ವೇದೋಕ್ತ ಉಡುಗೆ ತೊಡಿಗೆ ಅಲಂಕಾರ ವೇಷ ಭೂಷಣ ಭಾಗ್ಯಗಳು - ಮೊದಲಾಗಿ ಯೋಗಿನೀ ಗಣದಲ್ಲಿ ಮುಖ್ಯ ಕೂಟ 64. ಅವರೊಬ್ಬೊಬ್ಬರ ಸಮೂಹವು 20 ಸಾವಿರ ಮೊದಲ್ಗೊಂಡು ಕೆಲ ಕೂಟಗಳು 2ಕೋಟಿ ಮೀರಿದ್ದೂ ಇದೆ. ಒಟ್ಟಾರೆ ತಂತ್ರಶಾಸ್ತ್ರಗಳು 33 ಕೋಟಿ ಯೋಗಿನಿಯರನ್ನು ಗುರುತಿಸಿದೆ. ಅವರೆಲ್ಲರ ಸಂಶೋಧನಾ ಸಂಗ್ರಹವೇ ಯೋಗಿನೀ ತಂತ್ರ. ಕೆಲವರದ್ದು ಒಂದೊಂದು ಶ್ಲೋಕವಾದರೆ ಕೆಲವರು ಸಾವಿರಕ್ಕೂ ಮಿಕ್ಕಿ ಶ್ಲೋಕರೂಪದಲ್ಲಿ ತಮ್ಮ ಸಂಶೋಧನೆಗಳನ್ನು ಬರೆದಿಟ್ಟಿದ್ದಾರೆ. ಅವೆಲ್ಲಾ ಒಟ್ಟು 1 ಲಕ್ಷ 26 ಸಾವಿರ ಶ್ಲೋಕಗಳಿವೆ. ಅವುಗಳಲ್ಲಿ ಮುಖ್ಯವಾಗಿ 18 ಪ್ರಧಾನ ಮಾಲೆಗಳು,ಇತರೆ 126 ಮಣಿಗಳು. ಇತರೆ ನೂರಕ್ಕೂ ಮಿಕ್ಕಿ ಮಾಲೆಗಳ ಬಗ್ಗೆ ಮಾಹಿತಿ ಬರೆದಿಟ್ಟಿದ್ದಾರೆ.
ಇಲ್ಲಿ ಹಲವು ಕೋಟಿ ಯೋಗಿನಿಯರ ಸಾಧನೆ ಸಂಶೋಧನೆ ಸಾಧ್ಯವಾಯ್ತು. ದೇಶಕ್ಕೆ ಲಾಭವಾಯ್ತು. ಇವರೆಲ್ಲರ ಸಾಧನೆಯ ಮುಖದಲ್ಲಿ ಸಾಧಕರಿಗೆ ಸಹಕರಿಸಲೆಂದೇ ಮಣಿವಿಧ್ಯೆಯ ಆವಿಷ್ಕಾರ ವಾಯ್ತು. ಮಾಲೆಗಳ ಆವಿಷ್ಕಾರವಾಯ್ತು. ಒಂದಾದರೂ ಹಾರವನ್ನು ಹೆಂಗಸರು ಧರಿಸಲೇ ಬೇಕು ಎಂಬ ನಿಯಮ ಈಗಲೂ ಚಾಲ್ತಿಯಲ್ಲಿದೆ. “ಅದು ಕರಿಮಣಿಹಾರದ ರೂಪದಲ್ಲಿ ಈಗ”. ಅದರರ್ಥ ಈ ಮಾಲೆಗಳ ಸಂಶೋಧನೆಗಳ ಹಿಂದೆ ಹಲವು ಆವಿಷ್ಕಾರಗಳು ಆಗಿ ಹೋಗಿವೆ ಎಂಬುದು. ಇಂತಹಾ ಉದಾಹರಣೆಗಳನ್ನು ಕೊಡುತ್ತಾ ಹೋದಲ್ಲಿ ಮುಗಿಯಲಾರದು. ಇನ್ನು ಹಾಗೆ ಇತರೆ ಕೆಲ ಹಾರ, ಕುಂಡಲ, ಕೇಯೂರ, ಕಂಕಣ,ಕಡಗ, ಉಂಗುರ, ಮೌಂಜಿ (ಉಡಿದಾರ), ಶುನಾಸೀರ, ಶುಖಮುದ್ರಾ, ಶಿರಸ್ತ್ರಾಣ, ಕವಚ, ಅಂಗುಲೀಯಕಗಳ ಬಗ್ಗೆಯೂ ವಿಸ್ತೃತ ವಿವರಣೆಗಳೂ ಈಯೋಗಿನೀ ತಂತ್ರದಲ್ಲಿ ಕಂಡುಬರುತ್ತವೆ.
ಇವೆಲ್ಲಾ ವಿಶೇಷಾಧ್ಯಯನ ಕೈಗೊಳ್ಳಬೇಕಾದ ವಿಚಾರಗಳು. ಈ ನಿಟ್ಟಿನಲ್ಲಿ ನಮ್ಮ ಜನಮಾನಸ ಹರಿದರೆ ಖಂಡಿತಾ ಲೋಕಕ್ಷೇಮ ಸಾಧಿಸಬಹುದು. ಈಗ ಬರೇ ಇಂಜನಿಯರಿಂಗ್, ವೈದ್ಯಕೀಯ ಹೊರತು ಪಡಿಸಿದ ಒಂದು ಅಧ್ಯಯನ ಭಾಗದತ್ತ ಜನ ಮಾನಸ ತಿರುಗಿದರೆ ಖಂಡಿತಾ ಒಳ್ಳೆಯದಲ್ಲವೆ? ಯುವಶಕ್ತಿಗೆ ಒಂದು ಉತ್ತಮ ಗುರಿ ತೋರಿದಂತಲ್ಲವೆ? ಯಾವಾಗಲೂ ಹಣದ ಹಿಂದೆ ಹೋಗುವ ಭ್ರಷ್ಟತೆ, ಸುಖ ಲೋಲುಪತೆಯಿಂದ ಸರಿದಾರಿಗೆ ಬರಲು ಸಹಾಯಕವಲ್ಲವೆ? ಇಂತಹಾ ಯೋಜಿತ ನಿಯಮಬದ್ಧ ವ್ಯವಸ್ಥೆಗಾಗಿ ಮತ್ತು ಸಾಮಾಜಿಕ ಅಸಮಾನತೆ ನೀಗುವತ್ತಣ ಪ್ರಯತ್ನವಾದ ಯೋಗಮಾರ್ಗವೆಂಬ ನಿರಂತರ ಸಂಶೋಧನಾ ಶೀಲ ಮಹಿಳೆಯರ ಸಾಹಸ ಸ್ತುತ್ಯರ್ಹ.
The Anatomical Man in Ayurveda
ಅವರೇ ಗುರುತಿಸಿದ ನಾಡೀಜ್ಞಾನ ಮತ್ತು ಯೋಗಾಭ್ಯಾಸ ಶರೀರವೇ ಯೋಗ ರಂಗಸ್ಥಳವೆಂಬ ವಿಚಾರಕ್ಕೆ ಆಧರಿಸಿ ಋಗ್ವೇದದಲ್ಲಿ ಒಂದು ಉದಾಹರಣೆ ಕಂಡು ಬರುತ್ತದೆ. ಮಂಡಲ 8, ಸೂಕ್ತ 19, 37 ನೇ ಮಂತ್ರವು ಶರೀರವೊಂದು ಹೇಗೆ ಯೋಗಸಾಧನಾ ವೇದಿಕೆಯೆಂದು ವಿವರಿಸುತ್ತದೆ.
ಉತ ಮೇ ಪ್ರಯಿಯೋರ್ವಯಿಯೋಃ ಸುವಾಸ್ತ್ವಾ ಅಧಿ ತುಗ್ವನಿ |
ತಿಸೃಣಾಂ ಸಪ್ತತೀನಾಂ ಶ್ಯಾವಃ ಪ್ರಣೇತಾ ಭುವದ್ವಸುರ್ದಿಯಾನಾಂ ಪತಿಃ ||
ಈ ಶರೀರವೆಂಬುದು ಆತ್ಮನಾ ಸಾಧನಾ ವೇದಿಕೆ. ಶರೀರ ರೂಪ ಪ್ರಧಾನವಲ್ಲ. ರೂಪು ಪಡೆದ ಮೇಲೆ ಅದರ ಆಕಾರ ಗುಣ ಹೊಂದಿ ತನ್ಮೂಲಕ ಸಾಧನೆ ಮಾಡುತ್ತಾ “ಶರೀರಮಾದ್ಯಂ ಖಲು ಧರ್ಮಸಾಧನಂ” ಎಂಬಂತೆ ಶರೀರಧರ್ಮವನ್ನು ಹಿಡಿತದಲ್ಲಿಟ್ಟು ಆತ್ಮ ಧರ್ಮಸಾಧನೆ ಮಾಡಬೇಕೆಂದಿದೆ. ಅದಕ್ಕೆ ಈ ಯೋಗಮಾರ್ಗವೇ ಶ್ರೇಷ್ಠ ದಾರಿಯೆನ್ನುತ್ತದೆ ಯೋಗಿನೀ ತಂತ್ರ. ಅದರಂತೆ ಕರಿಮಣಿಸರ, ಸಾಧನಾಮಾಲೆ ಧಾರಣೆ ಮಾಡಿದಲ್ಲಿ ಸಾಮಾನ್ಯ ಸಮಕಾಲೀನ ಪ್ರಾಪಂಚಿಕ ಸಮಸ್ಯೆಗಳಿಂದ ದೂರವಿರಲು ಸಾಧ್ಯವೆಂಬುದು ಮಹಾದೇವಿಯಕ್ಕನ ಅಭಿಪ್ರಾಯವಾಗಿರುತ್ತದೆ.
ವೇದೋಕ್ತ ಉಡುಗೆ ತೊಡಿಗೆ ಅಲಂಕಾರ ವೇಷ ಭೂಷಣ ಭಾಗ್ಯಗಳು
ಈಗ ವೇದೋಕ್ತ ಭೌತಶಾಸ್ತ್ರದ ವಿಚಾರಕ್ಕೆ ಬರೋಣ. ಭೌತಶಾಸ್ತ್ರ ರಚನಾಕಾರರಾದ ವೇದ ದ್ರಷ್ಟಾರ ಋಷಿಗಳೇ ಹೇಳುವ ಒಂದು ಉದಾಹರಣೆ ಉಲ್ಲೇಖಿಸುತ್ತೇನೆ, ಗಮನಿಸಿ, ವೇದದ ಅಗಾಧತೆ ಅರ್ಥಮಾಡಿಕೊಳ್ಳಿ. ಭೌತಶಾಸ್ತ್ರದ ಸಿಂಹ ಎಂಬ ಮಾನುಷ ಪ್ರಕರಣದಲ್ಲಿ “ನಿವೇಶಿನಿ” ಎಂಬ ಸೂತ್ರ ಬರುತ್ತದೆ. ಅದಕ್ಕೆ ವೇದ ಪ್ರಮಾಣ ಇಂತಿದೆ-
ಆ ಕೃಷ್ಣೇನ ರಜಸಾ ವರ್ತಮಾನೋ ನಿವೇಶಯನ್ ಅಮೃತಂ ಮರ್ತ್ಯಂಚ |
ಹಿರಣ್ಯಯೇನ ಸವಿತಾ ರಥೇನ ದೇವೋ ಯಾತಿ ಭುವನಾನಿ ಪಶ್ಯನ್ ||
ಈ ಮಾನುಷ ಪ್ರಕರಣವು ಮಾನವ ದೇಹಶಾಸ್ತ್ರವನ್ನು ವಿವರಿಸುತ್ತದೆ. ಅದರಲ್ಲಿ ಈ ನಿವೇಶಿನಿ ಸೂತ್ರವನ್ನು ಋಷಿಗಳು ಬ್ರಾಹ್ಮಿಯಲ್ಲಿ ಹೀಗೆ ವಿಸ್ತರಿಸಿದ್ದಾರೆ:
“ನೀವೀತೈಃ ವೇಷ್ಟಿತೈಃ ಶಿಂಸಿತೈಃ ನಿಯತೈಃ ಇತಿ ಚತುರ್ವಿಧಃ”
ಪರಿವೀಕ್ಷಿಸಿದಿರಾ ವೇದದ ಒಂದು ಶಬ್ದದ ಅಕ್ಷರಗಳ ಹಿಂದೆ ಅಡಗಿರುವ ಸೂತ್ರಗಳನ್ನು? ಈ ರೀತಿ ಹಲವು ಸಾಂಖ್ಯ ನಿಯಮಗಳಲ್ಲಿ, ಶಬ್ದೋತ್ಪತ್ತಿಗಳಲ್ಲಿ ಋಷಿ ಮತ್ತು ಗುರುಪರಂಪರಾನುಗತವಾಗಿ ಬಂದಂತೆ ಯಾವ ಶಾಸ್ತ್ರವನ್ನು ಹೇಳುತ್ತಿದೆಯೋ ಅದರಂತೆ ಅರ್ಥೈಸಬೇಕೇ ವಿನಃ ನಮಗೆ ಮನಬಂದಂತಲ್ಲ! ನಿವೇಶಿನಿ ಸೂತ್ರದ ಅಂಗಗಳು ದೇಹ ರಕ್ಷಣೆಗೆ ಸಂಬಂಧಪಟ್ಟಂತಹಾ ಪ್ರಕ್ರಿಯೆಗಳು. ಬಟ್ಟೆ ಹಾಕದೆ ಇರುವ ಸಂಸ್ಕೃತಿ ಉಳ್ಳ ಜನರಿಗೆ ಇದು ವಿರೋಧಾಭಾಸವಾಗುತ್ತದೆ. ಈ ಸೂತ್ರದ ಪ್ರಕಾರ ದೇಹಕ್ಕೆ ಆವಶ್ಯಕವಾದ ಆಚ್ಛಾದನೆಗಳನ್ನು ತಿಳಿಸುತ್ತದೆ. ಅದರಲ್ಲಿ ಮೊದಲಿಗೆ ನೀವೀತಿ ಎಂಬ ನಿಯಮವಿದೆ. ಅಂದರೆ ಯಾವಾಗಲೂ ಸಮ ಚಿತ್ತವಾಗಿರುವಂತಹಾ ದೇಹ ಭಂಗಿಯನ್ನು ಅಳವಡಿಸಿಕೊಳ್ಳುವುದು. ಕ್ರಮಬದ್ಧವಾದ ರೀತಿಯಲ್ಲಿ ದೇಹದ ಆಕಾರವನ್ನು ಸದಾ ಕಾಯ್ದುಕೊಂಡು ಹೋಗುವುದರಿಂದ. ಅದನ್ನು ಮಾಲಾ ಅಥವಾ ನೀಮೀತಿ ಎಂದೂ ಕರೆದರು.
ದೇಹದಲ್ಲಿ ೧೦ ಸ್ಥಲಗಳಿರುತ್ತವೆ. ಅವಕ್ಕೆ ಸಮಪ್ರಮಾಣದ ಒತ್ತಡ ಕೊಟ್ಟರೆ ಎಲ್ಲಾ ಸಂಧಿಗಳು ಹಾಗೂ ಮೂಳೆಗಳು ಸಮರ್ಥವಾಗಿ ಕೆಲಸ ನಿರ್ವಹಿಸುತ್ತವೆ. ಸಮ ಒತ್ತಡ ಬೀಳದಿದ್ದಾಗ ಯಾವುದೋ ಒಂದು ಗ್ರಂಥಿ ಅಥವಾ ಮೂಳೆಗೆ ಹೆಚ್ಚು ಒತ್ತಡ ಬಿದ್ದು ದೇಹದ ಅವ್ಯವಸ್ಥೆಗೆ ಕಾರಣವಾಗುತ್ತದೆ. ಸಮ ಸ್ಥಿತಿ ಕಾಯ್ದುಕೊಳ್ಳುವ ಕೆಲವು ಸೂತ್ರಗಳು:
೧. ಅತೀ ಹೆಚ್ಚಾಗಿ ಕತ್ತನ್ನು ತಗ್ಗಿಸಿದರೆ ಕುತ್ತಿಗೆ ನೋವು ಬರುತ್ತದೆ, ಅತೀ ಮೇಲೆ ಎತ್ತಿದರೆ ತಲೆ ಸುತ್ತು ಬರುತ್ತದೆ. ಹಾಗಾಗಿ ಕತ್ತಿನ ಸಮತೋಲನ ಅಗತ್ಯ. ಹಾಗಾಗಿ ಮಾಲೆಯು ಬೆನ್ನಿನ ರಕ್ಷಣೆಯನ್ನು ಮಾಡುತ್ತದೆ ಎಂದು ವೇಷ್ಟಿತ ಸೂತ್ರವು ಹೇಳುತ್ತದೆ.
೨. ಕುತ್ತಿಗೆ ಹಿಂಭಾಗವು ಶಿಖದ ಹಿಡಿತದಲ್ಲಿರುತ್ತದೆ. ಅದಕ್ಕೆ ಪೇಟ ಕಟ್ಟುವುದು ಅಥವಾ ಶಿಖೆ ಕಟ್ಟವುದು ರಕ್ಷಣಾತ್ಮಕ ಎಂದು ವೇಷ್ಟಿತ ಸೂತ್ರವು ಹೇಳುತ್ತದೆ. ಅದನ್ನು ಸ್ನಾನದಿಂದ ಸಮತೋಲನದಲ್ಲಿ ಇಡಬೇಕು ಎಂದು ಶಿಂಸಿತ ಸೂತ್ರವು ಹೇಳುತ್ತದೆ.
೩. ಒಂದು ಪ್ರಮಾಣ ಬದ್ಧವಾಗಿಯೇ ಬೆನ್ನಿನ ನೇರವನ್ನು ಕಾಯ್ದುಕೊಳ್ಳಬೇಕು. ಮುಂದೆ ಹೆಚ್ಚು ಬಗ್ಗಿದರೆ ಬೆನ್ನು ನೋವು ಬರುತ್ತದೆ. ಉಪವೀತವು ಉದರ ರಕ್ಷಣೆಯನ್ನು ಮಾಡುತ್ತದೆ. ಅದು ಸೊಂಟಕ್ಕೆ ಕಟ್ಟುವ ಬಟ್ಟೆಯ ಒಳಗಡೆ ಸೇರಬೇಕು. ಇದರಿಂದ ಅಲ್ಲಿಯ ಗ್ರಂಥಿಗಳ ಮೇಲೆ ಒತ್ತಡ ಬಿದ್ದು ಹೊಟ್ಟೆಯು ಮುಂದೆ ಬರದ ಹಾಗೆ ತಡೆಯುತ್ತದೆ. ಇದು ವೇಷ್ಟಿತ ಸೂತ್ರದ ವಿವರ.
೪. ಬೆನ್ನನ್ನು (ಹೊಟ್ಟೆಯನ್ನು) ಮುಂದೆ ಮಾಡಿದರೆ ಜೀರ್ಣಾಂಗಗಳು ನಿಷ್ಕ್ರಿಯೆಯಾಗುತ್ತಾ ಬರುತ್ತವೆ. ಉಪವಾಸದಲ್ಲಿ ಇರುವಾಗ ವಿಪರೀತ ಹಸಿವೆ ಉಂಟಾದರೆ ಬೆನ್ನು ಮುಂದೆ ಮಾಡಿ ಕೆಲ ಕಾಲ ಕಳೆದರೆ ಹಸಿವೆ ಕಡಿಮೆಯಾಗುತ್ತದೆ. ಹಾಗಾಗಿ ಸ್ವಲ್ಪ ಹಸಿವೆಯಾದಾಗ ಆಕಳಿಸುತ್ತಾರೆ, ಮೈಮುರಿಯುತ್ತಾರೆ. ಇವುಗಳನ್ನು ಮಾಡುವಾಗಲೂ ಬೆನ್ನು (ಹೊಟ್ಟೆ) ಮುಂದೆ ಬರುತ್ತದೆ.
೫. ಆಧಾರ ಭಾಗ:- ಸೊಂಟದ ಭಾಗ. ಇದರಿಂದ ಬೆನ್ನಿಗೆ ನೇರವನ್ನು ನೀಡಬೇಕು. ಉಡಿದಾರವು ಆಧಾರವನ್ನು ರಕ್ಷಿಸುತ್ತದೆ. ಆಧಾರದ ಎರಡೂ ಪಕ್ಕದ ಮೂಳೆಗಳ ಮೇಲೆ ಉಡಿದಾರ ನಿಲ್ಲುತ್ತದೆ. ಆಧಾರದ ನಿಯಮಿತತೆ ಇಡುತ್ತದೆ. ಅಂದರೆ ಹೊಕ್ಕಳ ಕೆಳಗೆ ಉಡಿದಾರ ಬರುತ್ತದೆ. ಪಂಚೆಯಾಗಲೀ, ಸೀರೆಯಾಗಲಿ ಹೊಕ್ಕಳ ಮೇಲೆ ಬರುತ್ತದೆ. ಇದು ವೇಷ್ಟಿತ ನಿಯಮ. ಇದನ್ನು ಅರಿಯದ ಮೂರ್ಖ ವಿದ್ವಾಂಸರು ಮಾಂಗಲ್ಯಸರವನ್ನು ಕುತ್ತಿಗೆಗೇ ಏಕೆ ಕಟ್ಟಬೇಕು, ಸೊಂಟಕ್ಕೆ ಕಟ್ಟಿದರೆ ಆಗುವುದಿಲ್ಲವೇ ಎಂದು ಅಪಹಾಸ್ಯ ಮಾಡುತ್ತಾರೆ. ಯಾವುದನ್ನು ಎಲ್ಲಿ, ಹೇಗೆ ಬಳಸಿದರೆ ದೇಹದ ಯಾವ ಸ್ಥಲದ ರಕ್ಷಣೆಯಾಗುತ್ತದೆ ಎಂಬುದನ್ನು ತಿಳಿಸುವ ವೇಷ್ಟಿತ ಸೂತ್ರವನ್ನೇ ತಿಳಿಯದವ ಎಂತಾ ವಿದ್ವಾಂಸನೋ ನಾನರಿಯೆ! - 🕉 ಧರ್ಮ ಲಹರಿ🕉
*****
No comments:
Post a Comment