“ಧರ್ಮಪ್ರಜಾಸಂಪತ್ತಿಃ ಪ್ರಯೋಜನಂ ವಿವಾಹಸ್ಯ||” ಧರ್ಮ ಶ್ರದ್ಧೆಯುಳ್ಳ ಉತ್ತಮ ಸಂತಾನಪ್ರಾಪ್ತಿಯೇ ಬ್ರಾಹ್ಮವಿವಾಹದ ಮುಖ್ಯ ಉದ್ದೇಶ. ವಿವಾಹ ಸಂಸ್ಕಾರವು ಸ್ತ್ರೀಪುರುಷರ ಪರಸ್ಪರ ಸಂಬಂಧ ನಿರ್ಣಾಯಕವಾದುದರಿಂದ ಇದಕ್ಕೆ ಧಾರ್ಮಿಕ ಮಹತ್ವವಿದ್ದಷ್ಟೇ ಸಾಮಾಜಿಕ ಮಹತ್ವವೂ ಇದೆ. ಈ ವಿವಾಹ ಸಂಸ್ಕಾರದಲ್ಲಿ ವಾಗ್ದಾನ (ನಿಶ್ಚಯತಾಂಬೂಲ) ದಿಂದ ಗೃಹಪ್ರವೇಶ ದ ವರೆಗೆ ಹಲವು ವಿಧಿಗಳು ಅಂತರ್ಗತವಾಗಿವೆ.
ವಧುವಿಗೆ ಭಾರ್ಯತ್ವಸಿದ್ಧಿಗಾಗಿ ವಿವಾಹಹೋಮವನ್ನು ಮಾಡಲಾಗುತ್ತದೆ. ಇದರಲ್ಲಿ ಲಾಜಹೋಮ, ಪಾಣಿಗ್ರಹಣ, ಪರಿಣಯನ (ಅಗ್ನಿಗೆ ಪ್ರದಕ್ಷಿಣೆ ಬರುವುದು), ಅಶ್ಮಾರೋಹಣ (ಸ್ಥಿರತೆಗಾಗಿ), ಸಪ್ತಪದಿ (ಸಖ್ಯಪ್ರಾಪ್ತಿಗಾಗಿ ಪ್ರತಿಜ್ಞೆ) ಮುಂತಾದ ಕರ್ಮಭಾಗಗಳಿವೆ.
ಸಪ್ತಪದಿಯು ದಾಂಪತ್ಯಜೀವನದ ಪ್ರಮಾಣವಚನ ಸ್ವೀಕಾರದ ವಿಧಿ ಎಂದ ಹೇಳಬಹುದು. ವರನು ವಧುವಿನ ಜೊತೆಯಲ್ಲಿ ಏಳು ಹೆಜ್ಜೆಗಳಿಂದ, ಪ್ರತಿಯೊಂದು ಹೆಜ್ಜೆಗೂ ಒಂದೊಂದು ಪ್ರಮಣವಚನವನ್ನು ಸ್ವೀಕರಿಸಬೇಕು.
“ಅಥಾಗ್ನೇರುದೀಚ್ಯಾಂ ಕೃತಸಪ್ತತಡುರಾಶೀನ್ ಪಶ್ಚಿಮತಃ ಆರಭ್ಯ ಈಶಾನಪರ್ಯಂತಮ್ ಏಕೈಕಂ ವಧೂಂ ದಕ್ಷಿಣೇನ ಪಾದೇನ ಸಮಂತ್ರಕಮ್ ಅಭ್ಯುತ್ಕ್ರಾಮಯೇತ್ ||”
ಅಗ್ನಿಯ ಉತ್ತರಭಾಗದಲ್ಲಿ ಅಕ್ಕಿಯ ಏಳು ರಾಶಿಗಳನ್ನು ಮಾಡಬೇಕು. ಅವುಗಳ ಪಡುಭಾಗದಲ್ಲಿ ಪೂರ್ವಕ್ಕೆ ಮುಖಮಾಡಿ ವಧುವನ್ನು ನಿಲ್ಲಿಸಿ, ವರನು ವಧುವಿನ ಮುಂದೆ ನಿಂತು, ಮೊದಲು ಬಲಗಾಲನ್ನು ಎತ್ತಿ ಇಡುವಂತೆ ಹೇಳಿ, ಏಳು ಮಂತ್ರಗಳನ್ನು ಹೇಳುತ್ತಾ ಕ್ರಮವಾಗಿ ಒಂದೊಂದೇ ರಾಶಿಯ ಮೇಲೆ ನಡೆಸಿಕೊಂಡು ಬರುವುದೇ ಸಪ್ತಪದಿ ವಿಧಿ.
ಈ ಏಳು ಹೆಜ್ಜೆಗಳು ಅವರ ಭಾವೀ ದಾಂಪತ್ಯ ಜೀವನವೆಂಬ ಸುದೀರ್ಘ ಪಥದ ಸಾಂಕೇತಿಕ ಹೆಜ್ಜೆಗಳು. ಈ ವಚನಗಳು ಬಹಳ ಅರ್ಥಪೂರ್ಣವಾಗಿವೆ. ಈ ವಿಧಿಯನ್ನು ಸಮಂತ್ರಕವಾಗಿ ಮಾಡಬೇಕು.
ಸಪ್ತಪದಿಯ ಏಳು ಮಂತ್ರಗಳು:-
ಓಂ ಇಷ ಏಕಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ಪ್ರಥಮಂ ||
ಓಂ ಊರ್ಜೇ ದ್ವಿಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ದ್ವಿತೀಯಂ ||
ಓಂ ರಾಯಸ್ಪೋಷಾಯ ತ್ರಿಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ತೃತೀಯಂ ||
ಓಂ ಮಾಯೋಭವ್ಯಾಯ ಚತುಷ್ಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ಚತುರ್ಥಂ ||
ಓಂ ಪ್ರಜಾಭ್ಯಃ ಪಂಚಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ಪಂಚಮಂ ||
ಓಂ ಋತುಭ್ಯಃ ಷಟ್ಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ಷಷ್ಠಂ ||
ಓಂ ಸಖಾ ಸಪ್ತಪದೀ ಭವ || ಸಾ ಮಾಮನುವ್ರತಾ ಭವ || ಪುತ್ರಾನ್ ವಿಂದಾವಹೈ ಬಹೂಂಸ್ತೇ ಸಂತು ಜರದಷ್ಟಯಃ || ಇತಿ ಸಪ್ತಮಂ ||
(ಜೀವನದ ಅನ್ನಕ್ಕಾಗಿ ಮೊದಲನೆಯ ಹೆಜ್ಜೆ, ಬಲವರ್ಧನೆಗಾಗಿ ಎರಡನೇ ಹೆಜ್ಜೆ, ಆರ್ಥಿಕ ಸಬಲತೆಗಾಗಿ ಮೂರನೇ ಹೆಜ್ಜೆ, ದಾಂಪತ್ಯ ಸುಖಕ್ಕಾಗಿ ನಾಲ್ಕನೇ ಹೆಜ್ಜೆ, ಸತ್ಸಂತತಿಗಾಗಿ ಐದನೇ ಹೆಜ್ಜೆ, ಎಲ್ಲ ಋತುಗಳಲ್ಲೂ ಸಂತೋಷದಿಂದ ಬಾಳುವ ಶಕ್ತಿಗಾಗಿ ಆರನೇ ಹೆಜ್ಜೆ, ಮುಂದೆ ಸದಾ ಸ್ನೇಹಭಾವ ತುಂಬಿ ಸಖಿಯಾಗುವ ನಿಮಿತ್ತ ಏಳನೇ ಹೆಜ್ಜೆ.)
ಕೊನೇಯ ರಾಶಿ ತುಳಿದ ಅನಂತರ ಇಬ್ಬರೂ ಪರಸ್ಪರ ತಲೆಯನ್ನು ಜೋಡಿಸುವುದು. ವಧುವಿನ ತಂದೆಯು ವರನ ತಲೆಯ ಮೇಲೆ ಕನ್ನಡಿಯನ್ನು ಇಟ್ಟು, ವಧುವಿನ ತಾಯಿ ಪೂರ್ವ ಕಲಶದ ನೀರನ್ನು ಸ್ವಲ್ಪವೇ ಕನ್ನಡಿಯ ಮೇಲೆ (ಶಾಂತಿರಸ್ತು ..... ಇತ್ಯಾದಿ) ಸಮಂತ್ರಕವಾಗಿ ಸುರಿಯುವುದು. ಕನ್ನಡಿಯ ನೀರು ವರನ ತಲೆಗೆ ಬಿದ್ದು ವಧುವಿನ ತಲೆಗೆ ಬೀಳುವಂತಿರಬೇಕು. ಇದರಿಂದ ವಧುವಿಗೆ ವರನ ಗೋತ್ರವು ಪ್ರಾಪ್ತವಾಗುವುದು.
ಸಖ್ಯಪ್ರಾಪ್ತಿಗಾಗಿ ಸಪ್ತಪದಿಯನ್ನು ಆಚರಿಸುವ ಸಮಯದಲ್ಲಿ ವರನು ಹೇಳುತ್ತಾನೆ:-
“ಏಳು ರಾಶಿಯನ್ನು ದಾಟುವುದರಿಂದ ಸಪ್ತಪದಿಯಾದ ನೀನು ನನಗೆ ಸ್ನೇಹಿತಳಾಗು. ಈ ಸಪ್ತಪದಿಯಿಂದಲೇ ನಾವಿಬ್ಬರೂ ಸ್ನೇಹಿತರಾಗೋಣ. ನಾವಿಬ್ಬರೂ ಸ್ನೇಹವಾಗಿಯೇ ನಡೆಯೋಣ. ನನ್ನ ಸ್ನೇಹದಿಂದ ನೀನೂ ಬೇರೆಯಾಗಬೇಡ. ನಿನ್ನ ಸ್ನೇಹದಿಂದ ನಾನೂ ಬೇರೆಯಾಗುವುದಿಲ್ಲ. ಒಂದು ಕಾರ್ಯವನ್ನು ಮಾಡಲು ಇಬ್ಬರೂ ಸಹಕರಿಸಿ ನಿರ್ಧರಿಸೋಣ. ಪ್ರೀತಿಯುಕ್ತರಾಗೋಣ. . . . .
ನೀನು ಋಗ್ವೇದಸ್ವರೂಪಳು, ನಾನು ಸಾಮವೇದಸ್ವರೂಪನು. ನಾನು ಆಕಾಶಸ್ವರೂಪನು, ನೀನು ಪೃಥ್ವೀಸ್ವರೂಪಳು. ನಾನು ಮನಸ್ಸಿನ ಸ್ವರೂಪನಾಗಿದ್ದೇನೆ, ನೀನು ವಾಕ್ಕಿನ ಸ್ವರೂಪಳಾಗಿದ್ದೀ. . . . .
ಈ ರೀತಿಯಾಗಿರುವ ನೀನು ನನಗೆ ಅನುಕೂಲಳಾಗಿರು.”
ಇಲ್ಲಿ ಪತಿ-ಪತ್ನಿಯರಲ್ಲಿ ಮೇಲು-ಕೀಳು, ಉತ್ತಮ-ನೀಚ, ಹೆಚ್ಚು-ಕಡಿಮೆ ಎಂಬ ಭೇದಭಾವಕ್ಕೆ ಅವಕಾಶವಿಲ್ಲ. ಒಬ್ಬರ ಮೇಲೆ ಇನ್ನೊಬ್ಬರು ಅಧಿಕಾರ ಚಲಾಯಿಸದೇ ಸ್ನೇಹಿತರಂತೆ ಸಮಾನತೆಯಿಂದ ಸ್ನೇಹಭಾವದಿಂದ ಬಾಳಬೇಕೆಂಬುದೇ ಸಂದೇಶ.
ಹೀಗೆ ಏಳು ಹೆಜ್ಜೆಗಳನ್ನು ಇಡುವಾಗ ವಧುವು ವರನ ಸಾಮಿಪ್ಯಕ್ಕೆ ಬಂದಿರುತ್ತಾಳೆ.
ಜೀವನದ ಕಷ್ಟಕೋಟಲೆಗಳನ್ನು ಸಪ್ತಸಾಗದಂತೆ ಸಪ್ತಪದಿಯಲ್ಲಿ ದಾಟಿ ಒಂದಾಗೋಣ ಎಂಬ ಮಧುರ ಅನುಭೂತಿಯನ್ನು ಪ್ರತಿಬಿಂಬಿಸುತ್ತದೆ ಈ ಸಪ್ತಪದಿ. ಈ ಸಪ್ತಪದಿ ವಿಧಾನವು ವಿವಾಹ ಸಂಸ್ಕಾರದ ಜೀವ – ಜೀವಾಳ-
-ಸಂಸ್ಕಾರಗಳು ಸಂಚಿಕೆ – ೧೮ || ವಿವಾಹ || ಅಧ್ಯಾಯ – ೩:ಸಂಗ್ರಹ:- ಪಂ. ವಿಜಯೇಂದ್ರ ರಾಮನಾಥ ಭಟ್.
*****
ಸಪ್ತಪದಿ - ನಮ್ಮ ಪೂರ್ವಜರು ಎಲ್ಲದಕ್ಕೂ ಒಂದು ವಿಧ ವಿಧಾನ ಮಾಡಿ ಎಲ್ಲದಕ್ಕೂ ಒಂದು ಅರ್ಥಗರ್ಭಿತ ಕಾರಣ ಕೊಟ್ಟರು ಅದರಲ್ಲಿ ಜೀವನ ತಿಳಿಸಿ ಕೊಟ್ಟರು.
*ವಿವಾಹದ ಅರ್ಥಪೂರ್ಣ ಹೆಜ್ಜೆಗಳೇ ಈ ಸಪ್ತಪದಿ. !!!*
*ಮೊದಲನೇ ಹೆಜ್ಜೆ.. 1*
ವರ -- ನನ್ನೊಂದಿಗೆ ಮೊದಲ ಹೆಜ್ಜೆಯಿಟ್ಟಿರುವೆ. ನಾವೀಗ ಗೆಳೆಯರಾಗಿದ್ದೇವೆ. ಸದಾ ನನಗೆ ಆಹಾರವನ್ನು ಒದಗಿಸು. ಧಾರ್ಮಿಕವ್ರತಾಚರಣೆಗಳಲ್ಲಿ ಸಹಭಾಗಿಯಾಗು,ಉತ್ತಮ ಸಂತಾನಗಳನ್ನು ಪಡೆದು ನಾವಿಬ್ಬರೂ ಬಹುಕಾಲ ಬದುಕೋಣ.
ವಧು --ನನ್ನನ್ನು ನಿಮಗೆ ಸಮರ್ಪಿಸಿಕೊಳ್ಳುತ್ತಿದ್ದೇನೆ. ಮನೆಯ,ಆಹಾರದ,ಹಣಕಾಸಿನ ಜವಾಬ್ದಾರಿಯನ್ನು ನನಗೀಗ ನೀಡಿ.ನನಗೆ ಕೊಟ್ಟ ಜವಾಬ್ದಾರಿಗಳನ್ನು ನಾನು ಸಮರ್ಥವಾಗಿ ನಿಭಾಯಿಸುತ್ತೇನೆ.
*ಎರಡನೇ ಹೆಜ್ಜೆ*
ವರ - ನನ್ನೊಂದಿಗೆ ಎರಡನೇ ಹೆಜ್ಜೆಯಿಟ್ಟಿದ್ದೀಯಾ. ಸದಾ ನನ್ನೊಂದಿಗಿದ್ದು ಶಕ್ತಿಯನ್ನು ನೀಡು.
ವಧು - ನೀವು ದುಃಖದಲ್ಲಿರುವಾಗ ಮನಸ್ಫೂರ್ತಿಯನ್ನು ನೀಡುವೆ. ನಿಮ್ಮ ಒಳಿತಿಗಾಗಿ ಸದಾ ಚಿಂತಿಸುವೆ.ಸದಾ ನಿಮಗೆ ಹಿತಕರವಾದ ಮಾತನ್ನಾಡುವೆ.ಕುಟುಂಬ ಹಾಗೂ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ವಹಿಸುತ್ತೇನೆ.ನಿಮ್ಮ ಪ್ರೀತಿ ಸದಾ ನನ್ನೊಬ್ಬಳಿಗೇ ಇರಲಿ.
*ಮೂರನೇ ಹೆಜ್ಜೆ..*
ವರ - ನನ್ನ ಸಂಪತ್ತನ್ನು ನೀನು ಇನ್ನೂ ಹೆಚ್ಚಿಸುವೆಯೆಂಬ ನಂಬಿಕೆಯಿಂದ ನಿನ್ನೊಡನೆ ಮೂರನೇ ಹೆಜ್ಜೆಯನ್ನಿಟ್ಟಿದ್ದೇನೆ.
ವಧು - ಒಂದೇ ಮನಸ್ಸಿನಿಂದ ನಿಮ್ಮನ್ನೇ ಆರಾಧಿಸುತ್ತೇನೆ.ನನ್ನ ಸಹೋದರರನ್ನು ಪ್ರೀತಿಸುವಂತೇ ನಿಮ್ಮನ್ನೂ ಪ್ರೀತಿಸುತ್ತೇನೆ. ನಿಮ್ಮಲ್ಲೇ ಭಕ್ತಿ ಹೊಂದಿರುತ್ತೇನೆ.ಇದು ನನ್ನ ಪ್ರತಿಜ್ಞೆ.
*ನಾಲ್ಕನೇ ಹೆಜ್ಜೆ..*
.ವರ --ನನ್ನ ಸಂತೋಷವನ್ನು ಹೆಚ್ಚಿಸುವೆಯೆಂಬ ನಂಬಿಕೆಯಿಂದ ನಿನ್ನೊಂದಿಗೆ ನಾಲ್ಕನೇ ಹೆಜ್ಜೆಯನ್ನಿಡುತ್ತಿದ್ದೇನೆ.
ವಧು - ಯಾವಾಗಲೂ ನೀವು ಆನಂದದಲ್ಲಿರುವಂತೇ ನೋಡಿಕೊಳ್ಳುತ್ತೇನೆ. ನಿಮ್ಮ ಲಾಲನೆ-ಪೋಷಣೆಯ ಜವಾಬ್ದಾರಿ ನನ್ನದು.
*ಐದನೇ ಹೆಜ್ಜೆ..*
ವರ- ಉತ್ತಮ ಸಂತಾನವನ್ನು ಕರುಣಿಸುವೆಯೆಂಬ ನಂಬಿಕೆಯಿಂದ ಐದನೇ ಹೆಜ್ಜೆಯನ್ನಿಡುತ್ತಿದ್ದೇನೆ.
ವಧು - ಸಂಪತ್ತಿನಲ್ಲಿ,ದುಃಖದಲ್ಲಿ ಸದಾ ನಿಮ್ಮೊಂದಿಗಿರುತ್ತೇನೆ. ವಿಶ್ವಾಸ ಹಾಗೂ ಪ್ರಾಮಾಣಿಕತೆಯಿಂದ ನಿಮ್ಮೊಂದಿಗೆ ಜೀವಿಸುತ್ತೇನೆ.ನಿಮ್ಮ ಆಸೆಗಳನ್ನು ಸದಾ ನೆರವೇರಿಸುತ್ತೇನೆ.
*ಆರನೇ ಹೆಜ್ಜೆ..*
ವರ - ಎಲ್ಲ ಋತುಗಳಲ್ಲೂ ಸಂತೋಷವನ್ನು ನೀಡುವೆಯೆಂಬ ಭರವಸೆಯಿಂದ ಆರನೇ ಹೆಜ್ಜೆಯನ್ನಿಡುತ್ತಿದ್ದೇನೆ.
ವಧು-- ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲೂ,ಎಲ್ಲ ವಿಧದ ಸಂತೋಷ,ದುಃಖಗಳಲ್ಲೂ ನಾನು ನಿಮ್ಮೊಂದಿಗಿರುತ್ತೇನೆ. ಯಾವಾಗಲೂ ನಿಮ್ಮ ಸಂತೋಷವನ್ನೇ ಬಯಸುತ್ತೇನೆ.
*ಏಳನೇ ಹೆಜ್ಜೆ..*
ವರ -- ಪರಸ್ಪರರು ಅರಿತು ಜೀವನದುದ್ದಕ್ಕೂ ಜೊತೆಯಾಗಿ ಬಾಳೋಣ ಎನ್ನುತ್ತಾ ನಿನ್ನೊಡನೆ ಎಳನೇ ಹೆಜ್ಜೆಯನ್ನಿಡುವೆ.
ವಧು --- ದೇವಾನುದೇವತೆಗಳ ಅನುಗ್ರಹದಿಂದ,ನಿಮ್ಮೊಡನೆ ಏಳು ಹೆಜ್ಜೆ ನಡೆದು ನಿಮ್ಮ ಪತ್ನಿಯಾಗಿರುವೆ. ಯಾವ ಪ್ರತಿಜ್ಞೆಗಳನ್ನು ಮಾಡಿದ್ದೇವೆಯೋ ಅದನ್ನು ಶಿರಸಾವಹಿಸಿ ಪಾಲಿಸೋಣ.ಪರಸ್ಪರರು ಎಂದಿಗೂ ವಿಶ್ವಾಸದಿಂದಿರೋಣ.ಯಾವಾಗಲೂ ಒಬ್ಬರನ್ನೊಬ್ಬರು ಪ್ರೀತಿಸೋಣ.
ಇದನ್ನು ಪ್ರತಿಯೊಬ್ಬರು ಮನಃ ಪೂರ್ವಕ ವಾಗಿ ಅರಿತು ಬಾಳಿದಾಗ ವಿಚ್ಛೇದನದ ಅನ್ನುವ ಪದ ಯಾವ ಪತಿಪತ್ನಿಯ ಜೀವನದಲ್ಲಿ ಬರುವದೇ ಇಲ್ಲ ಆದರೆ ಇವತ್ತಿನ ದಿನ ಎಲ್ಲರೂ ಸ್ವಾಭಿಮಾನ ಅನ್ನುವ ಅಹಂ ಬಲಿಯಾಗಿ ಜೀವನದ ಹಾದಿ ತಪ್ಪುತ್ತಿದ್ದಾರೆ.
*****
No comments:
Post a Comment