SEARCH HERE

Thursday, 8 April 2021

ನಾರದ ಭಕ್ತಿಸೂತ್ರ ಹೇಳುವ 11 ವಿಧದ ಭಕ್ತಿಗಳು


ಪರಮಾತ್ಮನಲ್ಲಿ ಪರಿಪೂರ್ಣ ಅನುರಕ್ತಿಯೇ ಭಕ್ತಿ. ಈ ಭಕ್ತಿಯನ್ನು ಅಭಿವ್ಯಕ್ತಗೊಳಿಸಲು ಹಲವು ಬಗೆಗಳಿವೆ. ಭಕ್ತ ಭಾಗವತ ಪ್ರಹ್ಲಾದನು ನವವಿಧ ಭಕ್ತಿಯ ಕುರಿತು ಹೇಳಿದ್ದರೆ, ನಾರದರು ತಮ್ಮ ‘ಭಕ್ತಿಸೂತ್ರ’ದಲ್ಲಿ ಹನ್ನೊಂದು ವಿಧದ ಭಕ್ತಿಯನ್ನು ಉಲ್ಲೇಖಿಸುತ್ತಾರೆ. ಇಲ್ಲಿ ಭಕ್ತಿಯನ್ನು ‘ಆಸಕ್ತಿ’ ಎಂದು ಕರೆದಿದ್ದು, ಅವು ಹೀಗಿವೆ:

ಗುಣಮಾಹಾತ್ಮ್ಯಾಸಕ್ತಿ : ಭಗವಂತನ ಗುಣ – ಮಹಿಮೆಗಳಲ್ಲಿ ಆಸಕ್ತರಾಗಿರುವುದು. ಭಗವಂತನ ಮಹಿಮೆಯ ಗುಣಗಾನ ಮಾಡುವುದು.

ರೂಪಾಸಕ್ತಿ : ಭಗವಂತನ ರೂಪದಲ್ಲಿ ಆಸಕ್ತಿಯನ್ನು ಹೊಂದಿರುವುದು. ಪರಮಾತ್ಮನ ರೂಪ ವರ್ಣನೆಯಲ್ಲಿ ತಲ್ಲೀನರಾಗಿ ಆರಾಧಿಸುವುದು.

ಪೂಜಾಸಕ್ತಿ : ಷೋಡಶೋಪಚಾರವೇ ಮೊದಲಾದ ಪೂಜೆ ಪುನಸ್ಕಾರಗಳಿಂದ ಭಗವಂತನನ್ನು ಅರ್ಚಿಸುವುದರಲ್ಲೇ ಆನಂದ ಹೊಂದುವುದು

ಸ್ಮರಣಾಸಕ್ತಿ : ಭಗವಂತ ನಾಮಸ್ಮರಣೆಯೊಂದೇ ಬಾಳಿನ ಸರ್ವಸ್ವವೆಂದು ತಿಳಿದು, ಸದಾ ಭಗವಂತನನ್ನು ನೆನೆಯುವುದು

ದಾಸ್ಯಾಸಕ್ತಿ: ಭಗವಂತ ಒಡೆಯ, ನಾನು ಆತನ ದಾಸ ಎಂಬ ಭಾವನೆ ಹೊಂದಿರುವುದು. ಭಗವಂತನ ಸೇವೆಯಲ್ಲೇ ಬದುಕಿನ ಸಾರ್ಥಕತೆ ಕಾಣುವುದು.

ಸಖ್ಯಾಸಕ್ತಿ : ಪರಮಾತ್ಮನನ್ನು ಪರಮ ಮಿತ್ರನೆಂದು ಭಾವಿಸುತ್ತಾ ಸಲುಗೆ ಪ್ರೀತಿಗಳಿಂದ ಅವನನ್ನು ಕಾಣುವುದು.

ವಾತ್ಸಲ್ಯಾಸಕ್ತಿ : ಪರಮಾತ್ಮನನ್ನು ಮಗುವಿನಂತೆ ಭಾವಿಸುತ್ತಾ ತನ್ನಲ್ಲಿ ಮಾತೃತ್ವವನ್ನು ಆರೋಪಿಸಿಕೊಂಡು ವಾತ್ಸಲ್ಯದಿಂದ ಕಾಣುವುದು

ಕಾಂತಾಸಕ್ತಿ : ಭಗವಂತನನ್ನು ಪ್ರಿಯತಮನಂತೆ ಮಧುರ ಭಾವದಿಂದ ಕಾಣುವುದು.

ಆತ್ಮನಿವೇದನಾಸಕ್ತಿ : ತನ್ನದೆಲ್ಲವನ್ನೂ ಭಗವಂತನಿಗೆ ಸಮರ್ಪಿಸಿ ಸಂಪೂರ್ಣ ಶರಣಾಗತಿ ಹೊಂದುವುದು

ತನ್ಮಯಾಸಕ್ತಿ : ಸದಾಕಾಲ ತಪೋನಿರತರಾಗಿದ್ದು, ಭಗವಂತನಲ್ಲಿ ತಲ್ಲೀನರಾಗುವುದು

ಪರಮವಿರಹಾಸಕ್ತಿ : ಸದಾಕಾಲ ಭಗವಂತನ ಸಾನ್ನಿಧ್ಯ ಬಯಸುತ್ತಾ, ಅದು ದೊರೆಯದ ವಿರಹದಲ್ಲಿ ಪರಿತಪಿಸುವುದು; ವಿರಹದಲ್ಲಿ ನಿತ್ಯ ಸ್ಮರಣೆ ಮಾಡುವುದು.

*********

ಭಕ್ತಿ ಎನ್ನುವುದು ಒಂದು ಸಂಸ್ಕೃತ ಶಬ್ದ. 

ಭಕ್ತಿ ಎನ್ನುವ ಶಬ್ದಕ್ಕೆ ಶಬ್ದಕೋಶದಲ್ಲಿರುವ ಅರ್ಥಗಳು:-

1. ದೇವರು, ಗುರು ಮತ್ತು ಹಿರಿಯವರಲ್ಲಿ ಇರುವ ಗೌರವಬುದ್ಧಿ;
2. ಭಾಗವಹಿಸಿವುದು;
3. ರಚನೆ, ಜೋಡನೆ;
4. ಸೇವೆ, ಆರಾಧನೆ, ಉಪಾಸನೆ, ಪೂಜೆ; 
5. ಶ್ರದ್ಧೆ, ವಿಶ್ವಾಸ, ನಿಷ್ಠೆ; 

ಮುಕ್ತಿಗೆ ಭಕ್ತಿಯೇ ಮೂಲ. 
ಪುರಾಣಗಳಲ್ಲಿ ಮೇರು ಕೃತಿಯೆನಿಸಿದ ಶ್ರೀಮದ್ಭಾಗವತವು ನವವಿಧ ಭಕ್ತಿಯನ್ನು ಉಲ್ಲೇಖಿಸುತ್ತದೆ. 

"ಶ್ರವಣಂ ಕೀರ್ತನಂ ವಿಷ್ಣೋ: ಸ್ಮರಣಂ ಪಾದಸೇವನಂ|
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಮ್|
ಇತಿ ಪುಂಸಾರ್ಪಿತಾ ವಿಷ್ಣೋ ಭಕ್ತಿಶ್ಚೇನ್ನವಲಕ್ಷಣಾ||"

ಜಗದೊಡೆಯ ಜಗದ್ರಕ್ಷಕ ವಿಷ್ಣುವಿನ ನಾಮಗುಣಲೀಲಾ ಕಥನಗಳ ಶ್ರವಣ, ಕೀರ್ತನ, ಹಾಗೂ ಭಗವಂತನ ಸ್ಮರಣೆ, ಪಾದಸೇವನೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ, ಆತ್ಮನಿವೇದನೆ, ಇವುಗಳೇ ಆ ನವವಿಧ ಭಕ್ತಿ. 

ಭಕ್ತಿಯಲ್ಲಿಯೂ ಎರಡು ವಿಧ:-

1. ಯಥಾರ್ಥ/ಸತ್ಯ ಭಕ್ತಿ. 
2. ದರ್ಶನ/ತೋರಿಕೆಯ ಭಕ್ತಿ. 

ಭಗವಂತನಿಗೆ ಮಾಡಬೇಕಾಗಿರುವುದು ಯಥಾರ್ಥ/ಸತ್ಯ ಭಕ್ತಿಯೇ ಹೊರತು ದರ್ಶನ/ತೋರಿಕೆಯ ಭಕ್ತಿ ಅಲ್ಲ. 

ಹಿರಿಯವರಲ್ಲಿಯೂ ಎರಡು ವಿಧ:-

1. ವಯೋವೃದ್ಧ.
2. ಜ್ಞಾನವೃದ್ಧ. 

ಇಲ್ಲಿ ಜ್ಞಾನ ಎಂದರೆ ಆಧ್ಯಾತ್ಮಿಕ ಜ್ಞಾನ (ವೇದಜ್ಞಾನ, ಭಗವಂತನ ಅರಿವು) ಹೊರತು ಸಾಮಾನ್ಯ ಜ್ಞಾನವಲ್ಲ. 
(ಈಗಿನ ವಿದ್ಯಾಲಯದಿಂದ ಪಡೆಯುವುದು ಸಾಮಾನ್ಯ ಜ್ಞಾನ.)

ತೋರಿಕೆಯ ಭಕ್ತಿಯನ್ನು ದೇವರು, ಗುರುಗಳು, ಹಿರಿಯವರನ್ನು ಬಿಟ್ಟು ಬೇರೆಯವರಿಗೆ ಅಂದರೆ ಧನವಂತನಿಗೆ, ಗೌರವಕ್ಕೆ ಅರ್ಹನಲ್ಲವನಿಗೆ, .... ಮಾಡುವುದರಲ್ಲಿ ತಪ್ಪಿಲ್ಲ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
****

No comments:

Post a Comment