ಶಂಕರಾಚಾರ್ಯ - ಶಂಕರರಿಲ್ಲದಿದ್ದಿದ್ದರೆ ಇಂದು ವೇದಾಂತ ತತ್ವ ಯಾರಿಗೂ ಅರ್ಥವಾಗುತ್ತಿರಲಿಲ್ಲ, ಭಾರತ ಭಾರತವಾಗೇ ಉಳಿಯುತ್ತಿರಲಿಲ್ಲ!
ಆದಿ ಶಂಕರಾಚಾರ್ಯ
ಅನಾದಿ ಕಾಲದಿಂದಲೂ ವೇದ ಭೂಮಿಯಾಗಿರುವ ಭಾರತ ಸಾರಿದ್ದು ಅದ್ವೈತ ಸಿದ್ಧಾಂತವನ್ನೇ. ವೇದಗಳ ಅದ್ವೈತ ಸಾರವನ್ನು ವೇದವ್ಯಾಸರಿಂದ ಯಾಜ್ಞವಲ್ಕ್ಯವರೆಗೂ ಸಾರಿದ್ದಾರೆ, ವೇದಾಂತ ಸಿದ್ಧಾಂತದ ಅದ್ವೈತವನ್ನು ದೃಢವಾಗಿ ಪ್ರತಿಪಾದಿಸಿದ್ದಾರೆ.
ಅದ್ವೈತ ಸಿದ್ಧಾಂತ ವೇದ-ಉಪನಿಷತ್ ಗಳಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿತ್ತು. ಕಾಲಕ್ರಮೇಣ ಧರ್ಮಕ್ಕೆ ಗ್ಲಾನಿಯುಂಟಾದಾಗ ಪಂಡಿತರೂ ವಿದ್ವಾಂಸರು ತಪ್ಪಾಗಿ ಅರ್ಥೈಸಿಕೊಂಡು ಅದ್ವೈತವನ್ನು ಮರೆತರು. ಜ್ಞಾನ ಮಾರ್ಗಕ್ಕಿಂತ ಕರ್ಮಕಾಂಡಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಶೃತಿ (ವೇದ)ಯ ಸಿದ್ಧಾಂತದ ಮೂಲ ಉದ್ದೇಶಕ್ಕೆ ಧಕ್ಕೆ ಉಂಟಾದಂತೆಲ್ಲಾ ಧರ್ಮಕ್ಕೂ ಗ್ಲಾನಿಯುಂಟಾಗಿತ್ತು. ಮೂಲ ತತ್ವವನ್ನೇ ಮರೆತು ಜಡವಾಗುತ್ತಿದ್ದ ಭಾರತವನ್ನು, ಭಾರತದ ತತ್ವವನ್ನು ಪುನಃ ಸ್ಥಾಪಿಸಲು, ಶೃತಿ ಸಾರವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಸುವ ಜ್ಞಾನಿಯ ಅಗತ್ಯತೆ ಶಂಕರರ ಕಾಲದಲ್ಲಿ ಅತ್ಯವಶ್ಯಕವಾಗಿತ್ತು. ದಾರಿ ತಪ್ಪಿದವರನ್ನು ಸರಿ ದಾರಿಗೆ ತರುವ ಕೆಲಸವನ್ನು ಶಂಕರರು ಸಮರ್ಥವಾಗಿ ಮಾಡಿದರೇ ಹೊರತು ಹೊಸ ಸಿದ್ಧಾಂತವನ್ನು ತಾವಾಗಿಯೇ ಸೃಷ್ಟಿಸಿ ಅದನ್ನು ಪ್ರಚಾರ ಮಾಡಲಿಲ್ಲ. ಹಾಗಾಗಿಯೇ ಶಂಕರರ ಸಿದ್ಧಾಂತ ಇಂದಿಗೂ, ಎಂದಿಗೂ ಅಪ್ರಕಂಪ್ಯವಾಗಿ ಉಳಿಯಲು ಸಾಧ್ಯವಾಗಿದೆ.
ಶಂಕರ ಭಗವತ್ಪಾದರ ಗುರುಗಳಾಗಿದ್ದ ಗೌಡಪಾದರೇ ಮಾಯಾಮಾತ್ರಂ ಇದಂ ದ್ವೈತಂ, ಅದ್ವೈತಂ ಪರಮಾರ್ಥತಃ ಎಂದು ಹೇಳಿದ್ದರು. ಆದರೆ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಸಾಂಖ್ಯಾದಿಗಳು ಪ್ರತಿಪಾದಿಸಿದ್ದ ದ್ವೈತದಲ್ಲೇ ಮುಳುಗಿದ್ದ ಪಂಡಿತರು, ಶೃತಿಯ ಸಾರವನ್ನು ತಪ್ಪಾಗಿ ಅರ್ಥೈಸಿಕೊಂಡು ಕರ್ಮಕಾಂಡಕ್ಕೇ ಹೆಚ್ಚಿನ ಮಹತ್ವ ನೀಡಿ ಜ್ಞಾನ ಮಾರ್ಗವನ್ನು ನಿರಾಕರಿಸಿದ್ದರು. ಅಂದರೆ ವೇದಗಳಲ್ಲಿ ಹೇಳಿದ ಒಂದು ಹಂತವನ್ನು ಬಿಟ್ಟು ಮುಂದಕ್ಕೆ ಹೋಗದೇ ಜಡವಾಗಿ ಅಂಟಿಕೊಂಡು ಕರ್ಮಕಾಂಡದಿಂದ ಮೋಕ್ಷ ಪ್ರಾಪ್ತಿ ಎಂಬ ಭ್ರಮೆಯಲ್ಲಿದ್ದರು. ಅದನ್ನು ಕಳಚಿದ್ದೇ ಶಂಕರರು. ಶಂಕರರು ಕೇವಲ ಅಜ್ಞಾನವನ್ನಷ್ಟೇ ಕಳೆಯಲಿಲ್ಲ. ವಿಷಕಂಠ ಹಾಲಾಹಲವನ್ನು ತಾನು ಸೇವಿಸಿ ಅಮೃತವನ್ನು ನೀಡಿ ದೇವತೆಗಳನ್ನು, ಸೃಷ್ಟಿಯನ್ನು ರಕ್ಷಿಸಿದಂತೆ, ಬಂದ ಕಷ್ಟಗಳನ್ನೆಲ್ಲಾ ಎದುರಿಸಿ ಅಜ್ಞಾನದ ರೂಪದಲ್ಲಿ ಭಾರತದ ಸನಾತನ ಧರ್ಮಕ್ಕೆ ಎದುರಾಗಿದ್ದ ಅಪಾಯವನ್ನೂ ಕಳೆದರು. ಸನಾತನ ಧರ್ಮವನ್ನು ಪುನಃ ಪ್ರತಿಷ್ಠಾಪಿಸಿ, ಅದ್ವೈತದ ಸುಧೆಯನ್ನು ಅನುಗ್ರಹಿಸಿದರು.
ಆದರೆ ಪ್ರಸ್ತುತ ನಾವೆಲ್ಲಾ ಎಷ್ಟು ಅಜ್ಞಾನಿಗಳಾಗಿದ್ದೇವೆ ಎಂದರೆ ಸನ್ಯಾಸಿ ಎಂದರೆ ಕೇವಲ ಮೂಗು ಹಿಡಿದು ತಪಸ್ಸು ಮಾಡುವುದು ಅಥವಾ ಲೋಕ ವ್ಯವಹಾರಗಳಿಂದ ದೂರವಿದ್ದುಬಿಡುವುದು ಅಥವಾ ಒಂದು ವ್ಯವಸ್ಥೆಯಿಂದ ದೂರ ಇರುವುದು ಎಂಬ ಭಾವನೆ ಗಟ್ಟಿಯಾಗುತ್ತಿವೆ. ಆದರೆ ಭಾರತದ ಉಸಿರಾಗಿರುವ ತರ್ಕಬದ್ಧ ವಿಚಾರ ಮಂಡನೆ ಅಂದರೆ ಲಾಜಿಕ್ ನಲ್ಲಿ ನಮ್ಮ ಸನಾತನ ಧರ್ಮ ಅದೆಷ್ಟು ಮುಂದುವರೆದಿತ್ತು ಎನ್ನುವುದಕ್ಕೆ ಶಂಕರರು ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಸಾವಿರ ವರ್ಷಗಳು ಕಳೆದರೂ ಅವರ ತರ್ಕಬದ್ಧ ಮಂಡನೆ ಈ ಕ್ಷಣಕ್ಕೂ ಮಾದರಿಯಾಗುತ್ತದೆ. ವಿರೋಧಿಗಳೂ ಸಹ ತಮ್ಮ ವಾದದ ಸೌಧ ಕಟ್ಟುವುದಕ್ಕೆ ಶಂಕರರನ್ನೇ ಅಡಿಪಾಯವನ್ನಾಗಿರಿಸಿಕೊಳ್ಳುತ್ತಾರೆ. ಒಂದು ವಿಷಯದ ಬಗ್ಗೆ ಎರಡು ಪಕ್ಷಗಳ ನಡುವಿನ ವಾದ ಎಂದರೆ ಶಂಕರರು-ಮಂಡನ ಮಿಶ್ರರ ನಡುವಿನ ವಾದ ಸರಣಿಯೇ ಇಂದಿಗೂ ಮಾದರಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನಕ್ಕೆ ಸೂಕ್ತ ಉದಾಹರಣೆ.
ನಾವೆಲ್ಲಾ ಯೂತ್ ಐಕಾನ್ ಎಂದು ಪ್ರತಿ ಜನವರಿ 12 ರಂದು ಆರಾಧಿಸುವ ವಿವೇಕಾನಂದರು ಸಹ ಶಂಕರಭಗವತ್ಪಾದರ ಕುರಿತು "In Shankaracharya we saw tremendous intellectual power, throwing the scorching light of reason upon everything. We want today that bright sun of intellectuality joined with the heart", ಅಂದರೆ "ಶಂಕರಭಗವತ್ಪಾದರು ಪ್ರಚಂಡ ಬೌದ್ಧಿಕ ಶಕ್ತಿಯನ್ನು ಹೊಂದಿದ್ದರು "ನಮಗೆ ಈಗ ಅಗತ್ಯವಿರುವುದು ಶಂಕರರ ರೀತಿಯ ಬುದ್ಧಿಮತ್ತೆ ಹಾಗೂ ಬುದ್ಧನ ರೀತಿಯ ಪ್ರೀತಿ ಎಂದಿದ್ದಾರೆ. ಅಷ್ಟೇ ಏಕೆ ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದ ರಾಮಕೃಷ್ಣ ಪರಮಹಂಸರಿಗೂ ಸಹ ಪ್ರೇರಕ ಶಕ್ತಿಯಾಗಿದ್ದದ್ದು ಇದೇ ಶಂಕರ ಭಗವತ್ಪಾದರು.
ಇಂದು ಇಡೀ ಭಾರತವೇ ಯೂತ್ ಐಕಾನ್ ಎಂದು ಮೆಚ್ಚಿ ಮೆರೆಸುವ ಇತ್ತೀಚಿನ ವಿವೇಕಾನಂದರಂತಹ ಧೀಶಕ್ತಿಯುಳ್ಳ ಸನ್ಯಾಸಿಗೇ ಆರಾಧ್ಯ ಮೂರ್ತಿಯಾಗಿದ್ದರು 12 ಶತಮಾನಗಳ ಹಿಂದಿನ ಶಂಕರ ಭಗವತ್ಪಾದರು!
ಅಲ್ಲವೇ? 8 ವರ್ಷದ ಬಾಲ ಸನ್ಯಾಸಿ. 12 ಶತಮಾನಗಳ ಹಿಂದೆ ಯಾವ ಸಂಚಾರ ವ್ಯವಸ್ಥೆ? ಕೇರಳದ ಕಾಲಟಿಯೆಲ್ಲಿ? ನರ್ಮದಾ ನದಿಯ ತಟದ ಗುಹೆಯೆಲ್ಲಿ? ಯಾವ ನೆರವು? ಯಾವ ಅರ್ಥವ್ಯವಸ್ಥೆ? ಬುದ್ಧಿ ಚಿಗುರೊಡೆಯುವ ವಯಸ್ಸಿನಲ್ಲೇ ಗುರುವನ್ನು ಅರಸಿ ಹೊರಟರಲ್ಲಾ ಬಾಲ ಸನ್ಯಾಸಿ ಶಂಕರರು ಅವರ ಧೀರೋದಾತ್ತ ಮನಸ್ಥಿತಿ, ವ್ಯಕ್ತಿತ್ವವನ್ನು ಬಣ್ಣಿಸುವುದೆಂತು? ಪದಪುಂಜಗಳು ಸಾಲದೇ ನತಮಸ್ತಕರಾಗುತ್ತೇವೆ ಅಷ್ಟೇ!
ಶಂಕರರು ತಮ್ಮ ಗುರು ಗೋವಿಂದ ಭಗವತ್ಪಾದರನ್ನು ಸಂದರ್ಶಿಸಿ ತಮ್ಮನ್ನು ಭವ ಸಾಗರದಿಂದ ಮುಕ್ತಗೊಳಿಸಿ ಅನುಗ್ರಹಿಸಬೇಕೆಂದು ಪ್ರಾರ್ಥಿಸುತ್ತಾರೆ. ಆದರೆ ಇದಕ್ಕೆ ಪ್ರತಿಯಾಗಿ " ಈ ಮರ್ತ್ಯ ಶರೀರದಿಂದ ಹೇಗೆ ಭವ ಸಾಗರದಿಂದ ಬಿಡುಗಡೆ ಹೊಂದುವೆ ಎಂದು ಕೇಳುತ್ತಾರೆ ಗೋವಿಂದ ಭಗವತ್ಪಾದರು. ಗುರುಗಳ ಪ್ರಶ್ನೆಗೆ ಉತ್ತರಿಸಿದ್ದ ಶಂಕರರು ಜೀವನ್ಮರಣ ಶರೀರಕ್ಕೇ ಹೊರತು ಆತ್ಮಕ್ಕೆ ಅಲ್ಲ ಎಂದು ಹೇಳುತ್ತಾರೆ, ಗುರುಗಳನ್ನು ಆಶ್ರಯಿಸಿ ಅಧ್ಯಯನ ಮಾಡುವುದಕ್ಕೂ ಮುನ್ನವೇ ಇಂತಹ ಪಾರಮಾರ್ಥಿಕ ಉತ್ತರವನ್ನು ನೀಡುವಷ್ಟು ಜ್ಞಾನಿಗಳಾಗಿದ್ದರಲ್ಲಾ ಶಂಕರರು ಆದ್ದರಿಂದಲೆ ಅವರನ್ನು ಬುದ್ಧಿವಂತಿಕೆಯಲ್ಲಿ ಸೂರ್ಯನಿಗೆ ಹೋಲಿಸಿ ನಮಿಸಿದ್ದೇವೆ. ಆದ್ದರಿಂದಲೇ ಜಗತ್ತು ಶಂಕರರನ್ನು ನಮಾಮಿ ಭಗವತ್ಪಾದಂ ಲೋಕಶಂಕರಂ, ಆರಾದ್ ಜ್ಞಾನದಭಿಸ್ತಿಭಿಹಿ ಪ್ರತಿಹತಶ್ಚನ್ದ್ರಾಯುತೆ ಭಾಸ್ಕರಹ ತಸ್ಮೈ ಶಂಕರ ಭಾನವೇ ತನುಮನೋ ವಾಭಿರ್ನಮಸ್ಕುರ್ಮಹೆ ಎಂದು ಕೊಂಡಾಡಿದೆ. ಕೇವಲ ಕೊಂಡಾಡುವವರಿಗಷ್ಟೇ ಅಲ್ಲ, ಶಂಕರರು ತಮ್ಮನ್ನು ವಿರೋಧಿಸುವವರಿಗೂ ಕೊಂಡಾಡುವವರಷ್ಟೇ ಮುಖ್ಯವಾಗಿದ್ದಾರೆ ಅಥವಾ ಕೊಂಡಾಡುವವರಿಗಿಂತಲೂ ವಿರೋಧಿಸುವವರಿಗೆ ಸ್ವಲ್ಪ ಹೆಚ್ಚಾಗಿಯೇ ಮುಖ್ಯವಾಗಿದ್ದಾರೆ. ಏಕೆಂದರೆ ಶಂಕರರು ಸಂಪ್ರದಾಯಸ್ಥರಾಗಿದ್ದುಕೊಂಡೇ ಶಂಕರರು ಸಂಪ್ರದಾಯಸ್ಥರು ಮಾಡುತ್ತಿದ್ದ ತಪ್ಪುಗಳನ್ನು ವಿರೋಧಿಸಿದ್ದರು, ಕರ್ಮಠರಾಗಿದ್ದುಕೊಂಡೇ ಕರ್ಮಠರ ತಪ್ಪುಗಳನ್ನು ತಿದ್ದಿ ತೀಡಿದರು.
ಸಾಂಖ್ಯರನ್ನು, ಇತರ ಪ್ರತಿಪಕ್ಷದ ವಿದ್ವಾಂಸರುಗಳನ್ನು ಸಾತ್ವಿಕ ಮಾರ್ಗದಲ್ಲಿ ವಿರೋಧಿಸಿ, ಮರ್ಯಾದೆಯಿಂದಲೆ ಮಣಿಸಿದ್ದರು. ಬೌದ್ಧರ ತಪ್ಪುಗಳನ್ನೂ ತಿದ್ದಿ ಬುದ್ಧಿ ಹೇಳಿದರು. ವೇದಗಳ ಚೌಕಟ್ಟುಗಳನ್ನು ದಾಟದೇ, ವೇದದ ಪರಮ ತತ್ವಕ್ಕೆ ಚ್ಯುತಿ ಬಾರದಂತೆ ಅದ್ವೈತ ಸಿದ್ಧಾಂತವನ್ನು ಸಾರಲು ಅಂದಿನ ಜನರು ವಿಧಿಸಿದ್ದ ಕಟ್ಟುಪಾಡುಗಳನ್ನು ಮೀರಿದರು. ತಾವೊಬ್ಬರೇ ಒಂದು ಪಕ್ಷ ಉಳಿದವರೆಲ್ಲಾ ಒಂದು ಪಕ್ಷ ಎಂಬಂತಿದ್ದಾಗಲೂ ಸಂಚಾರ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಪ್ರತಿ ನಿತ್ಯವೂ ಯಾತ್ರೆ ಕೈಗೊಂಡರು. ಭಾರತ ದೇಶವನ್ನು ಸುತ್ತಿ, ವಾದ ಮಾಡಿ ಅನೇಕ ದುರಹಂಕಾರಿ ವಿದ್ವಾಂಸರು ತಮ್ಮ ತಪ್ಪನ್ನು ತಾವೇ ಅರ್ಥಮಾಡಿಕೊಳ್ಳುವಂತೆ, ಜ್ಞಾನ ಮಾರ್ಗದ ಮೂಲಕವೇ ಮೋಕ್ಷ ಪ್ರಾಪ್ತಿ ಎಂಬುದನ್ನು ಒಪ್ಪಿ ಜಿತೋಸ್ಮಿ ಎನ್ನಿಸಿದ್ದರು. ಕರ್ಮಕಾಂಡದಲ್ಲಿ ಅಪ್ರಕಂಪ್ಯವಾದ ನಂಬಿಕೆ ಹೊಂದಿದ್ದ ಮಂಡನ ಮಿಶ್ರರಂತಹ ಪಂಡಿತರನ್ನು ಶಿಷ್ಯರನ್ನಾಗಿಸಿಕೊಂಡರು. ಕೇವಲ 35 ವರ್ಷಗಳಲ್ಲಿನ ಜೀವಿತಾವಧಿಯಲ್ಲಿ ಭಾರತದ ಸನಾತನ ಧರ್ಮದ ಸತ್ವವನ್ನು ಪುನಃ ಪ್ರತಿಷ್ಠಾಪಿಸಿದ ಶಂಕರರಲ್ಲದೇ ಇಂದಿನ ಯುವ ಪೀಳಿಗೆಗೆ, ವಿವೇಕಾನಂದರು ಹೇಳಿದಂತೆ ಭಾರತಕ್ಕೆ ಅಗತ್ಯವಿರುವ ತೀಕ್ಷ್ಣ ಬುದ್ಧಿವಂತಿಕೆಗೆ ಶಂಕರರಲ್ಲದೇ ಮತ್ಯಾರು ತಾನೆ ಪ್ರೇರಕ ಶಕ್ತಿಯಾಗಬಲ್ಲರು? ಭಾರತ ಎದುರಿಸುತ್ತಿರುವ ಬೌದ್ಧಿಕ ದಾಸ್ಯ, ವಿಸ್ಮೃತಿಯಿಂದ ಹೊರಬರಲು ಶಂಕರರಲ್ಲದೇ ಮತ್ಯಾರು ತಾನೆ ಪ್ರೇರೇಪಿಸಬಲ್ಲರು?
ಇಷ್ಟಕ್ಕೂ ನಾವೇಕೆ ಶಂಕರರಿಗೆ ಕೃತಜ್ನರಾಗಿರಬೇಕು ಅಥವಾ ಗೌರವಿಸಬೇಕೆಂದರೆ ಅವರು ಜೀವಿಸಿ- ಮುಕ್ತರಾದ ಸಾವಿರ ವರ್ಷಗಳು ಕಳೆದರೂ ನಾವು ಧರ್ಮದ ವಿಷಯದಲ್ಲಿ ಯಾವುದೇ ಸಮಸ್ಯೆಯನ್ನೂ ಎದುರಿಸದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿ ಹೋಗಿದ್ದಾರೆ. ಸಾವಿರ ವರ್ಷಗಳು ಕಳೆದರೂ ಧರ್ಮಕ್ಕೆ ವಿಪ್ಲವ ಬರದಂತಹ ವಾತಾವರಣ ನಿರ್ಮಿಸಿದ್ದರು.
ಇನ್ನು ಕೊನೆಯದಾಗಿ, ಸಾ.ಕೃ ರಾಮಚಂದ್ರರಾಯರಂತಹ ವಿದ್ವಾಂಸರು ತಮ್ಮ ದರ್ಶನ ಪ್ರಬಂಧದಲ್ಲಿ ಶಂಕರರ ಬಗ್ಗೆ ಹೀಗೆ ಬರೆಯುತ್ತಾರೆ, "ನಾಡಿನ ಮೇಧಾವಿಗಳಲ್ಲಿ, ಮಾರ್ಗದರ್ಶಕರಲ್ಲಿ ಬುದ್ಧನನ್ನು ಬಿಟ್ಟರೆ ಶ್ರೀಶಂಕರರದ್ದೆ ಅಗ್ರಸ್ಥಾನ. ಅವರ ಬುದ್ಧಿಶಕ್ತಿ, ವಿಚಾರನೈಪುಣ್ಯ, ಸಂಪ್ರದಾಯಶ್ರದ್ಧೆ, ಸಮನ್ವಯ ಬುದ್ಧಿ, ಲೋಕಾನುಗ್ರಹ ದೃಷ್ಟಿ, ಪ್ರತಿಪಾದನಾ ಸಾಮರ್ಥ್ಯ ಇವೆಲ್ಲವೂ ಅನಾದೃಶ್ಯವಾದುವು. ಅವರ ನಂತರ ತೋರಿಕೊಂಡ ಯಾವ ಪಂಥದ ಆಚಾರ್ಯರಾಗಲಿ ವ್ಯಾಖ್ಯಾನಕಾರರಾಗಲಿ ಅವರ ಬರಹಗಳನ್ನು ಅಲ್ಲಗಳೆಯುವಂತಿರಲಿಲ್ಲ. ಅವರನ್ನು ಅನುಸರಿಸಿದವರಿಗೂ ವಿರೋಧಿಸಿದವರಿಗೂ ಅವರು ಸಮನಾಗಿಯೇ ಉಪಜೀವ್ಯರು! ವೇದಾಂತ ಸಂಪ್ರದಾಯ ಸ್ಪಷ್ಟವಾದುದು ಅವರ ಕಾಲದಲ್ಲಿಯೇ. ಅವರಿಂದಲೇ. ಮುಂದೆ ಒಂದು ಸಾವಿರಕ್ಕೂ ಮಿಕ್ಕು ವರ್ಷಗಳು ಕಳೆದ ಮೇಲೂ ಅವರ ಈ ನಾಡಿದ ಎಲ್ಲರ ನೆನಪಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ".
ಅದ್ವೈತ ತತ್ವ ಸಿದ್ದಾಂತ, ಅದರ ಸಮರ್ಥನೆಗಾಗಿ ಅವರು ಮಾಡಿದ ವಾದ ಮಂಡನೆ, ತರ್ಕ, ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. ಇಂದು ಶಂಕರ ಜಯಂತಿ.ಸಾವಿರಕ್ಕೂ ಮಿಕ್ಕು ವರ್ಷಗಳು ಕಳೆದರೂ ಅವರ ಸಿದ್ಧಾಂತ ಅಚ್ಚಳಿಯದೇ ಉಳಿದುಕೊಂಡಿದೆ ಎಂದರೆ, ಶಂಕರರಿಲ್ಲದಿದ್ದಿದ್ದರೆ ಯಾವ ಸನಾತನ ಧರ್ಮದ ಅನುಯಾಯಿಗಳು ಇಂದು "ಹಿಂದೂ" ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಇಂದಿಗೆ ವೇದಾಂತ ತತ್ವ ಎಂದರೆ ಯಾರಿಗೂ ಅರ್ಥವೇ ಆಗುತ್ತಿರಲಿಲ್ಲ. ವೇದಾಂತ ತತ್ವ ಎಂದರೇನು ಎಂಬುದೇ ಅರ್ಥವಾಗದೇ ಇದ್ದಿದ್ದರೆ ಇತ್ತೀಚಿನ ಶತಮಾನಗಳಲ್ಲಿ ನಾವು ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿಗಳು, ವಿವೇಕಾನಂದರಂತಹವರನ್ನೂ ಕಾಣಲು ಬಹುಶಃ ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಏಕೆ ಅಸಲಿಗೆ ಭಾರತ ಭಾರತವಾಗೇ ಉಳಿಯುತ್ತಿರಲಿಲ್ಲ, ಭಾರತದ ಸನಾತನ ಧರ್ಮ ಜೀವಂತವಾಗಿದ್ದರೆ ಅದಕ್ಕೆ ಶಂಕರರ ಕೊಡುಗೆ ಅಪಾರ. ಹಾಗಾಗಿಯೇ ಸಾವಿರ ಅಲ್ಲ ಮತ್ತೂ ಸಾವಿರ ವರ್ಷ ಕಳೆದರೂ ಶಂಕರರು ಪ್ರಸ್ತುತ.
******
ಕಾಲಡಿ ಗ್ರಾಮದಲ್ಲಿ ಆದಿ ಶಂಕರರ ತಾಯಿ ఆర్యాంಬೆ ಮರಣ ಶಯ್ಯೆಯ ಮೇಲೆ ಇರುವಳು. ತನ್ನನ್ನು ನೆನೆಸಿಕೊಂಡ ತಕ್ಷಣ ಆಕೆಯ ಬಳಿಗೆ ಶಂಕರರು ಬಂದು ಉತ್ತರ ಕ್ರಿಯೆಗಳನ್ನು ಮಾಡುತ್ತಾರೆ.
ಆ ಸಂದರ್ಭದಲ್ಲಿ ಶಂಕರರು ಹೇಳಿದ ಐದು ಶ್ಲೋಕಗಳು
"ಮಾತೃಪಂಚಕ" ಎಂಬುದಾಗಿ ಪ್ರಸಿದ್ದವಾಗಿವೆ. ಅವುಗಳನ್ನು ಸ್ಮರಿಸಿಕೊಳ್ಳೋಣ.
मुक्तामणिस्तवं नयनं ममेति
राजेति जीवेति चिर सुत त्वम् ।
इत्युक्तवत्यास्तव वाचि मातः
ददाम्यहं तण्डुलमेव शुष्कम् ॥ १॥
ತಾತ್ಪರ್ಯ:
ಅಮ್ಮಾ!
" ನೀನು ನನ್ನ ಮುತ್ತು ಕಣೋ! ನನ್ನ ರತ್ನ ಕಣೋ!ನನ್ನ ಕಣ್ಣ ಬೆಳಕೋ ಎನ್ನಪ್ಪಾ! ನೀನು ಚಿರಂಜೀವಿ ಯಾಗಿರ ಬೇಕು" ಅಂತ ಪ್ರೇಮದಿಂದ ಎನ್ನ ಕರೆದ ನಿನ್ನ ಬಾಯಲ್ಲಿ ಈದಿನ ಕೇವಲ ಇಷ್ಟು ಶುಷ್ಕವಾದ ಅಕ್ಕಿಯ ಕಾಳುಗಳನ್ನು ಹಾಕುತ್ತಿದ್ದೇನೆ. ನನ್ನನ್ನು ಕ್ಷಮಿಸು.
अम्बेति तातेति शिवेति तस्मिन्
प्रसूतिकाले यदवोच उच्चैः ।
कृष्णेति गोविन्द हरे मुकुन्द
इति जनन्यै अहो रचितोऽयमञ्जलिः ॥2!!
ತಾತ್ಪರ್ಯ:
ಹಲ್ಲುಗಳಬಿಗಿಯಲ್ಲಿ ನನ್ನ ಪ್ರಸವಕಾಲದಲ್ಲಿ ಬಂದ ತಡೆಯಲಾಗದ ಬಾಧೆಯನ್ನು " ಅಮ್ಮಾ! ಅಯ್ಯಾ!ಶಿವಾ! ಕೃಷ್ಣಾ! ಹರೇ! ಗೋವಿಂದಾ!" ಎಂದುಕೊಳ್ಳುತ್ತಾ ಭರಿಸಿ ನನಗೆ ಜನ್ಮ ನೀಡಿದ ತಾಯಿಗೆ ನಾನು ನಮಸ್ಕರಿಸುತ್ತಿದ್ದೇನೆ.
आस्तां तावदियं प्रसूतिसमये
दुर्वारशूलव्यथा नैरुच्यं तनुशोषणं मलमयी शय्या च संवत्सरी ।
एकस्यापि न गर्भभारभरणक्लेशस्य यस्याक्षमः
दातुं निष्कृतिमुन्नतोऽपि तनयस्तस्यै जनन्यै नमः ॥ ३॥
ತಾತ್ಪರ್ಯ:
ಅಮ್ಮಾ!
ನನ್ನನ್ನು ಹೆತ್ತ ಸಮಯದಲ್ಲಿ ನೀನು ಎಂತಹ ಶೂಲವ್ಯಥೆಯನ್ನು (ಹೊಟ್ಟೆ ನೋವು) ಅನುಭವಿಸಿದೆಯೋ ಅಲ್ಲವೇ! ಕಳೆ (ಹೊಳಪು) ಕಳೆದುಕೊಂಡು, ಶರೀರ ಶುಷ್ಕಿಸಿ ಇರುತ್ತದೆ.ಮಲದಿಂದ ಶಯ್ಯೆ ಮಲಿನವಾದರೂ - ಒಂದು ಸಂವತ್ಸರ ಕಾಲ ಆ ಕಷ್ಟವನ್ನು ಹೇಗೆ ಸಹಿಸಿದೆಯೋ ಅಲ್ಲವೇ! ಯಾರೂ ಅಂತಹ ಬಾಧೆಯನ್ನು ಸಹಿಸಲಾರರು. ಎಷ್ಟು ದೊಡ್ಡವನಾದರೂ ಮಗ ತಾಯಿಯ ರುಣ ತೀರಿಸ ಬಲ್ಲನೇ? ನಿನಗೆ ನಮಸ್ಕಾರ ಮಾಡುತ್ತಿದ್ದೇನೆ.
गुरुकुलमुपसृत्य स्वप्नकाले तु दृष्ट्वा
यतिसमुचितवेषं प्रारुदो त्वमुच्चैः ।
गुरुकुलमथ सर्वं प्रारुदत्ते समक्षं
सपदि चरणयोस्ते मातरस्तु प्रणामः ॥४!!
ತಾತ್ಪರ್ಯ:
ನಿನ್ನ ಕನಸಿನಲ್ಲಿ ನಾನು ಸನ್ಯಾಸಿವೇಷದಲ್ಲಿ ಕಾಣಿಸಿಕೊಂಡದ್ದೇಸರಿ ಬಾಧೆಪಟ್ಟು , ನಮ್ಮ ಗುರುಕುಲಕ್ಕೆ ಬಂದು ಗಟ್ಟಿಯಾಗಿ ನೀನು ಅತ್ತೆ. ಆ ಸಮಯದಲ್ಲಿ ನಿನ್ನ ದುಃಖ ಅಲ್ಲಿಯವರೆಲ್ಲರಿಗೂ ಬಾಧೆ ಕಲಿಗಿಸಿತು. ಅಂತಹ ದೊಡ್ಡವ್ಯಕ್ತಿಯಾದ ನಿನ್ನ ಪಾದಗಳಿಗೆ ನಮಸ್ಕರಿಸುತ್ತಿದ್ದೇನೆ.
न दत्तं मातस्ते मरणसमये तोयमपिवा
स्वधा वा नो दत्ता मरणदिवसे श्राद्धविधिना।
न जप्त्वा मातस्ते
मरणसमये तारकमनु-
रकाले सम्प्राप्ते मयि *कुरु दयां मातुरतुलाम् ॥ ५॥
ತಾತ್ಪರ್ಯ:
ಅಮ್ಮಾ!
ಸಮಯ ಮಿಂಚಿಹೋದ ಮೇಲೆ ಬಂದೆನು. ನಿನ್ನ ಮರಣ ಸಮಯದಲ್ಲಿ ಸ್ವಲ್ಪ ನೀರು ಕೂಡಾ ನಾನು ನಿನ್ನ ಗಂಟಲೊಳಗೆ ಹಾಕಲಿಲ್ಲ. ಶ್ರಾದ್ಧವಿಧಿಯನ್ನು ಅನುಸರಿಸಿ "ಸ್ವಧಾ" ವನ್ನು ಕೊಡಲಿಲ್ಲ. ಪ್ರಾಣವು ಹೋಗುವ ಸಮಯದಲ್ಲಿ ನಿನ್ನ ಕಿವಿಯಲ್ಲಿ ತಾರಕಮಂತ್ರ ವನ್ನು ಓದಲಿಲ್ಲ. ನನ್ನನ್ನು ಕ್ಷಮಿಸು. ನನ್ನಲ್ಲಿ ಯಾವುದಕ್ಕೂ ಸಮಾನವಾಗದ ದಯೆ ತೋರು ತಾಯೇ!
********
********
ಪಗಡೆಯಾಟ (ಮಗುವಿನ ಗೆಲುವು ತಾಯಿಗೆ ಸಂತೋಷ)
ಮೀನಾಕ್ಷಿ ಮತ್ತು ಬಾಲ ಶಂಕರಾಚಾರ್ಯ meenakshi devi and bala shankaracharya
ಆಟ ಪ್ರಾರಂಭವಾಯಿತು. ದೇವಸ್ಥಾನದ ಅರಿಸಿನ, ಕುಂಕುಮ, ಗಂಧದ ಪುಡಿಗಳನ್ನು ಉಪಯೋಗಿಸಿ ಪಗಡೆ ಆಟದ ನಕ್ಷೆಯನ್ನು ಶ್ರೀಗಳವರು ಬರೆದರು. ದೇವಿ ತನ್ನ ಶಕ್ತಿಯಿಂದ ದಿವ್ಯ ದಾಳಿಗಳನ್ನು ಸೃಷ್ಟಿಸಿದಳು! ಶಂಕರರು ಪೂಜೆಗಾಗಿ ದೇವಿಗೆ ಬಳಸಿದ್ದ ಹೂವುಗಳನ್ನು ಆಟದಲ್ಲಿ ತಮ್ಮ ನಡಿಗೆಯ ಕಾಯಿಗಳನ್ನಾಗಿಯೂ, ಅವಳ ಆಭರಣದ ಮುತ್ತು ರತ್ನಗಳನ್ನು ಬಳಸಿ ಅವಳ ನಡಿಗೆಯ ಕಾಯಿಗಳನ್ನಾಗಿಯೂ ಸಿದ್ಧಪಡಿಸಿದರು. ದೇವಿ ಆಟವಾಡಲೆಂದು ಗರ್ಭಗುಡಿಯ ಪೀಠದ ಮೇಲೆ ಕುಳಿತಳು. ಶ್ರೀಗಳವರು ಅವಳೆದುರು ಪದ್ಮಾಸನ ಹಾಕಿ ಗರ್ಭಗುಡಿಯ ಹೊಸ್ತಿಲ ಹೊರಗೆ ಕುಳಿತು ಆಟ ಪ್ರಾರಂಭಿಸಿದರು. ಹಾಗೆಯೇ ಪ್ರಶಸ್ತವಾದ ಆ ಕಾಲ ವ್ಯರ್ಥವಾಗದಂತೆ ಲಲಿತಾ ಸಹಸ್ರನಾಮದ ಬೇರೆ ಬೇರೆ ನಾಮಗಳನ್ನು ಜಪಿಸುತ್ತಾ ಆಟ ಮುಂದುವರೆಸಲು ದೇವಿಯ ಅಪ್ಪಣೆ ಬೇಡಿದರು. ಅಷ್ಟೇ ಅಲ್ಲ ದೇವಿ ತನಗೆ ಬೇಕಾದ ಗರ ಬೀಳುವಂತೆ ಹೊಂದಿದ್ದ ಶಕ್ತಿಯನ್ನು ತಮಗೂ ಅನುಗ್ರಹಿಸಿ ತಮಗೆ ಬೇಕಾದ ಗರ ಬೀಳಿಸಿಕೊಳ್ಳಲು ಸಹಾಯ ಮಾಡಬೇಕೆಂದು ಕೇಳಿಕೊಂಡರು. ದೇವಿ ಉದಾರತೆಯಿಂದ ಅನುಗ್ರಹಿಸಿದಳು. ಆಟ ಪ್ರಾರಂಭವಾಯಿತು.
ಮೊದಲು ದಾಳಿ ಉರುಳಿಸಿದವರು ಶ್ರೀಗಳೇ, ಬಿದ್ದ ಗರ ಒಂಬತ್ತು! ಅವರು 'ಶ್ರೀ ಚಕ್ರರಾಜ ನಿಲಯಾ' ಎಂದು ದೇವಿಯ ನಾಮ ಹೇಳಿ, ತಮ್ಮ ಕಾಯಿ ನಡೆಸುವ ಮುನ್ನ ಶ್ರೀಚಕ್ರ ನಿಲಯಳಾಗಿರುವ ದೇವಿಯ ಶ್ರೀಚಕ್ರಕ್ಕೆ ಒಂಬತ್ತು ಆವರಣಗಳಿರುವುದರನ್ನು ಹೇಳಿ ಅದರ ಸಂಕೇತವಾಗಿ ಒಂಬತ್ತು ಅವರಣಗಳ ಗೆರೆಗಳನ್ನು ಪಕ್ಕದಲ್ಲಿ ಬರೆದರು. ಆಟ ಮುಂದೆ ಸಾಗಿತು, ಹೀಗೆ ಒಂದೊಂದು ಗರ ಬಿದ್ದಾಗಲೂ ಅದಕ್ಕೆ ಸರಿಹೊಂದುವ ಅಕ್ಷರ ಸಂಖ್ಯೆಗಳಿದ್ದ ದೇವಿಯ ನಾಮಗಳನ್ನು ಹೇಳಿ ಆ ಸಂಖ್ಯೆಗೆ ಅನುಸಾರವಾಗಿ ಬೀಜಾಕ್ಷರಗಳನ್ನು ಬಳಸಿ ಗೆರೆಗಳಿಂದ ನಿರ್ಮಿತವಾದ ರೇಖಾಕೃತಿಗಳನ್ನು ರಚಿಸತೊಡಗಿದರು. ಹಾಗೆ ರಚಿಸಿದ ಶ್ರೀಚಕ್ರದ ರೇಖಾಕೃತಿಯಲ್ಲಿ ಹಿಂದಿನ ಶ್ರೀಚಕ್ರದಲ್ಲಿದ್ದ ಉಗ್ರ ಬೀಜಾಕ್ಷರಗಳನ್ನು ತೆಗೆದುಹಾಕಿ ಅವುಗಳ ಸ್ಥಾನದಲ್ಲಿ ಅದೇ ಸಂಖ್ಯೆಗೆ ಅನುಗುಣವಾಗಿ ಹೊಂದಿಕೊಳ್ಳಬಹುದಾದ ಸಾತ್ವಿಕ ಬೀಜಾಕ್ಷರಗಳನ್ನು ತುಂಬಿ ಸಮೀಕರಣ ಸರಿಹೊಂದಿಸಿದರು. ಅಕ್ಷರಗಳು ಬದಲಾದುದರಿಂದ ಮಂತ್ರವೇ ತಿರುವು ಮುರುವು ಆಗುವಂತೆ ಮಾಡಿ ತಾವು ಹೊಸದಾಗಿ ರಚಿಸಿದ ರೇಖಾ ವಿನ್ಯಾಸದಲ್ಲಿ ಬಿಂದು, ತ್ರಿಕೋಣ, ವಸುಕೋಣ ದಶಾರ ಯುಗ್ಮ ಮನ್ವಸ್ತ್ರ ನಾಗದಳ ಷೋಡಶಾ ಪತ್ರ ವೃತ್ತ ತ್ರಯ ಹಾಗೂ ಭೂಪುರಗಳನ್ನೊಳಗೊಂಡ ಮಂಗಳದಾಯಕ ಶ್ರೀಚಕ್ರವನ್ನು ಪ್ರತಿಷ್ಟಿಸಿದರು. ಈ ವೇಳೆಗೆ ಮೂರು ಯಾಮಗಳು ಕಳೆದುವೆಂದು (ಸೂಚಿಸುವ) ತಿಳಿಸುವ ನಗರದ ಬೆಳಗಿನ ಝಾವದ ಕಹಳೆ ಶಬ್ದವಾಯಿತು. ದೇವಿ ಥಟ್ಟನೆ ಎಚ್ಚೆತ್ತಳು. ಆಟದಲ್ಲಿ ತಾನು ಮಗ್ನಳಾಗಿ ತನ್ನ ನಿತ್ಯ ಅಭ್ಯಾಸವನ್ನು ಮರೆತು ಅಂದು ಸಂಹಾರ ಕ್ರಿಯೆ ನಡೆಸಲಿಲ್ಲವೆಂದು ಅವಳಿಗೆ ಖೇದವಾಯಿತು! ಈ ವೇಳೆಗಾಗಲೇ ಆಟವು ಅಂತ್ಯದ ಘಟ್ಟಕ್ಕೆ ತಲುಪಿತು. ಶಂಕರರು ಹಣ್ಣಿಗೆ ಬರುವ ದ್ವಾರದ ಬಳಿಯಲ್ಲಿ ತಮ್ಮ ಕೊನೆಯ ಕಾಯಿಗಳನ್ನು ತಂದು ನಿಲ್ಲಿಸಿದ್ದರು ಆದರೆ ದೇವಿ ತನ್ನ ಕಾಯಿಯನ್ನು ಹಣ್ಣಿನ ಮನೆಯ ಒಳಗೆ ತಂದಿದ್ದಳು. ಅಷ್ಟೇ ಅಲ್ಲ ಆಟದ ಕೊನೆ ಗರ ಹಾಕುವ ಸರದಿಯೂ ಅವಳದಾಗಿತ್ತು ಎರಡು ಸಂಖ್ಯೆಯ ಗರ ಹಕಿ 'ದುಗ' ಎಂದು ಹೇಳುತ್ತಾ ಕಾಯಿಯನ್ನು ಹಣ್ಣು ಮಾಡಿಯೇ ಬಿಟ್ಟಳು.
ಶ್ರೀಗಳವರು ಆಟದಲ್ಲಿ ಸೋತಿದ್ದರು! ಆದರೆ ಅವರು ತಮ್ಮ ಉದ್ದೇಶದಲ್ಲಿ ಗೆದ್ದಿದ್ದರು. ಪಂದ್ಯದ ನಿಯಮದಂತೆ ದೇವಿ ಅವರನ್ನು ಕಬಳಿಸಿ ಮರುದಿನದಿಂದ ತನ್ನ ಸಂಹಾರ ಕ್ರಿಯೆ ಮುಂದುವರೆಸಬಹುದಾಗಿತ್ತು! ಆದರೆ ಶಂಕರರ ಬುದ್ಧಿವಂತಿಕೆಯಿಂದ ಅವಳ ಆವಾಸಸ್ಥಾನವಾದ ಶ್ರೀಚಕ್ರದ ಬೀಜ ಮಂತ್ರಗಳೆಲ್ಲ ತಿರುವು ಮುರುವಾಗಿ, ಕ್ಷುದ್ರ ಸಿದ್ಧಿಗಾಗಿ ನೀಚ ಜನರು ಅವಳನ್ನು ಆಹ್ವಾನಿಸಿದರೆ, ಶ್ರೀಚಕ್ರ ಬಿಟ್ಟು ಹೋಗದಂತೆ ನಿಯೋಜಿಸಿದ ಶ್ರೀಚಕ್ರದ ಬಿಂದು ಸ್ಥಾನದಲ್ಲಿ ಅಕ್ಷರ ಸಂಖ್ಯಾಶಾಸ್ತ್ರದ ಮೇರೆಗೆ ಅವಳು ಬಂಧಿತಳಾಗಿದ್ದಳು!
ದೇವಿ ಪಂದ್ಯದ ನಿಯಮವನ್ನು ಶಂಕರರಿಗೆ ಜ್ಞಾಪಿಸಿ ತನ್ನ ಸಂಹಾರ ಕಾರ್ಯ ಮುಂದುವರೆಸುವೆನೆಂದಾಗ ಶಂಕರರು ತುಂಟು ನಗೆ ಬೀರಿರಬೇಕು! ಶ್ರೀಚಕ್ರದ ಬಿಂದು ಸ್ಥಾನದಲ್ಲಿ ಶಂಕರರಿಂದ ಬಂಧಿತಳಾಗಿದ್ದ ದೇವಿ ಮತ್ತೆ ಎಂದೂ ಉಗ್ರ ಬೀಜಾಕ್ಷರಗಳ ಮಂತ್ರಕ್ಕೆ ಮಣಿದು ಉಗ್ರರೂಪ ತಾಳಿ ಪೀಠ ಬಿಡುವಂತಿರಲಿಲ್ಲ ಮಗುವಿನ ಗೆಲುವು ತಾಯಿಗೆ ಸಂತೋಷ ತರುವಂತೆ ದೇವಿ ಶಂಕರರ ಮೇಲೆ ಪ್ರಸನ್ನಳಾಗಿ ತನ್ನ ಬಂಧನವನ್ನು ಸಂತೋಷದಿಂದ ಒಪ್ಪಿದಳು.
ಸಂಖ್ಯಾಶಾಸ್ತ್ರದಲ್ಲಿ ಸಂಖ್ಯೆಗಳಿಗೆ ಹಾಗೂ ಅಕ್ಷರಗಳಿಗೆ ವಿಶಿಷ್ಟ ಮಾನ್ಯತೆಯ ಸ್ಥಾನಗಳಿವೆ. ಒಂದರಿಂದ ಒಂಬತ್ತರವರೆಗಿನ ಸಂಖ್ಯೆಗಳನ್ನು ಶೂನ್ಯದೊಡನೆ ಸೇರಿಸಿ ಅಸಂಖ್ಯ ಸಂಖ್ಯೆಗಳನ್ನು ಪಡೆಯಬಹುದು. ಹಾಗೆಯೇ ವರ್ಣಮಾಲೆಯ 'ಆ' ನಿಂದ 'ಹ' ವರೆಗಿನ ಅಕ್ಷರಗಳನ್ನು ಬೇರೆ ಬೇರೆ ವಿಧದಲ್ಲಿ ಸ್ವರಗಳೊಡನೆ ಜೋಡಿಸುವುದರಿಂದ ಅಸಂಖ್ಯ ಮಂತ್ರ ಬೀಜಾಕ್ಷರಗಳ ನಿರ್ಮಾಣವಾಗುತ್ತವೆ. ಹೀಗೆ ನಿರ್ಮಾಣವಾಗುವ ಮಂತ್ರ ಸ್ತೋತ್ರ, ನಾಮಗಳ ಸಂಖ್ಯೆಯೂ ಬಹಳವಾಗಿದ್ದು ಅಕ್ಷರ ಮಾಲೆಯ ವರ್ಣ ಹಾಗೂ ಸಂಖ್ಯಾಶಾಸ್ತ್ರದ ಸಂಖ್ಯೆಗಳು ಒಂದಕ್ಕೊಂದು ಪೂರಕವಾಗಿರುತ್ತವೆ. ಒಂದ ಅಕ್ಷರ ಹೆಚ್ಚಾದರೂ, ಒಂದು ಅಕ್ಷರ ಲುಪ್ತವಾದರೂ ಕೊನೆಗೆ ಅಕ್ಷರದ ಅಲ್ಪಪ್ರಾಣ, ಮಹಾಪ್ರಾಣ ಅಥವಾ ಒತ್ತುಗಳಲ್ಲಿ ವ್ಯತ್ಯಾಸವಾದರೂ ಅರ್ಥ ಬದಲಾಯಿಸಿ ಮಂತ್ರಗಳ ಉದ್ದೇಶವೇ ಬದಲಾಗಿಬಿಡುತ್ತವೆ. ಕೆಲವೊಮ್ಮೆ ಅನರ್ಥವೂ ಆಗಿಬಿಡುತ್ತದೆ. ಶ್ರೀಚಕ್ರದಲ್ಲಿ ಅಲ್ಲಿಯವರೆಗೆ ಉಗ್ರ ಬೀಜಾಕ್ಷರಗಳ ಸ್ಥಾಪನೆಯಿಂದ ಇಂತಹುದೇ ಅನರ್ಥವಾಗಿತ್ತು. ಒಂದು ಅಕ್ಷರಕ್ಕೆ ಅಥವಾ ಕೆಲವು ಅಕ್ಷರಗಳಿಗೆ ಒಂದು ಸಂಖ್ಯೆಯೊಡನೆ ತಾದಾತ್ಮ್ಯಗೊಳಿಸಿದಾಗ, ಒಂದು ಸಂಖ್ಯೆ, ಒಂದು ಅಕ್ಷರಕ್ಕೆ ಇಲ್ಲವೇ ಅನೇಕ ಅಕ್ಷರಗಳ ಸಂಕೇತವಾಗುತ್ತದೆ. ಹೀಗೆ ವರ್ಣಮಾಲೆಯ 'ಅ' ನಿಂದ 'ಅಂ' ವರೆಗೆ 'ಕ' ನಿಂದ 'ಕ್ಷ' ವರೆಗೆ ಕೆಲವು ಸಂಖ್ಯೆಗಳನ್ನು ಸಂಕೇತ ಮಾಡಿ ನೆನಪಿನಲ್ಲಿಟ್ಟುಕೊಂಡರೆ ಮಂತ್ರಕ್ಕೂ ಸಂಖ್ಯೆಗೂ ಅದ್ಭುತ ಹೊಂದಾಣಿಕೆಯಾಗುತ್ತದೆ. ಅದರ ಪರಿಣಾಮವಾಗಿ ಸಂಕಲ್ಪ ಉದ್ದೇಶಗಳೂ ಬದಲಾಗುತ್ತದೆ.
ಆಟದ ನಡುವೆ ಸ್ತೋತ್ರ ಮಂತ್ರವನ್ನು ಬಾಯಿಯಲ್ಲಿ ಹೇಳುತ್ತಿದ್ದ ಶಂಕರರು ತಮಗೆ ಬಿದ್ದ ಗರಗಳ ಸಂಖ್ಯೆಗೆ ಹೊಂದಿಸಿ ಶ್ರೀಚಕ್ರದ ಬಿಂದು ತ್ರಿಕೋಣ, ಅಷ್ಟಕೋಣ, ಅಂತರ್ದಶಾರ, ಬಹಿರ್ದಶಾರ, ಚತುರಸ್ತರ, ಇತ್ಯಾದಿ ರೇಖಾಕೃತಿಗಳನ್ನು ನಿರ್ಮಿಸಿ ಅದರಲ್ಲಿ ತಮ್ಮ ಉದ್ದೇಶಪೂರಕವಾದ ಮಂತ್ರಾಕ್ಷರಗಳನ್ನು ತುಂಬಿದ್ದರು!
ಸಂಖ್ಯಾಶಾಸ್ತ್ರದ ಸಂಕೇತ ನಿಯಮವನ್ನು ಅನುಸರಿಸಿ ಅಲ್ಲಿಯವರೆಗೆ ಕ್ಷುದ್ರ ಸಾಧಕರು ತಮ್ಮ ಸ್ವಾರ್ಥ ಸಿದ್ಧಿಗಾಗಿ ಶ್ರೀಚಕ್ರದಲ್ಲಿ ಉಗ್ರ ಬೀಜಾಕ್ಷರಗಳನ್ನು ತುಂಬಿ ದೇವಿಯ ಶಕ್ತಿಯನ್ನು ದುರುಪಯೋಗಪಡಿಸಿಕೊಂಡು ತಾಮಸೀ ಗುಣವಾಗಿ ಪರಿವರ್ತಿಸಿ ಅವಳು ಉಗ್ರರೂಪ ತಾಳಿ ಬಲಿ ತೆಗೆದುಕೊಳ್ಳುವಂತೆ ಅವಳನ್ನು ಅಗ್ರಹಿಸುತ್ತಿದ್ದರು. ಅಂತಹ ನೀಚರು ಶ್ರೀಚಕ್ರದಲ್ಲಿ ಅಳವಡಿಸಿದ್ದ ಉಗ್ರ ಬೀಜಾಕ್ಷರಗಳನ್ನು ಒಂದೊಂದಾಗಿ ಅಳಿಸಿಹಾಕುತ್ತಾ ಅವುಗಳ ಸ್ಥಳದಲ್ಲಿ ತಮಗೆ ಬಿದ್ದ ಗರದ ಸಂಖ್ಯೆಯನ್ನು ತಾವು ಬಾಯಿಯಲ್ಲಿ ನುಡಿಯುತ್ತಲೇ, ಮಂತ್ರಾಕ್ಷರಗಳ ಸಂಖ್ಯೆಗೆ ಅದನ್ನು ಹೊಂದಿಸಿ ಅವುಗಳನ್ನು ಸಾತ್ವಿಕ ಬೀಜಾಕ್ಷರಗಳನ್ನಾಗಿ ಪರಿವರ್ತಿಸಿ ಹಿಂದಿನ ಉಗ್ರ ಬೀಜಾಕ್ಷರಗಳ ಸಂಖ್ಯೆಗೆ ಬದಲಾಗಿ ತಾವು ಸೇರಿಸುವ ಸಾತ್ವಿಕ ಬೀಜಾಕ್ಷರಗಳ ಸಂಖ್ಯೆ ಸರಿಹೊಂದುವಂತೆ ಸಮೀಕರಣ ಮಾಡಿ, ಹೊಸ ಬೀಜಾಕ್ಷರಗಳನ್ನು ಶ್ರೀಚಕ್ರದಲ್ಲಿ ಅಳವಡಿಸಿಬಿಟ್ಟಿದ್ದರು! ಆಟದಲ್ಲಿ ಮಗ್ನಳಾಗಿದ್ದ ದೇವಿ ಇದನ್ನು ಗಮನಿಸಿರಲಿಲ್ಲ ಈಗ ಅವಳಿಗೆ ತಾಮಸೀ ಬೀಜಾಕ್ಷರಗಳ ಪ್ರಭಾವದಿಂದ ಉಗ್ರರೂಪ ತಾಳುವುದು ಸಾಧ್ಯವೇ ಇರಲಿಲ್ಲ! ಏಕೆಂದರೆ ಹಾಗಾಗದಂತೆ ಶ್ರೀ ಶಂಕರರು ಸಾತ್ವಿಕ ಬೀಜಾಕ್ಷರಗಳಿಂದ ಕೂಡಿ ಹೊಸದಾಗಿ ತಾವು ನಿರ್ಮಿಸಿದ್ದ ಶ್ರೀಚಕ್ರದ ಬಿಂದು ಸ್ಥಾನದಲ್ಲಿ ಅವಳನ್ನು ಸ್ತಿರವಾಗಿ ನಿಲ್ಲಿಸಿಬಿಟ್ಟಿದ್ದರು. (ತಾಮಸೀ ಆಹಾರಕ್ಕೆ ಒಗ್ಗಿದ ಮನುಷ್ಯನ ಪ್ರವೃತ್ತಿ ತಾಮಸಿಕವಾಗಿರುವಾಗ ಅವನಿಗೆ ಸಾತ್ವಿಕ ಆಹಾರವಿತ್ತು ಪರಿವರ್ತಿಸುವಂತೆ ಶ್ರೀ ಶಂಕರರು ದೇವಿಯ ತಾಮಸಿಕ ಉಗ್ರರೂಪವನ್ನು ನಿಗ್ರಹಗೊಳಿಸಿದ್ದರು. ಹೊಸದಾಗಿ ಅವರಿಂದ ಪರಿಷ್ಕರಿಸಲ್ಪಟ್ಟ ಶ್ರೀಚಕ್ರ ಈಗ ಎಲ್ಲ ಸಾಮಾನ್ಯ ಜನರಿಗೆ, ಸಾತ್ವಿಕರಿಗೆ, ಗೃಹಸ್ಥರಿಗೆ ಎಲ್ಲರಿಗೂ ಶುಭವನ್ನು ತರುವ ಮಂಗಳ ಯಂತ್ರವಾಗಿ ಹೋಗಿತ್ತು! ಹೀಗೆ ಸರ್ವ ಮಂಗಳೆಯಾದ ದೇವಿ ಆಟದ ನಿಯಮವನ್ನು ಪಾಲಿಸಿ ಶಂಕರರನ್ನು ಬಲಿ ತೆಗೆದುಕೊಳ್ಳುವುದು ಸಾಧ್ಯವೇ ಇರಲಿಲ್ಲ! ಅವಳು ಬಾಲಕ ಶಂಕರರ ತೀಕ್ಷ್ಣ ಬುದ್ದಿಗೆ ಹಾಗೂ ಅವರ ಸದುದ್ದೇಶಕ್ಕೆ ಮಣಿದಳು. ಅವರಿಬ್ಬರೂ ಸೇರಿಯೇ ಸುಂದರೇಶನನ್ನು ಪ್ರಾರ್ಥಿಸಿದರು. ಆಗ ಸುಂದರೇಶನು ಅಂದರೆ ಶಿವನು ಪ್ರತ್ಯಕ್ಷನಾಗಿ ಆದಿಶಂಕರರು ತನ್ನ ಅಂಶದಿಂದ ಜನಿಸಿದವರೆಂದು ಹೇಳಿ ಅವನನ್ನು ಹರಸಿ, ದೇವಿಗೆ ಆ ಬಾಲಕನಿಂದ ಮಾನವ ಕುಲಕ್ಕೆ ಆದ ಉಪಕಾರವನ್ನು ವಿವರಿಸಿದ.
ಇದೆಲ್ಲಾ ನಡೆಯುತ್ತಿದ್ದಂತೆಯೇ ಅರಮನೆಯಲ್ಲಿ ಇಡೀ ರಾತ್ರಿ ನಿದ್ರೆಯಿಲ್ಲದೆ ಬಾಲ ಸನ್ಯಾಸಿ ಎಲ್ಲ ದೇವಿಯ ಉಗ್ರರೂಪಕ್ಕೆ ಬಲಿಯಾಗಿ ಆತನ ಹತ್ಯೆಯ ಪಾಪ ತನಗೆ ಸುತ್ತಿಕೊಳ್ಳುವುದೋ ಎಂದು ತಳಮಳಕ್ಕೊಳಗಾಗಿದ್ದ ಪಾಂಡ್ಯರಾಜ ಬೆಳಗಾಗುವ ವೇಳೆಗೆ ಒಂದು ನಿರ್ಧಾರಕ್ಕೆ ಬಂದಿದ್ದ. ತನ್ನ ವಂಶದ ಪೂರ್ವಜರ ಗರ್ಭದಲ್ಲಿ ಜನಿಸಿ ಪಾಂಡ್ಯರಾಜತನಯೆ ಎಂದು ಪ್ರಖ್ಯಾತಳಾಗಿದ್ದು ಈಗ ತನಗೆ ಕುಲದೇವತೆಯಾಗಿದ್ದ ಮೀನಕ್ಷಿಗೆ ಬಾಲ ಸನ್ಯಾಸಿಯ ಸಾವಿಗೆ ಕಾರಣನಾದ ತನ್ನನ್ನೇ ತಾನು ಬಲಿಯಾಗಿ ಅರ್ಪಿಸಿಕೊಂಡು ಇನ್ನು ಮುಂದಾದರೂ ದೇವಿ ತನ್ನ ಕ್ರೂರ ಬೇಟಿಯನ್ನು ನಿಲ್ಲಿಸಬೇಕೆಂದು ಅವಳಲ್ಲಿ ಪ್ರಾರ್ಥಿಸಿಕೊಳ್ಳುವುದು!!
ಅಂತೆಯೇ ಅವನು ಉದಯವಾಯಿತೆಂದು ಸೂಚಿಸುವ ಮಂಗಳ ವಾದ್ಯಗಳು ಭೂಪಾಲ ರಾಗದಲ್ಲಿ ಮೊಳಗತೊಡಗಿದೊಡನೆಯೇ ಕೈಯ್ಯಲ್ಲಿ ಕತ್ತಿ ಹಿಡಿದು ತನ್ನ ಭೂಪಾಲ ರಾಗದಲ್ಲಿ ಮೊಳಗತೊಡಗಿದೊಡನೆಯೇ ಕೈಯ್ಯಲ್ಲಿ ಕತ್ತಿ ಹಿಡಿದು ತನ್ನ ಪರಿವಾರದೊಡನೆ ಮೀನಾಕ್ಷಿ ದೇವಾಲಯಕ್ಕೆ ಬಂದ ಅಲ್ಲಿ ಅವನು ಕಂಡದ್ದೇನು?
ಕಣ್ಣು ಮುಚ್ಚಿ ತನ್ಮಯರಾಗಿ ಭಕ್ತಿಯಿಂದ ಸ್ತೋತ್ರಗೈಯ್ಯತ್ತಿದ್ದ ಶಂಕರ ಹಾಗೂ ಅವನ ಎದುರಿಗೆ ಹಸನ್ಮುಖರಾಗಿ ಅವನನ್ನು ಹರಸುತ್ತಾ ನಿಂತಿದದ ಶಿವ ಶಿವೆಯರು ಜೊತೆಗೆ ಅವರಿಗೆ ಸ್ವಲ್ಪ ದೂರದಲ್ಲಿ ಹಿಂದಿನ ರಾತ್ರಿಯ ಮೂರು ಯಾಮಗಳಲ್ಲಿ ಶ್ರೀ ಶಂಕರರಿಂದ ರಚಿತವಾಗಿದ್ದು ಬಾಲ ಸೂರ್ಯನಂತೆ ಪ್ರಕಾಶಿಸುತ್ತಿದ್ದ ಶ್ರೀಚಕ್ರ ರೇಖಾಕೃತಿ!
ನಡೆದ ವಿಷಯವೆಲ್ಲಾ ತಿಳಿದಾಗ ಪಾಂಡ್ಯರಾಜನು ಸಂತೋಷ, ಉದ್ವೇಗ, ಶ್ರದ್ಧೆ ಭಕ್ತಿಗಳ ಮಿಶ್ರಭಾವದಿಂದ ಸಂದರೇಶ, ಮೀನಾಕ್ಷಿ ಹಾಗೂ ಸನ್ಯಾಸಿ ಶಂಕರರಿಗೆ ದೀರ್ಘದಂಡ ಪ್ರಣಾಮ ಮಾಡಿದ!
ಕೊನೆಗೆ ಆದದ್ದೆಲ್ಲಾ ಒಳಿತಕ್ಕೆ ಎನ್ನುವಂತೆ ಎಲ್ಲರ ಮನಸ್ಸಿಗೂ ನೆಮ್ಮದಿ ಶಾಂತಿ ದೊರೆತುದಲ್ಲದೆ ಎಲ್ಲ ಆಸ್ತಿಕ ವರ್ಗಕ್ಕೆ ತ್ರಿಕಾಲದಲ್ಲೂ ಶಂಕರರು ದೇವಿಯ ಕೃಪೆಗೆ ಪಾತ್ರರಾಗುವ ಶ್ರೀಚಕ್ರದಂತಹ ಅದ್ಭುತ ಯಂತ್ರ ಸಾಧನವನ್ನು ಕೊಡುಗೆಯಾಗಿ ನೀಡಿದ್ದರು!
ಈ ಕತೆಯಲ್ಲಿ ಉತ್ಪ್ರೇಕ್ಷೆಗಳು ಇರಬಹುದಾದರೂ ಪ್ರಸ್ತುತದಲ್ಲಿ ಪ್ರಚಲಿತವಿರುವ ಶ್ರೀಚಕ್ರ ಶ್ರೀ ಶಂಕರಾಚಾರ್ಯರಿಂದ ಪರಿಷ್ಕರಿಸಲ್ಪಟ್ಟುದೆಂದು ಹೇಳಲಾಗುತ್ತದೆ. ಇದರಲ್ಲಿ ಬಿಂದು, ತ್ರಿಕೋಣ, ಅಷ್ಟಕೋಣ, ದಶಾರ ಯುಗ್ಮ, ಚತುರ್ದಶಾರ, ನಾಗದಳ, ಷೋಡಶದಳ, ವೃತ್ತ ತ್ರಯವೂ ಭೂಪುರಗಳಿಂದ ಕೂಡಿದ ನವಾವರಣದ ಶ್ರೀ ಚಕ್ರವು ಇಹ ಪರಗಳಿಗೆ ಸಾಧನವೆನ್ನಿಸಿ ಇದೀಗ ಗೃಹಸ್ಥರಿಗೆ ಮತ್ತು ಸಾಧಕರಿಗೆ ಅತ್ಯಂತ ಆಪ್ಯಾಯಮಾನವಾದ ಉಪಾಸನಾ ಸಾಧನವಾಗಿದೆ!
ಹೀಗೆ ಶ್ರೀ ಶಂಕರಾಚಾರ್ಯರಿಂದ ಪರಿಷ್ಕರಿಸಲ್ಪಟ್ಟ ಶ್ರೀಚಕ್ರವು ಇತರ ಎಲ್ಲಾ ದೇವಿ ದೇವತಾ ಶಕ್ತಿಗಳ ಚಕ್ರಗಳಿಗೂ ಮಾತೃ ಬೇರಿನಂತಿದೆ. ಹಾಗಾಗಿ ಯಾವುದೇ ದೇವತೆಯ ಉಪಾಸನೆಯನ್ನು ಶ್ರೀಚಕ್ರದ ಮೂಲಕವೇ ಮಾಡಬಹುದಾಗಿದೆ.
ಶ್ರೀ ಶಂಕರಾಚಾರ್ಯರು ಇತರ ದೇವೀ ಕ್ಷೇತ್ರದ ಶಕ್ತಿ ಪೀಠಗಳನ್ನು ಸಂದರ್ಶಿಸಿ ಅಲ್ಲಿಯೂ ಆಯಾ ದೇವತಾ ಚಕ್ರದಲ್ಲಿದದ ಉಗ್ರ ಬೀಜಾಕ್ಷರಗಳನ್ನು ತೆಗೆದುಹಾಕಿ ಸತ್ವಪ್ರಧಾನವಾದ ಬೀಜಾಕ್ಷರಗಳನ್ನು ಅದರಲ್ಲಿ ಶಾಸ್ತ್ರಬದ್ದವಾಗಿ ಅಳವಡಿಸಿ ದೇವಿ ಚಕ್ರವನ್ನು ಎಲ್ಲ ವರ್ಗದ ಜನರಿಗೂ ಲಭಿಸುವಂತೆ ಉಪಾಸನಾ ಸಾಧನವಾಗಿ ಮಾಡಿದ್ದಾರೆ.
ಧುಮ್ಮಿಕ್ಕಿ ಭೋರ್ಗರೆದು ತನ್ನ ವೇಗ ಶಕ್ತಿಗೆ ಅಡ್ಡವಾಗಿ ತನ್ನೆದುರಿಗೆ ಬಂದ ಯಾವ ಜೀವಿಯನ್ನೂ ಬಿಡದೆ ಉಗ್ರವಾಗಿ ಆಪೋಶನ ತೆಗೆದುಕೊಳ್ಳುವ ಪ್ರವಾಹಕ್ಕೆ ಕಟ್ಟೆ ಹಾಕಿ ಅದರ ಪ್ರವಾಹದ ದಿಕ್ಕನ್ನು ಬದಲಿಸಿ ಒಳ್ಳೆಯ ಕಾರ್ಯಕ್ಕೆ ಅದು ಸಹಕಾರಿಯಾಗುವಂತೆ ಮಾಡಬಹುದು ತಾನೇ ಶ್ರೀ ಶಂಕರಾಚಾರ್ಯರು ಮಾಡಿದುದೂ ಅದನ್ನೇ! ಕ್ಷುದ್ರ ಸಾಧಕರಿಂದ ಅದುವರೆವಿಗೂ ಸ್ಥಾಪಿತವಾಗಿದ್ದ ಉಗ್ರ ಬೀಜಗಳಿಂದ ಆವಾಹಿತಳಾದ ದೇವಿ ಉಗ್ರ ಸ್ವರೂಪ ತಾಳಿ ಮದಘೂರ್ಣಿತ ರಕ್ಷಾಕ್ಷಿಯಾಗಿ ಪಾಂಡ್ಯರಾಜನ ಪ್ರಜೆಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದಳು. ಆದರೆ ಶ್ರೀ ಶಂಕರಾಚಾರ್ಯರು ಯುಕ್ತಿಯಿಂದ ಆ ಉಗ್ರ ಬೀಜಾಕ್ಷರಗಳನ್ನು ಬದಲಿಸಿ ಅವುಗಳ ಸ್ಥಾನದಲ್ಲಿ ಸಾತ್ವಿಕ ಬೀಜಾಕ್ಷರಗಳನ್ನು ಜೋಡಿಸಿ ದೇವಿಯನ್ನು ಬಿಂದು ಸ್ಥಾನದಲ್ಲಿ ನಿಲ್ಲಿಸಿ ಅವಳು ಉಗ್ರಶಕ್ತಿಗಳಿಗೆ ಮಣಿಯುವ ಬದಲಾಗಿ ಬಿಂದು ತರ್ಪಣ ಸಂತುಷ್ಟಳಾಗಿ, ಶ್ರದ್ಧೆಗಳಿಂದ ಆರಾಧಿಸುವವರ ಮನೋಕಾಮನೆಗಳನ್ನು ಕರುಣಿಸುವ ಕಾಮಧೇನು, ಕಲ್ಪವೃಕ್ಷವಾಗಿ ತನ್ನ ಮಂದಹಾಸದಿಮದ ಪತಿಯನ್ನು ಮುದಗೊಳಿಸುವ 'ಮಂದಸ್ಮಿತ ಪ್ರಭಾಪೂರ'ದಿಂದ ಕೂಡಿ ಶ್ರೀಚಕ್ರದಲ್ಲಿ ನೆಲೆಯಾಗುವಂತೆ ಮಾಡಿದ್ದರು.
*****
No comments:
Post a Comment