ಪುರಾಣ ಪುಟ 📚
☘ ಮಾರ್ಕಂಡೇಯ ಪುರಾಣ☘
(ಪುಟ-೧೩೧)
☘ ಮಾರ್ಕಂಡೇಯ ಪುರಾಣ☘
(ಪುಟ-೧೩೧)
ರಜೋಗುಣಂ ಸಮಾಶ್ರಿತ್ಯ ಸ್ರಷ್ಟೃತ್ವೇ ಸ ವ್ಯವಸ್ಥಿತಃ|
ಚತುರ್ಮುಖ ಬ್ರಹ್ಮನು ರಜೋಗುಣವನ್ನವಲಂಬಿಸಿ ಸೃಷ್ಟಿಮಾಡುವನು.ಇವನಿಗೆ ನೂರು ವರ್ಷಗಳ ಪರಮಾಯುಷ್ಯವು.
ಕಣ್ಣನ್ನು ಮಿಟುಕಿಸುವ ಸೂಕ್ಷ್ಮಕಾಲವನ್ನು ನಿಮೇಷ ಎನ್ನುವರು.ಹದಿನೈದು ನಿಮೇಷಗಳು ಒಂದು ‘ಕಾಷ್ಠಾಕಾಲ’ ಎಂದು ಗಣಿಸಲ್ಪಟ್ಟಿದೆ. ಅಂತಹ ಮೂವತ್ತು ಕಾಷ್ಠಾಕಾಲಗಳು ಒಂದು ಕಲೆಯೆಂದೂ,
ಮೂವತ್ತು ಕಲೆಗಳು ಒಂದು ಮುಹೂರ್ತವೆಂದೂ ಗಣಿಸಲ್ಪಡುವುದು. ಅಂತಹ ಮುಹೂರ್ತಗಳು ಮೂವತ್ತು ಕಳೆದರೆ ಮಾನವರಿಗೆ ಒಂದು ಹಗಲು ರಾತ್ರಿಗಳಾಗುವುದು. ಮೂವತ್ತು ದಿನಗಳಿಗೆ ಎರಡು
ಪಕ್ಷಗಳು. ಎರಡು ಪಕ್ಷಗಳು ಸೇರಿ ಒಂದು ಮಾಸವಾಗುವುದು. ಆರು ಮಾಸಗಳಿಂದ ಒಂದು ಅಯನ.ದಕ್ಷಿಣಾಯನ, ಉತ್ತರಾಯನ ಎಂಬ ಎರಡು ಅಯನಗಳಿಂದ ಒಂದು ಸಂವತ್ಸರವೂ ಆಗುವುವು. ಈ ರೀತಿ ಮನುಷ್ಯರ ಒಂದು ಸಂವತ್ಸರವು
ದೇವತೆಗಳಿಗೆ ಒಂದು ಅಹೋರಾತ್ರ(ದಿನ)ವಾಗುವುದು. ಉತ್ತರಾಯಣವು ದೇವತೆಗಳಿಗೆ ಹಗಲು ಮತ್ತು ದಕ್ಷಿಣಾಯನವು ರಾತ್ರಿ ಆಗಿರುವುದು.
ದೇವಮಾನದಿಂದ ಜರುಗುವ ಹನ್ನೆರಡು ಸಹಸ್ರವರ್ಷಗಳಿಂದ ಕೃತ, ತ್ರೇತಾ, ದ್ವಾಪರ, ಕಲಿಯುಗಗಳೆಂಬ ನಾಲ್ಕು ಯುಗಗಳು ನಡೆಯುವುವು. ದೇವಮಾನದ ನಾಲ್ಕು ಸಹಸ್ರ ವರ್ಷಗಳು ಕೃತಯುಗವು. ಯುಗಗಳ ನಡುವಿನ ಸಂಧ್ಯಾಕಾಲವು ನಾಲ್ಕು ನೂರು
ವರ್ಷ ಮತ್ತು ಸಂಧ್ಯಾಂಶವು ನಾಲ್ಕು ನೂರು ವರ್ಷಗಳು.ದೇವಮಾನದ ಮೂರು ಸಹಸ್ರ ವರ್ಷಗಳು ತ್ರೇತಾಯುಗವು.ತ್ರೇತಾಯುಗದ ಸಂಧ್ಯಾಕಾಲ ಮತ್ತು ಸಂಧ್ಯಾಂಶಕಾಲಗಳು ಪ್ರತ್ಯೇಕವಾಗಿ ಮೂರು ನೂರು ವರ್ಷಗಳ ಪರಿಮಾಣವುಳ್ಳದ್ದು.ಎರಡು ಸಹಸ್ರ ಸಂಖ್ಯೆಯ ದಿವ್ಯವರ್ಷಗಳು ದ್ವಾಪರಯುಗವೆನಿಸುವುದು. ಅದರ ಸಂಧ್ಯಾಕಾಲವು ಎರಡು ನೂರು ವರ್ಷಗಳಿಂದ
ಕೂಡಿರುವುದು ಮತ್ತು ಸಂಧ್ಯಾಂಶವು ಕೂಡ ಎರಡು ನೂರು ವರ್ಷ ಪರಿಮಾಣದಿಂದ ಕೂಡಿದೆ.ದೇವಮಾನದ ಒಂದು ಸಾವಿರವರ್ಷಗಳು ಕಲಿಯುಗದ ಪರಿಮಾಣವು. ಅದರ ಸಂಧ್ಯಾಕಾಲವೂ ಮತ್ತು ಸಂಧ್ಯಾಂಶಕಾಲವೂ ಪ್ರತ್ಯೇಕವಾಗಿ ಒಂದುನೂರುವರ್ಷ ಪರಿಮಾಣದ್ದು. ಪ್ರಾಜ್ಞರಿಂದ ಹೀಗೆ ಹನ್ನೆರಡು ಸಹಸ್ರ ದಿವ್ಯವರ್ಷಗಳ ಪರ್ಯಾಯವು ಚತುರ್ಯುಗರೂಪದಿಂದ ಕರೆಯಲ್ಪಟ್ಟಿದೆ.
ಈ ಚತುರ್ಯುಗಗಳ ಒಂದು ಸಹಸ್ರ ಆವೃತ್ತಿಯು ಬ್ರಹ್ಮದೇವರಿಗೆ ಒಂದು ಹಗಲು. ಬ್ರಹ್ಮದೇವನ ಒಂದು ಹಗಲಿನ ಸಮಯದಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಹದಿನಾಲ್ಕು ಮಂದಿ ಮನುಗಳು ತಮ್ಮ-ತಮ್ಮ ಅಧಿಕಾರದ ಕಾಲವಿಭಾಗದಲ್ಲಿ ಮನ್ವಂತರಗಳನ್ನು ನಡೆಸುತ್ತಿರುವರು.
ಇಂದ್ರಾದಿ ದೇವತೆಗಳು, ಸಪ್ತರ್ಷಿಗಳು, ಮನುರಾಜ ಮತ್ತು ಅವನ ಪುತ್ರರಾದ ಕ್ಷತ್ರಿಯ ರಾಜರು – ಇವರೆಲ್ಲರೂ ಜೊತೆಯಾಗಿ ಉತ್ಪನ್ನರಾಗುತ್ತಾರೆ ಮತ್ತು ಜೊತೆಯಾಗಿಯೇ ಸಂಹರಿಸಲ್ಪಡುತ್ತಾರೆ.
ಎಪ್ಪತ್ತೊಂದು ಸಂಖ್ಯೆಯ ನಾಲ್ಕು ಯುಗಗಳ ಆವೃತ್ತಿಯು ಒಂದು ಮನ್ವಂತರವೆನಿಸುವುದು.
ಬ್ರಹ್ಮದೇವನ ಒಂದು ಹಗಲಿನ ಕೊನೆಯಲ್ಲಿ, ಬ್ರಹ್ಮನ
ಹಗಲಿನ ಸಮಾಪ್ತಿ ಎಂಬ ನಿಮಿತ್ತದಿಂದಾಗುವ ಪ್ರಲಯವನ್ನು ನೈಮಿತ್ತಿಕಪ್ರಲಯವೆಂದು ಕರೆಯುವರು. ಈ ನೈಮಿತ್ತಿಕಪ್ರಲಯದಲ್ಲಿ ಭೂರ್ಲೋಕ, ಭುವರ್ಲೋಕ ಮತ್ತು ಸ್ವರ್ಲೋಕಗಳು ಹಾಗೂ ಆಯಾಯಾ ಲೋಕಗಳಲ್ಲಿ ವಾಸಮಾಡುವ ಪ್ರಾಣಿಗಳು ನಾಶವನ್ನು ಹೊಂದುತ್ತವೆ.
ಮಹರ್ಲೋಕವು ನೈಮಿತ್ತಿಕಪ್ರಲಯದಲ್ಲಿ ನಾಶಹೊಂದದೇ ಇರುವುದು. ಆದರೆ ಮಹರ್ಲೋಕದಲ್ಲಿ ವಾಸಮಾಡುವ ಪ್ರಾಣಿಗಳು ಪ್ರಲಯಾಗ್ನಿಯ ತಾಪದಿಂದ ಅಲ್ಲಿರಲಾರದೆ ಮುಂದಿನ ಜನಲೋಕವನ್ನು ಪ್ರವೇಶಿಸುವುವು.
ಹೀಗೆ ಮೂರು ಲೋಕಗಳು ನೀರಿನಲ್ಲಿ ಮುಳುಗಿ ಸಮುದ್ರಮಯವಾಗಿರಲು ಬ್ರಹ್ಮದೇವನು ರಾತ್ರಿಯಲ್ಲಿ ನಿದ್ರೆಮಾಡುವನು. ಬ್ರಹ್ಮದೇವನ ಆ ರಾತ್ರಿಯು ಆತನ
ಹಗಲಿನಷ್ಟೇ ಪರಿಮಾಣವುಳ್ಳದ್ದಾಗಿರುತ್ತದೆ. ಆ ರಾತ್ರಿಯು ಕಳೆದ ನಂತರ ಪುನಃ ಪ್ರಪಂಚದ ಸೃಷ್ಟಿಕಾರ್ಯವು ನಡೆಯುವುದು. ಈ ರೀತಿಯಾಗಿ ಬ್ರಹ್ಮದೇವನಿಗೆ
ಕ್ರಮವಾಗಿ ಒಂದೊಂದು ವರ್ಷವು ಕಳೆಯುವುದು ಮತ್ತು ಪೂರ್ಣ ಒಂದು ನೂರು ವರ್ಷಗಳು ಬ್ರಹ್ಮನ ಆಯುಃಪ್ರಮಾಣವಾಗಿರುವುದು. ಬ್ರಹ್ಮದೇವನ
ಒಂದುನೂರು ವರ್ಷದ ಈ ದೀರ್ಘಕಾಲವು ‘ಪರ’ ಎಂದು ಹೇಳಲ್ಪಡುವುದು ಹಾಗೂ ಇದರ ಅರ್ಧಭಾಗವಾದ ಐವತ್ತು ವರ್ಷಗಳ ಕಾಲವು ‘ಪರಾರ್ಧ’
ಎಂದು ಗಣಿಸಲ್ಪಟ್ಟಿದೆ.
ಈಗ ಬ್ರಹ್ಮದೇವನ ಒಂದು ಪರಾರ್ಧವು ಕಳೆದಿರುವುದು. ಆ ಒಂದು ಪರಾರ್ಧದ ಅಂತ್ಯದಲ್ಲಿ ಉಂಟಾದ ಮಹಾಕಲ್ಪದ ಪ್ರಲಯವು ಪಾದ್ಮಕಲ್ಪದ ಅವಸಾನವೆಂದು ಪ್ರಸಿದ್ಧಿ ಹೊಂದಿರುವುದು.ಈಗ ನಡೆಯುತ್ತಿರುವ ಬ್ರಹ್ಮದೇವನ ಎರಡನೆಯ ಪರಾರ್ಧದಲ್ಲಿ ವಾರಾಹಕಲ್ಪ ಎಂದು ನಾಮಾಂಕಿತವಾಗಿರುವ ಮೊದಲನೆಯ ಕಲ್ಪವು.
ಮಾರ್ಕಂಡೇಯ ಪುರಾಣದಲ್ಲಿ ನಲ್ವತ್ತಮೂರು ಅಧ್ಯಾಯಗಳು ಮುಗಿದವು.
✍ ಹಯಸುತಾನುದಾಸ
****
No comments:
Post a Comment