◾ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ ||
ಯದಗ್ರೇ ಸರ್ವ ವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ || ||
⏹ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಕೇವಲ ತುಳಸಿಗಿಡವೇ ಅಂತಲ್ಲ, ಪ್ರಕೃತಿ ಮತ್ತು ಹಲವಾರು ಪ್ರಕೃತಿಜನ್ಯವಾದವುಗಳು ಪೂಜಾರ್ಹವಾಗಿವೆ. ನನ್ನ ಪ್ರಕಾರ ನಾವು ಬದುಕಲು ಕಾರಣವಾದ ಮೂಲಭೂತ ಅಂಶಗಳಿಂದ ಹಿಡಿದು ಕಣ್ಣಿಗೆ ಕಾಣದ ಕಣಗಳೂ ವಂದನಾರ್ಹವಾದುವುಗಳೇ. ಅದಕ್ಕೆ ನಾವು ಕೃತಜ್ಞರಾಗಿರಲೇ ಬೇಕು. ತುಳಸಿ ಗಿಡವು ಪ್ರತಿ ಹಿಂದುವಿನ ಮನೆಯಲ್ಲಿ ಪೂಜಿಸಲ್ಪಡುವ ಸಸ್ಯವೆಂಬುದು ಎಲ್ಲರಿಗೂ ತಿಳಿದೇ ಇರುವ ಸಂಗತಿ.
⏹ತುಳಸಿ ಕೃಷ್ಣನ ಪ್ರೇಯಸಿ ಎಂದು ಹೇಳಲಾಗುತ್ತದೆ. ವೃಂದಾ ಎಂದೂ ಕರೆಯಲ್ಪಡುವ ತುಳಸಿ ದೇವತಾ ಸ್ಥಾನದಲ್ಲಿರುವ ಸ್ತ್ರೀರೂಪವೂ ಹೌದು. ಪುರಾಣಗಳಲ್ಲಿ ತುಳಸಿಯ ಬಗೆಗೆ ಬೇರೆ ಬೇರೆಯ ಕಥೆಗಳಿವೆ. ತುಳಸಿ ಎಂಬುದು ಅರ್ಪಣಾಭಾವದ ಸೂಚಕ. ನಾನು ಏನನ್ನಾದರು ಕಳೆದುಕೊಂಡರೆ ಅದು ಮತ್ತೆ ಸಿಗದಂತಹ ಸ್ಥಿತಿಯಿದ್ದಾಗ “ತುಳಸಿ ನೀರು ಬಿಟ್ಟಂತೆ” ಎಂಬ ಉದ್ಗಾರ ಆಡು ಮಾತಿನಲ್ಲಿ ಸಹಜವಾಗಿ ಬಂದುಬಿಡುತ್ತದೆ.
⏹ಅಂದರೆ ದೇವರಿಗೆ ಅರ್ಪಿಸುವ ನೈವೇಧ್ಯದಿಂದ ಹಿಡಿದು ದಾನ ದಕ್ಷಿಣೆ ನೀಡುವ ಸಮಯದಲ್ಲಿಯೂ ತುಳಸಿಯನ್ನೇ ಮಾಧ್ಯಮವಾಗಿರಿಸಿಕೊಂಡು ಅರ್ಪಿಸಲಾಗುತ್ತದೆ. ಅಂದರೆ ಇಲ್ಲಿ ನಾನು ಕೊಡುವ ವಸ್ತುವಿನ ಮೇಲೆ ಆಸೆಯನ್ನಿಟ್ಟುಕೊಳ್ಳದೆ ಸಂಪೂರ್ಣವಾದ ಸಮರ್ಪಣಾ ಭಾವದಿಂದ ಕೊಡುತ್ತಿದ್ದೇನೆ ಎಂಬುದರ ಸಂಕೇತವಾಗಿ ತುಳಸಿ ಈ ಅರ್ಪಣೆಗಳಲ್ಲಿ ಬಳಸಲ್ಪಡುತ್ತದೆ. ಅಂದರೆ ಸಮರ್ಪಣಾಭಾವದ ವಸ್ತು ರೂಪ ಈ ತುಳಸೀದಳ.
⏹ವಿಷ್ಣುವಿಗೆ ಅವನ ರೂಪವಾದ ಕೃಷ್ಣನಿಗೆ ತುಂಬಾ ಪ್ರಿಯವೆನಿಸಿದ ತುಳಸಿ. ಎಲ್ಲಾ ದೇವರಿಗೂ ತುಳಸಿ ಎಂದರೆ ಪ್ರಿಯವಾದ ಗಿಡ. ಹೂವಿಗಿಂತಲೂ ಶ್ರೇಷ್ಠ. ಸಮಾಜಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡ ಮುನಿಸರ್ವೋತ್ತಮರಿಗೂ ಪ್ರಿಯವಾದುದು. ತುಳಸಿಯ ಮಹತ್ತ್ವವು ಕೇವಲ ಕಥೆಗಳಿಗಷ್ಟೇ ಸೀಮಿತವಾಗಿರದೆ ವೈಜ್ಞಾನಿಕವಾಗಿಯೂ ಮಾನವನಿಗೆ ಅತ್ಯಗತ್ಯವಾದ ಗಿಡವಾಗಿದೆ.
⏹ತುಳಸಿ ಗಿಡವು ಹೆಚ್ಚಿನ ಆಮ್ಲಜನಕವನ್ನು ಬಿಡಗಡೆ ಮಾಡುತ್ತದೆ. ಆದುದರಿಂದ ಮನೆಯ ಸುತ್ತ ತುಳಸಿಗಿಡಗಳಿದ್ದರೆ ಶುದ್ಧಗಾಳಿ ನಮ್ಮ ಉಸಿರಾಟಕ್ಕೆ ಸಹಜವಾಗಿಯೇ ಲಭ್ಯವಾಗುತ್ತದೆ. ಶುದ್ಧಗಾಳಿ ಸೇವನೆಯಿಂದ ಆರೋಗ್ಯವೂ ಶುದ್ಧವಾಗಿರುತ್ತದೆ.
⏹ತುಳಸಿಯು ಲೇಬಿಯೇಟಿ ಕುಟುಂಬಕ್ಕೆ ಸೇರಿದ ಅಸಿಮಮ್ ಸ್ಯಾಂಕ್ಟಮ್ ಎಂಬ ಸಸ್ಯ. ಔಷಧೀಯ ದೃಷ್ಟಿಯಿಂದಲೂ ಮುಖ್ಯವಾಗಿದೆ. ಇದನ್ನು ಭಾರತದಲ್ಲಿ ಎಲ್ಲೆಡೆ ಹಿಂದೂ ಜನರು ಮನೆಗಳ ಆವರಣದಲ್ಲಿ ಬೆಳೆಸುತ್ತಾರೆ. ತುಳಸಿ ದಳಕ್ಕೆ ಹಸಿವು ವೃದ್ಧಿಮಾಡುವ, ಕಫ ನಿವಾರಿಸುವ, ಶೀತಹರ ಗುಣಗಳಿವೆ.
⏹ತುಳಸಿ ಎಲೆಗಳನ್ನು ಅರೆದು ಜೇನುತುಪ್ಪ ಮತ್ತು ಕರಿಮೆಣಸಿನೊಡನೆ ಮಿಶ್ರ ಮಾಡಿ ಕುಡಿದರೆ ಚಳಿಜ್ವರ, ಯಕೃತ್ತಿನ ವಿಕಾರಗಳು, ನೆಗಡಿ, ಕೆಮ್ಮು, ಗಂಟಲುಬೇನೆ ಇತ್ಯಾದಿಗಳು ಕಡಿಮೆಯಾಗುತ್ತವೆ. ಮಲೇರಿಯ ಜ್ವರಕ್ಕೆ ಮೆಣಸು, ಶುಂಠಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ ಕೊಡುವುದುಂಟು.
⏹ಆಮಶಂಕೆ, ವಾಂತಿ, ರಕ್ತಸ್ರಾವ ಇತ್ಯಾದಿಗಳನ್ನೂ ಇದು ಗುಣಪಡಿಸಬಲ್ಲದು. ಭಯಾನಕ ರೋಗವಾದ ಕ್ಯಾನ್ಸರ್ ನಿವಾರಕವಾಗಿಯೂ ತುಳಸಿಯು ಬಳಕೆಯಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.
⏹ತುಳಸಿಯ ಹಸಿರು: ಪ್ರಕೃತಿಯಲ್ಲಿ ನಮ್ಮ ದೇಹ ಶುದ್ಧವಾಗಿರಲು ನಮ್ಮ ಜೊತೆಗೆ ಬೆಳೆಸಿ ಆರೈಕೆಮಾಡಬೇಕಾದ ಹಲವು ಸಸ್ಯಗಳಿವೆ, ಅವುಗಳಲ್ಲಿ ಈ ತುಳಸಿಯೂ ಒಂದು. ಇದರ ಹಸಿರು ನಮ್ಮ ಉಸಿರನ್ನು ಕಾಯುವಾಗ ತುಳಸಿಯೂ ದೇವರಲ್ಲದೇ ಮತ್ತಿನ್ನೇನು!
🌿☘“ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ”☘🌿
(ಲೇಖನ ಕೃಪೆ: ಶ್ರೀ ವಿಷ್ಣು ಭಟ್)
*****
No comments:
Post a Comment