SEARCH HERE

Tuesday, 1 January 2019

ಸಂಸ್ಕಾರ ಪೂರ್ವಸಂಸ್ಕಾರ ಅಪರಸಂಸ್ಕಾರ samskara purva samskara apara


ಸಂಸ್ಕಾರಗಳು ಸಂಚಿಕೆ – ೨೬


ಸಂಸ್ಕಾರದಲ್ಲಿ ಎರಡುವಿಧ.  

೧. ಪೂರ್ವಸಂಸ್ಕಾರ.  

೨. ಅಪರಸಂಸ್ಕಾರ.  

||ಪೂರ್ವಸಂಸ್ಕಾರ||

ಷೋಡಶಸಂಸ್ಕಾರಗಳನ್ನೇ ಪೂರ್ವಸಂಸ್ಕಾರ ಎಂದು ಹೇಳುವುದು. ಈ ಷೋಡಶಸಂಸ್ಕಾರಗಳು ಯಾವುವು ಎನ್ನುವುದರಲ್ಲಿ ಭಿನ್ನಾಭಿಪ್ರಾಯಗಳಿರುತ್ತವೆ.   

“ಗರ್ಭಾಧಾನಂ ಪುಂಸವನಂ ಸೀಮಂತೋ ವೈಷ್ಣವೋ ಬಲಿಃ |
ಜಾತಕಂ ನಾಮ ನಿಷ್ಕ್ರಾಮೋನ್ನಾಶನಂ ಚೌಲಕರ್ಮ ಚ ||

ಉಪವೀತಿರ್ಮಹಾನಾಮ್ನೀ ಮಹಾವ್ರತಮತಃ ಪರಮ್ |
ಉಪನಿಷಚ್ಚ ಗೋದಾನಂ ಸಮಾವರ್ತನಮೇವ ಚ ||

ವಿವಾಹಶ್ಚೈವಮಿತ್ಯೇತಾಃ ಸಂಸ್ಕಾರಾಃ ಷೋಡಶ ಕ್ರಿಯಾಃ |
ಆಧಾನಾತ್ ಚೌಲಪರ್ಯಂತಾಃ ಸಂಸ್ಕಾರಾ ದೋಷಮಾರ್ಜನಾಃ ||

ಬಂಧನಾತ್ ಸ್ನಾನಪರ್ಯಂತಾ ಅತಿಶಯಾಧಾನಮುಚ್ಯತೇ |
ವೈವಾಹಿಕೇತಿ ಸಂಸ್ಕಾರಃ ಸ್ಮೃತ ಊನಾಂಗಪೂರಣಃ ||”  


ಅರ್ಥ:-  ಗರ್ಭಾಧಾನ, ಪುಂಸವನ, ಸೀಮಂತ, ವಿಷ್ಣುಬಲಿ, ಜಾತಕರ್ಮ, ನಾಮಕರಣ, ಉಪನಿಷ್ಕ್ರಮಣ, ಅನ್ನಪ್ರಾಶನ, ಚೌಲ, ಉಪನಯನ, ಮಹಾನಾಮ್ನೀ, ಮಹಾವ್ರತ, ಉಪನಿಷದ್ವ್ರತ, ಗೋದಾನವ್ರತ, ಸಮಾವರ್ತನ, ವಿವಾಹ – ಹೀಗೆ ಹದಿನಾರು ಮುಖ್ಯ ಸಂಸ್ಕಾರಗಳು ಮತ್ತು ಅನವಲೋಭನ, ಕರ್ಣವೇಧಾದಿ ಕೆಲವು ಉಪಸಂಸ್ಕಾರಗಳು. 

ಗರ್ಭಾಧಾನದಿಂದ ಚೌಲದ ತನಕ ಸಂಸ್ಕಾರಗಳು ಬೀಜ-ಕ್ಷೇತ್ರಗಳಲ್ಲಿ ಉಂಟಾದ ದೋಷಮಾರ್ಜನಗಳೆಂದೂ, ಉಪನಯನ ಮೊದಲ್ಗೊಂಡು ಸಮಾವರ್ತನದ ತನಕ ಸಂಸ್ಕಾರಗಳು ವಿಶೇಷಜ್ಞಾನಾರ್ಜನೆಯ ಸಾಧನೆಯ ಮೂಲಕ ಆಚಾರ-ವಿಚಾರಗಳಲ್ಲಿ ಆಧ್ಯಾತ್ಮಿಕ ಜೀವನಕ್ಕೆ ಅತಿಶಯವನ್ನು ಉಂಟುಮಾಡುವುದೆಂದೂ, ಕೊನೆಯ ವಿವಾಹ ವಿಧಿಯು ಜೀವನದ ಸಾರ್ಥಕತೆಯನ್ನು ಗಳಿಸುವುದೆಂದೂ ಜ್ಞಾನಿಗಳ ಮತ. 

“ಗರ್ಭಾಧಾನಂ ಪುಂಸವನಂ ಸೀಮಂತೋನ್ನಯನಂ ತಥಾ |
ಜಾತಕಂ ನಾಮಸಂಸ್ಕಾರೋ ನಿಷ್ಕ್ರಮಶ್ಚಾನ್ನಭೋಜನಂ ||

ಚೌಲಕರ್ಮೋಪಯನಂ ವೇದವ್ರತಚತುಷ್ಟಯಂ |
ಕೇಶಾಂತಸ್ನಾನಮದ್ವಾಹಃ ಸಂಸ್ಕಾರಃ ಷೋಡಶ ಸ್ಮೃತಾಃ ||”

ಗರ್ಭಾಧಾನ, ಪುಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ನಿಷ್ಕ್ರಮಣ, ಅನ್ನಪ್ರಾಶನ, ಚೌಲ, ಉಪನಯನ, ೧೦-೧೧-೧೨-೧೩ ನಾಲ್ಕು ವೇದವ್ರತಗಳು, ಕೇಶಾಂತ (ಗೋದಾನ), ಸಮಾವರ್ತನ, ವಿವಾಹ, ಇವು ೧೬ ಪೂರ್ವಸಂಸ್ಕಾರಗಳು. 

ಉಪನಯನದ ನಂತರ ಮತ್ತು ವಿವಾಹದ ಮೊದಲು ಇರುವ ಸಂಸ್ಕಾರಗಳು ಆಶ್ರಮವಾಸಿಯಾಗಿ ಗುರುವಿನ ಬಳಿಯಲ್ಲಿದ್ದು ವೇದವಿದ್ಯಾಭ್ಯಾಸವು ಪೂರ್ಣವಾಗುವವರೆಗಿನ ಸಂಸ್ಕಾರಗಳಾಗಿರುತ್ತವೆ. ಈಗಿನ ಕಾಲದಲ್ಲಿ ಆಶ್ರಮವಾಸವೂ, ಗುರುಕುಲಪದ್ಧತಿಯೂ ವಿಶೇಷವಾಗಿ ಇಲ್ಲದುದರಿಂದ, ಈ ಸಂಸ್ಕಾರಗಳೂ ಇಲ್ಲವಾಗಿವೆ. 


||ಅಪರಸಂಸ್ಕಾರ||

ಇದು ಮರಣೋತ್ತರ ಕ್ರಿಯೆಯಾಗಿರುತ್ತದೆ. ಇದನ್ನು ಔರ್ಧ್ವದೈಹಿಕಕರ್ಮ, ಅಪರಸಂಸ್ಕಾರ, ಉತ್ತರಕ್ರಿಯೆ ಎಂದೂ ಹೇಳುತ್ತಾರೆ. ತಾಯಿತಂದೆಯವರು ಬದುಕಿರುವವರೆಗೆ ಅವರ ಮಾತುಗಳನ್ನು ಕೇಳುವುದು, ಮರಣಹೊಂದಿದ ಮೇಲೆ ಶ್ರದ್ಧೆಯಿಂದ ಉತ್ತರಕ್ರಿಯೆಯನ್ನು ಆಚರಿಸುವುದರಿಂದ ಪುತ್ರನ ಜನ್ಮವು ಸಾರ್ಥಕವಾಗುವುದು. ಅಂದರೆ ಹತ್ತುತಿಂಗಳು ಹೊತ್ತುಹೆತ್ತು ಸಾಕಿಸಲಹಿ ವಿದ್ಯಾಬುದ್ಧಿಗಳನ್ನು ಕೊಟ್ಟು ಸಮಾಜದಲ್ಲಿ ಉತ್ತಮಪ್ರಜೆಯಾಗುವಂತೆ ನಿರಂತರ ಶ್ರಮಿಸಿರುವ ತಾಯಿತಂದೆಯರ ಋಣಪರಿಹಾರಕ್ಕೆ ಅವರನ್ನು ಚೆನ್ನಾಗಿ ನೋಡಿಕೊಂಡು, ಅವರು ಗತಿಸಿದ ಮೇಲೆ ಔರ್ಧ್ವದೈಹಿಕಕರ್ಮಗಳನ್ನು ಶ್ರದ್ಧೆಯಿಂದ ಮಾಡಿ, ತಾನು ಬದುಕಿರುವಷ್ಟು ಕಾಲ ಶ್ರಾದ್ಧಾದಿಗಳನ್ನು ನೆರವೇರಿಸುವುದು ಅವಶ್ಯಕವಾಗಿರುವುದು. 

ಮಾತಾಪಿತೃಗಳು ಮಕ್ಕಳಿಗೆ ಪೂರ್ವಸಂಸ್ಕಾರಗಳನ್ನು ಮಾಡುವಂತೆ, ಮಕ್ಕಳು ಮಾತಾಪಿತೃಗಳಿಗೆ ಅಪರಸಂಸ್ಕಾರಗಳನ್ನು ಮಾಡಲೇಬೇಕು.

ಇದು ಪಿತೃಯಜ್ಞವಾಗಿದೆ. ಪೂರ್ವಸಂಸ್ಕಾರಗಳು ಎಷ್ಟು ಮುಖ್ಯವೋ ಅಪರಸಂಸ್ಕಾರಗಳು ಅಷ್ಟೇ ಪ್ರಧಾನ. ಈ ಕಾರ್ಯದಿಂದ ಉತ್ತಮಗತಿಯನ್ನು ಹೊಂದಿ ಪಿತೃಗಳು ನಮ್ಮನ್ನು ಹರಸುತ್ತಾರೆ ಎಂಬುದು ಸ್ಮೃತಿವಚನವೂ, ನಂಬಿಕೆಯೂ ಆಗಿದೆ.   

“ಪಿತೃಕಾರ್ಯಂ ದ್ವಿಜಾತೀನಾಂ ದೈವಕಾರ್ಯಾತ್ ವಿಶಿಷ್ಯತೇ” ಅಂದರೆ ದೇವಕಾರ್ಯಕ್ಕಿಂತ ಪಿತೃಕಾರ್ಯವು ವಿಶೇಷವಾಗಿರುತ್ತದೆ. ಒಂದು ದೇಹವನ್ನು ತ್ಯಜಿಸಿ ಇನ್ನೊಂದು ದೇಹವನ್ನು ಸೇರುವ ಆತ್ಮದ ಸದ್ಗತಿಗಾಗಿ ಪಿತೃಋಣದಿಂದ ಮುಕ್ತನಾಗುವುದಕ್ಕೆ ಪ್ರತಿಯೊಬ್ಬರೂ ಮಾಡಲೇಬೇಕಾದ ಸಂಸ್ಕಾರವೇ ಅಪರಸಂಸ್ಕಾರ. 

ಓರ್ದ್ವದೇಹಿಕವಿಧಿಯಲ್ಲಿ ಹಲವು ವಿಧಿಗಳಿರುತ್ತವೆ:-

ಚಿತಿಪೂರಣಂ ಪ್ರಥಮದಿನವಿಧಿ, ದ್ವಿತೀಯಾದಿ ದಿನವಿಧಿ (ಎರಡನೆಯ ದಿನದಿಂದ ಹತ್ತನೆಯ ದಿನದವರೆಗೆ), ದಶಮದಿನವಿಧಿ, ಏಕಾದಶಾಹಕೃತ್ಯ, ಸಪಿಂಡೀಕರಣಂ, ತ್ರಯೋದಶದಿನವಿಧಿ, ಚತುರ್ದಶದಿನವಿಧಿ, ಮಾಸಿಕಶ್ರಾದ್ಧ, ಪ್ರಥಮಾಬ್ದಿಕ ಶ್ರಾದ್ಧ,  ಪ್ರತಿಸಾಂವತ್ಸರಿಕಶ್ರಾದ್ಧಂ, ಮೊದಲಾದುವುಗಳು ಇವೆ. 

ಪೂರ್ವ ಷೋಡಶ ಸಂಸ್ಕಾರಗಳಿಂದ ದ್ವಿಜನಾಗಿ, ಆಧ್ಯಾತ್ಮಸಾಧನೆಗೆ ಅರ್ಹತೆಯನ್ನು ಹೊಂದಿ, ದೇವಋಣ, ಪಿತೃಋಣ ಮತ್ತು ಋಷಿಋಣಗಳನ್ನು ಪರಿಹಾರ ಮಾಡಿಕೊಳ್ಳುವ ಯೋಗ್ಯತೆ ಸಂಪಾದಿಸುವುದು ಸಾಧ್ಯವಾಗುತ್ತದೆ. 

ಗರ್ಭಪ್ರವೇಶಿಸಿದ ಜೀವಿಗೆ ಒಂಬತ್ತು ತಿಂಗಳಲ್ಲಿ ಪ್ರಾಪಂಚಿಕ ಸಾಧನಾರ್ಹ ಶರೀರೋತ್ಪತ್ತಿಯಾದಂತೆ ಅಪರಸಂಸ್ಕಾರದ ದಶಾಹ ವಿಧಿಯಿಂದ ಪಿತೃಶರೀರ ಉತ್ಪತ್ತಿಯಾಗುವುದು. ನಂತರ ಸಪಿಂಡೀಕರಣದಿಂದ ಪಿತೃಗಣದಲ್ಲಿ ಸೇರಲಿರುವ ಅವರ ಉದ್ದೇಶದಿಂದ 16 ಮಾಸಿಕಗಳನ್ನು (ಅಪರಷೋಡಶ) ಆಚರಿಸುವುದರಿಂದ ಪಿತೃಲೋಕಮಾರ್ಗದಲ್ಲಿರುವ ವರ್ಷಪರ್ಯಂತ ಯಾತ್ರೆಯಲ್ಲಿ ಸಿಗುವ 16 ದೇಶಗಳನ್ನು ದಾಟುತ್ತಾ, ನಾವು ಕೊಡುವ ಮಾಸಿಕ ಪಿಂಡದಾನ ಮುಂತಾದುವುಗಳಿಂದ ಆಹಾರ ಜಲರೂಪದಿಂದ ತೃಪ್ತಿಹೊಂದಿ ನಮ್ಮನ್ನು ಹರಸಿ ಮುಂದೆ ನಡೆಯುವರು. 

ಈ ದೃಷ್ಟಿಯಿಂದ ನಾವು ಯಾವುದೇ ಉದಾಸೀನ ತೋರದೇ ಕರ್ತವ್ಯಪರರಾಗಬೇಕು. 
********

No comments:

Post a Comment