SEARCH HERE

Wednesday, 14 April 2021

ಶ್ರೀ ರಾಮ - ರಮಣೀಯತ್ವಾತ್ ರಾಮಃ ರಾಮ ನಾಮ rama nama

ಶ್ರೀ ರಾಮ - ರಮಣೀಯತ್ವಾತ್ ರಾಮಃ

ಶ್ರೀ ರಾಮ ನಾಮದ ಮತ್ತೊಂದು ಅರ್ಥ ರಮಣೀಯವಾದ ರೂಪವುಳ್ಳವನು ಎಂದು...

ಸುಂದರವಾದ ಪ್ರತಿಯೊಂದು ವಸ್ತುವು ರಮಣೀಯವಾಗಿರಲು ಸಾಧ್ಯವಿಲ್ಲ..

ರಮಣೀಯ ಎಂಬ ಶಬ್ದದ ಅರ್ಥ ಹೀಗಿದೆ. - ಕ್ಷಣ ಕ್ಷಣಂ ಯನ್ನವತಾಂ ಉಪೈತಿ, ತದೈವ ರೂಪ ರಮಣೀಯಂ - ಯಾವ ರೂಪವು ನೋಡುತ್ತಿರುವಷ್ಟು ಹೊಚ್ಚ ಹೊಸತಾಗಿ ತೋರುತ್ತದೆಯೋ,  ಯಾವ ರೂಪವನ್ನು ನೋಡುವಷ್ಟೂ ನೋಡಬೇಕು ಎಂದೆನಿಸುತ್ತದೆಯೋ, ಯಾವ ರೂಪದ ಆಸ್ವಾದನೆ ಎಂದಿಗೂ ಬೇಸರವುಂಟು ಮಾಡುವುದಿಲ್ಲವೋ ಆ ನಿತ್ಯ ನೂತನ ಸೌಂದರ್ಯಕ್ಕೆ ರಮಣೀಯ ಎಂದು ಹೆಸರು...

ಜಗತ್ತಿನಲ್ಲಿ ಅನೇಕ ಸುಂದರವಾದ ಮನೋಹರವಾದ ಪದಾರ್ಥಗಳಿವೆ.. ಅವುಗಳ ಅನುಭವ ಹೆಚ್ಚಾದಷ್ಟು ಅದರ ಮೇಲೆ ಬೇಸರವುಂಟಾಗುತ್ತದೆ...

ನೋಡಿದಷ್ಟೂ ನೋಡಬೇಕು ಎನ್ನಿಸುವ ರೂಪ ಸೌಂದರ್ಯವಾಗಲಿ, ಕೇಳಿದಷ್ಟೂ ಕೇಳಬೇಕೆನ್ನಿಸುವ ಹಾಡಾಗಲೀ, ಅನುಭವಿಸಿದಷ್ಟೂ ಅನುಭವಿಸಬೇಕು ಎನ್ನುವ ಪದಾರ್ಥವಾಗಲಿ ಈ ಜಗತ್ತಿನಲ್ಲಿ ಇಲ್ಲವೇ ಇಲ್ಲ‌.. ಒಂದಲ್ಲಾ ಒಂದು ಕಾಲದಲ್ಲಿ ಆ ಎಲ್ಲಾ ಸುಂದರವಾದ, ಮನೋಹರವಾದ ಪ್ರಾಪಂಚಿಕ ವಸ್ತುಗಳು ಬೇಸರವುಂಟು / ಜಿಗುಪ್ಸೆಯುಂಟು ಮಾಡುತ್ತವೆ... ಹಾಗಾದಲ್ಲಿ ಅವೆಲ್ಲವನ್ನು ರಮಣೀಯ ಎಂದು ಕರೆಯಲು ಸಾಧ್ಯವಿಲ್ಲ...

ಆದರೆ ರಾಮ ಶಬ್ದಕ್ಕೆ ರಮಣೀಯ ಎಂದು ಕರೆಯುತ್ತಾರೆ.. ರಾಮಾಯಣದ ಆಧಾರದ ಮೇಲೆ ಪರಿಶೀಲನೆ ಮಾಡಿದರೆ, ಶ್ರೀ ರಾಮನು ಅತ್ಯಂತ ಸುಂದರನಾದ ವ್ಯಕ್ತಿ ಎಂಬುದು ನಿರ್ಧಾರಿತ.. ಆದರೆ ಆ ಸೌಂದರ್ಯ ಇತರ ಲೌಕಿಕ ಚೆಲುವುಗಳಂತೆ ಆಸ್ವಾದಿಸಿದಷ್ಟೂ ಬೇಸರ ನೀಡುವಂತಹುದಲ್ಲ..

ರಾಮನ ಸೌಂದರ್ಯ ಎಷ್ಟು ಪರಮಾದ್ಭುತವಾಗಿತ್ತೆಂದರೆ, ಪ್ರತಿ ಕ್ಷಣ ಕ್ಷಣಕ್ಕೆ ನಿತ್ಯ ನೂತನವಾಗಿ ಕಾಣುತ್ತಿದ್ದ ಚೇತನೋತ್ತಮ ಆ ಸ್ವಾಮಿ... ಅವನನ್ನು ನೋಡುತ್ತಾ ಲೋಕದ ಪರಿವೆಯನ್ನು ಮರೆತ ಅನೇಕರ ಚರಿತ್ರೆಯನ್ನು ರಾಮಾಯಣದಲ್ಲಿ ಕಾಣಬಹುದು...

ಅವನ ಯಶಸ್ಸನ್ನು ಹಾಡಿ-ಹೊಗಳುವ ಕಥಾಮೃತವನ್ನು ಎಷ್ಟು ಬಾರಿ ಅಧ್ಯಯನ ಮಾಡಿದರೂ ಅದು ಬೇಸರವುಂಟು ಮಾಡದೇ, ಪ್ರತಿ ಬಾರಿಯೂ ನಿತ್ಯ ನೂತನವಾದ ಅರ್ಥ ಸ್ಫುರಣೆಯನ್ನು ಉಂಟು ಮಾಡುತ್ತದೆ.. ಅಂದಮೇಲೆ, ಆ ಪ್ರಭುವಿನ ರೂಪವಿನ್ನೆಷ್ಟು ಸೊಗಸಾಗಿರಬೇಡ!!

ಸಕಲ ಸಲ್ಲಕ್ಷಣ ಭರಿತವಾದ ಆ ಸ್ವಾಮಿಯನ್ನು ವಾಲ್ಮೀಕಿ ಮಹರ್ಷಿಗಳು ಸರ್ವ ಸತ್ವ ಮನೋಹರ ಎಂದು ಸ್ತೋತ್ರ ಮಾಡುತ್ತಾರೆ.. ಅಂದರೆ ಸರ್ವ ಜೀವ ರಾಶಿಗಳ ಮನಸ್ಸನ್ನು ಸೂರೆಗೊಳಿಸುವ ಪರಮ ಮಂಗಳ ರೂಪವುಳ್ಳವನು ಎಂದು ಅರ್ಥ..

ರಾಮನು ಕೇವಲ ದೈಹಿಕವಾದ ಸೌಂದರ್ಯವುಳ್ಳವನಾಗಿರಲ್ಲಿಲ್ಲ.. ಎಲ್ಲಾ ರೀಇಯ ಪರಿಪೂರ್ಣವಾದ ರಮಣೀಯತೆ ಅವನಲ್ಲಿ ಕಾಣಬಹುದಾಗುದೆ... ಅವನ ಗುಣಗಳೂ ರಮಣೀಯ, ಅವನ ವ್ಯಕ್ತಿತ್ವವೂ ರಮಣೀಯ, ಅವನ ನಾಮವೂ ರಮಣೀಯ, ಅವನ ಚರಿತ್ರೆಯೂ ರಮಣೀಯ..

ಕಾಲದ ಪ್ರಭಾವಕ್ಕೆ ಒಳಪಟ್ಟು ಬದಲಾವಣೆ ಹೊಂದಿ ವಿಕಾರಯುಕ್ತ , ನಾಶವಾಗುವ ಸೌಂದರ್ಯಗಳು ಪ್ರಾಪಂಚಿಕವಾದವು..

 ಕಾಲದ ಪರಿಣಾಮಕ್ಕೆ ವಶ ಪಡದೇ, ನಿತ್ಯವೂ, ನಿರ್ಮಲವೂ, ಚಿದಾನಂದಾತ್ಮಕವೂ ಆದ ಪರಮ ರಮಣೀಯ ರೂಪದವನು ಶ್ರೀ ರಾಮ...

ಅವನ ರೂಪವೆಷ್ಟು ರಮಣೀಯವೆಂದರೆ - ಲಕ್ಷ್ಮೀ, ಬ್ರಹ್ಮ, ರುದ್ರಾದಿ ಸಕಲ ದೇವತೋತ್ತಮರೂ, ವಿಶಿಷ್ಠ, ವಿಶ್ವಾಮಿತ್ರ, ಅಗಸ್ತ್ಯ ಮುಂತಾದ ಸಕಲ ಋಷಿಗಳೂ ಅವನ ಆ ಪರಮ ಮಂಗಳ ರೂಪವನ್ನು ತಮ್ಮ ಹೃದಯದಲ್ಲಿ ಧ್ಯಾನಿಸುತ್ತಾ ಸಕಲವನ್ನೂ ತ್ಯಾಗಮಾಡಿ ಅವನಲ್ಲಿ ತನ್ಮಯರಾಗುತ್ತಾರೆ...

ಶೂರ್ಪನಖಿಯಂತಹಾ ದುಷ್ಟ ಸ್ವಭಾವದ ರಾಕ್ಷಸಿಯೂ ಅವನ ರೂಪಕ್ಕೆ ಮನಸೋತಳು.‌‌..

ರಾಮನು ಅಯೋಧ್ಯಾ ನಗರದ ರಾಜ ಬೀದಿಗಳಲ್ಲಿ ರಥಾರೂಢನಾಗಿ ಹೋಗುವ ಸಮಯಕ್ಕೆ ಅಯೋಧ್ಯೆಯ ಪ್ರಜೆಗಳು ಆ ರಾಜ ಬೀದಿಯ ಇಬ್ಬದಿಗಳಲ್ಲಿ ನಿಂತು ಅವನ ಒಂದು ನೋಟಕ್ಕಾಗಿ ಕಾತರದಿಂದ ಕಾಯುತ್ತಿದ್ದರು ಎಂದು ವಾಲ್ಮೀಕಿ ಮಹರ್ಷಿಗಳು  ಅಯೋಧ್ಯಾ ಕಾಂಡದಲ್ಲಿ ವರ್ಣಿಸುತ್ತಾರೆ...

ಅಷ್ಟೇಕೆ, ಅವನ ರೂಪದ ಪರಿಕಲ್ಪನೆಯೇ ಇಲ್ಲದ ಸಜ್ಜನ ಸಾಧಕರು, ಅವನ ನಾಮ, ಗುಣ, ಚರಿತ್ರೆಗಳ ಶ್ರವಣ ಮನನಗಳಲ್ಲಿಯೇ ತಮ್ಮ ಜೀವನವನ್ನು ಕಳೆದುಬಿಡುತ್ತಾರೆ..

ಅಷ್ಟು ರಮಣೀಯನಾದವನು ಆ ಸ್ವಾಮಿ..ಇಂತಹಾ ನಿತ್ಯ ನೂತನನು ಇವನು ಎನ್ನುವ ಕಾರಣಕ್ಕೆ ಹನುವಂತನು ಇವನ ಕಥಾಶ್ರವಣ, ಕೀರ್ತನೆಗಳು ಎಲ್ಲೆಲ್ಲಿ ನಡೆಯುತ್ತವೆಯೋ ಆ ಎಲ್ಲಾ ಪ್ರದೇಶದಲ್ಲಿ ತಾನು ಒಂದು ರೂಪದಿಂದ ಈ ದಿನಕ್ಕೂ ಇದ್ದು ಭಕ್ತಿಯಿಂದ ಅವನ ಕಥಾಶ್ರವಣ ಮಾಡುತ್ತಾನೆ... (ಯತ್ರ ಯತ್ರ ರಘುನಾಥ ಕೀರ್ತನಂ, ತತ್ರ ತತ್ರ ಕೃತ ಮಸ್ತಕಾಂಜಲಿಂ.. ಬಾಷ್ಪವಾರಿ ಪರಿಪೂರ್ಣ ಲೋಚನಂ, ಮಾರುತಿಂ ನಮತ ರಾಕ್ಷಸಾಂತಕಂ)

ಯುಗ ಯುಗಾದಿಗಳು ಕಳೆದರೂ ಆ ಮಹಾಲಕ್ಷ್ಮೀ ದೇವಿಯರು ಇವನ ಅನಂತ ವಿಸ್ಮಯಭರಿತವಾದ ರೂಪವನ್ನು ಪರಮಾಶ್ಚರ್ಯದಿಂದ ನೋಡುತ್ತಾ, ತನ್ನ ಕಣ್ಣಿನ ಕುಡಿನೋಟದಿಂದಲೇ ಇವನಿಗೆ ನೀರಾಜನವನ್ನು ಮಾಡುತ್ತಿದ್ದಾರೆ - ಇಂದಿರಾ ಚಂಚಲಾಪಾಂಗ ನೀರಾಜಿತಂ ...

ಅಂತಹಾ ಸಲ್ಲಕ್ಷಣಭರಿತ ಚಿದಾನಂದಾತ್ಮಕ ರೂಪದ ಆ ರಾಮ ಬೇರೆ ಯಾರು ಅಲ್ಲ, ನನ್ನ ಹೃದಯದ ಅರಸ ಎಂದು ಸಕಲ ಸಜ್ಜನರು ರಾಮನ ಅಂತರ್ಯಾಮಿ ರೂಪವನ್ನು ಅನುಸಂಧಾನ ಮಾಡಬೇಕು.‌‌..

ವಾಲ್ಮೀಕಿ ರಾಮಾಯಣದ ಸುಂದರ ಕಾಂಡದಲ್ಲಿ ಹನುವಂತನು ರಾಮನನ್ನು ಪಾದದ ನಖದಿಂದ ಆರಂಭಿಸಿ ತಲೆಯ ಕೂದಲವರೆಗೂ ದಿವ್ಯವಾಗಿ ವರ್ಣಿಸುತ್ತಾರೆ..

ಆ ಸೌಂದರ್ಯ ಸಾರೈಕ ನಿಧಿಯಾದ, ರಮಣೀಯನಾದ ರಾಮಚಂದ್ರನ ರೂಪದ ಚಿಂತನೆ ಸಕಲ ಸಜ್ಜನರಿಗೆ ದೊರಕಲಿ ಎಂಬ ಪ್ರಾರ್ಥನೆಯೊಂದಿಗೆ ..

ಶ್ರೀ ರುದ್ರಾಂತರ್ಗತ ಭಾರತಿರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು.
*****

No comments:

Post a Comment