SEARCH HERE

Tuesday, 1 January 2019

ಹವನ ಕ್ರಿಯೆಯ ಕೆಲವು ಪಾರಿಭಾಷಿಕ ಶಬ್ದಗಳ ಸಂಕ್ಷಿಪ್ತ ನಿರೂಪಣೆ havana kriya


104. ಹವನ ಕ್ರಿಯೆಯ ಕೆಲವು ಪಾರಿಭಾಷಿಕ ಶಬ್ದಗಳ ಸಂಕ್ಷಿಪ್ತ ನಿರೂಪಣೆ.
ಇದು ಯಜುರ್ವೇದ ಭಾಗವಾಗಿರುವುದರಿಂದ ಇಲ್ಲಿ ಹೋಮ-ಹವನಗಳಿಗೆ ಸಂಬಂಧಿಸಿದ ಮಾಹಿತಿಗಳಿಗೆ ಆದ್ಯತೆ. ಹೀಗಾಗಿ ಹವನ ಕುರಿತಾದ ಕೆಲವು ಪದಗಳ ಟಿಪ್ಪಣಿಗಳನ್ನು ನೀಡಿರುವೆ.
ಸಾಂಪ್ರದಾಯಿಕ ಹೋಮ-ಹವನಗಳ ಪರಿಚಯ ಇರುವ ಎಲ್ಲರಿಗೂ ಕೆಲವಾದರೂ ಪಾರಿಭಾಷಿಕ ಪದಗಳು ತಿಳಿದಿರುತ್ತವೆ. ಷೋಡಶ ಸಂಸ್ಕಾರಗಳನ್ನು ತಂದೆ-ತಾಯಿಯರು ನಿರ್ವಹಿಸುವಾಗ, ವಟು, ವರ ಅಥವಾ ವಧು ಈ ನೆಲೆಯಲ್ಲಿರುವ ವ್ಯಕ್ತಿಗಳಿಗೆ ಈ ಕಾರ್ಯಗಳನ್ನು ಏಕೆ ಮಾಡುತ್ತಿದ್ದಾರೆ ಎಂದು ತಿಳಿಯದಿರಬಹುದು. ಅದನ್ನು ಆಚಾರ್ಯನಾದವನು ತಿಳಿಸಬೇಕೆನ್ನುವುದು ವಿಧಿ. ಆದರೆ ಸಮಯಾಭಾವದ ನೆಪದಲ್ಲಿ, ಕೇಳುವ ಆಸಕ್ತಿ ಯಾರಿಗಿದ್ದೀತು ಎಂಬ ಉಪೇಕ್ಷೆಗಳಿಂದ ಇವುಗಳನ್ನು ವಿವರಿಸದೇ ಮುಂದೆ ಸಾಗುವುದೇ ನಡೆಯುತ್ತಿದೆ. ಆದರೆ ಈ ಅವಧಿಯಲ್ಲಿ ಕಿವಿಯ ಮೇಲೆ ಬಿದ್ದಿರಬಹುದಾದ ಹೋಮ ಸಂಬಂಧಿಯಾದ ಕೆಲವಾರು ಪದಗಳಿಗಾದರೂ ವಿವರ ತಿಳಿಯುವಂತಾಗಲಿ ಎಂಬ ಉದ್ದೇಶದಿಂದ ಈ ಕೆಳಗೆ ಚಿಕ್ಕದಾಗಿ ವಿವರಣೆ ನೀಡಲಾಗಿದೆ. ಇದು ಓದುಗರ ಗಮನ ಸೆಳೆಯುವಂತಾಗಲಿ ಎನ್ನುವುದು ಆಶಯ.
ಔಪಾಸನ - ಏಕಾಗ್ನಿಯೆಂದರೆ ನಮ್ಮ ಚೈತನ್ಯದ ಸ್ವರೂಪವಾದ ಪವಿತ್ರಾಗ್ನಿ. ಇದನ್ನು ವ್ರೀಹಿ ಎಂದರೆ ಅಕ್ಕಿಯನ್ನು, ಅಗ್ನಿಯಲ್ಲಿ ನಿಗದಿತ ಮಂತ್ರದೊಂದಿಗೆ ಆಹುತಿಯಾಗಿ ನೀಡಲಾಗುತ್ತದೆ. ದಿನನಿತ್ಯದ ಅಗ್ನಿಕಾರ್ಯವೆಂಬ ವಿಧಿಯನ್ನು ಉಪಯನದ ನಂತರದಲ್ಲಿ ಮಾಡಲೆಂದು ಆರಂಭಿಸಲಾಗುತ್ತದೆ. ಇದು ಅಗ್ನಿಯ ಉಪಾಸನೆಯಾದ್ದರಿಂದ ಇದನ್ನು ಔಪಾಸನ ಎನ್ನುವರು.
ಹೋಮಕ್ಕೆ ಅಗ್ನಿಯ ಸಾನ್ನಿಧ್ಯ ಏಕೆ ಆವಶ್ಯಕ
ಯಾವುದೇ ಹವನಕ್ಕೆ ಅಗ್ನಿಯಿಲ್ಲದೇ ನಡೆಸಲಾಗದು. ತ್ರೇತಾಗ್ನಿಗಳನ್ನು ಅರ್ಚಿಸುವುದನ್ನು ಅಗ್ನಿಹೋತ್ರ ಎನ್ನುವರು. ತ್ರೇತಾಗ್ನಿಗಳೆಂದರೆ-ಗಾರ್ಹಪತ್ಯ (ಔಪಾಸನಾಗ್ನಿ), ದಕ್ಷಿಣಾಗ್ನಿ (ದಕ್ಷಿಣದಲ್ಲಿನ ಅಗ್ನಿ, ಚಿತಾಗ್ನಿ) ಆಹವನೀಯ (ಪೂರ್ವಾಗ್ನಿ) ಇದನ್ನೇ ಶ್ರೀ ಕೃಷ್ಣನು ಅಹಂ ವೈಶ್ವಾನರೋ ಭೋಕ್ತ್ವಾ, ಪ್ರಾಣಿನಾಂ ದೇಹಮಾಶ್ರಿತಃ ಎಂದಿದ್ದಾನೆ. ಅಗ್ನಿಯು ಪುರುಷವಿಧ ದೇವತೆಯಲ್ಲವಾದರೂ, ಆತನ ಸ್ವರೂಪವನ್ನು ವರ್ಣಿಸುವ ಶ್ಲೋಕಗಳಿವೆ. ಸಪ್ತಹಸ್ತಃ ಚತುಶೃಂಗೋ, ಸಪ್ತಹಸ್ತೋ ದ್ವಿಶೀರ್ಷಕಃ ಇತ್ಯಾದಿ.
ಸಮಿತ್ತುಗಳ ಜನನಕ್ಕೆ ಕಾರಣರಾದ ಉರ್ವಶೀ-ಪುರೂರವರ ಆಖ್ಯಾನ
ಈ ಅಗ್ನಿಗಳ ಜನನಕ್ಕೆ ಕಾರಣವಾದ ಆರಣಿಗಳ ಬಗ್ಗೆ ಸ್ವಾರಸ್ಯಕರ ಪೌರಾಣಿಕ ಕಥೆ ಹೀಗಿದೆ. ಇಲ್ಲಿ ಅಗ್ನಿಯ ಜನನದ ಕಥೆಯನ್ನು ಹೇಳುತ್ತಲೇ, ದೈವಿಕ ನರ್ತಕಿ ಹಾಗೂ ಭೂಲೋಕದ ಮಾನವರ ಸಂಪರ್ಕ ಸಂಸರ್ಗಗಳಿಂದ ಯಜ್ಞಕಾರ್ಯದ ಆರಂಭವನ್ನು ಸುಂದರವಾಗಿ ನಿರ್ದೇಶಿಸಿರುವುದು ವಿಶೇಷ.
ಒಮ್ಮೆ ದೇವಲೋಕದ ನರ್ತಕಿ ಉರ್ವಶೀಯು ಭೂಲೋಕಕ್ಕೆ ಬಂದು ಪುರೂರವನನ್ನು ವಿವಾಹವಾದಳು. ಆಗ ಆಕೆ ಒಂದು ಷರತ್ತನ್ನು ವಿಧಿಸಿದ್ದಳು. ಅದರಂತೆ ತನ್ನ ಪ್ರೀತಿಪಾತ್ರವಾದ ಮೇಕೆಗಳನ್ನು ತನ್ನ ಸಮೀಪವೇ ಇರಿಸಿಕೊಳ್ಳುತ್ತೇನೆಂದು ವಚನ ತೆಗೆದುಕೊಂಡಿದ್ದಳು. ಆದರೆ ಒಮ್ಮೆ ಪುರೂರವನು ಓಡುತ್ತಿದ್ದ ಮೇಕೆಗಳನ್ನು ಹಿಡಿಯಲು ಹೋಗಿದ್ದನ್ನು, ಆತ ಅವುಗಳನ್ನು ಓಡಿಸುತ್ತಿದ್ದಾನೆಂದು ತಿಳಿದು ಉರ್ವಶೀ ಆತನನ್ನು ತೊರೆದಳು. ಮುಂದೆ ಅವಳನ್ನು ಅರಸುತ್ತಾ ಸಾಗಿದ್ದಾಗ, ಪುರೂರವನು ಆಕೆಯನ್ನು ಒಂದು ಸರೋವರದಲ್ಲಿ ತನ್ನ ಗೆಳತಿಯರೊಡನೆ ವಿಹರಿಸುತ್ತಿದ್ದುದನ್ನು ಕಂಡನು. ಅವಳು ಪುನಃ ತನ್ನೊಂದಿಗೆ ಇರುವಂತೆ ಬೇಡಿಕೊಂಡನು. ಅದನ್ನು ಉರ್ವಶೀಯು ಮನ್ನಿಸಿದಳು.
ಅವರಿಗೆ ಐದು ಮಕ್ಕಳಾದವು. ಮೊದಲನೆಯವ ಆಯುಷ್. ಆಕೆ ಮರಳಿ ತನ್ನ ಲೋಕಕ್ಕೆ ಹೋಗುವೆನೆಂದಾಗ ಪುರೂರವನು ಮತ್ತೆ ಬೇಡಿಕೊಂಡನು. ಆಗ ಧರೆಗಿಳಿದ ಗಂಧರ್ವರು ಅಗ್ನಿಯುಳ್ಳ ಪಾತ್ರೆಯನ್ನು ನೀಡಿ, ಅದನ್ನು ವೇದಾನುಸಾರವಾಗಿ ಮೂರುಭಾಗ ಮಾಡಬೇಕೆಂದು ವಿಧಿಸಿದರು. ಅದನ್ನೇ ಆತನು ಗಾರ್ಹಪತ್ಯ, ದಕ್ಷಿಣಾಗ್ನಿ ಮತ್ತು ಆಹವನೀಯವೆಂದು ವಿಭಜಿಸಿದನು. ಇವು ಕ್ರಮವಾಗಿ ಭೂಮಿ, ವಾಯು ಮತ್ತು ಆಕಾಶವನ್ನು ಪ್ರತಿನಿಧಿಸುತ್ತಿದ್ದವು. ಇದನ್ನು ನಿರ್ವಹಿಸಿದ್ದರಿಂದ ಸಂತೋಷಗೊಂಡ ಉರ್ವಶೀ ಮತ್ತೆ ಪುರೂರವನೊಡನೆ ಸೇರಿದಳು.
ಈ ಸಂದರ್ಭದ ಸ್ಮರಣಾರ್ಥವಾಗಿ ಎರಡು ಸಮಿತ್ತುಗಳನ್ನು ಪುರೂರವ ಮತ್ತು ಉರ್ವಶೀ ಎಂದು ಹೆಸರಿಸಿ ಗೌರವಿಸಲಾಯಿತು. ಇವುಗಳ ಮಥನದಿಂದಾಗಿ ಶಾಖ ಮತ್ತು ಬೆಳಕುಗಳು ಉತ್ಪತ್ತಿಯಾಗಿ ಅದೇ ಅಗ್ನಿಯಾಯಿತು. ಹೀಗಾಗಿ ಇಂದೂ ಯಜ್ಞಾರಂಭದಲ್ಲಿ ಆರಣಿಗಳ ಮಸೆತದಿಂದ ಅಗ್ನಿಯನ್ನು ಉತ್ಪಾದಿಸುವ ಪರಂಪರೆ ನಡೆದು ಬಂದಿದೆ.
********

No comments:

Post a Comment