SEARCH HERE

Tuesday 1 January 2019

ಮಧ್ಯರಾತ್ರಿಯಲ್ಲಿ ಮಾರನೇ ದಿನದ ಕಲ್ಪನೆ when tomorrow starts


ಮಧ್ಯರಾತ್ರಿಯಲ್ಲಿ ಮಾರನೇ ದಿನದ ಕಲ್ಪನೆ ???

ನಮ್ಮ ಜ್ಯೋತಿಷ್ಯಶಾಸ್ತ್ರದಂತೆ ಅದು ಸೂರ್ಯ ಸಿದ್ಧಾಂತವಿರಲಿ ದೃಕ್ ಸಿದ್ಧಾಂತವಿರಲಿ ದಿನದ ಆರಂಭವನ್ನು ಸೂರ್ಯೋದಯದಿಂದಲೇ ಆರಂಭಿಸುವುದು. ವಿದೇಶೀಯ ಆಕ್ರಮಣದ ದುಷ್ಪರಿಣಾಮ ಕಾಲನ ಅವಗಣನೆ. ಅಲ್ಲಿ ಮಧ್ಯರಾತ್ರಿಯಿಂದ ಕಾಲ ಗಣನೆ. ಇದನ್ನೇ ಸ್ವಲ್ಪ ಗಮನಿಸೋಣ.
ಸಮಾನೋ ಅಧ್ವಾ ಸ್ವಸ್ರೋರನಂತಸ್ತಮನ್ಯಾನ್ಯಾ ಚರತೋ ದೇವಶಿಷ್ಟೇ |
ನ ಮೇಥೇತೇ ನ ತಸ್ಥತುಃ ಸುಮೇಕೇ ನಕ್ತೋಷಾಸಾ ಸಮನಸಾ ವಿರೂಪೇ ||
ರಾತ್ರಿ ಮತ್ತು ಬೆಳಿಗ್ಗೆಗಳೆರಡಕ್ಕೂ ಸಂಚಾರ ಮಾರ್ಗ ಇರುವುದು ಒಂದೇ, ಅದಕ್ಕೆ ಅಂತ್ಯ ಎನ್ನುವುದೇ ಇಲ್ಲ. ಹಗಲು ಮತ್ತು ರಾತ್ರಿ ಇಬ್ಬರೂ ಸೂರ್ಯನ ನಿರ್ಡೇಶನದಂತೆ ಸಂಚರಿಸುತ್ತಾರೆ. ರೂಪ ಮತ್ತು ಅವಸ್ಥೆಗಳು ಬೇರೆ ಬೇರೆಯಾದರೂ ಉದ್ದೇಶ ಮಾತ್ರ ಒಂದೇ, ಇಡೀ ಜಗತ್ತಿನ ನಿರ್ಮಾತೃರಾಗಿ ಜಗದ ಸೃಷ್ಟಿಯನ್ನು ನಿಯಂತ್ರಿಸುತ್ತಾ ನಿಲ್ಲದೇ ಸಂಚರಿಸುತ್ತೀರಿ ಎನ್ನುವುದಾಗಿ ಋಗ್ವೇದದ ಒಂದನೇ ಮಂಡಲದ ನೂರ ಹದಿಮೂರನೇ ಸೂಕ್ತದಲ್ಲಿ ಹೇಳಲಾಗಿದೆ. "ನ ಮೇಥೇತೇ ನ ತಸ್ಥತುಃ ಸುಮೇಕೇ ನಕ್ತೋಷಾಸಾ ಸಮನಸಾ ವಿರೂಪೇ" ರಾತ್ರಿಯು ಅಂಧಕಾರದಲ್ಲಿರುವುದು ಆಗ ಇಡೀ ಜಗತ್ತು ಚೇತನಾ ರಹಿತವಾಗಿರುತ್ತದೆ ಅಂತಹ ವಿರೂಪ, ಅಂದರೆ ತಮಸ್ಸಿನಕಾಲವೂ ಸಹ ಚೇತನಾ ಸಹಿತವಾದ ಹಗಲನ್ನು ಅನುಸರಿಸಿಕೊಂಡು ಹೋಗುತ್ತದೆ ಎನ್ನುವುದು ಇಲ್ಲಿನ ತಾತ್ಪರ್ಯ. ಹಾಗಾದರೆ ಈ ಹನ್ನೆರಡು ಗಂಟೆ ಮಧ್ಯರಾತ್ರಿಯನ್ನು ಮಾರನೇ ದಿನದ ಲೆಕ್ಕಕ್ಕೆ ಸೇರಿಸುವುದು ಸರಿಯೇ. ಇದು ಅಶುದ್ಧ. ಜಡವಾದ ಸಮಯದಲ್ಲಿ ಅಥವಾ ತಮೋ ಗುಣವುಳ್ಳ ಸಮಯ ಮುಗಿಯುವುದೇ ಸೂರ್ಯೋದಯವಾದ ಮೇಲೆ ಹಾಗಿರುವಾಗ ಈ ರೀತಿ ಮಧ್ಯರಾತ್ರಿಯನ್ನು ಲೆಕ್ಕಿಸುವುದು ಪ್ರಾಯಶಃ ಪಾಶ್ಚಾತ್ಯ ಅಂಧಾನುಕರಣೆ ಅವರು ನಮಗೆ ಕೊಟ್ಟ ಬಳುವಳಿ.
ಋಗ್ವೇದದ ಹೆಚ್ಚಿನ ಕಡೆ ರಾತ್ರಿಯ ಅಧಿದೇವತೆ ವರಣ ಅನ್ನಲಾಗಿದ್ದರೆ; ಸೂರ್ಯನೇ ಹಗಲಿಗೆ ಅಧಿಪತಿ ಎನ್ನುವುದು ಕಂಡುಬರುತ್ತದೆ. "ಮೈತ್ರಂ ವಾ ಅಹಃ | ವಾರುಣೀ ರಾತ್ರಿಃ" ಎನ್ನಲಾಗಿದ್ದು ಸಿಗುತ್ತದೆ. ಸೂರ್ಯನು ದೇವಲೋಕದ ಮಗ ಎನ್ನುವುದು ಋಗ್ವೇದದ ಹತ್ತನೇ ಮಂಡಲದಲ್ಲಿ ಕಾಣ ಸಿಗುತ್ತದೆ. ದಿವಸ್ಪುತ್ರಾಯ ಸೂರ್ಯಾಯ ಎಂದು ಅಲ್ಲಿ ಹೇಳಿದ್ದರೆ, ಅಲ್ಲಿಯೇ ಇನ್ನೊಂದು ಕಡೆ ಸೂರ್ಯಮಾದಿತೇಯಂ ಎಂದು ಅದಿತಿಯ ಮಗ ಎಮ್ದು ಕರೆಯಲಾಗಿದೆ. ಸೂರ್ಯನಲ್ಲಿ ಒಂದು ಕಾಂತೀಯ ಗುಣವಿದೆ. ಆತ ಜಗತ್ತಿನ ಎಲ್ಲಾ ವಸ್ತುಗಳಿಗೂ ಆತ್ಮ, ಆತನೇ ನಿಯಂತ್ರಕ ಆತನು ಜಡವನ್ನೂ ಚೇತನಾಯುಕ್ತವನ್ನಾಗಿ ಮಾಡಬಲ್ಲ ಎನ್ನುವುದು ಇದೇ ವೇದಗಳು. ಈ ಸೂರ್ಯ ಎನ್ನುವ ಶಬ್ದದ ಹುಟ್ಟೇ ಹಾಗಿದೆ, ಸೃ ಎನ್ನುವ ಧಾತುವಿನಿಂದ ಸೂರ್ಯ ಶಬ್ದದ ನಿಷ್ಪತ್ತಿ ಯಾಗಿದ್ದು ಸೃ ಎನ್ನುವುದು ಸಂಚಾರವನ್ನು ಸೂಚಿಸುತ್ತದೆ. ಸದಾ ಸಂಚಾರವನ್ನು ಮಾಡುವ ಗುಣವುಳ್ಳವನು ಎಂದು ಅನೇಕ ಕಡೆ ಕಂಡುಬರುತ್ತದೆ.
ಇನ್ನು ತೈತ್ತಿರೀಯ ಆರಣ್ಯಕದಲ್ಲಿ ಯೋ ಸೌ ತಪನ್ನುದೇತಿ | ಸ ಸರ್ವೇಷಾಂ ಭೂತಾನಾಂ ಪ್ರಾಣಾನಾದಾಯೋದೇತಿ" ಎನ್ನಲಾಗಿದೆ. ಇದು ಎಂತಹ ಮಾತು ರೀ ಮಧ್ಯ ರಾತ್ರಿಯಲ್ಲಿ ಮಾರನೇ ದಿನವನ್ನು ಆಚರಿಸಿಕೊಳ್ಳೋ ಮೂರ್ಖರಿಗೆ ಇದು ಛಾಟೀ ಏಟು, ಸೂರ್ಯನು ಅಸ್ತಂಗತನಾಗುತ್ತಲೇ ಇಡೀ ಜಗತ್ತಿನ ವ್ಯವಹಾರಗಳು ನಿಧಾನವಾಗುತ್ತಾ ಚೈತನ್ಯದ ಶಕ್ತಿಗಳನ್ನು ಕಳೆದುಕೊಳ್ಳುತ್ತವಂತೆ. ನಮ್ಮಲ್ಲಿರುವ ಜ್ಞಾನಯುಕ್ತವಾದ ಕ್ರಿಯೆಯನ್ನು ತನ್ನೊಡನೆ ತೆಗೆದುಕೊಂಡು ಹೋಗುತ್ತಾನಂತೆ. ಅದಕ್ಕೇ ರಾತ್ರಿಯಾದೊಡನೆ ಮಂಪರು....... ನಿದ್ದೆ ಬರುವುದು, ಅದೇ ಸೂರ್ಯ ಉದಯದ ಸಮಯದಲ್ಲಿ ಪುನಃ ಮರು ಸ್ಥಾಪಿಸುತ್ತಾನಂತೆ ಅದಕ್ಕೆ ಬೆಳಗಿನ ಸಮಯ ಆಹ್ಲಾದವಾಗಿರುತ್ತದೆ ಎಂದು ಈ ತೈತ್ತಿರೀಯ ಆರಣ್ಯಕ ಹೇಳುತ್ತದೆ. ಇದನ್ನೇ ಇಂದಿನ ವಿಜ್ಞಾನವೂ ಹೌದು ಎಂದಿದೆ ಸೂರ್ಯನಿಂದಲೇ ಇಡೀ ಜಗತ್ತು ನಿಯಂತ್ರಣವಾಗುತ್ತಿದೆ ಎಂದು. ಅದನ್ನೇ ಇನ್ನೊಂದು ರೂಪದಲ್ಲಿ ಎನರ್ಜೀ ಎಂದು ಕರೆಯಲಾಗಿದೆ. ಅಥರ್ವ ವೇದದಲ್ಲಿ ನಮ್ಮ ಕಣ್ಣುಗಳಿಗೆ ಒಡೆಯ ಸೂರ್ಯನೇ ಎಂದು ಹೇಳಿದೆ. ಇದು ಎಷ್ಟು ಸತ್ಯ!!, ಸೂರ್ಯನ ಸಂಚಾರದ ಮಾರ್ಗವನ್ನು ಸರಿಪಡಿಸಿ ಕೊಡುವವನು ವರಣ ಆದುದರಿಂದ ಸೂರ್ಯನ ಜೊತೆ ವರುಣನನ್ನೂ ಗುರುತಿಸಿ ಮಿತ್ರಾವರುಣ ಎನ್ನಲಾಗುತ್ತದೆ.
ಸಂವತ್ಸರಃ ಕಾಲಾತ್ಮಾ ಸರ್ವಸ್ಯ ಜನಿಮತಃ ........ ತಜ್ಜ್ಯೋತಿಷಾಂ ಜ್ಯೋತಿಃ || ಎನ್ನುವುದು ಶಂಕರಾಚಾರ್ಯರು. ಈ ಮೂಲ ತತ್ವದ ಆಧಾರದ ಮೇಲೆ ಸಂವತ್ಸರವೇ ಮೊದಲಾದವುಗಳು ಪುನಃ ಪುನಃ ಬರುತ್ತಿರುತ್ತವೆ. ಇದೇ ಸೂರ್ಯನ ಮತ್ತು ಕಾಲದ ಜೊತೆಗೆ ಜಗತ್ತು ನಡೆಯುತ್ತಿದೆ. ಇದೇ ಕಾಲವು ವಿಶ್ವದ ವ್ಯವಹಾರಕ್ಕೆ ಮೂಲ ಎಂದು ಬೃಹದಾರಣ್ಯಕ ಉಪನಿಷತ್ತಿಗೆ ಹೇಳುತ್ತಾರೆ.
ಏತಸ್ಯ ವಾ ಅಕ್ಷರಸ್ಯ ಪ್ರಶಾಸನೇ ಎನ್ನುವಲ್ಲಿ ಸೂರ್ಯ ಮತ್ತು ಚಂದ್ರ ಅವರವರ ನಿಯಮಿತವಾದ ಸ್ಥಾನದಲ್ಲಿ ಇದ್ದಾರೆ. ದೇವ ಲೋಕ ಮತ್ತು ಈ ಭೂಮಿ ಎರಡೂ ತಮ್ಮ ಮೇರೆಯನ್ನು ಮೀರುವುದಿಲ್ಲ, ನಿಮೇಷಗಳು, ಮುಹೂರ್ತಗಳು, ಅಹೋರಾತ್ರಗಳು, ಅರ್ಧಮಾಸ ಮತ್ತು ಮಾಸ, ಋಅತು, ಸಂವತ್ಸರಗಳು ತಮ್ಮ ಪರಿಮಿತಿಯಲ್ಲಿಯೇ ದೃಶ್ಯ ಮತ್ತು ಅದೃಶ್ಯ ಎರಡೂ ಆಗುತ್ತವೆ. ನದಿಗಳೂ ಸಹ ಹಾಗೇ. ಇವೆಲ್ಲವೂ ಅಕ್ಷರಕ್ಕೆ ಅಧೀನವಾಗಿಯೇ ಇವೆ ಎನ್ನುವುದು ಬೃಹದಾರಣ್ಯಕದ ಮಾತು.
ಇನ್ನು ಜಾಸ್ತಿ ಹೇಳಿದರೆ ಅದು ಜ್ಯೋತಿಷ್ಯ ಶಾಸ್ತ್ರಕ್ಕೆ ಹೋಗುತ್ತದೆ. ಇಲ್ಲಿಗೆ ಪ್ರಸ್ತುತವಾದದ್ದನ್ನು ಹೇಳುವೆ.
ಷಡ್ಭಾರಾಂ ಅಚರನ್ಬಿಭರ್ತ್ಯೃತಂ ವರ್ಷಿಷ್ಠಮುಪ ಗಾವ ಆಗುಃ |
ತಿಸ್ರೋ ಮಹಿರುಪರಾಸ್ತ ಸ್ಥುರತ್ಯಾ ಗುಹಾ ದ್ವೇ ನಿಹಿತೇ ದರ್ಶ್ಯೇಕಾ || ಇದು ಋಗ್ವೇದದ 3 ಮಂಡಲದ 56ನೇ ಸೂಕ್ತದ 2ನೇ ಋಕ್ಕು.
ಸಂವತ್ಸರಗಳು ಆರು ಋತುಗಳನ್ನು ಹೊಂದಿವೆ. ಸೂರ್ಯ ಸತ್ಯದ ಪ್ರತೀಕನಾಗಿದ್ದಾನೆ. ಶ್ರೇಷ್ಠನಾದ ಆತನಲ್ಲಿ ರಶ್ಮಿಗಳು ಸೇರಿಕೊಳ್ಳುತ್ತವೆ. ಇವುಗಳ ಆಧಾರದಲ್ಲಿಯೇ ಮೂರು ಲೋಕಗಳು ನಿಂತಿವೆ. ಮತ್ತು ಒಂದರ ಮೇಲೊಂದರಂತೆ ಇವೆ. ಆದರೆ ಭೂಮಿಯಿಂದ ಮಿಕ್ಕುಳಿದ ಲೋಕಗಳು ಕಾಣಿಸಿಕೊಳ್ಳುವುದಿಲ್ಲ. ಎಂತಹ ಋಕ್ಕು!! ಈ ಕಿರಣಗಳಿಗೂ ಸಂವತ್ಸರ ಮತ್ತು ಋತಿಗಳಿಗೂ ಇರುವ ಸಂಬಂಧವನ್ನು ಸ್ಪಷ್ಟಗೊಳಿಸುತ್ತದೆ. ಸೂರ್ಯ ಈ ಕಾಲದ ಅಧಿಪತಿ ಎನ್ನುವುದು ಮೇಲ್ನೋಟಕ್ಕೆ ಕಂಡರೆ ಆರು ಋತುಗಳಲ್ಲಿಯೂ ಸೂರ್ಯನ ಕಿರಣಗಳಲ್ಲಿನ ವ್ಯತ್ಯಾಸವನ್ನು ತಿಳಿಸಿಕೊಡುತ್ತದೆ. ಇಂತಹ ಕಿರಣಗಳಿಂದಲೇ ಪ್ರಕೃತಿಯಲ್ಲಿನ ಬದಲಾವಣೆಗಳು ಆಗುತ್ತಿರುತ್ತವೆ. ಇನ್ನೂ ಬರೆಯ ಬಹುದು. ಆದರೆ ಇಷ್ಟೇ ಸಾಕು ನಮ್ಮ ಮೂರ್ಖತನವನ್ನು ಬಿಡಲು. ಯಾರೋ ಯಾವುದೋ ದೇಶದಲ್ಲಿ. ಅಥವಾ ಸಂಸ್ಕಾರವರಿಯದ ಯಾವುದೋ ಕಡೆ ಸೂರ್ಯನ ಕಿರಣಗಳು ಕಡಿಮೆಯಾಗಿ ಸೂರ್ಯಾಸ್ತದ ಸಮಯದ ನಂತರ ಜ್ಞಾನಗಳು ಕಳೆಗುಂದಿ ಹುಮ್ಮಸ್ಸಿಲ್ಲದ ಕಾಲದಲ್ಲಿ ಏನೇನೋ ತಿಂದು ಕುಡಿಯಬಾರದ್ದು ಕುಡಿದು ಅಂತಹ ಮತ್ತು ತಲೆಗೇರಿ ತಾವೀಗ ಉತ್ಸಾಹ ಭರಿತರು ಎಂದು ಅಪರಾತ್ರಿಯಲ್ಲಿ ಮಾರನೇ ದಿನ ಆಚರಿಸುವ ಕಾಲಕ್ಕೂ ಶುದ್ಧ ಶಾಸ್ತ್ರೀಯವಾದ ಸೂರ್ಯೋದಯದ ಕಾಲಕ್ಕೂ ಇರುವ ವ್ಯತ್ಯಾಸವನ್ನು ನಾನು ಹೇಳುವುದಕ್ಕಿಂತ ನಾವು ಆಲೋಚಿಸಬೇಕು. ಮಧ್ಯ ರಾತ್ರಿಯ ಹಸ್ತಾಂತರದಂತಹ ಕ್ರಿಯೆ ನಡೆಯುವುದು ಸುರರಲ್ಲಲ್ಲ ಅಸುರರಲ್ಲಿ ಮಾತ್ರ. ಸೂರ್ಯೋದಯದ ನವೋಲ್ಲಾಸದಲ್ಲಿ ಕೆಲಸ ಆರಂಭಿಸಿದರೆ ಅದರ ಆನಂದ ನಾವೇ ಅನುಭವಿಸಬಹುದು. ಯಾವುದಕ್ಕೂ ಯೋಚಿಸೋಣವೇ ? ಯಾಕೆಂದರೆ ನಮ್ಮ ದೇಶದ ಋಷಿ ಪರಂಪರೆ ಇರಬಹುದು, ಅಥವಾ ರಾಜಪರಂಪರೆ ಇರಬಹುದು ಮಧ್ಯ ರಾತ್ರಿಯಲ್ಲಿ ಯಾವ ವ್ಯವಹಾರವನ್ನೂ ಮಾಡಿದಂತಿಲ್ಲ. ಪ್ರಚಂಡ ಶಸನ ಬರೆಸಿದ ಯಾವ ರಾಜರೂ ನಮ್ಮ ಪರಂಪರೆಯನ್ನೋ ಅಥವಾ ಸಂಸ್ಕಾರವನ್ನೋ ಹಾಳು ಮಾಡಿಲ್ಲ. ಇದು ಬಂದದ್ದು ಇತ್ತೀಚೆಗೆ.
#ಕಾಲ_ಅಕಾಲ.
*****

No comments:

Post a Comment