SEARCH HERE

Tuesday, 1 January 2019

ಕ್ಷೀರಾಭಿಷೇಕದ ಮೂಲ reason for doing ksheerabhisheka


ಕ್ಷೀರಾಭಿಷೇಕದ ಮೂಲವೇನಿರಬಹುದು? - ಕ್ಷೀರಾಭಿಷೇಕವೆಂಬುದು ದೇವರಿಗೆ ಮಾಡುವ ಹಾಲಿನ ಸ್ನಾನ. ದೀಪ, ಅರ್ಚನೆ, ಆರತಿ ಮೊದಲಾದವುಗಳಂತೆ ಕ್ಷೀರಾಭಿಷೇಕವೂ ಒಂದು ಸೇವೆ ಅಥವಾ ಪೂಜಾವಿಧಾನ. ದೇವರನ್ನು ನೀರಿನಿಂದ ಸ್ನಾನ ಮಾಡಿಸಿದ ನಂತರ ಆಕಳಿನ ಹಸಿ (ಕಾಯಿಸದ) ಹಾಲನ್ನು ಮಂತ್ರ ಉಚ್ಚಾರದೊಂದಿಗೆ ದೇವರ ಮೂರ್ತಿಯ ಮುಡಿಯಿಂದ ಅಡಿಯವರೆಗೂ ಸುರಿದು ಭಕ್ತಿಯಿಂದ ಮಾಡಿಸುವ ಸ್ನಾನವೇ ಈ ಕ್ಷೀರಾಭಿಷೇಕ. ಇದರಿಂದ ದೇವರು ಸಂಪ್ರೀತನಾಗುತ್ತಾನೆ. ಇಷ್ಟಾರ್ಥಗಳು ಈಡೇರುವಂತೆ ಹರಸುತ್ತಾನೆ. ಸದಾ ನಮ್ಮ ಸಂಕಷ್ಟದಿಂದ ದೂರ ಮಾಡಿ ರಕ್ಷಿಸುತ್ತಾನೆ ಮೊದಲಾದ ನಂಬಿಕೆಗಳಿವೆ.

ಈಗೀಗ ಹಲವರು ಯೋಚಿಸುವ ಹೊಸ ಬಗೆಯಂದರೆ ದೇವರಿಗೆ ಹಾಲು ಸುರಿದು ಹಾಳು ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಅದರ ಬದಲು ಬಡವರಿಗೋ ಅಗತ್ಯವಿದ್ದವರಿಗೋ ಕೊಟ್ಟರೆ ಹೆಚ್ಚು ಪುಣ್ಯ ಬರುತ್ತದೆ ಎಂಬುದು ಅವರ ವಾದ. ಇದು ಕೂಡ ಒಂದರ್ಥದಲ್ಲಿ ಸರಿಯೇ. ಆದರೆ ಇದು ಕೇವಲ ಪ್ರಶ್ನೆಗೆ ಪ್ರಶ್ನೆಯನ್ನೇ ಹುಟ್ಟು ಹಾಕಿತೇ ಹೊರತು ಮನಸ್ಸಿಗೆ ನೆಮ್ಮದಿಯನ್ನು ಕೊಡದು.

ಯಾಕೆಂದರೆ ಈ ಹಾಲು ಸುರಿಯುವುದು ಸರಿಯೇ? ಎಂದು ಕೇಳುವವರು ಅಗತ್ಯವಿದ್ದವರಿಗೆ ಹಾಲನ್ನು ಕೊಡಿಸಿದ್ದಾರೆಯೇ? ಎಂದು ಕೇಳಿದರೆ ಉತ್ತರ ಶೂನ್ಯ. ಹಾಗೆಯೇ ದುಬಾರಿ ಬೆಲೆಯ ಬಟ್ಟೆಯನ್ನೋ, ಕಾರನ್ನೋ ಕೊಂಡುಕೊಳ್ಳುವ ಬದಲು ಕಡಮೆ ಬೆಲೆಯದ್ದನ್ನೇ ಖರೀದಿಸಿ ಆ ಉಳಿದ ಹಣವನ್ನು ಬಡವರಿಗೆ ಕೊಟ್ಟು ನಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬಹುದು. ಆದರೆ ಅವರವರ ನಂಬಿಕೆ, ಆಚರಣೆಗಳಿಗೆ ಅವರು ಸ್ವತಂತ್ರರು. ಇಷ್ಟಕ್ಕೂ ಈ ಕೀರಾಭಿಷೇಕದ ಮೂಲವೇನಿರಬಹುದು?

ಭಾರತ ಕೃಷಿ ಪ್ರಧಾನವಾದ ದೇಶ. ನಾವು ಪ್ರತಿಯೊಂದು ಚರಾಚರ ವಸ್ತುಗಳನ್ನು ದೇವರೆಂದೇ ನಂಬಿಕೊಂಡು ಬಂದವರು. ಕೆಲವು ಸಾಕು ಪ್ರಾಣಿಗಳನ್ನು ನಾವು ಕೃಷಿ ಮಾಡುವಲ್ಲಿ ಬಳಸಿಕೊಳ್ಳುತ್ತಲೇ ಬಂದಿದ್ದೇವೆ. ಅಂತಹ ಪ್ರಾಣಿಗಳಲ್ಲಿ ಆಕಳೂ ಒಂದು. ಈ ಆಕಳಿನ ಹಾಲನ್ನು ದೇವರಸ್ನಾನಕ್ಕೆ ಅರ್ಪಿಸುವುದೇ ಕ್ಷೀರಾಭಿಷೇಕ. ಈ ಕಾರ್ಯದಲ್ಲಿ ಮನುಷ್ಯನ ಸಹನಾಶಕ್ತಿ ಹೆಚ್ಚಿಸುವ ಮತ್ತು ಮನಸ್ಸನ್ನು ಕೇಂದ್ರೀಕರಿಸುವ ಅಂಶ ಅಡಗಿದೆ.

ಕ್ಷೀರಾಭಿಷೇಕ ಮಾಡಿಸಲು ಈ ಹಾಲನ್ನು ಸಂಗ್ರಹಿಸುವ ಕಾರ್ಯ ಮೊದಲಾಗಬೇಕು. ಬೆಳಿಗ್ಗೆ ಬೇಗನೆ ಎದ್ದು ಆಕಳನ್ನು ಶುಚಿಗೊಳಿಸಿ, ಅದರ ಕರುವಿಗೆ ಹಾಲುಣಿಸಿ ಆನಂತರದಲ್ಲಿ ಹಾಲನ್ನು ತೆಗೆದು, ದೇವರ ಅಭಿಷೇಕಕ್ಕೆ ತಂದುಕೊಡಬೇಕು. ಅಲ್ಲಿಗೆ ಈ ಎಲ್ಲ ಕೆಲಸಗಳನ್ನು ನಾವು ತಾಳ್ಮೆಯಿಂದಲೇ ಮಾಡಬೇಕು. ಆ ಆಕಳನ್ನು ಸಾಕುವ ಹೊಣೆಯೂ ಇರುತ್ತದೆ. ಅದಕ್ಕೆ ಬೇಕಾದ ಮೇವನ್ನೂ ತಂದು ಒದಗಿಸಬೇಕು.

ಅಲ್ಲಿಗೆ ಕ್ಷೀರಾಭಿಷೇಕದ ಕಾರ್ಯವೆಂಬುದು ಕೇವಲ ದೇವರ ಮೂರ್ತಿಗೆ ಹಾಲೆರೆಯುವುದಷ್ಟೇ ಅಲ್ಲ. ಆದ್ದರಿಂದಲೇ ಇಷ್ಟೆಲ್ಲ ಕಾರ್ಯಗಳ ಫಲವಾಗಿ ದೊರೆತ ಹಾಲನ್ನು ದೇವರಿಗೆ ಅರ್ಪಿಸುವಾಗ ಮನಸ್ಸಿಗೆ ಉಂಟಾಗುವ ಆನಂದ ಹಾಗೂ ಹಾಲಿನ ಅಭಿಷೇಕದ ಸಂದರ್ಭದಲ್ಲಿ ಅಂದರೆ ಸಾಧಾರಣವಾಗಿ ಮುಂಜಾನೆಯ ಹೊತ್ತಿನಲ್ಲಿ ಮನಸ್ಸನ್ನು ಮೂರ್ತಿಯನ್ನೇ ನೋಡುತ್ತ ಕೇಂದ್ರೀಕರಿಸಲು ಸಾಧ್ಯ.

ಈ ಮೂಲಕ ಒಳ್ಳೆಯ ಯೋಚನೆಗಳಷ್ಟೇ ಮನಸ್ಸನ್ನು ತುಂಬಿಕೊಂಡು ಬಂದು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತವೆ. ಪೂಜಾ ವಿಧಾನಗಳೆಲ್ಲವೂ ಮನಸ್ಸಿನ ನಿಯಂತ್ರಕಗಳೇ. ಹಾಲಿನ ಅಭಿಷೇಕವನ್ನು ನೋಡುತ್ತ ನಮ್ಮ ಮನಸ್ಸನ್ನು ಮೂರ್ತಿಯಲ್ಲಿ ಕೇಂದ್ರೀಕರಿಸುವದನ್ನು ಅರಿತುಕೊಂಡಾಗ ಇದರ ಮೂಲ ನಮಗೆ ತಿಳಿಯುತ್ತದೆ.

ಹಾಲು ಒಂದು ಪ್ರರಿಶುದ್ಧವಾದ ದ್ರವ. ಬಿಳಿ ಎಂಬುದು ಶಾಂತಿಯ ಸಂಕೇತ. ಪರಿಶುದ್ಧವಾದ ಮನಸ್ಸನ್ನು ಹೊಂದಲು ಈ ಹಾಲಿನ ಅಭಿಷೇಕ ಸಹಕಾರಿ.

ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ🌿🍁🌿
(ಲೇಖನ ಕೃಪೆ: ಶ್ರೀ ವಿಷ್ಣು ಭಟ್)
*****

No comments:

Post a Comment