾಗಲೂ ಸರಿಯಾಗಿರುವುದಿಲ್ಲ, ಹಾಗಾಗಿ ಅತಿಯಾಗಿ ನೊಂದುಕೊಳ್ಳುವ ಅಗತ್ಯ ಇಲ್ಲ.
• ಹಿಂದಿನ ದಿನದ ಉಳಿದ ಆಹಾರವನ್ನು  ಭಿಕ್ಷುಕರಿಗೆ ಕಡ್ಡಾಯವಾಗಿ ಕೊಡಬೇಡಿ,‌ ಈ ವಿಷಯದಲ್ಲಿ ಅತೀ ಎಚ್ಚರದಿಂದ‌ ಇರಿ.
• ಮದುವೆ ಯಾದಾಗಿನಿಂದ ಇಬ್ಬರೂ ಎಲ್ಲಾ ದೃಷ್ಟಿಯಿಂದಲೂ ಪರಿಶುದ್ಧ ಆಹಾರ ಸೇವನೆ ಮಾಡಿ.
• ಮನಸ್ಸು ಇಚ್ಛಿಸುವ ಆಹಾರ ಸೇವಿಸಿ, ಆದರೆ ನಾಲಿಗೆ ಇಚ್ಛೆಯನ್ನೇ ಮನೋ ಇಚ್ಚೆ ಎಂದು ತಿಳಿಯಬೇಡಿ.
• ಪರಸ್ಪರ ಪಕೋಪ, ಕಿರಿಕಿರಿ, ಸಂತಾಪಕ್ಕೆ ಅವಕಾಶ ಬೇಡ.
• ಮನೆಯ ಸದಸ್ಯರು ಮತ್ತು ನೆರೆಹೊರೆಯವರೊಂದಿಗಿನ ಅತ್ಯುತ್ತಮ ಸಹಕಾರ ಮತ್ತು ಸಂಬಂಧ ಅತೀ ಅವಶ್ಯಕ.
• ತೀವ್ರತರ ಲೈಂಗಿಕ ಚಿಂತನೆ ಮತ್ತು ಆಚರಣೆ ಬೇಡ.
• ಧಾರ್ಮಿಕ ಆಚರಣೆಗಳಿಗಿಂತ ಹೆಚ್ಚು ಆಧ್ಯಾತ್ಮಿಕ ಚಿಂತನೆ ಇರಬೇಕು.
• ಮಕ್ಕಳನ್ನು ಪಡೆಯುವ ಯೋಜನಾ ಪೂರ್ವ ಪಂಚಕರ್ಮ ಚಿಕಿತ್ಸೆ, ರಾಸಾಯನ ಮತ್ತು ವಾಜೀಕರಣ(ಸಶಕ್ತ ಅಂಡಾಣು ಮತ್ತು ವೀರ್ಯಾಣು ನಿರ್ಮಾಣಕ್ಕೆ)  ಚಿಕಿತ್ಸೆಯನ್ನು ಕಡ್ಡಾಯವಾಗಿ ಪಡೆಯಿರಿ.
• ಗರ್ಭಿಣಿ ಪರಿಚರ್ಯವನ್ನು ಆಯುರ್ವೇದ ರೀತಿಯಲ್ಲಿ ಪಾಲಿಸಿ.
**********

ಮುಂದಿನ ಕೆಲ ಸಂಚಿಕೆಯಲ್ಲಿ ಇವುಗಳ ವೈಜ್ಞಾನಿಕ ವಿವರಗಳನ್ನು ನೋಡೋಣ.
***********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
20.04.2020       ಸಂಚಿಕೆ-111

ಇಂದಿನ ವಿಷಯ:
ಮಗುವನ್ನು ಪಡೆಯಲಿಚ್ಚಿಸುವ ತಂದೆ-ತಾಯಂದಿರ ನಿಯಮ ಪಾಲನೆಯಲ್ಲಿನ ವೈಜ್ಞಾನಿಕ ಸತ್ಯಗಳು
**********

• ದುಡಿಮೆ ಆರೋಗ್ಯಕರವಾಗಿರಲಿ:
ತಂದೆ-ತಾಯಿಯರ ಮತ್ತು ವಂಶದ ಗುಣಧರ್ಮ ಅಂದರೆ ನಮ್ಮ ಹಿರಿಯರ, ನಮ್ಮ ಧರ್ಮದ ನಡೆ, ಜ್ಞಾನದ ಹಂಬಲ, ತ್ಯಾಗ ಇವು ನಮ್ಮ ಮಗುವಿನ ಜೀನ್ಸ್ ಗಳಲ್ಲಿ ಶೇಖರಣೆಯಾಗುತ್ತವೆ ಮತ್ತು ಆ ಮಗುವಿನ ಜೀವಿತಾವಧಿವರೆಗೂ ಕೆಲಸಗಳಿಗೆ ಪ್ರೇರಣೆ ನೀಡುತ್ತವೆ.‌ ಸತ್ ಚಾರಿತ್ರ್ಯ ಕುಲದಲ್ಲಿ ಜನಿಸಿದವರಿಗೆ ಕೆಟ್ಟ ಆಲೋಚನೆಗಳೇ ಬರುವುದಿಲ್ಲ.

• ಸತ್ ಸಂತಾನಕ್ಕೆ ಪ್ರಾರ್ಥಸಿ
ಪ್ರಾರ್ಥನೆಯಿಂ ನಮ್ಮ ಚಿತ್ತ ಶುದ್ಧಿಯಾಗುತ್ತದೆ, ಇಂಥಹ ಮನುಷ್ಯರು ಸೇವಿಸಿದ ಆಹಾರವು ಶರೀರದಲ್ಲಿ ಪ್ರಸಾದದಂತೆ ಬದಲಾಗುತ್ತದೆ. (ನಾವು ಏನನ್ನು ತಿನ್ನುತ್ತೇವೆಯೋ ಶರೀರದಲ್ಲಿ ಅದೇ ಅಂಶ ವೃದ್ಧಿಯಾಗುವುದಿಲ್ಲ, ನಮ್ಮ ಆಹಾರದಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಬೇಕಾದಷ್ಟಿದ್ದರೂ, ನಮ್ಮ ಎಂಜೈಮ್ ಅದನ್ನು ಹೀರಿಕೊಳ್ಳದಂತೆ ಮಾಡಿ ಕೊರತೆ ತರುತ್ತವೆ. ಅದಕ್ಕೆ ಕಾರಣ ನಮ್ಮ ಚಿತ್ತದಿಂದ ಹೊರಡುವ ವಿಚಾರಧಾರೆಗಳು.) ಶುದ್ಧ ಮನಸ್ಸು ಮಾತ್ರ ಆಹಾರದಲ್ಲಿನ ಪರಿಶುದ್ಧ ಜೀವಿಯನ್ನು ನಮ್ಮ ವೀರ್ಯಾಣುಗಳ ಮುಖಾಂತರ ಹೊತ್ತೊಯ್ದು ಉತ್ತಮ‌ಸಂತಾನ ಕರುಣಿಸುತ್ತದೆ.

• ವ್ರತಾಚರಣೆಯ ಅಲ್ಪತೆ
ವ್ರತ ಬೇರೆಯವರಿಗಾಗಿ ಮಾಡಿದರೆ ಪ್ರಾರ್ಥನೆ. ನಮಗಾಗಿ ವ್ರತ ಮಾಡಿದರೆ ಅದೊಂದು ಮಾನವ-ದೇವತೆಗಳ ನಡುವಿನ ವ್ಯವಹಾರ. 
ಏಕೆಂದರೆ ನಮ್ಮ ವ್ರತ(ಲೌಕಿಕ ನಿಯಮ or ತಪಸ್ಸು)ದ ತೀವ್ರತೆಯ ಲೆಕ್ಕದಲ್ಲಿ ನಮ್ಮ ಮನಸ್ಸು ಶಕ್ತಿಯನ್ನು ಸಂಪಾದಿಸುತ್ತದೆ, ಆ ಶಕ್ತಿ ಒಂದು ಫಲ ಕೊಡುತ್ತದೆ, ಆದರೆ ಆ ಫಲದ ಎಲ್ಲಾ ಸತ್-ದುಷ್ಟ ಪರಿಣಾಮಗಳನ್ನು ಎದುರಿಸಲೇಬೇಕು. ಆದ್ದರಿಂದ ಇಂತವುಗಳೆದುರು ಬಹಳ ಸಮಯ ವ್ಯರ್ಥ ಮಾಡಿ ಆಪತ್ತನ್ನು ತಂದುಕೊಳ್ಳುವುದು ತರವಲ್ಲ.
ಇಂತಹ ಫಲಿತಾಂಶಕ್ಕೆ ಇಂತ ಪೂಜೆ ಎಂದು ತಿಳಿಸುವವರ ಬಗ್ಗೆ ಮತ್ತು ಅದನ್ನು ಆಚರಿಸುವ ಮೊದಲು ಆಳವಾಗಿ ಅಲೋಚಿಸಿರಿ.

• ಸಾರ್ವತ್ರಿಕ ಜೋತಿಷ್ಯ
ಈ ರಾಶಿ ಫಲ, ಈ ವರ್ಷ ಹೀಗೆ ಎಂಬ ಕೇವಲ ಒಂದು ಸಾಮೂಹಿಕ ಫಲವನ್ನು ನಂಬಿ ಕೊರಗುವುದು ಮಕ್ಕಳನ್ನು ಪಡೆಯುವ ಹಾದಿಯಲ್ಲಿ ಮಹಾನ್ ಅನರ್ಥಕಾರಿ. ಬಹುತೇಕ ಜನರ ಮದುವೆ, ವ್ಯಾಪಾರ,‌ ಮಕ್ಕಳು ಗ್ರಾಹಾದಿ ಗತಿಗಳ ಅಸಮಯದಲ್ಲೇ ಆಗುತ್ತವೆ. ನಿಮ್ಮ ಜನನ ಕೆಲವು ಪರಿಣಾಮಗಳಿಂದ ಔನ್ನತ್ಯಕ್ಕೇರಲೆಂದೇ ಆಗಿರುತ್ತದೆ, ಹಾಗಾಗಿ ನಿಮ್ಮ ಜಾತಕ ನಿಮ್ಮದು. 
ಎಲ್ಲಕ್ಕಿಂತ ಹೆಚ್ಚು- ಸಂತಾನವು ನಮ್ಮ ಪೂರ್ವಜನ್ಮದ ಕರ್ಮಾನುಸಾರ ಬರುವ ಫಲ. ಆದರೆ ಪ್ರಾರ್ಥನೆ ಮಾತ್ರ ಸಂತಾನ ಮತ್ತು ಅದರ ಪರಿಣಾಮವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತದೆ.
ಉಳಿದವುಗಳ ವೈಜ್ಞಾನಿಕ ವಿವರಗಳನ್ನು ನೋಡೋಣ.
***************


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
21.04.2020.       ಸಂಚಿಕೆ-112
**********
ಇಂದಿನ ವಿಷಯ:
ಮಗುವನ್ನು ಪಡೆಯಲಿಚ್ಚಿಸುವ ತಂದೆ-ತಾಯಂದಿರ ನಿಯಮ ಪಾಲನೆಯಲ್ಲಿನ ವೈಜ್ಞಾನಿಕ ಸತ್ಯಗಳು
**********
• ಭಿಕ್ಷುಕರ‌ ಉಪಚಾರ
ಭಿಕ್ಷುಕ ಹೊರನೋಟಕ್ಕೆ ದರಿದ್ರ, ಆದರೆ ಆಂತರಿಕವಾಗಿ ನಮ್ಮನ್ನು ಹರಸಲೆಂದೇ ಬರುವ ದೇವಧೂತ.
ಏಕೆಂದರೆ ಬೇಡುವ ಸಮಯದಲ್ಲಿ ಅವರು ತಮ್ಮ ಅಹಂ ಅನ್ನು ಹೆಚ್ಚು ಕಡಿಮೆ ಇಲ್ಲವಾಗಿಸಿಕೊಂಡಿರುತ್ತಾರೆ. (ಅಹಂ ಕಳೆದುಕೊಳ್ಳದೇ ಭಿಕ್ಷೆ ಬೇಡುವುದು ಅಸಾಧ್ಯ,  ನಾವು ಭಿಕ್ಷೆ ಬೇಡಲು ಅಸಾಧ್ಯ ಏಕೆ? ಅದೇ ನಮ್ಮ ಅಹಂ, ಅದನ್ನು ಸ್ವಾಭಿಮಾನ- ಸ್ವ+ಅಭಿಮಾನ ಎನ್ನುತ್ತೇವೆ.)
ಅಹಂ ಇಲ್ಲದ ಮಾನವನನ್ನೇ ನಾವು ದೇವ ಎಂದು ಕರೆಯುತ್ತೇವೆ,‌ ಪೂಜಿಸುತ್ತೇವೆ. ನಾವು ಶ್ರದ್ಧೆ, ಭಕ್ತಿಯಿಂದ ಪೂಜಿಸುವ ಅದೆಷ್ಟೋ ಜನರೂ(ಸ್ವಾಮಿ, ಗುರು, ಇನ್ನೂ ಮುಂತಾದ ಹೆಸರಿನಲ್ಲಿ ಕರೆಸಿಕೊಳ್ಳುವವರು) ಭಿಕ್ಷುಕರಷ್ಟು ಕನಿಷ್ಠ ಅಹಂಗೆ ಇಳಿದಿರುವುದು ಕಡಿಮೆ.‌
ಮತ್ತು ಕಣ್ಣಿಗೆ ಕಾಣುವ ಭಿಕ್ಷು ತಾನು ದೇವಭಾವದಲ್ಲಿರುವೆ ಎಂದು ಸ್ವತಃ ಆವನಿಗೂ ಗೊತ್ತಿರುವುದಿಲ್ಲ ಆದರೆ ಸತ್ಯ ಏನೆಂದರೆ ಅವರ ಹೃದಯದ ಹಾರೈಕೆ ಎಂದಿಗೂ ಸುಳ್ಳಾಗುವುದಿಲ್ಲ. ಇದು ನಮ್ಮ ಸ್ವಂತ ಅನುಭವ. 
ಭಿಕ್ಷುಕರನ್ನು ಹೇಗೆ ಉಪಚರಿಸಬಹುದು ಎಂದು ನೀವೇ ತಿಳಿಯಿರಿ.

• ಮನೋ ಇಚ್ಛಿತ ಆಹಾರ ಸೇವನೆ
ಮನಸ್ಸನ್ನು ತಿಳಿಯಾಗಿಸಿಕೊಂಡು ಅದರ ಸೂಕ್ಷ್ಮ ಮಾತಿಗೆ ಗಮನ ಕೊಟ್ಟರೆ, ಗರ್ಭಧಾರಣೆಗೆ ಬೇಕಾದ ಸಶಕ್ತ ಸಂತಾನಕ್ಕೆ ಬೇಕಾದ ಹಾರ್ಮೋನ್, ಎಂಜೈಮ್, ಶಕ್ತಿ, ಕೊನೆಗೆ ಜೀವಾತ್ಮನನ್ನೂ......ಹೀಗೆ ಎಲ್ಲವನ್ನೂ ಮನಸ್ಸೇ ತನ್ನ ಇಚ್ಛೆಯ ಮುಖಾಂತರ ಸೂಚಿಸುತ್ತದೆ. ಆದರೆ ಬಹು ಜನರು ಇಚ್ಛೆಯ ಹೆಸರಿನಲ್ಲಿ ನಾಲಿಗೆಗೆ ಇಷ್ಟವಾಗುವ ಅಪಥ್ಯ ಆಹಾರ ಸೇವಿಸುತ್ತಾ ಚಿಕಿತ್ಸೆಗೆಂದು ಬರುತ್ತಾರೆ. ಇದು ನಿಷ್ಫಲ ಪ್ರಯತ್ನ, ಕೃತಕ ಹಾರ್ಮೋನ್ ಚಿಕಿತ್ಸೆಗಳಿಂದ ಮಕ್ಕಳಾದರೂ ಅವರ ಸದೃಢತೆ ಎಷ್ಟು? ಜನನಾ ನಂತರ ಆ ಮಕ್ಕಳ ಆರೋಗ್ಯ ಎಷ್ಟು? ವಿಚಾರಯೋಗ್ಯ ಅಂಶ.
ಹಾಗಾಗಿ ಆಹಾರವೇ- ಜೀವ, ಶರೀರ, ಇಂದ್ರಿಯಗಳು, ಮನಸ್ಸು, ಬುದ್ಧಿ ಎಲ್ಲವೂ ಆಗುವ ಕಾರಣ ಸ್ತ್ರೀ ಪುರುಷರಿಬ್ಬರೂ ದಯಮಾಡಿ ತಪ್ಪದೇ ಪಾಲಿಸಿ.

**********
ಮುಂದಿನ ಕೆಲ ಸಂಚಿಕೆಯಲ್ಲಿ ಇವುಗಳ ವೈಜ್ಞಾನಿಕ ವಿವರಗಳನ್ನು ನೋಡೋಣ.
**********



ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
22.04.2020.       ಸಂಚಿಕೆ-113

ಇಂದಿನ ವಿಷಯ:
ಮಗುವನ್ನು ಪಡೆಯಲಿಚ್ಚಿಸುವ ತಂದೆ-ತಾಯಂದಿರ ನಿಯಮ ಪಾಲನೆಯಲ್ಲಿನ ವೈಜ್ಞಾನಿಕ ಸತ್ಯಗಳು

ಪರಸ್ಪರ ಪಕೋಪ, ಕಿರಿಕಿರಿ, ಸಂತಾಪಕ್ಕೆ ಅವಕಾಶ ಬೇಡ.

ಕ್ರೋಧಾತ್ ಪಿತ್ತಮ್|
ಮನಸ್ಸಿನಲ್ಲಿ ರಜೋಗುಣ ಅತ್ಯಂತ ಹೆಚ್ಚು ವರ್ಧನೆಯಾಗಿ, ಅತಂತ್ರತೆ ಸೃಷ್ಟಿಯಾಗಿ, ಪ್ರಕಟವಾಗುತ್ತಿರುವ ಮಗುವಿನ ಶರೀರ, ಮನಸ್ಸಿನ ಮೇಲೆ ದುಷ್ಪರಿಣಾಮ‌ಬೀರುತ್ತದೆ. ಇದೇ ಪಿತ್ತದ ಕಾರಣದಿಂದ ಶಿಶುಗಳಿಗೆ ಸಹಜವಾಗಿ ಬರುವ ಜಾಂಡೀಸ್ (Increased billirubin due to hemolysis of RBC), ಇಂದು ಬೇಗ ನಿಯಂತ್ರಣಕ್ಕೆ ಬರದೇ, ರಕ್ತಕಣಗಳ ಒಡೆಯುವಿಕೆ ಬಹಳ ಕಾಲ ಮುಂದುವರಿಯುತ್ತಿರುತ್ತದೆ. ಬೆಳಕಿನ ಚಿಕಿತ್ಸೆಯಲ್ಲದೇ, ಔಷಧಿಗಳನ್ನು ಕೊಡಬೇಕಾಗಿ ಬರುತ್ತದೆ. ಹಾಗೆಯೇ, ರಜೋಗುಣದ ಕಾರಣ ಮಾನಸಿಕವಾಗಿ ಅತ್ಯಂತ ಚಂಚಲ ಮಗು ಜನಿಸುವ ಸಾಧ್ಯತೆ ಹೆಚ್ಚು.

ಸಹ ಮಾನವರೊಂದಿಗಿನ ಉತ್ತಮ‌ಬಾಂಧವ್ಯ
ಸಜ ಜೀವಕೋಶಗಳೊಂದಿಗಿನ ಸಂಬಂಧ ಸರಿ ಇಲ್ಲದ ಕಾರಣ ಅಟೋ ಇಮ್ಯೂನ್ ಕಾಯಿಲೆಗಳಾದ- ಅಲರ್ಜಿಕ್ ರೈನೈಟೀಸ್, ಬ್ರಾಂಕೈಟೀಸ್, ಚರ್ಮದ ಅಲರ್ಜಿ, ರುಮ್ಯಾಟಿಸಮ್, ರುಮ್ಯಾಟಿಕ್ ಹಾರ್ಟ್, ಅನೇಕ ವಿಧದ ಕ್ಯಾನ್ಸರ್ ಸಂಬಂಧೀ ಬಾಧೆಗಳು ಬರುತ್ತವೆ. ಗರ್ಭಪೂರ್ವ ನಮ್ಮ ಮನಸ್ಸು ಅತ್ಯಂತ ವಿಶಾಲ ದೃಷ್ಟಿಯಿಂದ ಇದ್ದರೆ ಈ ರೋಗಗಳಿಂದ ನಮ್ಮ ಮಕ್ಕಳು ಬಹು ದೂರ ಇರುತ್ತಾರೆ. ನಾವು ವಿಶಾಲದೃಷ್ಟಿಯಿಂದ ಇರುವೆವೆಂದು ಗುರುತಿಸಿಕೊಳ್ಳುವುದೇ "ಕುಟುಂಬದ ಸಹ ಸದಸ್ಯರ, ಸಂಬಂಧಿಕರ ಮತ್ತು ನೆರೆಹೊರೆಯವರೊಂದಿಗಿನ ನಮ್ಮ ಬಾಂಧವ್ಯದಿಂದ"

ತೀವ್ರತರ ಲೈಂಗಿಕ ಚಿಂತನೆ ಮತ್ತು ಆಚರಣೆ ಬೇಡ

ಕಾಮ........ತ್ ವಾಯುಃ||
ಇದರಿಂದ ವಾತ ದೋಷ ಅತ್ಯಂತ ವೃದ್ಧಿಯಾಗುವುದರಿಂದ, ವಾತಪ್ರಧಾನ ದೋಷದಿಂದ ಮಗು ಜನಿಸುತ್ತದೆ. ನಿಮ್ಮ ವಿಶೇಷ ಗಮನಕ್ಕೆ- "ಹೀಗೆ ಮಗುವಿಗೆ ಜನ್ಮಾರಭ್ಯ ಬರುವ ದೋಷ ಪ್ರಕೃತಿಯನ್ನು ಯಾವ ಚಿಕಿತ್ಸೆಯಿಂದಲೂ ಬದಲಿಸುವುದು ಅಸಾಧ್ಯ" ವಾತ ಪ್ರಧಾನ ಪ್ರಕೃತಿಯ ಮಗು ಬುದ್ಧಿವಂತನಾದರೂ, ನೆನಪಿನ ಶಕ್ತಿ ಕಡಿಮೆ ಇರುತ್ತದೆ. ಬಹಳ ಜನ ತಮ್ಮ ಮಕ್ಕಳ ನೆನಪಿನ ಶಕ್ತಿಗಾಗಿ ಬಹಳ ಖರ್ಚುಮಾಡುತ್ತಾರೆ, ಆದರೆ ಇದು ವ್ಯರ್ಥ ಪ್ರಯತ್ನ.
"ಬ್ರಹ್ಮಚರ್ಯ ನೆನಪಿನಶಕ್ತಿಗೆ ಮೂಲ"

ಧಾರ್ಮಿಕ ಆಚರಣೆಗಳಿಗಿಂತ ಹೆಚ್ಚು ಆಧ್ಯಾತ್ಮಿಕ ಚಿಂತನೆ ಇರಬೇಕು

ಕೇವಲ ಧಾರ್ಮಿಕ ಆಚರಣೆಗಳು ಸೀಮಿತ ದೃಷ್ಟಿಗೆ ಬಂಧಿಯಾಗುತ್ತವೆ ಅಂದರೆ- ಕೇವಲ ತನ್ನ ಒಳಿತಿಗೆ ಅಥವಾ ತನ್ನ ಹೆಂಡತಿ ಮಕ್ಕಳ ಒಳಿತಿಗೆ ಅಥವಾ ತನ್ನ ಕುಟುಂಬಕ್ಕೆ ಅಥವಾ ತನ್ನ ಜಾತಿಯ/ಧರ್ಮದ/ಸಮಾಜಕ್ಕೆ ಮಾತ್ತ ಸೀಮಿತವಾಗುತ್ತದೆ. ಅದೇ ಆಧ್ಯಾತ್ಮಿಕ ಚಿಂತನೆಯಿಂದ ಮನುಕುಲದ ಅತ್ಯಂತ ಶ್ರೇಷ್ಠ ಜೀವಿ ಗರ್ಭಪ್ರವೇಶ ಮಾಡುತ್ತದೆ.
************

ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
23.04.2020.       ಸಂಚಿಕೆ-114
**********
✍️
ಮಗುವನ್ನು ಪಡೆಯಲಿಚ್ಚಿಸುವ ತಂದೆ-ತಾಯಂದಿರ ನಿಯಮ ಪಾಲನೆಯಲ್ಲಿನ ವೈಜ್ಞಾನಿಕ ಸತ್ಯಗಳು
**********
ಗರ್ಭಧಾರಣಾ ಪೂರ್ವತಯಾರಿ 1)ಪಂಚಕರ್ಮ ಚಿಕಿತ್ಸೆ
2)ರಾಸಾಯನ ಮತ್ತು 
3)ವಾಜೀಕರಣ(ಸಶಕ್ತ ಅಂಡಾಣು ಮತ್ತು ವೀರ್ಯಾಣು ನಿರ್ಮಾಣಕ್ಕೆ)  ಚಿಕಿತ್ಸೆ

• ಪಂಚಕರ್ಮ ಚಿಕಿತ್ಸೆಯಿಂದ ಸ್ತ್ರೀ ಪುರುಷರ ಅಂಡ-ವೀರ್ಯಾಣುಗಳ ಉತ್ಪತ್ತಿಯ ಸ್ಥಾನ ಹಾಗೂ ಅವುಗಳ ಪೋಷಣಾ ಮಾರ್ಗದ ಎಲ್ಲಾ ಅಶುದ್ಧತೆಗಳೂ ದೇಹದಿಂದ ಹೊರಹೋಗಿ ಮುಕ್ತವಾಗುತ್ತವೆ. 

• ಶುದ್ಧ ಮಾರ್ಗಗಳೂ ಮತ್ತು ಶುದ್ಧ ದ್ರವ್ಯಗಳಿಂದ ಇಡೀ ಶರೀರವನ್ನು ಪೊಷಣೆ ಮಾಡುವ ಒಂದು ಅದ್ಭುತವಾದ ಪ್ರಕ್ರಿಯೆ ರಾಸಾಯನ. ಈ ವ್ಯವಸ್ಥೆ ಆಯುರ್ವೇದದಲ್ಲಿ ಮಾತ್ರವಲ್ಲದೇ ಬೇರೆ ಯಾವ ವೈದ್ಯಕೀಯ ಪದ್ಧತಿಯಲ್ಲೂ ಇಲ್ಲ. ಇದರಿಂದ ವ್ಯಕ್ತಿ ಸದೃಢ ರೋಗನೊರೋಧಕ ಶಕ್ತಿಯನ್ನೂ, ನಿರಂತರ ಉತ್ಸಾಹವನ್ನೂ, ದೀರ್ಘಾಯುಷ್ಯವನ್ನೂ ಹೊಂದುವುದಲ್ಲದೇ ಇಂತದೇ ಗುಣಗಳನ್ನು ತನ್ನ ಸಂತಾನಕ್ಕೂ ವರ್ಗಾಯಿಸುತ್ತಾನೆ/ಳೆ.

• ಸ್ತ್ರೀ ಪುರುಷರ ಬೀಜಭಾಗಗಳನ್ನೇ ವಿಶೇಷ ಲಕ್ಷ್ಯದಲ್ಲಿಟ್ಟುಕೊಂಡು ಪೋಷಿಸುವ ವ್ಯವಸ್ಥೆಯೇ ವಾಜೀಕರಣ.  Sperm or Ovum ನ ಆಂತರಿಕ ದೋಷಗಳನ್ನು ನಿವೃತ್ತಿ ಮಾಡುವುದಲ್ಲದೇ, ಅವುಗಳಲ್ಲಿ ಸೂಕ್ಷ್ಮವಾಗಿ ನೆಲೆನಿಂತ ಮಗುವಿನ ಅವಯವಗಳನ್ನು ಸಮೂಲ ಬಲವನ್ನು ತುಂಬಿ(genetically strong), ಮಗುವಿನ ಜೀವಿತಾವಧಿಯಲ್ಲಿ ರಕ್ತ, ಮಾಂಸಖಂಡ, ನರ ಮೂಳೆ ಮೆದುಳು ಆದಿ ಎಲ್ಲಾ ಅವಯವಗಳು ಸಶಕ್ತವಾಗಿ ಮಗು ಎದುರಿಸಬಹುದಾದ ಯಾವುದೇ ಕಷ್ಟಗಳಿಗೆ ಮನೋ ಒತ್ತಡ ಬಾರದಂತೆಯೂ, ಶಾರೀರಿಕ ರೋಗಗಳು ತೊಂದರೆ ಕೊಡದಂತೆಯೂ ಸಮೂಲ ಬಲವನ್ನು ಕೊಡುವುದೇ ವಾಜಿಕರಣ ಚಿಕಿತ್ಸೆ.

*

ರಾಸಾಯನ-ವಾಜೀಕರಣ ಎರೆಡರ ಲಾಭ ಪಡೆಯಲು ಪಂಚಕರ್ಮಗಳಿಂದ ದೇಹಶುದ್ಧಿ ಅನಿವಾರ್ಯ. ಇದಕ್ಕೆ ಒಳಪಡಲು ಇಚ್ಛಿಸುವ ದಂಪತಿಗಳು ಹತ್ತಿರದ ಶುದ್ಧ ಆಯುರ್ವೇದ ವೈದ್ಯರನ್ನು ಭೇಟಿಮಾಡಿ.

ವಿಶೇಷ ಗಮನಕ್ಕೆ:
ಪಂಚಕರ್ಮ, ರಾಸಾಯನಿಕ, ವಾಜೀಕರಣ ‌ಇವುಗಳಿಗೆ ತಾವುಗಳು ವೈದ್ಯ ಸೂಚಿತ ನಿರ್ದಿಷ್ಟ ಸಮಯ ಕೊಡಲೇಬೇಕು ಮತ್ತು ಶಾಸ್ತ್ರದ ನಿರ್ದೇಶನ ಪಾಲಿಸಲೇಬೇಕು. ನೀವು ಎಷ್ಟೇ ಹಣವಂತರಾದರೂ, ಎಷ್ಟೇ ದೊಡ್ಡ ಅಧಿಕಾರಿಗಳಾದರೂ, ಯಾವುದೇ ಕಾರಣ‌ ಹೇಳಿ, ವೈದ್ಯರ ಬಳಿ ನಿವೇದಿಸಿಕೊಂಡು ಸಮಯ ಕಡಿತ ಮಾಡಿಸಿಕೊಂಡರೆ ಮತ್ತು ನಿಯಮಗಳಿಂದ ದೂರಸರಿದರೆ ಯಾವ ಲಾಭವೂ ಸಿಗದು.

ಸಂತಾನದ ವಿಷಯದಲ್ಲಿ‌ ಶುದ್ಧ ಮನದ ತಪಸ್ಸು ಅತ್ಯಾವಶ್ಯಕ
**********


ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
24.04.2020.       ಸಂಚಿಕೆ-115
**********
✍️
ಗರ್ಭಿಣಿ ಪರಿಚರ್ಯವನ್ನು ಆಯುರ್ವೇದ ರೀತಿಯಲ್ಲಿ ಪಾಲಿಸಿ
**********
ಸರ್ವತೋಮುಖ ಮಾಸಾನುಮಾಸಿಕ ಗರ್ಭವೃದ್ಧಿಯ ಕಾಲದಲ್ಲಿ ಯಾವ ತಿಂಗಳಿನಲ್ಲಿ ಯಾವ ಅವಯವಗಳ ಬೆಳವಣಿಗೆ ಇರುತ್ತದೆ ಮತ್ತು ಅದಕ್ಕೆ ಸೂಕ್ತ ಪೋಷಣೆಯನ್ನು ಆಚಾರ್ಯರು ವಿಶೇಷ ರೀತಿಯಿಂದ ಹೇಳಿದ್ದಾರೆ. 
ಗರ್ಭಧಾರಣೆಯ ಎಲ್ಲಾ ತಿಂಗಳೂ ಕೇವಲ ಕ್ಯಾಲ್ಸಿಯಂ, ಐರನ್, ಫೋಲೊಕ್ ಆ್ಯಸಿಡ್ ಕೊಡುವುದು‌ ನಿರ್ದಿಷ್ಟ ಮತ್ತು ವಿಶೇಷ‌ ವ್ಯವಸ್ಥೆಯಲ್ಲ. 

ಗರ್ಭಪೂರ್ವ ಮಹಿಳೆಯನ್ನು ಸರ್ವಧಾತು ಸಂಪನ್ನವಾಗಿ ಪೋಷಣೆ ಮಾಡುವುದನ್ನು ನಿರ್ಲಕ್ಷಿಸಿದ ಕಾರಣ, ಅನೇಕರಿಗೆ TSH( ಥೈರಾಯ್ಡ್ ಸ್ಟಿಮುಲೇಟಿಂಗ್ ಹಾರ್ಮೋನ್) ಸರಿಯಿದ್ದರೂ, ಕೃತಕ ಥೈರಾಕ್ಸಿನ್ ಹಾರ್ಮೋನ್ ಕೊಡುವುದನ್ನು ಇತ್ತೀಚಿಗೆ ಬಹಳ ನೋಡಿದ್ದೇವೆ. 

ಆಯುರ್ವೇದದ ವಿಶೇಷ ಎಂದರೆ ಯಾವ ತಿಂಗಳಿನಲ್ಲಿ ಮಗುವಿನ ಮನಸ್ಸು ಮತ್ತು ಬುದ್ಧಿ ಪ್ರಕಟವಾಗುತ್ತದೆ ಎಂದು ಹೇಳುತ್ತಾ ಅದಕ್ಕೆ ತಕ್ಕ ಪೋಷಣೆ ಮಾಡಿದರೆ ರೋಗಗಳಿಗೆ ಸುಲಭವಾಗಿ ತುತ್ತಾಗದ ಸದೃಢ ಶರೀರ, ಏಕಾಗ್ರ ಮನಸ್ಸು, ಸುಸ್ಥಿರ ಬುದ್ಧಿ ನಮ್ಮ ಮಕ್ಕಳದ್ದಾಗುವುದು. 

ತಂದೆ ತಾಯಿಯರ ಸರ್ವದಾ ಸೇವೆಯಂತೆಯೇ, ಉತ್ತಮ ಸಂತಾನ ಮತ್ತು ಅವರ ಸಂರಕ್ಷಣೆ ನಮ್ಮ ಅತ್ಯಂತ ಆದ್ಯ ಕರ್ತವ್ಯ. ಈ ಕರ್ತವ್ಯ ಆರಂಭವಾಗುವುದು ಮಕ್ಕಳು ಹುಟ್ಟಿದ ಮೇಲಲ್ಲ, ಬದಲಿಗೆ ಅವರ ಹೆಸರಿನಲ್ಲಿ ಗರ್ಭದರಿಸುವ ಪೂರ್ವದಲ್ಲೇ ಅಂದರೆ ಇನ್ನೂ ಬೀಜ ರೂಪದಲ್ಲಿ ಇರುವಾಗಲೇ ಎನ್ನುವುದು ಮಾತ್ರ ಬುದ್ಧಿವಂತರ ನಿಖರ ಹೆಜ್ಜೆ.
*********



ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
25.04.2020.       ಸಂಚಿಕೆ-116

✍️: 
ಮಕ್ಕಳ ಆರೋಗ್ಯದ ವಿಷಯದಲ್ಲಿ ಮಾತೃಜ ಭಾವದ ಪಾತ್ರ
***********
ಮುಂದೊಮ್ಮೆ ತಾಯಿಯಾಗುವ ಹೆಣ್ಣು ಮಗುವಿನ ಮಾನಸಿಕ ಆರೋಗ್ಯವನ್ನು ಇಂದೇ ಜತನದಿಂದ ಪೋಷಿಸಬೇಕು. ಅಂದರೆ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ನಲಿದಾಡುವ ನಮ್ಮ ಮಗಳನ್ನು ಮಾನಸಿಕವಾಗಿ ಹೇಗೆ ಪೋಷಣೆ ಮಾಡಬೇಕು? ಎಂಬುದು ಇಂದಿನ ಚರ್ಚಾ ವಿಷಯ.

ಇಂದು ಎಲ್ಲರೊಂದಿಗೆ ಬೆರೆತು ಆಡುವ ನಮ್ಮ 1-2 ವರ್ಷದ ನಮ್ಮ ಮಗಳು ಮುಂದೆ ತನ್ನಂತದೇ ಇನ್ನೊಂದು ಪುಟ್ಟ ಕಂದನಿಗೆ ತಾಯಿಯಾಗುವುದು ಶೇ 95ರಷ್ಟು ಖಚಿತ. ಈ ನಮ್ಮ ಮಗಳ ಮಾನಸಿಕ ಆರೋಗ್ಯ ಎರೆಡು ಕುಟುಂಬಗಳ ಜನರ ನಡವಳಿಕೆಗಳನ್ನು ಅವಲಂಬಿಸಿದೆ.

ಹೆಣ್ಣು ಮಗು ಜನಿಸಿದ ತಕ್ಷಣ ತಿಳಿದು ಪಾಲಿಸಬೇಕಾದ ಸಂಗತಿಗಳು

ಈ ಮಗುವನ್ನು ನಾವು ಪಡೆದಿರುವುದೇ ಇನ್ನೊಂದು ಕುಟುಂಬಕ್ಕೆ ದಾನವಾಗಿ ಕೊಡಲು ಎಂಬ ಸ್ಪಷ್ಟ ತಿಳುವಳಿಕೆ ಅತ್ಯಗತ್ಯ. (ಇದನ್ನು ಪರ/ವಿರೋಧವಾಗಿ ಅರ್ಥಮಾಡಿಕೊಂಡರೂ, ತಾರತಮ್ಯ ಎಂದುಕೊಂಡರೂ ಆಚಾರ್ಯರ ಮತದಂತೆ ಇದು ಮುಂದೆ ನಡೆಯುವ ಸತ್ಯ ಎಂದಷ್ಟೇ ಹೇಳಬಯಸುತ್ತೇವೆ). ಇದನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿದರೆ ನಮ್ಮ ಕೊನೆಯುಸಿರು ಇರುವವರೆಗೂ ನೆಮ್ಮದಿಯ ಮತ್ತು ಆರೋಗ್ಯಯುತ ಬದುಕನ್ನು ನಮ್ಮದಾಗಿಸಿಕೊಳ್ಳಬಹುದು. ಅದರ ಕೆಲ ಸಂಗತಿಗಳನ್ನು ಇಂದು ನೋಡೋಣ-

1. ಹೆಣ್ಣಿನ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು- ಶಿಕ್ಷಣ ಎಂದರೆ ಕೇವಲ ಓದು, ಪದವಿಗಳಲ್ಲ. ಮುಂದೆ ತನ್ನ ಮಕ್ಕಳನ್ನು ಉದರದಲ್ಲಿ ಧರಿಸಿದಾಗ, ಹೆತ್ತ ನಂತರ, ಅವರನ್ನು ಬೆಳೆಸುವ ಹಂತದಲ್ಲಿ ಏನು ಮಾಡಬೇಕಾಗುವುದೋ ಅವುಗಳ ಸ್ಪಷ್ಟ ಶಿಕ್ಷಣ ಅತ್ಯಗತ್ಯ. ಹಲವರು ನಮ್ಮನ್ನು ಪ್ರಶ್ನಿಸಬಹುದು ಹೆಣ್ಣು ಇಷ್ಟಕ್ಕೇ ಸೀಮಿತವೋ? ಎಂದು. ಸತ್ಯ ಎಂದರೆ ಹೆಣ್ಣು ಗರ್ಭ ಧರಿಸಿದ ತಕ್ಷಣದಿಂದ ತನ್ನ ಮಕ್ಕಳ ಪಾಲನೆ ಪೋಷಣೆ ಕೊನೆಗೆ ಅವರ ಜೀವಿತಾವಧಿಯ ಬಹು ಮುಖ್ಯ ಘಟ್ಟಗಳಲ್ಲಿ ಬಹಳಷ್ಟು ಹಾರ್ಮೋನ್ ಗಳ ಸ್ರವಿಕೆಯ ಕಾರಣ ಆ ಪ್ರಕ್ರಿಯೆಗಳಲ್ಲಿ ತನ್ನ ಒಲವನ್ನು ಇಟ್ಟಷ್ಟು ತನ್ನ ದುಡಿಮೆ ಅಥವಾ ತನ್ನ ಕಚೇರಿಯ ಕೆಲಸ ಅಥವಾ ಆಡಳಿತಗಳಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುವುದು ಅತ್ಯಂತ ವಿರಳ. ಕೆಲ ಬೆರಳೆಣಿಕೆಯ ಜನ ಮಾತ್ರ ಹೀಗಿರಬಹುದು.
2. ಮಗಳನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತಿದ್ದೇವೆ
ನಮ್ಮ ಹೆಣ್ಣು ಮಕ್ಕಳನ್ನು ಕೇವಲ ಪದವಿಗೆ ಮಾತ್ರ ಗಮನ ಕೊಟ್ಟು ಓದಿಸುವ ನಾವು ಅವರ ಅತೀ ಅಗತ್ಯದ ಸಂದರ್ಭಗಳಲ್ಲಿ "ಏನೂ ತಿಳಿದಿಲ್ಲ" "ಸಂಸ್ಕಾರ ಇಲ್ಲ" "ದಡ್ಡಶಿಖಾಮಣಿ" "ಶೂನ್ಯಗಳಿಕೆ" ಇಂತ ಬಿರುದುಗಳನ್ನು ಕೊಡಿಸುತ್ತೇವೆ. ಹಾಗೆಯೇ ನಮ್ಮ‌ಮಗನ ಹೆಂಡತಿಗೂ ಧಾರಾಳವಾಗಿ ಕೊಡುತ್ತೇವೆ. ಇಲ್ಲಿ ಮಾನಸಿಕವಾಗಿ ಜರ್ಝರಿತಕ್ಕೆ ಒಳಗಾಗುವವಳು ಮಾತ್ರ ನಮ್ಮ "ಮುದ್ದಿನ, ಅತ್ಯಂತ ಪ್ರೀತಿಯ ಮಗಳು" ಏಕೆಂದರೆ ಅವಳು ನಿಜವಾಗಿಯೂ ದಡ್ಡಮಗುವಲ್ಲ ಎಂದು ಅವಳ ಇದುವರೆಗಿನ ಶಿಕ್ಷಣ ಹೇಳುತ್ತದೆ. ಆದರೆ ಜೀವನ ಪೂರ್ತಿ ನಡೆಯುವುದು ಮಾತ್ರ ಅದೇ ದಡ್ಡತನ!!!
ಈ ಸಂದರ್ಭದಲ್ಲಿ ಅವಳು ಡಿಪ್ರೆಷನ್ ಗೆ ಹೋಗುವ ಸಾಧ್ಯತೆ ಹೆಚ್ಚು.

3. ಯಾರು ಹೊಣೆ?- 
*ನಮ್ಮ ಮಮಕಾರವೋ, ಅಹಂಕಾರವೋ ಅಥವಾ ಇಂದಿನ ಶಿಕ್ಷಣವೋ, ಸಮಾನ ಕಾನೂನು ಎಂಬ ಅಜ್ಞಾನವೋ.

4. ಹೆಣ್ಣು-ಗಂಡು ನಿಜವಾಗಿಯೂ ಸಮಾನರೇ 
ಮೂಲಭೂತ ಅವಶ್ಯಕತೆಗಳಿಗೆ ಎಲ್ಲರಿಗೂ ಸಮಾನ ಹಕ್ಕು ಇದೆ. ಆ ಮಿತಿಯೊಳಗೆ ಜವಾಬ್ದಾರಿಯಿಂದ ಮತ್ತು ಗೌರವಾದರಗಳಿಂದ ಸಮಾನತೆಯನ್ನು ಪೋಷಣೆ ಮಾಡಬೇಕು. ಆದರೆ ಎಲ್ಲದರಲ್ಲೂ ಸಮಾನತೆ ಎನ್ನುವುದು ಹಾಸ್ಯಾಸ್ಪದ. ಪರಸ್ಪರ ಶರೀರ ಮತ್ತು ಮನಸ್ಸುಗಳಲ್ಲಿ ಅಗಾಧ ವ್ಯತ್ಯಾಸಗಳಿವೆ ಎಂದೇ ಗಂಡಿಗೆ ಹೆಣ್ಣನ್ನು ಮದುವೆ ಮಾಡುತ್ತೇವೆ. ಎಲ್ಲಾ ರೀತಿಯಿಂದಲೂ ಸಮಾನತೆ ಇರುವ ಗಂಡನ್ನು ಗಂಡಿಗೆ ಅಥವಾ ಹೆಣ್ಣನ್ನು ಹೆಣ್ಣಿಗೆ ಮದುವೆ ಮಾಡುತ್ತೇವೆಯೇ?!!

5. ಇಂದಿನ ಅರೆಬೆಂದ ಶಿಕ್ಷಣ 
ನಮ್ಮ ಮಗ ಅಥವಾ ಮಗಳು ಮುಂದೊಮ್ಮೆ ತಂದೆ ಅಥವಾ ತಾಯಿ ಆಗಿಯೇ ಆಗುತ್ತಾರೆ, ಆ ಮಗುವಿನ ಸಂಬಂಧದಿಂದಲೇ ಇಡೀ ಜೀವನ ದುಡಿಮೆ ಮಾಡುತ್ತಾರೆ, ಜೀವನದ ಬಹುತೇಕ ಉದ್ದೇಶವನ್ನು ಮಕ್ಕಳ ಪಾಲನೆ ಪೋಷಣೆಯ ಕಾರಣಕ್ಕೆ ಮೀಸಲಿಡುತ್ತಾರೆ, ಇದು ಸತ್ಯ. ಆದಾಗ್ಯೂ ಬಾಲ್ಯದಿಂದ ಕೊನೆಯವರೆಗೆ ನಮ್ಮ ಯಾವ ತರಗತಿಯಲ್ಲಿ ಇದರ ಶಿಕ್ಷಣ ನಡೆಯುತ್ತಿದೆ ಹೇಳಿ.

• ಉತ್ತಮ ಗಂಡ/ಹೆಂಡತಿ ಆಗುವುದು ಹೇಗೆ? 
• ಉತ್ತಮ ಮಕ್ಕಳನ್ನು ಪಡೆಯುವುದು ಹೇಗೆ?
• ಮಕ್ಕಳನ್ನು ಶಾರೀರಿಕ-ಮಾನಸಿಕವಾಗಿ ಸದೃಢವಾಗಿ ಬೆಳೆಸುವುದು ಹೇಗೆ?
• ನಮ್ಮ ಮಕ್ಕಳು ಕೇವಲ ಮಮಕಾರಕ್ಕೆ ಯೋಗ್ಯರೋ ಅಥವಾ ನಮ್ಮಂತೆಯೇ ಸ್ವತಂತ್ರ ಜೀವಿಗಳೋ? 
ಇವೆಲ್ಲಾ ಶಿಕ್ಷಣದಲ್ಲಿ ಬರಲೇಬೇಕಾದ ಬಹುಮುಖ್ಯ ಸಿಲೆಬಸ್ ಗಳು.

6. ಇಂದಿನ ಶಿಕ್ಷಣದ ಪರಿಣಾಮ
ನಿಮ್ಮ ಮಗಳ ಕಾರಣಕ್ಕೆ ಅಳಿಯ ಮತ್ತು ಆ ಮನೆಯ ಹಿರಿಯರು, ಹಾಗೇ ಸೊಸೆಯ ಕಾರಣಕ್ಕೆ ನಿಮ್ಮ ಮಗ ಮತ್ತು ಹಿರಿಯರಾದ ನೀವು ಅದೆಷ್ಟು ಕಷ್ಟ ಅನುಭವಿಸುತ್ತಿರುವಿರಿ ಒಮ್ಮೆ ಗಮನಿಸಿ. ವೈಯಕ್ತಿಕವಾಗಿ ಯಾರ ತಪ್ಪೂ ಇಲ್ಲದೇ, ಇಂದಿನ ಶಿಕ್ಷಣದ ಕಾರಣ ಅದೆಷ್ಟು ಕುಟುಂಬಗಳು ಅನ್ಯಾಯವಾಗಿ ಒಡೆದುಹೋಗುತ್ತಿವೆ!!

7. ನಮ್ಮ ನೆಮ್ಮದಿ ಇರುವುದು ಎಲ್ಲಿ?

ಈಗಲೇ ಹೀಗಾದರೆ ಮುಂದೆ ಅವರ ಮಕ್ಕಳ ಗತಿ ಏನು? ಮತ್ತು ನಿಮ್ಮ ಸೊಸೆಗೆ ಹುಟ್ಟುವ ನಿಮ್ಮ ಮೊಮ್ಮಕ್ಕಳ ಗತಿ ಏನು? ಮತ್ತು ಮುಪ್ಪಿನಲ್ಲೂ ನೀವುಗಳು ಕೊರಗುವುದಕ್ಕೆ ಕಾರಣ ನಿಮ್ಮ ನಿಮ್ಮ ದುಡಿಮೆ ಹೆಸರು ಅಂತಸ್ತುಗಳಿಗಿಂತ ಈ ಸಂಬಂಧಗಳಿಗೆ ಅಲ್ಲವೇ!!!

ತಾರ್ಕಿಕವಾಗಿ, ಭಾವನಾತ್ಮಕವಾಗಿ, ವೈಜ್ಞಾನಿಕವಾಗಿ ಹೇಗೆ ನೋಡಿದರೂ ನಮ್ಮ ನೆಮ್ಮದಿಯ ಜೀವನಕ್ಕಾಗಿ- ಹೆಣ್ಣು ಮಗುವಿನ ಪೋಷಣೆಯಲ್ಲಿ, ಶಿಕ್ಷಣದಲ್ಲಿ, ಶೀಲ-ಸಂಸ್ಕಾರಗಳಲ್ಲಿ ವಿಶಿಷ್ಟತೆ ಇದೆ. ಅಲ್ಲವೇ?
**********


No comments:

Post a Comment