SEARCH HERE

Tuesday 1 January 2019

ವ್ಯಕಿಯು ಮೃತನಾದ ನಂತರದ ಶ್ರಾದ್ಧ ಗಳು shraddhas after death


" ಮಾಸಿಕಗಳ ಫಲ "

ವ್ಯಕ್ತಿಯು ಮೃತನಾದ ಕೂಡಲೇ ಪ್ರೇತ ಎನಿಸುತ್ತಾನೆ. ಪ್ರೇತತ್ವ ನಿವೃತ್ತಿಗಾಗಿ...

ನವ ಶ್ರಾದ್ಧಗಳನ್ನೂ ಮತ್ತು ೧೬ ಮಾಸಿಕಗಳನ್ನೂ ಮಾಡಬೇಕು.ಈ ದಶಾಹ ವಿಧಿಯಲ್ಲಿ ಯಾವುದೇ ಕಾಲಕ್ಕೂ ನಿಷಿದ್ಧ ಪದಾರ್ಥಗಳನ್ನು ಪಿಂಡದಲ್ಲಿ ಮಿಶ್ರ ಮಾಡಬಾರದು. ಒಂದುವೇಳೆ ನಿಷಿದ್ಧ ಪದಾರ್ಥಗಳನ್ನು ಉಪಯೋಗಿಸಿದಲ್ಲಿ ಯುಗ ಪರ್ಯಂತ ಪ್ರೇತ ಜನ್ಮದಿಂದ ಮುಕ್ತಿ ಹೊಂದದೆ ಪ್ರೇತ ಜನ್ಮದಲ್ಲೇ ಕೊಳೆಯುತ್ತದೆ. ಅಲ್ಲದೆ ಪ್ರಾಯಶ್ಚಿತ್ತವೇ ಇಲ್ಲ!!

" ಶ್ರಾದ್ಧ ಕರ್ಮದಲ್ಲಿ ನಿಷಿದ್ಧ ಪದಾರ್ಥಗಳು "

ಶ್ರೀ ವೇದವ್ಯಾಸ ಪ್ರಣೀತ ಶ್ರೀಮನ್ಮಹಾಭಾರತದ ಅನುಶಾಸನ ಪರ್ವದಲ್ಲಿ..

ಅಶ್ರಾದ್ಧೇ ಯಾನಿ ಧಾನ್ಯಾನಿ ಕ್ರೋಧವಾ: ಪುಲಕಾಸ್ತಾಥಾ ।
ಹಿಂಗುದ್ರವ್ಯೆಷು ಪಾಲಾಂಡುಂ ವೃಂತಕ ಲಸುನಂ ತಥಾ ।।
ಸೌಭಾಂಜನ: ಕೋವಿದಾರಸ್ತಥಾ ಗೃ೦ಜನಕಾದಯಃ ।
ಕೂಷ್ಮಾ೦ಡಜಾತ್ಯಲಾಬು೦ ಚ ಕೃಷ್ಣ೦ ಲವಣಮೇಚಚ ।।

ಇಂಗು - ಈರುಳ್ಳಿ - ಬೆಳ್ಳುಳ್ಳಿ - ಬದನೇಕಾಯಿ - ನುಗ್ಗೆಕಾಯಿ - ಕೆಂಚನಾಳದ ಕಾಯಿ - ಗಜ್ಜರಿ - ಬೂದುಗುಂಬಳ ಸೋರೆಕಾಯಿ - ಕರಿ ಉಪ್ಪು ಮುಂತಾದವುಗಳನ್ನು ಶ್ರಾದ್ಧದಲ್ಲಿ ಉಪಯೋಗಿಸಬಾರದೆಂದು ಅಖಿಲಾಂಡಕೋಟಿ ಬ್ರಹ್ಮಾಂಡನಾಯಕರಾದ ಶ್ರೀ ಭಗವಾನ್ ವೇದವ್ಯಾಸದೇವರು ಹೇಳಿದ್ದಾರೆ.

ನವ ಶ್ರಾದ್ಧವೆಂದರೆ...

ಪ್ರಥಮ - ತೃತೀಯ - ಪಂಚಮ - ಸಪ್ತಮ - ನವಮ ಹೀಗೆ ೧೦ ದಿವಸಗಳಲ್ಲಿ ಮಾಡುವ ವಿಷಮ ಶ್ರಾದ್ಧಗಳಿಗೆ " ನವ ಶ್ರಾದ್ಧ " ಎನ್ನುತ್ತಾರೆ.

ನವ ಶ್ರಾದ್ಧ ಮಾಡದೇ ಪ್ರೇತತ್ವ ನಿವೃತ್ತಿಯಾಗುವುದಿಲ್ಲ.

ನವ ಶ್ರಾದ್ಧ; ತ್ರಿಪಕ್ಷ ಶ್ರಾದ್ಧ; ಮಾಸಿಕ; ಷಣ್ಮಾಸಿಕಾ ಇವು ಮಾಡದ ಪುತ್ರನ ಪಿತೃಗಳು ಅಧೋಗತಿ ಹೊಂದುವರು.

10 ದಿನಗಳಲ್ಲಿ ಮಾಡುವ ಪ್ರೇತ ಶ್ರಾದ್ಧದಲ್ಲಿ ಪಿತೃ ಶಬ್ದ ಹೇಳದೆ " ಪ್ರೇತ " ಯೆಂದು ಮಂತ್ರವಿಲ್ಲದೆ ಎಳ್ಳು ಹಾಕಬೇಕು.

ಪ್ರೇತ ಶಬ್ದದಿಂದ " ಪಾಣಿ ಹೋಮ ಮಾಡಬೇಕು.

ಪ್ರೇತ ಸ್ಥಾನದಲ್ಲಿ ಬಳಿ ನೀಡಿ ಅಸ್ಥಿಗಳನ್ನು ಹಾಲಿನಿಂದ ತೊಳೆದು ಬಿಳಿ ವಸ್ತ್ರದಿಂದ ಸುತ್ತಿ ಮಡಿಕೆಯಲ್ಲಿ ಹಾಕಿ ಭೂಮಿಯಲ್ಲಿ ಸ್ಥಾಪಿಸಬೇಕು. ನಂತರ ೧೦ ದಿನದೊಳಗೆ ಗಂಗೆಯಲ್ಲಿ ಹಾಕಿದರೆ ಗಂಗೆಯಲ್ಲಿ ಮರಣವಾದಂತೆ. ಯಾರ ಆಸ್ತಿಯು ಗಂಗೆಯಲ್ಲಿ ಬೀಳುವದೋ ಅವನಿಗೆ ಸ್ವರ್ಗಲೋಕ ಲಭಿಸುತ್ತದೆ.

ಮಾಸಿಕ 16 ಇರುತ್ತದೆ.

ಆದ್ಯ - ಊನ - ದ್ವಿತೀಯಾ - ತೃತೀಯಾ - ಚತುರ್ಥ - ಪಂಚಮ - ಷಷ್ಠ - ಊನ ಷಣ್ಮಾಸಿಕ - ಸಪ್ತಮ - ಅಷ್ಟಮ - ನವಮ - ದಶಮ - ಏಕಾದಶ - ದ್ವಾದಶ - ಊನಾಬ್ಧಿಕ - ಆಬ್ಧಿಕ.

11ನೇ ದಿನ ಏಕೋದಿಷ್ಟ ಶ್ರಾದ್ಧ ಮಾಡಬೇಕು. ಈ ಶ್ರಾದ್ಧದಿಂದ ಪ್ರೇತನಿಗೆ ಯಮ ಮಾರ್ಗದಲ್ಲಿ ನಡೆಯುವ ಶಕ್ತಿ ಬರುತ್ತದೆ.

ಪ್ರೇತನು ಪರವಿತ್ತಾಪಹಾರ - ಪರ ಕಲತ್ರ ಅಪಹಾರ  ಮಾಡಿದ್ದಾರೆ " ನವ ಶ್ರಾದ್ಧ " ದಿಂದ ಪರಿಹೃತವಾಗುತ್ತದೆ.

12ನೇ ದಿನದ ಶ್ರಾದ್ಧದಿಂದ " ಯಂತ್ರ ನರಕ " ದಿಂದ ಬಿಡುಗಡೆ ಹೊಂದುತ್ತದೆ.

ಮಾಸಿಕ ಶ್ರಾದ್ಧ ಮಾಡುವುದರಿಂದ " ಸೂರ್ಮಿ " ಎಂಬ ನರಕದಿಂದ ಪಾರಾಗುವನು. ( ಸೂರ್ಮಿ ನರಕ ಅಂದರೆ ಚೆನ್ನಾಗಿ ಕಾದಿರುವ ತಾಮ್ರದ ಸ್ತ್ರೀ ಬೊಂಬೆಯನ್ನು ಆಲಂಗಿಸುತ್ತಾ ಕಾದ ಮಂಚದ ಮೇಲೆ ಮಲಗಬೇಕು ).

ತ್ರೈಪಕ್ಷಿಕ ಶ್ರಾದ್ಧದಿಂದ " ಸಾರಮೇಯಾದನ " ಎಂಬ ನರಕದಿಂದ ಪಾರಾಗುವನು. ( ಈ ನರಕದಲ್ಲಿ ಕಬ್ಬಿಣದಂತೆ ಗಟ್ಟಿಯಾಗಿ ಕೋರೆ ಹಲ್ಲುಗಳಿರುವ " ನಾಯಿ " ಗಳು ಪ್ರೇತನ ಪೃಷ್ಠ ಮಾಂಸವನ್ನೇ ಅಪೇಕ್ಷಿಸಿ ಕಿತ್ತು ತಿನ್ನುತ್ತದೆ ).

2ನೇ ಮಾಸಿಕ ಶ್ರಾದ್ಧದಿಂದ " ಲೋಹಚಂಚು ಕಾಗೆ " ಗಳಿಂದ ಕಾಟವಿರುವುದಿಲ್ಲ.

3ನೇ ಮಾಸಿಕ ಶ್ರಾದ್ಧದಿಂದ " ಶಾಲ್ಮಲೀ " ಮೊದಲಾದ ನರಕದಿಂದ ಪಾರು ಮಾಡುತ್ತದೆ.

4ನೇ ಮಾಸಿಕ ಶ್ರಾದ್ಧದಿಂದ " ರೌರವ ನರಕ " ದಿಂದ ಮುಕ್ತರಾಗುತ್ತಾರೆ.

5ನೇ ಮಾಸಿಕ ಶ್ರಾದ್ಧದಿಂದ " ಕುಂಭೀಪಾಕ " ನರಕ ಪರಿಹಾರ.

6ನೇ ಮಾಸಿಕ ಶ್ರಾದ್ಧದಿಂದ " ವೈತರಣೀ " ಯಿಂದ ಬಿಡುಗಡೆ.

7ನೇ ಮಾಸಿಕ ಶ್ರಾದ್ಧ " ಸಂವರ್ತಕ ನರಕ " ದಿಂದ ಪಾರು ಮಾಡುತ್ತದೆ.

8ನೇ ಮಾಸಿಕ ಶ್ರಾದ್ಧ " ಸಂದಂಶ " ನರಕದಿಂದ ಪಾರು ಮಾಡುತ್ತದೆ.

9ನೇ ಮಾಸಿಕ ಶ್ರಾದ್ಧ " ಅಗ್ನಿಕೂಟ " ಎಂಬ ನರಕದಿಂದ ಉದ್ಧಾರ ಮಾಡುತ್ತದೆ.

ಗುರು - ತಂದೆ - ತಾಯಿ - ಅನ್ನ ನೀಡಿದ ಸ್ವಾಮಿ ಇವರುಗಳಿಗೆ ದ್ರೋಹ ಮಾಡಿದವರು ಉರಿಯುತ್ತಿರುವ ಕೆಂಡ ರಾಶಿಗಳಲ್ಲಿ ಮುಳುಗುತ್ತಾರೆ. 10ನೇ ಮಾಸಿಕ ಶ್ರಾದ್ಧ ಮಾಡುವುದರಿಂದ ಇದಕ್ಕೆ ಸ್ವಲ್ಪ ತೃಪ್ತಿ.

ದೊದ್ದವರು - ಸ್ವಾಮಿಗಳು ಬಂದಾಗ ಅವರಿಗೆ ಸಿಗದೇ ತಲೆ ಮರೆಸಿಕೊಳ್ಳುವ ವ್ಯಕ್ತಿಗಳು ಕಾದಿರುವ ಮರಳಿನಿಂದ ತುಂಬಿರುವ ನರಕದಲ್ಲಿ ಬಿದ್ದು ಸುತ್ತು ಬೆಂದು ಹೋಗುತ್ತಾರೆ. 12ನೇ ಮಾಸಿಕ ಶ್ರಾದ್ಧದಿಂದ ಇದಕ್ಕೆ ಮುಕ್ತಿ.

ಸಪಿಂಡೀ ಕರಣವಾಗುವ ವರೆಗೂ ಪ್ರೇತತ್ವ ಹೋಗುವುದಿಲ್ಲ " ಯಾವತ್ ಸಪಿಂಡೀತಾ ನೈವಾ ತಾವತ್ ಪ್ರೇತಃ ಸ ತಿಷ್ಠತಿ "

ಧರ್ಮಿಷ್ಠರಾಗಿದ್ದರೂ ಸಪಿಂಡೀ ಆಗದೆ ಪ್ರೇತತ್ವ ತೊಲಗದು " ಅಪಿ ಧರ್ಮ ಸಮೋಪೇತಃ ತಪಸ್ಯಾಪಿ ಸಮನ್ವಿತಃ "

ವಿಶೇಷ ವಿಚಾರ :

ಮೃತನಾಗಿ ಪ್ರೇತತ್ವವನ್ನು ಹೊಂದಿದ ಚೇತನನೂ ಮೊದಲನೆಯ ದಿನ ಸ್ಥೂಲ ದೇಹವನ್ನು ಬಿಟ್ಟು ಕೇವಲ ಸೂಕ್ಷ್ಮ ದೇಹದಿಂದ ಕೂಡಿದವನಾಗಿ ಮೊದಲಿನ ೧೦ ದಿನಗಳಲ್ಲಿ ಕೊಡಲ್ಪಟ್ಟ ಪಿಂಡ ಬಲಿಗಳಿಂದ ಉತ್ಪನ್ನವಾದ ಪೂರ್ಣವಾದ ಪ್ರೇತ ದೇಹದಿಂದ ಕೂಡಿದವನಾಗಿ ಅತ್ಯಧಿಕವಾದ ಹಸಿವಿನಿಂದ " ಏಕೋದಿಷ್ಟ ಶಾದ್ಧಾನ್ನ " ಗಳನ್ನು ಭುಂಜಿಸಿ; ೧೨ನೇ ದಿನವೂ ಕರ್ತೃವಿನ ಮನೆಯ ಬಾಗಿಲಲ್ಲೇ ನಿಂತು ಅವನಿಂದ ಕೊಡಬಹುದಾದ ಶ್ರಾದ್ಧನ್ನವನ್ನು ಎದುರು ನೋಡುತ್ತಿರುತ್ತದೆ.

13ನೇ ದಿನದಿಂದ ಹಗಲೂ ರಾತ್ರಿ ಸೇರಿ ಪ್ರತಿದಿನವೂ 247 ಯೋಜನಗಳಷ್ಟು ನಡೆದು ವರ್ಷದ ಕೊನೆಯಲ್ಲಿ " ಶ್ರೀ ಯಮಧರ್ಮರಾಜ " ರ ಆಸ್ಥಾನವನ್ನು ಸೇರುತ್ತದೆ. ( ಮೃತ ವ್ಯಕ್ತಿಯ ವಾಯು ಶರೀರ ನಗ್ನವಾಗಿರುತ್ತದೆ )

ಇಡೀ ವರ್ಷ ಹಸಿವು ದಾಹಗಳಿರುವುದರಿಂದ ಅವುಗಳಿಗೆ ಪುತ್ರನು ವರ್ಷಾಬ್ಧಿಕ ಪರ್ಯಂತ ಒಂದು ವರ್ಷ ಕಾಲ ಪ್ರತಿನಿತ್ಯವೂ ತಪ್ಪದೆ ಪಾತ್ರೆ ಅಥವಾ ಉಡಕುಂಭ ಸಹಿತ ( ಸೋದಕುಂಭ ) ಶ್ರಾದ್ಧವನ್ನು ಮಾಡಲೇಬೇಕು.

ನನ್ನನ್ನು ( ಪ್ರೇತ ) ದುಃಖದಿಂದ ಪಾರು ಮಾಡುವ ಪುತ್ರರು ಅಥವಾ ಬಂಧುಗಳಾದರೂ ಇದ್ದಾರೆಯೇ ಎಂದು ಚಿಂತಿಸುತ್ತಾ " ಯಮಪುರಿ " ಗೆ ಕಾಲಿಡುತ್ತದೆ.  

ಆದ್ದರಿಂದ ಮೃತ ಜೀವಿಗೆ ಪುತ್ರಾದಿಗಳು ತಪ್ಪದೆ ಶ್ರದ್ಧೆಯಿಂದ ಶ್ರಾದ್ಧಾನವನ್ನೂ - ಜಲ ದಾನಗಳನ್ನು ಕೊಟ್ಟು ತಮ್ಮ ಪಿತೃಗಳನ್ನು ತೃಪ್ತಿ ಪಡಿಸಿ ಅವರ ಪರಮಾನುಗ್ರಹಕ್ಕೆ ಪಾತ್ರರಾಗುವುದು!!

** ಶ್ರಾದ್ಧಾಧಿಕಾರ ಗಂಡು ಮಕ್ಕಳಿಗೆ ಮಾತ್ರ!
by ಗುರು ವಿಜಯ ಪ್ರತಿಷ್ಠಾನ
*****

ಅಪುತ್ರಸ್ಯ ಗತಿರ್ನಾಸ್ತಿ " - ಒಂದು ಚಿಂತನೆ!!!

" ಅಪುತ್ರಸ್ಯ ಗತಿರ್ನಾಸ್ತಿ " - " ಮಕ್ಕಳಿಲ್ಲದವನಿಗೆ ಸದ್ಗತಿಯಿಲ್ಲ ". ಈ ಮಾತು ಪುರಾಣಗಳಲ್ಲಿ ಪ್ರಸಿದ್ಧ. " ತ್ರಾತಾ ಯಾ ಏವ ನರಕಾತ್ ಸಹಿ ಪುತ್ರನಾಮ " ಎಂದು ಸುಮಧ್ವವಿಜಯದಲ್ಲಿ ಹೇಳಿರುವಂತೆ " ಪುತ್ " ಯೆಂಬ ನರಕದಿಂದ ರಕ್ಷಿಸುವವನೇ " ಪುತ್ರ ".

ಪುತ್ರನಿಲ್ಲದವನು ಈ ನರಕದಿಂದ ಪಾರಾಗಲು ಸಾಧ್ಯವಿಲ್ಲ. ಸತ್ಪುತ್ರನನ್ನು ಪಡೆದಾಗ ಮಾತ್ರ " ಪಿತೃ ಋಣ " ದಿಂದ ಮುಕ್ತಿ.ಎಂದರೆ ಸಂತಾನವಿಲ್ಲದವನಿಗೆ " ಸದ್ಗತಿ " ಇಲ್ಲವೆಂದು ಶಾಸ್ತ್ರಗಳ ಅಭಿಪ್ರಾಯವಲ್ಲ. " ಸ್ವಕರ್ಮಣಾ ತಮಭ್ಯರ್ಚ ಸಿದ್ಧಿಂ ವಿಂದತಿ ಮಾನವಃ " ಎಂಬ ಶ್ರೀ ಕೃಷ್ಣ ಪರಮಾತ್ಮನ ಮಾತಿನಂತೆ ತನ್ನ ವರ್ಣಾಶ್ರಮಗಳಿಗೆ ವಿಹಿತವಾದ ಕರ್ತವ್ಯವನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡುವುದರಿಂದಲೇ ಮನುಷ್ಯನು " ಸದ್ಗತಿ " ಯನ್ನು ಹೊಂದುವನು.


ಜೀವನು ಮೋಕ್ಷವನ್ನು ಹೊಂದಲು ಮಕ್ಕಳು ಕಾರಣರಲ್ಲ. " ನಾನ್ಯಪಂಥಾವಿದ್ಯತೇsಯನಾಯ " ಶ್ರುತಿಯು ಇತರ ಮಾರ್ಗಗಳನ್ನು ನಿಷೇಧಿಸಿ ಕೇವಲ ತಾನು ಸಂಪಾದಿಸಿದ ಭಗವಂತನ ಜ್ಞಾನ, ಭಕ್ತಿ ಪ್ರಸಾದವೇ " ಮೋಕ್ಷ " ಕ್ಕೆ ಕಾರಣವೆಂದು ಸ್ಪಷ್ಟ ಪಡಿಸಿದೆ.


" ಐತರೇಯ ಭಾಷ್ಯ " ಹೇಳುವಂತೆ....


ದುರ್ಗಂಧಮಯವಾದ ನರಕದಿಂದ ರಕ್ಷಿಸುವವನು " ಜನಾರ್ದನನೇ ". ಆದ್ದರಿಂದ ಪುತ್ರನಲ್ಲಿದ್ದು " ಪುತ್ರ " ಶಬ್ದದಿಂದ ವಾಚ್ಯನಾಗಿರುವನು. ಇಂತಹಾ ಪರಮಾತ್ಮನ ಉಪಾಸನೆಯಿಂದಲೇ ನಾವು " ಪುತ್ " ಯೆಂಬ ನರಕದಿಂದ ಪಾರಾಗುವವು!


ಸ ಏವ ಪುತ್ರ ಸಂಸ್ಥಶ್ಚ ಪುತ್ರನಾಮಾ ಜನಾರ್ದನಃ ।

ತ್ರಾಣಾತ್ ಪೂತಿತ ಏವಾಸೌ ।।

ಯಾವ ಉದ್ಧೇಶದಿಂದ ಜೀವನು ಜನ್ಮ ತಾಳಿರುವನೋ ಆ ಉದ್ಧೇಶ ನೆರವೇರದೇ ಅವನಿಗೆ ಸದ್ಗತಿಯಿಲ್ಲ. ಆದ್ದರಿಂದಲೇ " ಪಾಂಡು ಚಕ್ರವರ್ತಿ " ಗೆ " ಬ್ರಹ್ಮ ಲೋಕ " ವನ್ನು ಕುರಿತು ತೆರಳಲು ಸಾಧ್ಯವಾಗಲಿಲ್ಲ. ಭೀಮಸೇನ - ಅರ್ಜುನ - ಧರ್ಮರಾಜ ಉತ್ತಮ ಮಕ್ಕಳನ್ನು ಪಡೆಯುವ ಭಾಗ್ಯ ಪಾಂಡು ಚಕ್ರವರ್ತಿಯದಾಗಿತ್ತು. ಇಂತಹಾ ಮಕ್ಕಳನ್ನು ಪಡೆಯದೇ ಅವನಿಗೆ ಸದ್ಗತಿಯಿಲ್ಲ...


ರುಕ್ಮಾಂಗದನ ಮಗ ಧರ್ಮಾಂಗದನಿಗೆ ಮಕ್ಕಳಿರಲಿಲ್ಲ. " ಏಕಾದಶೀ ವ್ರತಾಚರಣೆ " ಯ ಪುಣ್ಯದಿಂದ ಸದ್ಗತಿಯನ್ನು ಪಡೆದ. ತಂದೆ ತಾಯಿಯನ್ನು ಉತ್ತಮ ಲೋಕಕ್ಕೆ ಕರೆದೊಯ್ದ. ಈ ಪ್ರಸಂಗವನ್ನು " ಶ್ರೀಮದಾಚಾರ್ಯರು ಭಾಗವತ ತಾತ್ಪರ್ಯ ನಿರ್ಣಯ " ದಲ್ಲಿ ಉದಾಹರಿಸಿ ಮಕ್ಕಳನ್ನು ಪಡೆಯದಿದ್ದರೂ ಸದ್ಗತಿಯನ್ನು ಹೊಂದಲು ಸಾಧ್ಯವಿದೆ ಎಂದು ತಿಳಿಸಿರುವರು.


ಮಕ್ಕಳಿಲ್ಲದವನು ತನ್ನ ಧರ್ಮದ ಆಚರಣೆಯಿಂದ ಉತ್ತಮ ಲೋಕವನ್ನು ಹೊಂದುವನು.


" ಅನಪತ್ಯೋsಪಿ ಸದ್ಧರ್ಮಾ ಸಂಶಯಃ "


ಜರತ್ಕಾರುವು ತನ್ನ ವಂಶದ ಪಿತೃ ಪಿತಾಮಹರ ತೃಪ್ತಿಗಾಗಿ ಮಕ್ಕಳನ್ನು ಪಡೆದ. ಆ ಋಷಿ ಮದುವೆ ಆಗದಿದ್ದಲ್ಲಿ " ಆಸ್ತಿಕ " ನಂಥಹಾ ಉತ್ತಮ ಜ್ಞಾನಿ ಆ ವಂಶದಲ್ಲಿ ಹುಟ್ಟುವ ಅವಕಾಶವೇ ತಪ್ಪುತ್ತಿತ್ತು.


" ಮನುಸ್ಮೃತಿ " ಯಂತೆ...


ಪುನ್ನಾಮ್ನೋ ನರಕಸ್ಮಾತ್ ತ್ರಾಯತೇ ಪಿತರಂ ಸುತಃ ।

ತಸ್ಮಾತ್ಪುತ್ರ ಇತಿ ಪ್ರೋಕ್ತಃ ಸ್ವಯಮೇವ ಸ್ವಯಂಭುವಃ ।।
ನಿರಂತರ ಅಧ್ಯಯನದಿಂದ ಜ್ಞಾನ ಸಂಪಾದಿಸಿರುವ; ತಪಸ್ವಿಯಾದ; ವೇದಾಧ್ಯನದಲ್ಲೇ ಆಸಕ್ತನಾದ; ಭಗವಂತನಲ್ಲಿ ಸತತ ಧ್ಯಾನಶೀಲನಾದ; ತಂದೆ ತಾಯಿಗಳಲ್ಲಿ ಭಕ್ತಿ ಸಂಪನ್ನನಾದ; ಇಂದ್ರಿಯ ನಿಗ್ರಹಾದಿಗಳನ್ನು ಹೊಂದಿದವನೇ " ಸತ್ಪುತ್ರ " ಇಂಥಹಾ ಮಗನು ಮಾತ್ರ " ಪುತ್ " ಯೆಂಬ ನರಕದಿಂದ ತಂದೆ ತಾಯಿಯನ್ನು ರಕ್ಷಿಸುವವನು!

ಸನಕಾದ್ಯಾ ನಾರದಾಶ್ಚ ಋಭುರ್ಹಂಸೋsರುಣಿರ್ಯತಿಃ ।

ನೈತೇ ಗೃಹಾನ್ ಬ್ರಹ್ಮಸುತಾ ಹೃದಸನ್ನೂರ್ಧ್ವರೇತಸಃ ।।

ಶ್ರೀ ನಾರದರು, ಶ್ರೀ ಸನಕ ಸನಂದರೇ ಮೊದಲಾದ ಶ್ರೀ ಬ್ರಹ್ಮದೇವರ ಮಕ್ಕಳೂ ಗೃಹಸ್ಥಾಶ್ರಮವನ್ನು ಸ್ವೀಕರಿಸದೇ ಸಂನ್ಯಾಸಿಗಳಾಗಿ ಸದ್ಗತಿಯನ್ನು ಹೊಂದಿದವರು!!

ಶ್ರೀ ಭೀಷ್ಮಾಚಾರ್ಯರು ಬ್ರಹ್ಮಚರ್ಯ ವ್ರತದ ಪ್ರತಿಜ್ಞೆಯನ್ನು ಮಾಡಿದಾಗ ದೇವತೆಗಳೂ ಪುಷ್ಪ ವೃಷ್ಟಿಯನ್ನು ಸುರಿಸಿ ಸ್ವಾಗತಿಸಿದ್ದಾರೆ. ಜ್ಞಾನ ಭಕ್ತಿಗಳಿಂದಲೇ ಶ್ರೀ ಭೀಷ್ಮಾಚಾರ್ಯರು ಸದ್ಗತಿಯನ್ನು ಹೊಂದಿದವರು.

ಗೃಹಸ್ಥಾಶ್ರಮಿಯು ಸಂತಾನವನ್ನು ಪಡೆಯುವುದು ಕರ್ತವ್ಯವಾಗಿದೆ. ಆದರೆ ಪಡೆಯದಿದ್ದರೂ ಅನರ್ಥ ಸಂಭವಿಸಲಾರದು. " ಅಪುತ್ರಸ್ಯ ಗತಿರ್ನಾಸ್ತಿ " ಯೆಂಬ ಶಾಸ್ತ್ರ ವಾಕ್ಯವು ಪ್ರಾಶಸ್ತ್ಯ ಬೋಧಕವಾಗಿದೆ. ಮಕ್ಕಳನ್ನು ಪಡೆಯದಿದ್ದರೆ ಸದ್ಗತಿಯೇ ಇಲ್ಲವೆಂದು ಈ ವಾಕ್ಯದ ಅಭಿಪ್ರಾಯವಲ್ಲ!!


ಸರ್ವೇಷಾಂ ಪುತ್ರ ಹೀನಾನಾಂ ಮಿತ್ರಃ ಪಿಂಡ ಪ್ರದಾಪಯೇತ್ ।

ಕ್ರಿಯಾಲೋಪೋ ನ ಕರ್ತವ್ಯಃ ಸರ್ವಭಾವೇ ಪುರೋಹಿತಃ ।।

ಸ್ನೇಹಿತನೂ ಪಿಂಡಾಧಿಕಾರಿಯಾಗುವನು. ಶಿಷ್ಯರು ಗುರುಗಳಿಗೆ ಅಂತ್ಯಕ್ರಿಯೆ, ಶ್ರಾದ್ಧಾದಿಗಳನ್ನು ಮಾಡಬಹುದು. ಯಾರೂ ಇಲ್ಲದಿದ್ದಾಗ ಪುರೋಹಿತರು ಅಧಿಕಾರಿಗಳಾಗುವರು.


ಅನಾಥ ಪ್ರೇತ ಸಂಸ್ಕಾರಾತ್ ಕೋಟಿ ಯಜ್ಞ ಫಲಂ ಲಭೇತ್ ।।


ಅನಾಥವಾದ ಪ್ರೇತ ಸಂಸ್ಕಾರದಿಂದ ಕೋಟಿ ಯಜ್ಞದ ಫಲವು ಪ್ರಾಪ್ತವಾಗುವುದು


-ಪ್ರಶಾಂತಭಟ್ ಕೋಟೇಶ್ವರ 

********

ಶ್ರೀಮನ್ನಾರಾಯಣಾಯ ನಮ:  ಸಂಚಿಕೆ - 539 ತೃತೀಯಾಂಶ:  ತ್ರಯೋದಶೋಧ್ಯಾಯ:

ನಾಂದೀಶ್ರಾದ್ಧ, ಪ್ರೇತಕರ್ಮ, ಪಿತೃಶ್ರಾದ್ಧಾದಿಗಳ ವಿಚಾರ.
********

ಔರ್ವ ಉವಾಚ:

ಸಚೈಲಸ್ಯ ಪಿತು: ಸ್ನಾನಂ ಜಾತೇ ಪುತ್ರೇ ವಿಧೀಯತೇ|
ಜಾತಕರ್ಮ ತದಾ ಕುರ್ಯಾತ್ ಶ್ರಾದ್ಧಾಮಭ್ಯುದಯೇ ಚ ಯತ್||1||

ಯುಗ್ಮಾನ್ ದೇವಾಂಶ್ಚ ಪಿತ್ರ್ಯಾಂಶ್ಚ ಸಮ್ಯಕ್ಸವ್ಯಕ್ರಮಾದ್ ದ್ವಿಜಾನ್|
ಪೂಜಯೇದ್ಭೋಜಯೇಚ್ಚೈವ ತನ್ಮನಾ ನಾನ್ಯಮಾನಸ:||2||

ದಧ್ಯಕ್ಷತೈಸ್ಸಬದರೈ: ಪ್ರಾಙ್ಮುಖೋದಙ್ಮುಖೋಪಿವಾ|
ದೇವತೀರ್ಥೇನ ವೈ ಪಿಂಡಾನ್ ದದ್ಯಾತ್ಕಾಯೇನ ವಾ ನೃಪ||3||

ನಾಂದೀಮುಖ: ಪಿತೃಗಣಸ್ತೇನ ಶ್ರಾದ್ಧೇನ ಪಾರ್ಥಿವ|
ಪ್ರೀಯತೇ ತತ್ತು ಕರ್ತವ್ಯಂ ಪುರುಷೈಸ್ಸರ್ವವೃದ್ಧಿಷು||4||

ಕನ್ಯಾಪುತ್ರವಿವಾಹೇಷು ಪ್ರವೇಶೇಷು ಚ ವೇಶ್ಮನ:|
ನಾಮಕರ್ಮಣಿ ಬಾಲಾನಾಂ ಚೂಡಾಕರ್ಮಾದಿಕೇ ತಥಾ||5||

ಸೀಮಂತೋನ್ನಯನೇ ಚೈವ ಪುತ್ರಾದಿಮುಖದರ್ಶನೇ|
ನಾಂದೀಮುಖಂ ಪಿತೃಗಣಂ ಪೂಜಯೇತ್ ಪ್ರಯತೋ ಗೃಹೀ||6||

ಪರಾಶರಮುನಿಗಳು ಹೇಳಿದರು:-

ಮತ್ತೆ ಔರ್ವನು ಹೇಳಿದ್ದೇನೆಂದರೆ:

"ಪುತ್ರನು ಹುಟ್ಟಿದಾಗ ತಂದೆಯು ಸಚೇಲಸ್ನಾನ ಮಾಡಬೇಕು. ಅನಂತರ ಜಾತಕರ್ಮ ಸಂಸ್ಕಾರವನ್ನೂ ಅಭ್ಯುದಯಿಕಶ್ರಾದ್ಧವನ್ನೂ ಮಾಡತಕ್ಕದ್ದು.

ಆತನು ತನ್ಮಯನಾಗಿ ಏಕಾಗ್ರಚಿತ್ತದಿಂದ ದೇವಗಣ, ಪಿತೃಗಣಗಳೆರಡನ್ನೂ ಪ್ರದಕ್ಷಿಣ ಕ್ರಮದಿಂದ ಪೂಜಿಸತಕ್ಕದ್ದಲ್ಲದೆ ಬ್ರಾಹ್ಮರಿಗೆ ಭೋಜನವನ್ನು ಮಾಡಿಸಬೇಕು.

ದಧಿ, ಅಕ್ಷತೆ, ಬದರೀಫಲಗಳಿಂದ ಕೂಡಿದ ಪಿಂಡಗಳನ್ನು ಪೂರ್ವಾಭಿಮುಖನಾಗಿ ಅಥವಾ ಉತ್ತರಾಭಿಮುಖನಾಗಿ ಕುಳಿತು ದೇವತೀರ್ಥದಿಂದಲೋ ಅಥವಾ ಪ್ರಾಜಾಪತ್ಯತೀರ್ಥದಿಂದಲೋ ಹಾಕಬೇಕು.

ಈ ಶ್ರಾದ್ಧದಿಂದ ನಾಂದೀಮುಖ ಪಿತೃಗಣವು ಸಂತೃಪ್ತವಾಗುತ್ತದೆ. ಆದ್ದರಿಂದ ಎಲ್ಲ ಅಭ್ಯುದಯ ಕಾರ್ಯಗಳಲ್ಲಿಯೂ ಈ ನಾಂದೀಶ್ರಾದ್ಧವನ್ನು ಮಾಡಬೇಕು.

ಮಗಳ ಮತ್ತು ಮಗನ ವಿವಾಹ ಕಾರ್ಯದಲ್ಲಿ, ನೂತನ ಗೃಹಪ್ರವೇಶದಲ್ಲಿ, ಮಕ್ಕಳ ನಾಮಕರಣದಲ್ಲಿ, ಚೌಲ ಮುಂತಾದ ಕಾರ್ಯದಲ್ಲಿ, ಸೀಮಂತದಲ್ಲಿ, ಪುತ್ರನ ಪ್ರಥಮ ದರ್ಶನದಲ್ಲಿ ಗೃಹಸ್ಥನು ನಾಂದೀಮುಖಪಿತೃಗಣವನ್ನು ಶುಚಿಯಾಗಿ ಪೂಜಿಸತಕ್ಕದ್ದು.

********

ಪಿತೃಪೂಜಾಕ್ರಮ: ಪ್ರೋಕ್ತೋ ವೃದ್ಧಾವೇಷ ಸನಾತನ:|
ಶ್ರೂಯತಾಮವನೀಪಾಲ ಪ್ರೇತಕರ್ಮಕ್ರಿಯಾವಿಧಿ:||7||

ಪ್ರೇತದೇಹಂ ಶುಭೈ: ಸ್ನಾನೈ: ಸ್ನಾಪಿತಂ ಸ್ರಗ್ವಿಭೂಷಿತಮ್|
ದಗ್ಧ್ವಾ ಗ್ರಾಮದ್ಬಹಿ: ಸ್ನಾತ್ವಾ ಸಚೈಲಸ್ಸಲಿಲಾಶಯೇ||8||

ಯತ್ರ ತತ್ರ ಸ್ಥಿತಾಯೈತದಮುಕಾಯೇತಿ ವಾದಿನ:|
ದಕ್ಷಿಣಾಭಿಮುಖಾ ದದ್ಯುರ್ಬಾಂಧವಾಸ್ಸಲಿಲಾಂಂಜಲೀಮ್||9||

ಪ್ರವಿಷ್ಟಾಶ್ಚ ಸಮಂ ಗೋಭಿರ್ಗ್ರಾಮಂ ನಕ್ಷತ್ರದರ್ಶನೇ|
ಕಟಕರ್ಮ ತತ: ಕುರ್ಯುರ್ಭೂಮೈ ಪ್ರಸ್ತರಶಾಯಿನೇ||10||

ಅಭ್ಯುದಯ ಕಾಲದಲ್ಲಿ ಪಿತೃಗಳನ್ನು ಹೇಗೆ ಪೂಜಿಸಬೇಕೆಂಬ ಸನಾತನವಾದ ಕ್ರಮವನ್ನು ಹೇಳಿದ್ದಾಯಿತು.
ಭೂಪತಿ - ಸಗರ, ಈಗ ಪ್ರೇತಕರ್ಮದ ವಿಧಿ ಹೇಗೆಂಬುದನ್ನು ಕೇಳು.

ಪ್ರೇತದೇಹಕ್ಕೆ (ಶವಕ್ಕೆ) ಶುಚಿಯಾದ ನೀರಿನಿಂದ ಸ್ನಾನಮಾಡಿಸಿ ಹೂಮಾಲೆಯಿಂದ ಅಲಂಕರಿಸಿ, ಗ್ರಾಮದ ಹೊರಗೆ ತೆಗೆದುಕೊಂಡು ದಹನ ಮಾಡತಕ್ಕದ್ದು.
ಅನಂತರ ಜಲಾಶಯದಲ್ಲಿ ಸಚೇಲಸ್ನಾನಮಾಡತಕ್ಕದ್ದು.

"ಈ ನಾಮಗೋತ್ರಗಳುಳ್ಳ ಪ್ರೇತನು ಎಲ್ಲಿಯೇ ಇರಲಿ, ಅವನಿಗಾಗಿ ಈಜಲಾಂಜಲಿಯಿ ಅರ್ಪಿತ" ಎಂದು ಹೇಳುತ್ತಾ ಬಾಂಧವರು ದಕ್ಷಿಣಾಭಿಮುಖವಾಗಿ ತರ್ಪಣವನ್ನು ಕೊಡಬೇಕು.

ನಕ್ಷತ್ರಗಳು ಕಾಣಿಸಿಕೊಂಡಮೇಲೆ ಗೋವುಗಳೊಡನೆ ಗ್ರಾಮಕ್ಕೆ ಬಂದು ಅಶೌಚಕೃತ್ಯವನ್ನು ಆಚರಿಸಬೇಕು.
ನೆಲದ ಮೇಲೆ ಚಾಪೆಯನ್ನು ಹಾಸಿ ಮಲಗತಕ್ಕದ್ದು.
********

ನಾಂದೀಶ್ರಾದ್ಧ, ಪ್ರೇತಕರ್ಮ, ಪಿತೃಶ್ರಾದ್ಧಾದಿಗಳ ವಿಚಾರ.
********
ದಾತವ್ಯೋನುದಿನಂ ಪಿಂಡ: ಪ್ರೇತಾಯ ಭುವಿ ಪಾರ್ಥಿವ|
ದಿವಾ ಚ ಭಕ್ತಂ ಭೋಕ್ತವ್ಯಮಮಾಂಸಂ ಮನುಜರ್ಷಭ||11||

ದಿನಾನಿ ತಾನು ಚೇಚ್ಛಾತ: ಕರ್ತವ್ಯಂ ವಿಪ್ರಬೋಜನಮ್|
ಪ್ರೇತಾ ಯಾಂತಿ ತಥಾ ತೃಪ್ತಿಂ ಬಂಧುವರ್ಗೇಣ ಭುಂಜತಾ||12||

ಪ್ರಥಮೇಹ್ನಿ ತೃತೀಯೇ ಚ ಸಪ್ತಮೇ ನವಮೇ ತಥಾ|
ವಸ್ತ್ರತ್ಯಾಗಬಹಿಸ್ಸ್ನಾನೇ ಕೃತ್ವಾ ದದ್ಯಾತ್ತಿಲೋದಕಮ್||13||

ಚತುರ್ಥೇಹ್ನಿ ಚ ಕರ್ತವ್ಯಂ ತಸ್ಯಾಸ್ಥಿಚಯನಂ ನೃಪ|
ತದೂರ್ಧ್ವಮಂಗಸಂಸ್ಪರ್ಶಸ್ಸಪಿಂಡಾನಾಮಪೀಷ್ಯತೇ||14||

ಯೋಗ್ಯಾಸ್ಸರ್ವಕ್ರಿಯಾಣಾಂ ತು ಸಮಾನಸಲಿಲಾಸ್ತಥಾ|
ಅನುಲೇಪನಪುಷ್ಪಾದಿಭೋಗಾದನ್ಯತ್ರ ಪಾರ್ಥಿವ||15||

ಪೃಥಿವೀಪತಿ, ಪ್ರತಿನಿತ್ಯವೂ ಪ್ರೇತವನ್ನು ಉದ್ದೇಶಿಸಿ ನೆಲದ ಮೇಲೆ ಪಿಂಡವನ್ನು ಹಾಕುತ್ತಿರಬೇಕು.
ಹಗಲು ಮಾತ್ರ ಮಾಂಸರಹಿತವಾದ ಅನ್ನವನ್ನು ತಿನ್ನಬಹುದು.

ಆ ದಿನಗಳಲ್ಲಿ ಬ್ರಾಹ್ಮಣರು ಅಪೇಕ್ಷಿಸಿದರೆ ಭೋಜನವನ್ನು ಮಾಡಿಸಬಹುದು.
ಆಗ ಬಂಧುಗಳು ಊಟಮಾಡುತ್ತಿದ್ದರೆ ಮೃತಾತ್ಮರಿಗೆ ತೃಪ್ತಿಯಾಗುತ್ತದೆ.

ಒಂದು, ಮೂರು, ಏಳು ಮತ್ತು ಒಂಬತ್ತನೆಯ ದಿನಗಳಲ್ಲಿ ಹೊರಗಡೆ ಸ್ನಾನಮಾಡಿ ಉಟ್ಟ ವಸ್ತ್ರವನ್ನು ತ್ಯಜಿಸಿಬಿಡಬೇಕು.
ಅನಂತರ ಬೇರೆ ವಸ್ತ್ರವನ್ನು ಉಟ್ಟು ಪ್ರೇತನಿಗೆ ತಿಲೋದಕವನ್ನು ಕೊಡಬೇಕು.

ನಾಲ್ಕನೆಯ ದಿನ ಅಸ್ಥಿಸಂಚಯನವನ್ನು ಮಾಡಿದ ಮೇಲೆ ಸಪಿಂಡರ ಅಂಗಸ್ಪರ್ಶವನ್ನು ಮಾಡಬಹುದು. (ಅಲ್ಲಿಯವರೆಗೆ ಸಪಿಂಡರನ್ನೂ ಮುಟ್ಟಬಾರದು.)

ಅನಂತರ ಸಮಾನೋದಕರಿಗೆ, ಗಂಧಲೇಪನ ಪುಷ್ಪಧಾರಣಾದಿಗಳನ್ನು ಬಿಟ್ಟು, ಸಂಧ್ಯಾವಂದನಾದಿ ಕ್ರಿಯೆಗಳಲ್ಲಿ ಯೋಗ್ಯತೆ ಬರುತ್ತದೆ..
********

ಕುಟುಂಭವೊಂದರಲ್ಲಿ ಮೂಲಪುರುಷನನ್ನು ಗುರುತಿಸಿದರೆ, ಅಲ್ಲಿಂದ ಏಳು ತಲೆಯವರೆಗಿನ ಜನರು ಸಪಿಂಡರು.

ಅನಂತರದವರು ಮೂಲಪುರುಷನ ಜನ್ಮನಾಮಗಳು ಗೊತ್ತಿರುವವರೆಗೆ ಸಮಾನೋದಕರೆನಿಸುತ್ತಾರೆ.

ಅನಂತರ ಸಗೋತ್ರರು ಎಂದು ಧರ್ಮಶಾಸ್ತ್ರದಲ್ಲಿ ವಿವರಣೆಯಿದೆ.

******

ಶಯ್ಯಾಸನೋಪಭೋಗಶ್ಚ ಸಪಿಂಡಾನಾಮಪೀಷ್ಯತೇ|
ಭಸ್ಮಾಸ್ಥಿಚಯನಾದೂರ್ಧ್ವಂ ಸಂಯೋಗೋ ನ ತು ಯೋಷಿತಾಮ್||16||

ಬಾಲೇ ದೇಶಾಂತರಸ್ತೇ ಚ ಪತಿತೇ ಚ ಮುನೌ ಮೃತೇ|
ಸದ್ಯಶ್ಯೋಚಂ ತಥೇಚ್ಛಾತೋ ಜಲಾಗ್ನ್ಯುದ್ಬಂಧನಾದಿಷು||17||

ಮೃತಬಂಧೋರ್ದಶಾಹಾನಿ ಕುಲಸ್ಯಾನ್ನಂ ನ ಭುಜ್ಯತೇ|
ದಾನಂ ಪ್ರತಿಗ್ರಹೋ ಹೋಮ: ಸ್ವಾಧ್ಯೈಾಯಶ್ಚ ನಿವರ್ತತೇ||18||

ವಿಪ್ರಸ್ಯೈತದ್ ದ್ವಾದಶಾಹಂ ರಾಜನ್ಯಸ್ಯಾಪ್ಯಶೌಚಕಮ್|
ಅರ್ಧಮಾಸಂ ತು ವೈಶ್ಯಸ್ಯ ಮಾಸಂ ಶೂದ್ರಸ್ಯ ಶುದ್ಧಯೇ||19||

ಬೂದಿ ಮತ್ತು ಅಸ್ಥಿಗಳ ಸಂಚಯನವಾದ ಮೇಲೆ ಸಪಿಂಡರು ಶಯನ, ಆಸನಾದಿಗಳನ್ನು ಬಳಸಬಹುದು. ಆದರೆ ಸ್ತ್ರೀಸಂಗವನ್ನು ಮಾಡಕೂಡದು. 

ಬಾಲಕ, ದೇಶಾಂತರದಲ್ಲಿ ಇರತಕ್ಕವನು, ಪತಿತ, ಸಂನ್ಯಾಸಿ - ಇವರು ಮೃತರಾದರೆ ಸದ್ಯ:ಶೌಚವು (ಸ್ನಾನದಿಂದ ಶುದ್ಧಿ) ವಿಹಿತವಾಗಿದೆ. 
ಹಾಗೆಯೇ ನೀರು, ಬೆಂಕಿ, ನೇಣುಹಾಕಿಕೊಳ್ಳುವುದು - ಮೊದಲಾದ್ದರಿಂದ ಉದ್ದೇಶಪೂರ್ವಕ ಆತ್ಮಹತ್ಯೆ ಮಾಡಿಕೊಂಡಾಗಲೂ ಸದ್ಯ:ಶೌಚ. 

ಯಾವಾತನ ಬಂಧುವು ಮೃತನಾಗಿದ್ದಾನೋ ಅವನ ಕುಟುಂಬದ ಅನ್ನವು ಹತ್ತು ದಿನಗಳವರೆಗೆ ಇತರರಿಗೆ ತಿನ್ನಲು ಯೋಗ್ಯವಾದ್ದಲ್ಲ. ದಾನ, ಪ್ರತಿಗ್ರಹ, ಹೋಮ, ವೇದಾಧ್ಯಯನ - ಇವೆಲ್ಲವೂ ಮೃತಬಂಧುವಿಗೆ (ಅಶೌಚಕಾಲದಲ್ಲಿ) ಇರುವುದಿಲ್ಲ. 

ಹತ್ತು ದಿನ ಅಶೌಚವೆನ್ನುವುದು ಬ್ರಾಹ್ಮಣನಿಗೆ ಸಂಬಂಧಿಸಿದ್ದು. 
ಕ್ಷತ್ರಿಯನಿಗೆ ಹನ್ನೆರಡು ದಿನ ಅಶೌಚ. 
ವೈಶ್ಯನಿಗೆ ಅರ್ಧಮಾಸ ಅಶೌಚ. 
ಶೂದ್ರನಿಗೆ ಶುದ್ಧಿಯಾಗಲು ಒಂದು ತಿಂಗಳು ಅಶೌಚವಿರುತ್ತದೆ. 

*******
ಅಯುಜೋ ಭೋಜಯೇತ್ಕಾಮಂ ದ್ವಿಜಾನಂತೇ ತತೋ ದಿನೇ|
ದದ್ಯಾದ್ದರ್ಭೇಷು ಪಿಂಡಂ ಚ ಪ್ರೇತಯೋಚ್ಛಿಷ್ಟಸನ್ನಿಧೌ||20||

ವಾರ್ಯಾಯುಧಪ್ರತೋದಾಸ್ತು ದಂಡಶ್ಚ ದ್ವಿಜಭೋಜನಾತ್|
ಸ್ಪ್ರಷ್ಟವ್ಯೋನಂತರಂ ವರ್ಣೈ: ಶುದ್ಧ್ಯೇರನ್ ತೇ ತತ: ಕ್ರಮಾತ್||21||

ತತ: ಸ್ವವರ್ಣಧರ್ಮಾ ಯೇ ವಿಪ್ರಾದೀನಾಮುದಾಹೃತಾ:|
ತಾನ್ಕುರ್ವೀತ ಪುಮಾನ್ ಜೀವೇನ್ನಿಜಧರ್ಮಾರ್ಜನೈಸ್ತಥಾ||22||

ಮೃತಾಹನಿ ಚ ಕರ್ತವ್ಯಮೇಕೋದ್ದಿಷ್ಟಮತ: ಪರಮ್|
ಆಹ್ವಾನಾದಿಕ್ರಿಯೇದೈವನಿಯೋಗರಹಿತಂ ಹಿ ತತ್||23||

ಅಶೌಚಕಾಲವು ಕಳೆದ ದಿನ ಬೆಸಸಂಖ್ಯೆಯ (1,3,5- ಇತ್ಯಾದಿ.,) ಬ್ರಾಹ್ಮಣರಿಗೆ ಭೋಜನ ಮಾಡಿಸಬೇಕು. 
ಉಚ್ಛಿಷ್ಟದ ಬಳಿ ದರ್ಬೆಗಳ ಮೇಲೆ ಪ್ರೇತವನ್ನು ಉದ್ದೇಶಿಸಿ ಪಿಂಡಗಳನ್ನು ಹಾಕಬೇಕು. (ಇದು ಏಕೋದ್ದಿಷ್ಟಶ್ರಾದ್ಧ)

ಅಶೌಚವು ಕಲೆದ ಮೇಲೆ ಬ್ರಾಹ್ಮಣ ಭೋಜನಾ ನಂತರ ನಾಲ್ಕು ವರ್ಣದವರೂ ಕ್ರಮವಾಗಿ ಜಲ, ಆಯುಧ, ಕೊರಡೆ (ಚಾಟಿ), ದಂಡ - ಇವನ್ನು ಮುಟ್ಟಬೇಕು. 
ಆಗ ಇವರೆಲ್ಲರೂ ಶುದ್ಧರಾಗುತ್ತಾರೆ. 

ಅನಂತರ ಬ್ರಾಹ್ಮಣಾದಿಗಳಿಗೆ ಯಾವ ಯಾವ ವರ್ಣದರ್ಮಗಳು ಹೇಳಲ್ಪಟ್ಟಿವೆಯೋ ಅವುಗಳನ್ನು ಆಚರಿಸಬೇಕಲ್ಲದೆ, ತಮ್ಮ ತಮ್ಮ ಧರ್ಮಾನುಗುಣವಾಗಿ ಆರ್ಜಿಸಿ ಜೀವಿಸಬೇಕು. 

ಅಲ್ಲಿಂದ ಮುಂದೆ ಪ್ರತಿಮಾಸವೂ ಮೃತತಿಥಿಯಲ್ಲಿ ಏಕೋದ್ದಿಷ್ಟಶ್ರಾದ್ಧವನ್ನು ಮಾಡತಕ್ಕದ್ದು. ಅದರಲ್ಲಿ ಆವಹನಾದಿಗಳೂ ವಿಶ್ವೇದೇವರ ಸಾಂನಿಧ್ಯವೂ ಇರುವುದಿಲ್ಲ. 


********
ಏಕೋರ್ಘ್ಯಸ್ತತ್ರ ದಾತವ್ಯಸ್ತಥೈವೈಕಪವಿತ್ರಕಮ್|
ಪ್ರೇತಾಯ ಪಿಂಡೋ ದಾತವ್ಯೋ ಭುಕ್ತವತ್ಸು ದ್ವಿಜಾತಿಷು||24||

ಪ್ರಶ್ನಶ್ಚ ತತ್ರಾಭಿರತಿರ್ಯಜಮಾನೈರ್ದ್ವಿಜನ್ಮನಾಮ್|
ಅಕ್ಷಯ್ಯಮಮುಕಸ್ಯೇತಿ ವಕ್ತವ್ಯಂ ವಿರತೌ ತಥಾ||25||

ಏಕೋದ್ದಿಷ್ಟಮಯೋ ಧರ್ಮ ಇತ್ಥಾಮಾವತ್ಸರಾತ್ಸ್ಮೃತ:|
ಸಪಿಂಡೀಕರಣಂ ತಸ್ಮಿನ್ಕಾಲೇ ರಾಜೇಂದ್ರ ತಚ್ಛೃಣು||26||

ಏಕೋದ್ದಿಷ್ಟವಿಧಾನೇನ ಕಾರ್ಯಂ ತದಪಿ ಪಾರ್ಥಿವ|
ಸಂವತ್ಸರೇಥ ಷಷ್ಠೇ ವಾ ಮಾಸೇ ವಾ ದ್ವಾದಶೇಹ್ನಿ ತತ್||27||

ಪ್ರತಿಮಾಸವೂ ಮೃತತಿಥಿಯಲ್ಲಿ ಏಕೋದ್ದಿಷ್ಟಶ್ರಾದ್ಧವನ್ನು ಮಾಡುವಾಗ ಒಂದೇ ಅರ್ಘ್ಯ, ಒಂದೇ ದರ್ಬೆಯ ಪವಿತ್ರವಿರುತ್ತದೆ. 
ಬ್ರಾಹ್ಮಣರು ಉಂಡಮೇಲೆ ಒಂದು ಪಿಂಡವನ್ನು ಹಾಕತಕ್ಕದ್ದು. 

ವಿಪ್ರವಿಸರ್ಜನ ಕಾಲದಲ್ಲಿ ಯಜಮಾನನು "ಅಭಿರಮ್ಯತಾಂ" ಎಂದೂ ವಿಪ್ರರು "ಅಭಿರತಾ:ಸ್ಮ:" ಎಂದೂ ಹೇಳಬೇಕು. 
ಪಿಂಡದಾನವಾದ ಮೇಲೆ "ಅಮುಕಸ್ಯೇದಮಕ್ಷಯ್ಯಮುಪತಿಷ್ಠತಾಂ" ಎಂದು ಹೇಳತಕ್ಕದ್ದು. 

ಈ ಪ್ರಕಾರ ಒಂದು ವರ್ಷ ಕಳೆಯುವವರೆಗೆ ಏಕೋದ್ದಿಷ್ಟವನ್ನು ಮಾಡುವುದು ವಿಹಿತವಾದ ಧರ್ಮ. 
ರಾಜೇಂದ್ರ-ಸಗರ, ಸಪಿಂಡೀಕರಣದ ವಿಧಾನವನ್ನು ಕೇಳು. 

ಸಪಿಂಡೀಕರಣವನ್ನೂ ಸಹ ಒಂದು ವರ್ಷವಾದ ಮೇಲೆ, ಅಥವಾ ಆರು ತಿಂಗಳಾದ ಮೇಲೆ, ಅಥವಾ ಹನ್ನೆರಡನೆಯ ದಿನದಲ್ಲಿ ಏಕೋದಿಷ್ಟ ವಿಧಾನದಂತೆಯೇ ಮಾಡತಕ್ಕದ್ದು. 

*******

ತಿಲಗಂಧೋದಕೈರ್ಯುಕ್ತಂ ತತ್ರ ಪಾತ್ರಚತುಷ್ಟಯಮ್|
ಪಾತ್ರಂ ಪ್ರೇತಸ್ಯ ತತ್ರೈಕಂ ಪೈತ್ರಂ ಪಾತ್ರತ್ರಯಂ ತಥಾ||28||

ಸೇಚಯೇತ್ಪಿತೃಪಾತ್ರೇಷು ಪ್ರೇತಪಾತ್ರಂ ತತಸ್ತ್ರಿಷು|
ತತ: ಪಿತೃತ್ವಮಾಪನ್ನೇ ತಸ್ಮಿನ್ ಪ್ರೇತೇ ಮಹೀಪತೇ||29||

ಶ್ರಾದ್ಧಧರ್ಮೈರಶೇಷೈಸ್ತು ತತ್ಪೂರ್ವಾನರ್ಚಯೇತ್ಪಿತೃನ್|
ಪುತ್ರ: ಪೌತ್ರ: ಪ್ರಪ್ರೌತ್ರೋ ವಾ ಭ್ರಾತಾ ವಾ ಭ್ರಾತೃಸಂತತಿ:||30||

ಸಪಿಂಡಸಂತತಿರ್ವಾಪಿ ಕ್ರಿಯಾರ್ಹೋ ನೃಪ ಜಾಯತೇ|
ತೇಷಾಮಭಾವೇ ಸರ್ವೇಷಾಂ ಸಮಾನೋದಕಸಂತತಿ:||31||

ಮಾತೃಪಕ್ಷಸಪಿಂಡೇನ ಸಂಬದ್ಧಾ ಯೇ ಜಲೇನ ವಾ|
ಕುಲದ್ವಯೇಪಿ ಚೋಚ್ಚಿನ್ನೇ ಸ್ತ್ರೀಭಿ: ಕಾರ್ಯಾ: ಕ್ರಿಯಾ ನೃಪ||32||

ಸಪಿಂಡೀಕರನವನ್ನು ಏಕೋದ್ದಿಷ್ಟ ವಿಧಾನದಂತೆಯೇ ಮಾಡುವಾಗ ಎಳ್ಳು, ಗಂಧ, ಜಲಗಳಿಂದ ತುಂಬಿದ ನಾಲ್ಕು ಪಾತ್ರೆಗಳನ್ನು ಇಡಬೇಕು.  ಅವುಗಳಲ್ಲಿ ಒಂದು ಪ್ರೇತನಿಗಾಗಿ. ಉಳಿದ ಮೂರು ಅವನ ಹಿಂದಿನ ಪಿತೃಗಳಿಗಾಗಿ. 

ಆಮೇಲೆ ಪ್ರೇತಪಾತ್ರೆಯಲ್ಲಿ ಇರುವುದನ್ನು ಪಿತೃಪಾತ್ರೆಗಳಿಗೆ ತುಂಬಬೇಕು. 
ಆಗ ಪ್ರೇತನಿಗೆ ಪಿತೃಸ್ಥಾನವು ದೊರಕುತ್ತದೆ. 

ಹೀಗೆ ಪ್ರೇತನು ಪಿತೃತ್ವವನ್ನು ಪಡೆದಮೇಲೆ ಆ ಪಿತೃವಿನಿಂದಾರಂಭಿಸಿ ಹಿಂದಿನ ಪಿತೃಗಣವನ್ನು ಶ್ರಾದ್ಧವಿಧಿಗಳಿಂದ ಅರ್ಚಿಸಬೇಕು. 
ಈ ಶ್ರಾದ್ಧವನ್ನು ಮಾಡಲು ಪುತ್ರ, ಪೌತ್ರ, ಪ್ರಪೌತ್ರ, ಭ್ರಾತಾ, ಭ್ರಾತೃಪುತ್ರ - ಇವರು ಕ್ರಮವಾಗಿ ಅಧಿಕಾರಿಗಳು. 

ಇವರಿಲ್ಲದಿದ್ದರೆ ಸಪಿಂಡರ ಸಂತತಿಯವನು ಕ್ರಿಯೆಗೆ ಅರ್ಹನಾಗುತ್ತಾನೆ. 
ಇವರಾರೂ ಇಲ್ಲದಿದ್ದರೆ ಸಮಾನೋದಕ ಸಂತತಿಯವರು ಮಾಡಬೇಕು. 

ಇವರಾರೂ ಇಲ್ಲದಿದ್ದರೆ ಮೃತನ ಮಾತೃಪಕ್ಷದ ಸಪಿಂಡರೂ ಸಮಾನೋದಕರೂ ಕ್ರಿಯೆಯನ್ನು ನಡೆಸಬಹುದು. 
ಪಿತೃಕುಲದವರೂ ಮಾತೃಕುಲದವರೂ ಇಲ್ಲವಾದರೆ ಸ್ತ್ರೀಯರು ಈ ವಿಧಿಗಳನ್ನು ಮಾಡಬಹುದು. 
********

ಸಂಘಾತಾಂತರ್ಗತೈರ್ವಾಪಿ ಕಾರ್ಯಾ: ಪ್ರೇತಸ್ಯ ಚ ಕ್ರಿಯಾ:|
ಉತ್ಸನ್ನಬಂಧುರಿಕ್ಥಾದ್ವಾ ಕಾರಯೇದವನೀಪತಿ:||33||

ಪೂರ್ವಾ: ಕ್ರಿಯಾ ಮಧ್ಯಮಾಶ್ಚ ತಥಾ ಚೈವೋತ್ತರಾ: ಕ್ರಿಯಾ:|
ವಿಪ್ರಕಾರಾ: ಕ್ರಿಯಾ: ಸರ್ವಾಸ್ತಾಸಾಂ ಭೇದಂ ಶೃಣುಷ್ವ ಮೇ||34||

ಆದಾಹವಾರ್ಯಾಯುಧಾನಿಸ್ಪರ್ಶಾದ್ಯಂತಾಸ್ತು ಯಾ: ಕ್ರಿಯಾ:|
ತಾ: ಪೂರ್ವಾ ಮಧ್ಯಮಾ ಮಾಸಿ ಮಾಸ್ಯೇಕೋದ್ದಿಷ್ಟಸಂಜ್ಞಿತಾ:||35||

ಪ್ರೇತೇ ಪಿತೃತ್ವಮಾಪನ್ನೇ ಸಪಿಂಡೀಕರಣಾದನು|
ಕ್ರಿಯಾನ್ತೇ ಯಾ: ಕ್ರಿಯಾ: ಪಿತ್ರ್ಯಾ: ಪ್ರೋಚ್ಯಂತೇ ತಾ ನೃಪೋತ್ತರಾ:||36||

ಪಿತೃಮಾತೃಸಪಿಂಡೈಸ್ತು ಸಮಾನಸಲಿಲೈಸ್ತಥಾ|
ಸಂಘಾತಾಂತರ್ಗತೈರ್ವಾಪಿ ರಾಜ್ಞಾ ತದ್ಧನಹಾರಿಣಾ||37||

ಪೂರ್ವಾ: ಕ್ರಿಯಾಶ್ಚ ಕರ್ತವ್ಯಾ: ಪುತ್ರಾದ್ಯೈರೇವ ಚೋತ್ತರಾ:|
ದೌಹಿತ್ರೈರ್ವಾ ನೃಪಶ್ರೇಷ್ಠ ಕಾರ್ಯಾಸ್ತತ್ತನಯೈಸ್ತಥಾ||38||

ಮೃತಾಹನಿ ಚ ಕರ್ತವ್ಯಾ: ಸ್ತ್ರೀಣಾಮಪ್ಯುತ್ತರಾ: ಕ್ರಿಯಾ:|
ಪ್ರತಿಸಂವತ್ಸರಂ ರಾಜನ್ನೇಕೋದ್ಧಿಷ್ಟವಿಧಾನತ:||39||

ತಸ್ಮಾದುತ್ತರಸಂಜ್ಞಾಯಾ: ಕ್ರಿಯಾಸ್ತಾ: ಶೃಣು ಪಾರ್ಥಿವ|
ಯಥಾ ಯಥಾ ಚ ಕರ್ತವ್ಯಾ ವಿಧಿನಾ ಯೇನ ಚಾನಘ||40||

ಇತಿ ಶ್ರೀವಿಷ್ಣಪುರಾಣೇ ತೃತೀಯೇಂಶೇ ತ್ರಯೋದಶೋಧ್ಯಾಯ:||

ಪ್ರಥಮ ಶ್ರಾದ್ಧಾಧಿಕಾರಿ, ಸಪಿಂಡರ ಸಂತತಿ, ಸಮಾನೋದಕ, ಮಾತೃಕುಲದ ಸಪಿಂಡರೂ - ಸಮಾನೋದಕರೂ ಯಾರೂ ಇಲ್ಲವಾದರೆ ಮಿತ್ರರ ಗುಂಪಿನಲ್ಲೊಬ್ಬನು ಪ್ರೇತಕಾರ್ಯವನ್ನು ನಡೆಸಬೇಕು. 
ಅಥವಾ ಮೃತನ ಧನವನ್ನು ಉಪಯೋಗಿಸಿ ರಾಜನು ಪ್ರೇತಕೃತ್ಯವನ್ನು ಯಾರಿಂದಾದರೂ ಮಾಡಿಸಬೇಕು. 

ಈ ಎಲ್ಲ ಪ್ರೇತಕರ್ಮಗಳು ಪೂರ್ವಕರ್ಮ, ಮಧ್ಯಮಕರ್ಮ, ಉತ್ತರಕರ್ಮ - ಎಂದು ಮೂರು ವಿಧ. 
ಇವುಗಳ ಲಕ್ಷಣಭೇದವನ್ನು ಕೇಳು.

ದಹನದಿಂದ ಹಿಡಿದು ಜಲ, ಆಯುಧ - ಮೊದಲಾದವುಗಳ ಸ್ಪರ್ಶಪರ್ಯಂತವಾದ ಯಾವ ಕರ್ಮಗಳುಂಟೋ ಅವು ಪೂರ್ವಕರ್ಮಗಳು ಎನಿಸುತ್ತವೆ. 
ಪ್ರತಿಮಾಸವೂ ಮಾಡತಕ್ಕ ಏಕೋದ್ದಿಷ್ಟ ಶ್ರಾದ್ಧಗಳು ಮಧ್ಯಮಕರ್ಮಗಳು. 

ಪ್ರೇತನು ಪಿತೃತ್ವವನ್ನು ಪಡೆದಮೇಲೆ ಸಪಿಂಡೀಕರಣಾನಂತರ ಮಾಡತಕ್ಕ ಪಿತೃಕರ್ಮಗಳು ಉತ್ತರಕರ್ಮಗಳು. 

ಇವುಗಳಲ್ಲಿ ಪಿತೃಕುಲದ ಅಥವಾ ಮಾತೃಕುಲದ ಸಪಿಂಡರು, ಸಮಾನೋದಕರು, ಮಿತ್ರರು, ಮೃತನ ಧನವನ್ನು ತೆಗೆದುಕೊಂಡ ರಾಜ - ಇವರು ಮೃತನ ಪೂರ್ವಕರ್ಮಗಳನ್ನು ಮಾತ್ರ ಮಾಡಲು ಅರ್ಹರು. 
ಉತ್ತರಕರ್ಮಗಳನ್ನು ಪುತ್ರಾದಿಗಳೇ ಮಾಡಬೇಕು. ಅಥವಾ ದೌಹಿತ್ರ ಅಥವಾ ಅವನ ಮಕ್ಕಳು ಮಾಡಬಹುದು. 

ಸ್ರ್ರೀಯರಿಗೆ ಪ್ರತಿಸಂವತ್ಸರವೂ ಮೃತತಿಥಿಯಲ್ಲಿ ಉತ್ತರಕರ್ಮಗಳನ್ನು ಏಕೋದ್ದಿಷ್ಟ ವಿಧಾನದಿಂದ ಮಾಡಬೇಕು. 

ಆದ್ದರಿಂದ, ರಾಜ, ಉತ್ತರಕರ್ಮಗಳನ್ನು ಯಾವ ವಿಧಿಯಿಂದ ಹೇಗೆ ಮಾಡಬೇಕೆಂಬುದನ್ನು ಕೇಳು.

ಇಲ್ಲಿಗೆ ಶ್ರೀವಿಷ್ಣುಪುರಾಣದ ತೃತೀಯಾಂಶದಲ್ಲಿ ಹದಿಮೂರನೆಯ ಅಧ್ಯಾಯ ಮುಗಿಯಿತು. 
********


No comments:

Post a Comment