SEARCH HERE

Monday, 1 April 2019

ಆದಿ ಶಂಕರಾಚಾರ್ಯರು 3 adi shankaracharya 3



info from deepakhv.blogspot ಹಾ. ವೆಂ. ದೀಪಕ್ ನರಸಿಂಹ, spiritural writer on ಆದಿ ಶಂಕರರ ಸ್ತೋತ್ರ ಸಾಹಿತ್ಯ

ಭಾರತಮಾತೆಯ ಉದರದಲ್ಲಿ ಜನಿಸಿ, ಸರ್ವಶ್ರೇಷ್ಠ ಯತಿಗಳಾಗಿ, ವೈರಾಗ್ಯ ಚಕ್ರವರ್ತಿಗಳಾಗಿ, ಜಗದ್ಗುರುಗಳಾಗಿ, ಜಗದ್ವಂದ್ಯರಾಗಿ, ಜಗನ್ಮಾನ್ಯರಾಗಿ, ಮಹಾಕವಿಗಳಾಗಿ, ಮಹಾದಾರ್ಶನಿಕರಾಗಿ, ಯುಗಪುರುಷರಾಗಿ, ಧರ್ಮೋಪದೇಶಕರಾಗಿ ಬೆಳಗಿದ ಅಸಾಮಾನ್ಯ ಚೇತನ ಶ್ರೀ ಶಂಕರಾಚಾರ್ಯರು ಅವರಂತೆ ತಮ್ಮ ಅಲ್ಪಾಯುಷ್ಯದಲ್ಲಿ ಕಲ್ಪವನ್ನು ಸಾಧಿಸಿದ ಇನ್ನೊಬ್ಬ ಯೋಗಿಯಿಲ್ಲ ನಿರ್ಗುಣ ಬ್ರಹ್ಮವನ್ನು ಪ್ರತಿಪಾದಿಸಿದರೂ ಅವರಷ್ಟು ಸಗುಣ ದೇವತಾ ಸ್ತೋತ್ರಗಳನ್ನು ರಚಿಸಿದ ಇನ್ನೊಬ್ಬ ಋಷಿ ಕವಿಯಿಲ್ಲ.


"ನಾನೃಷಿಃ ಕುರುತೇ ಕಾವ್ಯಂ ಋಷಿಶ್ಚ ಕಿಲ ದರ್ಶನಾತ್,
ದರ್ಶನಾತ್ ವರ್ಣನಾಚ್ಛೈವ ರೂಢಾ ಲೋಕೇ ಕವಿಶ್ರುತಿಃ"

ಎಂಬತೆ, ದಾರ್ಶನಿಕ ಪ್ರಜ್ಞೆಯುಳ್ಳವನೇ ಋಷಿ. ತಾನು ಕಂಡ ದರ್ಶನವನ್ನು ಬೇರೆಯವರಿಗೂ ಕಣ್ಣಿಗೆ ಕಟ್ಟುವಂತೆ ವರ್ಣಿಸಬಲ್ಲವನೇ ಋಷಿಕವಿಯೆನಿಸುತ್ತಾನೆ. ಇಂತಹ ಋಷಿಕವಿಗಳಾದ ಆಚಾರ್ಯ ಶಂಕರರು ಕಾವ್ಯ ರಚನೆಯನ್ನೇ ಮುಖ್ಯ ಗುರಿಯಾಗಿ ಇಟ್ಟುಕೊಂಡಿದ್ದರೆ ವಾಲ್ಮೀಕಿ, ಕಾಳಿದಾಸಾದಿಗಳ ಸ್ಥಾನದಲ್ಲೇ ನಿಲ್ಲುತ್ತಿದ್ದರು ಎಂಬಲ್ಲಿ ಸಂಶಯವಿಲ್ಲ ಅವರೊಬ್ಬ ವರಕವಿಗಳೇ ಹೊರತು ನರಕವಿಗಳಲ್ಲ ಅವರ ಕಾವ್ಯಲಹರಿಯ ಸವಿಯುಂಡಾಗ "ನಿನ್ನಾಂಗ ಆಡಾಕ, ನಿನ್ನಾಂಗ ಹಾಡಾಕ ಪಡೆದು ಬಂದಿರಬೇಕೋ ಗುರುದೇವ" ಎಂಬ ಬೇಂದ್ರೆಯವರ ವಾಕ್ಯ ನೆನಪಾಗುತ್ತದೆ.

    ನಿರ್ಗುಣ ಬ್ರಹ್ಮೋಪಾಸನೆಗೆ ಸಗುಣ ಬ್ರಹ್ಮೋಪಾಸನೆಯೂ ಸಾದನ. ಇದನ್ನರಿತೇ ಶಂಕರರು ಅದ್ವೈತಿಗಳಾದರೂ ನಾನಾ ದೇವತೆಗಳನ್ನು ಸ್ತುತಿಸಿದ್ದಾರೆ. ಸ್ತೋತ್ರಗಳಿಗೆ ಭಕ್ತಿಯೇ ಮೂಲ. ಭಕ್ತಿಯ ಪರಿಭಾಷೆ ಹಲವಾರು ಪೂಜ್ಯ ಭಗವತ್ಪಾದರು ತಮ್ಮ ವಿವೇಕಚೂಡಾಮಣಿಯಲ್ಲಿ ಭಕ್ತಿಯ ಹಿರಿಮೆ ಗರಿಮೆಗಳನ್ನು ಈ ರೀತಿ ವಿವರಿಸಿದ್ದಾರೆ.

    "ಮೋಕ್ಷ ಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸೀ" ಎಂಬಂತೆ ಭಕ್ತಿಯೇ ಮುಕ್ತಿಯ ಶ್ರೇಷ್ಠ ಸಾಧನ. ಶಂಕರರು ರಚಿಸಿರುವ ಸ್ತೋತ್ರಗಳಿಂದಲೂ ಇದು ಸುಸ್ಪಷ್ಟವಾಗುತ್ತದೆ.

    "ಅಜ್ಞಾನಾಂ ಭಾವನಾರ್ಥಾಯ ಪ್ರತಿಮಾ ಸುಪ್ರತಿಷ್ಠಿತಾ" ಸಾಮಾನ್ಯ ಜನ ಏರಲಾರದ ಮಟ್ಟದ ಒಂದು ತತ್ವವನ್ನು ಬೋಧಿಸಿ ಆ ಮಟ್ಟಕ್ಕೆ ಅವರ ಹತ್ತಿರ 'ಹಾರಿ' ಎನ್ನುವ ಬದಲು ತಾವೇ ಆ ಸ್ತರಕ್ಕೆ ಇಳಿದು ಬದ್ಧ ಜೀವಿಗಳನ್ನು ಉದ್ಧರಿಸುವ ಕಾರ್ಯವನ್ನು ಶ್ರೀ ಶಂಕರರು ಕೈಗೊಂಡರು ಆಚಾರ್ಯಶಂಕರರಿಗೆ ಈ ಉಪಾಸನೆಗಳ ಅಗತ್ಯವಿಲ್ಲದಿದ್ದರೂ ಜನರು ಸಗುಣನೋಪಾಸನೆಯ ಮೂಲಕವಾದರೂ ನಿರ್ಗುಣನೋಪಾಸನೆಯತ್ತ ಸಾಗಿ ಬರಲಿ ಎನ್ನುವುದೇ ಈ ಸ್ತೋತ್ರ; ಪ್ರಕರಣಾದಿಗಳ ಸರಳ ರಚನೆಯ ಉದ್ದೇಶವಾಗಿದೆ.

ಶ್ರೀ ಶಂಕರರ ಸ್ತೋತ್ರ ಕಾವ್ಯವನ್ನು ಕುರಿತು ಜಿಜ್ಞಾಸೆ :
    ಶ್ರೀ ಶಂಕರರು ನಾಮರೂಪಹರಿತವಾದ ಸಚ್ಚಿದಾನಂದ ರೂಪ ಆತ್ಮತತ್ವವನ್ನು ಜಗತ್ತಿಗೆ ನೀಡಿದ ಮಹಾತ್ಮರು. ಈ ಉದ್ದೇಶದಿಂದಲೇ ಪ್ರಸ್ಥಾನತ್ರಯಗಳಿಗೂ ಪಾಂಡಿತ್ಯಪೂರ್ಣ ಭಾಷ್ಯಬರೆದಿದ್ದಾರೆ. "ಭಾಷ್ಯಂಪ್ರಸನ್ನಂ ಗಂಭೀರಂ" ಎಂಬಂತೆ ಅವರ ಭಾಷ್ಯ ಪ್ರಸನ್ನವಾಗಿಯೂ ಅಷ್ಟೇ ಗಂಭೀರವಾಗಿಯೂ ಇದೆ. ಇಂತಹ ನಿರ್ಗುಣ ನಿರಾಕಾರ ತತ್ವಕ್ಕೆ ಮೂರ್ತಿಪೂಜೆ ಸಹಜವಾಗಿಯೇ ವಿರೋಧ ಆದ್ದರಿಂದ ಶಂಕರರು ದೇವತಾಮುರ್ತಿಗಳನ್ನು ಕುರಿತು ಸ್ತೋತ್ರಕಾವ್ಯ ರಚಿಸಿದರೆ? ಶ್ರೀ ಶಂಕರ ವಿರಚಿತವೆಂದು ಪ್ರಚಲಿತವಿರುವ ಸ್ತೋತ್ರಗಳನ್ನು ನಿಜವಾಗಿ ಅವರೇ ರಚಿಸಿದ್ದಾರೆಯೇ? ಶಂಕರರ ಪರಂಪರೆಯಲ್ಲಿ ಬಂದ ಮುಂದಿನ ಆಚಾರ್ಯರೆಲ್ಲಾ ತಮ್ಮ ಅಂಕಿತವನ್ನು "ಶ್ರೀಮಜ್ಜಗದ್ಗುರು ಶಂಕರಾಚಾರ್ಯ".... ಎಂದೇ ಇಟ್ಟುಕೊಳ್ಳುವ ರೂಢಿ ಬೆಳೆದು ಬಂದಿರುವುದರಿಂದ ಈ ಸ್ತೋತ್ರ ಸಾಹಿತ್ಯವನ್ನು ಅವರುಗಳು ರಚಿಸಿರಬಹುದೆ? ಇತ್ಯಾದಿ ಜಿಜ್ಞಾಸೆ ವಿಮರ್ಶಕರಲ್ಲಿ ಇದ್ದೇ ಇದೆ.

ಜಿಜ್ಞಾಸೆಯ ಉಪಶಮನ     ಶ್ರೀ ಶಂಕರರನ್ನು ಕುರಿತು ಪ್ರಸಿದ್ಧವಾದ ಈ ಸ್ತುತಿಪದ್ಯ ಮೇಲಿನ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತದೆ.

"ಶ್ರುತಿ ಸ್ಮೃತಿಪುರಾಣಾನಾಂ ಆಲಯಂ ಕರುಣಾಲಯಮ್
ನಮಾಮಿ ಭಗವತ್ಪಾದಂ ಶಂಕರಂ, ಲೋಕಶಂಕರಮ್"

ಅಂದರೆ, ಶ್ರುತಿ-ಸ್ಮೃತಿ ಪುರಾಣಗಳ ಸೆಲೆಯೂ, ಕರುಣಾಲಯರೂ, ಲೋಕಕಲ್ಯಾಣ ಚಿಂತನಪರರೂ ಆದ ಶಂಕರ ಭಗವತ್ಪಾದರನ್ನು ನಮಿಸುತ್ತೇನೆ. ಈ ಪದ್ಯ ಶಂಕರರ ಅಗಾಧ ವಿದ್ವತ್ತನ್ನು ಪರಿಚಯಿಸುವದರೊಂದಿಗೆ ಜನಕೋಟಿಯ ಉದ್ದಾರದಲ್ಲಿ ಅವರಿಗಿರುವ ತುಡಿತ-ಮಿಡಿತಗಳನ್ನು ಲೋಕ ಕಲ್ಯಾಣಕ್ಕಾಗಿ ಕರುಗುವ ಮರುಗುವ ಅವರ ಹೃದಯ ವೈಶಾಲ್ಯವನ್ನೂ ಪರಿಚಯಿಸುತ್ತದೆ ಮಹಾಪುರುಷರ ಹೃದಯ ವಜ್ರ ಕಠಿಣವಾದಂತೆ ಕುಸುಮ ಕೋಮಲವೂ ಹೌದು. ಸಂಸಾರ ಬಂಧನದಲ್ಲಿ ಸಿಲುಕಿದ ಬದ್ಧ ಜೀವಿಗಳಲ್ಲಿ ಅವರಿಗೆ ಅಪಾರ ಅನುಕಂಪ ಅಜ್ಞಾನವಶರಾದವರಲ್ಲಂತೂ ಅತೀವ ಕಾರುಣ್ಯ ತಮ್ಮ ಜೀವಿತಾವಧಿಯಲ್ಲಿ ಎರಡು ಬಾರಿ ಆಸೇತು ಶೀಮಾಚಲಪರ್ಯಂತ ಸಮಗ್ರ ಭಾರತದ ಪರ್ಯಟನವನ್ನು ಕೈಗೊಂಡ ಶಂಕರರು ಈ ದೇಶದ ಕೋಟ್ಯಾಂತರ ಜೀವಿಗಳ ಸ್ಥಿತಿಗತಿಗಳನ್ನು ಪ್ರತ್ಯಕ್ಷ ಕಂಡಿದ್ದಾರೆ ಅವರ ಆತ್ಮೋದ್ಧಾರವನ್ನು ಕುರಿತು ಚಿಂತಿಸಿದ್ದಾರೆ. ಕೇವಲ ಪಂಡಿತವರ್ಗವನ್ನು ತೃಪ್ತಿಪಡಿಸುತ್ತಾ ಸಾಮಾನ್ಯ ಜನತೆಯಿಂದ ದೂರ ನಿಲ್ಲುವುದು ಅವರ ಜಾಯಮಾನವಲ್ಲ ಈ ಕಾರಣದಿಂದಲೇ ಪ್ರೌಢವಾದ ಭಾಷ್ಯಗಳನ್ನು ಬರೆದಂತೆಯೇ ಸರಳವಾದ ಸುಲಭವಾದ ಚಿಕ್ಕ ಗಾತ್ರದ ಪ್ರಕರಣಗಳನ್ನು ರಚಿಸಿದ್ದಾರೆ ಶ್ರೀಸಾಮಾನ್ಯರ ಉದ್ಧಾರದ ಬಗೆಗೆ ಅತೀವ ತುಡಿತ - ಮಿಡಿತವುಳ್ಳ ಅವರು ಇನ್ನೂ ಒಂದು ಮೆಟ್ಟಿಲು ಹೆಳಗಿಳಿದು ಹೃದಯಂಗಮವಾದ ದೇವತಾ ಸ್ತೋತ್ರಗಳನ್ನು ರಚಿಸಿದ್ದಾರೆ.

    ಸಾಮಾನ್ಯ ಜನರ ಆತ್ಮೋದ್ಧಾರಕ್ಕಾಗಿ ಭಗವತ್ಪಾದರು ಅನುಗ್ರಹಿಸಿದ ಈ ಸ್ತೋತ್ರಗಳು ಅನುಪಮವಾದವು ಭಾಷ್ಯಾದಿಗಳಲ್ಲಿ ನಾಳಿಕೇರಪಾಕದಿಂದ ಪ್ರತಿಪಾದಿಸಿದ ಗಾಢ-ಗೂಢ ತತ್ವವನ್ನೇ ಅವರು ತಮ್ಮ ಈ ಸ್ತೋತ್ರ ಕಾವ್ಯಗಳಲ್ಲಿ ದ್ರಾಕ್ಷಾಪಾಕದಿಂದ ಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ಸುಲಭವಾಗಿ ಸುಂದರವಾಗಿ ಪ್ರತಿಪಾದಿಸಿದ್ದಾರೆ ಕಾವ್ಯ ಮಾಧುರ್ಯ ಗೇಯಗುಣ ಲಾಲಿತ್ಯ, ಸಾಹಿತ್ಯ ದೃಷ್ಟಿಯಿಂದ ಆಚಾರ್ಯರ ಸ್ತೋತ್ರಕಾವ್ಯಗಳು ಮೌಲಿಕವಾಗಿವೆ ಸಾರ್ವಕಾಲಿಕವಾಗಿವೆ ಇಲ್ಲಿ ಸಹೃದಯರನ್ನು ಕಾವ್ಯಾನಂದದಲ್ಲಿ ಮುಳುಗಿಸಿ ತನ್ಮೂಲಕ ಗಹನವಾದ ತತ್ವಬೋಧನಗೈದಿದ್ದಾರೆ ಶ್ರೀ ಗುರುವಿನ ಕರುಣಾಧಾರೆಯಂತೆ ಪ್ರವಹಿಸುತ್ತಿರುವ ಈ ಸ್ತೋತ್ರ ಸಾಹಿತ್ಯವನ್ನು ಸಾರಾಸಗಟಾಗಿ ಶ್ರೀ ಶಂಕರಕೃತವಲ್ಲವೆಂದು ದೂರೀಕರಿಸುವುದು ಸಾಧುವೂ ಅಲ್ಲ, ಸಾಧ್ಯವೂ ಇಲ್ಲ.

ಶ್ರೀ ಶಂಕರಾಚಾರ್ಯಕೃತ ಸ್ತೋತ್ರಗಳು
    ಭಕ್ತಿಮಾರ್ಗ, ಸಾಮಾನ್ಯರಿಗೂ ಎಟಕುವಂತಹುದು. ಆದ್ದರಿಂದ ಆಚಾರ್ಯರು ಅದ್ವೈತವಾದಿಗಳಾಗಿದ್ದರೂ ಗಣೇಶ, ಶಕ್ತಿ, ಶಿವ, ವಿಷ್ಟು, ಸುಬ್ರಹ್ಮಣ್ಯ ಮುಂತಾದ ಸ್ತೋತ್ರಗಳನ್ನು ರಚಿಸಿ ಸಾಮಾನ್ಯರೂ ಅಸಾಮಾನ್ಯ ಮಟ್ಟಕ್ಕೆ ಏರುವ ದಾರಿ ತೋರಿಸಿಕೊಟ್ಟರು ಒಂದು ಸಂಶೋಧನೆಯಂತೆ ಸುಮಾರು 240 ಸ್ತೋತ್ರಗಳು ಶ್ರೀಶಂಕರರ ಹೆಸರಿನಿಂದ ಹಸ್ತಲಿಖಿತ ಪುಸ್ತಕಗಳಲ್ಲಿ ದೊರೆತಿವೆ ಅವುಗಳಲ್ಲಿ ಕನಿಷ್ಠ 15 ಭುಜಂಗಪ್ರಯಾತಗಳಿದ್ದರೆ ಸುಮಾರು 35 ಅಷ್ಟಕಗಳಿವೆ.

    ಶ್ರೀ ಶಂಕರರು ನಾನಾ ದೇವತೆಗಳನ್ನು ಕುರಿತು ರಚಿಸಿದ ಸ್ತೋತ್ರಗಳನ್ನು "ಏಳು ವಿಭಾಗ"ಗಳಲ್ಲಿ ವಿಂಗಡಿಸಬಹುದು.
1) ಗಣೇಶ ಸ್ತೋತ್ರಗಳು :- ಮುಖ್ಯವಾಗಿ ನಾಲ್ಕು
    1) ಗಣೇಶ ಪಂಚರತ್ನ
    2) ಗಣೇಶ ಭುಜಂಗ ಪ್ರಯಾತ
    3) ಗಣೇಶಾಷ್ಟಕ
    4) ವರದ ಗಣೇಶ ಸ್ತೋತ್ರ
2) ದೇವೀ ಸ್ತೋತ್ರಗಳು :- ಮುಖ್ಯವಾಗಿ ಹತ್ತೊಂಬತ್ತು.
    1) ಸೌಂದರ್ಯಲಹರೀ
    2) ಅನಂದಲಹರೀ
    3) ಲಲಿತಾಪಮಚರತ್ನ
    4) ತ್ರಿಪುರಸುಂದರೀ ಮಾನಸ ಪೂಜಾ
    5) ತ್ರಿಪುರ ಸುಂದರೀ ವೇದಪಾದ
    6) ತ್ರಿಪುರ ಸುಂದರ್ಯಷ್ಟಕ
    7) ನವರತ್ನ ಮಾಲಿಕಾ
    8) ಕಲ್ಯಾಣವೃಷ್ಟಿಸ್ತವ
    9) ಗೌರೀದಶಕ
    10) ಭವಾನೀ ಭುಜಂಗ
    11) ದೇವೀ ಭುಜಂಗ
    12) ಶಾರದಾ ಭುಜಂಗ - ಪರಯಾತಾಷ್ಟಕ
    13) ದೇವೀ ಚತುಷ್ಟಷ್ಠಿ ಉಪಚಾರ ಭುಜಂಗ
    14) ಮೀನಾಕ್ಷೀ ಸ್ತೋತ್ರ
    15) ಮೀನಾಕ್ಷಿ ಪಂಚರತ್ನ
    16) ಅನ್ನಪೂರ್ಣಾಷ್ಟಕ
    17) ಭ್ರಮರಾಂಬಾಷ್ಟಕ
    18) ಮಂತ್ರ ಮಾತೃಕಾಪುಷ್ಟಮಾಲಾ
    19) ಕನಕಧಾರಾಸ್ತವ ಇತ್ಯಾದಿ...
3) ಶಿವ ಸ್ತೋತ್ರಗಳು :- ಮುಖ್ಯವಾಗಿ ಹದಿನಾರು
    1) ಶಿವ ಭುಜಂಗ
    2) ಶಿವಾನಂದಲಹರೀ
    3) ಶಿವಪಾದಾದಿ ಕೇಶಾಂತ ಸ್ತೋತ್ರ
    4) ಶಿವಕೇಶಾದಿ ಪಾದಾಂತ ಸ್ತೋತ್ರ
    5) ವೇದಸಾರ ಶಿವಸ್ತೋತ್ರ
    6) ಶಿವಾಪರಾಧ ಕ್ಷಮಾಪಣ ಸ್ತೋತ್ರ
    7) ಕಾಲಭೈರವಾಷ್ಟಕ
    8) ದ್ವಾದಶಲಿಂಗ ಸ್ತೋತ್ರ
    9) ಸುವರ್ಣ ಮಾಲಾಸ್ತುತಿ
    10) ದಶಶ್ಲೋಕಿ ಸ್ತುತಿ
    11) ಶಿವ ಪಂಚಾಕ್ಷರ ನಕ್ಷತ್ರಮಾಲಾ
    12) ಮೃತ್ಯಂಜಯ ಮಾನಸಪೂಜಾ
    13) ದಕ್ಷಿಣಾಮಾರ್ತಿ ಸ್ತೋತ್ರ
    14) ದಕ್ಷಿಣಾ ಮೂರ್ತಿ ವರ್ಣಮಾಲಾ
    15) ದಕ್ಷಿಣಾ ಮೂರ್ತ್ಯಷ್ಟಕ
    16) ಶಿವನಾಮಾವಲ್ಯಷ್ಟಕ  ಇತ್ಯಾದಿ....
4) ವಿಷ್ಣು ಸ್ತೋತ್ರಗಳು :- ಮುಖ್ಯವಾಗಿ ಹನ್ನೊಂದು.
    1) ವಿಷ್ಣು ಭುಜಂಗಪ್ರಯಾತ
    2) ರಾಮ ಭುಜಂಗ ಪ್ರಯಾತ
    3) ವಿಷ್ಣುಪಾದಾದಿ ಕೇಶಾಂತ
    4) ಅಚ್ಯುತಾಷ್ಟಕ
    5) ಪಾಂಡುರಂಗಾಷ್ಟಕ
    6) ಗೋವಿಂದಾಷ್ಟಕ
    7) ಜಗನ್ನಾಥಾಷ್ಟಕ
    8) ಕೃಷ್ಣಾಷ್ಟಕ
    9) ಭಗವನ್ಮಾನಸಪೂಜಾ
    10) ಹರಿಮೀಡ್ ಸ್ತೋತ್ರ
    11) ಷಟ್ಪದಿ ಸ್ತೋತ್ರ ಇತ್ಯಾದಿ....
5) ಯುಗಲ ದೇವತಾ ಸ್ತೋತ್ರಗಳು :- ಮುಖ್ಯವಾಗಿ ನಾಲ್ಕು
    1) ಲಕ್ಷ್ಮೀನೃಸಿಂಹ ಪಂಚರತ್ನ
    2) ಲಕ್ಷ್ಮೀನೃಸಿಂಹ ಕರುಣಾರಸ ಸ್ತೋತ್ರ
    3) ಉಮಾಮಹೇಶ್ವರ ಸ್ತೋತ್ರ
    4) ಅರ್ಧನಾರೀಶ್ವರ ಸ್ತೋತ್ರ ಇತ್ಯಾದಿ....
6) ನದ್ಯಾದಿ ಸ್ತೋತ್ರಗಳು :- ಮುಖ್ಯವಾಗಿ ಐದು
    1) ಗಂಗಾಷ್ಟಕ
    2) ಯಮುನಾಷ್ಟಕ
    3) ನರ್ಮದಾಷ್ಟಕ
    4) ಮಣುಕರ್ಣೀಕಾಷ್ಟಕ
    5) ಕಾಶೀ ಪಂಚಕ ಇತ್ಯಾದಿ.
7) ಇತರ ಸ್ತೋತ್ರಗಳು :- ಮುಖ್ಯವಾಗಿ ನಾಲ್ಕು
    1) ಪ್ರಾತಃಸ್ಮರಣಸ್ತೋತ್ರ
    2) ಗುವಾಷ್ಟಕ
    3) ಹನೂಮತ್ ಪಂಚರತ್ನ
    4) ಸುಬ್ರಹ್ಮಣ್ಯ ಭುಜಂಗ ಇತ್ಯಾದಿ
  
    ಹೀಗೆ ಅತಿ ಮುಖ್ಯವಾದ ಸುಮಾರು 64 ಸ್ತೋತ್ರಗಳು ಶೃಂಗೇರಿ ಪರಮಾಚಾರ್ಯರಿಂದ ಅನುಮೋದಿಸಲ್ಪಟ್ಟು, ಶ್ರೀರಂಗದ ಶ್ರೀವಾಣೀವಿಲಾಸ ಮುದ್ರಣಾಲಯದವರು ಹೊರತಂದ "ಶಂಕರ ಗ್ರಂಥವಳಿ"ಯಲ್ಲಿ ಮುದ್ರಿತವಾಗಿವೆ.

ಸ್ತೋತ್ರಗಳ ವಿಷಯದಲ್ಲಿ ವಿದ್ವಾಂಸರ ಅಭಿಪ್ರಾಯಗಳು    ಸುಮಾರು 240 ಸ್ತೋತ್ರಗಳು ಶ್ರೀಶಂಕರರ ಹೆಸರಿನಲ್ಲಿ ದೊರೆಯುತ್ತಿದ್ದರೂ ಮೇಲಿನ 64 ಸ್ತೋತ್ರಗಳನ್ನು ಬಿಟ್ಟು ಉಳಿದ ಬಹುತೇಕ ಸ್ತೋತ್ರಗಳ ಕೃತಕ ಶೈಲಿ ಹಾಗೂ ವಿಷಯಗಳನ್ನು ಪರಿಶೀಲಿಸಿ ಬಹುಶಃ ಅವು ಶಂಕರಕೃತವಲ್ಲವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ ಪ್ರೋ. ಬಲದೇವ ಉಪಾದ್ಯಾಯರು ತಮ್ಮ "ಶ್ರೀ ಶಂಕರಾಚಾರ್ಯರು" ಎಂಬ ಉದ್ಗ್ರಂಥದಲ್ಲಿ ಈ ವಿಷಯ ಚರ್ಚಿಸುತ್ತಾ "ಈ ಸ್ತೋತ್ರಗಳ ಶೈಲಿ ಮತ್ತು ವಿಷಯಗಳನ್ನು ವಿಚಾರ ಮಾಡಿದಲ್ಲಿ ಅಧಿಕ ಸ್ತೋತ್ರಗಳು ವಿಚಿತ್ರ ಕೃತ್ರಿಮತೆಯಿಂದ ಕೂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಆದುದರಿಂದ ಅವು ಶಂಕರಕೃತವೆಂದು ಸ್ವೀಕರಿಸಲು ಸಂಶಯಾಸ್ಪದವಾಗಿದೆ ಸುಮಾರು 15 ಸ್ತೋತ್ರಗಳು "ಭುಜಂಗಪ್ರಯಾತ" ವೃತ್ತದಲ್ಲಿದ್ದು ಇವು ಯಾವುದರ ಮೇಲೂ ಪ್ರಾಚೀನ ಗ್ರಂಥಕಾರರಿಂದ ರಚಿತವಾಗಿರುವ ವ್ಯಾಖ್ಯಾನಗಳು ದೊರಕುವುದಿಲ್ಲ ಆದುದರಿಂದ "ಶಿವಭುಜಂಗ ಪ್ರಯಾತ"ವನ್ನು ಬಿಟ್ಟು ಅನ್ಯ ಸ್ತೋತ್ರಗಳು ಆದಿಶಂಕರರಿಂದ ರಚಿತವಾದುದೆಂದು ಅಂಗೀರಕರಿಸಲು ನಮಗೆ ಅತ್ಯಂತ ಸಂದೇಹವಿದೆ. ಇದರ ನಂತರ ಸುಮಾರು 35 ಅಷ್ಟಕಗಳಿವೆ.... ಇವುಗಳಲ್ಲಿ 'ದಕ್ಷಿಣಾಮೂರ್ತಿ ಅಷ್ಟಕ' ಹಾಗೂ 'ಗೋಪಾಲಾಷ್ಟಕ'ಗಳು ಮಾತ್ರ ಆದಿಶಂಕರರಿಂದ ರಚಿತವಾದುವೆಂದು ನಾವು ನಿಶ್ಚಿತರೂಪದಲ್ಲಿ ಆದರಿಸುತ್ತೇವೆ. ಏಕೆಂದರೆ ಇವೆರಡರ ಮೇಲೂ ಪ್ರಾಚೀನ ವೇದಾಂತಚಾರ್ಯರಿಂದ ರಚಿತವಾದ ಭಾಷ್ಯಗಳು ಉಪಲಬ್ಧವಾಗಿವೆ. 'ಷಟ್ಪದೀ' ಮತ್ತು 'ದಶಶ್ಲೋಕೀ' ಸ್ತೋತ್ರಗಳೂ ಸೇರಿದಂತೆ ಉಳಿದ ಸುಮಾರು 30 ಸ್ತೋತ್ರಗಳಿಗೆ ಪ್ರಾಚೀನ ಆಚಾರ್ಯರ ಭಾಷ್ಯವಿರುವ ನಿಮಿತ್ತ ಅವು ಆದಿಶಂಕರರಿಂದ ರಚಿತವೆಂದು ಸ್ವೀಕರಿಸಲು ಯಾವ ವಿಧವಾದ ಸಂಶಯಕ್ಕೂ ಆಸ್ಪದವಿಲ್ಲ ಹಾಗೇ 'ಆನಂದಲಹರೀ', 'ಗೋವಿಂದಾಷ್ಟಕ', 'ಹರಿಮೀಡೆ' ಇವು ಆಚಾರ್ಯರವೇ ಆಗಿವೆ. ಅನ್ಯಸ್ತೋತ್ರಗಳಲ್ಲಿ ಶಂಕರರ ರಚನೆಗಳಲ್ಲಿ ಕಾಣಲಾಗದ ಕೃತ್ರಿಮತೆಯು ತೋರುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

    ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳವರು ತಮ್ಮ "ಶ್ರೀ ಶಂಕರಭಗವತ್ಪಾದ ವೃತ್ತಾಂತ ಸಾರಸರ್ವಸ್ವ" ಎಂಬ ಬೃಹದ್ ಗ್ರಂಧದಲ್ಲಿ ಈ ವಿಷಯವನ್ನು ಚರ್ಚಿಸುತ್ತಾ :- "ಆಚಾರ್ಯರ ಹೆಸರಿನಲ್ಲಿರುವ ಅನೇಕ ಸ್ತೋತ್ರಗಳು ಅವರೇ ಮಾಡಿದವೋ ಅಥವಾ ಮತ್ತೆ ಯಾರಾದರೂ ಮಠಾದಿಪತಿಗಳಾದ ಶಂಕರಾಚಾರ್ಯ ಬಿರುದಾಂಕಿತರು ಮಾಡಿದವೋ - ಹೇಳುವುದಕ್ಕೆ ಬರುವುದಿಲ್ಲ. ಆಚಾರ್ಯರು ಅರ್ಚಾ (ಪ್ರತಿಮಾ) ಪೂಜೆಯನ್ನೇನೂ ತಿರಸ್ಕರಿಸಿಲ್ಲ. ಆದರೂ ಈಗ ಪ್ರಚಲಿತವಾಗಿರುವ ವಿವಿಧ ದೇವತಾ ಸ್ತೊತ್ರಗಳನ್ನೆಲ್ಲಾ ಅವರೇ ಮಾಡಿದರೆಂದು ನಿರ್ಧರಿಸುವುದು ಕಷ್ಟವಾಗಿದೆ ಎಂದು ಅಭಿಪ್ರಾಯಪಡುತ್ತಾರೆ. ಒಟ್ಟಾರೆ ವಿದ್ವಾಂಸರು ಅಭಿಪ್ರಾಯದಲ್ಲಿ 'ದಕ್ಷಿಣಾಮೂರ್ತಿಸೋತ್ರ', 'ಗೋಪಾಲಾಷ್ಟಕ', ಷಟ್ಟದಿ, ದಶಶ್ಲೋಕೀ, ಆನಂದಲಹರೀ, ಗೋವಿಂದಾಷ್ಟಕ ಮುಂತಾದ ಸ್ತೋತ್ರಗಳು ನಿಸ್ಸಂದೇಹವಾಗಿ ಆಚಾರ್ಯಕೃತ.

    ಇಲ್ಲಿಯವರೆಗೆ ಶ್ರೀ ಶಂಕರರ ಸ್ತೋತ್ರ ಸಾಹಿತ್ಯವನ್ನು ಕುರಿತು ಸ್ಥೂಲವಾಗಿ ಇಡಿಇಡಿಯಾಗಿ ವಿಮರ್ಶಿಸಿದ್ದಾಯಿತು ಇನ್ನು ಬಿಡಿಬಿಡಿಯಾಗಿ ಅವರ ಸ್ತೋತ್ರಗಳ ಕೆಲವು ಭಾಗಗಳನ್ನು ಆಯ್ದು ಅವುಗಳ ಶೈಲಿ, ಪ್ರಾಸ, ಬಂಧ, ಪಾಕ, ರಸ, ಅಲಂಕಾರ ಮುಂತಾದವುಗಳನ್ನು ಕುರಿತಂತೆ 'ಸ್ಥಾಲೀಪುಲಾಕನ್ಯಾಯ'ದಿಂದ ಕೆಲವು ಸ್ತೋತ್ರಗಳನ್ನು ಪರಿಶೀಲಿಸೋಣ.

    "ಏಕಂ ಸದ್ ವಿಪ್ರಾ ಬಹುಧಾ ವದಂತಿ" ಎಂಬ ಶ್ರುತಿವಾಕ್ಯದಂತೆ ಗಣಪತಿ ದುರ್ಗಾ, ಶಿವ, ವಿಷ್ಣು, ಕಾರ್ತಿಕೇಯ, ಲಕ್ಷ್ಮೀನೃಸಿಂಹ ಮುಂತಾದ ದೇವತೆಗಳು ಮೇಲ್ನೋಟಕ್ಕೆ ಭಿನ್ನಭಿನ್ನವಾಗಿ ತೋರಿದರೂ ಎಲ್ಲಾ ದೇವತೆಗಳ ಸ್ತುತಿಯ ಮೂಲಕ ಸಾಧಕನ ಗಮ್ಯ ಒಂದೇ ಆಗಿದೆ.

    "ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾ ಅರ್ಚಿತುಮಿಚ್ಛತಿ
    ತಸ್ಯ ತಸ್ಯ ಅಚಲಾಂ ಶ್ರದ್ಧಾಂ ತಾಮೇವ ವಿಧಧಾಮ್ಯಹಮ್ "
ಎಂಬ ಗೀತಾಚಾರ್ಯನ ಮಾತಿನಂತೆ ಯಾವ ಯಾವ ಭಕ್ತರಿಗೆ ಯಾವ ಯಾವ ದೇವರು ಇಷ್ಟವೋ ಅವರು ಅದನ್ನೇ ಶ್ರದ್ಧೆಯಿಂದ ಪೂಜಿಸಿ ತಮ್ಮ ಗುರಿಯನ್ನು ತಲುಪಬಹುದು.

ಸ್ತೋತ್ರದ ಹಿರಿಮೆ    ಯಾವುದರಿಂದ ಸ್ತುತಿಸಲ್ಪಡುವುದೋ ಆ ಗುಣಸಂಕೀರ್ತನವೇ ಸ್ತೋತ್ರ ಸ್ತವ್ಯ, ಸ್ತವಪ್ರಿಯ, ಸ್ತೋತ್ರಂ. ಸ್ತುತಿಃ, ಸ್ತೋತಾ ಇವೆಲ್ಲವೂ ಭಗವಂತನ ನಾಮಾಂತರಗಳೇ ಆಗಿವೆ ಸ್ತೋತ್ರವೆಂಬುದು ಹೊರಗಿನ ಜನರನ್ನು ಮೆಚ್ಚಿಸುವ ಸಾಧನವಲ್ಲ ಅದು ಉದ್ದಿಷ್ಟ ದೇವರನ್ನು ಕುರಿತು ಮಾಡುವ ಮಾನಸ ಸ್ನಾನವೆನ್ನಬಹುದು.

"ಜ್ಞಾನಹ್ರದೇ ಧ್ಯಾನಜಲೇ ರಾಗದ್ವೇಷ ಮಲಾಪಹೇ |
ಯಃ ಸ್ನಾತಿ ಮಾನಸೇ ತೀರ್ಥೇ ಸಯಾತಿ ಪರಮಾಂಗತಿಮ್ "

ಅಂದರೆ ರಾಗದ್ವೇಷಗಳೆಂಬ ಕೊಳೆಯನ್ನು ತೊಳೆಯುವ ಧ್ಯಾನಜಲ ತುಂಬಿದ ಮಾನಸ ಸರೋವರದಲ್ಲಿ ಯಾರು ಸ್ನಾನಮಾಡುತ್ತಾರೋ ಅವರು ಪರಮಗತಿಯನ್ನು ಹೊಂದುತ್ತಾರೆ ಸಾವಿರ ಗಂಗಾಸ್ನಾನಗಳಿಂದಲೂ ಕೋಟಿ ಪುಷ್ಕರ ಸ್ನಾನಗಳಿಂದಲೂ ನಾಶ ಹೊಂದುವಂತಹ ಪಾಪ ಶ್ರೀಹರಿಯ ಸ್ತೋತ್ರಪಠನದಿಂದಲೂ ನಾಶವಾಗುತ್ತದೆ ಎಂಬ ಮಾತು ಸ್ಮರಣೀಯ.

ಕಾವ್ಯದ ಮರ್ಮ    ಶಬ್ದಾರ್ಥಸಹಿತವಾಗಿ, ರಮಣೀಯವಾಗಿ, ಕಮನೀಯವಾಗಿ ರಸಾರ್ದ್ರವಾಗಿ ಕಾಂತಾಸಮ್ಮಿತೆಯಿಂದ ಪರೋಕ್ಷವಾಗಿ ಗಹನವಾಗಿ ತತ್ವವನ್ನು ಶ್ರೋತೃವಿನ ಹೃದಯಕ್ಕೆ ಮುಟ್ಟಿಸುವುದೇ ಕಾವ್ಯ ಸಾಲಂಕೃತವಾದ ಭಾಷೆಯಲ್ಲಿ ಧ್ವನಿಸಾಮರ್ಥ್ಯದಿಂದ ಹೇಳಬೇಕಾದ ವಿಷಯವನ್ನು ಸಹೃದಯನ ಹೃದಯಕ್ಕೆ ತಟ್ಟುವಂತೆ ಮುಟ್ಟುವಂತೆ ಹೇಳುವುದು ಕಾವ್ಯನೀತಿ.
    ಅಲಂಕಾರ ಪಿತಾಮಹ ಭಾಮಹಾಚಾರ್ಯರ ಈ ಮಾತು ತುಂಬಾ ಗಮನಾರ್ಹ.
"ಸ್ವಾದು ಕಾವ್ಯರಸೋನ್ಮಿಶ್ರಂ ಶಾಸ್ತ್ರಮಪ್ಯುಪಯುಂಜತೇ
ಪ್ರಥಮಾಲೀಥಮಧವಃ ಪಿಬನ್ತಿ ಕಟು ಭೈಷಜಮ್
ಅಂದರೆ 'ಸಿಹಿ ಜೇನಿನೊಡನೆ ಬೆರೆತಾಗ ಕಹಿಯಾದ ಔಷಧವನ್ನೂ ಸೇವಿಸುವಂತೆ ರುಚಿಕರವಾದ ಕಾವ್ಯರಸದೊಡನೆ ಕಲೆತಾಗ ಶಾಸ್ತ್ರವನ್ನೂ ಜನ ಸವಿಯುತ್ತಾರೆ ಆಚಾರ್ಯ ಶಂಕರರು ಅಪೂರ್ವವಾಗಿ ಈ ಉದ್ದೇಶವನ್ನು ಸಾಧಿಸಿದ್ದಾರೆ ಅವರಂತ ದಾರ್ಶನಿಕರು ಜ್ಞಾನಿಗಳು ಭಕ್ತರು ಸಹೃದಯರು ಮಹಾಕವಿಗಳು ತೀರಾ ವಿರಳ ಪ್ರಸಿದ್ಧವಾದ ಅವರ ಅದ್ವೈತ ಸಿದ್ಧಾಂತವನ್ನು ಕ್ಷಣಕಾಲ ಮರೆತರೂ ಅವರು ವಾಲ್ಮೀಕಿ ಕಾಳಿದಾಸರಿಗಿಂತ ಯಾವ ರೀತಿಯಲ್ಲೂ ಕಡಿಮೆಯಿಲ್ಲದ ಕವಿವರ್ಯರಾಗಿದ್ದಾರೆ ತಮ್ಮ ಈ ಕಾವ್ಯಪ್ರತಿಭೆಯು ವಾಗ್ದೇವತೆಯಾದ ಮಹಾದೇವಿಯ ಕೃಪೆ ಎಂಬ ಸಮರ್ಪಣ ಬುದ್ಧಿ ಅವರ ಅನನ್ಯ ವಿನಯಕ್ಕೆ ಸಾಕ್ಷಿಯಾಗಿದೆ.
"ತವಸ್ತನ್ಯಂ ಮನ್ಯೇ ಧರಣೀಧರಕನ್ಯೇ ಹೃದಯತಃ
ಪಯಃಪಾರಾವಾರಃ ಪರಿವಹತಿ ಸಾರಸ್ವತಮಿವ
ದಯಾವತ್ಯಾ ದತ್ತಂ ದ್ರವಿಡಶಿಶುರಾಸ್ವಾದ್ಯ ತವ ಯತ್
ಕವೀನಾಂ ಪ್ರೌಢಾನಾಮಜನಿ ಕಮನೀಯಃ ಕವಯಿತಾ ||"

ಅಂದರೆ 'ಹೇ ಗಿರಿರಾಜ ಪುತ್ರಿ ನಿನ್ನ ಎದೆಹಾಲನ್ನು ನಿನ್ನ ಹೃದಯಾಂತರಾಳದಿಂದ ಜನಿಸಿ ಹರಿಯುತ್ತಿರುವ ಕ್ಷೀರ ಸಮುದ್ರದ ವಾಙ್ಮಯ ವಿಲಾಸವೆಂದು ತಿಳಿಯುವೆನು ಏಕೆಂದರೆ ದಯಾವತಿಯಾದ ನಿನ್ನಿಂದ ಕೊಡಲ್ಪಟ್ಟ ಮೊಲೆಹಾಲನ್ನು ಕುಡಿದು ಈ ಸ್ತೋತ್ರಗಳನ್ನು ರಚಿಸಿದ ದ್ರಾವಿಡ ದೇಶದ ಹುಡುಗನಾದ ನಾನು ಪ್ರೌಢ ಕವೀಶ್ವರರ ಮಧ್ಯದಲ್ಲಿ ಕಮನೀಯವಾದ ಕವಿಯಾದೆನು" ಹಾಗೇ ಅವರ ಈ ಕಾವ್ಯ ಯಾವ ಎತ್ತರಕ್ಕೆ ಏರಿತು ಎನ್ನುವುದನ್ನು ಈ ಕೆಳಗಿನ ಶ್ಲೋಕದಲ್ಲಿ ಕಾಣಬಹುದಾಗಿದೆ ಹೇ ಶಂಕರ ಸರ್ವಾಲಂಕಾರ ಭೂಷಿತಳಾದ ಈ ಕಾವ್ಯಕನ್ಯೆಯನ್ನು ನಿನಗೆ ಅರ್ಪಿಸುತ್ತಿದ್ದೇನೆ.

"ಸರ್ವಾಲಂಕಾರಯುಕ್ತಾಂ ಲಲಿತಪದಯುತಾಂ ಸಾಧುವೃತ್ತಾಂ ಸುವರ್ಣಾಂ
ಸದ್ಭಿಃ ಸಂಸ್ತೂಯಮಾನಾಂ ಸರಸಗುಣಯುತಾಂ ಲಕ್ಷಿತಾಮ ಲಕ್ಷಣಾಢ್ಯಾಮ್ |
ಉದ್ಯದ್ಭೂಷಾವಿಶೇಷಾಂ ಉಪಗತವಿನಯಾಂ ದ್ಯೋತಮಾನಾರ್ಥರೇಖಾಂ
ಕಲ್ಯಾಣೀಂ ದೇವ ಗೌರೀಪ್ರಿಯ ಮಮ ಕವಿತಾಕನ್ಯಕಾಂ ತ್ವಂ ಗೃಹಾಣ ||"

ಅಂದರೆ 'ಹೇ ಗೌರಿಪತಿಯೇ! ನನ್ನ ಕಾವ್ಯಕನ್ನಿಕೆಯು ಉಪಮೆ ರೂಪಕಾದಿ ಸರ್ವಾಲಂಕಾರ ಸಂಯುಕ್ತಳೂ ಲಲಿತಪದಗಳೆಂಬ ಕೋಮಲಪಾದವುಳ್ಳವಳೂ ಸ್ರಗ್ಧರಾ ಮುಂತಾದ ಒಳ್ಳೆಯ ವೃತ್ತಗಳೆಂಬ ಸದಾಚಾರಿಣಿಯೂ ಸುಂದರವಾದ ಅಕ್ಷರಗಳೆಂಬ ಒಳ್ಳೆಯ ಬಣ್ಣವುಳ್ಳವಳೂ, ವಿದ್ವಾಂಸರಿಂದ ಮೆಚ್ಚುಗೆ ಪಡೆದವಳೂ ಶೃಂಗಾರಾದಿ ರಸ ಮತ್ತು ಮಾಧುರ್ಯಾದಿ ಗುಣಗಳೆಂಬ ಸದ್ಗುಣವುಳ್ಳವಳೂ ಉತ್ತಮ ಕಾವ್ಯಲಕ್ಷಣಗಳೆಂಬ ಪ್ರಶಂಸನೀಯವಾದ ಲಕ್ಷಣೋಪೇತಳೂ ಶಬ್ಧಾರ್ಥಲಂಕಾರಗಳಿಂದ ಕಂಗೊಳಿಸುವ ವಿಶೇಷಾಭರಣಯುಕ್ತಳೂ ವಿನಯಗುಣದಿಂದೊಡಗೂಡಿದವಳೂ ಅಭಿಧಾ ಲಕ್ಷಣಾ ವ್ಯಂಗ್ಯಾರ್ಥಗಳೆಂಬ ಧನರೇಖೆಗಳುಳ್ಳವಳೂ ಮಂಗಳಕರಳೂ ಆಗಿದ್ದು ಇವಳನ್ನು ನೀನು ಕೃಪೆಯಿಟ್ಟು ಸ್ವೀಕರಿಸು ಶಿವಾನಂದಲಹರಿಯ ಈ ಮಾತು ಅವರ ಕಾವ್ಯಕ್ಕೆ ಅಕ್ಷರಶಃ ಅನ್ವಯಿಸುತ್ತದೆ.

ಶ್ರೀಶಂಕರರ ಸ್ತೋತ್ರ ಕಾವ್ಯದ ಶೈಲಿ    ಶ್ರೀ ಶಂಕರರ ಸ್ತೋತ್ರಗಳ ಭಾಷೆ ಮೃದು ಮಧುರ ಪದ ಪುಂಜರಂಜಿತವಾದದ್ದು ಶೈಲಿ ಅತ್ಯಂತ ಸರಳ ಸುಂದರ; ಶಬ್ದಾಲಂಕಾರಗಳಲ್ಲಿ ಅನುಪ್ರಾಸ ಯಮಕ ಹೆಚ್ಚು.

"ನಾನಾರ್ಥವಸ್ತೋನುಪ್ರಾಸಾ ನ ಚಾಪ್ಯಸದೃಶಾಕ್ಷರಾಃ |
 ಯುಕ್ತ್ಯಾನಯಾ ಮಧ್ಯಮಯಾ ಜಾಯಸ್ತೇ ಚಾರವೋ ಗಿರಃ||"

ಎಂಬಂತೆ, ಒಂದನ್ನೊಂದು ಹೋಲುವ ಅಕ್ಷರಗಳು ಮತ್ತೆ ಮತ್ತೆ ಬಂದಿದ್ದು ಅರ್ಥ ಮಾತ್ರ ಬೇರೆ ಬೇರೆಯಾಗಿರುವುದೇ ಅನುಪ್ರಾಸ, 'ಸಾನುಪ್ರಾಸಾರಸಾವಹಃ' ಎಂಬಂತೆ ಅನುಪ್ರಾಸದಿಂದ ಮಾತು ರಸವತ್ತಾಗುತ್ತದೆ ಆಚಾರ್ಯರ ಸುಂದರ ಅನುಪ್ರಾಸಭರಿತ ಪದ್ಯ ಓದುತ್ತಿದ್ದರೆ ನಾವು ನಮ್ಮನ್ನೇ ಮರೆಯುತ್ತೇವೆ. ಉದಾಹರಣೆ ಹೀಗಿದೆ.

"ನಿಶಂತ ಕಾಂತದಂತಕಾಂತಿಮಂತಕಾಂತಕಾತ್ಮಜಂ
ಅಚಿಂತ್ಯರೂಪಮಂತಹೀನಮಂತರಾಯಕೃಂತನಂ |
ಹೃದಂತರೇ ನಿರಂತರಂ ವಸಂತಮೇವ ಯೋಗಿನಾಂ
ತಮೇಕದಂತಮೇಕಮೇವ ಚಿಂತಯಾಮಿ ಸಂತತಂ ||"

"ಸಾನಂದಮಾನಂದವನೇ ವಸಂತಂ
ಆನಂದಕಂದಂ ಹತಪಾಪವೃಂದಮ್ |
ವಾರಾಣಸೀ ನಾಥಮನಾಥ ನಾಥಂ
ಶ್ರೀ ವಿಶ್ವನಾಥಂ ಶರಣಂ ಪ್ರಪದ್ಯೇ ||"

ಅದರಂತೆ-
"ಸಕಲಕಲುಷಭಂಗೇ ಸ್ವರ್ಗಸೋಪಾನಸಂಗೇ
ತರಲತರ-ತರಂಗೇ ದೇವಿಗಂಗೇ ಪ್ರಸೀದ|"

ಇಷ್ಟು ಸುಂದರವಾಗಿ ಪುಂಖಾನುಪುಂಖವಾಗಿ ಬರುವ ಅನುಪ್ರಾಸರಚನೆ ಅನ್ಯತ್ರ ದುರ್ಲಭ ಅವರ ಕಲಾಕುಂಚದಲ್ಲಿ ಶಕ್ತಿಯುಕ್ತ ಶಬ್ದಗಳು ಅನುಪ್ರಾಸಗಳು ಕುಣಿಯುತ್ತವೆ. ಭಗವಂತನನ್ನು ಭಕ್ತಿಭರಿತನಾಗಿ ಪ್ರಾರ್ಥಿಸುವ ಸಂದರ್ಭದಲ್ಲೂ ಅವರು ಬಳಸುವ ಸುಂದರ ಶಬ್ಧಗಳನ್ನು ಅನ್ಯತ್ರ ಕಾಣಲಾರೆವು ನಿದರ್ಶನ ಹೀಗಿದೆ.
"ಅವಿನಯಮಪನದ ವಿಷ್ಣೋ|
ದಮಯ ಮನಃ ಶಮಯ ವಿಷಯಮೃಗತೃಷ್ಟಾಂ |
ಭೂತದಯಾಂ ವಿಸ್ತಾರಯ ತಾರಯ ಸಂಸಾರ ಸಾಗರತಃ "

    'ಹೇ ಭಗವಂತ ನನ್ನ ಅವಿನಯವನ್ನು ದೂರ ಮಾಡು ಮನಸ್ಸನ್ನು ನಿಯಂತ್ರಿಸುವ ಶಕ್ತಿಕೊಡು ಇಂದ್ರಿಯ ಸುಖವೆಂಬ ಬಿಸಿಲುಗುದುರೆಯನ್ನು ಅತಿಯಾಗಿ ಬೆನ್ನಟ್ಟಿ ಹೋಗದಂತೆ ನೋಡಿಕೋ ಸಕಲ ಪ್ರಾಣಿಗಳಲ್ಲಿ ದಯೆಯಿಂದ ಕೂಡಿರುವಂತೆ ಅನುಗ್ರಹಿಸು ಸಮರ್ಥ ಸಾರ್ಥಕ ಜೀವನ ನಡೆಸಿದ ಬಳಿಕ ನನ್ನನ್ನು ಈ ಸಂಸಾರ ಸಾಗರದಿಂದ ದಾಟಿಸು" ನಮ್ಮ ಜೀವನ ಹೇಗಿರಬೇಕು? ಹೇಗೆ ನಡೆದುಕೊಂಡಾಗ ಬಾಳು ಅರ್ಥಪೂರ್ಣವಾಗುತ್ತದೆ? ನಮ್ಮ ವ್ಯಕ್ತಿತ್ವ ವಿಕಸನಗೊಳ್ಳುವದೆಂತು? ಎಂಬುದನ್ನು ಸುಂದರವಾದ 'ಯಮಕಾಲಂಕಾರ'ದಲ್ಲಿ ವರ್ಣಿಸಿರುವುದನ್ನು ಇಲ್ಲಿ ಕಾಣಬಹುದು.

    ಇನ್ನು ಅರ್ಥಾಲಂಕಾರದತ್ತ ಬಂದಾಗ ರೂಪಕ, ಶ್ಲೇಷ, ಅರ್ಥಾಂತರನ್ಯಾಸ, ಸ್ವಭಾವೋಕ್ತಿ ಮುಂತಾದವುಗಳು ಶ್ರೀ ಶಂಕರರ ಸ್ತೋತ್ರಸಾಹಿತ್ಯದಲ್ಲಿ ವಿಶೇಷವಾಗಿ ಬಂದಿರುವುದನ್ನು ಕಾಣಬಹುದು ಉದಾಹರಣೆ ಹೀಗೆದೆ.

"ಆತ್ಮಾ ತ್ವಂ ಗಿರಿಜಾ ಮತಿಃ ಸಹಚರಾಃ ಪ್ರಾಣಾಃ ಶರೀರಂ ಗೃಹಂ
ಪೂಜಾ ತೇ ವಿಷಯೋಪಭೋಗರಚನಾ ನಿದ್ರಾ ಸಮಾಧಿಸ್ಥಿತಿಃ
ಸಂಚಾರಃ ಪದಯೋಃ ಪ್ರದಕ್ಷಿಣವಿಧಿಃ ಸ್ತೋತ್ರಾಣಿ ಸರ್ವಾಗಿರಃ
ಯದ್ಯತ್ಕರ್ಮ ಕರೋಮಿ ತತ್ತದಖಿಲಂ ಶಂಭೋ ತವಾರಾಧನಮ್"

ಇಲ್ಲಿ ರೂಪಕಾಲಂಕಾರದ ಒಡಲಲ್ಲಿ ಸುಂದರ ಕಾವ್ಯ ಪ್ರತಿಮೆ ಮೂಡಿ ಬಂದಿರುವದು ಗಮನಾರ್ಹ ಅಲ್ಲದೇ ಸಾಧಕನ ಸಮಸ್ತ ಜೀವನವೇ ಯೋಗವಾಗುವ ಕಲೆಯನ್ನು ಆಚಾರ್ಯರು ಇಲ್ಲಿ ಭೋಧಿಸಿದ್ದಾರೆ.

    ಸ್ವಭಾವೋಕ್ತಿಯಲ್ಲಿ ಲೋಕಚಾರಿತ್ರ್ಯವನ್ನು ಕಟ್ಟಿಡುವ ವಿಶಿಷ್ಟ ಪ್ರತಿಭೆಯೂ ಶಂಕರರಲ್ಲಿದೆ.

"ಬಾಲಸ್ತಾವತ್ ಕ್ರೀಡಾಸಕ್ತಃ ತರುಣಸ್ತಾವತ್ ತರುಣೀಸಕ್ತಃ |
ವೃದ್ಧಸ್ತಾವತ್ ಚಿಂತಾಸಕ್ತಃ ಪರೇಬ್ರಹ್ಮಣಿ ಕೋ ಪಿ ನ ಸಕ್ತಃ ||" (ಭಜಗೋವಿಂದ -7)

"ಅಂಗಂ ಗಲಿತಂ ಪಲಿತಂ ಮುಂಡಂ, ದಶನವಿಹೀನಂ ಜಾತಂ ತುಂಡಮ್
ವೃದ್ಧೋ ಯಾತಿ ಗೃಹೀತ್ವಾ ದಂಡಂ ತದಪಿ ನ ಮುಂಚತಿ ಆಶಾಪಿಂಡಂ || " (ಭಜಗೋವಿಂದ -15)

ಅಂದರೆ ಮಕ್ಕಳಿಗೆ ಆಟದಲ್ಲಿ ಆಸಕ್ತಿ ಯುವಕರಿಗೆ ಯುವತಿಯರೊಡನೆ ಕಲೆಯುವುದರಲ್ಲಿ ಆಸಕ್ತಿ ಮುದುಕರಿಗೆ ಸದಾ ಚಿಂತೆ; ಆದರೆ ಯಾರಿಗೂ ಪರಬ್ರಹ್ಮ ಚಿಂತೆ ಮಾತ್ರ ಇಲ್ಲ ಅಂಗಗಳು ಶಿಥಿಲಗೊಂಡಿವೆ ತಲೆ ಬೆಳ್ಳಗಾಗಿದೆ ಹಲ್ಲುಗಳು ಉದುರಿ ಹೋಗಿವೆ ಇಂಥ ಮುದುಕ ದೊಣ್ಣೆಯೂರಿ ನಡೆಯುತ್ತಿದ್ದಾನೆ ಆದರೂ ಆಶಾಪಿಂಡ ಮಾತ್ರ ಬಿಟ್ಟುಹೋಗುವುದಿಲ್ಲ ಇಲ್ಲೆಲ್ಲ ಮಾನವನ ಸ್ವಭಾವವನ್ನು ಅತ್ಯಂತ ಸ್ವಾರಸ್ಯವಾಗಿ ಮಗುವಿಗೂ ಅರ್ಥವಾಗುವಂತೆ ಬರೆದಿರುವುದನ್ನು ಕಂಡಾಗ ಶಕ್ತಿಯುಕ್ತ ಕವಿಯಲ್ಲಿ ಭಾಷೆ ಹೇಗೆ ನರ್ತಿಸುತ್ತದೆ ಎಂಬುದನ್ನು ಅರಿಯಬಹುದು ಇಲ್ಲಿಯ 'ಸಕ್ತ', 'ರಕ್ತಃ', 'ಗಲಿತಂ', 'ಪಲಿತಂ', 'ಮುಂಡಂ', 'ತುಂಡಂ', 'ದಂಡಂ', 'ಪಿಂಡಂ' ಮುಂತಾದ ಪ್ರಾಸಬದ್ಧ ನುಡಿಗಳು ಓದಲೂ, ಕೇಳಲೂ, ಕಂಠಪಾಠಮಾಡಲೂ ಅತ್ಯಂತ ಹಿತಕರವಾಗಿರುವುದನ್ನು ಗಮನಿಸಬಹುದು ಹಾಗೆಂದು ಅರ್ಥಗಾಂಭೀರ್ಯಕ್ಕೆ ಇಲ್ಲಿ ಕಿಂಚಿತ್ತೂ ಕೊರತೆಯಿಲ್ಲ ಸ್ವಲ್ಪ ವಿಡಂಬನೆಯೂ ಇದ್ದೇ ಇದೆ ಹಾಗೆ 'ಬಾಲಸ್ತಾವತ್' ಎಂಬ ಪದ್ಯದಲ್ಲಿ ಅರ್ಥಾಂತರನ್ಯಾಸ ಅಲಂಕಾರವು ಸುಂದರವಾಗಿ ಮೂಡಿ ಬಂದಿರುವುದನ್ನೂ ಮರೆಯಲಾಗದು.

    ಆತ್ಮ ಸ್ವರೂಪವನ್ನು ಕಾವ್ಯ ಪರಿಭಾಷೆಯಲ್ಲಿ ಎಷ್ಟು ಸಲಭವಾಗಿ ಹೇಳಲು ಸಾಧ್ಯವೋ ಅಷ್ಟು ಸುಲಭವಾಗಿ ಶ್ರೀಶಂಕರರು ವಣಿಸಿರುವುದನ್ನು ಕಾಣುತ್ತೇವೆ.

"ರಜ್ಜುಃ ಅಜ್ಞಾನಾತ್ ಭಾತಿ ರಜ್ಜುಃ ಯಥಾಹಿ
ಸ್ವಾತ್ಮ ಅಜ್ಞಾನಾತ್ ಆತ್ಮನೋ ಜೀವಭಾವಃ |
ಆಪ್ತೋಕ್ತ್ಯಾ ಹಿ ಭ್ರಾಂತಿನಾಶೇ ಸರಜ್ಜುಃ
ಜೀವೋ ನಾಹಂ ದೇಶಿಕೋಕ್ತ್ಯಾ ಶಿವೋಹಮ್..." (ಅದ್ವೈತ ಪಂಚರತ್ನ -2)

ಅಂದರೆ, ಇದು ಹಗ್ಗ ಎಂಬ ಅರಿವು ಇಲ್ಲದ್ದರಿಂದ ಹಗ್ಗದಲ್ಲಿ ಹಾವು ಎಂಬ ಭಾವ ತೋರಿಬರುವಂತೆ ತನ್ನ ಸ್ವರೂಪದ ತಿಳಿವಳಿಕೆಯಿಲ್ಲದ್ದರಿಂದ ಆತ್ಮನಿಗೆ ಜೀವತ್ಮವು ಪ್ರಾಪ್ತವಾಗಿದೆ ನಮ್ಮ ಹಿತವನ್ನು ಬಯಸುವಾತನ ಮಾತಿನ ಮೂಲಕ ಭ್ರಮೆಯು ಹೋಗಿ ಹಾವಿನ ಭಾವವು ದೂರವಾಗಿ ಮತ್ತೆ ಹಗ್ಗವೇ ಆಗಿ ತೋರುವಂತೆ, ಆಚಾರ್ಯರ ಉಪದೇಶದ ಪ್ರಭಾವದಿಂದ ನಾನು ಜೀವನಲ್ಲ, ಶಿವನೇ ಆಗಿದ್ದೇನೆ ಎಂಬುದರ ಅರಿವಾಗುತ್ತದೆ.
"ಜಾಗ್ರತ್ ಸ್ವಪ್ನಸುಷುಪ್ತಿಷು ಸ್ಫುಟತರಾ ಯಾ ಸಂವಿದುಜ್ಜ್ರಂಭತೇ
ಯಾ ಬ್ರಹ್ಮಾದಿ ಪಿಪೀಲಿಕಾಂತತನುಷು ಪ್ರೋತಾ ಜಗತ್ಸಾಕ್ಷಿಣೀ |
ಸೈವಾಹಂ ನ ಚ ದೃಶ್ಯವಸ್ತ್ವಿತಿ ದೃಢಪ್ರಜ್ಞಾಪಿ ಯಸ್ಯಾಸ್ತಿ ಚೇತ್
ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮುನಿಷಾ ಮಮ || (ಮನೀಷಾ ಪಂಚಕಂ-1)

ಅಂದರೆ, ಎಚ್ಚರ, ಕನಸು, ಗಾಢನಿದ್ರೆಗಳೆಂಬ ಮುರು ಅವಸ್ಥೆಗಳಲ್ಲಿಯೂ ಸ್ಫುಟವಾಗಿ ಗೋಚರಿಸುವ ಬ್ರಹ್ಮನಿಂದ ಇರುವೆಯವರೆಗೆ ಸಮಸ್ತ ದೇಹಗಳಲ್ಲಿಯೂ ವ್ಯಾಪಿಸಿರುವ ಜಗತ್ಸಾಕ್ಷಿಯಾದ ಚಿದ್ವಸ್ತುವೇ (ಪರಬ್ರಹ್ಮ) ನಾನು ಹೊರಗೆ ತೋರುವ ಈ ಯಾವ ವಸ್ತುವೂ ಅಲ್ಲ; ಎಂಬ ನಿಶ್ಚಯ ಬುದ್ಧಿಯು ಯಾವನಿಗೆ ಇದೆಯೋ ಅವನು ಚಾಂಡಾಲನೇ ಆಗಿರಲಿ ಬ್ರಾಹ್ಮಣನೇ ಆಗಿರಲಿ ಅವನೇ ಗುರುವೆಂದು ನನ್ನ ಭಾವನೆ. ಹೀಗೆ ಸುಲಭವಾಗಿ ಆತ್ಮ ಸ್ವರೂಪವನ್ನು ತಿಳಿಸಲು ಯಾರಿಂದಲೂ ಸಾಧ್ಯವಿಲ್ಲ.

ಶ್ರೀ ಶಂಕರರ ಸ್ತೋತ್ರಗಳಲ್ಲಿ ಕಂಡು ಬರುವ ಸಮಾನಾಂಶಗಳು
    ಸಾಮಾನ್ಯವಾಗಿ ಶ್ರೀ ಶಂಕರರ ಸ್ತೋತ್ರಗಳಲ್ಲಿ ಕಂಡುಬರುವ ಸಮಾನಾಂಶವೆಂದರೆ ಭಗವಂತನು ಅನಂತ ಅದ್ವಿತೀಯ ಸಚ್ಚಿದಾನಂದ ಸ್ವರೂಪ ನಾಮಾದಿಭೇದರಹಿತ, ಗುಣಾತೀತ ಅವ್ಯಕ್ತ ಅವನಿಂದಲೇ ಪ್ರಪಂಚದ ಉತ್ಪತ್ತಿ ಸ್ಥಿತಿ, ಲಯ, ಅವನು ಆಕಾರರಹಿತ, ಓಂಕಾರಗಮ್ಯ, ಇಷ್ಟಾರ್ಥದಾಯಕ, ಭಕ್ತಿಜ್ಞಾನ ವೈರಾಗ್ಯವುಳ್ಳವರಾಗಿ ಈಶ್ವರಾರ್ಪಣ ಬುದ್ಧಿಯಿಂದ ಒಳ್ಳೆಯ ಕೆಲಸ ಮಾಡುವವರು ಮೋಕ್ಷಕ್ಕೆ ಅರ್ಹರು ಭೂತದಯೆ ತ್ಯಾಗ ಇಂದ್ರಿಯನಿಗ್ರಹ, ಈಶ್ವರ ಪ್ರಣಧಾನಗಳು ಧರ್ಮಾಚರಣೆಯ ನಾಲ್ಕು ಬಹುಮುಖ್ಯ ಅಂಗಗಳು ಇಂಥ ಧರ್ಮವನ್ನು ಬಿಡದೆ ಆಚರಿಸುವುದರಿಂದ ಈಶ್ವರಾನುಗ್ರಹದೊಂದಿಗೆ ಲೋಕಕಲ್ಯಾಣವೂ ಉಂಟಾಗುವುದು.

    ಈ ರೀತಿಯ ಭಾವನೆಗಳಿಂದ ಕೂಡಿದ ವರ್ಣನೆ ಹರಿ-ಹರ-ಶಕ್ತಿ ಭೇದವಿಲ್ಲದೇ ಎಲ್ಲ ದೇವತೆಗಳಿಗೂ ಅನ್ವಯಿಸುವಂತೆ ವರ್ಣಿತವಾಗಿರುವುದು ಕಂಡುಬರುತ್ತದೆ. ನಿದರ್ಶನವಾಗಿ ಶ್ರೀ ರಾಮ ಸ್ತೋತ್ರದ ಒಂದು ಪದ್ಯವನ್ನು ನೋಡೋಣ.
"ವಿಶುದ್ಧಂ ಪರಂ ಸಚ್ಚಿದಾನಂದರೂಪಂ
ಗುಣಾಧಾರಮಾಧಾರಹೀನಂ ವರೇಣ್ಯಮ್
ಮಹಾಂತಂ ವಿಭಾಂತಂ ಗುಹಾಂತಂ ಗುಣಾಂತಂ
ಸುಖಾಂತಂ ಸ್ವಯಂ ಧಾಮ ರಾಮಂ ಪ್ರಪದ್ಯೇ " ( ಶ್ರೀರಾಮಭುಜಂಗ ಪ್ರಯಾತ-1)

ಅಂದರೆ, 'ಅತ್ಯಂತ ಪರಿಶುದ್ಧನೂ, ಸರ್ವಶ್ರೇಷ್ಠನೂ, ಸಚ್ಚಿದಾನಂದ ಸ್ವರೂಪಿಯೂ ಸಕಲ ಸದ್ಗುಣಾಶ್ರಯನೂ, ಎಲ್ಲರಿಂದ ಸ್ತುತಿಸಲ್ಪಡುವವನೂ, ಸರ್ವ ವ್ಯಾಪಕನೂ, ವಿಶೇಷ ಕಾಂತಿಯಿಂದ ಬೆಳಗುವವನೂ ಎಲ್ಲ ಜೀವಿಗಳ ಹೃದಯ ಗುಹೆಯಲ್ಲಿ ನೆಲಸಿರುವವನೂ ಸತ್ವರಜಸ್ತಮೋ ಗುಣಗಳಿಗೆ ಅಧೀನನಾಗದವನೂ ವಿಷಯ ಸುಖಗಳಿಂದ ದೂರವಿರುವವನೂ ತನಗೆ ತಾನೇ ಆಶ್ರಯನೂ ಆದ ಶ್ರೀ ರಾಮಚಂದ್ರನನ್ನು ಆಶ್ರಯಿಸುತ್ತೇನೆ. ಅದೇ ರೀತಿ ವೇದ ಸಾರ ಶಿವಸ್ತುತಿಯ ಈ ಪದ್ಯವನ್ನು ನೋಡಬಹುದು.

"ತ್ವತ್ತೋ ಜಗದ್ಭವತಿ ವೇದ ಭವಸ್ಮರಾರೇ
ತ್ವಯ್ಯೇವ ತಿಷ್ಠತಿ ಜಗನ್ಮೃಡ ವಿಶ್ವನಾಥ |
ತ್ವಯ್ಮೇವ ಗಚ್ಛತಿ ಲಯಂ ಜಗದೇತದೀಶ
ಲಿಂಗಾತ್ಮಕೇ ಹರ ಚರಾಚರ ವಿಶ್ವರೂಪಿನ್" || (ವೇದ ಸಾರ ಶಿವಸ್ತೋತ್ರಂ -2)

ಅಂದರೆ, 'ಹೇ ಮನ್ಮಥಾರಿಯೇ; ಜಗತ್ತಿನ ಸೃಷ್ಟಿ ನಿನ್ನಿಂದ; ಅದು ಉಳಿಯುವುದೂ ನಿನ್ನಿಂದ; ಅಳಿಯುವುದೂ ನಿನ್ನಿಂದ ಹೇ ಮೃಡ! ವಿಶ್ವನಾಥ, ಚರಾಚರರೂಪಯಾದ ವಿಶ್ವಸ್ವರೂಪಿಯೇ ನೀನಾಗಿರುವೆ.

    ಶಿವಾನಂದ ಲಹರಿಯ ಭಕ್ತಿ ಮತ್ತು ಶರಣಾಗತಿಯ ಬಗ್ಗೆ ವಿವರ ನೀಡುತ್ತಿದ್ದು ಭಕ್ತಿ ಯೋಗದ ತತ್ವ ಹಾಗೂ ಅನುಷ್ಠಾನದ ಬಗೆಗೆ ಅನೇಕ ಉಪಯುಕ್ತ ವಿಚಾರಗಳನ್ನು ಒಳಗೊಂಡಿದೆ.
"ಸಾರೂಪ್ಯಂ ತವ ಪೂಜನೇ ಶಿವಮಹಾದೇವೇತಿ ಸಂಕೀರ್ತನೇ
ಸಾಮೀಪ್ಯಂ ಶಿವಭಕ್ತಿ ಧುರ್ಯ ಜನತಾ ಸಾಂಗತ್ಯ ಸಂಭಾಷಣೇ |
ಸಾಲೋಕ್ಯಂ ಚ ಚರಾಚರಾತ್ಮಕ ತನು ಧ್ಯಾನೇ ಭವಾನೀಪತೇ
ಸಾಯುಜ್ಯಂ ಮಮ ಸಿದ್ಧ ಮತ್ರ ಭವತಿ ಸ್ವಾಮಿನ್ ಕೃತಾರ್ಥೋಸ್ಮ್ಯಹಂ" (ಶಿವಾನಂದಲಹರಿ - 28)

ಅಂದರೆ ಶ್ರೀ ಭವಾನಿವಲ್ಲಭನಾದ ಮಹೇಶ್ವರನೇ ನಿನ್ನ ಪೂಜೆಯಿಂದ ಸಾರೂಪ್ಯ ನಾಮ ಸಂಕೀರ್ತನೆಯಿಂದ ಸಾಮೀಪ್ಯ ಶಿವಭಕ್ತರ ಸತ್ಮಂಗದಿಂದ ಸಾಲೋಕ್ಯ ಸಮಸ್ತಜಗದಾತ್ಮದವಾದ ನಿನ್ನ ಸ್ವರೂಪದ ಧ್ಯಾನದಿಂದ ಸಾಯುಜ್ಯವೆಂಬ ಮುಕ್ತಿ ನನಗೆ ಇಲ್ಲಿಯೇ ಲಬಿಸಿದೆ ನಾನು ಇದರಿಂದಲೇ ಧನ್ಯನಾಗಿದ್ದೇನೆ.

ಭಕ್ತಿಯ ಸ್ವರೂಪ
    ಭಗವಂತನಲ್ಲಿ ಭಕ್ತಿಯಿರಬೇಕು, ಆದರೆ ಅದು ಸಕಾಮವಾಗಿರುವ ಬದಲು ನಿಷ್ಕಾಮವಾಗಿದ್ದರೆ ಚೆನ್ನ ಧನಕನಕ ವಸ್ತುವಾಹನಾದಿಗಳನ್ನು ಬಯಸಿ ಭಜಿಸುವುದು ಅಷ್ಟು ಶ್ರೇಷ್ಠವಾದ ಭಕ್ತಿಯಲ್ಲ. ಭಕ್ತಿಯ ಉದ್ದೇಶ ಭಗವತ್ ಪ್ರಾಪ್ತಿಃ ಅಥವಾ ಜನ್ಮರಾಹಿತ್ಯವಾಗಿರಬೇಕು. ಆಚಾರ್ಯರ ಸ್ತೋತ್ರಗಳಲ್ಲಿ ಅಲ್ಲಲ್ಲಿ ಈ ಭಾವನೆ ಅಭಿವ್ಯಕ್ತವಾಗಿರುವುದನ್ನು "ಜಗನ್ನಾಥಾಷ್ಟಕ'ದ ಈ ಪದ್ಯದಲ್ಲಿ ಕಾಣಬಹುದು.
"ನ ವೈ ಪ್ರಾರ್ಥ್ಯಂ ರಾಜ್ಯಂ ನ ಚ ಕನಕತಾ ಭೋಗವಿಭವೇ
ನ ಯಾಜೇಹಂ ರಮ್ಯಾಂ ನಿಖಿಲಜನಕಾಮ್ಯಾಂ ವರವಧೂಂ |
ಸದಾ ಕಾಲೇ ಕಾಲೇ ಪ್ರಮಥಪತಿನಾ ಗೀತಚರಿತೋ
ಜಗನ್ನಾಥಃ ಸ್ವಾಮೀ ನಯನಪಥಗಾಮೀ ಭವತು ಮೇ "|| ( ಜಗನ್ನಾಥಾಷ್ಟಕ-7)

ಅಂದರೆ 'ನಾನು ರಾಜ್ಯವನ್ನಾಗಲೀ ಸುವರ್ಣ ಭೋಗ ಭಾಗ್ಯವನ್ನಾಗಲೀ ಸಾಮಾನ್ಯವಾಗಿ ಎಲ್ಲ ಜನರೂ ಬಯಸುವ ಸುಂದರ ಕನ್ಯೆಯನ್ನಾಗಲೀ ಬಯಸುವುದಿಲ್ಲ ಸದಾ ಶಿವನಿಂದಲೂ ಹಾಡಲ್ಪಡುವ ಗುಣಗಳುಳ್ಳ ಜಗನ್ನಾಥಸ್ವಾಮಿಯು ನನ್ನ ಕಣ್ಣುಗಳಿಗೆ ಗೋಚರಿಸಿದರೆ ಸಾಕು. ಹೀಗೆ ಕೃಷ್ಣಾಷ್ಟಕದಲ್ಲಿ "ಶರಣ್ಯೋ ಲೋಕೇಶೋ ಮಮಭವತು ಕೃಷ್ಣೋಕ್ಷಿವಿಷಯಃ" ಎನ್ನುತ್ತಾರೆ ಒಟ್ಟಾರೆ ಕಣ್‌ಮುಂದೆ ನಿಲ್ಲುವಂತೆ ಆಯಾ ದೇವತೆಗಳ ವರ್ಣನೆ ಆಚಾರ್ಯರ ವೈಶಿಷ್ಟ್ಯ.

    ಭವಬಂಧನದಿಂದ ದೂರವಾಗುವ ನಿಷ್ಕಾಮ ಕರ್ಮಯೋಗ ನಮ್ಮದಾಗಬೇಕು ಎಂಬುದು ಇಲ್ಲಿಯ ಕಿವಿಮಾತು ಭಕ್ತನ ಭಕ್ತಿಯಲ್ಲಿ ಸ್ವಾರ್ಥ ಕಾಮನೆ ಇರುವುದು ಒಳಿತಲ್ಲ ಭಗವಂತನ ರೂಪ, ನಮ್ಮ ಕಣ್ನಿನಲ್ಲಿ ತುಂಬಿರಬೆಕು ಗುಣಗಾನ ಮಾತಿನಲ್ಲಿ ತುಂಬಿರಬೇಕು ನಾಮಶ್ರವಣ ಕಿವಿಯಲ್ಲಿ ತುಂಬಿರಬೇಕು ಭಗವಂತನ ಒಲುಮೆಯ ರೀತಿ ಅವರ ಒಂದೊಂದು ಪದ್ಯದಲ್ಲೂ ಮುಡಿಬಂದಿರುವುದು ಸುಸ್ಪಷ್ಟ ಉದಾಹರಣೆಗಾಗಿ ಗಣೇಶ ಪಂಚರತ್ನಂ ಸ್ತೋತ್ರದಲ್ಲಿ 'ಪ್ರಪಂಚನಾಶಭೀಷಣಂ' ಅಂದರೆ ಆ ಗಣೇಶನು ಸಂಸಾರ ದುಃಖಗಳನ್ನು ದೂರ ಮಾಡುವವನೆಂದು ವರ್ಣಿತವಾಗಿದ್ದರೆ 'ಶಿವಪ್ರಾತಃ ಸ್ಮರಣ ಸ್ತೋತ್ರ'ದಲ್ಲಿ ಶಿವನು 'ಸಂಸಾರ ರೋಗಹರ' ಅಂದರೆ ಭವರೋಗ ವೈದ್ಯನಾಗಿದ್ದಾನೆ.

    ಲಕ್ಷ್ಮೀನೃಸಿಂಹ ಸ್ತೋತ್ರದಲ್ಲಂತೂ ಸಾದ್ಯಂತವಾಗಿ ಎಂಟು ಶ್ಲೋಕಗಳಲ್ಲಿ ವಿವಿಧ ರೀತಿಯ ಅಲಂಕಾರೋಕ್ತಿಗಳಿಂದ ಸಂಸಾರದಲ್ಲಿ ಬಿದ್ದು ತೊಳಲಾಡುತ್ತಿರುವ ಜೀವನನ್ನು ಬಣ್ಣಿಸಿ ಆ ಭಗವಂತನು ನಮ್ಮನ್ನು ಅಗಾಧವಾದ ಸಂಸಾರ ದುಃಖದಿಂದ ಕಾಪಾಡುವವನೆಂದು ವರ್ಣಿಸಿ "ಕೈ ಹಿಡಿದು ನಡೆಸೆನ್ನನು" ಎಂದು ಬೇಡಿಕೊಳ್ಳಲಾಗಿದೆ.

"ಸಂಸಾರ ಸಾಗರನಿಮಜ್ಜನಮುಹ್ಯಮಾನಂ
ದೀನಂ ವಿಲೋಕಯ ವಿಭೋ ಕರುಣಾನಿಧೇ ಮಾಂ |
ಪ್ರಹ್ಲಾದಖೇದಪರಿಹಾರಕೃತಾವತಾರ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ||" (ಲಕ್ಷ್ಮೀನೃಸಿಂಹಕರುಣರಸಸ್ತೋತ್ರಂ-10)

ಅಂದರೆ, 'ಕರುಣಮಯಿಯಾದ ಸ್ವಾಮಿಯೇ; ಸಂಸಾರ ಸಾಗಗರದಲ್ಲಿ ಮುಳುಗಿ ಮೋಹ ಪಾಶದಲ್ಲಿ ಸಿಲುಕಿರುವ ನನ್ನತ್ತ ಸ್ವಲ್ಪ ದೃಷ್ಟಿ ಹರಿಸು ಹಿಂದೆ ಪ್ರಹ್ಲಾದನ ಕಷ್ಟಗಳನ್ನು ಪರಿಹರಿಸುವುದಕ್ಕಾಗಿ ಸ್ತಂಭದಿಂದ ಅವತರಿಸಿರುವ ಲಕ್ಷ್ಮೀನೃಸಿಂಹ ಸ್ವಾಮಿಯೇ ನನ್ನನ್ನು ಕೈಹಿಡಿದು ಮುನ್ನಡೆಸು.

    'ಶಿವನಾಮಾವಲ್ಯಷ್ಟಕ'ದ ಪ್ರಾರಂಭದ ಎಂಟು ಪದ್ಯಗಳ ಮೊದಲ ಮೂರು ಪಾದಗಳಲ್ಲಿ ಶಿವನ ಗುಣಗಣಗಳನ್ನು ವರ್ಣಿಸಿ ಕೊನೆಯ ಪಾದದಲ್ಲಿ "ಸಂಸಾರ ದುಃಖಗಹನಾಜ್ಜಗದೀಶರಕ್ಷ ಅಂದರೆ 'ಸಂಸಾರ ದುಃಖದಲ್ಲಿ ಬಿದ್ದು ಒದ್ದಾಡುತ್ತಿರುವ ನನ್ನನ್ನು ಕಾಪಾಡು' ಎಂದು ಪ್ರಾರ್ಥಿಸಲಾಗಿದೆ ಹೀಗೆ ಶಿವಾಪರಾಧಕ್ಷಮಾಪಣಾ ಸ್ತೋತ್ರ ಮುಂತಾದೆಡೆ ಸಂಸಾರಜಾಲದಲ್ಲಿ ಬಿದ್ದು ಒದ್ದಾಡುತ್ತಿರುವ ಮಾನವನ ಬಾಲ್ಯ ಕೌಮಾರ್ಯ, ವೃದ್ಧಾಪ್ಯಗಳ ಚಿತ್ರಣವನ್ನು ಅತ್ಯಂತ ಮಾರ್ಮಿಕವಾಗಿ ಕಣ್ಣುಂದೆ ನಿಲ್ಲುವಂತೆ ವರ್ಣಿಸಿ 'ತಾನು ಹಾಗೆ ಮಾಡಿಲ್ಲ' ಎಂದು ಶಿವನ ಕ್ಷಮೆ ಬೇಡುವ ನೆಪದಲ್ಲಿ ಪರೋಕ್ಷವಾಗಿ ನಮ್ಮ ನಡತೆ ಹೇಗಿರಬೇಕು? ಎಂಬುದನ್ನು ವಿವರಿಸಿದ್ದಾರೆ.

"ಸ್ನಾತ್ವಾ ಪ್ರತ್ಯೂಷಕಾಲೇ ಸ್ನಪನವಿಧಿವಿಧೌ ನಾಹೃತಂ ಗಾಂಗತೋಯಂ
ಪೂಜಾರ್ಥಂ ವಾ ಕದಾಚಿದ್ಬಹುತರಗಹನೇ ಖಂಡಬಿಲ್ವೀದಲಂ ವಾ |
ನಾನೀತಾ ಪದ್ಮಮಾಲಾ ಸರಸಿ ವಿಕಸಿತಾ ಗಂಧಪುಷ್ಟೈಸ್ತ್ವದರ್ಥಂ
ಕ್ಷಂತವ್ಯೋಮೇ ಪರಾಧಃ ಶಿವ ಶಿವ ಭೋಃ ಶ್ರೀ ಮಹಾದೇವ ಶಂಭೋ ||" (ಶಿವಾಪರಾಧಕ್ಷಮಾಪಣಸ್ತೋತ್ರ-5)

ಅಂದರೆ, 'ಹೇ ಮಹಾದೇವ; ಅರುಣೋದಯ ಸಮಯದಲ್ಲಿಯೇ ಎದ್ದು ಸ್ನಾನಾದಿ ಪ್ರಾತಃ ಕೃತ್ಯಗಳನ್ನು ಮಾಡಿ ನಿನ್ನ ವಿಧ್ಯುಕ್ತವಾದ ಅಭಿಷೇಕಕ್ಕೆ ಗಂಗಾಜಲವನ್ನು ನಾನು ಎಂತೂ ತರಲಿಲ್ಲ ಬಹಳ ಗಹನವಾದ ಅರಣ್ಯಕ್ಕೆ ಹೋಗಿ ನಿನ್ನ ಪೂಜೆಗಾಗಿ ಅಖಂಡ ಬಿಲ್ವಪತ್ರೆಗಳನ್ನು ಒಂದು ದಿನವೂ ತರಲಿಲ್ಲ ಸರೋವರದಲ್ಲಿ ಚೆನ್ನಾಗಿ ಅರಳಿದ ತಾವರೆ ಹೂಗಳ ಮಾಲೆಯನ್ನು ಸುಗಂಧ ಕುಸುಮಗಳೊಡನೆ ಕಟ್ಟಿ ತಂದು ಒಂದು ದಿನವೂ ನಿನಗೆ ಅರ್ಪಿಸಲಿಲ್ಲ ಹೇ ಶಂಭೋ ನನ್ನ ಈ ಅಪರಾಧಗಳನ್ನು ದಯವಿಟ್ಟು ಮನ್ನಿಸು".

    ಶಿವಪೂಜೆಯನ್ನು ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ಸೂಚ್ಯವಾಗಿ ಸುಂದರವಾಗಿ ವಿವರಿಸಿರುವುದು ಗಮ್ಯ "ಇದಂ ಉತ್ತಮಮ್ ಅತಿಶಯನಿ ವ್ಯಂಗೇ ವಾಚ್ಯಾತ್ ಧ್ವನಿಃ ಬುಧೈಃ ಕಥಿತಃ" (ಮಮ್ಮಟನ ಕಾವ್ಯಪ್ರಕಾಶ-1-4)

ಎಂಬ ಮಮ್ಮಟನ ಮಾತಿನಂತೆ ವಾಚ್ಯಾಂಶಕ್ಕಿಂತಲೂ ವ್ಯಂಗ್ಯಾಂಶ ಪ್ರಧಾನವಾಗಿದ್ದರೆ, ಅದು ಉತ್ತಮ ಧ್ವನಿಕಾವ್ಯವೆಂಬುದು ಕಾವ್ಯಶಾಸ್ತ್ರ ಸಿದ್ಧಾಂತ ಅಂತಹ ಕಾವ್ಯ ಕ್ರಾಂತದರ್ಶಿಗಳಾದ ಶಂಕರರ ಕಲಾಕುಂಚದಿಂದ ಮೂಡಿ ಬಂದಿದೆ ಅವರಲ್ಲಿ ಅದ್ಭುತವಾದ ಪ್ರತಿಭೆಯಿದೆ ಲೋಕಶಾಸ್ತ್ರ, ಕಾವ್ಯಾದಿಗಳ ಅವಲೋಕದಿಂದ ಬಂದ ನೈಪುಣ್ಯವಿದೆ ಗೋವಿಂದಭಗವತ್ಪಾದರಂಥ ಸದ್ಗುರುವಿನ ಪೂರ್ಣಾನುಗ್ರಹವಿದೆ.

ಶಂಕರರ ಸ್ತೋತ್ರದ ಅಂತರಾಳ    ಕೆಲವು ಸ್ತೋತ್ರಗಳಲ್ಲಿ, ಮಾನವನ ಗರ್ಭವಾಸ, ಜನನ, ಮುಪ್ಪು, ಮರಣ ಸಾಮಾನ್ಯವಾಗಿ ಆಗಾಗ ಬರುವ ಶಿರೋರೋಗ, ಕಣ್ಣಿನ ರೋಗ, ಹೃದ್ರೋಗ, ಹೊಟ್ಟೆನೋವು, ಲಘು ಶಂಕೆ, ಮೂಲವ್ಯಾಧಿ ಮುಂತಾದ ಅಧಿವ್ಯಾಧಿಗಳನ್ನು ಗಮನಿಸಿದಾಗ ಈ ಪ್ರಪಂಚ ಒಂದು ಸಾಗರ ದುಃಖಭೂಯಷ್ಠ ಎಂಬುದು ಕಂಡುಬರುತ್ತದೆ ನಿರಂತರವಾಗಿ ಬರುವ ದುಃಖ ದಾರಿದ್ರ್ಯಗಳ ಕಾರಣದಿಂದ ಮನುಷ್ಯ ಖಿನ್ನನಾಗುತ್ತಾನೆ. ಉದ್ವಿಗ್ನಗೊಳ್ಳುತ್ತಾನೆ ಆಯಾಸಗೊಳ್ಳುತ್ತಾನೆ ಆಂತಕನ ಘಂಟಾನಾದವು ಕಿವಿಗೆ ಬೀಳುವಾಗ ಯಮದೂತರು ಭೀಷಣ ಮಾತುಗಳನ್ನು ಆಡುತ್ತ ಹತ್ತಿರ ಸುಳಿಯುವಾಗ ಮಡದಿ ಮಕ್ಕಳೆಲ್ಲ ಮರಣ ಶಯ್ಯೆಯಲ್ಲಿರುವವರನ್ನು ನೋಡಿ ಕಣ್ಣೀರಿಡುವಾಗ ನಮ್ಮನ್ನು ರಕ್ಷಿಸುವವರು ಯಾರು? ಆಗ ಭಗವಂತನಲ್ಲಿಟ್ಟ ಅಚಲವಾದ ಭಕ್ತಿ ಮಾತ್ರ ನಮ್ಮನ್ನು ಉಳಿಸಬಲ್ಲದು ಆದ್ದರಿಂದ "ಭಜಗೋವಿಂದಂ ಭಜಗೋವಿಂದಂ ಭಜಗೋವಿಂದಂ ಮೂಢಮತೆ" ಎಂದು ಆಚಾರ್ಯರು ಕಿವಿಮಾತು ಹೇಳಿದ್ದಾರೆ.

    ನಮ್ಮ ಜೀವನದ ಒಂದೊಂದು ದಿನ ಕಳೆಯಿತೆಂದರೆ ಮರಣಕ್ಕೆ ಒಂದೊಂದು ದಿನ ಹತ್ತಿರ ಬಂದಂತೆ ಆದ್ದರಿಂದ ನಮ್ಮ ಗಮ್ಯ ಎಂತಿರಬೇಕು? ಜೀವನದ ಪರಮಗುರಿ ಚರಮಗುರಿ ಏನು? ಎಂಬುದನ್ನು ಮನೋಜ್ಞವಾಗಿ ಒಂದೇ ಪದ್ಯದಲ್ಲಿ ವಿವರಿಸಿಬಿಡುತ್ತಾರೆ.

"ಆಯುರ್ನಶ್ಯತಿ ಪಶ್ಯತಾಂ ಪ್ರತಿದಿನಂ ಯಾತಿ ಕ್ಷಯಂ ಯೌವನಂ
ಪ್ರತ್ಯಾಯಾಂತಿ ಗತಾಃ ಪುನರ್ನ ದಿವಸಾಃ ಕಾಲೋ ಜಗದ್ಭಕ್ಷಕಃ |
ಲಕ್ಷ್ಮೀಸ್ತೋಯತರಂಗಭಂಗಚಪಲಾ ವಿದ್ಯುಚ್ಚಲಂ ಜೀವಿತಂ
ತಸ್ಮಾನ್ಮಾಂ ಶರಣಾಗತಂ ಕರುಣಯಾ ತ್ವಂ ರಕ್ಷ ರಕ್ಷಾಧುನಾ||" ( ಶಿವಾಪರಾಧಕ್ಷಮಾಪಣ ಸ್ತೋತ್ರ-14)

ಅಂದರೆ 'ನೋಡನೋಡುತ್ತಲೇ ಆಯಸ್ಸು ಕಳೆದು ಹೋಗುತ್ತದೆ. ಯೌವನವು ದಿನದಿನಕ್ಕೂ ಜಾರಿ ಹೋಗುತ್ತದೆ ಕಳೆದು ಹೋದ ದಿನಗಳು ಮತ್ತೆ ಎಂದೂ ಹಿಂದಿರುಗುವುದಿಲ್ಲ ಕಾಲವೆಂಬುದು ಜಗತ್ತನ್ನೇ ತಿಂದು ತೇಗುತ್ತದೆ ಲಕ್ಷ್ಮಿಯಾದರೋ ನೀರಿನ ಅಲೆಯಂತೆ ಚಂಚಲಳು ಜೀವನವು ಮಿಂಚಿನಂತೆ ಕ್ಷಣಕಾಲ ಮಿಂಚಿ ಮರಳುತ್ತದೆ ಆದ್ದರಿಂದ ಹೇ ಶಂಭೋ ಶರಣು ಬಂದಿರುವ ನನ್ನನ್ನು ನೀನೇ ಕರುಣೆಯಿಟ್ಟು ರಕ್ಷಿಸು, ರಕ್ಷಿಸು ಹಾಗೇ ಈ ಪದ್ಯ ಗಮನಿಸಿ :

"ಕಿಂ ಯಾನೇನ ಧನೇನ ವಾಜಿಕರಿಭಿಃ ಪ್ರಾಪ್ತೇನ ರಾಜ್ಯೇನ ಕಿಂ?
ಕಿಂ ವಾ ಪುತ್ರ ಕಲತ್ರಮಿತ್ರ ಪಶುಭಿರ್ದೇಹೇನ ಗೇಹೇನ ಕಿಂ?
ಜ್ಞಾತ್ವೈತತ್ಕ್ಷಣಭಂಗುರಂ ಸಪದಿ ರೇ ತ್ಯಾಜ್ಯಂ ಮನೋ ದೂರತಃ
ಸ್ವಾತ್ಮಾರ್ಥಂ ಗುರುವಾಕ್ಯತೋ ಭಜ ಭಜ ಶ್ರೀ ಪಾರ್ವತೀವಲ್ಲಭಂ" (ಶಿವಾಪರಾಧಕ್ಷಮಾಪಣ ಸ್ತೋತ್ರ-13)

ಅಂದರೆ, 'ಎಲೈ ಮಾನವ, ಈ ವಾಹನ, ಸಂಪತ್ತು, ಆನೆ, ಕುದುರೆ, ರಾಜ್ಯ, ಪುತ್ರ, ಮಿತ್ರ, ಹೆಂಡತಿ, ಮನೆ, ದೇಹ ಎಲ್ಲವೂ ಒಂದು ದಿನ ನಾಶ ಹೊಂದುವವು ಎಂಬುದು ನೆನಪಿರಲಿ ಆದ್ದರಿಂದ ಇವುಗಳಿಂದ ಆದಷ್ಟು ನಿನ್ನ ಮನಸ್ಸನ್ನು ದೂರವಿರಿಸು ನಿನ್ನ ಆತ್ಮೋದ್ಧಾರಕ್ಕಾಗಿ ಸದ್ಗುರುವನ್ನು ಆಶ್ರಯಿಸು ಅವರಿಂದ ಆತ್ಮಸ್ವರೂಪ ಜ್ಞಾನವನ್ನು ಪಡೆದು ಉಮಾಮಹೇಶ್ವರನನ್ನು ಭಜಿಸು, ಭವಬಂಧನವನ್ನು ತಪ್ಪಿಸಿಕೊ.

    ಈ ರೀತಿ ಅತ್ಯಂತ ಹೃದಯಾವರ್ಜಕವಾದ ಶಬ್ಧಗಳಿಂದ ಎಂಥವರ ಮನಸ್ಸಿಗೂ 'ಇದು ನಿಜ' ಎನ್ನುವಂತೆ ಬಣ್ಣಿಸಿ ಕಾಂತಾ ಸಂಹಿತೆಯಿಂದ ನಮ್ಮನ್ನು ತಿದ್ದಿ ಮುದ್ದಾಗಿ ಮಾರ್ಪಡಿಸುವ ಕಾರ್ಯವನ್ನು ಆಚಾರ್ಯ ಶಂಕರರು ಮಾಡಿದ್ದನ್ನು ಹೆಜ್ಜೆಹೆಜ್ಜೆಗೂ ಗಮನಿಸಬಹುದು.

ಕೊನೆಯಲ್ಲಿ ಫಲಶ್ರುತಿ    ಸಾಮಾನ್ಯವಾಗಿ ಕೊನೆಯಲ್ಲಿ ಫಲಶ್ರುತಿ ಬರುವುದು ಶಂಕರರ ಸ್ತೋತ್ರಗಳ ಇನ್ನೊಂದು ವೈಶಿಷ್ಟ್ಯ.
ಉದಾ :-
    "ಮಹಾಗಣೇಶ ಪಂಚರತ್ನಮಾದರೇಣ ಯೋನ್ವಹಂ
    ಪ್ರಜಲ್ಟತಿ ಪ್ರಭಾತಕೇ ಹೃದಿ ಸ್ಮರನ್ಗಣೇಶ್ವರಂ |
    ಆರೋಗತಾಮದೋಷತಾಂ ಸುಸಾಹಿತೀಂ ಸುಪುತ್ರತಾಂ
    ಸಮೀಹಿತಾಯುರಷ್ಟಭೂತಿಮಭ್ಯುಪೈತಿ ಸೋ ಚಿರಾತ್ "|| (ಮಹಾಗಣೇಶಪಂಚರತ್ನ-6)

ಅಂದರೆ, ಪ್ರತಿದಿನವೂ, ಪ್ರಾತಃ ಕಾಲದಲ್ಲಿ ಗಣೇಶನ್ನು ಸ್ಮರಿಸುತ್ತ 'ಮಹಾಗಣೇಶ ಪಂಚರತ್ನ ಸ್ತೋತ್ರ' ಹೇಳುವವರಿಗೆ ಆರೋಗ್ಯ, ಸದ್ಗುಣ, ಪಾಂಡಿತ್ಯ, ಸತ್‌ಸಂತಾನ, ಪೂರ್ಣಾಯುಷ್ಯ ಅಷ್ಟೈಶ್ವರ್ಯಗಳು ಲಭಿಸುತ್ತದೆ.

"ಯಃ ಶ್ಲೋಕಪಂಚಕಮಿದ್ದಂ ಲಲಿತಾಂಬಿಕಾಯಾಃ
ಸೌಭಾಗ್ಯದಂ ಸುಲಲಿತಂ ಪಠತಿ ಪ್ರಭಾತೇ |
ತಸ್ಮೈದದಾತಿ ಲಲಿತಾ ಝಟಿತಿ ಪ್ರಸನ್ನಾ
ವಿದ್ಯಾಂ ಶ್ರಿಯಂ ವಿಮಲಸೌಖ್ಯಮನಂತಕೀರ್ತಿಂ||" (ಲಿಲಿತಾಪಂಚಕ-6)

ಅಂದರೆ, "ನಿತ್ಯ ಮುಂಜಾನೆ ಈ ಸುಲಲಿತವಾದ 'ಲಲಿತಾಪಂಚಕ'ವನ್ನು ಹೇಳುವ ಭಕ್ತರಿಗೆ ಲಲಿತಾ ದೇವಿಯು ಪ್ರಸನ್ನಳಾಗಿ ವಿದ್ಯೆ, ಐಶ್ವರ್ಯ, ಸೌಖ್ಯ ಹಾಗೂ ಅನಂತ ಕೀರ್ತಿಯನ್ನು ಅನುಗ್ರಹಿಸುತ್ತಾಳೆ.
    ಅದೇ ರೀತಿ "ಲಕ್ಷ್ಮೀನೃಸಿಂಹ ಕರುಣಾರಸ ಸ್ತೋತ್ರದ ಕೊನೆಯ ಪದ್ಯ, 'ಶ್ರೀರಾಮ ಭುಜಂಗಸ್ತೋತ್ರದ ಕೊನೆಯ ಪದ್ಯ 'ಉಪದೇಶ ಪಂಚಕ'ದ ಕೊನೆಯ ಪದ್ಯ 'ದಕ್ಷಿಣಾಮುರ್ತಿ ಸ್ತೋತ್ರ'ದ 10ನೆಯ ಪದ್ಯ ಮುಂತಾದೆಡೆಯಲ್ಲೂ ಕೊನೆಯಲ್ಲಿ ಫಲಶ್ರುತಿ ಬಂದಿರುವುದನ್ನು ಕಾಣಬಹುದು.

ಶಿವ ಶಕ್ತಿ ಮಹಿಮೆ     ಶ್ರೀ ಶಂಕರರ ಸ್ತೋತ್ರ ಕಾವ್ಯಗಳಲ್ಲಿ ಶಿವಶಕ್ತಿಗಳ ಮಹಿಮೆಗೆ ವಿಶೇಷ ಪ್ರಾಶಸ್ತ್ಯವಿರುವುದನ್ನು ಕಾಣಬಹುದು. ಮುಖ್ಯವಾಗಿ ಅವರು ರಚಿಸಿದ 'ಶಿವಾನಂದಲಹರೀ', 'ಸೌಂದರ್ಯಲಹರೀ' ಈ ಎರಡೂ ಬೃಹತ್ ಸ್ತೋತ್ರಗಳು ಶಿವ ಶಕ್ತಿಗಳನ್ನು ಕುರಿತದ್ದಾಗಿವೆ. ಶಿವಾನಂದಲಹರಿಯಲ್ಲಿ ಶಿವಪಾರಮ್ಯ ವರ್ಣಿತವಾಗಿದ್ದರೆ, ಸೌಂದರ್ಯಲಹರಿಯಲ್ಲಿ ಶಕ್ತಿ ಪಾರಮ್ಯವನ್ನು ಕಾಣಬಹುದು.
    ಸೌಂದರ್ಯಲಹರಿಯ ಮೊದಲ 41 ಶ್ಲೋಕಗಳಲ್ಲಿ ಕಾವ್ಯರಸದೊಂದಿಗೆ ತಂತ್ರಶಾಸ್ತ್ರದ ಪ್ರಮೇಯಗಳೂ ವರ್ಣಿತವಾಗಿವೆ. 42 ರಿಂದ 100 ಶ್ಲೋಕಗಳವರೆಗೆ ಶ್ರೀದೇವಿಯ ಅಂಗೋಪಾಂಗ ಸೌಷ್ಠವವು ಮುಡಿಯಿಂದ ಅಡಿಯವರೆಗೆ ವರ್ಣಿತವಾಗಿದೆ. ಪ್ರತಿ ಶ್ಲೋಕದಲ್ಲೂ ಮಂತ್ರ ಶಾಸ್ತ್ರದ ರಹಸ್ಯವು ಅಡಕವಾಗಿದ್ದು ವಿಶೇಷವಾಗಿ ಶ್ರೀಚಕ್ರ ವರ್ಣನೆ ಶ್ರೀ ವಿದ್ಯಾರಹಸ್ಯಗಳು ಕಾವ್ಯಬಂಧದಲ್ಲಿ ಸುಂದರವಾಗಿ ಮೂಡಿ ಬಂದಿದೆ.
"ಶಿವಃ ಶಕ್ತ್ಯಾಯುಕ್ತೋ ಯದಿ ಭವತಿ ಶಕ್ತಃ ಪ್ರಭವಿತುಂ
ನಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ |
ಅತಸ್ತ್ವಾಮಾರಾಧ್ಯಾಂ ಹರಿಹರವಿರಿಂಚಾದಿಭಿ ರಪಿ
ಪ್ರಣಂತುಂ ಸ್ತೋತುಂ ವಾ ಕಥಮಕೃತಪುಣ್ಯಃ ಪ್ರಭವತಿ ||" (ಸೌಂದರ್ಯ ಲಹರಿ-1)
ಅಂದರೆ 'ಶಿವನು ಶಕ್ತಿಯಿಂದೊಡಗೂಡಿದ್ದರೆ ಮಾತ್ರ ವಿಶ್ವವನ್ನು ಸೃಷ್ಟಿಸಬಲ್ಲ ಶಕ್ತಿ ಸಹಿತನಾಗಿರದಿದ್ದರೆ ಆಕಾಶದಂತೆ ನಿರಾಕಾರನಾದ ಅವನಿಗೆ ಅಲ್ಲಾಡುವುದೂ ಸಾಧ್ಯವಿಲ್ಲ ತ್ರಿಮೂರ್ತಿಗಳಿಂದಲೂ ಇಂದ್ರಾದಿ ದೇವತೆಗಳಿಂದಲೂ ಆರಾಧಿಸಲ್ಪಡುವ ತಾಯಿಯನ್ನು ಸೇವೆಗೈಯ್ಯುವುದಕ್ಕೂ ಸ್ತುತಿಸುವುದಕ್ಕೂ, ಜನ್ಮ ಜನ್ಮಾಂತರಗಳ ಪುಣ್ಯ ಬೇಕು." "ಭಜಂತಿ ತ್ವಾಂ ಧನ್ಯಾ : ಕತಿಚನ ಚಿದಾನಂದ ಲಹರೀಂ" (ಸೌಂದರ್ಯ ಲಹರಿ-8) ಚಿದಾನಂದ ಪ್ರವಾಹರೂಪಳಾದ ದೇವಿಯನ್ನು ಧ್ಯಾನಿಸುವವರೇ ಧನ್ಯರು.

    ಆಚಾರ್ಯರ ಕಾಲದಲ್ಲಿ ಶಾಕ್ತ ಸಂಪ್ರದಾಯವು ಪ್ರಚಲಿತವಾದದ್ದು ಮಾತ್ರವಲ್ಲದೆ, ವಾಮಾಚಾರದ ಅಧೋಮಾರ್ಗದ ಕಡೆ ಹೊರಳಿತ್ತು ಆಚಾರ್ಯರು ತಮ್ಮ ವಿಶಿಷ್ಠ ಪ್ರಭಾವದಿಂದ ಈ ಶಾಕ್ತ ಸಂಪ್ರದಾಯವನ್ನು ಪರಿಶುದ್ಧ ಸಮಯಾಚಾರದತ್ತ ತಿರುಗಿಸಿ ಲೋಕೋಪಕಾರ ಮಾಡಿದ್ದಾರೆ. ಸೌಂದರ್ಯಲಹರಿ ಅವರ ಈ ಉಜ್ವಲ ಸಾಧನೆಯ ಕಾವ್ಯ ಪ್ರತಿಮೆಯಾಗಿದೆ.

    ಇಲ್ಲಿಯ "ಕ್ವಣತ್ ಕಾಂಚೀಧಾಮಾ" ಎಂಬ 7ನೆಯ ಪದ್ಯದಲ್ಲಿ ದೇವಿಯ ಸಕಾರ ಮೂರ್ತಿಯ ವರ್ಣನೆ ಅತ್ಯಂತ ಹೃದಯಂಗಮವಾಗಿ ಮೂಡಿ ಬಂದಿದೆ. "ವಹಂತೀ ಸಿಂಧೂರಂ" ಎಂಬ 44ನೆಯ ಪದ್ಯದಲ್ಲಿ ಉತ್ಪ್ರೇಕ್ಷಾ ರೂಪಕಗಳ ಅಂಗಾಂಗಿಭಾವ ಸಂಕರಾಲಂಕಾರ ಸುಂದರವಾಗಿ ಮೂಡಿಬಂದಿದ್ದು ಗಮನಾರ್ಹ. ಅದರಂತೆ "ಅರಾರೈ : ಸ್ವಾಭಾವ್ಯಾತ್...." ಎಂಬ 45ನೆಯ ಪದ್ಯದಲ್ಲಿ ಉಪಮಾ ರೂಪಕಾದಿ ಅಲಂಕಾರವಿನ್ಯಾಸ ತುಂಬಾ ಚೆನ್ನಾಗಿ ಮೂಡಿ ಬಂದಿದೆ.

    ಭಂಗಿಭಣಿತಿ ವೈಚಿತ್ಯ್ರದಿಂದ ಸೂಚ್ಯವಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ಅದ್ವೈತ ತತ್ವವನ್ನು ಕ್ರಾಂತದರ್ಶಿಗಳು ಹೇಗೆ ಭೋಧಿಸಬಲ್ಲರು ಎಂಬುದಕ್ಕೆ ಶಂಕರರ ಈ ಪದ್ಯ ಸಾಕ್ಷಿ.
"ಪ್ರದೀಪಜ್ವಾಲಾಬಿರ್ದಿವಸಕರನೀರಾಜನವಿಧಿಃ
ಸುಧಾಸೂತೇಶ್ವಂದ್ರೋಪಲಜಲಲವೈರರ್ಘ್ಯರಚನಾ |
ಸ್ವಕೀಯೈರಂಭೋಭಿಃ ಸಲಿಲನಿಧಿಸಾಹಿತ್ಯಕರಣಂ
ತ್ವದೀಯಾಭಿರ್ವಾಗ್ಭಿಸ್ತವ ಜನನಿ ವಾಚಾಂ ಸ್ತುತಿರಿಯಮ್" (ಸೌಂದರ್ಯ ಲಹರಿ-100)
ಅಂದರೆ, "ಹೇ ಜಗಜ್ಜನನೀ; ಪ್ರಕಾಶಮಯನಾದ ಸೂರ್ಯನಿಗೆ ಅವನದೇ ಆದ ದ್ವಿಪಜ್ವಾಲೆಗಳಿಂದ ಆರತಿ ಮಾಡುವಂತೆ ಅಮೃತವನ್ನು ಸುರಿಸುವ ಚಂದ್ರನಿಗೆ ಅವನದೇ ಆದ ಚಂದ್ರಕಾಂತ ಶಿಲೆಯಿಂದ ಜಿನುಗಿದ ನೀರಿನಿಂದ ಅರ್ಘ್ಯ ನೀಡುವಂತೆ ಸಮುದ್ರಕ್ಕೆ ಅದರದೇ ಆದ ಜಲದಿಂದ ತರ್ಪಣಗೈಯುವಂತೆ ನಿನ್ನದೇ ಆದ ಶಬ್ದಾಥ್ಗಳಿಂದ ನಿನ್ನನ್ನು ಸ್ತೋತ್ರ ಮಾಡುತ್ತಿದ್ದೇನೆ.
    ಇಲ್ಲಿ 'ಅದ್ವಿತೀಯ ಬ್ರಹ್ಮವಸ್ತುವಿಗಿಂತ ಭಿನ್ನವಾದ ಮತ್ತೊಂದು ಇಲ್ಲ' ಎಂಬ ಅದ್ವೈತ ತತ್ವಪ್ರತಿಪಾದನೆಯನ್ನು ಕಡುಬಿನಲ್ಲಿ ಹೊರಣದಂತೆ ಹುದುಗಿಸಿರುವುದನ್ನು ಕಾಣಬಹುದು ಅಲ್ಲದೆ, ಪರಿಶುದ್ಧ ಭಕ್ತನಿಗೆ ಅತ್ಯಂತ ಸಹಜವಾದ ಸಂಪೂರ್ಣ ಶರಣಾಗತಿಯನ್ನು ಇಲ್ಲಿ ಕಾಣಬಹುದು ಎಂದರೆ ಏಕಕಲದಲ್ಲಿ ಆಚಾರ್ಯರು ಶ್ರೇಷ್ಠ ಜ್ಞಾನಿಗಳೂ ಭಕ್ತರೂ ಆಗಿದ್ದರು ಪ್ರಾಯಶಃ ಗೀತಾಚಾರ್ಯನು 'ಜ್ಞಾನೀತು ಆತ್ಮೈವ ಮೇ ಮತಂ' ಎಂದದ್ದು ಇಂಥವರನ್ನು ಕುರಿತೇ ಇರಬೇಕು.

    ಶಂಕರರ ಸ್ತೋತ್ರಗಳನ್ನು ಓದುತ್ತಾ ಓದುತ್ತಾ ಹೋದಾಗ ಅವರೊಬ್ಬ ಶ್ರೇಷ್ಠ ವಿಶ್ವಕುಟುಂಬಿಗಳಾಗಿದ್ದರು ಎಂಬುದರ ಅರಿವಾಗುತ್ತದೆ. 'ಮಾಯಾಪಂಚಕದ' ಈ ಪದ್ಯ ಅದನ್ನು ಸ್ಪಷ್ಟಪಡಿಸುತ್ತದೆ.
"ಅಪಗತಗುಣವರ್ಣಜಾತಿಭೇದೇ
ಸುಖಚಿತಿ ವಿಪ್ರವಿಡಾದ್ಯಹಂಕೃತಿಂ ಚ |
ಸ್ಫುಟಯತಿ ಸುತದಾರಗೇಹಮೋಹಂ
ತ್ವಘಟಿತಘಟನಾಪಟೀಯಸೀ ಮಾಯಾ || (ಮಾಯಾಪಂಚಕ-4)
ಅಂದರೆ, 'ಸಗುಣ, ನಿರ್ಗುಣ, ಬ್ರಹ್ಮ, ಕ್ಷತ್ರ, ವೈಶ್ಯ, ಶೂದ್ರ, ತಿರ್ಯಕ, ಮನುಷ್ಯ, ದೇವಾದಿ, ಗುಣ, ವರ್ಣ, ಜಾತಿಗಳ ಯಾವ ಭೇದವೂ ಇಲ್ಲದ ಸದಾನಂದ ಬ್ರಹ್ಮನಲ್ಲಿ, ಇವನು ಬ್ರಾಹ್ಮಣ, ಇವನು ಕ್ಷತ್ರಿಯ ಮುಂತಾದ ಜಾತ್ಯಾಭಿಮಾನವನ್ನೂ, ಮಡದಿಮಕ್ಕಳು ಮನೆಮಾರುಗಳೆಂಬ ಮೋಹವನ್ನು ಬೇರೂರಿಸುವ ಮಾಯೆಯು ಅಘಟಿತ ಘಟನಾ ಸಮರ್ಥಳೇ ಸರಿ."

    ಮಾಯಾ ಪ್ರಪಂಚದಲ್ಲಿ ಮುಳುಗಿದ ನಾವು ಜಾತಿ ಮತಗಳೆಂಬ ಭೇದಭಾವದಲ್ಲಿ ಮುಳುಗಿದ್ದೇವೆ. ಆತ್ಮ ಜ್ಞಾನಿಯಾದವನಿಗೆ ಜಾತಿಪಂಥಗಳ ಬಂಧನವಿಲ್ಲ. ಅವನು ಆ ಮಟ್ಟವನ್ನು ಮೀರಿ ಮೇಲೆ ನಿಂತಿರುತ್ತಾನೆ. 'ಮನೀಷಾಪಂಚಕ'ದಲ್ಲಿ ಆಚಾರ್ಯರು ಸ್ಪಷ್ಟಪಡಿಸಿರುವಂತೆ, "ಚಾಂಡಾಲೋಸ್ತು ನತುದ್ವಿಜೋಸ್ತು ಗುರುರಿತ್ಯೇಷಾ ಮನಿಷಾ ಮಮ" ಅಂದರೆ, ಚಾಂಡಾಲನಾಗಿರಲಿ, ಬ್ರಾಹ್ಮಣನೇ ಆಗಿರಲಿ ಆತ್ಮಜ್ಞಾನಿಯಾಗಿದ್ದರೆ ಅವನೇ ನನ್ನ ಗುರವೆಂದು ಭಾವಿಸುವೆನು ಎನ್ನುತ್ತಾರೆ. ಎಂತಹ ಉದಾತ್ತ ಭಾವನೆ; ಎಂತಹ ಉದಾತ್ತ ಕಲ್ಪನೆ; ಇದನ್ನೆಲ್ಲಾ ಓದಿದಾಗ ಅವರೊಬ್ಬ ಗುಣಗ್ರಾಹಿಗಳಾದ ಉದಾರಚರಿತರಾದ ವಿಶ್ವಕುಟುಂಬಿಗಳಾಗಿದ್ದರು ಎಂಬುದರ ಅರಿವಾಗುತ್ತದೆ. ಅವರು ಜಾತಿ ಮತ, ಲಿಂಗ ವಯಸ್ಸು ಇತ್ಯಾದಿ ಎಲ್ಲ ಬಗೆಯ ಸಂಕುಚಿತ ಭಾವನೆಗಳಿಂದಲೂ ಮುಕ್ತರಾದ ವಿಶಾಲ ಮನೋಭಾವವುಳ್ಳವರಾಗಿದ್ದರು ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
  
    ಆಚಾರ್ಯರ ಶೈಲಿ ಪ್ರಸಾದ ಗುಣ ಭೂಯಿಷ್ಠವೂ ಹೌದು. "ಅವಿದ್ವದಂಗನಾ ಬಾಲ ಪ್ರತೀತಾರ್ಥಂ ಪ್ರಸಾದವತ್" ಎಂಬ ಭಾಮಹನ ಮಾತಿನಂತೆ ಒಂದು ಪದ್ಯ ಓದಿದಾಗ ವಿದ್ವಾಂಸರಿಂದ ಹಿಡಿದು ಹೆಂಗಸರು, ಮಕ್ಕಳವರೆಗೆ ಎಲ್ಲರಿಗೂ ಅರ್ಥವಾಗುವಂತಿದ್ದರೆ ಅದು ಪ್ರಸಾದಗುಣ ಅಚಾರ್ಯರ ಒಂದೇ ಒಂದು ಚಿಕ್ಕ ಪದ್ಯ ಸಿಕ್ಕಿತೆಂದರೆ ಚತುರಶಿಲ್ಪಿ ಸುಂದರ ಮೂರ್ತಿಯನ್ನು ಕಡೆದು ನಿಲ್ಲಿಸಿಬಿಡುತ್ತಾನೆ. ಉದಾಹರಣೆಗಾಗಿ 'ಲಕ್ಷ್ಮೀನೃಸಿಂಹಕರುಣಾರಸ ಸ್ತೋತ್ರ'ದ ಈ ಪದ್ಯವನ್ನು ನೋಡಬಹುದು.

"ಏಕೇನ ಚಕ್ರಮಪರೇಣ ಕರೇಣ ಶಂಖ-
ಮನ್ಯೇನ ಸಿಂಧುತನಯಾಮವಲಂಬ್ಯ ತಿಷ್ಠನ್ |
ವಾಮೇತರೇಣ ವರದಾಭಯಪದ್ಮಚಿಹ್ನಂ
ಲಕ್ಷ್ಮೀನೃಸಿಂಹ ಮಮ ದೇಹಿ ಕರಾವಲಂಬಂ||" (ಲಕ್ಷ್ಮೀನೃಸಿಂಹಕರುಣಾರಸ-14)

ಅಂದರೆ, ಒಂದು ಕೈಯಲ್ಲಿ ಚಕ್ರ, ಮತ್ತೊಂದು ಕೈಯಲ್ಲಿ ಶಂಕವನ್ನು ಧರಿಸಿ ಇನ್ನೊಂದು ಕೈಯಿಂದ ಲಕ್ಷ್ಮೀದೇವಿಯನ್ನು ಆಲಿಂಗಿಸಿ, ಬಲಗೈಯಲ್ಲಿ ವರದ ಅಭಯಪ್ರದವಾದ ಪದ್ಮಚಿಹ್ನೆಯನ್ನು ಹೊಂದಿದ, ಲಕ್ಷ್ಮೀನೃಸಿಂಹ ಸ್ವಾಮಿಯೇ ನನ್ನನ್ನು ಕೈಹಿಡಿದು ಮುನ್ನಡೆಸು.

    ಅವರ ಹೆಚ್ಚಿನ ಪದ್ಯಗಳಿಗೆ ಟೀಕೆ ಭಾಷ್ಯ ಏನು ಬೇಕಾಗಿಲ್ಲ. ಅಷ್ಟು ಸರಳ, ಸುಲಭ, ಸುಂದರ ಹಾಗೂ ಪ್ರಸಾಧಗುಣಭೂಯಿಷ್ಠ.
ಶಿವಪಂಚಾಕ್ಷರಸ್ತೋತ್ರದ ಈ ಪದ್ಯ -
"ನಾಗೇಂದ್ರಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ |
ನಿತ್ಯಾಯ ಶುದ್ಧಾಯ ದಿಂಗಬರಾಯ
ತಸ್ಮೈ ನಕಾರಾಯ ನಮಃ ಶಿವಾಯ ||" ( ಶಿವ ಪಂಚಾಕ್ಷರ-1)

ಹಾಗೇ, 'ಲಿಂಗಾಷ್ಟಕ'ದ ಈ ಪದ್ಯವನ್ನು ಗಮನಿಸಿ.
"ಕುಂಕುಮಚಂದನಲೇಪಿತಲಿಂಗಂ
ಪಂಕಜಹಾರಸುಶೋಭಿತಲಿಂಗಂ |
ಸಂಚಿತಪಾಪವಿನಾಶಕಲಿಂಗಂ
ತತ್ಪ್ರಣಮಾಮಿ ಸದಾಶಿವಲಿಂಗಂ ||" ( ಲಿಂಗಾಷ್ಟಕಂ-5)
ಈ ಪದ್ಯಕ್ಕೆ ವ್ಯಾಖ್ಯಾನ ಏಕೆ ಬೇಕು? ಶ್ರೀ ಶಂಕರರ ಕೆಲವು ಪದ್ಯಗಳಲ್ಲಿ ಸಹಜನಡೆಯನ್ನು ಗುರುತಿಸಬಹುದು. ಮಾಧುರ್ಯ ಹಾಗೂ ಪ್ರಸಾದ ಗುಣಗಳೇ ಅವರ ಸ್ತೋತ್ರಗಳ ಜೀವಾಳ. 'ಆಹ್ಲಾದಕತ್ವಂ ಮಾಧುರ್ಯಂ' ಮನಸ್ಸನ್ನು ಕರಗಿಸುವ ಆಹ್ಲಾದಕತ್ವ ಗುಣವೇ ಮಾಧುರ್ಯ. 'ಮಧುರಂ ರಸವದ್ವಾಚಿ' ವಸ್ತು ನ್ಯಪಿ ರಸಸ್ಥಿತಿಃ |

    "ಯೇನಮಾದ್ಯಂತಿ ಧೀಮಂತೋ ಮಧುನೇವ ಮಧುವ್ರತಾಃ (ದಂಡಿಯ ಕಾವ್ಯಾದರ್ಶ-52) ಎಂಬಂತೆ. ಶಬ್ದಾರ್ಥಗಳಲ್ಲಿ ಜೇನಿನಂಥ ಸವಿ ತುಂಬಿರುವುದೇ ಮಧುರ. ಮಧುಪಾನದಿಂದ ದುಂಬಿಗಳು ಮೈ ಮರೆತಂತೆ ಕಾವ್ಯ ಮಾಧುರ್ಯದಿಂದ ಸಹೃದಯರು ಆನಂದತುಂದಿಲರಾಗುತ್ತಾರೆ. ಲಲಿತಪದಗಳಿಂದ ಕೂಡಿದ, ಅರ್ಥಗೌರವ ಭೂಯಿಷ್ಠವಾದ, ರಸಿಕರ ಹೃದೃಯವನ್ನು ಸೊರೆಗೊಳ್ಳಬಲ್ಲ ಅವರ ಸೌಂದರ್ಯ ಲಹರಿ, ಶಿವಾನಂದಲಹರಿ, ಭಜಗೋವಿಂದಂ ಮುಂತಾದವುಗಳ ಕವಿತಾಮಾಧುರ್ಯವನ್ನು ಆಸ್ವಾದಿಸುತ್ತ ಹೋದಾಗ, ಕಾವ್ಯರಚನೆಯಲ್ಲಿ ಅವರಿಗೆ ಅವರೇ ಸಾಟಿ; ಅವರು ಅನನ್ವಯಾಲಂಕಾರ ಎಂಬುದು ವೇದ್ಯವಾಗುತ್ತದೆ. ರಸದೃಷ್ಟಿಯಿಂದ ನೋಡ ಹೊರಟಾಗ ಅವರ ಸ್ತೋತ್ರಕಾವ್ಯಗಳಲ್ಲಿ ಭಕ್ತಿ, ಶಾಂತ, ವಾತ್ಸಲ್ಯ ರಸಗಳೇ ಪ್ರಧಾನವಾಗಿವೆ ಎನ್ನಬಹುದು.

    ಹೀಗೆ ಶಂಕರರು ಪ್ರತಿಭಾಸಂಪನ್ನ ಕವಿಗಳಾಗಿ ಜನಕೋಟಿಯ ಆಚಾರ್ಯಪುರುಷರಾಗಿ, ಯತಿವರೇಣ್ಯರಾಗಿ, ಅದ್ವೈತಮತಸ್ಥಾಪನಾಚಾರ್ಯರಾಗಿ, ಸಮಾಜಸುಧಾರಕರಾಗಿ, ನಮ್ಮ ಮುಂದೆ ನಿಲ್ಲುತ್ತಾರೆ. ಸಾಮಾನ್ಯ ಜನರು ಒಣ ವೇದಾಂತವೆನ್ನುವ ತತ್ವಗಳನ್ನು ಹೃದಯಂಗಮವಾಗಿ ಅಬಾಲವೃದ್ಧರೂ ಓದಿ ಆನಂದಿಸುವಂತೆ ಕಾವ್ಯಮಯವಾಗಿ ರಚಿಸಿ ಜನಮನಸೂರೆಗೊಂಡು ಭಾವಯಿತ್ರೀ, ಕಾರಯತ್ರೀ ಪ್ರತಿಭಾ ಸಂಪನ್ನ ಕವಿವರೇಣ್ಯರಾಗಿ ಅವರು ನಮ್ಮ ಕಣ್ಮುಂದೆ ನಿಲ್ಲುತ್ತಾರೆ. ಅಲಂಕಾರ ಶಾಸ್ತ್ರಮೂರ್ಧನ್ಯನಾದ ಕುಂಟಕನು ತನ್ನ ವಕ್ರೋಕ್ತಿ ಜೀವಿತದಲ್ಲಿ ಹೇಳುವಂತೆ-
"ಧರ್ಮಾದಿ ಸಾಧನೋಪಾಯಃ ಸುಕುಮಾರ ಕ್ರಮೋದಿತಃ |
ಕಾವ್ಯಬಂಧೋ ಭಿಜಾತಾನಾಂ ಹೃದಯಾಹ್ಲಾದಕಾರಕಃ ||
ಅಂದರೆ, ಸಾಮಾನ್ಯ ಜನರಿಗೆ ಗುಡಜಹ್ವಿಕಾನ್ಯಾಯದಿಂದ ಆಹ್ಲಾದಕರವಾಗಿ ಧರ್ಮಾರ್ಥಕಾಮ ಮೋಕ್ಷಗಳೆಂಬ ಚತುರ್ವರ್ಗ ಸಾಧನೆಯನ್ನು ಸಾದಿಸಲು ಕಾವ್ಯ ಉತ್ತಮವಾದ ಮಾರ್ಗ ಇದನ್ನರಿತೇ ಶ್ರೀ ಶಂಕರ ಭಗವತ್ಪಾದರು ಆಕಾಶ ಗೋಪುರದಲ್ಲಿ ಕುಳಿತು ವೇದಾಂತ ಉಪದೇಶ ಮಾಡದೇ ಸಾಮಾನ್ಯರ ಸ್ತರದಲ್ಲಿ ನಿಂತು ಅವರ ಹೃದಯವನ್ನು ಸೂರೆಗೊಳ್ಳಬಲ್ಲ ಸ್ತೋತ್ರ ಕಾವ್ಯ ರಚಿಸಿ ಜನಮನಗೆದ್ದು ತಾವು ಲೋಕ ಶಂಕರರೆಂಬುದನ್ನು ಸಾರ್ಥಕಪಡಿಸಿದ್ದಾರೆ.
***********

ಜಗದ್ಗುರು ಎಂಬ ಸಂಬೋಧನಾತ್ಮಕ ಪದಕ್ಕೆ ಶ್ರೀಶಂಕರಾಚಾರ್ಯರಿಂದಲೇ  ಶೋಭೆ ಸಿಕ್ಕಿರುವದು ಎಂದರೇ ಅತಿಶಯೋಕ್ತಿಯಾಗಲರದು..
ಎಲ್ಲರಿಗೂ ಶ್ರೀಶಂಕರಾಚಾರ್ಯರ ತತ್ತ್ವಾನುಬಂಧದ ಅವಶ್ಯಕತೆ ಎಷ್ಟರ ಮಟ್ಟಿಗೆ ಇದೆ ಎಂದರೇ  ವೈಷ್ಣವರಿಗೆ  ಶ್ರೀಶಂಕರಾಚಾರ್ಯರು ಮಹಾ ವೈಷ್ಣವರೆಂಬ ಅಭಿಮಾನ  , ವೀರಶೈವರೂ ಅವರ ಪರಂಪರೆಯ ಗುರುಗಳಿಂದಲೇ ದೀಕ್ಷೆ ಪಡೆದರೆಂಬ ಕಪೋಲಕಲ್ಪನೆ ಮತ್ತು ಅವರ ಅನುಯಾಯಿಗಳಾದ ಶಂಕರಾದ್ವೈತಿಗಳಿಗಂತೂ ಮೈನವಿರೇಳುವಂಥ ವ್ಯಕ್ತಿತ್ವದ ಅನುಭವ.  ಒಟ್ಟಿನಲ್ಲಿ ತಾತ್ತ್ವಿಕಜಗತ್ತಿನಲ್ಲಿ ನ ಭೂತೋ ನ ಭವಿಷ್ಯತಿ  ಎಂಬ ಅದ್ವೈತ  ತತ್ತ್ವದ ಪರಿಚಯ ಇವರಿಂದಲೇ  ಬೆಳಕಿಗೆಬಂದಿರುವದು ಮತ್ತು ಶಂಕರರೇ ಆ ಅದ್ವೈತ ತತ್ತ್ವಕ್ಕೇ ಮತ್ತೊಂದು ಹೆಸರು ಎಂಬುವದು ಜಗತ್ತಿಗೇ ತಿಳಿದಿರುವಂಥ ವಿಷಯ. ಶ್ರೀಶಂಕರಾಚಾರ್ಯರು ತಾತ್ತ್ವಿಕಜಗತ್ತಿನಲ್ಲಿ ಹೇಳದೇ ಇರುವ ವಿಷಯವೇ ಇಲ್ಲ.ತಾತ್ತ್ವಿಕಜಗತ್ತಿನಲ್ಲಿ ಪಾರಮಾರ್ಥಿಕ ಮತ್ತು ವ್ಯಾವಹಾರಿಕ ಎಂಬ ಎರಡೂ ತತ್ತ್ವದ ನೆಲೆಯಲ್ಲಿ ತತ್ತ್ವ ಪ್ರಸಾರ ಮಾಡಿದ ತಾತ್ತ್ವಿಕ ಲೋಕದ ಏಕೈಕ ಅಧಿಪತಿ ಎಂದರೇ ನ ಭೂತೋ ನ ಭವಿಷ್ಯತಿ  ಎಂಬ ಶ್ರೀಶಂಕರಾಚಾರ್ಯರು.
ಪ್ರತಿಯೊಬ್ಬರೂ ತಮ್ಮ ತಮ್ಮ ಅಭಿಮಾನದ ಪರಾಕಾಷ್ಠೆಗೆ ಶಂಕರರ ಅನುಬಂಧ ಕಲ್ಪಿಸುವದರಲ್ಲಿ ಅನಾಹುತಗಳನ್ನೂ ಮಾಡಿ ಅದರಿಂಟಾದ ಕೆಲವು ಅಸಂಗತಗಳು ತೋರಿಬಂದಿರುವದನ್ನು ಸಾತ್ವಿವಾಗಿ ಬಗೆಹರಿಸುವದು ಶಂಕರಾನುಯಾಯಿಗಳಾದ ನಮ್ಮ ಆದ್ಯ ಕರ್ತವ್ಯ.ಇದರ ನಿರೂಪಣೆಯಿಂದ ಅಭಿಮಾನಿಗಳು ಅನ್ಯಥಾ ಭಾವಿಸದೇ ಮೂಲ ಪರಂಪರೆಗೆ ಗೌರವ ತೋರಿಸಬೇಕೆಂಬುದಾಗಿ ಕಳಕಳಿಯ ಪ್ರಾರ್ಥನೆ.
ಇತ್ತೀಚೆಗೆ ಎಲ್ಲರಿಗೂ ತಿಳಿದಿರುವಂತೆ ಲೋಕದಲ್ಲಿ ಶಂಕರ ತತ್ತ್ವವನ್ನು ತಿಳಿದುಕೊಳ್ಳದೇ ಅವರನ್ನು ಹೀಯಾಳಿಸುವದನ್ನೂ ಕೆಲವರು ತಮ್ಮ ಕಸುಬನ್ನಾಗಿ ಮಾಡಿಕೊಂಡಿರುವದು ಅಲ್ಲಲ್ಲಿ ಆಗಾಗ ಬೆಳಕಿಗೆ ಬರುತ್ತಲೇ ಇರುತ್ತದೆ.ಹುಳಿದ್ರಾಕ್ಷಿಯ ಕಥೆ ಎಲ್ಲರಿಗೂ ಗೊತ್ತಿರುವಂಥದ್ದೇ. ಸೂರ್ಯನಿಗೆ ಸೀಮೇಎಣ್ಣೆ ಬುಡ್ಡಿಯ ದೀಪದಿಂದ ಮಸಿ ಹತ್ತುತ್ತದೆ ಎಂಬುವದು ಯಾವಕಾಲಕ್ಕೂ ಸಾಧ್ಯವಿಲ್ಲ.ಮಹತ್ವವೇ ಇಲ್ಲದ ಆ ವಿಷಯ ಈ ಬರಹದಲ್ಲಿ ಗೌಣ.
ಸಾಮಾಜಿಕ ತಾಣಗಳಲ್ಲೂ ಅನ್ಯ ಮಠಗಳಲ್ಲೂ ಇತ್ತೀಚೆಗೆ ಕೆಲವು ಅಸಂಗತ ಮತ್ತು ಅಸಂಬದ್ಧ ಅಭಿಪ್ರಾಯಗಳು ಕೇಳಿಬರುತ್ತಿದೆ. ಅದೇನೆಂದರೇ ಶ್ರೀಶಂಕರಾಚಾರ್ಯರು ವೀರಶೈವ ಗುರುಗಳಾದ ಶ್ರೀರೇಣುಕಾಚಾರ್ಯರ ಬಳಿ ದೀಕ್ಷೇ ತೆಗೆದು ಕೊಂಡರೆಂದೂ , ಅವರಿಂದಲೇ ಭಾಸ್ಮಧಾರಣೆಯನ್ನು ಬಳುವಳಿಯಾಗಿ ಪಡೆದುಕೊಂಡರೆಂದೂ ಮತ್ತು ಈಗ ಪೂಜಿಸಲ್ಪಡುತ್ತಿರುವ ಸ್ಫಟಿಕದ ಚಂದ್ರಮೌಳೇಶ್ವರ ಲಿಂಗವನ್ನು ದೀಕ್ಷೆಯಲ್ಲಿಪಡೆದು  ಶ್ರೀಶಂಕರರು ಶ್ರೀರೇಣುಕಾಚಾರ್ಯರ ಸ್ತುತಿಯನ್ನೂ ರಚಿಸಿದರು ಎನ್ನಲಾಗಿ ಆ ಸ್ತುತಿಯು ಅಲ್ಲಿಂದಿಲ್ಲಿ ಹರಿದಾಡುತ್ತಿರುವದು ಗಮನಕ್ಕೆ ಬರದೇ ಇಲ್ಲದಿರುವದಿಲ್ಲ.ಇದರಿಂದ ಸೀಮೆ ಎಣ್ಣೆ ಬುಡ್ದಿಯ ದೀಪವು ಹೆಚ್ಚು ಪ್ರಖರತೆಯಿಂದ ಉರಿಯುವದಿಲ್ಲವಾದರೂ ಶಂಕರಾನುಯಾಯಿಗಳಿಗೆ ಬೇಸರವನ್ನುಂಟು ಮಾಡಿದೆ. ಇದನ್ನು ಈಕೂಡಲೇ ಪರಿಹರಿಸ ಬೇಕು.

ಇವರ ಅಭಿಮಾನಕ್ಕೆ ಎರಡು ಕಾರಣಗಳು. ಮೊದಲನೆಯದು ಶ್ರೀಶಂಕರರು ರಚಿಸಿದರೆನ್ನಲಾದ ಕೆಳಗೆ ಹೇಳಲ್ಪಡುವ ಶ್ಲೋಕ ಮತ್ತು ರಂಭಾಪುರಿಯ ಮಠದಲ್ಲಿರುವ ಶಂಕರರು ಶ್ರೀರೇಣುಕಾಚಾರ್ಯರಿಂದ ದೀಕ್ಷೆ ತೆಗೆಕೊಳ್ಳುತ್ತಿರುವದನ್ನು ಬಿಂಬಿಸುವ ಒಂದು ಚಿತ್ರಪಟ. ಇವೆರಡೂ ಕಾಲ್ಪನಿಕ ಮತ್ತು ಅಧಾರರಹಿತವಾದದ್ದು. ಏಕೆಂದರೇ ಆ ಚಿತ್ರಪಟಕ್ಕೆ ಇತಿಹಾಸವೇ ಇಲ್ಲ. ಮತ್ತು ಈ ಕೆಳಗಿನ ಶ್ಲೋಕಗಳ ಶೈಲಿಯೂ ದೇವರಿಗೇ ಪ್ರೀತಿ.

ನಮೋ ನಮಸ್ತೇ ಶಿವಭಕ್ತ ಪಕ್ಷ ನಮೋ ನಮಸ್ತೇ ಸುಜನಾಲಿರಕ್ಷ ನಮೋ ನಮಸ್ತೇ ಪರವಾದಿರೂಕ್ಷ ನಮೋ ನಮಸ್ತೇ ವಿಜಿತಾಖಿಲಾಕ್ಷ ||
ನಮೋ ನಮೋ ಮೋಕ್ಷವಿಚಾರದಕ್ಷ ನಮೋ ನಮೋ ವೇದವಿಧಾನಶಿಕ್ಷ ನಮೋ ನಮ ಪಾಪಕೃತಾಂ ವಿಪಕ್ಷ ನಮೋ ನಮೋ ರೇವಣಕಲ್ಪವೃಕ್ಷ ||
ಭದ್ರಾಂ ಕುರಾಯ ಭಜತಾಮಭಯಂಕರಾಯ ಮೋಹಾಂಧಕಾರರವಯೇ ಕವಯೇ ಮನೂನಾಂ ಕೈವಲ್ಯ ಕಲ್ಪತರವೇ ಗುರುವೇ ಗುರೂಣಾ ಶ್ರೀ ರೇಣುಕಾಯ ಗಣಪಾಯ ನಮೋಸ್ತು ತುಭ್ಯಂ ||
*ನ ಸೇವೇ ರಮೇಶಂ ನ ಸೇವೇ ಪ್ರಜೇಶಂ ನ ಸೇವೇ ಸುರೇಶಂ ನ ಸೇವೇ ಗಣೇಶಂ*  ಮಹೇಶ ಪ್ರಭಾವಂ ಮಹಾಚಾರ್ಯದೇವಂ ಮಹೋಬದ್ದ ದೇಹಂ ಭವಂತಂ ಭಜೇಹಂ ||
ಸಂಸಾರಾಮಯಸದ್ವೆದ್ಯ ಙ್ಞಾನಸಾಗರವರ್ದನ ಸರ್ವಜ್ಞ ಸಕಲಾಧಾರ ಸರ್ವಾಭೀಷ್ಟಫಲಪ್ರದ ಕೇನಚಿತ್ಕಾರಣೇನಾಹಂ ಶಿವವಾಕ್ಯಾನುಸಾರತ ಗುರೋ ತ್ವ ದಂತಿಕಂ ಪ್ರಾಪ್ತ ಪ್ರಸೀದ ಕರುಣಾನಿಧೇ ||

ಶಂಕರಾಚಾರ್ಯರ ಕಾವ್ಯಕೃತಿಗಳಲ್ಲಿ , ಭಾಷ್ಯದಲ್ಲಿ ಛಂದೋಬದ್ಧವಾಗಿ ನಲಿದಾಡುವ ಸರಸ್ವತಿ ಮೇಲಿನ ಶ್ಲೋಕಗಳಲ್ಲಿ ಕಾಣಬರುವದಿಲ್ಲ. ಮತ್ತು ಮೇಲಿನ ಶ್ಲೋಕದಲ್ಲಿ ಯಾವ ಸತ್ತ್ವವೂ ಇಲ್ಲ.ಶಂಕರರು ರಮೇಶ ಅರ್ಥಾತ್ ವಿಷ್ಣುವನ್ನು ಪೂಜಿಸಲಿಲ್ಲ , ಬ್ರಹ್ಮನ್ನನು ಸೇವಿಸಲಿಲ್ಲ ,ಇಂದ್ರನನ್ನು ಸೇವಿಸಲಿಲ್ಲ ,ಗಣೇಶನನ್ನು ಸೇವಿಸಲಿಲ್ಲ ಎಂಬ ಅಸಂಗತ ಮತ್ತು ಅಪಭ್ರಂಶಾಭಿಪ್ರಾಯನ್ನು ಕಾಣಬಹುದು. ಶಂಕರರ ತತ್ತ್ವಬಗ್ಗೆ ತಿಳುವಳಿಕೆ ಇಲ್ಲದಿರುವವರು ಮಾತ್ರ ಇದನ್ನು ಆಶ್ಚರ್ಯದಿಂದ ಒಪ್ಪಬಹುದು. ಮೇಲಿನ ಶ್ಲೋಕವನ್ನು ಶಂಕರರು ರಚಿಸಿಲ್ಲ ಎಂದು ಆ ಶ್ಲೋಕವೇ ಹೇಳುತ್ತಿದೆ.ಶೀಶಂಕರರು ವಿಷ್ಣುವಿನ ಮೇಲೆ ವಿಷ್ಣುಭುಜಂಗಸ್ತೋತ್ರವನ್ನೂ ,ಅಗಾಧವಾದ ವಿಷ್ಣುಸಹಸ್ರನಾಮ ಸ್ತೋತ್ರ ಹಾಗೂ ಭಗವದ್ಗೀತಾ ಭಾಷ್ಯವನ್ನೂ, ಕೃಷ್ಣತಾಂಡವ ಸ್ತೋತ್ರವನ್ನೂ ,ಗೋವಿಂದಾಷ್ಟಕ , ಅಚ್ಯುತಾಷ್ಟಕ , ಆಂಜನೇಯ ಭುಜಂಗ ಸ್ತೋತ್ರ, ರಾಮಭುಜಂಗ ಸ್ತೋತ್ರ ,ಬ್ರಹ್ಮಜ್ಞಾನಾವಳೀ ಮಾಲಾ,  ಗಣೇಶನಮೇಲೆ ಗಣೇಶಭುಜಂಗ ಸ್ತೋತ್ರವನ್ನೂ ,ಗಣೇಶಾಷ್ಟಕ ,ಜಗತ್ಪ್ರಸಿದ್ಧವಾದ  ಗಣೇಶಪಂಚರತ್ನ ಮಾಲಾ (ಮುದಾಕರಾತ್ತಮೋದಕಂ ) ಹೀಗೆ ಒಂದೇ ಎರಡೇ ಅಸಂಖ್ಯಾತ ಸ್ತೋತ್ರಗಳನ್ನೂ ಭಾಷ್ಯಗಳನ್ನೂ ಕೇವಲ ಮೂವತ್ತಮೂರು ವರ್ಷಗಳ ಜೀವಿತಾವಧಿಯಲ್ಲಿ ರಚಿಸಿರುವದು  ಸಾಕ್ಷಾತ್  ಶಂಕರನ ಅವತಾರಿಯಾದ ಶಂಕರರಿಗಲ್ಲದೇ ಇನ್ಯಾರಿಗೆ ತಾನೇ ಸಾಧ್ಯವಾದೀತು.
ಕೊನೆಯಾಗಿ ಶಂಕರರು ತಾವು ತಮ್ಮ ಪರಮಗುರುಗಳಾದ ಗೌಳಪಾದರನ್ನು ತಮ್ಮ ಮಾಂಡೂಕ್ಯ ಭಾಷ್ಯದಲ್ಲಿ ಹೆಸರಿಸಿರುವದನ್ನೂ ಸುರೇಶ್ವರರು ತಮ್ಮ ನೈಷ್ಕರ್ಮ್ಯ ಸಿದ್ಧಿಯಲ್ಲಿ ತಮ್ಮ ಗುರುಗಳಾದ ಶಂಕರರನ್ನೂ ಅವರ ಪರಮಗುರುಗಳಾದ ಗೋವಿಂದಪಾದರನ್ನೂ ಹೆಸರಿಸಿರುವದನ್ನೂ ಮತ್ತು ಸಾವಿರದ ಮುನ್ನೂರುವರ್ಷಕ್ಕೂ ಹಳೆಯದಾದ ಗುರು ಪರಂಪರಾ ಸ್ತೋತ್ರದಲ್ಲಿ ಉಲ್ಲೇಖವಿರುವದನ್ನೂ ತೊರಿಸಿಕೊಟ್ಟು ಶ್ರೀಶಂಕರರಿಗೆ ಯಾವಕಾಲದಲ್ಲೂ ವೀರಶೈವಮಠದ ಪರಂಪರೆಯ ಸಂಪರ್ಕವೇ ಇರಲಿಲ್ಲವೆಂದೂ ಇವೆಲ್ಲವೂ ಕೇವಲ ಕಾಲ್ಪನಿಕ ವಿಷಯವೆಂಬುದಾಗಿ ಸಾಧಾರ ನಿರೂಪಿಸಿ ಈ ಕೆಳಗಿನ ಶ್ಲೋಕಗಳಿಂದ ಈ ಕಿರು ಹೊತ್ತಿಗೆಯನ್ನು ಮುಗಿಸುತ್ತೇನೆ.

ಸುರೇಶ್ವರಾಚಾರ್ಯ ವಿರಚಿತ ನೈಷ್ಕರ್ಮ್ಯ ಸಿದ್ಧಿ. ಅಧ್ಯಾಯ೦೧. ಶ್ಲೋಕ ೦೨
ಸ್ವಸಂಪ್ರದಾಯಸ್ಯ ಚೋದಿತ ಪ್ರಮಾಣಪೂರ್ವಕತ್ವ ಜ್ಞಾಪನಾಯ ವಿಶಿಷ್ಟಗುಣಸಂಬಂಧ ಸಂಕೀರ್ತನಪೂರ್ವಿಕಾ ಗುರೋರ್ನಮಸ್ಕ್ರಿಯಾ
ತನ್ನ ಸಂಪ್ರದಾಯವು ಉಕ್ತಪ್ರಮಾಣಪೂರ್ವಕವೆಂಬುದಾಗಿ ತಿಳಿಸಲು ಅರ್ಥಾತ್  ಪರಂಪರೆಯಿಂದಲೂ ಶ್ರುತ್ಯುಕ್ತ ರೀತಿಯಿಂದ ಅವಿದ್ಯೆಯನ್ನು ಕಳೆಯುವಂಥ ಆಚಾರ್ಯರಮೂಲಕ ತಿಳಿಸಲ್ಪಟ್ಟಿದೆ ಎಂಬ  ಅಸಾಧಾರಣಗುಣಸಂಬಂಧವನ್ನು ಹೇಳುವಮೂಲಕ ಗುರುವಿಗೆ ನಮಸ್ಕಾರವನ್ನು ಮಾಡುತ್ತಾ

ಅಲಬ್ಧ್ವಾತಿಶಯಂ ಯಸ್ಮಾದ್ ವ್ಯಾವೃತ್ತಾಃ ತಮಬಾದಯಃ (ತಮಪ್+ ಆದಯಃ) | ಗರೀಯಸೇ ನಮಸ್ತಸ್ಮಾ ಅವಿದ್ಯಾಗ್ರಂಥಿಭೇದಿನೇ || ೦೧||
ಯಾವ ಆಚಾರ್ಯರಿಂತಲೂ  ಮಿಗಿಲಾದದ್ದು ಇದೆ ಎಂಬುದಾಗಿ ಹೇಳುವಂಥ  "ತಮಪ್, ಇಷ್ಠನ್, ತರಪ್"  ಎಂಬ  ಮುಂತಾದ ಪ್ರತ್ಯಯಗಳು ನಿರಾಸವಾಗಿ ಹಿಂದಿರುಗುವವೋ , ಅವಿದ್ಯಾಗ್ರಂಥಿಯನ್ನು ನಾಶಾಗೊಳಿಸುವ ಅಂಥಾ ಗುರುವುಗೆ ನಮಸ್ಕಾರವನ್ನು ಮಾಡುವೆನು.

ನೈಷ್ಕರ್ಮ್ಯ ಸಿದ್ಧಿ. ಅಧ್ಯಾಯ೦೪. ಶ್ಲೋಕ ೭೪
ಶ್ರೀಮಚ್ಛಂಕರಪಾದಪದ್ಮಯುಗಳಂ ಸಂಸೇವ್ಯ ಲಬ್ಧ್ವೋಚಿವಾನ್ ಜ್ಞಾನ ಪಾರಮಹಂಸ್ಯಮೇತದಮಲಂ ಸ್ವಾಂತಾನ್ಧಕಾರಾಪನುತ್ |
ಮಾಭೂದತ್ರ ವಿರೋಧಿನೀ ಮತಿರತಃ ಸದ್ಭಿಃ ಪರೀಕ್ಷ್ಯಂ ಬುಧೈಃ ಸರ್ವತ್ರೈವ ವಿಶುದ್ಧಯೇ ಮತಮಿದಂ ಸಂತಃ ಪರಂ ಕಾರಣಮ್||೭೪||
ಶ್ರೀಮಚ್ಛಂಕರಾಚಾರ್ಯರ ಪಾದಪದ್ಮಯುಗಲಗಳನ್ನು ಸಂಸೇವನೆಮಾಡಿ ಈ ಪರಮಹಂಸರಿಗೆ ತಕ್ಕ ,ನಿರ್ಮಲವಾದ,ಹೃದಯದ ಅಜ್ಞಾನವನ್ನು ನಾಶಗೊಳಿಸುವ ಜ್ಞಾನವನ್ನು ಪಡೆದುಕೊಂಡು ಹೇಳಿರುತ್ತೇನೆ.ಇದರಲ್ಲಿ ವಿರುದ್ಧಮತಿಯಾಗದೇ ಇರಲಿ , ಸತ್ಪುರುಷರಾದ ವಿದ್ವಾಂಸರು ಇದನ್ನು ಪರೀಕ್ಷಿಸಬೇಕು.ಏಕೆಂದರೇ ಎಲ್ಲಾಗ್ರಂಥಗಳ ವಿಷಯದಲ್ಲೂ ವಿಶುದ್ಧರಿಗೆ ಸತ್ಪುರುಷರೇ ಹೆಚ್ಚಿನ ಪ್ರಮಾಣರೆಂಬುವದು ಸರ್ವಸಂಮತವಾಗಿರುತ್ತದೆ.ಸುರೇಶ್ವರ ಈ ವಾಕ್ಯದಿಂದ ಸದ್ಗುರುವಿನ ಪ್ರೇರಣೆಯಿಂದ ಅವರಲ್ಲಿ ನಿಜಾಭಿಮಾನದ ಎಂಥ ಉತ್ಕೃಷ್ಟವಾದ ಸಾತ್ವಿಕ ಸಂಸ್ಕಾರವಾಗಿದೆ ಎಂಬುವದನ್ನೂ ತಿಳಿದುಕೊಳ್ಳಬಹುದು.

ಮಾಧವೀಯ ಶಂಕರವಿಜಯ:-೦೫.೧೦೫
ವ್ಯಾಸಃ ಪರಾಶರಸುತಃ ಕಿಲ ಸತ್ಯವತ್ಯಾಂ ತಸ್ಯಾತ್ಮಜಃ ಶುಕಮುನಿಃ ಪ್ರಥಿತಾನುಭಾವಃ |
ತಚ್ಛಿಷ್ಯತಾಮುಪಗತಃ ಕಿಲ ಗೌಡಪಾದೋ  ಗೋವಿಂದನಾಥಮುನಿರಸ್ಯಚ ಶಿಷ್ಯಭೂತಃ ||೧೦೪||
ಪರಾಶರಸತ್ಯವತಿಯ ಮಗನಾದ ವ್ಯಾಸರ ಮಗನಾದ ಶುಕಮುನಿಯ ಶಿಷ್ಯನಾದ ಗೌಡಪಾದರ ಶಿಷ್ಯರಾದ ಗೋವಿಂದನಾಥಮುನಿಯ ಶಿಷ್ಯರಾದರು ಶೀಶಂಕರರು ||

ಮಾಂಡೂಕ್ಯೋಪನಿಷತ್ತು :-ಶ್ರೀಶಂಕರಭಗವತ್ಪಾದಾಚಾರ್ಯ ಭಾಷ್ಯ :- ೦೪.೨೭
ಪ್ರಜ್ಞಪ್ತೇಃ ಸನಿಮಿತ್ತತ್ವಮಿತ್ಯಾದ್ಯೇತದನ್ತಂ ವಿಜ್ಞಾನವಾದಿನೋ ಬೌದ್ಧಸ್ಥ ವಚನಂ ಬಾಹ್ಯಾರ್ಥವಾದಿಪಕ್ಷಪ್ರತಿಷೇಧಪರಮಾಚಾರ್ಯೇಣಾನುಮೋದಿತಮ್ | ತದೇವ ಹೇತುಂ ಕೃತ್ವಾ ತತ್ಪಕ್ಷಪ್ರತಿಷೇಧಾಯ ತದಿದಮುಚ್ಯತೇ ||
"ಪ್ರಜ್ಞಪ್ತಿಗೆ ನಿಮಿತ್ತವಿರಬೇಕು" ಎಂಬಲ್ಲಿ ಹೊರಗೆ ವಸ್ತು ಇರುವದೆಂಬ ವಾದಿಗಳ ಪಕ್ಷವನ್ನು ಖಂಡಿಸುವದಕ್ಕಾಗಿ ಬೌದ್ಧನು ಹೇಳಿರುವ ಪಕ್ಷವನ್ನು ಒಪ್ಪಿಕೊಂಡಂತೆ ಮಾಡಿ ನಮ್ಮ ಪರಮಾಚಾರ್ಯರಾದ ಶ್ರೀಗೌಡಪಾದರು ಈಗ ಆ ಬೌದ್ಧನ ಯುಕ್ತಿಯನ್ನೇ  ಮುಂದಿಟ್ಟುಕೊಂಡು ಅವನ ಪಕ್ಷವನ್ನೇ ಅಲ್ಲಗಳೆಯುವದಕ್ಕಾಗಿ ಮುಂದೆಬರುವ "ತಸ್ಮಾತ್ " ಎಂಬ ಶ್ಲೋಕಗಳನ್ನು ಹೇಳುತ್ತಾರೆ.

ಗುರುಪರಂಪರಾ ಸ್ತೋತ್ರ.
ಗೂಢಾ ಮಾಯಾ ಯಸ್ಯ ವಾಕ್ಯೈರ್ವ್ರೀಡಿತಾ ವಿಲಯಂ ಗತಾ | ಕ್ರೀಡನ್ತಂ ವಿದ್ಯಯಾ ಸಾರ್ಧಂ ಗೌಡಪಾದಂ ತಮಾಶ್ರಯೇ || ೯ ||
ಜೀವೇಶಭೇದರಹಿತಂ ನಾವಿಕಂ ಭವವಾರಿಧೇಃ  | ಭಾವಾಭಾವವಿದೂರಸ್ಥಂ ಗೋವಿನ್ದಂ ಗುರುಮಾಶ್ರಯೇ || ೧೦ ||
ಶಙ್ಕಾರೂಪೇಣ ಮಚ್ಚಿತ್ತಂ ಪಙ್ಕೀಕೃತಮಭೂದ್ಯಯಾ | ಕಿಙ್ಕರೀ ಯಸ್ಯ ಸಾ ಮಾಯಾ ಶಙ್ಕರಾಚಾರ್ಯಮಾಶ್ರಯೇ || ೧೧ ||
ಹೀಗೆ ಮುಂತಾದ ಭಾಷ್ಯೋಪಲಬ್ಧವಾದ ಸೂಚಕಗಳಿಂದಲೂ ಗುರುಪರಂಪರಾ ಸ್ತೋತ್ರಗಳಿಂದಲೂ ಶ್ರೀಶಂಕರಾಚಾರ್ಯರಿಗೂ ವೀರಶೈವ ಪರಂಪರೆಗೂ ಯಾವಕಾಲದಲ್ಲೂ ಸಂಪರ್ಕವು ಏರ್ಪಡಲೇ ಇಲ್ಲ ಎಂಬುವದು ಸಿದ್ಧವಾಯಿತು. ಇದನ್ನು ನಿರೂಪಿಸುವದಕ್ಕೆ ಈ ಬರಹದ ಅವಶ್ಯಕತೆಯು ಇರಲಿಲ್ಲ.ಕೇವಲ ಶಂಕರರ ಭಾಷ್ಯದ ಪರಿಚಯದಿಂದಲೇ  ಯಾವ ಸೊಗಡೂ ಇಲ್ಲದ ** ಶಂಕರ ವಿರಚಿತ  ರೇಣುಕಾಚಾರ್ಯರ ಸ್ತುತಿ* ಯೆಂಬುದನ್ನು ಸಾರಾಸಗಟಾಗಿ  ತಿರಸ್ಕಾರ ಮಾಡಬಹುದು. ಮತ್ತೂ ಏನೆಂದರೇ ಮೇಲೆ ಹೇಳಿದ ರೇಣುಕಾಚಾರ್ಯರ ಸ್ತುತಿಯಲ್ಲಿ ಶಂಕರರು ಗಣೇಶನ್ನಾಗಲೀ ,ವಿಷ್ಣುವಿನ ಪೂಜೆಯನ್ನಾಗಲೀ ಮಾಡಲಿಲ್ಲ (*ನ ಸೇವೇ ರಮೇಶಂ ನ ಸೇವೇ ಪ್ರಜೇಶಂ ನ ಸೇವೇ ಸುರೇಶಂ ನ ಸೇವೇ ಗಣೇಶಂ** )ಎಂಬುವದು ಕೇವಲ ಕಪೋಲಕಲ್ಪಿತ  ಅಪಭ್ರಂಶಾಭಿಪ್ರಾಯ ಎಂಬುದಾಗಿ ಈ ಕೆಳಗಿನ ಶ್ಲೋಕಗಳಿಂದಲೇ   ನಿರೂಪಿಸಬಹುದು.

**ಅಜಂ ನಿರ್ವಿಕಲ್ಪಂ ನಿರಾಕಾರಮೇಕಂ ನಿರಾನಂದಮಾನಂದಮದ್ವೈತಪೂರ್ಣಂ ಪರಂ ನಿರ್ಗುಣಂ ನಿರ್ವಿಶೇಷಂ ನಿರೀಹಂ ಪರಬ್ರಹ್ಮರೂಪಂ ಗಣೇಶಂ ಭಜೇಮ || ೦೧ ||
ಗುಣಾತೀತಮಾನಂ ಚಿದಾನಂದರೂಪಂ ಚಿದಾಭಾಸಕಂ ಸರ್ವಗಂ ಧ್ಯಾನಗಮ್ಯಂ ಮುನಿಧ್ಯೇಯಮಾಕಾಶರೂಪಂ ಪರೇಶಂ ಪರಬ್ರಹ್ಮರೂಪಂ ಗಣೇಶಂ ಭಜೇಮ || ೦೨||
ಜಗತ್ಕಾರಣಂ ಕಾರಣಜ್ಞಾನರೂಪಂ ಸುರಾದಿಂ ಸುಖಾದಿಂ ಗುಣೇಶಂ ಗಣೇಶಂ ಜಗದ್ವ್ಯಾಪಿನಂ ವಿಶ್ವವಂದ್ಯಂ ಸುರೇಶಂ ಪರಬ್ರಹ್ಮರೂಪಂ ಗಣೇಶಂ ಭಜೇಮ ||೦೩|| **

ಇನ್ನು ಶಂಕರರ ಗಣೇಶ ಪಂಚರತ್ನ ಮಾಲ ಎಂದೇ ಪ್ರಸಿದ್ಧಿಯಾದ "ಮುದಾಕರಾತ್ತ ಮೋದಕಂ" ಎಂಬುವದನ್ನು ಕೇಳದೇ ಇರುವವರೇ ಪರಮಪಾಪಿಗಳು.
**ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಂ ಕಲಾಧರಾವತಂಸಕಂ ವಿಲಾಸಿಲೋಕರಕ್ಷಕಮ್ | ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್ ||೧||
ನತೇತರಾತಿಭೀಕರಂ ನವೋದಿತಾರ್ಕಭಾಸ್ವರಂ ನಮತ್ಸುರಾರಿನಿರ್ಜರಂ ನತಾಧಿಕಾಪದುದ್ಧರಮ್ | ಸುರೇಶ್ವರಂ ನಿಧೀಶ್ವರಂ ಗಜೇಶ್ವರಂ ಗಣೇಶ್ವರಂ ಮಹೇಶ್ವರಂ ತಮಾಶ್ರಯೇ ಪರಾತ್ಪರಂ ನಿರನ್ತರಮ್ ||೨||
ಸಮಸ್ತಲೋಕಶಂಕರಂ ನಿರಸ್ತದೈತ್ಯಕುಞ್ಜರಂ ದರೇತರೋದರಂ ವರಂ ವರೇಭವಕ್ತ್ರಮಕ್ಷರಮ್ | ಕೃಪಾಕರಂ ಕ್ಷಮಾಕರಂ ಮುದಾಕರಂ ಯಶಸ್ಕರಂ ಮನಸ್ಕರಂ ನಮಸ್ಕೃತಾಂ ನಮಸ್ಕರೋಮಿ ಭಾಸ್ವರಮ್ ||೩||
ಅಕಿಂಚನಾರ್ತಿಮಾರ್ಜನಂ ಚಿರನ್ತನೋಕ್ತಿಭಾಜನಂ ಪುರಾರಿಪೂರ್ವನನ್ದನಂ ಸುರಾರಿಗರ್ವಚರ್ವಣಮ್ | ಪ್ರಪಞ್ಚನಾಶಭೀಷಣಂ ಧನಂಜಯಾದಿಭೂಷಣಮ್ ಕಪೋಲದಾನವಾರಣಂ ಭಜೇ ಪುರಾಣವಾರಣಮ್ ||೪||
ನಿತಾನ್ತಕಾನ್ತದನ್ತಕಾನ್ತಿಮನ್ತಕಾನ್ತಕಾತ್ಮಜಂ ಅಚಿನ್ತ್ಯರೂಪಮನ್ತಹೀನಮನ್ತರಾಯಕೃನ್ತನಮ್ | ಹೃದನ್ತರೇ ನಿರನ್ತರಂ ವಸನ್ತಮೇವ ಯೋಗಿನಾಂ ತಮೇಕದನ್ತಮೇವ ತಂ ವಿಚಿನ್ತಯಾಮಿ ಸನ್ತತಮ್ ||೫||**
ಐವತ್ತಕ್ಕೂ ಹೆಚ್ಚು ಶ್ಲೋಕಗಳಿರುವ ವಿಷ್ಣುಭುಜಂಗ ಪ್ರಯಾತ ಸ್ತೋತ್ರ :

ಶ್ರೀ ಶ೦ಕರಾಚಾರ್ಯ ವಿರಚಿತ ವಿಷ್ಣು ಭುಜನ್ಗ ಪ್ರಯಾತ ಸ್ತೋತ್ರ
ಚಿದಮ್ಶಮ್ ವಿಭುಮ್ ನಿರ್ಮಲಮ್ ನಿರ್ವಿಕಲ್ಪಂ      ನಿರೀಹಮ್ ನಿರಾಕಾರಮೋಙ್ಕಾರಗಮ್ಯಮ್ . ಗುಣಾತೀತಮವ್ಯಕ್ತಮೇಕಮ್ ತುರೀಯಂ    ಪರಂ ಬ್ರಹ್ಮ ಯಮ್ ವೇದ ತಸ್ಮೈ ನಮಸ್ತೇ .. ೧..
ವಿಶುದ್ಧ೦ ಶಿವ೦ ಶಾನ್ತಮಾದ್ಯನ್ತಶೂನ್ಯಂ      ಜಗಜ್ಜೀವನಮ್ ಜ್ಯೋತಿರಾನನ್ದರೂಪಮ್ . ಅದಿಗ್ದೇಶಕಾಲವ್ಯವಚ್ಛೇದನೀಯಂ      ತ್ರಯೀ ವಕ್ತಿ ಯ೦ ವೇದ ತಸ್ಮೈ ನಮಸ್ತೇ .. ೨..
ಸಮಾನೋದಿತಾನೇಕಸೂರ್ಯೇನ್ದುಕೋಟಿ-     ಪ್ರಭಾಪೂರತುಲ್ಯದ್ಯುತಿ೦ ದುರ್ನಿರೀಕ್ಷಮ್ .ನ ಶೀತ೦ ನ ಚೋಷ್ಣ೦ ಸುವರ್ಣಾವದಾತ-      ಪ್ರಸನ್ನ೦ ಸದಾನನ್ದಸಮ್ವಿತ್ಸ್ವರೂಪಮ್ .. ೪..
ಸುನಾಸಾಪುಟಮ್ ಸುನ್ದರಭ್ರೂಲಲಾಟಂ      ಕಿರೀಟೋಚಿತಾಕುಞ್ಚಿತಸ್ನಿಗ್ಧಕೇಶಮ್ . ಸ್ಫುರತ್ಪುಣ್ಡರೀಕಾಭಿರಾಮಾಯತಾಕ್ಷಂ     ಸಮುತ್ಫುಲ್ಲರತ್ನಪ್ರಸೂನಾವತಮ್ಸಮ್ .. ೫..
ಲಸತ್ಕುಣ್ಡಲಾಮೃಷ್ಟಗಣ್ಡಸ್ಥಲಾನ್ತಂ      ಜಪಾರಾಗಚೋರಾಧರ೦ ಚಾರುಹಾಸಮ್ . ಅಲಿವ್ಯಾಕುಲಾಮೋಲಿಮನ್ದಾರಮಾಲಮ್      ಮಹೋರಸ್ಫುರತ್ಕೌಸ್ತುಭೋದಾರಹಾರಮ್ .. ೬..
ಸುರತ್ನಾಙ್ಗದೈರನ್ವಿತಂ ಬಾಹುದಣ್ಡೈ-      ಶ್ಚತುರ್ಭಿಶ್ಚಲತ್ಕಙ್ಕಣಾಲಮ್ಕೃತಾಗ್ರೈಃ . ಉದಾರೋದರಾಲ೦ಕೃತಂ ಪೀತವಸ್ತ್ರಮ್      ಪದದ್ವನ್ದ್ವನಿರ್ಧೂತಪದ್ಮಾಭಿರಾಮಮ್ .. ೭..
ಸ್ವಭಕ್ತೇಷು ಸನ್ದರ್ಶಿತಾಕಾರಮೇವಂ      ಸದಾ ಭಾವಯನ್ಸಮ್ನಿರುದ್ಧೇನ್ದ್ರಿಯಾಶ್ವಃ . ದುರಾಪ೦ ನರೋ ಯಾತಿ ಸಮ್ಸಾರಪಾರಂ      ಪರಸ್ಮೈ ಪರೇಭ್ಯೋಽಪಿ ತಸ್ಮೈ ನಮಸ್ತೇ .. ೮..
ಶ್ರಿಯಾ ಶಾತಕುಮ್ಭದ್ಯುತಿಸ್ನಿಗ್ಧಕಾನ್ತ್ಯಾ       ಧರಣ್ಯಾ ಚ ದೂರ್ವಾದಲಶ್ಯಾಮಲಾಙ್ಗ್ಯಾ . ಕಲತ್ರದ್ವಯೇನಾಮುನಾ ತೋಷಿತಾಯ       ತ್ರಿಲೋಕೀಗೃಹಸ್ಥಾಯ ವಿಷ್ಣೋ ನಮಸ್ತೇ .. ೯..
ಶರೀರಮ್ ಕಲತ್ರಮ್ ಸುತಂ ಬನ್ಧುವರ್ಗಂ      ವಯಸ್ಯಮ್ ಧನಮ್ ಸದ್ಮ ಭೃತ್ಯಂ ಭುವಮ್ ಚ . ಸಮಸ್ತಂ ಪರಿತ್ಯಜ್ಯ ಹಾ ಕಷ್ಟಮೇಕೋ       ಗಮಿಷ್ಯಾಮಿ ದುಃಖೇನ ದೂರಮ್ ಕಿಲಾಹಮ್ .. ೧೦..
ಜರೇಯಂ ಪಿಶಾಚೀವ ಹಾ ಜೀವತೋ ಮೇ      ವಸಾಮಕ್ತಿ ರಕ್ತಮ್ ಚ ಮಾಮ್ಸಂ ಬಲಮ್ ಚ . ಅಹೋ ದೇವ ಸೀದಾಮಿ ದೀನಾನುಕಮ್ಪಿ-      ನ್ಕಿಮದ್ಯಾಪಿ ಹನ್ತ ತ್ವಯೋದಾಸಿತವ್ಯಮ್ .. ೧೧..
ಕಫವ್ಯಾಹತೋಷ್ಣೋಲ್ಬಣಶ್ವಾಸವೇಗ-      ವ್ಯಥಾವಿಸ್ಫುರತ್ಸರ್ವಮರ್ಮಾಸ್ಥಿಬನ್ಧಾಮ್ . ವಿಚಿನ್ತ್ಯಾಹಮನ್ತ್ಯಾಮಸಮ್ಖ್ಯಾಮವಸ್ಥಾಂ      ಬಿಭೇಮಿ ಪ್ರಭೋ ಕಿಮ್ ಕರೋಮಿ ಪ್ರಸೀದ .. ೧೨..
ಲಪನ್ನಚ್ಯುತಾನನ್ತ ಗೋವಿನ್ದ ವಿಷ್ಣೋ      ಮುರಾರೇ ಹರೇ ನಾಥ ನಾರಾಯಣೇತಿ . ಯಥಾನುಸ್ಮರಿಷ್ಯಾಮಿ ಭಕ್ತ್ಯಾ ಭವನ್ತಂ      ತಥಾ ಮೇ ದಯಾಶೀಲ ದೇವ ಪ್ರಸೀದ .. ೧೩..
ಭುಜಙ್ಗಪ್ರಯಾತಂ ಪಠೇದ್ಯಸ್ತು ಭಕ್ತ್ಯಾ     ಸಮಾಧಾಯ ಚಿತ್ತೇ ಭವನ್ತಂ ಮುರಾರೇ . ಸ ಮೋಹಮ್ ವಿಹಾಯಾಶು ಯುಷ್ಮತ್ಪ್ರಸಾದಾ-      ತ್ಸಮಾಶ್ರಿತ್ಯ ಯೋಗಮ್ ವ್ರಜತ್ಯಚ್ಯುತಮ್ ತ್ವಾಮ್ .. ೧೪..
*********

Short Messages from Sringeri Jagadgurus:

Sringeri Jagadguru on Jivaatma-Paramaatma as Pratibimba-Bimba from Adi Shankara's LakshmiNarasimha Pancharathnam (Telugu):

Sri Shankaracharya had a special devotion towards Narasimha and has composed the LakshmiNarasimha Karaavalamba Stotram and the LakshmiNarasimha Pancharathnam. In the LakshmiNarasimha Pancharathnam, Shankara, while eulogising Narasimha, also imparted certain teachings. He states at the very outset:

त्वत्प्रभुजीवप्रियमिच्छसि चेन्नरहरिपूजां कुरु सततं
प्रतिबिम्बालङ्कृतिधृतिकुशलो बिंबालङ्कृतिमातनुते ।

tvatprabhujīvapriyamicchasi cēnnaraharipūjāṁ kuru satataṁ
pratibimbālaṅkr̥tidhr̥tikuśalō biṁbālaṅkr̥timātanutē ।

Sri Shankaracharya has given a splendid metaphor here. He addresses it to the mind. He says: “O mind! If your master (the Jiva) has to be happy, meditate on the Supreme Being (Paramaatma).” Why so? Because the Jiva is a reflection of the Paramaatma. If the reflection has to be look nice, the original image must look good first. Supposing we see ourselves in the mirror. If we have spots on our face, even the reflection will have them. If we wish to not have any spots in the reflection, we have to cleanse our face. God and man are like the original image (Bimba) and reflection (Pratibimba). Man, being the reflection, has to meditate upon God, the original image. Sri Shankaracharya has given us this wonderful teaching through the line प्रतिबिम्बालङ्कृतिधृतिकुशलो बिंबालङ्कृतिमातनुते / pratibimbālaṅkr̥tidhr̥tikuśalō biṁbālaṅkr̥timātanutē , while praising Lord Narasimha.

Video: https://www.youtube.com/watch?v=nkGjLwFO0PY

Copyright: Dakshinamnaya Sri Sharada Peetham, Sringeri


Source: http://vijayayatra.sringeri.net/archiveyatra/dharmapuri-december-31-2012-january-1-2013/
**********
sringeri fish


No comments:

Post a Comment