SEARCH HERE

Wednesday 24 March 2021

ಅಗ್ನಿಮುಖ ಪ್ರಯೋಗ ಅದರಿಂದೇನು ಉಪಯೋಗ ವೇದಪರಿಚಯ agnimukha prayoga veda parichaya



ಅಗ್ನಿಮುಖ ಪ್ರಯೋಗ : ಅದರಿಂದೇನು ಉಪಯೋಗ? ಯಾವುದೇ ಹೋಮವನ್ನು ಮೊದಲು ಅಗ್ನಿಮುಖವೆಂಬ ವಿಧಿಯ ಮೂಲಕವೇ ಆರಂಭಿಸಲಾಗುತ್ತದೆ. ಹೋಮ ಮಾಡುವಾತನು ಈ ವಿಧಿಗಳ ಸ್ಥೂಲ ಸ್ವರೂಪವನ್ನು ಅರಿತವನಾಗಿದ್ದರೆ, ಹೋಮವಿಧಿಯು ಎಷ್ಟು ಕ್ರಮಬದ್ಧವಾಗಿ, ತಪ್ಪಿಲ್ಲದಂತೆ ನಿರ್ವಹಿಸಲು ಸಹಕಾರಿಯಾಗಿದೆ ಎಂದಂತೂ ತಿಳಿಯಬಹುದು. ಇದೇ ತತ್ತ್ವಗಳನ್ನು ಜೀವನದ ಹಾದಿಯಲ್ಲಿಯೂ ಬಳಸಿಕೊಳ್ಳುವ ತಿಳುವಳಿಕೆಯಿದ್ದರೆ ಜೀವನ ಹೆಚ್ಚು ಸುಗಮವಾಗುತ್ತದೆ. ಅಗ್ನಿಮುಖದ ಸ್ಥೂಲ ಪರಿಚಯವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಹೋಮಾದಿಗಳನ್ನು ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ, ವಾಂಛಿತ ಫಲಗಳು ಲಭಿಸುತ್ತವೆ ಎಂಬೆಲ್ಲ ಅಂಶಗಳನ್ನು ಬದಿಗಿಟ್ಟು, ಹೋಮ-ಹವನಗಳ ರಚನಾ ಮತ್ತು ಕಾರ್ಯ ಸ್ವರೂಪವನ್ನು ಅಧ್ಯಯನ ಮಾಡಿದರೆ, ಇವು ಹೇಗೆ ಲೌಕಿಕ ಜೀವನಕ್ಕೆ ನೆರವಾಗಬಲ್ಲದು ಎಂದಂತೂ ತಿಳಿಯುತ್ತದೆ.

ಹೋಮ ಮಾಡುವ ಸ್ಥಳ, ಬಳಸುವ ವಸ್ತುಗಳು, ಮಾಡುವಾತನ ಮನಃಸಂಕಲ್ಪಗಳು ಶುದ್ಧವಾಗಿರಲೆಂಬ ಉದ್ದೇಶದಿಂದ ಸ್ವಸ್ತಿ ಪುಣ್ಯಾಹ ವಾಚನವೆಂಬ ಕಲಾಪ ಇರುತ್ತದೆ. ಸ್ವಸ್ತಿ ಎಂದರೆ ಮಂಗಲ. ಪುಣ್ಯಾಹ-ಮಾಡುವ ದಿನವು ಪುಣ್ಯಮಯವಾಗಲಿ ಎಂಬ ಆಶಯದೊಡನೆ ಆರಂಭಿಸಲಾಗುತ್ತದೆ. ನಂತರ ನಾಂದೀ ಶ್ರಾದ್ಧವೆಂಬ ವಿಧಿಯಿದೆ. ನಾಂದಿ ಎಂದರೆ ಆರಂಭ ಎಂಬುದು ಜನಜನಿತ ಅರ್ಥ. ಅದು ಆನಂದವನ್ನು ಸೂಚಿಸುತ್ತದೆ. ಹೋಮಕರ್ತನು ಮಾಡಲು ಉದ್ದೇಶಿಸಿರುವ ಹೋಮವು ಯಶಸ್ವಿಯಾಗಲು, ಆತನ ಪಿತೃ, ಪಿತಾಮಹರ ಆಶೀರ್ವಾದವನ್ನು ಕೋರುತ್ತಾನೆ. ಅವರಿಲ್ಲದೆ ಈತನಿಲ್ಲ. ಗತಿಸಿ ಹೋದ ಹಿರಿಯರನ್ನು ಸ್ಮರಿಸಿ, ಅವರಿಗೆ ಜಲ ಸಮರ್ಪಣೆಯ ಮೂಲಕ ಗೌರವವನ್ನು ಸಲ್ಲಿಸುವನು.
ನಂತರದಲ್ಲಿ ಹೋಮ ಮಾಡಲೆಂದು ಅಗ್ನಿಸ್ಥಾಪನೆ, ಅಗ್ನಿಯ ಆವಾಹನೆಗಳನ್ನು ಮಾಡಲಾಗುವುದು. ಮಾಡಲು ಉದ್ದೇಶಿಸಿರುವ ಹೋಮದ ಪ್ರಧಾನ ದೇವತೆ ಯಾರು, ಅವರಿಗೆ ಸಲ್ಲತಕ್ಕ ಹೋಮದ್ರವ್ಯಗಳು ಯಾವುವು ಎಂದು ಪೂರ್ವನಿರ್ಧಾರಿತವಾಗಿ ಮಾಡುವ ಕಾರ್ಯವನ್ನು ಅನ್ವಾಧಾನ ಎನ್ನಲಾಗುತ್ತದೆ. ಹೋಮದಲ್ಲಿ “ನ ಮಮ ಎಂಬ ಶಬ್ದ ಪ್ರಯೋಗವಾಗುತ್ತದೆ. ಎಂದರೆ ಇಲ್ಲಿ ಅರ್ಪಿಸುತ್ತಿರುವ ಯಾವುದೂ ನನ್ನದಲ್ಲ ಎಂಬ ಭಾವ ಅಲ್ಲಿರುತ್ತದೆ. ಇಧ್ಮ- 15 ಸಮಿತ್ತುಗಳನ್ನು ರಜ್ಜು (ದರ್ಭೆಯ ಹಗ್ಗ)ದಿಂದ ಕಟ್ಟಿರುವ ಯಜ್ಞಸಾಧನ. ಸ್ರುಕ್, ಸೃವಗಳು-ಹೋಮಕ್ಕೆ ತುಪ್ಪವನ್ನು ಹಾಕಲು ಬಳಸುವ ಸಾಧನ. ಬರ್ಹಿ, ಆರು ಪಾತ್ರೆಗಳನ್ನು ಬಳಸಿ ಮಾಡುವ ಹೋಮದಲ್ಲಿ ಪ್ರೋಕ್ಷಿಣೀ, ಸ್ರುವ, ಚಮಸ, ಆಜ್ಯಪಾತ್ರ, ಇಧ್ಮ, ಬರ್ಹಿಸ್ ಗಳು ಇರುತ್ತವೆ. ಯಜ್ಞವು ವಿಸ್ತಾರಗೊಂಡಂತೆ ಪಾತ್ರಗಳ ಸಂಖ್ಯೆಯೂ ಹೆಚ್ಚಿ, ಪ್ರಯೋಗವಿಧಿಗಳಲ್ಲೂ ವಿಸ್ತಾರ ಕಂಡುಬರುತ್ತದೆ. ಹೋಮಕುಂಡದ ಸುತ್ತಲೂ ದರ್ಭೆಯ ಆವರಣವನ್ನು ಸೂಕ್ತಕ್ರಮದಲ್ಲಿ ರಚಿಸುವುದನ್ನು ಪರಿಸ್ತರಣ ಎನ್ನಲಾಗಿದೆ. ಅಗ್ನಿಯನ್ನು ಈಶಾನ್ಯದಿಂದ ಸ್ಥಾಪನೆ ಮಾಡಿದ ನಂತರ, ಆಘಾರ ಹೋಮವನ್ನು ಮಾಡಲಾಗುತ್ತದೆ.
ನಂತರ ಉದ್ದೇಶಿತ ಹೋಮಗಳನ್ನು ವಿಧಿಗೆ ಅನುಸಾರವಾಗಿ, ನಿಗದಿಗೊಳಿಸಿದ ಸಂಖ್ಯೆಯಂತೆ ಆಹುತಿಗಳನ್ನು, ಸೂಕ್ತ ದ್ರವ್ಯಗಳೊಂದಿಗೆ ನೀಡಲಾಗುತ್ತದೆ. ಹೀಗೆ ಮಾಡುವಲ್ಲಿ, ಲೆಕ್ಕ ತಪ್ಪದಂತೆ, ಅನಗತ್ಯ ಆಹುತಿಯಾಗಲೀ, ದ್ರವ್ಯಗಳಾಗಲೀ ಇರದಂತೆ ಆಚಾರ್ಯನು ಎಚ್ಚರಿಕೆ ವಹಿಸುವನು. ಯಜ್ಞವು ಸರಿಯಾಗಿ ನಡೆಯುತ್ತಿದೆಯೇ ಎಂದು ವೀಕ್ಷಿಸಲು ಓರ್ವ ವ್ಯಕ್ತಿಯನ್ನು ಬ್ರಹ್ಮನ ಸ್ಥಾನದಲ್ಲಿ ಕೂಡಿಸಲಾಗುತ್ತದೆ. ಆತನು ಯಜ್ಞವಿಧಿಗಳ ಸಂಪೂರ್ಣ ತಿಳುವಳಿಕೆ ಹೊಂದಿದವನಾಗಿರಬೇಕೆಂದು ವಿಧಿಯಿದೆ. ಮುಖ್ಯ ಹೋಮವನ್ನು ಮುಗಿಸಿದ ನಂತರ, ಸ್ವ ಇಷ್ಟ ಪೂರ್ತಿಗೆಂದು ನಡೆಸುವ ಸ್ವಿಷ್ಟಕೃತ್ ಹೋಮಾದಿಗಳನ್ನು ನಡೆಸಿ, ಉದ್ದೇಶ ತ್ಯಾಗ ಮಾಡುವರು.
ಯಜ್ಞದಲ್ಲಿ ಸಂಭವಿಸಿರಬಹುದಾದ ಲೋಪದೋಷಗಳಿಗೆ ಪ್ರಾಯಶ್ಚಿತ್ತಹೋಮಗಳನ್ನು ಮಾಡುವರು. ಪೂರ್ಣಾಹುತಿಯ ನಂತರ ಯಜ್ಞವು ಸಂಪನ್ನವಾಗುತ್ತದೆ. ಹೋಮಾದಿಗಳನ್ನು ಮಾಡಿಸುವ ಆಚಾರ್ಯರು ಈ ಪ್ರಯೋಗದ ವಾಕ್ಯಗಳನ್ನು ಹೇಳಿಕೊಳ್ಳುತ್ತಲೇ, ಅದನ್ನು ಅನುಸರಿಸುತ್ತ ಸಾಗುತ್ತಾರೆ. ಇವು ಯಾವವೂ ವೇದ ಮಂತ್ರಗಳಲ್ಲವಾದರೂ, ವಿಧಿ, ಕ್ರಮಗಳಲ್ಲಿ ಒಂದನ್ನೂ ಮರೆಯದಂತೆ ಮಾಡಿಕೊಂಡು ಹೋಗಲು ಸಹಾಯಕವಾಗುವ ಇಲ್ಲಿನ ವಾಕ್ಯಗಳು ಸರಳ ಸಂಸ್ಕೃತದಲ್ಲಿ ಇವೆ. ಗಮನವಿಟ್ಟು ಕೇಳಿಸಿಕೊಂಡರೆ, ಅದನ್ನು ಅನುಸರಿಸುವುದು ಕಷ್ಟವಾಗಲಾರದು. ಹೀಗಾಗಿ ಸ್ವಲ್ಪ ಸಂಸ್ಕೃತದ ತಿಳುವಳಿಕೆ ಮತ್ತು ಮಾಡುತ್ತಿರುವ ಕ್ರಿಯೆಗಳ ಅನುಸರಣೆಯ ಮನೋಭಾವವಿದ್ದರೆ, ಶ್ರದ್ಧಾಸಕ್ತಿಗಳಿಂದ ತಿಳಿಸಿಕೊಡುವ ಆಚಾರ್ಯರಿದ್ದರೆ ಹೋಮದ ಕಲಾಪಗಳನ್ನು ಆನಂದಿಸಬಹುದು.
*******


No comments:

Post a Comment