ಮಣ್ಣೆತ್ತಿನ ಅಮಾವಾಸ್ಯೆ
ಜ್ಯೇಷ್ಠಮಾಸ ಕೃಷ್ಣಪಕ್ಷ ಅಮಾವಾಸ್ಯೆ
ಕಾರಹುಣ್ಣಿಮೆ
ಎತ್ತುಗಳನ್ನು ಪೂಜಿಸುವ ಹಬ್ಬ ಇದಾಗಿದೆ.
ಕಾರಹುಣ್ಣಿಮೆ ಹಬ್ಬಗಳ ಕರಕೊಂಡು ಬಂತು ಹೋಳಿ ಹುಣ್ಣಿಮೆ ಹೊಯ್ದುಕೊಂಡು ಹೋಯ್ತು ಎಂಬ ಹಿರಿಯರ ನುಡಿ ಎಷ್ಟು ಸತ್ಯ. ವೈಶಾಖದ ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ ಮಳೆಮೋಡಗಳ ಮೂಲಕ ಬರುವುದು. ಕಾರಹುಣ್ಣಿಮೆ ಮುಗಿದು ರೈತಾಪಿಗಳು ಸಡಗರದಿಂದ ಪೂಜಿಸುವ ಹಬ್ಬ ಮಣ್ಣೆತ್ತಿನ ಅಮವಾಸ್ಯೆ. ಮಣ್ಣಿನಿಂದ ಎತ್ತುಗಳನ್ನು ಮಾಡಿ ಅದರ ಮುಂದೆ ಒಂದು ಚಿಕ್ಕ ಗ್ವಾದಲಿ (ಮೇವು-ನೀರು ಹಾಕಲು) ಮಾಡಿ ಪೂಜಿಸುವ ಸಂಪ್ರದಾಯವಿದೆ. ವರ್ಷದಲ್ಲಿ 5 ಬಾರಿ ಮೃತ್ತಿಕಾ ಪೂಜೆಯನ್ನು ಮಾಡುವುದಾಗಿ ಶಾಸ್ತ್ರವು ನಮಗೆ ಆಜ್ಞೆ ಮಾಡಿದೆ. ಅದರಲ್ಲಿ ಇದು ಒಂದು. ಈ ದಿನ ಮಣ್ಣಿನ ಎತ್ತು ಮಾಡಿ, ಅದರಲ್ಲಿ ವೃಷಭವನ್ನು ಆವಾಹನೆ ಮಾಡಿ ಷೋಡಶೋಪಚಾರಗಳಿಂದ ಪೂಜಿಸಬೇಕು.
ಪೂಜ್ಯಭಾವ
ಮಣ್ಣನ್ನೇ ನಂಬಿ ಮಣ್ಣಿಂದ ಬದುಕೇನ
ಮಣ್ಣೆನಗೆ ಮುಂದೆ ಹೊನ್ನ ಅಣ್ಣಯ್ಯ
ಮಣ್ಣೇ ಲೋಕದಲಿ ಬೆಲೆಯಾದ್ದು
ಎಂದು ಹುಟ್ಟಿನಿಂದ ಚಟ್ಟದವರೆಗೂ ಮಣ್ಣ ಜೊತೆಗೆ ನಮ್ಮ ಬದುಕಿನಲ್ಲಿ ಆ ಮಣ್ಣಿನಿಂದ ಆರಂಭವಾಗುವ ಮಣ್ಣೆತ್ತು ಅಮವಾಸ್ಯೆ. ತಮ್ಮ ರಾಸುಗಳಿಗೆ ಮಳೆಯಿಂದ ಕೆಲವು ಸಮಯ ಬಿಡುವು ಕೊಟ್ಟು ಅವುಗಳನ್ನು ಪೂಜ್ಯನೀಯವಾಗಿ ಗೌರವಿಸುವ ಸಂಪ್ರದಾಯ ಮಣ್ಣೆತ್ತಿನ ಅಮವಾಸ್ಯೆ. ಈ ಅಮವಾಸ್ಯೆಗೆ ತಮ್ಮ ಮನೆಯ ಎತ್ತುಗಳನ್ನು ಸಿಂಗರಿಸುವುದಷ್ಟೇ ಅಲ್ಲ. ಎತ್ತುಗಳು ಇರಲಿ ಇಲ್ಲದಿರಲಿ ಎಲ್ಲರೂ ಗೌರವಿಸುವರು. ಮಣ್ಣಿಂದ ಎತ್ತಿನ ಮೂರ್ತಿಗಳನ್ನು ಮಾಡಿ ಅವುಗಳನ್ನು ಮನೆಯಲ್ಲಿ ಇಟ್ಟು ಅಮವಾಸ್ಯೆಯಂದು ಪೂಜಿಸುವರು ಮರುದಿನ ಪಾಡ್ಯ ಕೂಡ ಪೂಜಿಸಿ ಹೊಲ ಹೊಂದಿದವರು ಅವುಗಳನ್ನು ನಾಗರ ಪಂಚಮಿಯವರೆಗೂ ದಿನನಿತ್ಯ ಪೂಜಿಸುತ್ತ ಕೆರೆಕೆಟ್ಟಂಬಲಿ ಅಂತ ಮಾಡಿ ಅಂಬಲಿ ಮಾಡಿಕೊಂಡು ಪಂಚಮಿಯ ನಂತರದ ದಿನ ತಮ್ಮ ಹೊಲಗಳಿಗೆ ತಗೆದುಕೊಂಡು ಹೋಗಿ ಇಡುವರು. ಅಂದರೆ ಮಳೆಯಿಂದ ಬಿತ್ತಿದ ಫಸಲು ಚೆನ್ನಾಗಿ ಬರಲಿ, ತಮ್ಮ ರಾಸುಗಳಿಗೆ ಯಾವ ತೊಂದರೆಯೂ ಬಾರದಿರಲಿ ಎಂದುಕೊಂಡು ಭಕ್ತಿಯಿಂದ ಸ್ಮರಿಸುವ ಅಮವಾಸ್ಯೆಯಿದು.
ಸಮೃದ್ಧಿಯ ನಿರೀಕ್ಷೆಯಲ್ಲಿ
ರೈತರು ಎತ್ತುಗಳನ್ನು ಎಷ್ಟರ ಮಟ್ಟಿಗೆ ನಂಬಿರುವರೆಂದರೆ ಕಾರಹುಣ್ಣಿಮೆಯ ಕರಿ ಹರಿದು ನಂತರ ಮನೆಗೆ ತರುವಾಗ ಮನೆಯ ಬಾಗಿಲಲ್ಲಿ ತಾವು ಆ ವರ್ಷ ತಮ್ಮ ಹೊಲಗಳಿಗೆ ಯಾವ ಬೆಳೆ ಬಿತ್ತಬೇಕು ಎಂದು ನಿರ್ಧರಿಸುವರೋ ಆ ಎಲ್ಲ ಧಾನ್ಯಗಳನ್ನು ಮನೆಯ ತಮ್ಮ ಎತ್ತು ಹಾದು ಹೋಗುವ ಬಾಗಿಲಲ್ಲಿ ಇಡುತ್ತಾರೆ ಆಗ ಎತ್ತು ತನ್ನ ಕಾಲಿನಿಂದ ಯಾವ ಧಾನ್ಯವಿದ್ದ ಸೇರನ್ನು ತಳ್ಳಿ ಮುಂದೆ ಸಾಗುತ್ತದೆಯೋ ಆ ಧಾನ್ಯದ ಬೆಳೆಯನ್ನು ಆ ವರ್ಷ ತಮ್ಮ ಹೊಲಕ್ಕೆ ಹಾಕುವ ಮಟ್ಟಿಗೆ ಎತ್ತುಗಳ ಮೇಲೆ ಭಕ್ತಿಯನ್ನು ಹೊಂದಿರುವರು. ಕಾರಹುಣ್ಣಿಮೆಗೆ ಮಳೆ ಬಿದ್ದು ತಮ್ಮ ಹೊಲಗಳಿಗೆ ಬಿತ್ತನೆ ತಯಾರಿ ಮಾಡಿದ ರೈತ ಮಣ್ಣೆತ್ತು ಅಮವಾಸ್ಯೆ ದಿನ ಎತ್ತುಗಳನ್ನು ಸಿಂಗರಿಸಿ ಅವುಗಳಿಗೂ ಕೂಡ ವಿಶ್ರಾಂತಿ ನೀಡುವ ಜೊತೆಗೆ ಪೂಜ್ಯನೀಯವಾಗಿ ಪೂಜಿಸುವನು. ಅವುಗಳಿಗೆ ಉತ್ತಮ ಆಹಾರ ನೀಡುವುದು. ಚೆನ್ನಾಗಿ ನೋಡಿಕೊಳ್ಳುವುದು ಮುಂದೆ ಶ್ರಾವಣ ಆರಂಭವಾಗುವ ಹೊತ್ತಿಗೆ ಅವು ವಿಶ್ರಾಂತಿಯಿಂದ ಮತ್ತೆ ಹೊಲ -ಗದ್ದೆಗಳ ಕೆಲಸಕ್ಕೆ ಅಣಿಯಾಗಲೆಂದು ಪೂಜಿಸುವನು. ಅಷ್ಟೇ ಅಲ್ಲ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಕೂಡ ಜಗುಲಿಯ ಮೇಲಿಟ್ಟು ನಾಗರ ಪಂಚಮಿಯ ನಂತರದ ದಿನ ಕೆರೆಕಟ್ಟಂಬಲಿ ಅಂತಾ ಆಚರಿಸುವರು. ಈ ದಿನ ಮಣ್ಣೆತ್ತಿನ ಅಮವಾಸ್ಯೆ ಪೂಜಿಸಿದ ಮೂರ್ತಿಗಳನ್ನು ಮನೆಯಲ್ಲಿ ಅಂಬಲಿ ಮಾಡಿಕೊಂಡು ಹೊಲಕ್ಕೆ ಒಯ್ದು ಒಂದೆಡೆ ಬೇವಿನ ಮರವಿದ್ದರೆ ಅವುಗಳ ಕೆಳಗೆ ಇಟ್ಟು ಅಂಬಲಿ ಎಡೆ ಹಿಡಿದು ಬರುವರು. ಅಂಬಲಿ ಮನಸಿಗೆ ತಣಿವು. ಅಂಬಲಿ ಕುಡಿದ ಮನಸು ಹೇಗೆ ತಣಿದು ಮತ್ತೆ ಚೇತನಗೊಳ್ಳುವುದೋ ಹಾಗೆ ತನ್ನ ಜಾನುವಾರುಗಳ ಬದುಕು ಕೂಡ ತಣಿವಿನಿಂದ ವರ್ಷವಿಡೀ ಕೂಡಿರಲಿ ಎಂಬ ಭಕ್ತಿ ಭಾವ.
ಪೂಜೆ ಹೀಗೆ...
ಕಾರ ಹುಣ್ಣಿಮೆಮುಗಿದು ಬರುವ ಅಮವಾಸ್ಯೆಯೇ ಮಣ್ಣೆತ್ತಿನ ಅಮವಾಸ್ಯೆ. ಹೊಲದಿಂದ ಮಣ್ಣನ್ನು ತಂದು ಜೋಡಿ ಎತ್ತುಗಳನ್ನು ತಯಾರಿಸುತ್ತಾರೆ. ಭೂಮಿಯನ್ನು ಉಳುವ ಸಂಕೇತವಾಗಿ ಎತ್ತುಗಳನ್ನು ದೊಡ್ಡ ಸಣ್ಣ ಆಕಾರಗಳಲ್ಲಿ ತಯಾರಿಸಿಕೊಳ್ಳುತ್ತಾರೆ. ಕುಂಬಾರರ ಮನೆಗಳಿಂದಲೂ ತಯಾರಿಸಿದ ಜೋಡಿ ಎತ್ತುಗಳನ್ನು ಖರೀದಿಸಿ ತರುತ್ತಾರೆ. ಕುಂಬಾರರು ಎತ್ತುಗಳೊಂದಿಗೆ ಒಂದಿಷ್ಟು ಹಸಿ ಮಣ್ಣನ್ನೂ ಕೊಡುತ್ತಾರೆ. ಈ ಹಸಿ ಮಣ್ಣಲ್ಲಿ ದನಗಳಿಗೆ ಹುಲ್ಲು ತಿನ್ನಲು ಗ್ವಾದಲಿ ಮಾಡುತ್ತಾರೆ. ಮಣ್ಣಿನ ಎತ್ತುಗಳನ್ನು ಸಿಂಗರಿಸುತ್ತಾರೆ. ಸಿಂಗರಿಸಿದ ಜೋಡೆತ್ತುಗಳಿಗೆ ಆರತಿ ಎತ್ತಿ ಪೂಜಿಸುತ್ತಾರೆ.
-----
ರೈತನ ಆಸರೆ
ಮುಂಗಾರಿನ ಆರಂಭದ ಹಬ್ಬ ಮಣ್ಣೆತ್ತಿನ ಅಮವಾಸ್ಯೆ. ಈ ದಿನದಂದು ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯವಿದೆ. ಕಾರ ಹುಣ್ಣಿಮೆ ನಂತರ ಬರುವ ಈ ಹಬ್ಬ ರೈತಾಪಿ ಜನರು ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ಪೂಜಿಸಿ ಸಂಭ್ರಮ ಪಡುವ ಹಬ್ಬ. ಕೃಷಿಕರ ಅತ್ಯಂತ ಒಡನಾಡಿಯಾಗಿರುವ ದನಕರುಗಳನ್ನು ಕಾರ ಹುಣ್ಣಿಮೆಯಲ್ಲಿ ವಿಶೇಷವಾಗಿ ಮೈ ತೊಳೆದು, ಬಣ್ಣ ಹಚ್ಚಿ, ವಿವಿಧ ಪರಿಕರಗಳಿಂದ ಸಿಂಗಾರ ಮಾಡಿ, ಹೋಳಿಗೆ, ಕಡಬು ಮುಂತಾದ ಸಿಹಿ ತಿನಿಸುಗಳನ್ನು ಮಾಡಿ ಎಡೆ ಹಿಡಿದು ಸಂಜೆಗೆ ಕರಿ ಹರಿಯುವ ಸಂಪ್ರದಾಯವಿದೆ. ದನಕರುಗಳನ್ನು ಮನಬಂದಂತೆ ಓಡಾಡಿಸುವ ಮೂಲಕ ತಿಂಗಳೊಪ್ಪತ್ತಿನಿಂದ ವಿಶ್ರಾಂತಿಗೆ ಸರಿದಿದ್ದ ಅವುಗಳನ್ನು ಮತ್ತೆ ಕೃಷಿಕಾಯಕಕ್ಕೆ ಸಜ್ಜು ಮಾಡುತ್ತಾರೆ.
***
ಮೃಣ್ಮಯ ವೃಷಭ ಪೂಜಾವಿಧಿಃ || ಮಣ್ಣೆತ್ತಿನ ಅಮಾವಾಸ್ಯೆ
ಪೀಠಿಕೆ :
ಮೃತ್ತಿಕಾ ವೃಷಭಪೂಜೆ ಜ್ಯೇಷ್ಠ ಬಹುಳ ಅಮಾವಾಸ್ಯೆಯಂದು ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಪೂಜಿಸಬೇಕು.ಭಾರತದೇಶವು ಕೃಷಿ ಪ್ರಧಾನವಾಗಿದ್ದು,ಮನುಷ್ಯನ ಆಹಾರ ಸಾಮಗ್ರಿಗಳು ಭೂಮಿಯಲ್ಲಿ ಹುಟ್ಟುವುದಾದರೆ ಭೂಮಿಯಲ್ಲಿ ಬೀಜ ಬಿತ್ತಲು,ಬಿತ್ತಿದ ಫಸಲು ಬಂದ ಮೇಲೆ ಧಾನ್ಯರೂಪದಿಂದ ನಾವು ಪಡೆಯಲು ಈ ವೃಷಭಗಳ ಸೇವೆ ಅತ್ಯಂತ ಅವಶ್ಯವಾಗಿದೆ.ವೃಷಭವು ಶಿವನ(ರುದ್ರದೇವರ) ವಾಹನವಾದ್ದರಿಂದ ಶಿವನು ನಂದಿಶನೆಂದೇ ಪ್ರಸಿದ್ಧನಾಗಿದ್ದಾನೆ.ಹೀಗೆ ಮಾನವನು ವೃಷಭಗಳಿಗೆ ಅತ್ಯಂತ ಕೃತಜ್ಞನಾಗಿದ್ದಾನೆ.ಪಂಚಭೂತಗಳಿಂತ ನಿರ್ಮಿತವಾದ ಈ ದೇಹವು ಪಂಚಭೂತಗಳಲ್ಲಿ ಒಂದಾದ ಭೂಮಿಯ ಅಂಶದಿಂದ ಕೂಡಿದೆ.ಎಲ್ಲರ ಮಾತೆ ಎನಿಸಿದ ಭೂಮಾತೆಯನ್ನು ವರ್ಷದಲ್ಲಿ ಐದು ಬಾರಿ ಪೂಜಿಸುವ ಪದ್ಧತಿ ನಮ್ಮ ದೇಶದಲ್ಲಿ ಇದೆ.ಅವುಗಳೆಂದರೆ - ೧) ಮಣ್ಣೆತ್ತಿನ ಪೂಜೆ ೨) ನಾಗಪೂಜೆ ೩) ಗೋಕುಲದ ಪೂಜೆ ೪) ಗಣೇಶನ ಪೂಜೆ ಮತ್ತು ೫) ಗೌರಿ ಪೂಜೆ.
ಭೂದೇವಿಯ ಪೂಜೆಯೂ ಮಣ್ಣೆತ್ತಿನ ಪೂಜೆಯಲ್ಲಿ ಅಡಗಿದೆ.ಈ ದಿವಸ ವಿಶೇಷ ಅಡುಗೆಯನ್ನು ಮಾಡಿ ಹರಿವಾಯುಗಳಿಗೆ ನಿವೇದಿಸಿ,ವೃಷಭಗಳಿಗೆ ನೈವೇದ್ಯ ಸಲ್ಲಿಸಿ ಭೋಜನ ಮಾಡುವುದು ರೂಢಿಯಲ್ಲಿ ಬಂದಿದೆ.
ಆಚರಿಸುವ ವಿಧಾನ:
ಆಚಮ್ಯ,ಪ್ರಾಣಾಯಾಮ್ಯ,ದೇಶಕಾಲೌ ಸಂಕೀರ್ತ್ಯ.
ಮಮ ಸಪರಿವಾರಸ್ಯ ಕ್ಷೇಮ - ಸ್ಥೈರ್ಯ - ವೀರ್ಯ - ವಿಜಯ - ಅಭಯ - ಆಯುಃ - ಆರೋಗ್ಯ - ಐಶ್ವರ್ಯಾದಿ ಅಭಿವೃದ್ಧಿಪೂರ್ವಕಂ ಸಮಸ್ತ ಮಂಗಲಾವಾಪ್ತ್ಯರ್ಥಂ ಜ್ಯೇಷ್ಠ ಅಮವಾಸ್ಯಾಯಾಂ ಪ್ರತಿವಾರ್ಷಿಕಂ ಕುಲಾಚಾರತ್ವೇನ ವಿಹಿತಂ ಸಸ್ಯಾಭಿವೃದ್ಧ್ಯರ್ಥಂ ಈತಿಬಾಧಾ ವಿನಾಶ - ಸುವೃಷ್ಟ್ಯಾದಿ ಪ್ರಾಪ್ತ್ಯಾ ಧನಧಾನ್ಯ ಸಮೃದ್ಧ್ಯರ್ಥಂ ಶ್ರೀಉಮಾಪತ್ಯಂತರ್ಗತ - ಭಾರತೀರಮಣ ಮುಖ್ಯಪ್ರಾಣಾಂತರ್ಗತ ಜಯಾಪತಿ ಸಂಕರ್ಷಣಾಭಿನ್ನ ಶ್ರೀಲಕ್ಷ್ಮೀನರಸಿಂಹ ಪ್ರೇರಣೆಯಾ ಶ್ರೀಲಕ್ಷ್ಮೀನರಸಿಂಹ ಪ್ರಿತ್ಯರ್ಥಂ ಮೃಣ್ಮಯ ವೃಷಭ ಪೂಜನಂ ಕರಿಷ್ಯೇ || (ಎಂದು ಮಂತ್ರಾಕ್ಷತೆ ನೀರು ಬಿಡಬೇಕು).
ನಂತರ ಕಲಶಪೂಜಾದಿಗಳನ್ನು ಮಾಡಿಕೊಂಡು ಮಣ್ಣೆತ್ತುಗಳಲ್ಲಿ ಜಯಾಪತಿ ಸಂಕರ್ಷಣನ ಸಂಕ್ಷೀಪ್ತವಾಗಿ ಪ್ರಾಣಪ್ರತಿಷ್ಠೆ ಮಾಡಿ ಪುರುಷಸೂಕ್ತದಿಂದ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.
ಧ್ಯಾನ ಶ್ಲೋಕ:
ಧರ್ಮಸ್ತ್ವಂ ವೃಷರೂಪೇಣ ಜಗದಾನಂದಕಾರಕ |
ಅಷ್ಟಮೂರ್ತೇರಧಿಷ್ಠಾನಂ ಅತಃ ಪಾಹಿ ಸನಾತನ ||
(ವೇದೋಕ್ತ ಪೂಜೆ ಮಾಡುವುದಾದರೆ ಈ ಕೆಳಗಿನ ಮಂತ್ರದಿಂದ ಪೂಜೆ ಮಾಡಬೇಕು)
ಋಷಭಮೇತ್ಯಸ್ಯ ಮಂತ್ರಸ್ಯ ಭೀಮಸೇನ ಋಷಿಃ,ವಿರಾಜಪುತ್ರೋ ಋಷಭ ಋಷಿಃ,ಶಕ್ವರೀ ಛಂದಃ,ವಾಚಸ್ಪತಿರ್ದೇವತಾ,ಋಷಭನಾಮಕ ವಿಷ್ಣ್ವಾವಾಹನೆ ವಿನಿಯೋಗಃ ||
*****
ಪವಿತ್ರವಾದ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬದ ವಿಶೇಷತೆ.
ಇದು ರೈತರ ಪಾಲಿನ ವಿಶೇಷವಾದ ದಿನ. ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ಅಥವಾ ಅಮಾವಾಸ್ಯೆ ಆದ ೫ ದಿನಗಳ ನಂತರ ರೈತರು ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಇಟ್ಟು ಭಕ್ತಿಯಿಂದ ಪೂಜಿಸುತ್ತಾರೆ.
ಸರಿಯಾಗಿ ಹದಿನೈದು ದಿನಗಳ ಹಿಂದೆ ಕಾರುಹುಣ್ಣಿಮೆಯಂದು ರೈತರು ದಿನನಿತ್ಯ ದುಡಿಯುವ ರೈತರ ಪಾಲಿನ ದೈವವೇ ಆಗಿರುವ ಎತ್ತುಗಳನ್ನು ಸಿಂಗರಿಸಿ ಸಂಜೆ ಊರಲ್ಲಿ ಮೆರವಣಿಗೆ ಮಾಡಿ ಸಿಹಿ ತಿನಿಸುಗಳನ್ನು ತಯಾರಿಸಿ ವಿಶಿಷ್ಟವಾಗಿ ಸಂಭ್ರಮದಿಂದ ಆಚರಿಸುವ ಕಾರ ಹುಣ್ಣಿಮೆಯ ನಂತರ ಬರುವುದೇ ಮಣ್ಣೆತ್ತಿನ ಅಮಾವಾಸ್ಯೆ.ವಿಶೇಷವಾಗಿ ನಮ್ಮ ಉತ್ತರ ಕರ್ನಾಟಕದ ಭಾಗದಲ್ಲಿ ಈ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ಅಥವಾ ಅಮಾವಾಸ್ಯೆ ಆದ ೫ ದಿನಗಳ ನಂತರ ರೈತರು ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಪೂಜಿಸುವ ಮೂಲಕ ರೈತನ ಬದುಕಿನ ಎರಡು ಕಣ್ಣುಗಳಾಗಿ ಮಣ್ಣು ಮತ್ತು ಎತ್ತು ಎರಡನ್ನೂ ಪೂಜಿಸುವ ಪರಿಪಾಠವನ್ನು ಹೊಂದಿದ್ದಾರೆ. ನಮ್ಮಉತ್ತರ ಕರ್ನಾಟಕ ಭಾಗದಲ್ಲಿ ಅಥವಾ ಅಮಾವಾಸ್ಯೆ ದಿನದಿಂದ ಮುಂದೆ ಬರುವ ಹಬ್ಬಗಳು ವಿಶೇಷವಾಗಿ ಮಣ್ಣಿನಿಂದಲೇ ತಯಾರಿಸಿದ ನಾಗರ ಪಂಚಮಿಯಂದು ನಾಗಪ್ಪ,
ಗೌರಿ ಹುಣ್ಣಿಮೆಯಂದು ಗೌರಿ, ಗಣೇಶ ಚೌತಿಯಂದು ಗಣಪತಿ ಹೀಗೆ ಮಣ್ಣಿನ ಮೂರ್ತಿಗಳನ್ನಿಟ್ಟಾರಾಧಿಸುವ ಪದ್ಧತಿ ಮೊದಲ್ನಿಂದ್ಲೂ ಬಂದಿದೆ.
ಈ ಪವಿತ್ರವಾದ ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ಭಕ್ತಿಯಿಂದ ಪೂಜೆಯಲ್ಲಿ ತೊಡಗಿಕೊಳ್ಳುವ ಎಲ್ಲ ಸಮಸ್ತ ಜನಾಂಗದ ಬಾಂಧವರಿಗೆ ವಿಶೇಷವಾಗಿ ರೈತರಿಗೆ ಒಳ್ಳೆಯದಾಗಲಿ ಎಂದು ಮಣ್ಣೆತ್ತಿನ ಅಮಾವಾಸ್ಯೆಯ ದಿನದಂದು ಜೋಡೆತ್ತಿನ ಬಸವಣ್ಣನಲ್ಲಿ ಪ್ರಾರ್ಥಿಸುತ್ತೇನೆ.
***
ಮಣ್ಣೆತ್ತಿನ ಅಮಾವಾಸ್ಯೆ
(ಮೃತ್ತಿಕಾ ವೃಷಭ ಪೂಜೆ)
ನಮ್ಮ ಭಾರತ ವೈವಿಧ್ಯತೆಯ ದೇಶ. ನಮ್ಮಲ್ಲಿರುವ ಸಂಪ್ರದಾಯ, ಹಬ್ಬ, ಆಚರಣೆಗಳಿಗೆ ಬಹಳ ಮಹತ್ವವಿದೆ. ಅದೇ ರೀತಿ ರೈತ ವರ್ಗಕ್ಕೇ ಹಲವಾರು ಹಬ್ಬಗಳಿವೆ. ರೈತರ ಉಸಿರೇ ಮಣ್ಣು ಮತ್ತು ಜಾನುವಾರುಗಳು, ಮಣ್ಣೆತ್ತಿನ ಅಮಾವಾಸ್ಯೆ ಸಾಮಾನ್ಯ ಜನರಿಗೆ ವಿಶೇಷ ಇಲ್ಲದಿದ್ದರೂ ರೈತನಿಗೆ ಅತ್ಯಂತ ಮೆಚ್ಚಿನ ಹಬ್ಬ.
ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣಿನಿಂದ ಮಾಡಿದ ಎತ್ತುಗಳಿಗೆ ಅಲಂಕರಿಸಿ ಹಬ್ಬವನ್ನು ಆಚರಿಸಲಾಗುವುದು.
ಮಣ್ಣೆತ್ತಿನ ಅಮವಾಸ್ಯೆ ದಿನ ಮಣ್ಣಿನ ಎತ್ತಿನ ಪ್ರತಿಮೆಗಳಿಗೆ ಸಿಂಗರಿಸಿ ಪೂಜೆ ಮಾಡಲಾಗುವುದು.
ಮುಂಗಾರು ಮಳೆ ಸಾಮಾನ್ಯವಾಗಿ ಗ್ರೀಷ್ಮ ಋತುವಿನ ಅಂತ್ಯಭಾಗ ಮತ್ತು ವರ್ಷ ಋತುವಿನ ಆರಂಭವಾಗ, ಅಂದರೆ ಜೂನ್ ವೇಳೆಗೆ, ಪ್ರಾರಂಭವಾದಾಗ ಕೃಷಿ ಚಟುವಟಿಕೆಗಳು ಕೂಡ ಚುರುಕಾಗುತ್ತದೆ.
ಪುನರ್ವಸು ಮಳೆ ಪ್ರಾರಂಭವಾಗುವ ಹೊತ್ತಿಗೆ ಬಿತ್ತನೆ ಆಗಿ, ನಾಟಿ ಕೂಡ ಮುಗಿದಿರುತ್ತದೆ, ಈ ಸಂಭ್ರಮವನ್ನು ಆಚರಿಸಲು ರೈತರು ಮಣ್ಣೆತ್ತಿನ ಅಮವಾಸ್ಯೆ ಆಚರಿಸುತ್ತಾರೆ.
ಈ ದಿನ ರೈತರು ಹೊಲಕ್ಕೆ ಹೋಗಿ, ಹೊಲದ ಮಣ್ಣು ತಂದು ಆ ಮಣ್ಣಿನಿಂದ ಜೋಡಿ ಎತ್ತುಗಳನ್ನು ತಯಾರಿಸುತ್ತಾರೆ. ನಂತರ ಅವುಗಳಿಗೆ ಬಣ್ಣ ಹಚ್ಚಿ ಸಿಂಗಾರ ಮಾಡಿ ಪೂಜಿಸಲಾಗುವುದು. ನಂತರ ಎತ್ತುಗಳಿಗೆ ಹೋಳಿಗೆ, ಸಿಹಿ ಕಡಬು ಸಮರ್ಪಿಸಲಾಗುತ್ತದೆ. ನಂತರ ತಮ್ಮ ಜಮೀನಿನಲ್ಲಿ ಆ ಎತ್ತುಗಳನ್ನು ಇಟ್ಟು ಭೂತಾಯಿ ಹಾಗೂ ಎತ್ತುಗಳು ತಮ್ಮ ಬೆಳೆಯನ್ನು ರಕ್ಷಣೆ ಮಾಡಿ ಎಂದು ಬೇಡಿಕೊಳ್ಳುವುದು ವಾಡಿಕೆ. ಜೊತೆಗೆ ಮಣ್ಣಿನ ಆರಾಧನೆಯನ್ನು ಕೂಡ ಮಾಡಲಾಗುವುದು. ಮಣ್ಣಿನಿಂದ ಮಾಡಿದ ಗಣಪತಿ, ನಾಗಪ್ಪನ ನಾವು ಗಣೇಶ ಚತುರ್ಥಿ ಮತ್ತು ನಾಗರಚೌತಿ ದಿನ ಪೂಜಿಸುವಂತೆ ರೈತ ಮಣ್ಣೆತ್ತಿನ ಅಮಾವಾಸ್ಯೆ ಹಬ್ಬ ಆಚರಿಸುತ್ತಾನೆ.
ನರಹರಿ ಸುಮಧ್ವಸೇವಾ
***
ಮಣ್ಣೆತ್ತಿನ ಅಮವಾಸ್ಯ
ಜಗತ್ ಸೃಷ್ಟಿ ಪರಮಾತ್ಮನ ಅನಾಯಾಸದ ಲೀಲೆ. ವೈಭವದ ವಿಲಾಸ. ಅದ್ಭುತ ಕಾರ್ಯ. ತನ್ನ ಹುಬ್ಬನ್ನು ಕೊಂಚ ಏರಿಳಿಸುವ ಮೂಲಕ ಸೃಷ್ಟಿಸಬಲ್ಲ, ಪ್ರಳಯ ಮಾಡಬಲ್ಲ.
ತಾನೊಬ್ಬನೇ ಎಲ್ಲವನ್ನು ಮಾಡಬಲ್ಲವನಾದರೂ ದೇವತೆಗಳನ್ನು ಕೂಡಿಸಿ ಕೊಳ್ಳುತ್ತಾನೆ. ಅವರಿಗೆ ಸಾಧನೆಯಾಗಬೇಕಲ್ಲ. ಮಕ್ಕಳಿಂದ ಮರಳಿನ ಮನೆ ಮಾಡಿಸಿ ಆಡಿಸಿ ಕೆಡಿಸುವಂದದಲಿ.
೨೪ ತತ್ವಾಭಿಮಾನಿ ದೇವತೆಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಸೃಷ್ಟಿಗೆ ಬೇಕಾಗುವ ತತ್ವಗಳೂ ೨೪.
ಪಂಚಮಹಾಭೂತ + ಪಂಚತನ್ಮಾತ್ರಾ + ಪಂಚಜ್ಞಾನೇಂದ್ರಿಯ + ಪಂಚಕರ್ಮೇಂದ್ರಿಯ + ಮನಸ್ಸು ತತ್ವ + ಅಹಂಕಾರ ತತ್ವ + ಮಹತ್ ತತ್ವ + ಅವ್ಯಕ್ತ ತತ್ವ. =೨೪.
ಇವುಗಳಿಗೆ ೨೪ ಅಭಿಮಾನಿ ದೇವತೆಗಳು.
ಈ ತತ್ವಗಳ ಮತ್ತು ದೇವತೆಗಳ ಉಪಕಾರ ನಮ್ಮ ಮೇಲೆ ಅಪಾರ. ಮಳೆ, ಬೆಳೆ, ಧಾನ್ಯಗಳಿಂದ ಹಿಡಿದು ನಾವು ಉಪಯೋಗಿಸುವ ಮತ್ತು ಬ್ರಹ್ಮಾಂಡದಲ್ಲಿ ದೊರೆಯುವ ಪ್ರತಿಯೊಂದು ಪದಾರ್ಥವೂ ಇವುಗಳಿಂದಲೇ ನಿರ್ಮಿತ. ನಮ್ಮ ಅಸ್ತಿತ್ವ ತತ್ವಗಳಮೇಲೆಯೇ ಅವಲಂಬಿತ.
ಬರಿ ಜಡತತ್ವಗಳು ಏನೂ ಮಾಡಲಾರವು.ತತ್ವಾಭಿಮಾನಿ ದೇವತೆಗಳು ತತ್ವಗಳಲ್ಲಿ ನಿಂತು ಮಾಡಿಸಬೇಕು.
ಹೀಗೆ ಒಟ್ಟಾರೆ ನಮ್ಮ ಜೀವನ, ಸಾಧನೆ ಎಲ್ಲವೂ ತತ್ವ ಮತ್ತು ತತ್ ಅಭಿಮಾನಿ ದೇವತೆಗಳ ಕೃಪೆ,
ತತ್ವಾಭಿಮಾನಿದೇವತೆಗಳು ಹೀಗೆ ನಮ್ಮನ್ನು ಪೋಷಿಸುತ್ತಾರೆ - ಲೌಕಿಕವಾಗಿ, ಆಧ್ಯಾತ್ಮಿಕವಾಗಿ.
ತತ್ವಗಳೇ ಪದಾರ್ಥ ಮಾಧ್ಯಮಗಳು.
ಭೂಮಿ, ನೀರು, ಅಗ್ನಿ, ವಾಯು, ಆಕಾಶ - ಪಂಚಭೂತಗಳು.
ಗಂಧ,ರಸ, ರೂಪ, ಸ್ಪರ್ಶ, ಶಬ್ದ - ಪಂಚತನ್ಮಾತ್ರಗಳು.
ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು.
ಇವಿಲ್ಲದೇ ನಮ್ಮ ಜೀವನವಿಲ್ಲ. ಅವು ಬಹು ಉಪಕಾರಿ ನಮಗೆ. ಅವರ ಉಪಕಾರ ಸ್ಮರಿಸಬೇಕಲ್ಲ.
ಕೃತಜ್ಞತೆ ನಮ್ಮ ಸಂಸ್ಕೃತಿಯ ಅಂಗ. ಹಾಸುಹೊಕ್ಕಾಗಿ ಬಂದಿದೆ, ರಕ್ತಗತವಾಗಿದೆ.
ಅದು ಹಬ್ಬ, ಹುಣ್ಣಿಮೆ, ದೇವತಾ ಆರಾಧನೆ, ಪುಣ್ಯ ದಿನ, ಪರ್ವಕಾಲ, ಗ್ರಹಣ, ಜಯಂತಿ, ಪುಣ್ಯ ತಿಥಿ, ಇತಿಹಾಸ ಪುರಾಣಗಳ ಮಹತ್ವದ ಘಟನೆಗಳು ಅವ ತಾರ - ಹೀಗೆ ನೂರಂಟು ನೆಪಗಳು. ಆಯಾ ದೇವತೆಗಳ ಉಪಕಾರ ಸ್ಮರಣೆ ಮತ್ತು ಧನ್ಯವಾದ ಸಮರ್ಪಣೆ ಇವು ಮುಖ್ಯ ಉದ್ದೇಶ.
ಮಣ್ಣೆತ್ತಿನ ಅಮವಾಸ್ಯೆ - ಮಣ್ಣಿನ ಎತ್ತಿನ ಪೂಜೆಯೂ ಹೌದು, ಮಣ್ಣಿನ ಪೂಜೆಯೂ ಹೌದು. ಅದೇ ಭೂಮಿ ತತ್ವ. ಧರಾದೇವಿ ಪೂಜೆ.
ನದಿಪೂಜೆ, ಗಂಗಾಪೂಜೆ, ಸಮುದ್ರ ಪೂಜೆ, ದೀಪಾವಳಿಯ ನೀರು ತುಂಬುವ ಹಬ್ಬ, ವರುಣಪೂಜೆ, ಇವೆಲ್ಲ ಜಲ ತತ್ವದ ಪೂಜೆ.
ಅಗ್ನಿ ಪೂಜೆಯಂತೂ ನಿತ್ಯ. ವೈಶ್ವಾನರ ಯಜ್ಞ, ಹೋಮ ಹವನಾದಿಗಳು, ನವರಾತ್ರಿಯ ಘಟ್ಟದ ದೀಪದ ಪೂಜೆ, ದೀಪಾವಳಿ ಬೆಳಕಿನ ಹಬ್ಬ, ಇವೆಲ್ಲ ಅಗ್ನಿ ಪೂಜೆಯೇ.
ಮತ್ತೆ ವಾಯು ಪೂಜೆ ಪ್ರಾಣದೇವರನ್ನು ಎಲ್ಲೆಲ್ಲೂ ಪೂಜಿಸುತ್ತೇವೆ. ಶ್ವಾಸೋಚ್ಛಾಸಗಳೇ ವಾಯುಜಪ ಅನ್ನುತ್ತೇವೆ.
ಆಕಾಶಕ್ಕೆ ಅಭಿಮಾನಿ ಗಣಪತಿ. ಗಣೇಶಚವತಿ ಹಿರಿದಾಗಿ ಆಚರಿಸುತ್ತೇವೆ. ಅದು ಆಕಾಶ ತತ್ವಕ್ಕೆ ಸಲ್ಲುವ ಕೃತಜ್ಞತೆ.
ಬಿಡದೇ ಹಗಲು ರಾತ್ರಿ ನಿರ್ಮಿಸುವ ಸೂರ್ಯ ಚಂದ್ರರನ್ನು ನಿತ್ಯ ಸ್ಮರಿಸುತ್ತೇವೆ. ಗಾಯತ್ರಿ, ಅರ್ಘ್ಯ. ಸೂರ್ಯನ ಮುಖಾಂತರವೇ. ರಥ ಸಪ್ತಮಿ ಮತ್ತೊಂದು ಸ್ಮರಣೆ.
ಮನಸ್ಸು, ಅಹಂಕಾರ ತತ್ವಕ್ಕೆ ರುದ್ರದೇವರು ಶೇಷದೇವರು ನಿಯಾಮಕರು.
ಮಣ್ಣಿನ. ನಾಗಪ್ಪನನ್ನು ಮಾಡಿ ನಾಗರಪಂಚಮಿ ಆಚರಿಸುತ್ತೇವೆ. - ಶೇಷದೇವರ ಸ್ಮರಣೆ.
ಶಿವರಾತ್ರಿ - ಮನೋಭಿಮಾನಿ ರುದ್ರದೇವರನ್ನು ಅಖಂಡ ಆರಾಧಿಸುತ್ತೇವೆ.
ಗೌರೀ ಪೂಜೆ - ಸುಖದಾಂಪತ್ಯಕ್ಕೆ ಶಿವ- ಪಾರ್ವತಿ ಸ್ಮರಿಸುವ ಕಾರ್ಯ.
ಇವರ ಮೇಲೆ ಮಹತ್ ತತ್ವ - ಪ್ರಾಣದೇವರು. ಸರ್ವತ್ರ ಪೂಜ್ಯರು. ಹನುಮಂತ ದೇವರ ಗುಡಿ ಇಲ್ಲದ ಊರೇ ಇಲ್ಲ ಪ್ರಾಯಃ.
ವಿದ್ಯೆಗಾಗಿ ವಿದ್ಯಾಭಿಮಾನಿ ಸರಸ್ವತಿ ಪೂಜಿಸುತ್ತೇವೆ.
ಇವರೆಲ್ಲರ ಮೇಲೆ ಅವ್ಯಕ್ತ ತತ್ವ ಅಭಿಮಾನಿ - ಲಕ್ಷ್ಮೀ. ಅವಳ ಪೂಜೆ ಮಾಡದವರೇ ಇಲ್ಲ. ದೀಪಾವಳಿ - ಲಕ್ಷ್ಮೀ ಪೂಜೆಯೇ ಪ್ರಾಧಾನ್ಯ.
ಇವರೆಲ್ಲರ ಮೇಲೆ - ಸರ್ವಕರ್ತಾ ಸರ್ವಜ್ಞ ಸರ್ವನಿಯಾಮಕ - ಪರಮಾತ್ಮ.
ಗೋಕಲಾಷ್ಟಮಿ. ಮಣ್ಣಿನ ಗೋಕುಲ, ಗೋಪಾಲ ಮಾಡಿ ಸಂಭ್ರಮದ ಆರಾಧನೆ.
ರಾಮನವಮಿ, ನರಸಿಂಹ ಜಯಂತಿ ಹೀಗೆಯೇ ನೂರೆಂಟು. ವರ್ಷದುದ್ದಕ್ಕೂ ಹಬ್ಬಗಳ ನೆಪ. ಮತ್ತೆ ಪರಮಾತ್ಮನ, ದೇವತೆಗಳ ಉಪಕಾರ ಸ್ಮರಣೆ.
ಪೂಜೆ ಪುನಸ್ಕಾರ, ಭಕ್ಷ್ಯ ಭೋಜ್ಯಗಳ ನೈವೇದ್ಯ.ಸಂಭ್ರಮ. ಬಂಧುಗಳ ಮಿಲನ, ಸಡಗರದಿಂದ ಆಚರಣೆ. - ಹೀಗೆ ಲೌಕಿಕವೂ ಆಯಿತು, ಪಾರಮಾರ್ಥಿಕ ಪ್ರಗತಿಯತ್ತೂ ಆಯಿತು.
ಹೀಗೆ ಅಮೂಲ್ಯ ಮೌಲ್ಯಗಳು ಹುದುಗಿರುವ ನಮ್ಮ ಸಂಸ್ಕೃತಿ ಬಂಗಾರದ ಗಟ್ಟಿಯಾಗಿದೆ.
ಎಲ್ಲರಿಗೂ ಮಣ್ಣೆತ್ತು ಪೂಜಾಅಮವಾಸ್ಯೆಯ ಶುಭಾಶಯಗಳು.🙏🙏
ಡಾ ವಿಜಯೇಂದ್ರ ದೇಸಾಯಿ.
-- ಶ್ರೀ ಕೃಷ್ಣಾರ್ಪಣಮಸ್ತು --
****
ಓಂ || ಋಷಭಂ ಮಾ ಸಮಾನಾನಾಂ ಸಪತ್ನಾನಾಂ ವಿಷಾ ಸಹಿಂ |
ಹಂತಾರಂ ಶತೃಣಾಂ ಕೃಧಿ ವಿರಾಜಂ ಗೋಪತಿಂ ಗವಾಂ ||
|| ನಾಹಂ ಕರ್ತಾ ಹರಿಃ ಕರ್ತಾ ||
|| ಶ್ರೀ ಕೃಷ್ಣಾರ್ಪಣಮಸ್ತು ||
No comments:
Post a Comment